Tag: sachin tendulkar

  • ದ್ವಿಶತಕ ಸಿಡಿಸಿ ಸೆಹ್ವಾಗ್, ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ

    ದ್ವಿಶತಕ ಸಿಡಿಸಿ ಸೆಹ್ವಾಗ್, ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ

    – ಕೊಹ್ಲಿ, ಜಡೇಜಾ 205 ರನ್‍ಗಳ ಜೊತೆಯಾಟ
    – 601 ರನ್ ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿದ ಭಾರತ

    ಪುಣೆ: ಇಂದು ದಕ್ಷಿಣ ಅಫ್ರಿಕಾದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿರುವ ಕೊಹ್ಲಿ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

    ಇಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ 295 ಎಸೆತಗಳಲ್ಲಿ 28 ಬೌಂಡರಿ ಸಿಡಿಸುವ ಮೂಲಕ 7ನೇ ದ್ವಿಶತಕ ಹೊಡೆದರು. 79 ಟೆಸ್ಟ್ ಪಂದ್ಯಗಳಲ್ಲಿ 7 ದ್ವಿಶತಕ ಸಿಡಿಸುವ ಮೂಲಕ ಈ ಹಿಂದೆ ಭಾರತದ ಪರ ತಲಾ ಆರು ದ್ವಿಶತಕ ಸಿಡಿಸಿದ್ದ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು.

    ಭಾರತ 156.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 601 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. 91 ರನ್ (104 ಎಸೆತ, 8 ಬೌಂಡರಿ, 2 ಸಿಕ್ಸರ್) ಗಳಿಸಿದ್ದಾಗ ಬಲವಾದ ಹೊಡೆತ ಹೊಡೆಯಲು ಜಡೇಜಾ ಹೋಗಿ ವಿಕೆಟ್ ಒಪ್ಪಿಸಿದರು. ಜಡೇಜಾ ಔಟಾಗುತ್ತಿದ್ದಂತೆ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವುದಾಗಿ ಘೋಷಿಸಿದರು.

    ಎರಡನೇ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ ತಾನು ಎದುರಿಸಿದ 91 ಎಸೆತದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ನಂತರ 173 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ ಕೊಹ್ಲಿ 295 ಎಸೆತಗಳಲ್ಲಿ 200 ರನ್‍ಗಳ ಗಡಿ ದಾಟಿದರು. ಈ ಮೂಲಕ ವಿಶ್ವದಲ್ಲೇ ಅತೀ ಹೆಚ್ಚು ಟೆಸ್ಟ್ ದ್ವಿಶತಕ ಸಿಡಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕೇರಿದರು. ಅಂತಿಮವಾಗಿ ಕೊಹ್ಲಿ ಔಟಾಗದೇ 254 ರನ್(336 ಎಸೆತ, 33 ಬೌಂಡರಿ, 2 ಸಿಕ್ಸರ್) ಹೊಡೆದರು. ಕೊಹ್ಲಿ ಮತ್ತು ಜಡೇಜಾ 5ನೇ ವಿಕೆಟಿಗೆ 225 ರನ್ ಗಳ ಜೊತೆಯಾಟವಾಡಿದ್ದರಿಂದ ಭಾರತ 600 ರನ್ ಗಳ ಗಡಿಯನ್ನು ದಾಟಿತು.

    ಕೊಹ್ಲಿ ಅವರನ್ನು ಬಿಟ್ಟರೆ ಅತಿ ಹೆಚ್ಚು ಟೆಸ್ಟ್ ದ್ವಿಶತಕ ಸಿಡಿಸಿದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಲೆಜೆಂಡ್ ಆಟಗಾರ ಡಾನ್ ಬ್ರಾಡ್ಮನ್ ಅವರು 12 ದ್ವಿಶತಕ ಸಿಡಿಸಿ ಮೊದಲ ಸ್ಥಾನದಲ್ಲಿ ಇದ್ದಾರೆ. ನಂತರ ಎರಡನೇ ಸ್ಥಾನದಲ್ಲಿ 11 ದ್ವಿಶತಕ ಸಿಡಿಸಿರುವ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಇದ್ದಾರೆ. 9 ದ್ವಿಶತಕ ಸಿಡಿಸಿರುವ ವೆಸ್ಟ್ ಇಂಡೀಸ್ ದೈತ್ಯ ಆಟಗಾರ ಬ್ರಿಯಾನ್ ಲಾರಾ ಮೂರನೇ ಸ್ಥಾನದಲ್ಲಿ ಇದ್ದಾರೆ.

    ಈ ಪಂದ್ಯದಲ್ಲಿ ಏಳನೇ ದ್ವಿಶತಕ ಸಿಡಿಸಿರುವ ಕೊಹ್ಲಿ ಭಾರತದ ಪರ ಟೆಸ್ಟ್ ಕ್ರಿಕೆಟ್‍ನಲ್ಲಿ 7 ಸಾವಿರ ರನ್ ಗಳಿಸಿದ ಭಾರತದ ಏಳನೇ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಉಪನಾಯಕ ಅಜಿಂಕ್ಯ ರಹಾನೆ ಜೊತೆಗೆ 178 ರನ್‍ಗಳ ಜೊತೆಯಾಟವಾಡಿದ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕನೇ ವಿಕೆಟ್‍ಗೆ ಅತಿ ಹೆಚ್ಚು ರನ್ ಹೊಡೆದ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ತವರಿನಲ್ಲಿ ಸೌತ್ ಆಫ್ರಿಕಾ ತಂಡದ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಭಾರತ, ಮೊದಲ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ಮತ್ತು ಮೊಹಮ್ಮದ್ ಶಮಿ ಅವರ ಮಾರಕ ಬೌಲಿಂಗ್ ದಾಳಿಯಿಂದ 203 ರನ್‍ಗಳ ಅಂತರದಲ್ಲಿ ಗೆದ್ದು ಬೀಗಿತ್ತು. ಈಗ ಎರಡನೇ ಟೆಸ್ಟ್ ಆರಂಭವಾಗಿದ್ದು, ಮೊದಲು ಬ್ಯಾಟ್ ಮಾಡುತ್ತಿರುವ ಭಾರತ ಮಯಾಂಕ್ ಅಗರವಾಲ್ ಶತಕ ಮತ್ತು ಕೊಹ್ಲಿ ದ್ವಿಶತಕದಿಂದ ಪಂದ್ಯದ ಮೇಲೆ ಉತ್ತಮ ಹಿಡಿತ ಸಾಧಿಸಿದೆ.

  • 87ನೇ ವಾಯಪಡೆಯ ದಿನಾಚರಣೆಯಲ್ಲಿ ಭಾಗವಹಿಸಿದ ಕ್ಯಾಪ್ಟನ್ ಸಚಿನ್ ತೆಂಡೂಲ್ಕರ್

    87ನೇ ವಾಯಪಡೆಯ ದಿನಾಚರಣೆಯಲ್ಲಿ ಭಾಗವಹಿಸಿದ ಕ್ಯಾಪ್ಟನ್ ಸಚಿನ್ ತೆಂಡೂಲ್ಕರ್

    ಲಕ್ನೋ: ಇಂದು ಗಾಜಿಯಾಬಾದ್‍ನ ಹಿಂಡನ್ ವಾಯುಪಡೆ ನಿಲ್ದಾಣದಲ್ಲಿ ನಡೆದ ಭಾರತೀಯ ವಾಯುಪಡೆಯ (ಐಎಎಫ್) 87 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಭಾಗವಹಿಸಿದ್ದರು.

    2010ರ ಸೆಪ್ಟೆಂಬರ್ ನಲ್ಲಿ ಭಾರತೀಯ ವಾಯುಸೇನೆಯಲ್ಲಿ ಗ್ರೂಪ್ ಕ್ಯಾಪ್ಟನ್ ರ‌್ಯಾಂಕ್ ಪಡೆದ ಸಚಿನ್ ಅವರು, ಸಮವಸ್ತ್ರ ಧರಿಸಿ ಪಾಲ್ಗೊಂಡರು. ಇವರ ಜೊತೆಗೆ ಕಳೆದ ತಿಂಗಳು ಅಧಿಕಾರ ವಹಿಸಿಕೊಂಡ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಸೇರಿದಂತೆ ಭಾರತೀಯ ವಾಯುಪಡೆಯ ಹಲವಾರು ಉನ್ನತ ಶ್ರೇಣಿಯ ಅಧಿಕಾರಿಗಳು ಭಾಗವಹಿಸಿದರು.

    ತಮ್ಮ ಪತ್ನಿ ಅಂಜಲಿ ತೆಂಡೂಲ್ಕರ್ ಅವರೊಂದಿಗೆ ಮೆರವಣಿಗೆಗೆ ಆಗಮಿಸಿದ ಸಚಿನ್ ಅವರನ್ನು ವಾಯುಪಡೆಯ ಅಧಿಕಾರಿಗಳು ಸ್ವಾಗತಿಸಿದರು. ಕಳೆದ ವರ್ಷ ನಡೆದ ಭಾರತೀಯ ವಾಯುಪಡೆಯ ದಿನಾಚರಣೆಯ ಸಂದರ್ಭದಲ್ಲೂ ಸಚಿನ್ ಪಾಲ್ಗೊಂಡಿದ್ದರು.

    ಇಂದು ಹಿಂಡನ್ ವಾಯುನೆಲೆಯಲ್ಲಿ ನಡೆಯುವ ವಾಯುಪಡೆಯ ದಿನದ ಮೆರವಣಿಗೆಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮನ್ ಮಿಗ್ ಬೈಸನ್ ವಿಮಾನವನ್ನು ಹಾರಿಸಿದ್ದಾರೆ. ಇದರ ಜೊತೆಗೆ ಈ ವರ್ಷದ ಆರಂಭದಲ್ಲಿ ಫೆಬ್ರವರಿ 26 ರಂದು ಭಾರತೀಯ ವಾಯುಪಡೆಯು ನಡೆಸಿದ ಬಾಲಕೋಟ್ ವೈಮಾನಿಕ ದಾಳಿಯ ಭಾಗವಾಗಿದ್ದ ಎಲ್ಲ ಏರ್ ಫೈಟರ್ ಪೈಲಟ್‍ಗಳು ಈ ದಿನ ತಮ್ಮ ವಿಮಾನಗಳನ್ನು ಹಾರಿಸಲಿದ್ದಾರೆ.

    ವಾಯುಪಡೆಯ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಮಾತನಾಡಿ, ನಮ್ಮ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ವಾಯುಪಡೆ ಕೃತಜ್ಞವಾಗಿದೆ. ನಾವು ನಮ್ಮ ರಾಷ್ಟ್ರೀಯ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಹೋರಾಡುತ್ತೇವೆ. ನಾನು ನಮ್ಮ ವಾಯು ಪಡೆಯ ಯೋಧರ ಪರವಾಗಿ ನಮ್ಮ ರಾಷ್ಟ್ರಕ್ಕೆ ಈ ಭರವಸೆ ನೀಡುತ್ತೇನೆ ಎಂದು ತಿಳಿಸಿದರು.

    ವಿಶ್ವ ಕ್ರಿಕೆಟ್‍ನಲ್ಲೇ ವಿಶ್ವ ದಾಖಲೆಯನ್ನು ನಿರ್ಮಿಸಿರುವ ಸಚಿನ್ ತೆಡೂಲ್ಕರ್ ಅವರಿಗೆ, 1994 ರಲ್ಲಿ ಅರ್ಜುನ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ (1997-98), ಪದ್ಮಶ್ರೀ (1999) ಮತ್ತು 2008 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ಭಾರತ ಸರ್ಕಾರ ನೀಡಿದೆ.

  • ಸೆಹ್ವಾಗ್ ನಂತ್ರ ಭಾರತದ ಪರ ವಿಶೇಷ ಸಾಧನೆಗೈದ ಕನ್ನಡಿಗ ಮಯಾಂಕ್

    ಸೆಹ್ವಾಗ್ ನಂತ್ರ ಭಾರತದ ಪರ ವಿಶೇಷ ಸಾಧನೆಗೈದ ಕನ್ನಡಿಗ ಮಯಾಂಕ್

    ವಿಶಾಖಪಟ್ಟಣಂ: ತವರು ನೆಲದಲ್ಲಿ ಮೊದಲ ಟೆಸ್ಟ್ ಪಂದ್ಯವಾಡಿದ ಮಯಾಂಕ್ ಅಹರ್ವಾಲ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲೇ ದ್ವಿಶತಕ ಸಿಡಿಸಿದ್ದು, ಆ ಮೂಲಕ ಸಚಿನ್, ಕೊಹ್ಲಿ, ಸೆಹ್ವಾಗ್‍ರಂತಹ ದಿಗ್ಗಜ ಕ್ರಿಕೆಟಿಗರ ಸಾಲಿಗೆ ಸೇರಿದ್ದಾರೆ.

    ಪಂದ್ಯದ 2ನೇ ದಿನದಾಟದ ಆರಂಭದಲ್ಲೇ ಶತಕ ಸಿಡಿಸಿದ 28 ವರ್ಷದ ಮಯಾಂಕ್, ಆ ಬಳಿಕ ಶತಕವನ್ನು ದ್ವಿಶತಕವಾಗಿ ಪರಿವರ್ತಿಸಲು ಯಶಸ್ವಿಯಾದರು. ಭಾರತದ ಪರ ಕೊಹ್ಲಿ, ಸೆಹ್ವಾಗ್, ಸಚಿನ್ ತಲಾ 6 ದ್ವಿಶತಕಗಳನ್ನು ಸಿಡಿಸಿದ್ದು, ರಾಹುಲ್ ದ್ರಾವಿಡ್ 5, ಗವಾಸ್ಕರ್ 4, ಪೂಜಾರಾ 3 ದ್ವಿಶತಕಗಳನ್ನು ಸಿಡಿಸಿದ್ದಾರೆ.

    ಮಯಾಂಕ್ ದ್ವಿಶತಕ ಸಿಡಿಸುವುದರೊಂದಿಗೆ ಭಾರತದ ಪರ ಇದುವರೆಗೂ 52 ದ್ವಿಶತಕಗಳು ದಾಖಲಾಗಿದ್ದು, 23 ಆಟಗಾರರು ಈ ಸಾಧನೆ ಮಾಡಿದ್ದಾರೆ. ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದ ರೋಹಿತ್ ಹಾಗೂ ಮಯಾಂಕ್ ಇಬ್ಬರೂ ಕೂಡ 317 ರನ್ ಗಳ ಜೊತೆಯಾಟವಾಡಿದರು. ಪಂದ್ಯದಲ್ಲಿ ರೋಹಿತ್ ಶರ್ಮಾ 244 ಎಸೆತಗಳಲ್ಲಿ 176 ರನ್ ಸಿಡಿಸಿ ಔಟಾದರೆ, ಮಯಾಂಕ್ 371 ಎಸೆತಗಳನ್ನು ಎದುರಿಸಿ 23 ಬೌಂಡರಿ, 6 ಸಿಕ್ಸರ್ ಗಳೊಂದಿಗೆ 215 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 502 ರನ್ ಸಿಡಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

    ಅಂದಹಾಗೇ ಭಾರತ ಪರ ಟೆಸ್ಟ್ ಪಂದ್ಯದ ಮೊದಲ ಶತಕವನ್ನು ದ್ವಿಶತಕವಾಗಿ ಪರಿವರ್ತನೆ ಮಾಡಿದ ಸಾಧನೆಯನ್ನು ಮಯಾಂಕ್ ಮಾಡಿದ್ದು, ದಿಲೀಪ್ ಸರ್ದೇಸಾಯಿ, ವಿನೋದ್ ಕಾಂಬ್ಳಿ, ಕರುಣ್ ನಾಯರ್ ಅವರ ಸಾಲಿಗೆ ಸೇರಿದ್ದಾರೆ. ಅಲ್ಲದೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ 303 ರನ್ ಗಳಿಸಿದ್ದ ಕರುಣ್ ನಾಯರ್ ಮೊದಲ ಸ್ಥಾನ ಪಡೆದಿದ್ದಾರೆ.

    ಎರಡನೇ ಆಟಗಾರ: ದಕ್ಷಿಣ ಆಫ್ರಿಕಾ ವಿರುದ್ಧ ಸೆಹ್ವಾಗ್ 2008ರ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು. ಆಫ್ರಿಕಾ ವಿರುದ್ಧ ದಾಖಲಾದ ಮೊದಲ ದ್ವಿಶತಕ ಇದಾಗಿತ್ತು. ಈಗ ಈ ಸಾಧನೆಯನ್ನು ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಮಯಾಂಕ್ ಪಡೆದಿದ್ದಾರೆ. ತವರು ನೆಲದಲ್ಲಿ ಮೊದಲ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯವಾಡಿದ ಮಯಾಂಕ್ 358 ಎಸೆತಗಳಲ್ಲಿ ದ್ವಿಶತಕದ ಸಾಧನೆ ಮಾಡಿದ್ದರು. ಆಸೀಸ್ ವಿರುದ್ಧದ ಟೂರ್ನಿಯಲ್ಲಿ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಮಯಾಂಕ್ ಮೊದಲ ಇನ್ನಿಂಗ್ಸ್‍ನಲ್ಲಿ 75 ರನ್ ಗಳಿಸಿದ್ದರು. ಆದರೆ ಆ ಬಳಿಕ ಅವರಿಗೆ ಟೆಸ್ಟ್ ಕ್ರಿಕೆಟ್‍ನಲ್ಲಿ ಹೆಚ್ಚಿನ ಅವಕಾಶ ಲಭಿಸಲಿಲ್ಲ. ಆದರೂ ದೇಶಿಯ ಕ್ರಿಕೆಟ್‍ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು. ಆ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರು.

  • ಮೋದಿ ನಂತ್ರ ಅತೀ ಹೆಚ್ಚು ಜನ ಮೆಚ್ಚುಗೆ ಪಡೆದ ವ್ಯಕ್ತಿ ಧೋನಿ

    ಮೋದಿ ನಂತ್ರ ಅತೀ ಹೆಚ್ಚು ಜನ ಮೆಚ್ಚುಗೆ ಪಡೆದ ವ್ಯಕ್ತಿ ಧೋನಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಟ್ಟರೆ ಭಾರತದ ಮಾಜಿ ನಾಯಕ ಎಂ.ಎಸ್ ಧೋನಿ ಅವರು ಭಾರತದಲ್ಲಿ ಅತೀ ಹೆಚ್ಚು ಜನ ಮೆಚ್ಚುಗೆ ಪಡೆದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

    ಯೂಗೋವ್ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಪ್ರಧಾನಿ ಮೋದಿ ಅವರನ್ನು ಬಿಟ್ಟರೆ ಎಂ. ಎಸ್ ಧೋನಿ ಅವರು ಅತೀ ಹೆಚ್ಚು ಜನರ ಮೆಚ್ಚುಗೆ ಪಡೆದಿದ್ದಾರೆ ಎಂದು ಹೇಳಿದೆ. ಇವರನ್ನು ಬಿಟ್ಟರೆ ಮೂರನೇ ಸ್ಥಾನದಲ್ಲಿ ಉದ್ಯಮಿ ರತನ್ ಟಾಟಾ, ನಾಲ್ಕನೇ ಸ್ಥಾನದಲ್ಲಿ ಬರಾಕ್ ಒಬಾಮ ಇದ್ದು, ಐದನೇ ಸ್ಥಾನದಲ್ಲಿ ಬಿಲ್ ಗೇಟ್ಸ್ ಇದ್ದಾರೆ.

    ಇದರ ಜೊತೆಗೆ ಭಾರತದ ಅತ್ಯಂತ ಜನಪ್ರಿಯತೆ ಪಡೆದ ಕ್ರೀಡಾಪಟುಗಳ ಪಟ್ಟಿಯಲ್ಲಿ ಎಂ.ಎಸ್ ಧೋನಿ ಮೊದಲ ಸ್ಥಾನದಲ್ಲಿ ಇದ್ದಾರೆ. ಈ ಸಮೀಕ್ಷೆ ಮೂಲಕ 2019 ರ ವಿಶ್ವಕಪ್ ಬಳಿಕ ಯಾವ ಪಂದ್ಯವನ್ನು ಆಡದೇ ಇದ್ದರೂ ಧೋನಿ ಅವರ ಜನಪ್ರಿಯತೆ ಕಡಿಮೆ ಆಗಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಈ ಪಟ್ಟಿಯಲ್ಲಿ ಇವರನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಮೂರನೇ ಸ್ಥಾನದಲ್ಲಿ ನಾಯಕ ವಿರಾಟ್ ಕೊಹ್ಲಿ ಇದ್ದಾರೆ.

    ಯೂಗೋವ್ ಸಮೀಕ್ಷೆಯ ಪ್ರಕಾರ ವಿಶ್ವದಾದ್ಯಂತ ಜನ ಮೆಚ್ಚುಗೆ ಪಡೆದ ಪುರುಷರ ಪಟ್ಟಿಯಲ್ಲಿ ಬಿಲ್ ಗೇಟ್ಸ್ ಮೊದಲ ಸ್ಥಾನದಲ್ಲಿ ಇದ್ದರೆ, ಮಹಿಳಾ ವಿಭಾಗದಲ್ಲಿ ಮಿಚೆಲ್ ಒಬಾಮ ಮೊದಲ ಸ್ಥಾನದಲ್ಲಿ ಇದ್ದಾರೆ. ಭಾರತದಲ್ಲಿ ಪುರುಷರ ವಿಭಾಗದಲ್ಲಿ ಮೋದಿ ಮೊದಲ ಸ್ಥಾನದಲ್ಲಿ ಇದ್ದರೆ, ಮಹಿಳಾ ವಿಭಾಗದಲ್ಲಿ ಆರು ಬಾರಿ ಬಾಕ್ಸಿಂಗ್ ವಿಶ್ವ ಚಾಂಪಿಯನ್‍ಶಿಪ್ ಗೆದ್ದ ಮೇರಿ ಕೋಮ್ ಅಗ್ರಸ್ಥಾನದಲ್ಲಿ ಇದ್ದಾರೆ.

    ಯುಗೋವ್ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಬಾಲಿವುಡ್ ಸ್ಟಾರ್ಸ್ ಗಳು ಕಾಣಿಸಿಕೊಂಡಿದ್ದು, ಅಮಿತಾಬ್ ಬಚ್ಚನ್, ಶಾರೂಕ್ ಖಾನ್ ಮತ್ತು ಸಲ್ಮಾನ್ ಖಾನ್ ವಿಶ್ವದ ಅತೀ ಹೆಚ್ಚು ಮೆಚ್ಚುಗೆ ಪಡೆದ ಪಟ್ಟಿಯಲ್ಲಿ ಟಾಪ್ 20 ರಲ್ಲಿ ಕಾಣಿಸಿಕೊಂಡಿದ್ದಾರೆ.

  • ಸಚಿನ್ ನಿರ್ಮಿಸಿದ ಆ ದಾಖಲೆಯನ್ನು ವಿರಾಟ್ ಕೂಡ ಮುರಿಯಲು ಸಾಧ್ಯವಿಲ್ಲ – ಸೆಹ್ವಾಗ್

    ಸಚಿನ್ ನಿರ್ಮಿಸಿದ ಆ ದಾಖಲೆಯನ್ನು ವಿರಾಟ್ ಕೂಡ ಮುರಿಯಲು ಸಾಧ್ಯವಿಲ್ಲ – ಸೆಹ್ವಾಗ್

    ನವದೆಹಲಿ: ಕ್ರಿಕೆಟ್‍ನ ಲಿಟ್ಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಎಲ್ಲಾ ದಾಖಲೆಯನ್ನು ಭಾರತದ ನಾಯಕ ವಿರಾಟ್ ಕೊಹ್ಲಿ ಮುರಿಯಬಹುದು. ಆದರೆ ಆ ಒಂದು ದಾಖಲೆಯನ್ನು ಮುರಿಯಲು ಕೊಹ್ಲಿ ಸೇರಿದಂತೆ ಯಾರು ಆಟಗಾರನಿಂದಲೂ ಸಾಧ್ಯವಿಲ್ಲ ಎಂದು ಭಾರತದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಹೇಳಿದ್ದಾರೆ.

    ಕ್ರಿಕೆಟ್‍ನ ಮೂರು ಮಾದರಿಯಲ್ಲೂ ಕೊಹ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ-20 ಸೇರಿದಂತೆ ಎಲ್ಲಾ ಮಾದರಿಯಲ್ಲೂ ಎಲ್ಲಾ ರೀತಿಯ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ ಎಂದು ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿದರು.

    ಇಷ್ಟೆಲ್ಲ ದಾಖಲೆ ಬ್ರೇಕ್ ಮಾಡಿರುವ ಕೊಹ್ಲಿ, ಸಚಿನ್ ಅವರು ಮಾಡಿದ ಒಂದು ದಾಖಲೆಯನ್ನು ಮುರಿಯಲು ಆಗುವುದಿಲ್ಲ. ಸಚಿನ್ ಅವರು ತನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ದಾಖಲೆಯನ್ನು ಕೊಹ್ಲಿ ಸೇರಿದಂತೆ ವಿಶ್ವದ ಯಾವ ಆಟಗಾರನಿಂದ ಮುರಿಯಲು ಸಾಧ್ಯವಿಲ್ಲ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟರು.

    ಸುದ್ದಿ ವಾಹಿನಿವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೆಹ್ವಾಗ್ ಅವರು, ಈ ಸಮಯದಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್ ಮನ್. ಅವರು ಶತಕಗಳನ್ನು ಗಳಿಸುವ ರೀತಿ, ಅವರು ರನ್ ಗಳಿಸುವ ರೀತಿ ನೋಡಿದರೆ ಸಚಿನ್ ತೆಂಡೂಲ್ಕರ್ ಅವರ ಹೆಚ್ಚಿನ ದಾಖಲೆಗಳನ್ನು ಅವರು ಮುರಿಯುತ್ತಾರೆ ಎಂದು ನನಗೆ ಗೊತ್ತಿದೆ. ಆದರೆ ಸಚಿನ್ ತೆಂಡೂಲ್ಕರ್ ಆಡಿದ 200 ಟೆಸ್ಟ್ ಪಂದ್ಯಗಳನ್ನು ಕೊಹ್ಲಿ ಸೇರಿ ಮತ್ತೆ ಯಾವ ಆಟಗಾರನಿಂದ ಮುರಿಯಲು ಸಾಧ್ಯವೇ ಇಲ್ಲ ಎಂದರು.

    ಸಚಿನ್ ಅವರನ್ನು ಬಿಟ್ಟರೆ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ 168 ಟೆಸ್ಟ್ ಪಂದ್ಯಗಳನ್ನು ಆಡಿ ಎರಡನೇ ಸ್ಥಾನದಲ್ಲಿ ಇದ್ದಾರೆ. 2011 ಜೂನ್ 20 ರಂದು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ ಭಾರತದ ಪರವಾಗಿ 77 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 25 ಶತಕಗಳೊಂದಿಗೆ 6,613 ರನ್ ಗಳಿಸಿದ್ದಾರೆ.

    ಈಗ ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ವಿರಾಟ್ ಕೊಹ್ಲಿ ಅವರು, ಮೊದಲ ಪಂದ್ಯದಲ್ಲೇ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. 12 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 9 ರನ್ ಗಳಿಸಿದ್ದ ವಿರಾಟ್ ವಿಂಡೀಸ್ ವೇಗಿ ಶಾನನ್ ಗೇಬ್ರಿಯಲ್ ವಿಕೆಟ್ ಒಪ್ಪಿಸಿದ್ದರು.

  • ನಾನು ಭಾರತಕ್ಕಾಗಿ ಇನ್ನೂ ಹೆಚ್ಚು ಪದಕ ತರುತ್ತೇನೆ – ಮೋದಿಗೆ ಭರವಸೆ ಕೊಟ್ಟ ಹಿಮಾ

    ನಾನು ಭಾರತಕ್ಕಾಗಿ ಇನ್ನೂ ಹೆಚ್ಚು ಪದಕ ತರುತ್ತೇನೆ – ಮೋದಿಗೆ ಭರವಸೆ ಕೊಟ್ಟ ಹಿಮಾ

    ನವದೆಹಲಿ: ಭಾರತಕ್ಕೆ ಐದು ಚಿನ್ನದ ಪದಕ ತಂದ ಗೋಲ್ಡನ್ ಓಟಗಾರ್ತಿ ಹಿಮಾ ದಾಸ್ ಅವರು ನಾನು ಹೆಚ್ಚು ಶ್ರಮವಹಿಸಿ ಭಾರತಕ್ಕಾಗಿ ಹೆಚ್ಚು ಪದಕಗಳನ್ನು ತಂದು ಕೊಡುತ್ತೇನೆ ಎಂದು ಪ್ರಧಾನಿ ಮೋದಿ ಅವರಿಗೆ ಭರವಸೆ ನೀಡಿದ್ದಾರೆ.

    ಈ ಒಂದೇ ತಿಂಗಳಲ್ಲಿ ಭಾರತಕ್ಕೆ ಐದು ಚಿನ್ನದ ಪದಕ ತಂದುಕೊಟ್ಟ ಹಿಮಾ ದಾಸ್ ಅವರನ್ನು ಅಭಿನಂದಿಸಿದ್ದ ಮೋದಿ ಅವರು “ಕಳೆದ ಕೆಲವು ದಿನಗಳಿಂದ ಹಿಮಾ ದಾಸ್ ಅವರು ಮಾಡಿದ ಅದ್ಭುತ ಸಾಧನೆಗಳ ಬಗ್ಗೆ ಭಾರತ ತುಂಬಾ ಹೆಮ್ಮೆಪಡುತ್ತದೆ. ಅವರು ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ಭಾರತಕ್ಕೆ ಐದು ಚಿನ್ನದ ಪದಕಗಳನ್ನು ತಂದಿದ್ದಾರೆ ಅದಕ್ಕೆ ನಮ್ಮಗೆಲ್ಲರಿಗೂ ಖುಷಿಯಾಗಿದೆ. ಅವರಿಗೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದರು.

    ಮೋದಿ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಹಿಮಾ ದಾಸ್ “ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು ನರೇಂದ್ರ ಮೋದಿ ಸರ್. ನಾನು ಹೆಚ್ಚು ಶ್ರಮವಹಿಸಿ ಭಾರತಕ್ಕಾಗಿ ಹೆಚ್ಚಿನ ಪದಕಗಳನ್ನು ತಂದು ಕೊಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

    ಇದಕ್ಕೂ ಮುನ್ನ ಮೂರು ವಾರಗಳಲ್ಲಿ ಐದು ಚಿನ್ನದ ಪದಕ ಗೆದ್ದ ಈ 19 ವರ್ಷದ ಯುವತಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಇತರ ರಾಜಕಾರಣಿಗಳು ಹಿಮಾ ದಾಸ್ ಅವರಿಗೆ ಟ್ವೀಟ್ ಮಾಡುವ ಮೂಲಕ ಶುಭಾಶಯಗಳನ್ನು ಕೋರಿದ್ದರು.

    ಐದು ಪದಕಗಳನ್ನು ಗೆದ್ದ ಹಿಮಾ ದಾಸ್ ಅವರಿಗೆ ಸಚಿನ್ ಅವರು ಭಾನುವಾರ ಸಂಜೆ ಕರೆ ಮಾಡಿ ಶುಭಾಶಯಗಳನ್ನು ಹೇಳಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಚಿನ್ “ಧನ್ಯವಾದಗಳು ಹಿಮಾ ಇಂದು ನಿನ್ನ ಜೊತೆ ಮಾತನಾಡಿ ಖುಷಿಯಾಗಿದೆ. ಸದ್ಯದಲ್ಲೇ ನಿನ್ನನ್ನು ಭೇಟಿಯಾಗುತ್ತೇನೆ ಎಂಬ ಭರವಸೆ ಇದೆ” ಎಂದು ಹೇಳಿದ್ದರು.

    ಇದಕ್ಕೆ ರೀಟ್ವೀಟ್ ಮಾಡಿರುವ ಹಿಮಾ ದಾಸ್ “ಖಂಡಿತವಾಗಿಯೂ ನಿಮ್ಮನ್ನು ಭೇಟಿಯಾಗುತ್ತೇನೆ. ನಾನು ಭಾರತಕ್ಕೆ ವಾಪಸ್ ಬಂದ ಕೂಡಲೇ ನಿಮ್ಮನ್ನು ಖಂಡಿತವಾಗಿಯೂ ಭೇಟಿಯಾಗಿ ಆಶೀರ್ವಾದ ಪಡೆಯುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

    ಐದು ಚಿನ್ನದ ಪದಕದ ಪಟ್ಟಿ:
    1. ಜುಲೈ 2ರಂದು ಪೊಲೆಂಡ್‍ನಲ್ಲಿ ನಡೆದಿದ್ದ ಪೊಜ್ನಾನ್ ಅಥ್ಲೆಟಿಕ್ಸ್ ಪ್ರಿಕ್ಸ್ ನಲ್ಲಿ ಹಿಮಾದಾಸ್ ಅವರು 200 ಮೀಟರ್ ಓಟವನ್ನು 23.65 ಸೆಕೆಂಡ್‍ಗಳಲ್ಲಿ ಮುಗಿಸಿ ಮೊದಲ ಚಿನ್ನದ ಪದಕ ಗೆದ್ದಿದ್ದರು.

    2. ನಂತರ ಜುಲೈ 8 ರಂದು ಕುಟ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ದೂರವನ್ನು 23.97 ಸೆಕೆಂಡ್‍ಗಳಲ್ಲಿ ಕ್ರಮಿಸಿ ಎರಡನೇ ಚಿನ್ನ ಪದಕವನ್ನು ಪಡೆದರು.

    3. ಜುಲೈ 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಸ್ಪರ್ಧೆಯನ್ನು 23.43 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಮೂರನೇ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು.

    4. ಜುಲೈ 18ರಂದು ಜೆಕ್ ರಿಪಬ್ಲಿಕ್‍ನಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಓಟವನ್ನು 23.25 ಸೆಕೆಂಡ್‍ನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.

    5. ಈಗ ಜುಲೈ 20ರಂದು 400 ಮೀಟರ್ ಓಟವನ್ನು 52.09 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ತಮ್ಮ ಐದನೇ ಚಿನ್ನದ ಪದಕವನ್ನು ಗಳಸಿದ್ದಾರೆ.

  • ಆರನೇ ಭಾರತೀಯನಾಗಿ ಐಸಿಸಿ ಹಾಲ್ ಆಫ್ ಫೇಮ್ ಸೇರಿದ ಸಚಿನ್ ತೆಂಡೂಲ್ಕರ್

    ಆರನೇ ಭಾರತೀಯನಾಗಿ ಐಸಿಸಿ ಹಾಲ್ ಆಫ್ ಫೇಮ್ ಸೇರಿದ ಸಚಿನ್ ತೆಂಡೂಲ್ಕರ್

    ನವದೆಹಲಿ: ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಬ್ಯಾಟ್ಸ್ ಮನ್, ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಆರನೇ ಭಾರತೀಯನಾಗಿ ಐಸಿಸಿ ಹಾಲ್ ಆಫ್ ಫೇಮ್ ಸೇರಿದ್ದಾರೆ.

    ಈ ಬಾರಿ ಐಸಿಸಿ ಹಾಲ್ ಆಫ್ ಫೇಮ್‍ನಲ್ಲಿ ಸಚಿನ್ ಅವರ ಜೊತೆ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಅಲನ್ ಡೊನಾಲ್ಡ್ ಅವರನ್ನು ಸೇರಿಸಿದ್ದಾರೆ. ಮತ್ತು ಮಹಿಳಾ ವಿಭಾಗದಿಂದ ಎರಡು ಬಾರಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾದ ಮಹಿಳಾ ಆಟಗಾರ್ತಿ ಕ್ಯಾಥರಿನ್ ಫಿಟ್ಜ್‍ಪ್ಯಾಟ್ರಿಕ್ ಅವರನ್ನು ಈ ಪಟ್ಟಿಗೆ ಸೇರಿಸಲಾಗಿದೆ.

    ಬಿಶನ್ ಸಿಂಗ್ ಬೇಡಿ (2009), ಸುನಿಲ್ ಗವಾಸ್ಕರ್ (2009), ಕಪಿಲ್ ದೇವ್ (2009), ಅನಿಲ್ ಕುಂಬ್ಳೆ (2015), ರಾಹುಲ್ ದ್ರಾವಿಡ್ (2018) ಈ ಹಿಂದೆ ಹಾಲ್ ಆಫ್ ಫೇಮ್ ಸೇರಿದ್ದು, ಈಗ ಈ ಪಟ್ಟಿಗೆ ಸಚಿನ್ ಸೇರಿದ್ದಾರೆ.

