Tag: Rules

  • ಗ್ರಾಮಕ್ಕೆ ಬರಬೇಕಂದ್ರೆ ಕ್ವಾರಂಟೈನ್ ಕಡ್ಡಾಯ- ಗ್ರಾಮ ಪಂಚಾಯಿತಿಗಳಿಂದ ಆದೇಶ

    ಗ್ರಾಮಕ್ಕೆ ಬರಬೇಕಂದ್ರೆ ಕ್ವಾರಂಟೈನ್ ಕಡ್ಡಾಯ- ಗ್ರಾಮ ಪಂಚಾಯಿತಿಗಳಿಂದ ಆದೇಶ

    – ಹೊರ ಜಿಲ್ಲೆ, ರಾಜ್ಯಗಳಿಂದ ಬರುವವರಿಗೆ ಸೀಲ್, ಕ್ವಾರಂಟೈನ್

    ಚಿಕ್ಕಮಗಳೂರು: ರೆಡ್, ಆರೆಂಜ್, ಗ್ರೀನ್ ಯಾವುದೇ ಝೋನ್‍ನಿಂದ ಜಿಲ್ಲೆಗೆ ಬರುವವರು ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿ ಇರಲೇಬೇಕೆಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯ ಐದಾರು ಗ್ರಾಮ ಪಂಚಾಯಿತಿಗಳು ನಿರ್ಣಯ ಮಾಡಿಕೊಂಡು ಹೊಸ ಕಾನೂನನ್ನು ಜಾರಿಗೆ ತಂದಿವೆ.

    ಈಗಾಗಲೇ ಚಾರ್ಮಾಡಿ ಘಾಟ್ ಮೂಲಕ ಕೊಟ್ಟಿಗೆಹಾರ ಚೆಕ್‍ಪೋಸ್ಟ್ ಮಾರ್ಗವಾಗಿ ಮಂಗಳೂರಿನಿಂದ ನೂರಾರು ವಾಹನಗಳು ಜಿಲ್ಲೆಗೆ ಬರುತ್ತಿವೆ. ಇದು ಕೂಡ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಕಳಸ ಪಟ್ಟಣ ಮಂಗಳೂರು ಹಾಗೂ ಉಡುಪಿಯ ಗಡಿ. ಜೊತೆಗೆ ಕಾಸರಗೋಡಿನಿಂದ ಬರುವವರು ಇದೇ ಮಾರ್ಗವಾಗಿ ಸಂಚರಿಸುವುದರಿಂದ ಈ ಭಾಗದ ಜನರ ಆತಂಕ ಹೆಚ್ಚಾಗಿದೆ. ಹೀಗಾಗಿ ಕಳಸ, ಹೊರನಾಡು, ಸಂಸೆ, ತೋಟದೂರು, ಇಡಕಿಣಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳು ತಾವೇ ರೆಸ್ಯೂಲ್ಯೂಷನ್ ಪಾಸ್ ಮಾಡಿಕೊಂಡು ಕಾನೂನನ್ನು ಜಾರಿಗೆ ತಂದಿದ್ದಾವೆ.

    ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಯಾರೇ ಬರಲಿ, ಬಂದವರು ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿ ಇರುವಂತೆ ಕಾನೂನು ಜಾರಿ ತಂದಿದ್ದಾರೆ. ಸರ್ಕಾರವೇ ಈ ಕಾನೂನ್ನು ಜಾರಿಗೆ ತಂದಿದೆ. ಆದರೆ ಕೊರೊನಾ ಸಮುದಾಯಕ್ಕೆ ಹರಡುತ್ತಿಲ್ಲವಾದ್ದರಿಂದ ಸರ್ಕಾರ ಹೊರ ಜಿಲ್ಲೆಯಿಂದ ಬರುವವರ ಕೈಗೆ ಮುದ್ರೆಯನ್ನಾಗಲಿ ಅಥವಾ ಕ್ವಾರಂಟೈನ್ ಮಾಡುವುದನ್ನು ಕೈಬಿಟ್ಟಿತ್ತು. ಚಿಕ್ಕಮಗಳೂರಿನಲ್ಲಿ ಕೆಲ ಗ್ರಾಮ ಪಂಚಾಯಿತಿಗಳು ಇದನ್ನು ಜಾರಿಗೆ ತರುತ್ತಿವೆ.

    ಜಿಲ್ಲೆಯ ಅಕ್ಕಪಕ್ಕದ ಶಿವಮೊಗ್ಗ ಹಾಗೂ ಹಾಸನದಲ್ಲೂ 8-9 ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಉಡುಪಿ ಹಾಗೂ ಮಂಗಳೂರು ಗಡಿಯ ಗ್ರಾಮ ಪಂಚಾಯಿತಿಗಳು ಈ ಕಾನೂನು ಜಾರಿಗೆ ತಂದಿವೆ. ಹಾಸನದಲ್ಲಿ ಐದು ಕೊರೊನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡವೋ ಕೂಡಲೇ ಮೂಡಿಗೆರೆಯಿಂದ ಸಖಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳಿಗೆ ಬೃಹತ್ ಬಂಡೆಗಳನ್ನ ಹಾಕಿ ಮುಚ್ಚಿದ್ದಾರೆ. ಅಲ್ಲದೆ ಇಂದು ಗ್ರಾಮ ಪಂಚಾಯಿತಿಗಳು ಹೊಸ ನಿರ್ಣಯ ಜಾರಿಗೆ ತಂದಿವೆ. ತಮ್ಮ ಜಿಲ್ಲೆಯ ಗಡಿಯಿಂದ ಒಳಬರುವ ಪ್ರತಿಯೊಬ್ಬರೂ ಕೈಗೆ ಸೀಲ್ ಹಾಕಿ, ಕ್ವಾರಂಟೈನ್‍ನಲ್ಲಿರುವುದು ಕಡ್ಡಾಯ ಎಂಬ ಹೊಸ ಕಾನೂನನ್ನು ಜಾರಿಗೆ ತಂದಿವೆ. ಈ ಮೂಲಕ ಮಲೆನಾಡನ್ನು ಕೊರೊನಾ ಮುಕ್ತ ಮಾಡಲು ಪಣ ತೊಟ್ಟಿವೆ.

  • ಕೇರಳದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ- 63ನೇ ವಯಸ್ಸಿನಲ್ಲಿ ಶೈಲಜಾ ಕಾರ್ಯಕ್ಕೆ ಜನಮೆಚ್ಚುಗೆ

    ಕೇರಳದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ- 63ನೇ ವಯಸ್ಸಿನಲ್ಲಿ ಶೈಲಜಾ ಕಾರ್ಯಕ್ಕೆ ಜನಮೆಚ್ಚುಗೆ

    – ಹಾಟ್‍ಸ್ಟಾಟ್ ಕೇರಳದಲ್ಲಿ ಸೋಂಕು ಹಿಡಿತಕ್ಕೆ ಬರಲು ಕಾರಣವೇನು?
    – ಕೇರಳದ 8 ಜಿಲ್ಲೆಗಳು ಕೊರೊನಾ ರಹಿತ

    ತಿರುವನಂತಪುರಂ: ಭಾರತದಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲಾಗಿದ್ದ ಕೇರಳದಲ್ಲಿ ಈಗ ಕೊರೊನಾ ಹಿಡಿತಕ್ಕೆ ಬಂದಿದೆ. ಕೊರೊನಾ ವೈರಸ್ ನ ಹಾಟ್‍ಸ್ಟಾಟ್ ಆಗಿದ್ದ ಕೇರಳ ಅಲ್ಲಿನ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರ ದಿಟ್ಟ ಕಾರ್ಯದಿಂದ ಕೊರೊನಾ ಮುಕ್ತವಾಗುತ್ತಿದೆ.

    ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ಪ್ರದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಇಂದು ವಿಶ್ವಕ್ಕೆ ಮಹಾಮಾರಿಯಾಗಿ ಕಾಡುತ್ತಿದೆ. ಭಾರತದಲ್ಲಿ ಈ ಸೋಂಕು ಮೊದಲಿಗೆ ಕಾಣಿಸಿಕೊಂಡಿದ್ದು ಕೇರಳದಲ್ಲಿ, ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗೆ ಈ ಸೋಂಕು ಜನವರಿ 30ರಂದು ಭಾರತದಲ್ಲಿ ಮೊದಲಿಗೆ ಪತ್ತೆಯಾಗಿತ್ತು. ಇದಾದ ನಂತರ ಕೇರಳ ಕೊರೊನಾ ಹಾಟ್‍ಸ್ಟಾಟ್ ಆಗಿತ್ತು.

    ಈ ಹಿಂದೆಯಿಂದಲೂ ಈ ರೀತಿಯ ಪರಿಸ್ಥಿತಿಯನ್ನು ಬಹಳ ಎದುರಿಸಿದ್ದ ಕೇರಳ, ನಿಫಾ, ಹೆಚ್1ಎನ್1, ಚಿಕನ್‍ಗುನ್ಯಾನಂತಹ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ ಗೆದ್ದಿತ್ತು. ಈ ಅನುಭವದಿಂದಲೇ ಕೇರಳ ಜನವರಿ 24ರಂದೇ ಕೊರೊನಾ ಕಂಟ್ರೋಲ್ ರೂಂ ಅನ್ನು ಓಪನ್ ಮಾಡಿತ್ತು. ಭಾರತದಲ್ಲಿ ಕೊರೊನಾ ಪ್ರಭಾವ ಹೆಚ್ಚಾಗುವುದಕ್ಕೂ ಮುನ್ನವೇ ಜನರನ್ನು ಐಸೋಲೇಟ್ ಮಾಡಲು ಶುರು ಮಾಡಿತ್ತು. ಜೊತೆಗೆ ಎನ್ 95 ಮಾಸ್ಕ್ ಗಳು ಮತ್ತು ಪಿಪಿಇ ಕಿಟ್‍ಗಳ ಖರೀದಿಗೆ ಮುಂದಾಗಿತ್ತು.

    ದಿಟ್ಟ ನಿರ್ಧಾರ ತೆಗೆದುಕೊಂಡ ಶೈಲಜಾ:
    ಇಂದು ಕೇರಳದಲ್ಲಿ ಕೊರೊನಾ ಹಿಡಿತಕ್ಕೆ ಬರಲು ಕಾರಣ ಅಲ್ಲಿನ ಕೊರೊನಾ ವಾರಿಯರ್ಸ್ ಮತ್ತು ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರ ದಿಟ್ಟ ನಿರ್ಧಾರಗಳು. ಮೊದಲ ಕೊರೊನಾ ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತಿದ್ದ ಶೈಲಜಾ ಅವರು, ಮೂರು ಕಾರ್ಯಸೂಚಿಗಳನ್ನು ಜಾರಿಗೆ ತಂದಿದ್ದರು. ಸರ್ಕಾರಿ ಆಸ್ಪತ್ರೆಗಳು ರೋಗಿಗಳ ಸ್ನೇಹಿಯಾಗಿರಬೇಕು. ಹೈಟೆಕ್ ಆಗಿರಬೇಕು. ಹಣವಿಲ್ಲದ ಅಥವಾ ಕಡಿಮೆ ದುಡ್ಡಿಗೆ ಚಿಕಿತ್ಸೆ ನೀಡಬೇಕು ಎಂದು ಮೂರು ಕಾರ್ಯಸೂಚಿಗಳನ್ನು ಮಾಡಿಕೊಂಡಿದ್ದರು.

    ಈ ವಿಚಾರದ ಬಗ್ಗೆ ಮಾತನಾಡಿರುವ ಶೈಲಜಾ ಅವರು, ಈ ಸಮಯದಲ್ಲಿ ಪ್ರಾಥಮಿಕ ಆರೋಗ್ಯ ಘಟಕಗಳು ಬಹಳ ಮುಖ್ಯ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಈಗ ನಮ್ಮಲ್ಲಿ ಗ್ರಾಮೀಣ ಪ್ರದೇಶದಲ್ಲೂ ಪರೀಕ್ಷಾ ಪ್ರಯೋಗಾಲಯಗಳನ್ನು ಮಾಡಲಾಗಿದೆ. ಅವು ವಿವಿಧ ರೋಗಗಳನ್ನು ಆರಂಭಿಕವಾಗಿಯೇ ಕಂಡುಹಿಡಿಯಲು ಸಮರ್ಥವಾಗಿವೆ. ನಮ್ಮಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಹೊಸ ಉಪಕರಣಗಳನ್ನು ಹೊಂದಿವೆ ಮತ್ತು ಉತ್ತಮ ಮೂಲಸೌಕರ್ಯಗಳನ್ನು ಹೊಂದಿವೆ ಎಂದು ತಿಳಿಸಿದ್ದಾರೆ.

    2018ರಲ್ಲಿ ನಿಫಾ ವೈರಸ್ ಬಂದಾಗಿನಿಂದ ನಮ್ಮ ಸರ್ಕಾರ ವೈದ್ಯಕೀಯ ಸಿಬ್ಬಂದಿಗೆ ನಿಯಮಿತ ತರಬೇತಿಯನ್ನು ಜಾರಿಗೆ ತಂದಿತು. ಇದು ಈಗ ಕೊರೊನಾ ತಡೆಗಟ್ಟುವಲ್ಲಿ ನಮಗೆ ಸಹಾಯವಾಯಿತು. ನಮ್ಮ ವೈದ್ಯಕೀಯ ಸಿಬ್ಬಂದಿ ಸಾಂಕ್ರಾಮಿಕ ರೋಗದ ವಿರುದ್ಧ ಏಕಾಏಕಿ ತಯಾರಿಗಾಗಿ ಅಣಕು ಡ್ರಿಲ್‍ಗಳನ್ನು ಸಹ ಮಾಡಿದ್ದರು. ಅವರ ಕಾರ್ಯದಿಂದ ನಾವು ಇಂದು ಕೊರೊನಾ ವಿರುದ್ಧ ಪ್ರಬಲವಾಗಿ ಹೋರಾಡುತ್ತಿದ್ದೇವೆ. ನಮ್ಮ ಈ ಕೆಲಸ ಖಂಡಿತವಾಗಿಯೂ ವ್ಯವಸ್ಥೆಯನ್ನು ಬಲಪಡಿಸಿತು ಎಂದು ಹೇಳಿದ್ದಾರೆ.

    ನಾವು ಕೆಲಸ ಮಾಡುವಾಗ ನಾವೇಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸಿಕೊಂಡಿದ್ದೆವು. ದಿನ ಕೆಳಮಟ್ಟದ ಆರೋಗ್ಯ ಸಿಬ್ಬಂದಿಯಿಂದ ಹಿಡಿದು ಎಲ್ಲರ ಜೊತೆ ವಿಡಿಯೋ ಕಾನ್ಫೆರೆನ್ಸ್ ಮಾಡುತ್ತಿದ್ದೇವು. ಆಶಾ ಕಾರ್ಯಕರ್ತೆಯರು ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ದಿನಲೂ ನಾನು ಮಾತನಾಡುತ್ತಿದ್ದೆ. ಮಾಹಿತಿ ಪಡೆಯುತ್ತಿದ್ದೆ. ನಾವು ಹೀಗೆ ಕೆಳಹಂತದಿಂದ ಮಾಹಿತಿ ಪಡೆದುಕೊಂಡಿದ್ದು, ಕೆಲಸ ಮಾಡಲು ನಮಗೆ ಸಲಭವಾಗತ್ತದೆ ಎಂದು ಶೈಲಜಾ ಅವರು ಅಭಿಪ್ರಾಯ ಪಟ್ಟಿದ್ದಾರೆ.

    63 ವರ್ಷದ ಕೆಕೆ ಶೈಲಜಾ ಅವರಿಗೆ ಗಂಡ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಈ ವಯಸ್ಸಿನಲ್ಲೂ ಪ್ರತಿದಿನ 8 ರಿಂದ 9 ಗಂಟೆಗಳ ಕಾಲ ಸಭೆ ಮತ್ತು ವಿಡಿಯೋ ಕಾನ್ಫೆರೆನ್ಸ್ ನಿರತರಾಗಿರುತ್ತಾರೆ. ಇದರ ಜೊತೆಗೆ ಮನೆಯಲ್ಲಿ ಇದ್ದರೆ ರಾತ್ರಿಯ ವೇಳೆಯೂ ಕೂಡ ಯಾವುದೇ ಕರೆ ಬರಲಿ ಮಾತನಾಡುತ್ತಾರೆ ಎಂದು ಅವರ ಮನೆಯವರು ಹೇಳಿದ್ದಾರೆ. 63ನೇ ವಯಸ್ಸಿನಲ್ಲೂ ತನ್ನ ರಾಜ್ಯಕ್ಕಾಗಿ ದುಡಿಯುತ್ತಿರುವ ಶೈಲಜಾ ಅವರ ಕಾರ್ಯಕ್ಕೆ ಎಲ್ಲಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಶೈಲಜಾ ಅವರ ಕಾರ್ಯಕ್ಷಮತೆಯಿಂದ ಇಂದು ಕೇರಳದ 8 ಜಿಲ್ಲೆಗಳು ಕೊರೊನಾ ಮುಕ್ತವಾಗಿವೆ. ಕೇರಳದಲ್ಲಿ ಕೊರೊನಾ ಹಾಟ್‍ಸ್ಟಾಟ್ ಆಗಿದ್ದ ಕಾಸರಗೋಡು, ಕೋಜಿಕೋಡ್, ಪಾಲಕ್ಕಾಡ್, ಅಲಾಪ್ಪುಜಾ, ಕೊಟ್ಟಾಯಂ, ಇಡುಕ್ಕಿ, ಪಥನಮತ್ತತ್ತ ಮತ್ತು ತಿರುವನಂತಪುರಂ ಜಿಲ್ಲೆಗಳು ಕೊರೊನಾ ರಹಿತ ಜಿಲ್ಲೆಗಳಾಗಿವೆ. ಜೊತೆಗೆ ಕೇರಳದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಕಮ್ಮಿ ಆಗುತ್ತಿದ್ದು, ಸೋಂಕಿನಿಂದ ಗಣಮುಖರಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ.

    ಕೇರಳದಲ್ಲಿ ಕೊರೊನಾ ಕಾಣಿಸಿಕೊಂಡದಿಂದ ಇಲ್ಲಿಯವರೆಗೆ ಸುಮಾರು 512 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕೇವಲ ಮೂರು ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಈಗ ಕೇವಲ 20 ಜನರು ಕೊರೊನಾ ಚಿಕತ್ಸೆ ಪಡೆಯುತ್ತಿದ್ದು, ಇನ್ನುಳಿದ 488 ಜನರು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಚ್ ಆಗಿದ್ದಾರೆ. ಇಲ್ಲಿಯವರೆಗೂ ಸುಮಾರು 37,464 ಸ್ಯಾಂಪಲ್‍ಗಳನ್ನು ಪರೀಕ್ಷೆ ಮಾಡಿದ್ದು, ಅದರಲ್ಲಿ 36,630 ಸ್ಯಾಂಪಲ್ಸ್ ಗಳು ನೆಗೆಟಿವ್ ಬಂದಿವೆ.

    ಇದರ ಜೊತೆಗೆ ಕೆಕೆ ಶೈಲಜಾ ಅವರು, ಬೇರೆ ಪ್ರದೇಶದಿಂದ ಕೇರಳಕ್ಕೆ ಬಂದವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಬೇಕು. ಪರೀಕ್ಷೆಯಲ್ಲಿ ಕೊರೊನಾದ ಒಂದು ಲಕ್ಷಣ ಕಂಡುಬಂದರೂ ಅವರು ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ಲಕ್ಷಣ ಕಂಡುಬಾರದೆ ಇದ್ದರೇ ಅವರು 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ನಿಯಮ ಮಾಡಿದ್ದಾರೆ.

  • ಸಾರ್ವಜನಿಕ, ಕೆಲಸದ ಸ್ಥಳಗಳಲ್ಲೂ ಕಠಿಣ ರೂಲ್ಸ್

    ಸಾರ್ವಜನಿಕ, ಕೆಲಸದ ಸ್ಥಳಗಳಲ್ಲೂ ಕಠಿಣ ರೂಲ್ಸ್

    ಬೆಂಗಳೂರು: ಲಾಕ್‍ಡೌನ್ ಮುಗಿಯಲು ಇನ್ನೆರಡೇ ದಿನ ಬಾಕಿ ಇರುವಾಗಲೇ ಕೇಂದ್ರ ಸರ್ಕಾರ ಮೂರನೇ ಬಾರಿಗೆ ಲಾಕ್‍ಡೌನ್ ವಿಸ್ತರಿಸಿದೆ. ಆದರೆ ಲಾಕ್‍ಡೌನ್ ಮೂರರಲ್ಲಿ ಹೆಚ್ಚುವರಿ ನಿರ್ಬಂಧಗಳಿದ್ದು, ಈ ಬಾರಿ ಸಾರ್ವಜನಿಕ ಪ್ರದೇಶಗಳಲ್ಲೂ ರೂಲ್ಸ್ ಜಾರಿ ಮಾಡಲಾಗಿದೆ.

    ಕೊರೊನಾದ ಮೂರನೇ ಲಾಕ್‍ಡೌನ್‍ನಲ್ಲಿ ಸಾರ್ವಜನಿಕ ಸ್ಥಳಗಳಲ್ಲೂ ಕಠಿಣ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿ ಓಡಾಡುವಂತಿಲ್ಲ. ಓಡಾಡಿದರೆ ಮಾಸ್ಕ್ ಧರಿಸಿರಲೇಬೇಕು, ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡಿರಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

    ಸಾರ್ವಜನಿಕ ಸ್ಥಳಗಳಲ್ಲಿ ರೂಲ್ಸ್:
    * ಮಾಸ್ಕ್ ಧರಿಸೋದು ಕಡ್ಡಾಯ
    * ಸಾಮಾಜಿಕ ಅಂತರ ಪಾಲನೆ (ಸಾರ್ವಜನಿಕ ಸ್ಥಳ, ಸಮೂಹ ಸಾರಿಗೆಗೆ ಅನ್ವಯ)
    * 5 ಅಥವಾ 5ಕ್ಕಿಂತ ಹೆಚ್ಚಿನ ಜನ ಗುಂಪು ಸೇರುವಂತಿಲ್ಲ.
    * ಮದುವೆ ಕಾರ್ಯಕ್ರಮಕ್ಕೆ 50 ಜನರಿಗೆ ಅವಕಾಶ (ಸಾಮಾಜಿಕ ಅಂತರ ಕಡ್ಡಾಯ)
    * ಅಂತ್ಯಸಂಸ್ಕಾರ, ತಿಥಿಗಳಲ್ಲಿ 20 ಜನರಿಗೆ ಅವಕಾಶ (ಸಾಮಾಜಿಕ ಅಂತರ ಕಡ್ಡಾಯ)
    * ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ, ಪಾನ್-ಗುಟ್ಕಾ, ತಂಬಾಕು ನಿಷೇಧ
    * ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ

    ಇನ್ನೂ ಕೆಲಸದ ಸ್ಥಳಗಳಿಗೂ ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನು  ಪ್ರಕಟಿಸಿದೆ.

    ವರ್ಕ್ ಪ್ಲೇಸ್‍ಗಳಲ್ಲಿ ರೂಲ್ಸ್
    * ಗುಣಮಟ್ಟದ ಪರಿಶುದ್ಧತೆಗೆ ಪ್ರಾಶಸ್ತ್ಯ
    * ಮಾಸ್ಕ್ ಧರಿಸೋದು ಕಡ್ಡಾಯ
    * ಕೆಲಸದ ಸ್ಥಳ, ಸಾರಿಗೆಯಲ್ಲಿ ಸಾಮಾಜಿಕ ಅಂತರ ಕಡ್ಡಾಯ
    * ಶಿಫ್ಟ್, ಊಟದ ವಿರಾಮದಲ್ಲಿ ಸಾಮಾಜಿಕ ಅಂತರ
    * ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ವಾಶ್, ಸ್ಯಾನಿಟೈಸರ್ ವ್ಯವಸ್ಥೆ (ಎಂಟ್ರಿ-ಎಕ್ಸಿಟ್, ಕಾಮನ್ ಪ್ಲೇಸ್‍ಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು)
    * ಕೆಲಸದ ಸ್ಥಳ, ಸಾಮಾನ್ಯ ಪ್ರದೇಶಗಳಲ್ಲಿ ಪದೇ ಪದೇ ಸ್ವಚ್ಛತೆ
    * ಎಲ್ಲಾ ಸಿಬ್ಬಂದಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯ
    * ಅತಿಹೆಚ್ಚು ಜನ ಸೇರುವಂತೆ ಮೀಟಿಂಗ್ ಬೇಡ
    * ಕೊರೊನಾ ಗುಣಲಕ್ಷಣ ಕಂಡುಬಂದಲ್ಲಿ ತಡಮಾಡದೆ ಹತ್ತಿರದ ಆಸ್ಪತ್ರೆ, ಕ್ವಾರಂಟೈನ್ ಸೆಂಟರ್‌ಗೆ ಶಿಫ್ಟ್ ಮಾಡಬೇಕು.

  • ಮೇ 3ರವರೆಗೆ ಭಟ್ಕಳದಲ್ಲಿ ನಿಯಮ ಸಡಿಲಿಕೆ ಇಲ್ಲ: ಶಿವರಾಮ್ ಹೆಬ್ಬಾರ್

    ಮೇ 3ರವರೆಗೆ ಭಟ್ಕಳದಲ್ಲಿ ನಿಯಮ ಸಡಿಲಿಕೆ ಇಲ್ಲ: ಶಿವರಾಮ್ ಹೆಬ್ಬಾರ್

    – ರಂಜಾನ್‍ಗೂ ಯಾವುದೇ ವಿನಾಯಿತಿ ಇಲ್ಲ

    ಕಾರವಾರ: ಮೇ 3ರ ತನಕ ಭಟ್ಕಳದಲ್ಲಿ ಕಟ್ಟುನಿಟ್ಟಿನ ನಿಯಮ ಮುಂದುವರಿಯಲ್ಲಿದ್ದು, ರಂಜಾನ್ ಹಬ್ಬಕ್ಕೂ ಇದರಿಂದ ವಿನಾಯಿತಿ ಇಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

    ಇಂದು ಸಂಜೆ ಭಟ್ಕಳಕ್ಕೆ ಆಗಮಿಸಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು. ಭಟ್ಕಳದ ತಂಜೀಂ ಸಂಸ್ಥೆ ರಂಜಾನ್ ಹಬ್ಬಕ್ಕಾಗಿ ತಮಗೆ ದಿನದಲ್ಲಿ ಕನಿಷ್ಟ 2 ಗಂಟೆಯಾದರೂ ವಿನಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. ಮನವಿಯನ್ನು ನಯವಾಗಿ ತಿರಸ್ಕರಿಸಿದ ಸಚಿವರು ಮೇ 3ರ ತನಕ ನಿಯಮದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಮುಸ್ಲಿಂ ಮಾತ್ರವಲ್ಲದೇ ಹಿಂದೂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಯಾವುದೇ ಧರ್ಮದ ಸಾರ್ವಜನಿಕವಾಗಿ ಧಾರ್ಮಿಕ ಹಬ್ಬಗಳ ಆಚರಣೆಗೆ ಅವಕಾಶವಿಲ್ಲ ಎಂದರು.

    ಮೇ 3ರವರೆಗೂ ಈ ಹಿಂದಿನ ನಿಯಮಗಳೇ ಜಾರಿಯಲ್ಲಿರಲಿವೆ. ನಂತರದ ದಿನಗಳಲ್ಲಿ ಜಿಲ್ಲೆಯ ಮತ್ತು ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ, ರಾಜ್ಯ ಮತ್ತು ಜಿಲ್ಲೆಗಳ ಬೆಳವಣಿಗೆಗಳನ್ನು ಗಮನಿಸಿ ಚರ್ಚೆ ನಡೆಸಿ ತಿಳಿಸಲಾಗುವುದು. ಏಪ್ರಿಲ್ 26, 27ರೊಳಗೆ ನಮ್ಮ ಉತ್ತರ ಕನ್ನಡ ಜಿಲ್ಲೆ ಕೊರೊನಾ ಮುಕ್ತವಾಗಲು ಎಲ್ಲಾ ಹೋರಾಟ ನಡೆಸುತ್ತಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಕೇಳಿಕೊಂಡರು.

    ಡಿಸ್ಚಾರ್ಜ್ ಸಮ್ಮರಿ ವಿತರಣೆ
    ಭಟ್ಕಳದಲ್ಲಿ ಪತ್ತೆಯಾದ ಮೊದಲ 3 ಪ್ರಕರಣಗಳ ಸೋಂಕಿತರು ಗುಣಮುಖರಾಗಿ ಬಂದಿದ್ದು, ಅವರಿಗೆ ಸಚಿವ ಶಿವರಾಮ್ ಹೆಬ್ಬಾರ್ ಡಿಸ್ಚಾರ್ಜ್ ಸಮ್ಮರಿ ವಿತರಿಸಿ ಅಭಿನಂದಿಸಿದರು. ಮನೆಯಲ್ಲಿದ್ದು ಇತರರಲ್ಲೂ ಜಾಗೃತಿ ಮೂಡಿಸುವಂತೆ ಮನವಿ ಮಾಡಿ ಆಸ್ಪತ್ರೆಯಿಂದ ಬೀಳ್ಕೊಟ್ಟರು.

    ಈ ವೇಳೆ ಶಾಸಕ ಸುನೀಲ್ ನಾಯ್ಕ, ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾ ಆರೋಗ್ಯಾಧಿಕಾರಿ ಅಶೋಕ ಕುಮಾರ್, ನೊಡಲ್ ಅಧಿಕಾರಿ ಡಾ. ಶರದ್ ನಾಯಕ, ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಡಿಎಚ್‍ಒ ಡಾ.ಮೂರ್ತಿರಾಜ್ ಭಟ್, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಇದ್ದರು.

  • ಗುರುವಾರದಿಂದ ಕರ್ನಾಟಕದಲ್ಲಿ ಏನಿರುತ್ತೆ? ಏನಿರಲ್ಲ? ಕಡ್ಡಾಯ ಏನು?

    ಗುರುವಾರದಿಂದ ಕರ್ನಾಟಕದಲ್ಲಿ ಏನಿರುತ್ತೆ? ಏನಿರಲ್ಲ? ಕಡ್ಡಾಯ ಏನು?

    ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ ಕೊರೋನಾ ಲಾಕ್‍ಡೌನ್ ಸಡಿಲಿಕೆ ಮಾಡಿದೆ. ಪಾದರಾಯನಪುರ ಗಲಭೆ ಬಳಿಕ ಮೇ ಮೂರವರೆಗೂ ಯಾವುದೇ ಸಡಿಲಿಕೆ ಇಲ್ಲ ಎಂದಿದ್ದ ಯಡಿಯೂರಪ್ಪ ನೇತೃತ್ವದ ಸರ್ಕಾರ ಇವತ್ತು ಯೂಟರ್ನ್ ತೆಗೆದುಕೊಂಡಿದೆ.

    ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಭಾಗಷಃ ಲಾಕ್‍ಡೌನ್ ಸಡಿಲಿಕೆ ಮಾಡಿ ತೀರ್ಮಾನ ತೆಗೆದುಕೊಂಡಿದೆ. ಹಾಟ್ ಸ್ಪಾಟ್, ನಾನ್ ಹಾಟ್‍ಸ್ಪಾಟ್ ಮತ್ತು ಹಸಿರು ವಲಯದ ಸೂತ್ರಗಳನ್ನು ಪಕ್ಕಕ್ಕೆ ಇಟ್ಟ ರಾಜ್ಯ ಸರ್ಕಾರ, ಕೊರೋನಾ ಸೋಂಕು ಹೆಚ್ಚಿರುವ ಕಂಟೈನ್‍ಮೆಂಟ್ ಜೋನ್‍ಗಳನ್ನು ಹೊರತುಪಡಿಸಿ ಉಳಿದ ಕಡೆ ಲಾಕ್‍ಡೌನ್ ಸಡಿಲ ಮಾಡುತ್ತಿದೆ.

    ಸಡಿಲಿಕೆ ನೀಡಿದರೂ ಷರತ್ತುಗಳು ಅನ್ವಯ ಆಗುತ್ತವೆ. ಕ್ವಾರಂಟೇನ್‍ನಲ್ಲಿರುವವರು ಹೊರ ಬರುವಂತೆ ಇಲ್ಲ. ಬೆಂಗಳೂರಿನಲ್ಲಿ ತಂಬಾಕು, ಗುಟ್ಕಾ, ಸಿಗರೇಟು ಮಾರಾಟ ನಿಷೇಧಿಸಿ ಬಿಬಿಎಂಪಿ ಸಹ ಆದೇಶ ಹೊರಡಿಸಿದೆ.

    ನಾಳೆಯಿಂದ ಏನಿರುತ್ತೆ..?
    * ತುರ್ತು ಸಂದರ್ಭಗಳಲ್ಲಿ ಖಾಸಗಿ ವಾಹನಗಳ ಸಂಚಾರ
    * ಮನೆ – ಕಚೇರಿ ನಡುವೆ ಸಂಚಾರಕ್ಕೆ ಪಾಸ್ ಕಡ್ಡಾಯ
    * ಎಲ್ಲಾ ರೀತಿಯ ಕೃಷಿ, ತೋಟಗಾರಿಕಾ ಚಟುವಟಿಕೆ
    * ಎಪಿಎಂಸಿ, ಬೀಜ, ಗೊಬ್ಬರ, ಕ್ರಿಮಿನಾಶಕಗಳ ಅಂಗಡಿ
    * ಮೀನುಗಾರಿಕೆ, ಹೈನೋದ್ಯಮ, ಕುಕ್ಕಟೋದ್ಯಮ
    * ಬ್ಯಾಂಕ್ ಚಟುವಟಿಕೆ, ಎಟಿಎಂ, ಷೇರುಪೇಟೆ

    * ಎಲ್ಲಾ ರೀತಿಯ ಪಿಂಚಣಿ ವಿತರಿಸಲು ಅವಕಾಶ
    * ಅಂಗನವಾಡಿಗಳಿಗೆ ಷರತ್ತುಬದ್ಧ ಅನುಮತಿ (ಮಕ್ಕಳು, ಗರ್ಭಿಣಿಯರ ಮನೆಗಳಿಗೆ ಪೌಷ್ಠಿಕಾಂಶ ಆಹಾರ ತಲುಪಿಸುವ ಕ್ರಮ)
    * ಆನ್‍ಲೈನ್ ತರಗತಿ, ಕೋರಿಯರ್ ಸೇವೆ
    * ಎಲೆಕ್ಟ್ರಿಷಿಯನ್, ಮೋಟಾರ್ ಮೆಕಾನಿಕ್, ಪ್ಲಂಬರ್, ಕಾರ್ಪೆಂಟರ್ ಸೇವೆ
    * ನರೇಗಾ ಯೋಜನೆಯಡಿ ನೀರಾವರಿ ಕಾಮಗಾರಿ
    * ತುರ್ತು ಮತ್ತು ಅಗತ್ಯ ವಸ್ತುಗಳ ತಯಾರಿಕಾ ಘಟಕ
    * ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಸಂಸ್ಕರಣೆ ಘಟಕ

    * ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕಟ್ಟಡ ನಿರ್ಮಾಣ, ನೀರಾವರಿ ಕಾಮಗಾರಿ
    * ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯ ಕಾರ್ಮಿಕ ಬಳಸಿಕೊಂಡು ನಿರ್ಮಾಣ
    * ಮೆಟ್ರೋ ರೈಲು ಕಾಮಗಾರಿ (ಸ್ಥಳೀಯ ಕಾರ್ಮಿಕರನ್ನು ಮಾತ್ರ ಬಳಸಿಕೊಳ್ಳಬೇಕು)
    * ಸೀಮೆಂಟ್, ಸ್ಟೀಲ್, ಜಲ್ಲಿ, ಟೈಲ್ಸ್, ಇಟ್ಟಿಗೆ ಸಾಗಿಸಲು ಅವಕಾಶ (ಇಬ್ಬರು ಚಾಲಕರು, ಓರ್ವ ಕ್ಲೀನರ್)
    * ಹೈವೇ ಪಕ್ಕದ ಡಾಬಾ, ಟ್ರಕ್ ರಿಪೇರಿ ಶಾಪ್‍ಗಳು (20 ಕಿಲೋಮೀಟರ್ ಅಂತರ)
    * ಪಾರ್ಸೆಲ್ ಮತ್ತು ಸರಕು ಸಾಗಣೆ ರೈಲು, ಕಾರ್ಗೋ ವಿಮಾನ

    * ಇ-ಕಾಮರ್ಸ್ ಸೇವೆ (ಅಗತ್ಯ ವಸ್ತುಗಳ ಪೂರೈಕೆಗಷ್ಟೇ ಅವಕಾಶ)
    * ತುರ್ತು ಮತ್ತು ಅಗತ್ಯ ಸೇವೆ ಒದಗಿಸುವ ಸರ್ಕಾರಿ ಕಚೇರಿಗಳು
    * ಸಚಿವರು, ಉನ್ನತಧಿಕಾರಿಗಳು ಕಚೇರಿಗೆ ಹಾಜರಾಗುವುದು ಕಡ್ಡಾಯ
    * ಶೇ.33ರಷ್ಟು ಕೆಳ ಹಂತದ ಅಧಿಕಾರಿಗಳಿಂದ ಕಚೇರಿ ನಡೆಸಬೇಕು
    * ಶೇ.33ರಷ್ಟು ನೌಕರರೊಂದಿಗೆ ಐಟಿ-ಬಿಟಿ ಕಚೇರಿಗಳು ಓಪನ್

    ಯಾವುದಕ್ಕೆ ಇಲ್ಲ ರಿಲೀಫ್..?
    > ಬಸ್, ರೈಲು, ನಮ್ಮ ಮೆಟ್ರೋ, ವಿಮಾನ ಸಂಚಾರ
    > ಅಂತರ್ ಜಿಲ್ಲೆ, ಅಂತರ್ ರಾಜ್ಯಗಳ ನಡುವಣ ಸಂಚಾರ
    > ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಕೇಂದ್ರಗಳು
    > ಕೈಗಾರಿಕೆ, ವಾಣಿಜ್ಯ ಚಟುವಟಿಕೆ (ಅಗತ್ಯ ಸೇವೆ ಹೊರತುಪಡಿಸಿ)
    > ಆತಿಥ್ಯ ಸೇವೆಗಳು (ಅಗತ್ಯ ಸೇವೆ ಹೊರತುಪಡಿಸಿ)
    > ಓಲಾ, ಉಬರ್ ಕ್ಯಾಬ್, ಟ್ಯಾಕ್ಸಿ, ಆಟೋ ರಿಕ್ಷಾ
    > ಥಿಯೇಟರ್, ಶಾಪಿಂಗ್ ಮಾಲ್, ಜಿಮ್, ಈಜುಕೊಳ
    > ಹೋಟೆಲ್, ರೆಸ್ಟೋರೆಂಟ್, ಬಾರ್, ವೈನ್ ಶಾಪ್
    > ಎಲ್ಲಾ ರೀತಿಯ ಸಭೆ ಸಮಾರಂಭಗಳು
    > ಅಂತ್ಯಕ್ರಿಯೆಯಲ್ಲಿ 20ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವಂತಿಲ್ಲ

    ಕಡ್ಡಾಯವಾಗಿ ಏನು ಪಾಲಿಸಬೇಕು?
    > ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು
    > ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ನಿಷೇಧ, ಸಾಮಾಜಿಕ ಅಂತರ
    > ಸಾರ್ವಜನಿಕ ಸ್ಥಳಗಳಲ್ಲಿ 5ಕ್ಕಿಂತ ಹೆಚ್ಚು ಮಂದಿ ನಿಲ್ಲುವಂತಿಲ್ಲ
    > ಕಚೇರಿಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸರ್
    > 65 ವರ್ಷ ಮೇಲ್ಪಟ್ಟವರು, ಚಿಕ್ಕ ಮಕ್ಕಳ ತಾಯಂದಿರಿಗೆ ಮನೆಯಿಂದಲೇ ಕೆಲಸ
    > ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ, ದೊಡ್ಡ ಸಭೆ ಮಾಡುವಂತಿಲ್ಲ
    > ಡಿಸಿ ಅನುಮತಿ ಪಡೆದು ಮದುವೆ, ಇತ್ಯಾದಿ ಸಮಾರಂಭ

  • ಸರ್ಕಾರ ಜಾರಿಗೆತಂದ ನಿಯಮಗಳನ್ನು ಪಾಲಿಸಿ – ಕೈಮುಗಿದು ಶಿವಣ್ಣ ಮನವಿ

    ಸರ್ಕಾರ ಜಾರಿಗೆತಂದ ನಿಯಮಗಳನ್ನು ಪಾಲಿಸಿ – ಕೈಮುಗಿದು ಶಿವಣ್ಣ ಮನವಿ

    ಬೆಂಗಳೂರು: ಕೊರೊನಾ ವಿರುದ್ಧ ಸರ್ಕಾರ ಜಾರಿ ಮಾಡಿರುವ ನಿಯಮವನ್ನು ಪಾಲಿಸಿ ಎಂದು ನಟ ಶಿವರಾಜ್ ಕುಮಾರ್ ಅವರು ಜನರಲ್ಲಿ ಕೈಮುಗಿದು ಮನವಿ ಮಾಡಿದ್ದಾರೆ.

    ದೇಶದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಅನ್ನು ತಡೆಯಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಲವಾರು ನಿಯಮಗಳನ್ನು ಜಾರಿಗೆ ತರುತ್ತಿವೆ. ಆದರೆ ಇದನ್ನು ನಮ್ಮ ಜನರು ಸರಿಯಾಗಿ ಪಾಲಿಸುವಲ್ಲಿ ವಿಫಲರಾಗುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಶಿವಣ್ಣ ಸರ್ಕಾರ ನಿಯಮ ಪಾಲಿಸಿ, ಈ ಕೊರೊನಾ ವೈರಸ್ ವಿರುದ್ಧ ಹೋರಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಡಿಯೋ ಮಾಡಿರುವ ಶಿವಣ್ಣ, ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಶಿವಣ್ಣ, ಸರ್ಕಾರ ರೂಪಿಸಿರುವ ನಿಯಮವನ್ನು ನಾವು ಕಟ್ಟುನಿಟ್ಟಾಗಿ ಪಾಲಿಸೋಣ. ಈ ಕೊರೊನಾ ಬಂದು ಎಲ್ಲರಿಗೂ ತೊಂದರೆ ಕೊಟ್ಟಿದೆ. ಅದನ್ನು ತಡೆಗಟ್ಟುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ಸರ್ಕಾರದ ಆದೇಶವನ್ನು ಪಾಲಿಸಬೇಕು ಎಂದು ಕೇಳಿಕೊಂಡಿದ್ದಾರೆ.

    ನಮಗೂ ಗೊತ್ತು ಈಗ ಹಬ್ಬ ಬಂದಿದೆ. ಎಲ್ಲರಿಗೂ ಕಷ್ಟವಾಗುತ್ತದೆ. ಆದರೆ ನಾವೆಲ್ಲರೂ ಈ ಹಬ್ಬವನ್ನು ಸರಳ ರೀತಿಯಲ್ಲಿ ಆಚರಣೆ ಮಾಡೋಣ. ನಾನು ಕೂಡ ನಿಮ್ಮ ಜೊತೆಯಲ್ಲಿ ಹಬ್ಬವನ್ನು ಸರಳವಾಗಿಯೇ ಆಚರಣೆ ಮಾಡುತ್ತೇನೆ. ಹಬ್ಬವನ್ನು ಅದ್ಧೂರಿಯಾಗಿ ಜಾಮ್‍ಜೂಮ್ ಎಂದು ಆಚರಣೆ ಮಾಡುವುದು ಬೇಡ. ತೊಂದರೆ ಎಲ್ಲರಿಗೂ ಆಗಿದೆ. ಆ ತೊಂದರೆ ವಿರುದ್ಧ ಹೋರಾಡುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು ಎಂದು ಶಿವಣ್ಣ ತಿಳಿಸಿದ್ದಾರೆ.

    ಎಲ್ಲರೂ ಸಾಧ್ಯವಾದಷ್ಟು ಮನೆಯಲ್ಲೇ ಇರಿ. ನಾನು ಟಿವಿಯಲ್ಲಿ ನೋಡಿದ್ದೇನೆ ಸಾಕಷ್ಟು ಜನ ಹೊರಗೆ ಬಂದು ಪೊಲೀಸರ ಕೈಯಲ್ಲಿ ಏಟು ತಿನ್ನುತ್ತಿದ್ದಾರೆ. ನಮ್ಮಿಂದ ಪೊಲೀಸರಿಗೂ ತೊಂದರೆ. ಅವರಿಗೂ ಕೂಡ ಯಾವುದೇ ರೀತಿಯಲ್ಲಿ ಆದರೂ ಸೋಂಕು ತಗಲುಬಹುದು. ಆದರೂ ಅವರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅದಷ್ಟು ಮನೆಯಲ್ಲೇ ಇರಿ ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ತೊಂದರೆ ಕೊಡಬೇಡಿ. ಯಾವಗಲೂ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಿ. ಅದಷ್ಟು ಬೇಗ ಕೊರೊನಾ ವೈರಸ್ ಹೋಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ ಎಂದು ಶಿವಣ್ಣ ವಿಡಿಯೋ ಮೂಲಕ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.

  • ಪಿಯುಸಿ ಪರೀಕ್ಷೆ ಅಕ್ರಮ ಎಸಗಿದ್ರೆ 5 ವರ್ಷ ಜೈಲು, 5 ಲಕ್ಷ ದಂಡ

    ಪಿಯುಸಿ ಪರೀಕ್ಷೆ ಅಕ್ರಮ ಎಸಗಿದ್ರೆ 5 ವರ್ಷ ಜೈಲು, 5 ಲಕ್ಷ ದಂಡ

    ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 4 ರಿಂದ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಲಿದೆ. ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಕಲ ಸಿದ್ದತೆಗಳನ್ನ ಮಾಡಿಕೊಂಡಿದೆ. ಪರೀಕ್ಷಾ ಅಕ್ರಮ ತಡೆಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದೆ. ಅಕ್ರಮ ತಡೆಗೆ 11 ಅಂಶಗಳ ನಿಯಮಗಳನ್ನ ಜಾರಿಗೆ ತಂದು ಸುತ್ತೋಲೆ ಹೊರಡಿಸಿದೆ.

    ಎಸ್.ಎಸ್.ಎಲ್.ಸಿ ಪೂರ್ವ ಸಿದ್ದತಾ ಪರೀಕ್ಷೆ ಪೇಪರ್ ಲೀಕ್ ನಿಂದ ಆತಂಕಗೊಂಡಿರೋ ಪಿಯಸಿ ಬೋರ್ಡ್, ಪಿಯುಸಿ ಎಕ್ಸಾಂ ನಲ್ಲಿ ಇಂತಹ ಎಡವಟ್ಟು ಆಗದಂತೆ ನೋಡಿಕೊಳ್ಳಲು ಹದ್ದಿನ ಕಣ್ಣಿಟ್ಟಿದೆ. ಪರೀಕ್ಷಾ ಅಕ್ರಮದಲ್ಲಿ ತೊಡಗಿದವರಿಗೆ ನಿಯಮದ ಪ್ರಕಾರ 5 ವರ್ಷ ಸೆರೆವಾಸ ಮತ್ತು 5 ಲಕ್ಷ ದಂಡ ವಿಧಿಸುವ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆದೇಶ ಹೊರಡಿಸಿದೆ.

    ಇಷ್ಟೇ ಅಲ್ಲದೇ ಹೊರತು ಪಡಿಸಿ ಪಿಯಸಿ ಬೋರ್ಡ್ ಹಲವು ಭದ್ರತಾ ನಿಯಮಗಳನ್ನ ಜಾರಿಗೆ ತಂದಿವೆ. ಈ ಸಂಬಂಧ ಪಿಯುಸಿ ಬೋರ್ಡ್ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು, ಪರೀಕ್ಷಾ ಸಿಬ್ಬಂದಿ ಮೊಬೈಲ್ ಫೋನ್ ತರುವುದನ್ನು ನಿಷೇಧ ಮಾಡಲಾಗಿದೆ. ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅನುಮತಿ ಸೂಚನೆ ನೀಡಲಾಗಿದೆ.ಪರೀಕ್ಷಾ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿಗಳಿಗೂ ಗುರುತಿನ ಚೀಟಿ ಹೊಂದಿರೋದು ಕಡ್ಡಾಯವಾಗಿದೆ. ಉಳಿದ


    ಪ್ರಮುಖ ನಿಯಮ ಏನು?
    – ಪರೀಕ್ಷಾ ಕಾರ್ಯಕ್ಕೆ ಅಡ್ಡಿ ಮಾಡಿದ್ರೆ ಪೊಲೀಸ್ ಠಾಣಯಲ್ಲಿ ಎಫ್‍ಐಆರ್ ದಾಖಲು ಮಾಡಲು ಅಧಿಕಾರಿಗಳಿಗೆ ಸೂಚನೆ.
    – ಪರೀಕ್ಷಾ ಕೇಂದ್ರ ಸುತ್ತ 200 ಮೀಟರ್ ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡುವುದು.
    – ಪರೀಕ್ಷಾ ಕೇಂದ್ರದಲ್ಲಿ ಕ್ಯಾಮೆರಾ ಲ್ಯಾಪ್‍ಟಾಪ್, ಮೊಬೈಲ್ ಸೇರಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದಕ್ಕೆ ನಿಷೇಧ
    – ನಕಲು ಮಾಡೋದು, ನಕಲಿಗೆ ಸಹಕಾರ, ಬದಲಿ ವ್ಯಕ್ತಿ ಪರೀಕ್ಷೆ ಬರೆಯೋದು, ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಸಮಯದಲ್ಲಿ ಮೊಬೈಲ್ ಬಳಕೆಗಳು ಪರೀಕ್ಷಾ ಅಕ್ರಮ ಅಂತ ಪರಿಗಣನೆ
    – ಕೊಠಡಿ ಮೇಲ್ವಿಚಾರಕರು, ಮುಖ್ಯ ಅಧೀಕ್ಷಕರು ಅಕ್ರಮ ಎಸಗಿದರೆ ಕಾನೂನು ಅನ್ವಯ ಕ್ರಮಕ್ಕೆ ಸೂಚನೆ
    – ಸಾಮಾನ್ಯ ವಾಚ್ ಗಳನ್ನು ಮಾತ್ರ ವಿದ್ಯಾರ್ಥಿಗಳಿಗೆ ಧರಿಸಲು ಅವಕಾಶ

  • ಹೊಸ ವರ್ಷ ಆಚರಣೆ – 23 ಸೂಚನೆಗಳನ್ನು ಪಾಲಿಸಬೇಕೆಂದ ಶಿವಮೊಗ್ಗ ಪೊಲೀಸರು

    ಹೊಸ ವರ್ಷ ಆಚರಣೆ – 23 ಸೂಚನೆಗಳನ್ನು ಪಾಲಿಸಬೇಕೆಂದ ಶಿವಮೊಗ್ಗ ಪೊಲೀಸರು

    ಶಿವಮೊಗ್ಗ: ಹೊಸ ವರ್ಷಕ್ಕೆ ವಿಶೇಷ ಟೀಂ ಜೊತೆ ಶಿವಮೊಗ್ಗ ಪೊಲೀಸರು ಸಜ್ಜಾಗಿದ್ದು ಸಾರ್ವಜನಿಕರಿಗೆ 23 ಸೂಚನೆಗಳನ್ನು ನೀಡಿದ್ದಾರೆ.

    2020ನೇ ಹೊಸ ವರ್ಷ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಡಿಸೆಂಬರ್ 31ರ ರಾತ್ರಿ ಜಿಲ್ಲಾಯಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರು ನಡೆದುಕೊಳ್ಳಬೇಕು. ಹೊಸ ವರ್ಷಾಚರಣೆಯೂ ಯಶಸ್ವಿಯಾಗಿ ಮತ್ತು ಶಾಂತ ರೀತಿಯಿಂದ ಆಚರಿಸುವ ಸಂಬಂಧ ಸಾರ್ವಜನಿಕರು ಈ ಕೆಳಕಂಡ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜ್ ಸೂಚಿಸಿದ್ದಾರೆ.

    1) ನಗರಗಳ ಮತ್ತು ತಾಲೂಕು ಕೇಂದ್ರಗಳಲ್ಲಿನ ಎಲ್ಲಾ ಹೋಟೆಲ್‍ಗಳು, ಭೋಜನ ಗೃಹ, ಕ್ಲಬ್‍ಗಳು, ಆಶ್ರಯ ಸ್ಥಾನಗಳು ಮತ್ತು ಸಂಘಗಳು, ಹಮ್ಮಿಕೊಂಡಿರುವ ಔತಣಕೂಟ/ಸಮಾರಂಭಗಳನ್ನು ಡಿಸೆಂಬರ್ 31ರಂದು ರಾತ್ರಿ ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸುವುದು.

    2) ಹೊಸ ವರ್ಷದ ಔತಣಕೂಟ, ಸಮಾರಂಭಗಳನ್ನು ನಡೆಸುವ ಬಗ್ಗೆ ಪೂರ್ವಾನುಮತಿಯನ್ನು ಪಡೆಯುವುದು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ನೋಡಿಕೊಳ್ಳುವುದು. ಏನಾದರೂ ಅಹಿತಕರ ಘಟನೆಗಳು ನಡೆದಲ್ಲಿ ಸಂಬಂಧಪಟ್ಟ ಆಯೋಜಕರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.

    3) ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮದ್ಯಪಾನ ವಾಹನ ಚಲಾವಣೆ ಮಾಡಬಾರದು. ಪಾನಮತ್ತರಾಗಿ ವಾಹನ ಚಾಲನೆ ಮಾಡಿದವರ ಮೇಲೆ ಡ್ರಂಕ್ & ಡ್ರೈವ್ ಪ್ರಕರಣ ದಾಖಲಿಸಿ, ಚಾಲನಾ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು.

    4) ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದಾಗಲಿ, ದ್ವಿಚಕ್ರ ವಾಹನದಲ್ಲಿ ಮೂರು ಜನ ಸವಾರಿ ಮಾಡುವುದು, ಸಾಹಸ ಪ್ರದರ್ಶನ/ವೀಲಿಂಗ್ ನಡೆಸುವುದು ನಿಷೇಧಿಸಿದೆ. ಇಲಾಖಾ ವತಿಯಿಂದ ಚುರುಕು ಪ್ರತಿಕ್ರಿಯಿಸುವ ತಂಡ ಮತ್ತು ಕಾವಲು ಪಡೆಯನ್ನು ರಚಿಸಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

    5) ಹೋಟೆಲ್, ಭೋಜನ ಗೃಹ, ಕ್ಲಬ್‍ಗಳಿಗೆ ಅವರುಗಳೇ ಖಾಸಗಿ ಭದ್ರತಾ ವ್ಯವಸ್ಥೆ ಏರ್ಪಡಿಸಲು ಸೂಚಿಸಿರುತ್ತೆ. ಸಿಸಿಟಿವಿ ಅಳವಡಿಸದಿದ್ದಲ್ಲಿ ಅಳವಡಿಸಲು ಸೂಚಿಸಿರುತ್ತೆ.

    6) ಹೋಟೆಲ್, ರೆಸಾರ್ಟ್, ಕ್ಲಬ್‍ಗಳ ಮುಖ್ಯಸ್ಥರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವವರ ಪೂರ್ಣ ವಿವರಗಳನ್ನು ಸರಹದ್ದಿನ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಒದಗಿಸುವುದು.

    7) ವಿವಿಧ ಸಂಘಟನೆಯವರು ವಿವಿಧ ಕಾರ್ಯಕ್ರಮಗಳ ಸಲುವಾಗಿ ಅನುಮತಿ ಪಡೆದು ಹಾಕಿರುವ ಬ್ಯಾನರ್, ಬಟ್ಟಿಂಗ್ಸ್, ಧ್ವಜಗಳ ಸುರಕ್ಷತೆಯನ್ನು ಸಂಬಂಧಪಟ್ಟವರೇ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು.

    8) ಅನುಮತಿಯನ್ನು ಪಡೆಯದೇ ಬ್ಯಾನರ್, ಬಂಟಿಂಗ್ಸ್, ಧ್ವಜಗಳನ್ನು ಹಾಕಿದ್ದೆ ಆದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.

    9) ಆಂಪ್ಲಿಫೈಡ್ ಸೌಂಡ್ ಸಿಸ್ಟಂ ಬಳಸಿದ್ದಲ್ಲಿ ಪೂರ್ವಾನುಮತಿ ಪಡೆಯತಕ್ಕದ್ದು. ಸೌಂಡ್ ಸಿಸ್ಟಂ ಅಳವಡಿಸಿದ್ದಲ್ಲಿ ಅಕ್ಕಪಕ್ಕದವರಿಗೆ ತೊಂದರೆಯಾಗದ ರೀತಿ ಮೇಲು ಧ್ವನಿಯಲ್ಲಿ ಬಳಕೆ ಮಾಡದೆ, ನಿಗದಿತ ಮಿತಿಯಲ್ಲಿ ಮತ್ತು ಸಮಯದಲ್ಲಿ ಮುಗಿಸುವುದು.

    10) ವಿದೇಶಿಯರು ಹೋಟೆಲ್, ರೆಸಾರ್ಟ್, ಹೋಮ್ ಸ್ಟೇ ಹಾಗೂ ಇತರೆ ತಂಗುದಾಣಗಳಲ್ಲಿ ವಾಸವಿದ್ದಲ್ಲಿ ಸುರಕ್ಷತೆಗಾಗಿ ಭದ್ರತೆ ಒದಗಿಸುವುದು.

    11) ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಇರುವವರು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಉಂಟು ಮಾಡದಂತೆ ಆಚರಣೆ ಮಾಡುವುದು.

    12) ಹೊಸ ವರ್ಷದ ಆಚರಣೆಯ ಸಮಾರಂಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗಿದ್ದಲ್ಲಿ ಆಯೋಜಕರೇ ಜವಬ್ದಾರರು.

    13) ಹೊಸ ವರ್ಷದ ಶುಭಾಶಯ ಕೋರುವ ನೆಪದಲ್ಲಿ ರಸ್ತೆಯ ಮೇಲೆ ಮನಬಂದಂತೆ ಓಡಾಡುವುದನ್ನು ಕಡ್ಡಾಯವಾಗಿ ನಿಷೇದಿಸಿದೆ.

    14) ಸಮಾರಂಭದಲ್ಲಿ ಅವಹೇಳನ ರೀತಿಯಲ್ಲಿ ನಡೆದುಕೊಳ್ಳುವುದು, ಜೂಜಾಟಗಳನ್ನು, ಕಾನೂನು ಬಾಹಿರ ಚಟುವಟಿಕೆಗಳನ್ನು ನಿಷೇದಿಸಿದೆ.

    15) ಯುವಕರು ಮತ್ತು ವಯಸ್ಕರು ರಸ್ತೆಯಲ್ಲಿ ಹೊಸ ವರ್ಷ ಆಚರಣೆಯ ಕಾರಣದಿಂದ ದುರ್ವರ್ತನೆ ತೋರಬಾರದು.

    16) ಅಬಕಾರಿ ಕಾಯ್ದೆ ಅಡಿಯಲ್ಲಿ ಪರವಾನಗಿ ಅನ್ವಯ ಮದ್ಯ ಮಾರಾಟ ವೇಳೆಯನ್ನು ಅನುಸರಿಸುವುದು.

    17) ರಸ್ತೆಯಲ್ಲಿ ಮದ್ಯಪಾನ ಮಾಡುವುದನ್ನು ನಿಷೇಧಿಸಿದೆ.

    18) ಮಹಿಳೆಯರು, ಹೆಣ್ಣು ಮಕ್ಕಳೊಂದಿಗೆ ಸಭ್ಯತೆಯಿಂದ ವರ್ತಿಸುವುದು ಮತ್ತು ಆಯೋಜಿತ ಕಾರ್ಯಕ್ರಮಗಳಲ್ಲಿ ಸ್ಥಳದಲ್ಲಿ ಮಹಿಳೆಯವರಿಗೆ ಆಸನದ ಪ್ರತ್ಯೇಕ ವ್ಯವಸ್ಥೆ ಮಾಡುವುದು.

    19) ಇತರರಿಗೆ ತೊಂದರೆಯಾಗುವ ರೀತಿ ಪಟಾಕಿ ಸುಡುವುದನ್ನು ನಿಷೇಧಿಸಿದೆ.

    20) ಹೊಸ ವರ್ಷದ ಸಮಾರಂಭ ನಡೆಸಿದಲ್ಲಿ ವಿಡಿಯೋ ಚಿತ್ರೀಕರಿಸುವುದು.

    21) ಕರ್ತವ್ಯ ನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಸಹಕರಿಸುವುದು.

    22) ಹೋಟೆಲ್, ರೆಸಾರ್ಟ್, ಕ್ಲಬ್‍ಗಳ ಸುತ್ತಲು ವಿದ್ಯುತ್ ದೀಪದ ವ್ಯವಸ್ಥೆ ಅಳವಡಿಸುವುದು.

    23) ಹೊಸ ವರ್ಷ ಆಚರಣೆಯು ಸಾರ್ವಜನಿಕರಿಗೆ ತೊಂದರೆಯಾಗದಂತೆ ಆಚರಿಸುವುದು.

    ಹೊಸ ವರ್ಷ ಆಚರಣೆಯನ್ನು ಶಾಂತ ರೀತಿಯಾಗಿ ನೆರವೇರುವ ಸಲುವಾಗಿ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಯೋಗ್ಯವಾದ ರೀತಿಯಲ್ಲಿ ಬಂದೋಬಸ್ತ್ ನಿಯೋಜಿಸಿಕೊಂಡಿದೆ. 2020ನೇ ಹೊಸ ವರ್ಷ ಎಲ್ಲರ ಬಾಳಲಿ ನೆಮ್ಮದಿಯನ್ನು ಹಾಗೂ ಸುಖ ಶಾಂತಿಯನ್ನು ತರಲಿ ಎಂದು ಶಿವಮೊಗ್ಗ ಪೊಲೀಸ್ ಇಲಾಖೆ ಹಾರೈಸಿದೆ.

  • ಹೊಸ ವರ್ಷಾಚರಣೆಗೆ ಪೊಲೀಸರಿಂದ ನ್ಯೂ ರೂಲ್ಸ್

    ಹೊಸ ವರ್ಷಾಚರಣೆಗೆ ಪೊಲೀಸರಿಂದ ನ್ಯೂ ರೂಲ್ಸ್

    ಮೈಸೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೈಸೂರು ನಗರ ಪೊಲೀಸ್ ಆಯುಕ್ತರು ಕೆಲವು ನಿಯಮಗಳನ್ನು ಜಾರಿಗೆ ತಂದಿದ್ದಾರೆ.

    ಸಾರ್ವಜನಿಕರು, ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಹಾಗೂ ಪಾರ್ಟಿ ಆಯೋಜಿಸುವ ಸಂಘ ಸಂಸ್ಥೆಗಳಿಗೆ ಪೊಲೀಸ್ ಆಯುಕ್ತರು ಕೆಲ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಿದ್ದಾರೆ.

    ಪೊಲೀಸ್ ಆಯುಕ್ತರು ನೀಡಿರುವ ಸೂಚನೆ:
    ಹೊಸ ವರ್ಷದ ದಿನ ಮಧ್ಯರಾತ್ರಿ 1 ಗಂಟೆಯೊಳಗೆ ಕಾರ್ಯಕ್ರಮವನ್ನು ಮುಗಿಸಬೇಕು. ಒಂದು ವೇಳೆ ರೆಸ್ಟೋರೆಂಟ್, ಬಾರ್‌ಗಳು ಹೆಚ್ಚುವರಿ ಸಮಯದವರೆಗೆ ಕಾರ್ಯಕ್ರಮ ನಡೆಸಬೇಕಾದರೆ, ಅವರು ಪೊಲೀಸ್ ಇಲಾಖೆ ಅನುಮತಿ ಪಡೆಯಬೇಕು. ಇನ್ನೂ ರೆಸ್ಟೋರೆಂಟ್ ಮತ್ತು ಬಾರ್‌ಗಳಲ್ಲಿ ಅಶ್ಲೀಲ, ಅರೆ ಬೆತ್ತಲೆ ಮತ್ತು ಬೆತ್ತಲೆ ನೃತ್ಯವನ್ನು ನಿಷೇಧಿಸಲಾಗಿದೆ.

    ಧ್ವನಿವರ್ಧಕ ಅಳವಡಿಸಲು ಪೊಲೀಸರ ಅನುಮತಿ ಕಡ್ಡಾಯ. ಮಹಿಳೆಯರು ಮತ್ತು ಯುವತಿಯರಿಗೆ ಬಲವಂತವಾಗಿ ಹೊಸ ವರ್ಷದ ಶುಭಶಯವನ್ನು ಕೋರಬಾರದು. ಮುಖ್ಯವಾಗಿ ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಇನ್ನೂ ಪಟಾಕಿ ಹಾಗೂ ಸಿಡಿ ಮದ್ದು ಸಿಡಿಸಿ ಸಾರ್ವಜನಿಕರಿಗೆ ತೊಂದರೆ ಕೊಡಕೂಡದು ಎಂದು ಪೊಲೀಸರು ಸೂಚನೆ ಕೊಟ್ಟಿದ್ದಾರೆ.

  • ಅಯೋಧ್ಯೆ ತೀರ್ಪು – ಸೋಷಿಯಲ್ ಮೀಡಿಯಾಗಳಲ್ಲಿ ಪಾಲಿಸಲೇಬೇಕಾದ 9 ಸೂಚನೆಗಳು

    ಅಯೋಧ್ಯೆ ತೀರ್ಪು – ಸೋಷಿಯಲ್ ಮೀಡಿಯಾಗಳಲ್ಲಿ ಪಾಲಿಸಲೇಬೇಕಾದ 9 ಸೂಚನೆಗಳು

    ಬೆಂಗಳೂರು: ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಪೊಲೀಸರು ಕೆಲವೊಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು-ಸುದ್ದಿ ಹರಡದಂತೆ ಸೂಚನೆ ನೀಡಿದ್ದಾರೆ.

    ಪರ-ವಿರೋಧ ತೀರ್ಪು ಬಂದರೆ ವಿಜಯೋತ್ಸವ ಆಚರಿಸುವುದಾಗಲೀ ಅಥವಾ ಘೋಷಣೆ ಕೂಗುವುದನ್ನಾಗಲಿ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ಅಯೋಧ್ಯೆಯಲ್ಲಿ ಸರ್ಪಗಾವಲು – ಇಂಟರ್‌ನೆಟ್ ಸ್ಥಗಿತ, 8 ತಾತ್ಕಾಲಿಕ ಜೈಲು ಸ್ಥಾಪನೆ

    ಸಾರ್ವಜನಿಕರಿಗೆ ಸೂಚನೆಗಳು
    – ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ವಾಟ್ಸಾಪ್, ಟ್ವಿಟ್ಟರ್ ಹಾಗೂ ಇನ್ನಿತರೆ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು, ಪೋಸ್ಟ್‌ಗಳನ್ನು, ಕಮೆಂಟ್‍ಗಳನ್ನು ಹಾಕಬೇಡಿ.

    – ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನಿಂದ ನಿಯಮಗಳು ಅನ್ವಯವಾಗಲಿದ್ದು, ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ವಾಟ್ಸಾಪ್, ಟ್ವಿಟ್ಟರ್ ಹಾಗೂ ಇನ್ನಿತರೆ ಜಾಲತಾಣಗಳ ಮೇಲೆ ಸೂಕ್ತ ನಿಗಾವಹಿಸಲಾಗಿದೆ.  ಇದನ್ನೂ ಓದಿ:ರಾಜ್ಯಾದ್ಯಂತ ಕಟ್ಟೆಚ್ಚರ – ಬಸ್ಸು ಆಟೋ, ಟ್ಯಾಕ್ಸಿ, ಮೆಟ್ರೋ ಯಥಾಸ್ಥಿತಿ

    – ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ತಪ್ಪು ಸಂದೇಶಗಳನ್ನು ಯಾರಿಗೂ ರವಾನಿಸಬೇಡಿ, ಈ ಬಗ್ಗೆ ಮಕ್ಕಳು, ಸಹೋದರ, ಸಹೋದರಿಯರು, ಅಕ್ಕಪಕ್ಕದವರು ಹಾಗೂ ಸಂಬಂಧಿಕರಿಗೆ ಈ ಮಾಹಿತಿಯನ್ನು ತಿಳಿಸಿ.

    – ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಧರ್ಮಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪೋಸ್ಟ್‌ ಅಥವಾ ವೀಡಿಯೋ ಸಂದೇಶಗಳನ್ನು ಪೋಸ್ಟ್‌ ಮಾಡಬೇಡಿ. ಇದನ್ನೂ ಓದಿ:ಒಂದೂವರೆ ಶತಮಾನದ ಅಯೋಧ್ಯೆ ವ್ಯಾಜ್ಯ ಇಂದು ಇತ್ಯರ್ಥ – ಯಾರ ವಾದ ಏನು? ಯಾವ ವರ್ಷ ಏನಾಯ್ತು?

    – ಯಾವುದೇ ರಾಜಕೀಯ ಹಾಗೂ ಧಾರ್ಮಿಕ ವಿಷಯದ ಬಗ್ಗೆ ನಿಂದನೀಯ ಸಂದೇಶಗಳನ್ನು ಕಳುಹಿಸುವುದು, ರವಾನಿಸುವುದು ಅಪರಾಧವಾಗಿದ್ದು ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸುದ್ದಿಯ ಮೂಲವನ್ನು ಪರಿಶೀಲಿಸದೇ ಅದನ್ನು ಇತರರಿಗೆ ಕಳುಹಿಸಲು ಹೋಗಬೇಡಿ.

    – ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿಚಾರವು ದೇಶದ ಅತೀ ಗಂಭೀರ ವಿಚಾರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್ ಸದಸ್ಯರುಗಳು ಗಂಭೀರವಾಗಿ ಯೋಚಿಸಿ, ಕಾನೂನು ಸುವ್ಯವಸ್ಥೆಗೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವಂತಹ ಸಂದೇಶಗಳನ್ನು ಹಾಕಬೇಡಿ. ಇದನ್ನೂ ಓದಿ:ಅಯೋಧ್ಯೆ ತೀರ್ಪು ಏನೇ ಬಂದ್ರೂ ಶಾಂತಿಯುತವಾಗಿ ಸ್ವಾಗತಿಸ್ತೀವಿ: ರೋಶನ್ ಬೇಗ್

    – ಸಾಮಾಜಿಕ ಜಾಲತಾಣಗಳಲ್ಲಿ ಬಂದಂತಹ ಪ್ರಚೋದನಾತ್ಮಕ ಸಂದೇಶಗಳನ್ನು ಬೇರೆ ಗ್ರೂಪ್‍ಗಳಿಗೆ ಮರು ಕಳುಹಿಸುವುದು (Forward) ಕಂಡುಬಂದಲ್ಲಿ, ಸಂದೇಶವನ್ನು ಕಳುಹಿಸಿದ ವ್ಯಕ್ತಿ ಮತ್ತು ಗ್ರೂಪ್ ಅಡ್ಮಿನ್‍ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು.

    – ಈ ವಿಚಾರವು ದೇಶದ ಸಾರ್ವಭೌಮತ್ವ ಹಾಗೂ ಸೌಹಾರ್ದತೆಗೆ ನೇರವಾಗಿ ಪರಿಣಾಮ ಬೀರುವಂತಹ ವಿಚಾರವಾದ್ದರಿಂದ ಯಾವುದೇ ತಪ್ಪು ಸಂದೇಶವನ್ನು ರವಾನಿಸಬೇಡಿ.

    – ನ್ಯಾಯಾಲಯದ ತೀರ್ಪನ್ನು ನಿಂದಿಸಬೇಡಿ. ತೀರ್ಪಿನ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿ ಅಭಿಪ್ರಾಯವನ್ನು ಎಲ್ಲೂ ಹಂಚಿಕೊಳ್ಳಬೇಡಿ.

    ತಪ್ಪದೇ ಈ ಮೇಲ್ಕಂಡ ವಿಚಾರವನ್ನು ಎಲ್ಲರಿಗೂ ತಿಳಿಸಿ, ವಿಷಯದ ಸಂಬಂಧ ನಿಯಮಗಳ ಬಗ್ಗೆ ಗಮನಹರಿಸಿ ಹಾಗೂ ಗುಂಪುಗಳು ಸದಾ ಜಾಗರೂಕರಾಗಿ ಇರಿ. ಮಾದರಿ ಸಮಾಜಕ್ಕೆ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ ಎಂದು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.