Tag: RV Deshpande

  • ಮಾಧ್ಯಮಗಳು ಸರ್ಕಾರದ ಬಗ್ಗೆ ತಲೆ ಕೆಡಿಸ್ಕೋಬೇಡಿ: ಆರ್.ವಿ ದೇಶಪಾಂಡೆ

    ಮಾಧ್ಯಮಗಳು ಸರ್ಕಾರದ ಬಗ್ಗೆ ತಲೆ ಕೆಡಿಸ್ಕೋಬೇಡಿ: ಆರ್.ವಿ ದೇಶಪಾಂಡೆ

    -ಹೆಣ್ಮಕ್ಕಳ ಮೇಲೆ ಸ್ವಲ್ಪ ಕಾಳಜಿ ಮಾಡ್ರೀ

    ಉಡುಪಿ: ಮಾಧ್ಯಮಗಳು ಸರ್ಕಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಸರ್ಕಾರ ಐದು ವರ್ಷ ಸುಭದ್ರವಾಗಿದೆ ಎಂದು ಕಂದಾಯ ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಡೆಲ್ಲಿಗೆ ಹೋಗಿರುವುದರ ಬಗ್ಗೆ ಕೇಳಿದಾಗ, ಅವರು ಡೆಲ್ಲಿಗೆ ಹೋಗಬಾರದಾ.!? ರಾಹುಲ್ ಗಾಂಧಿಯವರನ್ನು ಭೇಟಿ ಮಾಡಬಾರದಾ ಎಂದು ವಾಪಾಸ್ ಮಾಧ್ಯಮಗಳನ್ನು ಪ್ರಶ್ನೆ ಮಾಡಿದ್ದಾರೆ.

    ಸಿದ್ದರಾಮಯ್ಯನವರು ರಾಹುಲ್ ಗಾಂಧಿಯನ್ನು ಭೇಟಿಯಾದರೆ ಆಶ್ಚರ್ಯ ಯಾಕೆ? ಯಾರ ವಿರುದ್ಧ ಯಾರು ದೂರು ಕೊಡುತ್ತಾರೆ? ಮಾಧ್ಯಮಗಳು ಏನೇನೋ ಮಾತನಾಡೋದಕ್ಕೆ ಹೋಗಬೇಡಿ. ನೀವು ಏಕೆ ತಲೆ ಕೆಡಿಸ್ಕೋತೀರಿ? ಎಂದು ಮಾಧ್ಯಮ ಮಂದಿಗೆ ಪ್ರಶ್ನೆ ಕೇಳಿದರು. ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಸರ್ಕಾರ ಸುಭದ್ರವಾಗಿದೆ. ಮಾಧ್ಯಮಗಳು ಸರ್ಕಾರಕ್ಕೆ ಸಹಕರಿಸಿ ನಮ್ಮ ತಪ್ಪಿದರೆ ಅದನ್ನು ಎತ್ತಿ ತೋರಿಸಿ ಎಂದು ಆರ್.ವಿ ಡಿ ಹೇಳಿದರು.

    ಜಯಮಾಲಾ ಬಗ್ಗೆ ಕಾಳಜಿ ಮಾಡ್ರೀ..!
    ಉಡುಪಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಅವರೇ ಗೈರಾಗಿದ್ದರು. ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿಯೇ ಪ್ರವಾಹ ನಿರ್ವಹಣಾ ಸಭೆ ನಡೆಯಿತು. ಕಂದಾಯ ಸಚಿವರೇ ಜಿಲ್ಲೆಗೆ ಬಂದರೂ ಉಡುಪಿ ಉಸ್ತುವಾರಿ ಸಚಿವರು ಮಾತ್ರ ಗೈರಾಗಿದ್ದರು. ಆದರೆ ಜಯಮಾಲಾ ಗೈರನ್ನು ಸಚಿವ ದೇಶಪಾಂಡೆ ಸಮರ್ಥಿಸಿಕೊಂಡರು. ಜಯಮಾಲಾ ಅವರು ಬೆಂಗಳೂರಿನಲ್ಲಿ 30 ಜಿಲ್ಲಾಧಿಕಾರಿಗಳ ಸಭೆ ಕರೆದಿದ್ದಾರೆ, ಹೀಗಾಗಿ ಗೈರಾಗಿದ್ದಾರೆ, ಹೆಣ್ಣು ಮಕ್ಕಳ ಮೇಲೆ ಸ್ವಲ್ಪ ಕಾಳಜಿ ಮಾಡ್ರೀ ಎಂದು ನಗುತ್ತಲೇ ನುಣುಚಿಕೊಂಡರು.

    ಡಿಕೆಶಿ ಕೆಪಿಸಿಸಿ ಸಾರಥಿ..!
    ಸಚಿವ ಡಿಕೆ ಶಿವಕುಮಾರ್ ಕಾಂಗ್ರೆಸ್‍ನ ಮುಂದಿನ ಸಾರಥಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿ ಯಾವಾಗ ಪಕ್ಷದ ಅಧ್ಯಕ್ಷರಾಗುತ್ತಾರೆ ನನಗೆ ಗೊತ್ತಿಲ್ಲ. ಅಧ್ಯಕ್ಷರ ನೇಮಕ ಪಕ್ಷಕ್ಕೆ ಬಿಟ್ಟದ್ದು ಎಂದರು. ಪಕ್ಷ ಮಾಡುವ ತೀರ್ಮಾನಕ್ಕೆ ನಾವು ಬದ್ಧರಿದ್ದೇವೆ ಎಂದು ಹೇಳಿದರು.

  • ವಿನಯ್ ಕುಲಕರ್ಣಿ ಸೋಲಿಗೆ ಗುಂಡೂರಾವ್, ದೇಶಪಾಂಡೆ ಕಾರಣ: ಬೆಂಬಲಿಗರ ಆರೋಪ

    ವಿನಯ್ ಕುಲಕರ್ಣಿ ಸೋಲಿಗೆ ಗುಂಡೂರಾವ್, ದೇಶಪಾಂಡೆ ಕಾರಣ: ಬೆಂಬಲಿಗರ ಆರೋಪ

    ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಸೋಲಿಗೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಹಿರಿಯ ಮುಖಂಡ ಆರ್.ವಿ ದೇಶಪಾಂಡೆ ಕಾರಣ ಎಂದು ಮಾಜಿ ಸಚಿವರ ಬೆಂಬಲಿಗರು ಆರೋಪಿಸಿದ್ದಾರೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರ ವಿರುದ್ಧ 2,05,072 ಮತಗಳ ಅಂತರದಲ್ಲಿ ಸೋತಿದ್ದರು. ಈ ಸೋಲಿಗೆ ದಿನೇಶ್ ಗುಂಡೂರಾವ್, ಆರ್ ವಿ ದೇಶಪಾಂಡೆ ಕಾರಣ ಎಂದು ವಿನಯ್ ಕುಲಕರ್ಣಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಈ ವಿಚಾರವಾಗಿ ವಿನಯ್ ಕುಲಕರ್ಣಿ ಸಪೋರ್ಟರ್ಸ್ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ, ವಿನಯ್ ಕುಲಕರ್ಣಿ ಸೋಲಿಗೆ ನೇರವಾಗಿ ದಿನೇಶ್ ಗುಂಡೂರಾವ್ ಹಾಗು ಆರ್ ವಿ ದೇಶಪಾಂಡೆ ಕಾರಣ ಏಕೆಂದರೆ ವಿನಯ್ ಕುಲಕರ್ಣಿಯವರ ಹೆಸರು ಬೇಗ ಹೈಕಮಾಂಡ್ ಕಳಿಸದೆ ತಮ್ಮ ಬ್ರಾಹ್ಮಣ ಜಾತಿಯ ವ್ಯಕ್ತಿ ಜೋಶಿ ಗೆಲ್ಲಿಸಲು ಸಹಾಯ ಮಾಡಿದ್ದಾರೆ. ಚುನಾವಣೆಯ ಕೊನೆಯ ಗಳಿಗೆಯಲ್ಲಿ ಟಿಕೆಟ್ ನೀಡಿದ್ದಲ್ಲದೆ ಮುಸ್ಲಿಂ ಧರ್ಮದವರ ಹೆಸರನ್ನು ಮಧ್ಯಕ್ಕೆ ತಂದು ಅವರ ಭಾವನೆಗಳಿಗೆ ದಕ್ಕೆ ತರುವಂತ ಕೆಲಸ ಮಾಡಿದರು. ಕಾಂಗ್ರೆಸ್ ನಾಯಕರು ಪ್ರಹ್ಲಾದ್ ಜೋಶಿ ಗೆಲುವುವಿಗಾಗಿ ಮಾಧ್ಯಮದವರ ಮುಂದೆ ಅವರನ್ನು ಹೊಗಳಿದ್ದರು ಎಂದು ಬರೆದುಕೊಂಡಿದ್ದಾರೆ.

    ಇಂತಹ ನಾಯಕರಿಂದ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ? ಮೊದಲು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿ ಲಿಂಗಾಯತರಿಗೆ ಈ ಸ್ಥಾನವನ್ನು ನೀಡಿ ಪಕ್ಷವನ್ನು ಉಳಿಸಿ ಎಂದು ಫೇಸ್‍ಬುಕ್ ಪೇಜ್‍ನಲ್ಲಿ ಮನವಿ ಮಾಡಿದ್ದಾರೆ.

  • ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಿಎಂ ಬದಲು?

    ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಿಎಂ ಬದಲು?

    ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರದಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಈ ಮಧ್ಯೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಿಎಂ ಬದಲಾಗುತ್ತಾರಾ ಅನ್ನೋ ಪ್ರಶ್ನೆಯೊಂದು ರಾಜ್ಯ ರಾಜಕಾರಣದಲ್ಲಿ ಮೂಡಿದೆ.

    ಹೌದು. ದೋಸ್ತಿ ಸರ್ಕಾರದಲ್ಲಿ ಸಿಎಂ ಬದಲಾವಣೆಯ ಅನಿವಾರ್ಯತೆ ಸೃಷ್ಟಿಯಾದರೆ ಸಿಎಂ ಸ್ಥಾನಕ್ಕೆ ಬಂದು ಹಿರಿಯ ಸಚಿವ ಆರ್.ವಿ.ದೇಶಪಾಂಡೆ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

    ಒಂದು ಕಾಲದಲ್ಲಿ ಜನತ ಪರಿವಾರದಲ್ಲಿದ್ದ ದೇಶಪಾಂಡೆ,  ಆ ಬಳಿಕ ಕಾಂಗ್ರೆಸ್‍ಗೆ ಬಂದರು. ಇವರು ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷದ ಕಾಮನ್ ಕ್ಯಾಂಡಿಡೇಟ್ ಆಗಿದ್ದಾರೆ. ಹೀಗಾಗಿ ಸಿಎಂ ಬದಲಾವಣೆಯ ಅನಿವಾರ್ಯತೆ ಎದುರಾದರೆ ದೇಶಪಾಂಡೆಯವರನ್ನ ಸಿಎಂ ಸ್ಥಾನದಲ್ಲಿ ಕೂರಿಸಲು ಎರಡೂ ಕಡೆಯಿಂದ ಒಂದು ಹಂತದ ಸಮ್ಮತಿ ವ್ಯಕ್ತವಾಗಿದೆ ಎನ್ನಲಾಗುತ್ತಿದೆ.

    ಯಾವ ಕಾರಣಕ್ಕೆ ಸಿಎಂ ರೇಸ್‍ನಲ್ಲಿದ್ದಾರೆ?
    ದೇಶಪಾಂಡೆಯವರು ಏನೇ ಸಮಸ್ಯೆ ಆದರೂ ಅವರೇ ಫೇಸ್ ಮಾಡುತ್ತಾರೆ. ಆ ಒಂದು ಸಾಮರ್ಥ್ಯ ಅವರಿಗೆ ಇರುವ ಕಾರಣಕ್ಕೆ ದೋಸ್ತಿ ನಾಯಕರಿಗೆ ದೇಶಪಾಂಡೆ ಅವರ ಮೇಲೆ ನಂಬಿಕೆಯಿದೆ. ಜೊತೆಗೆ ದೇಶದ ಬೇರೆ ಬೇರೆ ರಾಜಕೀಯ ನಾಯಕರ ಜೊತೆ ಆತ್ಮೀಯ ಒಡನಾಟ ಹೊಂದಿರುವ ಆರ್.ವಿ ದೇಶಪಾಂಡೆ, ಯಾವ ಸಂದರ್ಭವನ್ನು ಬೇಕಾದರೂ ಎದುರಿಸ ಬಲ್ಲವರಾಗದ್ದಾರೆ. ಅಲ್ಲದೆ ಎಲ್ಲವನ್ನೂ ಮ್ಯಾನೇಜ್ ಮಾಡುವ ಕೆಪಾಸಿಟಿ ಕೂಡ ಅವರಿಗಿದೆಯಂತೆ.

    ಬಿಜೆಪಿಯವರು ಆಪರೇಷನ್ ಕಮಲ ಆರಂಭಿಸಿದರೆ ಅದನ್ನ ತಡೆದು ಶಾಸಕರನ್ನ ಹಿಡಿದಿಡುವ ಸಂಪನ್ಮೂಲ ದೇಶಪಾಂಡೆಯವರ ಬಳಿ ಇದೆ. ಅಲ್ಲದೆ ಹೈಕಮಾಂಡ್ ಮ್ಯಾನೇಜ್ ಮಾಡುವ ಸಾಮರ್ಥ್ಯವೂ ಇವರಿಗಿದೆಯಂತೆ. ಇಷ್ಟೇ ಅಲ್ಲದೆ ಮೈತ್ರಿ ಪಕ್ಷದ ಆಗು ಹೋಗುಗಳನ್ನು ನೋಡಿಕೊಳ್ಳುವ ಶಕ್ತಿಯಿದೆಯಂತೆ.

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರೊಂದಿಗೆ ಹೊಂದಿಕೊಳ್ಳುವ ಚಾಕಚಕ್ಯತೆಯು ಕೂಡ ಇವರಿಗಿದ್ದು, ನಾನು ಸಿಎಂ ಆಗಬೇಕು ಅನ್ನೋದು ದೇಶಪಾಂಡೆಯವರ ದಶಕದ ಕನಸಾಗಿದೆ. ಸಮ್ಮಿಶ್ರ ಸರ್ಕಾರದ ಮಾತು ಬಂದಾಗಲೆಲ್ಲಾ ದೇಶ ಪಾಂಡೆಯವರ ಹೆಸರು ಹಲವು ಬಾರಿ ಸಿಎಂ ರೇಸ್ ಗೆ ಕೇಳಿ ಬಂದಿದೆ. ಈಗ ಮೈತ್ರಿಯಲ್ಲಿ ಬದಲಾವಣೆ ಅನಿವಾರ್ಯವಾದರೆ ಯಾವುದೇ ಅಡ್ಡಿ ಆತಂಕವಿಲ್ಲದೆ ದೇಶಪಾಂಡೆ ಸಿಎಂ ಸ್ಥಾನಕ್ಕೆ ಬಂದು ಕೂರಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಒಟ್ಟಿನಲ್ಲಿ ರಾಜ್ಯ ರಾಜಕಾರಣದ ಸದ್ಯದ ಸ್ಥಿತಿಯಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಎಂ ಬದಲಾವಣೆ ಮಾಡಬೇಕಾದರೆ ದೇಶಪಾಂಡೆಯವರೆ ಸಿಎಂ ರೇಸ್ ನಲ್ಲಿರುವುದು ಸತ್ಯವಾಗಿದ್ದು, ದೇಶಪಾಂಡೆಯವರು ಸಿಎಂ ಆಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

  • ಎಕ್ಸಿಟ್ ಪೋಲ್ ಮೇಲೆ ಡಿಪೆಂಡ್ ಆದ್ರೆ ಕೌಂಟಿಂಗ್ ಮಾಡೋ ಅವಶ್ಯಕತೆನೇ ಇಲ್ಲ – ಆರ್.ವಿ ದೇಶಪಾಂಡೆ

    ಎಕ್ಸಿಟ್ ಪೋಲ್ ಮೇಲೆ ಡಿಪೆಂಡ್ ಆದ್ರೆ ಕೌಂಟಿಂಗ್ ಮಾಡೋ ಅವಶ್ಯಕತೆನೇ ಇಲ್ಲ – ಆರ್.ವಿ ದೇಶಪಾಂಡೆ

    ಗದಗ: ಎಕ್ಸಿಟ್ ಪೋಲ್ ಮೇಲೆ ಅವಲಂಬನೆ ಆದರೆ ಮತ ಎಣಿಕೆ ಮಾಡುವ ಅವಶ್ಯಕತೆಯೇ ಇರುವುದಿಲ್ಲ. ಪೋಲ್ ನೀಡಿರುವ ಮಾಹಿತಿ ನೋಡಿ ರಿಸಲ್ಟ್ ಡಿಕ್ಲೇರ್ ಮಾಡಿಬಿಡೋಣ ಎಂದು ಕಂದಾಯ ಸಚಿವ ಆರ್.ವಿ ದೇಶಪಾಂಡೆ ವ್ಯಂಗ್ಯವಾಡಿದ್ದಾರೆ.

    ಎನ್‍ಡಿಎ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರ ಸ್ಥಾಪನೆ ಮಾಡಲಿದೆ ಎನ್ನುವ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಚುನಾವಣೋತ್ತರ ಸಮೀಕ್ಷೆಯಲ್ಲಿ ಎಲ್ಲವೂ ಸರಿಯಾಗಿರುವುದಿಲ್ಲ. ಎಕ್ಸಿಟ್ ಪೋಲ್ ಅನುಭವ ಬಹಳಷ್ಟು ಕಡೆ ಸರಿಯಾಗಿಲ್ಲ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಬರುತ್ತೆ ಅಂದಿದ್ದರೋ ಅದಕ್ಕಿಂತ ಹೆಚ್ಚು ಸ್ಥಾನ ಬಂದಿತ್ತು. ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಅನೇಕ ಕಡೆಯಲ್ಲಿ ಸಮೀಕ್ಷೆಗಳು ನುಡಿದಂತೆ ಫಲಿತಾಂಶ ಬಂದಿಲ್ಲ ಎಂದು ಹೇಳಿದರು.

    ಎಲ್ಲಾ ವಿಚಾರದಲ್ಲೂ ತಾಳ್ಮೆ ಬೇಕು ಆದರಲ್ಲೂ ರಾಜಕೀಯ ವಿಚಾರದಲ್ಲಿ ರಾಜಕಾರಣಿಗಳಿಗೆ ಬಹಳ ತಾಳ್ಮೆ ಬೇಕು. ಗೆಲ್ಲುವವರು ಪಟಾಕಿ ಹೊಡೆಯಲು ಗಡಿಬಿಡಿ ಮಾಡಬಾರದು. ಇದೇ ತಿಂಗಳು ಮೇ 23 ಕ್ಕೆ ಫಲಿತಾಂಶ ಇದೆ ಅವತ್ತು ಏನೂ ಎಂಬುದು ಗೊತ್ತಾಗುತ್ತೆ. ಆಗ ನೀವು ಈ ಪ್ರಶ್ನೆ ಕೇಳಿದರೆ ನಾನು ಸರಿಯಾದ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.

  • ರೇವಣ್ಣ ಬಿಸ್ಕೆಟ್ ಎಸೆದ ವಿಚಾರ ಸಮರ್ಥಿಸಿಕೊಂಡ್ರು ಆರ್.ವಿ.ದೇಶಪಾಂಡೆ

    ರೇವಣ್ಣ ಬಿಸ್ಕೆಟ್ ಎಸೆದ ವಿಚಾರ ಸಮರ್ಥಿಸಿಕೊಂಡ್ರು ಆರ್.ವಿ.ದೇಶಪಾಂಡೆ

    ಕೋಲಾರ: ಮಳೆ ಸಂತ್ರಸ್ತರಿಗೆ ಬಿಸ್ಕೆಟ್ ಕೊಡುವ ರೀತಿ ತಪ್ಪು, ಆದರೆ ಉದ್ದೇಶ ಪೂರ್ವಕವಾಗಿ ನಿರಾಶ್ರಿತರಿಗೆ ಅವಮಾನ ಮಾಡಬೇಕೆಂದು ಹಾಗೆ ಸಚಿವ ರೇವಣ್ಣ ಮಾಡಿಲ್ಲ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸಂತ್ರಸ್ತರಿಗೆ ಬಿಸ್ಕೇಟ್ ಎಸೆದ ವಿಚಾರವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

    ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನೆ ಸಭೆಗೂ ಮುನ್ನ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಸ್ಕೆಟ್ ಎಸೆದಿರುವುದು ತಪ್ಪು, ಅದನ್ನ ನಾನು ಒಪ್ಪಿಕೊಳ್ಳುತ್ತೇನೆ. ವಿತರಣೆ ಮಾಡುವಾಗ ಸರಿಯಾಗಿ ವಿತರಣೆ ಮಾಡಬೇಕಿತ್ತು. ಆದರೆ ಸಂತ್ರಸ್ತರಿಗೆ ಅವಮಾನಮಾಡಬೇಕೆಂದು ಹಾಗೆ ಮಾಡಿಲ್ಲ ಎಂದು ರೇವಣ್ಣನವರ ಪರ ಬ್ಯಾಟ್ ಬೀಸಿದ್ದಾರೆ.

    ಈಗಾಗಲೇ ಸಿಎಂ ಕುಮಾರಸ್ವಾಮಿಗಳು ಈ ವಿಚಾರಕ್ಕೆ ಸ್ಪಷ್ಟನೆ ನೀಡಿ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ವಿಚಾರದಲ್ಲಿ ಸಾರ್ವಜನಿಕರು ಸಹಕರಿಸಬೇಕು. ಈ ವೇಳೇ ಕಂದಾಯ ಅದಾಲತ್ 6 ತಿಂಗಳುಗಳ ಕಾಲ ವಿಸ್ತರಣೆ ಮಾಡಿದ್ದು, ರಾಜ್ಯದ 30 ಸಾವಿರ ಹಳ್ಳಿಗಳಲ್ಲಿ 10 ಸಾವಿರ ಹಳ್ಳಿಗಳು ಪೋಡಿ ಮುಕ್ತವಾಗಿವೆ ಎಂದು ತಿಳಿಸಿದರು. ಇದನ್ನೂ ಓದಿ: ಅಧಿಕಾರದ ಮದದಲ್ಲಿ ಅಮಾನವೀಯ ಕೆಲಸ- ಕೊಡಗು ಸಂತ್ರಸ್ತರಿಗೆ ಬಿಸ್ಕೆಟ್ ಎಸೆದ ಸೂಪರ್ ಸಿಎಂ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯೋಧ ವಿಜಯಾನಂದ ನಾಯ್ಕ ಮನೆಗೆ ಆರ್ ವಿ ದೇಶಪಾಂಡೆ ಭೇಟಿ

    ಯೋಧ ವಿಜಯಾನಂದ ನಾಯ್ಕ ಮನೆಗೆ ಆರ್ ವಿ ದೇಶಪಾಂಡೆ ಭೇಟಿ

    ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರದ ಹುತಾತ್ಮ ಯೋಧ ವಿಜಯಾನಂದ ನಾಯ್ಕ ಮನೆಗೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಇಂದು ಭೇಟಿ ನೀಡಿ ಶ್ರದ್ಧಾಂಜಲಿ ಅರ್ಪಿಸಿದರು.

    ಕಳೆದ ಆರು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಬಿಎಸ್‍ಎಫ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ವಿಜಯಾನಂದ ಅವರು, ಕಳೆದ ತಿಂಗಳು ಛತ್ತೀಸಗಡದಲ್ಲಿ ನಕ್ಸಲ್ ಕಾರ್ಯಾಚರಣೆ ವೇಳೆ ನೆಲಬಾಂಬ್ ದಾಳಿಗೆ ಸಿಕ್ಕು ವೀರ ಮರಣವನ್ನಪ್ಪಿದ್ದರು. ಇಂದು ಆರ್ ವಿ ದೇಶಪಾಂಡೆ ನಗರದ ಕುಮಾರ ಪಂಥವಾಡಾದಲ್ಲಿರುವ ವಿಜಯಾನಂದರವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದಲ್ಲದೇ, ಮನೆಯವರ ಯೋಗಕ್ಷೇಮ ವಿಚಾರಿಸಿದರು.

    ಈ ವೇಳೆ ತಮ್ಮ ಎರಡನೇ ಮಗನಿಗೆ ಸರ್ಕಾರಿ ಉದ್ಯೋಗ ಹಾಗೂ ನಗರದ ರಾಕ್ ಗಾರ್ಡನ್ ಅಥವಾ ವಾರ್ ಶಿಪ್ ಮ್ಯೂಸಿಯಂ ಬಳಿ ಯೋಧ ವಿಜಯಾನಂದನರ ಪುತ್ಥಳಿಯನ್ನು ನಿರ್ಮಿಸುವಂತೆ ಕುಟುಂಬಸ್ಥರು ಸಚಿವ ದೇಶಪಾಂಡೆ ಬಳಿ ಮನವಿ ಮಾಡಿದರು.

  • ಲೋಕಲ್ ಚುನಾವಣೆಯ ಮೈತ್ರಿ ತಂತ್ರ ರಿವೀಲ್ ಮಾಡಿದ್ರು ದೇಶಪಾಂಡೆ

    ಲೋಕಲ್ ಚುನಾವಣೆಯ ಮೈತ್ರಿ ತಂತ್ರ ರಿವೀಲ್ ಮಾಡಿದ್ರು ದೇಶಪಾಂಡೆ

    ಕಾರವಾರ: ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ನಾಯಕರು ಮೈತ್ರಿ ಮಂತ್ರ ಪಟಿಸುತ್ತಿದ್ದು, ಈಗ ಸ್ಥಳೀಯ ಸಂಸ್ಥೆಯಲ್ಲಿಯೂ ದೋಸ್ತಿಗೆ ಮುಂದಾಗಿರುವ ತಂತ್ರವನ್ನು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತೆರೆದಿಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಜೆಡಿಎಸ್ ಯಾವ ಕ್ಷೇತ್ರದಲ್ಲಿ ದುರ್ಬಲವಾಗಿದೆ ಅಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತದೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಜೆಡಿಎಸ್‍ಗೆ ಅವಕಾಶವಿಲ್ಲ. ಇನ್ನು ಯಾವ ಕ್ಷೇತ್ರದಲ್ಲಿ ಎರಡೂ ಪಕ್ಷಗಳು ಬಲಿಷ್ಠವಾಗಿಲ್ಲವೋ ಅಲ್ಲಿ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಹೊಂದಾಣಿಕೆ ಮೂಲಕ ಮತಕ್ಷೇತ್ರದ ಹಂಚಿಕೆಗೆ ಎರಡು ಪಕ್ಷದ ಅಧ್ಯಕ್ಷರು ಚಿಂತನೆ ನಡೆಸಿದ್ದಾರೆ ಎಂದು ತಿಳಿಸಿದರು.

    ಅಕ್ರಮವಾಗಿ ಬಾಂಗ್ಲಾದೇಶ ಸೇರಿದಂತೆ ಬೇರೆ ದೇಶಗಳಿಂದ ವಲಸೆ ಬಂದು ರಾಜ್ಯದಲ್ಲಿ ನೆಲೆಸಿದ್ದಾರೆ. ಕೆಲವು ವಿದೇಶಿಗರು ವಿಸಾ ಅವಧಿ ಮುಗಿದಿದ್ದರೂ ರಾಜ್ಯದಲ್ಲಿ ಉಳಿದುಕೊಂಡಿದ್ದಾರೆ. ಅಂತಹ ವ್ಯಕ್ತಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ‘ಆರೋಗ್ಯ ಕರ್ನಾಟಕ ಕಾರ್ಡ್’ ಯೋಜನೆಯನ್ನು ಜಾರಿಗೆ ತಂದಿತ್ತು. ಅದನ್ನು ಶೀಘ್ರದಲ್ಲಿಯೇ ಚಾಲ್ತಿಗೆ ತರಲಾಗುವುದು. ಜೊತೆಗೆ ಹಿಂದೆ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಘೋಷಿಸಿದ್ದ ಎಲ್ಲಾ ಯೋಜನೆಗಳನ್ನು ಒಂದೊಂದಾಗಿ ಜಾರಿಗೆ ತರಲಾಗುತ್ತದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸಚಿವ ದೇಶಪಾಂಡೆ ಪುತ್ರನ ಮನೆಯಲ್ಲಿ ಕಳ್ಳತನ

    ಸಚಿವ ದೇಶಪಾಂಡೆ ಪುತ್ರನ ಮನೆಯಲ್ಲಿ ಕಳ್ಳತನ

    ಬೆಂಗಳೂರು: ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರ ಪುತ್ರ ಪ್ರಶಾಂತ್ ದೇಶಪಾಂಡೆಯವರ ಬೆಂಗಳೂರಿನ ನಿವಾಸದಲ್ಲಿ ಕಳ್ಳತನ ನಡೆದಿದೆ.

    ಪ್ರಶಾಂತ್ ದೇಶಪಾಂಡೆಯವರು ವಾಸವಿರುವ ಸದಾಶಿವನಗರದ 10ನೇ ಮುಖ್ಯ ರಸ್ತೆಯಲ್ಲಿಯ ಬಾಡಿಗೆ ಮನೆಯಲ್ಲಿನ ಓದುವ ಕೊಠಡಿಯಲ್ಲಿಟ್ಟಿದ್ದ ಲ್ಯಾಪ್‍ಟಾಪ್, ಸುಮಾರು ಅರ್ಧ ಕೆಜಿ ತೂಕದ ದೇವರ ಬೆಳ್ಳಿಯ ವಿಗ್ರಹ, ಎರಡು ಮೊಬೈಲ್ ಫೋನ್‍ಗಳನ್ನು ಕಳವು ಮಾಡಲಾಗಿದೆ. ಎರಡು ಲಕ್ಷ ರೂ.ಮೌಲ್ಯದ ದೇವಿಯ ಬೆಳ್ಳಿಯ ಮುಖವಾಡವನ್ನು ಕದ್ದೊಯ್ಯಲಾಗಿದೆ.

    ಮನೆಯ ಹಿಂಭಾಗ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಲ್ಲಿಂದ ಮನೆಯ ಕಾಂಪೌಂಡ್ ಒಳಗೆ ಬಂದರೆ ಕೇವಲ ಎರಡು ಅಡಿ ದೂರಕ್ಕೆ ಅಡುಗೆ ಮನೆಗೆ ಪ್ರವೇಶಿಸಬಹುದು. ಬಹುಶಃ ರಾತ್ರಿ ಹಿಂಬಾಗಿಲು ಲಾಕ್ ಮಾಡದೆ ಇರುವ ಕಾರಣ ಕಳ್ಳರು ಮನೆಯೊಳಗೆ ಪ್ರವೇಶಿಸರಬಹುದು ಎಂದು ಪ್ರಶಾಂತ್ ತಿಳಿಸಿದ್ದಾರೆ.

    ಮನೆಯಲ್ಲಿ ಎಲ್ಲರೂ ಇರುವಾಗಲೇ ಕಳ್ಳತನವಾಗಿದೆ. ಮೂರು ನಾಯಿಗಳನ್ನು ಸಾಕಲಾಗಿದೆ. ಭದ್ರತೆಗಾಗಿ ಓರ್ವ ಸೆಕ್ಯುರಿಟಿ ಗಾರ್ಡ್ ಕೂಡ ಇದ್ದಾರೆ. ಆದರೆ, ಹಿಂಭಾಗದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಕಿರಿದಾದ ಜಾಗವಿದ್ದ ಕಾರಣ ಕಳ್ಳರ ಪ್ರವೇಶದ ಸುಳಿವು ಗೊತ್ತಾಗಿಲ್ಲ ಎಂದು ತಿಳಿಸಿದ್ದಾರೆ.

    ಈ ಕುರಿತು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಶಾಂತ ದೇಶಪಾಂಡೆ ಮನೆ ರಸ್ತೆಯ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.

  • ಕಾಂಗ್ರೆಸ್ ಇಂದು ಪುಟಗೋಸಿ ಪಕ್ಷಕ್ಕೆ ಸಲಾಂ ಹೊಡೆಯುವ ಪರಿಸ್ಥಿತಿಗೆ ಬಂದಿದೆ: ಅನಂತಕುಮಾರ್ ಹೆಗಡೆ

    ಕಾಂಗ್ರೆಸ್ ಇಂದು ಪುಟಗೋಸಿ ಪಕ್ಷಕ್ಕೆ ಸಲಾಂ ಹೊಡೆಯುವ ಪರಿಸ್ಥಿತಿಗೆ ಬಂದಿದೆ: ಅನಂತಕುಮಾರ್ ಹೆಗಡೆ

    ಕಾರವಾರ: ದೇಶದ ಅತಿ ದೊಡ್ಡ ಪಕ್ಷ ಕಾಂಗ್ರೆಸ್‍ಗೆ ಇಂದು ರಾಜ್ಯದ ಪುಟಗೋಸಿ ಪಾರ್ಟಿಗೆ ಬಗ್ಗಿ ಸಲಾಂ ಹೊಡೆಯುವ ದಯನೀಯ ಪರಿಸ್ಥಿತಿಗೆ ಬಂದಿದೆ ಅಂತಾ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಲೇವಡಿ ಮಾಡಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹವ್ಯಕ ಭವನದಲ್ಲಿ ನಡೆದ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಸದ್ಯ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಂಡಿದೆ. ಮುಂದಿನ ದಿನಗಳಲ್ಲಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಇವತ್ತಲ್ಲ ನಾಳೆ ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರಿಸಬೇಕಿದೆ ಅಂತಾ ಅಂದ್ರು.

    ಭಟ್ಕಳದಲ್ಲಿ ಹೇಗೆ ಬಿಜೆಪಿ ಗೆಲ್ಲಬೇಕು ಎಂದು ಹಠ ಇತ್ತೋ ಹಾಗೆ ಇಂದು ಹಳಿಯಾಳ ಕ್ಷೇತ್ರದಲ್ಲಿಯೂ ಬಿಜೆಪಿ ಭಾವುಟ ಹಾರಾಡಬೇಕಿದೆ. ಮುಂದಿನ ದಿನಗಳಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಬಿಜೆಪಿ ಸೇರ್ತಾರೋ ಅಥವಾ ನಮ್ಮ ಪಕ್ಷದ ಹೊಸ ಅಭ್ಯರ್ಥಿ ಬರುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಧ್ವಜ ಹಾರೋವರೆಗೂ ನಾನು ರಾಜಕೀಯ ನಿವೃತ್ತಿ ಪಡೆಯಲ್ಲ ಅಂತಾ ಅನಂತಕುಮಾರ್ ಹೆಗಡೆ ಶಪಥ ಮಾಡಿದ್ರು.

  • ನಿಮಗೆ ತೋಚಿದಂತೆ ಬರೆದುಕೊಳ್ಳಿ: ದೇಶಪಾಂಡೆ ಗರಂ

    ನಿಮಗೆ ತೋಚಿದಂತೆ ಬರೆದುಕೊಳ್ಳಿ: ದೇಶಪಾಂಡೆ ಗರಂ

    ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳುವ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಬೃಹತ್ ಕೈಗಾರಿಕಾ ಸಚಿವ ಆರ್. ವಿ ದೇಶಪಾಂಡೆ ಗರಂ ಆಗಿ ನಿಮಗೆ ತೋಚಿದಂತೆ ಬರೆದುಕೊಳ್ಳಿ ಎಂದು ಉತ್ತರಿಸಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನಾನು ಈಗಾಗಲೇ ಪ್ರಶ್ನೆ ಕೇಳಿದ್ದೇನೆ. ಪದೇ ಪದೇ ಈ ವಿಚಾರವನ್ನು ಹೈಲೈಟ್ ಮಾಡುವುದು ಸರಿಯಲ್ಲ. ನಾನೂ ಹಿಂದೆ ಪಕ್ಷ ಬಿಟ್ಟು ಬಂದವನೇ. ಕಾಲವೇ ಎಲ್ಲವನ್ನೂ ನಿರ್ಧಾರ ಮಾಡುತ್ತದೆ ಎಂದರು.

    ಮೋದಿಯವರು ಈಗ ನನಗೆ ಪರಿಚಯ ಆಗಿರಬಹುದು. ಆದರೆ ಸಿದ್ದರಾಮಯ್ಯ 30 ವರ್ಷದಿಂದ ಪರಿಚಯ. ಹೀಗಾಗಿ ನೀವು ನಿಮಗೆ ಹೇಗೆ ಬೇಕೋ ಹಾಗೇ ಬರೆದುಕೊಳ್ಳಿ ಸಿಡಿಮಿಡಿಗೊಂಡು ಉತ್ತರಿಸಿದರು.

    ಸರಬರಾಜುದಾರರ ಅಭಿವೃದ್ಧಿ ಹಾಗು ಹೂಡಿಕೆದಾರರ ಶೃಂಗಸಭೆ ಯಶಸ್ವಿಯಾಗಿದ್ದು, 20,499 ಸಾವಿರ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳು ಬಂದಿವೆ. 86,750 ಉದ್ಯೋಗ ಸೃಷ್ಟಿಯಾಗಲಿದೆ. ಕೆಐಎಡಿಬಿ ಯಲ್ಲಿ 11 ಸೇವೆಗಳನ್ನು ಸಕಾಲ ಅಡಿ ತರಲಾಗಿದ್ದು, ಉದ್ಯಮಕ್ಕೆ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಇನ್ನೂ ಚೆಕ್ ಪೋಸ್ಟ್ ಅಸ್ತಿತ್ವದಲ್ಲಿದ್ದು ಅಲ್ಲಿ ವಸೂಲಿ ನಡೆಯುತ್ತಿದೆ ಎನ್ನುವ ಆರೋಪಕ್ಕೆ ವಾಣಿಜ್ಯ ತೆರಿಗೆ ಚೆಕ್ ಪೋಸ್ಟ್  ಯಾವುದೂ ಇಲ್ಲ ಎಂದು ದೇಶಪಾಂಡೆ ಸ್ಪಷ್ಟನೆ ನೀಡಿದರು. (ಚಿನ್ನದ್ದೋ, ಬ್ರಿಟಾನಿಯಾ ಬಿಸ್ಕಟ್ಟೋ ಯಾವುದರ ಬಗ್ಗೆ ನನಗೆ ಗೊತ್ತಿಲ್ಲ: ಆರ್.ವಿ.ದೇಶಪಾಂಡೆ)

    ಜಿಎಸ್ ಟಿ ಯಿಂದ ರಾಜ್ಯದ ಕೈಗಾರಿಕಾಗಳಿಗೆ ತೊಂದರೆಯಾಗಿದೆ ಅದರಲ್ಲೂ ಸಣ್ಣ ಕೈಗಾರಿಕೆಗಳಿಗೆ ತೊಂದರೆಯಾಗಿದೆ ಎಂದರು.

    ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸೇರ್ಪಡೆಯಾಗಲಿರುವ ಕಾಂಗ್ರೆಸ್ ಶಾಸಕರ ಪಟ್ಟಿಯೊಂದು ಹರಿದಾಡುತ್ತಿದ್ದು, ಈ ಪಟ್ಟಿಯಲ್ಲಿ ದೇಶಪಾಂಡೆ ಹೆಸರಿದೆ. ಹೀಗಾಗಿ ಈ ಹಿಂದೆ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ದೇಶಪಾಂಡೆ ಅವರು ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿರುವ ಸಿದ್ಧಾಂತ ಮತ್ತು ಜನಪರ ಯೋಜನೆಗಳು ಬೇರೆ ಯಾವ ಪಕ್ಷದಲ್ಲಿ ಇಲ್ಲ ಎಂದು ಉತ್ತರಿಸಿ ಸ್ಪಷ್ಟನೆ ನೀಡಿದರು.