Tag: sachin tendulkar

  • 2009 ರಿಂದ ಪ್ರತಿವರ್ಷ ಮಾಡ್ತಿದ್ದ ಸಾಧನೆ ಈ ವರ್ಷ ಕೊಹ್ಲಿಗೆ ಮಿಸ್

    2009 ರಿಂದ ಪ್ರತಿವರ್ಷ ಮಾಡ್ತಿದ್ದ ಸಾಧನೆ ಈ ವರ್ಷ ಕೊಹ್ಲಿಗೆ ಮಿಸ್

    – ಸಚಿನ್ ದಾಖಲೆ ಬ್ರೇಕ್ ಮಾಡಿದ ವಿರಾಟ್

    ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಒಂದೇ ಒಂದು ಶತಕ ಸಿಡಿಸದೇ ಒಂದು ವರ್ಷವನ್ನು ಪೂರ್ಣಗೊಳಿಸಿದ್ದಾರೆ.

    ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕಗಳ ಮೇಲೆ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. 2008ರಲ್ಲಿ ಭಾರತದ ಪರವಾಗಿ ಏಕದಿನ ಅಂತಾರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ ಕೊಹ್ಲಿ, 2009ರಲ್ಲಿ ತಮ್ಮ ಮೊದಲ ಶತಕವನ್ನು ಸಿಡಿಸಿದ್ದರು. ಸದ್ಯ ಏಕದಿನ ಮಾದರಿಯಲ್ಲಿ 43 ಶತಕ ಸಿಡಿಸಿರುವ ಕೊಹ್ಲಿ, ರನ್ ಮಷಿನ್ ಎಂಬ ಹೆಸರು ಪಡೆದು ಮುನ್ನುಗ್ಗುತ್ತಿದ್ದಾರೆ.

    2009ರಲ್ಲಿ ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಮೊದಲ ಶತಕ ಸಿಡಿಸಿದ್ದರು. ಅಂದಿನಿಂದ ಬರೋಬ್ಬರಿ 11 ವರ್ಷ ಎಲ್ಲ ವರ್ಷದಲ್ಲೂ ಕೊಹ್ಲಿ ಸತತವಾಗಿ ಶತಕವನ್ನು ಸಿಡಿಸಿಕೊಂಡು ಬಂದಿದ್ದರು. ಆದರೆ ಕೊರೊನಾ ಕಾರಣದಿಂದ ಸ್ವಲ್ಪ ಸಮಯದ ಕಾಲ ಕ್ರಿಕೆಟ್ ಚಟುವಟಿಕೆ ನಿಂತು ಹೋಗಿತ್ತು. ನಂತರ ಐಪಿಎಲ್ ಆರಂಭವಾದರೂ ಕೊಹ್ಲಿ ಶತಕ ಸಿಡಿಸಲಿಲ್ಲ. ಈಗ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲೂ ಅವರು ಶತಕ ಸಿಡಿಸುವಲ್ಲಿ ವಿಫಲರಾಗಿದ್ದಾರೆ.

    ಈ ಮೂಲಕ ತಾನು 11 ವರ್ಷದಿಂದ ಕಾಪಾಡಿಕೊಂಡು ಬಂದಿದ್ದ ಸಾಧನೆಯನ್ನು ಈ ವರ್ಷ ಅವರು ಕೈಚೆಲ್ಲಿದ್ದಾರೆ. ಈ ವರ್ಷ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 6 ಮತ್ತು ನ್ಯೂಜಿಲೆಂಡ್ ವಿರುದ್ಧ 4 ಪಂದ್ಯಗಳನ್ನು ಸೇರಿ ಒಟ್ಟು 10 ಏಕದಿನ ಪಂದ್ಯಗಳನ್ನು ಆಡಿದ್ದು, ಈ ಪಂದ್ಯಗಳಲ್ಲಿ 47.88 ಸರಾಸರಿಯಲ್ಲಿ ಒಟ್ಟು 431 ರನ್ ಗಳಿಸಿದ್ದಾರೆ. ಸದ್ಯ ನಡೆಯುತ್ತಿರುವ ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಅರ್ಧಶತಕ ಸಿಡಿಸಿದ ಕೊಹ್ಲಿ ಶತಕ ಸಿಡಿಸುವಲ್ಲಿ ವಿಫಲರಾಗಿದ್ದಾರೆ.

    ಸಚಿನ್ ದಾಖಲೆ ಬ್ರೇಕ್
    ವಿರಾಟ್ ಕೊಹ್ಲಿ ವೇಗವಾಗಿ 12 ಸಾವಿರ ಏಕದಿನ ರನ್ ಗಳಿಸಿದ ಸಚಿನ್ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ. ಸಚಿನ್ ಅವರು 12 ಸಾವಿರ ಏಕದಿನ ರನ್ ಹೊಡೆಯಲು ಬರೋಬ್ಬರಿ 300 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೆ ಕೊಹ್ಲಿ ಕೇವಲ 241 ಇನ್ನಿಂಗ್ಸ್ ನಲ್ಲಿ 12 ಸಾವಿರ ರನ್ ಪೂರೈಸಿ ಸಚಿನ್ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ವೇಗವಾಗಿ 12 ಸಾವಿರ ರನ್ ಗಡಿ ದಾಟಿದ ಆಟಗಾರ ಎನಿಸಿಕೊಂಡಿದ್ದಾರೆ.

  • ಸಚಿನ್ ಮತ್ತೊಂದು ದಾಖಲೆ ಮುರಿಯಲು ಕೊಹ್ಲಿಗೆ ಬೇಕು 23 ರನ್

    ಸಚಿನ್ ಮತ್ತೊಂದು ದಾಖಲೆ ಮುರಿಯಲು ಕೊಹ್ಲಿಗೆ ಬೇಕು 23 ರನ್

    ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮೊತ್ತೊಂದು ದಾಖಲೆ ಮುರಿಯಲು ಸನಿಹದಲ್ಲಿ ಇದ್ದಾರೆ.

    ಈಗಾಗಲೇ ವಿರಾಟ್ ಕೊಹ್ಲಿಯವರು ಏಕದಿನ ಮಾದರಿಯಲ್ಲಿ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಅತ್ಯಂತ ವೇಗವಾಗಿ ಕಡಿಮೆ ಇನ್ನಿಂಗ್ಸ್ ನಲ್ಲಿ 10 ಸಾವಿರ ರನ್ ಪೂರೈಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ನಾಳೆ ನಡೆಯಲಿರುವ ಪಂದ್ಯದಲ್ಲಿ 23 ರನ್ ಗಳಿಸಿದರೆ, ಸಚಿನ್ ಅವರನ್ನು ಹಿಂದಿಕ್ಕಿ ವೇಗವಾಗಿ 12 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

    ಪ್ರಸ್ತುತ ಸಚಿನ್ 300 ಇನ್ನಿಂಗ್ಸ್‍ಗಳಲ್ಲಿ 12 ಸಾವಿರ ಏಕದಿನ ರನ್ ಗಳಿಸಿ, ವೇಗವಾಗಿ 12 ಸಾವಿರ ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. ಸದ್ಯ ಕೊಹ್ಲಿ 250 ಏಕದಿನ ಪಂದ್ಯಗಳ 241 ಇನ್ನಿಂಗ್ಸ್ ಆಡಿ 11,977 ರನ್ ಗಳಿಸಿದ್ದಾರೆ. ಸಚಿನ್ ದಾಖಲೆ ಮುರಿಯಲು ಅವರಿಗೆ 23 ರನ್‍ಗಳ ಅವಶ್ಯಕತೆ ಇದ್ದು, ಬುಧವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ 23 ರನ್‍ಗಳಿಸಿದರೆ, ಕೇವಲ 242 ಇನ್ನಿಂಗ್ಸ್ ಗಳಲ್ಲಿ 12 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.

