Tag: run

  • ನಾನ್‍ ಸ್ಟ್ರೈಕರ್ ರನೌಟ್‍ನಿಂದ ಪಾರಾಗಲು ಹೊಸ ಐಡಿಯಾ ಹುಡುಕಿದ ಗ್ಲೆನ್ ಫಿಲಿಪ್ಸ್

    ನಾನ್‍ ಸ್ಟ್ರೈಕರ್ ರನೌಟ್‍ನಿಂದ ಪಾರಾಗಲು ಹೊಸ ಐಡಿಯಾ ಹುಡುಕಿದ ಗ್ಲೆನ್ ಫಿಲಿಪ್ಸ್

    ಸಿಡ್ನಿ: ವಿಶ್ವ ಕ್ರಿಕೆಟ್‍ನಲ್ಲಿ ಮಂಕಡಿಂಗ್, ರನೌಟ್ ಎಂದು ಐಸಿಸಿ (ICC) ನಿಯಮ ಜಾರಿಗೆ ತಂದ ಬಳಿಕ ನಾನ್‍ ಸ್ಟ್ರೈಕರ್ ಬ್ಯಾಟ್ಸ್‌ಮ್ಯಾನ್‌ಗಳಿಗೆ ಸ್ಟ್ರೈಕ್ ಬಿಡುವ ಮುನ್ನ ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ವಿಶ್ವಕಪ್ (T20 World Cup) ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand) ತಂಡದ ಆಟಗಾರ ಗ್ಲೆನ್ ಫಿಲಿಪ್ಸ್ (Glenn Phillips) ನಾನ್‍ ಸ್ಟ್ರೈಕರ್ ರನೌಟ್‍ನಿಂದ ಪಾರಾಗಲು ಹೊಸ ಐಡಿಯಾ ಮಾಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಬೌಲರ್ ಬಾಲ್ ಎಸೆಯುವ ಮುನ್ನ ನಾನ್‍ ಸ್ಟ್ರೈಕರ್ ಆಟಗಾರ ಕ್ರೀಸ್‌ ಬಿಟ್ಟು ಓಡಲು ಮುಂದಾದರೆ ಬೌಲರ್‌ಗೆ ರನೌಟ್ ಮಾಡುವ ಅವಕಾಶವಿದೆ. ಹಾಗಾಗಿ ಬೌಲರ್‌ಗಳು ನಾನ್‍ ಸ್ಟ್ರೈಕರ್ ಬ್ಯಾಟ್ಸ್‌ಮ್ಯಾನ್‌ ಕಡೆ ಕಣ್ಣಿಟ್ಟು ರನೌಟ್‍ಗೆ ಮುಂದಾಗುತ್ತಿದ್ದಾರೆ. ಈ ನಡುವೆ ಶ್ರೀಲಂಕಾ (Srilanka) ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಫಿಲಿಪ್ಸ್ ನಾನ್‍ ಸ್ಟ್ರೈಕರ್ ರನೌಟ್‍ನಿಂದ ಪಾರಾಗಲು ಹೊಸ ಪರಿಹಾರ ಕಂಡುಕೊಂಡಿದ್ದು, ಬೌಲರ್ ಬಾಲ್ ಎಸೆಯುವ ಮುನ್ನ 100 ಮೀ. ಓಟಕ್ಕೂ ಮುನ್ನ ಓಟಗಾರ ಯಾವರೀತಿ ಸಿದ್ಧನಾಗುತ್ತಾನೊ ಅದೇ ರೀತಿ ರನ್‍ಗಾಗಿ ಓಡಲು ಫಿಲಿಪ್ಸ್ ಸಿದ್ಧರಾಗಿ ಓಡಿ ತೋರಿಸಿದ್ದಾರೆ. ಇದನ್ನೂ ಓದಿ: ಸತತ ಸೋಲಿನ ರುಚಿ – ಭಾರತದ ಗೆಲುವಿಗಾಗಿ ಪಾಕ್ ತಂಡ ಪ್ರಾರ್ಥನೆ

    ಇದೀಗ ಫಿಲಿಪ್ಸ್ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಪಂದ್ಯದಲ್ಲಿ ಫಿಲಿಪ್ಸ್ ತನ್ನ ಭರ್ಜರಿ ಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ 65 ರನ್‍ಗಳ ಭರ್ಜರಿ ಜಯ ಗಳಿಸಲು ನೆರವಾದರು.

    ಕೇವಲ 7 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕಿವೀಸ್ ತಂಡಕ್ಕೆ ಫಿಲಿಪ್ಸ್ 104 ರನ್ (64 ಎಸೆತ, 10 ಬೌಂಡರಿ, 4 ಸಿಕ್ಸ್) ಚಚ್ಚಿ ಪುಟಿದೇಳುವಂತೆ ಮಾಡಿದರು. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಬಾರಿಸಿ ಶ್ರೀಲಂಕಾಗೆ 168 ರನ್‍ಗಳ ಗುರಿ ನೀಡಿತು. ಇದನ್ನೂ ಓದಿ: ಮಂಕಡ್‌ಗೆ ಸಮ್ಮತಿ – ಬಾಲ್‌ ಎಸೆಯುವ ಮುನ್ನ ನಾನ್‍ಸ್ಟ್ರೈಕ್‍ ಬಿಟ್ಟರೆ ಉಳಿಗಾಲವಿಲ್ಲ

    ನ್ಯೂಜಿಲೆಂಡ್‌ ನೀಡಿದ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಕಿವೀಸ್ ಬೌಲರ್‌ಗಳ ಉರಿ ದಾಳಿಗೆ ನಲುಗಿ ಕಂಗಾಲಾಯಿತು. ಟ್ರೆಂಡ್ ಬೌಲ್ಟ್ ಬೆಂಕಿ ಬೌಲಿಂಗ್‍ಗೆ ಪತರುಗುಟ್ಟಿದ ಶ್ರೀಲಂಕಾ ಕೇವಲ 19.2 ಓವರ್‌ಗಳಲ್ಲಿ 102 ರನ್‍ಗಳಿಗೆ ಆಲೌಟ್ ಆಯಿತು. ಬೌಲ್ಟ್ 4 ವಿಕೆಟ್ ಕಿತ್ತು ಮಿಂಚಿದರು.

    Live Tv
    [brid partner=56869869 player=32851 video=960834 autoplay=true]

  • ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಸೌಂಥಾಂಪ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಕ್ಯಾಪ್ಟನ್‍ಶಿಪ್ ನಿರ್ವಹಿಸುವ ಮೂಲಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತನಗೆ ನಾಯಕತ್ವದ ಪಾಠ ಹೇಳಿಕೊಟ್ಟ ಗುರುವಿನ ದಾಖಲೆ ಮುರಿದಿದ್ದಾರೆ.

    ವಿರಾಟ್ ಕೊಹ್ಲಿ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಟಾಸ್ ಆದ ಬೆನ್ನಲ್ಲೇ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ ದಾಖಲೆಯನ್ನು ಮುರಿದಿದ್ದಾರೆ. ಧೋನಿ ಇವರೆಗೆ ಒಟ್ಟು 60 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರೆ, ವಿರಾಟ್ ಕೊಹ್ಲಿ 61ನೇ ಪಂದ್ಯದಲ್ಲಿ ನಾಯಕತ್ವ ವಹಿಸುವ ಮೂಲಕ ತನ್ನ ನಾಯಕತ್ವದ ಗುರುವಿನ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇದನ್ನೂ ಓದಿ: ದಾಖಲೆ ಬರೆದ ವಿರಾಟ್ ಕೊಹ್ಲಿ

    ಧೋನಿ ಒಟ್ಟು 60 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿ 27 ಪಂದ್ಯದಲ್ಲಿ ಜಯ, 18 ಪಂದ್ಯ ಸೋಲು ಮತ್ತು 15 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ವಿರಾಟ್ ಒಟ್ಟು 61 ಪಂದ್ಯ 36 ಪಂದ್ಯ ಜಯ, 14 ಪಂದ್ಯ ಸೋಲು, 10 ಪಂದ್ಯ ಡ್ರಾ ಮಾಡಿಕೊಂಡಿದ್ದಾರೆ. 2014ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದ ಚುಕ್ಕಾನಿ ಹಿಡಿದಿದ್ದರು. ಬಳಿಕ ತಂಡವನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ನಂ 1 ಸ್ಥಾನಕ್ಕೇರಿಸಿ, ಇದೀಗ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ಗೆ ಏರಿಸಿದ ಕೀರ್ತಿ ವಿರಾಟ್‍ಗೆ ಸಲ್ಲುತ್ತದೆ. ಇದನ್ನೂ ಓದಿ: WTC ಫೈನಲ್ ಭಾರತ, ನ್ಯೂಜಿಲೆಂಡ್ ತಂಡದ ವೇಗಿಗಳ ಬಲಾಬಲ

    ಕೊಹ್ಲಿ ನಾಯಕತ್ವ ಮಾತ್ರವಲ್ಲದೆ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ವೈಯಕ್ತಿಕವಾಗಿ ಟೆಸ್ಟ್ ಕ್ರಿಕೆಟ್‍ನಲ್ಲಿ ವೇಗವಾಗಿ 7500ಕ್ಕೂ ಅಧಿಕ ರನ್ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಮೈಲಿಗಲ್ಲನ್ನು ನೆಟ್ಟಿದ್ದಾರೆ. ಈ ಮೊದಲು ಸಚಿನ್ ತೆಂಡೂಲ್ಕರ್ 144 ಟೆಸ್ಟ್ ಪಂದ್ಯಗಳಿಂದ 7500ರನ್ ಸಿಡಿಸಿದರೆ, ಬಳಿಕ ಸುನಿಲ್ ಗಾವಸ್ಕರ್ 154 ಟೆಸ್ಟ್ ಪಂದ್ಯಗಳಿಂದ 7500ರನ್ ಸಿಡಿಸಿದ್ದರು. ಇದೀಗ ಕೊಹ್ಲಿ 92 ಟೆಸ್ಟ್ ಪಂದ್ಯದಿಂದ 7500 ರನ್ ಸಿಡಿಸಿ ಮಿಂಚಿದ್ದಾರೆ.

  • ಗಿನ್ನಿಸ್ ದಾಖಲೆಗಾಗಿ ಓಡುತ್ತಿರೋ ರಾಜಸ್ಥಾನದ ಓಟಗಾರ್ತಿಗೆ ನಾರಾಯಣ ಗೌಡ್ರಿಂದ ಸನ್ಮಾನ

    ಗಿನ್ನಿಸ್ ದಾಖಲೆಗಾಗಿ ಓಡುತ್ತಿರೋ ರಾಜಸ್ಥಾನದ ಓಟಗಾರ್ತಿಗೆ ನಾರಾಯಣ ಗೌಡ್ರಿಂದ ಸನ್ಮಾನ

    ಬೆಂಗಳೂರು: ಗಿನ್ನಿಸ್ ದಾಖಲೆಗಾಗಿ ಓಡುತ್ತಿರುವ ಓಟಗಾರ್ತಿ ಸೂಫಿಯಾರನ್ನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ನಾರಾಯಣಗೌಡ ಅವರು ವಿಧಾನಸೌಧದಲ್ಲಿ ಸ್ವಾಗತಿಸಿ, ಸನ್ಮಾನಿಸಿದರು.

    ಡಿಸೆಂಬರ್ ನಲ್ಲಿ ಡೆಲ್ಲಿಯಿಂದ ಓಟ ಆರಂಭಿಸಿ, ಇಂದು ಬೆಂಗಳೂರು ತಲುಪಿರುವ ಸೂಫಿಯಾ ಅವರು ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿ ಎಂದು ಇದೇ ವೇಳೆ ಸಚಿವರು ಶ್ಲಾಘಿಸಿದರು. ರಾಜಸ್ಥಾನ ಮೂಲದ ಸೂಫಿಯಾ ಡಿಸೆಂಬರ್ 16 ರಂದು ಇಂಡಿಯಾಗೇಟ್ ನಿಂದ ಓಟ ಆರಂಭಿಸಿದ್ದಾರೆ. Run for hope ಹೆಸರಿನಲ್ಲಿ ಓಟ ಆರಂಭಿಸಿರುವ ಸೂಫಿಯಾ 6 ಸಾವಿರ ಕಿ.ಮಿ. ದೂರವನ್ನ 135 ದಿನಗಳ ಒಳಗಾಗಿ ಓಡಿ ಗಿನ್ನಿಸ್ ದಾಖಲೆ ನಿರ್ಮಿಸಲು ಪಣತೊಟ್ಟಿದ್ದಾರೆ. Run for hope ಅಂದರೆ ಮಾನವೀಯತೆ, ಏಕತೆ, ಶಾಂತಿ, ಸಮಾನತೆ ಹಾಗೂ ಆರೋಗ್ಯಕರ ಜೀವನ ಶೈಲಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಈ ಓಟ ಆರಂಭಿಸಿದ್ದಾರೆ.

    2019 ರಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 4 ಸಾವಿರ ಕಿ.ಮಿ. ದೂರವನ್ನ ಕೇವಲ 87 ದಿನಗಳಲ್ಲಿ ಓಡಿ ಗಿನ್ನಿಸ್ ದಾಖಲೆ ನಿರ್ಮಿಸಿರುವ ರಾಜಸ್ಥಾನ ಮೂಲದ ಕುಮಾರಿ ಸೂಫಿಯಾ, ಈಗ ಇನ್ನೊಂದು ಗಿನ್ನಿಸ್ ದಾಖಲೆ ನಿರ್ಮಿಸುವ ಹಂತದಲ್ಲಿದ್ದಾರೆ. ಇಂಡಿಯಾಗೇಟ್ ನಿಂದ ಓಟ ಆರಂಭಿಸಿರುವ ಸೂಫಿಯಾ ಇಂದು ಬೆಂಗಳೂರು ತಲುಪಿದ್ದಾರೆ. ಸುಮಾರು 2400 ಕಿ.ಮೀ. ಕ್ರಮಿಸಿರುವ ಸೂಫಿಯಾ ಚೆನೈ ನತ್ತ ಓಟ ಮುಂದುವರಿಸಿದ್ದಾರೆ.

    ಈ ವೇಳೆ ಮಾತನಾಡಿದ ಸಚಿವರು, ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಓಟದಲ್ಲೂ ದಾಖಲೆ ನಿರ್ಮಿಸುತ್ತಿರುವ ಸೂಫಿಯಾ ಅವರ ಕಾರ್ಯಕ್ಕೆ ಶುಭಕೋರಿದರು. ಸೂಫಿಯಾ ಅವರ ಈ ಕಾರ್ಯ ಕ್ರೀಡಾಪಟುಗಳಿಗೆ, ಯುವ ಜನತೆಗೆ ಸ್ಪೂರ್ತಿಯಾಗಿದೆ. ಕ್ರೀಡಾ ಇಲಾಖೆಯ ಸಚಿವನಾಗಿ ಸೂಫಿಯಾ ಅವರನ್ನ ಗೌರವಿಸುತ್ತಿರುವುದು ಹೆಮ್ಮೆಯ ವಿಚಾರ ಅಂತ ತಿಳಿಸಿದ್ರು. ಈ ಹಿಂದೆ ಪುಣೆ ಮೂಲದ ಮಿಶೆಲ್ ಕಾಕಡೆ ಎಂಬವರು 190 ದಿನಗಳಲ್ಲಿ 6 ಸಾವಿರ ಕಿ.ಮೀ. ದೂರವನ್ನ ಓಡಿದ್ದರು. ಈಗ 135 ದಿನಗಳ ಒಳಗೆ ಈ ದೂರವನ್ನ ಓಡಿ ಗಿನ್ನಿಸ್ ದಾಖಲೆ ನಿರ್ಮಿಸಲು ಸೂಫಿಯಾ ಮುಂದಾಗಿದ್ದಾರೆ. ವೇಗದ ಮಹಿಳಾ ರನ್ನರ್ ಎಂಬ ಗೌರವಕ್ಕೆ ಪಾತ್ರರಾಗಿರುವ ಸೂಫಿಯಾ, 2018ರಲ್ಲಿ ಡೆಲ್ಲಿ-ಆಗ್ರಾ-ಜೈಪುರ್ ನಡುವೆ 16 ದಿನಗಳಲ್ಲಿ ಓಡಿ ಗುರಿ ತಲುಪಿದ್ದಾರೆ.

    2019ರಲ್ಲಿ 1000, 2000, 3000 ಕಿ.ಮೀ. ಓಡಿದ್ದಾರೆ. ದೆಹಲಿಯಿಂದ ಕೊಲ್ಕತ್ತಾ ಕ್ಕೆ 29 ದಿನಗಳಲ್ಲಿ ಓಡಿ ತಲುಪಿದ್ದಾರೆ. ಸೂಫಿಯಾ ವರ್ಷದ ಹಿಂದೆಯೆ Run for hope ಹೆಸರಿನಲ್ಲಿ ಓಡಿ ದಾಖಲೆ ನಿರ್ಮಿಸಬೇಕಿತ್ತು. ಆದರೆ ಕೋವಿಡ್ ಕಾರಣದಿಂದಾಗಿ 44 ದಿನಗಳಲ್ಲಿ 2200 ಕಿ.ಮೀ. ಓಡಿ ಅರ್ಧದಲ್ಲೆ ಓಟ ನಿಲ್ಲಿಸಿದ್ರು. ತಮ್ಮ ಕನಸನ್ನು ನನಸು ಮಾಡಲು ಡೆಲ್ಲಿಯಿಂದ ಮತ್ತೆ ಓಟ ಆರಂಭಿಸಿ, ಇಲ್ಲಿವರೆಗೆ ಸಾಗಿ ಬಂದಿದ್ದಾರೆ. ಸೂಫಿಯಾ ಅವರ ಜೊತೆಯಲ್ಲಿ ವಿಕಾಸ ಹಾಗೂ ಗುರ್ಲಿನ್ ಬಂದಿದ್ದಾರೆ. ವಿಕಾಸ್ ಅತ್ಯುತ್ತಮ ಸೈಕ್ಲಿಸ್ಟ್ ಆಗಿದ್ದಾರೆ. ಅಂದಹಾಗೆ ಸೂಫಿಯಾ ಈಗ ದಾಖಲೆ ನಿರ್ಮಿಸಿ, 2023 ರಲ್ಲಿ ಇಡಿ ವಿಶ್ವವನ್ನ ಎರಡು ವರ್ಷಗಳಲ್ಲಿ ಓಡಿ ಇನ್ನೊಂದು ಗಿನ್ನಿಸ್ ದಾಖಲೆ ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ.

  • ಕೀಪರ್ ಕೈಯಲ್ಲಿ ಚೆಂಡಿದ್ದರೂ 2 ರನ್ ಓಡಿದ ಬ್ಯಾಟ್ಸ್‌ಮನ್- ವೈರಲ್ ವೀಡಿಯೋ

    ಕೀಪರ್ ಕೈಯಲ್ಲಿ ಚೆಂಡಿದ್ದರೂ 2 ರನ್ ಓಡಿದ ಬ್ಯಾಟ್ಸ್‌ಮನ್- ವೈರಲ್ ವೀಡಿಯೋ

    ಲಂಡನ್: ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಾಕಷ್ಟು ಅದ್ಭುತಗಳು ನಡೆಯುತ್ತಿರುತ್ತವೆ. ಆದರೆ ಹಿಂದೆಂದೂ ನೋಡಿದರದಂತೆ ವಿಕೆಟ್ ಕೀಪರ್ ಕೈಯಲ್ಲಿ ಚೆಂಡಿದ್ದರು, ಬ್ಯಾಟ್ಸ್ ಮನ್ 2 ರನ್ ಓಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಯುರೋಪಿಯನ್ ಕ್ರಿಕೆಟ್ ಟೂರ್ನಿಯಲ್ಲಿ ಘಟನೆ ನಡೆದಿದ್ದು, ವಿಕೆಟ್ ಕೀಪರ್ ಕೈಯಲ್ಲಿ ಚೆಂಡಿದ್ದರು ಬ್ಯಾಟ್ಸ್ ಮನ್ 2 ಗಳಿಸಲು ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ.

    ಯುರೋಪಿಯನ್ ಕ್ರಿಕೆಟ್ ಲೀಗ್ ಭಾಗವಾಗಿ ಬಾರ್ಸಿಲೋನಾ ಸಿಸಿ ಮತ್ತು ಕ್ಯಾಂಟಲೂನ್ಯ ಟೈಗರ್ಸ್ ನಡುವೆ ಟಿ10 ಪಂದ್ಯ ನಡೆದಿತ್ತು. ಬಾರ್ಸಿಲೋನಾ ತಂಡಕ್ಕೆ ಗೆಲ್ಲಲು ಅಂತಿಮ ಎಸೆತದಲ್ಲಿ ಮೂರು ರನ್ ಗಳ ಅಗತ್ಯವಿತ್ತು. ಆದರೆ ಅಂತಿಮ ಎಸೆತವನ್ನು ಟಚ್ ಮಾಡಲು ವಿಫಲರಾದ ಸಂದರ್ಭದಲ್ಲಿ ಚೆಂಡು ನೇರ ವಿಕೆಟ್ ಕೀಪರ್ ಕೈ ಸೇರಿತ್ತು. ಆದರೆ ಈ ಹಂತದಲ್ಲಿ ಬ್ಯಾಟ್ಸ್ ಮನ್ ಒಂದು ರನ್ ಗಳಿಸಿದ್ದರು. ಆದರೆ ಚೆಂಡು ವಿಕೆಟ್ ಕೀಪರ್ ಕೈಯಲ್ಲಿದ್ದರು 2ನೇ ರನ್ ಓಡಲು ಸಿದ್ಧರಾದ ಬ್ಯಾಟ್ಸ್ ಮನ್ ರನ್ ಮಾಡಿದರು, ಆದರೆ ವಿಕೆಟ್ ಕೀಪರ್ ರನೌಟ್ ಮಾಡುವ ಬದಲು ಬೌಲರ್ ಬಳಿ ರನೌಟ್ ಮಾಡಲು ಹೇಳಿ ಚೆಂಡು ಎಸೆದಿದ್ದರು. ಆದರೆ ಬೌಲರ್ ರನೌಟ್ ಮಾಡಲು ವಿಫಲರಾದರು. ಇದರೊಂದಿಗೆ ಅಂತಿಮ ಎಸೆತದಲ್ಲಿ 2 ಗಳಿಸಿದ ಕಾರಣ ಪಂದ್ಯ ಟೈ ಆಗಿತ್ತು.

    ಪಂದ್ಯ ಟೈ ಆದ ಕಾರಣ ನಿಯಮಗಳಂತೆ ಫಲಿತಾಂಶಕ್ಕಾಗಿ ಗೋಲ್ಡನ್ ಬಾಲ್ ರೂಲ್ ಜಾರಿ ಮಾಡಿದ್ದರು. ಇದರಂತೆ ಗೋಲ್ಡನ್ ಬಾಲ್‍ನಲ್ಲಿ ಬಾರ್ಸಿಲೋನಾ ತಂಡ ಕೇವಲ 1 ರನ್ ಗಳಿಸಿದ ಕಾರಣ ಕ್ಯಾಂಟಲೂನ್ಯ ಟೈಗರ್ಸ್ ತಂಡ ಗಲುವು ಪಡೆಯಿತು. ಯುರೋಪಿನ್ ಟೂರ್ನಿಯಲ್ಲಿ ವಿಜೇತರನ್ನು ಇದೇ ನಿಯಮದ ಅಡಿ ಆಯ್ಕೆ ಮಾಡಲಾಗುತ್ತದೆ. ಪಂದ್ಯ ಟೈ ಆದ ಸಂದರ್ಭದಲ್ಲಿ ತಂಡಗಳಿಗೆ ಗೋಲ್ಡನ್ ಬಾಲ್ ಅವಕಾಶ ನೀಡಲಾಗುತ್ತದೆ. ಈ ಎಸೆತದಲ್ಲಿ ಯಾವ ತಂಡ 2 ರನ್ ಗಳಿಗಿಂತ ಹೆಚ್ಚು ರನ್ ಗಳಿಸುತ್ತೋ ಆ ತಂಡವನ್ನು ಜಯಶಾಲಿ ಎಂದು ನಿರ್ಧರಿಸಲಾಗುತ್ತದೆ.

  • ಪಾಂಟಿಂಗ್ ದಾಖಲೆ ಮುರಿದು ವಿಶ್ವ ದಾಖಲೆ ನಿರ್ಮಿಸಿದ ರನ್ ಮೆಷಿನ್

    ಪಾಂಟಿಂಗ್ ದಾಖಲೆ ಮುರಿದು ವಿಶ್ವ ದಾಖಲೆ ನಿರ್ಮಿಸಿದ ರನ್ ಮೆಷಿನ್

    ಪುಣೆ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಅನೇಕ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಶುಕ್ರವಾರ ಶ್ರೀಲಂಕಾ ವಿರುದ್ಧ ನಡೆದ ಕೊನೆಯ ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.

    ಪುಣೆಯ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಒಂದು ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಎಲ್ಲಾ ಮೂರು ಮಾದರಿಯ ಕ್ರಿಕೆಟ್‍ನಲ್ಲಿ ಅತಿ ವೇತವಾಗಿ 11,000 ರನ್ ಗಳಿಸಿದ ದಾಖಲೆ ಬರೆದಿದ್ದಾರೆ. ಕೊಹ್ಲಿ ತಮ್ಮ 169ನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದರು. ಈ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ.

    ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 11,000 ರನ್ ಗಳಿಸಿದ ಬ್ಯಾಟ್ಸ್‍ಮನ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಕಳೆದ ವರ್ಷ ಜೂನ್‍ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಮ್ಯಾಂಚೆಸ್ಟರ್‍ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

    31 ವರ್ಷದ ವಿರಾಟ್ 84 ಟೆಸ್ಟ್‍ಗಳಿಂದ 7,202 ರನ್ ಮತ್ತು 242 ಏಕದಿನ ಪಂದ್ಯಗಳಿಂದ 11,609 ರನ್ ಗಳಿಸಿದ್ದಾರೆ. ಜೊತೆಗೆ ಎಲ್ಲಾ ಮೂರು ಮಾದರಿಯಲ್ಲಿ ಸರಾಸರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಇದು ಅವರ ಮತ್ತೊಂದು ದಾಖಲೆಯಾಗಿದೆ.

    ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಂತರ ಮೂರು ಸ್ವರೂಪಗಳಲ್ಲಿ 11,000 ರನ್ ಗಳಿಸಿದ ಎರಡನೇ ಭಾರತೀಯ ನಾಯಕ ಕೊಹ್ಲಿ ಆಗಿದ್ದಾರೆ. ವಿರಾಟ್ ಕೊಹ್ಲಿ 11,000 ರನ್ ಗಳಿಸಿದ ಕ್ಲಬ್‍ನ ಇತರ ಎಲ್ಲಾ ನಾಯಕರಿಗಿಂತ ಅತ್ಯಧಿಕ ಸರಾಸರಿಯನ್ನು ಹೊಂದಿದ್ದಾರೆ.

    ರಿಕಿ ಪಾಂಟಿಂಗ್, ಗ್ರೇಮ್ ಸ್ಮಿತ್, ಸ್ಟೀಫನ್ ಫ್ಲೆಮಿಂಗ್, ಎಂಎಸ್ ಧೋನಿ ಮತ್ತು ಅಲನ್ ಬಾರ್ಡರ್ ನಂತರ ಈ ಸಾಧನೆ ಮಾಡಿದ ಆರನೇ ನಾಯಕ ವಿರಾಟ್ ಕೊಹ್ಲಿ ಆಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಪಾಂಟಿಂಗ್ 324 ಪಂದ್ಯಗಳಲ್ಲಿ 15,440 ರನ್ ಗಳಿಸಿದರೆ, ಗ್ರೇಮ್ ಸ್ಮಿತ್ 286 ಪಂದ್ಯಗಳಲ್ಲಿ 14,878 ರನ್, ಸ್ಟೀಫನ್ ಫ್ಲೆಮಿಂಗ್ 303 ಪಂದ್ಯಗಳಲ್ಲಿ 11,561 ರನ್, ಎಂ.ಎಸ್.ಧೋನಿ 332 ಪಂದ್ಯಗಳಲ್ಲಿ 11,207 ರನ್ ಮತ್ತು ಅನಲ್ ಬಾರ್ಡರ್ 271 ಪಂದ್ಯಗಳಲ್ಲಿ 11,062 ರನ್ ಗಳಿಸಿದ್ದಾರೆ. ಈ ಕ್ಲಬ್‍ಗೆ ಸೇರಿದ ವಿರಾಟ್ ತಮ್ಮ 196ನೇ ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದಾರೆ.

    ಅತಿ ವೇಗವಾಗಿ 11,000 ರನ್ ಗಳಿಸಿದ ನಾಯಕ ಎಂಬ ದಾಖಲೆ ರಿಕಿ ಪಾಂಟಿಂಗ್ ಹೆಸರಿನಲ್ಲಿತ್ತು. ಅವರು ಅದನ್ನು 252 ಇನ್ನಿಂಗ್ಸ್ ಗಳಲ್ಲಿ ಈ ದಾಖಲೆ ಮಾಡಿದ್ದರು. ಟೀ ಇಂಡಿಯಾ ಮಾಜಿ ನಾಯಕ ಧೋನಿ 324 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

    ಇಂದೋರ್‍ನಲ್ಲಿ ಶ್ರೀಲಂಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ ಟಿ20ಯಲ್ಲಿ 1,000 ರನ್ ಗಳಿಸಿದ ವೇಗದ ನಾಯಕ ಎಂಬ ವಿಶ್ವ ದಾಖಲೆ ಬರೆದಿದ್ದರು. ಕೊಹ್ಲಿ ತಮ್ಮ 30ನೇ ಇನ್ನಿಂಗ್ಸ್ ನಲ್ಲಿ ನಾಯಕನಾಗಿ ಈ ಸಾಧನೆ ಮಾಡಿದ್ದರು.

  • ಕೊಹ್ಲಿ V/s ರೋಹಿತ್: ಮೊದಲ ಸ್ಥಾನಕ್ಕಾಗಿ ಪೈಪೋಟಿ

    ಕೊಹ್ಲಿ V/s ರೋಹಿತ್: ಮೊದಲ ಸ್ಥಾನಕ್ಕಾಗಿ ಪೈಪೋಟಿ

    ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವಿನ ರನ್ ಗಳಿಕೆಯ ಪೈಪೋಟಿ ಮುಂದುವರೆದಿದ್ದು, ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ಯಾರು ಟಾಪ್ ಸ್ಥಾನ ಪಡೆಯಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

    ಅಂತರಾಷ್ಟ್ರೀಯ ಟಿ20 ಮಾದರಿಯಲ್ಲಿ ರೋಹಿತ್ ಶರ್ಮಾ 93 ಇನ್ನಿಂಗ್ಸ್ ಗಳಲ್ಲಿ 2,539 ರನ್ ಗಳಿಸಿದ್ದು, ಕೊಹ್ಲಿ 67 ಇನ್ನಿಂಗ್ಸ್ ಗಳಲ್ಲಿ 2,450 ರನ್ ಗಳಿಸಿದ್ದಾರೆ. ಇದರೊಂದಿಗೆ ಟಿ20 ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 2 ಸ್ಥಾನಗಳಲ್ಲಿ ರೋಹಿತ್, ಕೊಹ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ನ್ಯೂಜಿಲೆಂಡ್ ಆಟಗಾರ ಮಾರ್ಟಿನ್ ಗಪ್ಟಿಲ್ 2,436 ರನ್ ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸರಣಿಯಲ್ಲಿ ರೋಹಿತ್ ಶರ್ಮಾ ತಮ್ಮ ನಂ.1 ಸ್ಥಾನವನ್ನು ಉಳಿಸಿಕೊಳ್ಳುತ್ತಾರಾ ಅಥವಾ ಕೊಹ್ಲಿ ಈ ಸ್ಥಾನ ಪಡೆಯುತ್ತಾರಾ ಎಂಬ ಕುತೂಹಲ ಮೂಡಿದೆ. ಅಲ್ಲದೇ ಟಿ-20 ಮಾದರಿಯಲ್ಲಿ 50+ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲೂ ಕೊಹ್ಲಿ, ರೋಹಿತ್ ಶರ್ಮಾ ನಡುವೆ ಪೈಪೋಟಿ ಸಾಗಿದ್ದು, ಇಬ್ಬರು ಆಟಗಾರರೂ ತಲಾ 22 ಬಾರಿ 50+ ರನ್ ಗಳಿಸಿ ಜಂಟಿಯಾಗಿ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ 18 ಅರ್ಧ ಶತಕ, 4 ಶತಕ ಗಳಿಸಿದ್ದರೆ, ಕೊಹ್ಲಿ 22 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ಪಟ್ಟಿಯಲ್ಲೂ ಮಾರ್ಟಿನ್ ಗಪ್ಟಿಲ್ 17 ಅರ್ಧ ಶತಕಗಳೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಶುಕ್ರವಾರದಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಹೈದರಾಬಾದ್‍ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ.

  • ಅ.2ರಂದು ಬೆಂಗಳೂರಿನಲ್ಲಿ ಓಡುತ್ತಾ ಪ್ಲಾಸ್ಟಿಕ್ ಸಂಗ್ರಹಿಸಿ

    ಅ.2ರಂದು ಬೆಂಗಳೂರಿನಲ್ಲಿ ಓಡುತ್ತಾ ಪ್ಲಾಸ್ಟಿಕ್ ಸಂಗ್ರಹಿಸಿ

    ಬೆಂಗಳೂರು: ಗಾಂಧಿ ಜಯಂತಿಯಂದು ಬೆಂಗಳೂರಿನ 50 ಕಡೆ ಓಡುವ ಜತೆಗೆ ಪ್ಲಾಸ್ಟಿಕ್ ತೆಗೆಯುವ ಕಾರ್ಯಕ್ರಮವನ್ನು ಬಿಬಿಎಪಿ ಆಯೋಜಿಸಿದೆ.

    ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸಲು ಬಿಬಿಎಂಪಿ ಯುನೈಟೆಡ್ ವೇ ಇಂಡಿಯಾ ಮತ್ತು ಗೋ ನೇಟಿವ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದೆ. ಗಾಂಧಿ ಜಯಂತಿಯಂದು ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಬೆಳಗ್ಗೆ 7.30 ಕ್ಕೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಚಾಲನೆ ನೀಡಲಿದ್ದಾರೆ.

    ಪ್ರತಿಯೊಂದು ಜಾಗದಿಂದ ಕನಿಷ್ಟ 200 ರಿಂದ 250 ಮಂದಿ 3 ಕಿಮೀವರೆಗೂ ಓಡಲಿದ್ದಾರೆ. ಈ ವೇಳೆ ಸುತ್ತಮುತ್ತಲು ಕಾಣುವ ಪ್ಲಾಸ್ಟಿಕ್‍ನ್ನ ಸಂಗ್ರಹಿಸಲಿದ್ದಾರೆ. ಓಡುವ ವೇಳೆ ಕೈ ಚೀಲವನ್ನ ಸಹ ನೀಡಲಾಗುತ್ತದೆ. ಈ ಪ್ರಕಾರ ಟನ್‍ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವ ನಿರೀಕ್ಷೆ ಇದೆ ಎಂದು ಅನಿಲ್ ಕುಮಾರ್ ತಿಳಿಸಿದರು.

    ಮನೆ ಮನೆಗಳಿಂದಲೂ ಪೌರಕಾರ್ಮಿಕರು ಇಂದಿನಿಂದ ಅಕ್ಟೋಬರ್ 2 ರವರೆಗೂ ಪ್ಲಾಸ್ಟಿಕ್ ಕಸ ಸಂಗ್ರಹಿಸಲು ಸೂಚನೆ ನೀಡಲಾಗಿದೆ. ಈ ಪ್ರಕಾರ ವಾರ್ಡ್ ಪ್ಲಾಸ್ಟಿಕ್ ತಾಜ್ಯ ಮರುಬಳಕೆ ಇಲ್ಲವೇ ಸಿಮೆಂಟ್ ತಯಾರಿಕೆಗೆ ನೀಡಲು ಯೋಚಿಸಲಾಗಿದೆ ಎಂದು ವಿಶೇಷ ಆಯುಕ್ತ ರಂದೀಪ್ ತಿಳಿಸಿದರು.

  • ಆ್ಯಶಸ್ ಟೆಸ್ಟ್: 113 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಬ್ರೇಕ್

    ಆ್ಯಶಸ್ ಟೆಸ್ಟ್: 113 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಬ್ರೇಕ್

    ಲಂಡನ್: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಆ್ಯಶಸ್ ಟೆಸ್ಟ್ ಸರಣಿಯಲ್ಲಿ 113 ವರ್ಷಗಳ ಹಿಂದಿನ ಕೆಟ್ಟ ದಾಖಲೆಯನ್ನು ಇತ್ತಂಡಗಳ ಆರಂಭಿಕ ಆಟಗಾರರು ಮುರಿದಿದ್ದಾರೆ.

    ಇಂಗ್ಲೆಂಡ್ ನೆಲದಲ್ಲಿ ನಡೆದ ಈ ಸಾಲಿನ ಆ್ಯಶಸ್ ಟೂರ್ನಿ 2-2 ಅಂತರದಲ್ಲಿ ಟೈನೊಂದಿಗೆ ಅಂತ್ಯವಾಗಿದೆ. ಆದರೆ ಟೂರ್ನಿಯಲ್ಲಿ ಇತ್ತಂಡಗಳ ಆರಂಭಿಕ ಆಟಗಾರರು ಮಾತ್ರ ತೀವ್ರ ನಿರಾಸೆ ಮೂಡಿಸಿದ್ದು, 12.55ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಭಾನುವಾರ ಅಂತ್ಯವಾದ ಅಂತಿಮ ಟೆಸ್ಟ್ ನ 5ನೇ ದಿನದಾಟದಲ್ಲಿ ಆಸೀಸ್ ತಂಡದ ಡೇವಿಡ್ ವಾರ್ನರ್ 11 ರನ್ ಹಾಗೂ ಹ್ಯಾರಿಸ್ 09 ರನ್ ಗಳಿಸಿ ಔಟಾಗಿದ್ದರು. ಪರಿಣಾಮ ಐದು, ಅದಕ್ಕಿಂತ ಹೆಚ್ಚಿನ ಟೆಸ್ಟ್ ಪಂದ್ಯಗಳ ಟೂರ್ನಿಯಲ್ಲಿ ಇತ್ತಂಡಗಳ ಆರಂಭಿಕ ಆಟಗಾರರು ಗಳಿಸಿದ ಸರಾಸರಿ ಕಡಿಮೆ ರನ್ ಗಳಸಿದ ಕೆಟ್ಟ ದಾಖಲೆಗೆ ಕಾರಣರಾಗಿದ್ದಾರೆ.

    ಈ ಹಿಂದೆ 1906 ರಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇತ್ತಂಡಗಳ ಆರಂಭಿಕ ಆಟಗಾರರು 14.16 ಸರಾಸರಿಯಲ್ಲಿ ರನ್ ಗಳಿಸಿದ್ದರು. ಸದ್ಯ ಆಸೀಸ್ ಹಾಗೂ ಇಂಗ್ಲೆಂಡ್ ಆರಂಭಿಕ ಆಟಗಾರರು ಇದಕ್ಕಿಂತ ಕಡಿಮೆ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

    ಆ್ಯಶಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 329 ರನ್ ಗಳಿಗೆ ಆಲೌಟ್ ಆಗಿ ಆಸೀಸ್‍ಗೆ 399 ರನ್‍ಗಳ ಗುರಿ ನೀಡಿತ್ತು. ಪರಿಣಾಮ 2001ರ ಬಳಿಕ ಆಸೀಸ್ ವಿದೇಶಿ ನೆಲದಲ್ಲಿ ಆ್ಯಶಸ್ ಟೂರ್ನಿ ಗೆಲುವಿಗೆ 399 ರನ್ ಗಳಿಸಬೇಕಿತ್ತು. ಆದರೆ ಆಸೀಸ್ ಆಟಗಾರರು 2ನೇ ಇನ್ನಿಂಗ್ ನಲ್ಲಿ 263 ರನ್ ಗಳಿಗೆ ಆಲೌಟ್ ಆದ ಹಿನ್ನೆಲೆಯಲ್ಲಿ ಇಂಗ್ಲೆಂಡ್ 135 ರನ್ ಗಳ ಜಯ ಪಡೆಯಿತು. ಇದರೊಂದಿಗೆ ಆಸೀಸ್ ಸರಣಿ 2-2 ಅಂತರದಲ್ಲಿ ಸಮಬಲದೊಂದೊಗೆ ಅಂತ್ಯವಾಯಿತು. 47 ವರ್ಷಗಳ ಬಳಿಕ ಆ್ಯಶಸ್ ಸರಣಿ ಡ್ರಾದೊಂದಿಗೆ ಅಂತ್ಯಗೊಂಡಿತು. ಈ ಹಿಂದೆ 1972 ರಲ್ಲಿ ಆ್ಯಶಸ್ ಸರಣಿ ಡ್ರಾಗೊಂಡಿತ್ತು.

  • ಟೆಸ್ಟ್ ಕ್ರಿಕೆಟ್: 38 ರನ್ನಿಗೆ ಆಲೌಟ್ – ಐರ್ಲೆಂಡ್ ಕನಸು ಭಗ್ನ

    ಟೆಸ್ಟ್ ಕ್ರಿಕೆಟ್: 38 ರನ್ನಿಗೆ ಆಲೌಟ್ – ಐರ್ಲೆಂಡ್ ಕನಸು ಭಗ್ನ

    ಲಾರ್ಡ್ಸ್: ಇಂಗ್ಲೆಂಡ್ ತಂಡವನ್ನು ಸೋಲಿಸಿ ಇತಿಹಾಸ ರಚಿಸುವ ಮಹದಾಸೆಯಲ್ಲಿದ್ದ ಐರ್ಲೆಂಡ್ ತಂಡದ ಕನಸು ನುಚ್ಚುನೂರಾಗಿದೆ. ಲಾರ್ಡ್ಸ್ ನಲ್ಲಿ ನಡೆದ ಏಕೈಕ ಟೆಸ್ಟ್ ನ ಮೂರನೇ ದಿನವಾದ ಶುಕ್ರವಾರ ನೆರೆಯ ರಾಷ್ಟ್ರವನ್ನು ಕೇವಲ 38 ರನ್ನಿಗೆ ಆಲೌಟ್ ಮಾಡಿದ ಇಂಗ್ಲೆಂಡ್ ಪಂದ್ಯವನ್ನು 143 ರನ್‍ಗಳ ಆಂತರದಿಂದ ಸುಲಭವಾಗಿ ಗೆದ್ದುಕೊಂಡಿದೆ.

    ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ ಕೇವಲ 85 ರನ್‍ಗೆ ಆಲೌಟ್ ಆಗಿದ್ದ ಐರ್ಲೆಂಡ್ 2ನೇ ಇನ್ನಿಂಗ್ಸ್ ನಲ್ಲಿ ನಿರಾಸೆ ಅನುಭವಿಸಿತ್ತು. ಇತ್ತ 2ನೇ ಇನ್ನಿಂಗ್ಸ್ ನಲ್ಲಿ ಕಮ್ ಬ್ಯಾಕ್ ಮಾಡಿದ ಇಂಗ್ಲೆಂಡ್ ತಂಡ ಜ್ಯಾಕ್ ಲೀಚ್ 92 ರನ್, ಜೇಸನ್ ರಾಯ್ 72 ರನ್ ಗಳ ನೆರವಿನಿಂದ 303 ರನ್ ಗಳಿಸಿತು. ಎರಡನೇ ದಿನದ ಕೊನೆಗೆ 9 ವಿಕೆಟ್‍ಗೆ 303 ರನ್ ಗಳಿಸಿದ್ದ ಇಂಗ್ಲೆಂಡ್ ಶುಕ್ರವಾರ ಮೊದಲ ಎಸೆತದಲ್ಲೇ ಆಲೌಟ್ ಆಯಿತು.

    ಪರಿಣಾಮ ಗೆಲ್ಲಲು 182 ರನ್‍ಗಳ ಗುರಿಹೊಂದಿದ್ದ ಐರ್ಲೆಂಡ್ ತಂಡ ವೋಕ್ಸ್ 6 ವಿಕೆಟ್ ಮತ್ತು ಬ್ರಾಡ್ 4 ವಿಕೆಟ್ ದಾಳಿಗೆ ಸಿಲುಕಿ 15.4 ಓವರ್ ಗಳಲ್ಲೇ 38 ರನ್‍ಗೆ ಪತನಗೊಂಡಿತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ 5ನೇ ಅತಿ ಕನಿಷ್ಠ ಮೊತ್ತವಾಗಿದ್ದು, 1955 ರಲ್ಲಿ ಇಂಗ್ಲೆಂಡ್ ವಿರುದ್ಧ ಕಿವೀಸ್ ತಂಡ 26 ರನ್ನಿಗೆ ಆಲೌಟ್ ಆಗಿತ್ತು.

  • 15 ದಿನದಲ್ಲಿ 4 ಚಿನ್ನದ ಪದಕ ಗೆದ್ದ ಹಿಮಾದಾಸ್

    15 ದಿನದಲ್ಲಿ 4 ಚಿನ್ನದ ಪದಕ ಗೆದ್ದ ಹಿಮಾದಾಸ್

    ನವದೆಹಲಿ: ವೇಗದ ಓಟಗಾರ್ತಿ ಹಿಮಾದಾಸ್ ಜೆಕ್ ಗಣರಾಜ್ಯದಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಓಟದಲ್ಲಿ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ 15 ದಿನಗಳಲ್ಲಿ ಬರೋಬ್ಬರಿ ನಾಲ್ಕು ಚಿನ್ನದ ಪದಕವನ್ನು ಪಡೆದುಕೊಂಡಿರುವ ಹೆಗ್ಗಳಿಕೆಗೆ ಹಿಮಾದಾಸ್ ಪಾತ್ರವಾಗಿದ್ದಾರೆ.

    ಹಿಮಾದಾಸ್ ಅವರು 200 ಮೀಟರ್ ಓಟವನ್ನು 23.25 ಸೆಕೆಂಡ್‍ನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ ಭಾರತದ ಮತ್ತೊಬ್ಬ ಓಟಗಾರ್ತಿ ವಿ.ಕೆ. ವಿಸ್ಮಯ ಅವರು 23.43 ಸೆಕೆಂಡ್‍ಗಳಲ್ಲಿ ಓಡುವ ಮೂಲಕ ಬೆಳ್ಳಿ ಪದಕವನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

    ಹಿಮಾದಾಸ್ ಜುಲೈ 2 ರಿಂದ ಇದುವರೆಗೂ ಒಟ್ಟು ನಾಲ್ಕು ಚಿನ್ನದ ಪದಕ ಗೆದ್ದಿದ್ದಾರೆ. ಮೊದಲನೆಯದಾಗಿ ಯುರೋಪ್‍ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಮೊದಲ ಚಿನ್ನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

    ನಾಲ್ಕು ಚಿನ್ನದ ಪದಕ:
    ಜುಲೈ 2ರಂದು ಪೊಲೆಂಡ್‍ನಲ್ಲಿ ನಡೆದಿದ್ದ ಪೊಜ್ನಾನ್ ಅಥ್ಲೆಟಿಕ್ಸ್ ಪ್ರಿಕ್ಸ್ ನಲ್ಲಿ ಹಿಮಾದಾಸ್ ಅವರು 200 ಮೀಟರ್ ಓಟವನ್ನು 23.65 ಸೆಕೆಂಡ್‍ಗಳಲ್ಲಿ ಮುಗಿಸಿ ಮೊದಲ ಚಿನ್ನ ಗೆದ್ದಿದ್ದರು. ನಂತರ ಜುಲೈ 8 ರಂದು ಕುಟ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ದೂರವನ್ನು 23.97 ಸೆಕೆಂಡ್‍ಗಳಲ್ಲಿ ಕ್ರಮಿಸಿ ಎರಡನೇ ಚಿನ್ನ ಪದಕವನ್ನು ಗೆದ್ದಿದ್ದರು. ಜುಲೈ 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಸ್ಪರ್ಧೆಯನ್ನು 23.43 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಮೂರನೇ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು. ಈಗ 200 ಮೀಟರ್ ಓಟವನ್ನು 23.25 ಸೆಕೆಂಡ್‍ನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

    ಈ ಬಗ್ಗೆ ಹಿಮಾದಾಸ್ ಟ್ವೀಟ್ ಮಾಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಹಿಮಾದಾಸ್ ತಮ್ಮ 200 ಮೀಟರ್ ಓಟವನ್ನು 23.25 ಅಂತರದಲ್ಲಿ ಮುಗಿಸುವ ಮೂಲಕ ಮೊದಲ ಸ್ಪರ್ಧೆಯ ಓಟದ ಸಮಯವನ್ನು ಇನ್ನಷ್ಟು ಉತ್ತಮಪಡಿಸಿಕೊಂಡಿದ್ದಾರೆ.

    ಪುರುಷರ ವಿಭಾಗದಲ್ಲಿ ಭಾರತದ ಮೊಹಮ್ಮದ್ ಅನಾಸ್ ಅವರು 400ಮೀ ಓಟವನ್ನು 45.40 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸುವ ಮೂಲಕ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.