Tag: Russia Terror Attack

  • ಅನಾಗರಿಕ ಭಯೋತ್ಪಾದಕ ಕೃತ್ಯ: ಉಗ್ರರ ದಾಳಿಗೆ ಪುಟಿನ್‌ ಆಕ್ರೋಶ

    ಅನಾಗರಿಕ ಭಯೋತ್ಪಾದಕ ಕೃತ್ಯ: ಉಗ್ರರ ದಾಳಿಗೆ ಪುಟಿನ್‌ ಆಕ್ರೋಶ

    ಮಾಸ್ಕೋ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ (Moscow) ನಡೆದ ಉಗ್ರರ ದಾಳಿಯು ಅನಾಗರಿಕ ಭಯೋತ್ಪಾದಕ ಕೃತ್ಯ (Russia Terror Attack) ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಬೇಸರ ಹೊರಹಾಕಿದ್ದಾರೆ.

    ರಕ್ತಸಿಕ್ತ, ಬರ್ಬರ ಭಯೋತ್ಪಾದಕ ಕೃತ್ಯಕ್ಕೆ ಸಂಬಂಧಿಸಿದಂತೆ ನಾನು ಇಂದು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ದಾಳಿಯಲ್ಲಿ ಅಮಾಯಕರು, ಶಾಂತಿಪ್ರಿಯ ಜನರು ಬಲಿಯಾಗಿದ್ದಾರೆ. ನಾನು ಮಾ.24 ಅನ್ನು ರಾಷ್ಟ್ರೀಯ ಶೋಕಾಚರಣೆಯ ದಿನವೆಂದು ಘೋಷಿಸುತ್ತೇನೆ ಎಂದು ಪುಟಿನ್ (Vladimir Putin) ದೂರದರ್ಶನದ ಭಾಷಣದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಭೀಕರ ಭಯೋತ್ಪಾದಕ ದಾಳಿ ಪ್ರಕರಣ – 11 ಮಂದಿ ಬಂಧನ

    ದಾಳಿಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಠಿಣ ಪ್ರತೀಕಾರ ನೀಡುವುದಾಗಿ ರಷ್ಯಾ ಅಧ್ಯಕ್ಷರು ಪ್ರತಿಜ್ಞೆ ಮಾಡಿದ್ದಾರೆ. ‘ಜನರನ್ನು ಕೊಂದ ಭಯೋತ್ಪಾದಕ ದಾಳಿಯ ಎಲ್ಲಾ ನಾಲ್ಕು ಅಪರಾಧಿಗಳನ್ನು ಬಂಧಿಸಲಾಗಿದೆ. ಭಯೋತ್ಪಾದಕರು, ಕೊಲೆಗಾರರು, ಮಾನವರಲ್ಲದವರು ಪ್ರತೀಕಾರದ ಭವಿಷ್ಯವನ್ನು ಎದುರಿಸುತ್ತಾರೆ. ಹೆಚ್ಚುವರಿ ಭದ್ರತಾ ಕ್ರಮಗಳನ್ನು ದೇಶಾದ್ಯಂತ ಕೈಗೊಳ್ಳಲಾಗಿದೆ’ ಎಂದು ಪುಟಿನ್‌ ಹೇಳಿದ್ದಾರೆ.

    ಮಾಸ್ಕೋದಲ್ಲಿ ನಡೆದ ದಾಳಿಗೂ ಉಕ್ರೇನ್‌ಗೂ ಸಂಬಂಧವಿದೆ. ಬಂಧಿತ ನಾಲ್ವರು ದಾಳಿಕೋರರು ಉಕ್ರೇನ್ ಕಡೆಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ದಾಳಿಕೋರರನ್ನು ರಷ್ಯಾದಿಂದ ಗಡಿ ದಾಟಿಸಲು ಉಕ್ರೇನಿಯನ್ ಕಡೆಯ ಕೆಲವರು ಸಿದ್ಧತೆ ನಡೆಸಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯು ತೋರಿಸಿದೆ ಎಂದು ಪುಟಿನ್‌ ಆರೋಪಿಸಿದ್ದಾರೆ. ಇದನ್ನೂ ಓದಿ: ಮಾಸ್ಕೋದಲ್ಲಿ ಉಗ್ರರ ದಾಳಿ ಬಗ್ಗೆ ಮೊದಲೇ ಗೊತ್ತಿತ್ತು, ರಷ್ಯಾಗೂ ಎಚ್ಚರಿಕೆ ನೀಡಿತ್ತು – ಅಮೆರಿಕ

    ಇಸ್ಲಾಮಿಕ್ ಸ್ಟೇಟ್ (ISIS) ಭೀಕರ ದಾಳಿಯ ಹೊಣೆಗಾರಿಕೆ ಹೊತ್ತುಕೊಂಡಿದೆ. ಆದರೆ ಸಮರ್ಥನೀಯ ಯಾವುದೇ ಪುರಾವೆಗಳನ್ನು ಒದಗಿಸಲಿಲ್ಲ.

  • ರಷ್ಯಾದಲ್ಲಿ ಭೀಕರ ಭಯೋತ್ಪಾದಕ ದಾಳಿ ಪ್ರಕರಣ – 11 ಮಂದಿ ಬಂಧನ

    ರಷ್ಯಾದಲ್ಲಿ ಭೀಕರ ಭಯೋತ್ಪಾದಕ ದಾಳಿ ಪ್ರಕರಣ – 11 ಮಂದಿ ಬಂಧನ

    – ದಾಳಿಗೆ ಮೃತಪಟ್ಟವರ ಸಂಖ್ಯೆ 110 ಕ್ಕೆ ಏರಿಕೆ

    ಮಾಸ್ಕೋ: ಇಲ್ಲಿನ ಕನ್ಸರ್ಟ್‌ ಹಾಲ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ 11 ಶಂಕಿತರನ್ನು ಬಂಧಿಸಲಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

    ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಭಯೋತ್ಪಾದಕ (Russia Terror Attack) ದಾಳಿಯಿಂದ 110 ಮಂದಿ ಸಾವನ್ನಪ್ಪಿದ್ದಾರೆ. 145 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ರಕರಣದಲ್ಲಿ ನಾಲ್ವರು ಬಂದೂಕುಧಾರಿಗಳು ಸೇರಿದಂತೆ 11 ಶಂಕಿತರನ್ನು ಅರೆಸ್ಟ್‌ ಮಾಡಲಾಗಿದೆ. ಇದನ್ನೂ ಓದಿ: ರಷ್ಯಾದಲ್ಲಿ ಉಗ್ರರ ಅಟ್ಟಹಾಸ- 70ಕ್ಕೂ ಹೆಚ್ಚು ಮಂದಿ ದುರ್ಮರಣ

    ದಾಳಿಕೋರರು ಉಕ್ರೇನ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ. ಭಯೋತ್ಪಾದಕ ದಾಳಿ ನಡೆಸಿದ ನಂತರ, ಅಪರಾಧಿಗಳು ರಷ್ಯಾ-ಉಕ್ರೇನಿಯನ್ ಗಡಿಯನ್ನು ದಾಟಲು ಉದ್ದೇಶಿಸಿದ್ದರು. ಉಕ್ರೇನಿಯನ್ ಭಾಗದಲ್ಲಿ ಸೂಕ್ತ ಸಂಪರ್ಕಗಳನ್ನು ಹೊಂದಿದ್ದರು ಎಂದು ರಷ್ಯಾದ ಭದ್ರತಾ ಸಂಸ್ಥೆ ಹೇಳಿದೆ.

    ರಷ್ಯಾ ಆರೋಪವನ್ನು ಉಕ್ರೇನ್‌ ಅಲ್ಲಗಳೆದಿದೆ. ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಉಕ್ರೇನ್‌ ಪ್ರೆಸಿಡೆನ್ಸಿಯು ತಿಳಿಸಿದೆ. ಉಕ್ರೇನ್‌ ಸ್ಪಷ್ಟನೆ ಬೆನ್ನಲ್ಲೇ, ಇಸ್ಲಾಮಿಕ್ ಸ್ಟೇಟ್ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿದೆ. ನಮ್ಮ ಸಹಚರರು ಮಾಸ್ಕೋದ ಹೊರವಲಯದಲ್ಲಿರುವ ದೊಡ್ಡ ಸಭೆ ಮೇಲೆ ದಾಳಿ ಮಾಡಿದರು. ನಂತರ ಸುರಕ್ಷಿತವಾಗಿ ತಮ್ಮ ನೆಲೆಗಳಿಗೆ ಹಿಂದಿರುಗಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ರಷ್ಯಾದಲ್ಲಿ ನಡೆದ ಭೀಕರ ದಾಳಿ ಖಂಡಿಸಿದ ಪ್ರಧಾನಿ ಮೋದಿ

    ಚಹರೆ ಮರೆಮಾಚುವ ಸಮವಸ್ತ್ರ ಧರಿಸಿದ್ದ ದಾಳಿಕೋರರು ಕಟ್ಟಡ ಪ್ರವೇಶಿಸಿ ಗುಂಡು ಹಾರಿಸಿದ್ದಾರೆ. ಗ್ರೆನೇಡ್‌ ಅಥವಾ ಬಾಂಬ್‌ಗಳನ್ನು ಎಸೆದಿರಬಹುದು. ಸಭಾಂಗಣದಿಂದ ಜ್ವಾಲೆ ಮತ್ತು ಕಪ್ಪು ಹೊಗೆ ಹೊಮ್ಮುತ್ತಿರುವ ದೃಶ್ಯದ ವೀಡಿಯೋಗಳು ಎಲ್ಲೆಡೆ ವೈರಲ್‌ ಆಗಿವೆ.

    ಮೂರು ಹೆಲಿಕಾಪ್ಟರ್‌ಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ. ಸಾವಿರಾರು ಮಂದಿ ಸೇರುವಷ್ಟು ವಿಸ್ತೀರ್ಣವಿದ್ದ ಕನ್ಸರ್ಟ್ ಹಾಲ್‌ ಮೇಲೆ ಯೋಜಿತ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಮಾಸ್ಕೋದಲ್ಲಿ ಉಗ್ರರ ದಾಳಿ ಬಗ್ಗೆ ಮೊದಲೇ ಗೊತ್ತಿತ್ತು, ರಷ್ಯಾಗೂ ಎಚ್ಚರಿಕೆ ನೀಡಿತ್ತು – ಅಮೆರಿಕ