    ಸಚಿನ್ ಅವರು ಮೂರು ಮಾದರಿಯ ಕ್ರಿಕೆಟ್ ಪಂದ್ಯಗಳಲ್ಲಿ ಒಟ್ಟು 34,357 ರನ್ ಗಳಿಸಿದ್ದಾರೆ. ಮತ್ತು 100 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ ಮೊದಲ ಮತ್ತು ಏಕೈಕ ಬ್ಯಾಟ್ಸ್ ಮನ್ ಆಗಿದ್ದಾರೆ. ಇದರ ಜೊತೆಗೆ ಏಕದಿನ ಪಂದ್ಯವೊಂದರಲ್ಲಿ ವೈಯಕ್ತಿಕ 200 ರನ್ ಬಾರಿಸಿದ ಮೊದಲು ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಭಾರತದ ಪರ 200 ಟೆಸ್ಟ್ ಗಳು ಮತ್ತು 463 ಏಕದಿನ ಪಂದ್ಯಗಳನ್ನು ಆಡಿರುವ ಅವರು, ಟೆಸ್ಟ್ ಪಂದ್ಯದಲ್ಲಿ 51 ಶತಕ ಮತ್ತು 68 ಅರ್ಧಶತಕದೊಂದಿಗೆ 15,921 ರನ್ ಬಾರಿಸಿದ್ದಾರೆ. ಏಕದಿನ ಪಂದ್ಯದಲ್ಲಿ 49 ಶತಕ ಮತ್ತು 96 ಅರ್ಧಶತಕಗಳೊಂದಿಗೆ 18,426 ರನ್ ಬಾರಿಸಿದ್ದಾರೆ. ಈ ಮೂಲಕ ವಿಶ್ವದಲ್ಲಿ ಒಟ್ಟು 34,357 ರನ್ ಗಳಿಸಿದ ಏಕೈಕ ಆಟಗಾರ ಆಗಿದ್ದಾರೆ.

    11ನೇ ವಯಸ್ಸಿನಿಂದ ಕ್ರಿಕೆಟ್ ಆಡುತ್ತಿದ್ದ ಸಚಿನ್, 1989 ನವೆಂಬರ್ 15 ರಂದು ಪಾಕಿಸ್ತಾನದ ವಿರುದ್ಧ ಕರಾಚಿಯಲ್ಲಿ ತನ್ನ 16 ವರ್ಷಕ್ಕೆ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ಈ ಮೂಲಕ ಸುದೀರ್ಘ 24 ವರ್ಷಗಳ ಕಾಲ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ.

  • ಸೂಪರ್ ಓವರ್ ಟೈ – ಐಸಿಸಿಗೆ ಸಲಹೆ ಕೊಟ್ಟ ಸಚಿನ್

    ಸೂಪರ್ ಓವರ್ ಟೈ – ಐಸಿಸಿಗೆ ಸಲಹೆ ಕೊಟ್ಟ ಸಚಿನ್

    ಮುಂಬೈ: ಬೌಂಡರಿ ಆಧಾರದಲ್ಲಿ ವಿಶ್ವಕಪ್ ಚಾಂಪಿಯನ್ ಆಯ್ಕೆ ನಿರ್ಧಾರಕ್ಕೆ ಹಲವು ಹಿರಿಯ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಐಸಿಸಿಗೆ ಸಲಹೆ ನೀಡಿದ್ದಾರೆ.

    ಒಂದು ವೇಳೆ ಸೂಪರ್ ಓವರ್ ಟೈ ಆದರೆ ಮತ್ತೊಂದು ಸೂಪರ್ ಓವರ್ ಆಡಿಸಬೇಕು. ಬೌಂಡರಿ ಆಧಾರದಲ್ಲಿ ಒಂದು ತಂಡ ಜಯಗಳಿಸಿದೆ ಎಂದು ಹೇಳುವುದು ನ್ಯಾಯಸಮ್ಮತವಲ್ಲ. ವಿಶ್ವಕಪ್ ಒಂದೇ ಅಲ್ಲ ಎಲ್ಲ ಪಂದ್ಯಗಳು ಮುಖ್ಯವೇ. ಫುಟ್ ಬಾಲಿನಲ್ಲಿ ಹೇಗೆ ಹೆಚ್ಚುವರಿ ಸಮಯವನ್ನು ನಿಡಲಾಗುತ್ತೋ ಅದೇ ರೀತಿ ನೀಡಬೇಕು ಎಂದು ಸಚಿನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಸಚಿನ್ ಅಲ್ಲದೇ ರೋಹಿತ್ ಶರ್ಮಾ, ಯುವರಾಜ್ ಸಿಂಗ್ ಸಹ ಈ ನಿಯಮ ಬದಲಾಗಬೇಕು ಎಂದು ಹೇಳಿದ್ದಾರೆ.

    ಸೂಪರ್ ಓವರಿನ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 15 ರನ್ ಹೊಡೆಯಿತು. ನ್ಯೂಜಿಲೆಂಡ್ ತಂಡಕ್ಕೆ ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಈ ವೇಳೆ ಎರಡು ರನ್ ಕದಿಯಲು ಮುಂದಾಗಿದ್ದ ಗುಪ್ಟಿಲ್ ರನ್ ಔಟ್ ಆದರು. ಟ್ರೆಂಟ್ ಬೌಲ್ಟ್ ಎಸೆದ ಓವರ್ ನಲ್ಲಿ ಬೆನ್ ಸ್ಟೋಕ್ಸ್ ಮತ್ತು ಬಟ್ಲರ್ ಒಂದೊಂದು ಬೌಂಡರಿ ಹೊಡೆದಿದ್ದರು. ಜೋಫ್ರಾ ಅರ್ಚರ್ ಎಸೆದ ಓವರ್ ನಲ್ಲಿ ನಿಶಮ್ ಒಂದು ಸಿಕ್ಸರ್ ಹೊಡೆದರೆ ಯಾವುದೇ ಬೌಂಡರಿ ಬಂದಿರಲಿಲ್ಲ. ಎರಡು ತಂಡಗಳ ರನ್ ಸಮವಾಗಿದ್ದರೂ ಒಟ್ಟು 24 ಬೌಂಡರಿ ಸಿಡಿದ ಪರಿಣಾಮ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿತು. ನ್ಯೂಜಿಲೆಂಡ್ 17 ಬೌಂಡರಿ ಹೊಡೆದಿತ್ತು.

    ಫೈನಲ್ ಪಂದ್ಯದಲ್ಲಿ ಓವರ್ ಥ್ರೋಗೆ ಅಂಪೈರ್ ಗಳು 6 ರನ್ ನೀಡಿದ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ವಿಚಾರದ ಬಗ್ಗೆ ಎಚ್ಚೆತ್ತುಕೊಂಡ ಐಸಿಸಿ ಅಂಪೈರ್ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿ ಈ ಪ್ರಕರಣದಿಂದ ಜಾರಿಕೊಂಡಿದೆ.

