Tag: sachin tendulkar

  • ಒಂದೇ ಪಂದ್ಯದಲ್ಲಿ ಕೊಹ್ಲಿ 3 ವಿಶೇಷ ಸಾಧನೆ ನಿರ್ಮಾಣ!

    ಒಂದೇ ಪಂದ್ಯದಲ್ಲಿ ಕೊಹ್ಲಿ 3 ವಿಶೇಷ ಸಾಧನೆ ನಿರ್ಮಾಣ!

    ವಿಶಾಖಪಟ್ಟಣ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಲ್ಲಿ ನಡೆಸುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 10 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. 212 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕೊಹ್ಲಿ 205 ಇನ್ನಿಂಗ್ಸ್ ಗಳಲ್ಲಿ 92.51 ಸ್ಟ್ರೈಕ್ ರೇಟ್‍ನಲ್ಲಿ 10 ಸಾವಿರ ರನ್ ಪೂರೈಸಿದ್ದಾರೆ.

    ವಿಶ್ವ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ 13ನೇ ಆಟಗಾರ, ಭಾರತದ ಪರ 5ನೇ ಆಟಗಾರ ಕೊಹ್ಲಿ ಆಗಿದ್ದಾರೆ. ಈ ಹಿಂದೆ 2001ರ ಮಾರ್ಚ್ ನಲ್ಲಿ ಸಚಿನ್ ತೆಂಡೂಲ್ಕರ್ 266 ಪಂದ್ಯ, 259 ಇನ್ನಿಂಗ್ಸ್ ಗಳಲ್ಲಿ 10 ಸಾವಿರ ರನ್ ಪೂರೈಸಿದ್ದರು. ಅಲ್ಲದೇ ಗಂಗೂಲಿ 263 ಇನ್ನಿಂಗ್ಸ್, 272 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಉಳಿದಂತೆ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್, 272 ಪಂದ್ಯ, 266 ಇನ್ನಿಂಗ್ಸ್, ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಜ್ಯಾಕ್ ಕಾಲಿಸ್ 286 ಪಂದ್ಯ, 272 ಇನ್ನಿಂಗ್ಸ್, ಧೋನಿ 320 ಪಂದ್ಯ, 273 ಇನ್ನಿಂಗ್ಸ್, ಬ್ರಿಯಾನ್ ಲಾರಾ 287 ಪಂದ್ಯ, 278 ಇನ್ನಿಂಗ್ಸ್ ಗಳಲ್ಲಿ 10 ಸಾವಿರ ರನ್ ಸಿಡಿಸಿದ ಸಾಧನೆ ಮಾಡಿದ್ದರು.

    ಇದೇ ಪಂದ್ಯದಲ್ಲಿ ಮತ್ತೊಂದು ಸಾಧನೆಯನ್ನು ಕೊಹ್ಲಿ ನಿರ್ಮಿಸಿದ್ದಾರೆ. ಕೊಹ್ಲಿ ತವರು ನೆಲದಲ್ಲಿ ಕೇವಲ 78 ಇನ್ನಿಂಗ್ಸ್ ಗಳಲ್ಲಿ ಏಕದಿನ ಕ್ರಿಕೆಟ್‍ನಲ್ಲಿ 4 ಸಾವಿರ ರನ್ ಪೂರೈಸಿದ್ದಾರೆ. ಈ ಹಿಂದೆ ಎಬಿಡಿ ವಿಲಿಯರ್ಸ್ ದಕ್ಷಿಣ ಆಫ್ರಿಕಾದಲ್ಲಿ 91 ಇನ್ನಿಂಗ್ಸ್ ಗಳಲ್ಲಿ 4 ಸಾವಿರ ಪೂರೈಸಿದ್ದರು. ಕೊಹ್ಲಿ ಅವರ ಹೆಸರಿನಲ್ಲಿ ಈಗಾಗಲೇ 36 ಶತಕ, 48 ಅರ್ಧ ಶತಕಗಳು ದಾಖಲಾಗಿದೆ.

    ವಿಶಾಖಪಟ್ಟಣ ಕ್ರೀಡಾಂಗಣದಲ್ಲಿ ಕೊಹ್ಲಿ ಇದುವರೆಗೂ 4 ಏಕದಿನ ಪಂದ್ಯಗಳನ್ನು ಆಡಿದ್ದು 118, 117, 99, 65 ರನ್ ಹಾಗೂ ಟೆಸ್ಟ್ ಪಂದ್ಯದಲ್ಲಿ 167 ರನ್, 81 ರನ್ ಸಿಡಿಸಿ ರನ್ ಹೊಳೆ ಹರಿಸಿದ್ದರು. ಇಂದಿನ ಪಂದ್ಯದಲ್ಲೂ ತಮ್ಮ ಬ್ಯಾಟಿಂಗ್ ಬಲವನ್ನು ಮುಂದುವರಿಸಿರುವ ಕೊಹ್ಲಿ 56 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಅರ್ಧ ಶತಕದ ಬಳಿಕ ತಮ್ಮ ಆಕ್ರಮಣಕಾರಿ ಮುಂದುವರಿಸಿದ ಕೊಹ್ಲಿ 129 ಎಸೆತಗಳಲ್ಲಿ 13 ಬೌಂಡರಿ, 4 ಸಿಕ್ಸರ್ ನೆರವಿನಿಂದ 157 ರನ್ ಸಿಡಿಸಿ ಔಟಾಗದೆ ಉಳಿದರು. 50 ಓವರ್ ಗಳಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 321 ರನ್ ಪೂರೈಸಿದೆ. ಪಂದ್ಯದಲ್ಲಿ ಕೊಹ್ಲಿಗೆ ಸಾಥ್ ನೀಡಿದ ರಾಯುಡು 80 ಎಸೆತಗಳಲ್ಲಿ 73 ರನ್ ಸಿಡಿಸಿ ಔಟಾದರು.

    ಉಳಿದಂತೆ ಕೊಹ್ಲಿ ವಿಂಡೀಸ್ ವಿರುದ್ಧ ದ ಭಾರತದ ಪರ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಕೊಹ್ಲಿ ವಿಂಡೀಸ್ ವಿರುದ್ಧದ 29 ನೇ ಇನ್ನಿಂಗ್ಸ್ ನಲ್ಲಿ 1,574 ರನ್ ಗಳಿಸಿದ್ದಾರೆ. ಈ ಮೂಲಕ 39 ಇನ್ನಿಂಗ್ಸ್ ಗಳಲ್ಲಿ ಸಚಿನ್ ತೆಂಡೂಲ್ಕರ್ 1,573 ರನ್ ಗಳಿಸಿದ್ದರು. ಅಲ್ಲದೇ ವಿಂಡೀಸ್ ವಿರುದ್ಧ ಅತೀ ಹೆಚ್ಚು ಶತಕಗಳನ್ನು ಸಿಡಿಸಿದ ಆಟಗಾರರಾಗಿದ್ದು, 6 ಶತಕಗಳನ್ನು ಸಿಡಿಸಿದ್ದಾರೆ. ಈ ಹಿಂದೆ ಗಿಬ್ಸ್, ಎಬಿಡಿ ವಿಲಿಯರ್ಸ್, ಅಮ್ಲ 5 ಶತಕಗಳನ್ನು ಸಿಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಚಿನ್ ಮನೆಗೆ ಸಪ್ರೈಸ್ ವಿಸಿಟ್ ನೀಡಿದ ಲಾರಾ

    ಸಚಿನ್ ಮನೆಗೆ ಸಪ್ರೈಸ್ ವಿಸಿಟ್ ನೀಡಿದ ಲಾರಾ

    ಮುಂಬೈ: ಇಂಡೋ ವಿಂಡೀಸ್ ಸಿಮೀತ ಓವರ್ ಗಳ ಸರಣಿ ಅ.21 ರಿಂದ ಆರಂಭವಾಗಲಿದ್ದು, ಇದೇ ವೇಳೆ ವೆಸ್ಟ್ ಇಂಡೀಸ್ ಮಾಜಿ ಆಟಗಾರ ಬ್ರಿಯಾನ್ ಲಾರಾ, ಸಚಿನ್ ಅವರ ಮನೆಗೆ ಭೇಟಿ ನೀಡಿ ಸಪ್ರೈಸ್ ನೀಡಿದ್ದಾರೆ.

    ಈ ಕುರಿತು ಇಬ್ಬರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಚಿನ್, ವಾರಾಂತ್ಯವನ್ನು ಸ್ವಾಗತಿಸುವ ಬಹುದೊಡ್ಡ ದಾರಿ. ಒಳ್ಳೆಯ ಸ್ನೇಹಿತ ಲಾರಾ ಸಪ್ರೈಸ್ ವಿಸಿಟ್ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/BpGn68-B-8b/?taken-by=sachintendulkar

    ವಿಶ್ವ ಕ್ರಿಕೆಟ್ ದಿಗ್ಗಜರು ಎಂದೇ ಗುರುತಿಸಿಕೊಂಡಿರುವ ಇಬ್ಬರು ಆಟಗಾರರು ಕ್ರಿಕೆಟ್‍ನಿಂದ ನಿವೃತ್ತಿ ಘೋಷಿಸಿದ ಬಹು ವರ್ಷಗಳ ಬಳಿಕವೂ ತಮ್ಮ ಸ್ನೇಹವನ್ನು ಮುಂದುವರಿಸಿದ್ದು, ಗುವಾಹತಿಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಇಬ್ಬರು ಭೇಟಿ ಮಾಡಿದ್ದಾರೆ.

    ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿ ಹಲವು ವರ್ಷಗಳು ಕಳೆದರೂ ಕೂಡ ಇಬ್ಬರು ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನ ಹೊಂದಿದ್ದಾರೆ. ಸಚಿನ್ 34,357 ರನ್, 100 ಶತಕಗಳ ದಾಖಲೆ ಹೊಂದಿದ್ದರೆ, ಲಾರಾ 22,358 ರನ್ ಗಳಿಸಿ ಟೆಸ್ಟ್ ಕ್ರಿಕೆಟ್‍ನಲ್ಲಿ 400 ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ.

    ವಿಶೇಷ ಎಂಬಂತೆ ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಪೃಥ್ವಿ ಶಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದು, ಈ ವೇಳೆ ಪ್ರತಿಕ್ರಿಯೆ ನೀಡಿದ್ದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಪೃಥ್ವಿ ಶಾ ಕ್ರಿಕೆಟ್ ದಿಗ್ಗಜರಾದ ಸಚಿನ್ ಹಾಗೂ ಲಾರಾರ ಸಮ್ಮಿಲನ ರೂಪ ಎಂದು ವಿಶ್ಲೇಷಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಲಾರಾ, ರವಿಶಾಸ್ತ್ರಿ ಅವರ ಹೇಳಿಕೆಯನ್ನು ನಿರಾಕರಿಸಿ, ಪೃಥ್ವಿ ಶಾ ಎಡಗೈ ಆಟಗಾರರಾಗಿದ್ದು, ಸಚಿನ್ ಹಾಗೂ ಸೆಹ್ವಾಗ್ ರ ಸಮ್ಮಿಲನ. ನಾನು 18 ವರ್ಷ ವಯಸ್ಸಿನಲ್ಲಿ ಇಷ್ಟು ಬಲಶಾಲಿಯಾಗಿ ಇರಲಿಲ್ಲ ಎಂದು ಹೊಗಳಿಕೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/BpEuQsVBsaX/?taken-by=sachintendulkar

  • ಶತಕ ಸಿಡಿಸಿ ಭಾರತದ ಪರ ದಾಖಲೆ ಬರೆದ ಕೊಹ್ಲಿ

    ಶತಕ ಸಿಡಿಸಿ ಭಾರತದ ಪರ ದಾಖಲೆ ಬರೆದ ಕೊಹ್ಲಿ

    ರಾಜ್ ಕೋಟ್: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಭಾರತದ ಪರ ಕೊಹ್ಲಿ ದಾಖಲೆ ನಿರ್ಮಿಸಿದ್ದಾರೆ.

    ವಿರಾಟ್ ಕೊಹ್ಲಿ 123 ಇನ್ನಿಂಗ್ಸ್ ಗಳಲ್ಲಿ 24ನೇ ಶತಕ ಸಿಡಿಸುವ ಮೂಲಕ ಅತಿ ಕಡಿಮೆ ಇನ್ನಿಂಗ್ಸ್ ಈ ಸಾಧನೆ ನಿರ್ಮಿಸಿದ ಮೊದಲ ಭಾರತೀಯ ಆಟಗಾರ ಮತ್ತು ವಿಶ್ವದ ಎರಡನೇ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ವಿಶ್ವ ಕ್ರಿಕೆಟ್‍ನಲ್ಲಿ ಆಸೀಸ್ ಆಟಗಾರ ಡೊನಾಲ್ಡ್ ಬ್ರಾಡ್‍ಮನ್ 66 ಇನ್ನಿಂಗ್ಸ್ ಗಳಲ್ಲಿ 24 ಶತಕ ಪೂರೈಸಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಉಳಿದಂತೆ ಸಚಿನ್ ತೆಂಡೂಲ್ಕರ್ ಅವರು 125 ಇನ್ನಿಂಗ್ಸ್, ಸುನಿಲ್ ಗವಾಸ್ಕರ್ 128 ಇನ್ನಿಂಗ್ಸ್ ಈ ಸಾಧನೆ ಮಾಡಿದ್ದರು. ಇದರೊಂದಿಗೆ ವೆಸ್ಟ್ ಇಂಡೀಸ್ ವಿವಿ ರಿಚರ್ಡ್ ಸನ್, ಪಾಕ್ ಮೊಹಮ್ಮದ್ ಯೂಸಫ್, ಆಸೀಸ್ ಗ್ರೇಕ್ ಚಾಪೆಲ್ ಅವರ 24 ಶತಕಗಳ ಸಾಧನೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ.

    ಕೊಹ್ಲಿ ತವರು ನೆಲದಲ್ಲಿ ಸಿಡಿಸಿದ 11ನೇ ಹಾಗೂ ನಾಯಕನಾಗಿ ಗಳಿಸಿದ 17ನೇ ಶತಕ ಇದಾಗಿದೆ. 2018ರ 4ನೇ ಶತಕ ಇದಾಗಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ 1,000 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಈ ಮೂಲಕ 2016 ರಿಂದ 2018 ಅವಧಿಯಲ್ಲಿ ಸತತ ಮೂರು ವರ್ಷ 1 ಸಾವಿರ ರನ್ ಪೂರ್ಣಗೊಳಿಸಿದ್ದಾರೆ. ಈ ಪಂದ್ಯದಲ್ಲಿ 230 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 10 ಬೌಂಡರಿಗಳ ಸಮೇತ 139 ರನ್ ಸಿಡಿಸಿದ್ದಾರೆ.

    2ನೇ ದಿನದಾಟದ ವೇಳೆ ಟೀಂ ಇಂಡಿಯಾ ಪರ ಕೊಹ್ಲಿ ಜೊತೆಗೂಡಿದ ರಿಷಭ್ ಪಂತ್ 8 ಬೌಂಡರಿಗಳ ನೆರವಿನಿಂದ 92 ರನ್ ಸಿಡಿಸಿ ಔಟಾದರು. ಕೊಹ್ಲಿ, ಪಂತ್ ಜೋಡಿ 5ನೇ ವಿಕೆಟ್‍ಗೆ 133 ರನ್ ಜೊತೆಯಾಟ ನೀಡಿದರು. ಇದಕ್ಕೂ ಮುನ್ನ 41 ರನ್ ಗಳಿಸಿದ್ದ ರಹಾನೆ ಅರ್ಧ ಶತಕದಿಂದ ವಂಚಿತರಾಗಿ ಔಟಾದರು.

     ಟೀಂ ಇಂಡಿಯಾ ರನ್:
    10.3 ಓವರ್ 50 ರನ್
    19.5 ಓವರ್ 100 ರನ್
    40.3 ಓವರ್ 200 ರನ್
    72.4 ಓವರ್ 300 ರನ್
    95.6 ಓವರ್ 400 ರನ್
    116.4 ಓವರ್ 500 ರನ್
    129.2 ಓವರ್ 550 ರನ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಷೇರು ಮಾರಾಟ ಮಾಡಿ ಕೇರಳ ಫುಟ್‍ಬಾಲ್ ತಂಡಕ್ಕೆ ಸಚಿನ್ ಗುಡ್‍ಬೈ

    ಷೇರು ಮಾರಾಟ ಮಾಡಿ ಕೇರಳ ಫುಟ್‍ಬಾಲ್ ತಂಡಕ್ಕೆ ಸಚಿನ್ ಗುಡ್‍ಬೈ

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಇಂಡಿಯನ್ ಸೂಪರ್ ಲೀಗ್‍ನಲ್ಲಿ ಕೇರಳ ಬ್ಲಾಸ್ಟರ್ಸ್ ಫುಟ್ಬಾಲ್ ಕ್ಲಬ್ ನಲ್ಲಿ ಹೊಂದಿದ್ದ ತಮ್ಮ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಮೂಲಕ ತಂಡದ ಸಹ ಮಾಲೀಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ.

    ಕಳೆದ ನಾಲ್ಕು ಆವೃತ್ತಿಗಳಿಂದ ಸಚಿನ್ ಕೇರಳ ಬ್ಲಾಸ್ಟರ್ಸ್ ತಂಡದ ಸಹ ಮಾಲೀಕರಾಗಿದ್ದರು. ಈ ವರ್ಷದ ಆವೃತ್ತಿ ಆರಂಭವಾಗುವ ಮುನ್ನವೇ ಸಚಿನ್ ತಮ್ಮ ಷೇರು ಮಾರಾಟ ಮಾಡಿದ್ದಾರೆ.

    ಸದ್ಯ ಸಚಿನ್‍ರ ಈ ನಿರ್ಧಾರ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಶಾಕ್ ನೀಡಿದೆ. ಏಕೆಂದರೆ ಕೇರಳ ತಂಡಕ್ಕೆ ಸಚಿನ್ ಬೆಂಬಲವಾಗಿ ನಿಂತಿದ್ದರು. ಅವರ ಅಪಾರ ಅಭಿಮಾನಿಗಳು ಕೂಡ ತಂಡವನ್ನು ಬೆಂಬಲಿಸುತ್ತಿದ್ದರು. ಇದು ಆಟಗಾರರಲ್ಲಿ ಹೆಚ್ಚಿನ ಸ್ಫೂರ್ತಿ ತುಂಬುತ್ತಿತ್ತು.

    ತಂಡದ ಮಾಲೀಕತ್ವ ತೊರೆದ ಬಳಿಕ ಮಾತನಾಡಿದ ಸಚಿನ್, ತಂಡ ಸದ್ಯ ಉತ್ತಮ ರೂಪವನ್ನು ಪಡೆದಿದ್ದು, ಸಾಧನೆಯ ದಾರಿಯಲ್ಲಿದೆ. ಈ ವೇಳೆ ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿ. ಎಂದಿಗೂ ನಾನು ತಂಡದ ಪರ ಇರಲಿದ್ದೇನೆ ಎಂದು ಹಾರೈಸುವುದಾಗಿ ತಿಳಿಸಿದ್ದಾರೆ.

    ಆರಂಭದಲ್ಲಿ ಹೆಚ್ಚಿನ ಷೇರು ಹೊಂದಿದ್ದ ಸಚಿನ್ ನಂತರ ತನ್ನಲ್ಲಿದ್ದ ಷೇರುಗಳನ್ನು ಮಾರಾಟ ಮಾಡುತ್ತಾ ಬಂದಿದ್ದರು. ಕೊನೆಗೆ ಸಚಿನ್ ಬಳಿ 20% ಷೇರು ಇದ್ದರೆ, ಹೈದರಾಬಾದಿನ ಮೀಡಿಯಾ ಆಂಡ್ ಎಂಟರ್‍ಟೈನ್‍ಮೆಂಟಿನ ಪ್ರಸಾದ್ ಗ್ರೂಪ್ 80% ಷೇರು ಹೊಂದಿತ್ತು. ಸಚಿನ್ ಅವರ ಬಳಿಯಿದ್ದ ಷೇರನ್ನು ಅಂತಾರಾಷ್ಟ್ರೀಯ ಉದ್ಯಮಿ ಎಂ.ಎ. ಯೂಸುಫ್ ಆಲಿ ಅವರ ಲುಲು ಗ್ರೂಪ್ ಖರೀದಿಸಿದೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ. ಆದರೆ ಈ ಬಗ್ಗೆ ಲುಲು ಗ್ರೂಪ್ ಆಗಲಿ ಕೇರಳ ಬ್ಲಾಸ್ಟರ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ರಿಕೆಟ್ ದೇವರ ವಿರುದ್ಧವೂ ನಾಲಿಗೆ ಹರಿಬಿಟ್ಟ ಶ್ರೀರೆಡ್ಡಿ!

    ಕ್ರಿಕೆಟ್ ದೇವರ ವಿರುದ್ಧವೂ ನಾಲಿಗೆ ಹರಿಬಿಟ್ಟ ಶ್ರೀರೆಡ್ಡಿ!

    – ಹೈದ್ರಾಬಾದ್‍ನಲ್ಲಿ ಚಾರ್ಮಿಂಗ್ ಹುಡುಗಿ ಜೊತೆ ಸಚಿನ್ ರೊಮ್ಯಾನ್ಸ್ ಮಾಡಿದ್ರಂತೆ?

    ಹೈದರಾಬಾದ್: ಚಿತ್ರರಂಗದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ನಡು ರಸ್ತೆಯಲ್ಲಿ ಬಟ್ಟೆಬಿಚ್ಚಿ ಪ್ರತಿಭಟನೆ ನಡೆಸಿದ್ದ ಟಾಲಿವುಡ್ ನಟಿ ಸದ್ಯ ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಅವರನ್ನು ಟಾರ್ಗೆಟ್ ಮಾಡಿ ಗಂಭೀರ ಆರೋಪ ಮಾಡಿದ್ದಾರೆ.

    ಈ ಕುರಿತು ತಮ್ಮ ಫೇಸ್‍ಬುಕ್‍ನಲ್ಲಿ ಶ್ರೀರೆಡ್ಡಿ ವಿವಾದಿತ ಸ್ಟೇಟಸ್ ಹಾಕಿದ್ದು, ಸಚಿನ್ ತೆಂಡೂಲ್ಕರ್ ಹೈದರಾಬಾದ್‍ಗೆ ಆಗಮಿಸಿದ ವೇಳೆ ಹುಡುಗಿ ಜೊತೆ ಸಚಿನ್ ರೊಮ್ಯಾನ್ಸ್ ಮಾಡುತ್ತಿದ್ದರು. ಅಲ್ಲದೇ ಹೈದರಾಬಾದ್‍ನಲ್ಲಿ ಹೈ ಪ್ರೊಫೈಲ್ ಹೊಂದಿರುವ ಚಾಮುಂಡೇಶ್ವರ್ ಸ್ವಾಮಿ ಅವರಿಗೆ ಮಧ್ಯವರ್ತಿಯಾಗಿದ್ದರು. ಖ್ಯಾತನಾಮ ಪಡೆದಿರುವವರು ರೊಮ್ಯಾನ್ಸ್ ಚೆನ್ನಾಗಿ ಮಾಡುತ್ತಾರೆ ಅಲ್ವಾ ಎಂದು ಪ್ರಶ್ನೆ ಮಾಡಿ ಎಂದು ಬರೆದುಕೊಂಡಿದ್ದಾರೆ.

    ಸದ್ಯ ಶ್ರೀರೆಡ್ಡಿಗೆ ಸ್ಟೇಟಸ್ ಗೆ ಕಿಡಿಕಾರಿದ ನೆಟ್ಟಿಗರು ದುರುದ್ದೇಶದಿಂದ ಬಿಟ್ಟಿ ಪ್ರಚಾರಕ್ಕಾಗಿ ಇಂತಹ ಸ್ಟೇಟಸ್ ಹಾಕಲಾಗುತ್ತಿದೆ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಈ ಹಿಂದೆಯೂ ಟಾಲಿವುಡ್, ಕಾಲಿವುಡ್ ಸೇರಿದಂತೆ ಹಲವು ಸಿನಿಮಾ ರಂಗಗಳ ಸ್ಟಾರ್ ನಟರು, ನಿರ್ದೇಶಕರು ಹಾಗೂ ಕಲಾವಿದರ ಕುರಿತು ಇಂತಹದ್ದೇ ಆರೋಪ ಮಾಡಿದ್ದ ಶ್ರೀ ರೆಡ್ಡಿ ಕೆಲ ಸಾಕ್ಷ್ಯಗಳನ್ನು ನೀಡಿದ್ದರು. ಆದರೆ ಸಚಿನ್‍ರ ಮೇಲಿನ ಆರೋಪಕ್ಕೆ ಯಾವುದೇ ರೀತಿಯ ಸಾಕ್ಷ್ಯವನ್ನು ನೀಡಿಲ್ಲ.

    ಕೆಲ ದಿನಗಳ ಹಿಂದೆಯಷ್ಟೇ ನಟ, ನಿದೇರ್ಶಕ, ನಿರ್ಮಾಪಕ, ಡಾನ್ಸ್ ಮಾಸ್ಟರ್ ರಾಘವ ಲಾರೆನ್ಸ್ ವಿರುದ್ಧವೂ ಆರೋಪ ಮಾಡಿದ್ದ ಶ್ರೀರೆಡ್ಡಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಅಲ್ಲದೇ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ನಿದೇರ್ಶಕ ಲಾರೆನ್ಸ್, ಹೆಣ್ಣು ಮಕ್ಕಳನ್ನು ಎಷ್ಟು ಗೌರವಿಸುತ್ತೆನೆ ಎಂಬುವುದಕ್ಕೆ ನಮ್ಮ ಅಮ್ಮನಿಗಾಗಿ ನಿರ್ಮಾಣ ಮಾಡಿರುವ ದೇವಾಲಯವೇ ಸಾಕ್ಷಿ. ಅಮ್ಮನಿಗೆ ನೀಡುವ ಗೌರವವನ್ನು ಎಲ್ಲಾ ಮಹಿಳೆಯರಿಗೂ ನೀಡುತ್ತೆನೆ ಎಂದು ಸ್ಪಷ್ಟನೆ ನೀಡಿದ್ದರು. ಉಳಿದಂತೆ ಬಿಗ್ ಸ್ಟಾರ್ ಗಳಾದ ರಾಣಾ ದಗ್ಗುಬಾಟಿ ಸಹೋದರ ಸೇರಿದಂತೆ ಹಲವರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು. ಈ ವೇಳೆ ಕೆಲ ಸಹಕಲಾವಿದರು ಕೂಡ ಶ್ರೀರೆಡ್ಡಿಗೆ ವಿರುದ್ಧ ಪ್ರತ್ಯಾರೋಪಗಳನ್ನು ಮಾಡಿದ್ದರು.

    ಶ್ರೀರೆಡ್ಡಿ ಆರೋಪಕ್ಕೆ ಚಿತ್ರರಂಗ ಮಾತ್ರವಲ್ಲವೇ ಹಲವು ಅಭಿಮಾನಿಗಳು ಶಾಕ್‍ಗೆ ಒಳಗಾಗಿದ್ದು, ಇದುವರೆಗೂ ಶ್ರೀರೆಡ್ಡಿ ತನ್ನ ಆರೋಪದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ಸಚಿನ್ ಕೂಡ ಈ ಕುರಿತು ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಅದರೆ ಸದ್ಯ ಶ್ರೀರೆಡ್ಡಿ ಸದ್ಯ ತೆಂಡೂಲ್ಕರ್ ವಿರುದ್ಧ ಆರೋಪ ಮಾಡಿ ಸಚಿನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲಾರಾ ವಿಶ್ವದಾಖಲೆ ಮುರಿದ ವಿರಾಟ್, ಸಚಿನ್‍ರನ್ನೂ ಹಿಂದಿಕ್ಕಿದ್ರು!

    ಲಾರಾ ವಿಶ್ವದಾಖಲೆ ಮುರಿದ ವಿರಾಟ್, ಸಚಿನ್‍ರನ್ನೂ ಹಿಂದಿಕ್ಕಿದ್ರು!

    – ಸಚಿನ್, ದ್ರಾವಿಡ್, ಗಂಗೂಲಿ ದಿಗ್ಗಜರ ಸಾಲಿಗೆ ಕೊಹ್ಲಿ

    ಲಂಡನ್: ಓವೆಲ್ ಕ್ರೀಡಾಂಗಣ ನಡೆಯುತ್ತಿರುವ ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಹತ್ವದ ಸಾಧನೆ ಮಾಡಿದ್ದು, ವಿಶ್ವ ಕ್ರಿಕೆಟ್‍ನಲ್ಲಿ ವೇಗವಾಗಿ 18 ಸಾವಿರ ರನ್ ಪೂರೈಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

    ಕೊಹ್ಲಿ 382 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದು, ಈ ಹಿಂದೆ ವೆಸ್ಟ್ ಇಂಡೀಸ್‍ನ ಬ್ರಿಯಾನ್ ಲಾರಾ 411 ಇನ್ನಿಂಗ್ಸ್ 18 ಸಾವಿರ ರನ್ ಪೂರೈಸಿದ್ದರು. ಇನ್ನು ಸಚಿನ್ ತೆಂಡೂಲ್ಕರ್ 412 ಇನ್ನಿಂಗ್ಸ್‍ಗಳಲ್ಲಿ ಈ ಸಾಧನೆ ಮಾಡಿದ್ದರು. ಟೀಂ ಇಂಡಿಯಾ ಪರ ಸಚಿನ್ (34,357) ಸೇರಿದಂತೆ ರಾಹುಲ್ ದ್ರಾವಿಡ್ (24,208), ಸೌರವ್ ಗಂಗೂಲಿ (18,575) ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಕೊಹ್ಲಿ ಟೀಂ ಇಂಡಿಯಾ ಪರ 18 ಸಾವಿರ ರನ್ ಪೂರೈಸಿದ 4ನೇ ಆಟಗಾರನಾಗಿ ದಿಗ್ಗಜರ ಸಾಲಿಗೆ ಸೇರಿದ್ದಾರೆ.

    ಅಂತಿಮ 5ನೇ ಟೆಸ್ಟ್ ಪಂದ್ಯದಲ್ಲಿ ಅರ್ಧ ಶತಕದಿಂದ ವಂಚಿತರಾದ ಕೊಹ್ಲಿ 49 ರನ್ ಗಳಿಗೆ ಬೇನ್ ಸ್ಟೋಕ್ಸ್‍ಗೆ ವಿಕೆಟ್ ಒಪ್ಪಿಸಿದರು. ಟೀಂ ಇಂಡಿಯಾ 174 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸುವ ಸಂಕಷ್ಟದಲ್ಲಿದ್ದು, ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಲು ಇನ್ನು 158 ರನ್ ಗಳಿಸಬೇಕಿದೆ. ಮೊದಲ ಟೆಸ್ಟ್ ಪಂದ್ಯವಾಡುತ್ತಿರುವ ಹನುಮ ವಿಹಾರಿ 25 ರನ್ ಮತ್ತು ಜಡೇಜಾ 8 ರನ್ ಗಳಿಸಿ 3ನೇ ದಿನದಾಟಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.

    ಕೊಹ್ಲಿ ರನ್ ಸಾಧನೆ:
    15 ಸಾವಿರ ರನ್ (333 ಇನ್ನಿಂಗ್ಸ್)
    16 ಸಾವಿರ ರನ್ (350 ಇನ್ನಿಂಗ್ಸ್)
    17 ಸಾವಿರ ರನ್ (363 ಇನ್ನಿಂಗ್ಸ್)
    18 ಸಾವಿರ ರನ್ (382 ಇನ್ನಿಂಗ್ಸ್)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • `ಪುತ್ರಿಯ ಸಾಧನೆ ನನಗೆ ಹೆಮ್ಮೆ ತಂದಿದೆ’- ಸಚಿನ್, ಪುತ್ರಿಯ ಫೋಟೋ ವೈರಲ್

    `ಪುತ್ರಿಯ ಸಾಧನೆ ನನಗೆ ಹೆಮ್ಮೆ ತಂದಿದೆ’- ಸಚಿನ್, ಪುತ್ರಿಯ ಫೋಟೋ ವೈರಲ್

    ಮುಂಬೈ: ಭಾರತೀಯ ಕ್ರಿಕೆಟ್ ತಂಡದ ದಂತಕತೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಲಂಡನ್ ವಿವಿಯಿಂದ ವೈದ್ಯಕೀಯ ಪದವಿ ಪಡೆದಿದ್ದಾರೆ.

    ಪದವಿ ಪಡೆದ ಸಂತಸ ಕ್ಷಣಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಸಾರಾ ಸಂತಸ ವ್ಯಕ್ತಪಡಿಸಿದ್ದಾರೆ. ಸಚಿನ್ ಕೂಡ ತಮ್ಮ ಪುತ್ರಿಯ ಜೊತೆಗಿನ ಫೋಟೋಗಳನ್ನು ಟ್ವೀಟ್ ಮಾಡಿ ಶುಭಕೋರಿದ್ದು, ಪುತ್ರಿಯ ಸಾಧನೆ ನನಗೆ ಹೆಮ್ಮೆ ತಂದಿದೆ ಎಂದು ಬರೆದುಕೊಂಡಿದ್ದಾರೆ.

    ಮುಂಬೈ ಧೀರೂಬಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ಓದಿದ್ದ ಸಾರಾ ಬಳಿಕ ಯುನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಲ್) ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪದವಿಗೆ ಪ್ರವೇಶ ಪಡೆದಿದ್ದರು. ಅಂದಹಾಗೇ ಅಂಜಲಿ ಅವರು ಕೂಡ ಡಾಕ್ಟರ್ ಆಗಿದ್ದು, ಸದ್ಯ 20 ವರ್ಷದ ಸಾರಾ ಕೂಡ ವೈದ್ಯಕೀಯ ಪದವಿ ಪಡೆದು ತಮ್ಮ ತಾಯಿಯಂತೆ ಡಾಕ್ಟರ್ ಆಗಿದ್ದಾರೆ.

    ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸಚಿನ್ ಹಾಗೂ ಪತ್ನಿ ಅಂಜಲಿ ಕೂಡ ಸಾರಾ ಗೆ ಸಾಥ್ ನೀಡಿದ್ದಾರೆ. ಸಚಿನ್ ಟ್ವೀಟ್‍ಗೆ ಹರ್ಭಜನ್ ಹಾಗೂ ಪಾಕ್ ಮಾಜಿ ಆಟಗಾರ ಮುಷ್ತಾಕ್ ಸೇರಿದಂತೆ ಹಲವು ದಿಗ್ಗಜರು ಪ್ರತಿಕ್ರಿಯೆ ನೀಡಿ ಶುಭಕೋರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/BnZMH55HUOE/?taken-by=saratendulkar

  • ಟೆಸ್ಟ್‌ನಲ್ಲಿ ಸಚಿನ್ ಸಾಧನೆ ಹಿಂದಿಕ್ಕಿದ ಕೊಹ್ಲಿ

    ಟೆಸ್ಟ್‌ನಲ್ಲಿ ಸಚಿನ್ ಸಾಧನೆ ಹಿಂದಿಕ್ಕಿದ ಕೊಹ್ಲಿ

    ಲಂಡನ್: ಸೌಥಾಂಪ್ಟನ್ ರೋಸ್ ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 6 ಸಾವಿರ ರನ್ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಸಾಧನೆಯನ್ನು ಹಿಂದಿಕ್ಕಿದ್ದಾರೆ.

    ಸಚಿನ್ 120 ಇನ್ನಿಂಗ್ಸ್ ಗಳಲ್ಲಿ 6 ಸಾವಿರ ರನ್ ಗಳಿಸಿದ್ದರೆ ಕೊಹ್ಲಿ 71 ಟೆಸ್ಟ್ ಪಂದ್ಯಗಳ 119 ಇನ್ನಿಂಗ್ಸ್ ನಲ್ಲಿ 6 ಸಾವಿರ ರನ್ ಗಳ ಗಡಿಯನ್ನು ದಾಟಿದ್ದಾರೆ. ಇದರಲ್ಲಿ 23 ಶತಕಗಳು, 18 ಅರ್ಧ ಶತಕಗಳು ಸೇರಿದೆ. ಭಾರತದ ಪರ ಸುನೀಲ್ ಗವಾಸ್ಕರ್ 117 ಇನ್ನಿಂಗ್ಸ್ ಗಳಲ್ಲಿ 6 ಸಾವಿರ ರನ್ ಪೂರೈಸಿ ಮೊದಲ ಸ್ಥಾನ ಪಡೆದಿದ್ದಾರೆ. ಅಲ್ಲದೇ ಟೀಂ ಇಂಡಿಯಾ ಪರ ಈ ಸಾಧನೆ ಮಾಡಿದ 10ನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

    ಪಂದ್ಯದ 22ನೇ ಓವರ್ ನ ವೇಳೆ 9 ರನ್ ಗಳಿಸಿದ್ದ ಕೊಹ್ಲಿ 6 ಸಾವಿರ ರನ್ ದಾಟಿದರು. ಈ ಹಿಂದೆ ಟೀಂ ಇಂಡಿಯಾ ಪರ ವೀರೇಂದ್ರ ಸೆಹ್ವಾಗ್ (72 ಟೆಸ್ಟ್, 123 ಇನ್ನಿಂಗ್ಸ್), ರಾಹುಲ್ ದ್ರಾವಿಡ್ (73 ಟೆಸ್ಟ್, 125 ಇನ್ನಿಂಗ್ಸ್), ಮತ್ತು ಸಚಿನ್ ತೆಂಡೂಲ್ಕರ್ (76 ಟೆಸ್ಟ್, 120 ಇನ್ನಿಂಗ್ಸ್) ಗಳಲ್ಲಿ 6 ಸಾವಿರ ರನ್ ಪೂರೈಸಿದ್ದರು.

    ಕೊಹ್ಲಿ ರನ್ ಸಾಧನೆ:
    27 ಇನ್ನಿಂಗ್ಸ್ 1 ಸಾವಿರ ರನ್
    26 ಇನ್ನಿಂಗ್ಸ್ 1 ರಿಂದ 2 ಸಾವಿರ ರನ್
    20 ಇನ್ನಿಂಗ್ಸ್ 2 ರಿಂದ 3 ಸಾವಿರ ರನ್
    16 ಇನ್ನಿಂಗ್ಸ್ 3 ರಿಂದ 4 ಸಾವಿರ ರನ್
    16 ಇನ್ನಿಂಗ್ಸ್ 4 ರಿಂದ 5 ಸಾವಿರ ರನ್
    14 ಇನ್ನಿಂಗ್ಸ್ 5 ರಿಂದ 6 ಸಾವಿರ ರನ್

    ಕೊಹ್ಲಿ ಈಗಾಗಲೇ 23 ಶತಕ ಸಿಡಿಸಿ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ದಾಖಲೆ ಮುರಿದಿದ್ದಾರೆ. ಇಂದಿನ ಪಂದ್ಯದಲ್ಲಿ 46 ರನ್ ಗಳಿಸಿದ ಕೊಹ್ಲಿ, ಕರ್ರನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೃಥ್ವಿ ಶಾ ಕುರಿತು 10 ವರ್ಷಗಳ ಹಿಂದೆ ಸಚಿನ್ ನುಡಿದಿದ್ದ ಭವಿಷ್ಯ ನಿಜವಾಯ್ತು!

    ಪೃಥ್ವಿ ಶಾ ಕುರಿತು 10 ವರ್ಷಗಳ ಹಿಂದೆ ಸಚಿನ್ ನುಡಿದಿದ್ದ ಭವಿಷ್ಯ ನಿಜವಾಯ್ತು!

    ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಟೂರ್ನಿಯ ಅಂತಿಮ 2 ಪಂದ್ಯಗಳಿಗೆ 18 ವರ್ಷದ ಯುವ ಆಟಗಾರ ಪೃಥ್ವಿ ಶಾ ಅವರನ್ನು ಬಿಸಿಸಿಐ ಆಯ್ಕೆ ಮಾಡಿದ್ದು, ಶಾ ಟೀಂ ಇಂಡಿಯಾ ಪರ ಆಡಲಿದ್ದಾರೆ ಎಂದು 10 ವರ್ಷದ ಹಿಂದೆ ಸಚಿನ್ ತೆಂಡೂಲ್ಕರ್ ಹೇಳಿದ ಮಾತು ಇಂದು ನಿಜವಾಗಿದೆ.

    ಶಾ ಭವಿಷ್ಯದ ಕುರಿತು ತನ್ನ ಸ್ನೇಹಿತನಿಗೆ ಹೇಳಿದ್ದ ಮಾತನ್ನು ಸಚಿನ್ ತಮ್ಮ 100MB ಆ್ಯಪ್ ಬಿಡುಗಡೆಯ ವೇಳೆ ರಿವೀಲ್ ಮಾಡಿದ್ದಾರೆ. ಶಾ 8 ವರ್ಷ ಬಾಲಕನಾಗಿದ್ದ ವೇಳೆ ಆತನ ಬ್ಯಾಟಿಂಗ್ ಶೈಲಿ ಕಂಡು ಕೆಲವು ಸಲಹೆ ನೀಡಿದ್ದೆ. ಅಲ್ಲದೇ ಯಾವುದೇ ಕಾರಣಕ್ಕೂ ಈ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳದಂತೆ ಹೇಳಿದ್ದಾಗಿ ತಿಳಿಸಿದ್ದಾರೆ.

    ಹತ್ತು ವರ್ಷಗಳ ಹಿಂದೆ ನನ್ನ ಸ್ನೇಹಿತನೊಬ್ಬ ಶಾ ಬ್ಯಾಟಿಂಗ್ ಶೈಲಿಯನ್ನು ಗಮನಿಸುವಂತೆ ಹೇಳಿದ್ದ. ಅಲ್ಲದೇ ಆತನ ಬ್ಯಾಟಿಂಗ್ ಶೈಲಿ ಕುರಿತು ವಿಶ್ಲೇಷಣೆ ಮಾಡಿ ಸಲಹೆ ನೀಡಲು ತಿಳಿಸಿದ್ದ. ಈ ವೇಳೆ ಕೆಲವು ಸಲಹೆ ನೀಡಿದ್ದೆ. ಅಲ್ಲದೇ ನನ್ನ ಸ್ನೇಹಿತನಿಗೆ ಮುಂದೊಂದು ದಿನ ಶಾ ಟೀಂ ಇಂಡಿಯಾ ಪರ ಆಡಲಿದ್ದಾರೆ ಎಂದು ಹೇಳಿದ್ದೆ ಅಂದ್ರು.  ಇದನ್ನು ಓದಿ: ಇಂಗ್ಲೆಂಡ್ ಟೆಸ್ಟ್: ಫೈನಲ್ ಟೆಸ್ಟ್ ಪಂದ್ಯಗಳಿಗೆ ಪೃಥ್ವಿ ಶಾ, ವಿಹಾರಿಗೆ ಅವಕಾಶ 

    ಸದ್ಯ ಸಚಿನ್ ಭವಿಷ್ಯದ ಮಾತು ನಿಜವಾಗಿದ್ದು, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪೃಥ್ವಿ ಶಾ ಪಾದಾರ್ಪಣೆ ಮಾಡಲು ಕಾತುರರಾಗಿದ್ದಾರೆ. ಅಂದಹಾಗೇ ಶಾ ಈಗಾಗಲೇ ತಮ್ಮ ಬ್ಯಾಟಿಂಗ್ ಮೂಲಕ ಹಲವು ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದಾರೆ. 14 ವಯಸ್ಸಿನಲ್ಲೇ ಪೃಥ್ವಿ ಶಾ ಪಂದ್ಯವೊಂದರಲ್ಲಿ 330 ಎಸೆಗಳಲ್ಲಿ 546 ರನ್ ಗಳಿಸಿ ಮಿಂಚಿದ್ದರು. ಬಳಿಕ ಅಂಡರ್ 19 ತಂಡದ ನಾಯಕತ್ವ ವಹಿಸಿ ವಿಶ್ವಕಪ್ ಗೆದ್ದು ತಂದಿದ್ದರು.

    ಸದ್ಯ ಪೃಥ್ವಿ ಶಾ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 14 ಪಂದ್ಯಗಳಿಂದ 56.72 ರ ಸರಾಸರಿಯಲ್ಲಿ 1,418 ರನ್ ಗಳಿಸಿದ್ದಾರೆ. ಉಳಿದಂತೆ ಟೀಂ ಇಂಡಿಯಾ ಎ ತಂಡದ ಪರ ಇಂಗ್ಲೆಂಡ್ ನೆಲದಲ್ಲೇ 3 ಶತಕ ಗಳಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಚಿನ್ ಬಳಿಕ ಐಸಿಸಿ ನಂ.1 ಟೆಸ್ಟ್ ಬ್ಯಾಟ್ಸ್ ಮನ್ ಪಟ್ಟಕ್ಕೇರಿದ ವಿರಾಟ್ ಕೊಹ್ಲಿ

    ಸಚಿನ್ ಬಳಿಕ ಐಸಿಸಿ ನಂ.1 ಟೆಸ್ಟ್ ಬ್ಯಾಟ್ಸ್ ಮನ್ ಪಟ್ಟಕ್ಕೇರಿದ ವಿರಾಟ್ ಕೊಹ್ಲಿ

    ದುಬೈ: ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‍ನಲ್ಲೂ ಆಸೀಸ್ ಆಟಗಾರ ಸ್ಟೀವ್ ಸ್ಮಿತ್‍ರನ್ನು ಹಿಂದಿಕ್ಕಿ ನಂ.1 ಸ್ಥಾನ ಪಡೆದಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಒಟ್ಟು 200 ರನ್ ಸಿಡಿಸಿದ ಕೊಹ್ಲಿ ಈ ಸಾಧನೆಯ ಜೊತೆ ಮತ್ತೊಂದು ಸಾಧನೆಯನ್ನು ನಿರ್ಮಿಸಿದ್ದಾರೆ. ಟೀಂ ಇಂಡಿಯಾ ಪರವಾಗಿ ಸಚಿನ್ ಬಳಿಕ ನಂ.1 ಪಟ್ಟಕ್ಕೆ ಏರಿದ ಬ್ಯಾಟ್ಸ್ ಮನ್ ಎನ್ನುವ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಅಂದಹಾಗೇ 2011 ರಲ್ಲಿ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‍ನಲ್ಲಿ ನಂ.1 ಸ್ಥಾನ ಪಡೆದಿದ್ದರು.

    ಬರ್ಮಿಗ್‍ಹ್ಯಾಮ್ ನಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 149 ರನ್ ಸಿಡಿಸಿದ್ದ ಕೊಹ್ಲಿ, 2ನೇ ಇನ್ನಿಂಗ್ಸ್ ನಲ್ಲಿ 51 ರನ್ ಗಳಿಸಿ ಮಿಂಚಿದ್ದರು. ಈ ಮೂಲಕ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಜೀವನ ಶ್ರೇಷ್ಠ 934 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ 1 ವರ್ಷ ನಿಷೇಧಕ್ಕೆ ಒಳಗಾಗಿರುವ ಸ್ಟೀವ್ ಸ್ಮಿತ್ 929 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಹಿಂಬಡ್ತಿ ಹೊಂದಿದ್ದಾರೆ. 3ನೇ ಸ್ಥಾನವನ್ನು 865 ಅಂಕಗಳೊಂದಿಗೆ ಇಂಗ್ಲೆಂಡ್ ತಂಡದ ಜೋ ರೂಟ್ ಪಡೆದಿದ್ದಾರೆ.

    ಗವಾಸ್ಕರ್ ದಾಖಲೆ ಉಡಿಸ್: ಟೆಸ್ಟ್ ನಂ. ಬ್ಯಾಟ್ಸ್ ಮನ್ ಆಗಿ 934 ಅಂಕಗಳನ್ನು ಪಡೆದಿರುವ ಕೊಹ್ಲಿ ಟೀಂ ಇಂಡಿಯಾ ಪರ ವೈಯಕ್ತಿಕವಾಗಿ ಅತೀ ಹೆಚ್ಚು ಅಂಕ ಪಡೆದ ಆಟಗಾರರಾಗಿದ್ದು, ಈ ಹಿಂದೆ ಟೀಂ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್ 916 ಅಂಕ ಪಡೆದಿದ್ದರು. ಉಳಿದಂತೆ ವಿಶ್ವ ಕ್ರಿಕೆಟ್ ನಲ್ಲಿ ಡೊನಾಲ್ಡ್ ಬ್ರಾಡ್ಮನ್ (961), ಸ್ಟೀವ್ ಸ್ಮಿತ್ (947) ನಂತರದ ಸ್ಥಾನದಲ್ಲಿದ್ದಾರೆ. ಉಳಿದಂತೆ ಟೀಂ ಇಂಡಿಯಾ ಪರ ಈ ಹಿಂದೆ ಸಚಿನ್ ತೆಂಡೂಲ್ಕರ್, ದಿಲೀಪ್ ವೆಂಗ್‍ಸರ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಈ ಸಾಧನೆ ಮಾಡಿದ್ದರು.

    ಪ್ರಸ್ತುತ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಕೊಹ್ಲಿ ನಂಬರ್ ಒನ್ ಸ್ಥಾನದಲ್ಲಿದ್ದರೆ, ಟಿ 20 ಯಲ್ಲಿ 12ನೇ ಸ್ಥಾನದಲ್ಲಿದ್ದಾರೆ.

    ಸದ್ಯ ಐಸಿಸಿ ಬಿಡುಗಡೆಗೊಳಿಸಿರುವ ಪಟ್ಟಿಯಲ್ಲಿ ಟೀಂ ಇಂಡಿಯಾದ ಚೇತೇಶ್ವರ ಪೂಜಾರಾ 791 ಅಂಕಗಳೊಂದಿಗೆ 6, ಕೆಎಲ್ ರಾಹುಲ್ 1 ಸ್ಥಾನ ಕುಸಿತಗೊಂಡು 19 ಹಾಗೂ ರಹಾನೆ 3 ಸ್ಥಾನ ಕಳೆದುಕೊಂಡು 22ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಶಿಖರ್ ಧವನ್ ಹಾಗೂ ಮುರಳಿ ವಿಜಯ್ 25 ಸ್ಥಾನ ಪಡೆದಿದ್ದಾರೆ.

    ಬೌಲಿಂಗ್ ವಿಭಾಗದಲ್ಲಿ ರವೀಂದ್ರ ಜಡೇಜಾ 3 ಹಾಗೂ ಆರ್ ಆಶ್ವಿನ್ 5 ಸ್ಥಾನ ಪಡೆದು ಟಾಪ್ ಬೌಲರ್ ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಉಳಿದಂತೆ ಮಹಮ್ಮದ್ ಶಮಿ 19 ಹಾಗೂ ಇಶಾಂತ್ ಶರ್ಮಾ 25ನೇ ಸ್ಥಾನ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews