Tag: Sachin Pilot

  • ಅನರ್ಹತೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಪೈಲಟ್- ಮತ್ತೆ ಸ್ಪೀಕರ್ ಅಧಿಕಾರದ ಕುರಿತು ಚರ್ಚೆ

    ಅನರ್ಹತೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಪೈಲಟ್- ಮತ್ತೆ ಸ್ಪೀಕರ್ ಅಧಿಕಾರದ ಕುರಿತು ಚರ್ಚೆ

    ಜೈಪುರ: ರಾಜಸ್ಥಾನದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಮತ್ತೊಮ್ಮೆ ಶಾಸಕರ ಅನರ್ಹತೆ ವಿಚಾರದಲ್ಲಿ ಸ್ಪೀಕರ್ ಅವರ ಅಧಿಕಾರದ ಮೇಲೆ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾಗಿದ್ದ ಕಾರಣ ಸ್ಪೀಕರ್ ನೀಡಿದ್ದ ಅನರ್ಹತೆ ನೋಟಿಸ್ ವಿರುದ್ಧ ಮಾಜಿ ಡಿಸಿಎಂ ಸಚಿನ್ ಪೈಲಟ್ ಹಾಗೂ 18 ಶಾಸಕರು ರಾಜಸ್ಥಾನ ಹೈ ಕೋರ್ಟ್ ಮೇಟ್ಟಿಲೇರಿದ್ದಾರೆ.

    ಸ್ಪೀಕರ್ ನೀಡಿರುವ ನೋಟಿಸ್ ವಿರುದ್ಧ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿರುವ ಶಾಸಕರು, ಕೇವಲ ವಿಧಾನಸಭಾ ಅಧಿವೇಶನಕ್ಕೆ ಮಾತ್ರ ವಿಪ್ ಅನ್ವಯವಾಗುತ್ತದೆ. ಆದರೆ ಒತ್ತಡದ ಹಿನ್ನೆಲೆಯಲ್ಲಿ ಸ್ಪೀಕರ್ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಇತ್ತ ಸಚಿನ್ ಬೆಂಬಲಿತ ಶಾಸಕ ಪೃಥ್ವಿರಾಜ್ ಮೀನಾ ಹೈಕೋರ್ಟಿನಲ್ಲಿ ಸ್ಪೀಕರ್ ನಡೆ ಕುರಿತು ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ವಕೀಲರಾದ ಹರೀಶ್ ಸಾಳ್ವೆ ಹಾಗೂ ಮುಕುಲ್ ರೊಹ್ಟಗಿ ಅವರು ಪೈಲಟರ್ ಪರ ವಾದ ಮಂಡಿಸಲಿದ್ದಾರೆ. ಇತ್ತ ರಾಜಸ್ಥಾನ ಸ್ಪೀಕರ್ ಪರ ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ.


    ಸದ್ಯ ಹೈ ಕೋರ್ಟ್ ಅರ್ಜಿಯ ವಿಚಾರಣೆಯನ್ನು ಮುಂದೂಡಿದ್ದು, ಅರ್ಜಿದಾರರು ಸಲ್ಲಿಸಿರುವ ಅರ್ಜಿಯನ್ನು ತಿದ್ದುಪಡಿ ಮಾಡಲು ಸಮಯ ಕೋರಿದ್ದಾರೆ. ನ್ಯಾಯಾಲಯ ಅವರಿಗೆ ಸಮಯ ನೀಡಿದೆ. ತಿದ್ದುಪಡಿ ಅರ್ಜಿ ಸಲ್ಲಿಸಿದ ಬಳಿಕ ಮುಂದಿನ ವಿಚಾರಣೆ ನಡೆಯಲಿದೆ ಎಂದು ವಕೀಲ ಅಭಯ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.

    ಅನರ್ಹತೆ ಮಾಡಲು ಸಾಧ್ಯವೇ?
    ಈ ಹಿಂದೆ ಸ್ಪೀಕರ್ ಅಧಿಕಾರದ ಮೇಲೆ ಹಲವು ತೀರ್ಪುಗಳನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದೆ. ಆದರೆ ಸದನದ ಕಲಾಪಕ್ಕೆ ಮಾತ್ರ ವಿಪ್ ಅನ್ವಯವಾಗುತ್ತದೋ ಇಲ್ಲವೋ ಎನ್ನುವುದು ಈಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷ ಕರ್ನಾಟಕ ಪ್ರಕರಣದಲ್ಲಿ ಸಂದರ್ಭದಲ್ಲಿ ವಿಪ್ ಉಲ್ಲಂಘಿಸಿದ 17 ಮಂದಿ ಶಾಸಕರನ್ನು ಅನರ್ಹ ಮಾಡಿದ ಸ್ಪೀಕರ್ ಕ್ರಮ ಸರಿ ಎಂದು ತೀರ್ಪು ನೀಡಿತ್ತು. ಆದರೆ ಸ್ಪೀಕರ್ 5 ವರ್ಷಗಳ ಕಾಲ ಅಂದರೆ 2023ರವರೆಗೆ ವಿಧಾನಸಭೆಯಿಂದ ಅನರ್ಹಗೊಳಿಸಿದ್ದು ಸರಿಯಲ್ಲ ಎಂದು ಹೇಳಿ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಿತ್ತು. ತೀರ್ಪಿನಲ್ಲಿ ಅನುಮತಿ ಸಿಕ್ಕಿದ ಹಿನ್ನೆಲೆಯಲ್ಲಿ ಅನರ್ಹಗೊಂಡ ಶಾಸಕರು ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದರು.

    ರಾಜಸ್ಥಾನದಲ್ಲಿ ಶಾಸಕರು ರಾಜೀನಾಮೆಯೇ ನೀಡಿಲ್ಲ. ಜೊತೆಗೆ ವಿಧಾನಸಭಾ ಕಲಾಪವೇ ನಡೆದಿಲ್ಲ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವಂತೆ ವಿಪ್ ಜಾರಿಗೊಳಿಸಲಾಗಿತ್ತು. ಶಾಸಕಾಂಗ ಸಭೆಗೆ ವಿಪ್ ಅನ್ವಯವಾಗುತ್ತದೋ ಇಲ್ಲವೋ ಎನ್ನುವುದು ಇಲ್ಲಿ ಎದ್ದಿರುವ ದೊಡ್ಡ ಪ್ರಶ್ನೆ. ಸ್ಪೀಕರ್ ತಮಗೆ ಸಿಕ್ಕಿರುವ ಅಧಿಕಾರದ ಹಿನ್ನೆಲೆಯಲ್ಲಿ ವಿಪ್ ಉಲ್ಲಂಘಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಅನರ್ಹಗೊಳಿಸಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಹೈಕೋರ್ಟ್ ಹೇಗೆ ಸ್ವೀಕರಿಸುತ್ತದೆ ಎಂಬ ಕುತೂಹಲ ಮೂಡಿದೆ.

    ಪೈಲಟ್ ಜೊತೆ ಶಾಸಕರು ದೆಹಲಿಗೆ ತೆರಳಿದ ಹಿನ್ನೆಲೆಯಲ್ಲಿ ಅವರ ವಾಟ್ಸಪ್, ಇಮೇಲ್‍ಗೆ ಸಂದೇಶ ಕಳುಹಿಸಲಾಗಿತ್ತು. ಅಷ್ಟೇ ಅಲ್ಲದೇ ಶಾಸಕರ ಮನೆಯ ಮುಂದೆ ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಶಾಸಕಾಂಗ ಸಭೆಗೆ ಹಾಜರಾಗುವಂತೆ ನೋಟಿಸ್ ಅಂಟಿಸಿ ಮಾಹಿತಿಯನ್ನು ನೀಡಲಾಗಿತ್ತು.

  • ಕಾಂಗ್ರೆಸ್ಸಿನಲ್ಲಿ ಮಾತ್ರ ಸಚಿನ್ ಪೈಲಟ್‍ಗೆ ಉತ್ತಮ ಭವಿಷ್ಯವಿರೋದು: ವೀರಪ್ಪ ಮೊಯ್ಲಿ

    ಕಾಂಗ್ರೆಸ್ಸಿನಲ್ಲಿ ಮಾತ್ರ ಸಚಿನ್ ಪೈಲಟ್‍ಗೆ ಉತ್ತಮ ಭವಿಷ್ಯವಿರೋದು: ವೀರಪ್ಪ ಮೊಯ್ಲಿ

    ಬೆಂಗಳೂರು: ರಾಜಸ್ಥಾನದ ರಾಜಕೀಯ ಹೈಡ್ರಾಮಾಕ್ಕೆ ಕಾರಣರಾಗಿರುವ ಸಚಿನ್ ಪೈಲಟ್ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯ ಅಂತ ಇರುವುದು ಅದು ಕಾಂಗ್ರೆಸ್ಸಿನಲ್ಲಿ ಮಾತ್ರ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.

    ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜಸ್ಥಾನದಲ್ಲಾಗುತ್ತಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಚಿನ್ ಪೈಲಟ್ ಕಾಂಗ್ರೆಸ್ ಪಕ್ಷದಲ್ಲಿ ಇರುವಾಗಲೇ ಎಲ್ಲವನ್ನೂ ಸಾಧಿಸಿದ್ದಾರೆ. ಕಾಂಗ್ರೆಸ್‍ನಲ್ಲಿದ್ದುಕೊಂಡೇ ಸಂಸದ, ಕೇಂದ್ರ ಸಚಿವ, ರಾಜಸ್ಥಾನದ ಪಿಸಿಸಿ ಅಧ್ಯಕ್ಷ ಹಾಗೂ ರಾಜಸ್ಥಾನದ ಉಪಮುಖ್ಯಮಂತ್ರಿ ಕೂಡ ಆಗಿದ್ದರು. ಹೀಗಾಗಿ ಸಚಿನ್ ಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಪಕ್ಷದೊಳಗಡೆಯೇ ಮಾತುಕತೆ ನಡೆಸಿ ಪರಿಹರಿಸಬಹುದಾಗಿತ್ತು. ಅದಕ್ಕಾಗಿ ಇಷ್ಟೊಂದು ಆತುರ ಪಡುವ ಅವಶ್ಯಕತೆ ಇರಲಿಲ್ಲ ಎಂದರು.

    ಸಚಿನ್ ಪೈಲಟ್ ಇಂದು ಏನು ಸಾಧಿಸಿದ್ದಾರೆಯೋ ಅದು ಕಾಂಗ್ರೆಸ್ಸಿನಲ್ಲಿದ್ದುಕೊಂಡೇ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲಿ. ಅಲ್ಲದೆ ಮೊದಲು ಅದನ್ನು ಅವರು ಅರಿತುಕೊಳ್ಳಲಿ. ಅವರು ಯಾವುದೇ ಕಾರಣಕ್ಕೂ ನಾನು ಬಿಜೆಪಿ ಸೇರಲ್ಲ ಎಂದು ಹೇಳಿದ್ದಾರೆ. ಇದು ತುಂಬಾ ಒಳ್ಳೆಯ ನಿರ್ಧಾರವಾಗಿದೆ ಎಂದು ಮೊಯ್ಲಿ ತಿಳಿಸಿದರು.

    ಸಚಿನ್ ಅವರಿಗೆ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿಯಾಗಲು ಸಾಧ್ಯವಾಗಿಲ್ಲ. ಯಾಂಕದರೆ ಮಧ್ಯಪ್ರದೇಶ ಅಥವಾ ರಾಜಸ್ಥಾನದಲ್ಲಿ ಹೈಕಮಾಂಡ್ ಶಾಸಕರ ಅಭಿಪ್ರಾಯವನ್ನು ಪಡೆದುಕೊಳ್ಳುತ್ತದೆ. ಅಲ್ಲಿ ಚುನಾಯಿತ ಶಾಸಕರ ಬೆಂಬಲವನ್ನು ಪಡೆಯುವ ಮುಖಂಡನನ್ನು ಮಾತ್ರ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ. ಹೀಗಾಗಿ ಅವರಿಗೆ ಸಿಎಂ ಆಗುವ ಅವಕಾಶ ಸಿಕ್ಕಿಲ್ಲ ಎಂದು ಹೇಳಿದರು.

    ಕಳೆದ ಕೆಲ ದಿನಗಳಿಂದ ರಾಜಸ್ಥಾನದ ರಾಜಕೀಯದಲ್ಲಿ ಭಾರೀ ಹೈಡ್ರಾಮಾ ನಡೆಯುತ್ತಿದ್ದು, ಜುಲೈ 14ರಂದು ಕಾಂಗ್ರೆಸ್ ಪಕ್ಷ ಸಚಿನ್ ಪೈಲಟ್ ಅವರನ್ನು ರಾಜಸ್ಥಾನದ ಉಪಮುಖ್ಯಮಂತ್ರಿ ಹಾಗೂ ಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತ್ತು.

  • ಸಚಿನ್ ಪೈಲಟ್ ಕುರಿತ ರಾಹುಲ್ ಹೇಳಿಕೆಗೆ ಕಾಂಗ್ರೆಸ್‍ನಲ್ಲಿ ಭಾರೀ ವಿರೋಧ

    ಸಚಿನ್ ಪೈಲಟ್ ಕುರಿತ ರಾಹುಲ್ ಹೇಳಿಕೆಗೆ ಕಾಂಗ್ರೆಸ್‍ನಲ್ಲಿ ಭಾರೀ ವಿರೋಧ

    ನವದೆಹಲಿ: ಸಚಿನ್ ಪೈಲಟ್ ಉದ್ದೇಶಿಸಿ ಹೇಳಿದ್ದಾರೆನ್ನಲಾದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

    ರಾಹುಲ್ ಗಾಂಧಿಯವರು ಪಕ್ಷದ ಯುವ ವಿಭಾಗ ಎನ್‍ಎಸ್‍ಯುಐನ ಸಭೆಯಲ್ಲಿ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಜನ ಪಕ್ಷ ಬಿಡುವುದರಿಂದ ಯುವಕರ ರಾಜಕೀಯ ಪ್ರವೇಶಕ್ಕೆ ಬಾಗಿಲು ತೆರೆದಂತಾಗುತ್ತದೆ ಎಂದಿದ್ದಾರಂತೆ. ರಾಹುಲ್ ಗಾಂಧಿಯವರು ಸಚಿನ್ ಪೈಲಟ್ ಅವರ ಹೆಸರನ್ನು ಉಲ್ಲೇಖಿಸದೆ ಈ ಹೇಳಿಕೆ ನೀಡಿದ್ದು, ಯಾರಾದರೂ ಪಕ್ಷ ಬಿಡಲು ಇಚ್ಚಿಸಿದರೆ ಬಿಡಲಿ. ಇದರಿಂದಾಗಿ ನಿಮ್ಮಂಥ ಯುವಕರಿಗೆ ಬಾಗಿಲು ತೆರೆದಂತಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

    ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರತಿಕ್ರಿಯೆ ನೀಡಿದ್ದು, ಈ ಪ್ರಸಂಗದ ವಾಸ್ತವತೆ ತಪ್ಪಾಗಿದೆ ಎಂದು ತಿಳಿಸಿದ್ದಾರೆ.

    ಪೈಲಟ್ ಅವರನ್ನು ಇತ್ತೀಚೆಗೆ ರಾಜಸ್ಥಾನದ ಉಪಮುಖ್ಯಮಂತ್ರಿ ಸ್ಥಾನದಿಂದ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ. ಇದಾದ ಬಳಿಕ ಬಿಜೆಪಿ ಸೇರಲಿದ್ದಾರೆ ಎಂಬ ಕುರಿತು ಸಹ ಚರ್ಚೆ ನಡೆದಿತ್ತು. ಆದರೆ ಇದೀಗ ಸ್ವತಃ ಸಚಿನ್ ಪೈಲಟ್ ಪ್ರತಿಕ್ರಿಯೆ ನೀಡಿ, ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಾದ ಬೆನ್ನಲ್ಲೇ ಇಂದು ರಾಜಸ್ಥಾನದ ಪ್ರಬಲ ನಾಯಕ ಪೈಲಟ್ ಅವರನ್ನು ಕಾಂಗ್ರೆಸ್ ಮರಳಿ ಕರೆ ತರುವ ಪ್ರಯತ್ನವನ್ನು ನಡೆಸಿದೆ.

    ಬೆಳವಣಿಗೆ ಕುರಿತು ಇಂದು ಸುರ್ಜೇವಾಲಾ ಅವರು ಪ್ರತಿಕ್ರಿಯಿಸಿ, ಸಚಿನ್ ಪೈಲಟ್ ಅವರಿಗೆ ಬಿಜೆಪಿ ಸೇರುವುದು ಇಷ್ಟವಿಲ್ಲವಾದಲ್ಲಿ ಹರಿಯಾಣದಲ್ಲಿ ಆ ಪಕ್ಷದ ಆತಿಥ್ಯ ಸ್ವೀಕರಿಸುವುದನ್ನು ನಿಲ್ಲಿಸಲಿ. ರಾಜಸ್ಥಾನದಲ್ಲಿನ ತಮ್ಮ ಮನೆ ಹಾಗೂ ಕುಟುಂಬವನ್ನು ಸೇರಲಿ ಎಂದು ತಿಳಿಸಿದ್ದಾರೆ.

    ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಮಾಜಿ ಡಿಸಿಎಂ ಸಚಿನ್ ಪೈಲಟ್, ತಾನು ಈಗಲೂ ಕಾಂಗ್ರೆಸ್ ಪಕ್ಷದ ಸದಸ್ಯನಾಗಿದ್ದು, ಬಿಜೆಪಿ ಪಕ್ಷ ಸೇರ್ಪಡೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಅಸಮಾಧಾನ ಹೊಂದಿರುವ ಸಚಿನ್, ಬಿಜೆಪಿ ಸೇರ್ಪಡೆಯಾಗುತ್ತಾರಾ? ಅವರ ಮುಂದಿನ ನಡೆ ಏನು? ಎಂಬ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.

    ಇದೇ ವೇಳೆ ರಾಷ್ಟ್ರೀಯ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿರುವ ಪೈಲಟ್, ತಾವು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ನಾನು ಬಿಜೆಪಿ ಪಕ್ಷಕ್ಕೆ ಸೋಲುಣಿಸಲು ಕಾರ್ಯನಿರ್ವಹಿಸಿದ್ದೆ. ಅಂತಹ ಪಕ್ಷಕ್ಕೆ ಏಕೆ ಸೇರ್ಪಡೆಯಾಗುತ್ತೇನೆ? ಈಗಲೂ ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಕೆಲವರು ಬಿಜೆಪಿ ಸೇರುತ್ತಿರುವ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಪಕ್ಷದ ವರಿಷ್ಠರಿಗೆ ನನ್ನ ಮೇಲಿನ ನಂಬಿಕೆ ಕಡಿಮೆ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಪೈಲಟ್ ತಿಳಿಸಿದ್ದಾರೆ.

  • ಶಾಸಕರನ್ನು ರೆಸಾರ್ಟ್‍ಗೆ ಶಿಫ್ಟ್ ಮಾಡಿ ಬಾಗಿಲು ತೆರೆದಿದೆ ಎಂದ ಕಾಂಗ್ರೆಸ್

    ಶಾಸಕರನ್ನು ರೆಸಾರ್ಟ್‍ಗೆ ಶಿಫ್ಟ್ ಮಾಡಿ ಬಾಗಿಲು ತೆರೆದಿದೆ ಎಂದ ಕಾಂಗ್ರೆಸ್

    -ಪೈಲಟ್ ಮನವೊಲಿಸಲು ಹಿರಿಯ ನಾಯಕರ ಯತ್ನ

    ಜೈಪುರ: ರಾಜಸ್ಥಾನದ ರಾಜಕೀಯದ ಬಿಕ್ಕಟ್ಟು ಮುಂದುವರಿದಿದ್ದು, ಸೋಮವಾರವಷ್ಟೇ ರಾಜಸ್ಥಾನ ಕಾಂಗ್ರೆಸ್ ಪಕ್ಷ ತನ್ನ ಶಾಸಕಾಂಗ ಸಭೆ ನಡೆಸಿ ಬಳಿಕ ಶಾಸಕರನ್ನು ರೆಸಾರ್ಟ್‍ಗೆ ಶಿಫ್ಟ್ ಮಾಡಿತ್ತು. ಆದರೆ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯದ ಭಾವುಟ ಹರಿಸಿರುವ ಸಚಿನ್ ಪೈಲಟ್‍ಗೆ ಇನ್ನು ಪಕ್ಷದ ಬಾಗಿಲುಗಳು ತೆರೆದಿದೆ ಎಂದು ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಹೇಳಿದ್ದಾರೆ.

    ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸಚಿನ್ ಪೈಲಟ್ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಸದ್ಯ ಲಭಿಸಿದೆ. ಇದಕ್ಕೆ ಪೂರಕ ಎಂಬಂತೇ ಅವಿನಾಶ್ ಪಾಂಡೆ ಕೂಡ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಅಹ್ಮದ್ ಪಟೇಲ್‍ರಂತಹ ನಾಯಕರು ಸಚಿನ್ ಪೈಲಟ್‍ರೊಂದಿಗೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

    ಇತ್ತ ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾಗಿದ್ದ 18 ಶಾಸಕರಿಗೆ ನೋಟಿಸ್ ನೀಡಲಾಗಿದ್ದು, 2 ದಿನಗಳ ಒಳಗೆ ಶಾಸಕರು ನೋಟಿಸ್‍ಗೆ ಉತ್ತರಿಸಿಬೇಕು ಎಂದು ತಿಳಿಸಿದ್ದು, ಇಲ್ಲವಾದರೆ ಅನರ್ಹತೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಕೆಲ ಶಾಸಕರು ನಿವಾಸದಲ್ಲಿ ಇಲ್ಲದ ಕಾರಣ ಅವರ ನಿವಾಸಗಳ ಗೋಡೆಗೆ ನೋಟಿಸ್ ಅಂಟಿಸಲಾಗಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಸಭೆಗೆ ಗೈರಾಗಿದ್ದ ಶಾಸಕರ ವಿರುದ್ಧ ಕ್ರಮಕೈಗೊಳ್ಳಲು ಸ್ಪೀಕರ್‍ಗೆ ಮನವಿ ಸಲ್ಲಿಸಿದೆ. ಮುಂದಿನ ಎರಡು ದಿನಗಳಲ್ಲಿ ಶಾಸಕರು ಸಭೆಗೆ ಗೈರಾದ ಬಗ್ಗೆ ವಿವರಣೆ ನೀಡದಿದ್ದರೆ ಸಿಎಲ್‍ಪಿಗೆ ರಾಜೀನಾಮೆ ನೀಡಿರುವುದಾಗಿ ಪರಿಗಣಿಸಲಾಗುತ್ತದ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಷ್ ಪಾಂಡೆ ತಿಳಿಸಿದ್ದಾರೆ.

    ಇತ್ತ ಪಕ್ಷದಲ್ಲಿ ಉಂಟಾಗಿರುವ ಬಂಡಾಯದ ಕಾರಣ ಬಿಜೆಪಿ ಅಧ್ಯಕ್ಷ ಸತೀಶ್ ಪುನಿಯಾ ಪಕ್ಷದ ಹಿರಿಯ ನಾಯಕರೊಂದಿಗೆ ಜೈಪುರದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪೈಲಟ್ ಬಂಡಾಯದ ಕಾರಣದ ಉಂಟಾಗಿರುವ ರಾಜಕೀಯ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಅಲ್ಲದೇ ಸದ್ಯದ ಸ್ಥಿತಿಯಲ್ಲಿ ಅಶೋಕ್ ಗೆಹ್ಲೋಟ್ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕು ಎಂದು ಭಾವಿಸುತ್ತಿಲ್ಲ. ಅಂತಹ ಸಂದರ್ಭ ಎದುರಾದರೆ ಬಿಜೆಪಿ ಖಂಡಿತ ಬಹುಮತ ಸಾಬೀತು ಮಾಡಲು ಡಿಮಾಂಡ್ ಮಾಡಲಿದೆ ಎಂದು ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಹೇಳಿದ್ದಾರೆ.

  • ಸಚಿನ್ ಪೈಲಟ್ ನೆಪ ಮಾತ್ರಕ್ಕೆ, ಭಿನ್ನಮತದ ಹಿಂದೆ ಬಿಜೆಪಿ ನಾಯಕರಿದ್ದಾರೆ: ಗೆಹ್ಲೋಟ್ ಆರೋಪ

    ಸಚಿನ್ ಪೈಲಟ್ ನೆಪ ಮಾತ್ರಕ್ಕೆ, ಭಿನ್ನಮತದ ಹಿಂದೆ ಬಿಜೆಪಿ ನಾಯಕರಿದ್ದಾರೆ: ಗೆಹ್ಲೋಟ್ ಆರೋಪ

    ಜೈಪುರ್: ರಾಜಸ್ಥಾನ ಸರ್ಕಾರದ ಭಿನ್ನಮತ ಚಟುವಟಿಕೆಯ ಹಿಂದೆ ಬಿಜೆಪಿ ಹೈಕಮಾಂಡ್ ನಾಯಕರ ಕೈವಾಡವಿದೆ. ಸಚಿನ್ ಪೈಲಟ್ ತೋರಿಕೆಗೆ ಮಾತ್ರ. ಅವರ ಕೈಯಲ್ಲಿ ಏನೂ ಇಲ್ಲ ಎಂದು ಸಿಎಂ ಅಶೋಕ್ ಗೆಹ್ಲೋಟ್ ಗಂಭೀರವಾಗಿ ಆರೋಪಿಸಿದ್ದಾರೆ.

    ಖಾಸಗಿ ಹೋಟೇಲಿನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ ಬಳಿಕ ಅವರು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಭೇಟಿ ಮಾಡಿ, ಡಿಸಿಎಂ ಮತ್ತು ಇಬ್ಬರು ಮಂತ್ರಿಗಳನ್ನು ಸಂಪುಟದಿಂದ ಕೈ ಬಿಟ್ಟು ಬದಲಿ ಶಾಸಕರನ್ನು ಸಚಿವರನ್ನಾಗಿ ಮಾಡುವ ಬಗ್ಗೆ ಚರ್ಚಿಸಿದರು. ಇದೇ ವೇಳೆ ಶಾಸಕರ ಪರೇಡ್ ನಡೆಸುವ ಬಗ್ಗೆಯೂ ತಿಳಿಸಿದ್ದಾರೆ ಎನ್ನಲಾಗಿದೆ.

    ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಗೆಹ್ಲೋಟ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕುದುರೆ ವ್ಯಾಪಾರಕ್ಕೆ ಸಂಚು ರೂಪಿಸುತ್ತಿದೆ. ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಸಾಕಷ್ಟು ಬಾರಿ ಈ ಪ್ರಯತ್ನಗಳು ನಡೆದಿದೆ ಎಂದು ಗೆಹ್ಲೋಟ್ ಆರೋಪಿಸಿದರು. ಇದನ್ನೂ ಓದಿ: ಪಕ್ಷದಿಂದ ಉಚ್ಛಾಟನೆ – ಸತ್ಯಕ್ಕೆ ಸೋಲಿಲ್ಲ ಎಂದ ಸಚಿನ್ ಪೈಲಟ್

    ಕುದುರೆ ವ್ಯಾಪಾರದ ಭಾಗವಾಗಿ ಹಲವು ಶಾಸಕರೊಂದಿಗೆ ಸಚಿನ್ ಪೈಲಟ್ ದೆಹಲಿಗೆ ತೆರಳಿದ್ದರು. ಇಲ್ಲಿ ಸಚಿನ್ ಪೈಲಟ್ ತೋರಿಕೆಗೆ ಮಾತ್ರವಿದ್ದು, ಶಾಸಕರಿಗೆ ರೆಸಾರ್ಟ್ ವ್ಯವಸ್ಥೆಯನ್ನು ಬಿಜೆಪಿ ನಾಯಕರು ಮಾಡಿಕೊಟ್ಟಿದ್ದಾರೆ. ಮಧ್ಯಪ್ರದೇಶದಲ್ಲೂ ಇದೇ ಕೆಲಸವನ್ನು ಬಿಜೆಪಿ ನಾಯಕರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಸಚಿವರು ಸೇರಿ ಸಚಿನ್ ಪೈಲಟ್ ಅವರನ್ನು ಸ್ಥಾನದಿಂದ ಕೆಳಗಿಳಿಸಿ ಬೇರೆಯವರನ್ನು ನೇಮಿಸಿದೆ ಎಂದು ಗೆಹ್ಲೋಟ್ ಹೇಳಿದರು.

  • ಪಕ್ಷದಿಂದ ಉಚ್ಛಾಟನೆ – ಸತ್ಯಕ್ಕೆ ಸೋಲಲ್ಲ ಎಂದ ಸಚಿನ್ ಪೈಲಟ್

    ಪಕ್ಷದಿಂದ ಉಚ್ಛಾಟನೆ – ಸತ್ಯಕ್ಕೆ ಸೋಲಲ್ಲ ಎಂದ ಸಚಿನ್ ಪೈಲಟ್

    ಜೈಪುರ: ಕಾಂಗ್ರೆಸ್ ನಿಂದ ಉಚ್ಛಾಟನೆಗೊಂಡಿರುವ ಸಚಿನ್ ಪೈಲಟ್ ಮೊದಲ ಪ್ರತಿಕ್ರಿಯೆಯನ್ನು ಟ್ವೀಟ್ ಮೂಲಕ ನೀಡಿದ್ದಾರೆ. ಸತ್ಯವನ್ನು ಸಂಕಷ್ಟದಲ್ಲಿ ಸಿಲುಕಿಸಬಹುದೇ ವಿನಃ ಸೋಲಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ರಾಜಸ್ಥಾನದ ಕೈ ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದ ಡಿಸಿಎಂ ಸಚಿನ್ ಪೈಲಟ್ ತಲೆ ದಂಡವಾಗಿದೆ. ಇಂದು ಜೈಪುರದಲ್ಲಿ ನಡೆದ ಎರಡನೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗದ ಹಿನ್ನೆಲೆ ಸಚಿನ್ ಪೈಲೈಟ್ ಅವರನ್ನು ಡಿಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ಸಚಿನ್ ಪೈಲಟ್ ಬೆಂಬಲಕ್ಕೆ ನಿಂತಿದ್ದ ಸಚಿವರಾದ ವಿಶ್ವೇಂದ್ರ ಸಿಂಗ್ ಮತ್ತು ರಮೇಶ್ ಮೀನಾ ಅವರನ್ನೂ ಅವರ ಹುದ್ದೆಗಳಿಂದ ತೆಗೆದುಹಾಕಲಾಗಿದೆ. ಪೈಲೈಟ್ ಟೀಂ ನ 17 ಮಂದಿ ಸದಸ್ಯರಿಗೆ ಆತಂಕ ಶುರುವಾಗಿದೆ.

    ಇಂದಿನ ಶಾಸಕಾಂಗ ಸಭೆಯಲ್ಲಿ 109 ಶಾಸಕರು ಒಮ್ಮತ ನಿರ್ಧಾರದ ಮೂಲಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರದ ಭಾಗವಾಗಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೇವಾಲ್ ಸಭೆಯ ಬಳಿಕ ತಿಳಿಸಿದ್ದಾರೆ. ಶಾಸಕರು ಪಕ್ಷದಿಂದಲೇ ಸಚಿನ್ ಪೈಲಟ್ ಉಚ್ಚಾಟಿಸಲು ಮನವಿ ಮಾಡಿದ್ದು ಮತ್ತೊಂದು ಅವಕಾಶ ನೀಡಿದ್ದೇವೆ ಎಂದರು.

    ರಾಜಸ್ಥಾನ ರಾಜಕೀಯದಲ್ಲಿ ನಿನ್ನೆಯಿಂದ ಹೈಡ್ರಾಮ ನಡೆಯುತ್ತಿದೆ. 30 ಶಾಸಕರೊಂದಿಗೆ ಸಚಿನ್ ಪೈಲೈಟ್ ದೆಹಲಿ ಬಳಿ ಇರುವ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು. ಈ ಪೈಕಿ 13 ಮಂದಿ ರಾಜಸ್ಥಾನಕ್ಕೆ ವಾಪಸ್ ಆಗಿದ್ದರು. ಬಾಕಿ ಉಳಿದ ಸದಸ್ಯರು ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಭಾಗಿಯಾಗುವಂತೆ ಹೈಕಮಾಂಡ್ ಸೂಚಿಸಿತ್ತು. ಇಂದು ಬೆಳಗ್ಗೆ ಕೂಡಾ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅಹ್ಮದ್ ಪಟೇಲ್, ಪಿ ಚಿದಂಬರಂ, ಕೆ.ಸಿ ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ಪೈಲಟ್ ಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದರು.

    ಸಚಿನ್ ಪೈಲೈಟ್ ಯಾರ ಮಾತಿಗೂ ಬೆಲೆ ನೀಡಿರಲಿಲ್ಲ. ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ತಮ್ಮನ್ನು ಸಿಎಂ ಮಾಡಬೇಕು ಮತ್ತು ರಾಜ್ಯ ಉಸ್ತುವಾರಿಯನ್ನು ಬದಲಿಸುವಂತೆ ಡಿಮ್ಯಾಂಡ್ ಇಟ್ಟಿದ್ದರು. ಅಂತಿಮ ಹೈಕಮಾಂಡ್ ಶಾಸಕರ ಸಮ್ಮಿತಿ ಮೇರೆಗೆ ಎರಡನೇ ಶಾಸಕಾಂಗ ಸಭೆ ಬಳಿಕ ಈ ಮಹತ್ವ ನಿರ್ಧಾರ ತೆಗೆದುಕೊಂಡಿದೆ.

     

  • ರಾಜಸ್ಥಾನ ರಾಜಕೀಯ ಬಿಕ್ಕಟ್ಟು- ಸಚಿನ್ ಪೈಲಟ್‍ಗೆ ಗೇಟ್ ಪಾಸ್

    ರಾಜಸ್ಥಾನ ರಾಜಕೀಯ ಬಿಕ್ಕಟ್ಟು- ಸಚಿನ್ ಪೈಲಟ್‍ಗೆ ಗೇಟ್ ಪಾಸ್

    ಜೈಪುರ: ರಾಜಸ್ಥಾನ ಕಾಂಗ್ರೆಸ್‍ನಲ್ಲಿ ಬಂಡಾಯದ ಬಾವುಟ ಹಿಡಿದಿದ್ದ ಸಚಿನ್ ಪೈಲಟ್ ಗೆ ಕೈ ಹೈಕಮಾಂಡ್ ಬಿಗ್ ಶಾಕ್ ನೀಡಿದೆ. ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದೆ.

    ಇಂದು ಬೆಳಗ್ಗೆ 11 ಗಂಟೆಗೆ ರಾಜಸ್ಥಾನ ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭಗೊಂಡಿತ್ತು. ಸಚಿನ್ ಪೈಲಟ್ ಬಣದಲ್ಲಿ ಗುರುತಿಸಿಕೊಂಡ ಶಾಸಕರು ಸಿಎಲ್‍ಪಿ ಸಭೆಗೆ ಗೈರಾಗಿದ್ದಾರೆ. ಗೈರಾದ ಶಾಸಕರ ವಿರುದ್ಧ ಕಾನೂನು ಕ್ರಮಗಳನ್ನು ಕಾಂಗ್ರೆಸ್ ನಿರ್ಧರಿಸಿದೆ. ಇದೇ ವೇಳೆ ಸಚಿನ್ ಪೈಲಟ್ ಅವರನ್ನು ಉಚ್ಛಾಟನೆ ಮಾಡುವ ಕುರಿತ ಚರ್ಚೆಗಳು ನಡೆದಿವೆ.

    ಸಚಿನ್ ಪೈಲಟ್ ಉಚ್ಛಾಟನೆಯ ಮಾಹಿತಿ ನೀಡಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ರಣ್‍ದೀಪ್ ಸುರ್ಜೆವಾಲಾ, ಜನರಿಂದ ಆಯ್ಕೆಯಾದ ಸರ್ಕಾರವನ್ನು ಪತನ ಮಾಡಲು ಸಚಿನ್ ಪೈಲಟ್ ಮುಂದಾಗಿದ್ದರು. ಈ ಹಿನ್ನೆಲೆ ಡಿಸಿಎಂ ಮತ್ತು ಪ್ರದೇಶ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಗಿದೆ. ಬಿಜೆಪಿ ಐಟಿ ಮತ್ತು ಇಡಿ ಮೂಲಕ ಕಾಂಗ್ರೆಸ್ ಶಾಸಕರನ್ನು ಬೆದರಿಸಿ ಖರೀದಿಗೆ ಮುಂದಾಗಿದೆ ಎಂದು ಆರೋಪಿಸಿದರು.

    ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಗಣೇಶ್ ಗೋಗರಾ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಪೈಲಟ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಸಚಿವರಾದ ವಿಶ್ವೇಂದ್ರ ಸಿಂಗ್ ಮತ್ತು ರಮೇಶ್ ಮೀಣಾ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ.

  • ಪತನದತ್ತ ರಾಜಸ್ಥಾನ ಕೈ ಸರ್ಕಾರ – ಇಂದು ನಡ್ಡಾ ಜೊತೆ ಪೈಲಟ್‌ ಭೇಟಿ?

    ಪತನದತ್ತ ರಾಜಸ್ಥಾನ ಕೈ ಸರ್ಕಾರ – ಇಂದು ನಡ್ಡಾ ಜೊತೆ ಪೈಲಟ್‌ ಭೇಟಿ?

    – ಕೈ ಶಾಸಕರಿಗೆ ವಿಪ್‌ ಜಾರಿ
    – ಪೈಲಟ್‌ಗೆ 30 ಶಾಸಕರ ಬೆಂಬಲ
    – ಸಚಿನ್ ನಡೆಯನ್ನು ಸ್ವಾಗತಿಸಿದ ಸಿಂಧಿಯಾ, ಸುಧಾಕರ್‌

    ನವದೆಹಲಿ: ಪಕ್ಷದ ನಾಯಕರ ವಿರುದ್ಧವೇ ಬಂಡಾಯ ಸಾರಿರುವ ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಸಂಪರ್ಕಿಸಿ ಕಮಲ ಪಕ್ಷ ಸೇರುವ ಸಾಧ್ಯತೆಯಿದೆ.

    ಈಗಾಗಲೇ 30ಕ್ಕೂ ಹೆಚ್ಚು ಶಾಸಕರ ಬೆಂಬಲ ಪಡೆದು ದೆಹಲಿ ರೆಸಾರ್ಟ್‌ನಲ್ಲಿರುವ ಸಚಿನ್‌ ಪೈಲಟ್‌ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ 30 ಮಂದಿ ಬೆಂಬಲ ಇದ್ದರೂ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಇಂದು ಪಕ್ಷದ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ. ಬೆಳಗ್ಗೆ ನಡೆಯಲಿರುವ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ವಿಪ್‌ ಜಾರಿ ಮಾಡಿದ್ದು, ಗೈರಾದ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜಸ್ಥಾನ ಕಾಂಗ್ರೆಸ್‌ ಉಸ್ತುವಾರಿ ಅವಿನಾಶ್‌ ಪಾಂಡೆ ಎಚ್ಚರಿಕೆ ನೀಡಿದ್ದಾರೆ.

    ಈಗಾಗಲೇ 109 ಶಾಸಕರು ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ಸಹಿ ಹಾಕಿದ್ದಾರೆ. ಸಿಎಂ ಅಶೋಕ್‌ ಗೆಹ್ಲೋಟ್‌, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದಾರೆ. ಅಷ್ಟೇ ಅಲ್ಲದೇ ಕೆಲ ಶಾಸಕರು ದೂರವಾಣಿಯ ಮೂಲಕವೂ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ ಎಂಬುದಾಗಿ ತಿಳಿಸಿದ್ದಾರೆ ಎಂದು ಅವಿನಾಶ್‌ ಪಾಂಡೆ ಹೇಳಿದ್ದಾರೆ.

    ಬಲಾಬಲ ಹೇಗಿದೆ?
    ಒಟ್ಟು 200 ಸದಸ್ಯರನ್ನು ಹೊಂದಿರುವ ವಿಧಾನಸಣೆಯಲ್ಲಿ ಕಾಂಗ್ರೆಸ್‌ 107 ಶಾಸಕರನ್ನು ಹೊಂದಿದ್ದರೆ, ಬಿಜೆಪಿ 72 ಶಾಸಕರನ್ನು ಹೊಂದಿದೆ. ರಾಷ್ಟ್ರೀಯ ಲೋಕ ತಾಂತ್ರಿಕ ಪಕ್ಷದ 3, ಭಾರತೀಯ ಬುಡಕಟ್ಟು ಪಕ್ಷ, ಕಮ್ಯೂನಿಸ್ಟ್‌ ಪಕ್ಷ ತಲಾ 2, ರಾಷ್ಟ್ರೀಯ ಲೋಕದಳದ ಒಬ್ಬ ಶಾಸಕರಿದ್ದಾರೆ.

    ಮಾಧ್ಯಮಗಳಲ್ಲಿ ವರದಿಯಾದಂತೆ 30 ಶಾಸಕರು ಸಚಿನ್‌ ಪೈಲಟ್‌ ಪರ ಇದ್ದಾರೆ. ಇಷ್ಟು ಸಂಖ್ಯೆಯ ಶಾಸಕರು ರಾಜೀನಾಮೆ ನೀಡಿದರೆ ಸದನದ ಬಲ 170ಕ್ಕೆ ಕುಸಿಯಲಿದೆ. ಆಗ ಬಹುತಕ್ಕೆ 86 ಶಾಸಕರ ಬೆಂಬಲ ಬೇಕಾಗುತ್ತದೆ. ಬಿಜೆಪಿ ಪಕ್ಷೇತರರು ಮತ್ತು ಇತರರ ನೆರವು ಪಡೆದು ಅಧಿಕಾರಕ್ಕೆ ಏರಬಹುದು ಎಂಬ ಲೆಕ್ಕಾಚಾರ ಈಗ ಕೇಳಿಬಂದಿದೆ.

    75 ಶಾಸಕರು ಭಾಗಿ:
    ಸರ್ಕಾರ ಉಳಿಸುವ ಸಂಬಂಧ ಭಾನುವಾರ ಸಿಎಂ ಅಶೋಕ್‌ ಗೆಹ್ಲೋಟ್‌ ನಿವಾಸದಲ್ಲಿ ನಡೆದ ಶಾಸಕರ ಸಭೆಯಲ್ಲಿ ಸುಮಾರು 75 ಶಾಸಕರು ಹಾಜರಾಗಿದ್ದರು. ಸರ್ಕಾರವನ್ನು ಉಳಿಸುವ ನಿಟ್ಟಿನಲ್ಲಿ‌ ಹಿರಿಯ ನಾಯಕರಾದ ಅಜಯ್ ಮಕೇನ್ ಮತ್ತು ರಣದೀಪ್ ಸುರ್ಜೆವಾಲಾ‌ ಈಗಾಗಲೇ ರಾಜಸ್ಥಾನಕ್ಕೆ ಬಂದಿದ್ದಾರೆ.

    ಮಧ್ಯಪ್ರದೇಶ ಕಾಂಗ್ರೆಸ್‌ ಸರ್ಕಾರ ಪತನಗೊಳ್ಳಲು ಕಾರಣವಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಚಿನ್‌ ಪೈಲಟ್‌ ಅವರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದಾರೆ.

    ಕರ್ನಾಟಕದ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಅವರು ಟ್ವೀಟ್‌ ಮಾಡಿ, ಕಾಂಗ್ರೆಸ್‌ ಪಕ್ಷದಲ್ಲಿ ಪ್ರತಿಭೆ ಮತ್ತು ನಾಯಕತ್ವಕ್ಕೆ ಬೆಲೆ ಇಲ್ಲ. ನಾನು ವೈಯಕ್ತಿಕವಾಗಿ ಸಚಿನ್‌ ಪೈಲಟ್‌ ಬಿಜೆಪಿಗೆ ಸೇರ್ಪಡೆಯಾಗುವುದನ್ನು ಸ್ವಾಗತಿಸುತ್ತೇನೆ. ಬಿಜೆಪಿ ಒಂದೇ ಎಲ್ಲ ನಾಯಕರಿಗೆ ಬೆಲೆ ನೀಡುತ್ತದೆ ಎಂದು ತಿಳಿಸಿದ್ದಾರೆ.

    ಮಾಜಿ ಹಣಕಾಸು ಸಚಿವ ಚಿದಂಬರಂ ಪುತ್ರ ಕಾರ್ತಿ ಅವರು ಟ್ವೀಟ್‌ ಮಾಡಿ, ಗೂಗಲ್‌ ಕಂಪನಿ ಯಶಸ್ವಿ ಕಂಪನಿಯಾಗಿ ರೂಪುಗೊಂಡಿದ್ದು ಹೇಗೆ ? ಯಾಕೆಂದರೆ ಕಂಪನಿಯ ಒಳಗಡೆ ಇರುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಈ ಪಾಠವನ್ನು ನಾವು ಕಲಿಯಬೇಕು ಎಂದು ಬರೆದುಕೊಂಡಿದ್ದಾರೆ.

    ಭಾನುವಾರ ರಾಜಸ್ಥಾನ ಸರ್ಕಾರದಲ್ಲಿನ ಭಿನ್ನಮತದ ಬಗ್ಗೆ ಹಿರಿಯ ನಾಯಕ ಕಪಿಲ್ ಸಿಬಲ್‌ ಬೇಸರದ ಟ್ವೀಟ್ ಮಾಡಿದ್ದರು. ನಮ್ಮ ಪಕ್ಷದ ಬಗ್ಗೆ ನನಗೆ ಆತಂಕವಾಗುತ್ತಿದೆ. ನಮ್ಮ ಲಾಯಗಳಿಂದ(ಕುದುರೆಗಳನ್ನು ಕಟ್ಟಿ ಹಾಕುವ ಜಾಗ) ಕುದುರೆಗಳು ಹೊರ ಬಂದ ನಂತರ ನಾವು ಎಚ್ಚೆತ್ತುಕೊಳ್ಳುವುದೇ ಎಂದು ಪ್ರಶ್ನಿಸಿದ್ದರು.

  • ‘ಕುದುರೆಗಳು ಹೊರ ಬಂದ ನಂತರವಷ್ಟೇ ನಾವು ಎಚ್ಚೆತ್ತುಕೊಳ್ಳುವುದೇ’ – ಪಕ್ಷದ ಬಗ್ಗೆ ಸಿಬಲ್‌ ಆತಂಕ

    ‘ಕುದುರೆಗಳು ಹೊರ ಬಂದ ನಂತರವಷ್ಟೇ ನಾವು ಎಚ್ಚೆತ್ತುಕೊಳ್ಳುವುದೇ’ – ಪಕ್ಷದ ಬಗ್ಗೆ ಸಿಬಲ್‌ ಆತಂಕ

    ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ, ವಕೀಲ ಕಪಿಲ್‌ ಸಿಬಲ್‌ ಮೊದಲ ಬಾರಿಗೆ ಬಹಿರಂಗವಾಗಿ ಪಕ್ಷದ ನಡೆಯ ಬಗ್ಗೆ ಪ್ರಶ್ನಿಸಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

    ರಾಜಸ್ಥಾನ ಸರ್ಕಾರದಲ್ಲಿನ ಭಿನ್ನಮತದ ಬಗ್ಗೆ ಕಪಿಲ್ ಸಿಬಲ್‌ ಬೇಸರದ ಟ್ವೀಟ್ ಮಾಡಿದ್ದಾರೆ. ನಮ್ಮ ಪಕ್ಷದ ಬಗ್ಗೆ ನನಗೆ ಆತಂಕವಾಗುತ್ತಿದೆ. ನಮ್ಮ ಲಾಯಗಳಿಂದ(ಕುದುರೆಗಳನ್ನು ಕಟ್ಟಿ ಹಾಕುವ ಜಾಗ) ಕುದುರೆಗಳು ಹೊರ ಬಂದ ನಂತರ ನಾವು ಎಚ್ಚೆತ್ತುಕೊಳ್ಳುವುದೇ ಎಂದು ಪ್ರಶ್ನಿಸಿದ್ದಾರೆ.

    ಕಾಂಗ್ರೆಸ್‌ ಶಾಸಕರ ಖರೀದಿಗೆ ಕುದುರೆ ವ್ಯಾಪಾರ ನಡೆಸಿ ಸರ್ಕಾರ ಉರುಳಿಸಲು ಮುಂದಾಗಿದ್ದಾರೆ ಎಂಬ ಆರೋಪದ ಮೇರೆಗೆ ಇಬ್ಬರು ವ್ಯಕ್ತಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಪಡೆಯು (ಎಸ್‌ಒಜಿ) ಪ್ರಕರಣ ದಾಖಲಿಸಿ ಬಂಧಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ಪೊಲೀಸರು ಸಚಿನ್ ಪೈಲಟ್‌ಗೆ ನೋಟಿಸ್‌ ಕಳುಹಿಸಿದ್ದರು.

    ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. ಕಾಂಗ್ರೆಸ್‌ ಶಾಸಕರನ್ನು ಖರೀದಿಸಲು ಬಿಜೆಪಿ 25 ಕೋಟಿ ನೀಡುವ ಆಮಿಷ ಒಡ್ಡಿದೆ ಎಂದು ಹೇಳಿದ್ದಾರೆ.

    2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಗಳಿಸಿದ ಬಳಿಕ 69 ವರ್ಷದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು 42 ವರ್ಷದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್‌ ನಡುವೆ ಭಿನ್ನಮತ ಎದ್ದಿತ್ತು. ಆಗ ಹೇಗೂ ಕಾಂಗ್ರೆಸ್‌ ಹೈಕಮಾಂಡ್‌ ಭಿನ್ನಮತವನ್ನು ಶಮನ ಮಾಡಲು ಸಚಿನ್ ಪೈಲಟ್‌ಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿ ಸಮಾಧಾನ ಮಾಡಿತ್ತು. ಆದರೆ ಈಗ ಭಿನ್ನಮತ ಮತ್ತಷ್ಟು ಉಲ್ಬಣಗೊಂಡಿದ್ದು ಪೈಲಟ್‌ ಅವರು ತಮ್ಮ ಆಪ್ತ 25 ಶಾಸಕರ ಜೊತೆ ಹೈಕಮಾಂಡ್‌ ಭೇಟಿಯಾಗಲು ದೆಹಲಿಗೆ ಬಂದಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಹೈಡ್ರಾಮಾ – 25 ಶಾಸಕರ ಜೊತೆ ದೆಹಲಿ ತಲುಪಿದ ಪೈಲಟ್‌

    ಒಟ್ಟು 200 ವಿಧಾನ ಸಭಾ ಕ್ಷೇತ್ರಗಳ ಪೈಕಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ 100 ಕ್ಷೇತ್ರಗಳನ್ನು ಗೆದ್ದಿದ್ದರೆ ಬಿಜೆಪಿ 72 ಸ್ಥಾನವನ್ನು ಗೆದ್ದಿತ್ತು. ಬಳಿಕ ಬಿಎಸ್‌‌ಪಿಯ 6 ಮಂದಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. 13 ಮಂದಿ ಪಕ್ಷೇತರ ಶಾಸಕರ ಪೈಕಿ 12 ಮಂದಿ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿದ್ದಾರೆ. ಇತ್ತ ಬಿಜೆಪಿ ಬಳಿ 72 ಶಾಸಕರು ಇದ್ದಾರೆ. ಬಿಜೆಪಿಗೆ ಆರ್‌ಎಲ್‌ಪಿಯ ಒಬ್ಬರು ಮತ್ತು ಪಕ್ಷೇತರ ಶಾಸಕರು ಬೆಂಬಲ ನೀಡಿದ್ದಾರೆ.

  • ರಾಜಸ್ಥಾನದಲ್ಲಿ ಹೈಡ್ರಾಮಾ – 25 ಶಾಸಕರ ಜೊತೆ ದೆಹಲಿ ತಲುಪಿದ ಪೈಲಟ್‌

    ರಾಜಸ್ಥಾನದಲ್ಲಿ ಹೈಡ್ರಾಮಾ – 25 ಶಾಸಕರ ಜೊತೆ ದೆಹಲಿ ತಲುಪಿದ ಪೈಲಟ್‌

    ಮತ್ತೆ ಆಪರೇಷನ್‌ ಕಮಲ ನಡೆಯುತ್ತಾ?
    – ಬಿಜೆಪಿಯಿಂದ ಶಾಸಕರಿಗೆ 25 ಕೋಟಿ ಆಫರ್‌
    – ಸಿಎಂ ಗೆಹ್ಲೋಟ್‌ ಗಂಭೀರ ಆರೋಪ

    ಜೈಪುರ/ನವದೆಹಲಿ: ರಾಜಸ್ಥಾನ ಕಾಂಗ್ರೆಸ್‌ ಸರ್ಕಾರದಲ್ಲಿ ಹೈಡ್ರಾಮಾ ಸೃಷ್ಟಿಯಾಗಿದ್ದು, ಮಧ್ಯಪ್ರದೇಶದಲ್ಲಿ ನಡೆದಂತೆ ಇಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತಾ ಎಂಬ ಪ್ರಶ್ನೆ ಎದ್ದಿದೆ. ಇಲ್ಲಿಯವರೆಗೆ ತೆರೆ ಮರೆಯಲ್ಲಿ ನಡೆಯುತ್ತಿದ್ದ ನಾಯಕರ ನಡುವಿನ ಗುದ್ದಾಟ ಈಗ ಬಹಿರಂಗವಾಗಿದ್ದು ಬಿಕ್ಕಟ್ಟು ಈಗ ದೆಹಲಿ ಹೈಕಮಾಂಡ್‌ ಅಂಗಳಕ್ಕೆ‌ ತಲುಪಿದೆ.

    2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಗಳಿಸಿದ ಬಳಿಕ 69 ವರ್ಷದ  ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು 42 ವರ್ಷದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್‌ ನಡುವೆ ಭಿನ್ನಮತ ಎದ್ದಿತ್ತು. ಆಗ ಹೇಗೂ ಕಾಂಗ್ರೆಸ್‌ ಹೈಕಮಾಂಡ್‌ ಭಿನ್ನಮತವನ್ನು ಶಮನ ಮಾಡಲು ಸಚಿನ್ ಪೈಲಟ್‌ಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿ ಸಮಾಧಾನ ಮಾಡಿತ್ತು. ಆದರೆ ಈಗ ಭಿನ್ನಮತ ಮತ್ತಷ್ಟು ಉಲ್ಬಣಗೊಂಡಿದ್ದು ಪೈಲಟ್‌ ಅವರು ತಮ್ಮ ಆಪ್ತ 25 ಶಾಸಕರ ಜೊತೆ ಹೈಕಮಾಂಡ್‌ ಭೇಟಿಯಾಗಲು ದೆಹಲಿಗೆ ಬಂದಿದ್ದಾರೆ ಎಂದು ವರದಿಯಾಗಿದೆ.

    ದಿಢೀರ್‌ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಸಿಎಂ ಗೆಹ್ಲೋಟ್‌ ತನ್ನ ಮಂತ್ರಿಗಳು, ಆಪ್ತ ಶಾಸಕರು ಮತ್ತು ಪಕ್ಷೇತರ ಶಾಸಕರ ಜೊತೆ ಸಭೆ ನಡೆಸಿ ಪತ್ರದ ಮೂಲಕ ಸರ್ಕಾರಕ್ಕೆ ಬೆಂಬಲ ನೀಡುವಂತೆ ಸೂಚಿಸಿದ್ದರು.

    ಕಾಂಗ್ರೆಸ್‌ ಶಾಸಕರ ಖರೀದಿಗೆ ಕುದುರೆ ವ್ಯಾಪಾರ ನಡೆಸಿ ಸರ್ಕಾರ ಉರುಳಿಸಲು ಮುಂದಾಗಿದ್ದಾರೆ ಎಂಬ ಆರೋಪದ ಮೇರೆಗೆ ಇಬ್ಬರು ವ್ಯಕ್ತಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಪಡೆಯು (ಎಸ್‌ಒಜಿ) ಪ್ರಕರಣ ದಾಖಲಿಸಿ ಬಂಧಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ಪೊಲೀಸರು ಸಚಿನ್ ಪೈಲಟ್‌ಗೆ ನೋಟಿಸ್‌ ಕಳುಹಿಸಿದ್ದರು.

    ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. ಕಾಂಗ್ರೆಸ್‌ ಶಾಸಕರನ್ನು ಖರೀದಿಸಲು ಬಿಜೆಪಿ 25 ಕೋಟಿ ನೀಡುವ ಆಮಿಷ ಒಡ್ಡಿದೆ ಎಂದು ಹೇಳಿದ್ದಾರೆ.

    ಈ ಬಗ್ಗೆ ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್‌ ಪುನಿಯಾ ಪ್ರತಿಕ್ರಿಯಿಸಿ, ಮಧ್ಯಪ್ರದೇಶದಲ್ಲಿ ಉತ್ತಮ ಆಡಳಿತ ನೀಡಲು ಕಾಂಗ್ರೆಸ್‌ ವಿಫಲವಾಗಿದೆ. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ಗೆಹ್ಲೋಟ್‌ ಬಿಜೆಪಿ ವಿರುದ್ಧ ಮಾತನಾಡಿದ್ದಾರೆ. ಸರ್ಕಾರದಲ್ಲಿ ಎಲ್ಲವೂ ಸರಿ ಇದ್ದರೆ ಹೆದರಿಕೆ ಯಾಕೆ ಎಂದು ಪ್ರಶ್ನಿಸಿದ್ದಾರೆ.

    ಒಟ್ಟು 200 ವಿಧಾನ ಸಭಾ ಕ್ಷೇತ್ರಗಳ ಪೈಕಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ 100 ಕ್ಷೇತ್ರಗಳನ್ನು ಗೆದ್ದಿದ್ದರೆ ಬಿಜೆಪಿ 72 ಸ್ಥಾನವನ್ನು ಗೆದ್ದಿತ್ತು. ಬಳಿಕ ಬಿಎಸ್‌‌ಪಿಯ 6 ಮಂದಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. 13 ಮಂದಿ ಪಕ್ಷೇತರ ಶಾಸಕರ ಪೈಕಿ 12 ಮಂದಿ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿದ್ದಾರೆ. ಇತ್ತ ಬಿಜೆಪಿ ಬಳಿ 72 ಶಾಸಕರು ಇದ್ದಾರೆ. ಬಿಜೆಪಿಗೆ ಆರ್‌ಎಲ್‌ಪಿಯ ಒಬ್ಬರು ಮತ್ತು ಪಕ್ಷೇತರ ಶಾಸಕರು ಬೆಂಬಲ ನೀಡಿದ್ದಾರೆ.

    ದೆಹಲಿಗೆ ಬಂದಿದ್ದು ಯಾಕೆ?
    ಸಚಿನ್‌ ಪೈಲಟ್‌ 25 ಶಾಸಕರೊಂದಿಗೆ ದೆಹಲಿ ತಲುಪಿದ್ದು, ಈಗಾಗಲೇ ಐಟಿಸಿ ಹೋಟೆಲ್‌‌ ಬುಕ್‌ ಮಾಡಲಾಗಿದೆ ಎಂದು ವರದಿಯಾಗಿದೆ. ಶಾಸಕರ ಜೊತೆ ದೆಹಲಿಗೆ ಬಂದಿರುವ ಪೈಲಟ್ ಸರ್ಕಾರವನ್ನು ಉರುಳಿಸಲು ಕರೆದುಕೊಂಡು ಬಂದಿದ್ದಾರಾ ಅಥವಾ ಹೈಕಮಾಂಡ್‌ಗೆ ತನ್ನ ಶಕ್ತಿ ಪ್ರದರ್ಶನ ಮಾಡಿ ಮುಖ್ಯಮಂತ್ರಿ ಪಟ್ಟ ನೀಡಲು ಒತ್ತಡ ಹೇರಲು ಕರೆ ತಂದಿದ್ದಾರಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

    ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಆದರೆ ಕಮಲ್‌ನಾಥ್‌ ಮತ್ತು ಜ್ಯೋತಿರಾದಿತ್ಯ ಸಿಂದಿಯಾ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಸರ್ಕಾರ ಪತನಗೊಂಡಿತ್ತು. ಜುಲೈನಲ್ಲಿ ನಡೆದ ಸಂಪುಟ ವಿಸ್ತರಣೆಯಲ್ಲಿ ಸಿಂದಿಯಾ ಬಣದ 12 ಮಂದಿ ಶಾಸಕರಿಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಂತ್ರಿಸ್ಥಾನ ನೀಡಿದ್ದರು.