    12 ಸಾವಿರ ರನ್ ಪೂರ್ಣಗೊಳಿಸಿದ ಆಟಗಾರ ಪಟ್ಟಿಯನ್ನು ನೋಡುವುದಾದರೆ, ಸಚಿನ್ ತೆಂಡೂಲ್ಕರ್ ಅವರು 300 ಇನ್ನಿಂಗ್ಸ್ ಗಳಲ್ಲಿ ಪೂರ್ಣಗೊಳಿಸಿ ಮೊದಲ ಸ್ಥಾನದಲ್ಲಿ ಇದರೆ, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 314 ಇನ್ನಿಂಗ್ಸ್ ನಲ್ಲಿ 12 ಸಾವಿರ ರನ್ ಸಾಧನೆ ಮಾಡಿದ್ದಾರೆ. ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ 336 ಇನ್ನಿಂಗ್ಸ್, ಸನತ್ ಜಯಸೂರ್ಯ 379 ಇನ್ನಿಂಗ್ಸ್ ಮತ್ತು ಮಹೇಲಾ ಜಯವರ್ಧನೆ 399 ಇನ್ನಿಂಗ್ಸ್ ಗಳಲ್ಲಿ 12 ಸಾವಿರ ರನ್ ಹೊಡೆದಿದ್ದಾರೆ.

    ಇದಕ್ಕೂ ಮೊದಲು ಸಚಿನ್ ಅವರ ವೇಗದ 10 ಸಾವಿರ ರನ್ ಪೂರೈಸಿದ ದಾಖಲೆಯನ್ನು ಬ್ರೇಕ್ ಮಾಡಿದ್ದ ಕೊಹ್ಲಿ, ಕೇವಲ 205 ಇನ್ನಿಂಗ್ಸ್ ಗಳಲ್ಲಿ 10 ಸಾವಿರ ರನ್ ಬಾರಿಸಿದ್ದರು. ಸಚಿನ್ 10 ಸಾವಿರ ರನ್ ಹೊಡೆಯಲು 259 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಇದರ ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ 89 ರನ್ ಗಳಿಸಿದ್ದ ಕೊಹ್ಲಿ ವೇಗವಾಗಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 22 ಸಾವಿರ ರನ್ ಹೊಡೆದ ಆಟಗಾರ ಎಂಬ ಸಾಧನೆ ಮಾಡಿದ್ದರು.

  • ಕರ್ನಾಟಕ ಸೇರಿ 6 ರಾಜ್ಯಗಳ ಬಡಮಕ್ಕಳಿಗೆ ಕ್ರಿಕೆಟ್ ದಿಗ್ಗಜ ಸಹಾಯ

    ಕರ್ನಾಟಕ ಸೇರಿ 6 ರಾಜ್ಯಗಳ ಬಡಮಕ್ಕಳಿಗೆ ಕ್ರಿಕೆಟ್ ದಿಗ್ಗಜ ಸಹಾಯ

    ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಕರ್ನಾಟಕ ಸೇರಿ 6 ರಾಜ್ಯಗಳ 100 ಮಂದಿ ಬಡಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಮೂಲಕ ಸಹಾಯ ಮಾಡಲು ಮುಂದಾಗಿದ್ದಾರೆ.

    ಹೌದು. ಸಚಿನ್ ತೆಂಡೂಲ್ಕರ್ ಫೌಂಡೇಶನ್ ಮತ್ತು ಏಕಮ್ ಫೌಂಡೇಶನ್ ಜೊತೆಯಾಗಿ ಸರ್ಕಾರಿ ಮತ್ತು ಟ್ರಸ್ಟ್ ಆಸ್ಪತ್ರೆಗಳಲ್ಲಿ ಗಂಭೀರ ಕಾಯಲೆಗಳಿಂದ ಬಲಳುತ್ತಿರುವ ಹಾಗೂ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚ ಭರಿಸಲಾಗದೇ ಪರದಾಡುತ್ತಿರುವ ಕಡುಬಡಕುಟುಂಬದ ಮಕ್ಕಳಿಗೆ ನೆರವಾಗಲಿದೆ. ಸಚಿನ್ ಅವರು ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಸ್ಸಾಂ, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಬಡ ಕುಟುಂಬದ ಮಕ್ಕಳಿಗೆ ಆರ್ಥಿಕವಾಗಿ ಸಹಾಯ ಮಾಡಲಿದ್ದಾರೆ.

    ಈ ಸಂಬಂಧ ಮಾತನಾಡಿರುವ ಏಕಮ್ ಫೌಂಡೇಶನ್ ಮ್ಯಾನೇಜಿಂಗ್ ಪಾರ್ಟ್ನರ್ ಅಮಿತಾ ಚಟರ್ಜಿ ಮಾತನಾಡಿ, ಸಚಿನ್ ಅವರ ಫೌಂಡೇಶನ್ ಜೊತೆಗೂಡಿ ನಾವು ಕೂಡ ಉತ್ತಮ ಕೆಲಸಗಳಲ್ಲಿ ತೊಡಗಿಕೊಂಡಿದ್ದೇವೆ. ಆರೋಗ್ಯದ ವಿಚಾರದಲ್ಲಿ ಸಚಿನ್ ಅವರು ಬಹಳ ಕಾಳಜಿ ವಹಿಸುತ್ತಾರೆ. ಶ್ರೀಮಂತರು ಮಾತ್ರವಲ್ಲ ಬಡವರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸಿಗಬೇಕು ಎಂಬುದು ಅವರ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

    ಡಿಸೆಂಬರ್ ಆರಂಭದಲ್ಲಿ ಸಚಿನ್ ಫೌಂಡೇಶನ್ ನಿಂದ ಅಸ್ಸಾಂನ ಕರಿಂಗಂಜ್ ಆಸ್ಪತ್ರೆಗೆ ವಿವಿಧ ವೈದ್ಯಕೀಯ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಗಿತ್ತು. ಸುಮಾರು 2 ಸಾವಿರ ಮಕ್ಕಳು ಇದರ ಪ್ರಯೋಜನ ಪಡೆಯುವ ನಿರೀಕ್ಷೆ ಇದೆ.

    ವಿಶ್ವಮಕ್ಕಳ ದಿನಾಚರಣೆಯಂದು ಸಚಿನ್ ಅವರು ಯುನಿಸೆಫ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಶ್ವದ ಭವಿಷ್ಯವನ್ನು ರೂಪಿಸುವಲ್ಲಿ ಮಕ್ಕಳನ್ನು ಪ್ರಮುಖ ಪಾತ್ರ ವಹಿಸುವಂತೆ ಪ್ರೋತ್ಸಾಹಿಸಿದರು.

  • ಆಸೀಸ್ ವಿರುದ್ಧದ ಟೆಸ್ಟ್ ಸರಣಿ – ಓಪನರ್ ಆಗಿ ಕನ್ನಡಿಗನನ್ನು ಆಯ್ಕೆ ಮಾಡಿದ ಸಚಿನ್

    ಆಸೀಸ್ ವಿರುದ್ಧದ ಟೆಸ್ಟ್ ಸರಣಿ – ಓಪನರ್ ಆಗಿ ಕನ್ನಡಿಗನನ್ನು ಆಯ್ಕೆ ಮಾಡಿದ ಸಚಿನ್

    – ರಾಹುಲ್, ಪೃಥ್ವಿ ಶಾ ಆಡಿಸುವುದು ತಂಡಕ್ಕೆ ಬಿಟ್ಟ ವಿಚಾರ

    ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಓಪನರ್ ಆಗಿ ಕಣಕ್ಕಿಳಿಯುವುದು ಸೂಕ್ತ ಎಂದು ಮಾಸ್ಟರ್ ಬ್ಲಸ್ಟರ್ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ-20 ಸರಣಿಯನ್ನು ಆಡಲು ಭಾರತ ಪ್ರವಾಸ ಕೈಗೊಂಡಿದೆ. ಈಗಾಗಲೇ ಅಭ್ಯಾಸ ಆರಂಭ ಮಾಡಿರುವ ಟೀಂ ಇಂಡಿಯಾ, ಆಸೀಸ್ ನೆಲದಲ್ಲೇ ಆಸ್ಟ್ರೇಲಿಯಾವನ್ನು ಬಗ್ಗು ಬಡಿಯುವ ತವಕದಲ್ಲಿದೆ. ಹೀಗಿರುವಾಗ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯವಾಡಿ ತವರಿಗೆ ಮರಳಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರೋಹಿತ್ ಶರ್ಮಾ ಮೊದಲ ಎರಡು ಟೆಸ್ಟ್ ಗೆ ಅಲಭ್ಯವಾಗಲಿದ್ದಾರೆ ಎನ್ನಲಾಗಿದೆ.

    ಈ ರೀತಿಯ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಅವರು ಮಯಾಂಕ್ ಅಗರ್ವಾಲ್ ಟೆಸ್ಟ್ ಇನ್ನಿಂಗ್ಸ್ ಓಪನ್ ಮಾಡುವುದು ಸೂಕ್ತ. ಮಯಾಂಕ್ ನನಗೆ ಗೊತ್ತಿರುವ ಪ್ರಕಾರ ಬಹಳ ಒಳ್ಳೆಯ ಓಪನರ್. ಒಂದು ವೇಳೆ ರೋಹಿತ್ ಕೂಡ ಫಿಟ್ ಆಗಿ ಓಪನ್ ಮಾಡುವಂತಾದರೆ ಭಾರತ ತಂಡಕ್ಕೆ ಒಳ್ಳೆಯ ಆರಂಭ ದೊರೆಯುತ್ತದೆ. ಇವರನ್ನು ಬಿಟ್ಟರೆ ಕೆಎಲ್ ರಾಹುಲ್ ಮತ್ತು ಪೃಥ್ವಿ ಶಾ ಆಡಿಸುವ ನಿರ್ಧಾರ ತಂಡಕ್ಕೆ ಬಿಟ್ಟಿದ್ದು, ಯಾಕೆಂದರೆ ಅವರಿಗೆ ಯಾರು ಫಾರ್ಮ್‍ನಲ್ಲಿ ಇದ್ದಾರೆ ಎಂದು ತಿಳಿದಿರುತ್ತದೆ ಎಂದು ಸಚಿನ್ ಹೇಳಿದ್ದಾರೆ.

    ಮಯಾಂಕ್ ಅಗರ್ವಾಲ್ ಅವರು ಕಳೆದ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಅಂದು ಪೃಥ್ವಿ ಶಾ ಗಾಯಗೊಂಡ ಕಾರಣ ಅವರ ಜಾಗಕ್ಕೆ ಆಯ್ಕೆಯಾದ ಮಯಾಂಕ್, ಆಡಿದ ಮೊದಲ ಪಂದ್ಯದಲ್ಲೇ ಮೆಲ್ಬರ್ನ್ ಮೈದಾನದಲ್ಲಿ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಜೊತೆಗೆ ಈ ಸರಣಿಯಲ್ಲಿ ಒಟ್ಟು 195 ರನ್ ಸಿಡಿಸಿ ನಾನೊಬ್ಬ ಉತ್ತಮ ಟೆಸ್ಟ್ ಆಟಗಾರ ಎಂಬುದನ್ನು ಸಾಬೀತು ಮಾಡಿದ್ದರು.

    ಇದರ ಜೊತೆಗೆ ಈ ಬಾರಿಯ ಐಪಿಎಲ್‍ನಲ್ಲಿ ಉತ್ತಮ ಫಾರ್ಮ್ ನಲ್ಲಿದ್ದ ಮಯಾಂಕ್ ಅಗರ್ವಾಲ್, ತಾವಾಡಿದ 11 ಪಂದ್ಯಗಳಿಂದ ಒಂದು ಭರ್ಜರಿ ಶತಕ ಮತ್ತು ಎರಡು ಅರ್ಧಶತಕದ ನೆರವಿನಿಂದ ಬರೋಬ್ಬರಿ 424 ರನ್ ಸಿಡಿಸಿದ್ದರು. ಇದರಿಂದ ಆಸ್ಟ್ರೇಲಿಯಾದಲ್ಲಿ ನಡೆಯುವ ಮೂರು ಮಾದರಿಯ ಪಂದ್ಯಗಳಿಗೆ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ.

    ಭಾರತ-ಆಸ್ಟ್ರೇಲಿಯಾ ಪ್ರವಾಸ ನವೆಂಬರ್ 27ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಏಕದಿನ ಪಂದ್ಯದ ನಂತರ ಉಭಯ ತಂಡಗಳು ಮೂರು ಪಂದ್ಯಗಳ ಟಿ-20 ಸರಣಿ ಆಡಲಿವೆ. ನಂತರ ಡಿಸೆಂಬರ್ 17ರಿಂದ ಇಂಡಿಯಾ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ.

  • ಟೀಂ ಇಂಡಿಯಾ Vs ಸೆಂಡಾಫ್ ಲಭಿಸದ ಮಾಜಿ ಕ್ರಿಕೆಟಿಗರ ನಡ್ವೆ ಮ್ಯಾಚ್: ಇರ್ಫಾನ್ ಪಠಾಣ್

    ಟೀಂ ಇಂಡಿಯಾ Vs ಸೆಂಡಾಫ್ ಲಭಿಸದ ಮಾಜಿ ಕ್ರಿಕೆಟಿಗರ ನಡ್ವೆ ಮ್ಯಾಚ್: ಇರ್ಫಾನ್ ಪಠಾಣ್

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ ಏಕಾಏಕಿ ನಿವೃತ್ತಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಹಲವು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಎಂಎಸ್ ಧೋನಿಗೆ ವಿದಾಯ ಪಂದ್ಯ ನಡೆಸಿಲ್ಲ ಎಂಬ ಚರ್ಚೆ ಜೋರಾಗಿತ್ತು. ಇದರ ನಡುವೆಯೇ ಇರ್ಫಾನ್ ಪಠಾಣ್ ಅಭಿಮಾನಿಗಳ ಬೇಸರವನ್ನು ದೂರ ಮಾಡಲು ಸಲಹೆಯೊಂದನ್ನು ಮುಂದಿಟ್ಟಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಇರ್ಫಾನ್ ಟೀಂ ಇಂಡಿಯಾ ಆಟಗಾರರು ವರ್ಸಸ್ ಮಾಜಿ ಆಟಗಾರರು ನಡುವೆ ಪಂದ್ಯ ನಡೆಸಲು ಸಲಹೆ ನೀಡಿದ್ದಾರೆ. ಕಳೆದ ಒಂದು ದಶಕದ ಅವಧಿಯಲ್ಲಿ 11 ಮಂದಿ ಕ್ರಿಕೆಟಿಗರು ವಿದಾಯದ ಪಂದ್ಯ ಲಭಿಸದೆ ನಿವೃತ್ತಿಯಾಗಿದ್ದಾರೆ. ಕಳೆದ ವರ್ಷ ಯುವರಾಜ್ ಸಿಂಗ್ ನಿವೃತ್ತಿ ಘೋಷಿಸಿದ್ದರು. ಅದಕ್ಕೂ ಮುನ್ನ ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್ ಸೇರಿದಂತೆ 11 ಮಂದಿ ವಿದಾಯ ಪಂದ್ಯ ಲಭಿಸಲಿಲ್ಲ ಎಂದು ಇರ್ಫಾನ್ ಫಠಾಣ್ ಅಭಿಪ್ರಾಯಪಟ್ಟಿದ್ದು, ಈ ಆಟಗಾರರಿಗೆ ವಿದಾಯ ಪಂದ್ಯ ಏರ್ಪಡಿಸಬೇಕಿದೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

    ಇರ್ಫಾನ್ ಪಠಾಣ್ ನೀಡಿರುವ ಪಟ್ಟಿಯಲ್ಲಿ 2013ರಲ್ಲಿ ನಿವೃತ್ತಿ ಘೋಷಣೆ ಮಾಡಿದ್ದ ಸಚಿನ್ ತೆಂಡೂಲ್ಕರ್ ಅವರಿಗೆ ಸ್ಥಾನ ನೀಡಿಲ್ಲ. ಸಚಿನ್ ನಿವೃತ್ತಿ ವೇಳೆ ಬಿಸಿಸಿಐ ಸುಮಾರು ಕೋಟಿ ರೂ. ಖರ್ಚು ಮಾಡಿ ವಿದಾಯ ಪಂದ್ಯ ಏರ್ಪಡಿಸಿತ್ತು.

    ಇರ್ಫಾನ್ ಪಠಾಣ್ ಪ್ರಕಟಿಸಿದ ತಂಡ: ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಯುವರಾಜ್ ಸಿಂಗ್, ಸುರೇಶ್ ರೈನಾ, ಧೋನಿ, ಇರ್ಫಾನ್ ಪಠಾಣ್, ಅಜಿತ್ ಅಗರ್ಕರ್, ಜಹೀರ್ ಖಾನ್, ಪ್ರಗ್ಯಾನ್ ಓಜಾ.

  • ಮಾರುತಿ 800 ಕಾರನ್ನು ಹುಡುಕುತ್ತಿದ್ದಾರೆ ಸಚಿನ್

    ಮಾರುತಿ 800 ಕಾರನ್ನು ಹುಡುಕುತ್ತಿದ್ದಾರೆ ಸಚಿನ್

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ತಮ್ಮ ಮೊದಲ ಮಾರುತಿ 800 ಕಾರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೇ ದಶಕದ ಹಿಂದಿನ ತಮ್ಮ ಕಾರನ್ನು ಹುಡುಕಿಕೊಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

    ಸಚಿನ್ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಆರಂಭದಲ್ಲಿ ತಮ್ಮ ಮೊದಲ ಕಾರನ್ನು ಖರೀದಿ ಮಾಡಿದ್ದರು. ಮನೆಯವರಿಗೆ ತಿಳಿಯದಂತೆ ಹಲವು ಬಾರಿ ಸಚಿನ್ ತಮ್ಮ ಕಾರಿನಲ್ಲಿ ಸುತ್ತಾಟ ನಡೆಸಿದ್ದರು. ತಮ್ಮ ಬಳಿ ಸದ್ಯ ಹಲವು ಕಾರುಗಳಿದ್ದರೂ ಮಾರುತಿ 800 ಕಾರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಸಚಿನ್ ಹೇಳಿದ್ದಾರೆ. ಇದನ್ನೂ ಓದಿ: ಕೋರ್ಟ್ ಹೇಳಿದ್ರೆ ಹೊರ ನಡೆಯುತ್ತೇವೆ- ಸೌರವ್ ಗಂಗೂಲಿ

    ಈ ಕುರಿತು ಮಾತನಾಡಿರುವ ಸಚಿನ್, ಬಾಲ್ಯದಲ್ಲಿ ನಮ್ಮ ಮನೆಯ ಸಮೀಪವಿದ್ದ ಸಿನಿಮಾ ಹಾಲ್ ಬಳಿ ನಿಲ್ಲಿಸಿದ್ದ ಕಾರುಗಳನ್ನು ನೋಡಲು ಸಹೋದರನೊಂದಿಗೆ ಮನೆಯ ಬಾಲ್ಕನಿಯಲ್ಲಿ ಗಂಟೆಗಳ ಸಮಯ ಕುಳಿತುಕೊಳ್ಳುತ್ತಿದೆ. ನನ್ನ ಮೊದಲ ಕಾರು ಮಾರುತಿ 800. ಆದರೆ ಈಗ ಆ ಕಾರು ನನ್ನ ಬಳಿ ಇಲ್ಲ. ಆ ಕಾರನ್ನು ಪತ್ತೆಮಾಡಲು ಸಾಕಷ್ಟು ಪ್ರಯತ್ನ ಮಾಡಿದ್ದು, ಇದುವರೆಗೂ ಸಾಧ್ಯವಾಗಿಲ್ಲ. ಯಾರಿಗಾದರೂ ಆ ಕಾರಿನ ಬಗ್ಗೆ ಮಾಹಿತಿ ಇದ್ದರೆ ನನಗೆ ತಿಳಿಸಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಣ್ಣ ಪಟ್ಟಣದಲ್ಲಿ ಹುಟ್ಟಿ ದೇಶವೇ ಹೆಮ್ಮೆಪಡುವಂತೆ ಮಾಡಿದ್ದೀರಿ- ಧೋನಿಯನ್ನು ಹೊಗಳಿದ ಮೋದಿ

  • 2011ರ ವಿಶ್ವಕಪ್ ಫೈನಲ್ -ಧೋನಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ಯಾಕೆ?

    2011ರ ವಿಶ್ವಕಪ್ ಫೈನಲ್ -ಧೋನಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ಯಾಕೆ?

    ಬೆಂಗಳೂರು: ಟೀಂ ಇಂಡಿಯಾದ ಮಾಜಿ ಕೂಲ್ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಕೂಲ್ ನಾಯಕ ಧೋನಿಯನ್ನು ಹಿಂಬಾಲಿಸುವ ಮೂಲಕ ಸುರೇಶ್ ರೈನಾ ಅಭಿಮಾನಿಗಳಿಗೆ ಶಾಕ್ ನೀಡಿದ್ರು. 2011ರ ವಿಶ್ವಕಪ್ ನಲ್ಲಿ ಮಹೇಂದ್ರ ಸಿಂಗ್ ಧೋನಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು ಯಾಕೆ ಎಂಬುದನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡಲ್ಕೂರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

    ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಶ್ರೀಲಂಕಾವನ್ನು ಸೋಲಿಸುವ ಮೂಲಕ ಎರಡನೇ ಬಾರಿ ಏಕದಿನ ವಿಶ್ವಕಪ್ ಗೆದ್ದಿತ್ತು. ಅಂದಿನ ನಾಯಕ ಎಂ.ಎಸ್.ಧೋನಿ ಅಜೇಯ 91 ರನ್, ಅದರಲ್ಲೂ ವಿಶೇಷವಾಗಿ ಫಿನಿಶಿಂಗ್ ಶಾಟ್ ಸಿಕ್ಸರ್ ಅನ್ನು ಸಿಡಿಸಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚಳಿಯದಂತೆ ಉಳಿದಿದೆ. ಈ ಪಂದ್ಯದಲ್ಲಿ ಗೌತಮ್ ಗಂಭೀರ್ 97 ರನ್ ಗಳಿಸಿದ್ದರು. ಯುವರಾಜ್ ಸಿಂಗ್ ಟೂರ್ನಿಯುದ್ದಕ್ಕೂ ಉತ್ತಮ ಆಲ್‍ರೌಂಡರ್ ಪ್ರದರ್ಶನ ನೀಡುತ್ತಲೇ ಬಂದಿದ್ದರೂ ಧೋನಿ ಯುವರಾಜ್ ಸಿಂಗ್ ಅವರಿಗಿಂತ ಹೆಚ್ಚು ಕೀರ್ತಿಯನ್ನು ಪಡೆದಿದ್ದು ಯಾಕೆ ಎಂಬುದರ ಬಗ್ಗೆ ಈ ಹಿಂದೆ ಹಲವು ಬಾರಿ ಚರ್ಚೆಗಳು ನಡೆದಿವೆ.

    ಈ ಎಲ್ಲಾ ಪ್ರಶ್ನೆಗಳಿಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಮಾಧ್ಯಮವೊಂದರ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದರು. ಈ ವಿಚಾರವಾಗಿ ಮಾತನಾಡಿದ್ದ ಸಚಿನ್, ಯುವರಾಜ್ ಸಿಂಗ್ ಟೂರ್ನಿಯುದ್ದಕ್ಕೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಕ್ವಾರ್ಟರ್ ಫೈನಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದ್ದರಿಂದ ಅವರು 5ನೇ ಕ್ರಮಾಂಕ, ನಾಯಕ ಧೋನಿ 6ನೇ ಕ್ರಮಾಂಕ ಮತ್ತು ಸುರೇಶ್ ರೈನಾ 7ನೇ ಕ್ರಮಾಂಕದಲ್ಲಿ ಬ್ಯಾಂಟಿಗ್ ಮಾಡಿದ್ದರು ಎಂದು ತಿಳಿಸಿದ್ದರು.

    ಟೀಂ ಇಂಡಿಯಾ ವೇಗದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಫೈನಲ್ ಪಂದ್ಯದಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದ್ದರು. ವಿರೇಂದ್ರ ಸೆಹ್ವಾಗ್ ಉಪುಲ್ ತರಂಗ ಅವರ ಅದ್ಭುತ ಕ್ಯಾಚ್ ಪಡೆದಿದ್ದರು. ಈ ಮೂಲಕ ನಾವು ಶ್ರೀಲಂಕಾವನ್ನು 274 ರನ್‍ಗಳಿಗೆ ಕಟ್ಟಿ ಹಾಕಿದ್ದೆವು. ಆದರೆ ಏಕಾಂಗಿ ಹೋರಾಟ ನಡೆಸಿದ್ದ ಮಹೇಲಾ ಜಯವರ್ಧನೆ 103 ರನ್ ಚಚ್ಚಿದ್ದರು ಎಂದು ನೆನಪು ಮಾಡಿಕೊಂಡಿದ್ದರು.

    ಕ್ವಾರ್ಟರ್-ಫೈನಲ್ ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ನನ್ನ ಮತ್ತು ವೀರು ಜೊತೆಯಾಟದ ನಂತರ ನಾನು ಡ್ರೆಸ್ಸಿಂಗ್ ಕೋಣೆಗೆ ಮರಳಿದೆ. ಆಗ ಫಿಸಿಯೋ ಟೇಬಲ್‍ನಲ್ಲಿ ಮಲಗಿದೆ. ವೀರು ನನ್ನ ಪಕ್ಕದಲ್ಲಿದ್ದರು. ಆಸೀಸ್ ವಿರುದ್ಧ ಗೆಲವು ಸಾಧಿಸಿ ಫೈನಲ್‍ಗೆ ಲಗ್ಗೆ ಇಟ್ಟಾಗ ಸಂತೋಷ ಇಮ್ಮಡಿಯಾಗಿತ್ತು. ಆಗ ನೀವು ನನ್ನ ಪಕ್ಕದಲ್ಲಿ ಕುಳಿತುಕೊಳ್ಳಿ ಎಲ್ಲೂ ಹೋಗಬೇಡಿ ಅಂತ ಸೆಹ್ವಾಗ್ ಅವರಿಗೆ ನಾನು ಹೇಳಿದ್ದೆ ಎಂದು ಸಚಿನ್ ನೆನಪನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದರು.

    ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೌತಮ್ ಮತ್ತು ವಿರಾಟ್ ಉತ್ತಮ ಜೊತೆಯಾಟ ನಡೆದಿತ್ತು. ಎದುರಾಳಿ ತಂಡಕ್ಕಿಂತ ಕೆಲವು ಹೆಜ್ಜೆ ಮುಂದಿಡಲು ನಾವು ಬಯಸಿದ್ದೇವೆ. ಈ ವೇಳೆ ನಾನು ವೀರೂಗೆ, `ಎಡಗೈ ಬ್ಯಾಟ್ಸ್‍ಮನ್ ಗೌತಮ್ ವಿಕೆಟ್ ಒಪ್ಪಿಸಿ ಹೊರ ಬಂದರೆ ಎಡಗೈ ಬ್ಯಾಟ್ಸ್‍ಮನ್ ಯುವಿ ಒಳಗೆ ಹೋಗಬೇಕು. ಒಂದು ವೇಳೆ ಬಲಗೈ ಬ್ಯಾಟ್ಸ್‍ಮನ್ ವಿರಾಟ್ ಹೊರಬಂದರೆ ಬಲಗೈ ಬ್ಯಾಟ್ಸ್‍ಮನ್ ಧೋನಿ ಬ್ಯಾಟಿಂಗ್‍ಗೆ ಇಳಿಯಬೇಕು’ ಎಂದು ಸಲಹೆ ನೀಡಿದ್ದೆ. ಹೀಗಾಗಿ ವಿರಾಟ್ ವಿಕೆಟ್ ಒಪ್ಪಿಸಿ ಹೊರ ಬಂದಿದ್ದರಿಂದ ಯುವಿಯನ್ನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಡ್ರಾಫ್ಟ್ ಮಾಡಲಾಯಿತು. ಏಕೆಂದರೆ ಬಲಗೈ, ಎಡಗೈ ಬ್ಯಾಟಿಂಗ್ ಸಂಯೋಜನೆ ಇರುವುದು ಮುಖ್ಯವಾಗಿತ್ತು. ಯುವಿ ಪ್ರಚಂಡ ರೂಪದಲ್ಲಿದ್ದರು. ಆದರೆ ಶ್ರೀಲಂಕಾದಲ್ಲಿ ಇಬ್ಬರು ಆಫ್ ಸ್ಪಿನ್ನರ್‍ಗಳು ಇದ್ದರು. ಆದ್ದರಿಂದ ಕಾರ್ಯತಂತ್ರದಲ್ಲಿ ಬದಲಾವಣೆ ಇರುತ್ತದೆ ಎಂದು ನಾನು ಭಾವಿಸಿದ್ದೆ ಎಂದು ಸಚಿನ್ ತಂತ್ರಗಾರಿಕೆ ರಿವೀಲ್ ಮಾಡಿದ್ದರು.

    ಈ ತಂತ್ರವನ್ನು ಅನುಸರಿಸುವಂತೆ ಸಲಹೆ ನೀಡಲು ಗ್ಯಾಲರಿ ಹೊರಗೆ ಕುಳಿತಿದ್ದ ಎಂ.ಎಸ್.ಧೋನಿ ಕಡೆಗೆ ತಿರುಗಿ ನೋಡಿದೆ. ಆಗ ಧೋನಿ ನನ್ನ ಬಳಿಗೆ ಬಂದಾಗ ವೀರು, ಕೋಚ್ ಗ್ಯಾರಿ ಕಸ್ಟರ್ನ್ ಹಾಗೂ ನಾನು ಅದರ ಬಗ್ಗೆ ಮಾತನಾಡಿದ್ದೆವು. ಗ್ಯಾರಿ ಸಹ ಒಪ್ಪಿದ್ದರು. ಆಗ ಮೈದಾನಕ್ಕಿಳಿಯಲು ಧೋನಿ ಸಿದ್ಧರಾದರು ಎಂದು ತಿಳಿಸಿದ್ದರು.

  • ಸಚಿನ್, ಗಂಗೂಲಿ 2007ರ ಟಿ20 ವಿಶ್ವಕಪ್ ಆಡದಂತೆ ಒಪ್ಪಿಸಿದ್ದು ದ್ರಾವಿಡ್: ಟೀಂ ಇಂಡಿಯಾ ಮಾಜಿ ಕೋಚ್

    ಸಚಿನ್, ಗಂಗೂಲಿ 2007ರ ಟಿ20 ವಿಶ್ವಕಪ್ ಆಡದಂತೆ ಒಪ್ಪಿಸಿದ್ದು ದ್ರಾವಿಡ್: ಟೀಂ ಇಂಡಿಯಾ ಮಾಜಿ ಕೋಚ್

    ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನೇತೃತ್ವದ ಭಾರತ ತಂಡ 2007ರ ಟಿ20 ವಿಶ್ವಕಪ್ ಗೆದ್ದು ತಂದಿತ್ತು. ಯಾವುದೇ ಅನುಭವವಿಲ್ಲದ ಯುವ ಆಟಗಾರರೊಂದಿಗೆ ಕಣಕ್ಕೆ ಇಳಿದಿದ್ದ ಟೀಂ ಇಂಡಿಯಾ ಅತ್ಯುತ್ತಮ ಪ್ರದರ್ಶನ ನೀಡಿ ವಿಜಯ ಪಾತಕೆ ಹಾರಿಸಿದ್ದರು. ಅಂದು ತಂಡ ದಿಗ್ಗಜ ಆಟಗಾರರಾದ ಸಚಿನ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿರಂತಹ ಅನುಭವಿ ಆಟಗಾರರಿಲ್ಲದೇ ಮೊದಲ ಟಿ20 ವಿಶ್ವಕಪ್ ಗೆಲುವು ಪಡೆದಿತ್ತು. 2007ರ ಏಕದಿನ ಕ್ರಿಕೆಟ್ ಸೋಲಿನ ಬಳಿಕ ನಡೆದಿದ್ದ ಮೊದಲ ಐಸಿಸಿ ಟೂರ್ನಿಗೆ ಬಿಸಿಸಿಐ ಯುವ ತಂಡವನ್ನೇ ಆಯ್ಕೆ ಮಾಡಿತ್ತು.

    ಟಿ20 ಆರಂಭದ ಮೆಗಾ ಟೂರ್ನಿಯಲ್ಲಿ ಆಡದಂತೆ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಅವರನ್ನು ಒಪ್ಪಿಸಿದ್ದು ರಾಹುಲ್ ದ್ರಾವಿಡ್ ಎಂದು ಅದು ತಂಡದ ಕೋಚ್, ಮ್ಯಾನೇಜರ್ ಆಗಿದ್ದ ಲಾಲ್‍ಚಂದ್ ರಾಜಪೂತ್ ತಿಳಿಸಿದ್ದಾರೆ. ಖಾಸಗಿ ವಾಹಿನಿಯೊಂದು ನಡೆಸಿದ ಫೇಸ್‍ಬುಕ್ ಲೈವ್‍ನಲ್ಲಿ ಈ ಕುರಿತು ಲಾಲ್‍ಚಂದ್ ರಾಜಪೂರ್ ಮಾತನಾಡಿದ್ದಾರೆ. ಅಂದು ರಾಹುಲ್ ದ್ರಾವಿಡ್ ನಾಯಕತ್ವದ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಭಾಗಿಯಾಗಿತ್ತು. ಪರಿಣಾಮ ಕೆಲ ಆಟಗಾರರು ನೇರವಾಗಿ ಇಂಗ್ಲೆಂಡ್‍ಗೆ ಆಗಮಿಸಿದ್ದರು. ಅಲ್ಲಿಂದಲೇ ವಿಶ್ವಕಪ್ ಟೂರ್ನಿಗಾಗಿ ಜೋಹನ್ಸ್‌ಬರ್ಗ್ ಗೆ ತೆರಳುವ ಯೋಜನೆ ಮಾಡಿದ್ದರು. ಆದರೆ ಆ ವಿಶ್ವಕಪ್‍ನಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು ನಿರ್ಧರಿಸಲಾಗಿತ್ತು. ದ್ರಾವಿಡ್ ಅವರು ಸಚಿನ್ ಹಾಗೂ ಗಂಗೂಲಿ ಅವರನ್ನು ಇದಕ್ಕೆ ಒಪ್ಪಿಸಿದ್ದರು ಎಂದು ಲಾಲ್‍ಚಂದ್ ಅಂದಿನ ಘಟನೆಯನ್ನು ವಿವರಿಸಿದರು.

    ಯುವ ಆಟಗಾರರ ತಂಡ ವಿಶ್ವಕಪ್ ಗೆದ್ದ ಬಳಿಕ ತಾವು ಏಕೆ ಆಡಲಿಲ್ಲ ಎಂದು ಹಿರಿಯ ಆಟಗಾರರು ಬೇಸರ ವ್ಯಕ್ತಪಡಿಸಿದ್ದರು. ಅದರಲ್ಲೂ ಸಚಿನ್ ಅವರು ಬಹಳ ವರ್ಷ ಕ್ರಿಕೆಟ್ ಆಡಿದ್ದರೂ ಒಂದು ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ಮಾತನ್ನು ಹೇಳಿದ್ದರು. 2011ರ ವಿಶ್ವಕಪ್ ಟೂರ್ನಿಯನ್ನು ಗೆದ್ದರೂ ಸಚಿನ್ ಟೂರ್ನಿಗಾಗಿ ಸಾಕಷ್ಟು ಶ್ರಮವಹಿಸಿದ್ದರು. ಆದರೆ ಯುವ ತಂಡ ಮಾತ್ರ ಮೊದಲ ಪ್ರಯತ್ನದಲ್ಲೇ ವಿಶ್ವಕಪ್ ಗೆದ್ದು ಬೀಗಿತ್ತು ಎಂದು ಲಾಲ್‍ಚಂದ್ ತಮ್ಮ ನೆನಪುಗಳನ್ನು ಹಂಚಿಕೊಂಡರು.

    2007ರ ವಿಶ್ವಕಪ್ ಟೂರ್ನಿ ನನಗೂ, ಧೋನಿ ಅವರಿಗೆ ಲಭಿಸಿದ ಅದ್ಭುತ ಅವಕಾಶ. ಏಕೆಂದರೆ ಕೋಚ್ ಹಾಗೂ ಕ್ಯಾಪ್ಟನ್ ಆಗಿ ಇಬ್ಬರಿಗೂ ಅದು ಮೊದಲ ಅನುಭವಾಗಿತ್ತು. ಪರಿಣಾಮ ತಂಡದ ಡ್ರೆಸ್ಸಿಂಗ್ ರೂಂ ನಲ್ಲೂ ಉತ್ತಮ ವಾತಾವರಣವಿತ್ತು. ಒತ್ತಡಕ್ಕೆ ಒಳಗಾಗದೆ ನಮ್ಮ ಸಾಮರ್ಥ್ಯದ ಮೇಲೆ ಮಾತ್ರ ಗಮನಹರಿಸಿದ್ದೇವು. ಆಟಗಾರರಿಗೆ ಸ್ಫೂರ್ತಿ ನೀಡುವ ಮಾತನಾಡುವ ವೇಳೆ ಅವರು ಒತ್ತಡಕ್ಕೆ ಒಳಗಾಗಲಿಲ್ಲ. ಆ ಗೆಲುವು ಭಾರತ ಕ್ರಿಕೆಟ್ ಬಗ್ಗೆ ಎಲ್ಲರ ದೃಷ್ಟಿಯನ್ನು ಬದಲಿಸಿತ್ತು. ಮೊದಲ ವಿಶ್ವಕಪ್ ಆಡುತ್ತಿದ್ದೇವೆ ಎಂಬ ಆಟಗಾರರ ಭಾವನೆಯೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣದಿಂದಲೇ ಗೆಲುವು ಲಭಿಸಿತ್ತು ಎಂದು ತಿಳಿಸಿದ್ದಾರೆ.

  • ಸಚಿನ್, ಕೊಹ್ಲಿ ಹಿಂದಿಕ್ಕಿದ ‘ದಿ ವಾಲ್’- ಭಾರತ ಗ್ರೇಟೆಸ್ಟ್ ವಿಸ್ಡನ್ ಕ್ರಿಕೆಟಿಗನಾಗಿ ಆಯ್ಕೆ

    ಸಚಿನ್, ಕೊಹ್ಲಿ ಹಿಂದಿಕ್ಕಿದ ‘ದಿ ವಾಲ್’- ಭಾರತ ಗ್ರೇಟೆಸ್ಟ್ ವಿಸ್ಡನ್ ಕ್ರಿಕೆಟಿಗನಾಗಿ ಆಯ್ಕೆ

    ಮುಂಬೈ: ಭಾರತ ಟೆಸ್ಟ್ ಕ್ರಿಕೆಟ್‍ನಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ ಯಾರು? ಎಂಬ ಪ್ರಶ್ನೆ ಎದುರಾದ ಬೆನ್ನಲ್ಲೇ ತಕ್ಷಣ ನಮ್ಮ ಎದುರಿಗೆ ಸಚಿನ್, ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಅವರ ಹೆಸರು ನೆನಪಿಗೆ ಬರುತ್ತದೆ. ಆದರೆ ಕಳೆದ 50 ವರ್ಷದಲ್ಲಿ ಟೀಂ ಇಂಡಿಯಾ ಬೆಸ್ಟ್ ಬ್ಯಾಟ್ಸ್‌ಮನ್‌ ಯಾರು ಎಂಬ ಪ್ರಶ್ನೆ ನೀಡಿ ವಿಸ್ಡನ್ ಇಂಡಿಯಾ ನಡೆಸಿದ ಪೋಲ್‍ನಲ್ಲಿ ಅಚ್ಚರಿಯ ಫಲಿತಾಂಶ ಲಭಿಸಿದೆ. ವಿಸ್ಡನ್ ಪೋಲ್‍ನಲ್ಲಿ ಯಾರು ಊಹೆ ಮಾಡದ ರೀತಿಯಲ್ಲಿ ರಾಹುಲ್ ದ್ರಾವಿಡ್ ಮೊದಲ ಸ್ಥಾನ ಪಡೆದಿದ್ದಾರೆ.

    ವಿಸ್ಡನ್ ಇಂಡಿಯಾ ಪೋಲ್‍ನಲ್ಲಿ 11,400 ಮಂದಿ ಕ್ರಿಕೆಟ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇದರಲ್ಲಿ ರಾಹುಲ್ ದ್ರಾವಿಡ್ ಅವರಿಗೆ ಶೇ.52 ಮಂದಿ ಮತ ಹಾಕಿರುವುದಾಗಿ ವಿಸ್ಡನ್ ಇಂಡಿಯಾ ಪ್ರಕಟಿಸಿದೆ. ಪೋಲ್‍ನಲ್ಲಿ ಅಂತಿಮ ಹಂತದವರೆಗೂ ಸಚಿನ್ ಪೈಪೋಟಿ ನೀಡಿದ್ದರೂ ಕೊನೆಗೆ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಕೊಹ್ಲಿ, ಗವಾಸ್ಕರ್ ಅವರು ಮೂರು ಮತ್ತು ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ.

    ಭಾರತ ಪರ 200 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಚಿನ್ 53.78 ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ರಾಹುಲ್ ದ್ರಾವಿಡ್ 164 ಟೆಸ್ಟ್ ಪಂದ್ಯಗಳನ್ನಾಡಿ 52.31ರ ಸರಾಸರಿಯಲ್ಲಿ 13,288 ರನ್ ಗಳಿಸಿದ್ದಾರೆ. ಸುನಿಲ್ ಗವಾಸ್ಕರ್ 125 ಟೆಸ್ಟ್ ಪಂದ್ಯಗಳಿಂದ 51.12 ಸರಾಸರಿಯಲ್ಲಿ 10,122 ರನ್ ಗಳಿಸಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆಡಿರುವ 86 ಟೆಸ್ಟ್ ಪಂದ್ಯಗಳಲ್ಲಿ 53.62 ಸರಾಸರಿಯಲ್ಲಿ 7,240 ರನ್ ಗಳಿಸಿದ್ದಾರೆ. ಉಳಿದಂತೆ ಸುನಿಲ್ ಗವಾಸ್ಕರ್ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 10 ಸಾವಿರ ರನ್ ಗಡಿದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.

  • ಸಚಿನ್ ಕ್ಯಾಪ್ಟನ್ಸಿ ಕೈಬಿಟ್ಟ ಸಿಕ್ರೇಟ್ ರಿವೀಲ್ ಮಾಡಿದ ಮಾಜಿ ಚೀಫ್ ಸೆಲೆಕ್ಟರ್

    ಸಚಿನ್ ಕ್ಯಾಪ್ಟನ್ಸಿ ಕೈಬಿಟ್ಟ ಸಿಕ್ರೇಟ್ ರಿವೀಲ್ ಮಾಡಿದ ಮಾಜಿ ಚೀಫ್ ಸೆಲೆಕ್ಟರ್

    ನವದೆಹಲಿ: ಟೀಂ ಇಂಡಿಯಾ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಬ್ಯಾಟಿಂಗ್‍ಗಾಗಿ ತಂಡದ ನಾಯಕತ್ವ ಜವಾಬ್ದಾರಿಯಿಂದ ಹಿಂದೆ ಸರಿದಿದ್ದರು ಎಂದು ಬಿಸಿಸಿಐ ಮಾಜಿ ಆಯ್ಕೆ ಸಮಿತಿಯ ಮುಖ್ಯಸ್ಥ ಚಂದು ಬೋರ್ಡೆ ಹೇಳಿದ್ದಾರೆ.

    ಟೀಂ ಇಂಡಿಯಾ ಪರ 24 ವರ್ಷ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್, ಬ್ಯಾಟ್ಸ್ ಮನ್ ಆಗಿ 100 ಶತಕ ಸಿಡಿಸಿದ್ದಾರೆ. ಆದರೆ ತಂಡದ ನಾಯಕರಾಗಿ ಸಚಿನ್ ಟೀಂ ಇಂಡಿಯಾಗೆ ಹೆಚ್ಚಿನ ಗೆಲುವು ತಂದುಕೊಡಲು ವಿಫಲರಾಗಿದ್ದರು. 1996-2000ರ ಅವಧಿಯಲ್ಲಿ ಸಚಿನ್ 25 ಟೆಸ್ಟ್, 73 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ಆದರೆ ಇದರಲ್ಲಿ 4 ಟೆಸ್ಟ್, 23 ಏಕದಿನ ಪಂದ್ಯಗಳಲ್ಲಿ ಮಾತ್ರ ತಂಡ ಗೆಲುವು ಪಡೆದಿತ್ತು. ಪ್ರಮುಖವಾಗಿ 1999ರ ಆಸ್ಟ್ರೇಲಿಯಾ ಪ್ರವಾಸ ಬಳಿಕ ಸಚಿನ್ ನಾಯಕತ್ವದ ಸ್ಥಾನದಿಂದ ದೂರ ಸರಿಯುವ ನಿರ್ಧಾರ ಮಾಡಿದ್ದರು.

    ಆಸ್ಟ್ರೇಲಿಯಾ ಪ್ರವಾಸಕ್ಕೆ ಸಚಿನ್ ನಾಯಕತ್ವದಲ್ಲಿ ತಂಡವನ್ನು ಆಯ್ಕೆ ಮಾಡಿ ಕಳುಹಿಸಿಕೊಡಲಾಗಿತ್ತು. ಆದರೆ ಟೂರ್ನಿ ಮುಗಿಸಿ ಸ್ವದೇಶಕ್ಕೆ ಮರಳಿದ ಬಳಿಕ ನಾಯಕತ್ವದ ಜವಾಬ್ದಾರಿ ತೊರೆಯುತ್ತಿರುವುದಾಗಿ ಸಚಿನ್ ಹೇಳಿದ್ದರು. ಬ್ಯಾಟಿಂಗ್ ಮೇಲೆ ಹೆಚ್ಚು ಗಮನ ಹರಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಸಚಿನ್ ಅಂದು ವಿವರಿಸಿದ್ದರು. ಆದರೆ ನಾನು ಆತನ ನಿರ್ಧಾರವನ್ನು ಬದಲಿಸಿಕೊಳ್ಳುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದೆ. ನಾವು ಹೊಸ ನಾಯಕನ ಹುಡುಕಾಟದಲ್ಲಿದ್ದ ಕಾರಣ ಹೆಚ್ಚಿನ ಅವಧಿಯಲ್ಲಿ ಮುಂದುವರಿಯುವಂತೆ ಹೇಳಿದ್ದೇವು. ಆದರೆ ಸಚಿನ್ ಇದಕ್ಕೆ ಸಮ್ಮತಿ ಸೂಚಿಸದ ಕಾರಣ ನಮ್ಮ ಸಮಿತಿ ಕೂಡ ಗಂಗೂಲಿ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಿತು ಎಂದು ಚಂದು ಬೋರ್ಡೆ ವಿವರಿಸಿದ್ದಾರೆ.

    ಆಸ್ಟ್ರೇಲಿಯಾ ಟೂರ್ನಿಯಲ್ಲಿ ಸಚಿನ್ ಆಡಿದ್ದ ಮೂರು ಪಂದ್ಯಗಳಲ್ಲಿ 278 ರನ್ ಗಳಿಸಿದ್ದರು. ಆದರೂ ಟೀಂ ಇಂಡಿಯಾ 0-3 ಅಂತರದಲ್ಲಿ ಸಿರೀಸ್ ಸೋಲುಂಡಿತ್ತು. ಸಚಿನ್ ಅವರಿಗೆ ನಾಯಕತ್ವ ಹೆಚ್ಚಿನ ಒತ್ತಡ ಉಂಟು ಮಾಡಿತ್ತು ಎನಿಸಿತ್ತು. ಆ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ ನಡೆದಿದ್ದ 2 ಪಂದ್ಯಗಳ ಟೆಸ್ಟ್ ಟೂರ್ನಿಯಲ್ಲೂ ಭಾರತ 0-2 ಅಂತರದಲ್ಲಿ ಸೋಲುಂಡಿತ್ತು. ಇದಾದ ಬಳಿಕ ಸಚಿನ್ ನಾಯಕತ್ವವನ್ನು ಕೈಬಿಡುವ ನಿರ್ಧಾರ ಮಾಡಿದ್ದರು.