Tag: Sabarimala

  • ಅಯ್ಯಪ್ಪ ಸನ್ನಿಧಿಯ 18 ಮೆಟ್ಟಿಲುಗಳ ಎದುರಿನ ಅಶ್ವತ್ಥ ವೃಕ್ಷದಲ್ಲಿ ಆಕಸ್ಮಿಕ ಬೆಂಕಿ

    ಅಯ್ಯಪ್ಪ ಸನ್ನಿಧಿಯ 18 ಮೆಟ್ಟಿಲುಗಳ ಎದುರಿನ ಅಶ್ವತ್ಥ ವೃಕ್ಷದಲ್ಲಿ ಆಕಸ್ಮಿಕ ಬೆಂಕಿ

    ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿವಾದ ದೇಶಾದ್ಯಂತ ಹಲವರ ಆಕ್ರೋಶಕ್ಕೆ ಕಾರಣವಾಗಿದ್ದರೆ, ಇತ್ತ ಅಯ್ಯಪ್ಪ ಸನ್ನಿಧಿಯ 18 ಮೆಟ್ಟಿಲುಗಳ ಎದುರಿನ ಅಶ್ವತ್ಥ ವೃಕ್ಷದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.

    ಅಯ್ಯಪ್ಪ ಸನ್ನಿಧಿಗೆ ಭಕ್ತರು ತೆರಳುವ ಮುನ್ನ ಇರುವ 18 ಮೆಟ್ಟಲ ಬಳಿಯ ಬೃಹತ್ ಅಶ್ವತ್ಥ ಮರಕ್ಕೂ ಭಕ್ತರು ನಮಿಸಿ ಮುಂದೇ ಸಾಗುತ್ತಾರೆ. ಆದರೆ ಇಂದು ಬೆಳಗ್ಗೆ 11.30ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ.

    ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಪಡೆದ ಆಗ್ನಿ ಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಪರಿಣಾಮ ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದ ಭಕ್ತರನ್ನು ವಾಲಿಯ ನಡಪಂಥಲ್ ಬಳಿ ಕೆಲ ಸಮಯ ತಡೆಯಲಾಯಿತು. ಬೆಂಕಿ ನಂದಿಸಿದ ಬಳಿಕ ಮತ್ತೆ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

    ಮರದ ಪಕ್ಕದಲ್ಲೇ ಅಗ್ನಿ ಕುಂಡವಿದ್ದು, ಹಲವು ಶತಮಾನಗಳಿಂದ ಅಗ್ನಿ ಕುಂಡದಲ್ಲಿ ಭಕ್ತರು ಸಮರ್ಪಿಸಿದ ತುಪ್ಪ ಕಾಯಿ ಅರ್ಪಿಸುತ್ತಿದ್ದರು ಯಾವುದೇ ಅವಘಡ ನಡೆದ ಬಗ್ಗೆ ಮಾಹಿತಿ ಇಲ್ಲ. ಅಗ್ನಿ ಕುಂಡದ ಮೇಲೆ ಕೊಂಬೆಗಳು ಚಾಚಿಕೊಂಡಿದ್ದರು ಇದುವರೆಗೂ ಬೆಂಕಿಯ ತಾಪದಿಂದ ಮರಕ್ಕೆ ಯಾವುದೇ ಹಾನಿ ಆಗಿರಲಿಲ್ಲ. ಇಂತಹ ಘಟನೆ ಇದೇ ಮೊದಲ ಬಾರಿಗೆ ಸಂಭವಿಸಿದೆ ಎಂದು ವರದಿಯಾಗಿದೆ.

    ಶತಮಾನಗಳಿಂದ ಮಹಿಳೆಯರ ಪ್ರವೇಶಕ್ಕೆ ನಿಷೇಧವಿದ್ದ ಅಯ್ಯಪ್ಪ ಸನ್ನಿಧಿಗೆ ಜನವರಿ 1 ರಂದು ಮಹಿಳೆಯರ ಪ್ರವೇಶ ನಡೆದಿತ್ತು. ಇದಕ್ಕೆ ಕೇರಳ ಸರ್ಕಾರ ಸಂಪೂರ್ಣ ಬೆಂಬಲ ನೀಡಿತ್ತು. ಸದ್ಯ ಮರದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಅಪಾಯದ ಮುನ್ಸೂಚನೆಯೇ ಎಂಬ ಆತಂಕ ಭಕ್ತರಲ್ಲಿ ಮೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಧಾನಸೌಧದಲ್ಲಿ ಹಣ ಸಿಕ್ಕಿರುವುದು ಕಾಂಗ್ರೆಸ್‍ಗೆ ಪುಟುಗೋಸಿ ಡೀಲ್- ಪ್ರತಾಪ್ ಸಿಂಹ ಲೇವಡಿ

    ವಿಧಾನಸೌಧದಲ್ಲಿ ಹಣ ಸಿಕ್ಕಿರುವುದು ಕಾಂಗ್ರೆಸ್‍ಗೆ ಪುಟುಗೋಸಿ ಡೀಲ್- ಪ್ರತಾಪ್ ಸಿಂಹ ಲೇವಡಿ

    ಮೈಸೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದಂತೆ ಕಾಂಗ್ರೆಸ್‍ಗೆ ಇದು ಪುಟುಗೋಸಿ ಡೀಲ್ ಆಗಿದೆ. ಅವರ ಪ್ರಕಾರ 26 ಲಕ್ಷ ರೂಪಾಯಿ ಯಾವ್ ಭ್ರಷ್ಟಾಚಾರವಾಗಿದೆ. 50 ಕೋಟಿ 100 ಕೋಟಿ 500 ಕೋಟಿ ಹಣ ಲಪಟಾಯಿಸೋ ಕಾಂಗ್ರೆಸ್ಸಿಗರಿಗೆ 26 ಲಕ್ಷ ಹಣವೇ ಅಂತ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

    ವಿಧಾನಸೌಧದಲ್ಲಿ ಹಣ ಸಿಕ್ಕ ವಿಚಾರದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನೇಶ್ ಗುಂಡೂರಾವ್ ಅವರು ಸತ್ಯ ಒಪ್ಪಿಕೊಂಡಿದ್ದಾರೆ. ಸ್ಟೀಲ್ ಬ್ರಿಡ್ಜ್‍ನಂತಹ ಯೋಜನೆಯಲ್ಲಿ ಸಾವಿರಾರು ಕೋಟಿ ಬರುವಾಗ 26 ಲಕ್ಷ ಅವರಿಗೆ ಪುಟುಗೋಸಿನೆ. ಹೀಗಾಗಿ ದಿನೇಶ್ ಗುಂಡೂರಾವ್ ಅವರನ್ನ ನಾನು ಅಭಿನಂದಿಸುತ್ತೇನೆ ಅಂತ ಹೇಳಿದ್ರು.

    ಶಬರಿಮಲೆ ಎಂಟ್ರಿ:
    ಅಯ್ಯಪ್ಪನ ದೇವಾಲಯಕ್ಕೆ ಮಹಿಳೆಯರ ಎಂಟ್ರಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಂಸದರು, ಅಯ್ಯಪ್ಪನ ದೇವಾಲಯಕ್ಕೆ ಬರೋಕೆ ಮುಸ್ಲಿಂ ಮಹಿಳೆಯರು ಯಾರು ಅಂತ ಪ್ರಶ್ನಿಸಿದ್ರು. ಅವರೇನು ಅವರ ಮಸೀದಿಗಳಿಗೆ ನಮ್ಮನ್ನು ಬಿಟ್ಟುಕೊಳ್ಳುತ್ತಾರಾ, ನಮ್ಮ ಶ್ರದ್ಧಾ ಭಕ್ತಿಯನ್ನು ಹಾಳು ಮಾಡುದಕ್ಕೆ ಅವರಿಗೆ ಕುಮ್ಮಕ್ಕು ಕೊಟ್ಟವರು ಯಾರು, ಕಳ್ಳರ ರೀತಿ ಬುರ್ಕಾ ಧರಿಸಿಕೊಂಡು ದೇವಾಸ್ಥಾನಕ್ಕೆ ಹೋಗಿದ್ದೀರಲ್ಲ ನೀವೇನು ನಿಜವಾದ ಭಕ್ತರಾ, ನಿಮ್ಮ ಮುಖದಲ್ಲಿ ಶ್ರದ್ಧೆ ಭಕ್ತಿ ಇದೆಯಾ ಅಂತ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ರು.

    ಕಮ್ಯೂನಿಸ್ಟ್ ಸರ್ಕಾರದ ಕುಮ್ಮಕ್ಕಿನಿಂದ ಇಂತದ್ದೆಲ್ಲ ನಡೆದಿದೆ. ಕಮ್ಯೂನಿಸ್ಟ್ ಸರ್ಕಾರವನ್ನ ಕೆಲವೆಡೆ ಬಿಜೆಪಿ ನಾಶ ಮಾಡಿದೆ. ಕೇರಳದಲ್ಲೂ ನಾಶವಾಗುವ ಕಾಲ ಬಂದಿದೆ. ಅಯ್ಯಪ್ಪನ ವಿಚಾರವೇ ಕಮ್ಯೂನಿಸ್ಟ್ ಪಕ್ಷವನ್ನ ನಾಶ ಮಾಡಲಿದೆ. ಪ್ರಪಂಚದಲ್ಲಿ ಹಿಂದೂ ಧರ್ಮ ಮಾತ್ರ ಮಹಿಳೆಯನ್ನ ಪೂಜ್ಯ ಸ್ಥಾನದಲ್ಲಿ ಇಟ್ಟಿದೆ. ಎಡಬಿಡಂಗಿಗಳಿಗೆ ಇದು ಅರ್ಥ ಆಗೋಲ್ಲ. ಬೇರೆ ಧರ್ಮದಲ್ಲಿ ಹೆಣ್ಣನ್ನ ಕೇವಲ ಸುಖ ನೀಡುವ ವಸ್ತುವಾಗಿ ಬಳಸಿದ್ದಾರೆ. ನಮ್ಮಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನ ಕೊಟ್ಟಿದೆ ಇದನ್ನ ಜನರು ಅರ್ಥ ಮಾಡಿಕೊಳ್ಳಬೇಕು ಅಂತ ಕಿಡಿಕಾರಿದ್ದಾರೆ.


