Tag: SA Bobde

  • ಸಂಸ್ಕೃತ ಯಾಕೆ ಭಾರತದ ಅಧಿಕೃತ ಭಾಷೆಯಾಗಬಾರದು – ನಿವೃತ್ತ ಸಿಜೆಐ ಎಸ್‌.ಎ.ಬೋಬ್ಡೆ ಪ್ರಶ್ನೆ

    ಸಂಸ್ಕೃತ ಯಾಕೆ ಭಾರತದ ಅಧಿಕೃತ ಭಾಷೆಯಾಗಬಾರದು – ನಿವೃತ್ತ ಸಿಜೆಐ ಎಸ್‌.ಎ.ಬೋಬ್ಡೆ ಪ್ರಶ್ನೆ

    ಮುಂಬೈ: ಸಂಸ್ಕೃತ (Sanskrit) ಏಕೆ ಭಾರತದ ಅಧಿಕೃತ ಭಾಷೆಯಾಗಬಾರದು? 1949 ರ ಮಾಧ್ಯಮ ವರದಿಗಳ ಪ್ರಕಾರ, ಸಂವಿಧಾನ ಶಿಲ್ಪಿ ಮತ್ತು ಖ್ಯಾತ ನ್ಯಾಯಶಾಸ್ತ್ರಜ್ಞ ಬಿ.ಆರ್.ಅಂಬೇಡ್ಕರ್ (BR Ambedkar) ಅವರು ಕೂಡ ಇದನ್ನು ಪ್ರಸ್ತಾಪಿಸಿದ್ದರು ಎಂದು ಸುಪ್ರೀಂ ಕೋರ್ಟ್‌ನ (Supreme Court) ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ (S.A.Bobde) ಹೇಳಿದ್ದಾರೆ.

    ಸಂಸ್ಕೃತ ಭಾರತಿ ಆಯೋಜಿಸಿದ್ದ ಅಖಿಲ ಭಾರತೀಯ ಛಾತ್ರ ಸಮ್ಮೇಳನದಲ್ಲಿ ಬೋಬ್ಡೆ ಅವರು ಮಾತನಾಡಿ, ಆಡಳಿತ ಮತ್ತು ನ್ಯಾಯಾಲಯಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಅನ್ನು ಅಧಿಕೃತ ಭಾಷೆಗಳಾಗಿ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 1 ವರದಿಗೆ ಕರಗಿತು 4 ಲಕ್ಷ ಕೋಟಿ ಸಂಪತ್ತು – 7ನೇ ಸ್ಥಾನಕ್ಕೆ ಜಾರಿದ ಅದಾನಿ: ಯಾವುದು ಎಷ್ಟು ಇಳಿಕೆ?

    ಉಚ್ಚ ನ್ಯಾಯಾಲಯದ ಮಟ್ಟದಲ್ಲಿ ಇಂಗ್ಲಿಷ್ ಇಂಗ್ಲಿಷ್ ಅಧಿಕೃತ ಭಾಷೆಯಾಗಿದೆ. ಆದರೂ ಅನೇಕ ಹೈಕೋರ್ಟ್‌ಗಳು ಪ್ರಾದೇಶಿಕ ಭಾಷೆಗಳಲ್ಲಿ ಅರ್ಜಿಗಳು ಮತ್ತು ದಾಖಲೆಗಳನ್ನು ಸಹ ಅನುಮತಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಈ ಸಮಸ್ಯೆಯು (ಅಧಿಕೃತ ಭಾಷೆ) ಬಗೆಹರಿಯದೆ ಉಳಿಯಬೇಕು ಎಂದು ನಾನು ಭಾವಿಸುವುದಿಲ್ಲ. ಇದು 1949 ರಿಂದ ಇತ್ಯರ್ಥವಾಗದೆ ಉಳಿದಿದೆ. ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ತಪ್ಪು ಸಂವಹನವಾಗುವ ಗಂಭೀರ ಅಪಾಯಗಳಿವೆ ಎಂದು ಎಚ್ಚರಿಸಿದ್ದಾರೆ.

    1949ರ ಸೆಪ್ಟೆಂಬರ್ 11 ರಲ್ಲಿ ಪತ್ರಿಕೆಗಳು, ಡಾ ಅಂಬೇಡ್ಕರ್ ಅವರು ಸಂಸ್ಕೃತವನ್ನು ಭಾರತ ಒಕ್ಕೂಟದ ಅಧಿಕೃತ ಭಾಷೆಯನ್ನಾಗಿ ಮಾಡುವ ಕ್ರಮವನ್ನು ಪ್ರಾರಂಭಿಸಿದರು ಎಂದು ವರದಿ ಮಾಡಿದೆ. ನಮ್ಮ ಬಹಳಷ್ಟು ಭಾಷೆಗಳಲ್ಲಿ ಸಂಸ್ಕೃತ ಶಬ್ದ ಸಂಪತ್ತಿದೆ. ಅಂಬೇಡ್ಕರ್ ಅವರು ಪ್ರಸ್ತಾಪಿಸಿದಂತೆ ಸಂಸ್ಕೃತ ಅಧಿಕೃತ ಭಾಷೆಯಾಗದಿರಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದ ʼGo First’ಗೆ 10 ಲಕ್ಷ ದಂಡ

    ಸಂಸ್ಕೃತ ಯಾವುದೇ ಧರ್ಮವನ್ನು ಪರಿಚಯಿಸುವುದಿಲ್ಲ. ಭಾಷೆಗಳಿಗೆ ಯಾವುದೇ ಧರ್ಮದೊಂದಿಗೆ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಆದರೆ ತತ್ವಶಾಸ್ತ್ರ, ಕಾನೂನು, ವಿಜ್ಞಾನ, ಸಾಹಿತ್ಯ, ವಾಸ್ತುಶಿಲ್ಪ, ಖಗೋಳಶಾಸ್ತ್ರ ಇತ್ಯಾದಿ ವಿಷಗಳೊಂದಿಗೆ ಭಾಷೆ ಸಂಬಂಧವನ್ನು ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.

    ಸಂಸ್ಕೃತ ಭಾಷೆಯು ದಕ್ಷಿಣ ಅಥವಾ ಉತ್ತರ ಭಾರತಕ್ಕೆ ಸೇರಿಲ್ಲ. ಇದು ಜಾತ್ಯತೀತ ಬಳಕೆಗೆ ಸಂಪೂರ್ಣವಾಗಿ ಸಮರ್ಥವಾಗಿದೆ. ಈ ಭಾಷೆ ಕಂಪ್ಯೂಟರ್‌ಗಳಿಗೆ ಹೆಚ್ಚು ಸೂಕ್ತವಾದದ್ದು ಎಂದು ನಾಸಾ ವಿಜ್ಞಾನಿಯೊಬ್ಬರು ಕಂಡುಕೊಂಡಿದ್ದಾರೆ. ಆ ವಿಜ್ಞಾನಿ ‘ಸಂಸ್ಕೃತ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಜ್ಞಾನ ಪ್ರಾತಿನಿಧ್ಯ’ ಎಂಬ ಲೇಖನವನ್ನು ಬರೆದಿದ್ದಾರೆ. ಸಾಧ್ಯವಾದಷ್ಟು ಕಡಿಮೆ ಪದಗಳಲ್ಲಿ ಸಂದೇಶಗಳನ್ನು ಸಂವಹನ ಮಾಡಲು ಸಂಸ್ಕೃತವನ್ನು ಬಳಸಬಹುದು ಎಂದು ಅವರು ಅದರಲ್ಲಿ ಉಲ್ಲೇಖಿಸಿದ್ದಾರೆಂದು ಹೇಳಿದ್ದಾರೆ.

    ಸಮೀಕ್ಷೆಯೊಂದನ್ನು ಉಲ್ಲೇಖಿಸಿ ಮಾತನಾಡಿದ ಬೋಬ್ಡೆ, ಶೇ.43.63 ರಷ್ಟು ನಾಗರಿಕರು ಹಿಂದಿ ಮಾತನಾಡುತ್ತಾರೆ. ಆದರೆ ಕೇವಲ ಶೇ.6ರಷ್ಟು ಜನರು ಇಂಗ್ಲಿಷ್ ಮಾತನಾಡುತ್ತಾರೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಶೇ.3 ಕ್ಕೆ ಇಳಿಯುತ್ತದೆ. ಶೇ.41 ರಷ್ಟು ಶ್ರೀಮಂತರು ಇಂಗ್ಲಿಷ್ ಮಾತನಾಡುತ್ತಾರೆ. ಆದರೆ ಬಡವರಲ್ಲಿ ಇದು ಕೇವಲ ಶೇ.2ಕ್ಕೆ ಇಳಿಯುತ್ತದೆ. ಸಂಸ್ಕೃತವು ಪ್ರಾಯಶಃ ನಮ್ಮ ಪ್ರಾದೇಶಿಕ ಭಾಷೆಗಳೊಂದಿಗೆ ಸಹ ಅಸ್ತಿತ್ವದಲ್ಲಿರಬಹುದಾದ ಏಕೈಕ ಭಾಷೆಯಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಇದೇ ವೇಳೆ ಭಾರತ ಸಂವಿಧಾನದ 8ನೇ ಅನುಸೂಚಿಯನ್ನೂ ಉಲ್ಲೇಖಿಸಿದರು. ಇದನ್ನೂ ಓದಿ: ಜೆಎನ್‌ಯು, ಜಾಮಿಯಾ ಬಳಿಕ ದೆಹಲಿ ವಿವಿಗೆ ಕಾಲಿಟ್ಟ ಮೋದಿ ಸಾಕ್ಷ್ಯಚಿತ್ರ ವಿವಾದ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ.ರಮಣ ಪ್ರಮಾಣವಚನ ಸ್ವೀಕಾರ

    ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ.ರಮಣ ಪ್ರಮಾಣವಚನ ಸ್ವೀಕಾರ

    ನವದೆಹಲಿ: ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಸುಪ್ರೀಂ ಕೋರ್ಟ್‍ನ ಹಿರಿಯ ನ್ಯಾಯಾಧೀಶರಾದ ಎನ್.ವಿ ರಮಣ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

    ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರಿಂದಾಗಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎನ್.ವಿ.ರಮಣ ಅವರು ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು. ಎನ್.ವಿ.ರಮಣ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣವಚನ ಬೋಧಿಸಿದರು.

    ಕಳೆದ ತಿಂಗಳು ಹಾಲಿ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ಅವರು ಮುಂದಿನ ನ್ಯಾಯಮೂರ್ತಿಯಾಗಿ ಎನ್.ವಿ ರಮಣ ಅವರನ್ನು ಶಿಫಾರಸು ಮಾಡಿದ್ದರು. ಇದರಂತೆ ಇದೀಗ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ ರಮಣ ಅವರು ಅಧಿಕಾರ ಸ್ವೀಕರಿಸಿದ್ದಾರೆ. 1957 ಆಗಸ್ಟ್ 27ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ, ಪೊನ್ನವರಂನಲ್ಲಿ ಜನಿಸಿದ ರಮಣ ಅವರು, 1983 ಫೆಬ್ರವರಿ 10 ರಂದು ವಕೀಲರಾಗಿ ಸೇವೆ ಆರಂಭಿಸಿದರು. ನಂತರ 2000ರ ಜೂನ್ ನಲ್ಲಿ ಆಂಧ್ರ ಪ್ರದೇಶದ ಹೈಕೋರ್ಟ್‍ಗೆ ಖಾಯಂ ನ್ಯಾಯಾಧೀಶರಾಗಿ ನೇಮಕವಾಗಿದ್ದರು. ಬಳಿಕ 2013 ರಲ್ಲಿ ರಮಣ ಅವರು ದೆಹಲಿ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡು ಸೇವೆ ಸಲ್ಲಿಸಿದ್ದರು. ನಂತರ 2014ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಅವರನ್ನು ಉನ್ನತೀಕರಿಸಲಾಯಿತು. ಇದೀಗ ಸುಪ್ರೀಂ ಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಅಧಿಕಾರ ಸ್ವೀಕರಿಸಿದ್ದಾರೆ.

    ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಅತಿ ಹೆಚ್ಚು ಸೇವಾ ಹಿರಿತನ ಹೊಂದಿರುವವರನ್ನು ಸಿಜೆಐ ಆಗಿ ನೇಮಕ ಮಾಡುವುದು ಸಂಪ್ರದಾಯ. ಹಾಲಿ ಸಿಜೆಐ ಎಸ್‍ಎ ಬೋಬ್ಡೆ ಬಳಿಕ ನ್ಯಾ.ಎನ್.ವಿ ರಮಣ ಅವರೇ ಸುಪ್ರೀಂಕೋರ್ಟ್‍ನಲ್ಲಿ ಅತಿ ಹಿರಿಯ ನ್ಯಾಯಮೂರ್ತಿ ಎನಿಸಿದ್ದಾರೆ. ಹಾಗಾಗಿ ನ್ಯಾ.ರಮಣ ಅವರನ್ನು ಮುಂದಿನ ಸಿಜೆಐ ಆಗಿ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೋಬ್ಡೆ ಅವರು ಶಿಫಾರಸು ಮಾಡಿದ್ದರು.

    ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ ಬೋಬ್ಡೆ ಶುಕ್ರವಾರ ನಿವೃತ್ತಿಗೊಂಡರು ಬಳಿಕ ಇಂದು ಈ ಮಹತ್ವದ ಸ್ಥಾನವನ್ನು 63 ವರ್ಷದ ನ್ಯಾಯಮೂರ್ತಿ ಎನ್.ವಿ.ರಮಣ ತುಂಬಿದ್ದಾರೆ. ನ್ಯಾ. ರಮಣ ಅವರಿಗೆ 2022, ಆಗಸ್ಟ್ 26 ರವರೆ ಸೇವಾವಧಿ ಇರಲಿದೆ.

  • ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಎನ್.ವಿ ರಮಣ ನೇಮಕಕ್ಕೆ ರಾಷ್ಟ್ರಪತಿ ಅಂಕಿತ

    ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಎನ್.ವಿ ರಮಣ ನೇಮಕಕ್ಕೆ ರಾಷ್ಟ್ರಪತಿ ಅಂಕಿತ

    ನವದೆಹಲಿ: ಭಾರತದ ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಾಧೀಶರಾಗಿ ಹಿರಿಯ ನ್ಯಾಯಾಧೀಶರಾದ ಎನ್.ವಿ ರಮಣ ಅವರನ್ನು ಆಯ್ಕೆ ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ.

    ಈ ಮೂಲಕ ಎನ್.ವಿ ರಮಣ ಅವರು 48ನೇ ಭಾರತದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಏಪ್ರಿಲ್ 24 ರಂದು ಅಧಿಕಾರ ಸ್ವೀಕರಿಸಲಿದ್ದು, ಇವರಿಗೆ 2022ರ ಆಗಸ್ಟ್ 26ವರೆಗೆ ಸೇವಾವಧಿ ಇರಲಿದೆ.

    ಕಳೆದ ತಿಂಗಳು ಹಾಲಿ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ಅವರು ಮುಂದಿನ ನ್ಯಾಯಮೂರ್ತಿಯಾಗಿ ಎನ್.ವಿ ರಮಣ ಅವರನ್ನು ಶಿಫಾರಸು ಮಾಡಿದ್ದರು. ಇದರಂತೆ ಇದೀಗ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ ರಮಣ ಅವರನ್ನು ಆಯ್ಕೆ ಮಾಡಲಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಅಂಕಿತವನ್ನು ಹಾಕಿ ನೇಮಕ ಮಾಡಿಕೊಂಡಿದ್ದಾರೆ.

    ಏಪ್ರಿಲ್ 23ರಂದು ಹಾಲಿ ಮುಖ್ಯ ನ್ಯಾಯಾಧೀಶರಾದ ಎಸ್.ಎ ಬೋಬ್ಡೆ ಅವರು ನಿವೃತ್ತಿಯಾಗುತ್ತಿದ್ದಾರೆ. ಬಳಿಕ ಏಪ್ರಿಲ್ 24ರಂದು ರಮಣ ಅವರು ಭಾರತದ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

    1957 ಆಗಸ್ಟ್ 27ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ, ಪೊನ್ನವರಂನಲ್ಲಿ ಜನಿಸಿದ ರಮಣ ಅವರು, 1983 ಫೆಬ್ರವರಿ 10 ರಂದು ವಕೀಲರಾಗಿ ಸೇವೆ ಆರಂಭಿಸಿದರು. ನಂತರ 2000ರ ಜೂನ್ ನಲ್ಲಿ ಆಂಧ್ರ ಪ್ರದೇಶದ ಹೈಕೋರ್ಟ್‍ಗೆ ಖಾಯಂ ನ್ಯಾಯಾಧೀಶರಾಗಿ ನೇಮಕವಾಗಿದ್ದರು. ಬಳಿಕ 2013 ರಲ್ಲಿ ರಮಣ ಅವರು ದೆಹಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡು ಸೇವೆ ಸಲ್ಲಿಸಿದ್ದರು. ನಂತರ 2014ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಅವರನ್ನು ಉನ್ನತೀಕರಿಸಲಾಯಿತು.

    ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಅತಿ ಹೆಚ್ಚು ಸೇವಾ ಹಿರಿತನ ಹೊಂದಿರುವವರನ್ನು ಸಿಜೆಐ ಆಗಿ ನೇಮಕ ಮಾಡುವುದು ಸಂಪ್ರದಾಯ. ಹಾಲಿ ಸಿಜೆಐ ಎಸ್‍ಎ ಬೋಬ್ಡೆ ಬಳಿಕ ನ್ಯಾ. ಎನ್.ವಿ ರಮಣ ಅವರೇ ಸುಪ್ರೀಂಕೋರ್ಟ್‍ನಲ್ಲಿ ಅತಿ ಹಿರಿಯ ನ್ಯಾಯಮೂರ್ತಿ ಎನಿಸಿದ್ದಾರೆ. ಹಾಗಾಗಿ ನ್ಯಾ.ರಮಣ ಅವರನ್ನು ಮುಂದಿನ ಸಿಜೆಐ ಆಗಿ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೋಬ್ಡೆ ಅವರು ಶಿಫಾರಸು ಮಾಡಿದ್ದರು.

  • ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ – ಪೌರತ್ವ ತಿದ್ದುಪಡಿ ಕಾಯ್ದೆಗೆ ತಡೆ ನೀಡಲು ಸುಪ್ರೀಂ ನಕಾರ

    ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ – ಪೌರತ್ವ ತಿದ್ದುಪಡಿ ಕಾಯ್ದೆಗೆ ತಡೆ ನೀಡಲು ಸುಪ್ರೀಂ ನಕಾರ

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ತಡೆ ನೀಡಲು ಸಾಧ್ಯವಿಲ್ಲ, ಅರ್ಜಿಗಳ ವಿಚಾರಣೆ ನಡೆಸದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದು ಹೇಗೆ ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ವಕೀಲರನ್ನು ಪ್ರಶ್ನಿಸಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ 140ಕ್ಕೂ ಹೆಚ್ಚು ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ನ್ಯಾ. ಅಬ್ದುಲ್ ನಜೀರ್, ನ್ಯಾ. ಸಂಜೀವ್ ಖನ್ನಾ ಅವರಿದ್ದ ತ್ರಿಸದಸ್ಯ ಪೀಠ, ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಸುಳಿವು ನೀಡಿದೆ.

    ವಿಚಾರಣೆ ಆರಂಭವಾಗುತ್ತಿದ್ದಂತೆ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಸಿಎಎಗೆ ತಡೆ ನೀಡಬೇಕೆಂದು ಮನವಿ ಮಾಡಿದರು. ಸಲ್ಲಿಕೆಯಾಗಿರುವ ಅರ್ಜಿಗಳು ಮಹತ್ವದ್ದಾಗಿದ್ದು ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದೆ. ಹೀಗಾಗಿ ಇದನ್ನು ಐದು ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು ಎಂದು ಕೋರಿದರು.

    ಸಿಎಎ ತಡೆ ಕೋರಿ ಮನವಿ ಮಾಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಯಾವುದೇ ಕಾರಣಕ್ಕೂ ತಡೆ ನೀಡದಂತೆ ಸುಪ್ರೀಂಕೋರ್ಟ್ ಬಳಿ ಮನವಿ ಮಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾ.ಎಸ್.ಎ.ಬೊಬ್ಡೆ, ಸಲ್ಲಿಕೆಯಾಗಿರುವ ಶೇ.99 ರಷ್ಟು ಅರ್ಜಿಗಳ ವಿಚಾರಣೆ ನಡೆಯಬೇಕು. ಕೇಂದ್ರ ಸರ್ಕಾರವೂ ಸೇರಿ ಎಲ್ಲ ಅರ್ಜಿದಾರರ ಅಭಿಪ್ರಾಯ ಪಡೆದುಕೊಳ್ಳಬೇಕು ಇದ್ಯಾವುದನ್ನು ಮಾಡದೇ ತಡೆ ನೀಡಲು ಸಾಧ್ಯವಿಲ್ಲ, ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು. ಇದೇ ವೇಳೆ ಸಾಂವಿಧಾನಿಕ ಪೀಠಕ್ಕೆ ಪ್ರಕರಣ ವರ್ಗಾಯಿಸಬಹುದು ಎಂದು ಅಭಿಪ್ರಾಯಪಟ್ಟರು.

    ಒಬ್ಬರ ಪೌರತ್ವವನ್ನು ಅನುಮಾನಾಸ್ಪದವಾಗಿ ನೋಡುವುದು ತಪ್ಪು. ಈ ಪ್ರಕರಣದ ಕುರಿತು ತುರ್ತು ವಿಚಾರಣೆಯ ಉದ್ದೇಶವನ್ನು ಸುಪ್ರೀಂಕೋರ್ಟ್ ಮನಗಾಣಬೇಕು ಇದಕ್ಕಾಗಿ ಎನ್‍ಪಿಆರ್ ಮುಂದೂಡಬೇಕು ಎಂದು ಹಿರಿಯ ವಕೀಲ ಕೆ.ವಿ.ವಿಶ್ವನಾಥನ್ ವಾದ ಮಂಡಿಸಿದರು.

    ಈ ವೇಳೆ ಮಧ್ಯ ಪ್ರವೇಶಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಎಲ್ಲ ಅರ್ಜಿಗಳು ಪೂರ್ಣಗೊಂಡರೆ ಅದಕ್ಕೆ ಪ್ರತಿಕ್ರಿಯೆ ಸಲ್ಲಿಸಬಹುದು. ಕೇಂದ್ರ ಸರ್ಕಾರ ಅಭಿಪ್ರಾಯ ತಿಳಿಸಲು ನಾಲ್ಕು ವಾರಗಳ ಸಮಯ ಕೊಡಿ ಎಂದು ಮನವಿ ಮಾಡಿದರು. ವಾದ ಪರಿಗಣಿಸಿದ ಸುಪ್ರೀಂಕೋರ್ಟ್ ಪ್ರಕರಣದ ಎಲ್ಲ ಅರ್ಜಿದಾರರಿಗೂ ಅರ್ಜಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿ ನೋಟಿಸ್ ನೀಡಿದರು. ಅಭಿಪ್ರಾಯ ತಿಳಿಸಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರ ಮತ್ತು ಅಸ್ಸಾಂ ಸರ್ಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಿ ಕೋರ್ಟ್ ವಿಚಾರಣೆಯನ್ನು ಮುಂದೂಡಿತು.

  • 47ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾ.ಎಸ್.ಎ.ಬೋಬ್ಡೆ

    47ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾ.ಎಸ್.ಎ.ಬೋಬ್ಡೆ

    ನವದೆಹಲಿ: ಸುಪ್ರೀಂಕೋರ್ಟಿನ 47ನೇ ಮುಖ್ಯ ನ್ಯಾಯಾಧೀಶರಾಗಿ ಶರದ್ ಅರವಿಂದ್ ಬೋಬ್ಡೆ ಪ್ರಮಾಣ ವಚನ ಸ್ವೀಕರಿಸಿದರು. ನ್ಯಾ.ಬೋಬ್ಡೆ ಅವರಿಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಪ್ರಮಾಣ ವಚನ ಬೋಧಿಸಿದರು. 23 ಏಪ್ರಿಲ್ 2021ರವರೆಗೆ ಬೋಬ್ಡೆ ಅವರು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಲಿದ್ದಾರೆ.

    ಅಯೋಧ್ಯೆ ತೀರ್ಪು ನೀಡಿದ ಸಾಂವಿಧಾನಿಕ ಪೀಠದ ಐವರು ನ್ಯಾಯಾಧೀಶರಲ್ಲಿ ಬೋಬ್ಡೆ ಅವರು ಒಬ್ಬರಾಗಿದ್ದರು. ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಂಜನ್ ಗೋಗೋಯ್, ನ್ಯಾಯಮೂರ್ತಿ ಎಸ್‍ಎ ಬೋಬ್ಡೆ, ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಕರ್ನಾಟಕ ಮೂಲದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಪೀಠ ಅಯೋಧ್ಯೆ ತೀರ್ಪು ಪ್ರಕಟಿಸಿತ್ತು.

    ರಂಜನ್ ಗೋಗೊಯ್ ಅವರ ನಿವೃತ್ತಿ ಬಳಿಕ ನ್ಯಾ. ಶರದ್ ಅರವಿಂದ್ ಬೋಬ್ಡೆ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2000ರಲ್ಲಿ ಬಾಂಬೆ ಹೈಕೋರ್ಟ್ ನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಬೋಬ್ಡೆ ಅವರು ನೇಮಕಗೊಂಡರು. ಮಧ್ಯಪ್ರದೇಶದ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರ ಮೂಲದವರಾಗಿರುವ ಬೋಬ್ಡೆ ಅವರು ಏಪ್ರಿಲ್ 2013ರಲ್ಲಿ ಸುಪ್ರಿಂಕೋರ್ಟಿಗೆ ಬಡ್ತಿ ಪಡೆದರು. 63 ವರ್ಷದ ಬೋಬ್ಡೆ ಸಿಜೆಐ ಆಗಿ 18 ತಿಂಗಳು ಕಾರ್ಯ ನಿರ್ವಹಿಸಲಿದ್ದಾರೆ.

  • ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಎಸ್‍ಎ ಬೊಬ್ಡೆ ನೇಮಕ

    ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಎಸ್‍ಎ ಬೊಬ್ಡೆ ನೇಮಕ

    ನವದೆಹಲಿ: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಾಗಿ ಶರಾದ್ ಅರವಿಂದ್ ಬೊಬ್ಡೆ ಅವರನ್ನು ಇಂದು ರಾಷ್ಟ್ರಪತಿಗಳು ನೇಮಕ ಮಾಡಿದ್ದಾರೆ.

    ಈಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ನಂತರ ಹಿರಿಯ ನ್ಯಾಯಮೂರ್ತಿಯಾಗಿದ್ದ ಬಾಬ್ಡೆ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನವೆಂಬರ್ 18 ರಂದು ಪ್ರಮಾಣ ವಚನ ಭೋದಿಸಲಿದ್ದಾರೆ. ನ್ಯಾಯಮೂರ್ತಿ ಬೊಬ್ಡೆ ಅವರು ಮಧ್ಯಪ್ರದೇಶದ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಕಾರ್ಯನಿರ್ವಹಿಸಿದ್ದಾರೆ. ಅವರು 23 ಏಪ್ರಿಲ್ 2021 ರಂದು ನಿವೃತ್ತರಾಗಲಿದ್ದಾರೆ.

    ಈ ಹಿಂದೆ ಈ ವಿಚಾರವಾಗಿಯೇ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೋಯ್ ಅವರು ತನ್ನ ನಂತರ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶ ಎಸ್.ಎ ಬೊಬ್ಡೆ ಅವರನ್ನು ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ರಂಜನ್ ಗೊಗೋಯ್ ಅವರು ನವೆಂಬರ್ 17 ರಂದು ಮುಖ್ಯ ನ್ಯಾಯಾಧೀಶರ ಸ್ಥಾನದಿಂದ ನಿವೃತ್ತಿ ಹೊಂದಲಿದ್ದು, ತನ್ನ ನಂತರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಾಗಿ ಎಸ್.ಎ ಬೊಬ್ಡೆ ಅವರನ್ನು ನೇಮಕ ಮಾಡಿ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಪತ್ರ ಬರೆದಿದ್ದರು.

    2018ರ ಅಕ್ಟೋಬರ್ 3 ರಂದು ಭಾರತದ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾಯಮೂರ್ತಿ ರಂಜನ್ ಗೊಗೋಯ್, ಮುಂದಿನ ತಿಂಗಳು ಅಂದರೆ ನವೆಂಬರ್ 17 ರಂದು ನಿವೃತ್ತಿ ಆಗಲಿದ್ದಾರೆ. ಇವರ ನಂತರ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ಅವರು ಆ ಸ್ಥಾನವನ್ನು ಪಡೆಯಲಿದ್ದಾರೆ.

    ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ಅವರು ಮಧ್ಯಪ್ರದೇಶದ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಮಹಾರಾಷ್ಟ್ರದ ನಾಗ್ಪುರದಲ್ಲಿ 1956ರ ಏಪ್ರಿಲ್ 24 ರಂದು ಜನಿಸಿರುವ ಬೊಬ್ಡೆ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದಾರೆ. ಹೆಚ್ಚುವರಿ ನ್ಯಾಯಾಧೀಶರಾಗಿ 2000ರಲ್ಲಿ ಬಾಂಬೆ ಹೈಕೋರ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. 2012 ರಲ್ಲಿ ಅವರು ಮಧ್ಯಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ನಂತರ ಅವರನ್ನು 2013 ರ ಏಪ್ರಿಲ್‍ನಲ್ಲಿ ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರಾಗಿ ನೇಮಕ ಮಾಡಲಾಯಿತು. ಬೊಬ್ಡೆ ಅವರು 2021ರ ಏಪ್ರಿಲ್ 23 ರಂದು ನಿವೃತ್ತರಾಗಲಿದ್ದಾರೆ.

  • ಎಸ್‍ಎ ಬೊಬ್ಡೆ ಅವರನ್ನು ಮುಖ್ಯ ನ್ಯಾಯಾಧೀಶರನ್ನಾಗಿ ಮಾಡಿ – ಗೊಗೋಯ್ ಶಿಫಾರಸು

    ಎಸ್‍ಎ ಬೊಬ್ಡೆ ಅವರನ್ನು ಮುಖ್ಯ ನ್ಯಾಯಾಧೀಶರನ್ನಾಗಿ ಮಾಡಿ – ಗೊಗೋಯ್ ಶಿಫಾರಸು

    ನವದೆಹಲಿ: ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಾಧೀಶರಾದ ರಂಜನ್ ಗೊಗೋಯ್ ಅವರು ತನ್ನ ನಂತರ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶ ಎಸ್.ಎ ಬೊಬ್ಡೆ ಅವರನ್ನು ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

    ರಂಜನ್ ಗೊಗೋಯ್ ಅವರು ನವೆಂಬರ್ 17 ರಂದು ಮುಖ್ಯ ನ್ಯಾಯಾಧೀಶರ ಸ್ಥಾನದಿಂದ ನಿವೃತ್ತಿ ಹೊಂದಲಿದ್ದು, ತನ್ನ ನಂತರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಾಗಿ ಎಸ್.ಎ ಬೊಬ್ಡೆ ಅವರನ್ನು ನೇಮಕ ಮಾಡಿ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

    ಅಕ್ಟೋಬರ್ 3, 2018 ರಂದು ಭಾರತದ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಮುಂದಿನ ತಿಂಗಳು ಅಂದರೆ ನವೆಂಬರ್ 17 ರಂದು ನಿವೃತ್ತಿ ಆಗಲಿದ್ದಾರೆ.

    ಈ ಹಿಂದಿಯಿಂದಲೂ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು ನಿವೃತ್ತಿ ಆಗುವ ಸಮಯದಲ್ಲಿ ನ್ಯಾಯಾಲಯದ ಅತ್ಯಂತ ಹಿರಿಯ ನ್ಯಾಯಾಧೀಶರನ್ನು ತಮ್ಮ ಮುಂದಿನ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡುವುದು ಸಂಪ್ರದಾಯವಾಗಿದೆ. ಅದ್ದರಿಂದ ರಂಜನ್ ಗೊಗೋಯ್ ಅವರು ಹಿರಿಯ ನ್ಯಾಯಾಧೀಶರಾದ ಎಸ್.ಎ ಬೊಬ್ಡೆ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಸೂಚಿಸಿದ್ದಾರೆ .

    ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ಅವರು ಮಧ್ಯಪ್ರದೇಶದ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿದ್ದವರು. ಮಹಾರಾಷ್ಟ್ರದ ನಾಗ್ಪುರದಲ್ಲಿ ಏಪ್ರಿಲ್ 24, 1956 ರಂದು ಜನಿಸಿದ ನ್ಯಾಯಮೂರ್ತಿ ಬೊಬ್ಡೆ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದಾರೆ. ಹೆಚ್ಚುವರಿ ನ್ಯಾಯಾಧೀಶರಾಗಿ 2000ರಲ್ಲಿ ಬಾಂಬೆ ಹೈಕೋರ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. 2012 ರಲ್ಲಿ ಅವರು ಮಧ್ಯಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ನಂತರ ಅವರನ್ನು 2013 ರ ಏಪ್ರಿಲ್‍ನಲ್ಲಿ ಸುಪ್ರೀಂ ಕೋರ್ಟ್‍ಗೆ ನ್ಯಾಯಾಧೀಶರಾಗಿ ನೇಮಕ ಮಾಡಲಾಯಿತು. ಬೊಬ್ಡೆ ಅವರು 2021ರ ಏಪ್ರಿಲ್ 23 ರಂದು ನಿವೃತ್ತರಾಗಲಿದ್ದಾರೆ.