    ಓವರ್ ಥ್ರೋ ಕುರಿತು ಫಾಕ್ಸ್ ನ್ಯೂಸ್‍ಗೆ ಐಸಿಸಿಯ ವಕ್ತಾರರು ಪ್ರತಿಕ್ರಿಯಿಸಿ, ಮೈದಾನದಲ್ಲಿರುವ ಅಂಪೈರ್ ಗಳು ಐಸಿಸಿಯ ನಿಯಮಗಳ ಪುಸ್ತಕವನ್ನು ಆಧಾರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಅಂಪೈರ್‍ ಗಳು ತೆಗೆದುಕೊಳ್ಳುವ ಈ ತೀರ್ಮಾನಗಳ ಬಗ್ಗೆ ನಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

    ಅಂಪೈರ್ ನಿರ್ಣಯದ ಬಗ್ಗೆ ಸೋಮವಾರವೇ ಪ್ರತಿಕ್ರಿಯೆ ನೀಡಿದ್ದ ಆಸ್ಟ್ರೇಲಿಯಾದ ಖ್ಯಾತ ಮಾಜಿ ಅಂಪೈರ್ ಸೈಮನ್ ಟಫೆಲ್ ಅವರು, ಫೈನಲ್ ಪಂದ್ಯದಲ್ಲಿ ಆನ್ ಫೀಲ್ಡ್ ಅಂಪೈರ್‍ ಗಳು ಓವರ್ ಥ್ರೋ ಕಾರಣಕ್ಕೆ 6 ರನ್ ನೀಡಿದ್ದು ತಪ್ಪು. ನಿಯಮಗಳ ಅನ್ವಯ ಅಲ್ಲಿ 5 ರನ್ ಮಾತ್ರ ನೀಡಬೇಕಿತ್ತು ಎಂದು ಹೇಳಿದ್ದರು.

    ವಿಶ್ವಕಪ್ ಪಂದ್ಯ ಟೈನಲ್ಲಿ ಅಂತ್ಯಗೊಂಡ ಬಳಿಕ ಅಂಪೈರ್ ಓವರ್ ಥ್ರೋಗೆ 6 ರನ್ ನೀಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಫಾಕ್ಸ್ ಸ್ಪೋರ್ಟ್ಸ್ ಗೆ ಪ್ರತಿಕ್ರಿಯೆ ನೀಡಿದ ಟಫೆಲ್, ಇದರಲ್ಲಿ ತಪ್ಪು ಸ್ಪಷ್ಟವಾಗಿದೆ. 6 ರನ್ ನೀಡುವಂತಿಲ್ಲ. 5 ರನ್ ಮಾತ್ರ ನೀಡಬೇಕಿತ್ತು ಎಂದು ತಿಳಿಸಿದ್ದಾರೆ.

  • ರೋಹಿತ್, ರಾಹುಲ್ ಭರ್ಜರಿ ಶತಕ – ಲಂಕಾ ವಿರುದ್ಧ 7 ವಿಕೆಟ್ ಭರ್ಜರಿ‌‌ ಜಯ

    ರೋಹಿತ್, ರಾಹುಲ್ ಭರ್ಜರಿ ಶತಕ – ಲಂಕಾ ವಿರುದ್ಧ 7 ವಿಕೆಟ್ ಭರ್ಜರಿ‌‌ ಜಯ

    ಲೀಡ್ಸ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಂತಿಮ ಲೀಗ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ, ಶ್ರೀಲಂಕಾ ವಿರುದ್ಧ 7 ವಿಕೆಟ್ ಗೆಲುವು ಪಡೆದಿದೆ. ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಭಾರತ ಗೆಲುವಿಗೆ ಕಾರಣರಾದರು.

    ಶ್ರೀಲಂಕಾ ನೀಡಿದ 265 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 39 ಎಸೆತ ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಪಂದ್ಯದಲ್ಲಿ ಮೊದಲ ವಿಕೆಟ್‍ಗೆ ರೋಹಿತ್ ಶರ್ಮಾ, ರಾಹುಲ್ ಜೋಡಿ 189 ರನ್ ಜೊತೆಯಾಟ ನೀಡಿದ್ದು, 2019ರ ವಿಶ್ವಕಪ್ ಕ್ರಿಕೆಟ್‍ನಲ್ಲಿ ಆಂಭಿಕರಾಗಿ 1 ಸಾವಿರ ಪ್ಲಸ್ ರನ್ ಸಿಡಿಸಿದ ಸಾಧನೆ ಮಾಡಿದರು. ಈ ಹಿಂದೆ 2007 ವಿಶ್ವಕಪ್ ನಲ್ಲಿ ಆಸೀಸ್ ಜೋಡಿ 1,142 ರನ್ ಸಿಡಿಸಿದ್ದು, ಅಲ್ಲದೇ ಇಂದಿನ ಟೂರ್ನಿಯಲ್ಲೂ ಆಸೀಸ್ ಆರಂಭಿಕ ಜೋಡಿ 1 ಸಾವಿರ ಪ್ಲಸ್ ರನ್ ಗಳಿಸಿದೆ.

    ರೋಹಿತ್ ಐತಿಹಾಸ ಶತಕ: ಪಂದ್ಯದಲ್ಲಿ 94 ಎಸೆತಗಳಲ್ಲಿ 14 ಬೌಂಡರಿ, 2 ಸಿಕ್ಸರ್ ನೆರವಿನಿಂದ 103 ರನ್ ಸಿಡಿಸಿದ ರೋಹಿತ್ ಶರ್ಮಾ 2019ರ ವಿಶ್ವಕಪ್‍ನಲ್ಲಿ 5ನೇ ಶತಕ ಸಿಡಿಸಿ ಈ ಸಾಧನೆ ಮಾಡಿದ ಮೊದಲಿಗರಾದರು. ಅಲ್ಲದೇ ಟೂರ್ನಿಯಲ್ಲಿ ಒಟ್ಟು 647 ರನ್ ಹೊಡೆದು ಸಚಿನ್ ಬಳಿಕ ಈ ಸಾಧನೆ ಮಾಡಿದ ಭಾರತೀಯ ಆಟಗಾರ ಎನಿಸಿಕೊಂಡರು. 2003ರ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ 673 ರನ್ ಸಿಡಿಸಿದ್ದರು.

    ಇತ್ತ ರೋಹಿತ್ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದರೆ ಮತ್ತೊಂದು ಬದಿಯಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಸಾಥ್ ನೀಡಿದ ಕೆಎಲ್ ರಾಹುಲ್ ಕೂಡ 118 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ನೆರವಿನಿಂದ 111 ರನ್ ಸಿಡಿಸಿದರು. ರಾಹುಲ್ ವಿಶ್ವಕಪ್ ನಲ್ಲಿ ಸಿಡಿಸಿದ ಮೊದಲ ಶತಕ ಇದಾದರೆ, ವೃತ್ತಿ ಜೀವನದ 2ನೇ ಏಕದಿನ ಶತಕ ಇದಾಗಿದೆ.

    ಕೊಹ್ಲಿ ದಾಖಲೆ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತದ ಪರ ಮತ್ತೊಂದು ದಾಖಲೆ ನಿರ್ಮಿಸಿದರು. ವಿಶ್ವಕಪ್‍ನಲ್ಲಿ ಕಡಿಮೆ ಇನ್ನಿಂಗ್ಸ್ ಸಾವಿರ ರನ್ ಸಂಪಾದಿಸಲು 5 ರನ್ ಗಳಿಸಿದ ವೇಳೆ ವಿಶ್ವಕಪ್ ಟೂರ್ನಿಯಲ್ಲಿ 1 ಸಾವಿರ ರನ್ ಪೂರ್ಣಗೊಳಿಸಿದರು. ಆ ಮೂಲಕ ಮಾಜಿ ಆಟಗಾರ ಸಚಿನ್ ಹಾಗೂ ಗಂಗೂಲಿ ಅವರ ಸಾಲಿಗೆ ಸೇರಿದರು. ಪಂದ್ಯಕ್ಕೂ ಮುನ್ನ ವಿಶ್ವಕಪ್ ಕ್ರಿಕೆಟ್‍ನ 2011, 2015, 2019ರ ಟೂರ್ನಿಗಳಲ್ಲಿ ಕೊಹ್ಲಿ ಇದುವರೆಗೂ 24 ಇನ್ನಿಂಗ್ಸ್ ಮೂಲಕ 995 ರನ್ ಗಳಿಸಿದ್ದರು. ಸಚಿನ್ 44 ಇನ್ನಿಂಗ್ಸ್ ಗಳಲ್ಲಿ 2,278 ರನ್ ಸಿಡಿಸಿದ್ದು, ಆ ಬಳಿಕ ಗಂಗೂಲಿ ಅವರು 1,006 ರನ್ ಗಳಿಸಿ ಭಾರತ ಪರ ವಿಶ್ವಕಪ್ ಟೂರ್ನಿಯಲ್ಲಿ ಸಾಧನೆ ಮಾಡಿದ್ದಾರೆ. ಊಳಿದಂತೆ 15 ಇನ್ನಿಂಗ್ಸ್ ಗಳಲ್ಲಿ 874 ರನ್ ಗಳಿಸಿರುವ ರೋಹಿತ್ ಶರ್ಮಾ, 21 ಇನ್ನಿಂಗ್ಸ್ ಗಳಲ್ಲಿ 860 ರನ್ ಗಳಿಸಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ಪಂದ್ಯದಲ್ಲಿ ರೋಹಿತ್ ಶರ್ಮಾ ಪಂದ್ಯದಲ್ಲಿ ಶತಕ ಗಳಿಸಿದರೆ ಅವರು 1 ಸಾವಿರ ರನ್ ಪೂರೈಸಿದ ಆಟಗಾರರ ಪಟ್ಟಿ ಸೇರಲಿದ್ದಾರೆ.

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಶ್ರೀಲಂಕಾ ತಂಡ ಮ್ಯಾಥ್ಯೂಸ್‍ 128 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ನೆರವಿನಿಂದ 113 ರನ್ , ತಿರಿಮಣೆ (53 ರನ್) ಅರ್ಧ ಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತ್ತು. ಭಾರತ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬುಮ್ರಾ 3 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಪಾಂಡ್ಯ, ಜಡೇಜಾ, ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.

  • ರೋ’ಹಿಟ್’ ಭರ್ಜರಿ ಶತಕ – ವಿಶ್ವಕಪ್‍ನಲ್ಲಿ ಐತಿಹಾಸಿಕ ದಾಖಲೆ

    ರೋ’ಹಿಟ್’ ಭರ್ಜರಿ ಶತಕ – ವಿಶ್ವಕಪ್‍ನಲ್ಲಿ ಐತಿಹಾಸಿಕ ದಾಖಲೆ

    ಲಂಡನ್: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಾಧನೆ ಮಾಡಿದ್ದು, ಆಮೂಲಕ ವಿಶ್ವಕಪ್ ಟೂರ್ನಿಯೊಂದರಲ್ಲಿ 5 ಶತಕ ಸಿಡಿಸಿದ ಐತಿಹಾಸಿಕ ದಾಖಲೆ ಬರೆದಿದ್ದಾರೆ.

    ರೋಹಿತ್ ಶರ್ಮಾ ಅವರು ಚೇಸಿಂಗ್ ವೇಳೆಯೇ 3 ಶತಕಗಳನ್ನು ಗಳಿಸಿದ್ದು ವಿಶೇಷವಾಗಿದ್ದು, ಇದೇ ಸಂದರ್ಭದಲ್ಲಿ 600 ರನ್ ಸಿಡಿಸಿದ ಸಾಧನೆಯನ್ನು ಮಾಡಿದ್ದಾರೆ. ಅಲ್ಲದೇ ವೃತ್ತಿ ಜೀವನದಲ್ಲಿ 27 ಏಕದಿನ ಶತಕ ಸಿಡಿಸಿದ್ದಾರೆ. ಅಲ್ಲದೇ ವಿಶ್ವಕಪ್ ಕ್ರಿಕೆಟ್ ಟೂರ್ನಿಗಳಲ್ಲಿ 6 ಶತಕ ಸಿಡಿಸಿದ ರೋಹಿತ್ ಸಚಿನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ 45 ಪಂದ್ಯಗಳಿಂದ ಸಚಿನ್ 6 ವಿಶ್ವಕಪ್‍ಗಳಲ್ಲಿ 6 ಶತಕ ಸಿಡಿಸಿದ್ದರೆ, 2 ವಿಶ್ವಕಪ್ ಆಡಿರುವ ರೋಹಿತ್ 16 ಪಂದ್ಯಗಳಿಂದ 06 ಶತಕ ಸಿಡಿಸಿದ್ದಾರೆ.

    ಪಂದ್ಯದಲ್ಲಿ ಮೊದಲ ವಿಕೆಟ್‍ಗೆ ರೋಹಿತ್ ಶರ್ಮಾ, ರಾಹುಲ್ ಜೋಡಿ 189 ರನ್ ಜೊತೆಯಾಟ ನೀಡಿದ್ದು, 2019ರ ವಿಶ್ವಕಪ್ ಕ್ರಿಕೆಟ್‍ನಲ್ಲಿ ಆಂಭಿಕರಾಗಿ 1 ಸಾವಿರ ಪ್ಲಸ್ ರನ್ ಸಿಡಿಸಿದ ಸಾಧನೆ ಮಾಡಿದರು. ಈ ಹಿಂದೆ 2007 ವಿಶ್ವಕಪ್ ನಲ್ಲಿ ಆಸೀಸ್ ಜೋಡಿ 1142 ರನ್ ಸಿಡಿಸಿದ್ದು, ಅಲ್ಲದೇ ಇಂದಿನ ಟೂರ್ನಿಯಲ್ಲೂ ಆಸೀಸ್ ಆರಂಭಿಕ ಜೋಡಿ 1 ಸಾವಿರ ಪ್ಲಸ್ ರನ್ ಗಳಿಸಿದೆ.

    ರೋಹಿತ್ ಶರ್ಮಾ ಈ ಟೂರ್ನಿಯಲ್ಲಿ ಒಟ್ಟು 647 ರನ್ ಹೊಡೆದಿದ್ದಾರೆ. 2003ರ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ 673 ರನ್ ಸಿಡಿಸಿದ್ದರು. ಸದ್ಯ ಸಚಿನ್ ಹೊರತು ಪಡಿಸಿ ರೋಹಿತ್ 600 ಪ್ಲಸ್ ಸಿಡಿಸಿದ ಭಾರತದ ಆಟಗಾರ ಸಾಧನೆ ಮಾಡಿದ್ದಾರೆ. ಮ್ಯಾಥ್ಯೂ ಹೇಡನ್ 659 ರನ್, ಶಕಿಬ್ ಅಲ್ ಹಸನ್ 606 ರನ್ ಗಳಿಸಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    ಯಾವ ತಂಡದ ವಿರುದ್ಧ ಎಷ್ಟು ರನ್?
    122* – ದಕ್ಷಿಣ ಆಫ್ರಿಕಾ
    57 – ಆಸ್ಟ್ರೇಲಿಯಾ
    140 – ಪಾಕಿಸ್ತಾನ
    1 – ಅಫ್ಘಾನಿಸ್ತಾನ
    18 – ವೆಸ್ಟ್ ಇಂಡೀಸ್
    102 – ಇಂಗ್ಲೆಂಡ್
    104 – ಬಾಂಗ್ಲಾದೇಶ
    103 – ಶ್ರೀಲಂಕಾ