Tag: Sabarimala

  • ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ- ವಿಸ್ಮಯ ಕಣ್ತುಂಬಿಕೊಂಡ ಭಕ್ತಗಣ

    ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ- ವಿಸ್ಮಯ ಕಣ್ತುಂಬಿಕೊಂಡ ಭಕ್ತಗಣ

    ತಿರುವನಂತಪುರಂ: ಶಬರಿಮಲೆಯಲ್ಲಿ ಸಾವಿರಾರು ಭಕ್ತರು ಕಾತರದಿಂದ ಕಾಯುತ್ತಿದ್ದ ಮಕರ ಜ್ಯೋತಿ ಗೋಚರವಾಗಿದ್ದು, ಜ್ಯೋತಿಯನ್ನು ಕಣ್ತುಂಬಿಕೊಂಡಿದ್ದಾರೆ.

    ಇಂದು ಸಂಜೆ 6.42ಕ್ಕೆ ಸರಿಯಾಗಿ ಪೊನ್ನಂಬಲಮೇಡು ಗಿರಿಯಲ್ಲಿ ಮಕರ ಜ್ಯೋತಿ ಗೋಚರವಾಗಿದೆ. ಜ್ಯೋತಿ ಕಾಣುತ್ತಿದ್ದಂತೆ ಸಾವಿರಾರು ಭಕ್ತರು ಸಂತಸಗೊಂಡು, ಕಣ್ತುಂಬಿಕೊಂಡಿದ್ದಾರೆ. ಅಯ್ಯಪ್ಪನ ನಾಮಸ್ಮರಣೆ ಹಾಗೂ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಕೊರೊನಾ ಹಿನ್ನೆಲೆ ಕಡಿಮೆ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಇಂದು ಹಲವರು ಜ್ಯೋತಿಯನ್ನು ನೋಡಿದ್ದಾರೆ.

    ಕೊರೊನಾ ಹಿನ್ನೆಲೆ ಈ ಬಾರಿ ಶಬರಿಮಲೆ ದೇವಸ್ಥಾನದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಕೈಗೊಳ್ಳಲಾಗಿತ್ತು. ಹೀಗಾಗಿ ಮಕರ ಜ್ಯೋತಿ ದರ್ಶನಕ್ಕೆ ಸಹ ಕೇವಲ 5 ಸಾವಿರ ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರಿಗೆ ಮಾತ್ರ ದೇವಾಲಯ ಹಾಗೂ ಜ್ಯೋತಿ ನೋಡಲು ಅವಕಾಶ ಕಲ್ಪಿಸಲಾಗಿತ್ತು.

    ದೇವಸ್ಥಾನದಿಂದ 8 ಕಿ.ಮೀ ದೂರದಲ್ಲಿ ಪೊನ್ನಂಬಲಮೇಡು ಗಿರಿ ಇದ್ದು, ಪ್ರತಿ ವರ್ಷದಂತೆ ಈ ವರ್ಷವೂ ಮಕರ ಜ್ಯೋತಿ ಗೋಚರಿಸಿದೆ. ಈ ವಿಶೇಷ ಘಳಿಗೆಗಾಗಿ ಕಾದಿದ್ದ ಸಾವಿರಾರು ಭಕ್ತರು ಮಕರ ಜ್ಯೋತಿಯ ದರ್ಶನವಾಗುತ್ತಿದ್ದಂತೆ ಗಟ್ಟಿಯಾಗಿ `ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಹೇಳಿ ಘೋಷಣೆ ಕೂಗಿದರು. ಭಕ್ತಿಯಿಂದ ಮಕರ ಜ್ಯೋತಿಗೆ ನಮಸ್ಕರಿಸಿ ಧನ್ಯರಾದರು.

    ಐತಿಹಾಸಿಕ ಸಾಂಪ್ರದಾಯದಂತೆ ಪಂದಳದಿಂದ ಘೋಷಯಾತ್ರೆಯ ಮೂಲಕ ತಂದ ತಿರುವಾಭರಣಗಳನ್ನು ಅಯ್ಯಪ್ಪನಿಗೆ ತೊಡಿಸಿ ದೀಪಾರಾಧನೆ ನಡೆಸಿದ ಬಳಿಕ ಮಹಾ ಮಂಗಳರಾತಿಯನ್ನು ಮಾಡಲಾಗುತ್ತದೆ. ಮಹಾ ಮಂಗಳಾರತಿ ನಡೆದ ಬಳಿಕ ಪೊನ್ನಂಬಲಮೇಡು ಬೆಟ್ಟದಲ್ಲಿ ಮೂರು ಬಾರಿ ಜ್ಯೋತಿ ಕಾಣಿಸುತ್ತದೆ.

  • ಕರ್ನಾಟಕದ ಶಬರಿಮಲೆ ಯಾತ್ರಾರ್ಥಿಗಳಿಗೆ ಸಹಾಯವಾಣಿ ತೆರೆದ ಸರ್ಕಾರ

    ಕರ್ನಾಟಕದ ಶಬರಿಮಲೆ ಯಾತ್ರಾರ್ಥಿಗಳಿಗೆ ಸಹಾಯವಾಣಿ ತೆರೆದ ಸರ್ಕಾರ

    – ಕೊರೊನಾ ಪರೀಕ್ಷೆಯ ಅವ್ಯವಸ್ಥೆ ಹಿನ್ನೆಲೆ ಕ್ರಮ

    ಬೆಂಗಳೂರು: ರಾಜ್ಯದಿಂದ ಶಬರಿಮಲೆಗೆ ತೆರಳುವ ಭಕ್ತಾದಿಗಳಿಗೆ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದರೂ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಕುರಿತು ಸುದ್ದಿಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಯಾತ್ರಾರ್ಥಿಗಳಿಗಾಗಿ ಸಹಾಯವಾಣಿಯನ್ನು ಆರಂಭಿಸಿದೆ.

    ಕೇರಳದ ಶಬರಿಮಲೆಗೆ ತೆರಳುವ ಭಕ್ತರಿಗೆ ಅನುಕೂಲವಾಗುವಂತೆ ಹೆಲ್ಪ್ ಲೈನ್ ಆರಂಭಿಸಿ ಸರ್ಕಾರ ಆದೇಶ ಹೊರಡಿಸಿದೆ. 2020-21ನೇ ಸಾಲಿನ ಮಂಡಲ-ಮಕರವಿಳಕ್ಕು ಕಾರ್ಯಕ್ರಮಕ್ಕೆ ತೆರಳುವ ಭಕ್ತರ ಸಮಸ್ಯೆ ಆಲಿಸಲು ಹಾಗೂ ಆರೋಗ್ಯ ಸಲಹೆಗಳಿಗಾಗಿ ಈ ಸಹಾಯವಾಣಿಯನ್ನು ಆರಂಭಿಸಿದೆ. ಕೊರೊನಾ ಹಿನ್ನಲೆ ಶಬರಿಮಲೆ ಮಾರ್ಗಸೂಚಿ ವಿವರಿಗಳಿಗಾಗಿ ಕರೆ ಮಾಡಬಹುದು.

    ಕೇರಳ ಗಡಿಯಲ್ಲಿ ಅಥವಾ ಶಬರಿಮಲೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾದರೆ ಈ ಸಹಾಯವಾಣಿಗೆ ಕರೆ ಮಾಡಿ ತಿಳಿಸಬಹುದಾಗಿದೆ. ಸರ್ಕಾರ ಸಮಸ್ಯೆಗೆ ಪರಿಹಾರ ಕಲ್ಪಿಸಲಿದೆ. ಯಾವುದೇ ಮಾಹಿತಿ, ತುರ್ತು ಸಂದರ್ಭದಲ್ಲಿ 080-26709689 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯಿಂದ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.

    ಇತ್ತೀಚೆಗೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಭಕ್ತರು ಶಬರಿಮಲೆಯ ಅಯ್ಯಪ್ಪನನ್ನು ನೋಡಲು ಹೋದ ವೇಳೆ ಅಲ್ಲಿನ ಪೊಲೀಸರು ತಡೆ ಹಿಡಿದಿದ್ದಾರು. ಜೊತೆಗೆ ಕೊರೊನಾ ವರದಿ ನೆಗೆಟಿವ್ ಬಂದರೂ, ಅಯ್ಯಪ್ಪನ ಬೆಟ್ಟಕ್ಕೆ ಹೋಗಲು ಬಿಟ್ಟಿಲ್ಲ. ತಲಾ 625 ರೂ. ಪಡೆದು ನೆಗೆಟಿವ್ ರಿಪೋರ್ಟ್ ನೀಡುವ ಪೋಲಿಸರ ವಿರುದ್ಧ ಭಕ್ತರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.

    ಕೇರಳ ಪೊಲೀಸರ ಈ ವರ್ತನೆಯಿಂದ ಕರ್ನಾಟಕ ಭಕ್ತರು ಕಂಗಾಲಾಗಿದ್ದರು. ಅಲ್ಲಿನ ವೈದ್ಯರು ಈ ವರದಿ ಆಗುತ್ತೆ ಅಂದರೂ ಪೊಲೀಸರು ಮಾತ್ರ ಆಗಲ್ಲ ಎಂದು ಕಿರಿಕಿರಿ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಕರ್ನಾಟಕ ರಾಜ್ಯದ ಉನ್ನತ ಅಧಿಕಾರಿಗಳು ಪ್ರವಾಸೋದ್ಯಮ ಹಾಗೂ ಮುಜರಾಯಿ ಸಚಿವರು ಕೇರಳ ರಾಜ್ಯದ ಅಧಿಕಾರಿಗಳ ಜೊತೆಗೆ ಮಾತನಾಡಿ ಕನ್ನಡದ ಭಕ್ತರಿಗೆ ಆಗುತ್ತಿರುವ ಕಿರಿಕಿರಿಯನ್ನು ಹಾಗೂ ತೊಂದರೆಯನ್ನು ತಪ್ಪಿಸಬೇಕು ಎಂದು ಭಕ್ತರು ಮನವಿ ಮಾಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು.

  • ಶಬರಿಮಲೆಗೆ ಹೋಗುವ ಭಕ್ತರಿಗೆ ಮಾರ್ಗಸೂಚಿ ಬಿಡುಗಡೆ

    ಶಬರಿಮಲೆಗೆ ಹೋಗುವ ಭಕ್ತರಿಗೆ ಮಾರ್ಗಸೂಚಿ ಬಿಡುಗಡೆ

    ಬೆಂಗಳೂರು/ತಿರುವನಂತಪುರಂ: ಶಬರಿ ಮಲೆ ದೇವಸ್ಥಾನಕ್ಕೆ ಹೋಗುವ ಭಕ್ತರಿಗಾಗಿ ಕೇರಳ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಏಳು ಮಾರ್ಗ ಸೂಚಿಗಳನ್ನು ಒಳಗೊಂಡ ಪ್ರಕಟಣೆಯನ್ನು ಧಾರ್ಮಿಕ ದತ್ತಿ ಇಲಾಖೆ ಕನ್ನಡದಲ್ಲೇ  ಬಿಡುಗಡೆ ಮಾಡಿದೆ.

    ಶಬರಿಮಲೆ ವೆಬ್ ಸೈಟ್ ನಲ್ಲಿ ನೊಂದಾಯಿಸಿಕೊಂಡು ಅನುಮತಿ ಪಡೆದ ಭಕ್ತರಿಗಷ್ಟೆ ಅವಕಾಶ ನೀಡಲಾಗುತ್ತದೆ. ಪ್ರತಿದಿನ 1 ಸಾವಿರ ಭಕ್ತರಿಗೆ ವಾರಾಂತ್ಯದಲ್ಲಿ 2 ಸಾವಿರ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ದೇವಸ್ಥಾನ ಭೇಟಿಯ 48 ಗಂಟೆ ಅವಧಿಗೆ ಮೊದಲು ಕೋವಿಡ್ ಟೆಸ್ಟ್ ಮಾಡಿಸಿದ ಸರ್ಟಿಫಿಕೇಟ್ ಹೊಂದುವುದು ಕಡ್ಡಾಯ. 10 ವರ್ಷದ ಒಳಗಿನ ಮಕ್ಕಳು 60-65 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಅನಾರೋಗ್ಯದಿಂದ ನಳಲುತ್ತಿರುವವರಿಗೆ ಪ್ರವೇಶ ನಿರಾಕರಣೆ. ಇದನ್ನೂ ಓದಿ: 2 ಗ್ರಾಂ 900 ಮಿಲಿ ಚಿನ್ನದಲ್ಲಿ ಅರಳಿದ ಶಬರಿಮಲೆ ದೇವಾಲಯ

    ಬಿಪಿಎಲ್ ಕಾರ್ಡ್ ಅಥವಾ ಆಯುಷ್ಮಾನ್ ಕಾರ್ಡ್ ಹೊಂದಿದ್ದರೆ ಅದನ್ನು ಜೊತೆಗೆ ಕೊಂಡೊಯ್ಯಬೇಕು. ತುಪ್ಪದ ಅಭಿಷೇಕ, ಪಂಪಾ ನದಿಯಲ್ಲಿ ಸ್ನಾನ ಹಾಗೂ ರಾತ್ರಿ ಉಳಿದುಕೊಳ್ಳುವುದು ಯಾವುದಕ್ಕೂ ಅವಕಾಶ ಇಲ್ಲ. ಎರುಮೆಲು ಮತ್ತು ವೇದಸಾರಿಕ್ಕರ ಎರಡು ಮಾರ್ಗದಲ್ಲಷ್ಟೆ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.

  • ಜೂನ್ 14ರಿಂದ ಅಯ್ಯಪ್ಪನ ದರ್ಶನ ಇಲ್ಲ: ತಿರುವಾಂಕೂರು ದೇವಸ್ವಂ ಮಂಡಳಿ ಸ್ಪಷ್ಟನೆ

    ಜೂನ್ 14ರಿಂದ ಅಯ್ಯಪ್ಪನ ದರ್ಶನ ಇಲ್ಲ: ತಿರುವಾಂಕೂರು ದೇವಸ್ವಂ ಮಂಡಳಿ ಸ್ಪಷ್ಟನೆ

    ತಿರುವನಂತಪುರಂ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಸದ್ಯ ತೆರೆಯದಿರಲು ನಿರ್ಧರಿಸಿದೆ. ಇಂದು ನಡೆದ ಮಹತ್ವದ ಸಭೆ ಬಳಿಕ ಈ ನಿರ್ಧಾರವನ್ನು ಕೇರಳದ ದೇವಸ್ವಂ ಖಾತೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಪ್ರಕಟಿಸಿದ್ದಾರೆ.

    ಜೂನ್ 14ರಿಂದ ಮಾಸಿಕ ಪೂಜೆ ಆರಂಭವಾಗಬೇಕಿದ್ದು, ದೇವಸ್ಥಾನ ತೆರೆಯುವ ಸಂಬಂಧ ತಿರುವಾಂಕೂರು ದೇವಸ್ವಂ ಮಂಡಳಿ ಸಭೆ ನಡೆಸಿತು. ಈ ಸಭೆಯಲ್ಲಿ ಕೇರಳದ ದೇವಸ್ವಂ ಖಾತೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಸೇರಿದಂತೆ ಎಲ್ಲ ಅರ್ಚಕರು ಭಾಗಿಯಾಗಿದ್ದರು.

    ಭಾರತ ಅನ್‍ಲಾಕ್ ಬಳಿಕ ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಷರತ್ತುಗಳೊಂದಿಗೆ ಅವಕಾಶ ನೀಡಿತ್ತು. ಈ ಹಿನ್ನೆಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆಯುವ ಸಂಬಂಧ ಚರ್ಚೆ ನಡೆಸಲಾಯಿತು. ಜೂನ್ 14ರಿಂದ ಶಬರಿಮಲೆಯಲ್ಲಿ ಮಾಸಿಕ ಪೂಜೆ ನಡೆಸಬೇಕಿತ್ತು. ಈ ಪೂಜೆ ನಡೆದರೆ ಕೇವಲ ಕೇರಳ ಮಾತ್ರವಲ್ಲದೆ ದೇಶದ ಹಲವು ಭಾಗಗಳಿಂದ ಭಕ್ತಾಧಿಗಳು ಆಗಮಿಸುತ್ತಾರೆ. ಶಬರಿಮಲೈ ದೇವಸ್ಥಾನದಲ್ಲಿ ಮಾರ್ಗಸೂಚಿಗಳ ಪಾಲನೆ ಕಷ್ಟ. ಇದರಿಂದ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಯಿತು.

    ಈ ಹಿನ್ನೆಲೆಯಲ್ಲಿ ಶಬರಿಮಲೈ ದೇವಸ್ಥಾನ ತೆರೆಯದಿರಲು ಮತ್ತು ತಿಂಗಳ ಪೂಜೆಗೆ ಭಕ್ತಾದಿಗಳಿಗೆ ಅವಕಾಶ ನೀಡದರಿಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರ ಜೊತೆಗೆ ದೇವಸ್ಥಾನ ಉತ್ಸವ ರದ್ದು ಮಾಡಲು ಕೂಡಾ ಒಮ್ಮತದ ತಿರ್ಮಾನ ತೆಗೆದುಕೊಳ್ಳಲಾಗಿದೆ.

  • ಶಬರಿಮಲೆಗೂ ತಟ್ಟಿದ ಕೊರೊನಾ ಬಿಸಿ- ದೇವಸ್ಥಾನಕ್ಕೆ ಬರದಂತೆ ಆಡಳಿತ ಮಂಡಳಿ ಸೂಚನೆ

    ಶಬರಿಮಲೆಗೂ ತಟ್ಟಿದ ಕೊರೊನಾ ಬಿಸಿ- ದೇವಸ್ಥಾನಕ್ಕೆ ಬರದಂತೆ ಆಡಳಿತ ಮಂಡಳಿ ಸೂಚನೆ

    ತಿರುವನಂತಪುರಂ: ಕೊರೊನಾ ವೈರಸ್ ಕೇರಳದಲ್ಲಿ ಸ್ವಲ್ಪ ವೇಗವಾಗಿಯೇ ಹರಡುತ್ತಿದ್ದು, ನಿನ್ನೆಯಷ್ಟೇ 12ಜನರಲ್ಲಿ ಕಾಣಿಸಿಕೊಂಡಿದ್ದ ಮಹಾಮಾರಿ ಇಂದು 19 ಜನರಲ್ಲಿ ಪತ್ತೆಯಾಗಿದೆ. ಹೀಗಾಗಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಬರಬೇಡಿ ಎಂದು ಶಬರಿಮಲೆ ಆಡಳಿತ ಮಂಡಳಿ ಭಕ್ತರಿಗೆ ಮನವಿ ಮಾಡಿದೆ.

    ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಬರುವುದನ್ನು ಕೆಲವು ದಿನಗಳ ಕಾಲ ನಿಲ್ಲಿಸಿ, ಸಾರ್ವಜನಿಕ ಸಭೆಗಳನ್ನ ಒಳಗೊಂಡ ಹಬ್ಬಗಳಲ್ಲಿ ಭಾಗಿಯಾಗಬಾರದು ಎಂದು ದೇವಸ್ವಂ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ವಾಸು ಭಕ್ತರಲ್ಲಿ ಮನವಿ ಮಾಡಿದ್ದಾರೆ.

    ಶುಕ್ರವಾರದಿಂದ ತಿಂಗಳ ಪೂಜೆ ಆರಂಭವಾಗಲಿದೆ. ಇಂದಿನಿಂದ ಮಾರ್ಚ್ 31ರವರೆಗೆ ಕೇರಳದಲ್ಲಿ ಸಿನಿಮಾ ಥಿಯೇಟರ್‍ಗಳು ಬಂದ್ ಆಗಲಿವೆ. ಕೊಚ್ಚಿಯಲ್ಲಿ ನಡೆದ ವಿವಿಧ ಮಲಯಾಳಂ ಸಿನಿಮಾ ಸಂಸ್ಥೆಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಇಂದಿನಿಂದ ಕೇರಳದಲ್ಲಿ ಸಿನಿಮಾ ಪ್ರದರ್ಶನಗಳು ನಡೆಯುವುದಿಲ್ಲ. ಕೊರೊನಾ ವೈರಸ್ ಭೀತಿ ಹಿನ್ನೆಲೆ ಕೇರಳದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ.

    ಮಹಾಮಾರಿ ಕೊರೊನಾ ದೇಶಾದ್ಯಂತ ವ್ಯಾಪಿಸುತ್ತಿದ್ದು, ಸೋಂಕಿತರ ಸಂಖ್ಯೆ 61ಕ್ಕೆ ಹೆಚ್ಚಿದೆ. ಬೆಂಗಳೂರಲ್ಲಿ ನಾಲ್ವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಕೊರೋನಾ ಎಮೆರ್ಜೆನ್ಸಿ ಸೃಷ್ಟಿಯಾಗಿದೆ. ಹೀಗಾಗಿ ಇನ್ನೊಂದು ವಾರ ರಾಜ್ಯದಲ್ಲೂ ಸಿನಿಮಾ ಪ್ರದರ್ಶನ ಬಂದ್ ಸಾಧ್ಯತೆ ಇದೆ. ಮಾರ್ಚ್ 16ರವರೆಗೆ ಥಿಯೇಟರ್ ಬಂದ್ ಮಾಡುವ ನಿರೀಕ್ಷೆ ಇದೆ. ಕೇರಳದಲ್ಲಿ ಇಂದಿನಿಂದಲೇ ಥಿಯೇಟರ್‍ಗಳನ್ನು ಬಂದ್ ಮಾಡಲಾಗಿದೆ. ಕೊರೊನಾ ಭಯಕ್ಕೆ ಜನ ಮನೆಯಿಂದ ಹೊರಬರುತ್ತಿಲ್ಲ. ಹೀಗಾಗಿ ದೇವಸ್ಥಾನಗಳಲ್ಲೂ ಭಕ್ತರ ಸಂಖ್ಯೆ ಇಳಿಮುಖವಾಗಿದ್ದು, ಬಸ್, ಟ್ಯಾಕ್ಸಿಗಳು ಖಾಲಿ ಖಾಲಿ ಎನ್ನುವಂತಾಗಿದೆ.

  • ಶಬರಿಮಲೆಯಲ್ಲಿ ಮಿಸ್- ಊರಿಗೆ ಹಿಂದಿರುಗಿದ 2 ಗಂಟೆಯಲ್ಲೇ ಪರ್ಸ್ ಪತ್ತೆ

    ಶಬರಿಮಲೆಯಲ್ಲಿ ಮಿಸ್- ಊರಿಗೆ ಹಿಂದಿರುಗಿದ 2 ಗಂಟೆಯಲ್ಲೇ ಪರ್ಸ್ ಪತ್ತೆ

    – ಶಬರಿಮಲೆಯಲ್ಲಿ ಕಳೆದು ಹೋದ ಪರ್ಸ್ ಮಂಗ್ಳೂರಲ್ಲಿ ಪ್ರತ್ಯಕ್ಷ
    – ಅಯ್ಯಪ್ಪನ ಮಹಿಮೆಗೆ ಶರಣಾದ ಭಕ್ತ

    ಮಂಗಳೂರು: ಶಬರಿಮಲೆಯ ಅಯ್ಯಪ್ಪನ ಸನ್ನಿಧಾನದಲ್ಲಿ ಕಳೆದು ಹೋಗಿದ್ದ ಭಕ್ತರೊಬ್ಬರ ಪರ್ಸ್ ಮಂಗಳೂರಿನಲ್ಲಿ ಸಿಕ್ಕಿರುವ ಅಪರೂಪದ ಘಟನೆ ನಡೆದಿದೆ.

    ಮಂಗಳೂರಿನ ಕುಂಜತ್ತಬೈಲ್ ನಿವಾಸಿ ದೇವರಾಜ್ ಅಮೀನ್, ವರ್ಷದ ಪ್ರತಿ ತಿಂಗಳೂ ಶಬರಿಮಲೆ ಯಾತ್ರೆ ಮಾಡುತ್ತಾರೆ. ಅದರಂತೆ ಕಳೆದ ಮಕರ ಸಂಕ್ರಾಂತಿಯಂದು ತನ್ನ ಶಿಷ್ಯ ವೃಂದದ ಜೊತೆಗೆ ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಮಾಡುವ ವೇಳೆ 7,500 ರೂಪಾಯಿ ಇದ್ದ ಪರ್ಸ್ ಕಳೆದು ಹೋಗಿತ್ತು.

    ಭಾರೀ ಜನಸಂದಣಿಯ ನಡುವೆ ತನ್ನಲ್ಲಿದ್ದ ಪರ್ಸ್ ಎಲ್ಲಿ ಕಳೆದು ಹೋಗಿರಬಹುದೆಂದು ದುಃಖಿಸಿದರು. ಪ್ರಸಾದ ತೆಗೆದುಕೊಳ್ಳಲೂ ಹಣವಿಲ್ಲದೆ ರೋಧಿಸಿದರು. ಸನ್ನಿಧಾನದಲ್ಲಿ ಪರಮ ಪಾವನ ಮೂರ್ತಿಯ ಎದುರು ಕಣ್ಣೀರಿಟ್ಟರು. ಪವಿತ್ರ ಕ್ಷೇತ್ರದಲ್ಲೇ ಹಣ ಕಳೆದುಕೊಂಡಿರುದರಿಂದ ಇನ್ಮುಂದೆ ಈ ಶಬರಿಮಲೆಗೆ ಬರೋದಿಲ್ಲ ಎಂದು ದೇವರ ಎದುರೇ ಕೋಪ ತೋಡಿಕೊಂಡರು.

    ಹೀಗೆ ಅತ್ಯಂತ ದುಃಖದಿಂದಲೇ ಶಬರಿಮಲೆ ಯಾತ್ರೆ ಮುಗಿಸಿ ಬಂದ ದೇವರಾಜ್ ಅಯ್ಯಪ್ಪನಲ್ಲಿ ಮತ್ತೆ ಮತ್ತೆ ಬೇಡಿಕೊಂಡರು. ಪವಾಡವೆಂಬಂತೆ ಊರಿಗೆ ಬಂದ ಎರಡೇ ಗಂಟೆಯಲ್ಲಿ ದೇವರಾಜರ ಮೊಬೈಲ್‍ಗೆ ಅಪರಿಚಿತ ನಂಬರ್ ನಿಂದ ಕರೆ ಬಂದಿದೆ. ಮಂಗಳೂರಿನ ಕೊಟ್ಟಾರದ ಅಬ್ಬಕ್ಕನಗರದಿಂದ ಶಬರಿಮಲೆಗೆ ಹೋಗಿದ್ದ ಜಯಪ್ರಕಾಶ್‍ಗೆ ದೇವರಾಜ್ ಪರ್ಸ್ ಸನ್ನಿಧಾನದಲ್ಲಿ ಸಿಕ್ಕಿದ್ದು, ಸುರಕ್ಷಿತವಾಗಿ ಅದನ್ನು ಊರಿಗೆ ಬಂದು ಒಪ್ಪಿಸಿದ್ದಾರೆ.

    ಲಕ್ಷಾಂತರ ಜನರಿರುವ ಸ್ಥಳದಲ್ಲಿ ಕಳೆದು ಹೋದ ಪರ್ಸ್ ಮರಳಿ ಸಿಕ್ಕಿರುವುದರಿಂದ ದೇವರಾಜ್ ತಾನು ನಂಬುವ ಅಯ್ಯಪ್ಪನ ಮಹಿಮೆಗೆ ಶರಣಾದರು.

  • ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ – ಜನವರಿ 17 ಕ್ಕೆ ವಕೀಲರ ಸಭೆ

    ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ – ಜನವರಿ 17 ಕ್ಕೆ ವಕೀಲರ ಸಭೆ

    -ಮೂರು ವಾರಕ್ಕೆ ವಿಚಾರಣೆ ಮುಂದೂಡಿಕೆ

    ನವದೆಹಲಿ: ಶಬರಿಮಲೆ ಪ್ರಕರಣದಲ್ಲಿರುವ ವಕೀಲರ ಸಭೆ ಕರೆದು ವಿಚಾರಣೆ ಸಂಬಂಧ ಅಂತಿಮ ತಯಾರಿ ಮಾಡಿಕೊಳ್ಳುವಂತೆ ಸುಪ್ರೀಂಕೋರ್ಟ್ ಪ್ರಧಾನ ಕಾರ್ಯದರ್ಶಿಗೆ ಸಿಜೆಐ ಎಸ್.ಎ ಬೋಬ್ಡೆ ಸೂಚಿಸಿದ್ದಾರೆ.

    ಶಬರಿಮಲೆ ತೀರ್ಪು ಮರು ಪರಿಶೀಲಿಸುವಂತೆ ಸಲ್ಲಿಸಿದ್ದ ಅರ್ಜಿಗಳನ್ನು ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ, ಜನವರಿ 17ಕ್ಕೆ ವಕೀಲರ ಸಭೆ ದಿನಾಂಕ ನಿಗದಿಪಡಿಸಿ, ಮೂರು ವಾರಕ್ಕೆ ವಿಚಾರಣೆ ಮುಂದೂಡಿದೆ.

    ಸಿಜೆಐ ಎಸ್.ಎ ಬೋಬ್ಡೆ ನೇತೃತ್ವದ ಒಂಬತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಶಬರಿಮಲೆ ದೇವಸ್ಥಾನ ಪರ ವಾದ ಮಂಡಿಸಿದ ವಕೀಲರು, ಮಹಿಳೆಯರ ಪ್ರವೇಶ ಸಂಬಂಧ ಈ ಹಿಂದೆ ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್ ಪರಿಶೀಲಿಸಬೇಕು ಎಂದು ಮನವಿ ಮಾಡಿದರು. ಆದರೆ ಇದಕ್ಕೆ ನಿರಾಕರಿಸಿದ ಸಿಜೆಐ, ನಾವು ಶಬರಿಮಲೆ ಆದೇಶವನ್ನು ಇಲ್ಲಿ ಪರಿಶೀಲಿಸುವುದಿಲ್ಲ. ಬದಲಿಗೆ ಈ ಪ್ರಕರಣದಲ್ಲಿ ಉದ್ಭವವಾಗಿರುವ ಏಳು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು. ಇದಕ್ಕೆ ಸಂಬಂಧಿತ ವಿಚಾರಣೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಶಬರಿಮಲೆಗೆ ಹೋಗ್ತಿದ್ದ ಮಹಿಳೆ ಮೇಲೆ ಪೆಪ್ಪರ್ ಸ್ಪ್ರೇ

    ಈ ವೇಳೆ ಮಧ್ಯ ಪ್ರವೇಶಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಪ್ರಕರಣದಲ್ಲಿ ಮತ್ತಷ್ಟು ವಿಚಾರಗಳು ಸೇರ್ಪಡೆಯಾಗಬೇಕು ಎಂದು ಮನವಿ ಮಾಡಿಕೊಂಡರು. ಇದಕ್ಕೆ ಹೆಚ್ಚುವರಿಯಾಗಿ ವಾದ ಮಂಡಿಸಿದ ವಕೀಲ ಅಭಿಷೇಕ ಮನುಸಿಂಘ್ವಿ, ಈ ಪ್ರಕರಣವನ್ನ ಸಾಕಷ್ಟು ಕಠಿಣ ಮತ್ತು ವಿಸತರಿಸಲಾಗಿದೆ. ಇದನ್ನು ಕೊಂಚ ಸರಳಿಕರಿಸಬೇಕಿದೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ಸರ್ಕಾರ ರಕ್ಷಣೆ ನೀಡದಿದ್ರೂ ಶಬರಿಮಲೆಗೆ ಭೇಟಿ ನೀಡ್ತೇವೆ- ತೃಪ್ತಿ ದೇಸಾಯಿ

    ಈ ವಾದಗಳನ್ನು ಆಲಿಸಿದ ಸಿಜೆಐ ನೇತೃತ್ವದ ಪೀಠ, ಜನವರಿ 17ರಂದು ಪ್ರಕರಣ ವಕೀಲರೊಂದಿಗೆ ಪ್ರಧಾನ ಕಾರ್ಯದರ್ಶಿ ಜೊತೆ ಸಭೆಗೆ ದಿನಾಂಕ ನಿಗದಿ ಪಡಿಸಿದರು. ಪ್ರಕರಣಕ್ಕೆ ಹೆಚ್ಚುವರಿ ಅಂಶಗಳ ಸೇರ್ಪಡೆ ಮಾಡುವ ಬಗ್ಗೆ ವಿಚಾರಣೆ ನಡೆಯಬೇಕಿರುವ ಅಂಶಗಳನ್ನು ವಿಂಗಡಿಸುವುದು, ಅರ್ಜಿದಾರ ಪರ ವಕೀಲರಿಗೆ ವಾದ ಮಂಡಿಸಲು ಸಮಯ ನಿಗದಿ ಮಾಡುವುದು, ಯಾವ ಅಂಶಗಳನ್ನು ಯಾವ ವಕೀಲರು ವಾದ ಮಂಡಿಸುತ್ತಾರೆ ಎನ್ನುವುದನ್ನು ಸಭೆಯಲ್ಲಿ ನಿಗದಿಪಡಿಸಿ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದರು. ಇದನ್ನೂ ಓದಿ: ಶಬರಿಮಲೆ ಪ್ರವೇಶಿಸಿದ ಮಹಿಳೆಯರಿಗೆ ಮ್ಯಾಗಜಿನಲ್ಲಿ ವಿಶೇಷ ಗೌರವ- ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

    ಧಾರ್ಮಿಕ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ನನ್ನ ಧರ್ಮ ಯಾವುದು ಮತ್ತು ಅದನ್ನು ಹೇಗೆ ಅನುಸರಿಸಬೇಕು ಎಂದು ಹೇಳುವುದು ನ್ಯಾಯಾಲಯದ ಕೆಲಸವಲ್ಲ ಎಂದು ಹಿರಿಯ ವಕೀಲ ರಾಜೀವ್ ಧವನ್ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ನಿಮ್ಮ ಆಕ್ಷೇಪಣೆಯಲ್ಲಿ ಹುರಿಳಿಲ್ಲ ಎಂದು ತಳ್ಳಿಹಾಕಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಬಹುಪತ್ನಿತ್ವದ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತದೆಯೇ ಎಂದು ಸ್ಪಷ್ಟನೆ ಕೇಳಿದರು ಇದಕ್ಕೆ ಉತ್ತರಿಸಿದ ಪೀಠ ನವೆಂಬರ್ 14 ರ ಆದೇಶದಲ್ಲಿ ಉಲ್ಲೇಖಿಸಿದ ಪ್ರಶ್ನೆಗಳನ್ನ ಮಾತ್ರ ವಿಚಾರಣೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

  • ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರು ಹೋಗ್ಬಾರ್ದು: ಯೇಸುದಾಸ್

    ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರು ಹೋಗ್ಬಾರ್ದು: ಯೇಸುದಾಸ್

    – ಅಯ್ಯಪ್ಪ ಅಲ್ಲ, ಭಕ್ತರ ಮನಸ್ಸು ವಿಚಲಿತವಾಗುತ್ತೆ

    ಕೊಚ್ಚಿ: ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ಮಹಿಳೆಯರು ಹೋಗ ಬೇಕಾ? ಬೇಡ್ವಾ? ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಹೀಗಿರುವಾಗ, ಮಣಿಕಂಠನ ದರ್ಶನಕ್ಕೆ ಮಹಿಳಾ ಭಕ್ತರು ಹೋಗಬಾರದು ಎಂದು ಖ್ಯಾತ ಗಾಯಕ ಕೆಜೆ ಯೇಸುದಾಸ್ ಹೇಳಿದ್ದಾರೆ.

    ಸ್ವತಃ ಅಯ್ಯಪ್ಪನ ಭಕ್ತರಾಗಿರುವ ಯೇಸುದಾಸ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಮಹಿಳೆಯರು ಅಯ್ಯಪ್ಪನ ದರ್ಶನಕ್ಕೆ ಹೋಗಬಾರದು ಎಂದಿದ್ದಾರೆ. ಅಲ್ಲದೆ ಇದಕ್ಕೆ ಕಾರಣವನ್ನೂ ನೀಡಿದ್ದಾರೆ. ಮಹಿಳೆಯರು ದೇವಾಲಯಕ್ಕೆ ಆಗಮಿಸುವುದರಿಂದ ಭಕ್ತರ ಮನಸ್ಸು ವಿಚಲಿತವಾಗಲಿದೆ. ಅಯ್ಯಪ್ಪನ ಸನ್ನಿಧಾನಕ್ಕೆ ಸುಂದರ ಯುವತಿಯೊಬ್ಬಳು ಆಧುನಿಕ ಯುಗದ ಉಡುಗೆ ಧರಿಸಿ ಹೋದರೆ ಅಯ್ಯಪ್ಪ ಕಣ್ತೆರೆದು ನೋಡಲ್ಲ. ಆದರೆ, ಅಯ್ಯಪ್ಪನ ಭಕ್ತರು ಆಕೆಯನ್ನು ನೋಡುತ್ತಾರೆ. ಇದು ಸರಿಯಲ್ಲ ಎಂದಿದ್ದಾರೆ.

    ದೇಗುಲಕ್ಕೆ ಆಗಮಿಸುವ ಭಕ್ತರ ಉದ್ದೇಶವೇ ಬದಲಾಗಲಿದೆ. ಹೀಗಾಗಿ, ಮಹಿಳೆಯರು ಅಯ್ಯಪ್ಪನ ದೇಗುಲಕ್ಕೆ ಹೋಗಬಾರದು. ಅಯ್ಯಪ್ಪ ಭಕ್ತರನ್ನು ಪ್ರಚೋದಿಸಬೇಡಿ ಎಂಬುದಷ್ಟೇ ನನ್ನ ಮನವಿ ಎಂದು ಹೇಳಿದರು. ಅಂದಹಾಗೇ ಶಬರಿಮಲೆಯಲ್ಲಿ ನಿತ್ಯ ದೇಗುಲದ ಬಾಗಿಲು ಮುಚ್ಚುವ ಸಂದರ್ಭದಲ್ಲಿ ಯೇಸುದಾಸ್ ಹಾಡಿರುವ ‘ಹರಿವರಾಸನಂ’ ಹಾಡು ಧ್ವನಿವರ್ಧಕದಲ್ಲಿ ಕೇಳಿಸುತ್ತದೆ.

  • ಶಬರಿಮಲೆಗೆ ಪಾದಯಾತ್ರೆಯ ಮೂಲಕ ತೆರಳುವ ಅಯ್ಯಪ್ಪ ವೃತಧಾರಿಗಳಿಗೆ ಭಕ್ತಿ ಗೌರವಾರ್ಪಣೆ

    ಶಬರಿಮಲೆಗೆ ಪಾದಯಾತ್ರೆಯ ಮೂಲಕ ತೆರಳುವ ಅಯ್ಯಪ್ಪ ವೃತಧಾರಿಗಳಿಗೆ ಭಕ್ತಿ ಗೌರವಾರ್ಪಣೆ

    ಮಂಗಳೂರು: ಶಬರಿಮೆಯಾತ್ರೆಗೆ ತೆರಳಲು ಎಲ್ಲೆಡೆ ಅಯ್ಯಪ್ಪ ವೃತದಾರಿಗಳು ಮಾಲಾಧಾರಣೆ ಮಾಡಿದ್ದು, ಮಕರ ಸಂಕ್ರಮಣಕ್ಕೆ ಶಬರಿಮಲೆಗೆ ತೆರಳಲು ತಯಾರಿ ನಡೆಸುತ್ತಿದ್ದಾರೆ.

    ರಾಜ್ಯದ ಕರಾವಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪ ವೃತದಾರಿಗಳು ಮಣಿಕಂಠನ ದರ್ಶನ ಪಡೆಯಲು ತೆರಳುತ್ತಾರೆ. ಅದರಲ್ಲೂ ಕೆಲವು ಅಯ್ಯಪ್ಪ ವೃತಧಾರಿಗಳು ಪಾದಯಾತ್ರೆಯ ಮೂಲಕ ಶಬರಿಮಲೆ ಯಾತ್ರೆ ನಡೆಸುತ್ತಾರೆ. ಮಂಗಳೂರಿನ ಮೂವರು ಅಯ್ಯಪ್ಪ ವೃತಧಾರಿಗಳು ಕೊಲ್ಲೂರಿನಿಂದ ಶಬರಿಮಲೆಗೆ ಪಾದಯಾತ್ರೆ ಆರಂಭಿಸಿದ್ದಾರೆ. ಮಂಗಳೂರಿನ ವಿಜಯ್ ಪಂಡಿತ್ ಹೌಸ್, ನಾಗೇಶ್ 21ನೇ ವರ್ಷದ ಮಾಲಾಧಾರಣೆ ಹಾಗೂ ಪುರುಷೋತ್ತಮ ಕಲ್ಲಾಪು 21ನೇ ವರ್ಷದ ಯಾತ್ರಾಧಾರಿಯಾಗಿದ್ದಾರೆ. ಈ ಮೂವರು ಕಳೆದ ಕೆಲ ದಿನದ ಹಿಂದೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಸನ್ನಿಧಿಯಾ ಕೊಡಚಾದ್ರಿ ಬೆಟ್ಟದಿಂದ ಇರುಮುಡಿ ಹೊತ್ತು ಪಾದಯಾತ್ರೆ ಆರಂಭಿಸಿದ್ದು, ಇಂದು ಮಂಗಳೂರು ತಲುಪಿದ್ದಾರೆ.

    ಮಂಗಳೂರಿನ ತೊಕ್ಕೊಟ್ಟು ಸೂರ್ಯ ಗದ್ದೆಯ ಅಯ್ಯಪ್ಪ ಸ್ವಾಮಿಗಳ ಬಿರಿಯಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಳ್ಳಾಲ ಘಟಕದಿಂದ ಭಕ್ತಿಯಿಂದ ಗೌರವಿಸಲಾಯಿತು. ಅಯ್ಯಪ್ಪ ಸೇವಾ ಸಮಾಜಂನ ಜಿಲ್ಲಾ ಕೋಶಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ವಲಯಾದ್ಯಕ್ಷ ಆನಂದ ಶೆಟ್ಟಿ ತೊಕ್ಕೊಟ್ಟು, ಮಾಧ್ಯಮ ಸಂಚಾಲಕ ಪ್ರವೀಣ್.ಎಸ್.ಕುಂಪಲ, ವಿಜಿಟಿಯ ರಜನೀಶ್ ನಾಯಕ್, ಗುರುಸ್ವಾಮಿಗಳಾದ ಭರತ್ ಸ್ವಾಮಿ ಒಂಬತ್ತುಕೆರೆ, ಮಹಾಬಲ ಸ್ವಾಮಿ ಕುಂಪಲ, ಸೂರ್ಯ ಸ್ವಾಮಿ ಕುಂಪಲ, ಜಯಂತ್ ಸ್ವಾಮಿ ಮತ್ತು ಟಿ.ಸಿ.ರೋಡ್ ಸೂರ್ಯ ಬಿರಿಯ ಸ್ವಾಮಿಗಳು ಉಪಸ್ಥಿತರಿದ್ದರು. ಈ ಮೂವರು ಶಬರಿಮಲೆ ಯಾತ್ರಾರ್ಥಿಗಳು ಇಲ್ಲಿಂದ ಮುಂದೆ ಪಾದಯಾತ್ರೆ ಆರಂಭಿಸಿದ್ದು, ಸುಮಾರು 450 ಕಿಲೋಮೀಟರ್ ನಷ್ಟು ಬರಿಗಾಲಲ್ಲೇ ಸಾಗಿ ಮಕರ ಜ್ಯೋತಿ ಸಂದರ್ಭದಲ್ಲಿ ಶಬರಿ ಮಲೆ ತಲುಪಲಿದ್ದಾರೆ.

  • ಶಬರಿಮಲೆ ಮಾತ್ರ ಯಾಕೆ? ಮಸೀದಿಗೆ ಮಹಿಳಾ ಪ್ರವೇಶವೂ ಚರ್ಚೆ ಆಗಲಿ- ಪೇಜಾವರ ಶ್ರೀ

    ಶಬರಿಮಲೆ ಮಾತ್ರ ಯಾಕೆ? ಮಸೀದಿಗೆ ಮಹಿಳಾ ಪ್ರವೇಶವೂ ಚರ್ಚೆ ಆಗಲಿ- ಪೇಜಾವರ ಶ್ರೀ

    – ಹುಲಿ ರಾಷ್ಟ್ರ ಪ್ರಾಣಿಯಾಗಿದ್ದಕ್ಕೆ ಭಯೋತ್ಪಾದನೆ ಹೆಚ್ಚಾಗಿದೆ

    ಉಡುಪಿ: ಶಬರಿಮಲೆ ಮಾತ್ರ ಯಾಕೆ? ಮಸೀದಿಗೆ ಮಹಿಳಾ ಪ್ರವೇಶವೂ ಚರ್ಚೆ ಆಗಲಿ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.

    ಉಡುಪಿಯ ಕೃಷ್ಣ ಮಠದಲ್ಲಿ ನಡೆದ ಸಂತ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಶ್ರೀಗಳು, ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಆಗಬೇಕು. ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಜಾರಿಯಾಗಬೇಕು. ಹಿಂದೂ ಸಂತರು ಈ ಬಗ್ಗೆ ಸಭೆ ಸೇರಿ ಚರ್ಚೆ ಮಾಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಗೋವು ತಿನ್ನುವವರು ವೃದ್ಧ ತಂದೆಯನ್ನು ತಿನ್ನಲು ಹೇಸಲ್ಲ: ರಾಮ್ ದೇವ್

    ಇದೇ ವೇಳೆ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವಾಗಿ ಮಾತನಾಡಿದ ಶ್ರೀಗಳು, ಒಂದೆಡೆ ಮಸೀದಿಗೆ ಮಹಿಳೆಯರ ಪ್ರವೇಶವಿಲ್ಲ, ಈ ಬಗ್ಗೆ ಚರ್ಚೆಯಾಗಲ್ಲ. ಶಬರಿಮಲೆಗೆ ಮಹಿಳೆಯರ ಪ್ರವೇಶ ಬೇಕೆಂಬ ಒತ್ತಾಯವಿದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಏಳು ಸದಸ್ಯರ ಪೀಠ ಈ ಬಗ್ಗೆ ಸರಿಯಾಗಿ ತೀರ್ಮಾನ ಮಾಡಲಿದೆ ಎಂದರು.

    ಗೋವು ರಾಷ್ಟ್ರೀಯ ಪ್ರಾಣಿಯಾಗಲಿ:
    ಹುಲಿ ಆತಂಕವಾದದ ಸೂಚಕ. ಹುಲಿ ರಾಷ್ಟ್ರ ಪ್ರಾಣಿಯಾಗಿದ್ದಕ್ಕೆ ಭಯೋತ್ಪಾದನೆ ಹೆಚ್ಚಾಗಿದೆ. ನಮಗೆ ಆತಂಕವಾದ ಬೇಡ ಅನುಕಂಪವಾದ ಬೇಕು. ಹೀಗಾಗಿ ಭಾರತದ ರಾಷ್ಟ್ರ ಪ್ರಾಣಿ ಹುಲಿ ಬದಲು ಗೋವು ಆಗಬೇಕು ಎಂದು ಪೇಜಾವರ ಶ್ರೀಗಳು ಸಲಹೆ ನೀಡಿದ್ದಾರೆ.

    ಗೋವು-ಗಂಗೆಯಿಂದ ಗೋವಿಂದ ಸಂತುಷ್ಟ:
    ರಾಷ್ಟ್ರದಲ್ಲಿ ಗೋಹತ್ಯೆ ನಿಷೇಧವಾಗಬೇಕು, ಗಂಗಾ ಶುದ್ಧೀಕರಣ ಆಗಬೇಕು. ಗೋವು ಹತ್ಯೆ ಮಾನವೀಯತೆಗೆ ಎಸಗುವ ದ್ರೋಹ. ಗಂಗೆ ನಮ್ಮನ್ನು ಶುದ್ಧೀಕರಣ ಮಾಡಬೇಕು, ನಾವು ಗಂಗೆಯನ್ನು ಶುದ್ಧೀಕರಣ ಮಾಡುವಂತೆ ಆಗಿದ್ದು ವಿಪರ್ಯಾಸ ಅಂತ ಕಳವಳ ವ್ಯಕ್ತಪಡಿಸಿದರು. ಈ ಎರಡು ಸಮಸ್ಯೆ ಬಗೆಹರಿದರೆ ಗೋವಿಂದ ಸಂತುಷ್ಟ ಆಗುತ್ತಾನೆ ಎಂದರು.

    ನಮ್ಮ ಪ್ರಧಾನಿ ನರೇಂದ್ರ ಮೋದಿ ದಿಟ್ಟತನದವರು. ಕಾಶ್ಮೀರ, ರಾಮಮಂದಿರ ಸಮಸ್ಯೆ ನಿವಾರಣೆಯಾಯಿತು. ಶೀಘ್ರ ರಾಮಮಂದಿರ ನಿರ್ಮಾಣವಾಗಲಿದೆ. ನಮ್ಮ ರಾಷ್ಟ್ರ ರಾಮರಾಜ್ಯವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.