    ಲೋಕಸಭೆಗೆ ಸ್ಪರ್ಧೆ ಖಚಿತ:
    ಮುಂದಿನ ಲೋಕಸಭೆಗೆ ಟಿಕೆಟ್ ನನಗೆ, ಗೆಲ್ಲೋದು ನಾನೇ. ಕೆಲ ಮಾಧ್ಯಮಗಳು ನನ್ನ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ವಾಪಸ್ ಪತ್ರಿಕೋದ್ಯಮಕ್ಕೆ ಬರಲಿ ಅಂತ ನನಗೆ ಟಿಕೆಟ್ ಇಲ್ಲ ಎಂದು ಬರೆಯುತ್ತಾರೆ. ಆದ್ರೆ ಈ ಬಾರಿ ಟಿಕೆಟ್ ನನಗೆ ಸಿಗುವುದು ಖಚಿತ, ಗೆಲ್ಲುವುದು ಖಚಿತವಾಗಿದೆ. ನಮ್ಮ ಬಿಜೆಪಿಯ 15 ಸಂಸದರಿಗೂ ಟಿಕೆಟ್ ಈಗಾಗಲೇ ಫೈನಲ್ ಆಗಿದೆ. ಯಡಿಯೂರಪ್ಪ ಹಾಗೂ ಹೈಕಮಾಂಡ್ ಕೆಲಸ ಮಾಡುವಂತೆ ಹೇಳಿದೆ. ಮೈಸೂರು ಕ್ಷೇತ್ರದ ಟಿಕೆಟ್ ಬಗ್ಗೆ ಯಾವುದೇ ಗೊಂದಲ ಬೇಡ ಅಂತ ಅವರು ಸ್ಪಷ್ಟಪಡಿಸಿದ್ರು.

    ದಿನೇಶ್ ಗುಂಡೂರಾವ್ ಹೇಳಿದ್ದೇನು?:
    ವಿಧಾನಸೌಧದಲ್ಲಿ ಹಣ ಪತ್ತೆಯಾದ ಬಗ್ಗೆ ಯಾರ ಮೇಲೂ ಆರೋಪ ಮಾಡುವುದು ಸರಿಯಲ್ಲ. ಅದರ ಬಗ್ಗೆ ಪೊಲೀಸರು ಖಂಡಿತವಾಗಿಯೂ ತನಿಖೆ ನಡೆಸುತ್ತಾರೆ ಎಂಬ ವಿಶ್ವಾಸ ಇದೆ. ಯಾರ ದುಡ್ಡು, ಯಾರು ತೆಗೆದುಕೊಂಡು ಹೋಗುತ್ತಿದ್ದರು..?, ಏನು ಅದರ ಮೂಲ ಎಂಬುದನ್ನೆಲ್ಲ ತಿಳಿದುಕೊಳ್ಳಬೇಕಾಗುತ್ತದೆ.

    30 ಸಾವಿರ ಕೋಟಿ ಹಗರಣಕ್ಕೆ ಒಂದು ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ ಮಾಡಿ ಅಂದ್ರೂ ಒಪ್ಪಿಕೊಳ್ಳುತ್ತಿಲ್ಲವಲ್ಲ. ಈ ಮಧ್ಯೆ ಇದ್ಯಾವುದು 20 ಲಕ್ಷ ರೂ. ಪುಟುಗೋಸಿ. ಒಟ್ಟಿನಲ್ಲಿ ಈ ಬಗ್ಗೆ ಉನ್ನತಮಟ್ಟದಲ್ಲಿ ತನಿಖೆ ಆಗಬೇಕು. ಯಾರಾದ್ರು ನಮ್ಮ ಪಕ್ಷದವರು ಇದರಲ್ಲಿ ಭಾಗಿಯಾಗಿದ್ದರೆ, ಕಾರಣಕರ್ತರು ಇದ್ದರೆ ತೀಕ್ಷಣವಾದ ಕ್ರಮ ಕೈಗೊಳ್ಳುತ್ತೇವೆ ಅಂತ ಗುಂಡೂರಾವ್ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳೆಯರ ಶಬರಿಮಲೆ ದೇಗುಲ ಪ್ರವೇಶಕ್ಕೆ ಸಾಲುಮರದ ತಿಮ್ಮಕ್ಕ ಖಂಡನೆ

    ಮಹಿಳೆಯರ ಶಬರಿಮಲೆ ದೇಗುಲ ಪ್ರವೇಶಕ್ಕೆ ಸಾಲುಮರದ ತಿಮ್ಮಕ್ಕ ಖಂಡನೆ

    ಹಾಸನ: ಶಬರಿಮಲೆಯಲ್ಲಿ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಮಾಡಿರುವುದು ಸರಿಯಿಲ್ಲ ಅಂತ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಹೇಳಿದ್ದಾರೆ.

    ಸೂತಕವಾಗುವ ಹೆಂಗಸರು ಶಬರಿಮಲೆ ದೇವಸ್ಥಾನಕ್ಕೆ ಹೋಗಬಾರದೆಂದು ಅನೇಕ ವರ್ಷಗಳಿಂದ ಬಂದತಂತಹ ಸಂಪ್ರದಾಯವಾಗಿದೆ. ನನ್ನಷ್ಟು ವಯಸ್ಸಾದ ಮೇಲೆ ಅಲ್ಲಿಗೆ ಹೋಗಿ ದೇವರ ದರ್ಶನ ಪಡೆಯಬಹುದು. ನಾನು ವಯಸ್ಸಾದ ಮೇಲೆ ಹೋಗಿದ್ದೇನೆ. ನನ್ನನ್ನು ದೊಡ್ಡ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು. ಈವಾಗ ಇಬ್ಬರು ಮಾನ-ಮರ್ಯಾದೆ ಇಲ್ಲದೇ ದೇವರ ದರ್ಶನ ಪಡೆಯಲು ಹೋಗಿದ್ದಾರೆ. ಆದ್ರೆ ಮುಟ್ಟಾಗುವ ಮಹಿಳೆಯರು ದೇವಸ್ಥಾನಕ್ಕೆ ಹೋಗಬಾರದು ಅಂತ ಅವರು ಒತ್ತಾಯಿಸಿದ್ರು.

    ಶಬರಿಮಲೆ ದೇವಸ್ಥಾನಕ್ಕೆ ಬಿಂದು ಹಾಗೂ ಕನಕದುರ್ಗ ಎಂಬಿಬ್ಬರು ಮಹಿಳೆಯರು ದೇವಾಲಯದೊಳಕ್ಕೆ ಪ್ರವೇಶ ಮಾಡಿದ್ದರು. ಬಿಂದು ಮತ್ತು ಕನಕ ಮಧ್ಯರಾತ್ರಿ ಬೆಟ್ಟವನ್ನು ಹತ್ತಿ ಇಂದು ಬೆಳಗ್ಗೆ 3.45ಕ್ಕೆ ದೇವಾಲಯವನ್ನು ಪ್ರವೇಶಿಸಿದ್ದರು. ಈ ಸಮಯದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು ಮತ್ತು ಯಾವುದೇ ಮಾಧ್ಯಮಗಳು ಸಹ ಇರಲಿಲ್ಲ.

    ಮಹಿಳೆಯರ ಪ್ರವೇಶವನ್ನು ಖಚಿತಪಡಿಸಿದ ಕೇರಳ ಸಿಎಂ ಪಿಣಾರಯ್ ವಿಜಯನ್, ಇಬ್ಬರು ಮಹಿಳೆಯರು ಪೊಲೀಸ್ ಭದ್ರತೆಯಲ್ಲಿ ಶಬರಿಮಲೆ ಪ್ರವೇಶಿಸಿದ್ದಾರೆ. ಅವರಿಗೆ ರಕ್ಷಣೆ ನೀಡಿದ್ದಕ್ಕೆ ನಮಗೆ ಹೆಮ್ಮೆಯಿದೆ ಎಂದು ಅವರು ತಿಳಿಸಿದ್ದರು. 44 ವರ್ಷ ಬಿಂದು ಕಾಲೇಜು ಉಪನ್ಯಾಸಕಿ ಮತ್ತು ಸಿಪಿಐ(ಎಂ) ಕಾರ್ಯಕರ್ತೆಯಾಗಿದ್ದು, 42 ವರ್ಷದ ಕನಕದುರ್ಗ ನಾಗರಿಕ ಸರಬರಾಜು ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.

    ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ 10 ವರ್ಷದಿಂದ ಮೇಲ್ಪಟ್ಟು 50 ವರ್ಷದ ಒಳಗಿನ ಮಹಿಳೆಯರಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಈ ನಿರ್ಬಂಧವನ್ನು ತೆರವುಗೊಳಿಸಿ ಎಲ್ಲ ವಯಸ್ಸಿನ ಮಹಿಳೆಯರು ದೇವಾಲಯವನ್ನು ಪ್ರವೇಶಿಸಬಹುದು ಎನ್ನುವ ಐತಿಹಾಸಿಕಾ ತೀರ್ಪನ್ನು ಪ್ರಕಟಿಸಿತ್ತು. ಆದ್ರೆ ಇದೀಗ ಇಬ್ಬರು ಮಹಿಳೆಯರು ದೇವಾಲಯವನ್ನು ಪ್ರವೇಶಿಸಿದ್ದು, ಮಕರ ಸಂಕ್ರಮಣಕ್ಕೆ 14 ದಿನಗಳು ಇರುವಾಗಲೇ ಇದೀಗ ಮತ್ತೆ ಭಾರೀ ಚರ್ಚೆಗೀಡಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇರಳದ ಈ ದೇಗುಲಗಳಲ್ಲಿ ಪುರುಷರಿಗಿಲ್ಲ ಪ್ರವೇಶ

    ಕೇರಳದ ಈ ದೇಗುಲಗಳಲ್ಲಿ ಪುರುಷರಿಗಿಲ್ಲ ಪ್ರವೇಶ

    – ದೇಶದ ಒಟ್ಟು ಆರು ಕ್ಷೇತ್ರಗಳಲ್ಲೂ ಪುರುಷರಿಗೆ ನಿರ್ಬಂಧ

    ಕೇರಳದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಕನಕದುರ್ಗ ಮತ್ತು ಬಿಂದು ಎಂಬ ಇಬ್ಬರು ಪ್ರವೇಶಿಸಿದ್ದಾರೆ. ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ದೇವರನಾಡಿನಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಭಾರತದ ಸಂಸ್ಕೃತಿಯಲ್ಲಿ ಕೆಲವು ದೇಗುಲಗಳ ಪ್ರವೇಶಕ್ಕೆ ನಿರ್ಬಂಧವಿದ್ದರೆ ಮತ್ತೆ ಕೆಲ ದೇವಸ್ಥಾನಗಳಿಗೆ ಪ್ರವೇಶ ನಿಷೇಧವಿದೆ.

    ಈಗ ಲಿಂಗಸಮಾನತೆ ಕೇಳುವ ಕಾಲವಾಗಿದ್ದು, ಸುಪ್ರೀಂಕೋರ್ಟ್ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ತೀರ್ಪು ಪ್ರಕಟಿಸಿತ್ತು. ತೀರ್ಪು ಬಂದ ಬಳಿಕ ಅಯ್ಯಪ್ಪ ದೇಗುಲ ಪ್ರವೇಶಿಸಲು ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ, ತೃಪ್ತಿ ದೇಸಾಯಿ ಸೇರಿದಂತೆ ಹಲವರು ಪ್ರಯತ್ನಿಸಿ ವಿಫಲವಾಗಿದ್ದರು. ಕೊನೆಗೆ ಇಂದು ಕನಕದುರ್ಗ ಮತ್ತು ಬಿಂದು ದೇಗುಲ ಪ್ರವೇಶಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಇದೇ ರೀತಿ ದೇಶದ ಕೆಲವು ದೇವಸ್ಥಾನಗಳಲ್ಲಿ ಪುರುಷರ ಅನುಮತಿಯನ್ನು ನಿಷೇಧಿಸಲಾಗಿದೆ. ಅಂತಹ ಎರಡು ದೇವಸ್ಥಾನದ ಕೇರಳದಲ್ಲಿಯೇ ಇದೆ. ಹಾಗಾದ್ರೆ ಆ ದೇವಸ್ಥಾನಗಳ ಮಾಹಿತಿ ಇಲ್ಲಿದೆ.

    1. ಅತ್ತಕುಲ ಭಾಗ್ಯವತಿ ದೇವಾಲಯ:
    ಇದು ಕೇರಳ ರಾಜ್ಯದ ತಿರುವನಂತಪುರ ಜಿಲ್ಲೆಯಲ್ಲಿದೆ. ಈ ದೇವಾಲಯದಲ್ಲಿ ಮಹಿಳೆಯರು ಅರ್ಚಕಿಯರಾಗಿದ್ದು, ಪುರುಷರಿಗೆ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ದೇವಸ್ಥಾನದ ಪೊಂಗಲ್ ಹಬ್ಬದಲ್ಲಿ 30 ಲಕ್ಷಕ್ಕೂ ಹೆಚ್ಚು ಮಹಿಳಾ ಭಕ್ತಾದಿಗಳು ಭಾಗಿಯಾಗಿ ಗಿನ್ನಿಸ್ ದಾಖಲೆಯನ್ನು ಸೇರಿತ್ತು. ಫೆಬ್ರವರಿ ಮತ್ತು ಮಾರ್ಚ್ ತಿಂಗಳದಲ್ಲಿ 10 ದಿನ ಪೊಂಗಲ್ ಆಚರಿಸಲಾಗುತ್ತದೆ.

    2. ಚಕ್ಕುಲತುಕವು ದೇವಾಲಯ:
    ಈ ದೇವಾಲಯ ಕೇರಳದ ಅಲಪುಳಾ ಜಿಲ್ಲೆಯ ನಿರಟ್ಟಪುರಂ ಎಂಬಲ್ಲಿದೆ. ಇಲ್ಲಿ ದುರ್ಗಾ ಮಾತೆಯ ಪ್ರತಿರೂಪ ಭಾಗ್ಯವತಿ ತಾಯಿಗೆ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿನಿತ್ಯ ಮಹಿಳಾ ಅರ್ಚಕಿಯರೇ ಪೂಜೆಯನ್ನು ಸಲ್ಲಿಸುತ್ತಾರೆ. ಇಲ್ಲಿ ಆಚರಿಸುವ ಸಂಪ್ರದಾಯವನ್ನು ನಾರಿ ಪೂಜೆ ಎಂದು ಕರೆಯಲಾಗುತ್ತದೆ. ಡಿಸೆಂಬರ್ ತಿಂಗಳ ಮೊದಲ ಶುಕ್ರವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪೂಜೆಯಲ್ಲಿ ಪಾಲ್ಗೊಳ್ಳುವ ಮಹಿಳಾ ಭಕ್ತಾದಿಗಳು 10 ದಿನ ಉಪವಾಸ ವ್ರತ ಆಚರಿಸಬೇಕಾಗುತ್ತದೆ.

    3. ಸಂತೋಷಿ ಮಾ ದೇವಾಲಯ:
    ದೇಶದ ಹಲವೆಡೆ ಇರುವ ಸಂತೋಷಿ ಮಾ ದೇಗುಲಗಳಿಗೆ ಮಹಿಳೆಯರೇ ಅರ್ಚಕಿಯರು. ಪುರುಷರ ತಾಯಿಗೆ ಪೂಜೆ ಸಲ್ಲಿಸುವಂತಿಲ್ಲ. ಸಂತೋಷಿ ಮಾ ಮಹಿಳಾ ಭಕ್ತಾದಿಗಳನ್ನೇ ಹೊಂದಿದ್ದು, ಕನ್ಯೆಯರು ಮತ್ತು ಅಥವಾ ಮಹಿಳೆಯರು ಕಟ್ಟುನಿಟ್ಟಿನ ಸಂತೋಷಿ ಮಾ ವ್ರತ ಆಚರಣೆ ಮಾಡುತ್ತಾರೆ. ಇದನ್ನೂ ಓದಿ: ದೇಶದ ಐದು ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ

    4. ಬ್ರಹ್ಮ ದೇವಾಲಯ:
    ರಾಜಸ್ಥಾನದ ಪುಷ್ಕರದಲ್ಲಿರುವ ಬ್ರಹ್ಮ ದೇವಾಲಯಕ್ಕೆ ವಿವಾಹಿತ ಪುರುಷರಿಗೆ ಪ್ರವೇಶವಿಲ್ಲ. ಇಲ್ಲಿ ಬ್ರಹ್ಮದೇವನನ್ನು ಪೂಜಿಸಲಾಗುತ್ತದೆ. ಕಾರ್ತಿಕ ಪೌರ್ಣಿಮ ದಿನ ಬ್ರಹ್ಮದೇವನಿಗೆ ವಿಶೇಷ ಪೂಜೆ-ಪುನಸ್ಕಾರಗಳನ್ನು ಸಲ್ಲಿಸಲಾಗುತ್ತದೆ.

    5. ಭಾಗತಿ ಮಾ ದೇವಾಲಯ:
    ಭಾಗತಿ ಮಾ ದೇವಾಲಯ ತಮಿಳುನಾಡಿನ ಕನ್ಯಾಕುಮಾರಿಯಲ್ಲಿದೆ. ಪಾರ್ವತಿ ದೇವಿ ಸಮುದ್ರದ ಮಧ್ಯೆ ಏಕಾಂಗಿಯಾಗಿ ಕುಳಿತು ಶಿವದೇವನೇ ನನ್ನ ಪತಿಯಾಗಬೇಕೆಂದು ಪಾರ್ವತಿ ದೇವಿ ಕಠಿಣ ತಪಸ್ಸು ಮಾಡಿದ್ದಳಂತೆ. ಹಾಗಾಗಿ ಭಾಗತಿ ದೇಗುಲಕ್ಕೆ ಮಹಿಳೆಯರಿಗೆ ಮಾತ್ರ ಪ್ರವೇಶವಿದೆ. ಇದನ್ನು ಕನ್ಯಾಕುಮಾರಿ ದೇಗುಲ ಅಂತಾನೂ ಕರೆಯಲಾಗುತ್ತದೆ. ಕನ್ಯಾ ಮಾ ಭಗವತಿ ದುರ್ಗಾ ತಾಯಿಗೆ ಮಹಿಳೆಯರೇ ಅರ್ಚಕಿಯರಾಗಿ ಪೂಜೆ ಸಲ್ಲಿಸುತ್ತಾರೆ.

    6. ಮಾತಾ ದೇಗುಲ:
    ಬಿಹಾರದ ಮುಜಫರ್ ನಗರದಲ್ಲಿ ಮಾತಾ ದೇವಸ್ಥಾನವಿದೆ. ಇಲ್ಲಿ ದೇಗುಲದ ಆವರಣದಲ್ಲಿಯೂ ಪುರುಷರು ಪ್ರವೇಶಿಸಬಾರದೆಂಬ ಕಠಿಣ ನಿಯಮವಿದೆ.

    ಒಟ್ಟಿನಲ್ಲಿ ದೇಶದಲ್ಲಿ ಹೇಗೆ ಮಹಿಳೆಯರಿಗೆ ಕೆಲವು ದೇಗುಲಗಳಿಗೆ ಪ್ರವೇಶವಿಲ್ಲ. ಅಂತೆಯೇ ಕೆಲವು ಕಡೆ ಪುರುಷರಿಗೂ ಪ್ರವೇಶವಿಲ್ಲ. ಇಂದು ಶಬರಿಮಲೆ ದೇಗುಲವನ್ನು ಪ್ರವೇಶಿಸುವ ಮೂಲಕ 800 ವರ್ಷಗಳ ಇತಿಹಾಸಕ್ಕೆ ಇಬ್ಬರು ಬ್ರೇಕ್ ಕೊಟ್ಟಿದ್ದಾರೆ.

