Tag: sachin tendulkar

  • ತವರಲ್ಲೇ ಸಚಿನ್ ದಾಖಲೆ ಮುರಿಯುತ್ತಾರಾ ಕೊಹ್ಲಿ?

    ತವರಲ್ಲೇ ಸಚಿನ್ ದಾಖಲೆ ಮುರಿಯುತ್ತಾರಾ ಕೊಹ್ಲಿ?

    ಮುಂಬೈ: ಏಕದಿನ ವಿಶ್ವಕಪ್‍ನಲ್ಲಿ (World Cup) ರನ್‍ಗಳ ಮಳೆ ಸುರಿಸುತ್ತಿರುವ ವಿರಾಟ್ ಕೊಹ್ಲಿ ದಾಖಲೆಗಳ ಕುದುರೆಯ ಬೆನ್ನೇರಿದ್ದಾರೆ. ಈ ಬಾರಿ ಈಗಾಗಲೇ 5 ಅರ್ಧಶತಕ ಮತ್ತು 2 ಶತಕ ಬಾರಿಸಿ, ಹಲವು ದಾಖಲೆಗಳನ್ನ ಬದಿಗಿರಿಸಿದ್ದಾರೆ. ಇಂದಿನ ‌ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‍ನಲ್ಲೂ ಹಲವು ದಾಖಲೆಗಳನ್ನು ಮುರಿಯಲು ಕೊಹ್ಲಿ ಸಜ್ಜಾಗಿದ್ದಾರೆ.

    ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸೆಂಚುರಿ ಸಿಡಿಸಲು ವಿಫಲರಾಗಿದ್ದರು. ಈ ವೇಳೆ ತೆಂಡೂಲ್ಕರ್ (Sachin Tendulkar) ಅವರ ಶತಕಗಳ ದಾಖಲೆಯನ್ನ ಮುರಿಯುತ್ತಾರೆ ಎಂಬ ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರು ಬಿದ್ದಿತ್ತು. ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಬಾರಿಸಿ ಅಂಗಳ ತೊರೆದಿದ್ದರು. ಇದನ್ನೂ ಓದಿ: India Vs New Zealand – ಕೊಹ್ಲಿ, ಕೇನ್‌ ವಿಲಿಯಮ್ಸನ್‌ ವಿಶೇಷ ಸಾಧನೆ

    ಇಂದಿನ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿದರೆ ಏಕದಿನ ಕ್ರಿಕೆಟ್‍ನಲ್ಲಿ 50 ಶತಕಗಳ ದಾಖಲೆ ನಿರ್ಮಿಸಲಿದ್ದಾರೆ. ಸಚಿನ್ ತವರಲ್ಲೇ ಅವರ ದಾಖಲೆಯನ್ನು ಕೊಹ್ಲಿ ಮುರಿಯಲಿದ್ದಾರೆ.

    ಸಚಿನ್ ಶತಕಗಳ ಜೊತೆಗೆ ಅವರ ವಿಶ್ವಕಪ್ ಟೂರ್ನಿ ಒಂದರಲ್ಲಿ ಅತೀ ಹೆಚ್ಚು ರನ್ ಗಳಿಸುವ ಅವಕಾಶ ಕೊಹ್ಲಿಗಿದೆ. 2003ರ ವಿಶ್ವಕಪ್‍ನಲ್ಲಿ ಸಚಿನ್ 673 ರನ್ಗಳಿಸಿದ್ದರು. ಈ ಮೂಲಕ ವಿಶ್ವಕಪ್ ಟೂರ್ನಿಯೊಂದರಲ್ಲಿ ಅತಿಹೆಚ್ಚು ರನ್ ದಾಖಲಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 20 ವರ್ಷ ಕಳೆದರೂ ಈ ದಾಖಲೆ ಇನ್ನೂ ಸಚಿನ್ ಹೆಸರಿನಲ್ಲೇ ಇದೆ.

    ಕೊಹ್ಲಿಗೆ ಮಾಸ್ಟರ್ ಬ್ಲಾಸ್ಟರ್‍ನ ಈ ದಾಖಲೆ ಬ್ರೇಕ್ ಮಾಡಲು ಕೇವಲ 80 ರನ್ ಬೇಕಾಗಿದೆ. ಈ ವಿಶ್ವಕಪ್ ಕೊಹ್ಲಿ ಈವರೆಗೂ ಆಡಿರೋ 9 ಪಂದ್ಯಗಳಿಂದ 594 ರನ್ ಕಲೆಹಾಕಿದ್ದಾರೆ. ಆ ಮೂಲಕ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿರೋ ಬ್ಯಾಟ್ಸ್‍ಮನ್‍ಗಳ ಪಟ್ಟಿಯಲ್ಲಿ ನಂಬರ್ ಒನ್ ಪಟ್ಟದಲ್ಲಿದ್ದಾರೆ. ಇದನ್ನೂ ಓದಿ: ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಭಾರತ?

  • ನನ್ನ ಮಗನ ಹೆಸರಿಗೂ ದ್ರಾವಿಡ್‌-ಸಚಿನ್‌ ಹೆಸರಿಗೂ ಸಂಬಂಧವಿಲ್ಲ: ಕ್ರಿಕೆಟಿಗ ರಚಿನ್‌ ತಂದೆ

    ನನ್ನ ಮಗನ ಹೆಸರಿಗೂ ದ್ರಾವಿಡ್‌-ಸಚಿನ್‌ ಹೆಸರಿಗೂ ಸಂಬಂಧವಿಲ್ಲ: ಕ್ರಿಕೆಟಿಗ ರಚಿನ್‌ ತಂದೆ

    ಬೆಂಗಳೂರು: ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ಬೆಂಗಳೂರು ಮೂಲದ ನ್ಯೂಜಿಲೆಂಡಿನ (New Zealand) ಆಟಗಾರ ರಚಿನ್‌ ರವೀಂದ್ರ (Rachin Ravindra) ಉತ್ತಮ ಲಯದಲ್ಲಿದ್ದಾರೆ. ಈ ಟೂರ್ನಿಯಲ್ಲಿ ಮೂರು ಶತಕ ಸಿಡಿಸಿರುವ ಅವರು ತಮ್ಮ ಹೆಸರಿನ ಮೂಲಕ ಚರ್ಚೆಯಲ್ಲಿದ್ದರು. ಆದರೆ ಈಗ ಈ ಹೆಸರು ಇಟ್ಟಿದ್ದು ಹೇಗೆ ಎಂಬುದರ ಬಗ್ಗೆ ತಂದೆ ಪ್ರತಿಕ್ರಿಯಿಸಿದ್ದಾರೆ.

    ಭಾರದ ಬ್ಯಾಟಿಂಗ್ ದಿಗ್ಗಜರಾದ ರಾಹುಲ್ ದ್ರಾವಿಡ್ (Rahul Dravid) ಮತ್ತು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಹೆಸರಿನ ಮೊದಲ ಅಕ್ಷರಗಳಿಂದ ಸಂಯೋಜನೆಗೊಂಡು ʼರಚಿನ್‌ʼ ಎಂದು ನಾಮಕರಣ ಮಾಡಲಾಗಿದೆ ಎಂಬ ಹೆಸರು ಹಿಂದೆ ವರದಿಯಾಗಿತ್ತು. ಇದನ್ನೂ ಓದಿ: ನಾನು 100% ಕಿವೀಸ್‌ ಎಂದ ಬೆಂಗಳೂರು ಯುವಕ ರಚಿನ್‌ ರವೀಂದ್ರ

     

    ಈ ಬಗ್ಗೆ ತಂದೆ ರವಿ ಕೃಷ್ಣಮೂರ್ತಿ (Ravi Krishnamurthy) ಈಗ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಮಗನ ಹೆಸರಿಗೂ ಸಚಿನ್​-ದ್ರಾವಿಡ್​ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳುವ ಮೂಲಕ ಯೂಟರ್ನ್‌ ಹೊಡೆದಿದ್ದಾರೆ.

    ನನ್ನ ಪತ್ನಿ ರಚಿನ್ ಹೆಸರನ್ನು ಸೂಚಿಸಿದ್ದಳು. ನಾವು ಆ ಹೆಸರಿನ ಬಗ್ಗೆ ಹೆಚ್ಚು ಚರ್ಚೆ ಮಾಡಲಿಲ್ಲ.ಯಾಕೆಂದರೆ ಆ ಹೆಸರು ಚೆನ್ನಾಗಿತ್ತು. ಉಚ್ಚರಿಸಲು ಸುಲಭವಾಗಿತ್ತು ಮತ್ತು ಚಿಕ್ಕದಾಗಿತ್ತು. ಈ ಕಾರಣದಿಂದ ಮಗನಿಗೆ ಆ ಹೆಸರನ್ನೇ ನಾಮಕರಣ ಮಾಡಿದ್ದೆವು ಎಂದು ವಿವರಿಸಿದರು.  ಇದನ್ನೂ ಓದಿ: ರಚಿನ್ ರವೀಂದ್ರಗೆ ದೃಷ್ಟಿ ತೆಗೆದ ಅಜ್ಜಿ – ವೀಡಿಯೋ ವೈರಲ್

    ಕೆಲವು ವರ್ಷಗಳ ನಂತರ ಈ ಹೆಸರು ರಾಹುಲ್ ಮತ್ತು ಸಚಿನ್ ಅವರ ಹೆಸರುಗಳ ಮಿಶ್ರಣವಾಗಿದೆ ಎಂಬುದು ಗೊತ್ತಾಯಿತು. ನಮ್ಮ ಮಗನನ್ನು ಕ್ರಿಕೆಟಿಗನನ್ನಾಗಿ ಮಾಡುವ ಉದ್ದೇಶದಿಂದ ಇಬ್ಬರ ಹೆಸರನ್ನು ಸಂಯೋಜಿಸಿ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

    ವಿಶ್ವಕಪ್‌ ಕ್ರಿಕೆಟ್‌ನಲ್ಲಿ ರಚಿನ್‌ ರವೀಂದ್ರ 9 ವಿಕೆಟ್‌ಗಳಿಂದ 565 ರನ್‌ ಹೊಡೆಯುವ ಮೂಲಕ ಅತಿ ಹೆಚ್ಚು ರನ್‌ ಹೊಡೆದ ಆಟಗಾರರ ಪೈಕಿ ಮೂರನೇ ಸ್ಥಾನ ಪಡೆದಿದ್ದಾರೆ. ಟೂರ್ನಿಯಲ್ಲಿ ಒಟ್ಟು 52 ಬೌಂಡರಿ ಸಿಡಿಸಿದ ರಚಿನ್‌ 17 ಸಿಕ್ಸ್‌ ಹೊಡೆದಿದ್ದಾರೆ.

     

  • World Cup 2023: ಅರ್ಧಶತಕ ಸಿಡಿಸಿದ್ರೂ ಸಚಿನ್‌ ದಾಖಲೆ ಸರಿಗಟ್ಟಿದ ಚೇಸ್‌ ಮಾಸ್ಟರ್‌

    World Cup 2023: ಅರ್ಧಶತಕ ಸಿಡಿಸಿದ್ರೂ ಸಚಿನ್‌ ದಾಖಲೆ ಸರಿಗಟ್ಟಿದ ಚೇಸ್‌ ಮಾಸ್ಟರ್‌

    ಬೆಂಗಳೂರು: ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ಸಚಿನ್‌ ತೆಂಡೂಲ್ಕರ್‌ ಶತಕಗಳ ದಾಖಲೆ ಸರಿಗಟ್ಟಿದ್ದ ವಿರಾಟ್‌ ಕೊಹ್ಲಿ (Virat Kohli), ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ರೂ ಸಚಿನ್‌ (Sachin Tendulkar) ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನ ಸರಿಗಟ್ಟಿದ್ದಾರೆ.

    ಲೀಗ್‌ ಸುತ್ತಿನ ಕೊನೆಯ ಪಂದ್ಯವು ಟೀಂ ಇಂಡಿಯಾ (Team India) ಅಭಿಮಾನಿಗಳ ಪಾಲಿಗೆ ರಸದೌತಣವಾಗಿತ್ತು. ಟಾಸ್‌ ಗೆದ್ದು ಮೊದಲು ಕ್ರೀಸ್‌ಗಿಳಿದ ಟೀಂ ಇಂಡಿಯಾ ಬ್ಯಾಟರ್ಸ್‌, ನೆದರ್ಲೆಂಡ್ಸ್‌ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಚೆಂಡಾಡಿದರು. ಅದರಲ್ಲೂ ಚೇಸ್‌ ಮಾಸ್ಟರ್‌ ಖ್ಯಾತಿಯ ವಿರಾಟ್‌ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದ್ದ ವಿಶ್ವದಾಖಲೆ ಮುರಿಯುತ್ತಾರೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು. ಆದ್ರೆ ಕೊಹ್ಲಿ ಅರ್ಧಶತಕ ದಾಖಲಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

    ಡಚ್ಚರ ವಿರುದ್ಧ ಅರ್ಧಶತಕ ಸಿಡಿಸಿದ ಕೊಹ್ಲಿ ಒಂದೇ ವಿಶ್ವಕಪ್‌ ಆವೃತ್ತಿಯಲ್ಲಿ 7 ಬಾರಿ 50+‌ ರನ್‌ ಗಳಿಸಿದ ವಿಶೇಷ ಸಾಧನೆ ಮಾಡಿದರು. ಇದರೊಂದಿಗೆ ಈ ಸಾಧನೆ ಮಾಡಿದ್ದ ಸಚಿನ್‌ ತೆಂಡೂಲ್ಕರ್‌ ಅವರ ಮತ್ತೊಂದು ದಾಖಲೆಯನ್ನು ಸರಿಗಟ್ಟಿದರು. 2003ರಲ್ಲಿ ಸಚಿನ್‌ ತೆಂಡೂಲ್ಕರ್‌ 7 ಬಾರಿ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 50+ ಸ್ಕೋರ್‌ ಗಳಿಸಿದ್ದರೆ, ಬಾಂಗ್ಲಾದೇಶ ತಂಡದ ನಾಯಕ ಶಕೀಬ್‌ ಅಲ್‌ ಹಸನ್‌ (Shakib Al Hasan) 2019ರಲ್ಲಿ ಈ ಸಾಧನೆ ಮಾಡಿದ್ದರು. ಕೊಹ್ಲಿ 2023ರ ವಿಶ್ವಕಪ್‌ ಆವೃತ್ತಿಯಲ್ಲಿ ಇವರಿಬ್ಬರ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 410 ರನ್‌ ಬಾರಿಸಿತ್ತು. ಈ ಗುರಿ ಬೆನ್ನತ್ತಿದ್ದ ನೆದರ್ಲೆಂಡ್ಸ್‌ (Netherlands) 47.5 ಓವರ್‌ಗಳಲ್ಲೇ 250 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ 2023ರ ವಿಶ್ವಕಪ್‌ಗೆ ಸೋಲಿನೊಂದಿಗೆ ಭಾವುಕ ವಿದಾಯ ಹೇಳಿತು.

    ಭಾನುವಾರದ ಪಂದ್ಯವು ಟೀಂ ಇಂಡಿಯಾದ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು. 2023ನೇ ಸಾಲಿನಲ್ಲಿ ಭಾರತ 8 ಬಾರಿ 350ಕ್ಕಿಂತ ಹೆಚ್ಚು ರನ್ ಗಳಿಸಿ ದಾಖಲೆ ಬರೆಯಿತು. ಅಲ್ಲದೇ ಇದು ಟೀಂ ಇಂಡಿಯಾ ವಿಶ್ವಕಪ್‌ ಟೂರ್ನಿಯಲ್ಲಿ ಗಳಿಸಿದ 2ನೇ ಗರಿಷ್ಠ ಸ್ಕೋರ್‌ (2nd Highest World Cup Score in History) ಸಹ ಆಗಿದೆ. 2007ರ ವಿಶ್ವಕಪ್‌ನಲ್ಲಿ ಭಾರತ ಬರ್ಮುಡಾ ವಿರುದ್ಧ 5 ವಿಕೆಟ್‌ ನಷ್ಟಕ್ಕೆ 413 ರನ್‌ ಗಳಿಸಿದ್ದು, ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್‌ ಆಗಿದೆ. ಅಷ್ಟೇ ಅಲ್ಲದೇ ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೇ ಆರಂಭಿಕನಾಗಿಯೇ 14 ಸಾವಿರ ರನ್‌ ಪೂರೈಸಿದ ಸಾಧನೆ ಮಾಡಿದರು. ಒಟ್ಟು 60 ಸಿಕ್ಸರ್‌ ಸಿಡಿಸುವ ಮೂಲಕ ಕ್ಯಾಲೆಂಡರ್‌ ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ವಿಶ್ವದ ನಂ.1 ಆಟಗಾರ ಸಹ ಎನಿಸಿಕೊಂಡರು. ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಅರ್ಧಶತಕಗಳನ್ನ ಪೂರೈಸಿದರು. ಇನ್ನೂ ಕೆ.ಎಲ್‌ ರಾಹುಲ್‌ 62 ಎಸೆತಗಳಲ್ಲೇ ಶತಕ ಸಿಡಿಸಿ ವೇಗದ ಶತಕ ಸಿಡಿಸಿದ ಟಾಪ್‌-1 ದಿಗ್ಗಜರ ಎಲೈಟ್‌ ಪಟ್ಟಿ ಸೇರಿದರು.

  • ಕೊಹ್ಲಿ ಬಗ್ಗೆ ನಾನು ಹಾಗೆ ಮಾತಾಡಬಾರದಿತ್ತು – ಕ್ಷಮೆ ಯಾಚಿಸಿದ ಮೆಂಡಿಸ್

    ಕೊಹ್ಲಿ ಬಗ್ಗೆ ನಾನು ಹಾಗೆ ಮಾತಾಡಬಾರದಿತ್ತು – ಕ್ಷಮೆ ಯಾಚಿಸಿದ ಮೆಂಡಿಸ್

    ನವದೆಹಲಿ: ದಾಖಲೆಗಳ ರೇಸ್‍ನಲ್ಲಿರುವ ಕೊಹ್ಲಿ (Virat Kohli) ವಿಚಾರವಾಗಿ ಹಗುರವಾಗಿ ಮಾತಾಡಿದ್ದ ಲಂಕಾ ನಾಯಕ ಕುಸಾಲ್ ಮೆಂಡಿಸ್ (Kusal Mendis), ಸಚಿನ್ (Sachin Tendulkar) ದಾಖಲೆ ಸರಿಗಟ್ಟಿದ ವಿಚಾರ ತಿಳಿದ ನಂತರ ಕೊಹ್ಲಿಯ ಕ್ಷಮೆಯಾಚಿಸಿದ್ದಾರೆ.

    ಕೊಹ್ಲಿ 49ನೇ ಶತಕ ಗಳಿಸಿದ್ದ ವಿಚಾರ ನನಗೆ ತಿಳಿದಿರಲಿಲ್ಲ. ಪತ್ರಕರ್ತರು ತಕ್ಷಣ ಕೇಳಿದಾಗ, ಏನು ಹೇಳಬೇಕೆಂದು ನನಗೆ ತಿಳಿಯಲಿಲ್ಲ ಮತ್ತು ನನಗೆ ಪ್ರಶ್ನೆ ಅರ್ಥವಾಗಲಿಲ್ಲ. 49 ಶತಕಗಳನ್ನು ಗಳಿಸುವುದು ಸುಲಭವಲ್ಲ ಎಂದಿದ್ದೆ. ನಾನು ಹೇಳಿದ್ದು ತಪ್ಪು, ನಾನು ಅದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದು ಮೆಂಡಿಸ್ ಹೇಳಿದ್ದಾರೆ. ಇದನ್ನೂ ಓದಿ: World Cup Semi Final: ಮಳೆ ಬಂದು ಮ್ಯಾಚ್ ನಡೆಯದಿದ್ದರೆ ಏನಾಗುತ್ತೆ..?

    ಬಾಂಗ್ಲಾದೇಶ ವಿರುದ್ಧದ ಶ್ರೀಲಂಕಾದ ಪಂದ್ಯಕ್ಕೂ ಮೊದಲು ಪತ್ರಿಕಾಗೋಷ್ಠಿಯಲ್ಲಿ, ಮೆಂಡಿಸ್ ಅವರನ್ನು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದರು. ಟೀಂ ಇಂಡಿಯಾ ಆಟಗಾರ ಕೊಹ್ಲಿಯನ್ನು ಅಭಿನಂದಿಸಲು ಬಯಸುತ್ತೀರಾ? ಎಂಬ ಪ್ರಶ್ನೆಗೆ ನಾನೇಕೆ ಅವರನ್ನು ಅಭಿನಂದಿಸಬೇಕು ಎಂದಿದ್ದರು. ಈಗ ಅವರು ನನ್ನ ಆ ಹೇಳಿಕೆಗಾಗಿ ವಿಷಾದಿಸುತ್ತೇನೆ. ನನಗೆ ಆ ಪ್ರಶ್ನೆ ಅರ್ಥವಾಗಿರಲಿಲ್ಲ ಎಂದಿದ್ದಾರೆ.

    ವಿಶ್ವಕಪ್ (World Cup) ಪಂದ್ಯಗಳಲ್ಲಿ ಲಂಕಾ ತಂಡದ ಕಳಪೆ ಪ್ರದರ್ಶನಕ್ಕಾಗಿ ತಂಡದ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಲು ಶ್ರೀಲಂಕಾ ನಾಯಕ ಪತ್ರಿಕಾಗೋಷ್ಠಿ ಕರೆದಿದ್ದರು. ಈ ವೇಳೆ ಅವರು ಕೊಹ್ಲಿಯ ಕ್ಷಮೆಯನ್ನೂ ಕೋರಿದ್ದಾರೆ. ತಂಡವು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ವಿಫಲವಾಗಿದೆ. ಅನುಭವದಿಂದ ಕಲಿಯಲು ನಮ್ಮ ಆಟಗಾರರು ಸಿದ್ಧರಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ICC World Cup: ಟೀಂ ಇಂಡಿಯಾ ಸತತ `ನವ’ಜಯ!

  • ತೆಂಡೂಲ್ಕರ್ ನನ್ನ ಹೀರೋ, ಎಂದಿಗೂ ನಾನು ಅವರಿಗೆ ಸಮನಲ್ಲ: ಕೊಹ್ಲಿ

    ತೆಂಡೂಲ್ಕರ್ ನನ್ನ ಹೀರೋ, ಎಂದಿಗೂ ನಾನು ಅವರಿಗೆ ಸಮನಲ್ಲ: ಕೊಹ್ಲಿ

    ಕೋಲ್ಕತ್ತಾ: ಕ್ರಿಕೆಟ್ (Cricket) ದಂತಕತೆ ಸಚಿನ್ ತೆಂಡೂಲ್ಕರ್ (Sachin Tendulkar) ನನ್ನ ಹೀರೋ, ಎಂದಿಗೂ ನಾನು ಅವರಿಗೆ ಸಮನಲ್ಲ ಎಂದು ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ಹೇಳಿದ್ದಾರೆ. ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ 49ನೇ ಶತಕವನ್ನು ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ ಬಳಿಕ ಈ ರೀತಿ ಹೇಳಿಕೊಂಡಿದ್ದಾರೆ.

    ನಾನು ತೆಂಡೂಲ್ಕರ್ ಬ್ಯಾಟಿಂಗ್ ನೋಡುತ್ತಾ ಬೆಳೆದಿದ್ದೇನೆ. ಅವರ ಬ್ಯಾಟಿಂಗ್ ಶೈಲಿ ಅತ್ಯುತ್ತಮವಾದದ್ದು. ನಾನು ಆ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ಏನೇ ಆದರೂ ಸಚಿನ್ ನನ್ನ ನಾಯಕರಾಗಿರುತ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ.

    ನಾನು ಎಲ್ಲಿಂದ ಬಂದಿದ್ದೇನೆ ಎಂದು ನನಗೆ ತಿಳಿದಿದೆ ಮತ್ತು ಇಲ್ಲಿ ನಿಂತು ಸಚಿನ್ ಅವರಿಂದ ಮೆಚ್ಚುಗೆಯನ್ನು ಪಡೆಯುವುದು ನನಗೆ ತುಂಬಾ ಖುಷಿಕೊಟ್ಟಿದೆ ಎಂದಿದ್ದಾರೆ.

    ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 49ನೇ ಶತಕವನ್ನು ಕೊಹ್ಲಿ ಸಿಡಿಸಿದ್ದಾರೆ. ಅಂಗಳದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ ಅವರು 119 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಸಚಿನ್ ದಾಖಲೆ ಮೀರಿಸಲು ಒಂದೇ ಸೆಂಚುರಿ ಬಾಕಿಯಿದೆ. ಇದು ಅವರಿಗೆ ವಿಶೇಷ ದಿನವಾಗಿತ್ತು, ಕೇವಲ ದಾಖಲೆಯಿಂದಾಗಿ ಮಾತ್ರವಲ್ಲದೆ ಅವರ ಜನ್ಮದಿನ ಕೂಡ ಆಗಿತ್ತು. ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್‌ಗಳಲ್ಲಿ 49 ಶತಕಗಳನ್ನು ಸಿಡಿಸಿ ಸಾಧನೆ ಮಾಡಿದರೆ, ವಿರಾಟ್ ಕೊಹ್ಲಿ ಕೇವಲ 277 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

  • 49th Century: ಅಭಿಮಾನಿಗಳ ʻವಿರಾಟೋತ್ಸವʼ – ಮುಗಿಲು ಮುಟ್ಟಿದ ಸಂಭ್ರಮ

    49th Century: ಅಭಿಮಾನಿಗಳ ʻವಿರಾಟೋತ್ಸವʼ – ಮುಗಿಲು ಮುಟ್ಟಿದ ಸಂಭ್ರಮ

    ಕೋಲ್ಕತ್ತಾ: ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿ ಗಳಿಸಿರುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಸದ್ಯ ನಿನ್ನೆಯಿಂದ (ನ.5) ಸುದ್ದಿಯಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಈಡನ್‌ ಗಾರ್ಡನ್‌ ಮೈದಾನದಲ್ಲಿ ಶತಕ ಸಿಡಿಸುವ ಜೊತೆಗೆ ಸಚಿನ್ ತೆಂಡೂಲ್ಕರ್ (Sachin Tendulkar) ದಾಖಲೆ ಸರಿಗಟ್ಟಿದ್ದಾರೆ. ಕೊಹ್ಲಿಯ ಈ ಮಹತ್ವದ ಸಾಧನೆಯನ್ನು ದೇಶಾದ್ಯಂತ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

    ಜಾಲತಾಣಗಳಲ್ಲಿ ವಿರಾಟ್‌ ಕೊಹ್ಲಿ ಅವರ ಕ್ರಿಕೆಟ್‌ ವೃತ್ತಿಜೀವನದಿಂದ ಈವರೆಗೆ ಕ್ರಿಕೆಟ್‌ನಲ್ಲಿ ಲೋಕದಲ್ಲಿ ಮಾಡಿದ ಸಾಧನೆಗಳ ವಿಶೇಷ ವೀಡಿಯೋ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. #ವಿರಾಟೋತ್ಸವ2023 ಟ್ರೆಂಡ್‌ ಅಲೆಯೂ ಧೂಳೆಬ್ಬಿಸಿದೆ. ಇದನ್ನೂ ಓದಿ: ಕಾಲಿಗೆ ಬೀಳಬೇಡಪ್ಪ..: ಪಾದ ಮುಟ್ಟಲು ಬಂದ ಯುವ ಅಭಿಮಾನಿಗೆ ಕೊಹ್ಲಿ ಪ್ರೀತಿಯ ಮಾತು: Viral Video

    2021ರ ಐಪಿಎಲ್‌ ಸಂದರ್ಭದಲ್ಲಿ ಕೊಹ್ಲಿ ಸಂಪೂರ್ಣ ಫಾರ್ಮ್‌ ಕಳೆದುಕೊಂಡಿದ್ದರು. ಸುಮಾರು 2 ವರ್ಷಗಳ ಕಾಲ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ ಅಭಿಮಾನಿಗಳಿಂದಲೂ ಟೀಕೆಗೆ ಗುರಿಯಾಗಿದ್ದರು. ಈ ವೇಳೆ ಕ್ರಿಕೆಟ್‌ ಲೋಕದಿಂದಲೇ ದೂರ ಉಳಿಯುತ್ತಾರೆ, ನಿವೃತ್ತಿ ಘೋಷಿಸುವುದು ಸರಿ ಎಂದು ಹೇಳಲಾಗಿತ್ತು. ಇನ್ನೂ ಕೆಲವರು ಸ್ವಲ್ಪ ಬ್ರೇಕ್‌ ತಗೊಳ್ಳಿ ಎಂದು‌ ಟ್ರೋಲ್‌ ಮಾಡಿದ್ದರು. ಆದ್ರೆ 2022ರ ಟಿ20 ಏಷ್ಯಾಕಪ್‌ ಟೂರ್ನಿಯ ಮೂಲಕ ಮತ್ತೆ ಕೊಹ್ಲಿ ಭರ್ಜರಿ ಕಮ್ಯಾಂಬ್‌ ಮಾಡಿದ್ರು. ಇಂದು ದೇಶದ ಅಭಿಮಾನಿಗಳು ಮಾತ್ರವಲ್ಲದೇ ವಿವಿಧ ದೇಶಗಳ ಹಿರಿಯ ಕ್ರಿಕೆಟಿಗರು ಕೊಹ್ಲಿಯ ಗುಣಗಾನ ಮಾಡುತ್ತಿದ್ದಾರೆ. #ವಿರಾಟೋತ್ಸವ2023 ಹ್ಯಾಟ್‌ಟ್ಯಾಗ್‌ನೊಂದಿಗೆ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದು, ಕೊಹ್ಲಿಯ ಕ್ರಿಕೆಟ್‌ ವೃತ್ತಿಜೀವನವನ್ನೇ ಜಾಲತಾಣದಲ್ಲಿ ಅನಾವರಣಗೊಳಿಸಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಎದ್ದು ನಿಂತು ತಮ್ಮ ಮೊಬೈಲ್‌ ಟಾರ್ಚ್‌ ಆನ್‌ ಮಾಡಿ ಗೌರವ ಸೂಚಿಸಿದರು. ಕೊಹ್ಲಿಯೂ ಸಹ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ತಮ್ಮನ್ನು ಹುರಿದುಂಬಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. ಇದನ್ನೂ ಓದಿ: ಕೊಹ್ಲಿ 49ನೇ ಶತಕವನ್ನು ಚಪ್ಪಾಳೆಯೊಂದಿಗೆ ಸಂಭ್ರಮಿಸಿದ ರೋಹಿತ್‌ ಶರ್ಮಾ ಪತ್ನಿ ರಿತಿಕಾ

    ಕೊಹ್ಲಿ ತಮ್ಮ 35ನೇ ವರ್ಷದ ಹುಟ್ಟುಹಬ್ಬದ ದಿನದಂದೇ ಶತಕ ಸಿಡಿಸುವ ಮೂಲಕ ಫ್ಯಾನ್ಸ್ಗೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್‌ಗಳಲ್ಲಿ 49 ಶತಕಗಳನ್ನು ಸಿಡಿಸಿದ ಸಾಧನೆ ಮಾಡಿದರೆ, ವಿರಾಟ್ ಕೊಹ್ಲಿ ಕೇವಲ 277 ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. 2018ರ ಆಗಸ್ಟ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟ ಕೊಹ್ಲಿ ಇದೀಗ ಕ್ರಿಕೆಟ್ ಲೋಕದಲ್ಲಿ ಇತಿಹಾಸ ಪುಟ ಸೇರಿದ್ದಾರೆ.

    ಇದೀಗ ಏಕದಿನ ಕ್ರಿಕೆಟ್‌ನಲ್ಲಿ 277 ಇನ್ನಿಂಗ್ಸ್‌ನಲ್ಲಿ 49 ಶತಕ ಸಿಡಿಸಿದ ಕೊಹ್ಲಿಯೇ ನಂ.1 ಶತಕ ವೀರನಾಗಿದ್ದು, 452 ಇನ್ನಿಂಗ್ಸ್‌ಲ್ಲಿ ಈ ಸಾಧನೆ ಮಾಡಿದ ಸಚಿನ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. 251 ಇನ್ನಿಂಗ್ಸ್‌ನಲ್ಲಿ 31 ಶತಕ ಬಾರಿಸಿರುವ ರೋಹಿತ್ ಶರ್ಮಾ, 365 ಇನ್ನಿಂಗ್ಸ್‌ನಲ್ಲಿ 30 ಶತಕ ಬಾರಿಸಿರುವ ಆಸ್ಟ್ರೇಲಿಯಾದ ರಿಕಿ ಪಾಟಿಂಗ್, 433 ಇನ್ನಿಂಗ್ಸ್‌ನಲ್ಲಿ 28 ಶತಕ ಬಾರಿಸಿರುವ ಶ್ರೀಲಂಕಾದ ಸನತ್ ಜಯಸೂರ್ಯ ಕ್ರಮವಾಗಿ 3, 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ನಮ್ಮ ಕ್ರಿಕೆಟ್‌ ತಂಡ ಮತ್ತೊಮ್ಮೆ ವಿಜಯಶಾಲಿಯಾಗಿದೆ: ಭಾರತದ ಗೆಲುವಿಗೆ ಮೋದಿ ಅಭಿನಂದನೆ

    ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ವೃತ್ತಿ ಜೀವನದಲ್ಲಿ 79 ಶತಕಗಳನ್ನ ಪೂರೈಸಿದ್ದಾರೆ. ಈ ಪೈಕಿ ಟೆಸ್ಟ್ ಕ್ರಿಕೆಟ್‌ನಲ್ಲಿ 29, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 49 ಶತಕ ಸಿಡಿಸಿದ್ದಾರೆ. ಸಚಿನ್ ದಾಖಲೆ ಮುರಿಯಲು ಇನ್ನು ಒಂದೇ ಒಂದು ಶತಕವಷ್ಟೇ ಬಾಕಿಯಿದೆ ಎಂಬುದು ವಿಶೇಷ.

  • ಕೊಹ್ಲಿ 49ನೇ ಶತಕವನ್ನು ಚಪ್ಪಾಳೆಯೊಂದಿಗೆ ಸಂಭ್ರಮಿಸಿದ ರೋಹಿತ್‌ ಶರ್ಮಾ ಪತ್ನಿ ರಿತಿಕಾ

    ಕೊಹ್ಲಿ 49ನೇ ಶತಕವನ್ನು ಚಪ್ಪಾಳೆಯೊಂದಿಗೆ ಸಂಭ್ರಮಿಸಿದ ರೋಹಿತ್‌ ಶರ್ಮಾ ಪತ್ನಿ ರಿತಿಕಾ

    ಕೋಲ್ಕತ್ತಾ: ಚೇಸ್ ಮಾಸ್ಟರ್, ಸೂಪರ್ ಸ್ಟಾರ್ ಕ್ರಿಕೆಟಿಗ, ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿ ಗಳಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಲೆಜೆಂಡ್ ಸಚಿನ್ ತೆಂಡೂಲ್ಕರ್ (Sachin Tendulkar) ದಾಖಲೆಯನ್ನ ಸರಿಗಟ್ಟಿದ್ದಾರೆ. ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಕ್ಯಾಬಿನ್‌ನಲ್ಲಿ ಕುಳಿತಿದ್ದ ರೋಹಿತ್‌ ಶರ್ಮಾ ಪತ್ನಿ ರಿತಿಕಾ ಸಜ್ದೇ (Ritika Sajdeh) ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸಿದ್ದಾರೆ.

    ದಕ್ಷಿಣ ಆಫ್ರಿಕಾ (South Africa)  ವಿರುದ್ಧ ಆರಂಭದಿಂದಲೂ ನಿಧಾನಗತಿಯ ಬ್ಯಾಟಿಂಗ್‌ ಮಾಡಿದ ಕೊಹ್ಲಿ 48.3ನೇ ಓವರ್‌ನಲ್ಲಿ ಶತಕ ಸಿಡಿಸಿದರು. ಆಗ ಮೈದಾನದಲ್ಲಿ ತುಂಬಿದ್ದ ಸಾವಿರಾರು ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಕೂಗುತ್ತಾ ಜೈಕಾರ ಹಾಕಿದರು. ಜೊತೆಗೆ ತಮ್ಮ ಮೊಬೈಲ್‌ ಟಾರ್ಚ್‌ ಹಿಡಿದು ಕೊಹ್ಲಿಗೆ ಶುಭಕೋರಿದರು. ಇದೇ ವೇಳೆ ಕ್ಯಾಬಿನ್‌ನಲ್ಲಿ ಕುಳಿತಿದ್ದ ರೋಹಿತ್‌ ಶರ್ಮಾ ಪತ್ನಿ ರಿತಿಕಾ ಸಜ್ದೇ ತಾವು ಎದ್ದು ನಿಂತು ಚಪ್ಪಾಳೆ ಹೊಡೆಯುವ ಮೂಲಕ ಸಂಭ್ರಮಿಸಿದರು. ರೋಹಿತ್‌ ಶರ್ಮಾ ಪತ್ನಿ ರಿಯಾಕ್ಷನ್‌ ಇದೀಗ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ. ಇದನ್ನೂ ಓದಿ: ಕಾಲಿಗೆ ಬೀಳಬೇಡಪ್ಪ..: ಪಾದ ಮುಟ್ಟಲು ಬಂದ ಯುವ ಅಭಿಮಾನಿಗೆ ಕೊಹ್ಲಿ ಪ್ರೀತಿಯ ಮಾತು: Viral Video

    ಕೊಹ್ಲಿ ತಮ್ಮ 35ನೇ ವರ್ಷದ ಹುಟ್ಟುಹಬ್ಬದ ದಿನದಂದೇ ಶತಕ ಸಿಡಿಸುವ ಮೂಲಕ ಫ್ಯಾನ್ಸ್ಗೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್‌ಗಳಲ್ಲಿ 49 ಶತಕಗಳನ್ನು ಸಿಡಿಸಿದ ಸಾಧನೆ ಮಾಡಿದರೆ, ವಿರಾಟ್ ಕೊಹ್ಲಿ ಕೇವಲ 277 ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. 2018ರ ಆಗಸ್ಟ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟ ಕೊಹ್ಲಿ ಇದೀಗ ಕ್ರಿಕೆಟ್ ಲೋಕದಲ್ಲಿ ಇತಿಹಾಸ ಪುಟ ಸೇರಿದ್ದಾರೆ.

    ಇದೀಗ ಏಕದಿನ ಕ್ರಿಕೆಟ್‌ನಲ್ಲಿ 277 ಇನ್ನಿಂಗ್ಸ್‌ನಲ್ಲಿ 49 ಶತಕ ಸಿಡಿಸಿದ ಕೊಹ್ಲಿಯೇ ನಂ.1 ಶತಕ ವೀರನಾಗಿದ್ದು, 452 ಇನ್ನಿಂಗ್ಸ್‌ಲ್ಲಿ ಈ ಸಾಧನೆ ಮಾಡಿದ ಸಚಿನ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. 251 ಇನ್ನಿಂಗ್ಸ್‌ನಲ್ಲಿ 31 ಶತಕ ಬಾರಿಸಿರುವ ರೋಹಿತ್ ಶರ್ಮಾ, 365 ಇನ್ನಿಂಗ್ಸ್‌ನಲ್ಲಿ 30 ಶತಕ ಬಾರಿಸಿರುವ ಆಸ್ಟ್ರೇಲಿಯಾದ ರಿಕಿ ಪಾಟಿಂಗ್, 433 ಇನ್ನಿಂಗ್ಸ್‌ನಲ್ಲಿ 28 ಶತಕ ಬಾರಿಸಿರುವ ಶ್ರೀಲಂಕಾದ ಸನತ್ ಜಯಸೂರ್ಯ ಕ್ರಮವಾಗಿ 3, 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಜಡೇಜಾ ಸ್ಪಿನ್‌ ಜಾದುಗೆ ಮಕಾಡೆ ಮಲಗಿದ ಹರಿಣರು – ಭಾರತಕ್ಕೆ 243 ರನ್‌ಗಳ ಭರ್ಜರಿ ಜಯ

    ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ವೃತ್ತಿ ಜೀವನದಲ್ಲಿ 79 ಶತಕಗಳನ್ನ ಪೂರೈಸಿದ್ದಾರೆ. ಈ ಪೈಕಿ ಟೆಸ್ಟ್ ಕ್ರಿಕೆಟ್‌ನಲ್ಲಿ 29, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 49 ಶತಕ ಸಿಡಿಸಿದ್ದಾರೆ. ಸಚಿನ್ ದಾಖಲೆ ಮುರಿಯಲು ಇನ್ನು ಒಂದೇ ಒಂದು ಶತಕವಷ್ಟೇ ಬಾಕಿಯಿದೆ ಎಂಬುದು ವಿಶೇಷ.

  • 49th Century: ಗ್ರೌಂಡ್‌ ಹೊರಗೂ ದಾಖಲೆ ಬರೆದ ಕೊಹ್ಲಿ ಬರ್ತ್‌ ಡೇ ಶತಕ..!

    49th Century: ಗ್ರೌಂಡ್‌ ಹೊರಗೂ ದಾಖಲೆ ಬರೆದ ಕೊಹ್ಲಿ ಬರ್ತ್‌ ಡೇ ಶತಕ..!

    – ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ ನಲ್ಲಿ ಹಿಂದಿನ ಎಲ್ಲಾ ದಾಖಲೆಗಳೂ ಉಡೀಸ್‌

    ಕೋಲ್ಕತ್ತಾ: ಸೂಪರ್‌ ಸಂಡೇನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ (Disney+ Hotstar) ಏಕಕಾಲಕ್ಕೆ 4.4 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು, ಹಿಂದಿನ ಎಲ್ಲಾ ದಾಖಲೆಗಳೂ ಮುರಿದಿವೆ.

    ಇದೇ ವಿಶ್ವಕಪ್‌ ಆವೃತ್ತಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧ ಧರ್ಮಶಾಲಾ ಕ್ರೀಡಾಂಗಣದಲ್ಲಿ ಕಿವೀಸ್‌ ವಿರುದ್ಧ ನಡೆದ ಪಂದ್ಯದಲ್ಲಿ 4.3 ಕೋಟಿ ಕ್ರಿಕೆಟ್‌ ಅಭಿಮಾನಿಗಳಿಂದ ವೀಕ್ಷಣೆ ಕಂಡಿತ್ತು. ಆದರಿಂದು 4.4 ಕೋಟಿ ವೀಕ್ಷಣೆ ಕಂಡಿದ್ದು ಹಿಂದಿನ ಎಲ್ಲಾ ದಾಖಲೆಗಳನ್ನ ಉಡೀಸ್‌ ಮಾಡಿದೆ. ಇದನ್ನೂ ಓದಿ:  ನಮ್ಮ ಕ್ರಿಕೆಟ್‌ ತಂಡ ಮತ್ತೊಮ್ಮೆ ವಿಜಯಶಾಲಿಯಾಗಿದೆ: ಭಾರತದ ಗೆಲುವಿಗೆ ಮೋದಿ ಅಭಿನಂದನೆ

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ ಸ್ಫೋಟಕ ಆರಂಭದೊಂದಿಗೆ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 326 ರನ್‌ ಗೀಸಿತ್ತು. ಆರಂಭದಲ್ಲಿ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಹರಿಣರ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದ್ದರು. ಆರಂಭಿಕರು ಔಟಾಗುತ್ತಿದ್ದಂತೆ ರನ್‌ ವೇಗವೂ ಕಡಿಮೆಯಾಯಿತು.  ಇದನ್ನೂ ಓದಿ: ಕಾಲಿಗೆ ಬೀಳಬೇಡಪ್ಪ..: ಪಾದ ಮುಟ್ಟಲು ಬಂದ ಯುವ ಅಭಿಮಾನಿಗೆ ಕೊಹ್ಲಿ ಪ್ರೀತಿಯ ಮಾತು: Viral Video

    ನಿಧಾನಗತಿಯ ಬ್ಯಾಟಿಂಗ್‌ ಮಾಡಿದ ವಿರಾಟ್‌ ಕೊಹ್ಲಿ ತಮ್ಮ ಹುಟ್ಟುಹಬ್ಬದಂದೇ 49‌ನೇ ಏಕದಿನ ಕ್ರಿಕೆಟ್‌ ಶತಕ ದಾಖಲೆಯನ್ನ ಸಿಡಿಸಿ ಕ್ರಿಕೆಟ್‌ ದೇವರು ಸಚಿನ್‌ ದಾಖಲೆಯನ್ನ ಸರಿಗಟ್ಟಿದರು. ಆದ್ರೆ 48.3ನೇ ಓವರ್‌ನಲ್ಲಿ ಕೊಹ್ಲಿ ಶತಕವನ್ನ ಕಣ್ತುಂಬಿಕೊಳ್ಳಲು 4.4 ಕೋಟಿ ವೀಕ್ಷಕರು ಆನ್‌ಲೈನ್‌ ವೇದಿಕೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ಗೆ ಲಗ್ಗೆಯಿಟ್ಟಿದ್ದರು. ಕೊಹ್ಲಿ 90 ರನ್‌ ಗಳಿಸುತ್ತಿದ್ದಂತೆ ಲಕ್ಷ ಲಕ್ಷ ಅಭಿಮಾನಿಗಳು ಏಕಾಏಕಿ ಆನ್‌ಲೈನ್‌ ವೇದಿಕೆಗೆ ಲಗ್ಗೆಯಿಟ್ಟು ಗ್ರೌಂಡ್‌ ಹೊರಗೂ ಕೊಹ್ಲಿ ಶತಕ ದಾಖಲೆ ಬರೆಯುವಂತೆ ಮಾಡಿದರು. ಈ ಹಿಂದೆ ನ್ಯೂಜಿಲೆಂಡ್‌ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸುವಾಗ 4.3 ಕೋಟಿ ಅಭಿಮಾನಿಗಳು ವೀಕ್ಷಿಸಿದ್ದರು.

    ಭಾರತ ಮತ್ತು ಪಾಕ್‌ ಪಂದ್ಯದ ವೇಳೆ ರೋಹಿತ್‌ ಶರ್ಮಾ (Rohit Sharma) ಬ್ಯಾಟಿಂಗ್‌ ನೋಡಲು 3.5 ಕೋಟಿ ಜನರು ವೀಕ್ಷಣೆ ಮಾಡಿದ್ದು, ಈವರೆಗಿನ ದಾಖಲೆಯಾಗಿತ್ತು. ಈ ಹಿಂದೇ ಇದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ 2023ರ ಐಪಿಎಲ್‌ ಫೈನಲ್‌ ಪಂದ್ಯವನ್ನು ಜಿಯೋಸಿನಿಮಾದಲ್ಲಿ‌ ಏಕಕಾಲಕ್ಕೆ 3.2 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು ದಾಖಲೆಯಾಗಿತ್ತು. ಇದನ್ನೂ ಓದಿ: ICC World Cup: 20 ವರ್ಷಗಳ ಬಳಿಕ ಟೀಂ ಇಂಡಿಯಾದ ಸತತ 8ನೇ ಗೆಲುವು

    2023ರ ಐಪಿಎಲ್‌ ಆವೃತ್ತಿಯಲ್ಲಿ ಜಿಯೋಸಿನಿಮಾ ಸತತ 4ನೇ ಬಾರಿಗೆ ತನ್ನದೇ ವೀಕ್ಷಕರ ದಾಖಲೆ ಮುರಿದಿತ್ತು. ಜೊತೆಗೆ 2019ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ ನಿರ್ಮಿಸಲ್ಪಟ್ಟಿದ್ದ ವಿಶ್ವದಾಖಲೆಗಳೆಲ್ಲವನ್ನೂ ನುಚ್ಚುನೂರು ಮಾಡಿತ್ತು. 2013ರ ವಿಶ್ವಕಪ್‌ ಪಂದ್ಯವನ್ನು 2.53 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು.

    ಏಪ್ರಿಲ್ 17ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಪಂದ್ಯದ ವೇಳೆ ಎಂ.ಎಸ್ ಧೋನಿ ಅವರ ಆಟ ವೀಕ್ಷಿಸಲು 2.4 ಕೋಟಿ ವೀಕ್ಷಕರು ಜಿಯೋಸಿನಿಮಾದಲ್ಲಿ ಒಟ್ಟಾಗಿ ಸೇರಿದ್ದು ಹಿಂದಿನ ದಾಖಲೆ ಎನಿಸಿತ್ತು. ಅದಕ್ಕೂ ಮುನ್ನ ಏಪ್ರಿಲ್ 12ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಗತವೈಭವ ನೆನಪಿಸುವಂಥ ಬ್ಯಾಟಿಂಗ್ ಪ್ರದರ್ಶಿಸಿದಾಗ ಗರಿಷ್ಠ 2.2 ಕೋಟಿ ವೀಕ್ಷಕರ ದಾಖಲೆ ಕಂಡಿತ್ತು. ಇದನ್ನೂ ಓದಿ: 49th Century: ಕಿಂಗ್ ಕೊಹ್ಲಿ ಬರ್ತ್ ಡೇ ಶತಕ – ಶುಭಾಶಯಗಳ ಸುರಿಮಳೆ!

    ಭಾನುವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ತಂಡ 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಆಲೌಟ್‌ ಆಯಿತು. ಗುರಿ ಬೆನ್ನತ್ತಿದ್ದ ಭಾರತ ತಂಡ 30.3 ಓವರ್‌ಗಳಲ್ಲೇ 192 ರನ್‌ ಗಳಿಸಿ ಭರ್ಜರಿ ಜಯ ಸಾಧಿಸಿತು.

  • ಸಚಿನ್ 49 = ವಿರಾಟ್ 49 : ಯಾವ ದೇಶದಲ್ಲಿ ಎಷ್ಟು ಶತಕ..?

    ಸಚಿನ್ 49 = ವಿರಾಟ್ 49 : ಯಾವ ದೇಶದಲ್ಲಿ ಎಷ್ಟು ಶತಕ..?

    ಬೆಂಗಳೂರು: ವಿರಾಟ್ ಕೊಹ್ಲಿ ಅವರು ಇಂದು ಸಚಿನ್ ತೆಂಡೂಲ್ಕರ್ 49 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಇನ್ನೊಂದು ಶತಕ ಬಾರಿಸಿದರೆ ವಿರಾಟ್ ಕೊಹ್ಲಿ ಸಚಿನ್ ಅವರನ್ನು ಹಿಂದಿಕ್ಕಿ ಶತಕಗಳ ಅರ್ಧ ಶತಕವನ್ನು ಪೂರೈಸಲಿದ್ದಾರೆ.

    ಸಚಿನ್ ಮತ್ತು ಕೊಹ್ಲಿ ತಲಾ 49 ಶತಕದ ಸಾಧನೆಯೊಂದಿಗೆ ಜೊತೆಯಾಗಿ ನಿಂತಿದ್ದಾರೆ. ಇಬ್ಬರು ಆಟಗಾರರು ಯಾವ ದೇಶಗಳಲ್ಲಿ ಆಡಿದ ಪಂದ್ಯಗಳಲ್ಲಿ ಶತಕ ದಾಖಲಿಸಿದ್ದಾರೆ ಎಂಬ ಅಂಶ ಇಲ್ಲಿದೆ. ಇಬ್ಬರಿಗೂ ಶತಕ ಬಾರಿಸಲು ಭಾರತವೇ ಅಚ್ಚುಮೆಚ್ಚು ಎನ್ನುವುದು ಅಂಕಿ ಅಂಶಗಳು ಹೇಳುವ ಲೆಕ್ಕಾಚಾರ. ಯಾಕೆಂದರೆ ಸಚಿನ್ ಭಾರತದಲ್ಲಿ 20 ಶತಕ ಬಾರಿಸಿದ್ದರೆ, ಕೊಹ್ಲಿ ಭಾರತದಲ್ಲಿ 23 ಶತಕ ದಾಖಲಿಸಿದ್ದಾರೆ. 90ರ ದಶಕದಲ್ಲಿ ಶಾರ್ಜಾದಲ್ಲಿ ಕ್ರಿಕೆಟ್ ಪಂದ್ಯಗಳು ಹೆಚ್ಚಾಗಿ ನಡೆಯುತ್ತಿದ್ದವು. ಹೀಗಾಗಿ ಸಚಿನ್ ಯುಎಇಯಲ್ಲಿ ಗರಿಷ್ಠ 7 ಶತಕ ಬಾರಿಸಿದ್ದಾರೆ.

    ಆದರೆ ವಿರಾಟ್ ಕೊಹ್ಲಿ ಬಾಂಗ್ಲಾದೇಶದಲ್ಲಿ 6 ಶತಕ ದಾಖಲಿಸಿದ್ದು, ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾದಲ್ಲಿ ತಲಾ 5 ಶತಕ ಸಿಡಿಸಿದ್ದಾರೆ. ಇದನ್ನೂ ಓದಿ: Virat Kohli Centuries: ಕ್ರಿಕೆಟ್‌ ದೇವರಿಗೆ ಸರಿಸಮನಾಗಿ ನಿಂತ ಕಿಂಗ್‌ ಕೊಹ್ಲಿ..!

    ಆಸ್ಟ್ರೇಲಿಯಾದಲ್ಲಿ ಸಚಿನ್ 1, ವಿರಾಟ್ 5 ಶತಕ ದಾಖಲಿಸಿದ್ದಾರೆ.
    ಬಾಂಗ್ಲಾದೇಶದಲ್ಲಿ ಸಚಿನ್ 2, ವಿರಾಟ್ 6 ಶತಕ ದಾಖಲಿಸಿದ್ದಾರೆ.
    ಇಂಗ್ಲೆಂಡ್ ನಲ್ಲಿ ಸಚಿನ್ 3, ವಿರಾಟ್ 1 ಶತಕ ದಾಖಲಿಸಿದ್ದಾರೆ.
    ಭಾರತದಲ್ಲಿ ಸಚಿನ್ 20, ವಿರಾಟ್ 23 ಶತಕ ದಾಖಲಿಸಿದ್ದಾರೆ.
    ನ್ಯೂಜಿಲೆಂಡ್ ನಲ್ಲಿ ಸಚಿನ್ ಹಾಗೂ ವಿರಾಟ್ ತಲಾ 1 ಶತಕ ಬಾರಿಸಿದ್ದಾರೆ.
    ಪಾಕಿಸ್ತಾನದಲ್ಲಿ ಸಚಿನ್ 1 ಶತಕ, ವಿರಾಟ್ ಶತಕ ಬಾರಿಸಿಲ್ಲ.
    ದಕ್ಷಿಣ ಆಫ್ರಿಕಾದಲ್ಲಿ ಸಚಿನ್ ಹಾಗೂ ವಿರಾಟ್ ತಲಾ 3 ಶತಕ ದಾಖಲಿಸಿದ್ದಾರೆ.
    ಶ್ರೀಲಂಕಾದಲ್ಲಿ ಸಚಿನ್ ಹಾಗೂ ವಿರಾಟ್ ತಲಾ 5 ಶತಕ ದಾಖಲಿಸಿದ್ದಾರೆ.
    ವೆಸ್ಟ್ ಇಂಡೀಸ್ ನಲ್ಲಿ ಸಚಿನ್ 0, ವಿರಾಟ್ 4 ಶತಕ ದಾಖಲಿಸಿದ್ದಾರೆ.
    ಜಿಂಬಾಬ್ವೆಯಲ್ಲಿ ಸಚಿನ್ 2, ವಿರಾಟ್ 1 ಶತಕ ದಾಖಲಿಸಿದ್ದಾರೆ.
    ಮಲೇಷ್ಯಾದಲ್ಲಿ ಸಚಿನ್ 1, ವಿರಾಟ್ ಶತಕ ದಾಖಲಿಸಿಲ್ಲ.
    ಸಿಂಗಾಪುರದಲ್ಲಿ ಸಚಿನ್ 1, ವಿರಾಟ್ ಶತಕ ದಾಖಲಿಸಿಲ್ಲ.
    ಯುಎಇಯಲ್ಲಿ ಸಚಿನ್ 7 ಶತಕ ದಾಖಲಿಸಿದರೆ, ವಿರಾಟ್ ಶತಕ ದಾಖಲಿಸಿಲ್ಲ.

  • 49th Century – ಸಚಿನ್ & ಕೊಹ್ಲಿ: ಯಾವ ತಂಡದ ವಿರುದ್ಧ ಎಷ್ಟು ಶತಕ..?

    49th Century – ಸಚಿನ್ & ಕೊಹ್ಲಿ: ಯಾವ ತಂಡದ ವಿರುದ್ಧ ಎಷ್ಟು ಶತಕ..?

    ಬೆಂಗಳೂರು: 49 ಶತಕಗಳ ಮೂಲಕ ಸಚಿನ್ (Sachin) ದಾಖಲೆ ಸರಿಗಟ್ಟಿರುವ ಕೊಹ್ಲಿ (Virat Kohli) ತಮ್ಮ 35ನೇ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡರು. 49 ಶತಕ ಬಾರಿಸಿದ್ದೇನೋ ಸರಿ, ಆದು ಯಾವ ತಂಡದ ವಿರುದ್ಧ ಎಂದು ಗೊತ್ತಾಗಬೇಕಲ್ಲ. ಅದಕ್ಕೆ ಈ ಎಲ್ಲ ಅಂಕಿ ಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

    ಶತಕ ಬಾರಿಸುವುದೆಂದರೆ ಸಚಿನ್ ಹಾಗೂ ಕೊಹ್ಲಿಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ಎಂದರೆ ಅಚ್ಚುಮೆಚ್ಚು. ಸಚಿನ್ ಆಸ್ಟ್ರೇಲಿಯಾ ವಿರುದ್ಧ 9 ಶತಕ ದಾಖಲಿಸಿದ್ದರೆ, ಕೊಹ್ಲಿ 8 ಶತಕ ದಾಖಲಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಇಬ್ಬರೂ ತಲಾ 5 ಶತಕ ದಾಖಲಿಸಿದ್ದಾರೆ.

    ಆ `49 ಶತಕ’ಗಳು ಯಾರ ವಿರುದ್ಧ..?

    ಆಸ್ಟ್ರೇಲಿಯಾ ವಿರುದ್ಧ ಸಚಿನ್ 9, ಕೊಹ್ಲಿ 8 ಶತಕ
    ಬಾಂಗ್ಲಾದೇಶದ ವಿರುದ್ಧ ಸಚಿನ್ 1, ವಿರಾಟ್ ಕೊಹ್ಲಿ 5 ಶತಕ
    ಇಂಗ್ಲೆಂಡ್ ವಿರುದ್ಧ ಸಚಿನ್ 2, ವಿರಾಟ್ 3 ಶತಕ
    ನ್ಯೂಜಿಲೆಂಡ್ ವಿರುದ್ಧ ಸಚಿನ್ ಹಾಗೂ ವಿರಾಟ್ ತಲಾ 5 ಶತಕ
    ಪಾಕಿಸ್ತಾನ ವಿರುದ್ಧ ಸಚಿನ್ 5 ಶತಕ, ವಿರಾಟ್ 3 ಶತಕ
    ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಹಾಗೂ ವಿರಾಟ್ ತಲಾ 5 ಶತಕ
    ಶ್ರೀಲಂಕಾ ವಿರುದ್ಧ ಸಚಿನ್ 8 ಹಾಗೂ ವಿರಾಟ್ 10 ಶತಕ
    ವೆಸ್ಟ್ ಇಂಡೀಸ್ ವಿರುದ್ಧ ಸಚಿನ್ 4, ವಿರಾಟ್ 9 ಶತಕ
    ಜಿಂಬಾಬ್ವೆ ವಿರುದ್ಧ ಸಚಿನ್ 5, ವಿರಾಟ್ 1 ಶತಕ
    ಕೀನ್ಯಾ ವಿರುದ್ಧ ಸಚಿನ್ 4 ಶತಕ ಬಾರಿಸಿದರೆ, ಕೊಹ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ
    ನಮೀಬಿಯಾ ವಿರುದ್ಧ ಸಚಿನ್ 1 ಶತಕ ಬಾರಿಸಿದರೆ, ಕೊಹ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ.