Tag: russia

  • ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಕರೆತರಲು ನೋಡಲ್ ಅಧಿಕಾರಿಗಳ ನೇಮಕ: ಗೋವಿಂದ ಕಾರಜೋಳ

    ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಕರೆತರಲು ನೋಡಲ್ ಅಧಿಕಾರಿಗಳ ನೇಮಕ: ಗೋವಿಂದ ಕಾರಜೋಳ

    ಬೆಳಗಾವಿ: ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ಜಿಲ್ಲೆಯ ವಿದ್ಯಾರ್ಥಿಗಳ ರಕ್ಷಣೆಗೆ ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಮುಖ್ಯಸ್ಥ ಪ್ರವೀಣ್ ಬಾಗೇವಾಡಿ ಹಾಗೂ ಬೆಳಗಾವಿ ಎಸಿ ರವಿ ಕರಲಿಂಗಣ್ಣವರ್ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಇಬ್ಬರು ನೋಡಲ್ ಅಧಿಕಾರಿಗಳನ್ನು ಮುಂಬೈಗೆ ಕಳುಹಿಸಿಕೊಟ್ಟಿದ್ದು, ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಹೇಳಿದರು.

    ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರು ಆತಂಕಕ್ಕೆ ಒಳಗಾಗಬೇಕಿಲ್ಲ. ಪ್ರಧಾನಿ ಮೋದಿಯವರು ಸತತವಾಗಿ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಸುರಕ್ಷಿತವಾಗಿ ನಮ್ಮ ರಾಜ್ಯಕ್ಕೆ ಅವರನ್ನು ಕರೆತರಲು ಪ್ರಯತ್ನ ನಡೆಯುತ್ತಿದೆ ಎಂದರು. ಇದನ್ನೂ ಓದಿ: ಉಕ್ರೇನ್ ಗಡಿ ತಲುಪಿದ್ರೂ ಭಾರತಕ್ಕೆ ಬರಲಾಗದೆ ರಾಯಚೂರು ವಿದ್ಯಾರ್ಥಿಗಳು ಪರದಾಟ

    ಈಗಾಗಲೇ ಹಲವು ವಿದ್ಯಾರ್ಥಿಗಳು ಆಯಾ ರಾಜ್ಯಗಳಿಗೆ ಸೇರಿದ್ದಾರೆ. ಉಕ್ರೇನ್‍ನಲ್ಲಿ ಕೆಲವರಿಗೆ ನೀರು, ಊಟದ ಸಮಸ್ಯೆಯಾಗಿದೆ. ಜೀವದ ಭಯದಲ್ಲಿದ್ದಾರೆ. ಹೀಗಾಗಿ, ಇಲ್ಲಿನ ತಂದೆ, ತಾಯಿ, ಬಂಧು, ಬಳಗದವರು ನೋವಿನಲ್ಲಿದ್ದಾರೆ. ಯಾರೂ ಆತಂಕ ಪಡಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವವರನ್ನು ವಾಪಸ್ ಕರೆತರುವ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸುತ್ತೆ: ಪ್ರಹ್ಲಾದ್ ಜೋಶಿ

  • ಉಕ್ರೇನ್‍ನಲ್ಲಿ ಸಿಲುಕಿರುವವರನ್ನು ವಾಪಸ್ ಕರೆತರುವ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸುತ್ತೆ: ಪ್ರಹ್ಲಾದ್ ಜೋಶಿ

    ಉಕ್ರೇನ್‍ನಲ್ಲಿ ಸಿಲುಕಿರುವವರನ್ನು ವಾಪಸ್ ಕರೆತರುವ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸುತ್ತೆ: ಪ್ರಹ್ಲಾದ್ ಜೋಶಿ

    ಬೆಳಗಾವಿ: ಸರ್ಕಾರ ಸಂಪೂರ್ಣ ವೆಚ್ಚ ಭರಿಸಿ ಉಕ್ರೇನ್‍ನಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳನ್ನು ಸಮೀಪದ ಏರ್‌ಪೋರ್ಟ್‍ಗೆ ಕರೆದುಕೊಂಡು ಬರುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಕ್ರೇನ್ ಅಕ್ಕಪಕ್ಕದ ದೇಶಗಳ ಜೊತೆ ಮಾತುಕತೆ ಮಾಡಲಾಗುತ್ತಿದೆ. ಅವರ ಸಹಯೋಗ ಸಹಕಾರ ಪಡೆದು ಕೆಲಸ ಮಾಡುತ್ತಿದ್ದೇವೆ. ದೆಹಲಿ, ಮುಂಬೈ ಯಾವುದಾದರೂ ಪ್ರಮುಖ ನಗರ ಆಯ್ಕೆ ಮಾಡಿ ಭಾರತ ಸರ್ಕಾರ ಸಂಪೂರ್ಣ ಮುಕ್ತವಾಗಿ ಕರೆದುಕೊಂಡು ಬರುತ್ತಿದೆ ಎಂದರು.

    ಉಕ್ರೇನ್‍ನಲ್ಲಿ ಈಗಿನ ವಾಸ್ತವಿಕ ಚಿತ್ರಣ, ಅಲ್ಲಿಂದ ಬರುವ ವೀಡಿಯೋಗಳು ಎಲ್ಲಾ ಸತ್ಯವೋ ಸುಳ್ಳೋ ಎನ್ನುವುದು ಪರಿಶೀಲನೆ ಆಗುತ್ತಿಲ್ಲ. ಸದ್ಯ ಪ್ರಧಾನಿ ಮಾರ್ಗದರ್ಶನ ನೇತೃತ್ವದಲ್ಲಿ ಟಾಪ್ ಪ್ರಿಯಾರಿಟಿಯಿಂದ ನಾವು ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದೇವೆ ಎಂದು ಹೇಳಿದರು.

    ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಇಂತಹ ವಿಷಮ ಪರಿಸ್ಥಿತಿಯಲ್ಲಿ ನಿನ್ನೆ ಮೂರು ವಿಮಾನಗಳಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲಾಗಿದೆ. ನಮ್ಮ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

    ಇದು ಅತ್ಯಂತ ಕಠಿಣ ಕ್ಲಿಷ್ಟಕರ ಸನ್ನಿವೇಶವಾಗಿದೆ. ಉಕ್ರೇನ್ ಜೊತೆಯೂ ನಮ್ಮ ಮಾತುಕತೆ ನಡೆಯುತ್ತಿದೆ. ನಾನು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಹಾಗೂ ವಿದೇಶಾಂಗ ರಾಜ್ಯ ಸಚಿವರ ಜೊತೆ ಸಂಪರ್ಕದಲ್ಲಿ ಇದ್ದೇವೆ. ಕ್ಲಿಷ್ಟಕರ ಸನ್ನಿವೇಶ ಇರುವುದರಿಂದ ರಷ್ಯಾದ ಜೊತೆಯೂ ಮಾತನಾಡಬೇಕಾಗುತ್ತದೆ. ಉಕ್ರೇನ್ ಜೊತೆಯೂ ಮಾತನಾಡಬೇಕಾಗುತ್ತದೆ. ನಮ್ಮ ನಾಗರಿಕರನ್ನು ಸುರಕ್ಷಿತವಾಗಿ ಕರೆತರುವುದು ನಮ್ಮ ಆದ್ಯತೆ. ಇದು ಬಹುದೊಡ್ಡ ಚಾಲೆಂಜ್ ಎಂದರು.

    ಹಿಂದೆ ಇರಾಕ್ ಅಫ್ಘಾನಿಸ್ತಾನದಲ್ಲಿ ಸಮಸ್ಯೆಯಾದ ಸಂದರ್ಭದಲ್ಲಿ ಯಶಸ್ವಿಯಾಗಿ ಸ್ಥಳಾಂತರ ಮಾಡಿದ್ದೇವು. ಆದರೆ ಉಕ್ರೇನ್‍ನಲ್ಲಿ ನಿರೀಕ್ಷೆಗಿಂತ ಬೇಗ ಯುದ್ಧ ಶುರುವಾಗಿರುವುದರಿಂದ ಸಮಸ್ಯೆ ಆಗಿದೆ. ಭೌಗೋಳಿಕವಾಗಿ ಉಕ್ರೇನ್ ಬಹಳ ವಿಶಾಲವಾಗಿದೆ. ಇಂದೂ ಸಹ ವಿಮಾನಗಳು ಭಾರತಕ್ಕೆ ಬರುತ್ತಿವೆ. ಕೇಂದ್ರ ಸರ್ಕಾರ ಅತ್ಯಂತ ಸಂವೇದನಾಶೀಲವಾಗಿ ಪ್ರಯತ್ನ ಮಾಡ್ತಿದ್ದೇವೆ. ಕಷ್ಟ ಇದೆ ನಾವು ಏನು ಆಗೇ ಇಲ್ಲ ಅಂತಾ ಹೇಳುತ್ತಿಲ್ಲ. ಆದರೆ ಸುರಕ್ಷಿತವಾಗಿ ಮಕ್ಕಳನ್ನು ಕರೆತರಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.

    ಉಕ್ರೇನ್‍ನ ಕೀವ್, ಖಾರ್ಕೀವ್‍ನಲ್ಲಿ ಕನ್ನಡಿಗ ವಿದ್ಯಾರ್ಥಿಗಳ ಪರದಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೀವ್ ಮತ್ತು ಖಾರ್ಕೀವ್‍ಗೆ ರೆಸ್ಕ್ಯೂಗೆ ರೀಚ್ ಆಗೋಕೆ ಆಗುತ್ತಿಲ್ಲ. ಉಕ್ರೇನ್ ಭಾರತೀಯ ರಾಯಭಾರಿ ಕಚೇರಿಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಹೆಚ್ಚಿನ ಫೋನ್‍ಗಳ ವ್ಯವಸ್ಥೆ ಮಾಡಿದ್ದೇವೆ. ಕೆಲವೊಂದು ವೇಳೆ ಎಲೆಕ್ಟ್ರಿಸಿಟಿ ಸೇರಿ ಇತರ ಸೌಲಭ್ಯ ಸಿಗಲ್ಲ. ನನಗೆ ಬಂದ ಫೋನ್‍ಗಳನ್ನು ಸ್ವೀಕರಿಸುತ್ತಿದ್ದೇನೆ. ನಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆ ತರುವುದು ನಮ್ಮ ಆದ್ಯತೆ ಎಂದರು. ಇದನ್ನೂ ಓದಿ: ಉಕ್ರೇನ್ ಗಡಿ ತಲುಪಿದ್ರೂ ಭಾರತಕ್ಕೆ ಬರಲಾಗದೆ ರಾಯಚೂರು ವಿದ್ಯಾರ್ಥಿಗಳು ಪರದಾಟ

    ಬಾಂಬ್ ದಾಳಿ, ಶೆಲ್ಲಿಂಗ್ ಆಗುತ್ತಿದೆ. ಎರಡೂ ಕಡೆ ಸೈನಿಕರು ಸುತ್ತವರೆದಿದ್ದಾರೆ. ಹೀಗಾಗಿ ರೀಚ್ ಆಗಲು ಆಗುತ್ತಿಲ್ಲ. ನಾವು ಅಲ್ಲಿ ರೀಚ್ ಆಗಲು ಆಗುತ್ತಿಲ್ಲ, ಇದು ಬಹಳ ಕಷ್ಟಕರ ಪರಿಸ್ಥಿತಿಯಾಗಿದೆ. ಕೆಲವು ಪೋಷಕರು ನನಗೂ ಫೋನ್ ಮಾಡಿ ಕಣ್ಣೀರು ಹಾಕುತ್ತಿದ್ದಾರೆ. ನಿನ್ನೆಯಿಂದ ನ್ಯೂಕ್ಲಿಯರ್ ಮಾತುಕತೆ ನಡೆಯುತ್ತಿದೆ. ಇದರಲ್ಲಿ ಸತ್ಯ ಎಷ್ಟು ಸುಳ್ಳು ಎಷ್ಟು ನನಗೆ ಗೊತ್ತಿಲ್ಲ. ಇದು ನಮಗೆ ಚಾಲೇಂಜಿಂಗ್ ಟೈಮ್. ನಮ್ಮ ನಾಗರಿಕರನ್ನು ಹೇಗಾದರೂ ಮಾಡಿ ಸುರಕ್ಷಿತವಾಗಿ ಕರೆತರೋದೆ ನಮ್ಮ ಪ್ರಥಮ ಆದ್ಯತೆಯಾಗಿದೆ. ಸ್ವತಃ ಪ್ರಧಾನಿ ಡೇ ಟು ಡೇ ಮಾನಿಟರ್ ಮಾಡ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ನಮ್ಮ ತ್ರಿವರ್ಣ ಧ್ವಜ ಇದ್ದ ಬಸ್‌ಗಳನ್ನು ನೋಡಿದಾಗ ಮತ್ತೆ ಬದುಕಿದಂತಾಯ್ತು: ವಿದ್ಯಾರ್ಥಿನಿ

  • ಉಕ್ರೇನ್ ಅಧ್ಯಕ್ಷನ ಹತ್ಯೆಗೆ 400 ರಷ್ಯಾ ಸೈನಿಕರು ಸಿದ್ಧತೆ

    ಉಕ್ರೇನ್ ಅಧ್ಯಕ್ಷನ ಹತ್ಯೆಗೆ 400 ರಷ್ಯಾ ಸೈನಿಕರು ಸಿದ್ಧತೆ

    ಕೀವ್: ರಷ್ಯಾದ 400 ಸೈನಿಕರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಹತ್ಯೆ ಮಾಡಲು ಆದೇಶಿಸಿದ್ದು, ಇದರಿಂದಾಗಿ ಅವರು ರಷ್ಯಾ ಸೈನಿಕರು ಹುಡುಕುತ್ತಿದ್ದಾರೆ ಎಂಬ ವಿಷಯ ಇದೀಗ ಬಹಿರಂಗವಾಗಿದೆ.

    400ಕ್ಕೂ ಹೆಚ್ಚು ಸೈನಿಕರನ್ನು ರಷ್ಯಾ ಆಫ್ರಿಕಾದಿಂದ ಕರೆಸಿಕೊಂಡಿದ್ದು, ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಅವರ ಸರ್ಕಾರದ ಅಧಿಕಾರಿಗಳನ್ನು ಹತ್ಯೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಅಧ್ಯಕ್ಷ ಪುಟಿನ್ ಅವರ ಮಿತ್ರರ ಬಳಗದಲ್ಲಿ ಒಬ್ಬರಿಂದ ನಡೆಸಲ್ಪಡುವ ವ್ಯಾಗ್ನರ್ ಗ್ರೂಪ್ ಕಂಪನಿಯು ಐದು ವಾರಗಳ ಹಿಂದೆ ಆಫ್ರಿಕಾದಿಂದ ಸೈನಿಕರಿಗೆ ಆರ್ಥಿಕ ಸಹಾಯ ಮಾಡಿ ಅದಕ್ಕೆ ಪ್ರತಿಫಲವಾಗಿ ಝೆಲೆನ್ಸ್ಕಿಯ ಶಿರಚ್ಛೇದ ಮಾಡಲು ಆದೇಶಿಸಿತ್ತು.

    ವ್ಯಾಗ್ನರ್ ಗ್ರೂಪ್‍ನ ಚಟುವಟಿಕೆಗಳ ಜ್ಞಾನವಿರುವ ಮೂಲವೊಂದು 2,000 ಮತ್ತು 4,000 ಕೂಲಿ ಸೈನಿಕರು ಜನವರಿಯಲ್ಲಿ ಉಕ್ರೇನ್‍ಗೆ ಆಗಮಿಸಿದ್ದರು ಎಂದು ಮಾಹಿತಿ ನೀಡಿದ್ದು, ಕೆಲವರನ್ನು ದೇಶದ ಪೂರ್ವದಲ್ಲಿರುವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್‍ನ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳಿಗೆ ಕಳುಹಿಸಲಾಯಿತು. ಆದರೆ 400 ಸೈನಿಕರು ಝೆಲೆನ್‍ಸ್ಕಿಯನ್ನು ಹತ್ಯೆಗೈಯಲು ಬೆಲಾರಸ್‍ನಿಂದ ಕೈವ್‍ಗೆ ತೆರಳಿದ್ದರು.

    ಈ ಗುಂಪು ಉಕ್ರೇನ್‍ನ ಅಧ್ಯಕ್ಷ ಹಾಗೂ ಅವರ ಸಹೋದ್ಯೋಗಿಗಳು ಇರುವ ಸ್ಥಳವನ್ನು ತಮ್ಮ ಫೋನ್‍ಗಳ ಮೂಲಕ ಟ್ರ್ಯಾಕ್ ಮಾಡುತ್ತಿತ್ತು. ಅವರು ಯಾವ ಸಮಯದಲ್ಲಿ ಎಲ್ಲಿ ಇರುತ್ತಾರೆ ಎಂಬ ವಿವರಗಳನ್ನೆಲ್ಲಾ ತಿಳಿದುಕೊಳ್ಳುತ್ತಿತ್ತು. ಇದನ್ನೂ ಓದಿ: ಉಕ್ರೇನ್‍ಗಡಿಗೆ ತಲುಪಿದ್ದರು ಭಾರತಕ್ಕೆ ಬರಲಾಗದೆ ಪರದಾಡುತ್ತಿರುವ ರಾಯಚೂರು ವಿದ್ಯಾರ್ಥಿಗಳು

    ಈ ಹಿಂದೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮಾತನಾಡಿ, ರಷ್ಯಾದ ಟಾರ್ಗೆಟ್ ನಂಬರ್ ಒನ್ ನಾನಾಗಿದ್ದೇನೆ. ರಷ್ಯಾದ ವಿಶೇಷ ಪಡೆಗಳು ಹತ್ಯೆ ಮಾಡಲು ಸಂಚು ಮಾಡುತ್ತೀವೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನಮ್ಮ ತ್ರಿವರ್ಣ ಧ್ವಜ ಇದ್ದ ಬಸ್‌ಗಳನ್ನು ನೋಡಿದಾಗ ಮತ್ತೆ ಬದುಕಿದಂತಾಯ್ತು: ವಿದ್ಯಾರ್ಥಿನಿ

  • ನಮ್ಮ ತ್ರಿವರ್ಣ ಧ್ವಜ ಇದ್ದ ಬಸ್‌ಗಳನ್ನು ನೋಡಿದಾಗ ಮತ್ತೆ ಬದುಕಿದಂತಾಯ್ತು: ವಿದ್ಯಾರ್ಥಿನಿ

    ನಮ್ಮ ತ್ರಿವರ್ಣ ಧ್ವಜ ಇದ್ದ ಬಸ್‌ಗಳನ್ನು ನೋಡಿದಾಗ ಮತ್ತೆ ಬದುಕಿದಂತಾಯ್ತು: ವಿದ್ಯಾರ್ಥಿನಿ

    ಬೆಂಗಳೂರು: ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಯಿಂದ ಪುಟ್ಟ ರಾಷ್ಟ್ರ ಉಕ್ರೇನ್ ಕಂಗೆಟ್ಟಿದ್ದು, ವಿದ್ಯಾಭ್ಯಾಸಕ್ಕಾಗಿ ಭಾರತದಿಂದ ತೆರಳಿದ ವಿದ್ಯಾರ್ಥಿಗಳು ಜೀವ ಭಯದಲ್ಲಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ತಮ್ಮ ತಾಯ್ನಾಡಿಗೆ ಕರೆದುಕೊಂಡು ಬರುವಲ್ಲಿ ಸತತ ಪ್ರಯತ್ನ ನqಯುತ್ತಿದ್ದು, ಈಗಾಗಲೇ ಹಲವಾರು ಮಂದಿ ವಾಪಸ್ಸಾಗಿದ್ದು, ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತೆಯೇ ವಿದ್ಯಾರ್ಥಿನಿಯೊಬ್ಬಳು ತಮ್ಮ ದೇಶದ ಧ್ವಜ ಇರುವ ಬಸ್ ಕಂಡಾಗ ಆದ ಸಂತಸವನ್ನು ಶೇರ್ ಮಾಡಿಕೊಂಡಿದ್ದಾಳೆ.

    ಹೌದು. ಉಕ್ರೇನ್ ನಿಂದ ವಾಪಾಸ್ ಆದ ವಿದ್ಯಾರ್ಥಿನಿ ದೀಪಿಕಾ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಮ್ಮ ಹತ್ತಿರದ ಸಿಟಿಗಳಲ್ಲಿ ಬಾಂಬ್ ಬ್ಲಾಸ್ಟ್ ಆಗ್ತಿದ್ರಿಂದ ಭಯ ಆಗಿತ್ತು. ನಿರಂತರವಾಗಿ ನಾವು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೆವು. ಯಾವಾಗ ನಮ್ಮ ತ್ರಿವರ್ಣ ಧ್ವಜ ಇದ್ದ ಬಸ್ಸುಗಳನ್ನ ನೋಡಿದ್ವೋ ಮತ್ತೆ ಬದುಕಿದಂತಾಯ್ತು. ನಮ್ಮ ದೇಶಕ್ಕೆ ಬಂದ ಕೂಡಲೇ ನಮ್ಮ ತಾಯಿಯನ್ನ ನೋಡಿದಂತಾಯ್ತು ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ಒಂದು ಯುದ್ಧದಿಂದ ತಪ್ಪಿಸಿಕೊಂಡು ಉಕ್ರೇನ್‍ಗೆ ಬಂದ್ರೆ ಇನ್ನೊಂದು ಯುದ್ಧ ಪ್ರಾರಂಭವಾಗಿದೆ: ಅಫ್ಘಾನ್ ನಿವಾಸಿ

    ಅಲ್ಲಿದ್ದಾಗ ತುಂಬಾ ಭಯ ಆಗ್ತಿತ್ತು. ಏನ್ ಮಾಡೋದು ಗೊತ್ತಾಗ್ತಿರಲಿಲ್ಲ. ಅಲ್ಲಿನ ನಿವಾಸಿಗಳನ್ನ ಕೇಳಿದಾಗ ಏನೂ ಆಗಲ್ಲ ಅಂತ ಧೈರ್ಯ ಹೇಳುತ್ತಿದ್ದರು. ಯಾವಾಗ ಯುದ್ಧ ಆಗುತ್ತೆ ಅನ್ನೋದು ಪಕ್ಕಾ ಆಯ್ತೋ ಟಿಕೆಟ್ ಬುಕ್ ಮಾಡೋಕೆ ಹೊದೆವು. ಎಲ್ಲರೂ ಟಿಕೆಟ್ ಬುಕ್ ಮಾಡೋಕೆ ಶುರು ಮಾಡಿದ್ರಿಂದ ಟಿಕೆಟ್ ದರ ಸಹ ಸಿಕ್ಕಾಪಟ್ಟೆ ಜಾಸ್ತಿ ಆಯ್ತು. ಮತ್ತೆ ನಾವು ಬದುಕಿ ಬರ್ತೀವೋ, ಇಲ್ಲವೋ ಅನ್ನೋ ಭಯ ಶುರುವಾಗಿತ್ತು. 2014 ರಲ್ಲೂ ಇದೇ ದರ ಯುದ್ಧ ಭಯ ಇತ್ತಂತೆ. ಏನೂ ಆಗಲ್ಲ ಅಂತ ಅಲ್ಲಿನ ಜನ ನಮಗೆ ಧೈರ್ಯ ಹೇಳುತ್ತಿದ್ದರು ಎಂದು ತಮಗಾದ ಭೀಕರ ಅನುಭವವನ್ನು ದೀಪಿಕಾ ಬಿಚ್ಚಿಟ್ಟಳು. ಇದನ್ನೂ ಓದಿ: ಉಕ್ರೇನ್‍ಗೆ 65 ಕೋಟಿ ದೇಣಿಗೆ ನೀಡಿದ ಜಪಾನ್ ಉದ್ಯಮಿ

    ಉಕ್ರೇನ್ ಸರ್ಕಾರ ಉಳಿಯುತ್ತೆ ಅನ್ನೋ ವಿಶ್ವಾಸ ಇದೆ. ನಮ್ಮ ವಿದ್ಯಾಭ್ಯಾಸ ಮುಂದುವರಿಸಬೇಕು. ಅದಷ್ಟು ಬೇಗ ಎಲ್ಲ ಸರಿಹೋಗಬೇಕು. ಒಂದಿಬ್ಬರು ಮಾತ್ರ ಉಕ್ರೇನ್ ಗೆ ಹೋಗಿಲ್ಲ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಉಕ್ರೇನ್ ಮೇಲಿದೆ. ಮತ್ತೆ ಎಲ್ಲ ಸರಿಹೋಗಿ ನಾವು ನಮ್ಮ ವಿದ್ಯಾಭ್ಯಾಸ ಮುಂದುವರಿಸುವುದಾಗಿ ಅವರು ತಿಳಿಸಿದಳು. ಇದನ್ನೂ ಓದಿ: ಮೋದಿ ಜೀ, ಯೋಗಿ ಜೀ ಯಾರಿದ್ದೀರಿ..? ಪ್ಲೀಸ್ ನಮ್ಮನ್ನು ಕಾಪಾಡಿ- ಯುಪಿ ವಿದ್ಯಾರ್ಥಿನಿ ಅಳಲು

  • ಒಂದು ಯುದ್ಧದಿಂದ ತಪ್ಪಿಸಿಕೊಂಡು ಉಕ್ರೇನ್‍ಗೆ ಬಂದ್ರೆ ಇನ್ನೊಂದು ಯುದ್ಧ ಪ್ರಾರಂಭವಾಗಿದೆ: ಅಫ್ಘಾನ್ ನಿವಾಸಿ

    ಒಂದು ಯುದ್ಧದಿಂದ ತಪ್ಪಿಸಿಕೊಂಡು ಉಕ್ರೇನ್‍ಗೆ ಬಂದ್ರೆ ಇನ್ನೊಂದು ಯುದ್ಧ ಪ್ರಾರಂಭವಾಗಿದೆ: ಅಫ್ಘಾನ್ ನಿವಾಸಿ

    ಕೀವ್: ಅಫ್ಘಾನಿಸ್ತಾನದ ಯುದ್ಧವನ್ನು ತಪ್ಪಿಸಿಕೊಂಡು ಉಕ್ರೇನ್‍ಗೆ ಬಂದಿದ್ದೆ. ಆದರೆ ಇಲ್ಲಿ ಇನ್ನೊಂದು ಯುದ್ಧ ಪ್ರಾರಂಭವಾಗಿದೆ. ಇದು ನನ್ನ ದುರಾದೃಷ್ಟವಾಗಿದೆ ಎಂದು ಸಂತ್ರಸ್ತ ಅಜ್ಮಲ್ ರಹಮಾನಿ ಹೇಳಿದರು.

    ಪೋಲೆಂಡ್‍ಗೆ ದಾಟಿದ ಸ್ವಲ್ಪ ಸಮಯದ ನಂತರ ಮಾತನಾಡಿದ ಅವರು, ಒಂದು ವರ್ಷದ ಹಿಂದೆ ಅಫ್ಘಾನಿಸ್ತಾನವನ್ನು ತೊರೆದು ಉಕ್ರೇನ್‍ನಲ್ಲಿ ನೆಲೆಸಿದ್ದೆವು. ಇಲ್ಲಿ ಶಾಂತಿಯಿಂದ ನೆಲೆಸಿದ್ದೆವು. ಆದರೆ ಇಲ್ಲೂ ಕಳೆದ 5 ದಿನಗಳಿಂದ ಯುದ್ಧ ಪ್ರಾರಂಭವಾಗಿದ್ದು, ನಾನು ಹಾಗೂ ನನ್ನ ಕುಟುಂಬ ಪಲಾಯನ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಅಳಲುತೊಡಿಕೊಂಡರು.

    ಅಫ್ಘಾನಿಸ್ತಾನದಲ್ಲಿದ್ದಾಗ ನನಗೆ ಸ್ವಂತ ಮನೆ ಕಾರು ಇತ್ತು. ಕುಟುಂಬದ ಜೊತೆ ಉತ್ತಮವಾಗಿ ಜೀವನ ನಡೆಸುತ್ತಿದ್ದೆ. ಆದರೆ ಅಫ್ಘಾನಿಸ್ತಾನದಲ್ಲಿ ಯುದ್ಧ ಪ್ರಾರಂಭವಾದಾಗ ಎಲ್ಲವೂ ಬದಲಾಗಿದೆ. ನಾನು ಎಲ್ಲವನ್ನೂ ಕಳೆದುಕೊಂಡೆ. ಅಲ್ಲಿಂದ ನಾನು ನನ್ನ ಕುಟುಂಬ ಪಾರಾಗಿ ಉಕ್ರೇನ್‍ಗೆ ಬಂದೆವು. ಆದರೆ ಈಗ ಇಲ್ಲೂ ಅದೇ ಸ್ಥಿತಿ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಟೂತ್‌ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಪ್ರಾಣ ಬಿಟ್ಟಳು

    ರಷ್ಯಾ ದಾಳಿಗೆ ಉಕ್ರೇನ್ ತತ್ತರಿಸಿದೆ. ಉಕ್ರೇನ್‍ನಿಂದ ಜೀವ ಉಳಿಸಿಕೊಳ್ಳಲು ಜನ ಹರಸಾಹಸ ಪಡುತ್ತಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಂಕರ್‍ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇನ್ನೂ ಕೆಲವು ಜನರು ಬೇರೆ ದೇಶಗಳಿಗೆ ತಲುಪಲು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಜೀವ ಉಳಿಸಿಕೊಂಡು ಬಂದಿರೋ ವಿದ್ಯಾರ್ಥಿಗಳಿಗೆ ಹೊಸ ಟೆನ್ಶನ್!

  • ಮೋದಿ ಜೀ, ಯೋಗಿ ಜೀ ಯಾರಿದ್ದೀರಿ..? ಪ್ಲೀಸ್ ನಮ್ಮನ್ನು ಕಾಪಾಡಿ- ಯುಪಿ ವಿದ್ಯಾರ್ಥಿನಿ ಅಳಲು

    ಮೋದಿ ಜೀ, ಯೋಗಿ ಜೀ ಯಾರಿದ್ದೀರಿ..? ಪ್ಲೀಸ್ ನಮ್ಮನ್ನು ಕಾಪಾಡಿ- ಯುಪಿ ವಿದ್ಯಾರ್ಥಿನಿ ಅಳಲು

    ಕೀವ್: ರಷ್ಯಾ- ಉಕ್ರೇನ್ ನಡುವಿನ ಸಂಘರ್ಷಕ್ಕೆ ಇಂದು 5ನೇ ದಿನ. ಕಾರ್ಕಿವ್, ಕೀವ್ ನಗರಗಳನ್ನ ವಶಕ್ಕೆ ಪಡೆಯಲು ರಷ್ಯಾ ಸೇನೆ ತೀವ್ರ ಕಸರತ್ತು ನಡೆಸುತ್ತಿದ್ದು, ರಷ್ಯಾ ಸೇನೆಗೆ, ಉಕ್ರೇನ್ ಸೇನೆಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಆದರೂ ಪಟ್ಟು ಬಿಡದ ಉಕ್ರೇನ್ ಸೇನೆಯು ರಷ್ಯಾ ಸೈನಿಕರನ್ನು ಸದೆಬಡೆಯುತ್ತಿದೆ. ಈ ಮಧ್ಯೆ ವಿದ್ಯಾಭ್ಯಾಸಕ್ಕೆ ತೆರಳಿದ ವಿದ್ಯಾರ್ಥಿಗಳು ತಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸುವಂತೆ ಭಯ, ಆತಂಕದಿಂದಲೇ ವೀಡಿಯೋ ಮಾಡಿಕೊಂಡು ಅಳಲು ತೋಡಿಕೊಳ್ಳುತ್ತಿದ್ದಾರೆ.

    ಉತ್ತರ ಪ್ರದೇಶ ವಿದ್ಯಾರ್ಥಿನಿ ಗರ್ವಾಮಿಶ್ರ ವೀಡಿಯೋ ಮಾಡಿ ಕಣ್ಣೀರು ಹಾಕಿದ್ದಾಳೆ. ನನಗೆ ಅನ್ನಿಸುತ್ತಿದೆ ನಮಗೆ ಇಲ್ಲಿ ಯಾವುದೇ ಸಹಾಯ ಸಿಗುವುದಿಲ್ಲ. ಭಾರತೀಯ ರಾಯಭಾರಿ ಕಚೇರಿಗೆ ಕರೆ ಮಾಡುತ್ತಿದ್ದೇವೆ. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾಳೆ. ಇದನ್ನೂ ಓದಿ: ಉಕ್ರೇನ್ ಜನರ ಸಹಾಯಕ್ಕೆ ನಿಂತ ಇಸ್ಕಾನ್‍ಗೆ ಭಾರೀ ಮೆಚ್ಚುಗೆ

    ಪ್ರತಿ ದಿನ ರಾತ್ರಿ ಬಂಕರ್ ಒಳಗೆ ನುಗ್ಗಲು ರಷ್ಯಾ ಸೈನಿಕರು ಯತ್ನಿಸುತ್ತಿದ್ದಾರೆ. ಗೇಟ್ ಒಡೆದು ಹಂಗಾಮ ಮಾಡ್ತಿದ್ದಾರೆ. ಇಲ್ಲಿಂದ ರೈಲು, ಕಾರಿನಲ್ಲಿ ಪೊಲೆಂಡ್ ಗಡಿಗೆ ತಲುಪಲು ಯತ್ನಿಸಿದವರ ಮೇಲೆ ಹಲ್ಲೆಗಳಾಗಿದೆ, ನಾಪತ್ತೆಯಾಗಿದ್ದಾರೆ. ರಷ್ಯಾ ಸೈನಿಕರು ಫೈರಿಂಗ್ ಮಾಡಿದ್ದಾರೆ. ಭಾರತೀಯ ವಿದ್ಯಾರ್ಥಿನಿಯರನ್ನು ಅಪಹರಿಸಿದ್ದಾರೆ. ಅವರನ್ನು ಎಲ್ಲಿಗೆ ಕರೆದೊಯ್ದಿದ್ದಾರೆ, ಏನು ಮಾಡಿದ್ದಾರೆ ಎಂಬುದು ತಿಳಿದಿಲ್ಲ. ವಿದ್ಯಾರ್ಥಿಗಳ ಬಗ್ಗೆಯೂ ಮಾಹಿತಿ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾಳೆ. ಇದನ್ನೂ ಓದಿ: ಉಕ್ರೇನ್‍ನಿಂದ ಜೀವ ಉಳಿಸಿಕೊಂಡು ಬಂದಿರೋ ವಿದ್ಯಾರ್ಥಿಗಳಿಗೆ ಹೊಸ ಟೆನ್ಶನ್!

    ರುಮೇನಿಯಾ ಗಡಿಯಲ್ಲೂ ಸೈನಿಕರು ಹಲ್ಲೆ ಮಾಡುತ್ತಿದ್ದಾರೆ. ಮೋದಿ ಜೀ, ಯೋಗಿ ಜೀ ಯಾರಿದ್ದೀರಿ. ನಮ್ಮನ್ನು ಕಾಪಾಡಿ. ನಮನ್ನು ರಕ್ಷಣೆ ಮಾಡುತ್ತಾರೆಂಬ ಭರವಸೆ ಇಲ್ಲ. ನಮಗಿಲ್ಲಿ ಏನಾಗುತ್ತೋ ಗೊತ್ತಿಲ್ಲ. ಯಾರಿದ್ದೀರಿ..? ಎಲ್ಲಿದ್ದೀರಿ..? ದಯಮಾಡಿ ನಮ್ಮನ್ನು ಕಾಪಾಡಿ. ಭಾರತೀಯ ಸೇನೆಯನ್ನು ಕಳುಹಿಸಿ ನಮ್ಮನ್ನು ರಕ್ಷಿಸಿ. ನಾವು ಬದುಕುತ್ತಿವೋ, ಸಾಯುತ್ತಿವೋ ಗೊತ್ತಿಲ್ಲ. ದಯಮಾಡಿ.. ದಯಮಾಡಿ ನಮ್ಮನ್ನು ರಕ್ಷಿಸಿ. ಭಾರತೀಯ ರಾಯಭಾರಿ ನಮ್ಮ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಜೈಹಿಂದ್, ಜೈ ಭಾರತ್ ಎಂದು ಹೇಳುತ್ತಾ ಕಣ್ಣೀರು ಸುರಿಸಿ ರಕ್ಷಿಸುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

  • ಗನ್ ಹಿಡಿದು ದೇಶ ರಕ್ಷಣೆಗೆ ನಿಂತ ಮಿಸ್ ಉಕ್ರೇನ್

    ಗನ್ ಹಿಡಿದು ದೇಶ ರಕ್ಷಣೆಗೆ ನಿಂತ ಮಿಸ್ ಉಕ್ರೇನ್

    ಕೀವ್: ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸಿ ಹೋಗುತ್ತಿದೆ. ರಷ್ಯದ ಅಟ್ಟಹಾಸ 5ನೇ ದಿನವೂ ಮುಂದುವರಿದಿದೆ. ಉಕ್ರೇಮ್ ಅಧ್ಯಕ್ಷ ವ್ಲಾಡಿಮಿರ್ ಝೆಲನ್‍ಸ್ಕಿ ಅವರು ದೇಶ ರಕ್ಷಣೆಯಲ್ಲಿ ಪಾಲ್ಗೊಳ್ಳಿ ಎನ್ನುವ ಕರೆ ನೀಡಿದ ಹಿನ್ನೆಲೆಯಲ್ಲಿ ಮಿಸ್ ಉಕ್ರೇನ್ ದೇಶ ರಕ್ಷಣೆಗೆ ಗನ್ ಹಿಡಿದು ನಿಂತಿದ್ದಾರೆ.

    ಮಿಸ್ ಉಕ್ರೇನ್ ಆಗಿರುವ ಅನಾಸ್ತೀನಾ ಲೀನಾ(Anastasiia Lenna)ಅವರು 2015ರಲ್ಲಿ ಮಿಸ್ ಗ್ರ್ಯಾಂಡ್ ಇನ್‍ಟರ್‌ನ್ಯಾಷನಲ್‌ (Miss Grand International) ಬ್ಯೂಟಿ ಸ್ಪರ್ಧೆಯಲ್ಲಿ ಗೆದ್ದಿದ್ದರು. ಇದೀಗ ದೇಶ ರಕ್ಷಣೆ ಮಾಡಲು ಉಕ್ರೇನ್ ಸೈನ್ಯವನ್ನು ಸೇರಿಕೊಂಡಿದ್ದಾರೆ. ಕೈಯಲ್ಲಿ ಗನ್ ಹಿಡಿದು, ಸಮವಸ್ತ್ರವನ್ನು ಧರಿಸಿ ನಿಂತಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಲೀನಾ ಅವರು ಸ್ಲಾವಿಟಿಕ್‌ ಯೂನಿವರ್ಸಿಟಿ ಕೀವ್‌ನಲ್ಲಿ  (Slavistik University in Kyiv) ವಿದ್ಯಾಭ್ಯಾಸವನ್ನು ಮಾಡಿದ್ದಾರೆ.

    ಅನಾಸ್ತೀನಾ ಲೀನಾ ಉಕ್ರೇನ್ ಸೇನೆ ಸೇರುತ್ತಿದ್ದಂತೆ ಉಕ್ರೇನ್ ಮೇಯರ್ ವಿಟಾಲಿ ಕ್ಲಿಟ್ಸ್ಚ್ಕೋ (Vitali Klitschko) ಕೂಡಾ ಸೇನೆಗೆ ಸೇರ್ಪಡೆಗೊಂಡಿದ್ದಾರೆ. ಹೆಚ್ಚಿನವರು ದೇಶ ಸೇವೆ ಮಾಡಲು ಸಿದ್ಧರಿದ್ದಾರೆ. ಆದರೆ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಕೇಳುತ್ತಿದ್ದಾರೆ. ಹೆಚ್ಚಿನವರು ಮಿಲಿಟರಿ ಹಿನ್ನೆಲೆಯುಳ್ಳವರಾಗಿದ್ದಾರೆ. ಎಲ್ಲಾ ಮಹಿಳೆಯರು ಹಾಗೂ ಪುರುಷರು ದೇಶ ರಕ್ಷಣೆಗೆ ಗನ್ ಹಿಡಿದು ಸಿದ್ಧರಾಗಬೇಕು ಎಂದು ವಿಟಾಲಿ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಜೀವ ಉಳಿಸಿಕೊಂಡು ಬಂದಿರೋ ವಿದ್ಯಾರ್ಥಿಗಳಿಗೆ ಹೊಸ ಟೆನ್ಶನ್!

    ಉಕ್ರೇನ್ ಉಳಿವಿಗಾಗಿ ಮಹಿಳೆಯರು ಅಖಾಡಕ್ಕಿಳಿದಿದ್ದಾರೆ. ಉಕ್ರೇನ್ ಉಪಾಧ್ಯಕ್ಷ ಸ್ಟೀಫನ್ ಕುಬಿವ್ ಪತ್ನಿ ಸೇರಿದಂತೆ 36 ಸಾವಿರಕ್ಕೂ ಹೆಚ್ಚು ಮಹಿಳಾ ಯೋಧರು ಇದ್ದಾರೆ. ಇದನ್ನೂ ಓದಿ: ತಲೆಕೆಳಗಾದ ರಷ್ಯಾದ ಲೆಕ್ಕಾಚಾರ – ರಾಜಧಾನಿ ಕಿವ್‌ ಇನ್ನೂ ಕೈವಶವಾಗಿಲ್ಲ ಯಾಕೆ?

  • ಉಕ್ರೇನ್ ಜನರ ಸಹಾಯಕ್ಕೆ ನಿಂತ ಇಸ್ಕಾನ್‍ಗೆ ಭಾರೀ ಮೆಚ್ಚುಗೆ

    ಉಕ್ರೇನ್ ಜನರ ಸಹಾಯಕ್ಕೆ ನಿಂತ ಇಸ್ಕಾನ್‍ಗೆ ಭಾರೀ ಮೆಚ್ಚುಗೆ

    ಕೀವ್: ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸಿದೆ. ಈ ಮಧ್ಯೆ ಇಸ್ಕಾನ್ ದೇವಸ್ಥಾನವು ಅಗ್ಯವಿರುವ ಜನರಿಗೆ ದೇವಾಲಯದ ದ್ವಾರಗಳನ್ನು ತೆರೆದಿದೆ. ಉಕ್ರೇನ್‍ನಾದ್ಯಂತ ಇರುವ ಇಸ್ಕಾನ್ ದೇವಾಲಯಗಳು ಉಕ್ರೇನ್ ಜನರಿಗೆ ಸೇವೆ ಸಲ್ಲಿಸುತ್ತಿದೆ. ಅವರಿಗೆ ಆಹಾರ ಪೂರೈಕೆ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಸದ್ಯ ಇದರ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.

    ಈ ಬಗ್ಗೆ ಕೊಲ್ಕತ್ತಾದ ಇಸ್ಕಾನ್ ಉಪಾಧ್ಯಕ್ಷ ರಾಧಾರಾಮನ್ ದಾಸ್ ಮಾತನಾಡಿ, ಇಸ್ಕಾನ್‍ನ ಭಕ್ತರು ಹಾಗೂ ದೇವಾಲಯ ಸಮಿತಿಯೂ ಸಂಕಷ್ಟದಲ್ಲಿರುವವರಿಗೆ ಸೇವೆ ಸಲ್ಲಿಸಲು ಬದ್ಧವಾಗಿದೆ. ಕಷ್ಟದಲ್ಲಿರುವವರ ಸೇವೆಗಾಗಿ ನಮ್ಮ ದೇವಾಲಯದ ಬಾಗಿಲು ತೆರೆದಿದೆ ಎಂದು ತಿಳಿಸಿದರು.

    ಉಕ್ರೇನ್‍ನಲ್ಲಿ ಇಸ್ಕಾನ್ 54 ಕ್ಕೂ ಅಧಿಕ ದೇವಾಲಯಗಳನ್ನು ಹೊಂದಿದೆ. ಕಷ್ಟದಲ್ಲಿರುವವರಿಗೆ ಯಾವುದೇ ರೀತಿಯಲ್ಲಿಯಾದರೂ ಸೇವೆ ಸಲ್ಲಿಸಲು ನಾವು ಪ್ರಯತ್ನಿಸುತ್ತೇವೆ ಎಂದರು. ಇದನ್ನೂ ಓದಿ: ಉಕ್ರೇನ್‍ನಿಂದ ಜೀವ ಉಳಿಸಿಕೊಂಡು ಬಂದಿರೋ ವಿದ್ಯಾರ್ಥಿಗಳಿಗೆ ಹೊಸ ಟೆನ್ಶನ್!

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರಿಂದ ಹಲವಾರು ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ. ಒಟ್ಟಾರೆ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಜನರ ಜಾತಿ, ಧರ್ಮ ಮತ್ತು ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೇ ಇಸ್ಕಾನ್ ಆಹಾರವನ್ನು ಹಂಚಿರುವುದು ಮಾನವೀಯತೆಯನ್ನು ಎತ್ತಿ ತೋರಿಸುವಂತಿದೆ ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ತಲೆಕೆಳಗಾದ ರಷ್ಯಾದ ಲೆಕ್ಕಾಚಾರ – ರಾಜಧಾನಿ ಕಿವ್‌ ಇನ್ನೂ ಕೈವಶವಾಗಿಲ್ಲ ಯಾಕೆ?

  • ತಲೆಕೆಳಗಾದ ರಷ್ಯಾದ ಲೆಕ್ಕಾಚಾರ – ರಾಜಧಾನಿ ಕಿವ್‌ ಇನ್ನೂ ಕೈವಶವಾಗಿಲ್ಲ ಯಾಕೆ?

    ತಲೆಕೆಳಗಾದ ರಷ್ಯಾದ ಲೆಕ್ಕಾಚಾರ – ರಾಜಧಾನಿ ಕಿವ್‌ ಇನ್ನೂ ಕೈವಶವಾಗಿಲ್ಲ ಯಾಕೆ?

    ಕೀವ್‌: ಯುದ್ಧ ಘೋಷಣೆಯಾದ ಬಳಿಕ ರಷ್ಯಾ ಸುಲಭವಾಗಿ ಉಕ್ರೇನ್‌ ದೇಶವನ್ನು ಗೆಲ್ಲಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಈಗ ಉಕ್ರೇನ್ ಪ್ರಭಲವಾಗಿ ಹೋರಾಟ ಮಾಡುತ್ತಿದ್ದು ರಷ್ಯಾದ ಲೆಕ್ಕಾಚಾರ ತಲೆಕೆಳಗಾಗಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.

    ಹೌದು. ಆರಂಭದಲ್ಲಿ ಉಕ್ರೇನ್‌ ವಾಯುನೆಲೆಯನ್ನು ಧ್ವಂಸಗೊಳಿಸಿದ್ದ ರಷ್ಯಾ ನಂತರ ಮಿಲಿಟರಿ ಕಾರ್ಯಾಚರಣೆ ಆರಂಭಿಸಿತ್ತು. ಸುಲಭವಾಗಿ ಉಕ್ರೇನ್‌ ಗಡಿಯನ್ನು ನುಗ್ಗಿದ್ದ ಟ್ಯಾಂಕರ್‌ಗಳು ಹಲವು ನಗರಗಳನ್ನು ವಶ ಪಡಿಸಿಕೊಂಡಿತ್ತು. ಆದರೆ ರಾಜಧಾನಿ ಕಿವ್‌ ನಗರವನ್ನು ವಶಪಡಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ.

    ರಷ್ಯಾ ಸೇನೆ ಉಕ್ರೇನ್ ನಾಗರಿಕದಿಂದ ತೀವ್ರ ಪ್ರತಿರೋಧ ಎದುರಿಸುತ್ತಿದೆ. ಉಕ್ರೇನ್ ಅಧ್ಯಕ್ಷರೇ ಮುಂದೆ ನಿಂತು 30ಸಾವಿರಕ್ಕೂ ಹೆಚ್ಚು ರೈಫಲ್, ಮಷಿನ್ ಗನ್, ಪಿಸ್ತೂಲ್‍ಗಳನ್ನು ಸಾರ್ವಜನಿಕರಿಗೆ ಹಂಚಿಬಿಟ್ಟಿದ್ದಾರೆ. ಜನಾಕ್ರೋಶ ಮತ್ತಷ್ಟು ಹೆಚ್ಚಿದರೇ ರಷ್ಯಾ ಸೇನೆಗೆ ಉಕ್ರೇನ್ ವಶ ಕಷ್ಟಸಾಧ್ಯ. ಎರಡೂ ಕಡೆಯೂ ಭಾರೀ ಪ್ರಾಣ ನಷ್ಟ ಉಂಟಾಗುವ ಆತಂಕ ಎದುರಾಗಿದೆ. ಇದನ್ನೂ ಓದಿ: ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!

    ಜನರಿಂದ ಭಾರೀ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ಈಗ ಜನ ವಸತಿಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ತನ್ನ ಸೈನಿಕರತ್ತ ಪೆಟ್ರೋಲ್‌ ಬಾಂಬ್‌ ಎಸೆಯುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ತೈಲ ಸಂಗ್ರಹಗಳ ಮೇಲೆ ದಾಳಿ ನಡೆಸಿ ಸ್ಟೋಟಗೊಳಿಸುತ್ತಿದೆ. ಇದರಿಂದಾಗಿ ಸಾಮಾಗ್ರಿ ಸಾಗಾಟ, ನೀರಿಗೆ ಸಮಸ್ಯೆಯಾಗಿದೆ.

    ರಷ್ಯಾ ಬೆಂಬಲಿತ ಬಂಡುಕೋರರ ವಶದಿಂದ 2014ರಲ್ಲಿ ಡಾನ್ ಬಾಸ್ ಪ್ರಾಂತ್ಯದ ಇಲೋವೈಸ್ಕ್ ನಗರ ವಶಕ್ಕೆ ತೆಗೆದುಕೊಳ್ಳಲು ಉಕ್ರೇನ್‍ಗೆ 50 ದಿನ ಹಿಡಿದಿತ್ತು. ಅತ್ತ, ಇರಾಕ್‍ನ ಮೊಸುಲ್ ನಗರ ವಶಕ್ಕೆ ತೆಗೆದುಕೊಳ್ಳಲು ಅಮೆರಿಕಾಗೆ ಬರೋಬ್ಬರಿ ನಾಲ್ಕು ತಿಂಗಳು ಬೇಕಾಗಿತ್ತು. ಇದನ್ನೂ ಓದಿ: Russia-Ukraine Crisis: ರಷ್ಯಾಗೆ ಮತ್ತೊಂದು ಶಾಕ್ – SWIFTನಿಂದ ರಷ್ಯಾವನ್ನು ದೂರವಿಡಲು ತೀರ್ಮಾನ

    ಸೋವಿಯತ್ ಪಡೆಗಳನ್ನು ಆಫ್ಘಾನಿಸ್ತಾನದಿಂದ ಓಡಿಸಲು ಅಮೆರಿಕಾ ಅಲ್ಲಿನ ಉಗ್ರರಿಗೆ ದೊಡ್ಡಮಟ್ಟದಲ್ಲಿ ಸಣ್ಣ ಆಯುಧಗಳನ್ನೇ ನೀಡಿತ್ತು. ಉಕ್ರೇನ್‍ನಲ್ಲಿಯೂ ಇದೇ ವ್ಯೂಹ ರಚನೆ ಆಗಿದೆ ಜನರೇ ಪ್ರತಿದಾಳಿ ನಡೆಸಿ ರಷ್ಯಾ ಸೇನೆಯನ್ನು ಹಿಮ್ಮೆಟ್ಟಿಸುತ್ತಿದ್ದಾರೆ.

  • ಉಕ್ರೇನ್ ನೆರವಿಗೆನಿಂತ ಎಲೋನ್ ಮಸ್ಕ್ – ಸ್ಟಾರ್ ಲಿಂಕ್ ಸ್ಯಾಟಲೈಟ್ ಮೂಲಕ ಬ್ರಾಡ್‍ಬ್ಯಾಂಡ್ ಸೇವೆ

    ಉಕ್ರೇನ್ ನೆರವಿಗೆನಿಂತ ಎಲೋನ್ ಮಸ್ಕ್ – ಸ್ಟಾರ್ ಲಿಂಕ್ ಸ್ಯಾಟಲೈಟ್ ಮೂಲಕ ಬ್ರಾಡ್‍ಬ್ಯಾಂಡ್ ಸೇವೆ

    ಕೀವ್: ರಷ್ಯಾ, ಉಕ್ರೇನ್ ಮೇಲೆ ದಾಳಿ ನಡೆಸಿ ಇಂಟರ್‌ನೆಟ್ ಸೇವೆಗಳನ್ನು ಕಡಿತಗೊಳಿಸುತ್ತಿದ್ದಂತೆ ಎಲೆಕ್ಟ್ರಿಕ್‌ ಕಾರು ಕಂಪನಿ ಟೆಸ್ಲಾದ ಸ್ಥಾಪಕ‌ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಉಕ್ರೇನ್ ನೆರವಿಗೆ ಧಾವಿಸಿದ್ದಾರೆ.

    ಸ್ಟಾರ್ ಲಿಂಕ್ ಸ್ಯಾಟಲೈಟ್ ಮೂಲಕ ಉಕ್ರೇನ್‍ನಲ್ಲಿ ಬ್ರಾಡ್‍ಬ್ಯಾಂಡ್ ಸೇವೆಗಳನ್ನು ಆರಂಭಿಸಿ, ಇಂಟರ್‌ನೆಟ್ ಸೇವೆಗಳನ್ನು ಮರಳಿಸಿದೆ. ಟೆರ್ಮಿನಲ್ ಸಹ ಶುರುಮಾಡುವುದಾಗಿ ಎಲೋನ್ ಮಸ್ಕ್ ಘೋಷಿಸಿದ್ದಾರೆ. ಇದರಿಂದ ಉಕ್ರೇನ್ ದೇಶದಲ್ಲಿ ಸಂವಹನ ವ್ಯವಸ್ಥೆ ಮತ್ತೆ ಸಹಜ ಸ್ಥಿತಿಗೆ ಬಂದಿದೆ. ಇದಲ್ಲದೆ ರಷ್ಯಾಗೆ ಹೆದರಿ ಉಕ್ರೇನ್ ಬೆಂಬಲಕ್ಕೆ ನೇರವಾಗಿ ಧಾವಿಸಲು ಹೆದರುತ್ತಿರುವ ದೇಶಗಳ ಮಧ್ಯೆ ಹ್ಯಾಕರ್‌ಗಳ ಗುಂಪೊಂದು ಉಕ್ರೇನ್ ನಾಗರಿಕರ ಬೆಂಬಲಕ್ಕೆ ಧಾವಿಸಿದೆ. ರಷ್ಯಾ ಮೇಲೆ ಸೈಬರ್ ಯುದ್ಧವನ್ನು ಪ್ರಕಟಿಸಿದೆ. ರಷ್ಯಾದ ನೂರಾರು ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿದೆ. ಚೆಚನ್ಯ ಸರ್ಕಾರದ ವೆಬ್‍ಸೈಟ್ ಹ್ಯಾಕ್ ಮಾಡಿರುವ ಅಪರಿಚಿತ ಹ್ಯಾಕರ್‌ಗಳ ಗುಂಪು, 12 ಗಂಟೆಗಳ ಕಾಲ ರಷ್ಯಾವನ್ನು ಆಟ ಆಡಿಸಿದೆ. ಇದನ್ನೂ ಓದಿ: ಮಸ್ಕ್‌ ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಬಳಸಿದರೆ ರಷ್ಯಾದಲ್ಲಿ ದಂಡ

    ಇತ್ತ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಉಕ್ರೇನ್ ಮೇಲಿನ ರಷ್ಯಾ ದಾಳಿ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ದಾಳಿಯನ್ನು ಖಂಡಿಸ್ತಿದ್ದಾರೆ. ಮತ್ತೆ ಕೆಲವರು ರಷ್ಯಾದ ಪುಟಿನ್ ನಡೆಯನ್ನು ಸ್ವಾಗತಿಸಿದ್ದಾರೆ. ಇನ್ನೊಂದಿಷ್ಟು ಮಂದಿ ಪುಟಿನ್ ಹಾದಿಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯೂ ನಡೆಯಬೇಕೆಂದು ಬಯಸ್ತಿದ್ದಾರೆ. ಪಾಕಿಸ್ತಾನದ ಅಧೀನದಲ್ಲಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು, ಚೀನಾ ಅಧೀನದಲ್ಲಿರುವ ಅಕ್ಸಾಯ್‍ಚಿನ್ ಪ್ರದೇಶಗಳನ್ನು ಭಾರತ ಸರ್ಕಾರ ಸೈನಿಕ ದಾಳಿ ನಡೆಸುವ ಮೂಲಕ ವಶಕ್ಕೆ ಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: ಮಸ್ಕ್‌ಗೆ ಅಂಬಾನಿ ಸೆಡ್ಡು – ಜಿಯೋದಿಂದ ಬರಲಿದೆ ಸ್ಯಾಟಲೈಟ್ ಇಂಟರ್‌ನೆಟ್

    ಪುಟಿನ್ ಅಖಂಡ ರಷ್ಯಾಗಾಗಿ ಈ ದಾಳಿ ನಡೆಸಿದ್ದು, ಮೋದಿ ಕೂಡ ಅಖಂಡ ಭಾರತಕ್ಕಾಗಿ ಹೋರಾಟ ಶುರು ಮಾಡಬೇಕು ಎನ್ನುತ್ತಿದ್ದಾರೆ. ಅಖಂಡ ಭಾರತ ಅಂದ್ರೆ ಚೀನಾ, ಪಾಕಿಸ್ತಾನದಲ್ಲಿರುವ ವಿವಾದಾತ್ಮಕ ಪ್ರಾಂತ್ಯಗಳನ್ನು ಭಾರತ ಮತ್ತೆ ವಶಕ್ಕೆ ಪಡೆಯುವುದಾಗಿದೆ. ಈ ಬೇಡಿಕೆಯನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಹಲವರು ಆಗಾಗ ಮುಂದಿಡುತ್ತಲೇ ಬರುತ್ತಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.