ಹಾಸನ: ಎಸ್‍ಪಿಬಿ ನಿಧನಕ್ಕೆ ಉಡುಪಿಯ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಎಸ್‍ಪಿ ಬಾಲಸುಬ್ರಹ್ಮಣ್ಯಂ ರವರ ಸಾವು ಅಪಾರ ನೋವು ತಂದಿದೆ. ದಿಗ್ಗಜ ಹಾಡುಗಾರರನ್ನು ಕಳೆದುಕೊಂಡಿದ್ದೇವೆ. ಎದೆ ತುಂಬಿ ಹಾಡುವೆನು ಕಾರ್ಯಕ್ರಮದಿಂದ ಮನೆ ಮಾತಾಗಿದ್ದರು. ಮನೆ ಮನೆ ಮಕ್ಕಳಲ್ಲಿ ಕೂಡ ಎಸ್‍ಪಿ ಬಾಲಸುಬ್ರಹ್ಮಣ್ಯಂ ಚಿರಪರಿಚಿತರಾಗಿದ್ದವರು. ಮತ್ತೆ ಎಸ್‍ಪಿಬಿ ಈ ನಾಡಿನಲ್ಲಿ ಜನಿಸಲಿ ಎಂದು ಪ್ರಾರ್ಥಿಸುತ್ತೇನೆ. ಶ್ರೀ ಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಲಿ ಎಂದು ಸಂತಾಪ ಸೂಚಿಸಿದ್ದಾರೆ.
ರಾಮ ಮಂದಿರ ಎರಡು ಮೂರು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಕೊರೊನಾ ಸಂದರ್ಭದಲ್ಲಿಯೂ ರಾಮ ಮಂದಿರ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ರಾಮ ಮಂದಿರ ಹಣ ಬೇರೆ ಖಾತೆಗೆ ವರ್ಗಾವಣೆಯಾಗಿದೆ ಎಂಬ ವಿಷ್ಯವಾಗಿ ಪ್ರತಿಕ್ರಿಯಿಸಿದ ಅವರು, ಯಾವುದೇ ರೀತಿಯಲ್ಲಿ ಅಂತಹ ಕೆಲಸ ಆಗಿಲ್ಲ. ಈ ಬ್ಯಾಕಿಂಗ್ ನಲ್ಲಿ ಆ ರೀತಿ ವ್ಯತ್ಯಯ ಆಗಿರಬಹುದು. ಆ ಬಗ್ಗೆಯೂ ವಿಚಾರಣೆ ನಡೆಯಲಿದೆ. ಕೊರೊನಾ ದಿನದಿಂದ ದಿನಕ್ಕೆ ಹೆಚ್ಚು ಪಸರಿಸುತ್ತಿದ್ದು ಈ ಬಗ್ಗೆ ಜನ ಜಾಗೃತರಾಗಿರಬೇಕು ಎಂದು ತಿಳಿಸಿದ್ದಾರೆ.
ಚೆನ್ನೈ: ಗಾನ ಗಂಧರ್ವ ಎಸ್‍ಪಿ ಬಾಲಸುಬ್ರಹ್ಮಣ್ಯಂ (74) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನಡೆಯಿತು.
ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂನ ರೆಡ್‍ಹಿಲ್ ಫಾರ್ಮ್ ಹೌಸ್‍ನಲ್ಲಿ ಎಸ್‍ಪಿಬಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಎಸ್‍ಪಿಬಿ ಪುತ್ರ ಚರಣ್ ಅವರು ತೆಲುಗು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು. ಅಂತಿಮ ಪೂಜಾ ವಿಧಾನಗಳನ್ನ ನೆರವೇರಿಸಲು ಹೈದಾರಾಬಾದ್ ನಿಂದ ಪುರೋಹಿತರ ತಂಡ ಆಗಮಿಸಿತ್ತು.
Tamil Nadu: Andhra Pradesh Minister Anil Kumar pays last respects to singer SP Balasubrahmanyam in Thamaraipakkam village of Thiruvallore district.
ತಮಿಳುನಾಡು ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ತಿರುವಳ್ಳೂರ್ ಜಿಲ್ಲಾಡಳಿತ ಕುಟುಂಬದ ಸದಸ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸರ್ಕಾರಿ ಗೌರವಗಳನ್ನು ನೀಡಿ ಗೌರವಿಸಿತ್ತು. ಇದಕ್ಕೂ ಮುನ್ನ ಎಸ್‍ಪಿಬಿ ಅವರ ಪಾರ್ಥಿವ ಶರೀರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬೆಳಗ್ಗೆ 7 ಗಂಟೆ ಯಿಂದ 11 ಗಂಟೆವರೆಗೂ ಸಾವಿರಾರು ಮಂದಿ ದರ್ಶನ ಪಡೆದರು. ತಿರುವಳ್ಳೂರ್ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸರು ಅಗತ್ಯ ಕಾರ್ಯಗಳ ಸಿದ್ಧತೆ ಮಾಡಿದರು. ಅಲ್ಲದೇ ಸಾವಿರಾರರು ಅಭಿಮಾನಿಗಳು ಅಂತಿಮ ದರ್ಶನ ಪಡೆಯುವ ನಿರೀಕ್ಷೆ ಇದ್ದ ಕಾರಣ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.
ಸಿನಿಮಾ ರಂಗದ ಹಲವು ನಟ, ನಟಿಯರು, ಗಣ್ಯರು ಸೇರಿಂದರೆ ಗಾಯಕರು ಎಸ್‍ಪಿಬಿ ಅವರ ದರ್ಶನವನ್ನು ಪಡೆದರು. ಎಸ್‍ಪಿಬಿ ಹುಟ್ಟೂರು ನೆಲ್ಲೂರಿನ ಶಾಸಕ ಅನಿಲ್ ಕುಮಾರ್ ಯಾದವ್ ಆಗಮಿಸಿ ಅಂತಿಮ ದರ್ಶನ ಪಡೆದರು. ಅಲ್ಲದೇ ಆಂಧ್ರದ ನೆಲ್ಲೂರು ಜಿಲ್ಲೆಯ ಏರೂರುನಲ್ಲಿ ಮರಳಿನ ಮೇಲೆ ಎಸ್‍ಪಿಬಿ ಕಲಾಕೃತಿ ರೂಪಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಲಾವಿದ ಸನತ್ ಕುಮಾರ್ ರಿಂದ ಮರಳಿನ ಕಲಾಕೃತಿ ರಚನೆ ಮಾಡಲಾಗಿತ್ತು.
Today, on account of the funeral of SP Balasubrahmanyam, we have made elaborate security arrangements. We have deployed around 500 personnel, separate traffic police team is also there to take care of traffic issues: Aravindan, SP Thiruvallore. #TamilNaduhttps://t.co/s5JqJphGGypic.twitter.com/BiEkRcCQmo
ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಆಗಸ್ಟ್ 5ರಂದು ಶೀತ ಮತ್ತು ಜ್ವರ ಕಾಣಿಸಿಕೊಂಡು ಉಸಿರಾಟಕ್ಕೆ ತೊಂದರೆಯಾಗಿದ್ದರಿಂದ ಎಸ್‍ಪಿಬಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯಿಂದ ಅವರಿಗೆ ಕೋವಿಡ್-19 ಸೋಂಕಿನ ಲಕ್ಷಣಗಳಿರುವುದು ದೃಢಪಟ್ಟಿತ್ತು. ಮನೆಯಲ್ಲಿಯೇ ಕ್ವಾರಂಟೈನ್ ಆಗುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಕುಟುಂಬದ ಸದಸ್ಯರ ಸಲಹೆ ಮೇರೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕದಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೂಲಕವೇ ಅವರಿಗೆ ಚಿಕಿತ್ಸೆ ನಿಡಲಾಗಿತ್ತು. ಆದರೆ ನಿನ್ನೆ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಆಗಸ್ಟ್ 24ರಂದು ಕೊರೊನಾ ವರದಿ ನೆಗೆಟಿವ್ ಬಂದಿತ್ತು.
– ಶಾಲೆಯಲ್ಲಿ ಹಾಡು, ನಾಟಕಗಳಲ್ಲಿ ಎತ್ತಿದ ಕೈ
– ಆರ್ಕೇಸ್ಟ್ರಾದಿಂದ ಆರ್ಟಿಸ್ಟ್
ಬೆಂಗಳೂರು: `ಎಂದರೋ ಮಹಾನುಭವುಲು’ ನಿರ್ಮಿಸಿದಂತಹ ಸಂಗೀತ ಸೌಧದ ಮೇಲೆ ದಶಕಗಳ ಕಾಲ ರಾರಾಜಿಸಿದವರು ಶ್ರೀಪತಿ ಪಂಡಿತಾರಾಧ್ಯುಲು ಬಾಲಸುಬ್ರಹ್ಮಣ್ಯಂ. ಅಬಾಲ ವೃದ್ಧರನ್ನು ಕಟ್ಟಿ ಹಾಕುವ ಸ್ವರಶಕ್ತಿ ಅವರ ಕಂಠಕ್ಕೆ ಮಾತ್ರವಲ್ಲ, ಅವರ ವ್ಯಕ್ತಿತ್ವಕ್ಕೂ ಇತ್ತು.
ಸಿನಿಮಾ ಇಂಡಸ್ಟ್ರಿಯಲ್ಲಿ ನಟನಾಗಿ ಮೊದಲಿಗೆ ಕಾಣಿಸಿಕೊಂಡರೂ, ನಂತರ ಅವರು ಗಾಯಕರಾಗಿ ಅಜರಾಮರವಾದ ಎಷ್ಟೋ ಹಾಡುಗಳನ್ನು ಆಲಾಪಿಸಿದರು. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಬೋಜಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ಎಸ್‍ಪಿಬಿ ಹಾಡಿದ ಹಾಡುಗಳು ಚಿರಸ್ಥಾಯಿ ಆಗಿರಲಿವೆ. ಗಾಯಕರಾಗಿ, ನಟರಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ, ಕಿರುತೆರೆ ನಿರೂಪಕರಾಗಿ, ಹೀಗೆ ಬಾಲುಗಾರು ನಿಜಕ್ಕೂ ಬಹುಮುಖ ಪ್ರಜ್ಞಾಶಾಲಿ. ಆದರೆ ಅವರೆಲ್ಲ ಸಾಧನೆಗೆ ಅಡಿಪಾಯ ಹಾಕಿದವರೇ ಅವರ ತಂದೆ. ಅದೂ ಸಹ ಹರಿಕಥೆಗಳ ಮೂಲಕ ಎನ್ನುವುದು ವಿಶೇಷ.
ಎಸ್.ಪಿ.ಬಾಲಸುಬ್ರಹ್ಮಣ್ಯಂ 1946ರ ಜೂನ್ 4ರಂದು ಆಂಧ್ರದ ನೆಲ್ಲೂರು ಜಿಲ್ಲೆಯ ಕೋನೇಟಮ್ಮ ಪೇಟೆಯಲ್ಲಿ ಜನಿಸಿದರು. ತಂದೆ ಸಾಂಬಮೂರ್ತಿ, ತಾಯಿ ಶಕುಂತಲಮ್ಮ, ತಂದೆ ಹರಿಕಥೆ ಹೇಳುತ್ತಿದ್ದರು. ಭಕ್ತಿ ರಸ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಹೀಗಾಗಿ ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕ್ಕವಯಸ್ಸಿನಲ್ಲೇ ಸಂಗೀತದ ಮೇಲೆ ಆಸಕ್ತಿ ಬೆಳೆಯಿತು. ಐದನೇ ವಯಸ್ಸಿನಲ್ಲಿಯೇ ಭಕ್ತರಾಮದಾಸು ನಾಟಕದಲ್ಲಿ ತಂದೆ ಜೊತೆ ಬಾಲು ನಟಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಸೋದರಮಾವನ ಮನೆಯಲ್ಲಿ ಪೂರ್ಣಗೊಳಿಸಿ, ಸ್ಕೂಲ್ ಫೈನಲ್ ಶಿಕ್ಷಣವನ್ನು ಶ್ರೀಕಾಳಹಸ್ತಿಯಲ್ಲಿ ಪೂರೈಸಿದ್ದರು. ಶಾಲೆಯಲ್ಲಿ ಕೇವಲ ಓದಿನಲ್ಲಿ ಮಾತ್ರವಲ್ಲ, ಆಟಗಳಲ್ಲಿಯೂ ಎಸ್‍ಪಿಬಿ ಮೊದಲಿಗರಾಗಿದ್ದರು.
ಶಾಲೆಯಲ್ಲಿ ಹಾಡು, ನಾಟಕಗಳಲ್ಲಿ ಎತ್ತಿದ ಕೈ
ಶ್ರೀಕಾಳಹಸ್ತಿಯ ಬೋರ್ಡ್ ಶಾಲೆಯ ಜಿ.ವಿ.ಸುಬ್ರಹ್ಮಣ್ಯಂ ಎಂಬ ಶಿಕ್ಷಕರು, ಬಾಲು ಅವರಿಂದ ಹಾಡೊಂದನ್ನು ಹಾಡಿಸಿ ರೆಕಾರ್ಡ್ ಮಾಡಿದ್ದರು. ಇದು ಬಾಲುಗಾರು ಅವರಿಗೆ ಮರೆಯಲಾಗದ ಅನುಭೂತಿ. ಮತ್ತೊಬ್ಬ ಶಿಕ್ಷಕರಾದ ರಾಧಾಪತಿ ಪ್ರೋತ್ಸಾಹದಿಂದ ಹಲವು ನಾಟಕಗಳಲ್ಲಿ ನಟಿಸಿದ್ದರು. ತಿರುಪತಿಯಲ್ಲಿ ಪಿಯುಸಿ ಓದುತ್ತಿದ್ದಾಗ ಮದ್ರಾಸ್ ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾದ ನಾಟಕದಲ್ಲಿ ಸ್ತ್ರೀಪಾತ್ರದಲ್ಲಿ ಅಭಿನಯಿಸಿದ್ದರು. ವಿಜಯವಾಡ ಆಕಾಶವಾಣಿಯಲ್ಲಿ ಹಾಡುಗಳನ್ನು ಹಾಡಿದ್ದರು.
ಆರ್ಕೇಸ್ಟ್ರಾದಿಂದ ಆರ್ಟಿಸ್ಟ್
ಎಸ್‍ಪಿ ಬಾಲಸುಬ್ರಹ್ಮಣ್ಯಂ ಪಿಯುಸಿ ಬಳಿಕ ಒಂದು ಆರ್ಕೆಸ್ಟ್ರಾ ಶುರು ಮಾಡಿದ್ದರು. ಗೆಳೆಯರೊಂದಿಗೆ ಆರ್ಕೆಸ್ಟ್ರಾ ಮೂಲಕ ಸ್ಟೇಜ್ ಶೋ ನೀಡುತ್ತಿದ್ದರು. ಅನಂತಪುರದಲ್ಲಿ ಎಂಜಿನಿಯರಿಂಗ್ ಕಾಲೇಜು ಸೇರಿ ನಂತರ ಅದು ಹಿಡಿಸದೇ ಮದ್ರಾಸ್‍ಗೆ ತೆರಳಿ ಎಂಜಿಯರಿಂಗ್‍ಗೆ ಪರ್ಯಾಯ ಎನಿಸಿದ್ದ ಎಎಂಐಇಗೆ ಸೇರಿದ್ದರು. ಅಲ್ಲಿ ಓದಿನ ಜೊತೆಗೆ ಸಿನಿಮಾದಲ್ಲಿ ಹಾಡಲು ಪ್ರಯತ್ನ ನಡೆಸಿದ್ದರು. ಒಂದು ವರ್ಷದ ಬಳಿಕ ಮಹ್ಮದ್ ಬಿನ್ ತುಘಲಕ್ ಸಿನಿಮಾದಲ್ಲಿ ನಟನಾಗಿ ಕಾಣಿಸಿಕೊಂಡರು. ಹ್ಯಾಪಿ ಬರ್ತ್ ಡೇ ಟು ಯೂ ಎಂದು ಹಾಡುವ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ದರ್ಶನ ನೀಡಿದ್ದರು.
1964ರಲ್ಲಿ ಮದ್ರಾಸ್ ಸೋಷಿಯಲ್ ಅಂಡ್ ಕಲ್ಚರಲ್ ಕ್ಲಬ್ ನಿರ್ವಹಿಸಿದ ಲಲಿತಾ ಸಂಗೀತಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಸ್‍ಪಿಬಿಗೆ ಮೊದಲ ಬಹುಮಾನ ಬಂತು. ಪೆಂಡ್ಯಾಲ, ಘಂಟಸಾಲ ಅವರು ಜಡ್ಜ್‍ಗಳಾಗಿದ್ದರು. ಖ್ಯಾತ ಸಂಗೀತ ನಿರ್ದೇಶಕ ಕೋದಂಡಪಾಣಿ, ಎಸ್‍ಪಿಬಿ ಗಾಯನ ಕಂಡು ಮಂತ್ರಮುಗ್ಧರಾಗಿದ್ದರು. ಮುಂದೆ ಎಸ್‍ಪಿಬಿಗೆ ಸಿನಿಮಾದಲ್ಲಿ ಹಾಡಲು ಅವಕಾಶ ನೀಡೋದಾಗಿ ಕೋದಂಡಪಾಣಿ ಮಾತು ನೀಡಿದ್ದರು.
ಎಸ್‍ಪಿಬಿ ಮೊದಲ ಹಾಡು
ಯಾರ ಬಳಿಯೂ ಶಾಸ್ತ್ರೀಯವಾಗಿ ಸಂಗೀತಾಭ್ಯಾಸ ಮಾಡದೇ ಇದ್ದರೂ ಎಸ್‍ಪಿಬಿಗೆ ಜನ್ಮದತ್ತವಾಗಿ ಸಂಗೀತ ಸರಸ್ವತಿ ಒಲಿದಿದ್ದಳು. ಹೀಗಾಗಿ ಸಂಗೀತ ನಿರ್ದೇಶಕ ಕೋದಂಡಪಾಣಿಯವರು ಕೊಟ್ಟ ಮಾತಿನಂತೆ ಎಸ್‍ಪಿಬಿಗೆ ಶ್ರೀಶ್ರೀಶ್ರೀ ಮರ್ಯಾದಾ ರಾಮನ್ನ ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ನೀಡಿದರು. ಏಮಿ ಈ ವಿಂತ ಮೋಹಂ ಎಂಬ ಹಾಡಿಗೆ ಪಿಬಿ ಶ್ರೀನಿವಾಸ್, ಪಿ.ಸುಶೀಲಾ ಅವರೊಂದಿಗೆ ಎಸ್‍ಪಿಬಿ ಧ್ವನಿಯಾದರು. ಈ ಹಾಡು ಮೊದಲ ಟೇಕ್‍ನಲ್ಲೇ ಓಕೆ ಆಗಿದ್ದು ವಿಶೇಷ. ಮುಂದೆ ಎಸ್‍ಪಿಬಿ 40 ಸಾವಿರಕ್ಕೂ ಹೆಚ್ಚು ಹಾಡು ಹಾಡಿ ಗಾನಗಂಧರ್ವರಾಗಿದ್ದು ಇತಿಹಾಸ. ಕೋದಂಡಪಾಣಿ ಅವರು ಇಲ್ಲದಿದ್ದರೆ ಬಾಲು ಎಂಬ ವ್ಯಕ್ತಿ ಇರುತ್ತಿರಲಿಲ್ಲ ಎಂದು ಎಸ್‍ಪಿಬಿ ಅವಕಾಶ ಸಿಕ್ಕಾಗಲೆಲ್ಲಾ ಸ್ಮರಿಸುತ್ತಿದ್ದರು.
ಬೆಂಗಳೂರು: ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ತೆಲುಗು, ಹಿಂದಿಯಲ್ಲಿ ರಾಷ್ಟ್ರಪ್ರಶಸ್ತಿ ಬಂದಿತ್ತು. ಆದರೆ ಅವರು ಪ್ರೀತಿಸುತ್ತಿದ್ದ ಕನ್ನಡ ಭಾಷೆಯ ಹಾಡಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿರಲಿಲ್ಲ. ಈ ವಿಚಾರದ ಬಗ್ಗೆ ಅವರಿಗೆ ಬಹಳ ಕೊರಗಿತ್ತು. ಆದರೆ ಕೊನೆಗೂ ಕನ್ನಡ ಚಿತ್ರಕ್ಕೂ ಅವರಿಗೆ ಪ್ರಶಸ್ತಿ ಸಿಕ್ಕಿತ್ತು. ಆದರೆ ಪ್ರಶಸ್ತಿ ಪಡೆಯಲು ಕಾರಣವಾಗಿದ್ದ ಹಾಡನ್ನು ಅಭ್ಯಾಸ ಮಾಡಲು ಅವರು ಎಷ್ಟು ಪ್ರಯತ್ನ ಪಟ್ಟಿದ್ದರು ಎಂಬುದನ್ನು ಸಂಗೀತಾ ನಿರ್ದೇಶಕ ಹಂಸಲೇಖ ಇಂದು ಹಂಚಿಕೊಂಡಿದ್ದಾರೆ.
ಎಸ್‍ಪಿಬಿ ಕರ್ನಾಟಕಕ್ಕೆ ನಮಸ್ಕಾರ. ಅವರ ಹಾಡು ಅವರ ಜಗತ್ತು ದೊಡ್ಡದು. ಹಿಮಾಲಯ ಯಾವತ್ತೂ ಕರಗಲ್ಲ ಅನ್ನುತ್ತಿದ್ವಿ. ಆದರೆ ಕರಗಿ ಬಿಡ್ತು. ನಾವೆಲ್ಲ ಭಾವನೆ ಮೂಲಕವೇ ಬದುಕಿದ್ದೀವಿ. ಎಸ್‍ಪಿಬಿ ಪ್ರತಿಭೆ ಕಂಡು ಹಿಡಿದಿದ್ದು ಜಾನಕಮ್ಮ. ಸಂಗೀತದ ಭಾವನಾತ್ಮಕತೆ ಎಲ್ಲರಿಗೂ ಬರಲ್ಲ. ಇಂದು ಅವರು ಬಾರದ ಲೋಕಕ್ಕೆ ಹೋಗಿದ್ದಾರೆ ಎಂಬ ಭಾವನೆಯೇ ನಂಬಲು ಆಗುತ್ತಿಲ್ಲ ಎಂದು ಹಂಸಲೇಖ ಭಾವುಕರಾದರು.
ನನಗೆ ತೆಲುಗು, ತಮಿಳು ಬೇರೆ ಎಲ್ಲಾ ಭಾಷೆಗಳಲ್ಲೂ ರಾಷ್ಟ್ರ ಪ್ರಶಸ್ತಿ ಬಂದಿದೆ. ಆದರೆ ನನ್ನ ಪ್ರೀತಿಯ ಭಾಷೆ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ಸಿಗಲಿಲ್ಲ ಎಂದು ಯಾವಾಗಲೂ ಕೊರಗುತ್ತಿದ್ದರು. ನಮಗೆ ಅದರ ದಾರಿ ಏನು ಎಂಬುದು ಕೂಡ ಗೊತ್ತಿರಲಿಲ್ಲ. ಯೋಗ ಯೋಗ ಎಂಬಂತೆ ಚಿಂದೋಡಿ ಬಂಗಾರೇಶ್ ನಿರ್ದೇಶನದದಲ್ಲಿ ಚಿಂದೋಡಿ ಲೀಲ ಅವರು ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಎಂಬ ಸಿನಿಮಾ ತೆಗೆದರು. ಆ ಸಿನಿಮಾಗೆ ನನ್ನನ್ನು ಸಂಗೀತ ನಿರ್ದೇಶಕನಾಗಿ ಆಯ್ಕೆ ಮಾಡಿದರು. ಹಿಂದೂಸ್ತಾನಿ, ಕರ್ನಾಟಕ ಸಂಗೀತ ಸ್ವಲ್ಪ ಸ್ವಲ್ಪ ಗೊತ್ತಿದ್ದ ನಾನು ಆ ಸಿನಿಮಾಗೆ ಏನು ಮ್ಯೂಸಿಕ್ ಮಾಡಲು ಸಾಧ್ಯ. ನಾನು ಇದಕ್ಕೆ ಯೋಗ್ಯನಲ್ಲ ಎಂದು ಹೇಳಿದೆ. ಆಗ ಅವರು ಅಜ್ಜ ಮಾಡಿಸ್ಕೋತಾನೆ ಸುಮ್ಮನೆ ಹೋಗಿ ಮಾಡಿ ಅಂದರು. ನಾವು ಅಜ್ಜನ ಆಶೀರ್ವಾದಿಂದ ತೋಚಿದ್ದು ಮಾಡಿದ್ವಿ ಎಂದರು.
ಎಸ್‍ಪಿಬಿ ಅವರಿಗೆ ಹಾಡಿ ಎಂದು ಹೇಳಿದ್ವಿ. ಆಗ ಅವರು ನಿಮ್ಮ ತರ ನಾನು ಕೂಡ ಸ್ವಲ್ಪ ಕಲಿತ್ತಿದ್ದೇನೆ. ಹಿಂದೂಸ್ತಾನಿ ಸಂಗೀತ ನನಗೆ ಏನು ಗೊತ್ತು ಎಂದಿದ್ದರು. ಕೊನೆಗೆ ನೀವೇ ಹಾಡಬೇಕು ಎಂದು ಹಠ ಮಾಡಿದೆವು. ಆದರೆ ಅವರು ಆರು ತಿಂಗಳಾದರೂ ದಿನಾಂಕ ಕೊಟ್ಟಿರಲಿಲ್ಲ. ಬೇರೆಯವರ ಕೈಯಲ್ಲಿ ಹಾಡಿಸಲು ನಾನು ಮುಂದಾದೆ. ಆಗ ಬಂಗಾರೇಶ್ ಅವರು ಎಸ್‍ಪಿಬಿನೇ ಬೇಕು ಎಂದು ಹೇಳಿದರು. ಕೊನೆಗೆ ಅವರನ್ನು ಹುಡುಗಿಕೊಂಡು ಹೋದೆವು. ಅವರು ಕಾರಿನಲ್ಲಿ ಏರ್‌ಪೋರ್ಟ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ಒಂದು ಕ್ಯಾಸೆಟ್‍ನಲ್ಲಿ 50 ಲೂಪ್ ರೆಕಾರ್ಡ್ ಮಾಡಿಕೊಂಡ ಅಭ್ಯಾಸ ಮಾಡುತ್ತಿದ್ದರು ಎಂದರು.
ಕೊನೆಗೆ ಬಂದು ಹಾಡಿದರು. ಆದರೆ ನಮ್ಮನ್ನು ಒಳಗೆ ಬಿಟ್ಟಿಲ್ಲ. ನಾನು ಒಬ್ಬನೇ ಹಾಡುತ್ತೇನೆ, ನನಗೆ ತೋಚಿದ್ದು ಹಾಡುತ್ತೇನೆ ಎಂದು ಒಬ್ಬರೇ ಹೋಗಿ ಹಾಡಿದರು. ಬೆಳಗ್ಗೆಯಿಂದ ಸಂಜೆವರೆಗೂ ತಮ್ಮ ತಾಯಿಯನ್ನು ನೆನಪಿಸಿಕೊಂಡು ಹಾಡಿದರು. ಆ ಹಾಡು ಸೀದಾ ಹೃಷಿಕೇಶ್ ಮುಖರ್ಜಿಯ ಪ್ಯಾನಲ್‍ಗೆ ಹೋಗಿದೆ. ಅಲ್ಲಿ ರೆಹಮಾನ್ ಅವರ ಬಾಂಬೆ ಸಿನಿಮಾ ಮೊದಲ ಸ್ಥಾನದಲ್ಲಿದೆ. ಆಗ ಪಿ.ಬಿ.ಶ್ರೀನಿವಾಸ್ ಅವರು, ಕ್ಲಾಸಿಕಲ್ ಸಂಗೀತವನ್ನು ಕಾಪಾಡಬೇಕು ಎನ್ನುತೀರಿ, ಯಾರೋ ಹಳ್ಳಿಯಿಂದ ಮಾಡಿ ಕಳುಹಿಸಿದ್ದಾರೆ. ಅದಕ್ಕೆ ಗೌರವ ಕೊಡಿ ಎಂದು ವಾದ ಮಾಡಿದರು.
ಅಲ್ಲಿ ಬಾಂಬೆ ಸಿನಿಮಾಗೆ ವೋಟ್ ಜಾಸ್ತಿ ಬೀಳುತ್ತಿತ್ತು. ಕೊನೆಗೆ ಹೃಷಿಕೇಶ್ ಮುಖರ್ಜಿ ಏನು ಇಷ್ಟೊಂದು ಒತ್ತಾಯ ಮಾಡುತ್ತೀರಿ, ಯಾರು ಸಂಗೀತ ನಿರ್ದೇಶಕ, ಯಾರು ಹಾಡಿದ್ದು ಎಂದು ಕೇಳಿದರು. ಆಗ ಹಂಸಲೇಖ ಎಂದಾಗ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಿದರು. ಕಡೆಗೂ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಾಗ ಎಸ್‍ಪಿಬಿ ಖುಷಿ ಪಟ್ಟರು. ಅವರ ಕನಸು ನನಸಾಯಿತು ಎಂದು ಎಸ್‍ಪಿಬಿ ಜೊತೆಗಿನ ಹಳೆಯ ನೆನಪುಗಳ ಮೆಲುಕು ಹಾಕಿದರು.
ಎಸ್‍ಪಿಬಿ ಅವರು ಯೂನಿವರ್ಸ್ ಗೆ ಒಬ್ಬರು. ಎಲ್ಲ ಗಾಯಕರಲ್ಲೂ ಪ್ರತಿಭೆ ಇರುತ್ತದೆ. ಆದರೆ ಇವರು ಸುಂದರ ಗಾಯಕರು. ಪ್ರತಿಭೆಯನ್ನು ದೇವರು ಕೊಟ್ಟಿದ್ದು, ಆದರೆ ಜಾಣತನವಾಗಿ ಬುದ್ಧಿ ಖರ್ಚು ಮಾಡಿ ಬದುಕಬೇಕಿದೆ. ಲೌಕಿಕ ಜ್ಞಾನದಿಂದ ನಾನು ಬದುಕಿದ್ದೀನಿ. ನಿಮ್ಮ ವಿನಯ, ವಿಧೇಯತೆಯಿಂದ ಬದುಕಿ ಅನ್ನುತ್ತಿದ್ದರು. ಎಚ್ಚರಿಕೆಯಿಂದ ಬದುಕಿದ್ದರು. ನನ್ನ ಸಿನಿಮಾ ಸಂಗಾತಿ ರವಿಚಂದ್ರನ್, ಸಂಗೀತದ ಸಂಗಾತಿ ಎಸ್‍ಪಿಬಿ ಎಂದು ಅವರ ಜೊತೆಗಿನ ನಂಟಿನ ಬಗ್ಗೆ ಮೆಲಕು ಹಾಕಿದರು.
– ಇಬ್ಬರು ಏಕವಚನದಲ್ಲಿ ಮಾತನಾಡುತ್ತಿದ್ರು
– ಕಪ್ಪು ಬಣ್ಣ ಹಾಕಿ ಕಂಬನಿ
ಬೆಂಗಳೂರು: ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಯಣ್ಯಂ ಇಂದು ಇಹಲೋಕ ತ್ಯಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಿರುತೆರೆ ನಟ ಅನಿರುದ್ಧ್ ಅತ್ಯಂತ ಕೆಟ್ಟ ದಿನವಿದು ಎಂದು ಹೇಳುವ ಮೂಲಕ ಕಪ್ಪು ಬಣ್ಣ ಹಾಕಿ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಕನ್ನಡದಲ್ಲಿ ಕೊನೆಯ ಬಾರಿ ಕೊರೊನಾ ಜಾಗೃತಿ ಗೀತೆಗೆ ದನಿಯಾಗಿದ್ರು ಎಸ್‍ಪಿಬಿ
ನಟ ಅನಿರುದ್ಧ್ ತಮ್ಮ ಫೇಸ್‍ಬುಕ್ ಪ್ರೊಫೈಲ್ ಫೋಟೋವನ್ನು ಡಿಲೀಟ್ ಮಾಡಿ ಕಪ್ಪು ಬಣ್ಣ ಹಾಕುವ ಮೂಲಕ ಎಸ್.ಪಿ.ಬಾಲಸುಬ್ರಹ್ಯಣ್ಯಂ ಅಗಲಿಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ತಮ್ಮ ಎಸ್‍ಪಿಬಿ ಅವರ ಮಧ್ಯೆ ಇದ್ದ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.
ಎಲ್ಲರಿಗೂ ನಮಸ್ಕಾರ ಎಸ್‍ಪಿಬಿ ಸರ್ ಇಂದು ನಮ್ಮನೆಲ್ಲಾ ಶಾರೀರಿಕವಾಗಿ ಬಿಟ್ಟು ಹೋಗಿದ್ದಾರೆ. ಇದರಿಂದ ತುಂಬಾ ಬೇಸರ, ದುಃಖ, ಸಂಕಟ ಆಗುತ್ತಿದೆ. ಬಾಲಸುಬ್ರಹ್ಮಣ್ಯಂ ಮತ್ತು ಡಾ.ವಿಷ್ಣುವರ್ಧನ್ ಅವರ ಸಂಬಂಧ ಯಾವ ರೀತಿ ಇತ್ತು ಎಂದು ನಿಮ್ಮೆಲ್ಲರಿಗೂ ಗೊತ್ತಿದೆ. ಅವರಿಬ್ಬರು ತುಂಬಾ ಒಳ್ಳೆಯ ಸ್ನೇಹಿತರು. ಪರಸ್ಪರ ಏಕವಚನದಲ್ಲಿ ಮಾತನಾಡುತ್ತಿದ್ದರು. ಅವರ ಬಾಂಧವ್ಯ ಎರಡು ದೇಹಗಳು ಒಂದೇ ಧ್ವನಿ ಆಗಿತ್ತು ಎಂದು ಹೇಳಿದರು.
ನನ್ನ ಕೆಲ ಸಿನಿಮಾಗಳಿಗೆ ಅವರು ಧ್ವನಿಯಾಗಿದ್ದುದ್ದು ನನ್ನ ಅದೃಷ್ಟ. ಅಪ್ಪ ಅವರು ಶಾರೀರಿಕವಾಗಿ ಬಿಟ್ಟು ಹೋದ ಮೇಲೂ ಸಹ ಎಸ್‍ಪಿಬಿ ಸರ್ ನಮ್ಮ ಕುಟುಂಬದವರ ಜೊತೆ ತುಂಬಾ ಪ್ರೀತಿಯಿಂದ ಗೌರವದಿಂದ ಇದ್ದರು. 2011ರಲ್ಲಿ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ವಿ. ಆ ಕಾರ್ಯಕ್ರಮದಲ್ಲಿ ಅಪ್ಪ ಅವರನ್ನು ನೆನಪಿಸಿಕೊಂಡು ಅನೇಕ ಹಾಡಗಳನ್ನು ಹಾಡಿದ್ದರು. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಅನಿರುದ್ಧ್ ನೋವಿನಿಂದ ಹೇಳಿದ್ದಾರೆ.
ಎಸ್‍ಪಿಬಿ ಸರ್ ಭೇಟಿ ಮಾಡಿದಾಗಲೆಲ್ಲಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅಂತಹ ಮಹಾನ್ ವ್ಯಕ್ತಿ, ಗಾಯಕರು ಸಿಗುವುದು ತುಂಬಾನೇ ವಿರಳ. ಎಷ್ಟು ಹಾಡು, ಎಷ್ಟು ಭಾಷೆಯಲ್ಲಿ ಹಾಡಿದ್ದಾರೆ. ಅತ್ಯಂತ ಉನ್ನತ ಮಟ್ಟಕ್ಕೆ ತಲುಪಿರುವ ಗಾಯಕರು. ಅಂತಹ ಗಾಯಕರನ್ನು ಮತ್ತೆ ನೋಡುತ್ತೇವೆ ಎಂದು ನಮಗನಿಸುತ್ತಿಲ್ಲ. ಇವತ್ತು ನಾವು ಅವರನ್ನು ಶಾರೀರಿಕವಾಗಿ ಕಳೆದುಕೊಂಡಿದ್ದೇವೆ. ಹೀಗಾಗಿ ನನಗೆ ಮಾತುಗಳೇ ಬರುತ್ತಿಲ್ಲ ಎಂದು ಭಾವುಕರಾದರು.
ಎಸ್.ಪಿ.ಬಾಲಸುಬ್ರಹ್ಯಣ್ಯಂ ಹಾಡುಗಳನ್ನು ಕೇಳುತ್ತಲೇ ಬೆಳೆದಿದ್ದೇನೆ. ಅವರ ಹಾಡುಗಳು ಮೂಲಕ ಯಾವಾಗಲೂ ಶಾಶ್ವತವಾಗಿ ಉಳಿದುಕೊಳ್ಳುತ್ತಾರೆ. ಎಸ್‍ಪಿಬಿ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರಿಗೆ ಮೋಕ್ಷ ಸಿಗಲಿ. ತಮ್ಮ ಹಾಡುಗಳ ಮೂಲಕ ಎಸ್‍ಪಿಬಿ ಯಾವಾಗಲೂ ಅಮರರಾಗಿರುತ್ತಾರೆ ಎಂದು ಅನಿರುದ್ಧ್ ಹೇಳಿದರು.
ನವದೆಹಲಿ: ಗಾನಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ದೇಶದ ಗಣ್ಯಾತಿ ಗಣ್ಯರು ಸಂತಾಪ ಸೂಚಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಹಾಗೂ ಗೃಹ ಸಚಿವ ಅಮಿತ್ ಶಾ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದು, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆಕಸ್ಮಿಕ ನಿಧನದಿಂದಾಗಿ ನಮ್ಮ ಸಾಂಸ್ಕೃತಿಕ ಲೋಕ ತುಂಬಾ ಬಡವಾಗಿದೆ. ಭಾರತದಾದ್ಯಂತ ಪ್ರತಿ ಮನೆಯಲ್ಲಿಯೂ ಅವರ ಹೆಸರು, ಸುಮಧುರ ಧ್ವನಿ ಹಾಗೂ ಸಂಗೀತ ದಶಕಗಳಿಂದ ಪ್ರೇಕ್ಷರನ್ನು ಮೋಡಿ ಮಾಡಿತ್ತು. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬ ಹಾಗೂ ಅಭಿಮಾನಿಗಳೊಂದಿಗೆ ನನ್ನ ಸಂದೇಶವಿದೆ. ಓಂ ಶಾಂತಿ ಎಂದು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.
With the unfortunate demise of Shri SP Balasubrahmanyam, our cultural world is a lot poorer. A household name across India, his melodious voice and music enthralled audiences for decades. In this hour of grief, my thoughts are with his family and admirers. Om Shanti.
ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಸಹ ಟ್ವೀಟ್ ಮಾಡಿದ್ದು, ಸಂಗೀತ ದಂತಕಥೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಅತ್ಯಂತ ಸುಮಧುರ ಧ್ವನಿಯನ್ನು ಕಳೆದುಕೊಂಡಿದ್ದೇವೆ. ಸಹಸ್ರ ಅಭಿಮಾನಿಗಳು ಅವರನ್ನು ‘ಹಾಡುವ ಚಂದ್ರ’ ಎಂದೇ ಕರೆಯುತ್ತಿದ್ದರು. ಪದ್ಮ ಭೂಷಣ ಸೇರಿ ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಅವರ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.
In the passing of music legend SP Balasubrahmanyam Indian music has lost one of its most melodious voices. Called ‘Paadum Nila’ or ‘Singing Moon’ by his countless fans, he was honoured with Padma Bhushan and many National Awards. Condolences to his family, friends and admirers.
ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, ಲೆಜೆಂಡರಿ ಸಂಗೀತಗಾರ ಹಾಗೂ ಹಿನ್ನೆಲೆ ಗಾಯಕ ಪದ್ಮ ಭೂಷಣ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸಾವು ತುಂಬಾ ನೋವುಂಟು ಮಾಡಿದೆ. ಸುಮಧುರ ಧ್ವನಿ, ಸಾಟಿಯಿಲ್ಲದ ಸಂಗೀತ ಸಂಯೋಜನೆಗಳ ಮೂಲಕ ಅವರು ಶಾಶ್ವತವಾಗಿ ನಮ್ಮೊಂದಿಗೆ ಇರುತ್ತಾರೆ. ಅವರ ಕುಟುಂಬ ಹಾಗೂ ಅಭಿಮಾನಿಗಳೊಂದಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ. ಹೀಗೆ ಹಲವು ಗಣ್ಯರು ಎಸ್‍ಪಿಬಿ ಸಾವಿನ ಕುರಿತು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಅವರ ಸಂಗೀತ, ಅವರೊಟ್ಟಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದಾರೆ.
Deeply saddened by the passing away of legendary musician and playback singer Padma Bhushan, S. P. Balasubrahmanyam ji. He will forever remain in our memories through his melodious voice & unparalleled music compositions. My condolences are with his family & followers. Om Shanti
ಜಯಂತ್ ಕಾಯ್ಕಿಣಿಯವರು ಕೇವಲ ಸಾಹಿತ್ಯ, ಸಿನಿಮಾ ಗೀತೆ ರಚಿಸುವುದು ಮಾತ್ರವಲ್ಲ, ಸಮಾಜದ ಆಗುಹೋಗುಗಳ ಕುರಿತು ಸಹ ಆಗಾಗ ಪ್ರತಿಕ್ರಿಯಿಸುತ್ತಿರುತ್ತಾರೆ. ಹಲವು ಸಂದರ್ಭಗಳಲ್ಲಿ ವಿವಿಧ ಸಲಹೆಗಳನ್ನು ಸಹ ನೀಡುತ್ತಾರೆ. ಹಲವು ಬಾರಿ ಅವರ ಗೀತೆಗಳ ಮೂಲಕವೇ ಜನರಲ್ಲಿ ಅರಿವು ಮೂಡಿಸುತ್ತಾರೆ. ಅದರಂತೆ ಕೊರೊನಾ ಬಗ್ಗೆ ಜಾಗೃತಿ ಗೀತೆಯನ್ನು ರಚಿಸಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸಿದ್ದರು. ಹೀಗಾಗಿ ಈ ಹಾಡಿಗೆ ಮಹತ್ವ ಇನ್ನೂ ಹೆಚ್ಚಾಗಿತ್ತು.
ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಹಲವರು ಈ ಕುರಿತು ಕಮೆಂಟ್ ಮಾಡಿದ್ದು, ತುಂಬಾ ಚೆನ್ನಾಗಿ ಹಾಡಿದ್ದೀರಿ ಸರ್, ಜಯಂತ್ ಕಾಯ್ಕಿಣಿಯವರು ಅರ್ಥಗರ್ಭಿತವಾಗಿ ಸಾಹಿತ್ಯ ಬರೆದಿದ್ದಾರೆ. ನೀವೂ ಅದಕ್ಕೆ ನ್ಯಾಯ ಒದಗಿಸಿದ್ದೀರಿ. ಕೇಳಲು ತುಂಬಾ ಚೆನ್ನಾಗಿದೆ ಎಂದು ಕಮೆಂಟ್ ಮಾಡಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಆಗಸ್ಟ್ 5ರಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್‍ಪಿಬಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಅವರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಎಸ್‍ಪಿಬಿ ಅವರ ಮರಣದ ಬಳಿಕ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ 4ರಂದು ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು ಎಂದು ತಿಳಿಸಿದೆ.
ಖ್ಯಾತ ಗಾಯಕ ಎಸ್‍ಪಿ ಬಾಲಸುಬ್ರಮಣ್ಯಂ ಅವರನ್ನು ಗಾನ ಗಂಧರ್ವ, ಗಾನ ಗಾರುಡಿಗ ಇನ್ನೂ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಖ್ಯಾತ ಗಾಯಕಿ ಎಸ್.ಜಾನಕಿ ಅಲಿಯಾಸ್ ಎಲ್ಲರ ಪ್ರೀತಿಯ ಜಾನಕಮ್ಮ ಮೊಟ್ಟ ಮೊದಲ ಬಾರಿಗೆ ಅಷ್ಟು ಉದ್ದದ ಹೆಸರನ್ನು ಬಾಲು ಎಂದು ಮಾಡಿದ್ದರು. ಪ್ಲೇ ಬ್ಯಾಕ್ ಸಿಂಗರ್ ಆಗಿ ಮೊದಲ ಹೆಜ್ಜೆಯಿಡಲೂ ಜಾನಕಮ್ಮ ಕಾರಣ. ಅವರಿಂದಲೇ ಇಂದು ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಬಾಲು ಅನೇಕ ಸಾರಿ ಹೇಳಿಕೊಂಡಿದ್ದರು. ಇದನ್ನೂ ಓದಿ: ಸಂಗೀತವನ್ನೇ ಉಸಿರಾಗಿಸಿದ್ದ ಎಸ್‍ಪಿಬಿಗೆ ಆಸ್ಪತ್ರೆಯಲ್ಲಿ ನಡೆದಿತ್ತು ಸಂಗೀತ ಥೆರಪಿ
ಅಪ್ಪನ ಮಾತಿನಂತೆ ಬಾಲು ಸಂಗೀತರಾಗನಾಗಬೇಕು, ಸಿನಿಮಾಕ್ಕಾಗಿ ಹಾಡಬೇಕು, ಆ ಮೂಲಕ ಅಪ್ಪ ಅಮ್ಮನಿಗೆ ಸಹಾಯ ಮಾಡಬೇಕು. ಜೊತೆಗೆ ನನ್ನ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹಠ ಹಿಡಿದಿದ್ದರು. ಅದು ಅಷ್ಟು ಸುಲಭ ಆಗಿರಲಿಲ್ಲ ಅನ್ನೋದು ಕೆಲವೇ ತಿಂಗಳಲ್ಲಿ ಗೊತ್ತಾಯಿತು. ಆದರೂ ಹಿಡಿದ ಹಠವನ್ನು ಬಿಡಲಿಲ್ಲ. ಕಾಲೇಜುಗಳಲ್ಲಿ ಹಲವಾರು ಸಿಂಗಿಂಗ್ ಕಾಂಪಿಟೇಶನ್‍ಗಳಲ್ಲಿ ಹಾಡಿದರು. ಅನೇಕ ಬಹುಮಾನಗಳನ್ನು ಪಡೆದರು. ಆಗ ಒಂದು ದಿನ ಜಾನಕಮ್ಮ ಅದೇ ಒಂದು ಸ್ಪರ್ಧೆಗೆ ಬಂದಿದ್ದರು. ಈ ವೇಳೆ ಬಾಲು ಅವರೊಳಗಿದ್ದ ಪ್ರತಿಭೆಯನ್ನು ಗುರುತು ಹಿಡಿದು, ಬೆನ್ನು ತಟ್ಟಿದ್ದರು.
ಕಾಲೇಜುಗಳಲ್ಲಿ ಹಾಡುತ್ತಿದ್ದ ಬಾಲು ಅವರಿಗೆ ಮೊಟ್ಟ ಮೊದಲು ಪ್ಲೇ ಬ್ಯಾಕ್ ಸಿಂಗರ್ ಆಗಿ ಎಂದು ಹೇಳಿದ್ದೇ ಜಾನಕಮ್ಮ. ಅಲ್ಲಿವರೆಗೆ ಅದರ ಬಗ್ಗೆ ಕನಸನ್ನೂ ಬಾಲು ಕಂಡಿರಲಿಲ್ಲ. ಎಲ್ಲಿಯ ಸಿನಿಮಾ ಎಲ್ಲಿಯ ನಾನು? ನಂಗ್ಯಾರು ಅವಕಾಶ ಕೊಡುತ್ತಾರೆ? ಯಾರನ್ನು ಹೋಗಿ ಕೇಳಬೇಕು? ಹೀಗೆ ಪ್ರಶ್ನೆಗಳನ್ನು ಇಟ್ಟುಕೊಂಡು ಸುಮ್ಮನೆ ಕುಳಿತಿದ್ದರು. ಆಗ ಜಾನಕಮ್ಮನವರೇ ಶಿಫಾರಸ್ಸು ಮಾಡಿದರು. ಹಲವಾರು ಪರಿಚಿತ ನಿರ್ದೇಶಕರ ಬಳಿ ಬಾಲು ಅವರನ್ನು ಕಳಿಸಿದರು.
ಆಗ ಎಲ್ಲಾ ನಿರ್ದೇಶಕರು ಹೇಳಿದ್ದು ಒಂದೇ ಮಾತು. ನಿನ್ನ ವಯಸ್ಸು ಚಿಕ್ಕದು, ಓದು ಮುಗಿಸಿಕೊಂಡು ಬಾ. ಆಮೇಲೆ ಅವಕಾಶ ಕೊಡುತ್ತೇವೆ ಎಂದಿದ್ದು. ಆಗ ಬಾಲು ವಯಸ್ಸು ಕೇವಲ ಹದಿನೇಳು ವರ್ಷ ಅಷ್ಟೇ. ಕೊನೆಗೂ ಹದಿನೇಳು ವರ್ಷ ಮುಗಿಯಿತು. ಆದರೆ ಓದು ಅರ್ಧಂಬರ್ಧ ಆಯಿತು. ಕೊನೆಗೆ ಅಪ್ಪನ ಮಾತಿನಂತೆ ಸಂಗೀತದಲ್ಲೇ ಸಾಧನೆ ಮುಂದುವರಿಸಲು ನಿರ್ಧರಿಸಿದರು. 1966 ಆಗಸ್ಟ್ ತಿಂಗಳಲ್ಲಿ ಮೊಟ್ಟ ಮೊದಲ ಬಾರಿಗೆ ಅವರಿಗೆ ಹಿನ್ನೆಲೆ ಗಾಯಕನಾಗಿ ಹಾಡಲು ಅವಕಾಶ ದೊರೆಯಿತು. ಅಂದಿನಿಂದ ಅವರು ಹಿಂದೆ ತಿರುಗಿ ನೋಡಲಿಲ್ಲ. ಏಳು ಬೀಳುಗಳ ಜೊತೆಗೆ ಒಂದೊಂದೇ ಹಾಡಿನಿಂದ ಬೆಳೆಯುತ್ತಾ ಹೋದರು. ಕೊನೆಗೆ ಜಾನಕಮ್ಮನವರ ಜೊತೆಯೇ ನೂರಾರು ಹಾಡುಗಳನ್ನು ಹಾಡಿದರು. ಅವೆಲ್ಲಾ ಸೂಪರ್ ಹಿಟ್ ಆದವು.
ಒಂದು ದಶಕಗಳ ಕಾಲ ಎದೆತುಂಬಿ ಹಾಡುವೆನು ಕಾರ್ಯಕ್ರಮವನ್ನು ನಡೆಸಿಕೊಂಡವುದರ ಜೊತೆಗೆ ಬೇರೆ ಭಾಷೆಗಳಲ್ಲಿ ಕೂಡ ಸಂಗೀತದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ ತಾವೇ ತೀರ್ಪುಗಾರರಾಗಿ ಹತ್ತು ಹಲವು ಸಂಗೀತದ ಶೋಗಳಲ್ಲಿ ಕುಳಿತಿದ್ದರು. ಈ ವೇಳೆ ಪುಟಾಣಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸಂಗೀತದ ಸರಿ-ತಪ್ಪುಗಳನ್ನು ತಿದ್ದಿದ್ದಾರೆ. ಈ ಮೂಲಕ ಸಂಗೀತದ ಎಸ್.ಪಿ.ಬಾಲಸುಬ್ರಹ್ಮಣ್ಯಂ ರಾಯಭಾರಿಯಾಗಿ ಮೆರೆದಿದ್ದಾರೆ.ಇದನ್ನೂ ಓದಿ:ನನ್ನ ಅಪ್ಪನನ್ನು ಬಿಟ್ಟು ಬಿಡಿ – ಐದರ ಬಾಲಕನ ಕಣ್ಣೀರ ಅಭಿನಯಕ್ಕೆ ಚಪ್ಪಾಳೆ ಮೇಲೆ ಚಪ್ಪಾಳೆ
ಆಂಧ್ರದಲ್ಲಿ ಹುಟ್ಟಿ ಬೆಳೆದರೂ, ನಾನು ಹಿನ್ನೆಲೆ ಗಾಯಕನಾಗಿ ಹಾಡಿನ ಎರಡನೇ ಹಾಡೇ ಕನ್ನಡದಲ್ಲಿ. ಅಲ್ಲಿಂದ ಪ್ರಾರಂಭವಾದ ಈ ಪಯಣ ಇಲ್ಲಿಯವರೆಗೂ ಬಂದಿದೆ. ಕನ್ನಡಿಗರು ನೀಡಿದ ಪ್ರೀತಿ, ವಾತ್ಸಲ್ಯ ನನಗೆ ಬೇರೆ ಯಾರಿಂದಲೂ ಸಿಕ್ಕಿಲ್ಲ. ಮುಂದಿನ ಜನ್ಮದಲ್ಲಿ ನಾನು ಕನ್ನಡ ನಾಡಿನಲ್ಲಿ ಹುಟ್ಟಲು ಇಷ್ಟಪಡುತ್ತೇನೆ ಎಂದು ಎಸ್.ಪಿ.ಬಿ ಸಾಕಷ್ಟು ಬಾರಿ ಹೇಳಿದ್ದರು.
ಬಾಲಸುಬ್ರಹ್ಮಣ್ಯಂ ಅವರು 2018ರಲ್ಲಿ ತೆರೆಕಂಡ ‘ದೇವದಾಸ್’ಚಿತ್ರದಲ್ಲಿ ನಟಿಸಿದ್ದರು. 1969ರಿಂದ ಇಲ್ಲಿಯವರೆಗೆ ಹಲವು ಭಕ್ತಿ ಪ್ರಧಾನ ಸಾಮಾಜಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಒಂದೇ ದಿನ 17 ಗೀತೆಗಳಿಗೆ ಧ್ವನಿ ನೀಡಿದ್ದರು. ಕನ್ನಡ ಮಾತ್ರವಲ್ಲದೇ ಒಂದೇ ದಿನದಲ್ಲಿ ತಮಿಳು ಹಾಗೂ ತೆಲುಗಿನ 19 ಗೀತೆಗಳನ್ನು ರೆಕಾರ್ಡ್ ಮಾಡಿದ್ದರು. ಎಸ್.ಪಿ.ಬಿ ನಿರ್ವಹಣೆಯಲ್ಲಿ ಮೂಡಿಬರುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ಇಂದಿಗೂ ಜನ ಮರೆತಿಲ್ಲ.
ಗಾಯನ ಮಾತ್ರವಲ್ಲದೇ ಅನೇಕ ನಟರಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಧ್ವನಿ ನೀಡಿದ್ದಾರೆ. ಎಲ್ಲಾ ಭಾಷೆಯಲ್ಲೂ ದೊಡ್ಡ ದೊಡ್ಡ ನಟರಿಗೆ ವಾಸ್ ಕೊಟ್ಟಿದ್ದಾರೆ. ಕಮಲ್ ಹಾಸನ್, ರಜಿನಿಕಾಂತ್, ವಿಷ್ಣುವರ್ಧನ್, ಸಲ್ಮಾನ್ ಖಾನ್, ಕೆ.ಭಾರ್ಗವ್ ರಾಜ್, ಮೊಹನ್, ಅನಿಲ್ ಕಪೂರ್, ಗಿರೀಶ್ ಕಾರ್ನಡ್, ಜಮಿನಿ ಗಣೇಶನ್, ಅರ್ಜುನ್ ಸರ್ಜಾ, ನಾಗೇಶ್, ಕಾರ್ತಿಕ್, ರಾಘುವೀರನ್‍ಗೆ ಬೇರೆ ಬೇರೆ ಭಾಷೆಗಳಿಗೆ ವಾಯ್ಸ್ ಕೊಟ್ಟಿದ್ದಾರೆ.
ದಕ್ಷಿಣ ಭಾರತದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಟರಷ್ಟೆ ಬೇಡಿಕೆ ಹೊಂದಿದ್ದರು. ಬಾಲ್ಯದಲ್ಲಿ ಸಂಗೀತ ಕಲಿಯದಿದ್ದರೂ ತಂದೆಯ ಪ್ರೇರಣೆಯಿಂದ ಇಂದು ಗಾನ ಗಂಧರ್ವರಾಗಿದ್ದರು. ತಮ್ಮ ಸುಮಧುರ ಹಾಡುಗಳಿಂದಲೇ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿಯಲ್ಲಿ ಬಹುಬೇಡಿಕೆಯ ಗಾಯಕರಾಗಿದ್ದಾರೆ. ಇವರು ಸುಮಾರು 50,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇದನ್ನೂ ಓದಿ: ಡಾ.ರಾಜ್‍ಕುಮಾರ್ ಅಂದರೆ ಬಾಲುಗೆ ಜೀವಜ್ಜೀವ ಪ್ರೇಮ
ಬಾಲ್ಯ-ವಿದ್ಯಾಭ್ಯಾಸ:
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಮೂಲ ಹೆಸರು ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ. ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕೊನೇಟಮ್ಮ ಪೇಟಾದಲ್ಲಿ 1946ರ ಜೂನ್ 4ರಂದು ಜನಿಸಿದ್ದರು. ಇವರ ತಂದೆ ಎಸ್.ಪಿ.ಸಾಂಬ ಮೂರ್ತಿ ಹರಿಕಥೆ ಕಲಾವಿದರಾಗಿದ್ದು, ತಾಯಿ ಶಾಕುಂತಲಮ್ಮ. ಇವರ ತಾಯಿ 2019ರಲ್ಲಿ ತೀರಿಕೊಂಡಿದ್ದರು. ಇವರಿಗೆ ಇಬ್ಬರು ಸಹೋದರರು, ಎಸ್.ಪಿ.ಶೈಲಜಾ ಸೇರಿದಂತೆ ಐದು ಸಹೋದರಿಯರಿದ್ದರು.
ಎಸ್‍ಪಿಬಿ ಚೆನ್ನೈನ ಜೆ.ಎನ್ ಯೂಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. ಕಾಲೇಜ್‍ನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಹಾಡುಗಳು ಸ್ಪರ್ಧೆಗಳಲ್ಲಿ ಭಾಗವಹಿ, ಮೊದಲ ಪ್ರಶಸ್ತಿ ಗೆದಿದ್ದರು. ತೆಲುಗು ಸಾಂಸ್ಕೃತಿಕ ಸಂಗೀತ ಸ್ಪರ್ಧೆ 1964ರಲ್ಲಿ ಮೊದಲ ಪ್ರಶಸ್ತಿಯನ್ನು ಗೆದ್ದಿದ್ದರು. ಹರಿಕಥೆ ಹೇಳುತ್ತಿದ್ದ ತಂದೆ ಅವರೇ ಬಾಲಸುಬ್ರಹ್ಮಣ್ಯಂ ಅವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೋನಿಯಂ, ಕೊಳಲುಗಳನ್ನು ತನ್ನಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತವೇ ಆಗಿದ್ದರು.
ಪ್ರಶಸ್ತಿ ಗೌರವಗಳು-ಪುರಸ್ಕಾರಗಳು
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಸಂದಿದೆ. ಅಲ್ಲದೇ 25 ಭಾರಿ ಆಂಧ್ರ ಪ್ರದೇಶ ಸರ್ಕಾರದಿಂದ ನಂದಿ ಪ್ರಶಸ್ತಿ ನೀಡಲಾಗಿದೆ. ನಾಲ್ಕು ಭಾಷೆಗಳಾಗಿ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ಗಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಜೊತೆಗೆ ಹಲವು ವಿಶ್ವ ವಿದ್ಯಾನಿಲಯಗಳಿಂದ ಡಾಕ್ಟರೇಟ್ ಕೂಡ ಪಡೆದುಕೊಂಡಿದ್ದಾರೆ.