Tag: sachin tendulkar

  • ಸಚಿನ್ ಟೆಸ್ಟ್ ವಿದಾಯದ ಪಂದ್ಯ ನೆನೆದು ಕಣ್ಣೀರಾಗಿದ್ದ ವಿಂಡೀಸ್ ಆಟಗಾರರು

    ಸಚಿನ್ ಟೆಸ್ಟ್ ವಿದಾಯದ ಪಂದ್ಯ ನೆನೆದು ಕಣ್ಣೀರಾಗಿದ್ದ ವಿಂಡೀಸ್ ಆಟಗಾರರು

    ಮುಂಬೈ: ಕ್ರಿಕೆಟ್ ದಿಗ್ಗಜ, ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರ ಟೆಸ್ಟ್ ವಿದಾಯದ ಪಂದ್ಯವು ಅವರ ಶತಕೋಟಿ ಭಾರತೀಯ ಅಭಿಮಾನಿಗಳಿಗೆ ಹಾಗೂ ಕ್ರೀಡಾಂಗಣದಲ್ಲಿ ಹಾಜರಿದ್ದವರಿಗೆ ಮಾತ್ರವೇ ಭಾವನಾತ್ಮಕ ಕ್ಷಣವಲ್ಲ. ಅಂದು ಭಾರತದ ವಿರುದ್ಧ ಆಡಿದ ತಂಡದ ಕೆಲವು ಆಟಗಾರರಿಗೂ ಸಹ ಇದೊಂದು ಭಾವನಾತ್ಮಕ ಕ್ಷಣವಾಗಿದೆ.

    ಮಾಸ್ಟರ್ ಬ್ಲಾಸ್ಟರ್ ಅವರು ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ವೃತ್ತಿಜೀವನದ 200ನೇ ಟೆಸ್ಟ್ ಮತ್ತು ವಿದಾಯದ ಪಂದ್ಯವನ್ನು 2013ರ ನವೆಂಬರ್ 14-16ರ ನಡುವೆ ತವರು ಮೈದಾನ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಿದ್ದರು. ಸಚಿನ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಇಳಿದಾಗ ಮೈದಾನದಲ್ಲಿದ್ದ ವಿಂಡೀಸ್ ಆಟಗಾರರು ಮತ್ತು ಇಬ್ಬರು ಅಂಪೈರ್ ಗಳು ಗೌರವ ಸೂಚಿಸಿ ಅವರನ್ನು ಸ್ವಾಗತಿಸಿದ್ದರು. ಬಳಿಕ ಬ್ಯಾಟಿಂಗ್ ಮಾಡಿದ ತೆಂಡೂಲ್ಕರ್ ತಮ್ಮ ಅಂತಿಮ ಇನ್ನಿಂಗ್ಸ್ ನಲ್ಲಿ 74 ರನ್ ಗಳಿಸಿದ್ದರು.

    ಈ ವೇಳೆ ವಿಂಡೀಸ್ ವಿರುದ್ಧದ ಭಾರತವು ಇನ್ನಿಂಗ್ಸ್ ಮತ್ತು 126 ರನ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು. ನಂತರ ಸಚಿನ್ ತಮ್ಮ ಪ್ರಸಿದ್ಧ ನಿವೃತ್ತಿ ಭಾಷಣ ಮಾಡಿದರು. ಇದು ನೋಡಿವರೆಲ್ಲರೂ ಕಣ್ಣೀರು ಸುರಿಸಿದರು.

    ಈ ಕ್ಷಣವನ್ನು ನೆನೆದು ವೆಸ್ಟ್ ಇಂಡೀಸ್‍ನ ಆಲ್‍ರೌಂಡರ್ ಕಿರ್ಕ್ ಎಡ್ವರ್ಡ್ಸ್ ಮತ್ತು ಸ್ಟಾರ್ ಓಪನರ್ ಕ್ರಿಸ್ ಗೇಲ್, ಅಂದು ನಮ್ಮ ಕಣ್ಣೀರನ್ನು ತಡೆಹಿಡಿಯುವುದು ಕಷ್ಟಕರವಾಗಿತ್ತು. ಸಚಿನ್ ಕ್ರಿಕೆಟ್ ಮೈದಾನದಲ್ಲಿ ಕಾಣುವುದು ಇದು ಅಂತಿಮ ಸಮಯ ಎಂದು ತಿಳಿದು ಭಾವುಕರಾಗಿದ್ದೇವು ಎಂದು ಹೇಳಿಕೊಂಡಿದ್ದಾರೆ.

    “ಸಚಿನ್ ಅವರ ಟೆಸ್ಟ್ ವಿದಾಯದ ಪಂದ್ಯದ ವೇಳೆ ನಾನು ವೆಸ್ಟ್ ಇಂಡೀಸ್ ತಂಡದಲ್ಲಿದ್ದೆ. ಆ ಗಳಿಗೆ ನನಗೆ ತುಂಬಾ ಭಾವನಾತ್ಮಕವಾಗಿತ್ತು. ಸಚಿನ್ ಅವರನ್ನು ಸ್ವಾಗತಿಸುವಾಗ ಗೇಲ್ ಪಕ್ಕದಲ್ಲಿ ನಾನು ಇದ್ದೆ. ಇಬ್ಬರೂ ಕಣ್ಣೀರು ಹಾಕಿದ್ದೇವು” ಎಂದು ಕಿರ್ಕ್ ಎಡ್ವರ್ಡ್ಸ್  ಹೇಳಿದ್ದಾರೆ.

    ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ 1989ರ ನವೆಂಬರ್ 15ರಂದು ವಿರುದ್ಧ ನಡೆದ ಟೆಸ್ಟ್ ಪಂದ್ಯದ ಮೂಲಕ ಸಚಿನ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಲಿಟಲ್ ಮಾಸ್ಟರ್ ಭಾರತ ಪರ ದಾಖಲೆಯ 200 ಟೆಸ್ಟ್, 463 ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಿದ್ದಾರೆ. ಸುದೀರ್ಘ ಸಮಯದಲ್ಲಿ ಟೆಸ್ಟ್ ನಲ್ಲಿ 15,921 ರನ್ ಮತ್ತು ಏಕದಿನ ಕ್ರಿಕೆಟ್‍ನಲ್ಲಿ 18,426 ರನ್ ಗಳಿಸಿದ್ದಾರೆ. ಇವೆರಡೂ ವಿಶ್ವ ದಾಖಲೆಗಳಾಗಿವೆ. ಜೊತೆಗೆ ಸಚಿನ್ ಅವರು ಟೆಸ್ಟ್ ನಲ್ಲಿ 51 ಹಾಗೂ ಏಕದಿನ ಪಂದ್ಯದಲ್ಲಿ 49 ಶತಕ ಸಿಡಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 100 ಶತಕಗಳನ್ನು ಗಳಿಸಿದ ಅದ್ಭುತ ದಾಖಲೆಯನ್ನು ಮಾಸ್ಟರ್ ಬ್ಲಾಸ್ಟರ್ ಹೊಂದಿದ್ದಾರೆ.

  • ಅರ್ಜುನ್ ಬೌಲಿಂಗ್ ಎದುರಿಸುವುದು ಕಷ್ಟ: ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ

    ಅರ್ಜುನ್ ಬೌಲಿಂಗ್ ಎದುರಿಸುವುದು ಕಷ್ಟ: ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ

    ಲಂಡನ್: ಯುವ ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಎದುರಿಸುವುದು ಕಷ್ಟ ಎಂದು ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಡೇನಿಯಲ್ ವ್ಯಾಟ್ ತಿಳಿಸಿದ್ದಾರೆ.

    ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜುನ್ ಹೆಚ್ಚಿನ ಸಮಯವನ್ನು ಇಂಗ್ಲೆಂಡ್‍ನಲ್ಲಿ ಕಳೆಯುತ್ತಾರೆ. ಇಂಗ್ಲೆಂಡ್ ಕ್ರಿಕೆಟ್ ಆಟಗಾರರಿಗೆ ತರಬೇತಿ ವೇಳೆ ಬೌಲಿಂಗ್ ಮಾಡುವ ಅವಕಾಶವನ್ನು ಅರ್ಜುನ್ ಪಡೆದಿದ್ದಾರೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಜೊತೆಯೂ ಅರ್ಜುನ್ ಹಲವು ಬಾರಿ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.

    ತರಬೇತಿ ವೇಳೆ ಇಂಗ್ಲೆಂಡ್ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಡೇನಿಯಲ್ ವ್ಯಾಟ್‍ರೊಂದಿಗೆ ಸ್ನೇಹವನ್ನು ಬೆಳೆಸಿಕೊಂಡಿದ್ದರು. ಸದ್ಯ ಅರ್ಜನ್ ಬೌಲಿಂಗ್ ಕುರಿತು ಡೇನಿಯಲ್ ಆಸಕ್ತಿಕರ ಮಾಹಿತಿಯನ್ನು ಹಂಚಿಕೊಂಡಿದ್ದು, ಅರ್ಜುನ್ ನಾನು ಉತ್ತಮ ಸ್ನೇಹಿತರು. ಲಾಡ್ರ್ಸ್ ಕ್ರೀಡಾಂಗಣದಲ್ಲಿ ತರಬೇತಿ ಪಡೆಯಲು ಅರ್ಜುನ್ ಬರುತ್ತಿದ್ದರು. ಆಗ ಅರ್ಜುನ್ ಹೊಸ ಚೆಂಡಿನೊಂದಿಗೆ ಬೌಲ್ ಮಾಡಿದರೆ ಎದುರಿಸಲು ಭಯವಾಗುತ್ತಿತ್ತು. ನಾನು ಎಸೆಯುವ ಬೌನ್ಸರ್ ಗಳು ನಿಮ್ಮ ತಲೆಗೆ ಬಡಿಯುತ್ತವೆ ಎಂದು ಅರ್ಜುನ್ ಹೇಳುತ್ತಿದ್ದರು. ಅವರ ವೇಗದ ಬೌಲಿಂಗ್ ಎದುರಿಸಿ ಬ್ಯಾಟಿಂಗ್ ಮಾಡುವುದು ಬಹಳ ಕಷ್ಟ ಎಂದು ಡೇನಿಯಲ್ ಹೇಳಿದ್ದಾರೆ.

     

    View this post on Instagram

     

    Great to be back in Melbourne again ???? ????

    A post shared by Danielle Wyatt (@danniwyatt28) on

    ಶೀಘ್ರವೇ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ನೋಡುವ ಅವಕಾಶವಿದೆ. ಅಲ್ಲದೇ ನನಗೆ ಅರ್ಜುನ್ ಅವರ ತಾಯಿ ಅಂಜಲಿರೊಂದಿಗೆ ಹಲವು ಬಾರಿ ಮಾತನಾಡಿದ್ದೇನೆ. ಸಚಿನ್ ದಂಪತಿ ಇಂಗ್ಲೆಂಡ್ ಬಂದರೆ ತಪ್ಪದೇ ಭೇಟಿ ಮಾಡುತ್ತೇನೆ ಎಂದು ಡೇನಿಯಲ್ ವ್ಯಾಟ್ ತಿಳಿಸಿದ್ದಾರೆ. 2017ರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಡೇನಿಯಲ್ ವ್ಯಾಟ್ ಇಂಗ್ಲೆಂಡ್ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂಗ್ಲೆಂಡ್ ಪರ ಇದುವರೆಗೂ 74 ಏಕದಿನ, 109 ಟಿ20 ಪಂದ್ಯಗಳನ್ನು ಡೇನಿಯಲ್ ವ್ಯಾಟ್ ಆಡಿದ್ದಾರೆ.

     

    View this post on Instagram

     

    A post shared by Arjun Tendulkar (@arjuntendulkar24) on

  • ಏನಾಗ್ತಿದೆ, ಒಬ್ಬರ ಹಿಂದೆ ಮತ್ತೊಬ್ಬರು ಹೋಗ್ತಿದ್ದಾರೆ- ಸುಶಾಂತ್ ನಿಧನಕ್ಕೆ ವೀರು ಸಂತಾಪ

    ಏನಾಗ್ತಿದೆ, ಒಬ್ಬರ ಹಿಂದೆ ಮತ್ತೊಬ್ಬರು ಹೋಗ್ತಿದ್ದಾರೆ- ಸುಶಾಂತ್ ನಿಧನಕ್ಕೆ ವೀರು ಸಂತಾಪ

    ನವದೆಹಲಿ: ಬಾಲಿವುಡ್ ಪ್ರತಿಭಾವಂತ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ವೀರೆಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಇಫ್ರಾನ್ ಪಠಾಣ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

    ವೀರೆಂದ್ರ ಸೆಹ್ವಾಗ್ ಟ್ವೀಟ್ ಮಾಡಿ, ಜೀವನ ತುಂಬಾ ಚಿಕ್ಕದಾಗುತ್ತಿದೆ. ಏನಾಗುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಒಬ್ಬರ ಹಿಂದೆ ಮತ್ತೊಬ್ಬರು ಸಾಗುತ್ತಲೇ ಇದ್ದಾರೆ. ಸುಶಾಂತ್ ಸಿಂಗ್ ಒಳ್ಳೆಯ ವ್ಯಕ್ತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

    ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಸಚಿನ್ ತೆಂಡೂಲ್ಕರ್, ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸುದ್ದಿ ಕೇಳಿ ಆಘಾತ ಮತ್ತು ದುಃಖವಾಗಿದೆ. ಅವರು ಯುವ ಮತ್ತು ಪ್ರತಿಭಾವಂತ ನಟ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನೋವವನ್ನು ಭರಿಸುವ ಶಕ್ತಿ ಸಿಗಲಿ. ಸುಶಾಂತ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.

    ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಇಫ್ರಾನ್ ಪಠಾಣ್ ಟ್ವೀಟ್ ಮಾಡಿ, ಸುಶಾಂತ್ ಸಿಂಗ್ ರಾಜ್‍ಪುತ್ ಅವರ ಆತ್ಮಹತ್ಯೆಯ ಬಗ್ಗೆ ಕೇಳಿ ನನಗೆ ತುಂಬಾ ಆಘಾತವಾಗಿದೆ ಮತ್ತು ದುಃಖವಾಗಿದೆ. ಸುಶಾಂತ್ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

    ಇತ್ತೀಚೆಗೆ ತಾಜ್ ಹೋಟೆಲ್ ಜಿಮ್‍ನಲ್ಲಿ ಕೊನೆಯದಾಗಿ ಸುಶಾಂತ್ ಜೊತೆಗೆ ಮಾತನಾಡಿದ್ದೆ. ಕೇದಾರನಾಥದಲ್ಲಿ ಅವರ ಕೆಲಸಕ್ಕಾಗಿ ನಾನು ಅವರನ್ನು ಹೊಗಳಿದ್ದೆ. ಆಗ ಅವರು ಪ್ರೀತಿಯ ಸಹೋದರ  ‘ಚಿಚೋರ್’ ಸಿನಿಮಾವನ್ನು ನೋಡಿ (ಭಾಯ್ ಪ್ಲೀಸ್ ಡು ವಾಚ್ ಚಿಚೋರ್) ನೀವು ಅದನ್ನು ಇಷ್ಟಪಡುತ್ತೀರಿ ಎಂದಿದ್ದರು ಎಂದು ಇಫ್ರಾನ್ ಪಠಾಣ್ ನೆನಿದ್ದಾರೆ.

    ಇದೇ ವರ್ಷ ಮಾರ್ಚ್ ನಲ್ಲಿ ಖ್ಯಾತ ಹಾಸ್ಯ ನಟ ಸಂತಾನಂ ಸ್ನೇಹಿತ ನಟ, ವೈದ್ಯ ಸೇತುರಾಮನ್ (36) ಹೃದಯಾಘಾತದಿಂದ ಮೃತಪಟ್ಟಿದ್ದರು. ಬಾಲಿವುಡ್‍ನ ಹೆಮ್ಮೆಯ ನಟ ಇರ್ಫಾನ್ ಖಾನ್ (53) ಬೆನ್ನಲ್ಲೇ ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ (36) ಸಾವನ್ನಪ್ಪಿದ್ದರು. ಈಗ ಸುಶಾಂತ್ ಸಿಂಗ್ ಕೇವಲ 34 ವರ್ಷ ಮೃತಪಟ್ಟಿರುವುದು ಸಿನಿಮಾ ರಂಗಕ್ಕೆ ಆಘಾತವನ್ನುಂಟು ಮಾಡಿದೆ.

  • ಸಚಿನ್‍ರ 100ನೇ ‘ಶತಕ’ ತಪ್ಪಿಸಿದ್ದಕ್ಕೆ ಕೊಲೆ ಬೆದರಿಕೆ ಕರೆ ಬಂದಿದ್ವು: ಟಿಮ್ ಬ್ರೆಸ್ನನ್

    ಸಚಿನ್‍ರ 100ನೇ ‘ಶತಕ’ ತಪ್ಪಿಸಿದ್ದಕ್ಕೆ ಕೊಲೆ ಬೆದರಿಕೆ ಕರೆ ಬಂದಿದ್ವು: ಟಿಮ್ ಬ್ರೆಸ್ನನ್

    ಲಂಡನ್: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ನೂರನೇ ಶತಕ ಗಳಿಸುವ ಅವಕಾಶ ತಪ್ಪಿಸಿದ್ದಕ್ಕೆ ಅವರ ಅಭಿಮಾನಿಗಳು ನನಗೆ ಹಾಗೂ ಅಂಪೈರ್ ರಾಡ್ ಟಕ್ಕರ್ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದರು ಎಂದು ಇಂಗ್ಲೆಂಡ್‍ನ ಮಾಜಿ ವೇಗದ ಬೌಲರ್ ಟಿಮ್ ಬ್ರೆಸ್ನನ್ ಹೇಳಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದಾಗಿ ಕ್ರೀಡಾಪಟುಗಳು ಅನೇಕ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ತಾವು ದ್ವಿಶತಕ ಗಳಿಸಿದ್ದಾಗ ಪತ್ನಿ ಯಾಕೆ ಕಣ್ಣೀರು ಹಾಕಿದ್ದರು ಎನ್ನುವ ವಿಚಾರವನ್ನು ತಿಳಿಸಿದ್ದರು. ಸದ್ಯ ಟಿಮ್ ಬ್ರೆಸ್ನನ್ ಅವರು ವಿಶೇಷ ಸಂದರ್ಭವನ್ನು ನೆನೆದಿದ್ದಾರೆ.

    2011ರ ಓವೆಲ್ ಟೆಸ್ಟ್ ಪಂದ್ಯದಲ್ಲಿ ಸಚಿನ್ 91 ರನ್ ಗಳಿಸಿದ್ದರು. ಕೇವಲ 9 ರನ್ ಬಾರಿಸಿದ್ದರೆ 100ನೇ ಶತಕ ದಾಖಲಾಗುತ್ತಿತ್ತು. ಆದರೆ ಟಿಮ್ ಬ್ರೆಸ್ನನ್ ಬೌಲಿಂಗ್‍ನಲ್ಲಿ ಮಾಸ್ಟರ್ ಬ್ಲಾಸ್ಟರ್ ಎಲ್‍ಬಿಡಬ್ಲ್ಯೂನಿಂದ ವಿಕೆಟ್ ಒಪ್ಪಿಸಿದರು. ಚೆಂಡು ಲೆಗ್‍ಸ್ಟಂಪ್ ಮಿಸ್ ಆದಂತೆ ಕಂಡು ಬಂದಿದ್ದರಿಂದ ನನಗೆ ಹಾಗೂ ಅಂಪೈರ್ ಟಕ್ಕರ್ ಅವರಿಗೆ ಬೆದರಿಕೆಯ ಕರೆಗಳು ಬಂದಿದ್ದವು ಎಂದು ಬಹಿರಂಗಪಡಿಸಿದ್ದಾರೆ.

    “ಅಂಪೈರ್ ಹಾಗೂ ನಾನು ಬೆದರಿಕೆ ಕರೆಯಿಂದ ಆತಂಕಕ್ಕೆ ಒಳಗಾಗಿದ್ದೆವು. ಅಷ್ಟೇ ಅಲ್ಲದೆ ನನಗೆ ಟ್ವಿಟರ್ ನಲ್ಲಿ ಹಾಗೂ ಅಂಪೈರ್ ಟಕ್ಕರ್ ಅವರ ಮನೆಯ ವಿಳಾಸಕ್ಕೆ ಬೆದರಿಕೆಯ ಪತ್ರಗಳು ಬಂದಿದ್ದವು. ಸಚಿನ್ ವಿಕೆಟ್ ಆಗಿದ್ದರೂ ಔಟ್ ಎಂದು ತೀರ್ಪು ಕೊಡಲು ಎಷ್ಟು ಧೈರ್ಯ ನಿಮಗೆ ಎಂದು ಟಕ್ಕರ್ ಅವರಿಗೆ ಕೇಳಲಾಗಿತ್ತು. ಇದರಿಂದಾಗಿ ಅವರು ಪೊಲೀಸ್ ಭದ್ರತೆ ಪಡೆದುಕೊಂಡಿದ್ದರು ಎಂದು ಟಿಮ್ ಬ್ರೆಸ್ನನ್ ಹೇಳಿದ್ದಾರೆ.

    ಇಂಗ್ಲೆಂಡ್ ಪರ 23 ಟೆಸ್ಟ್, 85 ಏಕದಿನ ಪಂದ್ಯ ಹಾಗೂ 34 ಟಿ20 ಪಂದ್ಯಗಳನ್ನಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ತಮ್ಮ 99ನೇ ಶತಕವನ್ನು 2011ರ ವಿಶ್ವಕಪ್‍ನಲ್ಲಿ ದಕ್ಚಿಣ ಆಫ್ರಿಕಾ ವಿರುದ್ಧ ಸಿಡಿಸಿದ್ದರು. ನಂತರ 2012ರ ಏಷ್ಯಾಕಪ್‍ನಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ 100ನೇ ಶತಕ ಪೂರ್ಣಗೊಳಿಸಿದ್ದರು.

  • ಮಗನ ಹೇರ್ ಕಟ್ ಮಾಡಿದ ಸಚಿನ್- ವಿಡಿಯೋ

    ಮಗನ ಹೇರ್ ಕಟ್ ಮಾಡಿದ ಸಚಿನ್- ವಿಡಿಯೋ

    ಮುಂಬೈ: ಬ್ಯಾಟಿಂಗ್ ಕೌಶಲ್ಯದಿಂದ ವಿಶ್ವದಾದ್ಯಂತ ಪ್ರಸಿದ್ಧರಾಗಿರುವ, ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಅವರು ಲಾಕ್‍ಡೌನ್‍ನಿಂದಾಗಿ ಮಗನ ಹೇರ್ ಕಟಿಂಗ್ ಮಾಡಿದ್ದಾರೆ.

    ಈ ಹಿಂದೆ ಸಚಿನ್ ಸ್ವತಃ ತಮ್ಮ ಕೂದಲನ್ನು ಕತ್ತರಿಸಿಕೊಂಡಿದ್ದರು. ಇದಾದ ಒಂದು ತಿಂಗಳ ನಂತರ, ತಮ್ಮ ಮಗ ಅರ್ಜುನ್ ತೆಂಡೂಲ್ಕರ್ ಹೇರ್ ಕಟ್ ಮಾಡಿದ್ದಾರೆ. ತಮ್ಮ 20 ವರ್ಷದ ಮಗನ ಹೇರ್ ಕಟಿಂಗ್ ಮಾಡುತ್ತಿರುವ ವಿಡಿಯೋವನ್ನು ಲಿಟಲ್ ಮಾಸ್ಟರ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಇಂದು ಹಂಚಿಕೊಂಡಿದ್ದಾರೆ. ಜೊತೆಗೆ ಈ ವೇಳೆ ಸಹಾಯಕ್ಕೆ ನಿಂತ ಮಗಳು ಸಾರಾಗೆ ಸಚಿನ್ ಧನ್ಯವಾದ ತಿಳಿಸಿದ್ದಾರೆ.

    ತಂದೆಯಾಗಿ ನೀವು ಎಲ್ಲವನ್ನೂ ಮಾಡಬೇಕಾಗುತ್ತದೆ. ನಿಮ್ಮ ಮಕ್ಕಳೊಂದಿಗೆ ಆಟವಾಡುವುದು, ಅವರೊಂದಿಗೆ ಜಿಮ್ ಮಾಡುವುದು ಅಥವಾ ಅವರ ಕೂದಲನ್ನು ಕತ್ತರಿಸುವುದು ಎಂದು ಸಚಿನ್ ಬರೆದುಕೊಂಡಿದ್ದಾರೆ. ಜೊತೆಗೆ ಕಟಿಂಗ್ ಹೇಗಾದರೂ ನೀನು ಯಾವಾಗಲೂ ಸುಂದರವಾಗಿ ಕಾಣುತ್ತಿಯಾ ಅರ್ಜುನ್. ನನ್ನ ಈ ಸಲೂನ್‍ಗೆ ಸಹಾಯಕಳಾದ ಸಾರಾಗೆ ವಿಶೇಷ ಧನ್ಯವಾದಗಳು ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

    ಕೊರೊನಾವೈರಸ್ ಲಾಕ್‍ಡೌನ್‍ನ ನಾಲ್ಕನೇ ಹಂತವನ್ನು ಘೋಷಿಸಿದ ಬಳಿಕ ಸರ್ಕಾರವು ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿದ್ದರೂ, ಸಲೂನ್‍ಗಳನ್ನು ತೆರೆಯಲು ಇನ್ನೂ ಅವಕಾಶ ನೀಡಿಲ್ಲ. ಇದರಿಂದಾಗಿ ಜನರು ತಮ್ಮ ಕುಟುಂಬ ಸದಸ್ಯರಿಗೆ ಹೇರ್ ಕಟಿಂಗ್ ಮಾಡುವುದನ್ನು ಬಿಟ್ಟರೆ ಬೇರೆ ದಾರಿಯೇ ಇಲ್ಲದಂತಾಗಿದೆ. ಹೀಗಾಗಿ ಸಚಿನ್ ತೆಂಡೂಲ್ಕರ್ ಅವರು ಮಗ ಅರ್ಜುನ್ ಅವರ ಹೇರ್ ಕಟಿಂಗ್ ಮಾಡಿದ್ದಾರೆ.

    https://www.instagram.com/p/CAXhC5klnr-/

    ಕೇಂದ್ರ ಸರ್ಕಾರವು ಮಾರ್ಚ್ ನಲ್ಲಿ ಮೊದಲ ಹಂತದ ಲಾಕ್‍ಡೌನ್ ಘೋಷಿಸಿದ ಕೆಲವೇ ದಿನಗಳ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಕೂದಲನ್ನು ಪತ್ನಿ ಅನುಷ್ಕಾ ಶರ್ಮಾ ಕತ್ತರಿಸಿದ್ದರು.

  • ಸಚಿನ್ 190 ರನ್‍ಗೆ ಎಲ್‍ಬಿ ಆಗಿದ್ರೂ ಪ್ರೇಕ್ಷಕರ ಭಯದಿಂದ ಅಂಪೈರ್ ಔಟ್ ನೀಡಿಲ್ಲ – ಸ್ಟೇನ್

    ಸಚಿನ್ 190 ರನ್‍ಗೆ ಎಲ್‍ಬಿ ಆಗಿದ್ರೂ ಪ್ರೇಕ್ಷಕರ ಭಯದಿಂದ ಅಂಪೈರ್ ಔಟ್ ನೀಡಿಲ್ಲ – ಸ್ಟೇನ್

    ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಸಚಿನ್ ದ್ವಿಶತಕ ಹೊಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು. ಆದರೆ ಈ ಪಂದ್ಯದಲ್ಲಿ ಸಚಿನ್ 190 ರನ್ ಗಳಿಸಿದ್ದಾಗ ಔಟಾಗಿದ್ದರೂ ಅಂಪೈರ್ ಔಟ್ ನೀಡಲಿಲ್ಲ. ಅಂಪೈರ್ ಔಟ್ ನೀಡದ್ದಕ್ಕೆ ಕಾರಣ ಪ್ರೇಕ್ಷಕರು ಎಂದು ಆಫ್ರಿಕಾದ ವೇಗಿ ಡೇಲ್ ಸ್ಟೇನ್  ಹೇಳಿದ್ದಾರೆ.

    ಕೋವಿಡ್ 19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಆಟಗಾರು ಕ್ರೀಡಾ ವಾಹಿನಿಗಳ ಜೊತೆ ಮಾತನಾಡಿ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿಯಾಗಿ ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ ಕಾರ್ಯಕ್ರಮದಲ್ಲಿ ಜೇಮ್ಸ್ ಆಂಡರ್ಸನ್ ಅವರ ಜೊತೆ ಮಾತನಾಡಿದ ಸ್ಟೇನ್ ಸಚಿನ್ ದ್ವಿಶತಕ ಸಿಡಿಸುವ ಮೊದಲೇ ಔಟಾಗಿದ್ದರು. ಆದರೆ ಅಂಪೈರ್ ಇಯಾನ್ ಗೌಲ್ಡ್ ನನ್ನ ಮನವಿಯನ್ನು ಪುರಸ್ಕರಿಸಲಿಲ್ಲ ಎಂದು ಹೇಳಿದ್ದಾರೆ.

    ಗ್ವಾಲಿಯರ್ ನಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ಮೊದಲ ದ್ವಿಶತಕ ಸಿಡಿಸಿದ್ದರು. ಈ ವೇಳೆ 190 ರನ್ ಗಳಿಸಿದ ಸಂದರ್ಭದಲ್ಲಿ ಸಚಿನ್ ಎಲ್‍ಬಿಯಾಗಿದ್ದರು. ಈ ವಿಚಾರ ಅಂಪೈರ್ ಇಯಾನ್ ಗೌಲ್ಡ್‍ಗೆ ತಿಳಿದಿತ್ತು. ಪ್ರೇಕ್ಷಕರ ಕೂಗಾಟಕ್ಕೆ ಹೆದರಿ ನಾಟೌಟ್ ನೀಡಿದ್ದರು. ಪಂದ್ಯ ಮುಗಿದ ಬಳಿಕ ನಾನು ನೇರವಾಗಿ ಅಂಪೈರ್ ಬಳಿ ಹೋಗಿ, ಯಾಕೆ ನನ್ನ ಮನವಿಯನ್ನು ಪುರಸ್ಕರಿಸಲಿಲ್ಲ ಎಂದು ಪ್ರಶ್ನಿಸಿದೆ. ಇದಕ್ಕೆ ಇಯಾನ್ ಗೌಲ್ಡ್, ಸುತ್ತಲೂ ಒಮ್ಮೆ ನೋಡಿ “ಔಟ್ ತೀರ್ಪು ನೀಡಿದ್ದರೆ ನಾನು ಹೋಟೆಲಿಗೆ ಮರಳುತ್ತಿರಲಿಲ್ಲ” ಎಂದು ಉತ್ತರಿಸಿದ್ದ ವಿಚಾರವನ್ನು ಈಗ ಸ್ಟೇನ್ ನೆನಪು ಮಾಡಿಕೊಂಡಿದ್ದಾರೆ.

    2010ರ ಫೆ. 24 ರಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 50 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 401 ರನ್ ಗಳಿಸಿತ್ತು.

    ಸೆಹ್ವಾಗ್ 9, ದಿನೇಶ್ ಕಾರ್ತಿಕ್ 79, ಯೂಸೂಫ್ ಪಠಾನ್ 36, ಧೋನಿ ಔಟಾಗದೇ 68 ರನ್( 35 ಎಸೆತ, 7 ಬೌಂಡರಿ, 4 ಸಿಕ್ಸರ್) ಹೊಡೆದಿದ್ದರು. ಆರಂಭಿಕನಾಗಿ ಕಣಕ್ಕೆ ಇಳಿದಿದ್ದ ಸಚಿನ್ ಔಟಾಗದೇ 147 ಎಸೆತದಲ್ಲಿ 200 ರನ್ ಹೊಡೆದಿದ್ದರು. ಈ ವಿಶ್ವ ದಾಖಲೆಯ ಇನ್ನಿಂಗ್ಸ್ ನಲ್ಲಿ 3 ಸಿಕ್ಸರ್, 25 ಬೌಂಡರಿಯನ್ನು ಹೊಡೆದಿದ್ದರು. 100 ರನ್ ರನ್ ಗಳು ಬೌಂಡರಿ ಮೂಲಕವೇ ಬಂದಿತ್ತು. ಕಠಿಣ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ 42.5 ಓವರ್ ಗಳಲ್ಲಿ 248 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತ 153 ರನ್ ಗಳಿಂದ ಜಯಗಳಿಸಿತ್ತು.

  • ಕಣ್ಣು ಮುಚ್ಚಿ ಸವಾಲು ಪೂರ್ಣಗೊಳಿಸಿ ಯುವಿಗೆ ಚಮಕ್ ಕೊಟ್ಟ ಲಿಟಲ್ ಮಾಸ್ಟರ್

    ಕಣ್ಣು ಮುಚ್ಚಿ ಸವಾಲು ಪೂರ್ಣಗೊಳಿಸಿ ಯುವಿಗೆ ಚಮಕ್ ಕೊಟ್ಟ ಲಿಟಲ್ ಮಾಸ್ಟರ್

    ನವದೆಹಲಿ: ಭಾರತದ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ನೀಡಿದ ಸವಾಲನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪೂರ್ಣ ಮಾಡುವ ಮೂಲಕ ಸಚಿನ್ ತೆಂಡೂಲ್ಕರ್ ಅವರು ನಾನೊಬ್ಬ ಕ್ರಿಕೆಟ್ ಲೆಜೆಂಡ್ ಎಂಬುದನ್ನು ಮೊತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

    ಕೊರೊನಾ ಲಾಕ್‍ಡೌನ್ ನಡುವೆ ಮನೆಯಲ್ಲಿ ಇರುವ ಯುವರಾಜ್ ಸಿಂಗ್ ಅವರು ಗುರುವಾರ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಸಚಿನ್ ತೆಂಡೂಲ್ಕರ್,ರೋಹಿತ್ ಶರ್ಮಾ ಮತ್ತು ಹರ್ಭಜನ್ ಸಿಂಗ್ ಅವರಿಗೆ ಕೀಪ್ ಈಟ್ ಆಪ್ ಎಂಬ ಜಾಲೆಂಜ್ ಕೊಟ್ಟಿದ್ದರು. ಈ ಚಾಲೆಂಜ್ ಅನ್ನು ಸ್ವೀಕರಿಸಿರುವ ಸಚಿನ್ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸವಾಲನ್ನು ಪೂರ್ಣಗೊಳಿಸಿದ್ದಾರೆ.

    https://twitter.com/YUVSTRONG12/status/1260931470048129024

    ಯುವರಾಜ್ ಸಿಂಗ್ ಕೊಟ್ಟ ಕೀಪ್ ಈಟ್ ಆಪ್ ಚಾಲೆಂಜ್‍ನಲ್ಲಿ ಕ್ರಿಕೆಟ್ ಬ್ಯಾಟಿನ ಒಂದು ಕಡೆ ಅಂಚಿನಲ್ಲಿ ಬಾಲನ್ನು ಬ್ಯಾಲೆನ್ಸ್ ಮಾಡಬೇಕಿತ್ತು. ಈ ಸವಾಲನ್ನು ನೀಡಿದ್ದ ಯುವಿ ಈ ಸವಾಲು ಸಚಿನ್ ಮತ್ತು ರೋಹಿತ್ ಗೆ ಸುಲಭವಾಗುತ್ತದೆ. ಆದರೆ ಹರ್ಭಜನ್ ಸಿಂಗ್ ಅವರಿಗೆ ಕಷ್ಟವಾಗುತ್ತದೆ. ಟ್ರೈ ಮಾಡಿ ಎಂದು ಹೇಳಿದ್ದರು. ಈ ಸವಾಲನ್ನು ಸ್ವೀಕರಿಸಿ ಕಣ್ಣು ಮುಚ್ಚಿ ಬಾಲನ್ನು ಬ್ಯಾಲೆನ್ಸ್ ಮಾಡಿರುವ ಸಚಿನ್ ಮತ್ತೆ ಯವರಾಜ್ ಅವರಿಗೆ ಇದನ್ನು ಮಾಡುವಂತೆ ಸವಾಲ್ ಹಾಕಿದ್ದಾರೆ.

    https://www.instagram.com/p/CAPuZhxlGbk/?utm_source=ig_embed

    ಕಣ್ಣಿಗೆ ಬಟ್ಟೆಕಟ್ಟಿಕೊಂಡು ಚಾಲೆಂಜ್ ಮಾಡಿರುವ ಸಚಿನ್, ಯುವಿ ನೀವು ತುಂಬ ಸುಲಭವಾದ ಆಯ್ಕೆಯನ್ನು ನನಗೆ ನೀಡಿದ್ದೀರಿ. ಆದರೆ ನಾನು ನಿಮಗೆ ಕಠಿಣವಾದ ಆಯ್ಕೆಯನ್ನು ನೀಡುತ್ತಿದ್ದೇನೆ. ಹಾಗೂ ನಿಮ್ಮನ್ನು ಈ ಚಾಲೆಂಜ್‍ಗೆ ನಾಮಿನೇಟ್ ಮಾಡಿದ್ದೇನೆ. ಬನ್ನಿ ನನಗಾಗಿ ಈ ಸವಾಲನ್ನು ಮಾಡಿ ಎಂದು ಸಚಿನ್ ಅವರು ಹೇಳಿದ್ದಾರೆ. ಜೊತೆಗೆ ನಾನು ನಿನಗೆ ವಾಪಸ್ ಚಾಲೆಂಜ್ ಮಾಡುತ್ತಿದ್ದೇನೆ ಯುವರಾಜ್ ಸಿಂಗ್, ಆದರೆ ನಾನು ಒಂದು ಟ್ವಿಸ್ಟ್ ಕೊಟ್ಟಿದ್ದೇನೆ. ನಾನು ಎಲ್ಲರೂ ಈ ಚಾಲೆಂಜ್ ಮಾಡಲು ಕೇಳುತ್ತೇನೆ ಸೇಫ್ ಆಗಿ ಮನೆಯಲ್ಲೇ ಇರಿ ಎಂದು ಬರೆದುಕೊಂಡಿದ್ದಾರೆ.

    ಇದರ ಜೊತೆಗೆ ಸಚಿನ್ ಅವರು ಇನ್ನೊಂದು ವಿಡಿಯೋ ಆಪ್ಲೋಡ್ ಮಾಡಿದ್ದು, ಆದರಲ್ಲಿ ಯುವರಾಜ್ ಸಿಂಗ್ ಅವರಿಗೆ ಚಾಲೆಂಜ್ ಮಾಡಲು ಒಂದು ಸಲಹೆಯನ್ನು ನೀಡಿದ್ದಾರೆ. ನಾನು ಕಣ್ಣಿಗೆ ಕಟ್ಟಿಕೊಂಡಿರುವ ಬಟ್ಟೆ ಬಹಳ ತೆಳುವಾಗಿದೆ. ಈ ರೀತಿ ನೀವು ಚಾಲೆಂಜ್ ಅನ್ನು ಪೂರ್ಣಗೊಳಿಸಬಹುದು ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಯುವರಾಜ್ ಸಿಂಗ್ ಅವರು, ನಾನು ಈ ಸವಾಲನ್ನು ಮಾಡಲು ಒಂದು ವಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

    ಸುಮಾರು 60 ವರ್ಷದ ನಂತರ ಕೊರೊನಾದಿಂದ ಕ್ರಿಕೆಟ್ ತನ್ನೆಲ್ಲ ಚುಟುವಟಿಗಳನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಈ ನಡುವೆ ಮನೆಯಲ್ಲಿ ಕುಳಿತಿರುವ ಕ್ರಿಕೆಟ್ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇದ್ದಾರೆ. ಲೈವ್‍ನಲ್ಲಿ ಬಂದು ಅಭಿಮಾನಿಗಳ ಬಳಿ ಮಾತನಾಡುತ್ತಿದ್ದಾರೆ. ಜೊತೆಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

  • ಪಾಕ್‍ಗೆ ಹೆಚ್ಚು ಬಾರಿ ಸೋಲುಣಿಸಿದ ಭಾರತದ ನಾಯಕರಲ್ಲಿ ಅಜರುದ್ದೀನ್ ಟಾಪ್

    ಪಾಕ್‍ಗೆ ಹೆಚ್ಚು ಬಾರಿ ಸೋಲುಣಿಸಿದ ಭಾರತದ ನಾಯಕರಲ್ಲಿ ಅಜರುದ್ದೀನ್ ಟಾಪ್

    – ವಿಶ್ವಕಪ್ ಲೆಕ್ಕದಲ್ಲಿ ಧೋನಿಗೆ ಅಗ್ರಸ್ಥಾನ

    ನವದೆಹಲಿ: ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾವನ್ನು ಮುನ್ನಡೆಸುವುದು ಪ್ರತಿಯೊಬ್ಬ ಭಾರತೀಯ ನಾಯಕನ ದೊಡ್ಡ ಕನಸು. ಈ ಮೊದಲು ಉಭಯ ತಂಡಗಳ ನಡುವೆ ಸರಣಿ ನಡೆಯುತ್ತಿತ್ತು. ಆದರೆ 2012-13ರಿಂದ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ.

    ಭಾರತವು ವಿಶ್ವಕಪ್ ಮತ್ತು ಏಷ್ಯಾ ಕಪ್ ಸೇರಿದಂತೆ ಪ್ರಮುಖ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಪಾಕ್ ವಿರುದ್ಧ ಆಡುತ್ತದೆ. ಅಷ್ಟೇ ಅಲ್ಲದೆ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಶೀಘ್ರದಲ್ಲೇ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡುವ ಸಾಧ್ಯತೆಯಿಲ್ಲ. ಪಾಕಿಸ್ತಾನವು ಭಾರತದ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿದೆ. ಆದರೆ ವಿಶ್ವಕಪ್‍ನಲ್ಲಿ ಎಲ್ಲಾ ಏಳು ಪಂದ್ಯಗಳನ್ನು ಸೋತಿದೆ.

    ಮೂರು ವಿಶ್ವಕಪ್‍ಗಳಲ್ಲಿ ಭಾರತದ ನಾಯಕತ್ವ ವಹಿಸಿದ್ದ ಮೊಹಮ್ಮದ್ ಅಜರುದ್ದೀನ್, ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು 3 ಸೋಲಿಸಿದ್ದರು. ಅಷ್ಟೇ ಅಲ್ಲದೆ ಅಜರುದ್ದೀನ್ ಅವರ ನಾಯಕತ್ವದಲ್ಲೇ ಭಾರತ ತಂಡವು ಪಾಕಿಸ್ತಾನಕ್ಕೆ 25 ಏಕದಿನ ಪಂದ್ಯಗಳಲ್ಲಿ ಸೋಲುಣಿಸಿದೆ. ಈ ಮೂಲಕ ಪಾಕ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಬಾರಿ ಭಾರತ ತಂಡವನ್ನು ಗೆಲ್ಲಿಸಿದ ದಾಖಲೆ ಅಜರುದ್ದೀನ್ ಅವರ ಹೆಸರಿನಲ್ಲಿದೆ.

    ಈ ಪಟ್ಟಿಯಲ್ಲಿ 21 ಬಾರಿ ತಂಡಕ್ಕೆ ಗೆಲುವು ತಂದುಕೊಟ್ಟ ಸಚಿನ್ ತೆಂಡೂಲ್ಕರ್ ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ಎಂ.ಎಸ್.ಧೋನಿ ಇದ್ದಾರೆ. ಅವರು ಪಾಕಿಸ್ತಾನದ ವಿರುದ್ಧದ 18 ಏಕದಿನ ಪಂದ್ಯದಲ್ಲಿ ಜಯ ದಾಖಲಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ಸೌರವ್ ಗಂಗೂಲಿ ಅವರು ತಮ್ಮ ನಾಯಕತ್ವದಲ್ಲಿ 17 ಬಾರಿ ಗೆದ್ದಿದ್ದಾರೆ.

    2007ರಲ್ಲಿ ನಾಯಕತ್ವವನ್ನು ವಹಿಸಿಕೊಂಡಿದ್ದ ಎಂ.ಎಸ್.ಧೋನಿ, ಪಾಕಿಸ್ತಾನ ವಿರುದ್ಧದ ಇತರ ನಾಯಕರಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಏಕೆಂದರೆ ಅವರ ನೇತೃತ್ವದಲ್ಲಿ ಭಾರತ ತಂಡವು ಪಾಕ್ ವಿರುದ್ಧ 2011 ಮತ್ತು 2015ರ ವಿಶ್ವಕಪ್ ಟೂರ್ನಿಯಲ್ಲಿ ಸೇರಿ ಒಟ್ಟು 11 ಬಾರಿ ಜಯಗಳಿಸಿದೆ. 2011ರಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿ ಫೈನಲ್‍ಗೆ ಲಗ್ಗೆ ಇಟ್ಟಿತ್ತು. 2015ರ ವಿಶ್ವಕಪ್‍ನಲ್ಲಿಯೂ ಭಾರತವು ಪಾಕ್ ವಿರುದ್ಧ ಅದ್ಭುತ ಜಯದೊಂದಿಗೆ ಸಾಗಿತ್ತು. ಆದರೆ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‍ನಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ 180 ರನ್ ಗಳಿಂದ ಗೆದ್ದು ಬೀಗಿತ್ತು.

    ವಿಶ್ವಕಪ್‍ನಲ್ಲಿ ಪಾಕಿಸ್ತಾನದ ವಿರುದ್ಧ ತಂಡಕ್ಕೆ ಗೆಲುವು ತಂದುಕೊಟ್ಟ ನಾಯಕ ಪಟ್ಟಿಯಲ್ಲಿ ಎಂ.ಎಸ್.ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಧೋನಿ ನಂತರ ಸ್ಥಾನದಲ್ಲಿ ಅಜರುದ್ದೀನ್ ಅವರಿದ್ದಾರೆ. ಅವರ ನೇತೃತ್ವದ ಟೀಂ ಇಂಡಿಯಾ 1992, 1996 ಮತ್ತು 1999ರ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನವನ್ನು 9 ಬಾರಿ ಸೋಲಿಸಿತ್ತು. ನಾಯಕನಾಗಿ ಹೆಚ್ಚು ರನ್ ಗಳಿಸದ ಸಚಿನ್ ತೆಂಡೂಲ್ಕರ್ ಅವರ ನಾಯಕತ್ವದಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ 8 ಬಾರಿ ವಿಶ್ವಪಕ್ ಟೂರ್ನಿಯ ಪಂದ್ಯಗಳಲ್ಲಿ ಜಯಗಳಿಸಿತ್ತು. ಗಂಗೂಲಿ ಅವರ ನೇತೃತ್ವದಲ್ಲಿ ಭಾರತ 7 ಪಂದ್ಯಗಳನ್ನು ಗೆದ್ದಿದೆ.

    2003ರ ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಮುನ್ನಡೆಸಿದ್ದ ಸೌರವ್ ಗಂಗೂಲಿ ಅವರು ಪಾಕಿಸ್ತಾನ ವಿರುದ್ಧ ಜಯ ಸಾಧಿಸಿದ್ದರು. ಇದಲ್ಲದೆ ಅವರು 2004ರಲ್ಲಿ ಪಾಕಿಸ್ತಾನ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದಕ್ಕೆ 3-2 ಅಂತರದಲ್ಲಿ ಗೆಲುವು ತಂದುಕೊಟ್ಟಿದ್ದರು. ಅದೇ ಪ್ರವಾಸದಲ್ಲಿ ಭಾರತವು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತ್ತು.

  • ಮಕ್ಕಳು ಸೇರಿ 4,000 ಬಡ ಜನರಿಗೆ ಆರ್ಥಿಕ ನೆರವು ನೀಡಿದ ಕ್ರಿಕೆಟ್ ದೇವರು

    ಮಕ್ಕಳು ಸೇರಿ 4,000 ಬಡ ಜನರಿಗೆ ಆರ್ಥಿಕ ನೆರವು ನೀಡಿದ ಕ್ರಿಕೆಟ್ ದೇವರು

    ಮುಂಬೈ: ಕ್ರಿಕೆಟ್ ದೇವರು, ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಮಕ್ಕಳು ಸೇರಿದಂತೆ 4,000 ಬಡ ಜನರಿಗೆ ಆರ್ಥಿಕ ನೆರವು ನೀಡಿದ್ದಾರೆ.

    ಲಿಟಲ್ ಮಾಸ್ಟರ್ ತೆಂಡೂಲ್ಕರ್ ಅವರು ಮುಂಬೈ ಮೂಲದ ಲಾಭರಹಿತ ಸಂಸ್ಥೆಯಾದ ಹೈ5 ಯೂತ್ ಫೌಂಡೇಶನ್‍ಗೆ ದೇಣಿಗೆ ನೀಡಿದ್ದಾರೆ. ಆದರೆ ಎಷ್ಟು ಹಣ ನೀಡಿದ್ದಾರೆ ಎಂದು ಅವರಾಗಲಿ ಅಥವಾ ಫೌಂಡೇಶನ್ ಆಗಲಿ ಮಾಹಿತಿ ನೀಡಿಲ್ಲ.

    “ಕ್ರೀಡೆ ಸಹಾನುಭೂತಿಯನ್ನು ಉತ್ತೇಜಿಸುತ್ತದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಿರಿ. ನಿಮಗೆ ಧನ್ಯವಾದಗಳು ಸಚಿನ್ ತೆಂಡೂಲ್ಕರ್. ನಮ್ಮ ಕೋವಿಡ್-19 ನಿಧಿಗೆ ನೀವು ನೀಡಿದ ಉದಾರ ಕೊಡುಗೆ ಬಿಎಂಸಿ ಶಾಲೆಗಳ ಮಕ್ಕಳು ಸೇರಿದಂತೆ 4,000 ಬಡವರ ಜನರಿಗೆ ಆರ್ಥಿಕವಾಗಿ ಸಹಾಯ ಮಾಡಲು ನಮಗೆ ಸಹಾಯವಾಗುತ್ತದೆ. ನಮ್ಮ ಉದಯೋನ್ಮುಖ ಕ್ರೀಡಾಪಟುಗಳಿಂದ ನಿಮಗೆ ಧನ್ಯವಾದಗಳು, ಲಿಟಲ್ ಮಾಸ್ಟರ್!” ಎಂದು ಹೈ5 ಯೂತ್ ಫೌಂಡೇಶನ್, ಸಚಿನ್ ಅವರಿಗೆ ಕೃತಜ್ಞತೆ ಸಲ್ಲಿಸಿ ಟ್ವೀಟ್ ಮಾಡಿದೆ.

    47ರ ಹರೆಯದ ಸಚಿನ್ ಸಂಸ್ಥೆಗೆ ಉತ್ತರಿಸಿ, “ದಿನಗೂಲಿ ಪಡೆಯುವವರ ಕುಟುಂಬಗಳನ್ನು ಬೆಂಬಲಿಸುವಲ್ಲಿ ನಿಮ್ಮ ಪ್ರಯತ್ನಕ್ಕಾಗಿ ಹೈ5 ತಂಡಕ್ಕೆ ಶುಭಾಶಯಗಳು” ಎಂದು ತಿಳಿಸಿದ್ದಾರೆ. ಭಾರತದ ಮಾಜಿ ಬ್ಯಾಟ್ಸ್‌ಮನ್‌ ಸಚಿನ್ ಅವರು ಏಪ್ರಿಲ್‍ನಲ್ಲಿ ಅಪ್ನಾಲಯ ಎಂಬ ಎನ್‍ಜಿಒ ಮೂಲಕ ಮುಂಬೈನ ಶಿವಾಜಿ ನಗರ ಮತ್ತು ಗೋವಂಡಿ ಪ್ರದೇಶದಲ್ಲಿ ಸುಮಾರು 5,000 ಜನರಿಗೆ ಒಂದು ತಿಂಗಳು ದಿನಸಿ ನೀಡುವ ಭರವಸೆ ನೀಡಿದ್ದರು.

    ಇದಕ್ಕೂ ಮುನ್ನ ಲಿಟಲ್ ಮಾಸ್ಟರ್ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಪಿಎಂ-ಕೇರ್ಸ್ ಫಂಡ್ ಮತ್ತು ಮಹಾರಾಷ್ಟ್ರದ ಸಿಎಂ ರಿಲೀಫ್ ಫಂಡ್‍ಗೆ ತಲಾ 25 ಲಕ್ಷ ರೂ. ನೀಡಿದ್ದರು. ಹೆಮ್ಮಾರಿ ಕೊರೊನಾ ವೈರಸ್ ದೇಶದಲ್ಲಿ ಇದುವರೆಗೆ 1,900ಕ್ಕೂ ಜನರನ್ನು ಬಲಿ ಪಡೆದಿದೆ.

  • ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗೋ ಆಸೆ ವ್ಯಕ್ತಪಡಿಸಿದ ಅಖ್ತರ್

    ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗೋ ಆಸೆ ವ್ಯಕ್ತಪಡಿಸಿದ ಅಖ್ತರ್

    ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಭಾರತ ಕ್ರಿಕೆಟ್ ತಂಡದ ಕೋಚ್ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಲೈವ್ ಸಂದರ್ಶನವೊಂದರಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿರುವ ಅಖ್ತರ್, ಅವಕಾಶ ಲಭಿಸಿದರೆ ತಾವು ಟೀಂ ಇಂಡಿಯಾ ಬೌಲಿಂಗ್ ಕೋಚ್ ಸಿದ್ಧ. ಹೆಚ್ಚು ಅಕ್ರಮಣಕಾರಿ, ವೇಗದ ಬೌಲಿಂಗ್ ಮಾಡುವ ಆಟಗಾರರನ್ನು ನನ್ನ ಮಾರ್ಗದರ್ಶನದಲ್ಲಿ ರೂಪಿಸುವ ಸಾಮರ್ಥ್ಯವಿದೆ. ಇದುವರೆಗೂ ನಾನು ಅನುಭವದ ಮೂಲಕ ಪಡೆದಿರುವ ಜ್ಞಾನವನ್ನು ಮತ್ತಷ್ಟು ಮಂದಿಗೆ ಹರಡುವುದು ನನ್ನ ಜವಾಬ್ದಾರಿ ಎಂದು ವಿವರಿಸಿದ್ದಾರೆ.

    ಕೇವಲ ಟೀಂ ಇಂಡಿಯಾ ಬೌಲಿಂಗ್ ಕೋಚ್ ಮಾತ್ರವಲ್ಲದೇ, ಐಪಿಎಲ್‍ನಲ್ಲಿ ಕೆಕೆಆರ್ ತಂಡದ ಕೋಚ್ ಆಗುವುದಕ್ಕೂ ಸಿದ್ಧ ಎಂದಿದ್ದಾರೆ. ಅಂದಹಾಗೆ ಅಖ್ತರ್, ಐಪಿಎಲ್ ಮೊದಲ ಆವೃತ್ತಿಯಲ್ಲಿ ಕೆಕೆಆರ್ ತಂಡದ ಪರ ಆಡಿದ್ದರು. ಇದೇ ವೇಳೆ ತಮ್ಮ ಬಯೋಪಿಕ್ ಸಿನಿಮಾ ಕುರಿತು ಮಾತನಾಡಿರುವ ಅಖ್ತರ್, ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಬಯೋಪಿಕ್‍ನಲ್ಲಿ ನಟಿಸಿದರೆ ಇಷ್ಟ. ತಮ್ಮ ಜೀವನದ ಬಹುದೊಡ್ಡ ಆಸೆಯೂ ಕೂಡ ಹೌದು ಎಂದು ಅಖ್ತರ್ ಹೇಳಿದ್ದಾರೆ.

    ಪಾಕಿಸ್ತಾನದ ಪರ 46 ಟೆಸ್ಟ್ ಪಂದ್ಯಗಳಲ್ಲಿ 176 ವಿಕೆಟ್, 163 ಏಕದಿನ ಪಂದ್ಯಗಳಲ್ಲಿ 247 ವಿಕೆಟ್, 15 ಟಿ20 ಪಂದ್ಯಗಳಲ್ಲಿ 19 ವಿಕೆಟ್ ಗಳಿಸಿದ್ದಾರೆ. ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿ 224 ಪಂದ್ಯಗಳಿಂದ 444 ವಿಕೆಟ್ ಗಳನ್ನು ಅಖ್ತರ್ ಪಡೆದಿದ್ದಾರೆ. 2003ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಅಖ್ತರ್ ಅತ್ಯಂತ ವೇಗದ ಬೌಲಿಂಗ್ ಮಾಡಿದ ದಾಖಲೆ ನಿರ್ಮಿಸಿದ್ದರು. ಅಭಿಮಾನಿಗಳು ಅಖ್ತರ್ ಅವರನ್ನು ‘ರಾವಲ್ಪಿಂಡಿ ಎಕ್ಸ್ ಪ್ರೆಸ್’ ಎಂದೇ ಕರೆಯುತ್ತಾರೆ.

    ಸಚಿನ್ ಅವರೊಂದಿಗೆ ಇದ್ದ ಸ್ನೇಹದ ಕುರಿತು ಮಾತನಾಡಿರುವ ಅಖ್ತರ್, ನಾನು ಸಚಿನ್ ಅವರನ್ನು ನೋಡಿದ್ದೆ. ಆದರೆ ಅವರಿಗೆ ಇರುವ ಜನಪ್ರಿಯತೆ ಅರಿವು ನನಗಿರಲಿಲ್ಲ. ಅವರು ನನ್ನ ಉತ್ತಮ ಸ್ನೇಹಿತ. 1998ರಲ್ಲಿ ನಾನು ಚೆನ್ನೈನಲ್ಲಿದ್ದ ಸಂದರ್ಭದಲ್ಲಿ ಅವರನ್ನು ಅಭಿಮಾನಿಗಳು ‘ಕ್ರಿಕೆಟ್ ದೇವರು’ ಎಂದು ಕರೆಯುತ್ತಾರೆ ಎಂದು ತಿಳಿಯಿತು. ಆ ಟೂರ್ನಿಯ ಸಂದರ್ಭದಲ್ಲಿ ನಾನು ಸಾಧ್ಯವಾದಷ್ಟು ವೇಗವಾಗಿ ಬೌಲಿಂಗ್ ಮಾಡಿದ್ದೆ. ನನ್ನ ಬೌಲಿಂಗ್ ವೇಗವನ್ನು ಭಾರತೀಯರು ಮೆಚ್ಚಿದ್ದರು. ಆದ್ದರಿಂದಲೇ ನನಗೆ ಅಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂದು ಅಖ್ತರ್ ಹೇಳಿದ್ದಾರೆ.