Tag: Sabarimala

  • ಕೇಂದ್ರದ ಸ್ವಚ್ಛ ಸಾಂಪ್ರದಾಯಿಕ ಸ್ಥಳಗಳ ಯೋಜನೆಯ ಪಟ್ಟಿಯಲ್ಲಿ ಮಂತ್ರಾಲಯ, ಶಬರಿಮಲೆ

    ಕೇಂದ್ರದ ಸ್ವಚ್ಛ ಸಾಂಪ್ರದಾಯಿಕ ಸ್ಥಳಗಳ ಯೋಜನೆಯ ಪಟ್ಟಿಯಲ್ಲಿ ಮಂತ್ರಾಲಯ, ಶಬರಿಮಲೆ

    ನವದೆಹಲಿ: ಕೇರಳದ ಪ್ರಖ್ಯಾತ ಶಬರಿಮಲೆ ಹಾಗೂ ಆಂಧ್ರ ಪ್ರದೇಶದ ರಾಘವೇಂದ್ರ ಸ್ವಾಮಿ ದೇವಸ್ಥಾನವನ್ನು ಸ್ವಚ್ಛ ಸಾಂಪ್ರದಾಯಿಕ ಸ್ಥಳಗಳಾಗಿ ಗುರುತಿಸಲಾಗಿದೆ.

    ಸಾಂಪ್ರದಾಯಿಕ ಸ್ಥಳಗಳಲ್ಲಿ ಶುಚಿತ್ವ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಸ್ವಚ್ಛ ಸಾಂಪ್ರದಾಯಿಕ ಸ್ಥಳಗಳು( ಸಿಪ್) ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಸಿಪ್ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿದೆ. ಯೋಜನೆಯ ಮೂರನೇ ಹಂತದಲ್ಲಿ ಆಯ್ಕೆಯಾಗಿರುವ 10 ಸ್ಥಳಗಳಲ್ಲಿ ಶಬರಿಮಲೆ, ಮಂತ್ರಾಲಯ ಸ್ಥಾನವನ್ನು ಪಡೆದಿದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    2016ರಲ್ಲಿ ಯೋಜನೆ ಶುರುವಾಗಿದ್ದು ಮೊದಲ ಹಂತದಲ್ಲಿ ರಾಜಸ್ಥಾನದ ಅಜ್ಮೀರ್ ದರ್ಗಾ, ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್, ಪಂಜಾಬ್ ನ ಗೋಲ್ಡನ್ ಟೆಂಪಲ್ ಗಳಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಎರಡನೇ ಹಂತದಲ್ಲಿ ಮಧ್ಯಪ್ರದೇಶದ ಮಹಾಕಾಲೇಶ್ವರ್, ತೆಲಂಗಾಣದ ಚಾರ್ ಮಿನಾರ್ ಗಳಲ್ಲಿ ಯೋಜನೆ ಪೂರೈಸಿದ್ದು ಮೂರನೇ ಹಂತವನ್ನು ಉತ್ತರಾಖಂಡ್ ನ ಬದರೀನಾಥದಲ್ಲಿ ಶುರು ಮಾಡಲಾಗಿದೆ.

    ಪ್ರವಾಸಿ ಸ್ಥಳಗಳು ಆಗಿರುವುದರಿಂದ ಎಷ್ಟು ಸಾಧ್ಯವೋ ಅಷ್ಟು ಸ್ಥಳಗಳನ್ನು ಯೋಜನೆಯಲ್ಲಿ ಸೇರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸ್ವಚ್ಛವಾಗಿದ್ದಷ್ಟು ಹೆಚ್ಚು ಪ್ರವಾಸಿಗರನ್ನು ಸ್ಥಳಗಳು ಸೆಳೆಯುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಯೋಜನೆಗೆ 2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಜೊತೆ ಸೇರಿ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದೆ.

    ಮೊದಲ ಹಂತದಲ್ಲಿ ಆಯ್ಕೆಗೊಂಡ ಸ್ಥಳಗಳಲ್ಲಿ ಗುಣಾತ್ಮಕ ಕ್ರಮಗಳನ್ನು ತೆಗೆದುಕೊಂಡು ಒಳಚರಂಡಿ ಮೂಲಸೌಕರ್ಯ, ತ್ಯಾಜ್ಯ ನಿರ್ವಹಣೆ, ಶುದ್ಧ ನೀರು ಘಟಕಗಳು, ಸಾರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿರುವುದನ್ನು ಪರಿಶೀಲಿಸಿದ್ದೇವೆ. ಎರಡನೇ ಹಂತದ ಸ್ಥಳಗಳ ಪರಿಶೀಲನೆಯನ್ನು ಮುಂದಿನ ತಿಂಗಳು ಮಾಡಲಿದ್ದೇವೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ತಿಳಿಸಿದ್ದಾರೆ.

    ಮೂರನೇ ಹಂತದಲ್ಲಿ ಪಶ್ಚಿಮ ಬಂಗಾಳ ಹಜಾಡ್ರ್ವಾರಿ ಅರಮನೆ, ಹರಿಯಾಣದ ಬ್ರಹ್ಮ ಸರೋವರ್, ಉತ್ತರ ಪ್ರದೇಶದ ವಿದುರ್ ಕುಟಿ, ಉತ್ತರಾಖಂಡ್‍ದ ಮನ ಗ್ರಾಮ, ಜಮ್ಮು ಮತ್ತು ಕಾಶ್ಮೀರದ ಪಾಂಗೊಂಗ್ ಸರೋವರ, ಉತ್ತರ ಪ್ರದೇಶದ ನಾಗವಾಸುಕಿ ದೇವಸ್ಥಾನ, ಮಣಿಪುರದ ಇಮಾಕೀಥಲ್ ಮಾರುಕಟ್ಟೆ ಹಾಗೂ ಉತ್ತರಾಖಂಡ್ ನ ಕನ್ವಾಶ್ರಮ್‍ವು ಸೇರಿಕೊಂಡಿದೆ.

  • ಶಬರಿಮಲೆಗೆ ಹೋಗ್ತಿದ್ದೀರಾ? – ಹಾಗಾದ್ರೆ ಈ ಸುದ್ದಿ ಓದಿ ‘ಸನ್ನಿಧಾನ’ದತ್ತ ತೆರಳಿ..!

    ಶಬರಿಮಲೆಗೆ ಹೋಗ್ತಿದ್ದೀರಾ? – ಹಾಗಾದ್ರೆ ಈ ಸುದ್ದಿ ಓದಿ ‘ಸನ್ನಿಧಾನ’ದತ್ತ ತೆರಳಿ..!

    ಶಬರಿಮಲೆ: ನೀವು ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದೀರಾ..? ಹಾಗಿದ್ದರೆ ಸ್ವಲ್ಪ ಎಚ್ಚರ ವಹಿಸಿ, ಸಾಧ್ಯವಾದರೆ ನಿಮ್ಮ ಯಾತ್ರೆಯನ್ನು ಇನ್ನೆರಡು ದಿನ ಮುಂದೂಡೋಕಾಗುತ್ತಾ ನೋಡಿ. ಯಾಕೆಂದರೆ ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಬುಧವಾರ ಉಂಟಾದ ವಾಯುಭಾರ ಕುಸಿತದಿಂದಾಗಿ ಗುರುವಾರ ಬೆಳಗಿನಿಂದ ತಮಿಳುನಾಡು ಹಾಗೂ ಕೇರಳದ ಕೆಲವೆಡೆ ಭಾರೀ ಮಳೆಯಾಗುತ್ತಿದೆ.

    ‘ಓಖಿ’ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು ಕನ್ಯಾಕುಮಾರಿ, ತಿರುವನಂತಪುರ ಹಾಗೂ ಕೊಲ್ಲಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ಜನರು ಮನೆಯಿಂದ ಹೊರ ಬರದಂತೆ ವಿಪತ್ತು ನಿರ್ವಹಣಾ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

    ಚಂಡಮಾರುತದಿಂದಾಗಿ ಶಬರಿಮಲೆ ದೇಗುಲವಿರುವ ಪತ್ತನಂತಿಟ್ಟ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದೆ. ಇಂದು ಬೆಳಗ್ಗೆ ಶಬರಿಮಲೆ ಸುತ್ತಮುತ್ತ ಭಾರೀ ಮಳೆಯಾಗಿದೆ. ಇದರಿಂದಾಗಿ ಪಂಪಾ ನದಿಯಲ್ಲಿ ನೀರಿನ ಹರಿವಿನ ಮಟ್ಟ ಏರಿಕೆಯಾಗಿದೆ. ಪಂಪಾ ನದಿಯಲ್ಲಿ ಯಾರೂ ನೀರಿಗಿಳಿಯಬೇಡಿ ಎಂದು ಈಗಾಗಲೇ ಅಯ್ಯಪ್ಪ ಭಕ್ತರಿಗೆ ಸೂಚನೆ ಹೊರಡಿಸಲಾಗಿದೆ. ಜೊತೆಯಲ್ಲಿ ಪಂಪಾ ನದಿಯ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ.

    ಅಯ್ಯಪ್ಪನ ದರ್ಶನಕ್ಕೆ ಬ್ರೇಕ್!: ಶಬರಿಮಲೆ ಯಾತ್ರಿಕರು ಬೆಟ್ಟ ಪ್ರದೇಶದಲ್ಲಿ ಸಂಜೆ 6ರಿಂದ ಬೆಳಗ್ಗೆ 7 ಗಂಟೆವರೆಗೆ ಯಾವುದೇ ಸಂಚಾರ ಮಾಡಬೇಡಿ. ಶಬರಿಮಲೆಗೆ ಹೋಗಲು ಅರಣ್ಯ ಪ್ರದೇಶದಲ್ಲಿರುವ ಕಾಲು ದಾರಿಯಲ್ಲಿ ರಾತ್ರಿ ವೇಳೆ ಸಂಚರಿಸಬೇಡಿ ಎಂದು ಸರ್ಕಾರ ಮೌಖಿಕ ಸೂಚನೆ ನೀಡಿದೆ. ಮೊಬೈಲ್ ಫೋನ್ ಚಾರ್ಜ್ ಹಾಗೂ ಲೈಟ್ ಗಳಲ್ಲಿ ಬ್ಯಾಟರಿ ಚಾರ್ಜ್ ಫುಲ್ ಆಗಿರುವಂತೆ ನೋಡಿಕೊಳ್ಳಿ.

    ಭಾರೀ ಮಳೆಯಾಗುತ್ತಿದ್ದರೆ ಸನ್ನಿಧಾನದಿಂದ ಬೆಟ್ಟ ಇಳಿಯಬೇಡಿ. ಮರದ ಕೆಳಗೆ ನಿಲ್ಲಬೇಡಿ. ನದಿ ನೀರಿನಲ್ಲಿ ಸ್ನಾನ ಮಾಡುವ ಸಾಹಸಕ್ಕೆ ಇಳಿಯಬೇಡಿ. ಪಂಪಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ನೀರಿನಲ್ಲಿ ಮುಳುಗಿ ಸ್ನಾನ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಪಂಪಾ ನದಿ ಸಮೀಪದ ತ್ರಿವೇಣಿ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಎಲ್ಲಾ ವಾಹನಗಳನ್ನು ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳಾಂತರಿಸಲಾಗಿದೆ. ಶಬರಿಮಲೆ ಯಾತ್ರೆ ವೇಳೆ ಮರದ ರೆಂಬೆ ಮುರಿದು ಬಿದ್ದು ಆಲೆಪ್ಪಿಯ ಅಯ್ಯಪ್ಪ ವ್ರತಧಾರಿ ವಿವೇಕ್ ಎಂಬವರಿಗೆ ಗಾಯವಾಗಿದೆ. ಈ ಕ್ಷಣದವರೆಗೆ ಭಕ್ತರು ಶಬರಿಮಲೆ ದರ್ಶನಕ್ಕೆ ಯಾವುದೇ ರೀತಿಯ ನಿರ್ಬಂಧ ವಿಧಿಸಿಲ್ಲ. ಆದರೆ, ಮಳೆ ಹಿನ್ನೆಲೆಯಲ್ಲಿ ಶಬರಿಮಲೆಗೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. (ಇದನ್ನೂ ಓದಿ:ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರಿಗೆ ಶಾಕಿಂಗ್ ನ್ಯೂಸ್: ಐಸಿಸ್ ಸಂಚು ಏನು ಗೊತ್ತಾ?)

    85 ಕಿಮೀ ವೇಗ: ದಕ್ಷಿಣ ತಮಿಳುನಾಡಿನಿಂದ ಗಂಟೆಗೆ 85 ಕಿಮೀ ವೇಗದಲ್ಲಿ ಲಕ್ಷದ್ವೀಪದ ಕಡೆಗೆ ಚಂಡಮಾರುತ ಸಾಗುತ್ತಿದೆ. ಈಗಾಗಲೇ ತಮಿಳುನಾಡು, ಕನ್ಯಾಕುಮಾರಿ, ಕೇರಳದಲ್ಲಿ ಮಳೆಗೆ ನಾಲ್ವರು ಸಾವನ್ನಪ್ಪಿದ್ದು, 23 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

    ಮುಂದಿನ 24 ಗಂಟೆಗಳಲ್ಲಿ ಕೇರಳ, ತಮಿಳುನಾಡಿನ ಕೆಲಭಾಗ ಹಾಗೂ ಕರಾವಳಿಯಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಗಳ ಕಾಲ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.

    ಬೆಂಗಳೂರಿನಲ್ಲೂ ಮಳೆ: ಚಂಡಮಾರುತದ ಎಫೆಕ್ಟ್ ನಿಂದಾಗಿ ಬೆಂಗಳೂರಿನ ಕೆಲವೆಡೆ ಇಂದು ಬೆಳಗ್ಗೆಯಿಂದಲೇ ತುಂತುರು ಮಳೆಯಾಗಿದೆ. ದಿನದ ಬಹುತೇಕ ಅವಧಿಯಲ್ಲಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಸಂಜೆಯಾಗುತ್ತಿದ್ದಂತೆಯೇ ಮತ್ತೆ ತುಂತುರು ಮಳೆ ಶುರುವಾಗಿದೆ. ಯಶವಂತಪುರ, ಮಲ್ಲೇಶ್ವರಂ, ಜಾಲಹಳ್ಳಿ, ಕೆ.ಆರ್.ಸರ್ಕಲ್, ಕಾರ್ಪೊರೇಷನ್, ಶಾಂತಿನಗರ, ರಾಜರಾಜೇಶ್ವರಿ ನಗರ, ಸೇರಿದಂತೆ ಹಲವು ಕಡೆ ಮಳೆಯಾಗಿದೆ. ಮೋಡ ಕವಿದ ವಾತಾವರಣ, ತುಂತುರು ಮಳೆ ನಾಳೆಯೂ ಮುಂದುವರೆಯುವ ಸಾಧ್ಯತೆಯಿದೆ.

     

     

  • ವಿಡಿಯೋ: ಕಾಲ್ನಡಿಗೆಯಲ್ಲಿ ಶಬರಿಮಲೆ ಬೆಟ್ಟ ಹತ್ತುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್

    ವಿಡಿಯೋ: ಕಾಲ್ನಡಿಗೆಯಲ್ಲಿ ಶಬರಿಮಲೆ ಬೆಟ್ಟ ಹತ್ತುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್

    ಬೆಂಗಳೂರು: ಮಾರ್ಚ್ 31ರಂದು ಅಯ್ಯಪ್ಪ ಮಾಲೆ ಧರಿಸಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಗುರುವಾರದಂದು ಇರುಮುಡಿ ಹೊತ್ತು ಶಬರಿಮಲೆಗೆ ತೆರಳಿದ್ದರು. ಇಂದು ಕಾಲ್ನಡಿಗೆಯಲ್ಲಿ ಶಬರಿಮಲೆ ಬೆಟ್ಟವನ್ನ ಹತ್ತಿ ದೇವರ ದರ್ಶನವನ್ನು ಪಡೆಯಲಿದ್ದಾರೆ.

    ಕಳೆದ 6 ವರ್ಷದಿಂದ ದರ್ಶನ್ ಶಬರಿಮಲೆ ಯಾತ್ರೆಯನ್ನ ಮಾಡಿಕೊಂಡು ಬರುತ್ತಿದ್ದಾರೆ. ಈ ವರ್ಷವು ಕೂಡ ಮಲಾಧಾರಿಯಾಗಿ ಕಠಿಣ ವ್ರತ ಕೈಗೊಂಡು ಅಯ್ಯಪ್ಪನ ದರ್ಶನ ಮಾಡುತ್ತಿದ್ದಾರೆ.

    ದರ್ಶನ್ ಜೊತೆ ಸಹೋದರ ದಿನಕರ್ ತೂಗುದೀಪ್, ನಿರ್ದೇಶಕರಾದ ಶಿವಮಣಿ, ಎಂ.ಡಿ ಶ್ರೀಧರ್, ಹೆಚ್. ವಾಸು, ದರ್ಶನ್ ಸ್ನೇಹಿತರು ಸೇರಿದಂತೆ 36 ಮಂದಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ತೆರಳಿದ್ದಾರೆ. ಭಾನುವಾರ ಬೆಳಗ್ಗೆ ಶಬರಿಮಲೆ ಯಾತ್ರೆ ಮುಗಿಸಿ ದರ್ಶನ್ ವಾಪಸ್ಸಾಗಲಿದ್ದಾರೆ.

    https://www.youtube.com/watch?v=JOAsX2npLGg

  • ಅಯ್ಯಪ್ಪ ಮಾಲಾಧಾರಿಯಾದ ನಟ ದರ್ಶನ್ ಇಂದು ಶಬರಿಮಲೆಗೆ ಪ್ರಯಾಣ

    ಅಯ್ಯಪ್ಪ ಮಾಲಾಧಾರಿಯಾದ ನಟ ದರ್ಶನ್ ಇಂದು ಶಬರಿಮಲೆಗೆ ಪ್ರಯಾಣ

    ಬೆಂಗಳೂರು: ಮಾರ್ಚ್ 31ರಂದು ಅಯ್ಯಪ್ಪ ಮಾಲೆ ಧರಿಸಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಶಬರಿಮಲೆಗೆ ತೆರಳಿದ್ದಾರೆ.

    ಬೆಂಗಳೂರಿನ ಶ್ರೀರಾಂಪುರದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಇರುಮುಡಿ ಕಟ್ಟುವ ಕಾರ್ಯ ನಡೆಯುತ್ತಿದ್ದು ಅಲ್ಲಿಂದಲೇ ಶಬರಿಮಲೆಗೆ ಹೊರಡಲಿದ್ದಾರೆ. ಈಗಾಗಲೇ ಇರುಮುಡಿ ಪೂಜೆ ಶುರುವಾಗಿದೆ. ಬೆಳಗ್ಗೆ 10 ಗಂಟೆ ವೇಳೆಗೆ ಶಬರಿಮಲೆಗೆ ತೆರಳಲಿರುವ ತಂಡ ಅಯ್ಯಪ್ಪ ದರ್ಶನ ಮುಗಿಸಿ 8ನೇ ತಾರೀಖಿನಂದು ವಾಪಸ್ಸಾಗಲಿದ್ದಾರೆ.

    ದರ್ಶನ್ ಜೊತೆ ನಿರ್ದೇಶಕರಾದ ಶಿವಮಣಿ, ಎಂ.ಡಿ ಶ್ರೀಧರ್, ಹೆಚ್. ವಾಸು ಸೇರಿದಂತೆ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಸೇರಿ ಒಟ್ಟು 36 ಮಂದಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ತೆರಳಲಿದ್ದಾರೆ.

  • ಅಯ್ಯಪ್ಪ ಮಾಲೆ ಧರಿಸಿದ ಸ್ಯಾಂಡಲ್‍ವುಡ್ ಚಕ್ರವರ್ತಿ ದರ್ಶನ್

    ಅಯ್ಯಪ್ಪ ಮಾಲೆ ಧರಿಸಿದ ಸ್ಯಾಂಡಲ್‍ವುಡ್ ಚಕ್ರವರ್ತಿ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಮಾಲಾಧಾರಿಯಾಗಿದ್ದಾರೆ. ಕಳೆದ ಆರೇಳು ವರ್ಷಗಳಿಂದ ನಟ ದರ್ಶನ್ ಶಬರಿಮಲೆಗೆ ಹೋಗುತ್ತಿದ್ದು ಪ್ರತಿ ವರ್ಷವೂ ದರ್ಶನ್ ಶ್ರೀರಾಮಪುರ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಾಲೆ ಹಾಕಿ, ಒಂದು ವಾರಗಳ ಕಾಲ ಮಾಲಾಧಾರಿಯಾಗಿದ್ದು ನಂತರ ಶಬರಿಮಲೆಗೆ ತೆರಳೋದು ವಾಡಿಕೆ.

    ಇಂದು ಬೆಳಗ್ಗೆ 7.30ರ ವೇಳೆಗೆ ದರ್ಶನ್, ಶ್ರೀರಾಮಪುರದ ಅಯ್ಯಪ್ಪಸ್ವಾಮಿ ಮಂದಿರಕ್ಕೆ ತೆರಳಿ ಪೂಜೆ ಮಾಡಿಸಿ ಮಾಲೆ ಧರಿಸಿದ್ರು. ಈ ಬಾರಿ ಸುಮಾರು 35 ಜನರ ತಂಡ ದರ್ಶನ್ ಜೊತೆ ಶಬರಿಮಲೆಗೆ ತೆರಳುತ್ತಿದೆ.

    ದರ್ಶನ್ ಆಪ್ತರು, ಸಿನಿಮಾ ಸಹೋದ್ಯೋಗಿಗಳು ಸೇರಿದಂತೆ ಅನೇಕರು ದರ್ಶನ್ ಜೊತೆಯಲ್ಲಿರ್ತಾರೆ. ದರ್ಶನ್ ಸಹೋದರ ದಿನಕರ್, ನಿರ್ದೇಶಕ ಹೆಚ್ ವಾಸು, ನಿರ್ದೇಶಕ ಶಿವಮಣಿ, ಎಂಡಿ ಶ್ರೀಧರ್ ಸೇರಿದಂತೆ ಅನೇಕರು ದರ್ಶನ್ ಜೊತೆ ಇಂದು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ರು. ನಿರ್ದೇಶಕ ಎಂ ಡಿ ಶ್ರೀಧರ್ ಮಗ ಈ ಬಾರಿ ಕನ್ನಿಸ್ವಾಮಿಯಾಗಿ ಹೋಗುತ್ತಿದ್ದಾರೆ.

    ಇದನ್ನೂ ಓದಿ: ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಚಕ್ರವರ್ತಿ: ಧೂಳೆಬ್ಬಿಸಿದೆ ದಚ್ಚು ದರ್ಬಾರ್

    ಏಪ್ರಿಲ್ 6 ರಂದು ಇರುಮುಡಿ ಪೂಜೆ ನಡೆಸಿ ಅಂದೇ ಶಬರಿಮಲೆಗೆ ದರ್ಶನ್ ಪ್ರಯಾಣ ಬೆಳೆಸಲಿದ್ದಾರೆ. ಏಪ್ರಿಲ್ 8ರ ಮುಂಜಾನೆ ವಾಪಸ್ಸಾಗಲಿದ್ದಾರೆ.