Tag: sachin tendulkar

  • ಧೋನಿಯಲ್ಲಿನ ನಾಯಕತ್ವ ಗುಣವನ್ನು ಗುರುತಿಸಿದ್ದು ಹೇಗೆ ಎಂದು ಸಚಿನ್ ವಿವರಿಸಿದ್ರು

    ಧೋನಿಯಲ್ಲಿನ ನಾಯಕತ್ವ ಗುಣವನ್ನು ಗುರುತಿಸಿದ್ದು ಹೇಗೆ ಎಂದು ಸಚಿನ್ ವಿವರಿಸಿದ್ರು

    ಮುಂಬೈ: ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಧೋನಿಯಲ್ಲಿರುವ ನಾಯಕತ್ವ ಗುಣವನ್ನು ಗುರುತಿಸಿದ್ದಾಗಿ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

    ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಸಚಿನ್, ಪಂದ್ಯದ ವೇಳೆ ತಾನು ಸ್ಲೀಪ್ ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಧೋನಿ ಜೊತೆ ಹೆಚ್ಚು ಮಾತನಾಡುತ್ತಿದ್ದೆ. ಅಲ್ಲದೇ ಫೀಲ್ಡಿಂಗ್ ಆಯ್ಕೆ ಮಾಡುವ, ಬೌಲರ್ ಸಲಹೆ ನೀಡುವ ಕುರಿತು ನನ್ನ ಅಭಿಪ್ರಾಯ ತಿಳಿಸಿ ಪ್ರತಿಕ್ರಿಯೆ ಪಡೆಯುತ್ತಿದೆ. ಈ ವೇಳೆ ಧೋನಿ ಅವರ ನಾಯಕತ್ವದ ಗುಣಗಳನ್ನು ಗುರುತಿಸಿದೆ ಎಂದು ಹೇಳಿದ್ದಾರೆ.

    ಇದೇ ವೇಳೆ ತಮ್ಮ ಕೊನೆಯ ಟೆಸ್ಟ್ ಪಂದ್ಯದ ಬಗ್ಗೆ ನೆನೆಸಿಕೊಂಡ ಅವರು, ಅಂದು ಧೋನಿ ಪಂದ್ಯದ ಮಧ್ಯೆ ತನ್ನನ್ನು ತಂಡದ ಜೊತೆ ಕೆಲ ಸಮಯ ದೂರವಿರುವಂತೆ ಕೇಳಿದರು. ತಮ್ಮ ವಿದಾಯಕ್ಕಾಗಿ ಧೋನಿ ಪ್ಲಾನ್ ಮಾಡುತ್ತಿದ್ದರು. ಈ ವೇಳೆ ತಮಗೇ ನಿವೃತ್ತಿಯ ನೆನಪಾಯಿತು ಎಂದು ತಮ್ಮ ತಾಯಿಯನ್ನು ನೆನೆದರು. ಅಲ್ಲದೇ ಆ ವೇಳೆ ತಾವು ತುಂಬಾ ಭಾವುಕರಾಗಿದ್ದಾಗಿ ತಿಳಿಸಿದರು. ಅಲ್ಲದೇ ತಮ್ಮ ಪತ್ನಿ ಅಂಜಲಿಯೂ ಎಂದು ಕ್ರೀಡಾಂಗಣಕ್ಕೆ ಆಗಮಿಸಿ ತಮ್ಮ ಬ್ಯಾಟಿಂಗ್ ನೋಡಿಲ್ಲ ಎಂದು ತಿಳಿಸಿದರು.

    ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಟೀಂ ಇಂಡಿಯಾ 2007 ರ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿತ್ತು. ಆದ್ರೆ ಟೂರ್ನಿಯ ಬಳಿಕ ರಾಹುಲ್ ದ್ರಾವಿಡ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ವೇಳೆ ಟೀಂ ಇಂಡಿಯಾ ನಾಯಕತ್ವವನ್ನು ಧೋನಿ ಅವರಿಗೆ ನೀಡಲಾಯಿತು. ಧೋನಿ ನಾಯಕತ್ವ ವಹಿಸುವುದಕ್ಕೆ ಸಚಿನ್ ಅವರ ಸಲಹೆಯೂ ಪ್ರಮುಖ ಪಾತ್ರ ವಹಿಸಿತ್ತು.

    ಸಚಿನ್ ಅವರ ವೃತ್ತಿ ಬದುಕಿನಲ್ಲಿ ಒಮ್ಮೆ ಮಾತ್ರ ಅವರ ಪತ್ನಿ ಅಂಜಲಿ ಅವರು ಕ್ರೀಡಾಂಗಣಕ್ಕೆ ಬಂದು ಪಂದ್ಯ ವೀಕ್ಷಿಸಿದರು. ಟೀಂ ಇಂಡಿಯಾ 2003-04 ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಈ ವೇಳೆ ಮೆಲ್ಬರ್ನ್ ನಲ್ಲಿ ನಡೆದ ಪಂದ್ಯಕ್ಕೆ ಸಚಿನ್ ಅವರ ಪತ್ನಿ ಅಂಜಲಿ ಆಗಮಿಸಿದ್ದರು. ಆದ್ರೆ ಈ ಪಂದ್ಯದಲ್ಲಿ ಸಚಿನ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು. ಈ ಪಂದ್ಯದ ಬಳಿಕ ಅಂಜಲಿ ಅವರು ಸಚಿನ್ ಅವರ ಕೊನೆಯ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದರು.

  • ಭಾರತವನ್ನು ಪ್ರತಿನಿಧಿಸುವ ಮೊದಲೇ ಪಾಕ್ ಪರ ಆಡಿದ್ದ ಸಚಿನ್!

    ಭಾರತವನ್ನು ಪ್ರತಿನಿಧಿಸುವ ಮೊದಲೇ ಪಾಕ್ ಪರ ಆಡಿದ್ದ ಸಚಿನ್!

    ಮುಂಬೈ: ನಿನ್ನೆಯಷ್ಟೇ 45ನೇ ವಸಂತಕ್ಕೆ ಕಾಲಿಟ್ಟ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ವಿಶ್ವಾದ್ಯಂತ ಹಲವು ಅಭಿಮಾನಿಗಳು ಶುಭಕೋರಿದ್ದರು. ಇದೇ ವೇಳೆ ತಮ್ಮ ಕ್ರಿಕೆಟ್ ಜೀವನದ ಕುರಿತು ಸಚಿನ್ ಆಸಕ್ತಿದಾಯಕ ಅಂಶವೊಂದನ್ನು ತಿಳಿಸಿದ್ದಾರೆ.

    ಅಂದಹಾಗೇ 1989 ರಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸಚಿನ್ ಆಡಿದ್ದರು. ಆದರೆ ಈ ಪಂದ್ಯಕ್ಕೂ ಮೊದಲೇ ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ತಂಡದ ಪರವಾಗಿ ಆಡಿದ್ದರು. ಸಚಿನ್ ತಮ್ಮ ಆತ್ಮಕಥೆ `ಪ್ಲೇಯಿಂಗ್ ವಿಥ್ ಮೈ ವೇ’ ಪುಸ್ತಕದಲ್ಲಿ ಪಾಕ್ ಪರ ಆಡಿದ ಪಂದ್ಯವನ್ನು ಮೆಲುಕು ಹಾಕಿದ್ದಾರೆ.

    ಯಾವ ಪಂದ್ಯ?
    1987 ಜನವರಿ 20 ರಂದು ಪಾಕಿಸ್ತಾನ ಹಾಗೂ ಭಾರತ ನಡುವೆ ನಡೆದ ಪ್ರದರ್ಶನ ಪಂದ್ಯವೊಂದರಲ್ಲಿ ಪಾಕ್ ಆಟಗಾರ ಇಮ್ರಾನ್ ಖಾನ್ ಅವರ ಬದಲಿ ಫೀಲ್ಡರ್ ಆಗಿ ಸಚಿನ್ ರನ್ನು ಪಾಕ್ ಪರ ಮೈದಾನಕ್ಕೆ ಕಳುಹಿಸಿಕೊಡಲಾಗಿತ್ತು. ಈ ಪಂದ್ಯದಲ್ಲಿ ಅವರು ಲಾಂಗ್ ಆನ್ ನಲ್ಲಿ 25 ನಿಮಿಷಕ್ಕೂ ಹೆಚ್ಚು ಸಮಯ ಫೀಲ್ಡಿಂಗ್ ನಡೆಸಿ ಕ್ಯಾಚ್ ಸಹ ಪಡೆದಿದ್ದರು. ಈ ವೇಳೆಗೆ 16 ವರ್ಷದ ಸಚಿನ್ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರಲಿಲ್ಲ.

    ಈ ಘಟನೆಗಳನ್ನು ತಮ್ಮ ಪುಸ್ತಕದಲ್ಲಿ ಮೆಲುಕು ಹಾಕಿರುವ ಸಚಿನ್ ಇಮ್ರಾನ್ ಖಾನ್ ಅವರಿಗೆ ಈ ಆಟದ ವಿಚಾರ ನೆನಪನ್ನು ಹೊಂದಿದ್ದಾರೆಯೇ ಎಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ 1996 ರ ಆಕ್ಟೋಬರ್ 4 ರಂದು ಪಾಕ್ ಆಟಗಾರ ಶಹೀದ್ ಆಫ್ರಿದಿ ಸಚಿನ್ ಬ್ಯಾಟ್ ಪಡೆದು ಕೇವಲ 37 ಎಸೆಗಳಲ್ಲಿ ಶತಕ ಸಿಡಿಸಿದ್ದರು. ಇದನ್ನೂ ಓದಿ: ಹುಟ್ಟುಹಬ್ಬದ ದಿನದಂದೇ ಆಸ್ಟ್ರೇಲಿಯಾ ಕ್ರಿಕೆಟ್‍ನಿಂದ ಸಚಿನ್‍ಗೆ ಅವಮಾನ!

  • ಹುಟ್ಟುಹಬ್ಬದ ದಿನದಂದೇ ಆಸ್ಟ್ರೇಲಿಯಾ ಕ್ರಿಕೆಟ್‍ನಿಂದ ಸಚಿನ್‍ಗೆ ಅವಮಾನ!

    ಹುಟ್ಟುಹಬ್ಬದ ದಿನದಂದೇ ಆಸ್ಟ್ರೇಲಿಯಾ ಕ್ರಿಕೆಟ್‍ನಿಂದ ಸಚಿನ್‍ಗೆ ಅವಮಾನ!

    ಬೆಂಗಳೂರು: ಇಂದು 45ನೇ ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಅವಮಾನ ಮಾಡಿದೆ ಎಂದು ಆರೋಪಿಸಿ ಸಚಿನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡುತ್ತಿದ್ದಾರೆ.

    ಏಪ್ರಿಲ್ 24 ಸಚಿನ್ ಮತ್ತು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಡೇಮಿಯನ್ ಫ್ಲೆಮಿಂಗ್ ಹುಟ್ಟುಹಬ್ಬ. ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ 2000 ಇಸ್ವಿಯಲ್ಲಿ ಪರ್ಥ್ ನಲ್ಲಿ ನಡೆದ ಏಕದಿನ ಪಂದ್ಯದ ವೇಳೆ ಫ್ಲೆಮಿಂಗ್ ಬೌಲಿಂಗ್ ನಲ್ಲಿ ಸಚಿನ್ ಬೌಲ್ಡ್ ಆಗುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದೆ. ಅಷ್ಟೇ ಅಲ್ಲದೇ ಈ ಟ್ವೀಟ್ ನಲ್ಲಿ ಫ್ಲೆಮಿಂಗ್ ಅವರಿಗೆ ಮಾತ್ರ ಹುಟ್ಟುಹಬ್ಬದ ಶುಭಾಶಯ ಎಂದು ಬರೆದುಕೊಂಡಿದೆ.

    ಈ ಟ್ವೀಟ್ ನೋಡಿದ ಭಾರತದ ಅಭಿಮಾನಿಗಳು ತರಾಟೆಗೆ ತೆಗೆದುಕೊಳ್ಳುತ್ತಿದ್ದು. ಆಸೀಸ್ ಆಟಗಾರರು ಕ್ರಿಕೆಟ್ ಪಂದ್ಯಗಳಿಂದ ಬ್ಯಾನ್ ಆದರೂ ಆಸ್ಟ್ರೇಲಿಯಾ ಇನ್ನೂ ಪಾಠ ಕಲಿತ್ತಿಲ್ಲ ಎನ್ನುವುದಕ್ಕೆ ಈ ವಿಡಿಯೋ ಟ್ವೀಟ್ ಸಾಕ್ಷಿ ಎಂದು ಬರೆದು ತಿರುಗೇಟು ನೀಡಿದ್ದಾರೆ.

    ಡೇಮಿಯನ್ ಫ್ಲೆಮಿಂಗ್ ಹುಟ್ಟುಹಬ್ಬ ಶುಭಾಶಯವನ್ನು ಹೇಳಲು ಸಚಿನ್ ಬೌಲ್ಡ್ ಆಗುತ್ತಿರುವ ವಿಡಿಯೋ ಬಳಸಿದ್ದು ಸರಿಯಲ್ಲ. ಬೇರೆ ಬ್ಯಾಟ್ಸ್ ಮನ್ ಬೌಲ್ಡ್ ಅಗುತ್ತಿರುವ ವಿಡಿಯೋ ಬಳಸಬಹುದಿತ್ತು. ಸಚಿನ್ ಹುಟ್ಟುಹಬ್ಬದ ದಿನ ಎಂದು ಗೊತ್ತಿದ್ದರೂ ಈ ವಿಡಿಯೋ ಪೋಸ್ಟ್ ಮಾಡುವ ಮೂಲಕ ಅವಮಾನ ಮಾಡಿದ್ದಿರಿ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.

    ಈ ವಿಡಿಯೋಗೆ ತಿರುಗೇಟು ಎನ್ನುವಂತೆ ಇನ್ನೊಬ್ಬರು, ಫ್ಲೆಮಿಂಗ್ ಬೌಲಿಂಗ್ ನಲ್ಲಿ ಸಚಿನ್ ಬೌಂಡರಿ ಬಾರಿಸುತ್ತಿರುವ ವಿಡಿಯೋವನ್ನು ಹಾಕಿ, ಸಚಿನ್ ಅವರಿಂದ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಫ್ಲೆಮಿಂಗ್ ಅವರಿಗೆ ಭರ್ಜರಿ ಗಿಫ್ಟ್ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಏಕದಿನ ಮತ್ತು ಟೆಸ್ಟ್ ನಲ್ಲಿ ಒಟ್ಟು 7 ಬಾರಿ ಸಚಿನ್ ರನ್ನು ಫ್ಲೆಮಿಂಗ್ ಔಟ್ ಮಾಡಿದ್ದಾರೆ. ಬ್ರೇಟ್ ಲೀ 14, ಮೆಗ್ರಾತ್ 13, ಗಿಲ್ಲೆಸ್ಪಿ 8 ಬಾರಿ ಸಚಿನ್ ತೆಂಡೂಲ್ಕರ್ ಅವರನ್ನು ಔಟ್ ಮಾಡಿದ್ದಾರೆ.

    48ನೇ ಹುಟ್ಟುಹಬ್ಬವನ್ನು ಫ್ಲೆಮಿಂಗ್ ಭಾರತದಲ್ಲಿ ಆಚರಿಸಿಕೊಂಡಿದ್ದು, ಸದ್ಯ ಐಪಿಎಲ್ ವೀಕ್ಷಣೆ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    20 ಟೆಸ್ಟ್ ಪಂದ್ಯ ಆಡಿರುವ ಫ್ಲೆಮಿಂಗ್ 75 ವಿಕೆಟ್ ಪಡೆದಿದ್ದು, 88 ಏಕದಿನ ಪಂದ್ಯವಾಡಿ 134 ವಿಕೆಟ್ ಪಡೆದಿದ್ದಾರೆ. 1994ರಲ್ಲಿ ಪಾಕ್ ವಿರುದ್ಧ ಟೆಸ್ಟ್ ಕ್ರಿಕೆಟಿಗೆ ಎಂಟ್ರಿಕೊಟ್ಟಿದ್ದ ಫ್ಲೆಮಿಂಗ್ 2001ರಲ್ಲಿ ಫೆಬ್ರವರಿಯಲ್ಲಿ ಭಾರತದ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. 1994ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯ ಆಡಿದ್ದ ಫ್ಲೆಮಿಂಗ್ 2001ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದರು.

    A Classic cover drive as Birthday gift from one Birthday boy @sachin_rt to another Birthday boy @bowlologist! ???????? pic.twitter.com/TxF1v11UIr

    — शशांक (@iShhhshank) April 24, 2018

  • ಮುಂಬೈ ಬೀದಿಯಲ್ಲಿ ಸಚಿನ್ ಗಲ್ಲಿ ಕ್ರಿಕೆಟ್ – ವಿಡಿಯೋ ವೈರಲ್

    ಮುಂಬೈ ಬೀದಿಯಲ್ಲಿ ಸಚಿನ್ ಗಲ್ಲಿ ಕ್ರಿಕೆಟ್ – ವಿಡಿಯೋ ವೈರಲ್

    ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಚಿನ್ ತೆಂಡೂಲ್ಕರ್ ರಾತ್ರಿ ಕಾರಿನಲ್ಲಿ ಬಾಂದ್ರಾ ಬಳಿ ಹೋಗುತ್ತಿದ್ದಾಗ ಮೆಟ್ರೋ ಕೆಲಸಗಾರರು ಕ್ರಿಕೆಟ್ ಆಡುತ್ತಿರುವುದನ್ನು ಗಮನಿಸಿದ್ದಾರೆ. ಈ ದೃಶ್ಯವನ್ನು ನೋಡಿದ ಸಚಿನ್ ಕಾರು ನಿಲ್ಲಿಸಿ ಅವರ ಜೊತೆ ಆಟವಾಡಿದ್ದಾರೆ.

    ಆರಂಭದಲ್ಲಿ ಸಚಿನ್ ಆಟಗಾರರ ಕೈ ಕುಲುಕಿ ನಂತರ ಬ್ಯಾಟ್ ಮಾಡಿದ್ದಾರೆ. ಬಳಿಕ ಅಲ್ಲಿದ್ದ ಆಟಗಾರರು ಸಚಿನ್ ಜೊತೆ ಸೆಲ್ಫಿ ಫೋಟೋ ಕ್ಲಿಕ್ಕಿಸಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ನಲ್ಲಿ ವೈರಲ್ ಆಗಿದೆ.

     

     

    https://www.youtube.com/watch?v=hHJWX3cjtdo

  • 6 ವರ್ಷಗಳ ಸಂಸದ ವೇತನವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ರು ಸಚಿನ್

    6 ವರ್ಷಗಳ ಸಂಸದ ವೇತನವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ರು ಸಚಿನ್

    ನವದೆಹಲಿ: ಇತ್ತೀಚೆಗೆ ರಾಜ್ಯಸಭಾ ಸದಸ್ಯ ಅವಧಿ ಮುಗಿಸಿದ ಸಚಿನ್ ತೆಂಡೂಲ್ಕರ್ ತಮ್ಮ ಆರು ವರ್ಷಗಳ ಅವಧಿಯಲ್ಲಿ ಸರ್ಕಾರ ನೀಡಿದ್ದ ಸಂಪೂರ್ಣ ಸಂಬಳ ಹಾಗೂ ಭತ್ಯೆಯನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

    ಸಚಿನ್ ತಮ್ಮ ಅವಧಿಯಲ್ಲಿ ಸುಮಾರು 90 ಲಕ್ಷ ರೂ. ಹಣವನ್ನು ವೇತನ ಹಾಗೂ ಭತ್ಯೆ ರೂಪದಲ್ಲಿ ಪಡೆದಿದ್ದರು. ಸಚಿನ್ ಅವರ ನಿರ್ಧಾರದ ಕುರಿತು ಪ್ರಧಾನಿಗಳ ಕಾರ್ಯಾಲಯ ಸಚಿನ್ ಅವರಿಗೆ ಪತ್ರವನ್ನು ಬರೆಯುವ ಮೂಲಕ ಗೌರವ ಸೂಚಿಸಿದೆ. ತಾವು ನೀಡಿದ ಹಣವನ್ನು ಕಷ್ಟದಲ್ಲಿ ಇರುವವ ಪ್ರಜೆಗಳಿಗೆ ವಿನಿಯೋಗಿಸುವುದಾಗಿ ತಿಳಿಸಿದೆ.

    ಸಚಿನ್ ತಮ್ಮ ಸಂಸದರ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿಯನ್ನು ಬಳಕೆ ಮಾಡಿಕೊಂಡು ದೇಶದ್ಯಾಂತ 185 ಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಪ್ರಮುಖವಾಗಿ ತಮ್ಮ ಸಂಸದ ನಿಧಿಯಲ್ಲಿ ನೀಡಲಾಗಿದ್ದ 30 ಕೋಟಿ ರೂ.ಗಳಲ್ಲಿ 7.5 ಕೋಟಿ ರೂ. ಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಮೂಲ ಸೌಲಭ್ಯಗಳನ್ನು ನೀಡಲು ಹೆಚ್ಚು ಹಣವನ್ನು ಬಳಕೆ ಮಾಡಿದ್ದಾರೆ.

    ಸಂಸದರ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ 2 ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದಾರೆ. ಆಂಧ್ರ ಪ್ರದೇಶದ ಪುಟ್ಟಮ್ ರಾಜು ಕಂಡ್ರಿಗ ಹಾಗೂ ಮಹಾರಾಷ್ಟ್ರದ ಡೊಂಜ ಗ್ರಾಮಗಳನ್ನು ಸಚಿನ್ ದತ್ತು ಪಡೆದು ಅಭಿವೃದ್ಧಿ ಪಡಿಸಿದ್ದಾರೆ. ಕಳೆದ 6 ವರ್ಷಗಳ ಅವಧಿಯಲ್ಲಿ ಸಂಸತ್ತಿನ ಹಾಜರಾತಿ ಕುರಿತು ಸಚಿನ್ ಹಾಗೂ ನಟಿ ರೇಖಾ ಹೆಚ್ಚು ಟೀಕೆಗೆ ಗುರಿಯಾಗಿದ್ದರು.

  • ದಿನೇಶ್ ಕಾರ್ತಿಕ್ ಗೆ ಕ್ಷಮೆ ಕೋರಿದ ಅಮಿತಾಬ್ ಬಚ್ಚನ್!

    ದಿನೇಶ್ ಕಾರ್ತಿಕ್ ಗೆ ಕ್ಷಮೆ ಕೋರಿದ ಅಮಿತಾಬ್ ಬಚ್ಚನ್!

    ಮುಂಬೈ: ನಿದಾಸ್ ತ್ರಿಕೋನ ಟಿ20 ಸರಣಿಯ ಬಾಂಗ್ಲಾ ವಿರುದ್ಧದ ಫೈನಲ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಭರ್ಜರಿ ಪ್ರದರ್ಶನಕ್ಕೆ ಹಲವು ಸ್ಟಾರ್ ಗಳು ಶುಭಕೋರಿ ಟ್ವೀಟ್ ಮಾಡಿದ್ದಾರೆ.

    ದಿನೇಶ್ ಅವರ ಆಟವನ್ನ ಮೆಚ್ಚಿದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೂಡ ಟ್ವೀಟ್ ಮಾಡಿ ಶುಭ ಕೋರಿದ್ದರು. ಆದರೆ ಬಳಿಕ ಮತ್ತೊಂದು ಟ್ವೀಟ್ ಮಾಡಿ ದಿನೇಶ್ ಕಾರ್ತಿಕ್‍ಗೆ ಕ್ಷಮೆ ಕೋರಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅಮಿತಾಬ್ ತಮ್ಮ ಟ್ವೀಟ್ ನಲ್ಲಿ ತಪ್ಪಾಗಿ ಟೈಪ್ ಮಾಡಿದ್ದರು.

    ಮೊದಲು ಟ್ವೀಟ್ ಮಾಡಿದ್ದ ಅಮಿತಾಬ್, ಎರಡು ಓವರ್ ಗಳಲ್ಲಿ 24 ರನ್ ಗಳಿಸಬೇಕಿತ್ತು. ದಿನೇಶ್ ಕಾರ್ತಿಕ್ ಬ್ರಿಲಿಯಂಟ್ ನಾಕ್.. ಒಂದು ಎಸೆತದಲ್ಲಿ 5 ರನ್ ಗಳಿಸ ಬೇಕಾದ ವೇಳೆ ಸಿಕ್ಸ್ ಸಿಡಿಸಿದ್ದಾರೆ. ನಿಮಗೇ ಅಭಿನಂದನೆಗಳು ಎಂದು ಹೇಳಿದ್ದರು. ಈ ಟ್ವೀಟ್ ನಲ್ಲಿ 34 ರನ್ ಬದಲಾಗಿ 24 ರನ್ ಎಂದು ಬರೆದಿದ್ದರು. ತಪ್ಪು ಗೊತ್ತಾದ ಬಳಿಕ `ದಿನೇಶ್ ಕಾರ್ತಿಕ್ ಸಾರಿ’ ಎಂದು ಬರೆದು ಎರಡನೇ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಸಿಕ್ಸರ್ ಸಿಡಿಸಲು ಅಭ್ಯಾಸ ನಡೆಸುತ್ತಿದ್ದೆ: ಪಂದ್ಯಶ್ರೇಷ್ಠ ದಿನೇಶ್ ಕಾರ್ತಿಕ್

    ತಮ್ಮ ಸಣ್ಣ ತಪ್ಪಿಗೆ ದಿನೇಶ್ ಕಾರ್ತಿಕ್ ಬಳಿ ಕ್ಷಮೆ ಕೋರಿದ ಅಮಿತಾಬ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗಳು ವ್ಯಕ್ತವಾಗಿದೆ. ಇನ್ನುಳಿದಂತೆ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಬುಮ್ರಾ, ಅಶ್ವಿನ್, ಹರ್ಭಜನ್ ಸೇರಿದಂತೆ ಹಲವು ಆಟಗಾರರು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನು ಓದಿ: ದಿನೇಶ್ ಕಾರ್ತಿಕ್ ಕೊನೆಯ ಸಿಕ್ಸರ್ ನೋಡಿಲ್ಲ ಯಾಕೆ ಅನ್ನೋದನ್ನು ಹೇಳಿದ್ರು ರೋಹಿತ್

  • ಸಚಿನ್ ದಾಖಲೆ ಮುರಿದ ಕನ್ನಡಿಗ ಮಯಂಕ್ ಅಗರ್ ವಾಲ್

    ಸಚಿನ್ ದಾಖಲೆ ಮುರಿದ ಕನ್ನಡಿಗ ಮಯಂಕ್ ಅಗರ್ ವಾಲ್

    ನವದೆಹಲಿ: ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಕನ್ನಡಿಗ ಮಯಂಕ್ ಅಗರ್ ವಾಲ್ ಬ್ಯಾಟಿಂಗ್ ದಿಗ್ಗಜ ಸಚಿನ್ ದಾಖಲೆ ಮುರಿದಿದ್ದಾರೆ.

    ಸೌರಾಷ್ಟ್ರ ವಿರುದ್ಧದ ಫೈನಲ್ ನಲ್ಲಿ 90 ರನ್ ಹೊಡೆಯುವ ಮೂಲಕ ಈ ಟೂರ್ನಿಯಲ್ಲಿ ಒಟ್ಟು 723 ರನ್ ಗಳಿಸಿದ್ದಾರೆ. ಈ ಮೂಲಕ ದೊಡ್ಡ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಇಲ್ಲಿಯವರೆಗೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆಂಬ ಪಟ್ಟ ಸಚಿನ್ ತೆಂಡೂಲ್ಕರ್ ಗೆ ಸಿಕ್ಕಿತ್ತು. 2003 ರ ವಿಶ್ವಕಪ್‍ನಲ್ಲಿ ಒಟ್ಟು 623 ರನ್ ಹೊಡೆಯುವ ಮೂಲಕ ಈ ವಿಶಿಷ್ಟ ದಾಖಲೆಯನ್ನು ಸಚಿನ್ ಭಾರತದ ಪರ ಬರೆದಿದ್ದರು.

    ಭಾರತದ ಪರ ಕ್ರಿಕೆಟ್ ನ ಮೂರು ಮಾದರಿಗಳಲ್ಲಿ (ಏಕದಿನ, ರಣಜಿ, ಟಿ20) ಈ ಬಾರಿ ಮಯಂಕ್ 2,218 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ಸೇರಿದೆ. ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ 109, 84, 28, 102, 89, 140, 81, 140, 81, ಮತ್ತು ಫೈನಲ್ ಪಂದ್ಯದಲ್ಲಿ 90 ರನ್ ಗಳಿಸಿ 723 ರನ್ ಗಳಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿದ ಆಟಗಾರ ಎಂಬ ದಾಖಲೆ ಪಡೆದರು. ಕಳೆದ ವರ್ಷ ಈ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ 607ರನ್‍ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.

    ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಶ್ರೀಲಂಕಾ, ಬಾಂಗ್ಲಾದೇಶದ ನಡುವಿನ ತ್ರಿಕೋನ ಟಿ20 ಸರಣಿಗೆ ಭಾರತದ ಆಯ್ಕೆ ಸಮಿತಿ ಮಯಂಕ್ ಅವರನ್ನು ಆಯ್ಕೆ ಮಾಡಿರಲಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕದ ಕೋಚ್ ಶಶಿಕಾಂತ್, ಮಯಂಕ್ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಆಯ್ಕೆ ಆಗದೇ ಇದ್ದರೂ ಆತನ ಆಟದ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ ಎಂದು ಹೊಗಳಿದ್ದರು.

     

  • ರೋ`ಹಿಟ್’ ಸಿಕ್ಸರ್ ಗೆ ಸಚಿನ್ ಸಾಧನೆ ಬ್ರೇಕ್!

    ರೋ`ಹಿಟ್’ ಸಿಕ್ಸರ್ ಗೆ ಸಚಿನ್ ಸಾಧನೆ ಬ್ರೇಕ್!

    ಪೋರ್ಟ್ ಎಲಿಜಬೆತ್: ದಕ್ಷಿಣ ಆಫ್ರಿಕಾ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್ ಸಿಕ್ಸ್ ಸಾಧನೆಯನ್ನು ಸರಿಗಟ್ಟಿದ್ದಾರೆ. ಈ ಮೂಲಕ ಭಾರತ ಪರ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಅಂತರಾಷ್ಟ್ರೀಯ ಪಂದ್ಯಗಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ಸಿಕ್ಸರ್ ಸಿಡಿದ ಪಟ್ಟಿಯಲ್ಲಿ ಧೋನಿ (338) ಮೊದಲ ಸ್ಥಾನದಲ್ಲಿದ್ದಾರೆ. ನಂತರದಲ್ಲಿ ರೋಹಿತ್ ಶರ್ಮಾ (265), ಸಚಿನ್ (264), ಯುವರಾಜ್ ಸಿಂಗ್ (251), ಸೌರವ್ ಗಂಗೂಲಿ (247) 5 ಸ್ಥಾನ ಪಡೆದಿದ್ದಾರೆ.

    ಆಫ್ರಿಕಾ ಸರಣಿ ಆರಂಭಿಕ ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ವಿರೋಧಿಗಳಿಂದ `ಮೇಕ್ ಇನ್ ಇಂಡಿಯಾ’ ಎಂದು ಟೀಕೆಗೆ ಗುರಿಯಾಗಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿದರು. 107 ಎಸೆತ ಎದುರಿಸಿ ರೋಹಿತ್ 10 ಬೌಂಡರಿ, 4 ಸಿಕ್ಸರ್ ಮೂಲಕ ವೃತ್ತಿ ಜೀವನದ 17 ನೇ ಶತಕ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಶತಕ ಸಿಡಿದರು. ಈ ಮೂಲಕ ಸ್ವದೇಶದಲ್ಲಿ ಹೀರೋ, ವಿದೇಶದಲ್ಲಿ ಝೀರೋ ಎಂದು ತೆಗಳಿದ್ದವರಿಗೆ ತಿರುಗೇಟು ನೀಡಿದರು.

    ಭಾರತ ಪರ ಏಕದಿನ ಪಂದ್ಯಗಳಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಪಟ್ಟಿಯಲ್ಲಿ ಸಚಿನ್, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ ನಂತರ ಸ್ಥಾನವನ್ನು ರೋಹಿತ್ ಶರ್ಮಾ ಪಡೆದಿದ್ದಾರೆ.

    ರೋಹಿತ್ ಶತಕ ಗಳಿಸುವ ಮುನ್ನ ಹಿಂದೆ ಆಫ್ರಿಕಾ ಆಟಗಾರರು ಎರಡು ಬಾರಿ ರನ್ ಔಟ್ ಹಾಗೂ 96 ರನ್ ಗಳಿಸಿದ್ದ ವೇಳೆ ಆಫ್ರಿಕಾ ಶಮ್ಸಿ ಕ್ಯಾಚ್ ಚೆಲ್ಲಿ ಜೀವದಾನ ನೀಡಿದರು. ಪಂದ್ಯದ ಆರಂಭದಲ್ಲಿ ರನ್ ಗಳಿಸಲು ತಿಣುಕಾಡಿದ ರೋಹಿತ್ ಮೊದಲ ರನ್ ಗಳಿಸಲು 15 ಎಸೆತಗಳನ್ನು ತೆಗೆದುಕೊಂಡರು.

    ಅಂತಿಮವಾಗಿ 126 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ಮೂಲಕ 115 ರನ್ ಗಳಿಸಿ ರೋಹಿತ್ ಶರ್ಮಾ ಔಟ್ ಆದರು. ಟೀಂ ಇಂಡಿಯಾ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿತು.

  • ಕೊಹ್ಲಿ 17ರನ್ ಹೊಡೆದಿದ್ರೆ ಸಚಿನ್ ದಾಖಲೆಯೂ ಬ್ರೇಕ್ ಆಗ್ತಿತ್ತು!

    ಕೊಹ್ಲಿ 17ರನ್ ಹೊಡೆದಿದ್ರೆ ಸಚಿನ್ ದಾಖಲೆಯೂ ಬ್ರೇಕ್ ಆಗ್ತಿತ್ತು!

    ಸೆಂಚೂರಿಯನ್: ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಶತಕ ಸಿಡಿಸಿದ ಎರಡನೇ ಟೀಂ ಇಂಡಿಯಾ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಂದು ವೇಳೆ 17 ರನ್ ಗಳಿಸಿದ್ದರೆ ಭಾರತದ ಪರ ಆಫ್ರಿಕಾದಲ್ಲಿ ಅತಿ ಹೆಚ್ಚು ರನ್ ಹೊಡೆದ ನಾಯಕ ಎನ್ನುವ ದಾಖಲೆ ಕೊಹ್ಲಿ ಹೆಸರಿಗೆ ಸೇರ್ಪಡೆಯಾಗುತಿತ್ತು.

    ಮೂರನೇ ದಿನದಾಟದಲ್ಲಿ 146 ಎಸೆತವನ್ನು ಎದುರಿಸಿ ಕೊಹ್ಲಿ ಟೆಸ್ಟ್ ಕ್ರಿಕೆಟ್ ಬಾಳ್ವೆಯ 21ನೇ ಶತಕವನ್ನು ಸಿಡಿಸಿದರು. ಈ ಹಿಂದೆ 1996 ರಲ್ಲಿ ನಾಯಕರಾಗಿದ್ದ ಸಚಿನ್ ತೆಂಡೂಲ್ಕರ್ ಕೇಪ್ ಟೌನ್ ನಲ್ಲಿ ಜನವರಿಯಲ್ಲಿ ನಡೆದ ಎರಡನೇ ಟೆಸ್ಟ್ ಮೊದಲ ಇನ್ನಿಂಗ್ಸ್ ನಲ್ಲಿ 169 ರನ್ (254 ಎಸೆತ, 26 ಬೌಂಡರಿ) ಹೊಡೆದಿದ್ದರು. ಈ ಮೂಲಕ ಆಫ್ರಿಕಾ ನೆಲದಲ್ಲಿ ಶತಕ ಹೊಡೆದ ಮೊದಲ ಭಾರತೀಯ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

    ದಕ್ಷಿಣ ಆಫ್ರಿಕಾದ 335 ರನ್ ಗಳಿಗೆ ಜವಾಬು ನೀಡಲು ಆರಂಭಿಸಿದ್ದ ಭಾರತ ಮೂರನೇ ದಿನ 92.1 ಓವರ್ ಗಳಲ್ಲಿ 307 ರನ್ ಗಳಿಗೆ ಆಲೌಟ್ ಆಗಿದೆ. ವಿರಾಟ್ ಕೊಹ್ಲಿ 153 ರನ್( 217 ಎಸೆತ, 15 ಬೌಂಡರಿ) ಹೊಡೆದು ಕೊನೆಯವರಾಗಿ ಔಟಾದರು. ಆರ್.ಅಶ್ವಿನ್ 38 ರನ್, ಹಾರ್ದಿಕ್ ಪಾಂಡ್ಯ 15 ರನ್ ಹೊಡೆದು ಔಟಾದರು. ಮೊರ್ನೆ ಮಾರ್ಕೆಲ್ 4 ವಿಕೆಟ್ ಪಡೆದರೆ, ಕೇಶವ್‌ ಮಹಾರಾಜ್‌, ಫಿಲಾಂಡರ್, ಕಗಿಸೊ ರಬಾಡ, ಲುಂಗಿ ಎನ್‍ಗಿಡಿ ತಲಾ ಒಂದೊಂದು ವಿಕೆಟ್ ಪಡೆದರು.

    ಈ ಮೂಲಕ ಕೊಹ್ಲಿ ನಾಯಕನಾಗಿ ಶತಕ ಸಿಡಿಸಿದ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ. ಸ್ವದೇಶದಲ್ಲಿ 7 ಶತಕ ಸಿಡಿಸಿದ್ದರೆ, ವಿದೇಶದಕಲ್ಲಿ 7 ಶತಕ ಸಿಡಿಸಿದ್ದಾರೆ.

    ಅತಿ ಹೆಚ್ಚು ರನ್ ಹೊಡೆದ ನಾಯಕರು:
    ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ನಾಯಕರ ಪೈಕಿ ಸಚಿನ್ ತೆಂಡೂಲ್ಕರ್ 169, 2010ರಲ್ಲಿ ಧೋನಿ 90 ರನ್, 1992ರಲ್ಲಿ ಅಜರುದ್ದೀನ್ 50 ರನ್ ಹೊಡೆದಿದ್ದಾರೆ.