    ಎಲ್ಲದರಲ್ಲೂ ಸಮಾನತೆಯನ್ನು ಕಾಣುವ ಕಾಲ ಇದಾಗಿದ್ದು, ಪ್ರವೇಶ ಮಾಡಬೇಕೇ ಅಥವಾ ಮಾಡಬಾರದೇ ಎನ್ನುವುದು ಜನರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ದೇವಸ್ಥಾನದ ಪ್ರವೇಶ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • #BlackDayforHindus – ಕೇರಳ ಸರ್ಕಾರದ ವಿರುದ್ಧ ಬಿಎಲ್ ಸಂತೋಷ್ ಕಿಡಿ

    #BlackDayforHindus – ಕೇರಳ ಸರ್ಕಾರದ ವಿರುದ್ಧ ಬಿಎಲ್ ಸಂತೋಷ್ ಕಿಡಿ

    ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿರುವ ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಇದೇ ವೇಳೆ ದೇವಾಲಯದ ಪ್ರವೇಶಿಸಿದ ಮಹಿಳೆಯರ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕಿಡಿಕಾರಿದ್ದಾರೆ.

    ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಸಂತೋಷ್ ಅವರು, ದೇವಾಲಯ ಪ್ರವೇಶಿಸಿರುವ ಮಹಿಳೆಯರು, ನಿಜವಾದ ಅಯ್ಯಪ್ಪ ಭಕ್ತರಲ್ಲ. ಹಿಂದೂ ಪರಂಪರೆ ಹಾಗೂ ಧರ್ಮ ಒಪ್ಪುವವರು ಅಲ್ಲ. ಅಲ್ಲದೇ ಮಹಿಳೆಯರ ಪರ ಪ್ರಾಮಾಣಿಕವಾಗಿ ವಾದವನ್ನು ಮಂಡಿಸುವವರು ಅಲ್ಲ ಎಂದು ತಿಳಿಸಿದ್ದಾರೆ.

    ದೇವಾಲಯ ಪ್ರವೇಶ ಮಾಡಿರುವ ಮಹಿಳೆಯರು ಮಾವೋವಾದಿಗಳಾಗಿದ್ದು, ಭಾರತದ ವೈವಿಧ್ಯತೆಯ ವಿರೋಧಿಗಳು ಹಾಗೂ ಧರ್ಮವನ್ನು ಅಫೀಮು ಎನ್ನುವವರಾಗಿದ್ದಾರೆ. ಅಲ್ಲದೇ ಭಾರತವನ್ನು ಒಡೆಯುವವರು ಮತ್ತು ಸರ್ವಾಧಿಕಾರಿ ಪ್ರಿಯರು ಎಂದು ಪ್ರಶ್ನೋತ್ತರ ಮಾದರಿಯಲ್ಲಿ ಟ್ವೀಟ್ ಮಾಡಿದ್ದಾರೆ.

    ಮತ್ತೊಂದು ಟ್ವೀಟ್ ನಲ್ಲಿ ಶಬರಿಮಲೆ ದೇವಾಲಯದ ಒಳಗೆ ಸಿಪಿಐ(ಎಂ) ಕಾರ್ಯಕರ್ತರು ಪ್ರವೇಶ ಮಾಡಲು ಕೇರಳ ಸರ್ಕಾರ ಬೆಂಬಲ ನೀಡಿದೆ ಎಂದು ಆರೋಪಿಸಿ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಐತಿಹಾಸಿಕ ಎಂಬಂತೆ ಬಿಂಬಿಸಿರುವ ಮಾಧ್ಯಮಗಳ ವಿರುದ್ಧವೂ ಸಂತೋಷ್ ಅವರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನು ಓದಿ: ಕೊನೆಗೂ ಶಬರಿಮಲೆ ದೇವಾಲಯಕ್ಕೆ ಇಬ್ಬರು ಮಹಿಳೆಯರು ಎಂಟ್ರಿ!

    ಅಲ್ಲದೇ ದೇವಾಲಯ ಪ್ರವೇಶ ಮಾಡಿರುವ ಮಹಿಳೆಯರಿಗೆ ಭ್ರದತೆ ನೀಡುವ ದೃಷ್ಟಿಯಿಂದ ಕೇರಳ ಪೊಲೀಸರು ಬೇರೆ ಅವರನ್ನು ಕರೆದ್ಯೊಯುತ್ತಿರುವ ವಿಡಿಯೋ ಟ್ವೀಟ್ ಮಾಡಿ, ಇದು ಮಹಿಳೆಯರಿಗೆ ನೀಡಿರುವ ಹಕ್ಕು ಮತ್ತು ಸಮಾನತೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ದೇವಾಲಯ ಪ್ರವೇಶಿಸಿದ ಮಹಿಳೆಯರು ಸಿಪಿಎಂ ಕಾರ್ಯಕರ್ತೆಯರಾಗಿದ್ದಾರೆ ಎಂದು ಹೇಳಿ #SaveSabarimala, #BlackDayforHindus ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ ಕೇರಳ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನು ಓದಿ:  ಮಹಿಳೆಯರ ಪ್ರವೇಶದಿಂದ ಮುಚ್ಚಲಾಗಿದ್ದ ಶಬರಿಮಲೆ ದೇವಾಲಯ ಮತ್ತೆ ಓಪನ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶದ ಐದು ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ

    ದೇಶದ ಐದು ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ

    ಇಂದು ದೇವರ ನಾಡು ಕೇರಳದ ಶಬರಿಮಲೆಯ ಅಯ್ಯಪ್ಪ ದೇಗುಲವನ್ನು 40ರ ಆಸುಪಾಸಿನ ಇಬ್ಬರು ಮಹಿಳೆಯರು ಪ್ರವೇಶಿಸಿದ್ದಾರೆ. ಮಹಿಳೆಯರು ದೇಗುಲವನ್ನು ಪ್ರವೇಶಿಸಿದ ಕುರಿತು ಕೇರಳ ಸರ್ಕಾರ ಖಚಿತಪಡಿಸಿತ್ತು. ದೇಗುಲದ ಆಡಳಿತ ಮಂಡಳಿ ಸಹ ಸಿಸಿಟಿವಿ ಪರಿಶೀಲನೆ ನಡೆಸಿ ಮಹಿಳೆಯರ ಪ್ರವೇಶವನ್ನು ಖಚಿತಪಡಿಸಿಕೊಂಡು ದೇಗುಲವನ್ನು ಶುದ್ಧೀಕರಣಗೊಳಿಸಿದೆ.

    ಮಹಿಳೆಯ ಪ್ರವೇಶಕ್ಕೆ ಧರ್ಮ ಗುರುಗಳು ಸೇರಿದಂತೆ ಹಲವರು ಅಕ್ರೋಶ ವ್ಯಕ್ತಪಡಿಸಿದ್ರೆ, ಮತ್ತೆ ಕೆಲವರು ಕಾನೂನಾತ್ಮಕವಾಗಿ ದೇವಾಲಯ ಪ್ರವೇಶಿಸುವ ಹಕ್ಕು ನಮಗಿದೆ. ದೇಗುಲ ಪ್ರವೇಶ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂಬ ವಾದವನ್ನು ಮಂಡಿಸುತ್ತಿದ್ದಾರೆ. ತನ್ನದೇ ಸಂಸ್ಕೃತಿ ಮತ್ತು ಇತಿಹಾಸವನ್ನು ಹೊಂದಿರುವ ಭಾರತದಲ್ಲಿ ಐದು ಧಾರ್ಮಿಕ ಕೇಂದ್ರಗಳಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಈ ಐದರಲ್ಲಿ ಅಯ್ಯಪ್ಪ ಸ್ವಾಮಿಯ ದೇಗುಲವನ್ನು ಪ್ರವೇಶ ಮಾಡುವ ಮೂಲಕ 800 ಇತಿಹಾಸಕ್ಕೆ ಬ್ರೇಕ್ ಬಿದ್ದಿದೆ. ಹಾಗಾದಾರೆ ಉಳಿದ ನಾಲ್ಕು ಧಾರ್ಮಿಕ ಕೇಂದ್ರಗಳ ಮಾಹಿತಿ ಇಲ್ಲಿದೆ.

    1. ಹಾಜಿ ಅಲಿ ದರ್ಗಾ, ಮುಂಬೈ:
    ಮುಂಬೈ ಕಡಲ ತೀರದಲ್ಲಿರುವ ಹಾಜಿ ಅಲಿ ದರ್ಗಾದ ಡೇರಾ ಬಳಿಗೆ ಬರಲು ಮಹಿಳೆಯರಿಗೆ ಅನುಮತಿ ಇಲ್ಲ. ಇದು 15ನೇ ಶತಮಾನದ ಸೂಫಿ ಹಾಜಿ ಅಲಿ ಅವರ ಸಮಾಧಿ ಸ್ಥಳವಾಗಿದೆ. ದರ್ಗಾ ಪ್ರವೇಶದಲ್ಲಿ ಮಹಿಳೆಯರಿಗಾಗಿಯೇ ವಿಶೇಷ ದ್ವಾರ ನಿರ್ಮಿಸಲಾಗಿದ್ದು, ಅಲ್ಲಿಂದಲೇ ಡೇರಾವನ್ನು ನೋಡಬಹುದು ಮತ್ತು ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ.

    ಮಹಿಳೆಯರು ಹಾಜಿ ಅಲಿ ದರ್ಗಾ ಪ್ರವೇಶಿಸಬಹುದು ಎಂದು 2016ರಲ್ಲಿ ಬಾಂಬೆ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ದರ್ಗಾಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧ ರದ್ದುಪಡಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಅವಕಾಶ ಕಲ್ಪಿಸಬೇಕೆಂದು ತೀರ್ಪು ನೀಡಿತ್ತು. ಬಾಂಬೆ ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ದರ್ಗಾ ಮಂಡಳಿ ಸುಪ್ರಿಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಇದನ್ನೂ ಓದಿ : ಕೇರಳದ ಈ ದೇಗುಲಗಳಲ್ಲಿ ಪುರುಷರಿಗಿಲ್ಲ ಪ್ರವೇಶ

    ಬಾಂಬೆ ಹೈಕೋರ್ಟ್ ತೀರ್ಪು ಪ್ರಕಟವಾಗುತ್ತಲೇ ಭೂಮಾತಾ ಬ್ರಿಗೇಡ್ ನ ಅಧ್ಯಕ್ಷೆ ತೃಪ್ತಿ ದೇಸಾಯಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ದರ್ಗಾ ಪ್ರವೇಶ ಮಾಡಿದ್ದರು. ಆದ್ರೆ ದರ್ಗಾದ ಸಮಾಧಿ ಸ್ಥಳಕ್ಕೆ ಮಾತ್ರ ಹೋಗಿರಲಿಲ್ಲ. ತೃಪ್ತಿ ದೇಸಾಯಿ ಅಹ್ಮದ್ ನಗರದ ಶನಿ ಶಿಗ್ನಾಪುರ ದೇವಸ್ಥಾನ ಮತ್ತು ನಾಶಿಕ್ ನ ತ್ರ್ಯಂಬಕೇಶ್ವರ ದೇವಾಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ದೊರಕಿಸುವ ಯಶಸ್ವಿ ಆಂದೋಲನ ನಡೆಸಿದ್ದರು. ಹಿಂದೆ ಅಯ್ಯಪ್ಪ ದೇಗುಲ ಪ್ರವೇಶಿಸಿ ವಿಫಲರಾಗಿದ್ದರು.

    2. ಅಯ್ಯಪ್ಪ ದೇಗುಲ, ಶಬರಿಮಲೆ:
    ಬ್ರಹ್ಮಚಾರಿ ದೇವರು ಎಂದು ಕರೆಸಿಕೊಳ್ಳುವ ಅಯ್ಯಪ್ಪ ಸ್ವಾಮಿಯ ಸನ್ನಿಧಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧವಿದೆ. 10 ರಿಂದ 50 ವರ್ಷದ ಒಳಗಿನ ಮಹಿಳೆಯರು ಕೂಡ ಶಬರಿಮಲೆ ದೇಗುಲ ಪ್ರವೇಶ ಮಾಡಬಹುದು ಎಂದು ಸೆಪ್ಟೆಂಬರ್ 28ರಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇದಕ್ಕೆ ಬಲಪಂಥೀಯ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿವೆ. ವಿಶೇಷ ಪೂಜೆ ನಿಮಿತ್ತ ಅಕ್ಟೋಬರ್ ನಲ್ಲಿ ದೇವಾಲಯದ ಬಾಗಿಲು ತೆರೆಯಲಾಗಿತ್ತು. ಈ ವೇಳೆ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಹಾಗೂ ಆಂಧ್ರ ಪ್ರದೇಶದ ಪತ್ರಕರ್ತೆ ಕವಿತಾ ಜಕ್ಕಾಲ್ ಅಯ್ಯಪ್ಪನ ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ ದೇವಸ್ಥಾನ ಸಮೀಸುತ್ತಿದ್ದಂತೆ ಪ್ರತಿಭಟನಾಕಾರರು ಇದಕ್ಕೆ ಅವಕಾಶ ನೀಡಲಿಲ್ಲ. ಜನವರಿ 2ರ ಬೆಳಗಿನ ಜಾವ ಕನಕದುರ್ಗಾ ಮತ್ತು ಬಿಂದು ಎಂಬವರು ದೇಗುಲವನ್ನು ಪ್ರವೇಶಿಸುವ ಮೂಲಕ 800 ವರ್ಷಗಳ ಇತಿಹಾಸವನ್ನು ಮುರಿದಿದ್ದಾರೆ.

    3. ಪತ್‍ಬೌಸಿ ಸತ್ರ, ಅಸ್ಸಾಂ
    ಅಸ್ಸಾಂ ರಾಜ್ಯದ ಬರ್ಪಟೆ ಜಿಲ್ಲೆಯ ಪತ್‍ಬೌಸಿ ಸತ್ರ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧವಿದೆ. ದೇಗುಲದಲ್ಲಿ ಶುದ್ಧತೆಯನ್ನು ಕಾಪಾಡುವುದಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸಲ್ಲ ಎಂಬುವುದು ದೇಗುಲ ಮಂಡಳಿಯ ವಾದ. ಇಲ್ಲಿ ವೈಷ್ಣವ ಗುರುಗಳನ್ನು ಪೂಜಿಸಲಾಗುತ್ತಿದ್ದು, ಶಂಕರದೇವ ಮತ್ತು ಮಂಟಾ ಶಂಕರದೇವ ಎಂಬ ಮಂದಿರಗಳಿವೆ. 2010ರಲ್ಲಿ ಅಂದಿನ ಅಸ್ಸಾಂ ರಾಜ್ಯಪಾಲ ಜೆಬಿ ಪಟ್ನಾಯಕ್ 20 ಮಹಿಳೆಯರೊಂದಿಗೆ ಸತ್ರಾ ಪ್ರವೇಶ ಮಾಡಿದ್ದರು. ಆದ್ರೆ ಇಂದೂ ಸಹ ಸತ್ರದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ.

    4. ಕಾರ್ತಿಕೇಯ ದೇವಾಲಯ, ಹರಿಯಾಣ
    ಹರಿಯಾಣ ರಾಜ್ಯದ ಕುರುಕ್ಷೇತ್ರ ಜಿಲ್ಲೆಯ ಪೆಹುವಾ ನಗರದಲ್ಲಿ ಕಾರ್ತಿಕೇಯ ದೇವಾಲಯವಿದೆ. ಬ್ರಹ್ಮಚಾರಿ ಕಾರ್ತಿಕೇಯ ದೇವರಿಗೆ ಇಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಒಂದು ವೇಳೆ ಮಹಿಳೆಯರು ದೇಗುಲ ಪ್ರವೇಶ ಮಾಡಿದ್ರೆ ಕಾರ್ತಿಕೇಯ ಶಾಪ ನೀಡುತ್ತಾನೆ ಎನ್ನುವ ನಂಬಿಕೆಯಿದೆ. ದೇಗುಲದ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಕಥೆಗಳನ್ನು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾರ್ತಿಕೇಯ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ.

    5. ರಂಕಾಪುರ ದೇವಾಲಯ, ರಾಜಸ್ಥಾನ
    ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳ ಪಟ್ಟಿಯಲ್ಲಿ ರಂಕಾಪುರ ದೇವಾಲಯ ಸಹ ಒಂದು. ಈ ದೇವಾಲಯಕ್ಕೆ ದೇಶ-ವಿದೇಶ ಪ್ರವಾಸಿಗರು ಭೇಟಿ ನೀಡುತ್ತಾರೆ. ವಿಶೇಷ ಕೆತ್ತನೆಯಿಂದ ದೇಗುಲ ನಿರ್ಮಾಣವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಮುಟ್ಟಾದ ಮಹಿಳೆಯರು ದೇವಾಲಯ ಪ್ರವೇಶ ಮಾಡಬಾರದೆಂಬ ನಿಯಮವಿದೆ. ದೇವಾಲಯ ಪ್ರವೇಶಿಸುವ ಮಹಿಳೆಯರು ಪಾಶ್ಚಾತ್ಯ ಬಟ್ಟೆ ಧರಿಸುವಂತಿಲ್ಲ ಹಾಗು ದೇಗುಲದ ಆವರಣದಲ್ಲಿ ಪಾದಗಳು ಮುಚ್ಚಿರಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಮಹಿಳೆಯರಿಗೆ ಪ್ರವೇಶಕ್ಕೆ ಸಂಪೂರ್ಣ ನಿಷೇಧಿಸಲಾಗಿರುತ್ತದೆ.

    ಇನ್ನುಳಿದಂತೆ ಹಲವು ದೇವಾಲಯ, ದರ್ಗಾಗಳಲ್ಲಿ ಗರ್ಭಗುಡಿ ಅಥವಾ ಡೇರಾ ಅಥವಾ ಪೌಳಿ ಬಳಿ ಮಹಿಳೆಯರಿಗೆ ಪ್ರವೇಶವಿಲ್ಲ. ಆಂಧ್ರ ಪ್ರದೇಶದ ವಿಜಯವಾಡ ನಗರದಲ್ಲಿರುವ ಭವಾನಿ ದೀಕ್ಷಾ ಮಂದಪಮ್, ಉತ್ತರ ಪ್ರದೇಶದ ರಿಷಿ ಧ್ರೂಮ್ ಆಶ್ರಮ, ದೇಗುಲ, ಧರ್ಮಸ್ಥಳದ ಅಣ್ಣಪ್ಪ ದೇಗುಲಕ್ಕೆ ಪ್ರವೇಶವಿಲ್ಲ.

    ಮಹಿಳೆಯರಿಗೆ ಧಾರ್ಮಿಕ ಸ್ಥಳಗಳಲ್ಲಿ ಪ್ರವೇಶ ನೀಡಬೇಕೇ ಅಥವಾ ನಿಷೇಧಿಸಬೇಕೇ? ಇಂದು ನಸುಕಿನ ಜಾವ ಬಿಂದು ಮತ್ತು ಕನಕದುರ್ಗ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ಪ್ರವೇಶಿಸಿದ್ದಕ್ಕೆ ನಿಮ್ಮ ಅಭಿಪ್ರಾಯ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇರಳ ಸರ್ಕಾರಕ್ಕೆ ಸಾಹಿತಿ ಚಂಪಾ ಅಭಿನಂದನೆ

    ಕೇರಳ ಸರ್ಕಾರಕ್ಕೆ ಸಾಹಿತಿ ಚಂಪಾ ಅಭಿನಂದನೆ

    ಧಾರವಾಡ: ಇಬ್ಬರು ಮಹಿಳೆಯರಿಗೆ ಭದ್ರತೆ ನೀಡಿ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಲು ಸಹಾಯ ಮಾಡಿದ್ದಕ್ಕೆ ಸಾಹಿತಿ ಚಂದ್ರಶೇಖರ ಪಾಟೀಲ್ ಅವರು ಕೇರಳ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೇರಳ ಸರ್ಕಾರ ನಡೆದುಕೊಂಡಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ಹೀಗಾಗಿ ಕೇರಳ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೆನೆ. ಅಲ್ಲಿನ ಸರ್ಕಾರ ಸೂಕ್ತವಾದ ನಿರ್ಣಯ ತೆಗೆದುಕೊಂಡಿದೆ. ಮಹಿಳೆಯರ ಪ್ರವೇಶಕ್ಕೆ ವಿರೋಧಿಸಿದರೆ ಸುಪ್ರಿಂಗೆ ಅಗೌರವ ಸಲ್ಲಿಸಿದಂತಾಗುತ್ತದೆ. ನಾವು ಇಡೀ ಕೇರಳ ಜನತೆಗೆ ಅಭಿನಂದನೆ ಸಲ್ಲಿಸಬೇಕು. ಒಬ್ಬರಿಗೆ ಎಂಟ್ರಿ ಸಿಕ್ಕರೆ ಸಾಕು ಮೂಢನಂಬಿಕೆ, ಕೋಮುವಾದ ಆಧುನಿಕ ಮೌಲ್ಯಗಳಲ್ಲ ಅಂತ ಅವರು ಹೇಳಿದ್ರು.

    ಇದೇ ವೇಳೆ ಪ್ರೋ. ಭಗವಾನ್ ಪುಸ್ತಕದಲ್ಲಿ ಶ್ರೀರಾಮನಿಗೆ ಅವಮಾನ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದ ಮುಖ್ಯ ಗುಣ ಪ್ರತಿರೋಧವಾಗಿದೆ. ಪ್ರಜಾಪ್ರಭುತ್ವದಲ್ಲಿ ವೈಚಾರಿಕ ವಿರೋಧಗಳಿರಬೇಕು. ರಾಮಮಂದಿರ ಏಕೆ ಬೇಡ? ಹಳೆಯ ಪುಸ್ತಕವಾಗಿದೆ. ಇದೀಗ ಅದರ ಎರಡನೇ ಮುದ್ರಣ ಹೊರ ಬರುತ್ತಿದೆ. ಈಗ ಅದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ‘ಬೇಡ’ ಅನ್ನೋ ಪುಸ್ತಕ ಬರೆಯಲಾಗಿದೆ. ಅದನ್ನು ಎದುರಿಸಲು ‘ಏಕೆ ಬೇಕು?’ ಅನ್ನೋದನ್ನು ಬರೆಯಬೇಕು ಅಂದ್ರು. ಇದನ್ನೂ ಓದಿ: ಕಾನೂನಾತ್ಮಕವಾಗಿ ಮಾನ್ಯತೆ ಸಿಕ್ಕಿದ್ದು, ಹಿಂದೂಗಳು ಹಿಂದೂ ದೇವಸ್ಥಾನಕ್ಕೆ ಹೋಗೋದ್ರಲ್ಲಿ ತಪ್ಪೇನಿದೆ- ಜಯಮಾಲಾ ಪ್ರಶ್ನೆ

    ‘ಏಕೆ ಬೇಕು?’ ಅನ್ನೋ ಪುಸ್ತಕ ಬರೆದು ಎದುರಿಸಲಿ. ಆಗ ಅದು ಪ್ರಜಾಪ್ರಭುತ್ವದ ಗುಣವೆನ್ನಿಸಿಕೊಳ್ಳುತ್ತದೆ. ನಾನು ಮೂಲತಃ ನಾಸ್ತಿಕ. ಹೀಗಾಗಿ ದೇವರು, ಪುರಾಣಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಮಂದಿರ ನಿರ್ಮಾಣದ ವಿಚಾರ ನನ್ನ ವ್ಯಾಪ್ತಿಯಲ್ಲಿ ಬರೋದಿಲ್ಲ. ವಾಲ್ಮೀಕಿ ಮುಂಚೆಯೂ ರಾಮಾಯಣದ ಕಥೆ ಇದೆ ಅಂತಾರೆ. ನನ್ನ ಪಾಲಿಗೆ ಅದೊಂದು ಮಹಾಕಾವ್ಯವಾಗಿದೆ. ವಾಲ್ಮೀಕಿ ರಾಮಾಯಣ ಸಂಸ್ಕೃತ ಮೂಲದ್ದಾಗಿದೆ. ಆದರೆ ಸಂಸ್ಕೃತ ನನಗೆ ಬರೋದಿಲ್ಲ. ಹೀಗಾಗಿ ನಾನು ವಾಲ್ಮೀಕಿ ರಾಮಾಯಣ ಓದಿಲ್ಲ. ನಾನು ಕುವೆಂಪು ರಾಮಾಯಣ ಓದಿದ್ದೇನೆ. ನಮ್ಮಲ್ಲಿ ಒಟ್ಟು 300 ರಾಮಾಯಣಗಳಿವೆ. ರಾಮ ದೇವರೋ, ಇತಿಹಾಸ ಪುರುಷನೋ ಅನ್ನೋದನ್ನು ಸಂಶೋಧಕರಿಗೆ ಬಿಡಬೇಕು. ಹೀಗಾಗಿ ಈ ವಿಚಾರ ನನ್ನ ವ್ಯಾಪ್ತಿಗೆ ಬರೋದಿಲ್ಲ ಅಂತ ಅವರು ತಿಳಿಸಿದ್ರು.

    ರಾಮಮಂದಿರ ನಿರ್ಮಾಣ ವಿಚಾರದ ಕುರಿತು ಮಾತನಾಡಿದ ಸಾಹಿತಿ, ಮೋದಿಯವರು ಕೋರ್ಟ್ ಆದೇಶ ಬಂದ ಮೇಲೆ ನೋಡೋಣ ಅಂದಿದ್ದಾರೆ. ಹೀಗಾಗಿ ಪ್ರಧಾನಿ ಹೇಳಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ ಅಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾನೂನಾತ್ಮಕವಾಗಿ ಮಾನ್ಯತೆ ಸಿಕ್ಕಿದ್ದು, ಹಿಂದೂಗಳು ಹಿಂದೂ ದೇವಸ್ಥಾನಕ್ಕೆ ಹೋಗೋದ್ರಲ್ಲಿ ತಪ್ಪೇನಿದೆ- ಜಯಮಾಲಾ ಪ್ರಶ್ನೆ

    ಕಾನೂನಾತ್ಮಕವಾಗಿ ಮಾನ್ಯತೆ ಸಿಕ್ಕಿದ್ದು, ಹಿಂದೂಗಳು ಹಿಂದೂ ದೇವಸ್ಥಾನಕ್ಕೆ ಹೋಗೋದ್ರಲ್ಲಿ ತಪ್ಪೇನಿದೆ- ಜಯಮಾಲಾ ಪ್ರಶ್ನೆ

    ಬೆಂಗಳೂರು: 50 ವರ್ಷ ಮೀರದ ಇಬ್ಬರು ಮಹಿಳೆಯರು ಶಬರಿಮಲೆ ದೇವಾಲಯವನ್ನು ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದು, ಇದೀಗ ಭಾರೀ ಚರ್ಚೆಯಾಗುತ್ತಿದೆ. ಈ ವಿಚಾರದ ಬಗ್ಗೆ ಸಚಿವೆ ಜಯಮಾಲಾ ಪ್ರತಿಕ್ರಿಯಿಸಿ, ಕಾನೂನಿನಲ್ಲಿ ಅವರಿಗೆ ಅವಕಾಶ ಸಿಕ್ಕಿದೆ. ದೇವರನ್ನು ನೋಡಲು ಪುಣ್ಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಂವಿಧಾನಾತ್ಮಕವಾಗಿ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಮಾನ್ಯತೆ ಸಿಕ್ಕಿದೆ. ಹೀಗಾಗಿ ಹೆಣ್ಣು ಮಕ್ಕಳಿಗೆ ದೇವರನ್ನು ನೋಡುವ ಯೋಗ ಸಿಕ್ಕಿದ್ದರಿಂದ ಹೋಗಿದ್ದಾರೆ ಅಂತ ಹೇಳಿದ್ರು. ಇದನ್ನೂ ಓದಿ: ಇಬ್ಬರು ಮಹಿಳೆಯರ ಪ್ರವೇಶ: ಶಬರಿಮಲೆ ಅಯ್ಯಪ್ಪ ದೇವಾಲಯ ಬಂದ್

    ಬಹುಸಂಖ್ಯಾತ ಭಕ್ತರ ಮನಸ್ಸಿಗೆ ನೋವುಂಟು ಮಾಡಿ ದೇಗುಲ ಪ್ರವೇಶಿಸಿದ್ದು ಎಷ್ಟು ಸರಿ ಎನ್ನುವ ಸಾರ್ವಜನಿಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ, ಇದು ಭಕ್ತಿ ಮತ್ತು ದೇವರ ವಿಚಾರವಾಗಿದೆ. ಬಲತ್ಕಾರವಾಗಿ ಯಾವುದೋ ಬೇರೆ ಜನಾಂಗದವರು ಬಂದಿದ್ದಲ್ಲ. ಹಿಂದೂಗಳು ಹಿಂದೂ ದೇವಸ್ಥಾನಕ್ಕೆ ಹೋಗೋದರಲ್ಲಿ ತಪ್ಪೇನಿದೆ? ದೇವರನ್ನು ನೋಡಬೇಕು ಎಂಬ ಆಸೆಯಿಂದ ಹೋಗಿದ್ದಾರೆ. ದೇವರು ಕೂಡ ಅವರಿಗೆ ಕೃಪೆ ಕೊಟ್ಟಿದ್ದಾನೆ. ಒಟ್ಟಿನಲ್ಲಿ ಕಾನೂನಾತ್ಮಕವಾಗಿ ಮಾನ್ಯತೆ ಸಿಕ್ಕಿದೆ. ಹೀಗಾಗಿ ಹೋಗಿದ್ದಾರೆ ಅಷ್ಟೇ. ಅವರು ಪುಣ್ಯ ಮಾಡಿದ್ದಾರೆ. ನಾನು ಯಾವತ್ತೂ ದೇವರನ್ನು ಅಷ್ಟಕ್ಕೆ ಯೋಚನೆ ಮಾಡುತ್ತೇನೆ ಅಂದ್ರು. ಇದನ್ನೂ ಓದಿ: ಕೊನೆಗೂ ಶಬರಿಮಲೆ ದೇವಾಲಯಕ್ಕೆ ಇಬ್ಬರು ಮಹಿಳೆಯರು ಎಂಟ್ರಿ!

    ಈ ಜಗತ್ತಿನಲ್ಲಿ ಎಲ್ಲಾ ಅನಿಷ್ಠ ಪದ್ಧತಿಗಳಿಂದ ಹಿಡಿದು ಮನುಷ್ಯನ ಭಾವನೆಗಳನ್ನು ಎಲ್ಲವನ್ನೂ ಕೂಡ ಕಾನೂನಾತ್ಮಕವಾಗಿಯೇ ನಾವು ಬದಲಾಯಿಸಿದ್ದೇವೆ. ಕೆಲವೊಂದಕ್ಕೆ ಕಾನೂನು ಇಲ್ಲ ಅಂತಂದ್ರೆ ಈ ಪ್ರಪಂಚದಲ್ಲಿ ನಮ್ಮಲ್ಲಿ ಎಷ್ಟೊಂದು ಕಾನೂನುಗಳು ರೂಪುಗೊಳ್ಳುತ್ತನೇ ಇರಲಿಲ್ಲ. ಕಾನೂನಿಂದ ಹಲವಾರು ಬದಲಾವಣೆಗಳು ಆಗೋದಕ್ಕೆ ಸಾಧ್ಯತೆಗಳಿವೆ ಅಂತ ಹೇಳಿದ್ರು. ಇದನ್ನೂ ಓದಿ: ಶಬರಿಮಲೆ ವಿಚಾರವನ್ನು ದೇವರೇ ನೋಡಿಕೊಳ್ಳಲಿ: ಜಯಮಾಲಾ

    ಬಲತ್ಕಾರವಾಗಿ ತಪ್ಪು ಕೆಲಸ ಮಾಡಿದ್ರೆ ಯಾರೂ ಒಪ್ಪಲ್ಲ. ಆದ್ರೆ ಇಲ್ಲಿ ಅವರು ಕಾನೂನಿನಲ್ಲಿ ಅವಕಾಶ ಸಿಕ್ಕಿದ್ದರಿಂದ ಹೋಗಿದ್ದಾರೆ. ಇದು ಬಹಳ ಸೂಕ್ಷ್ಮವಾದ ವಿಚಾರವಾಗಿದೆ. ದೇವರನ್ನು ನೋಡಿದ ಬಳಿಕ ಏನಾದ್ರೂ ಬದಲಾವಣೆ ಆಯಿತೇ ಅಥವಾ ದೇವರಿಗೆ ತೊಂದರೆ ಏನಾದ್ರೂ ಆಗಿದ್ಯಾ ಅಂತ ಅವರು ಇದೇ ವೇಳೆ ಪ್ರಶ್ನಿಸಿದ್ರು.

  • ಸುಪ್ರೀಂ ತೀರ್ಪಿನ ಬಳಿಕ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ನಿರ್ಧಾರ: ಮೋದಿ

    ಸುಪ್ರೀಂ ತೀರ್ಪಿನ ಬಳಿಕ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ನಿರ್ಧಾರ: ಮೋದಿ

    – ಕಾಂಗ್ರೆಸ್ ಚಿಂತನೆಯೇ ಒಂದು, ಸಂಸ್ಕೃತಿಯೇ ಒಂದು
    – ವರ್ಷದ ಮೊದಲ ದಿನವೇ ಮಾಧ್ಯಮಕ್ಕೆ ಸಂದರ್ಶನ
    – ಸಾಲಮನ್ನಾ ರಾಜಕೀಯ ನಾಟಕ
    – ಉರ್ಜಿತ್ ಪಟೇಲ್ 7-8 ತಿಂಗಳ ಮೊದಲೇ ರಾಜೀನಾಮೆ ನೀಡಿದ್ರು

    ನವದೆಹಲಿ: ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ, ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಟೀಕೆಗೆ ಗುರಿಯಾಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಹೊಸ ವರ್ಷದ ಮೊದಲ ದಿನವೇ ಸಂದರ್ಶನ ನೀಡಿ ಸುದ್ದಿಯಾಗಿದ್ದಾರೆ. ತಮ್ಮ ಸಂದರ್ಶನಲ್ಲಿ ಕಾಂಗ್ರೆಸ್ ಸೇರಿದಂತೆ ಮಿತ್ರಪಕ್ಷಗಳ ಧೋರಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹೊಸ ವರ್ಷದಂದೆ ಎಎನ್‍ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡುವ ಮೂಲಕ ಲೋಕಸಭಾ ಚುನಾವಣೆಗೆ ವೇದಿಕೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ.

    95 ನಿಮಿಷದ ಸಂದರ್ಶನದಲ್ಲಿ ಮೋದಿ ಹೇಳಿದ ಪ್ರಮುಖ ವಿಚಾರಗಳು ಇಲ್ಲಿದೆ

    1. ಕಾಂಗ್ರೆಸ್ ವಿರುದ್ಧ ಟೀಕೆ:
    ದೇಶದ ಮೊದಲ ಕುಟುಂಬ ಎಂದು ಕರೆದುಕೊಂಡಿದ್ದ ಕುಟುಂಬ ಸದಸ್ಯರು ಇಂದು ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ಮೇಲೆ ಆರ್ಥಿಕ ಅಪರಾಧದ ಪ್ರಕರಣಗಳು ದಾಖಲಾಗಿದೆ. ಆದರೆ ಅವರಿಗೆ ಬೆಂಬಲವಾಗಿರುವ ಕೆಲವರು ಅದನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಸಂಸ್ಕೃತಿಯನ್ನು ತೊಲಗಿಸುವುದು ನಮ್ಮ ಗುರಿಯಾಗಿದ್ದು, ಇದಕ್ಕಾಗಿಯೇ ಕಾರ್ಯನಿರ್ವಸುತ್ತಿದ್ದೇವೆ. ದೇಶದಲ್ಲಿ ಕಾಂಗ್ರೆಸ್ ಸಂಸ್ಕೃತಿ ಇಲ್ಲವಾಗಿಸುವುದೇ ನಮ್ಮ ಉದ್ದೇಶ. ಕಾಂಗ್ರೆಸ್ ಚಿಂತನೆಯೇ ಒಂದು, ಸಂಸ್ಕೃತಿಯೇ ಒಂದು ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಕ್ತ ಭಾರತ ಎಂಬುವುದಕ್ಕೆ ಹೊಸ ಅರ್ಥ ನೀಡಿದರು.

    2. ಅಯೋಧ್ಯೆ ರಾಮಮಂದಿರ:
    ಸುಪ್ರೀಂ ಕೋರ್ಟ್ ಅಯೋಧ್ಯೆ ಕುರಿತು ತೀರ್ಪು ನೀಡಿದ ಬಳಿಕ ಸರ್ಕಾರ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ನ್ಯಾಯಾಲಯದಲ್ಲಿ ರಾಮಮಂದಿರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವಿಳಂಬವಾಗಲು ಕಾಂಗ್ರೆಸ್ ವಕೀಲರು ಕಾರಣ. ರಾಮಮಂದಿರ ಬಿಜೆಪಿ ಭಾವಾತ್ಮಕ ವಿಚಾರವಾಗಿದ್ದು ಅದನ್ನು ನಾವು ನಿರ್ಲಕ್ಷ್ಯ ವಹಿಸಿಲ್ಲ. ರಾಮಮಂದಿರವನ್ನು ಸಂವಿಧಾನದ ವ್ಯಾಪ್ತಿಯಲ್ಲಿ ಇತ್ಯರ್ಥ ಪಡಿಸುವುದಾಗಿ ಬಿಜೆಪಿ ಪ್ರಾಣಾಳಿಕೆಯಲ್ಲಿ ತಿಳಿಸಿದೆ. ಹೀಗಾಗಿ ನಾವು ನ್ಯಾಯಾಂಗದಲ್ಲಿ ನಂಬಿಕೆ ಇಟ್ಟಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರವಷ್ಟೇ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆಯನ್ನು ಹೊರಡಿಸುವ ನಿರ್ಧಾರವನ್ನು ಕೈಗೊಳ್ಳಲಾಗುವುದು.

    3. ಪಂಚರಾಜ್ಯಗಳ ಚುನಾವಣೆ:
    ಪಂಚರಾಜ್ಯ ಚುನಾವಣೆಗಳು ಇಬ್ಬರ ಮೇಲೆ ಮಾತ್ರ ನಡೆದಿಲ್ಲ. ಬಿಜೆಪಿ ವಿಶ್ವದ ಅತೀ ದೊಡ್ಡ ಪಕ್ಷವಾಗಿದ್ದು, ಕಾರ್ಯಕರ್ತರ ಪಕ್ಷವಾಗಿದೆ. ಛತ್ತೀಸ್‍ಗಢದಲ್ಲಿ ಆಡಳಿತ ವಿರೋಧ ಅಲೆ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. 15 ವರ್ಷಗಳ ಆಡಳಿತ ವಿರೋಧಿ ಅಲೆಯೇ ನಮ್ಮ ಸೋಲಿಗೆ ಕಾರಣವಾಗಿದೆ. ಆದ್ದರಿಂದ ನಾವು ಆಡಳಿತ ವಿರೋಧಿ ಅಲೆ ವಿರುದ್ಧ ಹೋರಾಟ ನಡೆಸಿದ್ದೇವೆ. ಇನ್ನುಳಿದ ಎರಡು ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಆಗಿದೆ. 2019 ಲೋಕಸಭಾ ಚುನಾವಣೆ ಜನತಾ ಹಾಗೂ ಮಹಾಘಟಬಂಧನ್ ನಡುವೆ ನಡೆಯುತ್ತದೆ.

    4. ಸಾಲಮನ್ನಾ ರಾಜಕೀಯ ನಾಟಕ:
    ಸಾಲಮನ್ನಾ ರಾಜಕೀಯ ನಾಟಕವಾಗಿದ್ದು, ರೈತರು ಹೆಚ್ಚು ಖಾಸಗಿ ಸಾಲ ಪಡೆಯುತ್ತಾರೆ. ಕಾಂಗ್ರೆಸ್ ಪಕ್ಷ ಎಲ್ಲಾ ರೈತರ ಸಾಲಮನ್ನಾ ಮಾಡಿಲ್ಲ. ಕೇವಲ ಸುಳ್ಳನ್ನೇ ಪ್ರಚಾರ ಮಾಡುತ್ತಿದ್ದಾರೆ. ರೈತರಿಗೆ ನೀರು, ಉತ್ತಮ ಮಾರುಕಟ್ಟೆ, ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುವಂತೆ ಮಾಡಿ ಸಮಗ್ರ ಅಭಿವೃದ್ಧಿ ಆಗುವಂತೆ ಮಾಡುವತ್ತ ನಮ್ಮ ಕಾರ್ಯ ಮುಂದುವರಿದಿದೆ. ದೇಶದ ಸಂಚಾರ ವ್ಯವಸ್ಥೆಯಲ್ಲಿ ಹೊಸ ನಾಂದಿ ಹಾಡಿದ್ದೇವೆ. ಇದರಿಂದ ಉತ್ಪನ್ನಗಳ ಲಭ್ಯತೆಯ ವೇಗ ಹೆಚ್ಚಾಗುತ್ತದೆ. ರೈತರು ಸಾಲವೇ ಪಡೆಯದಂತೆ ಮಾಡುವುದು ನಮ್ಮ ಕಾರ್ಯದ ಉದ್ದೇಶ ಎಂದರು.

    5. ಆರ್ಥಿಕ ಅಪರಾಧಿಗಳು ಭಾರತಕ್ಕೆ ವಾಪಸ್:
    ದೇಶ ಬಿಟ್ಟು ತೆರಳಿದ ಎಲ್ಲಾ ಆರ್ಥಿಕ ಅಪರಾಧಿಗಳನ್ನು ವಾಪಸ್ ಕರೆತರಲಾಗುವುದು. ಈ ಸಂಬಂಧ ಕಾನೂನು ಪ್ರಕ್ರಿಯೆ ಮತ್ತು ರಾಜತಾಂತ್ರಿಕ ಪ್ರಕ್ರಿಯೆಗಳು ನಡೆಯುತ್ತಿದೆ. ಈಗಾಗಲೇ ತನಿಖಾ ಸಂಸ್ಥೆಗಳು ಅಕ್ರಮ ಎಸಗಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ. ಇಂದು ಬಾರದೇ ಇದ್ದರೂ ನಾಳೆ ಎಲ್ಲ ಆರ್ಥಿಕ ಅಪರಾಧಿಗಳನ್ನು ಕರೆತರಲಾಗುವುದು.

    ಭ್ರಷ್ಟಚಾರದ ವಿರುದ್ಧ ಬಿಜೆಪಿಯ ಹೋರಾಟ ಮುಂದುವರೆಯುತ್ತದೆ. ಜಿಎಸ್‍ಟಿ ತೆರಿಗೆ ವ್ಯವಸ್ಥೆಯನ್ನು ಸರಳಿಕೃತಗೊಳಿಸಿದೆ. ತೆರಿಗೆ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸಿದೆ. ದೇಶದ ಮಧ್ಯಮ ವರ್ಗದ ಆಕಾಂಕ್ಷೆಗಳಿಗೆ ನಾವು ಈ ಮೂಲಕ ರೆಕ್ಕೆಗಳನ್ನು ನೀಡಿದ್ದೇವೆ. ಸರ್ಕಾರದ ಹೆಚ್ಚಿನ ಯೋಜನೆಗಳು ಮಧ್ಯಮ ವರ್ಗದ ಜನಕ್ಕೆ ಹೆಚ್ಚು ಲಾಭ ನೀಡಿದೆ.

    6. ತ್ರಿವಳಿ ತಲಾಖ್:
    ಹಲವು ಮುಸ್ಲಿಮ್ ರಾಷ್ಟ್ರಗಳು ತ್ರಿವಳಿ ತಲಾಖ್ ನಿಷೇಧಿಸಿವೆ. ಪಾಕಿಸ್ತಾನದಲ್ಲೂ ತಲಾಖ್ ನಿಷೇಧಗೊಂಡಿದೆ. ಇಲ್ಲಿ ಪ್ರಮುಖವಾಗಿ ಇರುವಂತಹದ್ದು ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯ. ಇದರಲ್ಲಿ ಧಾರ್ಮಿಕ ನಂಬಿಕೆ ವಿಚಾರ ಬರುವುದಿಲ್ಲ. ಹೀಗಾಗಿ ಈ ವಿಚಾರವನ್ನು ಪ್ರತ್ಯೇಕವಾಗಿ ನೋಡಬೇಕು.

    7. ಶಬರಿಮಲೆ ವಿವಾದ:
    ಕೆಲವೊಂದು ದೇವಾಲಯಗಳು ತನ್ನದೇ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ. ಕೆಲವು ದೇವಾಲಯಗಳಲ್ಲಿ ಪುರುಷರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಶಬರಿಮಲೆ ಪ್ರಕರಣ ಬಂದಾಗ ಮಹಿಳಾ ನ್ಯಾಯಾಧೀಶರು ಕೆಲವು ಅಭಿಪ್ರಾಯವನ್ನು ವ್ಯಕ್ತಪಡಿಸಿ ಸಲಹೆಯನ್ನು ನೀಡಿದ್ದಾರೆ. ಹೀಗಾಗಿ ಈ ವಿಚಾರ ಚರ್ಚೆಯಾಗಬೇಕು.

    8. ನೋಟು ನಿಷೇಧ:
    2016ರಲ್ಲಿ ನಮ್ಮ ಸರ್ಕಾರ ನೀಡಿದ ಶಾಕ್ ಎನ್ನುವ ಆರೋಪವನ್ನು ತಿರಸ್ಕರಿಸಿದ ಅವರು, ಇದು ಪೂರ್ವನಿರ್ಧಾರದಂತೆ ಹೇಳುವ ಜಾತಕವಲ್ಲ. ನಾವು ಎರಡು ವರ್ಷದ ಹಿಂದೆ ಜನರಿಗೆ ಎಚ್ಚರಿಕೆ ನೀಡುತ್ತಾ ಬಂದಿದ್ದೇವೆ. ಕಪ್ಪು ಹಣ ಇರುವ ಮಂದಿಗೆ ದಂಡವನ್ನು ಪಾವತಿಸಿ ಠೇವಣಿ ಇಡುವಂತೆ ಹೇಳಿದ್ದೇವು. ಹೀಗಾಗಿ ಹಲವು ಮಂದಿ ಸ್ವಯಂಪ್ರೇರಿತವಾಗಿ ದಂಡವನ್ನು ಪಾವತಿಸಿದ್ದಾರೆ.

    9. ಉರ್ಜಿತ್ ಪಟೇಲ್ ರಾಜೀನಾಮೆ:
    ಆರ್‌ಬಿಐ ಗವರ್ನರ್ ಅಗಿದ್ದ ಉರ್ಜಿತ್ ಪಟೇಲ್ ತನ್ನ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮೊದಲೇ ಹೇಳಿದ್ದರು. ಮೊದಲ ಬಾರಿಗೆ ಈ ವಿಚಾರವನ್ನು ನಾನು ಈಗ ಹೇಳುತ್ತಿದ್ದು, 7 -8 ತಿಂಗಳ ಹಿಂದೆಯೇ ಅವರು ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಾ ಬಂದಿದ್ದರು. ಅಷ್ಟೇ ಅಲ್ಲದೇ ಬರಹದಲ್ಲೇ ರಾಜೀನಾಮೆಯನ್ನು ನೀಡಿದ್ದರು. ಇದರಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ. ಆರ್‌ಬಿಐ ಗವರ್ನರ್ ಆಗಿ ಉರ್ಜಿತ್ ಪಟೇಲ್ ಉತ್ತಮ ನಿರ್ವಹಣೆ ಮಾಡಿದ್ದಾರೆ.

    10. ಸರ್ಜಿಕಲ್ ಸ್ಟ್ರೈಕ್:
    ಪಾಕಿಸ್ತಾನದ ವಿರುದ್ಧ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಉರಿ ದಾಳಿಗೆ ತಿರುಗೇಟು ನೀಡಲು ನಡೆಸಿದ್ದು, ಈ ವೇಳೆ ಭಾರತೀಯ ಯೋಧರಿಗೆ ಬೆಳಗಾಗುವ ಮುನ್ನ ವಾಪಸ್ ಬನ್ನಿ ಎಂದು ಮಾತ್ರ ತಿಳಿಸಿದ್ದೆ. ಕಾರ್ಯಾಚರಣೆ ಯಶಸ್ವಿಯಾದರೂ, ವಿಫಲವಾದರೂ ದೇಶದ ಸೈನಿಕರಿಗೆ ಆಪಾಯ ಆಗಬಾರದು ಎಂಬುದು ನನ್ನ ಉದ್ದೇಶವಾಗಿತ್ತು. ಅಂದು ನಾನು ಇಡೀ ರಾತ್ರಿ ಪ್ರತಿ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದೆ. ಬೆಳಗಾಗಿ 1 ಗಂಟೆಯಾದ ಬಳಿಕ ಸೈನ್ಯದಿಂದ ಸಂದೇಶ ಬಂತು. ಆ ವೇಳೆಗೆ ಎಲ್ಲಾ ಸೈನಿಕರು ಕ್ಯಾಪ್ ಸೇರಿದ್ದರು. ಬಳಿಕವೇ ನನಗೆ ಸಮಾಧಾನ ಆಗಿತ್ತು. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ದೇಶದ ಜನತೆಗೆ ತಿಳಿಸುವ ಮೊದಲೇ ಪಾಕಿಸ್ತಾನಕ್ಕೆ ತಿಳಿಸಿದ್ದೇವು. ಆದರೆ ಈ ಬಗ್ಗೆ ದೇಶದ ಕೆಲ ಜನ ಸಂದೇಹ ವ್ಯಕ್ತಪಡಿಸಿದ್ದು ದುರಾದೃಷ್ಟಕರ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv