ಹೈದರಾಬಾದ್: ತೆಲುಗಿನ ಸೂಪರ್‌ಸ್ಟಾರ್ ‘ಬಾಹುಬಲಿ’ ಪ್ರಭಾಸ್ ಅವರ ಬಹುನಿರೀಕ್ಷಿತ ‘ಸಾಹೋ’ ಸಿನಿಮಾ ಇಂದು ತೆರೆಗಪ್ಪಳಿಸಿದೆ. ಆದರೆ ಈ ಮಧ್ಯೆ ಅಭಿಮಾನಿಯೊಬ್ಬ ಸಿನಿಮಾದ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಈ ಘಟನೆ ತೆಲಂಗಾಣದ ಮೆಗಬೂಬ್ ನಗರದಲ್ಲಿ ನಡೆದಿದೆ. ಮೃತ ಯುವಕ ಪ್ರಭಾಸ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಇಂದು ಬಿಡುಗಡೆಯಾದ ಸಿನಿಮಾಗಾಗಿ ಸ್ಥಳೀಯ ಥಿಯೇಟರ್ ಬಳಿ ಪ್ರಭಾಸ್ ಅವರ ದೊಡ್ಡ ಬ್ಯಾನರ್ ಕಟ್ಟಲು ಸ್ನೇಹಿತರೊಂದಿಗೆ ಹೋಗಿದ್ದನು.
ಈ ವೇಳೆ ಮೇಲೆ ಹತ್ತಿ ಬ್ಯಾನರ್ ಕಟ್ಟುತ್ತಿದ್ದಾಗ ಆಕಸ್ಮಿಕವಾಗಿ ಕಟ್ಟಡದ ಕೇಬಲ್ ವೈರ್ ತಗುಲಿ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಯುವಕ ಕೆಳಗೆ ಬಿದ್ದಿದ್ದಾನೆ. ಪರಿಣಾಮ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲಿಯೇ ಯುವಕ ಮೃತಪಟ್ಟಿದ್ದಾನೆ. ತಕ್ಷಣವೇ ಥಿಯೇಟರ್ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿ ತನಿಖೆ ನಡೆಸುತ್ತಿದ್ದಾರೆ.
ಅಭಿಮಾನಿ ಸಾವಿನ ಬಗ್ಗೆ ನಟ ಪ್ರಭಾಸ್ ಮತ್ತು ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆಯೂ ಕೂಡ ಇದೇ ರೀತಿ ಅಭಿಮಾನಿಗಳು ತಮ್ಮ ನಟರ ಬ್ಯಾನರ್ ಕಟ್ಟುವಾಗ ಕಟೌಟ್‍ನಿಂದ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿದೆ.
ನಟ ಪ್ರಭಾಸ್ ಅಭಿನಯದ ‘ಸಾಹೋ’ ತೆಲುಗು ಸೇರಿದಂತೆ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಪ್ರಭಾಸ್‍ಗೆ ಜೋಡಿಯಾಗಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟಿಸಿದ್ದಾರೆ. ಸುಜಿತ್ ನಿರ್ದೇಶನದಲ್ಲಿ ‘ಸಾಹೋ’ ಸಿನಿಮಾ ಮೂಡಿ ಬಂದಿದೆ.
ಮುಂಬೈ: ಟಾಲಿವುಡ್ ನಟ ಪ್ರಭಾಸ್ ಅವರು ಈಗ ತಮ್ಮ ಮುಂಬರುವ ‘ಸಾಹೋ’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಪ್ರಭಾಸ್ ಅವರು ಅನುಷ್ಕಾ ಶೆಟ್ಟಿ ಬಗ್ಗೆ ಮಾತನಾಡಿದ್ದು, ಅವರು ಸರಿಯಾದ ಸಮಯದಲ್ಲಿ ಕರೆ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಪ್ರಭಾಸ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಸಂದರ್ಶಕ ಪ್ರಭಾಸ್ ಅವರಿಗೆ ನಟಿಯರಾದ ಕಾಜಲ್ ಅಗರ್‌ವಾಲ್ ಹಾಗೂ ಅನುಷ್ಕಾ ಶೆಟ್ಟಿ ಅವರ ಪಾಸಿಟಿವ್ ಹಾಗೂ ನೆಗೆಟಿವ್ ಪಾಯಿಂಟ್ ಬಗ್ಗೆ ಪ್ರಶ್ನಿಸಿದ್ದರು.
ಈ ವೇಳೆ ಪ್ರಭಾಸ್, ಕಾಜಲ್ ತುಂಬಾ ಸುಂದರವಾಗಿದ್ದಾರೆ. ಅಲ್ಲದೆ ಅವರಿಗೆ ಸಾಕಷ್ಟು ಎನರ್ಜಿ ಕೂಡ ಇದೆ. ಅವರ ನೆಗೆಟಿವ್ ಪಾಯಿಂಟ್ ಏನೆಂದರೆ, ನಾನು ಮೊದಲು ಕಾಜಲ್ ಡ್ರೆಸ್ಸಿಂಗ್ ಸೆನ್ಸ್ ಅಭಿಮಾನಿ ಆಗಿರಲಿಲ್ಲ. ಮೊದಲು ಕಾಜಲ್ ಡ್ರೆಸ್ಸಿಂಗ್ ಸೆನ್ಸ್ ಚೆನ್ನಾಗಿ ಇರಲಿಲ್ಲ. ಆದರೆ ಈಗ ಅವರ ಡ್ರೆಸ್ಸಿಂಗ್ ಸೆನ್ಸ್ ಚೆನ್ನಾಗಿ ಇದೆ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಪ್ರಭಾಸ್, ಅನುಷ್ಕಾ ಪಾಸಿಟಿವ್ ಪಾಯಿಂಟ್ ಎಂದರೆ ಅದು ಅವರ ಎತ್ತರ ಹಾಗೂ ಸೌಂದರ್ಯ. ಅನುಷ್ಕಾ ಸರಿಯಾದ ಸಮಯದಲ್ಲಿ ಕರೆ ಸ್ವೀಕರಿಸುವುದಿಲ್ಲ ಇದು ಅವರು ನೆಗೆಟಿವ್ ಪಾಯಿಂಟ್ ಎಂದು ತಿಳಿಸಿದ್ದಾರೆ.
ನನಗೆ ತೆರೆಯ ಮೇಲೆ ಕಿಸ್ಸಿಂಗ್ ಸೀನ್ ಮಾಡಲು ಮುಜುಗರ ಆಗುತ್ತದೆ ಎಂದು ಪ್ರಭಾಸ್ ಹೇಳಿದ್ದಾರೆ. ಅಲ್ಲದೆ ನಾನು ಸಿಂಗಲ್ ಆಗಿಯೇ ಇರುತ್ತೇನೆ. ಏಕೆಂದರೆ ನಾನು ಮದುವೆಯಾಗಿ ನನ್ನ ಮಹಿಳಾ ಅಭಿಮಾನಿಗಳ ಹೃದಯ ಒಡೆಯಲು ಇಷ್ಟಪಡುವುದಿಲ್ಲ ಎಂದು ಪ್ರಭಾಸ್ ಹೇಳಿದ್ದಾರೆ.
ಸಾಹೋ ಚಿತ್ರವನ್ನು ನಿರ್ದೇಶಕ ಸುಜೀತ್ ನಿರ್ದೇಶನ ಮಾಡಿದ್ದಾರೆ. ವಂಶಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ ಹಾಗೂ ಜಾಕಿ ಶ್ರಾಫ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಾಹೋ ಚಿತ್ರ ಅಗಸ್ಟ್ 30ರಂದು ಬಿಡುಗಡೆ ಆಗುತ್ತಿದೆ.
ಬೆಂಗಳೂರು: ಟಾಲಿವುಡ್ ನಟ ಪ್ರಭಾಸ್ ತಮ್ಮ ಮುಂಬರುವ ‘ಸಾಹೋ’ ಚಿತ್ರಕ್ಕಾಗಿ ಬೆಂಗಳೂರಿಗೆ ಆಗಮಸಿದ್ದಾರೆ. ಈ ವೇಳೆ ಅವರು ಬ್ರಿಗೇಡ್ ರೋಡ್ ಅನ್ನು ಅಬ್ರಾಡ್ ಎಂದುಕೊಂಡಿದ್ದ ವಿಷಯವನ್ನು ರಿವೀಲ್ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಪ್ರಭಾಸ್ ಅವರಿಗೆ ಬೆಂಗಳೂರಿನ ಬಗ್ಗೆ ಪ್ರಶ್ನಿಸಲಾಯಿತು. ಈ ವೇಳೆ ಅವರು, ನನಗೆ 16 ವರ್ಷ ಇದ್ದಾಗ ನನ್ನ ಸ್ನೇಹಿತರು ಪರೀಕ್ಷೆ ಬರೆಯಲು ಬೆಂಗಳೂರಿಗೆ ಬಂದಿದ್ದರು. ನಾನು ಕೂಡ ಅವರ ಜೊತೆ ಬಂದಿದ್ದೆ. ಆದರೆ ನಾನು ಪರೀಕ್ಷೆ ಬರೆಯಲು ಬಂದಿರಲಿಲ್ಲ. ಎಂಜಾಯ್ ಮಾಡಲೆಂದು ಬಂದಿದ್ದೆ. ಆಗ ನಾನು ಬ್ರಿಗೇಡ್ ರೋಡಿಗೆ ಹೋಗಿದ್ದೆ. . ಆಗ ಇದು ಭಾರತ ಅಲ್ಲ ವಿದೇಶ ಎಂದು ಅನಿಸುತ್ತಿತ್ತು ಎಂದರು.
ಬ್ರಿಗೇಡ್ ರೋಡಿನಲ್ಲಿ ಜನರು ಧರಿಸುವ ಉಡುಪು, ಬೈಕ್, ಕಾಫಿ ಶಾಪ್‍ಗಳು ಆ ವಾತಾವರಣ ಅಬ್ರಾಡ್ ರೀತಿ ಇತ್ತು. ಸಂಜೆ 6 ಗಂಟೆ ಆಗುತ್ತಿದ್ದಂತೆ ಮಳೆ ಹನಿ ಬೀಳುತ್ತಿತ್ತು. ಅದು ತುಂಬಾನೇ ಸುಂದರವಾಗಿತ್ತು. ಬೆಂಗಳೂರು ಯಾವಾಗಲೂ ಒಂದು ಸುಂದರ ನಗರವಾಗಿರುತ್ತದೆ. ನಾನು ಚೆನ್ನೈನಲ್ಲಿ ಹುಟ್ಟಿ ಬೆಳೆದಿದ್ದೇನೆ. ಅದು ಕೂಡ ಮಹಾನಗರ. ಆದರೆ ಬೆಂಗಳೂರು ಮಾತ್ರ ಸುಂದರವಾದ ನಗರ ಎಂದು ಹೇಳಿದರು.
ಸಾಹೋ ಆ್ಯಕ್ಷನ್ ಚಿತ್ರವಾಗಿದ್ದು, ನಿರ್ದೇಶಕ ಸುಜೀತ್ ನಿರ್ದೇಶನ ಮಾಡಿದ್ದಾರೆ. ವಂಶಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ, ಅರುಣ್ ವಿಜಯ್ ಹಾಗೂ ಜಾಕಿ ಶ್ರಾಫ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹೈದರಾಬಾದ್, ಮುಂಬೈ, ಅಬುಧಾಬಿ, ದುಬೈ, ರೋಮಾನಿಯಾ ಹಾಗೂ ಯೂರೋಪ್‍ನ ಕೆಲವು ಭಾಗಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.
ಬೆಂಗಳೂರು: ಟಾಲಿವುಡ್ ನಟ ಪ್ರಭಾಸ್ ತಮ್ಮ ಮುಂಬರುವ ‘ಸಾಹೋ’ ಚಿತ್ರದ ಪ್ರಮೋಶನ್‍ಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಮಾತು ಶುರು ಮಾಡಿದ ಅವರು, ನಿಮಗೆ ಸಾಹೋ ಟ್ರೈಲರ್ ಇಷ್ಟ ಆಗಿದೆ ಎಂದುಕೊಂಡಿದ್ದೇನೆ. ಕರ್ನಾಟಕದ ಜನತೆ ಬಾಹುಬಲಿ ಚಿತ್ರಕ್ಕೆ ತುಂಬಾ ಪ್ರೀತಿ ನೀಡಿದ್ದೀರಿ. ಅದಕ್ಕಾಗಿ ನಾನು ಧನ್ಯವಾದ ತಿಳಿಸುತ್ತೇನೆ. ಈಗ ಸಾಹೋ ಚಿತ್ರ ಬಿಡುಗಡೆಗೆ ತಯಾರಾಗಿದೆ. ನಿಮಗೆ ಇಷ್ಟ ಆಗುತ್ತೆ ಎಂದುಕೊಂಡಿದ್ದೇನೆ ಎಂದು ಹೇಳಿದರು.
ಸಾಹೋ ಚಿತ್ರ ಕನ್ನಡದಲ್ಲಿ ಡಬ್ ಆಗುತ್ತಿಲ್ಲ. ಮುಂದಿನ ಎಲ್ಲ ಚಿತ್ರಗಳನ್ನು ಡಬ್ ಮಾಡುತ್ತೇವೆ. ಬಾಹುಬಲಿ ಚಿತ್ರವನ್ನು ತಮಿಳು ಹಾಗೂ ತೆಲುಗುವಿನಲ್ಲಿ ಡಬ್ ಮಾಡಿದ್ದೇವೆ. ಆದರೆ ಹಿಂದಿ ಭಾಷೆಯಲ್ಲಿ ಡಬ್ ಮಾಡುವಾಗ ಸ್ವಲ್ಪ ಕಷ್ಟವಾಗಿತ್ತು. ಇಷ್ಟು ದಿನ ಕನ್ನಡದಲ್ಲಿ ಡಬ್ಬಿಂಗ್‍ಗೆ ಅವಕಾಶ ಇರಲಿಲ್ಲ. ಈಗ ಕನ್ನಡದಲ್ಲಿ ಡಬ್ಬಿಂಗ್ ಶುರುವಾಗಿದೆ. ಮುಂದೆ ಎಲ್ಲ ಚಿತ್ರಗಳನ್ನು ಡಬ್ ಮಾಡುತ್ತೇವೆ ಎಂದರು.
ಸಾಹೋ ಚಿತ್ರದ ಚಿತ್ರೀಕರಣ ಮುಗಿಸಲು ಒಂದೂವರೆಯಿಂದ ಎರಡು ವರ್ಷ ಬೇಕಾಯಿತು. ಮುಂಬೈ, ಹೈದರಾಬಾದ್, ಅಬುಧಾಬಿ, ಇಟಲಿ, ಆಸ್ಟ್ರೀಯಾ ದೇಶಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಬಾಹುಬಲಿ ನಂತರ ನಾನು ಲವ್ ಸ್ಟೋರಿ ಮಾಡಬೇಕು ಎಂದು ಹೇಳಿದೆ. ಆದರೆ ನನಗ ಲವ್‍ಸ್ಟೋರಿ ಸ್ಕ್ರಿಪ್ಟ್ ಸಿಗಲಿಲ್ಲ. ಆಗ ನನಗೆ ಸಾಹೋ ಚಿತ್ರದ ಸ್ಕ್ರಿಪ್ಟ್ ಸಿಕ್ತು. ಬಾಹುಬಲಿ ನಂತರ ಮತ್ತೆ ಆ್ಯಕ್ಷನ್ ಸಿನಿಮಾ ಮಾಡುವುದು ಕಷ್ಟ ಆಗಿತ್ತು. ಸಾಕಷ್ಟು ತಯಾರಿ ಮಾಡಬೇಕಾಗಿತ್ತು. ಹಾಗಾಗಿ ಸಿನಿಮಾ ಸ್ವಲ್ಪ ತಡವಾಯಿತು ಎಂದರು.
ಸಂಸ್ಕೃತದಲ್ಲಿ ಸಾಹೋ ಎಂದರೆ ‘ಜೈಹೋ’ ಎಂದರ್ಥ. ಈ ಚಿತ್ರದ ಟೈಟಲ್ ಏಕೆ ಆಯ್ಕೆ ಮಾಡಿದ್ದೇವೆ ಎಂದು ತಿಳಿಯಲು ನೀವು ಸಿನಿಮಾವನ್ನು ನೋಡಬೇಕು. ‘ಚತ್ರಪತಿ’ ನಂತರ ನಾನು ‘ಡಾರ್ಲಿಂಗ್’ ಹಾಗೂ ‘ಮಿ. ಪರ್ಫೆಕ್ಟ್’ ಸಿನಿಮಾದಲ್ಲಿ ನಟಿಸಿದ್ದೆ. ಈ ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. ಸದ್ಯ ಸಾಹೋ ಚಿತ್ರದ ನಂತರ ನಾನು ಲವ್ ಸ್ಟೋರಿ ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರದ ಚಿತ್ರೀಕರಣ ಕೂಡ ಈಗ ಶುರುವಾಗಿದೆ ಎಂದು ಹೇಳಿದರು.
ಬಾಹುಬಲಿ ಚಿತ್ರ ಇತಿಹಾಸ ನಿರ್ಮಿಸಿದೆ. ಬಾಹುಬಲಿ ಚಿತ್ರದಿಂದ ನಾನು ಇಡೀ ಭಾರತಕ್ಕೆ ಪರಿಚಯನಾಗಿದ್ದೇನೆ. ಬಾಹುಬಲಿ ಯಾವಾಗಲೂ ನನ್ನ ಫೆವರೆಟ್ ಚಿತ್ರ ಆಗಿರುತ್ತದೆ. ಸದ್ಯ ಸಾಹೋ ಚಿತ್ರದ ಒಂದು ಆ್ಯಕ್ಷನ್ ದೃಶ್ಯಕ್ಕೆ ನಿರ್ಮಾಪಕರು 75 ಕೋಟಿ ರೂ. ಖರ್ಚು ಮಾಡಿದ್ದಾರೆ. ಪ್ರಪಂಚದ ಬೆಸ್ಟ್ ತಜ್ಞರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಬಾಹುಬಲಿ ಚಿತ್ರದಲ್ಲಿ ತೂಕ ಹೆಚ್ಚಿಸಿಕೊಳ್ಳಲು ಸಾಕಷ್ಟು ಮಾಂಸಾಹಾರ ತಿನ್ನ ಬೇಕಾಯಿತು. ಆದರೆ ಸಾಹೋ ಚಿತ್ರಕ್ಕೆ ತೂಕ ಇಳಿಸಿಕೊಳ್ಳಲು ನಾನು ಸಸ್ಯಹಾರಿ ಆಗಿದ್ದೆ. ನನ್ನಿಂದ ಹಲವು ಪ್ರಾಣಿಗಳ ಜೀವ ಉಳಿಯಿತು. ಚಿತ್ರದ ಪಾತ್ರಕ್ಕೆ ತಕ್ಕಂತೆ ನಾನು ದೇಹದ ತೂಕ ಬದಲಾಯಿಸಬೇಕು. 350 ಕೋಟಿ ರೂ. ಚಿತ್ರದಲ್ಲಿ ನಿರ್ಮಾಣವಾಗುತ್ತಿದ್ದರಿಂದ ಸಾಕಷ್ಟು ಪ್ಲಾನಿಂಗ್ ಇತ್ತು. ಈ ಚಿತ್ರಕ್ಕಾಗಿ ಶ್ರದ್ಧಾ ಕಪೂರ್ ಅವರು ಸಾಕಷ್ಟು ಸಮಯವನ್ನು ಕೊಟ್ಟಿದ್ದಾರೆ ಎಂದು ಹೇಳಿದರು.
ನಾನು ಸಾಕಷ್ಟು ಕನ್ನಡ ಸಿನಿಮಾಗಳನ್ನು ನೋಡಿದ್ದೇನೆ. ಇತ್ತೀಚೆಗೆ ನಾನು ಕೆಜಿಎಫ್ ಸಿನಿಮಾವನ್ನು ವೀಕ್ಷಿಸಿದೆ. ಈ ಚಿತ್ರ ತೆಲುಗುವಿನಲ್ಲೂ ಬಿಡುಗಡೆ ಆಗಿತ್ತು. ತೆಲುಗು ಅಭಿಮಾನಿಗಳು ಸೇರಿದಂತೆ ಭಾರತದ ಪ್ರೇಕ್ಷಕರು ಕೆಜಿಎಫ್ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಬಳಿಕ ಮಹಾಭಾರತದ ಚಿತ್ರದ ಬಗ್ಗೆ ಮಾತನಾಡಿದ ಅವರು, ಮಹಾಭಾರತದಲ್ಲಿ ನನಗೆ ಯಾವ ಪಾತ್ರ ಕೊಟ್ಟರು ನಾನು ಮಾಡುತ್ತೇನೆ. ಆದರೆ ಕರ್ಣ ಮತ್ತೆ ಅರ್ಜುನ ನನ್ನ ಇಷ್ಟವಾದ ಪಾತ್ರ ಎಂದು ಹೇಳಿದ್ದಾರೆ.
ಎಲ್ಲಾ ರಾಜ್ಯದ ಸಿನಿಮಾಗಳು ಈಗ ಭಾರತಾದ್ಯಂತ ಬಿಡುಗಡೆ ಆಗುತ್ತಿದೆ. ಕೆಜಿಎಫ್ ಚಿತ್ರ ಭಾರತದಲ್ಲಿ ಸೂಪರ್ ಹಿಟ್ ಆಗಿದೆ. ಬಾಹುಬಲಿ ಕೂಡ ಹೆಸರು ಮಾಡಿದೆ. ಮುಂದೆ ಪಂಜಾಬ್ ಸೇರಿದಂತೆ ಬೇರೆ ರಾಜ್ಯದ ಸಿನಿಮಾಗಳು ಭಾರತಾದ್ಯಂತ ಸದ್ದು ಮಾಡಲಿದೆ. ಒಟ್ಟಿನಲ್ಲಿ ಒಂದೇ ಭಾರತ ಆಗಲಿದೆ. ಇದು ತುಂಬಾ ಸುಂದರವಾದ ವಿಷಯ ಎಂದು ಪ್ರಭಾಸ್ ತಿಳಿಸಿದರು.
ನಾವು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಮಾಡಿದ್ದೇವೆ. ನಿಮಗೆ ಆ್ಯಕ್ಷನ್ ಸಿನಿಮಾ ಇಷ್ಟವಾಗುತ್ತೆ ಎಂದುಕೊಂಡಿದ್ದೇನೆ. ಈ ಚಿತ್ರಕ್ಕಾಗಿ ನಾನು ಹಾಗೂ ಶ್ರದ್ಧಾ ಕಪೂರ್ ಟ್ರೈನಿಂಗ್ ಮಾಡಿದ್ದೇವೆ. ತಂತ್ರಜ್ಞರು, ಚಿತ್ರತಂಡ ಹಾಗೂ ನಿರ್ದೇಶಕರು ಈ ಸಿನಿಮಾಕ್ಕಾಗಿ ಹೆಚ್ಚು ಪ್ಲಾನಿಂಗ್ ಮಾಡಿಕೊಂಡಿದ್ದರು. ಹಾಲಿವುಡ್‍ನಿಂದ ನಾಲ್ಕೈದು ಮಂದಿ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ನಿಜವಾದ ಸ್ಟಂಟ್‍ಗಳನ್ನು ಮಾಡಲಾಗಿದೆ.
ಹೈದರಾಬಾದ್: ಬಾಹುಬಲಿ ಪ್ರಭಾಸ್ ಅವರು ತಮ್ಮ ಗೆಳತಿ, ನಟಿ ಅನುಷ್ಕಾ ಶೆಟ್ಟಿಗಾಗಿ ಮುಂಬರುವ ‘ಸಾಹೋ’ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಆಯೋಜಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ನಟಿಸಿದ ‘ಸಾಹೋ’ ಚಿತ್ರ ಇದೇ ತಿಂಗಳು 30ರಂದು ಬಿಡುಗಡೆಯಾಗಲಿದೆ. ಈ ಚಿತ್ರ ಬಿಡುಗಡೆ ಮೊದಲು ಪ್ರಭಾಸ್ ಅವರು ತಮ್ಮ ಗೆಳತಿ ಅನುಷ್ಕಾ ಶೆಟ್ಟಿ ಅವರಿಗಾಗಿ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಆಯೋಜಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಸ್ಕ್ರೀನಿಂಗ್ ಯಾವಾಗ ಹಾಗೂ ಎಲ್ಲಿ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ ಈ ಬಗ್ಗೆ ಪ್ರಭಾಸ್ ಆಗಲಿ ಅನುಷ್ಕಾ ಆಗಲಿ ಅಧಿಕೃತ ಮಾಹಿತಿ ನೀಡಿಲ್ಲ.
ನಟ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಭಾರತೀಯ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಆದರೆ ಪ್ರಭಾಸ್ ಹಾಗೂ ಅನುಷ್ಕಾ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಅಷ್ಟೇ. ನಾವು ಡೇಟಿಂಗ್ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆದರೂ ಅಭಿಮಾನಿಗಳು ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂದು ತಿಳಿದುಕೊಂಡಿದ್ದಾರೆ.
ಈ ಗಾಸಿಪ್‍ಗಳ ನಡುವೆ ಪ್ರಭಾಸ್ ಯುಎಸ್ ಯುವತಿಯ ಜೊತೆ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಯುವತಿಯ ಕುಟುಂಬಸ್ಥರು ಪ್ರಭಾಸ್ ಕುಟುಂಬಕ್ಕೆ ಆತ್ಮೀಯರು ಎನ್ನಲಾಗಿದೆ. ಪ್ರಭಾಸ್ ಕುಟುಂಬಸ್ಥರು ಈಗಾಗಲೇ ಮದುವೆಯ ಮಾತುಕತೆ ಕೂಡ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಪ್ರಭಾಸ್ ಕುಟುಂಬಸ್ಥರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಸಾಹೋ ಆ್ಯಕ್ಷನ್ ಚಿತ್ರವಾಗಿದ್ದು, ನಿರ್ದೇಶಕ ಸುಜೀತ್ ನಿರ್ದೇಶನ ಮಾಡಿದ್ದಾರೆ. ವಂಶಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ, ಅರುಣ್ ವಿಜಯ್ ಹಾಗೂ ಜಾಕಿ ಶ್ರಾಫ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹೈದರಾಬಾದ್, ಮುಂಬೈ, ಅಬುಧಾಬಿ, ದುಬೈ, ರೋಮಾನಿಯಾ ಹಾಗೂ ಯೂರೋಪ್‍ನ ಕೆಲವು ಭಾಗಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.
ಹೈದರಾಬಾದ್: ಸ್ಟಾರ್ ನಟ-ನಟಿಯರು ಅಭಿನಯಿಸುವ ಸಿನಿಮಾಗಳು ಸಕ್ಸಸ್ ಆಗುತ್ತಿದ್ದಂತೆ ಅವರು ಪಡೆದುಕೊಳ್ಳುವ ಸಂಭಾವನೆಯೂ ಕೂಡ ಸಿನಿಮಾದಿಂದ ಸಿನಿಮಾಗೆ ಹೆಚ್ಚಾಗುತ್ತದೆ. ಇದೀಗ ಬಹುನಿರೀಕ್ಷಿತ ‘ಸಾಹೋ’ ಸಿನಿಮಾದಲ್ಲಿ ಲೀಡ್ ರೋಲಿನಲ್ಲಿ ಅಭಿನಯಿಸಿರುವ ನಟ ಪ್ರಭಾಸ್ ಮತ್ತು ನಟಿ ಶ್ರದ್ಧಾ ಕಪೂರ್ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಸಲ್ಮಾನ್ ಖಾನ್, ಶಾರೂಕ್ ಖಾನ್, ಅಮೀರ್ ಖಾನ್ ಅಂತಹ ನಟರು ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಇದೀಗ ಇವರೆಲ್ಲರನ್ನೂ ಹಿಂದಿಕ್ಕಿ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಮೊದಲ ಸ್ಥಾನಕ್ಕೆ ಬರುತ್ತಿದ್ದಾರೆ. ಬಾಹುಬಲಿ ನಂತರ ಪ್ರಭಾಸ್ ನಟಿಸುತ್ತಿರುವ ‘ಸಾಹೋ’ ಚಿತ್ರದಲ್ಲಿ ಪ್ರಭಾಸ್‍ಗೆ ದುಬಾರಿ ಸಂಭಾವನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಅಷ್ಟೇ ಅಲ್ಲದೇ ಪ್ರಭಾಸ್ ಕಾಲ್ ಶೀಟ್‍ಗಾಗಿ ನಿರ್ಮಾಪಕರು ಕಾದು ಕುಳಿತಿದ್ದಾರೆ. ಇದರಿಂದಾಗಿ ಅವರ ಸಂಭಾವನೆ ಗಗನಕ್ಕೇರಿದೆ. ‘ಸಾಹೋ’ ಬಹುಭಾಷೆಯ ಚಿತ್ರವಾಗಿದ್ದು, ಇದೇ ಆಗಸ್ಟ್ 30 ರಂದು ‘ಸಾಹೋ’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರಕ್ಕಾಗಿ ಪ್ರಭಾಸ್ 100 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ವೆಬ್ ಸೈಟ್‍ಯೊಂದು ವರದಿ ಮಾಡಿದೆ.
ಈ ಮೂಲಕ ಪ್ರಭಾಸ್ ಅವರು ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟರಲ್ಲಿ ಒಬ್ಬರಾಗುತ್ತಾರೆ. ಅಲ್ಲದೇ ಚಿತ್ರದ ಬಿಡುಗಡೆಯ ಪೂರ್ವ ನಡೆಯುವ ವ್ಯವಹಾರದ ಶೇ.50ರಷ್ಟು ಮೊತ್ತವನ್ನ ಪ್ರಭಾಸ್ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಖಚಿತವಾಗಿಲ್ಲ.
ಈ ಸಿನಿಮಾದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿರುವ ನಟಿ ಶ್ರದ್ಧಾಗೆ ಬರೋಬ್ಬರಿ 7 ಕೋಟಿ ರೂ. ಸಂಭಾವನೆ ನೀಡಲಾಗಿದೆ. ಹೀಗಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿಯರ ಪಟ್ಟಿಯಲ್ಲಿ ಶ್ರದ್ಧಾ ಸ್ಥಾನ ಪಡೆದುಕೊಂಡಿದ್ದಾರೆ.
ಹೈದಾರಾಬಾದ್: ಟಾಲಿವುಡ್ ನಟ ಪ್ರಭಾಸ್ ಹಾಗೂ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ನಟಿಸುತ್ತಿರುವ ‘ಸಾಹೋ’ ಚಿತ್ರದ ರೊಮ್ಯಾಂಟಿಕ್ ಫೋಟೋ ಲೀಕ್ ಆಗಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಲೀಕ್ ಆಗಿರುವ ಫೋಟೋದಲ್ಲಿ ಪ್ರಭಾಸ್ ಹಾಗೂ ಶ್ರದ್ಧಾ ಪ್ರೀತಿಯಿಂದ ಒಬ್ಬರನೊಬ್ಬರು ರೊಮ್ಯಾಂಟಿಕ್ ಆಗಿ ನೋಡುತ್ತಿದ್ದಾರೆ. ಈ ಫೋಟೋದಲ್ಲಿ ಶ್ರದ್ಧಾ ಗುಲಾಬಿ ಬಣ್ಣದ ಉಡುಪು ಧರಿಸಿದರೆ, ಪ್ರಭಾಸ್ ಬಿಳಿ ಬಣ್ಣದ ಟಿ-ಶರ್ಟ್ ಧರಿಸಿದ್ದಾರೆ.
ಸಾಹೋ ಆ್ಯಕ್ಷನ್ ಚಿತ್ರವಾಗಿದ್ದು, ನಿರ್ದೇಶಕ ಸುಜೀತ್ ನಿರ್ದೇಶನ ಮಾಡುತ್ತಿದ್ದಾರೆ. ವಂಶಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ, ಅರುಣ್ ವಿಜಯ್ ಹಾಗೂ ಜಾಕಿ ಶ್ರಾಫ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಹೈದರಾಬಾದ್, ಮುಂಬೈ, ಅಬುಧಾಬಿ, ದುಬೈ, ರೋಮಾನಿಯಾ ಹಾಗೂ ಯೂರೋಪ್‍ನ ಕೆಲವು ಭಾಗಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇದೇ ವರ್ಷ ಅಗಸ್ಟ್ 15 ಸ್ವತಂತ್ರ್ಯ ದಿನಾಚರಣೆಯಂದು ಸಾಹೋ ಚಿತ್ರ ಬಿಡುಗಡೆ ಆಗಲಿದೆ.
ಹೈದರಾಬಾದ್: ಸಾಮಾಜಿಕ ಜಾಲತಾಣದಲ್ಲಿ ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರಿಗೆ ಸಂಬಂಧಿಸಿದ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಇದರಲ್ಲಿ ಅಭಿಮಾನಿಯೊಬ್ಬರು ಮಾಡಿದ ತರಲೆಯ ದೃಶ್ಯವನ್ನ ಕಾಣಬಹುದಾಗಿದೆ.
ವಿಡಿಯೋದಲ್ಲಿ ನಟ ಪ್ರಭಾಸ್‍ರೊಂದಿಗೆ ಸೆಲ್ಫಿ ಕೇಳಿದ ಅಭಿಮಾನಿ ಮನವಿಗೆ ಸಮ್ಮಿತಿಸಿ ಫೋಟೋಗೆ ಪೋಸ್ ಕೊಟುತ್ತಾರೆ. ಆದರೆ ನೆಚ್ಚಿನ ನಟನ ಜೊತೆ ಸೆಲ್ಫಿ ಪಡೆದ ಸಂಭ್ರಮದಲ್ಲಿದ್ದ ಯುವತಿ ಸ್ಥಳದಲ್ಲೇ ಕುಣಿದು ಸಂತಸ ಪಡುತ್ತಾಳೆ. ಆದರೆ ಅಂತಿಮ ಕ್ಷಣದಲ್ಲಿ ಯುವತಿ ಪ್ರಭಾಸ್ ಕೆನ್ನೆ ಟಚ್ ಮಾಡಲು ಯತ್ನಿಸಿದ್ದು, ಆದರೆ ಆಕೆ ಸಂಭ್ರಮಿದಲ್ಲಿದ್ದ ಕಾರಣ ಅದು ಪ್ರಭಾಸ್ ಕೆನ್ನೆಗೆ ಬಾರಿಸಿದಂತೆ ಕಾಣಿಸುತ್ತದೆ.
ಇದಾದ ವೇಳೆಯೇ ಮತ್ತಷ್ಟು ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳಲು ಮುಂದಾದರೂ ಕೂಡ ಯುವತಿಯ ಅಚಾನಕ್ ವರ್ತನೆ ಕಂಡ ಪ್ರಭಾಸ್ ಮಾತ್ರ ಕೆನ್ನೆ ನೆವರಿಸಿಕೊಂಡು ಮತ್ತೆ ಫೋಟೋ ಪೋಸ್ ಕೊಡುತ್ತಾರೆ.
ಪ್ರಭಾಸ್ ಸದ್ಯ ಸಾಹೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಚಿತ್ರ ಈಗಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಮಾರ್ಚ್ 3ರಂದು ಚಿತ್ರದ ನಾಯಕಿ ಶ್ರದ್ಧಾ ಕಪೂರ್ ಹುಟ್ಟುಹಬ್ಬದ ನಿಮಿತ್ತ ಚಿತ್ರತಂಡ ಸಿನಿಮಾ ವಿಡಿಯೋ ಬಿಡುಗಡೆ ಮಾಡಿ ಗಿಫ್ಟ್ ನೀಡಿತ್ತು.
ಚಿತ್ರದ ತಾರಾಗಣವೂ ಕೂಡ ಹಲವು ಬಾಲಿವುಡ್ ನಟರನ್ನು ಒಳಗೊಂಡಿದೆ. ಸಾಹೋ 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದ್ದು, ಹಿಂದಿ, ತೆಲುವು, ತಮಿಳು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.
ಹೈದರಾಬಾದ್: ಬಾಲಿವುಡ್ ಅಂಗಳದ ಆಶಿಕಿ ಬೆಡಗಿ ಶ್ರದ್ಧಾ ಕಪೂರ್ ಇಂದು ತಮ್ಮ 32ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಟಾಲಿವುಡ್ ಚೆಲುವ ಪ್ರಭಾಸ್ ನಟಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದ ಶೈಲಿಗೆ ಬಾಹುಬಲಿಯ ಅಭಿಮಾನಿಗಳು ಮಾತ್ರ ಫುಲ್ ಖುಷ್ ಆಗಿದ್ದಾರೆ.
ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಸಾಹೋ ಚಿತ್ರದ ನಟಿಯಾಗಿರುವ ಶ್ರದ್ಧಾ ಕಪೂರ್ ಬರ್ತ್ ಡೇ ಶುಭಕೋರಿ, ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದ್ದಾರೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ನಿರೀಕ್ಷೆ ಹುಟ್ಟುಹಾಕಿರುವ ಸಾಹೋದ ಸಣ್ಣ ಝಲಕ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇದೀಗ ಚಿತ್ರದ ಆ್ಯಕ್ಷನ್ ಧಮಾಕಾದ ಜೊತೆಗೆ ಮೇಕಿಂಗ್ ವಿಡಿಯೋ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಾಹೋ ಚಿತ್ರತಂಡ ಹಬ್ಬದೂಟವನ್ನೇ ನೀಡಿದೆ.
ಸಾಹೋ ಸಿನಿಮಾದಲ್ಲಿ ಪ್ರಭಾಸ್ ಗೆ ಜೊತೆಯಾಗಿ ಶ್ರದ್ಧಾಕಪೂರ್ ನಟಿಸುತ್ತಿದ್ದಾರೆ. ಪಕ್ಕಾ ಆ್ಯಕ್ಷನ್ ಕಥೆಯನ್ನು ಒಳಗೊಂಡಿರುವ ಸಾಹೋ ಇದೇ ಆಗಸ್ಟ್ 15ರಂದು ತೆರೆಕಾಣಲಿದೆ. 300 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಸುಜೀತ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಿಂದಿ, ತಮಿಳು ಮತ್ತು ತೆಲುಗು ಮೂರು ಭಾಷೆಗಳಲ್ಲಿ ರಿಲೀಸ್ ಆಗಲಿದೆ.
ಹೈದರಾಬಾದ್: ಬಾಹುಬಲಿ ಸಿನಿಮಾ ತೆರೆಕಂಡು ಎರಡೂವರೆ ವರ್ಷಗಳೇ ಕಳೆದಿದ್ದರೂ, ಸಿನಿಮಾ ಬಗ್ಗೆ ಜನ ಇಂದಿಗೂ ಮಾತನಾಡುತ್ತಾರೆ. ಬಿಡುಗಡೆಯಾಗುವ ಹೊಸ ಸಿನಿಮಾಗಳನ್ನು ಬಾಹುಬಲಿ ಜೊತೆ ಹೋಲಿಕೆ ಮಾಡೋದನ್ನು ಕೇಳಿರುತ್ತೇವೆ. ವಿಶ್ವದಾದ್ಯಂತ ತೆರೆಕಂಡಿದ್ದ ಬಾಹುಬಲಿ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ನಟ ಪ್ರಭಾಸ್ ಬಾಹುಬಲಿ ಸಿನಿಮಾದಿಂದ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಪ್ರಭಾಸ್ ತಮ್ಮ ಜಪಾನಿ ಅಭಿಮಾನಿಗಳಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ್ದಾರೆ.
ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಪ್ರಭಾಸ್ ಹಾಕಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಮ್ಮ ಹೊಸ ಫೋಟೋಗಳ ಮೇಲೆ ಆಟೋಗ್ರಾಫ್ ಹಾಕಿ, ಹೊಸ ವರ್ಷಕ್ಕೆ ನಿಮಗಿದು ಇಷ್ಟವಾಗಬಹುದು. ಇದು ನನ್ನ ಜಪಾನಿ ಅಭಿಮಾನಿಗಳಿಗಾಗಿ ಎಂದು ಪ್ರಭಾಸ್ ಬರೆದುಕೊಂಡಿದ್ದಾರೆ.
ಬಾಹುಬಲಿ ಬಳಿಕ ಪ್ರಭಾಸ್ ಸಾಹೋ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರ ಆಗಸ್ಟ್ 15ರಂದು ತೆರೆಕಾಣಲಿದೆ. ಸಾಹೋ ಸಿನಿಮಾದ ಬಹುತೇಕ ಚಿತ್ರೀಕರಣ ಜಪಾನ್ ನಲ್ಲಿ ನಡೆದಿದೆ. ಚಿತ್ರೀಕರಣಕ್ಕಾಗಿ ಹಲವು ದಿನ ಜಪಾನ್ ನಲ್ಲಿ ಉಳಿದುಕೊಂಡಿದ್ದ ಪ್ರಭಾಸ್ ಅಲ್ಲಿಯ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸಾಹೋ ಚಿತ್ರದ ಟ್ರೇಲರ್ ಬಿಡುಗಡೆಗೂ ಮುನ್ನ ಜಪಾನ್ ಅಭಿಮಾನಿಗಳನ್ನು ಕರೆಸಿ ಹೈದರಾಬಾದ್ ನಿವಾಸದಲ್ಲಿ ಔತಣ ಕೂಟ ಆಯೋಜಿಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಸಾಹೋ ಸುಜೀತ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಬಾಲಿವುಡ್ ಆಶಿಕಿ ಬೆಡಗಿ ಶ್ರದ್ಧಾ ಕಪೂರ್ ಈ ಚಿತ್ರದ ಮೂಲಕ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ನೀಲ್ ನಿತಿನ್ ಮುಖೇಶ್, ಜಾಕಿ ಶ್ರಾಫ್, ಅರುಣ್ ವಿಜಯ್ ಒಳಗೊಂಡಂತೆ ದೊಡ್ಡ ತಾರಾಗಣವನ್ನು ಸಾಹೋ ಹೊಂದಿದೆ.