Tag: Sachin Pilot

  • ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಬಳಿ ಶಾಶ್ವತವಾಗಿ ಇರಿಸಲಾಗಿದೆ: ರಾಜಸ್ಥಾನ ಸಿಎಂ

    ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಬಳಿ ಶಾಶ್ವತವಾಗಿ ಇರಿಸಲಾಗಿದೆ: ರಾಜಸ್ಥಾನ ಸಿಎಂ

    ಜೈಪುರ: ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಳಿ ಶಾಶ್ವತವಾಗಿ ಇರಿಸಲಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜೀನಾಮೆ ಶಾಶ್ವತವಾಗಿ ಸೋನಿಯಾ ಗಾಂಧಿಯವರ ಬಳಿ ಇದೆ. ಹೈಕಮಾಂಡ್ ಮುಖ್ಯಮಂತ್ರಿಯನ್ನು ಬದಲಾಯಿಸಲು ನಿರ್ಧರಿಸಿದಾಗ ಯಾರಿಗೂ ಸುಳಿವು ಸಿಗುವುದಿಲ್ಲ. ಜೊತೆಗೆ ಈ ಬಗ್ಗೆ ಯಾವುದೇ ಚರ್ಚೆ ನಡೆಸುವುದಿಲ್ಲ ಎಂದರು.

    ಕಾಂಗ್ರೆಸ್ ಹೈಕಮಾಂಡ್‍ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರವಾಗಿದೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆಗೂ ಮುನ್ನ ಕಾಂಗ್ರೆಸ್ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂಬ ವದಂತಿಗಳಿಗೆ ಗಮನ ಕೊಡಬೇಡಿ. ಇದರಿಂದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಮನವಿ ಮಾಡಿದರು.

    ಕಳೆದ 2-3 ದಿನಗಳಿಂದ ರಾಜಸ್ಥಾನದ ಮುಖ್ಯಮಂತ್ರಿಯನ್ನು ಬದಲಾಯಿಸುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಈ ರೀತಿ ಊಹಾಪೋಹಗಳು ಹರಿದಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಗಲಭೆಯನ್ನು ನಿಯಂತ್ರಿಸುವಲ್ಲಿ ಅಮಿತ್ ಶಾ ಸಂಪೂರ್ಣ ವಿಫಲ: ಶರದ್ ಪವಾರ್

    ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯ ನಂತರ ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಯಕತ್ವದ ಬದಲಾವಣೆ ಆಗಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇದನ್ನೂ ಓದಿ: ಮುಸ್ಲಿಮರನ್ನು ಕಂಡಾಕ್ಷಣ ಪಾಕಿಸ್ತಾನದವರು, ಉಗ್ರಗಾಮಿಗಳು ಎನ್ನುವುದು ಸರಿಯಲ್ಲ: ಮಾಜಿ‌ ಸಚಿವ ಈಶ್ವರಪ್ಪ

  • ಬಿಜೆಪಿ ಅಧಿಕಾರದಿಂದ ದೇಶದಲ್ಲಿ ಆಕ್ರಮಣಕಾರಿ ರಾಜಕೀಯ: ಸಚಿನ್ ಪೈಲಟ್

    ಬಿಜೆಪಿ ಅಧಿಕಾರದಿಂದ ದೇಶದಲ್ಲಿ ಆಕ್ರಮಣಕಾರಿ ರಾಜಕೀಯ: ಸಚಿನ್ ಪೈಲಟ್

    ಜೈಪುರ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದಲ್ಲಿ ಆಕ್ರಮಣಕಾರಿ ರಾಜಕೀಯ ಪ್ರಾರಂಭವಾಗಿದೆ ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ವಾಗ್ದಾಳಿ ನಡೆಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವವು ವಿಭಿನ್ನ ವಿಚಾರಧಾರೆಗಳು ಮತ್ತು ಚಿಂತನೆಯ ಜನರು ತಮ್ಮದೇ ಆದ ಮಾತುಗಳನ್ನು ಮಾತನಾಡುವ ವೇದಿಕೆಯಾಗಿದೆ. ಇಲ್ಲಿ ಯಾರು ಸರಿ ಮತ್ತು ಯಾರು ತಪ್ಪು ಎಂದು ಸಾರ್ವಜನಿಕರು ನಿರ್ಧರಿಸುತ್ತಾರೆ ಎಂದರು.

    ನಾವು ಪರಸ್ಪರ ವಿರೋಧಿಸುವುದು ಆರೋಗ್ಯಕರ ಸಂಪ್ರದಾಯವಾಗಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ನಾವು ಸುಸಂಸ್ಕೃತ ಭಾಷೆಯನ್ನು ಬಳಸಬೇಕು ಮತ್ತು ರಾಜಕೀಯದಲ್ಲಿ ಹಿಂಸೆಗೆ ಯಾವುದೇ ಸ್ಥಾನವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೇಸರಿ ಪೇಟ, ಕೇಸರಿ ಶಾಲಿನೊಂದಿಗೆ ಕಾಲೇಜಿಗೆ ಬಂದ ಎಂಜಿಎಂ ವಿದ್ಯಾರ್ಥಿಗಳು!

    ರಾಜಸ್ಥಾನದಲ್ಲಿ ಬಾಕಿ ಉಳಿದಿರುವ ರಾಜಕೀಯ ನೇಮಕಾತಿಗಳ ಕುರಿತು ಮಾತನಾಡಿದ ಅವರು, ಎಲ್ಲರಿಗೂ ಮಂತ್ರಿ ಅಥವಾ ಇತರ ದೊಡ್ಡ ಹುದ್ದೆಯನ್ನು ನೀಡಲಾಗುವುದಿಲ್ಲ. ಆದರೆ ಸರ್ಕಾರದಲ್ಲಿ ಅವರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬಡವರಿಗೆ ಸಹಾಯ ಮಾಡಬಾರದೇ?- ಮೋದಿಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

    ಇತ್ತೀಚೆಗಿನ ಎರಡು-ಮೂರು ತಿಂಗಳಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಸರಿಯಾದ ದಿಕ್ಕಿನಲ್ಲಿ ಕೆಲವು ಹೆಜ್ಜೆಗಳನ್ನು ಇಟ್ಟಿದ್ದು, 2023ರಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ಮತ್ತೆ ಕಾಂಗ್ರೆಸ್ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದರು.

  • ಬಿಜೆಪಿ ಸೇರುತ್ತಾರಾ ಸಚಿನ್ ಪೈಲಟ್? – ಮತ್ತೆ ಜೋರಾಯ್ತು ಚರ್ಚೆ

    ಬಿಜೆಪಿ ಸೇರುತ್ತಾರಾ ಸಚಿನ್ ಪೈಲಟ್? – ಮತ್ತೆ ಜೋರಾಯ್ತು ಚರ್ಚೆ

    ಜೈಪುರ: ರಾಜಸ್ಥಾನ ಉಪ ಮುಖ್ಯಮಂತ್ರಿಯಾಗಿರುವ ಸಚಿನ್ ಪೈಲಟ್ ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

    ಹೌದು. ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಎಪಿ ಅಬ್ದುಲ್ ಕುಟ್ಟಿ ನೀಡಿರುವ ಹೇಳಿಕೆಯಿಂದ ಈ ಪ್ರಶ್ನೆ ಈಗ ಎದ್ದಿದೆ. ಭಾನುವಾರ ಮಾತನಾಡಿದ ಅವರು, ಸಚಿನ್ ಪೈಲಟ್ ಉತ್ತಮ ನಾಯಕ. ಅವರು ಭವಿಷ್ಯದಲ್ಲಿ ಬಿಜೆಪಿ ಸೇರಬಹುದು ಎಂದು ಎಂದು ನಾನು ಊಹಿಸುತ್ತೇನೆ ಎಂದು ಹೇಳಿದ್ದಾರೆ.

    ಈ ಮಾತನ್ನು ಸಚಿನ್ ಪೈಲಟ್ ತಿರಸ್ಕರಿಸಿದ್ದಾರೆ. ನಾನು ಬಿಜೆಪಿ ಸೇರುವುದಿಲ್ಲ. ರಾಜಸ್ಥಾನದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ಏರಲು ನಾವು ಬಹಳ ಶ್ರಮ ಪಟ್ಟಿದ್ದೇವೆ ಎಂದು ಹೇಳಿದ್ದಾರೆ.

    ಈ ಹಿಂದೆಯೇ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಡೆಯಿಂದ ಅಸಮಾಧಾನಗೊಂಡು ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದನ್ನೂ ಓದಿ : ದೊಡ್ಡ ದೊಡ್ಡ ರಾಜಕಾರಣಿಗಳು ದೂರು ಕೊಟ್ಟಿರೋ ಅನುಮಾನ ಇದೆ: ಜಮೀರ್ ಬಾಂಬ್

     

    ಕಳೆದ ವರ್ಷದ ರಾಜಸ್ಥಾನ ಕ್ಯಾಬಿನೆಟ್ ವಿಸ್ತರಣೆಯ ಸಂದರ್ಭದಲ್ಲಿ ತನ್ನ ಆಪ್ತರಾಗಿರುವ 18 ಮಂದಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಪೈಲಟ್ ಹೇಳಿದ್ದರು. ಆದರೆ ಈ ಬೇಡಿಕೆಯನ್ನು ಅಶೋಕ್ ಗೆಹ್ಲೋಟ್ ಒಪ್ಪಿರಲಿಲ್ಲ. ಹೀಗಾಗಿ ಗೆಹ್ಲೋಟ್ ವಿರುದ್ಧ ಮುನಿಸುಕೊಂಡಿದ್ದ ಸಚಿನ್ ಪೈಲಟ್ ಬಿಜೆಪಿ ಸೇರುತ್ತಾರೆ ಎಂಬ ವದಂತಿ ಹರಡಿತ್ತು. ಆಂತರಿಕ ಕಿತ್ತಾಟ ಜೋರಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಹೈಕಮಾಂಡ್ ಸಚಿನ್ ಪೈಲಟ್ ಆಪ್ತರಿಗೆ ಮಂತ್ರಿಸ್ಥಾವನ್ನು ನೀಡಿ ಭಿನ್ನಮತವನ್ನು ಶಮನ ಮಾಡಿತ್ತು.

  • ರಾಜಸ್ಥಾನ ಸರ್ಕಾರದಲ್ಲಿ ಭಿನ್ನಮತ ಸ್ಫೋಟ – 9 ಸಚಿವ ಸ್ಥಾನಕ್ಕೆ ಪಟ್ಟು

    ರಾಜಸ್ಥಾನ ಸರ್ಕಾರದಲ್ಲಿ ಭಿನ್ನಮತ ಸ್ಫೋಟ – 9 ಸಚಿವ ಸ್ಥಾನಕ್ಕೆ ಪಟ್ಟು

    ನವದೆಹಲಿ: ರಾಜಸ್ಥಾನ ಕಾಂಗ್ರೆಸ್ ಸರ್ಕಾರದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಸಚಿನ್ ಪೈಲಟ್ ನೇತೃತ್ವದ ಬಣ ಸರ್ಕಾರ ಮತ್ತು ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

    ಖಾಲಿ ಇರುವ 9 ಸಚಿವ ಸ್ಥಾನಗಳನ್ನು ತಮ್ಮ ಬೆಂಬಲಿಗ ಶಾಸಕರಿಗೆ ನೀಡಬೇಕು ಎಂಬ ಸಚಿನ್ ಪೈಲಟ್ ಬೇಡಿಕೆಗೆ ಇನ್ನೂ ಹೈಕಮಾಂಡ್ ನಾಯಕರಿಂದ ಯಾವುದೇ ಸ್ಪಷ್ಟವಾದ ನಿರ್ಧಾರ ಪ್ರಕಟವಾಗಿಲ್ಲ.  ಇದನ್ನೂ ಓದಿ: ರಾಹುಲ್ ಆಪ್ತ ಜಿತಿನ್ ಪ್ರಸಾದ ಬಿಜೆಪಿಗೆ ಸೇರ್ಪಡೆ

    ಪೈಲಟ್ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿದ್ದು ಭಿನ್ನಮತವನ್ನು ಶಮನ ಮಾಡುವ ನಿಟ್ಟಿನಲ್ಲಿ ಶೀಘ್ರವೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದ್ದು, ಬಿಕ್ಕಟ್ಟನ್ನು ಪರಿಹರಿಸಲು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಮುಂದೆ ನಿಂತಿದ್ದಾರೆ ಎಂದು ವರದಿಯಾಗಿದೆ.

    ಮೂಲಗಳ ಪ್ರಕಾರ ಕೆಲ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು ಪೈಲಟ್ ಬಣದ 5 ಮಂದಿ ಶಾಸಕರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಯಿದೆ.

    ಸಿಎಂ ಅಶೋಕ್ ಗೆಹ್ಲೋಟ್ ಸಂಪುಟದಲ್ಲಿ 9 ಸ್ಥಾನ ಖಾಲಿಯಿದೆ. ಈ ಸ್ಥಾನದ ಮೇಲೆ ಬಿಎಸ್‍ಪಿಯಿಂದ ಕಾಂಗ್ರೆಸ್‍ಗೆ ಬಂದ ಶಾಸಕರು ಕಣ್ಣಿಟ್ಟಿದ್ದಾರೆ. ಹೀಗಾಗಿ ಸಮಸ್ಯೆ ಜಟಿಲವಾಗಿದ್ದು ಗೆಹ್ಲೋಟ್ ಈ ಶಾಸಕರ ಜೊತೆಗೂ ಸಭೆ ನಡೆಸುತ್ತಿದ್ದಾರೆ.

    ನಮ್ಮ ಶಾಸಕರ ಫೋನ್‍ಗಳನ್ನು ಕದ್ದಾಲಿಕಗೆ ಮಾಡಲಾಗುತ್ತಿದೆ ಎಂದು ಪೈಲಟ್ ಬಣದ ಶಾಸಕ ಸೋಲಂಕಿ ಗಂಭೀರವಾದ ಆರೋಪ ಮಾಡಿದ್ದಾರೆ. ಈ ನಡುವೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಚಿನ್ ಪೈಲಟ್ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕಳೆದ ವರ್ಷವೇ ಸಚಿನ್ ಪೈಲಟ್ ಬಿಜೆಪಿ ಸೇರಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಕೊನೆಗೆ ಹೈಕಮಾಂಡ್ ಮಧ್ಯಪ್ರವೇಶಿಸಿ ಸಚಿನ್ ಪೈಲಟ್ ಅವರನ್ನು ಸಮಾಧಾನಪಡಿಸಿತ್ತು. ಈಗ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ ಅವರು ಬಿಜೆಪಿ ಸೇರಿದ ಬೆನ್ನಲ್ಲೇ ಸಚಿನ್ ಪೈಲಟ್ ಸಹ ಬಿಜೆಪಿ ಸೇರುವ ಸಾಧ್ಯತೆಯಿದೆ ಎಂಬ ವದಂತಿಗಳು ಹರಿದಾಡುತ್ತಿವೆ.

  • ರಾಜಸ್ಥಾನ ಹೈಡ್ರಾಮಾಕ್ಕೆ ತೆರೆ – ವಿಶ್ವಾಸ ಮತ ಗೆದ್ದ ಗೆಹ್ಲೋಟ್

    ರಾಜಸ್ಥಾನ ಹೈಡ್ರಾಮಾಕ್ಕೆ ತೆರೆ – ವಿಶ್ವಾಸ ಮತ ಗೆದ್ದ ಗೆಹ್ಲೋಟ್

    ಜೈಪುರ: ರಾಜಸ್ಥಾನದಲ್ಲಿ ಬೀಳುವ ಹಂತ ತಲುಪಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಮರುಜೀವ ಸಿಕ್ಕಂತಾಗಿದ್ದು, ಇಂದು ನಡೆದ ವಿಶ್ವಾಸ ಮತದಲ್ಲಿ ಸಿಎಂ ಗೆಹ್ಲೋಟ್‌ ಜಯಗಳಿಸಿದ್ದು ಇನ್ನು 6 ತಿಂಗಳು ಯಾವುದೇ ಗೊಂದಲ ಇಲ್ಲದೇ ಸರ್ಕಾರ ಆಡಳಿತ ನಡೆಸಲಿದೆ.

    ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬಂಡಾಯದ ಬಳಿಕ ಕಳೆದ ಕೆಲ ತಿಂಗಳಿಂದ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅತಂತ್ರವಾಗಿತ್ತು. ಇಂದು ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರದ ಪರ 125 ಶಾಸಕರು ಬೆಂಬಲ ಸೂಚಿಸಿದರೆ ಬಿಜೆಪಿ ಪರ 75 ಶಾಸಕರು ಬೆಂಬಲ ಸೂಚಿಸಿದರು.

    ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬಂಡಾಯದ ಬಳಿಕ ಬಿಜೆಪಿ ಆಪರೇಷನ್ ಕಮಲ ನೆಡೆಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇತ್ತೀಚೆಗೆ ಪೈಲಟ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗುವ ಮೂಲಕ ಈ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದರು.

    ಬಂಡಾಯದ ಬಳಿಕ ಎರಡೂ ತಂಡಗಳ ಶಾಸಕರು ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖಾಮುಖಿಯಾಗಿದ್ದರು. ಸಭೆಯಲ್ಲಿ ವಿಶ್ವಾಸ ಮತಯಾಚನೆ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಇಂದು ಟ್ರಸ್ಟ್‌ ವೋಟ್‌ ನಡೆದಿದ್ದು, ರಾಜಸ್ಥಾನ ವಿಧಾನಸಭೆಯಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರ ವಿಶ್ವಾಸ ಮತದಲ್ಲಿ ಜಯಗಳಿಸಿದೆ.

    ಈ ಕುರಿತು ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಪ್ರತಿಕ್ರಿಯಿಸಿದ್ದು, ಈ ಗೆಲುವಿನಿಂದಾಗಿ ಎಲ್ಲ ಊಹಾಪೋಹಗಳಿಗೆ ವಿರಾಮ ಬಿದ್ದಂತಾಗಿದೆ. ನಮ್ಮೆಲ್ಲ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಸಮಯಕ್ಕೆ ಸರಿಯಾಗಿ ಈ ಮಾರ್ಗಸೂಚಿಯಂತೆ ನಡೆದುಕೊಳ್ಳುತ್ತಾರೆಂಬ ಸಂಪೂರ್ಣ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

    ಇಂದು ನಡೆದ ಅಧಿವೇಶನದ ಚರ್ಚೆಯ ಸಮಯದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಬಿಜೆಪಿ ಸರ್ಕಾರ ಬೀಳಿಸುವ ಸಂಚು ರೂಪಿಸಿತ್ತು ಎಂದು ವಾಗ್ದಾಳಿ ನಡೆಸಿದರು. ಸಚಿನ್ ಪೈಲೆಟ್‌ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ. ಅಮಿತ್ ಶಾ ಪೈಲಟ್ ಅವರನ್ನು ಸಂಪರ್ಕಿಸಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬಂದಿತ್ತು.

    ಈ ಸೋಲು ನಿಮಗೆ, ನಿಮ್ಮ ನಾಯಕರಿಗೆ ಆಘಾತವನ್ನುಂಟು ಮಾಡಿದೆ. ಈ ಪಿತೂರಿಯಲ್ಲಿ ಕೇಂದ್ರದ ಹಲವು ನಾಯಕರು ಸಹ ಭಾಗಿಯಾಗಿದ್ದರು. ನೀವು ಉಪಮುಖ್ಯಮಂತ್ರಿ ಬಗ್ಗೆ ಮಾತನಾಡುತ್ತೀರಿ. ಆದರೆ ಈ ಪಿತೂರಿಯನ್ನು ಮಾಡಿದ್ದೇ ನೀವು, ನಿಮ್ಮ ಪಕ್ಷ ಹಾಗೂ ಬಿಜೆಪಿ ಹೈ ಕಮಾಂಡ್ ಎಂದು ಕಾಂಗ್ರೆಸ್ ಟೀಕಿಸಿದೆ.

    ವಿಶ್ವಾಸ ಮತಯಾಚನೆ ವೇಳೆ ಸಚಿನ್ ಪೈಲಟ್ ತಮ್ಮ ಭಾಷಣದುದ್ದಕ್ಕೂ ಒಗ್ಗಟ್ಟಿನ ಜಪ ಮಾಡಿದ್ದು, ಕಾಂಗ್ರೆಸ್‍ನಲ್ಲಿದ್ದ ಆಂತರಿಕ ಸಮಸ್ಯೆಗಳೆಲ್ಲವೂ ಬಗೆಹರಿದಿವೆ. ಆಡಳಿತ ಪಕ್ಷ ಒಗ್ಗಟ್ಟಾಗಿ ನಿಲ್ಲಲಿದೆ. ವಿರೋಧ ಪಕ್ಷ ಇದೆಲ್ಲವನ್ನು ಬಿಟ್ಟು ವಿಶ್ವಾಸ ಮತಯಾಚನೆ ಬಗ್ಗೆ ಗಮನಹರಿಸಲಿ ಎಂದು ಹೇಳಿದರು.

  • ಕಾಂಗ್ರೆಸ್‍ಗೆ ಇಂದು ವಿಶ್ವಾಸಮತದ ಅಗ್ನಿ ಪರೀಕ್ಷೆ – ಗೆಲ್ಲುವ ವಿಶ್ವಾಸದಲ್ಲಿ ಗೆಹ್ಲೋಟ್ ಕೈ ಪಡೆ

    ಕಾಂಗ್ರೆಸ್‍ಗೆ ಇಂದು ವಿಶ್ವಾಸಮತದ ಅಗ್ನಿ ಪರೀಕ್ಷೆ – ಗೆಲ್ಲುವ ವಿಶ್ವಾಸದಲ್ಲಿ ಗೆಹ್ಲೋಟ್ ಕೈ ಪಡೆ

    – ಕೊನೆ ಕ್ಷಣದಲ್ಲಿ ಚೆಕ್ ಮೆಟ್ ಕೊಡ್ತಾರಾ ಸಚಿನ್ ಪೈಲಟ್?

    ನವದೆಹಲಿ: ರಾಜಸ್ಥಾನ ಕಾಂಗ್ರೆಸ್ಸಿನಲ್ಲಿ ಎದ್ದಿದ್ದ ಬಂಡಾಯದ ಬಿರುಗಾಳಿ ಶಮನವಾಗಿದೆ. ಮಾಜಿ ಡಿಸಿಎಂ ಸಚಿನ್ ಪೈಲಟ್ ವಾಪಸ್ ಪಕ್ಷಕ್ಕೆ ಮರಳಿದ್ದಾರೆ. ಇಂದು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯವನ್ನು ಮಂಡಿಸಲಿದೆ. ಕೈ ಪಡೆ ವಿಶ್ವಾಸದಲ್ಲಿದ್ದರೂ ಸಚಿನ್ ಪೈಲಟ್ ಕೊನೆ ಕ್ಷಣದಲ್ಲಿ ಕೈಕೊಡುವ ಆಂತಕದಲ್ಲಿದೆ.

    ರಾಜಸ್ಥಾನದ ಕಾಂಗ್ರೆಸ್ ಸರ್ಕಾರದಲ್ಲಿ ಎದ್ದಿದ್ದ ಬಂಡಾಯದ ಬಿರುಗಾಳಿ ತಣ್ಣಗಾಗಿದೆ. ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಪಣತೊಟ್ಟಿದ್ದ ಸಚಿನ್ ಪೈಲಟ್ ಮತ್ತು ಬೆಂಬಲಿಗ ಶಾಸಕರು ಕಾಂಗ್ರೆಸ್ ಗೆ ಮರಳಿದ್ದಾರೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡಿದ್ದೇವೆ ಅಂತ ಸಚಿನ್ ಪೈಲಟ್ ಹೇಳಿದ್ದಾರೆ.

    ಈ ಮಧ್ಯೆ ಇಂದಿನಿಂದ ರಾಜಸ್ಥಾನ ವಿಧಾನಸಭೆ ಕಲಾಪವೂ ಪ್ರಾರಂಭವಾಗಲಿದ್ದು, ಸದನ ಪ್ರಾರಂಭವಾಗುತ್ತಿದ್ದಂತೆ ಬಿಜೆಪಿ ಅವಿಶ್ವಾಸ ಗೊತ್ತುವಳಿ ಮಂಡಿಸಲಿದೆ. ಇದಕ್ಕಾಗಿ ಸಿಎಂ ಅಶೋಕ್ ಗೆಹ್ಲೋಟ್ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರು ನಗುತ್ತಾ ಪರಸ್ಪರ ಮಾತನಾಡಿದ್ದಾರೆ.

    ಗುರುವಾರ ರಾಜಸ್ಥಾನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಈ ನಿರ್ಧಾರ ಮಾಡಿದ್ದಾರೆ. ವಿಶ್ವಾಸಮತ ಗೆಲ್ಲುವ ವಿಶ್ವಾಸವಿದ್ದರೂ ಕಾಂಗ್ರೆಸ್ ನಾಯಕರಿಗೆ ಪೈಲಟ್ ಮೇಲೆ ಅನುಮಾನ ಹೋಗಿಲ್ಲ. ಹಾಗಾಗಿ ಇಂದು ನಡೆಯುವ ವಿಶ್ವಾಸ ಮತ ಮಂಡನೆ ಕುತೂಹಲ ಮೂಡಿಸಿದ್ದು, ಕೊನೆ ಕ್ಷಣದವರೆಗೂ ಮಹತ್ವದ ತಿರುವು ಪಡೆಯಬಹುದು. ಪೈಲಟ್ ಕಾಂಗ್ರೆಸ್ ಚೆಕ್ ಮೇಟ್ ಇಡಬಹುದು ಎನ್ನಲಾಗುತ್ತಿದೆ.

  • ಪೈಲಟ್‌ ಸಮಸ್ಯೆ ಬಗೆ ಹರಿಸಲು 3 ಮಂದಿಯ ಸಮಿತಿ ನೇಮಿಸಿದ ಕಾಂಗ್ರೆಸ್‌ ಹೈಕಮಾಂಡ್‌

    ಪೈಲಟ್‌ ಸಮಸ್ಯೆ ಬಗೆ ಹರಿಸಲು 3 ಮಂದಿಯ ಸಮಿತಿ ನೇಮಿಸಿದ ಕಾಂಗ್ರೆಸ್‌ ಹೈಕಮಾಂಡ್‌

    – ದಿಢೀರ್‌ ರಾಹುಲ್‌ ಗಾಂಧಿಯನ್ನು ಭೇಟಿಯಾದ ಪೈಲಟ್‌
    – ಬಂಡಾಯದ ಬಳಿಕ ಮೊದಲ ಭೇಟಿ

    ನವದೆಹಲಿ: ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಕ್ಕೆ ಭಾರೀ ಟ್ವಿಸ್ಟ್‌ ಸಿಕ್ಕಿದ್ದು ಕಾಂಗ್ರೆಸ್‌ ರೆಬೆಲ್‌ ನಾಯಕ ಸಚಿನ್‌ ಪೈಲಟ್‌ ಇಂದು ದೆಹಲಿಯಲ್ಲಿ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

    ತನ್ನ ಆಪ್ತ ಶಾಸಕರ ಜೊತೆ ಕಾಂಗ್ರೆಸ್‌ ಪಕ್ಷಕ್ಕೆ ಸಚಿನ್‌ ಪೈಲಟ್‌ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿಯನ್ನು ಬೆನ್ನಲ್ಲೇ ಇಂದು ಈ ಮಹತ್ವದ ಬೆಳವಣಿಗೆ ನಡೆದಿದೆ. ಜುಲೈ ಮೊದಲ ವಾರದಿಂದ ರಾಜಸ್ಥಾನದಲ್ಲಿ ಹೈಡ್ರಾಮಾ ನಡೆಯುತ್ತಿದ್ದು ಇದೇ ಮೊದಲ ಬಾರಿ ಪೈಲಟ್‌ ಅವರು ಹೈಕಮಾಂಡ್‌ ಜೊತೆ ಸರ್ಕಾರದ ಬಗ್ಗೆ ಇರುವ ಅಸಮಾಧಾನವನ್ನು ಹೇಳಿಕೊಂಡಿದ್ದಾರೆ .

    ಪೈಲಟ್‌ ಅವರ ಜೊತೆ ಮಾತನಾಡಿದ ರಾಹುಲ್‌ ಗಾಂಧಿ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ್ದಾರೆ. ಈ ವೇಳೆ ನಾನು ಕಾಂಗ್ರೆಸ್‌ ತೊರೆಯುವುದಿಲ್ಲ ಎಂದು ಸಚಿನ್‌ ಪೈಲಟ್‌  ತಿಳಿಸಿದ್ದಾರೆ.

    ಭೇಟಿಯ ಬಳಿಕ ರಾಜಸ್ಥಾನ ಕಾಂಗ್ರೆಸ್‌ ಉಸ್ತುವಾರಿಯಾಗಿರುವ ವೇಣುಗೋಪಾಲ್‌ ಅವರು, ಸಚಿನ್‌ ಪೈಲಟ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್‌ ಪಕ್ಷ ಮತ್ತು ರಾಜಸ್ಥಾನ ಸರ್ಕಾರದ ಪರವಾಗಿ ಸಚಿನ್‌ ಪೈಲಟ್‌ ಕೆಲಸ ಮಾಡುತ್ತಾರೆ. ಈ ಸಭೆಯ ಬಳಿಕ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸಚಿನ್‌ ಪೈಲಟ್‌ ಅವರ ಸಮಸ್ಯೆಗೆ ಸಂಬಂಧಿಸಿದಂತೆ 3 ಮಂದಿ ನಾಯಕರ ಸಮಿತಿಯನ್ನು ನೇಮಕ ಮಾಡಿದೆ ಎಂದು ಹೇಳಿದ್ದಾರೆ.

    ರಾಜಸ್ಥಾನ ಅಧಿವೇಶನಕ್ಕೆ ಕೇವಲ 4 ದಿನಗಳು ಬಾಕಿ ಇರುವಂತೆ ಈ ಪ್ರಮುಖ ಬೆಳವಣಿಗೆ ನಡೆದಿದ್ದು ಗೆಹ್ಲೋಟ್‌ ಸರ್ಕಾರಕ್ಕೆ ಇದ್ದ ಸಮಸ್ಯೆ ಮೇಲ್ನೋಟಕ್ಕೆ ಪರಿಹಾರವಾದಂತೆ ಕಾಣುತ್ತಿದೆ.

    ಗೆಹ್ಲೋಟ್‌ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ಬಂಡಾಯ ಎದ್ದ ಬಳಿಕ ಅವರನ್ನು ಆ ಸ್ಥಾನದಿಂದ ಇಳಿಸಲಾಗಿತ್ತು. ಅಷ್ಟೇ ಅಲ್ಲದೇ ರಾಜಸ್ಥಾನ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನದಿಂದಲೂ ತೆಗೆದುಹಾಕಲಾಗಿತ್ತು. ಇದಾದ ಬಳಿಕ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿತ 18 ಶಾಸಕರ ಬಣ ರೆಸಾರ್ಟ್ ಸೇರಿಕೊಂಡಿತ್ತು.

  • ರಾಜಸ್ಥಾನ ರಾಜಕೀಯ ಬಿಕ್ಕಟ್ಟು – ಬಂಡಾಯ ಶಾಸಕರನ್ನು ಸೆಳೆಯಲು ಮುಂದಾದ ‘ಕೈ’ ಹೈಕಮಾಂಡ್?

    ರಾಜಸ್ಥಾನ ರಾಜಕೀಯ ಬಿಕ್ಕಟ್ಟು – ಬಂಡಾಯ ಶಾಸಕರನ್ನು ಸೆಳೆಯಲು ಮುಂದಾದ ‘ಕೈ’ ಹೈಕಮಾಂಡ್?

    ನವದೆಹಲಿ: ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಕೊನೆಗೊಳಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಬೆಳವಣಿಗೆಗಳು ಆರಂಭಗೊಂಡಿದೆ. ಬಂಡಾಯ ಶಾಸಕ, ಮಾಜಿ ಡಿಸಿಎಂ ಸಚಿನ್ ಪೈಲಟ್ ಜೊತೆಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸಕಾರತ್ಮಾಕ ಸಭೆ ನಡೆಸಿದ್ದಾರೆ ಎನ್ನಲಾಗಿದೆ.

    ಅಗಸ್ಟ್ 14 ಕ್ಕೆ ವಿಧಾನಸಭೆ ಅಧಿವೇಶನ ನಡೆಯಲಿದ್ದು ಅಂದು ಸಿಎಂ ಅಶೋಕ್ ಗೆಹ್ಲೋಟ್ ಬಹುಮತ ಸಾಬೀತು ಮಾಡಬೇಕಿದೆ. ಈ ಅವಧಿಯ ಒಳಗೆ ಸಚಿನ್ ಪೈಲಟ್ ಸೇರಿದಂತೆ ಇತರೆ 18 ಮಂದಿ ಶಾಸಕರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಹೈಕಮಾಂಡ್ ಪ್ಲ್ಯಾನ್ ಮಾಡಿದೆ.

    ಈಗಾಗಲೇ ಸಚಿನ್ ಪೈಲಟ್ ಜೊತೆಗೆ ಒಂದು ಹಂತದ ಮಾತುಕತೆ ನಡೆದಿದ್ದು ಸಕಾರಾತ್ಮಕ ಫಲಿತಾಂಶ ಬಂದಿದೆ ಎನ್ನಲಾಗಿದೆ. ಬಾಕಿ ಶಾಸಕರ ಜೊತೆಗೂ ಮಾತುಕತೆಗೆ ಪ್ರಯತ್ನ ನಡೆದಿದ್ದು ಒಂದೆರಡು ದಿನಗಳಲ್ಲಿ ಮಾತುಕತೆ ಅಂತಿಮ ಸ್ವರೂಪ ಪಡೆದುಕೊಳ್ಳಲಿದೆ. ಆದರೆ ಹೈಕಮಾಂಡ್ ಜೊತೆಗೆ ಸಚಿನ್ ಪೈಲಟ್ ಮಾತುಕತೆಯನ್ನು ಬಂಡಾಯ ಶಾಸಕರು ನಿರಾಕರಿಸಿದ್ದಾರೆ. ಈವರೆಗೂ ಯಾವುದೇ ಮಾತುಕತೆ ನಡೆದಿಲ್ಲ ಎಂದು ತಿಳಿಸಿದ್ದಾರೆ.

    ಜೈಪುರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಚಿನ್ ಪೈಲಟ್ ಸೇರಿದಂತೆ ಬೆಂಬಲಿಗ ಶಾಸಕರ ತಲೆದಂಡಕ್ಕೆ ಆಗ್ರಹಿಸಲಾಗಿತ್ತು ಅದರಂತೆ ಹೈಕಮಾಂಡ್ ಕೂಡಾ ಸಚಿನ್ ಪೈಲಟ್ ಗೆ ಡಿಸಿಎಂ ಹಾಗೂ ರಾಜ್ಯಧ್ಯಕ್ಷ ಸ್ಥಾನದಿಂದ ಕೊಕ್ ಕೊಟ್ಟಿತ್ತು. ಬೆಂಬಲಿಗರ ಪೈಕಿ ಇಬ್ಬರು ಶಾಸಕರಿಂದ ಸಚಿವ ಸ್ಥಾನ ಕಸಿದುಕೊಳ್ಳಲಾಗಿತ್ತು.

    ಸದ್ಯ ಬಹುಮತ ಸಾಬೀತು ದಿನಾಂಕ ಹತ್ತಿರವಾಗುತ್ತಿರುವ ಬೆನ್ನಲ್ಲೇ ರಾಜೀ ಸಂಧಾನ ಮತ್ತೊಮ್ಮೆ ಆರಂಭವಾಗಿದ್ದು, ಬಂಡಾಯಗಾರರನ್ನು ತೃಪ್ತಿ ಪಡಿಸುವ ಕಾರ್ಯ ಆರಂಭಗೊಂಡಿದ್ದು ಇದು ಯಾವ ತಿರುವು ಪಡೆಯಲಿದೆ ಕಾದು ನೋಡಬೇಕು.

  • ರಸಗೊಬ್ಬರ ಹಗರಣ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರನ ಆಸ್ತಿಗಳ ಮೇಲೆ ಇಡಿ ದಾಳಿ

    ರಸಗೊಬ್ಬರ ಹಗರಣ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರನ ಆಸ್ತಿಗಳ ಮೇಲೆ ಇಡಿ ದಾಳಿ

    ಜೈಪುರ: ರಸಗೊಬ್ಬರ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರ ನಿವಾಸ ಹಾಗೂ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಚಿನ್ ಪೈಲಟ್ ಬಂಡಾಯದ ನಡುವೆ ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಸಂದರ್ಭದಲ್ಲೇ ಇಡಿ ಅಧಿಕಾರಿಗಳು ಅಗ್ರಸೈನ್ ಗೆಹ್ಲೋಟ್ ಆಸ್ತಿಗಳ ಮೇಲೆ ದಾಳಿ ನಡೆಸಿರುವುದು ಚರ್ಚೆಗೆ ಕಾರಣವಾಗಿದೆ.

    ಹಗರಣಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಇಡಿ ದಾಳಿ ನಡೆಸಿದೆ. ರಾಜಸ್ಥಾನ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ದೆಹಲಿ ಸೇರಿದಂತೆ ದೇಶದ 13 ಕಡೆ ಇಡಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

    ಇಡಿ ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ, ಸಬ್ಸಿಡಿ ದರದಲ್ಲಿ ಇಂಡಿಯನ್ ಪೊಟಾಷ್ ಲಿಮಿಟೆಡ್ ಅಧಿಕೃತವಾಗಿ ರಸಗೊಬ್ಬರಗಳನ್ನು ಪೂರೈಸುತ್ತದೆ. ಈ ಗೊಬ್ಬರವನ್ನು ರೈತರು ಸಬ್ಸಿಡಿ ದರದಲ್ಲಿ ಖರೀದಿ ಮಾಡುತ್ತಾರೆ. ಆದರೆ ಅಗ್ರಸೈನ್ ಗೆಹ್ಲೋಟ್ ಸೇರಿದ ಅನುಪಮ್ ಕೃಷಿ ಸಂಸ್ಥೆ 2007 ರಿಂದ 2009ರ ನಡುವೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ಖರೀದಿ ಮಾಡಿ ಅದನ್ನು ರೈತರಿಗೆ ಮಾರಾಟ ಮಾಡದೆ ಬೇರೆ ಕಂಪನೆಗಳಿಗೆ ಮಾರಾಟ ಮಾಡಿದೆ. ಆ ಸಂಸ್ಥೆಗಳು ಗೊಬ್ಬರವನ್ನು ಮಲೇಷಿಯಾ, ಸಿಂಗಪೂರಕ್ಕೆ ಅಕ್ರಮವಾಗಿ ರಪ್ತು ಮಾಡಿವೆ.

    2013-13 ರಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಅಧಿಕಾರಿಗಳು ಈ ಹಗರಣವನ್ನು ಬೆಳಕಿಗೆ ತಂದಿದ್ದರು. ಆ ವೇಳೆ ಹಗರಣದ ಕುರಿತು ಪ್ರತಿಕ್ರಿಯೆ ನೀಡಿದ್ದ ಅಗ್ರಸೈನ್ ಗೆಹ್ಲೋಟ್, ತಮ್ಮಿಂದ ಕೆಲ ಮಧ್ಯವರ್ತಿಗಳು ರೈತರಿಗೆ ರಸಗೊಬ್ಬರ ನೀಡುವುದಾಗಿ ಖರೀದಿ ಮಾಡಿ ಅದನ್ನು ರಪ್ತು ಮಾಡಿದ್ದಾರೆ ಎಂದು ಹೇಳಿದ್ದರು. ಸಬ್ಸಿಡಿಯುಕ್ತ ಪೊಟ್ಯಾಷ್ ರಫ್ತು ಮಾಡುವುದರ ಮೇಲೆ ನಿಷೇಧ ವಿದ್ದರು ಅಗ್ರಸೈನ್ ಸಂಸ್ಥೆ ರಫ್ತು ಮಾಡಿದೆ ಎಂದು ಬಿಜೆಪಿ 2017ರಲ್ಲಿ ಆರೋಪ ಮಾಡಿತ್ತು.

  • ’35 ಕೋಟಿ ರೂ. ಆಫರ್’- ಕಾಂಗ್ರೆಸ್ ಶಾಸಕನಿಗೆ ಲೀಗಲ್ ನೋಟಿಸ್ ಕೊಟ್ಟ ಸಚಿನ್ ಪೈಲಟ್

    ’35 ಕೋಟಿ ರೂ. ಆಫರ್’- ಕಾಂಗ್ರೆಸ್ ಶಾಸಕನಿಗೆ ಲೀಗಲ್ ನೋಟಿಸ್ ಕೊಟ್ಟ ಸಚಿನ್ ಪೈಲಟ್

    ನವದೆಹಲಿ: ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಹೂಡಿರುವ ಮಾಜಿ ಡಿಸಿಎಂ ಸಚಿನ್ ಪೈಲಟ್ ತಮ್ಮ ವಿರುದ್ಧ ಕೇಳಿ ಬಂದಿದ್ದ 35 ಕೋಟಿ ರೂ. ಹಣದ ಆಮಿಷದ ಆರೋಪ ರಹಿತ ಎಂದಿದ್ದು, ಆರೋಪ ಮಾಡಿದ್ದ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಅವರಿಗೆ ಲೀಗಲ್ ನೋಟಿಸ್ ನೀಡಿದ್ದಾರೆ.

    ಸಚಿನ್ ಪೈಲಟ್ ತಮ್ಮನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರೆ 35 ಕೋಟಿ ರೂ. ನೀಡುವುದಾಗಿ ಆಮಿಷವೊಡ್ಡಿದ್ದರು. ಆದರೆ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ ಎಂದಿದ್ದೆ ಎಂದು ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಆರೋಪಿಸಿದ್ದರು. ಈ ಆರೋಪವನ್ನು ತಿರಸ್ಕರಿಸಿದ್ದ ಸಚಿನ್ ಪೈಲಟ್, ನ್ಯಾಯವನು ಹತ್ತಿಕ್ಕುವ ಪ್ರಯತ್ನ ನಡೆಸಲಾಗುತ್ತಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದರು. ಅಲ್ಲದೇ ತಮ್ಮ ಮೇಲಿನ ಇಂತಹ ಅಸಹ್ಯಕರ ಆರೋಪಗಳಿಗೆ ಮಾಡಿರುವುದಕ್ಕೆ ಅಚ್ಚರಿಯಾಗುವುದಿಲ್ಲ. ಆದರೆ ಇದು ಹೆಚ್ಚು ದುಃಖವನ್ನು ನೀಡುತ್ತದೆ ಎಂದಿದ್ದಾರೆ.

    ತಮ್ಮ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಹಿಂದೆ ಸಚಿನ್ ಪೈಲಟ್ ಬಣದಲ್ಲಿದ್ದ ಭನ್ವರ್ ಲಾಲ್ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್ ಸರ್ಕಾರವನ್ನು ಉರುಳಿಸಿರುವ ಕುರಿತು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದ ಆಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಕಾಂಗ್ರೆಸ್ ಪಕ್ಷ ಇಬ್ಬರು ಶಾಸಕರನ್ನು ಪಕ್ಷದಿಂದ ಉಚ್ಛಾಟಣೆ ಮಾಡಿತ್ತು.

    ಇತ್ತ ಕಾಂಗ್ರೆಸ್ ಸ್ಪೀಕರ್ ನೀಡಿದ್ದ ಅನರ್ಹತೆಯ ನೋಟಿಸ್‍ಗೆ ಹೈ ಕೋರ್ಟ್ ತಾತ್ಕಲಿಕ ರಿಲೀಫ್ ನೀಡಿದೆ. ಬಂಡಾಯ ಶಾಸಕರು ಸಲ್ಲಿಸಿದ್ದ ಅರ್ಜಿ ಸ್ವೀಕರಿಸಿದ್ದ ಕೋರ್ಟ್, ತೀರ್ಪನ್ನು ಶುಕ್ರವಾರದ ವರೆಗೂ ಕಾಯ್ದಿರಿಸಿ ಅಲ್ಲಿವರೆಗೆ ಶಾಸಕರ ವಿರುದ್ಧ ಯಾವುದೇ ರೀತಿಯ ಕ್ರಮಕೈಗೊಳ್ಳಬಾರದು ಎಂದು ಹೇಳಿದೆ. ಪರಿಣಾಮ ಸಚಿನ್ ಪೈಲಟ್ ಬಣಕ್ಕೆ ತಾತ್ಕಲಿಕ ರಿಲೀಫ್ ಲಭಿಸಿದೆ.