Tag: Rytu Bharosa scheme

  • ಆಂಧ್ರ ರೈತರ ಖಾತೆಗೆ ಬೀಳಲಿದೆ ವಾರ್ಷಿಕ 12,500 ರೂ.

    ಆಂಧ್ರ ರೈತರ ಖಾತೆಗೆ ಬೀಳಲಿದೆ ವಾರ್ಷಿಕ 12,500 ರೂ.

    ಅಮರಾವತಿ: ರೈತ ಭರವಸೆ ಯೋಜನೆಯನ್ನು ಅಕ್ಟೋಬರ್ 15ರಿಂದ ಜಾರಿಗೆ ತರಲಾಗುತ್ತದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್‍ಮೋಹನ್ ರೆಡ್ಡಿ ಘೋಷಣೆ ಮಾಡಿದ್ದಾರೆ.

    ಜಗನ್‍ಮೋಹನ್ ರೆಡ್ಡಿ ಅವರು ಚುನಾವಣೆಯಲ್ಲಿ ನೀಡಲಾದ ಭರವಸೆಗಳನ್ನು ಒಂದೊಂದಾಗಿ ಈಡೇರಿಸಲು ಮುಂದಾಗುತ್ತಿದ್ದು, ಇಂದು ಕೃಷಿ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ.

    ರೈತ ಭರವಸೆ ಯೋಜನೆ ಆರಂಭಿಸಿ, ರೈತರ ಖಾತೆಗೆ 12,500 ರೂ. ಹಾಕುತ್ತೇನೆ ಎಂದು ಜಗನ್‍ಮೋಹನ್ ರೆಡ್ಡಿ ಚುನಾವಣೆ ಪ್ರಚಾರದ ವೇಳೆ ಭರವಸೆ ನೀಡಿದ್ದರು. ಚುನಾವಣೆಯಲ್ಲಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಅವರು ಈಗ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದ್ದಾರೆ.

    ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಫೆಬ್ರವರಿಯಲ್ಲಿ ‘ಅನ್ನದಾತ ಸುಖಿಭವ’ ಯೋಜನೆಯನ್ನು ಜಾರಿಗೆ ತಂದಿದ್ದರು. ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಯೋಜನೆ ಬಂದಿತ್ತು. ಅದನ್ನು ಜಗನ್‍ಮೋಹನ್ ರದ್ದುಗೊಳಿಸಿ, ರೈತ ಭರವಸೆ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದಾರೆ.

    ನಕಲಿ ಬೀಜಗಳನ್ನು ಮಾರಾಟದ ವಿರುದ್ಧವೂ ಜಗನ್‍ಮೋಹನ್ ಕಿಡಿಕಾರಿದ್ದಾರೆ. ಒಂದು ವೇಳೆ ನಕಲಿ ಬೀಜಗಳ ಮಾರಾಟ ಮಾಡಿದಲ್ಲಿ ಅಂತವರನ್ನು ಜೈಲಿಗೆ ಹಾಕಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.