Tag: SAARC

  • ಭಾರತ ಹೊರಗಿಟ್ಟು ಸಾರ್ಕ್‌ಗೆ ಪರ್ಯಾಯವಾಗಿ ಹೊಸ ಪ್ರಾದೇಶಿಕ ಒಕ್ಕೂಟ ರಚಿಸಲು ಚಿಂತನೆ

    ಭಾರತ ಹೊರಗಿಟ್ಟು ಸಾರ್ಕ್‌ಗೆ ಪರ್ಯಾಯವಾಗಿ ಹೊಸ ಪ್ರಾದೇಶಿಕ ಒಕ್ಕೂಟ ರಚಿಸಲು ಚಿಂತನೆ

    – ಸಾರ್ಕ್‌ಗೆ ಪರ್ಯಾಯವಾಗಿ ಹೊಸ ಪ್ರಾದೇಶಿಕ ಒಕ್ಕೂಟದ ಚಿಂತನೆ

    ಕುನ್ಮಿಂಗ್: ಚೀನಾದ ಕುನ್ಮಿಂಗ್‌ನಲ್ಲಿ (Kunming) ಇತ್ತೀಚೆಗೆ ನಡೆದ ಚೀನಾ-ದಕ್ಷಿಣ ಏಷ್ಯಾ ಎಕ್ಸ್‌ಪೋ ಮತ್ತು ಚೀನಾ-ದಕ್ಷಿಣ ಏಷ್ಯಾ ಸಹಕಾರ ಸಮ್ಮೇಳನದ ಸಂದರ್ಭದಲ್ಲಿ ಚೀನಾ, ಪಾಕಿಸ್ತಾನ (Pakistan) ಮತ್ತು ಬಾಂಗ್ಲಾದೇಶದ ನಡುವೆ ತ್ರಿಪಕ್ಷೀಯ ಸಭೆ ನಡೆದಿದೆ. ಸಭೆಯಲ್ಲಿ ಸೌತ್ ಏಷಿಯನ್ ಅಸೋಸಿಯೇಷನ್ ಫಾರ್ ರೀಜನಲ್ ಕೋಆಪರೇಷನ್ (Saarc) ಬದಲಿಗೆ ಹೊಸ ಒಕ್ಕೂಟ ಸ್ಥಾಪಿಸುವ ಬಗ್ಗೆ ಚರ್ಚೆ ನಡೆದಿದೆ.

    ಸಾರ್ಕ್, ದಕ್ಷಿಣ ಏಷ್ಯಾದ ಎಂಟು ರಾಷ್ಟ್ರಗಳನ್ನು ಒಳಗೊಂಡಿರುವ ಪ್ರಾದೇಶಿಕ ಸಂಘಟನೆಯಾಗಿದೆ. ಭಾರತ (India), ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಆಫ್ಘಾನಿಸ್ತಾನವನ್ನು ಒಳಗೊಂಡಿದೆ. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಭೌಗೋಳಿಕ-ರಾಜಕೀಯ ಘರ್ಷಣೆಯಿಂದಾಗಿ, 2016ರಿಂದ ಸಾರ್ಕ್‌ನ ಶೃಂಗಸಭೆಗಳು ಸ್ಥಗಿತಗೊಂಡಿವೆ. ಇದನ್ನೂ ಓದಿ: ಇರಾನ್‌ನ ಪರಮಾಣು ಯೋಜನೆಗೆ 30 ಶತಕೋಟಿ ಡಾಲರ್‌ ನೆರವು ಪ್ರಸ್ತಾಪಿಸಿದ ಅಮೆರಿಕ

    ಪ್ರಾದೇಶಿಕ ಏಕೀಕರಣ ಮತ್ತು ಸಂಪರ್ಕಕ್ಕಾಗಿ ಹೊಸ ಸಂಘಟನೆಯ ಅಗತ್ಯವಿದೆ ಎಂದು ಪಾಕಿಸ್ತಾನ ಮತ್ತು ಚೀನಾ (China) ಎರಡೂ ಸಭೆಯಲ್ಲಿ ಮನವರಿಕೆ ಮಾಡಿವೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಹೇಳಿದೆ. ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಸಾರ್ಕ್ ಸದಸ್ಯರು ಹೊಸ ಗುಂಪಿನ ಭಾಗವಾಗುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ. ಇದನ್ನೂ ಓದಿ: `ಆಪರೇಷನ್ ಸಿಂಧೂರ’ದಲ್ಲಿ ನಿರ್ನಾಮವಾದ ಉಗ್ರರ ಲಾಂಚ್ ಪ್ಯಾಡ್ ಮರುನಿರ್ಮಾಣ ಮಾಡುತ್ತಿದೆ ಪಾಕ್‌

    2016ರಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu And Kashmir) ಉರಿಯಲ್ಲಿ ಭಯೋತ್ಪಾದಕ ದಾಳಿಯ ನಂತರ ಭಾರತವು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ 19ನೇ ಸಾರ್ಕ್ ಶೃಂಗಸಭೆಯನ್ನು ಬಹಿಷ್ಕರಿಸಿತು. ಇದಕ್ಕೆ ಬಾಂಗ್ಲಾದೇಶ, ಭೂತಾನ್, ಆಫ್ಘಾನಿಸ್ತಾನ ಮತ್ತು ಶ್ರೀಲಂಕಾ ಸಹ ಸಾಥ್ ನೀಡಿದ್ದವು. ಇದರಿಂದಾಗಿ ಶೃಂಗಸಭೆಯನ್ನು ರದ್ದುಗೊಳಿಸಲಾಯಿತು. ಈ ಘಟನೆಯಿಂದಾಗಿ, ಸಾರ್ಕ್‌ನ ಕಾರ್ಯಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.

    ಇದರ ಬೆನ್ನಲೆ ಕುನ್ಮಿಂಗ್‌ನಲ್ಲಿ ನಡೆದ ತ್ರಿಪಕ್ಷೀಯ ಸಭೆಯಲ್ಲಿ ಚೀನಾ ಮತ್ತು ಪಾಕಿಸ್ತಾನದ ನೇತೃತ್ವದಲ್ಲಿ ದಕ್ಷಿಣ ಏಷ್ಯಾದ ರಾಷ್ಟ್ರಗಳಾದ ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಆಫ್ಘಾನಿಸ್ತಾನವನ್ನು ಒಳಗೊಂಡಂತೆ ಹೊಸ ಪ್ರಾದೇಶಿಕ ಒಕ್ಕೂಟವನ್ನು ರಚಿಸುವ ಮೂರು ದೇಶಗಳು ಸಮಾಲೋಚನೆ ನಡೆಸಿವೆ. ಇದನ್ನೂ ಓದಿ: ರಷ್ಯಾದಿಂದ ಅತಿದೊಡ್ಡ ವೈಮಾನಿಕ ದಾಳಿ – ಬರೋಬ್ಬರಿ 477 ಡ್ರೋನ್‌, 60 ಮಿಸೈಲ್‌ಗಳಿಂದ ಉಕ್ರೇನ್‌ ಮೇಲೆ ಅಟ್ಯಾಕ್‌

    ಈ ಒಕ್ಕೂಟವು ವ್ಯಾಪಾರ ಮತ್ತು ಸಂಪರ್ಕವನ್ನು ಹೆಚ್ಚಿಸುವ ಮೂಲಕ ಪ್ರಾದೇಶಿಕ ಸಹಕಾರವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ವರದಿಗಳ ಪ್ರಕಾರ, ಭಾರತವನ್ನು ಸಹ ಈ ಒಕ್ಕೂಟಕ್ಕೆ ಆಹ್ವಾನಿಸಲಾಗುವ ಸಾಧ್ಯತೆಯಿದೆ. ಆದರೆ ಭಾರತದ ಭಾಗವಹಿಸುವಿಕೆಯು ಅನಿಶ್ಚಿತವಾಗಿದೆ. ಭಾರತವು ಭಯೋತ್ಪಾದನೆಯ ವಿರುದ್ಧ ತನ್ನ ದೃಢನಿಲುವನ್ನು ಮುಂದುವರೆಸಿದೆ ʻರಾತ್ರಿಯಲ್ಲಿ ಭಯೋತ್ಪಾದನೆ, ಹಗಲಿನಲ್ಲಿ ವ್ಯಾಪಾರʼ ಎಂಬ ಸನ್ನಿವೇಶವನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಸಾಮಾನ್ಯ ತಾಪಮಾನದ ನ್ಯೂಯಾರ್ಕ್‌, ಬೋಸ್ಟನ್‌ – ಇದೀಗ ದಾಖಲೆಯ ಮಟ್ಟ ಮೀರುತ್ತಿರುವುದ್ಯಾಕೆ?

    ಬಾಂಗ್ಲಾದೇಶದ ತಾತ್ಕಾಲಿಕ ಸರ್ಕಾರವು ಈ ಸಭೆಯು ರಾಜಕೀಯವಲ್ಲ ಎಂದು ವಿವರಿಸಿದೆ ಮತ್ತು ಯಾವುದೇ ಹೊಸ ಒಕ್ಕೂಟದ ರಚನೆಯ ಸಾಧ್ಯತೆಯನ್ನು ತಳ್ಳಿಹಾಕಿದೆ. ಆದರೆ, ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಮತ್ತು ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಅವರು ಸಾರ್ಕ್‌ನ ಪುನರುತ್ಥಾನಕ್ಕೆ ಒತ್ತು ನೀಡಿದ್ದಾರೆ. ಇದಕ್ಕೆ ಕಾರಣ, ಈ ರಾಷ್ಟ್ರಗಳಿಗೆ ಸಾರ್ಕ್‌ನಂತಹ ಪ್ರಾದೇಶಿಕ ವೇದಿಕೆಯು ವ್ಯಾಪಾರ ಮತ್ತು ಆರ್ಥಿಕ ಸಹಕಾರಕ್ಕೆ ಅತ್ಯಗತ್ಯವಾಗಿದೆ. ಆದರೆ, ಭಾರತವು ತನ್ನ ದ್ವಿಪಕ್ಷೀಯ ಸಂಬಂಧಗಳ ಮೂಲಕ ಈ ರಾಷ್ಟ್ರಗಳೊಂದಿಗೆ ಸಂಪರ್ಕವನ್ನು ಕಾಯ್ದುಕೊಳ್ಳಬಹುದು ಎಂದು ಭಾವಿಸುತ್ತದೆ, ಆದ್ದರಿಂದ ಸಾರ್ಕ್‌ನಂತಹ ಬಹುಪಕ್ಷೀಯ ವೇದಿಕೆಯ ಅಗತ್ಯವಿಲ್ಲ ಎಂದು ವಾದಿಸುತ್ತದೆ.

  • ಚೀನಾ, ಪಾಕಿಸ್ತಾನದೊಂದಿಗೆ ಸಂಬಂಧ ಕಷ್ಟ: ಜೈಶಂಕರ್

    ಚೀನಾ, ಪಾಕಿಸ್ತಾನದೊಂದಿಗೆ ಸಂಬಂಧ ಕಷ್ಟ: ಜೈಶಂಕರ್

    ಎಲ್ಲಿಯವರೆಗೆ ಪಾಕ್ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತೋ ಅಲ್ಲಿಯವರೆಗೆ ಮಾತುಕತೆ ಇಲ್ಲ

    ನವದೆಹಲಿ: ಯಾವುದೇ ಒಂದು ಸದಸ್ಯ ರಾಷ್ಟ್ರ ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದ್ದರೂ ಭಾರತ ‘ಸಾರ್ಕ್’ನೊಂದಿಗೆ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ) ಸಭೆ ನಡೆಸುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಹೇಳಿದ್ದಾರೆ.

    ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಶಂಕರ್, ಪಾಕಿಸ್ತಾನದಲ್ಲಿ (Pakistan) ಸಮಸ್ಯೆಗಳಿವೆ ಎಂಬುದು ನಮಗೆ ತಿಳಿದಿದೆ. ಹಾಗೂ ಸಮಸ್ಯೆಗಳ ಗಂಭೀರತೆಯನ್ನು ಗುರುತಿಸುವ ಸಮಯ ಇದಾಗಿದೆ. ಪಾಕಿಸ್ತಾನ ಕತ್ತಲಿನ ವೇಳೆಯಲ್ಲಿ ಭಯೋತ್ಪಾದನೆಯನ್ನು ನಡೆಸಿ, ಹಗಲಿನ ವೇಳೆಯಲ್ಲಿ ವ್ಯಾಪಾರವನ್ನು ನಡೆಸುವ ಪರಿಸ್ಥಿತಿಯನ್ನು ಭಾರತ ಎಂದಿಗೂ ಸಹಿಸುವುದಿಲ್ಲ. ಹಾಗೇನಾದರೂ ಆದರೆ ದೇಶ ಸರಿಯಾಗಿ ಕಾರ್ಯ ನಿರ್ವಹಿಸುವುದರಲ್ಲಿ ವಿಫಲವಾಗುತ್ತದೆ ಎಂದು ಹೇಳಿದ್ದಾರೆ.

    ಗಡಿಯಲ್ಲಿ ಶಾಂತಿ ನಿರ್ಮಾಣದತ್ತ ಚೀನಾ ಮುಖ ಮಾಡಬೇಕು:
    ಭಾರತ ಹಾಗೂ ಚೀನಾ (China) ನಡುವಿನ ಗಡಿ ಭಾಗದ ಸ್ಥಿತಿ ಇಂದಿಗೂ ಅಸಹಜವಾಗಿದೆ. ಗಡಿ ನಿರ್ವಹಣೆಗೆ ಸಂಬಂಧಿಸಿದ ಒಪ್ಪಂದಗಳ ಉಲ್ಲಂಘನೆಯಾಗಿರುವುದರಿಂದಾಗಿ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಕಷ್ಟದ ಹಂತದಲ್ಲಿ ಸಾಗುತ್ತಿದೆ. ಇದನ್ನೂ ಓದಿ: ದೇಶದಾದ್ಯಂತ ಬಕ್ರೀದ್ ಹಬ್ಬ ಆಚರಣೆ – ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ ಪ್ರಧಾನಿ

    ಯಾವುದೇ ಸಂಬಂಧಗಳು ಪರಸ್ಪರರ ಆಸಕ್ತಿಗಳನ್ನು ಹಾಗೂ ಸೂಕ್ಷ್ಮತೆಗಳಿಗೆ ಗೌರವ ನೀಡಬೇಕು. ಚೀನಾ ಗಡಿಯಲ್ಲಿ ಶಾಂತಿ ನಿರ್ಮಾಣದತ್ತ ಮುಖ ಮಾಡಬೇಕು. ಶಾಂತಿ ಒಪ್ಪಂದಗಳನ್ನು ಮೀರಿ ಕೃತ್ಯಗಳನ್ನು ನಡೆಸಿದರೆ ಕಷ್ಟ ಎಂದು ಜೈಶಂಕರ್ ಹೇಳಿದರು. ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ರಾಹುಲ್ ಗಾಂಧಿ ಭೇಟಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕಿಸ್ತಾನದ ಆಹ್ವಾನವನ್ನು ತಿರಸ್ಕರಿಸಿದ ಭಾರತ

    ಪಾಕಿಸ್ತಾನದ ಆಹ್ವಾನವನ್ನು ತಿರಸ್ಕರಿಸಿದ ಭಾರತ

    ನವದೆಹಲಿ: ಸಾರ್ಕ್ ಶೃಂಗ ಸಭೆಯ ಆಹ್ವಾನವನ್ನು ನೀಡಿದ್ದ ಪಾಕ್ ಗೆ ಭಾರತ ತಿರುಗೇಟು ನೀಡಿದ್ದು, ಯಾವುದೇ ಕಾರಣಕ್ಕೂ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಹೇಳಿದೆ.

    ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳದಿರುವ ನಿಲುವನ್ನು ಭಾರತ ಬದಲಾಯಿಸುವ ಸಾಧ್ಯತೆಯೇ ಇಲ್ಲ. ಅಲ್ಲದೇ ಇಸ್ಲಾಮಾಬಾದ್ ನಲ್ಲಿ ನಡೆಯುವ ಸಾರ್ಕ್ ಶೃಂಗಸಭೆಯಲ್ಲಿ ಭಾರತ ಪಾಲ್ಗೊಳ್ಳುವ ಸಾಧ್ಯತೆ ಇಲ್ಲವೆಂದು ತಿಳಿದುಬಂದಿದೆ.

    ಶೃಂಗಸಭೆ ಕುರಿತು ಪಾಕ್ ಆಹ್ವಾನಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್, ಭಯೋತ್ಪಾದನೆ ಮತ್ತು ಮಾತಕತೆ ಒಟ್ಟಿಗೆ ಸಾಗಲು ಸಾಧ್ಯವಿಲ್ಲ. ಈ ಬಗ್ಗೆ ಭಾರತ ತನ್ನ ನಿರ್ಧಾರಕ್ಕೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

    ಇದೇ ವೇಳೆ ಕರ್ತಾರ್‍ಪುರ್ ಕಾರಿಡಾರ್ ಬಗ್ಗೆ ಮಾತನಾಡಿದ ಅವರು, ಕಾರಿಡಾರ್ ಬಗ್ಗೆ ಭಾರತ ಸರ್ಕಾರ ಅನೇಕ ಬಾರಿ ಪಾಕಿಸ್ತಾನದ ಬಳಿ ಕೇಳಿಕೊಂಡಿತ್ತು. ಆದರೆ ಪಾಕ್ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಈಗ ಪಾಕ್ ಈ ಬಗ್ಗೆ ಧನಾತ್ಮಕವಾಗಿ ಸ್ಪಂದಿಸಿದೆ. ಆದರೆ ಈ ಮೂಲಕ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆಗಳು ಆರಂಭವಾಗುತ್ತವೆಂದು ಹೇಳಲಾಗುವುದಿಲ್ಲ. ಹೀಗಾಗಿ ಭಯೋತ್ಪಾದನೆ ಮತ್ತು ಮಾತುಕತೆಗಳು ಜೊತೆಗ ಸಾಗಲಾರವು ಎಂದು ತಿಳಿಸಿದರು.

    ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಕ್ ವಿದೇಶಾಂಗ ವಕ್ತಾರ ಡಾ. ಮೊಹಮ್ಮದ್ ಫೈಸಲ್, ಸಾರ್ಕ್ ಶೃಂಗಸಭೆಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗುವುದು. ಅಲ್ಲದೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಮೊದಲ ಭಾಷಣದಲ್ಲಿ ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ಮಾತುಕತೆಯ ವಿಚಾರದಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ, ಪಾಕ್ ಎರಡು ಹೆಜ್ಜೆ ಮುಂದಿಡುತ್ತದೆ ಎನ್ನುವ ವಿಚಾರವನ್ನೂ ಸಹ ಪ್ರಸ್ತಾಪಿಸಿದ್ದರು.

    ಸಾರ್ಕ್ ಶೃಂಗ ಸಭೆ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತವೆ. 2014ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮೋದಿಯವರು ಪಾಲ್ಗೊಂಡಿದ್ದರು. ಆದರೆ 2016ರಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆಯಬೇಕಿದ್ದ ಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿರಲಿಲ್ಲ. ಏಕೆಂದರೆ 2016ರ ಸೆಪ್ಟೆಂಬರ್ 18 ರಂದು ಪಾಕ್ ಉಗ್ರಗಾಮಿಗಳು ಜಮ್ಮು ಕಾಶ್ಮೀರದ ಉರಿ ಪ್ರದೇಶದಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ, 19 ಯೋಧರನ್ನು ಬಲಿ ಪಡೆದುಕೊಂಡಿದ್ದರು. ಹೀಗಾಗಿ ದಾಳಿಯನ್ನು ಖಂಡಿಸಿ ಭಾರತ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವುದು ಅಸಾಧ್ಯವೆಂದು ತಿಳಿಸಿತ್ತು.

    ಉಗ್ರ ದಾಳಿಯಿಂದಾಗಿ ಭಾರತ ಶೃಂಗ ಸಭೆಗೆ ಹಿಂದೆ ಸರಿದ ಬೆನ್ನಲ್ಲೇ, ಸಾರ್ಕ್ ಸದಸ್ಯ ರಾಷ್ಟ್ರಗಳಾದ ಬಾಂಗ್ಲಾದೇಶ, ಭೂತಾನ್ ಹಾಗೂ ಅಪ್ಘಾನಿಸ್ತಾನ ದೇಶಗಳು ಕೂಡ ಸಭೆಗೆ ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಪಾಕಿಸ್ತಾನ ಅನಿವಾರ್ಯವಾಗಿ ಶೃಂಗಸಭೆಯನ್ನು ಮುಂದೂಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಪಾಕ್ ವಿದೇಶಾಂಗ ಇಲಾಖೆ, ಶೃಂಗಸಭೆಯನ್ನು ಮುಂದೂಡಿದ್ದರೂ ಭವಿಷ್ಯದಲ್ಲಿ ಮತ್ತೆ ಸಭೆಯ ಆತಿಥ್ಯವನ್ನು ನಾವೇ ವಹಿಸುತ್ತೇವೆ ಎಂದು ಹೇಳಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾರ್ಕ್ ಶೃಂಗ ಸಭೆಗೆ ಪ್ರಧಾನಿ ಮೋದಿಗೆ ಪಾಕ್ ಆಹ್ವಾನ

    ಸಾರ್ಕ್ ಶೃಂಗ ಸಭೆಗೆ ಪ್ರಧಾನಿ ಮೋದಿಗೆ ಪಾಕ್ ಆಹ್ವಾನ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ನಡೆಯುವ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ(ಸಾರ್ಕ್)ಯ 19ನೇ ಶೃಂಗ ಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಆಹ್ವಾನಿಸುವುದಾಗಿ ಪಾಕಿಸ್ತಾನ ಹೇಳಿದೆ.

    ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಕ್ ವಿದೇಶಾಂಗ ವಕ್ತಾರ ಡಾ. ಮೊಹಮ್ಮದ್ ಫೈಸಲ್, ಸಾರ್ಕ್ ಶೃಂಗಸಭೆಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗುವುದು. ಅಲ್ಲದೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಮೊದಲ ಭಾಷಣದಲ್ಲಿ ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ಮಾತುಕತೆಯ ವಿಚಾರದಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ, ಪಾಕ್ ಎರಡು ಹೆಜ್ಜೆ ಮುಂದಿಡುತ್ತದೆ ಎನ್ನುವ ವಿಚಾರವನ್ನೂ ಸಹ ಪ್ರಸ್ತಾಪಿಸಿದರು.

    ಸಾರ್ಕ್ ಶೃಂಗ ಸಭೆ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತವೆ. 2014ರಲ್ಲಿ ನೇಪಾಳದ ಕಾಠ್ಮಂಡುವಿನಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮೋದಿಯವರು ಪಾಲ್ಗೊಂಡಿದ್ದರು. ಆದರೆ 2016ರಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆಯಬೇಕಿದ್ದ ಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿರಲಿಲ್ಲ. ಏಕೆಂದರೆ 2016ರ ಸೆಪ್ಟೆಂಬರ್ 18 ರಂದು ಪಾಕ್ ಉಗ್ರಗಾಮಿಗಳು ಜಮ್ಮು ಕಾಶ್ಮೀರದ ಉರಿ ಪ್ರದೇಶದಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ, 19 ಯೋಧರನ್ನು ಬಲಿ ಪಡೆದುಕೊಂಡಿದ್ದರು. ಹೀಗಾಗಿ ದಾಳಿಯನ್ನು ಖಂಡಿಸಿ ಭಾರತ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವುದು ಅಸಾಧ್ಯವೆಂದು ತಿಳಿಸಿತ್ತು.

    ಉಗ್ರ ದಾಳಿಯಿಂದಾಗಿ ಭಾರತ ಶೃಂಗ ಸಭೆಗೆ ಹಿಂದೆ ಸರಿದ ಬೆನ್ನಲ್ಲೇ, ಸಾರ್ಕ್ ಸದಸ್ಯ ರಾಷ್ಟ್ರಗಳಾದ ಬಾಂಗ್ಲಾದೇಶ, ಭೂತಾನ್ ಹಾಗೂ ಅಪ್ಘಾನಿಸ್ತಾನ ದೇಶಗಳು ಕೂಡ ಸಭೆಗೆ ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಪಾಕಿಸ್ತಾನ ಅನಿವಾರ್ಯವಾಗಿ ಶೃಂಗಸಭೆಯನ್ನು ಮುಂದೂಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಪಾಕ್ ವಿದೇಶಾಂಗ ಇಲಾಖೆ, ಶೃಂಗಸಭೆಯನ್ನು ಮುಂದೂಡಿದ್ದರೂ ಭವಿಷ್ಯದಲ್ಲಿ ಮತ್ತೆ ಸಭೆಯ ಆತಿಥ್ಯವನ್ನು ನಾವೇ ವಹಿಸುತ್ತೇವೆ ಎಂದು ಹೇಳಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋದಿಂದ ಮತ್ತೊಂದು ಇತಿಹಾಸ: ದಕ್ಷಿಣ ಏಷ್ಯಾ ಉಪಗ್ರಹ ಉಡಾವಣೆ ಯಶಸ್ವಿ

    ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋದಿಂದ ಮತ್ತೊಂದು ಇತಿಹಾಸ: ದಕ್ಷಿಣ ಏಷ್ಯಾ ಉಪಗ್ರಹ ಉಡಾವಣೆ ಯಶಸ್ವಿ

    ಶ್ರೀಹರಿಕೋಟಾ: ಕಡಿಮೆ ವೆಚ್ಚದಲ್ಲಿ ಏಕಕಾಲದಲ್ಲಿ 104 ಉಪಗ್ರಹಗಳನ್ನು ಉಡಾಯಿಸಿದ್ದ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಿದೆ. ಸಾರ್ಕ್ ರಾಷ್ಟ್ರಗಳ ಬಾಂಧವ್ಯವೃದ್ಧಿಗೆ ಎರಡು ವರ್ಷಗಳ ಹಿಂದೆ ಪ್ರಧಾನಿ ಮೋದಿ ಕೊಟ್ಟಿದ್ದ ‘ಸೌತ್ ಏಷ್ಯಾ ಸ್ಯಾಟಲೈಟ್’ ಅನ್ನು  ಜಿಎಸ್‍ಎಲ್‍ವಿ ರಾಕೆಟ್ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

    ಸಂಜೆ 4.57ಕ್ಕೆ ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಉಡಾವಣೆಯಾದ ಜಿಸ್ಯಾಟ್–9  ಉಪಗ್ರಹ ಯಶಸ್ವಿಯಾಗುತ್ತಿದ್ದಂತೆಯೇ ಇಸ್ರೋ ಮತ್ತು ಸಾರ್ಕ್ ರಾಷ್ಟ್ರಗಳ ಪ್ರತಿನಿಧಿಗಳು ಸಂಭ್ರಮಿಸಿದ್ರು. ಪಾಕಿಸ್ತಾನ ಹೊರತುಪಡಿಸಿ ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್, ಶ್ರೀಲಂಕಾ, ಅಫ್ಘಾನಿಸ್ತಾನ ಇದರ ಸೇವೆ ಪಡೆಯಲಿದೆ.

     ಪ್ರಧಾನಿ ಮೋದಿ ಮಾತನಾಡಿ ಇದೊಂದು ಐತಿಹಾಸಿಕ ಹೆಜ್ಜೆ. ಸಾರ್ಕ್ ರಾಷ್ಟ್ರಗಳ ಪರಸ್ಪರ ಅಭಿವೃದ್ಧಿಗೆ ಸಹಕಾರವಾಗಲಿದೆ ಎಂದರೆ, ಸಾರ್ಕ್ ರಾಷ್ಟ್ರಗಳ ಪ್ರಧಾನಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡ್ರು.

    ಉಪಗ್ರಹದ ವಿಶೇಷತೆ ಏನು?
    235 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಉಪಗ್ರಹ 2,230 ಕೆ.ಜಿ ತೂಕ, 50 ಮೀಟರ್ ಉದ್ದ, 12 ವರ್ಷ ಕಾರ್ಯಾವಧಿಯನ್ನು ಹೊಂದಿದೆ. ಇಸ್ರೋದ ಐ-2ಕೆ ಬಸ್ ಮಟ್ಟಕ್ಕೆ ಅನುಗುಣವಾಗಿ ಅಭಿವೃದ್ಧಿಯಾಗಿದ್ದು, ದೂರಸಂಪರ್ಕ, ದೂರಸಂವಹನ, ಡಿಟಿಎಚ್, ವಿಸ್ಯಾಟ್, ದೂರಶಿಕ್ಷಣ ಮತ್ತು ಟೆಲಿ ಮೆಡಿಸಿನ್ ಕ್ಷೇತ್ರಕ್ಕೆ ಉಪಯೋಗವಾಗಲಿದೆ. ಅಷ್ಟೇ ಅಲ್ಲದೇ ಪ್ರಕೃತಿ ವಿಕೋಪ ಸಂಭವಿಸಿದಾಗ ಹಾಟ್‍ಲೈನ್ ಸಂಪರ್ಕ ಮೂಲಕ ಪರಿಹಾರ ಕಾರ್ಯಾಚರಣೆ ನಡೆಸಬಹುದಾಗಿದೆ.

    ಮುಂದಿನ ವರ್ಷದ ಆರಂಭದಲ್ಲಿ ಇಸ್ರೋ ಚಂದ್ರಯಾನ-2 ಉಡಾವಣೆ ಮಾಡಲಿದೆ ಎಂದು ಇಸ್ರೋ ಅಧ್ಯಕ್ಷರಾದ ಎಎಸ್ ಕಿರಣ್ ಕಿಮಾರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

     

  • ಸೌತ್ ಏಷ್ಯಾ ಸ್ಯಾಟಲೈಟ್ ಉಡಾವಣೆಗೆ ಇಸ್ರೋದಿಂದ ಕೌಂಟ್‍ಡೌನ್ ಶುರು

    ಸೌತ್ ಏಷ್ಯಾ ಸ್ಯಾಟಲೈಟ್ ಉಡಾವಣೆಗೆ ಇಸ್ರೋದಿಂದ ಕೌಂಟ್‍ಡೌನ್ ಶುರು

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಗ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಎರಡು ವರ್ಷದ ಹಿಂದಿನ ಕನಸಿನ ಕೂಸು, ದಕ್ಷಿಣ ಏಷ್ಯಾ ಬಾಂಧವ್ಯದ ಪ್ರತೀಕ ‘ಸೌತ್ ಏಷ್ಯಾ ಕಮ್ಯುನಿಕೇಷನ್ ಸ್ಯಾಟಲೈಟ್’ ಆದ ಜಿಸ್ಯಾಟ್-9(ಜಿಯೋಸ್ಟೇಷನರಿ ಕಮ್ಯುನಿಕೇಷನ್ ಸ್ಯಾಟಲೈಟ್) ಇಂದು ನಭಕ್ಕೆ ಚಿಮ್ಮಲಿದೆ.

    ಇಂದು ಸಂಜೆ 4.57ಕ್ಕೆ ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಉಪಗ್ರಹ ಉಡಾವಣೆಯಾಗಲಿದೆ. ಪಾಕಿಸ್ತಾನ ಹೊರತುಪಡಿಸಿ ಸಾರ್ಕ್ ರಾಷ್ಟ್ರಗಳಾದ ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಈ ಯೋಜನೆಯ ಭಾಗವಾಗಿವೆ. ಉಪಗ್ರಹ ಉಡಾವಣೆಗೆ 28 ಗಂಟೆಗಳ ಕೌಂಟ್‍ಡೌನ್ ಗುರುವಾರ ರಾತ್ರಿ 12:57 ಗಂಟೆಯಿಂದಲೇ ಶುರುವಾಗಿದೆ ಎಂದು ಇಸ್ರೋ ತಿಳಿಸಿದೆ.

    2014ರ ಮೇನಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿ, ಮಿತ್ರರಾಷ್ಟ್ರಗಳಿಗೆ ಭಾರತದ ಉಡುಗೊರೆಯಾಗಿ ಸಾರ್ಕ್ ಸ್ಯಾಟಲೈಟ್ ಅಭಿವೃದ್ಧಿಪಡಿಸಲು ಇಸ್ರೋ ವಿಜ್ಞಾನಿಗಳಿಗೆ ಕೇಳಿದ್ದರು. ಈ ಬಗ್ಗೆ ಭಾನುವಾರದ ಮನ್ ಕೀ ಬಾತ್‍ನಲ್ಲಿ ಮಾತನಾಡಿದ್ದ ಮೋದಿ, ಮೇ 5 ರಂದು ಸೌತ್ ಏಷ್ಯಾ ಉಪಗ್ರಹ ಉಡಾವಣೆಯಾಗಲಿದೆ. ಈ ಯೋಜನೆಯಲ್ಲಿ ಭಾಗಿಯಾಗಿರುವ ರಾಷ್ಟ್ರಗಳಿಗೆ ಇದರಿಂದ ಬಹಳಷ್ಟು ಉಪಯೋಗವಾಗಲಿದೆ ಎಂದು ಹೇಳಿದ್ದರು.

    ದೂರಸಂಪರ್ಕ, ದೂರಸಂವಹನ, ಡಿಟಿಎಚ್, ವಿಸ್ಯಾಟ್, ದೂರಶಿಕ್ಷಣ ಮತ್ತು ಟೆಲಿ ಮೆಡಿಸಿನ್ ಕ್ಷೇತ್ರದಲ್ಲಿ ಈ ಉಪಗ್ರಹ ನೆರವಿಗೆ ಬರಲಿದೆ. ಅಷ್ಟೇ ಅಲ್ಲ, ಭೂಕಂಪ, ಪ್ರವಾಹ, ಚಂಡಮಾರುತ, ಸುನಾಮಿಗಳು ಹೀಗೆ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಹಾಟ್‍ಲೈನ್ ಸಂಪರ್ಕದ ಮೂಲಕ ಪರಿಹಾರ ಕಾರ್ಯಾಚರಣೆಗೆ ನೆರವಾಗಲಿದೆ. ಈ ಉಪಗ್ರಹ 12 ವರ್ಷಗಳಿಗೂ ಹೆಚ್ಚು ಕಾರ್ಯಾವಧಿ ಹೊಂದಿದೆ. ಉಪಗ್ರಹ ನಿರ್ಮಾಣಕ್ಕಾಗಿ 235 ಕೋಟಿ ರೂಪಾಯಿ ವೆಚ್ಚಮಾಡಲಾಗಿದೆ. ಯೋಜನೆಯ ಒಟ್ಟು ವೆಚ್ಚ 450 ಕೋಟಿ ರೂ. 2,230 ಕೆ.ಜಿ ತೂಕವುಳ್ಳ ಈ ಉಪಗ್ರಹವನ್ನು ಜಿಎಸ್‍ಎಲ್‍ವಿ-ಎಫ್‍ಒ9 ರಾಕೆಟ್ ಹೊತ್ತು ಸಾಗಲಿದೆ.

    ಮುಂದಿನ ವರ್ಷದ ಆರಂಭದಲ್ಲಿ ಇಸ್ರೋ ಚಂದ್ರಯಾನ-2 ಉಡಾವಣೆ ಮಾಡಲಿದೆ ಎಂದು ಇಸ್ರೋ ಅಧ್ಯಕ್ಷರಾದ ಎಎಸ್ ಕಿರಣ್ ಕಿಮಾರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.