Tag: Sabarimale

  • ಶಬರಿಮಲೆಗೆ ಶ್ವಾನ ಪಾದಯಾತ್ರೆ

    ಶಬರಿಮಲೆಗೆ ಶ್ವಾನ ಪಾದಯಾತ್ರೆ

    ಹಾಸನ: ಶಬರಿಮಲೆ (Sabarimale) ಗೆ ಪಾದಯಾತ್ರೆ ಆರಂಭಿಸಿದ್ದ ಹಾಸನ ಮಾಲಾಧಾರಿಗಳ ತಂಡಕ್ಕೆ ಶ್ವಾನವೊಂದು ಜೊತೆ ಜೊತೆಯಾಗಿ ಹೆಜ್ಜೆ ಹಾಕುತ್ತಿದೆ.

    ಹಾಸನ ಜಿಲ್ಲೆ ಶಾಂತಿಗ್ರಾಮ ಹೋಬಳಿಯ ದೇವಿಹಳ್ಳಿ ಗ್ರಾಮದಿಂದ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆಗೆ ಪಾದಯಾತ್ರೆ ಆರಂಭಿಸಿದ್ದರು. ಕಳೆದ 9 ವರ್ಷಗಳಿಂದ ದೇವಿಹಳ್ಳಿ ಗ್ರಾಮದಿಂದ ಮಂಜೇಗೌಡ, ವಿಶ್ವನಾಥ್, ಮೋಹನ್, ರವಿ ಸೇರಿದಂತೆ ಹಲವರು ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಈ ಬಾರಿ ಹಾಸನದಿಂದ ಹೊರಟ ತಂಡ ಮೈಸೂರು ತಲುಪುತ್ತಿದ್ದಂತೆ, ಶ್ವಾನ (Dog) ವೊಂದು ಜೊತೆ ಜೊತೆಯಾಗಿ ಹೆಜ್ಜೆ ಹಾಕುತ್ತಿದೆ.

    ಕಳೆದ ಡಿಸೆಂಬರ್ 25 ರಂದು ಮಂಜೇಗೌಡರ ನೇತೃತ್ವದ 6 ಮಾಲಾಧಾರಿಗಳ ತಂಡ ಹಾಸನದಿಂದ ಪಾದಯಾತ್ರೆ ಆರಂಭಿಸಿದ್ದರು. ಮೈಸೂರು ತಲುಪುತ್ತಿದ್ದಂತೆ ಜೊತೆಯಾದ ಈ ಶ್ವಾನ ಇದುವರೆಗೆ ಸುಮಾರು 500 ಕಿಲೋ ಮೀಟರ್ ಸಾಗಿದೆ. ಅಯ್ಯಪ್ಪನ ಮಾಲಾಧಾರಿ ತಂಡದೊಂದಿಗೆ ಭೋಜನ ಕೂಡ ಸ್ವೀಕರಿಸುತ್ತಿದ್ದು, ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಈಗಾಗ್ಲೆ ಮಾಲಾಧಾರಿಗಳು ಪಂಪಾ ತಲುಪಿದ್ದಾರೆ. ಕಳೆದ 15 ದಿನಗಳಿಂದ ಶ್ವಾನ ಈ ತಂಡದ ಜೊತೆ ಸೇರಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ಇದನ್ನೂ ಓದಿ: ಒಂದೇ ಕಡೆ ನಿಂತ್ರೆ ಬಲವಿಲ್ಲ; ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು – ಸಿದ್ದುಗೆ ರಾಜಕೀಯ ಭವಿಷ್ಯ ನುಡಿದ ಮನೆ ದೇವರು

    ಶ್ವಾನ ಭಕ್ತಿ, ಪ್ರೀತಿಗೆ ಮನಸೋತ ಅಯ್ಯಪ್ಪ ಭಕ್ತರು ವಾಪಸ್ ಊರಿಗೆ ಬರುವಾಗ ಶ್ವಾನವನ್ನೂ ಜೊತೆಯಲ್ಲೇ ಕರೆದುಕೊಂಡು ಬರಲು ನಿರ್ಧರಿಸಿದ್ದಾರೆ. ನಾಳೆ ಅಯ್ಯಪ್ಪ (Sabarimale Ayyappa) ನ ದರ್ಶನ ಪಡೆದು, ಶಬರಿಮಲೆಯ ಸುಪ್ರಸಿದ್ಧ ಜ್ಯೋತಿದರ್ಶನದ ಬಳಿಕ ತಂಡ ವಾಪಸ್ ಹಾಸನಕ್ಕೆ ಮರಳಲಿದೆ. ಹಾಸನಕ್ಕೆ ಹಿಂದಿರುಗಲು ಇವರು ವಿಮಾನ ಟಿಕೆಟ್ (Flight Ticket) ಬುಕ್ ಮಾಡಿದ್ದರಂತೆ, ಆದ್ರೀಗ ಶ್ವಾನಕ್ಕಾಗಿ ವಿಮಾನ ಪ್ರಯಾಣ ರದ್ದು ಮಾಡಿದ್ದಾರೆ.

    ಈ ಶ್ವಾನ ಹೀಗೆ ಮಾಲಾಧಾರಿಗಳೊಂದಿಗೆ ತೆರಳುತ್ತಿರುವ ವಿಚಾರ ತಿಳಿದು ಮಾರ್ಗ ಮಧ್ಯೆಯ ಎಲ್ಲಾ ಜನರು ಬಂದು ಶ್ವಾನದ ದರ್ಶನ ಪಡೆದಿದ್ದು ಮತ್ತೊಂದು ವಿಶೇಷ. ಶ್ವಾನ ಅಯ್ಯಪ್ಪ ಭಕ್ತನಾದ ಬಗೆ ನೋಡಿ, ಎಲ್ಲರೂ ಹುಬ್ಬೇರಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಭಿಮಾನಿಯಿಂದ ಅಪ್ಪುಗೆ ಅಯ್ಯಪ್ಪನ ದರ್ಶನ

    ಅಭಿಮಾನಿಯಿಂದ ಅಪ್ಪುಗೆ ಅಯ್ಯಪ್ಪನ ದರ್ಶನ

    ಬೆಂಗಳೂರು: ಯುವರತ್ನ ಪುನೀತ್ ರಾಜ್‌ಕುಮಾರ್‌ಗೆ ಅಭಿಮಾನಿಯೊಬ್ಬ ಅಯ್ಯಪ್ಪನ ದರ್ಶನ ಮಾಡಿಸಿದ್ದಾನೆ.

    ಅಪ್ಪು ಅಗಲಿ ವಾರಗಳು ಕಳೆಯುತ್ತಿವೆ. ಆದರೂ ಸಹ ಅವರನ್ನು ಮರೆಯುವುದು ಅಭಿಮಾನಿಗಳಿಗೆ ಆಗುತ್ತಿಲ್ಲ. ಇನ್ನು ಅವರು ಬದುಕಿದ್ದಾರೆ ಎಂದು ಎಷ್ಟೋ ಅಭಿಮಾನಿಗಳು ತಿಳಿದುಕೊಂಡಿದ್ದಾರೆ. ಅದರಂತೆ ಅಪ್ಪು ಇಲ್ಲ ಎಂಬುದನ್ನು ಒಪ್ಪದ ಇಲ್ಲೊಬ್ಬ ಅಭಿಮಾನಿ ಶಬರಿಮಲೆ ಅಯ್ಯಪ್ಪನ 18 ಮೆಟ್ಟಿಲುಗಳನ್ನು ಅಪ್ಪು ಭಾವಚಿತ್ರದೊಂದಿಗೆ ಹತ್ತಿ ಸ್ವಾಮಿ ಅಯ್ಯಪ್ಪನ ದರ್ಶನ ಮಾಡಿಸಿದ್ದಾನೆ. ಇದನ್ನೂ ಓದಿ: ಪುನೀತ್‍ರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ: ವಿಜಯ ರಾಘವೇಂದ್ರ

    ಪುನೀತ್ ರಾಜ್‍ಕುಮಾರ್ ಅನೇಕ ವರ್ಷಗಳಿಂದ ಶಬರಿಮಲೆಗೆ ಹೋಗಿ ಸ್ವಾಮಿ ಅಯ್ಯಪ್ಪನ ದರ್ಶನ ಮಾಡುತ್ತಿದ್ದರು. ಬಾಲ್ಯದಿಂದಲೂ ತಂದೆ ಡಾ.ರಾಜ್‍ಕುಮಾರ್ ಜೊತೆ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದ ಇವರು ಅಣ್ಣಾವ್ರು ಅಗಲಿದ ಬಳಿಕ ಅಣ್ಣ ಶಿವರಾಜ್ ಕುಮಾರ್ ಅವರ ಜೊತೆ ಶಬರಿಮಲೆಗೆ ಹೋಗುತ್ತಿದ್ದರು.

    ಅಪ್ಪು ಅಗಲಿದಾಗಿನಿಂದ ಅವರ ಹೆಸರಿನಲ್ಲಿ ಅಭಿಮಾನಿಗಳು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಅಪ್ಪು ಜನರಿಗೆ ದೊಡ್ಡ ಸ್ಪೂರ್ತಿಯಾಗಿದ್ದಾರೆ. ಅದು ಅಲ್ಲದೇ ಅಪ್ಪು ಅಗಲಿಕೆ ಅಭಿಮಾನಿಗಳಿಗೆ ಮಾತ್ರವಲ್ಲ, ಕನ್ನಡ ಸಿನಿಮಾ ಲೋಕಕ್ಕೂ ದೊಡ್ಡಪೆಟ್ಟು ಬಿದ್ದಿದೆ.

  • ಭಾರೀ ಮಳೆಯಿಂದಾಗಿ ಇಂದು ಅಯ್ಯಪ್ಪನ ದರ್ಶನವಿಲ್ಲ

    ಭಾರೀ ಮಳೆಯಿಂದಾಗಿ ಇಂದು ಅಯ್ಯಪ್ಪನ ದರ್ಶನವಿಲ್ಲ

    ತಿರುವನಂತಪುರಂ: ಭಾರೀ ಮಳೆಯ ಹಿನ್ನೆಲೆ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಶಬರಿಮಲೆ ದೇಗುಲವನ್ನು ಇಂದು ಮುಚ್ಚುವುದಾಗಿ ಜಿಲ್ಲಾಡಳಿತ ಶುಕ್ರವಾರ ಆದೇಶ ಹೊರಡಿಸಿದೆ.

    ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಿರಂತರ ಮಳೆ ಮತ್ತು ಪಂಪಾ ನದಿ ಸೇರಿದಂತೆ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಸುರಕ್ಷತೆಯ ಸಲುವಾಗಿ ಇಂದು(ನವೆಂಬರ್ 20) ಪಂಪ ಮತ್ತು ಶಬರಿಮಲೆ ದೇಗುಲಕ್ಕೆ ಯಾತ್ರೆಯನ್ನು ನಿಷೇಧಿಸಲಾಗಿದೆ. ಶಬರಿಮಲೆಯ ಪ್ರಸಿದ್ಧ ಅಯ್ಯಪ್ಪ ದೇವಸ್ಥಾನಕ್ಕೆ ಶನಿವಾರದ ಯಾತ್ರೆಯನ್ನು ನಿಷೇಧಿಸಿ ಜಿಲ್ಲಾಡಳಿತ ಶುಕ್ರವಾರ ಆದೇಶವನ್ನು ಹೊರಡಿಸಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

    ಪತ್ತನಂತಿಟ್ಟ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಂಪಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಕಕ್ಕಿ-ಆನಾತೋಡ್ ಜಲಾಶಯ ಮತ್ತು ಪಂಪಾ ಅಣೆಕಟ್ಟುಗಳಲ್ಲಿ ರೆಡ್ ಅಲರ್ಟ್ ಫೋಷಣೆಯಾದ ಹಿನ್ನೆಲೆ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಇಂದು ಪಂಪಾ ಮತ್ತು ಶಬರಿಮಲೆಗೆ ಯಾತ್ರೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಅವರು ಆದೇಶ ಹೊರಡಿಸಿದ್ದಾರೆ.

    ವರ್ಚುವಲ್ ಕ್ಯೂ ಸಿಸ್ಟಮ್ ಮೂಲಕ ಸ್ಲಾಟ್ ಕಾಯ್ದಿರಿಸಿದ ಯಾತ್ರಾರ್ಥಿಗಳಿಗೆ ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾದ ನಂತರ ಹತ್ತಿರದ ಸಂಭವನೀಯ ಸ್ಲಾಟ್‍ನಲ್ಲಿ ದೇವರ ‘ದರ್ಶನ’ಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು. ಈ ಸಮಯದಲ್ಲಿ ಯಾತ್ರಾರ್ಥಿಗಳು ಪ್ರಯಾಣವನ್ನು ಕೈಗೊಳ್ಳದೆ ಸಹಕರಿಸಲು ವಿನಂತಿಸಿಕೊಂಡರು. ಇದನ್ನೂ ಓದಿ: ಓಟಿಟಿ ಪ್ರವೇಶಿಸಲು ಸಿದ್ಧರಾದ ನಾಗಚೈತನ್ಯ

    ಎರಡು ತಿಂಗಳ ಕಾಲ ವಾರ್ಷಿಕ ಮಂಡಲ-ಮಕರವಿಳಕ್ಕು ತೀರ್ಥಯಾತ್ರೆಗಾಗಿ ನವೆಂಬರ್ 16 ರಂದು ತೆರೆದಾಗಿನಿಂದ ಹವಾಮಾನ ಪರಿಸ್ಥಿತಿಗಳು ಮತ್ತು ಕೋವಿಡ್-19 ಪರಿಸ್ಥಿತಿಯನ್ನು ಎದುರಿಸಿ, ನೂರಾರು ಭಕ್ತರು ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಬರುತ್ತಿದ್ದಾರೆ. ಸಾಂಕ್ರಾಮಿಕ ಮತ್ತು ಭಾರೀ ಮಳೆಯ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳನ್ನು ನಿಯಂತ್ರಿಸಲು ಹಿಂದಿನ ವರ್ಷದಂತೆ ಈ ಬಾರಿಯೂ ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

  • ಶಬರಿಮಲೆಗೆ ಇರುಮುಡಿ ಹೊತ್ತು ಅಯ್ಯಪ್ಪ ಸ್ವಾಮಿಗೆ ಸಮರ್ಪಿಸಿದ ಅಶ್ವಥ್ ನಾರಾಯಣ್

    ಶಬರಿಮಲೆಗೆ ಇರುಮುಡಿ ಹೊತ್ತು ಅಯ್ಯಪ್ಪ ಸ್ವಾಮಿಗೆ ಸಮರ್ಪಿಸಿದ ಅಶ್ವಥ್ ನಾರಾಯಣ್

    – ಸ್ವಾಮಿ ಆಡಿ ಬೆಳೆದ ಪಂದಳಂ ಅರಮನೆಗೂ ಭೇಟಿ

    ಶಬರಿಮಲೆ: ಕೇರಳ ಚುನಾವಣೆಯ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಅವರು ಮಂಗಳವಾರ ಪ್ರಚಾರದ ಮಧ್ಯೆ ಪವಿತ್ರ ಪುಣ್ಯಕ್ಷೇತ್ರ ಶಬರಿಮಲೆಗೆ ಮಾಲಧಾರಿಯಾಗಿ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿಕೊಂಡರು.

    ಸಂಜೆ 5.50ಕ್ಕೆ ಸರಿಯಾಗಿ ಪಂಪಾ ನದಿಯಿಂದ ಬೆಟ್ಟಕ್ಕೆ ಇರುಮುಡಿಯನ್ನು ಹೊತ್ತು ಕಾಲ್ನಡಿಗೆಯಲ್ಲಿ ಹೊರಟ ಡಿಸಿಎಂ, 6.55 ಗಂಟೆಗೆ ಸನ್ನಿಧಾನ ಸೇರಿಕೊಂಡರು. ಅದೇ ವೇಳೆಯಲ್ಲಿ ಸನ್ನಿಧಾನದಲ್ಲಿ ನಡೆಯುವ ವಿಶಿಷ್ಟ್ಯ ಸಾಂಪ್ರದಾಯಿಕ ಪಡಿಪೂಜೆಯಲ್ಲಿ ಭಾಗಿಯಾದ ಅವರು ತದ ನಂತರ ಸ್ವಾಮಿಯ ದರ್ಶನ ಪಡೆದುಕೊಂಡರು.

    ಈ ಸಂದರ್ಭದಲ್ಲಿ ದೇಗುಲದ ಮುಖ್ಯ ತಂತ್ರಿ ರಾಜೀವ ಕಂದರಾರು ಹಾಗೂ ಮೇಲ್‍ಶಾಂತಿ ಅವರಾದ ವಿ.ಕೆ.ಜಯರಾಜ್ ಪೋಟ್ರಿ ಅವರು ಡಿಸಿಎಂ ಅವರಿಗಾಗಿ ಪೂಜೆ ನೆರವೇರಿಸಿಕೊಟ್ಟು ಪವಿತ್ರವಾದ ಎಲೆ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಡಿಸಿಎಂ ಅವರು ಸ್ವಾಮಿಯ ಸನ್ನಿಧಾನದ ಸ್ವರ್ಣ ಮೆಟ್ಟಿಲು ಮುಂದೆ ನಿಂತು ಇರುಮುಡಿ ಸಮರ್ಪಿಸಿದರು.

    ಇದೇ ವೇಳೆ ದೇವಳದ ಅರ್ಚಕರು, ಮುಖ್ಯ ತಂತ್ರಿ ರಾಜೀವ ಕಂದರಾರು ಉಪ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡು ಗೌರವಿಸಿದರಲ್ಲದೆ, ಕ್ಷೇತ್ರದ ಮಹಿಮೆಯ ಬಗ್ಗೆ ಮಾಹಿತಿ ನೀಡಿದರು.

    ಪಂದಳಮ್ ಅರಮನೆಗೂ ಭೇಟಿ:
    ಬೆಳಗ್ಗೆಯೇ ಕೇರಳದ ಪಟ್ಟಾನಂತಿಟ್ಟ ನಗರಕ್ಕೆ ಬಂದ ಅವರು, ಅಲ್ಲಿಂದ ನೇರವಾಗಿ ಶಬರಿಮಲೆಗೆ ತರಳುವ ಮಾರ್ಗಮಧ್ಯೆ ಪಂದಳಮ್ ಅರಮನೆಗೆ ಭೇಟಿ ನೀಡಿದರು. ಅಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಅವರ ಸಾಕುತಂದೆ ಮಹಾರಾಜ ಶ್ರೀ ರಾಜಶೇಖರ ಪೆರುಮಾಳ್ ಅವರ ವಂಶಸ್ಥರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ರಾಜ ಕುಟುಂಬದ 102 ವರ್ಷದ ಹಿರಿಯ ಅಜ್ಜಿ ಮಾಕಮ್ಮನಾಳ್ ತನ್ವಾಂಗಿ ತಂಪುರುಟ್ಟೈ ಅವರಿಂದಲೂ ಆಶೀರ್ವಾದ ಪಡೆದರು.

     ಬಳಿಕ ಮಕರವಿಳಕ್ಕು ಸಮಯದಲ್ಲಿ ಸ್ವಾಮಿ ಅಯ್ಯಪ್ಪಗೆ ಅಲಂಕಾರ ಮಾಡುವ ತಿರುವಾಭರಣಗಳ ಸ್ಟ್ರಾಂಗ್ ರೂಮ್ ಕೂಡ ಇದೇ ಅರಮನೆಯಲ್ಲಿದ್ದು, ಡಿಸಿಎಂ ಅವರು ಅಲ್ಲಿಗೂ ಭೇಟಿ ನೀಡಿ ನಮಸ್ಕರಿಸಿದರು. ರಾಜ ವಂಶಕ್ಕೆ ಸೇರಿದ 400 ಜನರು ಇಲ್ಲಿದ್ದು, ಕುಟುಂಬಸ್ಥರ ಜತೆ ಡಿಸಿಎಂ ಅವರು ಅನೌಪಚಾರಿಕ ಮಾತುಕತೆ ನಡೆಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, ನನ್ನ ಜೀವನದಲ್ಲಿಯೇ ಇದೊಂದು ಅವಿಸ್ಮರಣೀಯ ದಿನ. ಸ್ವಾಮಿ ಅಯ್ಯಪ್ಪ ಅವರು ಆಡಿಬೆಳೆದ ಜಾಗವನ್ನು ಸಂದರ್ಶಿಸುವ ಭಾಗ್ಯ ನನ್ನದಾಗಿದೆ ಎಂದರು.

  • ಕೇರಳ ಸರ್ಕಾರಕ್ಕೆ ಸೆಡ್ಡು ಹೊಡೆದ ಉಡುಪಿಯ 70 ಸಾವಿರ ಅಯ್ಯಪ್ಪ ಭಕ್ತರು

    ಕೇರಳ ಸರ್ಕಾರಕ್ಕೆ ಸೆಡ್ಡು ಹೊಡೆದ ಉಡುಪಿಯ 70 ಸಾವಿರ ಅಯ್ಯಪ್ಪ ಭಕ್ತರು

    – ಭವನಂ ಸನ್ನಿಧಾನಂ ಅಭಿಯಾನಕ್ಕೆ ಭಾರೀ ಬೆಂಬಲ

    ಉಡುಪಿ: ಕೇರಳ ಸರ್ಕಾರದ ವಿರುದ್ಧ ಉಡುಪಿಯ 70 ಸಾವಿರ ಅಯ್ಯಪ್ಪ ಭಕ್ತರು ಆಕ್ರೋಶಗೊಂಡಿದ್ದಾರೆ. ಶಬರಿಮಲೆ ಪ್ರವೇಶ ಮುನ್ನ ಎರಡು ಬಾರಿ ಕೋವಿಡ್ ಟೆಸ್ಟ್ ನಿಯಮ ರೂಪಿಸಿರುವ ಪಿಣರಾಯಿ ಸರ್ಕಾರದ ವಿರುದ್ಧ ಉಡುಪಿಯಲ್ಲಿ ಭವನಂ ಸನ್ನಿಧಾನಂ ಅಭಿಯಾನ ಶುರುವಾಗಿದೆ.

    ಉಡುಪಿ ಜಿಲ್ಲೆಯಿಂದ ಪ್ರತಿವರ್ಷ 70 ಸಾವಿರಕ್ಕಿಂತಲೂ ಹೆಚ್ಚು ಮಂದಿ ಕೇರಳದ ಶಬರಿಮಲೆಗೆ ಧಾರ್ಮಿಕ ಯಾತ್ರೆ ಮಾಡುತ್ತಾರೆ. ಜನವರಿ ತಿಂಗಳಲ್ಲಿ ಮಕರ ಸಂಕ್ರಾಂತಿಯ ಜ್ಯೋತಿ ದರ್ಶನಕ್ಕೆ 40 ಸಾವಿರಕ್ಕಿಂತಲೂ ಹೆಚ್ಚು ಭಕ್ತರು ತೆರಳುತ್ತಾರೆ. ವಿಶ್ವಾದ್ಯಂತ ವ್ಯಾಪಿಸಿರುವ ಕೊರೊನಾ ಮಹಾಮಾರಿ ರೋಗದಿಂದ ಈ ಬಾರಿ ಶಬರಿಮಲೆ ಪ್ರವೇಶ ಕಷ್ಟಕರವಾಗಿದೆ. ಕೇರಳ ಸರ್ಕಾರ ಲೆಕ್ಕಕ್ಕಿಂತ ಹೆಚ್ಚು ನಿಯಮಾವಳಿಗಳನ್ನು ವಿಧಿಸಿದೆ. ಕರ್ನಾಟಕದಿಂದ ತೆರಳುವ ಭಕ್ತರು ಕೋವಿಡ್ ಟೆಸ್ಟ್ ಮಾಡಿರಬೇಕು. ನೀಲಕಲ್ ಎಂಬಲ್ಲಿ ಇನ್ನೊಂದು ಕೋವಿಡ್ ಟೆಸ್ಟ್ ಮಾಡಿಸಬೇಕು. ಪಂಪಾ ನದಿ ತೀರದಲ್ಲಿ ಮತ್ತೊಂದು ಬಾರಿ ಟೆಸ್ಟ್ ಮಾಡಿಸಬೇಕು ಎಂದಿದೆ. ಈ ದುಬಾರಿ ನಿಯಮ ಉಡುಪಿಯ ಅಯ್ಯಪ್ಪ ಭಕ್ತರನ್ನ ಕೆರಳಿಸಿದೆ.

    ಇಷ್ಟೆಲ್ಲಾ ನಿಯಮಾವಳಿಯ ಸಹವಾಸವೇ ಬೇಡ ಅಂತ ಪಂದಳಕಂದನ ಸನ್ನಿಧಾನಕ್ಕೆ ತೆರಳದೆ ‘ಭವನಂ ಸನ್ನಿಧಾನಂ’ ಅಭಿಯಾನವನ್ನು ಉಡುಪಿಯಲ್ಲಿ ಶುರುಮಾಡಿದ್ದಾರೆ. ಈ ಅಭಿಯಾನದ ಪ್ರಕಾರ ಮನೆಯಲ್ಲೇ ಇದ್ದು ಕುಟುಂಬ ಸಮೇತ ಅಯ್ಯಪ್ಪಾರಾಧನೆ ಮಾಡಲು ನಿರ್ಧರಿಸಿದ್ದಾರೆ. ಎರಡೆರಡು ಕೋವಿಡ್ ಟೆಸ್ಟ್ ಮಾಡಲಿರುವ, ಇರುಮುಡಿ ವಾಪಾಸ್ ಕೊಡದ, ಭಕ್ತರ ತುಪ್ಪ ಸ್ವೀಕರಿಸದ, ಊಟದ ವ್ಯವಸ್ಥೆ ಮಾಡದ ದೇಗಲ ಆಡಳಿತ ಮಂಡಳಿ, ಕೇರಳ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಕೇರಳದ ಬಳಿ ಕಾಸಿಲ್ಲದಿದ್ದರೆ ಅಕೌಂಟ್ ನಂಬರ್ ಕಳುಹಿಸಿ. ಭಕ್ತರ ಭಾವನೆಗೆ ಜೊತೆ ವ್ಯವಹಾರ ಮಾಡಬೇಡಿ ಅಂತ ತಿರುಗೇಟು ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಯ್ಯಪ್ಪ ಭಕ್ತ ದಯಾಕರ್, ಹಿಂದೂಗಳ ಧಾರ್ಮಿಕ ಭಾವನೆಯನ್ನು ಕೇರಳ ಸರ್ಕಾರ ಚೆಲ್ಲಾಟವಾಡುತ್ತಿದೆ. ಮೂರು ಮೂರು ಬಾರಿ ಕೋವಿಡ್ ಟೆಸ್ಟ್ ಮಾಡುವ ಅವಶ್ಯಕತೆ ಏನಿದೆ. ಸರ್ಕಾರದ ಬಳಿ ಕಾಸಿಲ್ಲದಿದ್ದರೆ ಅಕೌಂಟ್ ನಂಬರ್ ಕೊಡಿ ನಾವು ಇಲ್ಲಿಂದಲೇ ನಮ್ಮ ಕಾಣಿಕೆಗಳನ್ನು ಹಾಕುತ್ತೇವೆ. ಕೊರೊನಾದ ಹೆಸರಿನಲ್ಲಿ ಹಣ ಲೂಟಿ ಮಾಡಬೇಡಿ ಎಂದಿದ್ದಾರೆ.

    ಮಲ್ಪೆ ಅಯ್ಯಪ್ಪಸ್ವಾಮಿ ಮಂದಿರದ ಅಧ್ಯಕ್ಷ ಆರ್.ಕೆ ಮಲ್ಪೆ ಮಾತನಾಡಿ, ಉಡುಪಿ ಜಿಲ್ಲೆಯ ಅಯ್ಯಪ್ಪ ಮಾಲಾಧಾರಿಗಳು ದಕ್ಷಿಣ ಕನ್ನಡ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯ ಲಕ್ಷಾಂತರ ಅಯ್ಯಪ್ಪ ಭಕ್ತರು ನಮ್ಮ ಅಭಿಯಾನದ ಜೊತೆ ಕೈಜೋಡಿಸಿದ್ದಾರೆ. ಅಯ್ಯಪ್ಪ ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸುವುದು ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಯಾವುದೇ ಶಿಬಿರಗಳನ್ನು ಮಾಡದೆ ಮನೆಗಳಲ್ಲೇ ಅಯ್ಯಪ್ಪ ದೇವರನ್ನ ಕುಟುಂಬ ಸಮೇತವಾಗಿ ನಿಯಮ ನಿಷ್ಠೆಯಿಂದ ಆರಾಧಿಸಲು ತೀರ್ಮಾನಿಸಿರುವುದಾಗಿ ಹೇಳಿದ್ದಾರೆ.

  • ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ – ವಿಸ್ಮಯ ಕಣ್ತುಬಿಕೊಂಡ ಭಕ್ತಗಣ

    ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ – ವಿಸ್ಮಯ ಕಣ್ತುಬಿಕೊಂಡ ಭಕ್ತಗಣ

    ತಿರುವನಂತಪುರಂ: ಪ್ರತಿ ವರ್ಷದಂತೆ ಈ ಬಾರಿ ಶಬರಿಮಲೆಯಲ್ಲಿ ಮಕರ ಜ್ಯೋತಿಯನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ದೇವಾಲಯದಿಂದ 8 ಕಿ.ಮೀ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿ ಬುಧವಾರ ಸಂಜೆ 6.45ರ ಸುಮಾರಿಗೆ ಕಾಣಿಸಿಕೊಂಡಿತು.

    ಈ ವಿಶೇಷ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ಮಕರ ಜ್ಯೋತಿಯ ದರ್ಶನವಾಗುತ್ತಿದ್ದಂತೆ ಗಟ್ಟಿ ಸ್ವರದಲ್ಲಿ “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂದು ಹೇಳಿ ಜಯಘೋಷ ಕೂಗಿದರು. ಭಕ್ತಿಯಿಂದ ಮಕರ ಜ್ಯೋತಿಗೆ ನಮಸ್ಕರಿಸಿ ಧನ್ಯರಾದರು.

    ಪ್ರತಿ ವರ್ಷ ಜನವರಿ 14ರ ಸಂಜೆ ಅಯ್ಯಪ್ಪ ಸ್ವಾಮಿಗೆ ಮಹಾಮಂಗಳಾರತಿ ಬಳಿಕ ಮಕರ ಜ್ಯೋತಿ ದರ್ಶನವಾಗುತ್ತದೆ. ಆದರೆ ಈ ಬಾರಿ ಮಕರ ಜ್ಯೋತಿ ಜನವರಿ 15ರಂದು ಕಾಣಿಸಿಕೊಂಡಿದೆ. ದೇಶದ ವಿವಿಧ ಭಾಗಗಳಿಂದ ಜಾತಿ, ಧರ್ಮ ಬೇದಭಾವವಿಲ್ಲದೆ ಶಬರಿಮಲೆಗೆ ಬರುವ ಭಕ್ತರು, ಅಯ್ಯಪ್ಪನ ಸನ್ನಿಧಾನದಲ್ಲಿ ಜ್ಯೋತಿಯ ದರ್ಶನ ಪಡೆಯಲು ಎರಡು ಮೂರು ದಿನಗಳ ಮುಂಚೆಯೇ ಆಗಮಿಸುತ್ತಾರೆ.

    ಐತಿಹಾಸಿಕ ಸಾಂಪ್ರದಾಯದಂತೆ ಪಂದಳದಿಂದ ಘೋಷಯಾತ್ರೆಯ ಮೂಲಕ ತಂದ ತಿರುವಾಭರಣಗಳನ್ನು ಅಯ್ಯಪ್ಪನಿಗೆ ತೊಡಿಸಿ ದೀಪಾರಾಧನೆ ನಡೆಸಿದ ಬಳಿಕ ಮಹಾ ಮಂಗಳರಾತಿಯನ್ನು ಮಾಡಲಾಗುತ್ತದೆ. ಮಹಾ ಮಂಗಳಾರತಿ ನಡೆದ ಬಳಿಕ ಪೊನ್ನಂಬಲಮೇಡು ಬೆಟ್ಟದಲ್ಲಿ ಮೂರು ಬಾರಿ ಜ್ಯೋತಿ ಕಾಣಿಸುತ್ತದೆ.

  • ಕೋಟಿ ಕೊಟ್ರೂ ಲೇಡಿಸ್‍ಗೆ ಸೀಟ್ ಕೊಡಲ್ಲ – ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಪಟ್ಟು

    ಕೋಟಿ ಕೊಟ್ರೂ ಲೇಡಿಸ್‍ಗೆ ಸೀಟ್ ಕೊಡಲ್ಲ – ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಪಟ್ಟು

    ಬೆಂಗಳೂರು: ಕೋಟಿ ಕೊಟ್ಟರೂ ಮಹಿಳೆಯರಿಗೆ ಸೀಟ್ ಕೊಡಲ್ಲ ಎಂದು ಬೆಂಗಳೂರಿನ ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಪಟ್ಟು ಹಿಡಿದ್ದಾರೆ.

    ಹೌದು. ಬರುವ ಡಿಸೆಂಬರ್ ತಿಂಗಳಿನಲ್ಲಿ ಮಣಿಕಂಠನ ದರ್ಶನ ಮಾಡಲು ಶಬರಿಮಲೆಗೆ ಹೋಗುವ ಭಕ್ತರ ಸಂಖ್ಯೆ ಜಾಸ್ತಿ ಇದೆ. ಆದರೆ ಅಲ್ಲಿಗೆ ಹೋಗಲು ಕೋಟಿ ಕೊಟ್ಟರೂ ಮಹಿಳೆಯರಿಗೆ ಸೀಟ್ ಕೊಡಲ್ಲ. ನಮ್ಮ ಬಸ್ ಹತ್ತಿಸಲ್ಲ ಎಂದು ಕೆಲ ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಹೇಳುತ್ತಿದ್ದಾರೆ.

    ಈಗಾಗಲೇ ಸುಪ್ರೀಂಕೋರ್ಟ್ ಶಬರಿಮಲೆ ದೇಗುಲದಲ್ಲಿ ಮಹಿಳೆಯರ ಪ್ರವೇಶ ಕುರಿತಾದ ವಿಚಾರ ವಿಸ್ತ್ರತಪೀಠಕ್ಕೆ ವರ್ಗಾಯಿಸಿದೆ. ಇದರ ಬೆನ್ನಲ್ಲೇ ಒಂದಿಷ್ಟು ಉತ್ಸಾಯಿ ಯುವತಿಯರು ಶಬರಿಮಲೆಗೆ ಹೋಗುವ ಉತ್ಸಾಹ ತೋರಿದ್ರೂ ಟಿಕೆಟ್ ಮಾತ್ರ ಬುಕ್ ಮಾಡೋಕೆ ಟ್ರಾವೆಲ್ ಏಜೆನ್ಸಿಯವರು ಒಲ್ಲೆ ಅಂತಿದ್ದಾರೆ. ಕೋಟಿ ಕೋಟಿ ದುಡ್ಡನ್ನು ತಂದು ಸುರಿಯಿರಿ ಆದರೆ ಬಸ್ಸಿನಲ್ಲಿ ಮಹಿಳೆಯರಿಗೆ ಮಾತ್ರ ಸೀಟ್ ಕೊಡಲ್ಲ. ಹೆಣ್ಣು ಮಕ್ಕಳನ್ನು ನಾವು ಬಸ್ ಕೂಡ ಹತ್ತಿಸಲ್ಲ. ಮಹಿಳೆಯರಿಗೆ ಸೀಟ್ ಕೂಡ ಬುಕ್ ಮಾಡಲ್ಲ ಎಂದು ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಪಟ್ಟು ಹಿಡಿದಿದ್ದಾರೆ.

    ಹತ್ತು ವರ್ಷದೊಳಗಿನ ಹೆಣ್ಣುಮಕ್ಕಳು, 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಶಬರಿಮಲೆಗೆ ಹೋಗಲು ಟಿಕೆಟ್ ಬುಕ್ ಮಾಡಲಾಗುತ್ತದೆ. ಆದರೆ ಈಗ ಅವರ ಐಡಿಗಳನ್ನು ಚೆಕ್ ಮಾಡಿ ವಯಸ್ಸು ಲೆಕ್ಕ ಹಾಕಿ ಟಿಕೆಟ್ ಬುಕ್ ಮಾಡಿಕೊಡುತ್ತೇವೆ ಎಂದು ಕೆಲ ಏಜೆನ್ಸಿ ಅವರು ಹೇಳಿದರೆ, ಇನ್ನೂ ಕೆಲವು ಟ್ರಾವೆಲ್ಸ್ ನವರು ಶಬರಿಮಲೆಯ ಆಸು-ಪಾಸು ಕೂಡ ಹೋಗದೇ ದೂರದ ಸ್ಟಾಪ್‍ಗಳಲ್ಲಿ ಮಹಿಳೆಯರನ್ನು ಬಿಡುತ್ತೇವೆ ನಾವು ರಿಸ್ಕ್ ತೆಗೆದುಕೊಳ್ಳಲ್ಲ ಎಂದಿದ್ದಾರೆ.

    ನವೆಂಬರ್ ತಿಂಗಳಲ್ಲಿ ಅಯ್ಯಪ್ಪ ದೇಗುಲಕ್ಕೆ ತೆರಳುವ ಭಕ್ತಾದಿಗಳ ಸಂಖ್ಯೆ ಹೆಚ್ಚು. ಈಗ ಬಸ್ಸಿನವರು ಕೊಟ್ಟ ಶಾಕ್‍ಗೆ ಶಬರಿಮಲೆಗೆ ಹೋಗಬೇಕು ಅಂದುಕೊಂಡಿದ್ದ ಮಹಿಳೆಯರು ಥಂಡಾ ಹೊಡೆದಿದ್ದಾರೆ.

  • ಶಬರಿಮಲೆಯಲ್ಲಿ ಇಂದೇ ಮಕರ ಜ್ಯೋತಿ- ರಾಜ್ಯದಲ್ಲಿ ನಾಳೆ ಸಂಕ್ರಾಂತಿ ಹಬ್ಬ

    ಶಬರಿಮಲೆಯಲ್ಲಿ ಇಂದೇ ಮಕರ ಜ್ಯೋತಿ- ರಾಜ್ಯದಲ್ಲಿ ನಾಳೆ ಸಂಕ್ರಾಂತಿ ಹಬ್ಬ

    ತಿರುವನಂತಪುರಂ: ಸೂರ್ಯ ತನ್ನ ಪಥ ಬದಲಿಸುವ ದಿನ ಮಕರ ಸಂಕ್ರಾಂತಿಯಾಗಿದೆ. ಸಾಮಾನ್ಯವಾಗಿ ಪ್ರತಿವರ್ಷ ಜನವರಿ 14ರಂದು ಮಕರ ಸಂಕ್ರಾಂತಿ ಇರುತ್ತೆ. ಅದೇ ದಿನ ಶಬರಿಮಲೆಯಲ್ಲಿ ವೀರಮಣಿಕಂಠ ಜ್ಯೋತಿ ರೂಪದಲ್ಲಿ ದರ್ಶನ ಕೊಡ್ತಾನೆ.

    ಆದ್ರೆ ಈ ಸಲ ಕ್ಯಾಲೆಂಡರ್‍ನಲ್ಲಿ ಮಕರ ಸಂಕ್ರಾಂತಿ ಜನವರಿ 15 ಅಂದ್ರೆ ನಾಳೆ ಅಂತ ತೋರಿಸ್ತಿದೆ. ಹೀಗಾಗಿ ಭಕ್ತರಲ್ಲಿ, ಹಬ್ಬ ಆಚರಿಸುವವರಲ್ಲಿ ಗೊಂದಲ ಮನೆ ಮಾಡಿದೆ. ಆದ್ರೆ ಶಬರಿಮಲೆಯಲ್ಲಿ ಇವತ್ತೇ ಮಕರವಿಲಕ್ಕು ಅಂದ್ರೆ ಮಕರ ಜ್ಯೋತಿ ಇದ್ದು, ಅದಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.

    ಸಂಜೆ 6.30ಕ್ಕೆ ಅಯ್ಯಪ್ಪನ ಆಭರಣಗಳನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಗುತ್ತದೆ. ನಂತ್ರ 8 ಗಂಟೆಯ ಒಳಗಾಗಿ ದೇಗುಲದಿಂದ 8 ಕಿಲೋಮೀಟರ್ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದಲ್ಲಿ ಜ್ಯೋತಿಯ ದರ್ಶನವಾಗಲಿದೆ. ಇನ್ನು ಈ ವರ್ಷ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ, ಸುಮಾರು 800 ವರ್ಷದ ಸಂಪ್ರದಾಯಕ್ಕೆ ಧಕ್ಕೆ ಹಿನ್ನೆಲೆಯಲ್ಲಿ ಮಕರ ಜ್ಯೋತಿಯತ್ತ ದೇಶದ ಗಮನ ನೆಟ್ಟಿದೆ. ಇತ್ತ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲೂ ಸೂರ್ಯ ರಶ್ಮಿ ಸ್ಪರ್ಶ ನಾಳೆ ಅಂತ ಹೇಳಲಾಗ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಬರಿಮಲೆಗೆ ತೆರಳಲು ಯತ್ನಿಸ್ತಿದ್ದ ಇಬ್ಬರು ಯುವತಿಯರ ಬಂಧನ

    ಶಬರಿಮಲೆಗೆ ತೆರಳಲು ಯತ್ನಿಸ್ತಿದ್ದ ಇಬ್ಬರು ಯುವತಿಯರ ಬಂಧನ

    ಮಂಗಳೂರು: ಭಾರೀ ವಿರೋಧದ ನಡುವೆಯೂ ಕೆಲ ಮಹಿಳೆಯರು ಶಬರಿಮಲೆ ಅಯ್ಯಪ್ಪನ ದರ್ಶನವನ್ನು ಮಾಡಿದ್ದರು. ಈಗ ಶಬರಿಮಲೆಗೆ ತೆರಳಲು ಯತ್ನಿಸುತ್ತಿದ್ದ ಇಬ್ಬರು ಯುವತಿಯರನ್ನು ಕೇರಳದ ಚೆಂಗನ್ನೂರು ರೈಲ್ವೇ ನಿಲ್ದಾಣದಲ್ಲಿ ಬಂಧಿಸಲಾಗಿದೆ.

    ಮಂಗಳೂರಿನ ಅಯ್ಯಪ್ಪ ಭಕ್ತರು ಯುವತಿಯರನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ಆಂಧ್ರ ಪ್ರದೇಶದ ಮೂಲದ ಯುವತಿಯರು ಅಯ್ಯಪ್ಪ ಭಕ್ತರ ಸೋಗಿನಲ್ಲಿ ತೆರಳುತ್ತಿದ್ದರು. ಇದನ್ನು ಮಂಗಳೂರು ಅಪ್ಪಯ್ಯ ಭಕ್ತರು ಪತ್ತೆ ಮಾಡಿದ್ದು, ಕೂಡಲೇ ಯುವತಿಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಶಬರಿಮಲೆ ದೇವಾಲಯಕ್ಕೆ ಇಬ್ಬರು ಮಹಿಳೆಯರು ಎಂಟ್ರಿ!

    ಶಬರಿಮಲೆ ಅಪ್ಪಯ್ಯನ ದರ್ಶನಕ್ಕೆ ಬರುವವರನ್ನು ಅಲ್ಲಿನ ಭಕ್ತರು ಪರಿಶೀಲನೆ ನಡೆಸುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಮಾಲಾಧಾರಣೆ ಮಾಡಿ ಬಂದವರ ಮೇಲೆ ಹೆಚ್ಚಿನ ಗಮನವಿಡುತ್ತಿದ್ದಾರೆ. ಇಬ್ಬರು ಯುವತಿಯರು ಮಂಗಳೂರಿನಿಂದ ಮಾಲಾಧಾರಣೆ ಧಿರಿಸಿನಲ್ಲಿ ಹೋಗಿದ್ದು, ಕೇರಳದ ಚೆಂಗನ್ನೂರು ರೈಲ್ವೇ ನಿಲ್ದಾಣದಲ್ಲಿ ಇಳಿದಿದ್ದಾರೆ. ಇದೇ ರೈಲು ನಿಲ್ದಾಣದಲ್ಲಿ ಮಂಗಳೂರಿನಿಂದ ಹೋಗಿದ್ದ ಭಕ್ತರು ಇಳಿದಿದ್ದಾರೆ. ಆಗ ಅವರ ಅನುಮಾನದ ಮೇಲೆ ಅವರನ್ನು ಪ್ರಶ್ನೆ ಮಾಡಿದ್ದು, ಬಳಿಕ ಅಲ್ಲಿನ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಶಬರಿಮಲೆ ಎಂಟ್ರಿಗೆ ಕೊಡಗಲ್ಲೇ ಸ್ಕೆಚ್- ಲಾಡ್ಜ್‌ನಲ್ಲಿ ಉಳಿದಿದ್ರು ಬಿಂದು, ಕನಕದುರ್ಗ

    ಅಪ್ಪಯ್ಯನ ದರ್ಶನ ಮಾಡಲು ಬಂದಿದ್ದೇವೆ. ಸುಪ್ರಿಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ದರ್ಶನ ಮಾಡುತ್ತೇವೆ ಎಂದು ಯುವತಿಯರು ಹೇಳಿದ್ದಾರೆ. ಆದರೆ ಅಲ್ಲಿದ್ದ ಎಲ್ಲರು ಅವರ ಪ್ರವೇಶವನ್ನು ವಿರೋಧಿಸಿದ್ದು, ಪೊಲೀಸರು ಸುರಕ್ಷತೆ ದೃಷ್ಟಿಯಿಂದ ಕರೆದುಕೊಂಡು ಹೋಗಿ ಬಳಿಕ ಅವರನ್ನು ವಾಪಸ್ ಕಳುಹಿಸಿದ್ದಾರೆ.  ಇದನ್ನೂ ಓದಿ: ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಪಡೆದ `ಮೂರನೇ ಮಹಿಳೆ’..!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಬರಿಮಲೆಗೆ ಹೊರಟವರು ಮಸೀದಿಗೆ ಹೋಗಲಿ- ಶಿವರಾಂ

    ಶಬರಿಮಲೆಗೆ ಹೊರಟವರು ಮಸೀದಿಗೆ ಹೋಗಲಿ- ಶಿವರಾಂ

    ಉಡುಪಿ: ಶಬರಿಮಲೆಗೆ ಹೊರಟವರು ಮಸೀದಿಗೆ ಹೋಗಲಿ ಎಂದು ಹಿರಿಯ ನಟ ಹಾಗೂ ರಾಜ್ಯ ಅಯ್ಯಪ್ಪ ಭಕ್ತ ಸಂಘದ ಅಧ್ಯಕ್ಷ ಶಿವರಾಂ ಕಿಡಿಕಾರಿದ್ದಾರೆ.

    ಎಂಜಿಎಂ ಮೈದಾನದಲ್ಲಿ ನಡೆದ ಧರ್ಮ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ದೇವಾಲಯ ಮೊದಲು ಹುಟ್ಟಿತಾ? ನ್ಯಾಯಾಲಯ ಮೊದಲು ಹುಟ್ಟಿದೆಯೇ ಎಂದು ಪ್ರಶ್ನಿಸಿ, ನಾವು ಪಾರಂಪರಿಕವಾಗಿ ಬಂದ ಸಂಪ್ರದಾಯ ಪಾಲಿಸುತ್ತೇವೆ. ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ಕೋಟ್ಯಂತರ ಭಕ್ತರ ನೋವಿಗೆ ಕಾರಣವಾಗಿದೆ. ಮಹಿಳೆಯರು ಶಬರಿಮಲೆಗೆ ಪ್ರವೇಶ ಮಾಡುವುದು, ಅಯ್ಯಪ್ಪನಿಗೆ ಹಿಡಿಸದ ಸಂಪ್ರದಾಯ ಎಂದು ತಿಳಿಸಿದರು. ಇದನ್ನು ಓದಿ: ಕೋರ್ಟ್ ಧರ್ಮದ ತೀರ್ಮಾನ ಮಾಡಕೂಡದು: ಪೇಜಾವರ ಶ್ರೀ

    ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉದ್ಧಟತನ ಪ್ರದರ್ಶನ ಮಾಡಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ದೇಶದಲ್ಲಿ ಹಿಂದೂಗಳಿಗೆ ಹಿಂದೂಗಳೇ ವಿರೋಧಿಗಳಾದರು. ಪವಿತ್ರ ಕ್ಷೇತ್ರಗಳಿಗೆ ತೊಂದರೆಯಾದಾಗ ಹಿಂದೂ ಸಮಾಜದವರು ಸುಮ್ಮನಿರಬಾರದು ಎಂದು ಹೇಳಿದರು.

    ಬಾಕಿ ಇರುವ ತೀರ್ಪುಗಳನ್ನು ತೀರ್ಮಾನ ಮಾಡುವ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಮುಂದಾಗಿತ್ತು. ಹೀಗಾಗಿ ಸಲಿಂಗ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಲಾಯಿತು. ಅಷ್ಟೇ ಅಲ್ಲದೆ ಒಪ್ಪಿತ ಅಕ್ರಮ ಸಂಬಂಧ ಅಪರಾಧವಲ್ಲ ಅಂತ ಹೇಳಲಾಯಿತು. ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಕೊಡಲಾಯಿತು. ಈ ತೀರ್ಪುಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಿವೆ ಎಂದು ಆರೋಪಿಸಿದರು. ಇದನ್ನು ಓದಿ: ಅಯ್ಯಪ್ಪ ಸ್ವಾಮಿಯ ಅನುಗ್ರಹದಿಂದ ನನಗೆ ವರ್ಗಾವಣೆ ಸಿಕ್ತು: ರೆಹನಾ ಫಾತಿಮಾ

    ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮದ ಇಬ್ಬರು ಮಹಿಳೆಯರು ಅಯ್ಯಪ್ಪನ ದರ್ಶನಕ್ಕೆ ಮುಂದಾಗಿದ್ದರು. ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ವಿರುದ್ಧ ವಾಗ್ದಾಳಿ ನಡೆಸಿದ ಶಿವರಾಂ ಅವರು, ಆಕೆ ಒಂದು ದಿನವಾದರೂ ಮಸೀದಿಗೆ ಹೋಗಿದ್ದಾಳಾ ಎಂದು ಪ್ರಶ್ನಿಸಿದರು. ಶಬರಿಮಲೆಗೆ ಮಹಿಳೆ ಪ್ರವೇಶದ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸಂಪ್ರದಾಯದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ತೀರ್ಪನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv