Tag: sachin tendulkar

  • ಸಾರಾಳನ್ನು ಮದ್ವೆ ಆಗ್ತೀನಿ – ತೆಂಡೂಲ್ಕರ್ ಪುತ್ರಿಗೆ ಬ್ಲಾಕ್ ಮೇಲ್ ಎಸಗಿದಾತ ಅರೆಸ್ಟ್!

    ಸಾರಾಳನ್ನು ಮದ್ವೆ ಆಗ್ತೀನಿ – ತೆಂಡೂಲ್ಕರ್ ಪುತ್ರಿಗೆ ಬ್ಲಾಕ್ ಮೇಲ್ ಎಸಗಿದಾತ ಅರೆಸ್ಟ್!

    ಮುಂಬೈ: ಭಾರತೀಯ ಕ್ರಿಕೆಟ್ ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿರಿಯ ಪುತ್ರಿ ಸಾರಾಗೆ ನನ್ನನ್ನು ಮದುವೆಯಾಗು ಇಲ್ಲದಿದ್ದರೆ ಅಪಹರಿಸುತ್ತೇನೆ ಎಂದು ಬೆದರಿಕ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಮೂಲದ ದೇವ್ ಕುಮಾರ್ ಮೈಟಿ ಎಂದು ಗುರುತಿಸಲಾಗಿದೆ. ಈತ ಪಶ್ಚಿಮ ಬಂಗಾಳ ಪುರ್ಬಾ ಮೆಡಿನಿಪುರ್ ಜಿಲ್ಲೆಯ ನಿವಾಸಿ ಎಂದು ತಿಳಿದು ಬಂದಿದೆ. 32 ವರ್ಷದ ಈತ ಇತ್ತೀಚೆಗೆ ಹಲವು ದಿನಗಳಿಂದ ಸಾರಾ ತೆಂಡೂಲ್ಕರ್ ಕುರಿತು ಪೋಸ್ಟ್ ಗಳನ್ನು ಮತ್ತು ಅವಹೇಳನಕಾರಿ ಕಮೆಂಟ್ ಗಳನ್ನು ಹಾಕುತ್ತಿದ್ದನು ಎಂದು ಮೂಲಗಳಿಂದ ತಿಳಿದು ಬಂದಿದೆ.

    ಸಾರಾಗೆ ನನ್ನನ್ನು ಮದುವೆಯಾಗು ಇಲ್ಲವಾದರೆ ನಿನ್ನನ್ನು ಅಪಹರಣ ಮಾಡುತ್ತೇನೆ ಎಂದು ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೇ ಸಚಿನ್ ಅವರ ಮುಂಬೈ ಮನೆ ಮುಂದೆ ಬಂದು ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ದೇವ್ ಕುಮಾರ್ ಮೈಟಿ ಎಂಬಾತನನ್ನು ಬಂಧಿಸಿದ್ದಾರೆ.

    ನಾನು ಸಾರಾಳನ್ನು ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದಾಗ ಟಿವಿಯಲ್ಲಿ ನೋಡಿದ್ದೆ. ಆಗ ಸಾರಾಳ ಮೇಲೆ ಪ್ರೀತಿ ಆಯಿತು. ನಾನು ಆಕೆಯನ್ನು ಮದುವೆ ಮಾಡಿಕೊಳ್ಳುತ್ತೇನೆ. ತೆಂಡೂಲ್ಕರ್ ಮನೆಗೆ ಸುಮಾರು 20 ಬಾರಿ ಕರೆ ಮಾಡಿದ್ದೇನೆ. ಆದರೆ ನಾನು ಇದುವರೆಗೂ ಸಚಿನ್ ಅವರನ್ನು ನೋಡಿಲ್ಲ ಎಂದು ಆರೋಪಿ ಪೊಲೀಸರಿಗೆ ಹೇಳಿದ್ದಾನೆ.

    ಆರೋಪಿ ದೇವ್ ಒಬ್ಬ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಕೆಲಸವಿಲ್ಲದೇ ನಿರುದ್ಯೋಗಿಯಾಗಿದ್ದಾನೆ. ಅಷ್ಟೇ ಅಲ್ಲದೇ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ನಿಲ್ಲಿಸಿದ್ದಾನೆ ಎಂದು ಆರೋಪಿಯ ಕುಟುಂಬಸ್ಥರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಅವನು ಹೇಗೆ ಸಿಲುಕಿಕೊಂಡಿದ್ದಾನೆ ಎಂದು ನಮಗೆ ತಿಳಿದಿಲ್ಲ. ಇತ್ತೀಚೆಗೆ ಅವರ ತಂದೆಯನ್ನು ಕಳೆದುಕೊಂಡಿದ್ದಾನೆ. ಕಳೆದ 8 ವರ್ಷಗಳಿಂದ ಅವನ ಮಾನಸಿಕ ಸ್ಥಿತಿ ಸರಿಯಿಲ್ಲ. ಆದ್ದರಿಂದ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದಾನೆ ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

    ಆರೋಪಿಯಿಂದ ಒಂದು ಡೈರಿಯನ್ನು ವಶಪಡಿಸಿಕೊಂಡಿದ್ದು, ಆ ಡೈರಿಯಲ್ಲಿ ಸಾರಾ ಅವರನ್ನು ನನ್ನ ಹೆಂಡತಿ ಎಂದು ಬರೆದುಕೊಂಡಿದ್ದಾನೆ. ಸಚಿನ್ ಅವರ ಮನೆಯ ಲ್ಯಾಂಡ್‍ಲೈನ್ ನಂಬರ್ ಹೇಗೆ ಪಡೆದಿದ್ದಾನೆ ಎಂದು ಇದುವರೆಗೂ ನಿಗೂಢವಾಗಿದೆ. ಅವನು ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೋ ಇಲ್ಲವೋ ಎಂದು ತಿಳಿದಿಲ್ಲ. ಆದ್ದರಿಂದ ವೈದ್ಯಕೀಯ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಸಾರಾ ತೆಂಡೂಲ್ಕರ್ ಆರೋಪಿಯ ವಿರುದ್ಧ ದೂರು ನೀಡಿದ್ದರು. ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದು, ಕರೆ ಬಂದಿದ್ದ ಟೆಲಿಫೋನ್ ಟವರ್ ಗಳನ್ನು ಪರಿಶೀಲಿಸಿ ಮೊಬೈಲ್ ನಂಬರ್ ಟ್ರಾಪ್ ಮಾಡಿ ಬಂಧಿಸಿದ್ದಾರೆ.

  • ವಿಪಕ್ಷಗಳ ಗದ್ದಲದಿಂದ ಮೊದಲ ಭಾಷಣದಲ್ಲೇ ಶೂನ್ಯಕ್ಕೆ ಸಚಿನ್ ಔಟ್!

    ವಿಪಕ್ಷಗಳ ಗದ್ದಲದಿಂದ ಮೊದಲ ಭಾಷಣದಲ್ಲೇ ಶೂನ್ಯಕ್ಕೆ ಸಚಿನ್ ಔಟ್!

    ನವದೆಹಲಿ: ವಿರೋಧ ಪಕ್ಷಗಳ ತೀವ್ರ ಗದ್ದಲ, ಕೋಲಾಹಲಗಳ ನಡುವೆ ರಾಜ್ಯಸಭಾ ಸದಸ್ಯ, ಭಾರತ ರತ್ನ ಸಚಿನ್ ತೆಂಡೂಲ್ಕರ್ ತಮ್ಮ ಮೊದಲ ಭಾಷಣ ಆರಂಭಿಸಲು ಅವಕಾಶ ಸಿಗದ ಘಟನೆಗೆ ರಾಜ್ಯ ಸಭೆ ಸಾಕ್ಷಿಯಾಯಿತು.

    ಕಳೆದ 5 ವರ್ಷಗಳಲ್ಲಿ ಮೊದಲ ಬಾರಿಗೆ ಸಚಿನ್ ತೆಂಡೂಲ್ಕರ್ ಸದನದಲ್ಲಿ ಮಾತನಾಡಲು ಮುಂದಾಗಿದ್ದರು. ಸಚಿನ್ ತಮ್ಮ ಮೊದಲ ಭಾಷಣದಲ್ಲಿ ಭಾರತದಲ್ಲಿ ಕ್ರೀಡೆಗಳು ಹಾಗೂ ಆಟದ ಹಕ್ಕಿನ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದರು. ಅಲ್ಲದೆ ತಮ್ಮ ಅಂತರಾಷ್ಟ್ರೀಯ ಪದಕ ವಿಜೇತಕರಿಗೆ ಕೇಂದ್ರ ಸರ್ಕಾರವು ನೀಡುವ ಆರೋಗ್ಯ ಯೋಜನೆಗಳು, ಶಾಲಾ ಪಠ್ಯಕ್ರಮದಲ್ಲಿ ಕ್ರೀಡೆಯ ಅಳವಡಿಕೆ ಹಾಗೂ ಹಲವು ದೀರ್ಘಾವಧಿ ಸಮಸ್ಯೆಗಳ ಬಗ್ಗೆ ತಮ್ಮ ಪ್ರಸ್ತಾಪಿಸುತ್ತಿದ್ದರು.

    ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧ ಗುಜರಾತ್ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಪಕ್ಷ ನಾಯಕರು ರಾಜ್ಯಸಭೆಯಲ್ಲಿ ಗದ್ದಲ ಎಬ್ಬಿಸಿದರು. ಮೋದಿ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕೆಂದು ಘೋಷಣೆ ಕೂಗುವ ಮೂಲಕ ಸದನಕ್ಕೆ ಅಡ್ಡಿಪಡಿಸಿದರು.

    ಸಚಿನ್ ತೆಂಡೂಲ್ಕರ್ ಸದನದಲ್ಲಿ ಎದ್ದು ನಿಂತು ಹತ್ತು ನಿಮಿಷಗಳ ಕಾಲ ಎದ್ದು ನಿಂತು ಮಾತನಾಡುವ ಅವಕಾಶಕ್ಕಾಗಿ ಕಾದು ನಿಂತಿದ್ದರು. ಆದರೆ ಸದನದಲ್ಲಿ ಉಂಟಾದ ವಿರೋಧ ಪಕ್ಷಗಳ ತೀವ್ರ ಕೋಲಾಹಲ, ಗದ್ದಲಗಳಿಂದಾಗಿ ಸಭಾಪತಿಗಳಾದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸದನವನ್ನು ಮುಂದೂಡಿದರು.

    ಈ ವೇಳೆ ಉಪರಾಷ್ಟ್ರಪತಿಗಳು ಸದನದ ಸದಸ್ಯರ ಜೊತೆ ಗದ್ದಲ ನಿಲ್ಲಿಸಿ ಎಂದು ಕೇಳಿಕೊಂಡರು. ದೇಶವೇ ನಮ್ಮನ್ನು ನೋಡುತ್ತಿದೆ, ಪ್ರಮುಖ ಕ್ರೀಡಾ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕಿದೆ. ಆದರೆ ಕನಿಷ್ಠ ಪಕ್ಷ ಕ್ರೀಡಾ ಸ್ಫೂರ್ತಿ ಮೆರೆದು ಗೌರವ ನೀಡಲು ವಿನಂತಿಸಿಕೊಂಡರು. ಅದರೂ ವಿಪಕ್ಷಗಳು ತಮ್ಮ ಗದ್ದಲ ಮುಂದುವರೆಸಿದ್ದರು.

    ರಾಜ್ಯಸಭಾ ವಿರೋಧಿ ಪಕ್ಷಗಳ ನಡೆ ಎಲ್ಲರ ಟೀಕೆಗೆ ಗುರಿಯಾಗಿದ್ದು, ಹಲವು ಗಣ್ಯರು ಈ ಕುರಿತು ತಮ್ಮ ಬೇಸರವನ್ನು ವ್ಯಕ್ತಪಡಿಸಿ ಪ್ರಶ್ನಿಸಿದ್ದಾರೆ.

  • ಸಿಕ್ಸರ್ ಸಿಡಿಸಿ ಸಚಿನ್ ದಾಖಲೆ ಮುರಿದ ರೋಹಿತ್ ಶರ್ಮಾ

    ಸಿಕ್ಸರ್ ಸಿಡಿಸಿ ಸಚಿನ್ ದಾಖಲೆ ಮುರಿದ ರೋಹಿತ್ ಶರ್ಮಾ

    ಮೊಹಾಲಿ: ಶ್ರೀಲಂಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಟೀಂ ಇಂಡಿಯಾ ಗೆಲುವಿಗೆ ಕಾರಣರಾದ ನಾಯಕ ರೋಹಿತ್ ಶರ್ಮಾ ವಿಶ್ವದಾಖಲೆ ನಿರ್ಮಿಸಿದ ಜೊತೆಗೆ ಸಚಿನ್ ದಾಖಲೆಯನ್ನು ಮುರಿದಿದ್ದಾರೆ.

    ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 153 ಎಸೆತದಲ್ಲಿ 13 ಬೌಂಡರಿ, 12 ಸಿಕ್ಸರ್ ಗಳ ನೆರವಿನಿಂದ ರೋಹಿತ್ ದ್ವಿಶತಕ ಸಿಡಿಸಿದ್ದರು. ಈ ಮೂಲಕ ವರ್ಷವೊಂದರಲ್ಲಿ 20 ಇನ್ನಿಂಗ್ಸ್ ಮೂಲಕ ಬರೋಬ್ಬರಿ 45 ಸಿಕ್ಸರ್ ಸಿಡಿಸುವ ಮೂಲಕ ಸಚಿನ್ ದಾಖಲೆಯನ್ನು ಮುರಿದಿದ್ದು, ವರ್ಷವೊಂದರಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

    ಈ ಹಿಂದೆ ಭಾರತದ ಪರ ವರ್ಷವೊಂದರಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿತ್ತು. 1998ರಲ್ಲಿ 33 ಇನ್ನಿಂಗ್ಸ್ ಗಳಲ್ಲಿ ಸಚಿನ್ 40 ಸಿಕ್ಸರ್ ಸಿಡಿಸಿದ್ದರು.

    ಇನ್ನು ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿ ವಿಲಿಯರ್ಸ್ 2015 ರಲ್ಲಿ 58 ಸಿಕ್ಸ್ ಸಿಡಿಸಿ ಮೊದಲ ಸ್ಥಾನದಲ್ಲಿದ್ದರೆ, 2002ರಲ್ಲಿ 48 ಸಿಕ್ಸ್ ಸಿಡಿಸುವ ಮೂಲಕ ನಂತರ ಸ್ಥಾನವನ್ನು ಪಾಕ್ ಆಟಗಾರ ಶಾಹಿದ್ ಅಫ್ರಿದಿ ಪಡೆದುಕೊಂಡಿದ್ದಾರೆ.

    ಪ್ರಸ್ತುತ ವರ್ಷದ ಅವಧಿಯಲ್ಲಿ ರೋಹಿತ್ ಶರ್ಮಾ ಅವರಿಗೆ ಶ್ರೀಲಂಕಾ ವಿರುದ್ಧ ಇನ್ನು ಒಂದು ಪಂದ್ಯ ಬಾಕಿ ಉಳಿದಿದ್ದು, ಆಫ್ರಿದಿ ದಾಖಲೆಯನ್ನು ಮುರಿಯುವ ಅವಕಾಶವಿದೆ.

    ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯವು ಡಿಸೆಂಬರ್ 17 ರಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ವೈ.ಎಸ್.ರಾಜಶೇಖರ ರೆಡ್ಡಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

    ರೋಹಿತ್ ರನ್ ಏರಿದ್ದು ಹೀಗೆ:
    50 ರನ್ – 65 ಎಸೆತ, 5 ಬೌಂಡರಿ
    100 ರನ್ – 115 ಎಸೆತ, 115 ಎಸೆತ, 9 ಬೌಂಡರಿ, 1 ಸಿಕ್ಸರ್
    150 ರನ್ – 133 ಎಸೆತ, 10 ಬೌಂಡರಿ, 7 ಸಿಕ್ಸರ್
    200 ರನ್ – 151 ಎಸೆತ, 13 ಬೌಂಡರಿ, 11 ಸಿಕ್ಸರ್
    208 ರನ್ – 153 ಎಸೆತ, 13 ಬೌಂಡರಿ, 12 ಸಿಕ್ಸರ್

  • ನಂಬರ್ ಒನ್ ಸ್ಥಾನಕ್ಕೆ ಏರಿ ಸಚಿನ್ ದಾಖಲೆ ಮುರಿದ ಕೊಹ್ಲಿ

    ನಂಬರ್ ಒನ್ ಸ್ಥಾನಕ್ಕೆ ಏರಿ ಸಚಿನ್ ದಾಖಲೆ ಮುರಿದ ಕೊಹ್ಲಿ

    ಮುಂಬೈ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಶತಕ ಬಾರಿಸಿ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ಒನ್ ಪಟ್ಟಕ್ಕೆ ಏರಿದ್ದು ಮಾತ್ರವಲ್ಲೇ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ.

    ಹೌದು. ಕೊಹ್ಲಿ ಈಗ ಏಕದಿನ ಕ್ರಿಕೆಟ್ ನಲ್ಲಿ ಜೀವನಶ್ರೇಷ್ಠ 889 ರೇಟಿಂಗ್ಸ್ ಪಡೆದುಕೊಂಡಿದ್ದಾರೆ. ಈ ಹಿಂದೆ 887 ರೇಟಿಂಗ್ಸ್ ಪಡೆಯುವ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದ್ದರು. ಭಾನುವಾರ ಸಚಿನ್ ದಾಖಲೆಯನ್ನು ಮುರಿದು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅತಿ ಹೆಚ್ಚು ರೇಟಿಂಗ್ಸ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

    ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ 872 ರೇಟಿಂಗ್ ಪಡೆದು ಮೂರನೇ ಸ್ಥಾನದಲ್ಲಿದ್ದರೆ ದಕ್ಷಿಣ ಆಫ್ರಿಕಾದ ಡೇವಿಡ್ ವಾರ್ನರ್ 865 ರೇಟಿಂಗ್ ಪಡೆದು 3ನೇ ಸ್ಥಾನದಲ್ಲಿದ್ದಾರೆ.

    799 ರೇಟಿಂಗ್ ಪಡೆದು ರೋಹಿತ್ ಶರ್ಮಾ 7ನೇ ಸ್ಥಾನದಲ್ಲಿದ್ದರೆ, 730 ರೇಟಿಂಗ್ ಪಡೆದು ಧೋನಿ 11ನೇ ಸ್ಥಾನದಲ್ಲಿದ್ದಾರೆ. ಶಿಖರ್ ಧವನ್ 15ನೇ ಸ್ಥಾನದಲ್ಲಿದ್ದು, 708 ರೇಟಿಂಗ್ ಪಡೆದುಕೊಂಡಿದ್ದಾರೆ.

    ಟಿ 20 ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ 729 ರೇಟಿಂಗ್ ಪಡೆಯುವ ಮೂಲಕ ಜಸ್‍ಪ್ರೀತ್ ಬುಮ್ರಾ ಮೊದಲ ಸ್ಥಾನದಲ್ಲಿದ್ದರೆ, ಏಕದಿನ ಬೌಲಿಂಗ್ ಪಟ್ಟಿಯಲ್ಲಿ 719 ರೇಟಿಂಗ್ ಪಡೆದು 3ನೇ ಸ್ಥಾನದಲ್ಲಿದ್ದಾರೆ.

    ಇದನ್ನೂ ಓದಿ: ರೋ’ಹಿಟ್’ ಶರ್ಮಾ – ‘ವಿರಾಟ’ ಶತಕ ದರ್ಶನ – ಹಲವು ದಾಖಲೆಗಳ ಸೃಷ್ಟಿ!

  • ಫಿಫಾ ವಿಶ್ವಕಪ್-ಭಾರತ ತಂಡಕ್ಕೆ ಶುಭ ಕೋರಿದ ಪ್ರಧಾನಿ ಮೋದಿ ಮತ್ತು ಸಚಿನ್

    ಫಿಫಾ ವಿಶ್ವಕಪ್-ಭಾರತ ತಂಡಕ್ಕೆ ಶುಭ ಕೋರಿದ ಪ್ರಧಾನಿ ಮೋದಿ ಮತ್ತು ಸಚಿನ್

    ನವದೆಹಲಿ: ಫುಟ್‍ಬಾಲ್ ಯು- 17 ವಿಶ್ವಕಪ್ ಪಂದ್ಯಗಳಲ್ಲಿ ಭಾಗವಹಿಸುವ ಭಾರತದ ತಂಡದ ಆಟಗಾರರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಭಾರತ ತಂಡಕ್ಕೆ ಶುಭಕೋರಿ ಟ್ವೀಟ್ ಮಾಡಿದ್ದಾರೆ.

    ಭಾರತವು ಈ ಬಾರಿಯ ಫಿಫಾ ಯು-17 ಫುಟ್‍ಬಾಲ್ ವಿಶ್ವಕಪ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಿದ್ದು. ತವರು ನೆಲದಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತದ ತಂಡ ವಿಶ್ವಕಪ್ ಪಂದ್ಯಗಳಲ್ಲಿ ಭಾಗವಹಿಸುತ್ತಿದೆ.

    ವಿಶ್ವಕಪ್‍ನಲ್ಲಿ ಭಾಗವಹಿಸುತ್ತಿರುವ ಆಟಗಾರರಿಗೆ ಶುಭಕೋರುವ ವಿಡಿಯೋ ಒಂದನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

    ಭಾರತದ ಕ್ರಿಕೆಟ್ ತಂಡದಲ್ಲಿದ್ದ ಸಂದರ್ಭದಲ್ಲಿ ಯುವ ಆಟಗಾರರಿಗೆ ಸ್ಫೂರ್ತಿ ತುಂಬುತ್ತಿದ್ದ ಸಚಿನ್ ನಿವೃತ್ತಿಯ ನಂತರವು ಯುವ ಆಟಗಾರರಿಗೆ ಬೆಂಬಲವಾಗಿ ನಿಂತಿದ್ದಾರೆ. ಶುಕ್ರವಾರದಿಂದ ಭಾರತದಲ್ಲಿ ಫಿಫಾ ವಿಶ್ವಕಪ್ ಪಂದ್ಯಗಳು ನಡೆಯಲಿದ್ದು, ಈ ಸಮಯ ಎಲ್ಲರಿಗೂ ಮುಖ್ಯವಾದದ್ದು. ಟೂರ್ನಿಗೆ ಅಭಿಮಾನಿಗಳಿಂದ ಲಭಿಸಿರುವ ಬೆಂಬಲ ಅಭೂತ ಪೂರ್ವವಾಗಿದ್ದು, ಹೆಚ್ಚು ಸಂತೋಷ ಉಂಟಾಗಿದೆ. ಆದರೆ ಭಾರತದ ತಂಡದ ಆಟಗಾರರಿಗೆ ಇದು ಉತ್ತಮ ಅವಕಾಶವಾಗಿದ್ದು, ಆಟಗಾರರು ಮೈದಾನದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ ಎಂದು ತಿಳಿಸಿದ್ದಾರೆ.

    ಭಾರತ ತಂಡದ ಆಟಗಾರರ ಮೇಲೆ ನನಗೆ ಸಂಪೂರ್ಣ ಭರವಸೆ ಇದ್ದು, ಉತ್ತಮ ಪ್ರದರ್ಶನವನ್ನು ನೀಡುತ್ತಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

    ವಿಶ್ವಕಪ್ ಟೂರ್ನಿಯಲ್ಲಿ ಭಾರತವು ತನ್ನ ಮೊದಲ ಪಂದ್ಯವನ್ನು ಶುಕ್ರವಾರ ನವದೆಹಲಿಯ ನೆಹರೂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುತ್ತಿದೆ.

  • ಶತಕ ಸಿಡಿಸಿ 2017ರ ಏಕದಿನದಲ್ಲಿ ವಿಶೇಷ ಸಾಧನೆಗೈದ ರನ್ ಮೆಷಿನ್!

    ಶತಕ ಸಿಡಿಸಿ 2017ರ ಏಕದಿನದಲ್ಲಿ ವಿಶೇಷ ಸಾಧನೆಗೈದ ರನ್ ಮೆಷಿನ್!

    ಕೊಲಂಬೋ: ಟೀಂ ಇಂಡಿಯಾ ನಾಯಕ,ರನ್ ಮೆಷಿನ್ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸುವ ಜೊತೆಗೆ ವಿಶೇಷ ಸಾಧನೆ ನಿರ್ಮಿಸಿದ್ದಾರೆ.

    ಈ ಪಂದ್ಯದಲ್ಲಿ 131 ರನ್ ಹೊಡೆಯುವ ಮೂಲಕ ಕೊಹ್ಲಿ 2017ರ ಅವಧಿಯಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.

    ದಕ್ಷಿಣ ಆಫ್ರಿಕಾ ಫ್ಲಾಡು ಪ್ಲೆಸಿಸ್ 16 ಪಂದ್ಯಗಳಿಂದ 58.14 ಸರಾಸರಿಯಲ್ಲಿ ಒಟ್ಟು 814 ರನ್ ಹೊಡೆದಿದ್ದರು. ಈಗ ಕೊಹ್ಲಿ 17 ಪಂದ್ಯಗಳಿಂದ ಒಟ್ಟು 907 ರನ್ ಗಳಿಸುವ ಮೂಲಕ ಅತಿ ಹೆಚ್ಚು ಹೊಡೆದ ಆಟಗಾರ ಎನ್ನುವ ಪಟ್ಟವನ್ನು ತನ್ನದಾಗಿಸಿದ್ದಾರೆ. ಕೊಹ್ಲಿ 102.52 ಸ್ಟ್ರೈಕ್ ರೇಟ್, 85.20 ಸರಾಸರಿಯಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.

    ಇಂಗ್ಲೆಂಡಿನ ಜೋ ರೂಟ್ 14 ಪಂದ್ಯಗಳಿಂದ 71.36 ಸರಾಸರಿಯಲ್ಲಿ 785 ರನ್ ಹೊಡೆಯುವ ಮೂಲಕ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

    ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಏರಲು ಕೊಹ್ಲಿಗೆ ಇನ್ನು ಒಂದು ಶತಕ ಬೇಕಿದೆ. 193 ಪಂದ್ಯಗಳಿಂದ ಕೊಹ್ಲಿ 29 ಶತಕ ಹೊಡೆದಿದ್ದರೆ,  ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಟಿಂಗ್ 375 ಪಂದ್ಯಗಳಿಂದ 30 ಶತಕ ಹೊಡೆದಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 463 ಪಂದ್ಯಗಳಿಂದ 49 ಶತಕ ಸಿಡಿಸುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    38 ಎಸೆತದಲ್ಲಿ 50 ರನ್ ಹೊಡೆದ ಕೊಹ್ಲಿ 76 ಎಸೆತದಲ್ಲಿ ಶತಕ ಹೊಡೆದರು. ಅಂತಿಮವಾಗಿ 131 ರನ್(96 ಎಸೆತ, 17 ಬೌಂಡರಿ, 2 ಸಿಕ್ಸರ್) ಚಚ್ಚುವ ಮೂಲಕ ಮಲಿಂಗಾ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟಾದರು. ಅತಿ ಹೆಚ್ಚು ರನ್ ಹೊಡೆದ ಸಾಧನೆಯ ಜೊತೆಗೆ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದಾರೆ.

    ಇದನ್ನೂ ಓದಿ: ನಾಟೌಟಲ್ಲೂ ಧೋನಿ ವಿಶ್ವ ದಾಖಲೆ! 

    ಇದನ್ನೂ ಓದಿ: ಅಮ್ಮಾ.. ಪ್ರೀತಿಯಿಂದ ಹೇಳಿಕೊಡಿ- ಪುಟಾಣಿ ವಿಡಿಯೋ ನೋಡಿ ಕೊಹ್ಲಿ, ಶಿಖರ್, ರಾಬಿನ್ ಉತ್ತಪ್ಪ ಹೀಗಂದ್ರು

  • ಸಚಿನ್ ವಿಶೇಷ ದಾಖಲೆ ಮುರಿದ ವಿರಾಟ್ ಕೊಹ್ಲಿ!

    ಸಚಿನ್ ವಿಶೇಷ ದಾಖಲೆ ಮುರಿದ ವಿರಾಟ್ ಕೊಹ್ಲಿ!

    ಕಿಂಗ್‍ಸ್ಟನ್: ವಿಂಡೀಸ್ ವಿರುದ್ಧದ ಕೊನೆಯ ಏಕದಿನದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಶತಕ ಹೊಡೆಯುವ ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದ  ದಾಖಲೆಯನ್ನು ಮುರಿದಿದ್ದಾರೆ.

    ವಿರಾಟ್ ಕೊಹ್ಲಿ ಸರಣಿಯ ಐದನೇ ಪಂದ್ಯದಲ್ಲಿ ಏಕದಿನದಲ್ಲಿ 28ನೇ ಶತಕವನ್ನು ಹೊಡೆದರು. 108 ಎಸೆತದಲ್ಲಿ ಶತಕ ಹೊಡೆದ ಕೊಹ್ಲಿ ಅಂತಿಮವಾಗಿ 111ರನ್(115 ಎಸೆತ, 12 ಬೌಂಡರಿ, 2 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದರು.

    ಇಲ್ಲಿಯವರೆಗೆ 17 ಶತಕ ಹೊಡೆಯುವ ಮೂಲಕ ಚೇಸಿಂಗ್‍ನಲ್ಲಿ ಅತಿ ಹೆಚ್ಚು ಶತಕ ಹೊಡೆದ ದಾಖಲೆ ಸಚಿನ್ ಹೆಸರಿನಲ್ಲಿತ್ತು. ಕೊಹ್ಲಿ ಈಗ ಕೊಹ್ಲಿ ಚೇಸಿಂಗ್ ನಲ್ಲಿ 18ನೇ ಶತಕ ಹೊಡೆಯುವ ಮೂಲಕ ಸಚಿನ್ ದಾಖಲೆಯನ್ನು ಮುರಿದಿದ್ದಾರೆ.

    ಸಚಿನ್ ತೆಂಡೂಲ್ಕರ್ 232 ಇನ್ನಿಂಗ್ಸ್ ಆಡಿ 17 ಶತಕ ಹೊಡೆದಿದ್ದರೆ, ಕೊಹ್ಲಿ ಕೇವಲ 102 ಇನ್ನಿಂಗ್ಸ್ ಆಡಿ 18 ಶತಕ ಹೊಡೆದಿದ್ದಾರೆ. ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ 116 ಇನ್ನಿಂಗ್ಸ್ ಗಳಿಂದ 11 ಶತಕ ಹೊಡೆಯುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ಅತಿ ಹೆಚ್ಚು ಶತಕ ಹೊಡೆದ ಆಟಗಾರರು:
    ಏಕದಿನದಲ್ಲಿ ಸಚಿನ್ 49 ಶತಕ ಹೊಡೆಯುವ ಮೂಲಕ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ರಿಕ್ಕಿ ಪಾಟಿಂಗ್ 30 ಶತಕ ಹೊಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ 25 ಶತಕ, ಶ್ರೀಲಂಕಾದ ಕುಮಾರ ಸಂಗಕ್ಕಾರ 25 ಶತಕ, ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ 24 ಶತಕ ಹೊಡೆದಿದ್ದಾರೆ.

    ಭಾರತಕ್ಕೆ ಸರಣಿ ಜಯ: ಕೊನೆಯ ಏಕದಿನ ಪಂದ್ಯವನ್ನು ಭಾರತ 8 ವಿಕೆಟ್ ಗಳಿಂದ ಗೆದ್ದು ಕೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ವಿಂಡೀಸ್ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಕೊಹ್ಲಿ ಶತಕ, ದಿನೇಶ್ ಕಾರ್ತಿಕ್ ಔಟಾಗದೇ 50 ರನ್, ರೆಹಾನೆ 39 ರನ್ ಹೊಡೆಯುವ 36.5 ಓವರ್‍ಗಳಲ್ಲಿ 206 ರನ್ ಗಳಿಸಿ ಸರಣಿಯನ್ನು 3-1 ಅಂತರದಿಂದ ಗೆದ್ದು ಕೊಂಡಿತು.

    ನಾಯಕ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿದರೆ, ಅಜಿಂಕ್ಯಾ ರೆಹಾನೆಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತು.