Tag: Sabarimala

  • ರಾಮಮಂದಿರವಷ್ಟೇ ಅಲ್ಲ ಎಲ್ಲಾ ಮಂದಿರಗಳು ರಾಷ್ಟ್ರ ಮಂದಿರಗಳು: ಪೇಜಾವರ ಶ್ರೀಗಳು

    ರಾಮಮಂದಿರವಷ್ಟೇ ಅಲ್ಲ ಎಲ್ಲಾ ಮಂದಿರಗಳು ರಾಷ್ಟ್ರ ಮಂದಿರಗಳು: ಪೇಜಾವರ ಶ್ರೀಗಳು

    ರಾಯಚೂರು: ಮಂದಿರಗಳು ಒಂದೇ ಧರ್ಮ ಹಾಗೂ ಸಮಾಜಕ್ಕೆ ಸೀಮಿತವಾಗಿರುವುದಿಲ್ಲ. ಹೀಗಾಗಿ ರಾಮ ಮಂದಿರವಷ್ಟೇ ಅಲ್ಲ ಎಲ್ಲಾ ಮಂದಿರಗಳು ಕೂಡ ರಾಷ್ಟ್ರ ಮಂದಿರಗಳು ಎಂದು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ಮಂದಿರಗಳಿಗೆ ಎಲ್ಲಾ ಧರ್ಮಿಯರು ಪ್ರವೇಶಿಸಬೇಕು. ಮಂದಿರಗಳು ಒಂದೇ ಧರ್ಮ ಹಾಗೂ ಸಮಾಜಕ್ಕೆ ಸೀಮಿತವಾಗಿರುವುದಿಲ್ಲ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ರಾಷ್ಟ್ರದಲ್ಲಿ ಸಾಮರಸ್ಯಕ್ಕೆ ನಾಂದಿಯಾಗಿದೆ. ಮಸೀದಿ ಕಟ್ಟಲು ನೀಡಿರುವ ಜಾಗದ ಬಗ್ಗೆ ಒಂದಿಬ್ಬರು ವಿರೋಧಿಸಿರಬಹುದು. ಆದರೆ ಬಹುತೇಕ ಮಂದಿ ಅಯೋಧ್ಯೆ ತೀರ್ಪನ್ನು ಒಪ್ಪಿದ್ದಾರೆ. ಹೀಗಾಗಿ ಕೇವಲ ರಾಮ ಮಂದಿರವಷ್ಟೇ ಅಲ್ಲ ಎಲ್ಲಾ ಮಂದಿರಗಳೂ ರಾಷ್ಟ್ರ ಮಂದಿರಗಳೆಂದು ಹೇಳಿದರು.

    ಕೇಂದ್ರ ಸರ್ಕಾರ ಮೂರು ತಿಂಗಳಳೊಗಾಗಿ ಟ್ರಸ್ಟ್ ಸ್ಥಾಪಿಸಲು ಸೂಚಿಸಿದೆ. ರಾಮಮಂದಿರ ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕು. ಸುಪ್ರೀಂ ಕೋರ್ಟ್ ತೀರ್ಪು ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ನಾಂದಿ ಎಂದು ಹೇಳಿದರು.

    ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ವಿಚಾರವಾಗಿ ಸುಪ್ರೀಂ ಕೋರ್ಟ್ ವಿಸ್ತೃತ ಪೀಠಕ್ಕೆ ಮೇಲ್ಮನವಿ ಅರ್ಜಿ ವರ್ಗಾವಣೆ ಬಗ್ಗೆ ಶ್ರೀಗಳು ಪ್ರತಿಕ್ರಿಯಿಸಿ, ಇದು ಬಹಳ ಸೂಕ್ಷ್ಮವಾದ ವಿಚಾರ, ಒಂದು ಕಡೆ ಸಂಪ್ರದಾಯ ಹಾಗೂ ಮಹಿಳೆಯರ ಹಕ್ಕಿನ ವಿಚಾರ ಇದಾಗಿದೆ. ಇದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ, ಏನೇ ಹೇಳಿದರೂ ಅಸಮಾಧಾನಕ್ಕೆ ಕಾರಣವಾಗುತ್ತದೆ. ತೀರ್ಪಿನ ಬಗ್ಗೆ ಕಾದು ನೋಡೋಣ ಎಂದರು.

  • ಹಿಂದೂಗಳಿಗೆ ಮಾತ್ರ ಸೀಮಿತವಲ್ಲ, ಉಳಿದ ಧರ್ಮಗಳಿಗೂ ಅನ್ವಯ – 7 ಜಡ್ಜ್‌ಗಳ ಪೀಠಕ್ಕೆ ಶಬರಿಮಲೆ ಕೇಸ್

    ಹಿಂದೂಗಳಿಗೆ ಮಾತ್ರ ಸೀಮಿತವಲ್ಲ, ಉಳಿದ ಧರ್ಮಗಳಿಗೂ ಅನ್ವಯ – 7 ಜಡ್ಜ್‌ಗಳ ಪೀಠಕ್ಕೆ ಶಬರಿಮಲೆ ಕೇಸ್

    ನವದೆಹಲಿ: ಶಬರಿಮಲೆಗೆ ಮಹಿಳೆಯರ ಪ್ರವೇಶ ಪ್ರಕರಣದ ವಿಚಾರಣೆ 7 ಮಂದಿ ನ್ಯಾಯಾಧೀಶರ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ.

    ಮುಖ್ಯ ನ್ಯಾ. ರಂಜನ್ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠದ ಮೂವರು ನ್ಯಾಯಾಧೀಶರು ಈ ವಿಚಾರದ ಬಗ್ಗೆ ವಿಸ್ತೃತ  ಚರ್ಚೆ ನಡೆಯಬೇಕು ಎಂದು ತೀರ್ಪು ನೀಡಿದರೆ ನ್ಯಾ. ಚಂದ್ರಚೂಡ್ ಮತ್ತು ನ್ಯಾ. ನಾರಿಮನ್ ವಿಸ್ತೃತ  ಪೀಠಕ್ಕೆ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಶಬರಿಮಲೆ ವಿಚಾರ ಕೇವಲ ಹಿಂದೂ ಧರ್ಮದ ದೇವಾಲಯಕ್ಕೆ ಮಾತ್ರ ಸೀಮಿತವಲ್ಲ. ಮುಸ್ಲಿಂ ಧರ್ಮದ ಮಹಿಳೆ ಮಸೀದಿ ಪ್ರವೇಶಕ್ಕೂ ಇದು ಅನ್ವಯವಾಗುತ್ತದೆ. ಪಾರ್ಸಿ ಧರ್ಮಕ್ಕೂ ಅನ್ವಯವಾಗುತ್ತದೆ. ಹೀಗಾಗಿ ಈ ಪ್ರಕರಣದ ಬಗ್ಗೆ ದೀರ್ಘ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

    ಶಬರಿಮಲೆ ಪ್ರಕರಣದಲ್ಲಿ ತೀರ್ಪು ನೀಡಿದರೆ ಉಳಿದ ಧರ್ಮದಲ್ಲಿ ಯಾಕೆ ಪ್ರವೇಶ ಇಲ್ಲ. ಅಲ್ಲೂ ಮಹಿಳೆಯರಿಗೆ ಸಮಾನ ಹಕ್ಕು ನೀಡಬೇಕೆಂಬ ಕೂಗು ಈಗಾಗಲೇ ಎದ್ದಿದೆ. ಮಹಿಳೆಯನ್ನು ಆಕೆಯ ಲಿಂಗ ಮತ್ತು ಜೈವಿಕ ಕಾರಣಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ಈ ಎಲ್ಲ ವಿಚಾರಗಳ ಮೇಲೆ ಗಮನಹರಿಸಿದ ಪೀಠ ಸುದೀರ್ಘ ವಿಚಾರಣೆ ನಡೆಸಬೇಕು ಎಂದು ಹೇಳಿದೆ.

    2018ರ ಸೆಪ್ಟೆಂಬರ್ 28ರಂದು ಸುಪ್ರೀಂಕೋರ್ಟಿನ ಅಂದಿನ ಸಿಜೆ ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ 4:1ರ ಅನುಪಾತದಲ್ಲಿ ಎಲ್ಲಾ ವಯೋಮಾನದ ಮಳೆಯರಿಗೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶ ಕಲ್ಪಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ 64 ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಫೆ.6 ರಂದು ಪೂರ್ಣಗೊಳಿಸಿದ್ದ ಪೀಠದ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು.

    ಸುಪ್ರೀಂ ತೀರ್ಪು ಏನಿತ್ತು?
    5ರಿಂದ 50 ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಬಹುದು. ಮಹಿಳೆಯನ್ನು ಆಕೆಯ ಲಿಂಗ ಮತ್ತು ಜೈವಿಕ ಕಾರಣಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ನಮ್ಮ ಬದುಕಿನ ಘನತೆಯನ್ನು ಧರ್ಮ ಎತ್ತಿ ಹಿಡಿಯುತ್ತದೆ. ಅಯ್ಯಪ್ಪ ಪ್ರತ್ಯೇಕ ದೇವರಲ್ಲ. ಲಿಂಗದ ಆಧಾರದ ಮೇಲೆ ಮಹಿಳೆಗೆ ದೇಗುಲ ಪ್ರವೇಶ ನಿರಾಕರಿಸುವುದು ಸರಿಯಲ್ಲ.

    ಅಂದಿನ ಸಿಜೆ ದೀಪಕ್ ಮಿಶ್ರಾ ಸೇರಿ ನಾಲ್ವರು ನ್ಯಾಯಮೂರ್ತಿಗಳಿಂದ ತೀರ್ಪಿಗೆ ಸಹಮತ ವ್ಯಕ್ತವಾಗಿತ್ತು. ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಮಾತ್ರ ಮಹಿಳೆಯರ ದೇಗುಲ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಧಾರ್ಮಿಕ ಆಚರಣೆಗಳನ್ನು ಸಂವಿಧಾನದ 14ನೇ ವಿಧಿ ಅನ್ವಯ ಪರಿಗಣಿಸಲಾಗದು ಅಂದು ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು.

    ಸುಪ್ರೀಂಕೋರ್ಟ್ ಆದೇಶವನ್ನು ಖಂಡಿಸಿ, ವಿರೋಧಿಸಿ ವಿರೋಧಿಸಿ ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳು ಕೇರಳದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದವು. ಇದರ ನಡುವೆಯೇ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಕನಕದುರ್ಗಾ ಮತ್ತು ಬಿಂದು ಅವರು ಪೊಲೀಸ್ ಭದ್ರತೆಯಲ್ಲಿ ಅಯ್ಯಪ್ಪನ ದರ್ಶನ ಪಡೆದಿದ್ದರು. ಇದು ಉದ್ರಿಕ್ತರನ್ನು ಮತ್ತಷ್ಟು ಕೆರಳಿಸಿತ್ತು. ಹೀಗಾಗಿ, ನಾಯರ್ ಸಮಾಜ, ತಿರುವಂಕೂರು ದೇವಸ್ವ ಮಂಡಳಿ ಹಾಗೂ ಕೇರಳ ಸರ್ಕಾರದ ಜೊತೆಗೆ 64 ಅರ್ಜಿಗಳು ಸುಪ್ರೀಂಕೋರ್ಟಿಗೆ  ಮೇಲ್ಮನವಿ ಸಲ್ಲಿಸಿದ್ದವು.

  • ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರಿಗೆ ಪ್ರವೇಶವೋ, ನಿಷೇಧವೋ – ಸುಪ್ರೀಂನಲ್ಲಿ ಇಂದು ಮಹತ್ವದ ತೀರ್ಪು

    ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರಿಗೆ ಪ್ರವೇಶವೋ, ನಿಷೇಧವೋ – ಸುಪ್ರೀಂನಲ್ಲಿ ಇಂದು ಮಹತ್ವದ ತೀರ್ಪು

    ಬೆಂಗಳೂರು: ಅಯೋಧ್ಯೆ, ಅನರ್ಹರ ಕೇಸ್ ಬಳಿಕ ಸುಪ್ರೀಂಕೋರ್ಟಿನಲ್ಲಿ ಇಂದು ಅಯ್ಯಪ್ಪನ ಕೇಸ್ ತೀರ್ಪು ಬರುತ್ತಿದೆ. ದೇಶದ ಜನತೆ ಬಹುದಿನಗಳಿಂದ ಕಾಯುತ್ತಿರುವ ಶಬರಿಮಲೆ ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ.

    ಶಬರಿಮಲೆಗೆ ಮಹಿಳೆಯರ ಪ್ರವೇಶ ಪ್ರಶ್ನಿಸಿ ಸಲ್ಲಿಸಲಾದ 64 ಮರುಪರಿಶೀಲನಾ ಅರ್ಜಿಗಳ ಸಂಬಂಧ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಲಿದೆ. ಫೆಬ್ರವರಿ 6ರಂದೇ ವಿಚಾರಣೆ ಮುಗಿಸಿದ್ದ ಮುಖ್ಯನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಸಾಂವಿಧಾನಿಕ ಪೀಠ ತೀರ್ಪನ್ನು ಕಾಯ್ದಿರಿಸಿತ್ತು.

    2018ರ ಸೆಪ್ಟೆಂಬರ್ 28ರಂದು ಸುಪ್ರೀಂಕೋರ್ಟಿನ ಅಂದಿನ ಸಿಜೆ ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ 4:1ರ ಅನುಪಾತದಲ್ಲಿ ಎಲ್ಲಾ ವಯೋಮಾನದ ಮಳೆಯರಿಗೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶ ಕಲ್ಪಿಸಿತ್ತು.

    ಸುಪ್ರೀಂ ತೀರ್ಪು ಏನಾಗಿತ್ತು..?
    5ರಿಂದ 50 ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಬಹುದು. ಮಹಿಳೆಯನ್ನು ಆಕೆಯ ಲಿಂಗ ಮತ್ತು ಜೈವಿಕ ಕಾರಣಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ನಮ್ಮ ಬದುಕಿನ ಘನತೆಯನ್ನು ಧರ್ಮ ಎತ್ತಿ ಹಿಡಿಯುತ್ತದೆ. ಅಯ್ಯಪ್ಪ ಪ್ರತ್ಯೇಕ ದೇವರಲ್ಲ. ಲಿಂಗದ ಆಧಾರದ ಮೇಲೆ ಮಹಿಳೆಗೆ ದೇಗುಲ ಪ್ರವೇಶ ನಿರಾಕರಿಸುವುದು ಸರಿಯಲ್ಲ.

    ಅಂದಿನ ಸಿಜೆ ದೀಪಕ್ ಮಿಶ್ರಾ ಸೇರಿ ನಾಲ್ವರು ನ್ಯಾಯಮೂರ್ತಿಗಳಿಂದ ತೀರ್ಪಿಗೆ ಸಹಮತ. ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಮಾತ್ರ ಮಹಿಳೆಯರ ದೇಗುಲ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಧಾರ್ಮಿಕ ಆಚರಣೆಗಳನ್ನು ಸಂವಿಧಾನದ 14ನೇ ವಿಧಿ ಅನ್ವಯ ಪರಿಗಣಿಸಲಾಗದು ಅಂದು ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು.

    ಆದರೆ, ಸುಪ್ರೀಂಕೋರ್ಟ್ ಆದೇಶವನ್ನು ಖಂಡಿಸಿ, ವಿರೋಧಿಸಿ ವಿರೋಧಿಸಿ ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳು ಕೇರಳದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದವು. ಇದರ ನಡುವೆಯೇ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಕನಕದುರ್ಗಾ ಮತ್ತು ಬಿಂದು ಅಮ್ಮಿಣಿ ಅವರು ಪೊಲೀಸ್ ಭದ್ರತೆಯಲ್ಲಿ ಅಯ್ಯಪ್ಪನ ದರ್ಶನ ಪಡೆದಿದ್ದರು. ಇದು ಉದ್ರಿಕ್ತರನ್ನು ಮತ್ತಷ್ಟು ಕೆರಳಿಸಿತ್ತು. ಹೀಗಾಗಿ, ನಾಯರ್ ಸಮಾಜ, ತಿರುವಂಕೂರು ದೇವಸ್ವ ಮಂಡಳಿ ಹಾಗೂ ಕೇರಳ ಸರ್ಕಾರದ ಜೊತೆಗೆ 64 ಅರ್ಜಿಗಳು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದವು.

    ಇದೀಗ ಸುಪ್ರೀಂಕೋರ್ಟ್ ತೀರ್ಪು ಮತ್ತು ಇದೇ 16ರಿಂದ ಮಂಡಲ ಪೂಜೆ ಪ್ರಯುಕ್ತ ಅಯ್ಯಪ್ಪ ದೇಗುಲ ತೆರೆಯುತ್ತಿರುವ ಹಿನ್ನೆಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಶಬರಿಮಲೆಯಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ. ಸುಪ್ರೀಂಕೋರ್ಟಿನ ಅಯೋಧ್ಯೆ ತೀರ್ಪನ್ನು ಗೌರವಿಸಿದ ರೀತಿಯಲ್ಲೇ ಶಬರಿಮಲೆ ಪ್ರಕರಣದಲ್ಲಿಯೂ ಕೋರ್ಟ್ ತೀರ್ಪನ್ನು ಸ್ವಾಗತಿಸಬೇಕೆಂದು ಕೇರಳ ಮುಜುರಾಯಿ ಸಚಿವ ಸುರೇಂದ್ರನ್, ಬಿಜೆಪಿ ನಾಯಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ಶಬರಿಮಲೆ ಪ್ರವೇಶಿಸಿದ ಮಹಿಳೆಯರಿಗೆ ಮ್ಯಾಗಜಿನಲ್ಲಿ ವಿಶೇಷ ಗೌರವ- ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

    ಶಬರಿಮಲೆ ಪ್ರವೇಶಿಸಿದ ಮಹಿಳೆಯರಿಗೆ ಮ್ಯಾಗಜಿನಲ್ಲಿ ವಿಶೇಷ ಗೌರವ- ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

    ತಿರುವನಂತಪುರಂ: ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಶಬರಿಮಲೆ ಪ್ರವೇಶ ಮಾಡಿದ್ದ ಇಬ್ಬರು ಮಹಿಳೆಯರಿಗೆ ಕೇರಳದ ಕಾಲೇಜ್ ಮ್ಯಾಗಜಿನ್‍ವೊಂದು ವಿಶೇಷ ಗೌರವ ಸಲ್ಲಿಸಿ, ಭಾರೀ ಟೀಕೆಗೆ ಗುರಿಯಾಗಿದೆ.

    ಕೋತಮಂಗಲಂನ ಮಾರ್ ಅಥಾನಸಿಸ್ ಎಂಜಿನಿಯರಿಂಗ್ ಕಾಲೇಜು ‘ನವೋದಯದ ನಾಯಕಿಯರು’ ಎಂಬ ಮ್ಯಾಗಜಿನ್ ಪ್ರಕಟ ಮಾಡಿದೆ. ಈ ಮ್ಯಾಗಜಿನ್‍ನಲ್ಲಿ ಶಬರಿಮಲೆ ದೇಗುಲ ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಲಾಗಿದೆ. ಆದರೆ ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಕಾಲೇಜಿನ ವಿರುದ್ಧ ಅನೇಕರು ಕಿಡಿಕಾರಿದ್ದಾರೆ.

    ಮಾರ್ ಅಥಾನಸಿಸ್ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಅನೇಕ ಹಿಂದೂ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. ಶಬರಿಮಲೆ ದೇವಾಲಯ ಪ್ರವೇಶಿಸಿದ ಮಹಿಳೆಯರಿಗೆ ವಿಶೇಷ ಗೌರವ ನೀಡಿರುವುದು ಖಂಡನೀಯ. ಮ್ಯಾಗಜಿನ್ ಸಂಪಾದಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೆ ಕಾಲೇಜು ಆಡಳಿತ ಮಂಡಳಿ ವಿರುದ್ಧ ಹಿಂದೂ ಐಕ್ಯ ವೇದಿಕೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

    ಹಿಂದೂ ಸಂಘಟನೆಗಳು ಪೊಲೀಸ್ ದೂರು ನೀಡಿದ ಬಳಿಕ ಹಾಗೂ ಪ್ರತಿಭಟನೆ ಚುರುಕುಗೊಳಿಸಿದ್ದರಿಂದ ಕಾಲೇಜು ಮಂಡಳಿ ಎಚ್ಚೆತ್ತುಕೊಂಡಿದೆ. ಈ ಮೂಲಕ ‘ನವೋದಯದ ನಾಯಕಿಯರು’ ಮ್ಯಾಗಜಿನ್‍ನ್ನು ಹಿಂಪಡೆಯಲು ನಿರ್ಧರಿಸಿದೆ.

    ಶಬರಿಮಲೆಗೆ ಮಹಿಳೆಯರ ಪ್ರವೇಶ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿತ್ತು. ಇದಾದ ಕೆಲವೇ ದಿನಗಳ ನಂತರ ಬಿಂದು ಮತ್ತು ಕನಕದುರ್ಗ ಮೊಟ್ಟ ಮೊದಲ ಬಾರಿಗೆ ದೇವಾಲಯ ಪ್ರವೇಶ ಮಾಡಿದ್ದರು. ಇದಕ್ಕೆ ಶಬರಿಮಲೆ ಭಕ್ತರು, ಅನೇಕ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಅಷ್ಟೇ ಅಲ್ಲದೆ ದೊಡ್ಡಮಟ್ಟದ ಪ್ರತಿಭಟನೆ ಹಾಗೂ ಲಾಠಿ ಚಾರ್ಜ್ ಕೂಡ ನಡೆದಿತ್ತು.

  • ಶಬರಿಮಲೆ ಬಳಿಕ ಮಸೀದಿಗಳಿಗೂ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಗೆ ಮನವಿ

    ಶಬರಿಮಲೆ ಬಳಿಕ ಮಸೀದಿಗಳಿಗೂ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಗೆ ಮನವಿ

    ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ ಬಳಿಕ, ಇದೀಗ ಮಸೀದಿಯೊಳಗೆ ಪ್ರವೇಶಿಸಿ ಮಹಿಳೆಯರೂ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕೆಂದು ಕೋರಿ ಪುಣೆ ಮೂಲದ ದಂಪತಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

    ಈ ಸಂಬಂಧ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿದ್ದು, ಕೇಂದ್ರ ಸರ್ಕಾರ, ಮಹಿಳಾ ಆಯೋಗ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಕೇಂದ್ರೀಯ ವಕ್ಫ್ ಮಂಡಳಿಗೆ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಎ ಬೊಬ್ಡೆ ಹಾಗೂ ಎಸ್ ಅಬ್ದುಲ್ ನಝೀರ್ ನೇತೃತ್ವದ ಪೀಠ ನೋಟಿಸ್ ಜಾರಿಗೊಳಿಸಿದೆ. ಶಬರಿಮಲೆ ದೇಗುಲ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಒಂದೇ ಕಾರಣಕ್ಕಾಗಿ ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

    ಇಸ್ಲಾಂ ಧರ್ಮಗ್ರಂಥ ಕುರಾನ್‍ನಲ್ಲಿ ಪುರುಷ ಹಾಗೂ ಮಹಿಳೆಯರ ನಡುವೆ ಬೇಧಬಾವ ಮಾಡಿಲ್ಲ. ಆದ್ರೆ ಇತ್ತೀಚಿಗೆ ಇಸ್ಲಾಂ ಧರ್ಮವು ಮಹಿಳೆಯರನ್ನು ತುಳಿಯುವ ಧರ್ಮವಾಗಿ ಮಾರ್ಪಾಡಾಗಿದೆ. ಪ್ರವಾದಿಗಳ ಕಾಲದಲ್ಲಿ ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶವಿತ್ತು. ಆದರೆ ಕಾಲಕ್ರಮೇಣ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯಲು ಆರಂಭವಾದ ಬಳಿಕ ಮುಖ್ಯ ಪ್ರರ್ಥನಾ ಸಭಾಂಗಣಕ್ಕೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಯಿತು ಎಂದು ಅರ್ಜಿದಾರ ದಂಪತಿ ಯಾಸ್ಮಿನ್ ಹಾಗೂ ಝಬರ್ ಅಹ್ಮದ್ ಪೀರ್ಜಾಡೆ ತಿಳಿಸಿದ್ದಾರೆ.

    ಮುಸ್ಲಿಂ ಧರ್ಮದ ಪ್ರಕಾರ ಅನಾದಿ ಕಾಲದಿಂದಲೂ ಮಹಿಳೆಯರಿಗೆ ಮಸೀದಿ ಪ್ರವೇಶ ನಿಷೇಧಿಸಲಾಗಿದೆ. ಆದ್ದರಿಂದ ಪುರುಷರಂತೆ ಮಹಿಳೆಯರು ಮಸೀದಿಗೆ ಹೋಗಿ ದೇವರ ಪ್ರಾರ್ಥನೆ ಮಾಡಲು ಅವಕಾಶವಿಲ್ಲ. ಇದು ಸಮಾನತೆ ಮತ್ತು ಮೂಲಭೂತ ಹಕ್ಕಿನ ಉಲ್ಲಂಘನೆ, ಪುರುಷರಂತೆ ಮಹಿಳೆಯರಿಗೂ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

    ಕಳೆದ ಸೆಪ್ಟೆಂಬರ್ ನಲ್ಲಿ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿ, ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. ಅದರಂತೆ ಮುಸ್ಲಿಂ ಮಹಿಳೆಯರಿಗೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಮೆಕ್ಕಾ ಮತ್ತು ಕೆನಡಾದಲ್ಲಿ ಮಹಿಳೆಯರಿಗೆ ಇಂತಹ ಅವಕಾಶವಿದೆ ಎಂದು ಅರ್ಜಿದಾರರು ಸುಪ್ರೀಂಗೆ ಮನವಿ ಮಾಡಿದ್ದರು.

  • ಎಲ್ಲ ಮಹಿಳೆಯರಿಗೆ ಪ್ರವೇಶ ಕಲ್ಪಿಸುತ್ತೇವೆ: ಶಬರಿಮಲೆ ದೇವಸ್ಥಾನ ಬೋರ್ಡ್

    ಎಲ್ಲ ಮಹಿಳೆಯರಿಗೆ ಪ್ರವೇಶ ಕಲ್ಪಿಸುತ್ತೇವೆ: ಶಬರಿಮಲೆ ದೇವಸ್ಥಾನ ಬೋರ್ಡ್

    ನವದೆಹಲಿ: ಶಬರಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ನೋಡಿಕೊಳ್ಳುವ ತಿರುವಂಕೂರ್ ದೇವಸ್ವಂ ಮಂಡಳಿ (ಟಿಡಿಬಿ) ತನ್ನ ನಿಲುವನ್ನು ಬದಲಾಯಿಸಿಕೊಂಡಿದ್ದು, ಸುಪ್ರೀಂ ಕೋರ್ಟ್ ತೀರ್ಪನ್ನು ಯಥಾವತ್ ಆಗಿ ಪಾಲಿಸುತ್ತೇವೆ ಎಂದು ತಿಳಿಸಿದೆ.

    ಸುಪ್ರೀಂಕೋರ್ಟ್ ಮುಖ್ಯನಾಯಾಧೀಶ ರಂಜನ್ ಗೊಗೋಯ್ ಅವರ ನೇತೃತ್ವದ ಐದು ಜನ ನ್ಯಾಯಾಧೀಶರ ಪೀಠವು ಇಂದು ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತು ವಿಚಾರಣೆ ನಡೆಸಿತು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ, ನಾವು ನಮ್ಮ ನಿಲುವನ್ನು ಬದಲಾಯಿಸಿದ್ದೇವೆ. ಧರ್ಮ ಗ್ರಂಥದಲ್ಲಿ ಸ್ತ್ರೀಯರನ್ನು ಹೊರಗಿಡಬೇಕೆಂದು ಹೇಳಿಲ್ಲ. ಹೀಗಾಗಿ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಎಲ್ಲಾ ಸ್ತ್ರೀಯರಿಗೆ ಪ್ರವೇಶಕ್ಕೆ ಅವಕಾಶ ನೀಡುತ್ತೇವೆ ಎಂದು ಹೇಳಿಕೆ ನೀಡಿದೆ.

    ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ಕೊಡುವ ಸುಪ್ರೀಂಕೋರ್ಟ್ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ 54 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್, ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಹಾಗೂ ಇಂದೂ ಮಲ್ಹೋತ್ರಾ ಅವರ ಪೀಠವು ಮರಪರಿಶೀಲನಾ ಅರ್ಜಿಯನ್ನು ಇಂದು ವಿಚಾರಣೆ ನಡೆದಿದರು.

    ಕೇರಳ ಸರ್ಕಾರದ ಅಧೀನದಲ್ಲಿ ನಡೆಯುವ ಶಬರಿಮಲ ದೇವಸ್ಥಾನ ಮಂಡಳಿಯು 2018 ಸೆಪ್ಟೆಂಬರ್ ನಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸಿತ್ತು. ಬಳಿಕ ನವೆಂಬರ್ ವರೆಗೆ ನಿರ್ಧಾರ ಕೈಗೊಳ್ಳಲು ಕಾಲಾವಕಾಶ ಕೇಳಿತ್ತು. ಆದರೆ ಈಗ ದೇವಸ್ಥಾನಕ್ಕೆ ಮಹಿಳೆಯರಿಗೆ ಯಾವುದೇ ವಯೋಮಿತಿ ಇಲ್ಲ. ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗುತ್ತದೆ ಎಂದು ಒಪ್ಪಿಕೊಂಡಿದೆ.

    2018 ಸೆಪ್ಟೆಂಬರ್ ನಲ್ಲಿ ಶಬರಿಮಲೆ ಪ್ರವೇಶಕ್ಕೆ ಸುಪ್ರೀಂನ ಐದು ನ್ಯಾಯಾಧೀಶರ ಪೀಠವು ತೀರ್ಪು ನೀಡಿತ್ತು. ಆದರೆ ಇವರಲ್ಲಿ ಇಂದೂ ಮಲ್ಹೋತ್ರಾ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಕ್ಟೋಬರ್ ನಲ್ಲಿ ಮಹಿಳೆಯರ ಪ್ರವೇಶ ವಿರೋಧಿಸಿ ಕೆಲ ಹಿಂದೂ ಪರ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ಇಲ್ಲಿಯವರೆಗೆ ಇಬ್ಬರು ಮಹಿಳೆಯರು ಮಾತ್ರ ದೇಗುಲ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇರಳ ಸರ್ಕಾರದ ‘ಯು ಟರ್ನ್’ – ಶಬರಿಮಲೆಗೆ ದೇಗುಲಕ್ಕೆ ಪ್ರವೇಶಿಸಿದ್ದು ಇಬ್ಬರೇ!

    ಕೇರಳ ಸರ್ಕಾರದ ‘ಯು ಟರ್ನ್’ – ಶಬರಿಮಲೆಗೆ ದೇಗುಲಕ್ಕೆ ಪ್ರವೇಶಿಸಿದ್ದು ಇಬ್ಬರೇ!

    ತಿರುವನಂತಪುರಂ: ಕಳೆದ ಕೆಲ ದಿನಗಳ ಹಿಂದೆ ಶಬರಿಮಲೆಯ ಅಯ್ಯಪ್ಪ ಸನ್ನಿಧಿಗೆ 51 ಮಹಿಳೆಯರು ಪ್ರವೇಶ ಪಡೆದಿದ್ದಾರೆ ಎಂದು ಹೇಳಿದ್ದ ಕೇರಳ ಸರ್ಕಾರ ಇಂದು ಯು ಟರ್ನ್ ಹೊಡೆದಿದ್ದು, ದೇವಾಲಯಕ್ಕೆ ಇಬ್ಬರು ಮಾತ್ರ ಪ್ರವೇಶ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ.

    ಕೇರಳ ಸರ್ಕಾರ ಸಚಿವರಾದ ಕಡಕಂಪಲ್ಲಿ ಸುರೇಂದ್ರನ್ ಅವರು ಕೇರಳ ವಿಧಾನಸಭೆಗೆ ಇಂದು ಮಾಹಿತಿ ನೀಡಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಇದುವರೆಗೂ ಇಬ್ಬರು ಮಹಿಳೆಯರು ಮಾತ್ರ ಪ್ರವೇಶ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಈ ವರದಿ ದೇವಾಲಯದ ಕಾರ್ಯಕಾರಿ ಅಧಿಕಾರಿಗಳು ನೀಡಿದ ಮಾಹಿತಿ ಎಂದು ಸ್ಪಷ್ಟಪಡಿಸಿದ್ದಾರೆ. ಅಯ್ಯಪ್ಪ ಸನ್ನಿಧಿಗೆ ಎಷ್ಟು ಮಂದಿ ಮಹಿಳೆಯರು ಪ್ರವೇಶ ಮಾಡಿದ್ದಾರೆ ಎಂದು ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

    ಇದೇ ವೇಳೆ ಶ್ರೀಲಂಕಾ ಮಹಿಳೆಯೊಬ್ಬರು ದರ್ಶನ ಪಡೆದಿದ್ದಾರೆ ಎಂಬ ಸುದ್ದಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಕೇರಳ ಪೊಲೀಸರು ಅಯ್ಯಪ್ಪ ಸನ್ನಿಧಿ ದರ್ಶನ ಪಡೆಯಲು ಇಷ್ಟಪಟ್ಟ ಮಹಿಳೆಯರಿಗೆ ಬಿಗಿ ಭದ್ರತೆ ನೀಡುವುದಾಗಿ ತಿಳಿಸಿದರು. ಇದರಂತೆ ಜನವರಿಯಲ್ಲಿ ಇಬ್ಬರು ಮಹಿಳೆಯರು ಅಯ್ಯಪ್ಪ ದರ್ಶನ ಪಡೆದಿದ್ದರು.

    ಈ ಹಿಂದ ಕೇರಳ ಸರ್ಕಾರದ ಪರವಾಗಿ ರಾಜ್ಯ ಪೊಲೀಸ್ ಇಲಾಖೆ ಮುಖ್ಯಸ್ಥರು ಈ ಮಾಹಿತಿಯನ್ನು ನೀಡಿ 50 ವರ್ಷದೊಳಗಿನ 51 ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟಿಗೆ ತಿಳಿಸಿದ್ದರು. ಆದರೆ ಈ ವರದಿಯನ್ನು ಘನ ನ್ಯಾಯಾಲಯ ತಿರಸ್ಕಾರ ಮಾಡಿತ್ತು. ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯ ಮಾಹಿತಿಯಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಮಹಿಳೆಯರು ದರ್ಶನ ಪಡೆದಿದ್ದಾಗಿ ವಿವರಿಸಲಾಗಿತ್ತು. ಅಲ್ಲದೇ ದೇಗುಲ ಪ್ರವೇಶ ಮಾಡಲು ಸುಮಾರು 16 ಸಾವಿರ ಮಂದಿ ಮಹಿಳೆಯರು ತಮ್ಮ ಆಧಾರ್ ಮಾಹಿತಿ ಮೂಲಕ ನೋಂದಣಿ ಮಾಡಿಕೊಂಡಿದ್ದರು ಹಾಗೂ ಆದರಲ್ಲಿ 10 ರಿಂದ 50 ವರ್ಷದೊಳಗಿನ ಮಹಿಳೆಯರ ಸಂಖ್ಯೆ 7,500 ಇತ್ತು ಎಂದು ಮಾಹಿತಿಯಲ್ಲಿ ನೀಡಲಾಗಿತ್ತು.

    ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವರು, ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡ ಮಹಿಳೆಯಲ್ಲಿ 51 ಮಂದಿ ದರ್ಶನ ಪಡೆದಿದ್ದಾರೆ. ಸಾಮಾನ್ಯವಾಗಿ ದೊರೆಯುವ ದೇವಾಲಯದ ಟಿಕೆಟ್ ಪಡೆದು, ಆಧಾರ್ ಮಾಹಿತಿ ನೀಡಿಯೇ ದರ್ಶನ ಪಡೆದಿದ್ದಾರೆ. ಆದರೆ ಭಕ್ತರ ವಯಸ್ಸಿನ ಬಗ್ಗೆ ನಿಖರ ಮಾಹಿತಿ ಪಡೆಯಲು ನಮಗೆ ಯಾವುದೇ ಅವಕಾಶವಿಲ್ಲ ಎಂದು ವಿವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಬರಿಮಲೆ ಪ್ರವೇಶಿಸಿ ಮನೆಗೆ ಬಂದ ಕನಕದುರ್ಗ ಮೇಲೆ ಅತ್ತೆಯಿಂದ ಹಲ್ಲೆ- ಆಸ್ಪತ್ರೆಗೆ ದಾಖಲು

    ಶಬರಿಮಲೆ ಪ್ರವೇಶಿಸಿ ಮನೆಗೆ ಬಂದ ಕನಕದುರ್ಗ ಮೇಲೆ ಅತ್ತೆಯಿಂದ ಹಲ್ಲೆ- ಆಸ್ಪತ್ರೆಗೆ ದಾಖಲು

    ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿದ್ದ ಕನಕದುರ್ಗ ಮೇಲೆ ಕುಟುಂಬಸ್ಥರು ಹಲ್ಲೆ ಮಾಡಿದ್ದು, ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮಹಿಳೆಯರಾದ ಬಿಂದು ಮತ್ತು ಕನಕದುರ್ಗ ಜನವರಿ 2 ರಂದು ಶಬರಿಮಲೆ ದೇವಾಲಯವನ್ನು ಪ್ರವೇಶಿಸಿದ್ದರು. ದೇವಾಲಯದ ಸಂಪ್ರದಾಯವನ್ನು ಮುರಿದ ಇಬ್ಬರ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿತ್ತು. ಅಷ್ಟೇ ಅಲ್ಲದೇ ಜೀವಬೆದರಿಕೆ ಬಂದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಇಬ್ಬರನ್ನು ಕೊಚ್ಚಿ ಬಳಿಯ ಅಜ್ಞಾತ ಸ್ಥಳದಲ್ಲಿ ಇರಿಸಿದ್ದರು.

    ಕೇರಳದ ನಾಯರ್ ಸಮುದಾಯದ 39 ವರ್ಷದ ಕನಕದುರ್ಗ ಅಜ್ಞಾತ ಸ್ಥಳದಿಂದ ಮಂಗಳವಾರ ಬೆಳಗ್ಗೆ ತಮ್ಮ ನಿವಾಸಕ್ಕೆ ಆಗಮಿಸಿದ್ದಾರೆ. ಮನೆಗೆ ಬಂದಕೂಡಲೇ ಅತ್ತೆ ಕನಕದುರ್ಗ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದ್ದು ಈಗ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮನೆಗೆ ಕನಕದುರ್ಗ ಬಂದ ಕೂಡಲೇ ಅತ್ತೆ ಮತ್ತು ಸೊಸೆ ನಡುವೆ ಜಟಾಪಟಿ ನಡೆದು, ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದು, ಅತ್ತೆ ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ. ತನ್ನ ಮೇಲೆ ಸೊಸೆ ಕನಕದುರ್ಗ ಹಲ್ಲೆ ಮಾಡಿದ್ದಾಳೆ ಎಂದು ಅತ್ತೆ ಆರೋಪಿಸಿದ್ದಾರೆ.

    ದೇವಾಲಯ ಪ್ರವೇಶಿಸಿ ದೇಶವ್ಯಾಪಿ ಸುದ್ದಿಯಾಗಿದ್ದ ಕನಕದುರ್ಗ ಅವರ ಪತಿ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಕನಕದುರ್ಗ ಮತ್ತು ನಮಗೂ ಯಾವುದೇ ಸಂಬಂಧ ಇಲ್ಲ ಎಂದು  ಕುಟುಂಬದ ಸದಸ್ಯರು ಪ್ರತಿಕ್ರಿಯಿಸಿದ್ದರು.

    ಬಿಂದು ಮತ್ತು ಕನಕದುರ್ಗ ಮಧ್ಯರಾತ್ರಿ ಬೆಟ್ಟವನ್ನು ಹತ್ತಿ, ವಿಐಪಿ ಮತ್ತು ಮಾಧ್ಯಮಗಳ ಪ್ರವೇಶಕ್ಕೆ ಇರುವ ದ್ವಾರದ ಮೂಲಕ ಜ.2ರ ಬುಧವಾರ ಬೆಳಗ್ಗೆ 3.45ಕ್ಕೆ ದೇವಾಲಯವನ್ನು ಪ್ರವೇಶಿಸಿದ್ದರು. ಈ ಸಮಯದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು ಮತ್ತು ಯಾವುದೇ ಮಾಧ್ಯಮಗಳು ಸಹ ಇರಲಿಲ್ಲ.

    44 ವರ್ಷ ಬಿಂದು ತಲಶೇರಿಯಲ್ಲಿ ಕಾಲೇಜು ಉಪನ್ಯಾಸಕಿ ಮತ್ತು ಸಿಪಿಐ(ಎಂ) ಕಾರ್ಯಕರ್ತೆಯಾಗಿದ್ದು, ಕನಕದುರ್ಗ ನಾಗರಿಕ ಸರಬರಾಜು ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ – ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

    ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ – ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

    ಶಬರಿಮಲೆ: ಪ್ರತಿ ವರ್ಷದಂತೆ ಈ ಬಾರಿ ಶಬರಿಮಲೆಯಲ್ಲಿ ಮಕರ ಜ್ಯೋತಿಯನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ದೇವಾಲಯದಿಂದ 8 ಕಿ.ಮೀ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿ ಸೋಮವಾರ ಸಂಜೆ 6.38ರ ಸುಮಾರಿಗೆ ಕಾಣಿಸಿಕೊಂಡಿತು.

    ಈ ವಿಶೇಷ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ಮಕರ ಜ್ಯೋತಿಯ ದರ್ಶನವಾಗುತ್ತಿದ್ದಂತೆ ಗಟ್ಟಿ ಸ್ವರದಲ್ಲಿ “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂದು ಹೇಳಿ ಜಯಘೋಷ ಮಾಡಿದರು.

    ಪ್ರತಿ ವರ್ಷ ಜನವರಿ 14 ರ ಸಂಜೆ ಅಯ್ಯಪ್ಪ ಸ್ವಾಮಿಗೆ ಮಹಾಮಂಗಳಾರತಿ ಬಳಿಕ ಮಕರ ಜ್ಯೋತಿ ದರ್ಶನವಾಗುತ್ತದೆ. ದೇಶದ ವಿವಿಧ ಭಾಗಗಳಿಂದ ಜಾತಿ, ಧರ್ಮ ಬೇದಭಾವವಿಲ್ಲದೆ ಆಗಮಿಸುವ ಭಕ್ತರು, ಅಯ್ಯಪ್ಪ ಸನ್ನಿಧಾನದಲ್ಲಿ ಜ್ಯೋತಿಯ ದರ್ಶನ ಪಡೆಯಲು ಎರಡು ಮೂರು ದಿನಗಳ ಮುಂಚೆಯೇ ಆಗಮಿಸುತ್ತಾರೆ.

    ಐತಿಹಾಸಿಕ ಸಾಂಪ್ರದಾಯದಂತೆ ಪಂದಳದಿಂದ ಘೋಷಯಾತ್ರೆಯ ಮೂಲಕ ತಂದ ತಿರುವಾಭರಣಗಳನ್ನು ಅಯ್ಯಪ್ಪನಿಗೆ ತೊಡಿಸಿ ದೀಪಾರಾಧನೆ ನಡೆಸಿದ ಬಳಿಕ ಮಹಾ ಮಂಗಳರಾತಿಯನ್ನು ಮಾಡಲಾಗುತ್ತದೆ. ಮಹಾ ಮಂಗಳಾರತಿ ನಡೆದ ಬಳಿಕ ಪೊನ್ನಂಬಲಮೇಡು ಬೆಟ್ಟದಲ್ಲಿ ಮೂರು ಬಾರಿ ಜ್ಯೋತಿ ಕಾಣಿಸುತ್ತದೆ.

  • ಭೀಕರ ರಸ್ತೆ ಅಪಘಾತ- 10 ಜನ ಶಬರಿಮಲೆ ಯಾತ್ರಿಗಳ ದುರ್ಮರಣ

    ಭೀಕರ ರಸ್ತೆ ಅಪಘಾತ- 10 ಜನ ಶಬರಿಮಲೆ ಯಾತ್ರಿಗಳ ದುರ್ಮರಣ

    ಚೆನ್ನೈ: ವ್ಯಾನ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಹೊಡೆದ ಪರಿಣಾಮ 10 ಜನ ಶಬರಿಮಲೆ ಯಾತ್ರಿಗಳು ಮೃತಪಟ್ಟ ದುರ್ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ವ್ಯಾನ್ ನಲ್ಲಿ ಪ್ರಯಾಣಿಸುತ್ತಿದ್ದ ತೆಲಂಗಾಣ ಮೂಲದ ಆರ್.ನಾಗರಾಜ್ (35), ಎ ಮಹೇಶ್ (28), ಎಂ.ಕುಮಾರ್ (22), ಶಾಮ್ (22), ಎಸ್.ಪ್ರವೀಣ್ (24), ಕೃಷ್ಣ (35), ಎಂ ಸಾಯಿ (22), ಆಂಜನೇಯಲು (25), ಸುರೇಶ್ (25) ಸೇರಿದಂತೆ ಚಾಲಕ ಕೂಡ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ಕೆ.ಪೂಕಾವುಡ್ (28), ಡಿ.ರಾಜು (28), ಎಸ್.ವೆಂಕಟೇಶ್ (25), ಎನ್.ಸೈಲಾಮಲ್ ಹಾಗೂ ನರೇಶ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಘಟನೆಯ ವಿವರ:
    15 ಜನ ಶಬರಿಮಲೆ ಯಾತ್ರಿಗಳು ರಾಮೇಶ್ವರಕ್ಕೆ ಭೇಟಿ ನೀಡಿ ರಾಮೇಶ್ವರಂ-ತಿರುಚ್ಚಿ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಮರಳುತ್ತಿದ್ದರು. ಈ ವೇಳೆ ತಿರುಮಯಂನ ಪದುಕೋಟೈ ಸಮೀಪದಲ್ಲಿ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ 10 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಗಂಭೀರವಾಗಿ ಗಾಯಗೊಂಡಿದ್ದ 5 ಜನರನ್ನು ತಿರುಮಯಂನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv