Tag: S. Suresh Kumar

  • ಮಾಜಿ ಸಚಿವ ಸುರೇಶ್‌ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಮಾಜಿ ಸಚಿವ ಸುರೇಶ್‌ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    -ನಾನು ಆರೋಗ್ಯವಾಗಿದ್ದೇನೆ ಎಂದ ಬಿಜೆಪಿ ಶಾಸಕ

    ಬೆಂಗಳೂರು: ರೂಪಾಂತರಿ ಚಿಕುನ್ ಗುನ್ಯಾದಿಂದ (Chikungunya) ಬಳಲುತ್ತಿದ್ದ ಬಿಜೆಪಿ ಶಾಸಕ ಸುರೇಶ್ ಕುಮಾರ್ (S Suresh Kumar) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ರೂಪಾಂತರಿ ಚಿಕುನ್ ಗುನ್ಯಾ ಸೋಂಕು ತಗುಲಿದ ಕಾರಣ ಸುರೇಶ್ ಕುಮಾರ್ ಕೆಲ ದಿನಗಳ ಹಿಂದೆ ಶೇಷಾದ್ರಿಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಐಸಿಯು ಘಟಕದಲ್ಲಿ ಸುರೇಶ್ ಕುಮಾರ್‌ಗೆ ಚಿಕಿತ್ಸೆ ನೀಡಿದ್ದಾರೆ. ಈಗ ಸುರೇಶ್ ಕುಮಾರ್ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಭರ್ಜರಿ ಗೆಲುವು – ಗ್ರಾಮಸ್ಥರ ಹರಕೆ ತೀರಿಸಿದ ಅನುಸೂಯ ಮಂಜುನಾಥ್

    ಇನ್ನು ತಮ್ಮ ಅನಾರೋಗ್ಯ ಸಂಬಂಧ ವದಂತಿ ಹಬ್ಬಿದ ಹಿನ್ನೆಲೆ ಸುರೇಶ್ ಕುಮಾರ್ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ನಾನು ಆರೋಗ್ಯವಾಗಿದ್ದೇನೆ. ಚಿಕುನ್ ಗುನ್ಯಾ ನನ್ನನ್ನು ಕೆಲ ದಿನಗಳಿಂದ ಬಾಧಿಸಿದ್ದು, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೇನೆ. ಜ್ವರದಿಂದ ಈಗ ಸಂಪೂರ್ಣ ಚೇತರಿಕೆ ಕಂಡಿದ್ದು, ಗುಣಮುಖನಾಗಿದ್ದೇನೆ ಹಾಗೂ ಸದ್ಯಕ್ಕೆ ವಿಶ್ರಾಂತಿಯಲ್ಲಿದ್ದೇನೆ. ಹಿತೈಶಿಗಳು ಅನಗತ್ಯ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚುನಾವಣೆಗೂ ಮುನ್ನ ಮಹಾ ವಿಕಾಸ್ ಅಘಾಡಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಅಗತ್ಯವಿಲ್ಲ: ಶರದ್ ಪವಾರ್

  • ಹಿಜಬ್‌ ಸಂಬಂಧ ಹೈಕೋರ್ಟ್‌ ತೀರ್ಪು- ಕೋಟ, ಸೂಲಿಬೆಲೆ, ಮೋಹನ್‌, ಸುರೇಶ್‌ಕುಮಾರ್‌ ಪ್ರತಿಕ್ರಿಯೆ

    ಹಿಜಬ್‌ ಸಂಬಂಧ ಹೈಕೋರ್ಟ್‌ ತೀರ್ಪು- ಕೋಟ, ಸೂಲಿಬೆಲೆ, ಮೋಹನ್‌, ಸುರೇಶ್‌ಕುಮಾರ್‌ ಪ್ರತಿಕ್ರಿಯೆ

    ಬೆಂಗಳೂರು: ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬೆನ್ನಲ್ಲೆ ಅನೇಕ ರಾಜಕೀಯ ನಾಯಕರು ತೀರ್ಪಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಯುವ ಬ್ರಿಗೇಡ್‍ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಸಂಸದ ಹೆಚ್.ಸಿ ಮೋಹನ್ ಹಾಗೂ ಮಾಜಿ ಸಚಿವ ಸುರೇಶ್‌ಕುಮಾರ್‌ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿ ಕೋರ್ಟ್‌ ಆದೇಶವನ್ನು ಸ್ವಾಗತಿಸಿದ್ದಾರೆ.

    ಸಚಿವ ಕೋಟ ಶ್ರೀನಿವಾಸ ಪೂಜಾರಿ ಟ್ವೀಟ್ ಮಾಡಿ, ಹಿಜಬ್ ವಿವಾದ ವಿಚಾರದಲ್ಲಿ ರಾಜ್ಯದ ಉಚ್ಚ ನ್ಯಾಯಾಲಯ ತೀರ್ಪು ನೀಡಿದ್ದು, ಸರ್ಕಾರದ ನಿಲುವನ್ನು ಸಮರ್ಥಿಸಿ ಸಮವಸ್ತ್ರ ಕಡ್ಡಾಯ ಆದೇಶವನ್ನು ಎತ್ತಿ ಹಿಡಿದಿದೆ. ನ್ಯಾಯಾಲಯದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಎಲ್ಲರೂ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಯುವ ಬ್ರಿಗೇಡ್‍ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಿಜಬ್ ತೀರ್ಪಿಗೆ ಸಂಬಂಧಿಸಿ ಶಿಕ್ಷಣ ಕೇಂದ್ರಗಳಲ್ಲಿ ಹಿಜಬ್ ಇಲ್ಲ, ಕೇವಲ ಸಮವಸ್ತ್ರ. ಇದು ಹೈಕೋರ್ಟ್ ಆದೇಶ ಎಂದಿದ್ದಾರೆ. ಇದನ್ನೂ ಓದಿ: ಖೇಲ್ ಖತಂ, ನಾಟಕ್ ಬಂದ್, ಶಾಲೆಗೆ ಹಿಂತಿರುಗಿ: ಮಾಳವಿಕಾ ಅವಿನಾಶ್

    ಸಂಸದ ಹೆಚ್.ಸಿ ಮೋಹನ್ ಸರಣಿ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದು, ಶಾಲಾ-ಕಾಲೇಜುಗಳಲ್ಲಿ ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಬಟ್ಟೆಗಳನ್ನು ನಿಷೇಧಿಸುವ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಕರ್ನಾಟಕ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು. ವಿದ್ಯಾರ್ಥಿಗಳು ಏಕರೂಪದ ಬಟ್ಟೆಗಳನ್ನು ಧರಿಸಬೇಕು ಎಂದು ತಿಳಿಸಿದರು.

    ತರಗತಿಯಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಮುಸ್ಲಿಂ ಹುಡುಗಿಯರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಹಿಜಬ್ ಧರಿಸುವುದು ಇಸ್ಲಾಮಿಕ್ ನಂಬಿಕೆಯ ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶವನ್ನು ತೀರ್ಪು ನೀಡಿದೆ. ಜೊತೆಗೆ ಶಾಲೆಯಲ್ಲಿ ಹಿಜಬ್ ಧರಿಸಲು ನಿಷೇಧವನ್ನು ಎತ್ತಿಹಿಡಿದಿದೆ. ತೀರ್ಪು ಸ್ವಾಗತಾರ್ಹವಾಗಿದೆ ಎಂದರು. ಇದನ್ನೂ ಓದಿ: 6 ವಿದ್ಯಾರ್ಥಿನಿಯರು ಹಠ ಮಾಡದೇ ಶಾಲೆಗೆ ಬರ್ಬೇಕು, ಸಮವಾದ ಶಿಕ್ಷಣ ನೀಡುತ್ತೇವೆ: ರಘುಪತಿ ಭಟ್

    ಮಾಜಿ ಸಚಿವ ಎಸ್‌ ಸುರೇಶ್‌ಕುಮಾರ್‌ ಟ್ವೀಟ್‌ ಮಾಡಿ, ಸಮವಸ್ತ್ರ ವಿಷಯ ಕುರಿತ ಕರ್ನಾಟಕ ಉಚ್ಛ ನ್ಯಾಯಾಲಯದ ತೀರ್ಪು ಅತ್ಯಂತ ಸ್ವಾಗತಾರ್ಹ. ಸಮಸ್ಯೆ ಇಲ್ಲಿಗೆ ಕೊನೆಯಾಗಿ, ಎಲ್ಲಾ ಮಕ್ಕಳು ಶಾಲೆ – ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವುದಕ್ಕೆ ಗಮನ ಹರಿಸುವಂತೆ ನಾವೆಲ್ಲ ಸಹಕಾರ ನೀಡಬೇಕಿದೆ. ಇದನ್ನೂ ಓದಿ: ಮಕ್ಕಳಿಗೆ ವಿದ್ಯೆಗಿಂತ ಮತ್ತೊಂದಿಲ್ಲ, ನ್ಯಾಯಾಲಯ ಕೊಟ್ಟಿರುವ ತೀರ್ಪನ್ನು ಪಾಲಿಸಬೇಕು: ಬೊಮ್ಮಾಯಿ

    ಐತಿಹಾಸಿಕ ತೀರ್ಪು..?: ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಪೀಠ ವಜಾ ಮಾಡಿದೆ.

  • ವಿದ್ಯಾರ್ಥಿಗಳಲ್ಲಿ ಸಮಸಮಾಜದ ಹೆಮ್ಮೆ ಮೂಡಿಸುವುದು ಇಂದಿನ ಅಗತ್ಯ – ಸಿಎಂಗೆ ಸುರೇಶ್ ಕುಮಾರ್ ಮನವಿ

    ವಿದ್ಯಾರ್ಥಿಗಳಲ್ಲಿ ಸಮಸಮಾಜದ ಹೆಮ್ಮೆ ಮೂಡಿಸುವುದು ಇಂದಿನ ಅಗತ್ಯ – ಸಿಎಂಗೆ ಸುರೇಶ್ ಕುಮಾರ್ ಮನವಿ

    ಬೆಂಗಳೂರು: ನನ್ನ ಶಾಲೆ-ಕಾಲೇಜು, ನನ್ನ ಹೆಮ್ಮೆ, ನನ್ನ ಶಿಕ್ಷಣ, ನನ್ನ ಸಮವಸ್ತ್ರ, ನನ್ನದೇ ಭವಿಷ್ಯವೆನ್ನುವ ಭಾವನೆ ನಮ್ಮ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕಾದರೆ ಶಿಕ್ಷಣ ಇಲಾಖೆಯ ಕೆಲಸ ಗಮನಾರ್ಹ ಶಿಕ್ಷಣ ಸಚಿವರಿಗೆ ಎಸ್.ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ.

    ಹಿಜಬ್-ಸಮವಸ್ತ್ರಗಳ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕಾಯುವ ಕೆಲಸಕ್ಕೆ ಶಿಕ್ಷಣ ಇಲಾಖೆ ಹೊಸ ಕಾಯಕಲ್ಪದೊಂದಿಗೆ ಕೆಲಸ ಮಾಡಬೇಕಿದೆ ಎಂದು ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಪತ್ರ ಬರೆದು ಶಾಲಾ-ಕಾಲೇಜುಗಳ ಆವರಣದಲ್ಲಿ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಆರೋಪ ಪ್ರತ್ಯಾರೋಪಗಳನ್ನು ಮೀರುವ, ಶಿಕ್ಷಣದ ಕಡೆಗೆ ಒಲವು ಹೆಚ್ಚುವ ಸಕಾರಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸುವ ಕುರಿತಂತೆ ನಾವು ಹೆಚ್ಚಾಗಿ ಆಲೋಚಿಸಬೇಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ಬಳಿಕ ಸಿಂಧೂರ ವಿವಾದ – ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ

    ಹಿಜಬ್ ಅಥವಾ ಸಮವಸ್ತ್ರ- ಅದರ ಸುತ್ತಲೂ ಭುಗಿಲೇಳುತ್ತಿರುವ ವಿವಾದ ಮೇಲ್ನೋಟದ್ದಲ್ಲ. ಅಲ್ಲಿನ ಆಂತರಿಕ ಸಂಘರ್ಷ, ಅದನ್ನು ಹುಟ್ಟುಹಾಕುತ್ತಿರುವವರ ಮನೋಧರ್ಮ, ಮೂಲಭೂತ ಅವಶ್ಯಕತೆಗಳನ್ನು ಮೀರಿರುವುದು ಗಮನೀಯವೆಂದು ನೆನಪಿಸಿದ್ದಾರೆ. ಘನ ನ್ಯಾಯಾಲಯವು ಸಾಂವಿಧಾನಿಕ ಅವಕಾಶಗಳನ್ನು ಅವಲೋಕಿಸುತ್ತಿರುವಾಗಲೂ ಶಾಂತಿ ಕದಡುವ ಪ್ರಯತ್ನಗಳಾಗುತ್ತಿರುವುದು ಇದರ ಹಿಂದಿನ ಉದ್ದೇಶವನ್ನು ಸ್ಪಷ್ಟ ಪಡಿಸುತ್ತದೆ. ಶಿಕ್ಷಣ ಇಲಾಖೆ ಕೂಡಲೇ ಕೆಲವು ಕ್ರಮಗಳಿಗೆ ಮುಂದಾಗಬೇಕೆಂದು ಸಲಹೆ ನೀಡಿದ್ದಾರೆ. ಅವರ ಅಭಿಪ್ರಾಯಗಳು ಕೆಳಕಂಡಂತಿವೆ.

    B.C. Nagesh

    1. ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ನಡುವೆ ಸೋದರತ್ವ, ಸೌಹಾರ್ದತೆಯನ್ನು ಕಾಪಾಡುವ, ಶೈಕ್ಷಣಿಕ ವಾತಾವರಣವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಶಾಲಾಭಿವೃದ್ದಿ ಮೇಲುಸ್ತುವಾರಿ ಸಮಿತಿಗಳಿಗೆ/ಶಾಲಾ,ಕಾಲೇಜು ಸಲಹಾ ಸಮಿತಿಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಖಚಿತ ಜವಾಬ್ದಾರಿಯನ್ನು ನಿಗದಿ ಪಡಿಸಬೇಕಿದೆ.
    2. ತರಗತಿವಾರು ಮಕ್ಕಳ ಸಭೆಗಳನ್ನು ನಿಗದಿಪಡಿಸಿ ಕೋಮು ಸಾಮರಸ್ಯದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮವಸ್ತ್ರದ ಆಶಯ, ಅದನ್ನು ಧರಿಸಿದಾಗ ಮೂಡಬೇಕಾದ ಸಮಸಮಾಜದ ಹೆಮ್ಮೆಯ ಕುರಿತಂತೆ ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ಆಗಬೇಕು. ಅದಕ್ಕಾಗಿ ದಿನದ ಒಂದು ಅವಧಿ ಮೀಸಲಿಟ್ಟರೂ ತಪ್ಪಿಲ್ಲ.
    3. ಶಾಲಾಭಿವೃದ್ಧಿ ಸಮಿತಿಗಳು, ಶಾಲಾ, ಕಾಲೇಜು ಸಲಹಾ ಸಮಿತಿಗಳು, ಪೋಷಕರ ಸಭೆಗಳನ್ನು ವಾರಕ್ಕೊಮ್ಮೆ ಕರೆದು ಈ ಪರಿಸ್ಥಿತಿ ತಿಳಿಯಾಗುವವರೆಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಸಾಧ್ಯವಾಗಬೇಕು. ಮಕ್ಕಳ ಭವಿಷ್ಯ ಕಟ್ಟುವ ಅನಿವಾರ್ಯತೆಯ ಕುರಿತಂತೆ ಮನನ ಮಾಡಿಸಿ ಸೌಹಾರ್ದ ವಾತಾವರಣ ಸೃಷ್ಟಿಸಬೇಕು.
    4. ಶಾಲಾ ಮಟ್ಟದಲ್ಲಿ ಸ್ಥಳೀಯ ಕಲಾವಿದರ, ಸ್ಥಳೀಯ ಸಾಹಿತಿಗಳ, ಸಾಧಕರನ್ನು ಆಹ್ವಾನಿಸಿ ಮಕ್ಕಳ ಆರೋಗ್ಯಕರ ಚರ್ಚೆಗೆ ವೇದಿಕೆ ಸೃಷ್ಟಿಸಬೇಕು. ವಿದ್ಯಾರ್ಥಿಗೆ ಅವರಿಂದ ಒಳಿತಿನ ಪಾಠ ಮಾಡಿಸಬೇಕು, ಪ್ರಭಾವಿತರನ್ನಾಗಿಸುವ ಪ್ರಯತ್ನ ಆಗಬೇಕು.
    5. ಸ್ಥಳೀಯವಾಗಿ ಇಂತಹ ವಿಭಿನ್ನ ಪ್ರಯತ್ನಗಳನ್ನು ಕೈಗೊಂಡ ಶಾಲೆಗಳನ್ನ ಗುರುತಿಸಿ, ಅಭಿನಂದಿಸುವ, ಪ್ರಯತ್ನಗಳನ್ನು ದಾಖಲಿಸುವ ವ್ಯವಸ್ಥೆ ಆಗಬೇಕು.
    6. ರಾಜ್ಯಮಟ್ಟದ ಪ್ರಖ್ಯಾತ ಚಲನಚಿತ್ರಕಲಾವಿದರು, ವಿವಿಧ ಸಾಧಕರುಗಳನ್ನು ಪ್ರೇರೇಪಿಸಿ ಮಕ್ಕಳನ್ನು ಉದ್ದೇಶಿಸಿ ಸಮವಸ್ತ್ರದ ಪ್ರಾಮುಖ್ಯತೆಯನ್ನು ಅರ್ಥೈಸುವ ಕಿರುಚಿತ್ರಗಳನ್ನು ದೃಶೀಕರಿಸಿ ವೈರಲ್ ಮಾಡಬಹುದು. ಅಂತೆಯೇ ಖ್ಯಾತ ಹಿನ್ನೆಲೆ ಗಾಯಕರಿಂದ, ಗೀತ ಸಾಹಿತಿಗಳ ನೆರವನ್ನೂ ಪಡೆದು ವಿಶಿಷ್ಟ ಹಾಡುಗಳನ್ನು ರಚಿಸಿ ಚಿತ್ರೀಕರಿಸಬಹುದು. ಇದನ್ನೂ ಓದಿ: ಇವ್ರರನ್ನು ಅರೆಸ್ಟ್ ಮಾಡ್ರಿ – ವಿದ್ಯಾರ್ಥಿನಿಯರ ವಿರುದ್ಧ ಮಡಿಕೇರಿ ಪ್ರಿನ್ಸಿ ಕೆಂಡಾಮಂಡಲ

    ನನ್ನ ಶಾಲೆ, ನನ್ನ ಕಾಲೇಜು, ನನ್ನ ಹೆಮ್ಮೆ, ನನ್ನ ಶಿಕ್ಷಣ, ನನ್ನ ಸಮವಸ್ತ್ರ ಮತ್ತು ನನ್ನದೇ ಭವಿಷ್ಯವೆನ್ನುವ ಭಾವನೆ ಪ್ರತಿ ವಿದ್ಯಾರ್ಥಿಯಲ್ಲಿಯೂ ಮೂಡುವ ಪ್ರಯತ್ನ ನಡೆಸಿ ಭಾವೈಕ್ಯತೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ವಿಶೇಷ ಪ್ರಯತ್ನದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ತಾವು ಸಂಬಂಧಿತರಿಗೆ ಸೂಕ್ತ ನಿರ್ದೇಶನವನ್ನು ನೀಡುವ ಮೂಲಕ ಸರ್ಕಾರದ ಜನಪರ ನಿಲುವನ್ನು ಸಾರ್ವತ್ರಿಕರಣಗೊಳಿಸಲು ಮುಂದಾಗಬೇಕೆಂದು ಕೋರುತ್ತೇನೆ ಎಂದು ಮುಖ್ಯಮಂತ್ರಿಗಳಲ್ಲಿ ಹಾಗೂ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದಾರೆ.

  • ಬಹುದಿನಗಳ ದೈಹಿಕ ಶಿಕ್ಷಕರ ಬೇಡಿಕೆಗೆ ಅಸ್ತು-ಸುರೇಶ್ ಕುಮಾರ್

    ಬಹುದಿನಗಳ ದೈಹಿಕ ಶಿಕ್ಷಕರ ಬೇಡಿಕೆಗೆ ಅಸ್ತು-ಸುರೇಶ್ ಕುಮಾರ್

    ಬೆಂಗಳೂರು: ಸರ್ಕಾರಿ ಪ್ರೌಢ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಬಹುಕಾಲದ ಬೇಡಿಕೆಯಾಗಿದ್ದ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಸರ್ಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-1 ಹುದ್ದೆಯಿಂದ ಗ್ರೂಪ್-ಬಿ ವೃಂದದ ದೈಹಿಕ ಶಿಕ್ಷಣ ಪರಿವೀಕ್ಷಕರ 148 ಹುದ್ದೆಗಳಿಗೆ ಮುಂಬಡ್ತಿಯನ್ನು ನೀಡಿ ಆದೇಶ ಹೊರಡಿಸುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಕರ ಸಂಘದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    2016ರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪದೋನ್ನತಿ ಪ್ರಕ್ರಿಯೆ ನಡೆದಿದ್ದು, ಐದು ವರ್ಷಗಳ ಕಾಲ ಪ್ರೌಢ ಶಾಲಾ ದೈಹಿಕ ಶಿಕ್ಷಕರಿಗೆ ಯಾವುದೇ ಪದೋನ್ನತಿ ನೀಡಿರಲಿಲ್ಲ. ನೆನೆಗುದಿಗೆ ಬಿದ್ದಿದ್ದ ಬಡ್ತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಆಡಳಿತಾತ್ಮಕ ಸಮಸ್ಯೆ ಬಗೆಹರಿಸಲಾಗಿದೆ. ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಜೂನ್ 21ರಂದು ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲಾಗುತ್ತಿದ್ದು, ಕೋವಿಡ್ ನಿಯಮಗಳನ್ನು ಪಾಲಿಸಿ ದೈಹಿಕ ಶಿಕ್ಷಕರು ಕೌನ್ಸೆಲಿಂಗ್ ನಲ್ಲಿ ಭಾಗವಹಿಸಿ ತಮ್ಮ ಇಚ್ಛಾನುಸಾರ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕೋವಿಡ್ ಚಿಕಿತ್ಸಾ ವೆಚ್ಚ 3 ಲಕ್ಷ ರೂ. ಪ್ಯಾಕೇಜ್ ಘೋಷಿಸಿ: ಎಂಬಿ ಪಾಟೀಲ್ ಆಗ್ರಹ

    ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿ ನೀಡಬೇಕೆಂಬುದು ಕರ್ನಾಟಕ ರಾಜ್ಯ ಸರ್ಕಾರಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಬೇಡಿಕೆಯಾಗಿತ್ತು. ಈಗ ಆ ಪ್ರಕ್ರಿಯೆ ಮುಗಿದಿದ್ದು, ಮುಂಬಡ್ತಿ ಹೊಂದಲಿರುವ ದೈಹಿಕ ಶಿಕ್ಷಣ ಪರಿವೀಕ್ಷಕರು ಇಲಾಖೆಯಲ್ಲಿ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ ಗುಣಮಟ್ಟದ ಶಿಕ್ಷಣದಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಬೇಕೆಂದು ಸುರೇಶ್ ಕುಮಾರ್ ಹೇಳಿದ್ದಾರೆ.

  • ಕೋವಿಡ್ ಕಾಲದಲ್ಲಿ ಶಿಕ್ಷಣ ಪ್ರಕ್ರಿಯೆ, ತಜ್ಞರ ಸಮಿತಿ ರಚನೆ- ಸುರೇಶ್ ಕುಮಾರ್

    ಕೋವಿಡ್ ಕಾಲದಲ್ಲಿ ಶಿಕ್ಷಣ ಪ್ರಕ್ರಿಯೆ, ತಜ್ಞರ ಸಮಿತಿ ರಚನೆ- ಸುರೇಶ್ ಕುಮಾರ್

    ಬೆಂಗಳೂರು: ಮರುಕಳಿಸುತ್ತಿರುವ ಆತಂಕ ಒಡ್ಡಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಕ್ಕಳನ್ನು ಕಲಿಕೆಯಿಂದ ಹೊರಗುಳಿಯದಂತೆ ಮಾಡುವ ಉದ್ದೇಶದಿಂದ ಕೋವಿಡ್ ಸಂಕಷ್ಟದ ಕಾಲದಲ್ಲಿ ಶಿಕ್ಷಣದ ಮುಂದುವರಿಕೆ ಕ್ರಮಗಳ ಕುರಿತಂತೆ ತಜ್ಞರ ಸಮಿತಿ ರಚಿಸಿ ವರದಿ ಪಡೆಯಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

    ಕೊರೊನಾ ಸೋಂಕಿನ ಭೀತಿಯಿಂದಾಗಿ 2021-22ನೇ ಶೈಕ್ಷಣಿಕ ವರ್ಷವೂ ನಿಗದಿಯಂತೆ ಆರಂಭವಾಗುವ ಲಕ್ಷಣಗಳು ಗೋಚರಿಸದ ಹಿನ್ನೆಲೆಯಲ್ಲಿ ಮಕ್ಕಳ ಕಲಿಕಾ ನಿರಂತರತೆಗೆ ತೊಂದರೆಯಾಗದಂತೆ ಈಗಿನಿಂದಲೇ ಕ್ರಮ ವಹಿಸುವ ನಿಟ್ಟಿನಲ್ಲಿ ಬುಧವಾರ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಅವರು, ವಿಶೇಷವಾಗಿ ಗ್ರಾಮೀಣ ಹಾಗೂ ಸರ್ಕಾರಿ ಶಾಲಾ ಮಕ್ಕಳನ್ನು ಕಲಿಕೆಯಿಂದ ಹೊರಗುಳಿಯದಂತೆ ಮಾಡುವುದು ಆ ಮೂಲಕ ಅವರ ಶಿಕ್ಷಣದ ಹಕ್ಕುಗಳನ್ನು ರಕ್ಷಿಸುವುದು ಹಾಗೆಯೇ ಕಳೆದ ಸಾಲಿನಲ್ಲಿ ಕಲಿತ ಪಾಠದಂತೆ ನಮ್ಮ ಮಕ್ಕಳನ್ನು ತಲುಪಲು ಪರ್ಯಾಯ ಕ್ರಮಗಳನ್ನು ಅನುಸರಿಸಬೇಕೆಂಬ ಕುರಿತು ಈ ಸಮಿತಿಯು ರೂಪುರೇಷೆ ಸಿದ್ಧಪಡಿಸಲಿದೆ ಎಂದರು.

    ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆಯಾಗಬಹುದೆಂಬ ಪರ್ಯಾಯ ಬೋಧನಾ ಹಾಗೂ ಕಲಿಕಾ ಕ್ರಮಗಳು ಪ್ರಾಮುಖ್ಯತೆ ಹೊಂದಲಿದ್ದು, ಈ ಹಿನ್ನೆಲೆಯಲ್ಲಿ ತಜ್ಞರ ತಂಡದಿಂದ ಸಲ್ಲಿಕೆಯಾಗುವ ವರದಿಯ ಆಧಾರದಲ್ಲಿ ಬರುವ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಕಾರ್ಯೋನ್ಮುಖವಾಗಲಾಗುವುದು ಎಂದು ಸಚಿವರು ತಿಳಿಸಿದರು.

    ಲಭ್ಯವಿರುವ ಸ್ಥಿತಿಗತಿಗಳು, ಮೌಲ್ಯಾಂಕನ ಪದ್ಧತಿ, ಮಂಡಳಿ ಪರೀಕ್ಷೆಗಳು, ಆನ್ ಲೈನ್, ದೂರಶಿಕ್ಷಣ, ಶಿಕ್ಷಕರ ತರಬೇತಿ, ಸಂಪನ್ಮೂಲ ಸದ್ಬಳಕೆ ಸೇರಿದಂತೆ ಎಲ್ಲ ಆಯಾಮಗಳನ್ನೂ ಆಧ್ಯಯನ ಮಾಡಿ ವರದಿ ನೀಡಲು ಸಮಿತಿಯಲ್ಲಿ ಖ್ಯಾತ ವಿವಿಧ ಶಿಕ್ಷಣ ತಜ್ಞರು, ಭಾರತೀಯ ವಿಜ್ಞಾನ ಸಂಸ್ಥೆ ಪ್ರತಿನಿಧಿಗಳು, ನಿಮ್ಹಾನ್ಸ್ ಪ್ರತಿನಿಧಿಗಳು, ರಾಜ್ಯದ ಆರೋಗ್ಯ ಇಲಾಖೆಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರು, ಖಾಸಗಿ ಶಾಲೆಗಳ ಪ್ರತಿನಿಧಿ, ಪೋಷಕ ಸಂಘಟನೆಯ ಪ್ರತಿನಿಧಿಗಳು, ಶಿಕ್ಷಕ,ಉಪನ್ಯಾಸಕರ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಇರಲಿದ್ದಾರೆ. ತಕ್ಷಣದಲ್ಲೇ ಸಮಿತಿ ರಚಿಸಿ ಇಲಾಖೆ ಅಧಿಸೂಚನೆ ಹೊರಡಿಸಿ ಒಂದು ತಿಂಗಳ ಅವಧಿಯಲ್ಲಿ ನೀಲನಕ್ಷೆಯನ್ನು ಮಂಡಿಸಲು ಸಮಿತಿಯನ್ನು ಕೋರಲಾಗುವುದು ಎಂದು ಸಚಿವರು ತಿಳಿಸಿದರು.

    ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು:
    ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಕೇಂದ್ರ ಶಿಕ್ಷಣ ಸಚಿವರ ಮಂಗಳವಾರದ ಸಭೆಯಲ್ಲಿ ವಿಶೇಷ ಚರ್ಚೆ ನಡೆದಿದ್ದು, ಹಲವಾರು ರಾಜ್ಯಗಳು, ಅದರ ಅನುಷ್ಠಾನಕ್ಕೆ ಸಾಕಷ್ಟು ಪೂರ್ವಭಾವಿ ಕೆಲಸಗಳನ್ನು ಕೈಗೊಂಡಿವೆ. ಕರ್ನಾಟಕ ರಾಜ್ಯದಲ್ಲಿ ಇದರ ಬಗ್ಗೆ ವರದಿ ಸಲ್ಲಿಕೆಯಾದ ಬಳಿಕ ಇನ್ನಷ್ಟು ಸಾಂಸ್ಥಿಕ ಸುಧಾರಣೆಗಳು ಅವಶ್ಯವಿದ್ದು, ರಾಜ್ಯ ಸಂಪನ್ಮೂಲ ತಂಡದ ರಚನೆಯೂ ಸೇರಿದಂತೆ ಇದರಲ್ಲಿ ಉಲ್ಲೇಖಿಸಿರುವ ಹಲವು ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಚಾಲನೆ ನೀಡಲು ಕೂಡಲೇ ಕಾರ್ಯೋನ್ಮುಖರಾಗಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

    ಮೃತ ಶಿಕ್ಷಕರಿಗೆ ಪರಿಹಾರ, ಶಿಕ್ಷಕರಿಗೆ ಕೋವಿಡ್ ವ್ಯಾಕ್ಸಿನ್:
    ಕೋವಿಡ್ ನಿಂದ ರಾಜ್ಯದ ವಿವಿಧೆಡೆ ಸರ್ಕಾರಿ,ಅನುದಾನಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು ಮೃತರಾಗಿರುವ ಕುರಿತು ಅಂಕಿ ಅಂಶಗಳನ್ನು ಮಂಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಶಿಕ್ಷಕರ ಕಲ್ಯಾಣ ನಿಧಿಯಿಂದ ವಿಶೇಷ ಪ್ರಕರಣವೆಂದು ಈ ಶಿಕ್ಷಕರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತೂ ಇಲಾಖೆ ಚಿಂತನೆ ನಡೆಸಿದೆ ಎಂದರು.

    ಹಾಗೆಯೇ ಶಿಕ್ಷಕ ಸಮುದಾಯವನ್ನ ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ ಮುಂದಿನ ಶೈಕ್ಷಣಿಕ ಸಾಲಿನ ಪ್ರಾರಂಭಕ್ಕೆ ಮುನ್ನ ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗದ ರೀತಿಯಲ್ಲಿ ಲಸಿಕೆ ನೀಡುವಲ್ಲಿ ಪ್ರಾಧಾನ್ಯತೆ ನೀಡಬೇಕಿದ್ದು, ಈ ಕುರಿತು ಆರೋಗ್ಯ ಇಲಾಖೆಗೆ ಕೂಡಲೇ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ ಸುರೇಶ್ ಕುಮಾರ್ ಈ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಅವರೂ ಸಹ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ಸಹ ಮಾತನಾಡುವುದಾಗಿ ತಿಳಿಸಿದರು. ಕೂಡಲೇ ಈ ಕುರಿತು ಅರೋಗ್ಯ ಇಲಾಖೆಗೆ ಸಲ್ಲಿಸಿರುವ ಅಂಕಿ ಅಂಶಗಳನ್ನು ಅನುಪಾಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದೂ ಸುರೇಶ್ ಕುಮಾರ್ ತಿಳಿಸಿದರು.

    ಅಲ್ಲದೇ, ಕೋವಿಡ್ ಮೂರನೇ ಅಲೆ ಅಪ್ಪಳಿಸಬಹುದೆಂಬ ವರದಿಗಳ ಹಿನ್ನೆಲೆಯಲ್ಲಿ ನಮ್ಮ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು, ಆರೋಗ್ಯ ಸಚಿವರೊಂದಿಗೆ ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದೂ ಸುರೇಶ್ ಕುಮಾರ್ ಹೇಳಿದರು.

    ಶಿಕ್ಷಕರ ವರ್ಗಾವಣೆ ಚುರುಕುಗೊಳಿಸಿ:
    ಈಗಾಗಲೇ ಶಿಕ್ಷಕರ ವರ್ಗಾವಣೆ ಬಹಳ ತಡವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸೂಚಿಸಲಾಗಿದ್ದು, ಲಾಕ್ ಡೌನ್ ಮುಗಿದ ಕೂಡಲೇ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದರು. ಶಿಕ್ಷಕರು ಇಲಾಖೆಯಿಂದ ತುಂಬಾ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಅವರಿಗೆ ನೀಡಿದ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕಿದೆ. ಇದರಲ್ಲಿ ವಿಳಂಬ ಮಾಡಬಾರದೆಂದು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

    ವೃಂದ ಮತ್ತು ನೇಮಕಾತಿ ನಿಯಮ:
    6-8ನೇ ತರಗತಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ವೃಂದ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಆದೇಶ ಮಾಡಲಾಗಿತ್ತು. ವಿಳಂಬದ ಕಾರಣ ನೇಮಕಾತಿಗೆ ಯಾವುದೇ ಕ್ರಮವಾಗಿಲ್ಲ. ಕಾಲಮಿತಿ ವಿಧಿಸಿಕೊಂಡು ಇದನ್ನು ಪೂರೈಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನೇಮಕಾತಿಗೆ ನಿಬರ್ಂಧ ಇಲ್ಲದ ಕಾರಣ, ಆ ಪ್ರದೇಶದ ಖಾಲಿ ಹುದ್ದೆಗಳ ನೇಮಕಾತಿಗೆ ಕೂಡಲೇ ಕ್ರಿಯಾಯೋಜನೆ ರೂಪಿಸಿ ಮಂಡಿಸಬೇಕೆಂದು ಸೂಚಿಸಿದರು.

    ಸಂಕನೂರ ನೇತೃತ್ವದ ಸಮಿತಿ ವರದಿ:
    ಶಾಲಾಕಾಲೇಜುಗಳ ಆರ್.ಆರ್.ನವೀಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ವರದಿ ಮಂಡಿಸಲು ರಚಿಸಲಾಗಿದ್ದ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ನೇತೃತ್ವದ ಸಮಿತಿ ವರದಿ ಕುರಿತಂತೆ ಪ್ರಸ್ತಾಪಿಸಿದ ಸಚಿವರು, ಈ ಕುರಿತ ಪ್ರಗತಿ ಪರಿಶೀಲಿಸಿ ವರ್ಚುವಲ್ ಮೂಲಕ ಸಭೆ ನಡೆಸಿ ಶೀಘ್ರವೇ ವರದಿ ನೀಡುವ ಸಂಬಂಧದಲ್ಲಿ ಸಂಕನೂರು ಅವರೊಂದಿಗೆ ಚರ್ಚಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ತಾವೂ ಸಹ ಸಂಕನೂರು ಅವರೊಂದಿಗೆ ಮಾತನಾಡಿ ಸಾಧ್ಯವಾದಷ್ಟು ಶೀಘ್ರವೇ ವರದಿ ಕೋರುವುದಾಗಿ ತಿಳಿಸಿದರು.

    ದೀಕ್ಷಾ ಆಪ್ ಸದ್ಬಳಕೆಗೆ ಸೂಚನೆ:
    ಭೌತಿಕ ತರಗತಿಗಳ ಅನುಪಸ್ಥಿತಿಯಲ್ಲಿ ಆನ್ ಲೈನ್ ಶಿಕ್ಷಣದ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದ ಪೋರ್ಟಲ್ ದೀಕ್ಷಾ ಆಪ್ ಮೂಲಕ ಪದವಿ ಪೂರ್ವ ವಿದ್ಯಾರ್ಥಿಗಳು ಕಲಿಕೆ ಪ್ರಕ್ರಿಯೆಯಲ್ಲಿ ತೊಡಗಲು ಅನುವಾಗುವಂತೆ ಪಠ್ಯ ಭಾಗಗಳನ್ನು ಅದರಲ್ಲಿ ಅಳವಡಿಸಲಾಗುತ್ತಿದ್ದು, ಮುಂದಿನ ವಾರದಲ್ಲಿ ಪೋರ್ಟಲ್ ಲೋಕಾರ್ಪಣೆ ಮಾಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ಇದು ವಿಶ್ವದಲ್ಲೇ ಅತಿ ಹೆಚ್ಚು ಬಳಕೆಯಲ್ಲಿರುವ ಪೋರ್ಟಲ್ ಆಗಿದ್ದು, ದೀಕ್ಷಾ ಪೋರ್ಟಲ್ ನಲ್ಲಿ ಅತಿ ಹೆಚ್ಚು ಪಠ್ಯ ಲಭ್ಯವಿರುವ ರಾಜ್ಯಗಳಲ್ಲಿ ಕರ್ನಾಟಕವೂ ಉತ್ತಮ ಸ್ಥಾನದಲ್ಲಿದೆ. ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ 1ರಿಂದ 10ನೇ ತರಗತಿಗಳಿಗೆ ಅನ್ವಯವಾಗುವಂತೆ 22 ಸಾವಿರ ಇ-ಪಠ್ಯಗಳನ್ನು ಅಳವಡಿಸಲಾಗಿದೆ. ಎಲ್ಲ ಪಠ್ಯಪುಸ್ತಕಗಳು, ವರ್ಕ್ ಪುಸ್ತಕಗಳು, ತರಬೇತಿ ಪಠ್ಯಗಳು ಅಧ್ಯಾಯವಾರು ದೀಕ್ಷಾ ಆಪ್ ನಲ್ಲಿ ಲಭ್ಯವಿದೆ. ಹಾಗೆಯೇ ಪದವಿ ಪೂರ್ವ ಶಿಕ್ಷಣಕ್ಕೆ ಅನುವಾಗುವಂತೆಯೂ ಪಠ್ಯರಚನೆ ಪೂರೈಸಿ ಆಪ್ ಗೆ ಅಪ್ ಲೋಡ್ ಮಾಡಲಾಗಿದೆ. ಪದವಿ ಪೂರ್ವ ಉಪನ್ಯಾಸಕರ ತರಬೇತಿ ಮಾಡ್ಯೂಲ್ ನ್ನು ಸಹ ಅಪ್ ಲೋಡ್ ಮಾಡಲಾಗುತ್ತಿದೆ. ಈ ಆ್ಯಪ್ ಬಳಕೆಯನ್ನು ನಮ್ಮ ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಪಡೆಯಬೇಕೆಂದು ಸಚಿವರು ಕೋರಿದರು.

    ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಪರ್ಯಾಯ ಬೋಧನಾ ಕ್ರಮಗಳಿಗೆ ಆದ್ಯತೆ ಇರಲಿದ್ದು, ಈಗಿನಿಂದಲೇ ದೂರದರ್ಶನ, ಆಕಾಶವಾಣಿಯಂತಹ ಸಮೂಹ ಮಾಧ್ಯಮಗಳು ಸೇರಿದಂತೆ ತಂತ್ರಜ್ಞಾನಾಧಾರಿತ ಬೋಧನೆಯ ಸಂಪೂರ್ಣ ಕ್ರಿಯಾಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದೂ ಸುರೇಶ್ ಕುಮಾರ್ ತಿಳಿಸಿದರು.

    ಸಕಾಲಕ್ಕೆ ಪಠ್ಯಪುಸ್ತಕ ಪೂರೈಕೆಗೆ ಸೂಚನೆ:
    ಭೌತಿಕವಾಗಿ ಶಾಲೆಗಳು ಆರಂಭವಾಗುವುದು ತಡವಾದರೂ ಸರಿಯೇ ಮಕ್ಕಳ ಕಲಿಕೆಗೆ ಪೂರಕವಾಗಿ ಪಠ್ಯಪುಸ್ತಕಗಳನ್ನು ಸಕಾಲದಲ್ಲಿ ತಲುಪಿಸಲು ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸಬೇಕು. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಪುಸ್ತಕಗಳು ಪ್ರತಿಯೊಬ್ಬ ವಿದ್ಯಾರ್ಥಿಗೆ ತಲುಪಬೇಕು ಎಂದು ಸಚಿವರು ಸೂಚಿಸಿದರು.

    ಶಾಲಾ ಶುಲ್ಕದ ಗೊಂದಲ ಪರಿಹಾರ:
    ಪ್ರಸ್ತುತ ನ್ಯಾಯಾಲಯದ ಅಂಗಳದಲ್ಲಿರುವ ಶಾಲಾ ಶುಲ್ಕಕ್ಕೆ ಸಂಬಂಧಿಸಿದ ಪ್ರಕರಣದ ಮಾಹಿತಿ ಪಡೆದ ಸಚಿವರು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ಮಾರ್ಗಗಳನ್ನು ಆಲೋಚಿಸಬೇಕೆಂದು ಸಲಹೆ ನೀಡಿದರು.

    ಸಭೆಯಲ್ಲಿ ಪಿಯು ಇಲಾಖೆ ನಿರ್ದೇಶಕಿ ಆರ್. ಸ್ನೇಹಲ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್ ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

  • ಆಕ್ಸಿಜನ್ ದುರಂತ,  ಮುಂದಿನ ವಿಚಾರಣೆ ವೇಳೆಗೆ ಸರ್ಕಾರ ನಿಲುವು ತಿಳಿಸಲಿದೆ: ಸುರೇಶ್ ಕುಮಾರ್

    ಆಕ್ಸಿಜನ್ ದುರಂತ, ಮುಂದಿನ ವಿಚಾರಣೆ ವೇಳೆಗೆ ಸರ್ಕಾರ ನಿಲುವು ತಿಳಿಸಲಿದೆ: ಸುರೇಶ್ ಕುಮಾರ್

    ಚಾಮರಾಜನಗರ: ಕಳೆದ ಹದಿನೈದು ದಿನಗಳ ಹಿಂದೆ ಚಾಮರಾಜನಗರದಲ್ಲಿ ಕೊರೊನಾ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ಕೊರತೆಯಿಂದ ಸೋಂಕಿತರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್ ಸೂಚನೆಯಂತೆ ಮುಂದಿನ ವಿಚಾರಣೆಯ ವೇಳೆಗೆ ರಾಜ್ಯ ಸರ್ಕಾರ ಕ್ರಮವಹಿಸಿದ ಬಗ್ಗೆ ತನ್ನ ನಿಲುವು ತಿಳಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಚಾಮರಾಜನಗರದಲ್ಲಿ ಹೇಳಿದರು.

    ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಿಗೆ ಭೇಟಿ ನೀಡಿ, ಕೋವಿಡ್ ಸೋಂಕಿತರ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದ ಬಳಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿನ ಆಕ್ಸಿಜನ್ ಕೊರತೆಯಿಂದ ಅಮಾಯಕರು ಸಾವನ್ನಪ್ಪಿದ ಘಟನೆ ನಡೆದು ಹದಿನೈದು ದಿನಗಳಾಗಿದೆ. ನ್ಯಾಯಾಂಗ ತನಿಖೆಯೂ ಸಹ ನಡೆದಿದೆ, ಹೈ ಕೋರ್ಟ್‍ನಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ಹೇಳಿದರು.

    ಹೈ ಕೋರ್ಟ್ ಈಗಾಗಲೇ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯ ವೇಳೆಗೆ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ ಪ್ರಕರಣದ ತಪ್ಪಿತಸ್ಥರಿಗೆ ಕ್ರಮ ಹಾಗೂ ಮೃತ ಕುಟುಂಬಗಳಿಗೆ ಪರಿಹಾರವನ್ನು ನೀಡುವ ಬಗ್ಗೆ ಸರ್ಕಾರದ ನಿರ್ಧಾರವನ್ನು ತಿಳಿಸುವಂತೆ ಸೂಚನೆ ನೀಡಿದೆ. ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದು, ಮೃತ ಕುಟುಂಬಗಳಿಗೆ ಯಾವ ರೀತಿಯಲ್ಲಿ ಪರಿಹಾರ ನೀಡಬಹುದೆಂದು ತಿಳಿಸಿದ್ದೇನೆ. ಸದ್ಯದಲ್ಲಿ ಸರ್ಕಾರ ಹೈ ಕೋರ್ಟ್‍ಗೆ ತನ್ನ ನಿಲುವನ್ನು ತಿಳಿಸಲಿದೆ ಎಂದಿದ್ದಾರೆ.

    ಹನೂರು ತಾಲ್ಲಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಕೋವಿಡ್ ಕೇರ್ ಸೆಂಟರ್‍ಗಳಿಗೆ ಭೇಟಿ ನೀಡಿದ್ದು, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರ ಬಳಿಯೂ ಸಹ ಚರ್ಚೆ ನಡೆಸಿದ್ದೇವೆ. ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗಬೇಕು ಹಾಗೂ ಸಾವಿನ ಪ್ರಮಾಣವೂ ಸಹ ಕಡಿಮೆಯಾಗ ಬೇಕು. ಎಲ್ಲಾ ಕ್ರಮವನ್ನು ವಹಿಸಲು ರಾಜ್ಯ ಸರ್ಕಾರ ಸಿದ್ದವಿದೆ ಎಂದರು. ಹನೂರು ಶಾಸಕ ಆರ್. ನರೇಂದ್ರ ಹಾಗೂ ವೈದ್ಯರುಗಳು ಸಚಿವರೊಂದಿಗೆ ಹಾಜರಿದ್ದರು.

  • ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬಳಿಯೂ ಟಿವಿ ಇದೆ: ಸುರೇಶ್ ಕುಮಾರ್

    ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬಳಿಯೂ ಟಿವಿ ಇದೆ: ಸುರೇಶ್ ಕುಮಾರ್

    ಚಾಮರಾಜನಗರ: ಬೈಕ್, ಟಿವಿ, ಫ್ರಿಡ್ಜ್ ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಸಚಿವ ಉಮೇಶ್ ಕತ್ತಿ ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ, ಆದರೆ ಈ ಬಗ್ಗೆ ಅವರೊಡನೆ ಖುದ್ದಾಗಿ ಮಾತನಾಡುತ್ತೇನೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಚಾಮರಾಜನಗರದಲ್ಲಿ ಮಾತನಾಡಿದ ಅವರು, ಎಲ್ಲರ ಮನೆಯಲ್ಲೂ ಟಿವಿ ಇರೋದು ಸರ್ವೇ ಸಾಮಾನ್ಯ, ಸಮಾಜದ ಕಟ್ಟ ಕಡೆಯ ಕುಟುಂಬದ ಮಗುವು ಚಂದನ ವಾಹಿನಿ ನೋಡಿದೆ. ಸಂವೇದ ಕಾರ್ಯಕ್ರಮ ವೀಕ್ಷಿಸಿ ಪಾಠ ಕಲಿತಿದೆ ಎಂದು ಹೇಳಿದ್ದಾರೆ.

    ಬಡವರ ಮೇಲೆ ಬರೆ ಹಾಕಿ ಯಾವ ಸರ್ಕಾರ ಖುಷಿ ಪಡಲ್ಲ ಎಂದಿದ್ದಾರೆ. ಬಡವರ ಹೊರೆ ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಇಳಿಕೆ ಮಾಡುವುದೇ ಸರ್ಕಾರದ ಉದ್ದೇಶವಾಗಿದ್ದು, ಬೆಲೆ ಏರಿಕೆ ಮಾಡಿ ಬೊಕ್ಕಸ ತುಂಬಿಕೊಳ್ಳುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಹೇಳಿದ್ದಾರೆ.

    ಪೆಟ್ರೋಲ್, ಡಿಸೇಲ್ ಅಡುಗೆ ಅನಿಲ ದರ ಕಡಿಮೆಯಾದಾಗ ಯಾರೂ ಕೂಡ ಮಾತನಾಡಿಲ್ಲ. ಜಾಸ್ತಿ ಆದಾಗ ಮಾತನಾಡುವುದು ಸಹಜವಾಗಿದೆ. ಕೇಂದ್ರ ಸಚಿವ ಧಮೇರ್ಂದ್ರ ಪ್ರಧಾನ್ ಕೂಡ ಬೆಲೆ ಇಳಿಕೆ ಆಗುತ್ತದೆ ಎಂದು ಹೇಳಿದ್ದಾರೆ ನೋಡೋಣ ಎಂದು ಹೇಳಿದ್ದಾರೆ.

    ಆದೇಶ ರದ್ದು ವಾಪಸ್:
    ಬೈಕ್, ಟಿವಿ, ಫ್ರಿಡ್ಜ್ ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಹೇಳಿಕೆ ನೀಡಿದ್ದ ಸಚಿವ ಕತ್ತಿ ಇದೀಗ ಈ ಆದೇಶವನ್ನು ವಾಪಸ್ ಪಡೆದಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕತ್ತಿ, ಬಿಪಿಎಲ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದೆ ಇದ್ದ ಮಾನದಂಡಗಳನ್ನೇ ಮುಂದುವರಿಸಲಾಗುತ್ತದೆ. ನಾನು ಸಚಿವನಾದ ಬಳಿಕ ಯಾವುದೇ ತಿದ್ದುಪಡಿ ಮಾಡಿಲ್ಲ ಎಂದು ಕತ್ತಿ ಸ್ಪಷ್ಟನೆ ನೀಡಿದ್ದಾರೆ.

  • ತುಮಕೂರು ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಸುರೇಶ್ ಕುಮಾರ್

    ತುಮಕೂರು ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಸುರೇಶ್ ಕುಮಾರ್

    ತುಮಕೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಇಂದು ಸರ್ಕಾರಿ ಶಾಲೆಯಲ್ಲೇ ಒಂದು ದಿನ ವಾಸ್ತವ್ಯ ಹೂಡಿ ಸ್ಥಿತಿಗತಿಗಳ ಬಗ್ಗೆ ಅರಿಯಲು ಮುಂದಾಗಿದ್ದಾರೆ.

    ತುಮಕೂರು ಜಿಲ್ಲೆಯ ಗಡಿ ಪ್ರದೇಶವಾದ ಪಾವಗಡ ತಾಲೂಕಿನ ಎನ್.ಅಚ್ಚಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ವಾಸ್ತವ್ಯ ಹೂಡಲಿದ್ದಾರೆ. ಸಂಜೆ 6 ಗಂಟೆಗೆ ಗ್ರಾಮದ ಶಾಲೆಗೆ ಆಗಮಿಸಲಿರುವ ಸಚಿವರು, ರಾತ್ರಿ ಇದೇ ಶಾಲೆಯಲ್ಲಿ ತಂಗಲಿದ್ದಾರೆ.

    ಈ ನಡುವೆ ಆರಂಭದಲ್ಲಿ ಗಡಿನಾಡ ಶಾಲೆಗಳ ಪ್ರಚಲಿತ ಸಮಸ್ಯೆಗಳು, ತಾಲೂಕು ಮತ್ತು ಜಿಲ್ಲೆಯ ಶೈಕ್ಷಣಿಕ ವಿಚಾರಗಳ ಕುರಿತ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 6.30 ಗಂಟೆಗೆ ಸದರಿ ಶಾಲೆಯಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಿ ರಾತ್ರಿ 10 ಗಂಟೆಗೆ ವಿದ್ಯಾರ್ಥಿಗಳು ನಡೆಸಿಕೊಡುವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಲಿದ್ದಾರೆ.

    ಬಳಿಕ ನಾಳೆ ಬೆಳಗ್ಗೆ 8 ಗಂಟೆಗೆ ಪಾವಗಡ ತಾಲೂಕು ಮತ್ತು ಜಿಲ್ಲೆಯ ಅಧಿಕಾರಿಗಳೊಂದಿಗೆ ಗಡಿನಾಡು ಶಾಲೆಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚಿಸಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ವೆಂಕಟಮ್ಮನಹಳ್ಳಿ, ಕ್ಯಾತಗಾನಚರ್ಲು, ವಳ್ಳೂರು ಹಾಗೂ ತಿರುಮಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿ ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ನಾಳೆ ಮಧ್ಯಾಹ್ನದ ಬಳಿಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಈ ಹಿನ್ನೆಲೆಯಲ್ಲಿ ವಾಸ್ತವ್ಯ ಹೂಡಲಿರುವ ಶಾಲೆಯಲ್ಲಿ ಸರ್ವ ತಯಾರಿ ನಡೆದಿದೆ.