Tag: S. Janaki

  • ದಾಖಲೆ ಬರೆದ ಗಾಯಕಿ ಮಾನಸ ಹೊಳ್ಳ

    ದಾಖಲೆ ಬರೆದ ಗಾಯಕಿ ಮಾನಸ ಹೊಳ್ಳ

    ಗಾಯಕಿ, ಸಂಗೀತ ಸಂಯೋಜಕಿ ಮಾನಸ ಹೊಳ್ಳ (Manasa Holla) ಅವರು ಸತತ 12 ಗಂಟೆಗಳ ಕಾಲ ಒಂದೇ ವೇದಿಕೆಯಲ್ಲಿ ಲೆಜೆಂಡರಿ ಎಸ್. ಜಾನಕಿ (S Janaki) ಅವರ ಹಾಡುಗಳನ್ನು ಹಾಡುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಕೋಣನ ಕುಂಟೆಯ ಪ್ರೆಸ್ಟೀಜ್ ಖೋಡೆ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ನಲ್ಲಿ ನಡೆದ ‘ಮಾನಸಗಾನ ಜಾನಕಿಧ್ಯಾನ’ ಸಂಗೀತ ಕಾರ್ಯಕ್ರಮವನ್ನು ವಿನಯ್ ಗುರೂಜಿ, ಹೇಮಾ ಪ್ರಸಾದ್, ಸ್ಟೀಫನ್ ಪ್ರಯಾಗ್, ವಕೀಲ ನಾರಾಯಣ ಸ್ವಾಮಿ ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ತಬಲಾವಾದಕ ವೇಣುಗೋಪಾಲ ರಾಜ್ ಅವರ ನೇತೃತ್ವದ 25 ಸಂಗೀತಗಾರರ ಜತೆ, ಎಸ್. ಜಾನಕಿ ಅವರು ಹಾಡಿದ 87 ಜನಪ್ರಿಯ ಗೀತೆಗಳನ್ನು ದಣಿವಿಲ್ಲದೆ ಹಾಡುವ ಮೂಲಕ ಲೈವ್ ಪರ್ಫಾರ್ಮನ್ಸ್ ನೀಡಿ ನೆರೆದಿದ್ದ ಪ್ರೇಕ್ಷಕರನ್ನು ಮತ್ತು ಗಣ್ಯವ್ಯಕ್ತಿಗಳನ್ನು ಬೆರಗುಗೊಳಿಸಿದರು. ವಿ.ನಾಗೇಂದ್ರ ಪ್ರಸಾದ್, ವಿ.ಮನೋಹರ್, ಚಂದ್ರಿಕಾ ಗುರುರಾಜ್ ರಂಥಗಣ್ಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.

    ಹಲವು ದಶಕಗಳಕಾಲ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇವರಿಗೆ ಇನ್ನೂ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಮತ್ತು ತವಕ. ಈ ಹಾದಿಯಲ್ಲಿ ಮೂಡಿಬಂದ ಕಾರ್ಯಕ್ರಮವೇ ಮಾನಸ ಗಾನ ಜಾನಕಿ ಧ್ಯಾನ. ಮೊದಲಿನಿಂದಲೂ ಸಂಗಿತ ಆರಾಧಕಿಯಾದ ಇವರಿಗೆ ಹಾಡುವುದೆಂದರೆ ಪಂಚಪ್ರಾಣ. ಅದೇ ಕಾರಣದಿಂದ ಸತತವಾಗಿ 12 ಗಂಟೆಗಳ ಕಾಲ ದಣಿವಿಲ್ಲದೆ ಹಾಡಿದ್ದಾರೆ. ಈ ಮೂಲಕ ಸಂಗೀತ ಕ್ಷೇತ್ರದಲ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ. ಬೆಳಿಗ್ಗೆ 9:30ಕ್ಕೆ ಪ್ರಾರಂಭವಾದ ಈ ಕಾರ್ಯಕ್ರಮ 3 ಹಂತಗಳಲ್ಲಿ ರಾತ್ರಿ 10:30ರವರೆಗೂ ನಡೆಯಿತು. 3 ಸಾವಿರ ಜನರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾನಸ ಹೊಳ್ಳ ಅವರ ಜತೆ ಗಾಯಕರಾದ ರಾಜೇಶ್ ಕೃಷ್ಣನ್, ಹೇಮಂತ್, ಅಜಯ್ ವಾರಿಯರ್, ಶ್ರೀನಿವಾಸ್, ರಮೋ, ಮೋಹನ್ ಕೃಷ್ಣ, ಉದಯ ಅಂಕೋಲ, ಚಿನ್ಮಯ್ ಅತ್ರೇಯ, ವಿಹಾನ್ ಆರ್ಯ, ಸಂತೋಷ ದೇವ್, ದಾಮೋದರ ನಾಯಕ್, ಕುಮಾರ ಗಂಗೋತ್ರಿ, ಕುಮಾರನ್ ಆರ್ಯ, ವಿಶಾಖ ನಾಗಲಾಪುರ, ರಾಮಚಂದ್ರು, ರವಿ ಸಂತು ಯುಗಳ ಗೀತೆಗಳನ್ನು ಹಾಡಿದರು.

    ವೇದಿಕೆಯಲ್ಲಿ ಮುಂಬೈನಿಂದ ಬಂದ ಡ್ರಮ್ ವಾದಕ ಶಿವಮಣಿ ಅವರು 20 ನಿಮಿಷಗಳ ಕಾಲ ಡ್ರಮ್ ನುಡಿಸಿದರು. ಜಾನಕಿ ಅವರು ಹಾಡಿದ ಹೇಮಾವತಿ ಚಿತ್ರದ ಶಿವ ಶಿವ ಎನ್ನದ ಹಾಡನ್ನು ಸರಾಗವಾಗಿ ಹಾಡುವ ಮೂಲಕ ಪ್ರೇಕ್ಷಕರನ್ನು ಮತ್ತು ಗಣ್ಯರನ್ನು ಮಂತ್ರ ಮುಗ್ಧರನ್ನಾಗಿಸಿದರು .ಈ ಹಾಡಿಗೆ ಪ್ರತಿಯೊಬ್ಬರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಸಂತೋಷ ವ್ಯಕ್ತಪಡಿಸಿದರು. ಮಾನಸ ಹೊಳ್ಳ ಅವರು ಕೋಗಿಲೆ ಕಂಠದ ಗಾಯಕಿಯಾಗಿದ್ದು 500ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅದರ ಜೊತೆಗೆ 10 ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.

  • ಆಸ್ಪತ್ರೆಯಿಂದ ಗಾನಕೋಗಿಲೆ ಡಿಸ್ಚಾರ್ಜ್

    ಆಸ್ಪತ್ರೆಯಿಂದ ಗಾನಕೋಗಿಲೆ ಡಿಸ್ಚಾರ್ಜ್

    ಮೈಸೂರು: ಸೊಂಟ ಮುರಿತಕ್ಕೊಳಗಾಗಿ ಮೈಸೂರಿನ ಕೊಲಂಬಿಯಾ ಏಷ್ಯ ಆಸ್ಪತ್ರೆಗೆ ದಾಖಲಾಗಿದ್ದ ಗಾನ ಕೋಗಿಲೆ ಎಸ್. ಜಾನಕಿ ಅವರು ಇಂದು ಡಿಸ್ಚಾರ್ಜ್ ಆಗಿದ್ದಾರೆ.

    ಡಿಸ್ಚಾರ್ಜ್ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗಾನ ಕೋಗಿಲೆ, ಕೆಲವು ದಿನಗಳ ಹಿಂದೆ ಮೈಸೂರಿನ ಸ್ನೇಹಿತರ ಮನೆಗೆ ಬಂದಿದ್ದೆ. ಮನೆಯಲ್ಲಿ ಹೊಸ್ತಿಲು ದಾಟುವಾಗ ಎಡವಿ ಬಿದ್ದಿದರಿಂದ ಸೊಂಟದ ಭಾಗದಲ್ಲಿ ನೋವಾಗಿತ್ತು. ಕೂಡಲೇ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೊಂಟದ ಭಾಗದಲ್ಲಿ ವೈದ್ಯರು ಏನೋ ಬದಲಾವಣೆ ಮಾಡಿದ್ದಾರೆ. ಜಾಯಿಂಟ್ ರೀಪ್ಲೇಸ್ಮೆಂಟ್ ಮಾಡಲಾಗಿದೆ ಎಂದು ತಿಳಿಸಿದರು.

    ಕನ್ನಡ ನಾಡಿನ ಜನರು ನನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ಕನ್ನಡ ನಾಡಿನ ಮಕ್ಕಳ ಆಶೀರ್ವಾದದಿಂದ ಗುಣಮುಖಳಾಗುತ್ತೇನೆ. ವೈದ್ಯರು ವಿಶ್ರಾಂತಿ ಪಡೆಯಬೇಕೆಂದು ಸೂಚಿಸಿದ್ದಾರೆ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆದು ಗುಣಮುಖಳಾಗುತ್ತೇನೆ ಎಂದು ಆಭಿಮಾನಿಗಳಿಗೆ ಹೇಳಿದರು.

    ಈ ಬಳಿಕ ಮಾತನಾಡಿದ ಆಸ್ಪತ್ರೆಯ ವೈದ್ಯ ನಿತಿನ್, ಕಾಲು ಜಾರಿ ಬಿದ್ದಿದರಿಂದ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದರು. ಜಾಯಿಂಟ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮೂರು ವಾರಗಳ ಕಾಲ ಅವರು ವಿಶ್ರಾಂತಿ ಪಡೆಯಬೇಕು. ಈ ವಯಸ್ಸಿನಲ್ಲಿ ಸಹಜವಾಗಿ ಇಂತಹ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ಅಭಿಮಾನಿಗಳು ಗಾಬರಿ ಪಡುವಂತದ್ದು ಏನು ಇಲ್ಲ ಎಂದು ಸ್ಪಷ್ಟಪಡಿಸಿದರು.

    80 ವರ್ಷದ ಎಸ್. ಜಾನಕಿ ಅವರು ಸುಮಾರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ನಾಲ್ಕು ಬಾರಿ ತಮ್ಮ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಜಾನಕಿ ಅವರು ತನ್ನ ವೃತ್ತಿ ಜೀವನದ ಕೊನೆಯ ಹಾಡನ್ನು ಮೈಸೂರಿನಲ್ಲಿ ಹಾಡಿದ್ದರು.

  • ಗಾನಕೋಗಿಲೆ ಎಸ್.ಜಾನಕಿ ಆಸ್ಪತ್ರೆಗೆ ದಾಖಲು

    ಗಾನಕೋಗಿಲೆ ಎಸ್.ಜಾನಕಿ ಆಸ್ಪತ್ರೆಗೆ ದಾಖಲು

    ಮೈಸೂರು: ಗಾನಕೋಗಿಲೆ ಎಸ್.ಜಾನಕಿ ಅವರಿಗೆ ಸೊಂಟ ಮುರಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಎಸ್.ಜಾನಕಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ದಿನಗಳ ಹಿಂದೆಯೇ ಜಾನಕಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಜಾನಕಿ ಅವರು ಮೈಸೂರಿನಲ್ಲಿ ಸಂಬಂಧಿಕರ ಮನೆಗೆ ಬಂದಿದ್ದರು.

    ಈ ಸಂದರ್ಭದಲ್ಲಿ ಮನೆಯಲ್ಲಿ ಬಿದ್ದು ಸೊಂಟ ಮುರಿದುಕೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೊಂಟದ ಭಾಗದಲ್ಲಿ ಫ್ರಾಕ್ಚರ್ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ.

    ಎಸ್ ಜಾನಕಿ ಅವರಿಗೆ ಈಗ ಸುಮಾರು 80 ವರ್ಷ ವಯಸ್ಸಾಗಿದ್ದು, ಸುಮಾರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ನಾಲ್ಕು ಬಾರಿ ತಮ್ಮ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇವರು 1952ರಲ್ಲಿ ಅಂದಿನ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರಿಂದ ಆಯೋಜಿಸಲ್ಪಟ್ಟಿದ್ದ ಸಂಗೀತ ಸಂಜೆಯಲ್ಲಿ ಪಿ.ಬಿ. ಶ್ರೀನಿವಾಸ್ ಜೊತೆಗೆ ಹಾಡಿದ್ದರು. ಹೀಗಾಗಿ ಜಾನಕಿ ಅವರು ತಮ್ಮ ಸಂಗೀತ ಪಯಣವನ್ನು ಪ್ರಥಮ ಬಾರಿಗೆ ಮಹಾನಗರಿಯಲ್ಲಿಯೇ ಆರಂಭಿಸಿದ್ದರು. ಅವರ ಕೊನೆಯ ಗಾಯನ ಕೂಡ ಮೈಸೂರಿನಲ್ಲಿ ಹಾಡಿದ್ದರು.

  • ಗಾಯನಕ್ಕೆ ವಿದಾಯ ಹೇಳಿದ ಗಾನಕೋಗಿಲೆ ಎಸ್.ಜಾನಕಿ

    ಗಾಯನಕ್ಕೆ ವಿದಾಯ ಹೇಳಿದ ಗಾನಕೋಗಿಲೆ ಎಸ್.ಜಾನಕಿ

    ಮೈಸೂರು: ಸಂಗೀತದ ಗಾನ ಕೋಗಿಲೆ ಎಂಬ ಹೆಸರಿನಿಂದ ಕರೆಸಿಕೊಳ್ಳುವ ಹಿರಿಯ ಗಾಯಕಿ ಎಸ್. ಜಾನಕಿ ಅವರು ಇಂದು ನಗರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ಗಾಯನ ನಿಲ್ಲಿಸಿದ್ದಾರೆ.

    ಹೌದು, 80 ವರ್ಷದ ಎಸ್.ಜಾನಕಿ ತಮ್ಮ ಗಾಯನ ವೃತ್ತಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ. ಇಂದು ನಗರದಲ್ಲಿ `ಎಸ್.ಜಾನಕಿ ಮ್ಯೂಸಿಕಲ್ ನೈಟ್’ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಕೊನೆಯದಾಗಿ ಹಾಡಿದ್ದಾರೆ. ನಗರದ ಮಾನಸ ಗಂಗೋತ್ರಿ ಮೈದಾನದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ದೊರೆತಿದ್ದು, ಅನೇಕ ಸಿನಿ, ಸಂಗೀತ ಲೋಕದ ಗಣ್ಯರು ಆಗಮಿಸಿದ್ದಾರೆ.

    ರಾಜವಂಶಸ್ಥೆ ಪ್ರಮೋದಾ ದೇವಿ, ನಟ ರಾಜೇಶ್, ಹಿರಿಯರಾದ ನಟಿ ಜಯಂತಿ, ಭಾರತೀ ವಿಷ್ಣುವರ್ಧನ್, ಹೇಮಾ ಚೌಧರಿ ಸೇರಿದಂತೆ ಹಲವು ಗಣ್ಯರು ಸಂಗೀತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಉದ್ಘಾಟನೆಯ ನಂತರ ಮಾತು ಆರಂಭಿಸಿದ ಗಾಯಕಿ ಎಸ್.ಜಾನಕಿ ಅವರು, ಹಾಡು ನಿಲ್ಲಿಸಿದ್ದೇನೆ. ಮೈಸೂರಿನ ಈ ಕಾರ್ಯಕ್ರಮದ ಮೂಲಕ ನನ್ನ ವೃತ್ತಿ ಜೀವನದಿಂದ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದರು. ಕಡೆಯ ಕಾರ್ಯಕ್ರಮದಲ್ಲು ತಮ್ಮ ಶಿಸ್ತು ಪ್ರದರ್ಶಿಸಿದ ಎಸ್.ಜಾನಕಿ ಅವರು ಉದ್ಘಾಟನೆಯ ಮಾತುಗಳ ನಂತರ, ಅರೆ ಕ್ಷಣವನ್ನು ವ್ಯರ್ಥ ಮಾಡದೆ ಹಾಡು ಆರಂಭಿಸಿದರು.

    ಗಜಮುಖನನ್ನ ನೆನೆದು, ಪೂಜಿಸಲೇಂದೆ ಹಾಡಿಗೆ ಧ್ವನಿಯಾದ ಜಾನಕಮ್ಮನ ಸ್ವರಕ್ಕೆ ನೆರೆದಿದ್ದವರೇಲ್ಲ ಮೂಕ ವಿಸ್ಮಿತರಾದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಹಿರಿಯ ನಟಿಯರಾದ ಜಯಂತಿ ಹಾಗೂ ಭಾರತಿ, ಎಸ್. ಜಾನಕಿ ಕುರಿತು ಭಾವುಕರಾಗಿ ಮಾತನಾಡಿದ್ರು. ಹಿರಿಯ ನಟ ರಾಜೇಶ್ ಹಾಗೂ ಖ್ಯಾತ ಸಂಗೀತ ನಿರ್ದೇಶಕ ರಾಜನ್ ಸಹ ವೇದಿಕೆ ಹಂಚಿಕೊಂಡು ಜಾನಕಮ್ಮರನ್ನು ಹಾಡಿಹೊಗಳಿದರು.

    ಅಂತಿಮವಾಗಿ ಸತತ 3 ಗಂಟೆಗಳ ಕಾರ್ಯಕ್ರಮದ ಮೂಲಕ ಎಸ್.ಜಾನಕಿ ತಮ್ಮ ಗಾಯನ ನಿಲ್ಲಿಸಿದರು. ಬಹುತೇಕ ಕನ್ನಡ ಗೀತೆಗಳನ್ನ ಹಾಡಿ ನೆರೆದಿದ್ದವರನ್ನ ರಂಜಿಸಿದ ಜಾನಕಮ್ಮ. ತಮ್ಮ ಮುಗ್ದ ಕಂಠಸಿರಿಗೆ ವಿಶ್ರಾಂತಿ ನೀಡುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ಸುಮಧುರ ಧ್ವನಿಯಾಗಿ ಉಳಿದರು. ವೇದಿಕೆ ಏರಿದ್ದ ಅಭಿಮಾನಿಗಳು ಜಾನಕಮ್ಮರನ್ನ ಸನ್ಮಾನಿಸಿ ಗೌರವಿಸಿದರು. ಮೈಸೂರು ಪೇಟ ತೊಡಿಸಿ, ಹೂವಿನ ಹಾರಗಳೊಂದಿಗೆ, ಬಿಳ್ಕೋಡುಗೆ ನೀಡಿದ್ರು.

    ಎಸ್ ಜಾನಕಿ ಅವರಿಗೆ ಈಗ ಸುಮಾರು 80 ವರ್ಷ ವಯಸ್ಸಾಗಿದ್ದು, ಸುಮಾರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ನಾಲ್ಕು ಬಾರಿ ತಮ್ಮ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇವರು 1952ರಲ್ಲಿ ಅಂದಿನ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರಿಂದ ಆಯೋಜಿಸಲ್ಪಟ್ಟಿದ್ದ ಸಂಗೀತ ಸಂಜೆಯಲ್ಲಿ ಪಿ. ಬಿ. ಶ್ರೀನಿವಾಸ್ ಜೊತೆಗೆ ಹಾಡಿದ್ದರು. ಹೀಗಾಗಿ ಜಾನಕಿ ಅವರು ತಮ್ಮ ಸಂಗೀತ ಪಯಣವನ್ನು ಪ್ರಥಮ ಬಾರಿಗೆ ಮಹಾನಗರಿಯಲ್ಲಿಯೇ ಆರಂಭಿಸಿದ್ದರು. ಇದೀಗ ಅವರ ಕೊನೆಯ ಗಾಯನ ಕೂಡ ಮೈಸೂರಿನಲ್ಲಿ ಹಾಡಿದ್ದಾರೆ.

    https://www.youtube.com/watch?time_continue=1789&v=u7hM79uZF_U