Tag: Sabarimala

  • ಕೋರ್ಟ್ ಧರ್ಮದ ತೀರ್ಮಾನ ಮಾಡಕೂಡದು: ಪೇಜಾವರ ಶ್ರೀ

    ಕೋರ್ಟ್ ಧರ್ಮದ ತೀರ್ಮಾನ ಮಾಡಕೂಡದು: ಪೇಜಾವರ ಶ್ರೀ

    – ರಾಮ ಮಂದಿರಕ್ಕೆ ವಿರುದ್ಧ ತೀರ್ಪು ಬಂದ್ರೆ ಮೊದಲು ನಾನೇ ವಿರೋಧಿಸುತ್ತೇನೆ

    ಉಡುಪಿ: ಕೆಲದಿನಗಳ ಹಿಂದೆಯಷ್ಟೇ ಶಬರಿಮಲೆ ತೀರ್ಪು ಕುರಿತು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದಿದ್ದ ಉಡುಪಿ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಇಂದು, ಕೋರ್ಟ್ ಧರ್ಮದ ತೀರ್ಮಾನ ಮಾಡಕೂಡದು ಎಂದು ಗುಡುಗಿದ್ದಾರೆ.

    ಎಂಜಿಎಂ ಮೈದಾನದಲ್ಲಿ ನಡೆದ ಧರ್ಮ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಧಾರ್ಮಿಕ ವಿಚಾರಗಳು ಕೋರ್ಟ್ ಗೆ ಯಾಕೆ? ಶಬರಿಮಲೆ ಹಿಂದೂ ಸಮಾಜದ ಕೇಂದ್ರ ಬಿಂದು. ಇಲ್ಲಿನ ಸಂಪ್ರದಾಯ ಬೇರೆ ಯಾವ ಕ್ಷೇತ್ರದಲ್ಲಿಯೂ ಇಲ್ಲ. ಧಾರ್ಮಿಕ ಶಿಸ್ತಿನ ಶಿಕ್ಷಣವನ್ನು ಅಯ್ಯಪ್ಪ ಕಲಿಸಿದ್ದಾನೆ. ನಿಯಮಬದ್ಧ ದೇವಾಲಯದ ವಿಚಾರದಲ್ಲಿ ಆಂದೋಲನ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನು ಓದಿ: ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸುಗ್ರಿವಾಜ್ಞೆ ಹೊರಡಿಸಲಿ: ಪೇಜಾವರ ಶ್ರೀ

    ಕೋರ್ಟ್ ಧರ್ಮದ ತೀರ್ಮಾನ ಮಾಡಕೂಡದು. ಇಂತಹ ನಿರ್ಣಯವನ್ನು ಸಂತರು, ಭಕ್ತರು ಮಾಡಬೇಕು. ದೇವಸ್ಥಾನಗಳಿಗೆ ದಲಿತರ ಪ್ರವೇಶಕ್ಕೆ ಹಿಂದೂ ಸಮಾಜದ ಬೆಂಬಲವಿದೆ. ಆದರೆ ಕೋರ್ಟ್ ಧಾರ್ಮಿಕ ಪರಿವರ್ತನೆಯನ್ನು ಮಾಡಬಾರದು ಎಂದ ಶ್ರೀಗಳು, ಕೇರಳ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಪ್ರಜೆಗಳನ್ನು ಧಮನ ಮಾಡುತ್ತಿದೆ. ಇತ್ತ ಕೇರಳ ಸರ್ಕಾರವು ಸರ್ವಾಧಿಕಾರಿ ಧೋರಣೆ ತಾಳಿದೆ ಎಂದು ಆರೋಪಿಸಿದರು.

    ಪಂದಳ ರಾಜರು, ಭಕ್ತರು, ಅರ್ಚಕರ ಅಭಿಪ್ರಾಯಕ್ಕೆ ಕೋರ್ಟ್ ಮನ್ನಣೆ ನೀಡಲಿ. ಹಿಂದೂ ಸಮಾಜ ಮಹಿಳೆಯರನ್ನು ತಿರಸ್ಕಾರ ಮಾಡಿಲ್ಲ. ನಮ್ಮ ಸಂಪ್ರದಾಯವನ್ನು ಮಹಿಳೆಯರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಇದನ್ನು ಓದಿ: ಭಾರತದಲ್ಲಿ ರಾಮ ಮಂದಿರ ಕಟ್ಟಿಲ್ಲ ಅಂದ್ರೆ ಪಾಕಿಸ್ತಾನದಲ್ಲಿ ಕಟ್ಟಲು ಆಗುತ್ತಾ: ರೋಷನ್ ಬೇಗ್ ಪ್ರಶ್ನೆ

    ರಾಮ ಮಂದಿರ ನಿರ್ಮಾಣದ ವಿರುದ್ಧವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದರೆ, ನಾನೇ ಮೊದಲು ವಿರೋಧಿಸುತ್ತೇನೆ. ಹಿಂದೂ ಸಮಾಜದವರು ದೇಶಾದ್ಯಂತ ಸಂಘಟಿತರಾಗಬೇಕು ಎಂದು ಪೇಜಾವರ ಶ್ರೀ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಬರಿಮಲೆಗೆ ಮಹಿಳೆಯರ ಪ್ರವೇಶ- ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆ ಪ್ರತಿಕ್ರಿಯೆ

    ಶಬರಿಮಲೆಗೆ ಮಹಿಳೆಯರ ಪ್ರವೇಶ- ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆ ಪ್ರತಿಕ್ರಿಯೆ

    ಮಂಗಳೂರು: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೆಂದ್ರ ಹೆಗ್ಗಡೆ ಪ್ರತಿಕ್ರಿಯೆ ನೀಡಿದ್ದಾರೆ.

    ಶಬರಿಮಲೆಗೆ ಹೋಗುವುದರಲ್ಲಿ 48 ದಿವಸಗಳ ವ್ರತ ನಿಯಮ ಇದೆ. ಮನೋನಿಗ್ರಹ, ಸಂಯಮದ ಪಾಲನೆ ವ್ರತದ ಹಿನ್ನೆಲೆಯಲ್ಲಿರುತ್ತೆ. ವ್ರತ ನಿಷ್ಠರು ಬ್ರಹ್ಮಚರ್ಯ ಪಾಲಿಸಬೇಕೆಂಬ ನೆಲೆಯಲ್ಲಿ ಮಹಿಳೆಯರು ಮಾಡಿದ ಆಹಾರವನ್ನೂ ಸೇವಿಸುವುದಿಲ್ಲ ಅಂದ್ರು.

    ಮಹಿಳೆಯರು ಶಬರಿಮಲೆ ಪ್ರವೇಶವನ್ನು ನಿರ್ಬಂಧಿಸೋದು ಬೇರೆ ವಿಚಾರ. ಆದ್ರೆ ಈ ಸಾಂಪ್ರದಾಯಿಕ ಸೌಂದರ್ಯವನ್ನು ಉಳಿಸಿಕೊಳ್ಳಬೇಕು. ಹಾಗಂತ, ಮಹಿಳೆಯರು ದೇಗುಲಕ್ಕೆ ಹೋಗಬಾರದು ಅಂತಲ್ಲ. ಹೋದ್ರೆ ಏನಾಗುತ್ತೆ ಅನ್ನೋ ಪ್ರಶ್ನೆ ಏಳಬಹುದು. ಹೋದ್ರೆ ಏನೂ ಆಗಲ್ಲ. ಆದ್ರೆ ಅದರ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳಬೇಕು. ಈಗ ಶಬರಿಮಲೆಗೆ ಹೋಗುವ 48 ದಿವಸವನ್ನು 4 ದಿನಕ್ಕೆ ಮಾಡಿದ್ರು. ಅದನ್ನೂ ಬರೀ ಎರಡೇ ದಿವಸಕ್ಕೆ ವೃತ ಹಾಕಿ ಹೋದ್ರೂ ಆಗುತ್ತೆ ಅನ್ನೋದನ್ನು ಯಾರು ಮಾಡಿದ್ರು ಅಂತ ಪ್ರಶ್ನಸಿದ ಅವರು, ಇವೆಲ್ಲವೂ ಪರಿವರ್ತನೆ. ಇದು ತಪ್ಪು. 48 ದಿವಸಗಳ ಕಾಲ ತಣ್ಣೀರಲ್ಲಿ ಸ್ನಾನ ಮಾಡಿ, ಅವನು ಮನೋನಿಗ್ರಹ ಮಾಡಿಕೊಂಡು, ಅವನ ಆಹಾರದಲ್ಲಿ ಪಥ್ಯ ಮಾಡಿಕೊಳ್ಳಬೇಕು. ಈ ಮೂಲಕ ಆತನ ವ್ಯಕ್ತಿತ್ವದಲ್ಲಿ ತೇಜಸ್ಸನ್ನು ಹೆಚ್ಚಿಸಿಕೊಳ್ಳಬೇಕು. ಯಾರೂ 48 ದಿವಸದ ವೃತವನ್ನು ಮಾಡುತ್ತಾರೋ ಅವರಿಗೆ ಅದ್ಭುತವಾದ ತೇಜಸ್ಸು, ಶಕ್ತಿ ಬರುತ್ತದೆ ಅಂತ ಹೇಳಿದ ಅವರು, ಮೂಲ ಉದ್ದೇಶ ಉಳಿಸಿಕೊಂಡರೆ ಒಳ್ಳೆಯದು ಅಂತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.

    ಕ್ಷೇತ್ರದ ಮೂಲ ಉದ್ದೇಶ, ಪಾವಿತ್ರ್ಯಕ್ಕೆ ಧಕ್ಕೆ ತರುವಂತಾಗಬಾರದು. ಸಾಂಪ್ರದಾಯಿಕ ಆಚರಣೆ ಕ್ಷೇತ್ರಕ್ಕೊಂದು ಸೌಂದರ್ಯ. ಇಂಥ ನಿಷೇಧ ಪದ್ಧತಿ ವಿದೇಶಗಳಲ್ಲೂ ಇರುವುದನ್ನು ಕಂಡಿದ್ದೇನೆ. ಭಕ್ತಿಯಿದ್ದರೆ ಕ್ಷೇತ್ರಕ್ಕೇ ಹೋಗಬೇಕಾಗಿಲ್ಲ. ಮನೆಯಲ್ಲಿಯೂ ದೇವರ ಆರಾಧನೆ ಮಾಡಬಹುದು ಅಂತ ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ.

    ಒಟ್ಟಿನಲ್ಲಿ ಶಬರಿಮಲೆ ಪ್ರವೇಶ ವಿಚಾರದಲ್ಲಿ ಚರ್ಚೆ ನಡೀತಿರುವ ಮಧ್ಯೆ ಹೆಗ್ಗಡೆಯವರು ನೀಡಿದ ಪರಂಪರೆ ಉಳಿಸಿಕೊಳ್ಳಬೇಕೆಂಬ ಹೇಳಿಕೆ ಮಹತ್ವ ಪಡೆದಿದೆ.

    ನೂತನ ಮ್ಯೂಸಿಯಂಗೆ ಸಿಎಂ ಚಾಲನೆ:
    ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬುಧವಾರ ಧರ್ಮಸ್ಥಳಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಧರ್ಮಸ್ಥಳದಲ್ಲಿ ನೂತನ ವಸ್ತುಸಂಗ್ರಹಾಲಯಕ್ಕೆ ಚಾಲನೆ ನೀಡಲಿದ್ದಾರೆ. ಹೊಸ ಕಟ್ಟಡದಲ್ಲಿ ನವೀಕರಣಗೊಂಡ ಮಂಜೂಷಾ ಮ್ಯೂಸಿಯಂನಲ್ಲಿ ಇತಿಹಾಸಪೂರ್ವ ವಸ್ತುಗಳನ್ನು ಜೋಪಾನ ಮಾಡಲಾಗಿದೆ. ವಿದೇಶ ಪ್ರವಾಸದ ವೇಳೆ ಸಂಗ್ರಹಿಸಿದ ಸಾವಿರಾರು ವಸ್ತುಗಳಿವೆ. 200 ವರ್ಷಗಳ ಹಿಂದಿನ ವಸ್ತುಗಳು ಸಂಗ್ರಹಾಲಯದಲ್ಲಿದೆ ಅಂತ ಅವರು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ಯಾಂಡಲ್‍ವುಡ್ #MeToo ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಮಾಧ್ಯಮಗಳ ವಿರುದ್ಧ ಜಯಮಾಲಾ ಗರಂ

    ಸ್ಯಾಂಡಲ್‍ವುಡ್ #MeToo ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಮಾಧ್ಯಮಗಳ ವಿರುದ್ಧ ಜಯಮಾಲಾ ಗರಂ

    ಶಿವಮೊಗ್ಗ: ಸ್ಯಾಂಡಲ್‍ವುಡ್‍ನಲ್ಲಿ ಮೀಟೂ ಅಭಿಯಾನ ಭಾರೀ ಸದ್ದು ಮಾಡುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡುವ ಬದಲು ಹಿರಿಯ ನಟಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲ ಅವರು ಮಾಧ್ಯಮಗಳ ವಿರುದ್ಧವೇ ಸಿಡಿಮಿಡಿಗೊಂಡಿದ್ದಾರೆ.

    ಶಿವಮೊಗ್ಗ ಲೋಕಸಭಾ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳು ಪ್ರಶ್ನಿಸಿದಾಗ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು. ಇದಕ್ಕೆ ಮಾಧ್ಯಮಗಳು ನೀವು ಸ್ಯಾಂಡಲ್‍ವುಡ್ ನಟಿ ಅಷ್ಟೇ ಅಲ್ಲದೇ ಸಚಿವರು ಆಗಿದ್ದೀರಿ. ಹೀಗಾಗಿ ಉತ್ತರ ನೀಡಬೇಕು ಎಂದು ಮರು ಪ್ರಶ್ನೆ ಕೇಳಿದ್ದಕ್ಕೆ, ಏನ್ರೀ ಅದು ಅಂತಾ ಗದರಿದರು. ನಂತರ ನನಗೆ ಗೊತ್ತಿಲ್ಲದ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ. ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡಬಾರದು ಎಂದು ಹೇಳಿದರು.

    ನಾನು ಉಪಚುನಾವಣೆ, ಇಲಾಖೆ, ಅಂಗನವಾಡಿ ಮಕ್ಕಳ ಕಾರ್ಯಗಳ ಬಗ್ಗೆಯೇ ಯೋಚಿಸುತ್ತಿದ್ದೇನೆ. ಸಿನಿಮಾ ರಂಗದಲ್ಲಿ ಏನು ಆಗುತ್ತಿದೆ ಅಂತಾ ಗೊತ್ತಿಲ್ಲ. ನಾನು ಪ್ರತಿಕ್ರಿಯೆ ನೀಡಲೇಬೇಕು ಅಂದರೆ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಅವರನ್ನು ಕೇಳಿ ತಿಳಿದುಕೊಂಡು, ಬಳಿಕ ನಿಮಗೆ ಹೇಳುತ್ತೇನೆ ಎಂದು ಕೊನೆಗೆ ಹಾರಿಕೆಯ ಉತ್ತರ ನೀಡಿದರು.

    ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರವಾಗಿ ಕೋರ್ಟ್ ನಲ್ಲಿ ಆರೂವರೆ ವರ್ಷ ಚರ್ಚೆಯಾಗಿದೆ. ನನಗೆ ಸಂವಿಧಾನದಲ್ಲಿ ನಂಬಿಕೆ ಇದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಎಲ್ಲರೂ ಎಲ್ಲಾ ದೇವಾಲಯಗಳಿಗೂ ಹೋಗಲು ಸಾಧ್ಯವಾಗುವುದಿಲ್ಲ. ಪರಮಾತ್ಮ ಕರೆಸಿಕೊಂಡರೆ ಮಾತ್ರ ಹೋಗಲು ಸಾಧ್ಯ. ಆದರೆ ಈ ವಿಷಯ ಇಷ್ಟು ದೊಡ್ಡದಾಗಿ ಚರ್ಚೆ ಆಗುತ್ತಿರುವುದು ನೋವು ತಂದಿದೆ. ಶಬರಿಮಲೆಗೆ ಹೋಗುವುದು ಪರಮಾತ್ಮನನ್ನು ನೋಡಲು ಹಾಗೂ ಆತನಿಗೆ ನಮ್ಮ ಬೇಡಿಕೆಗಳನ್ನು ಸಲ್ಲಿಸಲೇ ಹೊರತು, ಶಿಖರ ಹತ್ತಿ ಬಾವುಟ ನೆಟ್ಟು, ಬರುವ ಕೆಲಸಕ್ಕಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/d9hmrB88wyE

  • ಶುರುವಾಗಲಿದೆ ಶಬರಿಮಲೆ ಮೂವ್‍ಮೆಂಟ್- ಕರ್ನಾಟಕದ ಚಳುವಳಿಗೆ ಕೃಷ್ಣನೂರೇ ವೇದಿಕೆ..!

    ಶುರುವಾಗಲಿದೆ ಶಬರಿಮಲೆ ಮೂವ್‍ಮೆಂಟ್- ಕರ್ನಾಟಕದ ಚಳುವಳಿಗೆ ಕೃಷ್ಣನೂರೇ ವೇದಿಕೆ..!

    ಉಡುಪಿ: ಶಬರಿಮಲೆ ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರ ಪ್ರವೇಶ ವಿಚಾರ ಸಾಕಷ್ಟು ವಿವಾದ ಸೃಷ್ಟಿಮಾಡಿದೆ. ಸುಪ್ರೀಂ ಕೋರ್ಟ್ ಆದೇಶನ ನಂತರ ವೃತಾಚರಣೆ ಮಾಡದ ಹೋರಾಟಗಾರ್ತಿಯರು ಸನ್ನಿಧಾನಕ್ಕೆ ತೆರಳಲು ಯತ್ನಿಸಿ ಹೈಡ್ರಾಮ ಸೃಷ್ಟಿಸಿದ್ದರು. ಇದೀಗ ಅಯ್ಯಪ್ಪ ಭಕ್ತರು ಐದು ರಾಜ್ಯಗಳಲ್ಲಿ ಲಕ್ಷ ಜನ ಸೇರಿಸಿ ತಮ್ಮ ಅಭಿಪ್ರಾಯವನ್ನು ಹೊರಹಾಕಲಿದ್ದಾರೆ. ಈ ಮೂಲಕ ದೇಶಾದ್ಯಂತ ಶಬರಿಗಿರಿ ಮೂವ್‍ಮೆಂಟ್ ಶುರುವಾಗಿದೆ.


    ವೀರ ಮಣಿಕಂಠನ ಸನ್ನಿಧಾನ ಶಬರಿಮಲೆ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಸುಪ್ರೀಂಕೋರ್ಟ್ ಆದೇಶ ಕೊಟ್ರೂ ಮಹಿಳೆಯರು ದೇಗುಲ ಪ್ರವೇಶಿಸಲು ಆಗ್ತಿಲ್ಲ. ಈ ನಡುವೆ ಹರಿಹರ ಸುತನ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ತಡೆಯಲು ಅಯ್ಯಪ್ಪನ ಭಕ್ತರು ದೇಶಾದ್ಯಂತ ಜನಾಂದೋಲನ ಮಾಡಲು ಹೊರಟಿದ್ದಾರೆ. ಕರ್ನಾಟಕದ ಜನಾಂದೋಲನಾ ಜಾಥಾ ಮತ್ತು ಸಭೆ ಕೃಷ್ಣನೂರು ಉಡುಪಿಯಲ್ಲಿ ನಡೆಯಲಿದ್ದು, ನವೆಂಬರ್ 1ಕ್ಕೆ ಡೇಟ್ ಫಿಕ್ಸ್ ಆಗಿದೆ. ಈ ಸಂಬಂಧ ಉಡುಪಿಯ ಕೃಷ್ಣಮಠದಲ್ಲಿ ಪೂರ್ವಭಾವಿ ಸಭೆ ನಡೀತು. ಇದ್ರಲ್ಲಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ, ಅಯ್ಯಪ್ಪ ಭಕ್ತರ ಬಳಿ ಅಭಿಪ್ರಾಯ ಪಡೆಯಲಾಯ್ತು.

    ನವೆಂಬರ್ 1ಕ್ಕೆ ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆಯಲಿರುವ ಸಾಂಪ್ರದಾಯಿಕ ರೀತಿಯ ಪ್ರತಿಭಟನೆಯಲ್ಲಿ ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಜನಾಂದೋಲನ ಮತ್ತು ಕಾನೂನಾತ್ಮಕವಾಗಿ ಯಾವ ರೀತಿ ಹೋರಾಟ ಮಾಡಬೇಕು ಎಂಬ ಬಗ್ಗೆಯೂ ನಿರ್ಧಾರವಾಗಲಿದೆ. ಈ ಜನಾಂದೋಲನ ಜಾಥಾದಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ರೀತಿಯ ಜನಾಂದೋಲನ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಲ್ಲೂ ನಡೆಯಲಿದೆ ಅಂತ ಅಯ್ಯಪ್ಪ ಸೇವಾ ಸಮಾಜಂ ಸಂಚಾಲಕ ಗಿರೀಶ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಿಂದ ತಲಾ 20 ಸಾವಿರ ಜನರಂತೆ ಒಂದು ಲಕ್ಷ ಜನ ಸೇರುವ ಸಾಧ್ಯತೆಯಿದೆ. ಮೈದಾನದಲ್ಲಿ ಅಯ್ಯಪ್ಪನಿಗೆ ಸಹಸ್ರ ಅರ್ಚನೆ ನಡೆಯಲಿದ್ದು ಇದಕ್ಕಾಗಿ 10 ಲಕ್ಷ ರೂಪಾಯಿಯನ್ನು ಭಕ್ತರೇ ದೇಣಿಗೆ ರೂಪದಲ್ಲಿ ಸಂಗ್ರಹಿಸುವ ನಿರ್ಧಾರ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಮ್ಮ ಸಂಪ್ರದಾಯಕ್ಕೆ ಕೊಡಲಿ ಪೆಟ್ಟಲ್ಲವೇ- ಫಾತಿಮಾ ಶಬರಿಮಲೆ ಪ್ರವೇಶಕ್ಕೆ ಜಗ್ಗೇಶ್ ಕಿಡಿ

    ನಮ್ಮ ಸಂಪ್ರದಾಯಕ್ಕೆ ಕೊಡಲಿ ಪೆಟ್ಟಲ್ಲವೇ- ಫಾತಿಮಾ ಶಬರಿಮಲೆ ಪ್ರವೇಶಕ್ಕೆ ಜಗ್ಗೇಶ್ ಕಿಡಿ

    ಬೆಂಗಳೂರು: ಪುರಾತನ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇಗುಲ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಪತ್ರಕರ್ತೆ ರಹನಾ ಫಾತಿಮಾ ಇಂದು ದೇಗುಲ ಪ್ರವೇಶಕ್ಕೆ ಯತ್ನಿಸಿದ್ದರು. ಆದರೆ ಈ ಬಗ್ಗೆ ನಟ ಜಗ್ಗೇಶ್ ವಿರೋಧ ವ್ಯಕ್ತಪಡಿಸಿದ್ದಾರೆ.

    ಮಹಿಳಾ ಹೋರಾಟಗಾರ್ತಿ ರಹನಾ ಫಾತಿಮಾ ಶಬರಿಮಲೆಗೆ ತೆರಳುವ ಮುನ್ನ ಕಪ್ಪು ಬಟ್ಟೆ ತೊಟ್ಟು ಪೋಸ್ ಕೊಟ್ಟಿದ್ದಾರೆ. ಫೋಟೋಗೆ ತೀವ್ರ ಅಪಸ್ವರ ಬರುತ್ತಿದ್ದು, ಸಾಮಾಜಿಕ ಜಾಲತಾಣಗಲ್ಲಿ ಫೋಟೋ ವೈರಲ್ ಆಗಿದೆ. ನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್ ಅವರು ರಹನಾ ಫಾತಿಮಾ ಅವರ ಫೋಟೋಗೆ ವ್ಯಂಗ್ಯವಾಡಿದ್ದಾರೆ.

    ನಟ ಜಗ್ಗೇಶ್ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ತನ್ನ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. “ಅನ್ಯಧರ್ಮಿಯಳು ಈ ಅವತಾರದಲ್ಲಿ ಪೋಲಿಸರ ಬೆಂಗಾವಲಿನಲ್ಲಿ ಅಯ್ಯಪ್ಪನ ದರ್ಶನಮಾಡಿ ಸಾಧಿಸಿ ಬಣ್ಣದ ವೇಶತೊಟ್ಟು ಜಾಲತಾಣದಲ್ಲಿ ಹಾಕಿರುವ ಪೋಸ್ಟ್. ಇದು ನಮ್ಮ ಸಂಪ್ರದಾಯಕ್ಕೆ ಕೊಡಲಿ ಪೆಟ್ಟಲ್ಲವೇ ‘ವಿನಾಶಕಾಲೆ ವಿಪರೀತ ಬುದ್ಧಿ’. ಇಂಥವರ ಸಂತೈಸಿ ವಿಕೃತ ಆನಂದ ಪಡುತ್ತಿರುವ ಕೇರಳ ಸರ್ಕಾರ. ಬ್ರಿಟಿಷರು ಮೊಘಲ್ ಗಳಿಗೆ ಬಗ್ಗದ ಹಿಂಧುದರ್ಮ ಇಂಥವರಿಗಾ? ಜೈಹಿಂದ್” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    https://twitter.com/Jaggesh2/status/1053153842819256321

    ಸುಮಾರು 200 ಪೊಲೀಸರ ಸರ್ಪಗಾವಲಿನಲ್ಲಿ ಇಬ್ಬರು ಮಹಿಳೆಯರು ಪೊಲೀಸರಂತೆ ಹೆಲ್ಮೆಟ್ ಹಾಗೂ ಸಮವಸ್ತ್ರ ಧರಿಸಿ ಭಾರೀ ಸೆಕ್ಯೂರಿಟಿಯ ಮೂಲಕ ದೇವಾಲಯದತ್ತ ತೆರಳಿದ್ದರು. ಆದರೆ ಮಹಿಳೆಯರ ದೇಗುಲ ಪ್ರವೇಶ ಯತ್ನದ ಬೆನ್ನಲ್ಲೇ ಅಯ್ಯಪ್ಪ ಭಕ್ತರ ಆಕ್ರೋಶ ಭುಗಿಲೆದ್ದಿತು. ಇದರಿಂದ ಇಬ್ಬರು ಮಹಿಳೆಯರ ಅಯ್ಯಪ್ಪನ ದರ್ಶನ್ ಪಡೆಯದೆ ವಾಪಸ್ ಆಗಿದ್ದಾರೆ.

    ಇಬ್ಬರು ಮಹಿಳೆಯರು ಪ್ರವೇಶಿಸುತ್ತಿದ್ದಾರೆ ಎನ್ನುವ ವಿಚಾರ ಗೊತ್ತಾಗಿದ್ದೆ ತಡ ಸಾಮಾಜಿಕ ಜಾಲತಾಣಗಳಲ್ಲಿ ಅಯ್ಯಪ್ಪ ಭಕ್ತರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರವೇಶಿಸಿದ್ರೆ ಶಬರಿಮಲೆ  ಗರ್ಭಗುಡಿ ಬಂದ್: ಅರ್ಚಕರ ಪ್ರತಿಭಟನೆಗೆ ಮಣಿದು ಪ್ರವೇಶದಿಂದ ಹಿಂದಕ್ಕೆ ಸರಿದ ಮಹಿಳೆಯರು

    ಪ್ರವೇಶಿಸಿದ್ರೆ ಶಬರಿಮಲೆ ಗರ್ಭಗುಡಿ ಬಂದ್: ಅರ್ಚಕರ ಪ್ರತಿಭಟನೆಗೆ ಮಣಿದು ಪ್ರವೇಶದಿಂದ ಹಿಂದಕ್ಕೆ ಸರಿದ ಮಹಿಳೆಯರು

    ತಿರುವನಂತಪುರಂ: ಶಬರಿಮಲೆ ದೇವಾಲಯದ ಮೆಟ್ಟಿಲು ಏರಿ ಪ್ರವೇಶಿಸಿ ಇತಿಹಾಸ ನಿರ್ಮಿಸಲು ಹೊರಟಿದ್ದ ಇಬ್ಬರು ಮಹಿಳೆಯರು ಅರ್ಚಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೇಗುಲ ಪ್ರವೇಶದಿಂದ ಹಿಂದಕ್ಕೆ ಸರಿದಿದ್ದಾರೆ.

    ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಪತ್ರಕರ್ತೆ ಕವಿತಾ ಜಕ್ಕಲ್ ಮತ್ತು ಮಹಿಳಾ ಹೋರಾಟಗಾರ್ತಿ ರಹನಾ ಫಾತಿಮಾ ಪೊಲೀಸರ ಭದ್ರತೆಯೊಂದಿಗೆ ಹೆಲ್ಮೆಟ್ ಧರಿಸಿ ದೇವಾಲಯ ಪ್ರವೇಶಿಸಲು ಮುಂದಾಗಿದ್ದರು. ಕಾಲ್ನಡಿಗೆಯಲ್ಲಿ ದೇವಾಲಯದತ್ತ ಹೋಗುತ್ತಿದ್ದಂತೆ ಭಕ್ತರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.

    ವಿರೋಧದ ನಡುವೆಯೂ ದೇವಾಲಯವನ್ನು ಪ್ರವೇಶಿಸಿಯೇ ಸಿದ್ಧ ಎಂದು ಅವರು ಮುನ್ನುಗ್ಗುತ್ತಿದ್ದರು. ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನ ಅರ್ಚಕರು ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಪವಿತ್ರ 18 ಮೆಟ್ಟಿಲುಗಳ ಮೇಲೆ ಅಯ್ಯಪ್ಪ ಸ್ವಾಮಿ ಭಕ್ತರು ಕುಳಿತು ನಾವು ಸಾವನ್ನಪ್ಪಿದರೂ ಸರಿಯೇ ಮೆಟ್ಟಿಲ ಮೂಲಕ ಮಹಿಳೆಯರು ಪ್ರವೇಶಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತ್ತಿದ್ದರು.

    ದೇವಾಲಯಕ್ಕೆ 500 ಮೀಟರ್ ದೂರ ಇದ್ದಾಗ ಪ್ರಧಾನ ಅರ್ಚಕರು ಮಹಿಳೆಯರು ದೇವಾಲಯಕ್ಕೆ ಆಗಮಿಸಿದರೆ ನಾವು ಪೂಜೆ ಮಾಡುವುದನ್ನು ನಿಲ್ಲಿಸುತ್ತೇವೆ. ಅಷ್ಟೇ ಅಲ್ಲದೇ ದೇವಾಲಯದ ಗರ್ಭಗುಡಿಯ ದ್ವಾರವನ್ನೇ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ಬೆನ್ನಲ್ಲೇ ಇಬ್ಬರು ಮಹಿಳೆಯರು ದೇವಾಲಯ ಪ್ರವೇಶದಿಂದ ಹಿಂದಕ್ಕೆ ಸರಿದಿದ್ದಾರೆ.

    ಪ್ರವೇಶ ಮಾಡಿದರೆ ಪರಿಸ್ಥಿತಿ ಕೈ ಮೀರಿ ಹೋಗುವ ಸಾಧ್ಯತೆಯನ್ನು ಅರಿತ ಪೊಲೀಸ್ ವರಿಷ್ಠಧಿಕಾರಿಗಳು ಕಚೇರಿಯಲ್ಲಿ ಸಂಧಾನ ನಡೆಸಿ ಈ ಸಂದರ್ಭದಲ್ಲಿ ದೇಗುಲ ಪ್ರವೇಶ ಮಾಡುವುದು ಬೇಡ ಎಂದು ಮನವಿ ಮಾಡಿದರು. ಪೊಲೀಸರ ಮನವಿಯ ಮೇರೆಗೆ ಇಬ್ಬರು ಮಹಿಳೆಯರು ದೇವಾಲಯ ಪ್ರವೇಶದಿಂದ ಹಿಂದಕ್ಕೆ ಸರಿದರು.

    ನಾವು ಪ್ರಾಣದ ಹಂಗನ್ನು ತೊರೆದು ಪೊಲೀಸ್ ಭದ್ರತೆಯಲ್ಲಿ ಇಲ್ಲಿಯವರೆಗೆ ಬಂದಿದ್ದೇವೆ. ದಯವಿಟ್ಟು ಒಂದು ಬಾರಿ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿ ಎಂದು ಮಹಿಳೆಯರು ಮನವಿ ಮಾಡಿದ್ದರು.

  • ಶಬರಿಮಲೆ ಶಿಷ್ಟಾಚಾರ ಉಲ್ಲಂಘನೆ ಮಾಡೋದು ಸರಿಯಲ್ಲ -ಸಿಎಂ ಎಚ್‍ಡಿಕೆ

    ಶಬರಿಮಲೆ ಶಿಷ್ಟಾಚಾರ ಉಲ್ಲಂಘನೆ ಮಾಡೋದು ಸರಿಯಲ್ಲ -ಸಿಎಂ ಎಚ್‍ಡಿಕೆ

    – ಪೂರ್ವಿಕರ ಸಂಸ್ಕೃತಿ ಹಾಗೇ ನಡೆದುಕೊಂಡು ಹೋಗಲಿ

     ಮೈಸೂರು: ಸಾವಿರಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಶವರಿಮಲೆ ಶಿಷ್ಟಾಚಾರ ಉಲ್ಲಂಘನೆ ಮಾಡುವುದು ಉತ್ತಮವಲ್ಲ. ಸದ್ಯ ಅಗೋಚರ ಶಕ್ತಿಗಳ ವಿರುದ್ಧ ನಾವು ಸಂಘರ್ಷ ಮಾಡುವ ವಾತಾವರಣ ನಿರ್ಮಾಣ ಮಾಡಿಕೊಂಡಿದ್ದೇವೆ. ಆದರೆ ಇದೀಗ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ವೈಜ್ಞಾನಿಕವಾಗಿ ನಾವು ಬಹಳ ಮುಂದೆ ದಾಪುಗಾಲು ಇಟ್ಟು ಮುಂದೆ ಹೋಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಚಂದ್ರ ಲೋಕದಲ್ಲಿ ವಾಸ ಮಾಡುವ ವ್ಯವಸ್ಥೆ ಮಾಡುವ ಆಶ್ವಾಸನೆಯನ್ನು ವಿಜ್ಞಾನಿಗಳು ನೀಡುತ್ತಿದ್ದಾರೆ. ಆದರೆ ಸಾಕಷ್ಟು ಮುಂದುವರಿದರೂ ಯಾವುದಕ್ಕೂ ಪ್ರಕೃತಿ ವಿಕೋಪಗಳನ್ನು ತಡೆಯಲಾಗುತ್ತಿಲ್ಲ. ನನ್ನ ನಿಲುವು ಎಂಬುದಕ್ಕಿಂತ ನಮ್ಮ ಸಂಸ್ಕೃತಿಯನ್ನು ಪೂರ್ವಿಕರು ಮಾಡುವಾಗ ಅವರದ್ದೇ ಉದ್ದೇಶಗಳು ಇರುತ್ತವೆ. ಇದೀಗ ಆ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಿದೆ ಎಂದು ಸಿಎಂ ಅಭಿಪ್ರಾಯಪಟ್ಟರು.

    ಶಬರಿಮಲೆ ಕುರಿತು ನನ್ನ ಮಾತನ್ನು ಸಿಎಂ ಆಗಿ ಹೇಳಿದ್ದಲ್ಲ, ಅದು ವೈಯಕ್ತಿಕ ಅಭಿಪ್ರಾಯವಾಗಿ ವ್ಯಕ್ತಪಡಿಸುತ್ತಿದ್ದು, ಈ ಹಿಂದೆ ಹೇಗೆ ನಡೆದುಕೊಂಡು ಬಂದಿದೆ ಹಾಗೆಯೇ ನಡೆದುಕೊಂಡು ಹೋಗಲಿ. ನಮ್ಮ ಸಂಸ್ಕೃತಿಗಳು ಮುಂದುವರಿಯಲಿ. ಆದರೆ ನಮ್ಮಲ್ಲಿ ಕೆಲ ಮುಂದುವರಿದ ಮಂದಿ ಎಲ್ಲವನ್ನೂ ಮೌಢ್ಯ ಎನ್ನುತ್ತಾರೆ. ಆದರೆ ನಮ್ಮ ಎಲ್ಲಾ ಹಬ್ಬ ಹರಿದಿನ ಊಟ ವ್ಯವಸ್ಥೆ ಸೇರಿದಂತೆ ಎಲ್ಲದಕ್ಕೂ ವೈಜ್ಞಾನಿಕ ಕಾರಣವಿದೆ. ಇಂದು ನಡೆಯುತ್ತಿರುವ ವಿಕೋಪ ತಡೆಯಲು ಆಧುನಿಕ ತಂತ್ರಜ್ಞಾನ ಮತ್ತಷ್ಟು ಮುಂದುವರಿಯಬೇಕಿದೆ. ಇದು ನನ್ನ ಅಭಿಪ್ರಾಯ ಮಾತ್ರ. ಇದನ್ನು ಮತ್ತೊಬ್ಬರ ಮೇಲೆ ಒತ್ತಾಯ ಪೂರ್ವಕವಾಗಿ ಹಾಕುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

    ನಮಗೆ ಸಂಬಂಧಿಸಿದಲ್ಲ:
    ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಅದು ಸಂಬಂಧಿಸಿಲ್ಲ. ಈ ಹಿಂದಿನ ಸರ್ಕಾರ ಏನು ಪ್ರಕ್ರಿಯೆ ನಡೆಸಿದೆ ಅದು ಅಷ್ಟಕ್ಕೆ ನಿಂತಿದೆ. ನಮ್ಮ ಸರ್ಕಾರದ ರಚನೆಯಾದ ಬಳಿಕ ಯಾವುದೇ ಪ್ರಗತಿ ಪರಿಶೀಲನೆ ನಡೆದಿಲ್ಲ. ಅದ್ದರಿಂದ ಈ ಕುರಿತು ನಾನು ಹೆಚ್ಚು ಮಾತನಾಡಲ್ಲ. ಆದರೆ ಧರ್ಮದ ವಿಚಾರ ಬಂದಾಗ ಧರ್ಮ ಗುರುಗಳೇ ಮಾತುಕತೆ ಮೂಲಕ ಬಗೆಹರಿಸಕೊಳ್ಳಬೇಕು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ತ್ರೀಯನ್ನು ದೇವತೆಯಾಗಿ ಕಾಣುವ ಏಕೈಕ ಧರ್ಮ ನಮ್ದು, ಮುಟ್ಟಿಗೂ ಇದಕ್ಕೂ ಏನೂ ಸಂಬಂಧವಿಲ್ಲ: ಪ್ರತಾಪ್ ಸಿಂಹ

    ಸ್ತ್ರೀಯನ್ನು ದೇವತೆಯಾಗಿ ಕಾಣುವ ಏಕೈಕ ಧರ್ಮ ನಮ್ದು, ಮುಟ್ಟಿಗೂ ಇದಕ್ಕೂ ಏನೂ ಸಂಬಂಧವಿಲ್ಲ: ಪ್ರತಾಪ್ ಸಿಂಹ

    ಮೈಸೂರು: ನ್ಯಾಯಾಲಯಗಳು ಧರ್ಮಗ್ರಂಥ ಆಧಾರಿತ ಮತಗಳ ಕನ್ನಡಕ ಹಾಕಿಕೊಂಡು ನಂಬಿಕೆ, ವಿಶ್ವಾಸ, ವಿಧಿ-ವಿಧಾನ, ಆಚಾರ-ವಿಚಾರಗಳ ಆಧಾರಿತವಾಗಿರುವಂತಹ ಹಿಂದೂ ಧರ್ಮವನ್ನು ನೋಡಿ ತೀರ್ಪು ಕೊಡಲು ಪ್ರಾರಂಭ ಆಗಿರುವುದರಿಂದ ಈ ಸಮಸ್ಯೆ ಆರಂಭವಾಗಿದೆ ಅಂತ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

    ಪುರಾತನ ಧಾರ್ಮಿಕ ಕ್ಷೇತ್ರ ಶಬರಿಮಲೆಗೆ ಮಹಿಳೆಯ ಪ್ರವೇಶ ವಿಚಾರವಾಗಿ ಶಬರಿಮಲದ ನಿಳಕ್ಕಲ್ ಬಳಿ ನಡೆಯುತ್ತಿದ್ದ ಪ್ರತಿಭಟನೆ ಉಗ್ರ ರೂಪ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಬುಕ್  ಬೇಸ್ ಡ್ ರಿಲೀಜನ್ ಗಳಲ್ಲಿ ಅವರು ಒಂದೇ ದೇವರನ್ನು ಪ್ರಾರ್ಥಿಸುತ್ತಿದ್ದಾರೆ. ಒಂದೇ ಧರ್ಮದ ಗ್ರಂಥದಲ್ಲಿ ಅವರು ನಂಬಿಕೆ ಇಟ್ಟುಕೊಂಡಿದ್ದಾರೆ. ಅವರು ಭಾರತದಲ್ಲಿ ಅಥವಾ ಮೆಕ್ಕಾದಲ್ಲಿದ್ದರೂ ಅದೇ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಆದ್ರೆ ಹಿಂದೂ ಧರ್ಮ ಹಾಗಲ್ಲ. ಈ ಧರ್ಮಕ್ಕೆ ಯಾರು ಪ್ರವಾದಿ ಇಲ್ಲ. ವಿಶ್ವಾಸ, ಆಚಾರ-ವಿಚಾರ ಪರಂಪರಗತವಾಗಿ ನಡೆದುಕೊಂಡು ಬಂದಂತಹ ಒಂದು ಪದ್ಧತಿಗಳಲ್ಲಿ ಹಿಂದೂ ಧರ್ಮವಿದೆ. ಇದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸುಪ್ರೀಂ ಕೋರ್ಟ್ ಈ ರೀತಿ ತೀರ್ಪು ಕೊಟ್ಟಿರುವುದು ಬಹಳ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಹಿಂಸಾರೂಪಕ್ಕೆ ತಿರುಗಿದ ಶಬರಿಮಲೆ ಪ್ರತಿಭಟನೆ: ಗುಂಡಾಗಿರಿ ಪ್ರದರ್ಶಿಸಿದ ಪೊಲೀಸರು!

    ಕೆಲವೊಂದು ದೇವಸ್ಥಾನದಲ್ಲಿ ಮುಟ್ಟನ್ನು ಶ್ರೇಷ್ಟವೆಂದು ಪರಿಗಣಿಸಲಾಗುತ್ತದೆ. ಇಂತಹ ಏಕೈಕ ಧರ್ಮ ನಮ್ಮ ಹಿಂದೂ ಧರ್ಮವಾಗಿದೆ. ನವರಾತ್ರಿ ಸಂದರ್ಭದಲ್ಲೂ ದುಡ್ಡಿಗೆ ಲಕ್ಷ್ಮೀ, ವಿದ್ಯೆಗೆ ಸರಸ್ವತಿ, ಶಕ್ತಿಗೆ ದುರ್ಗೆಯನ್ನು ಆರಾಧಿಸುತ್ತೇವೆ. ಬೇರೆ ಯಾವುದೇ ಧರ್ಮದಲ್ಲಿ ಕೂಡ ದೇವರನ್ನು ಸ್ತ್ರೀ ಸ್ವರೂಪಿಯಾಗಿ ಕಾಣುವುದಿಲ್ಲ. ನಮ್ಮ ಧರ್ಮದಲ್ಲಿ ಮಾತ್ರ ಕಾಣುತ್ತೇವೆ. ಈ ಮೂಲಕ ನಮ್ಮ ಧರ್ಮದಲ್ಲಿ ಸ್ತ್ರೀಯರಿಗೆ ಯಾವುದೇ ತಾರತಮ್ಯ ತೋರಿಲ್ಲ. ಸ್ತ್ರೀಯರಿಗೆ ಅತೀ ಹೆಚ್ಚು ಗೌರವ ಕೊಟ್ಟಿದೆ ಅನ್ನೋದು ದ್ಯೋತಕವಾಗಿದೆ. ಕೋರ್ಟ್ ಇದನ್ನು ಅರ್ಥಮಾಡಿಕೊಳ್ಳಬೇಕು. ಹೀಗಾಗಿ ಕೊಟ್ಟ ತೀರ್ಪನ್ನು ಮರು ಪರಿಶೀಲಿಸಬೇಕು. ಈ ಮೂಲಕ ನಮ್ಮ ನಂಬಿಕೆಗೆ ಹೊಡೆತ ಕೊಡುವಂತಹ ಪ್ರಯತ್ನವನ್ನು ಯಾರೂ ಮಾಡಬಾರದು. 10 ರಿಂದ 50 ವಯೋಮಾನದ ಮಹಿಳೆಯರು ಶಬರಿಮಲೆಗೆ ಹೋಗುವಂತಹ ಪ್ರಯತ್ನವನ್ನು ಮಾಡಬಾರದು ಅಂತ ಹೇಳಿದ್ರು.  ಇದನ್ನೂ ಓದಿ: ತಲಾಖ್ ತೀರ್ಪಿಗೆ ಸ್ವಾಗತ, ಶಬರಿಮಲೆ ತೀರ್ಪಿಗೆ ವಿರೋಧ ಯಾಕೆ: ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

    ನಮ್ಮಲ್ಲಿ ಯಾರು ಹೆಣ್ಣು ಮಕ್ಕಳಿಗೆ ತಾರತಮ್ಯವನ್ನು ಮಾಡುತ್ತಿಲ್ಲ. ಅಯ್ಯಪ್ಪ ಸ್ವಾಮಿ ಒಬ್ಬ ಬ್ರಹ್ಮಚಾರಿ. ಅಯ್ಯಪ್ಪನ ದೇವಾಲಯ ಇಡೀ ಭಾರತದಾದ್ಯಂತ ಇದೆ. ಹೀಗಾಗಿ ಈ ದೇವಾಲಯಕ್ಕೆ ಯಾವಾಗ ಬೇಕಾದರೂ ಮಹಿಳೆಯರು ಹೋಗಬಹುದು. ಅದಕ್ಕೆ ಯಾರೂ ಕೂಡ ನಿಷೇಧ ಹೇರಿಲ್ಲ. ಆದರೆ ಶಬರಿ ಮಲೆಯಲ್ಲಿ ಆತ ತಪಸ್ಸು ಮಾಡುತ್ತಿದ್ದ ಜಾಗ. ಆತ ಬ್ರಹ್ಮಚಾರಿಯಾಗಿರೋದ್ರಿಂದ ಅಲ್ಲಿ ಮಾತ್ರ ಮಹಿಳೆಯರ ಪ್ರವೇಶ ನಿಷೇಧವಾಗಿದೆ. 10 ವರ್ಷ ವಯಸ್ಸಿನೊಳಗಿನವರು ಹಾಗೂ 50 ವರ್ಷ ನಂತರದ ವಯಸ್ಸಿನವರು ಇಲ್ಲಿಗೆ ಪ್ರವೇಶಿಸಲು ಅವಕಾಶವಿದೆ. ನಮ್ಮ ಭಾರತದಲ್ಲಿ ಮಹಿಳೆಯರಲ್ಲಿ ನಾವು ತಾಯ್ತನವನ್ನು ಕಾಣ್ತೀವಿ. ಅದಕ್ಕೋಸ್ಕರ ಅವರಿಗೆ ಅವಕಾಶವಿದೆ. ಆದ್ರೆ ಈ ಮುಟ್ಟಿಗೆ ಇದಕ್ಕೂ ಏನೂ ಸಂಬಂಧವಿಲ್ಲ ಅಂತ ತಿಳಿಸಿದ್ರು.

    ನೂರಾರು ವರ್ಷಗಳಿಂದ ನಡೆದುಕೊಂಡು ಬಂಂತಹ ಪದ್ಧತಿ ಇದಾಗಿದ್ದು, ಅದಕ್ಕೆ ತೊಂದರೆ ಕೊಡಲು ಯಾರು ಪ್ರಯತ್ನಿಸಬಾರದು ಅಂತ ಅವರು ಮನವಿಮಾಡಿಕೊಂಡರು. ನಿನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕೂಡ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದ್ರೆ ಸಾಮೂಹಿಕ ಆತ್ಮಹತ್ಯೆ- ಶಿವಸೇನಾ ಕಾರ್ಯಕರ್ತೆಯರಿಂದ ಬೆದರಿಕೆ

    ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದ್ರೆ ಸಾಮೂಹಿಕ ಆತ್ಮಹತ್ಯೆ- ಶಿವಸೇನಾ ಕಾರ್ಯಕರ್ತೆಯರಿಂದ ಬೆದರಿಕೆ

    ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡಿದರೆ ನಮ್ಮ ಮಹಿಳಾ ಕಾರ್ಯಕರ್ತೆಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳದ ಶಿವಸೇನೆ ಹೇಳಿದೆ.

    ಮಾಧ್ಯಮಗಳ ಜೊತೆ ಮಾತನಾಡಿದ ಶಿವಸೇನಾ ಸದಸ್ಯರಾದ ಪೆರಿಂಗಂಮ್ಮಾಲಾ ಅಜಿ, ಸುಪ್ರಿಂ ಕೋರ್ಟ್ ಆದೇಶವನ್ನ ಖಂಡಿಸಿ, ಇದೇ ಅಕ್ಟೋಬರ್ 17 ಮತ್ತು 18 ರಂದು ಪಂಪಾ ನದಿಯ ತೀರದಲ್ಲಿ ನಮ್ಮ ಮಹಿಳಾ ಕಾರ್ಯಕರ್ತರೆಲ್ಲಾ ಸೇರಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಆತ್ಮಹತ್ಯೆ ಮಾಡಿಕೊಳ್ಳಲಿರುವ ಮಹಿಳೆಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಒಂದು ವೇಳೆ ಮಹಿಳೆಯರು ಶಬರಿಮಲೆಗೆ ಪ್ರವೇಶಿಸಿದರೆ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಲಿದ್ದಾರೆ ಎಂದು ಪೆರಿಂಗಂಮ್ಮಾಲಾ ಅಜಿ ಹೇಳಿದ್ದಾರೆ.

    ಶಬರಿಮಲೆ ಮಹಿಳೆಯರ ಪ್ರವೇಶದ ವಿಚಾರವಾಗಿ ದೇಶದೆಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇರಳದ ಸರ್ಕಾರ ಮತ್ತು ಇನ್ನಿತರ ಭಕ್ತರು ಈ ಆದೇಶದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಶಿವಸೇನಾ ಕಾರ್ಯಕರ್ತರಿಂದ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

    ಕಳೆದ ಸೆಪ್ಟಂಬರ್ 28 ರಂದು ಕೇರಳದ ಶಬರಿಮಲೆಯ ಅಯ್ಯಪ್ಪನ ದೇವಸ್ಥಾನಕ್ಕೆ ಎಲ್ಲಾ ವಯೋಮಿತಿಯ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರಿಂ ಕೋರ್ಟ್‌ನ  ಮಹತ್ವದ ತೀರ್ಪನ್ನು ನೀಡಿತ್ತು. ಭಕ್ತಿಯನ್ನು ಲಿಂಗದ ಆಧಾರದಲ್ಲಿ ವಿವರಿಸಲು ಸಾಧ್ಯವಿಲ್ಲ. ಧಾರ್ಮಿಕ ಹಕ್ಕಿಗೂ-ದೈಹಿಕ ಸ್ಥಿತಿಗತಿಗೂ ಸಂಬಂಧವೇ ಇಲ್ಲ. ಅಯ್ಯಪ್ಪನ ಭಕ್ತರು ಅನ್ಯಧರ್ಮದವರಂತೆ ಪ್ರತ್ಯೇಕ ಸ್ಥಾನಮಾನ ಹೊಂದಿಲ್ಲ. ಒಂದೆಡೆ ಮಹಿಳೆಯರನ್ನು ದೇವರಂತೆ ಪೂಜಿಸುತ್ತೇವೆ. ಮತ್ತೊಂದೆಡೆ ನಿಷೇಧ ಹೇರಲಾಗಿದೆ. ಮಹಿಳೆ ದೇವರಿಗೆ ಸಮಾನವಾಗಿದ್ದು ಮಹಿಳೆಯರಿಗೆ ಶಬರಿಮಲೆಗೆ ಬಹಿಷ್ಕಾರ ಸರಿಯಲ್ಲ. ಮಹಿಳೆಯರ ಬಗೆಗಿನ ಇಬ್ಬಗೆ ನೀತಿಯಿಂದ ಆಕೆಯ ಸ್ಥಾನಮಾನಕ್ಕೆ ಧಕ್ಕೆಯಾಗಿದೆ ಎಂದು ಕೋರ್ಟ್ ಹೇಳಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಿಳೆಯರಿಗೂ ಮುಕ್ತವಾಗುತ್ತಾ ಶಬರಿಮಲೈಯ ಅಯ್ಯಪ್ಪನ ಬಾಗಿಲು..?

    ಮಹಿಳೆಯರಿಗೂ ಮುಕ್ತವಾಗುತ್ತಾ ಶಬರಿಮಲೈಯ ಅಯ್ಯಪ್ಪನ ಬಾಗಿಲು..?

    ನವದೆಹಲಿ: ಕಳೆದ 3 ದಿನಗಳಿಂದ ಸಾಲು ಸಾಲು ಮಹತ್ವದ ತೀರ್ಪುಗಳನ್ನು ನೀಡುತ್ತಿರುವ ಸುಪ್ರೀಂಕೋರ್ಟ್ ಇಂದು ಮತ್ತೊಂದು ಐತಿಹಾಸಿಕ ತೀರ್ಪು ನೀಡಲಿದೆ. ಕೇರಳದ ಪ್ರಸಿದ್ಧ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆರಿಗೂ ಪ್ರವೇಶ ನೀಡುವ ಸಂಬಂಧ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಲಿದೆ. ಮಹಿಳೆಯರ ಪ್ರವೇಶ ಮಾತ್ರವಲ್ಲದೆ ತಿಂಗಳ ಋತುಮತಿಯಾದ ಮಹಿಳೆಗೂ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಇದೆಯೋ ಇಲ್ವೋ ಅಂತ ತೀರ್ಪು ನೀಡಲಿದೆ.

    ಪ್ರಸಿದ್ದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳಗೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸುವ 800 ವರ್ಷಗಳ ಹಿಂದಿನ ನಿಯಮವನ್ನು ಪ್ರಶ್ನಿಸಿ, ಯಂಗ್ ಲಾಯರ್ಸ್ ಅಸೋಸಿಯೇಷನ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಮಹಿಳೆಯರಿಗೆ ನಿಷೇಧ ಹೇರಿರುವುದು ಸಂಪ್ರದಾಯ ಅಥವಾ ಹಿಂದೂ ಧರ್ಮದ ನಿಯಮ ಪಾಲನೆ ಅಲ್ಲ ಅಂತ ವಾದ ಮಂಡಿಸಿತ್ತು. ಅಲ್ಲದೆ ಮುಟ್ಟಾದ ಹೆಣ್ಣುಮಕ್ಕಳ ದೇವಸ್ಥಾನ ಪ್ರವೇಶ ನಿರಾಕರಣೆಯನ್ನೂ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಗಳ ವಿಚಾರಣೆ ಆಲಿಸಿದ್ದ ಸುಪ್ರೀಂಕೋರ್ಟ್, ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿತ್ತು.

    ಪ್ರಕರಣ ವಿಚಾರಣೆ ವೇಳೆ ಮುಟ್ಟಾದ ಮಹಿಳೆಯರು ಅಪವಿತ್ರಳು ಹಾಗಾಗಿ ಅವರಿಗೆ ಪ್ರವೇಶ ನಿರ್ಬಂಧಿಸಿಲಾಗಿದೆ ಅಂತಾ ದೇವಸ್ಥಾನ ಆಡಳಿತ ಮಂಡಳಿ ಮಂಡಿಸಿದ ವಾದಕ್ಕೆ ಸಾಂವಿಧಾನಿಕಪೀಠ ಅಸಮಾಧಾನ ವ್ಯಕ್ತಪಡಿಸಿತ್ತು. ಯಾವ ಆಧಾರದ ಮೇಲೆ ಎಲ್ಲವನ್ನೂ ನಿರ್ಧರಿಸಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಿರಿ ಅಂತಾ ಚಾಟಿ ಬೀಸಿತ್ತು. ಮಹಿಳೆಯರಿಗೂ ಪುರುಷರಷ್ಟೆ ಸಮಾನ ಹಕ್ಕಿದೆ. ಅದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಸಮಾನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದಡಿ ಮಹಿಳೆಯರಿಗೂ ಮುಕ್ತ ಅವಕಾಶ ನೀಡಬೇಕು ಅಂತ ಅಭಿಪ್ರಾಯಪಟ್ಟಿತ್ತು.

    ಬಳಿಕ ಪ್ರಕರಣ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾ. ದೀಪಕ್ ಮಿಶ್ರಾ, ನ್ಯಾ.ರೋಹಿಂಗ್ಟನ್, ನ್ಯಾ. ಖಾನ್ವೀಲ್ಕರ್, ನ್ಯಾ.ಡಿ.ವೈ ಚಂದ್ರಚೂಡ್, ನ್ಯಾ.ಇಂಧು ಮಲ್ಹೋತ್ರಾ ನೇತೃತ್ವದ ಪಂಚಪೀಠ ಇಂದು ತೀರ್ಪು ನೀಡಲಿದೆ. ಹಾಗಾದರೆ ಶಬರಿಮಲೈಗೆ ಇನ್ಮುಂದೆ ಮಹಿಳೆಯರಿಗೂ ಪ್ರವೇಶ ಸಿಗುತ್ತಾ..? ಅಥವಾ ಹಳೆಯ ಸಂಪ್ರದಾಯವೇ ಮುಂದುವರಿಯುತ್ತಾ..? ಕಾದುನೋಡ್ಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv