– ನಿಯಮ ರೂಪಸುವಂತೆ ಸರ್ಕಾರಕ್ಕೆ ಸೂಚನೆ
– ಸ್ವಚ್ಛ, ಹೌಸ್‍ಕೀಪಿಂಗ್ ಸೇರಿದಂತೆ ವಿವಿಧ ಕೆಲಸ
ಗಾಂಧಿನಗರ: ಕೊರೊನಾ ಎರಡನೇ ಅಲೆ, ಮೂರನೇ ಅಲೆ ಬಗ್ಗೆ ಚರ್ಚೆ ನಡೆಯುತ್ತಿದ್ದರೂ, ಹಲವರು ಮಾಸ್ಕ್ ಹಾಕದೇ, ಕೊರೊನಾ ನಿಯಮ ಪಾಲಿಸಿದೆ ಉಡಾಫೆ ತೋರುತ್ತಿದ್ದಾರೆ. ಇಂತಹವರಿಗೆ ಕೋರ್ಟ್ ಚಾಟಿ ಬೀಸಿದ್ದು, ಮಾಸ್ಕ್ ಹಾಕದವರನ್ನು ಕೊರೊನಾ ಸೆಂಟರ್‌ನಲ್ಲಿ ಕೆಲಸ ಮಾಡಿಸುವ ನಿಯಮ ರೂಪಿಸಿ ಎಂದು ಗುಜರಾತ್ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಮಾಸ್ಕ್ ಹಾಕದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದ್ದು, ಅಂತಹವರನ್ನು ಕೊರೊನಾ ಕೇಂದ್ರಗಳಲ್ಲಿ ಸಾರ್ವಜನಿಕರ ಸೇವೆ ನಿಯೋಜಿಸಬೇಕು. ಈ ನಿಟ್ಟಿನಲ್ಲಿ ನಿಯಮ ರೂಪಿಸಿ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿರುವ ಹೈಕೋರ್ಟ್, ಕೊರೊನಾ ನಿಯಮ ಉಲ್ಲಂಘಿಸುವವರು ಐದರಿಂದ 15 ದಿನಗಳ ವರೆಗೆ ಕನಿಷ್ಠ ನಾಲ್ಕರಿಂದ ಐದು ಗಂಟೆಗಳ ಕಾಲ ಯಾವುದೇ ಕೋವಿಡ್ ಕೇರ್ ಸೆಂಟರ್‍ನಲ್ಲಿ ವೈದ್ಯಕೀಯೇತರ ಕೆಲಸ ಮಾಡಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.
ಉಲ್ಲಂಘಿಸುವವರು ಕೊರೊನಾ ಕೇಂದ್ರಗಳ ಸ್ವಚ್ಛಗೊಳಿಸುವುದು, ಹೌಸ್ ಕೀಪಿಂಗ್, ಅಡುಗೆ ಮಾಡುವುದು, ಸಹಾಯಕರಾಗುವುದು, ಸೇವೆ, ದಾಖಲೆ ಸಿದ್ಧಪಡಿಸುವುದು, ಅಂಕಿ ಅಂಶಗಳ ಸಂಗ್ರಹಣೆ ಸೇರಿದದಂತೆ ಇತರೆ ಸೇವೆಗಳನ್ನು ಮಾಡಬೇಕು. ದಂಡದ ಜೊತೆಗೆ ಈ ಸೇವೆ ಮಾಡಬೇಕು.
ನಿಯೋಜಿಸಲಾದ ಕೆಲಸದ ಸ್ವರೂಪವು ನಿಯಮ ಉಲ್ಲಂಘಿಸುವವರ ವಯಸ್ಸು, ವಿದ್ಯಾರ್ಹತೆ, ಲಿಂಗ ಹಾಗೂ ಸ್ಥಿತಿಗೆ ಅನುಗುಣವಾಗಿರುತ್ತದೆ. ಕೋರ್ಟ್ ಆದೇಶ ಪಾಲಿಸಿದ ಕುರಿತು ಡಿಸೆಂಬರ್ 24ರಂದು ಸರ್ಕಾರ ಸ್ಥಿತಿಗತಿ ವರದಿ ಸಲ್ಲಿಸಬೇಕು. ವಿಶಾಲ್ ಅವತಾನಿ ಅವರು ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕಕ್ತಿ ಅರ್ಜಿ ವಿಚಾರಣೆ ನಡೆಸಿ ನ್ಯಾಯಾಲಯ ಈ ನಿರ್ದೇಶನ ನೀಡಿದೆ.
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಮತ್ತೆ ಕಠಿಣ ನಿಯಮಗಳಿಗೆ ಸರ್ಕಾರ ಮನಸ್ಸು ಮಾಡಿದಂತೆ ಕಾಣುತ್ತಿದೆ. ಸರ್ಕಾರದ ಬತ್ತಳಿಕೆಯಲ್ಲಿದ್ದ ಮತ್ತೆ ಹಳೇ ನಿಯಮಗಳನ್ನು ಒಂದೊಂದಾಗಿ ಜಾರಿ ಮಾಡುತ್ತಿದೆ. ಅಲ್ಲದೇ ಕರ್ನಾಟಕಕ್ಕೆ ಮೂರು ತಿಂಗಳು ಕೊರೊನಾ ಮಹಾ ಗಂಡಾಂತರ ಎದುರಾಗಲಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಟಫ್ ರೂಲ್ಸ್ – ಯಾರಿಗೆ ಕೊರೊನಾ ಟೆಸ್ಟ್ ಕಡ್ಡಾಯ?
ಮೂರು ತಿಂಗಳಿಗೆ ಕರ್ನಾಟಕ ಸರ್ಕಾರದಿಂದ ಟಫ್ ರೂಲ್ಸ್ ಜಾರಿ ಮಾಡಿದೆ. ಯಾಕೆಂದರೆ ಮುಂದಿನ ಮೂರು ತಿಂಗಳಲ್ಲಿ ಹಬ್ಬ, ಮದುವೆ, ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ನವರಾತ್ರಿ ಪೂಜಾ ಕಾರ್ಯಕ್ರಮ ಜಾಸ್ತಿ ನಡೆಯಲಿದೆ. ಹೀಗಾಗಿ ಈ 3 ತಿಂಗಳಲ್ಲಿ ಕಾರ್ಯಕ್ರಮ ಮಾಡಿದರೆ ಟಫ್ ರೂಲ್ಸ್ ಪಾಲನೆ ಕಡ್ಡಾಯವಾಗಿದೆ. ಇದರಿಂದ ಕರ್ನಾಟಕ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಕೊರೊನಾ ಮಹಾ ಅಗ್ನಿಪರೀಕ್ಷೆಯನ್ನ ಎದುರಿಸಬೇಕಾಗುತ್ತದೆ.
3 ತಿಂಗಳಿಗೆ ಹೊಸ ರೂಲ್ಸ್
* ಕಂಟೈನ್ ಮೆಂಟ್ ವಲಯದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಕಂಟೈನ್ ಮೆಂಟ್ ಝೋನ್ ಹೊರಗೆ ಅಷ್ಟೇ ಕಾರ್ಯಕ್ರಮಗಳಿಗೆ ಅನುಮತಿ.
* ಮದುವೆ, ಸಮಾರಂಭ, ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ರ‍್ಯಾಲಿ , ಸಾರ್ವಜನಿಕ ಸಮಾರಂಭ ಯಾವುದೇ ಕಾರ್ಯಕ್ರಮ ನಡೆಸಿದರೆ 65 ವರ್ಷ ಮೇಲ್ಪಟ್ಟವರನ್ನು, ಗರ್ಭಿಣಿಯರನ್ನು ಹಾಗೂ ಇತರೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರನ್ನು ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ವಹಿಸಬೇಕು.
* ಮದುವೆ, ಪೂಜಾ ಕಾರ್ಯ, ರ‍್ಯಾಲಿಗಳು ವಾರಗಟ್ಟಲೇ ನಡೆಯುವಂದ್ದರೆ ಪ್ರತಿ ದಿನವೂ ಕಡಿಮೆ ಜನ ಸೇರುವಂತೆ ನೋಡಿಕೊಳ್ಳಬೇಕು. ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ
* ಪ್ರತಿ ಸಮಾರಂಭಕ್ಕೂ ಪ್ರತ್ಯೇಕ ಎಂಟ್ರಿ ಎಕ್ಸಿಟ್ ಇರಬೇಕು.
* ಜನ ಸೇರುವ ಕಾರ್ಯಕ್ರಮಗಳಲ್ಕಿ ಜನ ಸಾಮಾಜಿಕ ಅಂತರ ಪಾಲನೆ ಮಾಡುತ್ತಿದ್ದಾರೆಯೇ ಅಥವಾ ಮಾಸ್ಕ್ ಧರಿಸಿದ್ದಾರೆಯೇ ಅನ್ಮೋದನ್ನು ನೋಡಲು ಕ್ಯಾಮೆರಾ ಕಣ್ಗಾವಲು ಇರಬೇಕು.
* ರ‍್ಯಾಲಿ ನಡೆಸೋದಿದ್ದರೆ ಅಂಬುಲೆನ್ಸ್ ಕಡ್ಡಾಯ ಹಾಗೂ ಸ್ಥಳೀಯ ಆಸ್ಪತ್ರೆಗೆ ಮೊದಲೇ ಮಾಹಿತಿ ಕೊಟ್ಟಿರಬೇಕು.
* ಪ್ರತಿ ದೊಡ್ಡ ಕಾರ್ಯಕ್ರಮವನ್ನು ನಿರ್ದಿಷ್ಟ ಸ್ಥಳದಲ್ಲಿ ಆಯೋಜಿಸಿದರೆ ಅಲ್ಲಿ ಸೋಂಕು ಶಂಕಿತರನ್ನು ವೈದ್ಯರಿಗೆ ತೋರಿಸಬೇಕು. ವೈದ್ಯರು ಸ್ಥಳಕ್ಕೆ ಬರುವವರೆಗೆ ಐಸೋಲೇಟ್ ಮಾಡಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಂಡಿರಬೇಕು.
* ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿನಿತಾರೆಯನ್ನು ಕರೆಸುವಂತಹ ಸಂದರ್ಭದಲ್ಲಿ ಜನಸಂದಣಿಯ ಬಗ್ಗೆ ಗಮನಹರಿಸಬೇಕು.
ಬೆಂಗಳೂರು: ಕೊರೊನಾ ಕಂಟ್ರೋಲ್ ಮಾಡಲು ರಾಜ್ಯ ಸರ್ಕಾರ ಬಸ್ ಪ್ರಯಾಣಿಕರಿಗೆ ಮತ್ತೆ ಹಳೆಯ ನಿಯಮಗಳನ್ನು ಜಾರಿಗೆ ತಂದಿದೆ.
ರಾಜ್ಯದಲ್ಲಿ ಕೊರೊನಾ ಕಂಟ್ರೋಲ್‍ಗೆ ಬರುತ್ತಿಲ್ಲ. ಇದರಿಂದ ಎತ್ತಚ್ಚ ರಾಜ್ಯ ಸರ್ಕಾರ ಈಗ ಟಫ್ ರೂಲ್ಸ್ ಗಳ ಮೊರೆ ಹೋಗಿದೆ. ಮಾಸ್ಕ್ ಧರಿಸದವರಿಗೆ ನಗರದಲ್ಲಿ ಸಾವಿರ ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂ. ದಂಡ ವಿಧಿಸಲು ತೀರ್ಮಾನ ಮಾಡಿದೆ. ಅಂತಯೇ ಬಸ್ ಪ್ರಯಾಣಿಕರಿಗೂ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ಕೊರೊನಾ ಕಂಟ್ರೋಲ್‍ಗೆ ಬಸ್‍ಗಳಲ್ಲಿ ಹಳೇ ರೂಲ್ಸ್ ಜಾರಿ ತಂದಿದೆ. ಜೊತೆಗೆ ಶೇ.50ರಷ್ಟು ಪ್ರಯಾಣಿಕರ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಬಸ್‍ಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ ಪಾಲಿಸಲೇಬೇಕು. ಮೊದಲಿದ್ದಂತೆ ಸೀಟ್ ಬಿಟ್ಟು ಸೀಟ್ ಕುಳಿತುಕೊಳ್ಳಬೇಕು. ಬಸ್‍ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಮಾಸ್ಕ್ ಕಡ್ಡಾಯ ಧರಿಸಬೇಕು. ಬಸ್‍ಗಳಲ್ಲಿ ನಿಂತು ಪ್ರಯಾಣ ಮಾಡುವುದಕ್ಕೆ ಇನ್ನೂ ಮುಂದೆ ಅವಕಾಶವಿರುವುದಿಲ್ಲ.
ಸಾರಿಗೆ ವ್ಯವಸ್ಥೆಯಲ್ಲಿ ಶೇ. 50ರಷ್ಟು ಮಾತ್ರ ಸಂಚಾರಕ್ಕೆ ಅವಕಾಶ ಎಂಬ ಆದೇಶಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಎಂಟಿಸಿ ಬಸ್‍ಗಳು ಕಡಿಮೆ ಸಂಖ್ಯೆಯಲ್ಲಿ ಓಡಾಡುತ್ತಿವೆ. ಹೀಗಿರುವಾಗ ಸಿಕ್ಕ ಬಸ್ಸುಗಳಿಗೆ ಪ್ರಯಾಣ ಮಾಡಬೇಕು. ಈ ವೇಳೆ ಪ್ರಯಾಣಿಕರ ಸಂಖ್ಯೆಯು ಹೆಚ್ಚಿರುತ್ತೆ. ಕೇವಲ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಅಂದ್ರೆ ಉಳಿದವರು ನಡೆದುಕೊಂಡು ಹೋಗಬೇಕಾ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ತುಂಬಿದ ಬಸ್ಸುಗಳಲ್ಲಿ ಸಂಚಾರ ಮಾಡೋಕೆ ಭಯ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಏಳು ದಿನ ಬೆಂಗಳೂರು ಲಾಕ್‍ಡೌನ್ ಹಿನ್ನೆಲೆಯಲ್ಲಿ ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಮೀಷನರ್ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.
ಕಮೀಷನರ್ ಭಾಸ್ಕರ್ ರಾವ್ ಕಂಟ್ರೋಲ್ ರೂಂ ಮೂಲಕ ಪೊಲೀಸ್ ಠಾಣೆಗಳಿಗೆ ಸೂಚನೆ ಕೊಟ್ಟಿದ್ದಾರೆ. ಇಂದಿನಿಂದ ಜುಲೈ 22ರ ಬೆಳಗಿನ ಜಾವ 5 ಗಂಟೆಯವರೆಗೆ ಲಾಕ್‍ಡೌನ್ ಇರುತ್ತೆ. ಈ ವೇಳೆ ಕೆಲವು ವ್ಯಾಪಾರ ವಹಿವಾಟುಗಳು ನಡೆಯುತ್ತೆ ಅವರಿಗೆ ಅವಕಾಶ ಮಾಡಿ ಕೊಡಬೇಕು. ಅಲ್ಲದೇ ಲಾಕ್‍ಡೌನ್ ವೇಳೆ ಸಾರ್ವಜನಿಕರ ಜೊತೆ ಮೃದುವಾಗಿ ವರ್ತನೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದಾರೆ.
ಕಮೀಷನರ್ ಸೂಚನೆಗಳು:
* ಲಾಕ್ ಡೌನ್ ವೇಳೆ ಸಾರ್ವಜನಿಕರ ಜೊತೆ ಮೃದುವಾಗಿ ವರ್ತನೆ ಮಾಡಬೇಕು.
* ಕೆಲವು ವ್ಯಾಪಾರ ವಹಿವಾಟುಗಳು ನಡೆಯುತ್ತೆ ಅವರಿಗೆ ಅವಕಾಶ ಮಾಡಿ ಕೊಡಬೇಕು.
* ಇದು ಏಳು ದಿನದ ಲಾಕ್ ಡೌನ್ ಆಗಿದ್ದು ಯಾರಿಗೂ ಯಾವುದೇ ಪಾಸ್ ಕೊಡ್ತಿಲ್ಲ.
* ಪೊಲೀಸರು ತಪಾಸಣೆ ವೇಳೆ ಅವರ ಐಡಿ ಕಾರ್ಡ್ ಪರಿಶೀಲನೆ ಮಾಡಿ ಬಿಡಬೇಕು.
* ಸರ್ಕಾರ ಬೆಳಗಿನ ಜಾವ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಅವಕಾಶ ಕೊಟ್ಟಿದೆ.
* ಆ ಬಳಿಕ ಮೆಡಿಕಲ್ ಸಂಬಂಧಪಟ್ಟವು ಹೊರತುಪಡಿಸಿ ಉಳಿದೆಲ್ಲ ಬಂದ್ ಆಗಬೇಕು.
* ಯಾರ ಜೊತೆ ಜಗಳ ಮಾಡಬಾರದು, ಅವಾಚ್ಯ ಶಬ್ದ ಬಳಸಬಾರದು.
* ಎಲೆಕ್ಟ್ರಾನಿಕ್ ಮೀಡಿಯಾ, ಫೋಟೋ ಜನರ್ಲಿಸ್ಟ್, ಪತ್ರಿಕೆ ವಿತರಕರ ಐಡಿ ಕಾರ್ಡ್ ಇದ್ದರೆ ಸಾಕು ಪಾಸ್ ಬೇಕಿಲ್ಲ.
* ಹಣ್ಣು, ಹಂಪಲು , ತರಕಾರಿ ಮಾರಾಟ ಮಾಡುವವರಿಗೆ ಪಾಸ್ ಬೇಡ. ಆದ್ರೆ ಅನವಶ್ಯಕವಾಗಿ ಓಡಾಡೋದಕ್ಕೆ ಬಿಡಬಾರದು.
* ಅನವಶ್ಯಕವಾಗಿ ಜಗಳ, ಚೆಕ್ ಮಾಡಬಾರದು, ಜನರ ಜೊತೆ ಜವಾಬ್ದಾರಿಯುತವಾಗಿ ವರ್ತನೆ ಮಾಡಬೇಕು..
* ಕೊರೊನಾದಿಂದ ಸಿಬ್ಬಂದಿ ಕೊರತೆ ಇದೆ. ಆದ್ದರಿಂದ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ. ವೈಟ್ ಫೀಲ್ಡ್ ಡಿಸಿಪಿ ಎಲ್ಲ ಸ್ಟೇಷನ್‍ಗೆ ಮ್ಯಾನೇಜ್ ಮಾಡುತ್ತಾರೆ. ಅವರನ್ನ ಕೆಲಸಕ್ಕೆ ಬಳಸಿಕೊಳ್ಳಬೇಕು. ನನಗೆ ಗೊತ್ತಿಲ್ಲ ಹಾಗೇ ಹೀಗೆ ಅನ್ನಬಾರದು.
* ಸ್ವಯಂಸೇವಕರಿಗೆ ಒಂದು ಜಾಕೆಟ್ ಮತ್ತು ಕ್ಯಾಪ್ ಕೊಡಲಾಗುವುದು.
* ಬ್ಯಾರಿಕೇಡ್ ಬಳಿ, ಕಂಪ್ಯೂಟರ್ ಆಪರೇಟಿಂಗ್, ಬಂದೋಬಸ್ತ್‌ಗೆ ಸ್ವಯಂ ಸೇವಕರನ್ನು ಬಳಸಿಕೊಳ್ಳಬಹುದು. ಸ್ವಯಂ ಸೇವಕರನ್ನು ಕಂಟೈನ್ಮೆಂಟ್ ಝೋನ್‍ಗೆ ಕರೆದುಕೊಂಡು ಹೋಗಬಾರದು.
ಇಂದಿನಿಂದ ಒಂದು ವಾರಗಳು ಕಾಲ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಲಾಕ್‍ಡೌನ್ ಮಾಡಲಾಗಿದೆ. ಬೆಂಗಳೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿತ್ತು. ಹೀಗಾಗಿ ಕೊರೊನಾ ಚೈನ್ ಕಟ್ ಮಾಡುವ ದೃಷ್ಟಿಯಿಂದ ಮತ್ತೆ ಒಂದು ವಾರ ಲಾಕ್‍ಡೌನ್ ಮಾಡಲಾಗಿದೆ.
ಧಾರವಾಡ: ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದರೂ ಸಾಮಾಜಿಕ ಅಂತರ ನಿಯಮ ಪಾಲಿಸದೇ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ವಾಹನಗಳನ್ನು ಪೊಲೀಸರು ಸೀಜ್ ಮಾಡಿ, ಪ್ರಕರಣ ದಾಖಲಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೂರ್ವ ಮತ್ತು ಪಶ್ಚಿಮ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರತ್ಯೇಕವಾಗಿ ಒಟ್ಟು ಒಂಬತ್ತು ಪ್ರಕರಣಗಳನ್ನು ದಾಖಲಿಸಿ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 3 ಬೇಂದ್ರೆ ನಗರಸಾರಿಗೆ ವಾಹನಗಳು, ಆಟೋ ರಿಕ್ಷಾ, ಮ್ಯಾಕ್ಸಿಕ್ಯಾಬ್ ಹಾಗೂ ಸರಕು ಸಾಗಣೆ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರ ನಿರ್ದೇಶನದ ಮೇರೆಗೆ ಆರ್‍ಟಿಓ ಅಧಿಕಾರಿಗಳಾದ ಅಪ್ಪಯ್ಯ ನಾಲತ್ವಾಡಮಠ ಹಾಗೂ ಸಿ.ಡಿ.ನಾಯಕ್ ಅವರ ನೇತೃತ್ವದಲ್ಲಿ ಅವಳಿ ನಗರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ ದಿನೇ ದಿನೇ ಸ್ಫೋಟವಾಗಿದೆ. ಇಷ್ಟು ದಿನ 100 ರಿಂದ 150 ಹೊಸ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಶನಿವಾರ ಬರೋಬ್ಬರಿ 596 ಪ್ರಕರಣ ದಾಖಲಾಗಿವೆ. ಈ ಮೂಲಕ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 2,592ಕ್ಕೆ ಏರಿಕೆ ಆಗಿದೆ.
ಜೂನ್ 6 ರವರೆಗೂ ನಿಯಂತ್ರಣದಲ್ಲಿದ್ದ ಕೊರೊನಾ ಜೂನ್ 6 ನಂತರ ಬೆಂಗಳೂರಿನಲ್ಲಿ ಸ್ಫೋಟವಾಗುತ್ತಿದೆ. ವಯಸ್ಸಾದವರಲ್ಲಿ, ಉಸಿರಾಟದ ಸಮಸ್ಯೆ ಇದ್ದವರಲ್ಲಿ, ನಾನಾ ಕಾಯಿಲೆಗಳಿಂದ ಬಳಲುತ್ತಾ ಇದ್ದವರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಅಲ್ಲದೇ ಬೆಂಗಳೂರಿನಲ್ಲಿ 84 ಜನ ಮರಣ ಹೊಂದಿದ್ದಾರೆ. ಈ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಲು ಕಾರಣ ಏನು? ಸರ್ಕಾರ ಎಲ್ಲಿ ಎಡವಿತು ಎಂಬ ಆತಂಕ ಶುರುವಾಗಿದೆ. ಸರ್ಕಾರದ ನಿರ್ಲಕ್ಷ್ಯ ಮತ್ತು ಎಡವಟ್ಟು ನಿರ್ಧಾರಗಳೇ ಕೊರೊನಾ ಸ್ಫೋಟವಾಗಲು ಕಾರಣ ಎನ್ನಬಹುದಾಗಿದೆ.
1. ಕ್ವಾರಂಟೈನ್ ದಿನಕ್ಕೊಂದು ನಿಯಮ: ಆರಂಭದಲ್ಲಿ ಅನ್ಯರಾಜ್ಯದಿಂದ ಬಂದವರಿಗೆ ಹದಿನಾಲ್ಕು ದಿನದ ಸಾಂಸ್ಥಿಕ ಕ್ವಾರಂಟೈನ್ ಇತ್ತು. ಅದಾದ ಬಳಿಕ ಮಹಾರಾಷ್ಟ್ರಕ್ಕೆ ಮಾತ್ರ ಏಳು ದಿನದ ಸಾಂಸ್ಥಿಕ ಕ್ವಾರಂಟೈನ್ ಉಳಿದ ರಾಜ್ಯಕ್ಕೆ ಹದಿನಾಲ್ಕು ದಿನ ಹೋಂ ಕ್ವಾರಂಟೇನ್ ರೂಲ್ಸ್ ಜಾರಿ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೋಂ ಕ್ವಾರಂಟೈನ್‍ಗೆ ಹೋದವರು ಸರಿಯಾಗಿ ನಿಯಮ ಪಾಲನೆ ಮಾಡದೇ ಸೋಂಕು ಹೆಚ್ಚಾಗಿದೆ.
2. ರೋಗ ಲಕ್ಷಣ ಇರೋರಿಗಷ್ಟೇ ಟೆಸ್ಟಿಂಗ್: ಅನ್ಯರಾಜ್ಯದಿಂದ ಬರುವವರಿಗೆ ಆರಂಭದಲ್ಲಿ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲಾಗುತ್ತಿತ್ತು. ಆದರೆ ಪರಿಸ್ಥಿತಿ ಕೈಮೀರುವ ವೇಳೆ ರೋಗಲಕ್ಷಣ ಇರೋರಿಗಷ್ಟೇ ಟೆಸ್ಟ್ ಅಂತ ಘೋಷಣೆ ಮಾಡಲಾಗಿತ್ತು. ಇದರಿಂದ ಸದ್ದಿಲ್ಲದೇ ರೋಗ ಹರಡಿದೆ.
3. ವಾರ್ ರೂಂ ವಿಶ್ಲೇಷಣೆ ಕಡೆಗಣನೆ: ಕೋವಿಡ್ ವಾರ್ ರೂಂ, ಬೆಂಗಳೂರಿನಲ್ಲಿ ಹೈ ರಿಸ್ಕ್ ಕೇಸ್‍ಗಳು ಮತ್ತು ರೋಗಲಕ್ಷಣ ಇಲ್ಲದೇ ಇರೋರ ಬಗ್ಗೆ ಟೆಸ್ಟ್ ರಿಪೋರ್ಟ್ ಮಾಡಿ ಎಚ್ಚರಿಕೆ ನೀಡುತ್ತಿತ್ತು. ಆದರೆ ವಾರ್ ರೂಂ ವಿಶ್ಲೇಷಣೆಯನ್ನು ಕಡೆಗಣಿಸಿ ಕೇವಲ ರೋಗ ಲಕ್ಷಣ ಹೊಂದಿದವರಿಗೆ ಮಾತ್ರವೇ ಪರೀಕ್ಷೆ ನಡೆಸಲು ಆದೇಶಿಸಿದೆ. ಜೊತೆಗೆ ಪರೀಕ್ಷೆಯಲ್ಲೂ ನಿಯಮ ಸಡಿಲಿಸಿದೆ.
3. ದ್ವಿತೀಯ ಸಂಪರ್ಕ ವ್ಯಕ್ತಿಗಳಿಗೆ ಕ್ವಾರಂಟೈನ್, ಪರೀಕ್ಷೆ ಕೈ ಬಿಟ್ಟಿದ್ದು: ದ್ವಿತೀಯ ಸಂಪರ್ಕದ ವ್ಯಕ್ತಿಗಳನ್ನ ಹೋಟೆಲ್ ಕ್ವಾರಂಟೈನ್ ಮಾಡದೇ ಹೋಂ ಕ್ವಾರಂಟೈನ್ ಸೂಚಿಸಿದ್ದು ಮತ್ತು ದ್ವಿತೀಯ ಸಂಪರ್ಕ ವ್ಯಕ್ತಿಗಳಿಗೆ ಟೆಸ್ಟಿಂಗ್ ಕೈ ಬಿಟ್ಟಿದ್ದು. ಇವರು ನಗರದಲ್ಲೆಲ್ಲಾ ಓಡಾಡಿ ಸೋಂಕು ಹರಡಿದ್ದಾರೆ. ಕ್ವಾರಂಟೈನ್ ಅವಧಿ ಕಡಿಮೆ ಮಾಡುವುದರ ಜೊತೆಗೆ ಫಲಿತಾಂಶ ಬರುವುದಕ್ಕೆ ಮೊದಲೇ ಕ್ವಾರಂಟೈನ್ ನಲ್ಲಿ ಇರುವವರನ್ನು ಮನೆಗೆ ಕಳುಹಿಸಿದ್ದು.
5. ರ್‍ಯಾಂಡಮ್ ಟೆಸ್ಟ್ ನಿಲ್ಲಿಸಿದ್ದು: 12 ದಿನಕ್ಕೆ ಇದ್ದ ನಿಗಾ ಅವಧಿಯನ್ನು 10 ದಿನಗಳಿಗೆ ಇಳಿಸಿದೆ. ಅಲ್ಲದೇ ರೋಗ ಲಕ್ಷಣ ಇಲ್ಲದ ಸೋಂಂಕಿತರನ್ನು ಏಳೇ ದಿನಕ್ಕೆ ಮನೆಗೆ ಕಳುಹಿಸಲಾಗುತ್ತಿದೆ. ಆದರೆ ನೆಗೆಟಿವ್ ಇದ್ದವರು ಕೂಡ ರೋಗ ಹಬ್ಬುವ ಸಾಧ್ಯತೆ ಇದ್ದರೂ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಸೋಂಕು ಹೆಚ್ಚಿರುವ ಕಂಟೈನ್ಮೆಟ್ ವಲಯಗಳಲ್ಲಿ ರ್‍ಯಾಂಡಮ್ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ರೋಗ ಲಕ್ಷಣವೇ ಇಲ್ಲದ ಬಹಳಷ್ಟು ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಇದೀಗ ರ್‍ಯಾಂಡಮ್ ಪರೀಕ್ಷೆಯನ್ನು ತ್ಕಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ.
6. ಏರಿಯಾ ಸೀಲ್‍ಡೌನ್ ನಿಯಮಗಳು ಸರಿಯಾಗಿ ಪಾಲನೆ ಆಗದೇ ಇರುವುದರ ಜೊತೆಗೆ ತಜ್ಞರ ಸಲಹೆಗಳಿಗೆ ಹೆಚ್ಚು ಒತ್ತು ಕೊಡದೇ ಇರದ ಕಾರಣ ಸೋಂಕು ಹೆಚ್ಚಾಗಿದೆ.
7. ವಿಷಮಶೀತ ಜ್ವರ ಮತ್ತು ಉಸಿರಾಟದ ಪ್ರಕರಣಗಳು ಜಾಸ್ತಿ ಆಗುತ್ತಿದ್ದರೂ ಬೆಂಗಳೂರಿನಲ್ಲಿ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡದೇ ಇರುವುದು
8 ಸರ್ಕಾರದ ಎಡವಟ್ಟು ತೀರ್ಮಾನಗಳು:
* ಹೊರ ರಾಜ್ಯದಿಂದ ಬಂದತ್ತವರಿಗೆ ಕ್ವಾರಂಟೈನ್ ಮಾಡದೇ ಹೊಂ ಕ್ವಾರಂಟೈನ್ ಸೂಚಿಸಿದ್ದು
* ಸ್ಥಳೀಯ ಮಟ್ಟದಲ್ಲಿ ಟೆಸ್ಟಿಂಗ್ ನಿಲ್ಲಿಸಿದ್ದು
* ಆರಂಭದಲ್ಲಿ ಮಹಾನಗರಿ ಬಗ್ಗೆ ನಿರ್ಲಕ್ಷ್ಯ ಮಾಡಿದ್ದು
* ಕೊರೊನಾ ವಾರಿಯರ್ಸ್‍ಗೆ ಸರಿಯಾಗಿ ಟೆಸ್ಟ್ ಮಾಡದೇ ಇರೋದು
* ಐಎಲ್ ಐ, ಸ್ಯಾರಿ ಕೇಸ್ ಹೆಚ್ಚಳ
* ಟೆಸ್ಟಿಂಗ್ ನಲ್ಲಿ ನಿಧಾನ ಮಾಡಿದ್ದು, ಬೆಂಗಳೂರು ಟೆಸ್ಟಿಂಗ್ ಸ್ಟಾಪ್ ಮಾಡಿ ಹೊರ ರಾಜ್ಯದ ಟೆಸ್ಟಿಂಗ್ ಮಾಡಲು ಮುಂದಾಗಿದ್ದು
* ಸೆಕೆಂಡರಿ ಕಾಂಟ್ಯಾಕ್ಟ್ ಗಳನ್ನ ನಿರ್ಲಕ್ಷ್ಯ ಮಾಡಿದ್ದು
* ಆಸ್ಪತ್ರೆಯಲ್ಲಿ ನಿಗಾ ಅವಧಿ ಕಡಿಮೆ ಮಾಡಿದ್ದು
ಹೀಗೆ ಸರ್ಕಾರದ ಎಡವಟ್ಟು ಕಾರಣಗಳಿಂದ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಸದ್ಯಕ್ಕೆ ಸರ್ಕಾರ ಪ್ರತಿ ಭಾನುವಾರ ಕರ್ಫ್ಯೂವನ್ನು ಜಾರಿ ಮಾಡಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಓಟಕ್ಕೆ ಬ್ರೇಕ್ ಹಾಕಲು ಲಾಕ್‍ಡೌನ್ ಅಗತ್ಯ ಎಂದು ಬಿಬಿಎಂಪಿ ತಿಳಿಸಿತ್ತು. ಆದರೆ ಸರ್ಕಾರ ಮತ್ತೆ ಲಾಕ್‍ಡೌನ್ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈಗ ಪಾಲಿಕೆ ಯಥಾಸ್ಥಿತಿಯಲ್ಲಿ ಕೊರೊನಾ ಕಟ್ಟಿ ಹಾಕಲು ಮುಂದಾಗಿದೆ.
ಈಗಾಗಲೇ ಬಿಬಿಎಂ ಸಾಮಾಜಿಕ ಅಂತರ ಕಾಯಿರಿ, ಮಾಸ್ಕ್ ಬಳಸಿ ಎಂದು ಕಡ್ಡಾಯವಾಗಿ ತಿಳಿಸಿದೆ. ಈಗ ಕೊರೊನಾ ನಿಯಮವನ್ನು ಉಲ್ಲಂಘಿಸಿದರೆ 200 ರೂ ದಂಡ ಇದೆ. ತಪ್ಪುಗಳು ಹೆಚ್ಚಾಗುವ ಜಾಗಗಳಲ್ಲಿ ದಂಡದ ಪ್ರಮಾಣ 500 ರೂ. ಮಾಡಲು ಪಾಲಿಕೆ ಪ್ಲ್ಯಾನ್ ಮಾಡುತ್ತಿದೆ.
ಇನ್ನೂ ಕೊರೊನಾ ನಿಯಮವನ್ನು ಉಲ್ಲಂಘಿಸಿದರೆ ಪೊಲೀಸ್ ಇಲಾಖೆ ಮೂಲಕವೇ ಎಫ್‍ಐಆರ್, ದಂಡಗಳ ಕಾರ್ಯಚರಣೆ ಮಾಡುವುದು. ಬಿಬಿಎಂಪಿಯ ಮಾರ್ಷಲ್ ಗಳ ಸೂಕ್ತ ಬಳಕೆ ಮಾಡಿಕೊಳ್ಳುವುದು.
ಹೋಂ ಕ್ವಾರಂಟೈನ್, ಕೊರೊನಾ ರೋಗಿ ಅಪ್‍ಡೇಟ್, ಕೊರೊನಾ ನಿಯಮ ಉಲ್ಲಂಘಿಸುವವರ ಬಗ್ಗೆ ಮಾಹಿತಿ ಪಡೆಯಲು ಸ್ಥಳೀಯ ಎನ್‍ಜಿಓ ಹಾಗೂ ವ್ಯಕ್ತಿಗಳ ಬಳಕೆ ಮಾಡಿಕೊಳ್ಳುವುದು.
ಮೊಬೈಲ್ ಆಪ್, ವಾಚ್ ಸಿಸ್ಟಂ, ನೆಟ್ ವರ್ಕ್ ಮೂಲಕ ಮಾಹಿತಿ ಕಲೆಹಾಕುವುದು. ಒಂದು ವೇಳೆ ಈ ನಿಯಮವನ್ನು ಬ್ರೇಕ್ ಮಾಡಿದವರಿಗೆ ಎಫ್‍ಐಆರ್ ಹಾಗೂ ಸಾಂಸ್ಥಿಕ ಕ್ವಾರಂಟೈನ್ ಇರಲಿದೆ. ಹೀಗೆ ಹತ್ತು ಹಲವು ಐಡಿಯಾಗಳನ್ನ ಬಿಬಿಎಂಪಿ ಸಜ್ಜು ಗೊಳಿಸಿದೆ. ಈ ಸಂಬಂಧ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜೊತೆ ಚರ್ಚೆ ಮಾತ್ರ ಬಾಕಿ ಉಳಿದಿದೆ.
ಬೆಂಗಳೂರು: ಕೊರೊನಾ ಲಾಕ್‍ಡೌನ್ 5.0ನಲ್ಲಿ ಕೇಂದ್ರ ಸರ್ಕಾರವು ದೇವಾಲಯ ತೆರೆಯಲು ಅನುಮತಿ ನೀಡಿದೆ. ಹೀಗಾಗಿ ಜೂನ್ 8ರಿಂದ ದೇವಾಲಯ ತೆರೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಎಂಟು ಸೂತ್ರಗಳನ್ನು ಹೊರಡಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು, ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಮುಂಜಾಗ್ರತಾ ಕ್ರಮಗಳು ಅಗತ್ಯವಾಗಿದೆ. ಸರ್ಕಾರವು ಮುಂಬರುವ ದಿನಗಳಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಬಹುದು. ಹೀಗಾಗಿ ದೇವಾಲಯಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಬೇಕಿದೆ ಎಂದು ತಿಳಿಸಿದೆ.
ಎಂಟು ನಿಯಮಗಳು ಏನು?
1. ನಿತ್ಯ ಸ್ವಚ್ಛತೆ ಜೊತೆಗೆ ಒಳಗೆ-ಹೊರಗೆ ಡಿಸ್ ಇನ್ಫೆಕ್ಟರ್ ಸಿಂಪಡಣೆ ಕಡ್ಡಾಯ.
2. ಭದ್ರತಾ ಸಿಬ್ಬಂದಿಯನ್ನು ಎರಡು ಪಾಳಿಯಲ್ಲಿ ದೇವಾಲಯದ ಖರ್ಚಿನಲ್ಲೇ ನೇಮಿಸಿ.
3. ದೇವಾಲಯದ ಎಲ್ಲಾ ಸಿಬ್ಬಂದಿಗೂ ಮಾಸ್ಕ್ ಕಡ್ಡಾಯ, ಒಳಾಂಗಣದಲ್ಲಿ ಅರ್ಚಕರಿಗೆ ಮಾಸ್ಕ್ ವಿನಾಯಿತಿ.
4. ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ, ಸ್ಯಾನಿಟೈಸರ್ ಹಾಕಿದ ನಂತರವೇ ದೇವಸ್ಥಾನಕ್ಕೆ ಎಂಟ್ರಿ.
5. ಥರ್ಮಲ್ ಸ್ಕ್ರೀನಿಂಗ್‍ನಲ್ಲಿ ಜ್ವರ ಪತ್ತೆಯಾದರೆ ದೇವಸ್ಥಾನಕ್ಕೆ ನೋ ಎಂಟ್ರಿ.
6. ಮಾಸ್ಕ್ ಧರಿಸದ ಭಕ್ತಾದಿಗಳಿಗೆ ದೇವಸ್ಥಾನ ಪ್ರವೇಶವಿಲ್ಲ.
7. ಸಾಮಾಜಿಕ ಅಂತರ ಕಾಪಾಡಲು ಬಾಕ್ಸ್, ಲೈನ್ ರೂಪಿಸುವುದು ಕಡ್ಡಾಯ.
8. ದೇವಸ್ಥಾನದ ಶೌಚಾಲಯ ಆಗಾಗ ಸ್ವಚ್ಛಗೊಳಿಸಿ, ಅಗತ್ಯ ಡಿಸ್ ಇನ್ಫೆಂಕಟರ್ ಸಿಂಪಡಿಸಬೇಕು.
ಬೆಂಗಳೂರು: ಕೇಂದ್ರ ಸರ್ಕಾರ ಜೂನ್ 30 ವರೆಗೂ ಲಾಕ್‍ಡೌನ್ ವಿಸ್ತರಣೆ ಮಾಡಿದ್ದು, ಹಲವು ವಿನಾಯಿತಿಗಳನ್ನು ನೀಡಿ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಾರ್ಗಸೂಚಿ ಅನ್ವಯ ಜೂನ್ 8 ರಿಂದ ದೇವಸ್ಥಾನಗಳು, ಚರ್ಚ್, ಮಸೀದಿಗಳು ಸೇರಿದಂತೆ ಧಾರ್ಮಿಕ ಸ್ಥಳಗಳನ್ನ ತೆರೆಯಲು ಅವಕಾಶ ನೀಡಲಾಗಿದೆ.
ರಾಜ್ಯ ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಜೂನ್ 1ಕ್ಕೆ ದೇವಾಲಯ ತೆರೆಯಲು ದೇವಾಲಯಗಳ ಸಿಬ್ಬಂದಿ ಸಿದ್ಧವಾಗಿದ್ದರು. ದೇವಸ್ಥಾನಗಳನ್ನ ಸ್ವಚ್ಛ ಮಾಡಿ ಅರ್ಚಕರು ಕೂಡ ಸಿದ್ಧರಾಗಿದ್ದರು. ಆದರೆ ಜೂನ್ 1 ಅಲ್ಲ ಜೂನ್ 8 ರಿಂದ ದೇವಾಲಯಗಳನ್ನು ಓಪನ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಈ ವಾರವೇ ಸರ್ಕಾರ ಮಾರ್ಗಸೂಚಿ ಪ್ರಕಟಿಸಲಿದೆ. ಮಸೀದಿ, ಮಂದಿರ, ಚರ್ಚ್‍ಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿದೆ.
ಷರತ್ತುಗಳು ಏನಿರಬಹುದು?
* ಪ್ರತಿದಿನ ದೇವಾಲಯದ ಒಳಗೆ, ಹೊರಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಬೇಕು
* ಭಕ್ತರು ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವಂತೆ ನೋಡಿಕೊಳ್ಳಬೇಕು
* ಪ್ರತಿಯೊಬ್ಬರಿಗೂ ಥರ್ಮಲ್ ಸ್ಯ್ಕಾನಿಂಗ್ ಮಾಡಬೇಕು
* ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆ ಕಾಪಡಬೇಕು
* ಜನರನ್ನ ನಿಯಂತ್ರಿಸಲು ಹೆಚ್ಚಿನ ಸಿಬ್ಬಂದಿ ಬೇಕಾದ್ರೆ ದೇವಸ್ಥಾನದ ಖರ್ಚಿನಲ್ಲಿ ನೇಮಕಾತಿ ಮಾಡಿಕೊಳ್ಳಬೇಕು
* ದೇವಸ್ಥಾನಗಳನ್ನು ತೆರೆಯಲು ಸಮಯ ನಿಗದಿ ಸಾಧ್ಯತೆ
* ಅರ್ಚಕರು, ಸಿಬ್ಬಂದಿ ಅಗತ್ಯಕ್ಕಿಂತ ಹೆಚ್ಚಿಗಿದ್ದರೆ, ಶೇ.50 ರಷ್ಟು ಹಾಜರಿ
* ಭಕ್ತರು ಕೊಡುವ ಕಾಣಿಕೆ, ಹರಕೆ ವಸ್ತು, ಹೂ ಹಣ್ಣು ಸ್ವೀಕಾರಕ್ಕೆ ಪ್ರತ್ಯೇಕ ಸ್ಥಳ
* ದಿನಕ್ಕೆ ಎರಡರಿಂದ ಮೂರು ಸಲ ಇಡೀ ದೇವಸ್ಥಾನ ಸ್ಯಾನಿಟೈಸ್
ಮಸೀದಿಯಲ್ಲಿ ಷರತ್ತುಗಳು ಏನಿರಬಹುದು?
* ಮುಸ್ಲಿಂ ಬಾಂಧವರು ಸಾಧ್ಯವಾದಷ್ಟು ಮನೆಗಳಲ್ಲೇ ವಝೂ ಅಂದ್ರೆ ಮುಖ ಕೈ ಕಾಲು ಶುಚಿಗೊಳಿಸಿ ಮಸೀದಿಗೆ ಬರಬೇಕು
* ಮಸೀದಿಗಳಲ್ಲಿ ಕೈಕಾಲು ಶುಚಿಗೊಳಿಸುವ ಕೊಳವನ್ನು ಮುಚ್ಚಬೇಕು. ಅದರ ಬದಲು ಟ್ಯಾಪ್ ಬಳಸಬೇಕು
* ಮಸೀದಿಗಳಲ್ಲಿ ಒಂದೇ ಆಗಮನ, ನಿರ್ಗಮನ ದ್ವಾರ ಇರಬೇಕು
* ಪ್ರತಿ ಪ್ರಾರ್ಥನೆ ಮುನ್ನ ಮಸೀದಿಯ ಹಾಲ್ ಅನ್ನು ಶುಚಿಗೊಳಿಸಬೇಕು
* ಮಸೀದಿಗೆ ಬರುವ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಬೇಕು
* ಪ್ರಾರ್ಥನೆ ವೇಳೆ 1 ರಿಂದ 2 ಮೀಟರ್ ಅಂತರ ಕಾಯಬೇಕು
* ಪ್ರತಿ ವ್ಯಕ್ತಿ ತನ್ನ ಸ್ವಂತ ಪ್ರಾರ್ಥನಾ ಚಾಪೆಯನ್ನು ತರಬೇಕು
* ಫರ್ಜ್ ನಮಾಜನ್ನು 10-15 ನಿಮಷಕ್ಕೆ ಸೀಮಿತಗೊಳಿಸಬೇಕು
* ನಮಾಜ್ ಮಾಡಲು ಅತಿ ಹೆಚ್ಚು ಜನರಿದ್ದರೆ, ಎರಡು ಜಮಾತ್‍ಗೆ ವ್ಯವಸ್ಥೆ ಕಲ್ಪಿಸಬೇಕು
* ಸುನ್ನತ್ ಮತ್ತು ನಫೀಸ್ ಪ್ರಾರ್ಥನೆಯನ್ನು ಮನೆಯಲ್ಲೇ ಮಾಡಬೇಕು
* ಶುಕ್ರವಾರದ ಪ್ರಾರ್ಥನೆ 15-20 ನಿಮಿಷಕ್ಕೆ ಸೀಮಿತವಾಗಿರಬೇಕು
* ಮಸೀದಿ, ದರ್ಗಾಗಳ ಬಳಿ ಭಿಕ್ಷಾಟನೆಗೆ ನಿಷೇಧ
* ಮಸೀದಿ ಬಳಿ ಪ್ರಸಾದ ಹಂಚುವುದಕ್ಕೆ ನಿರ್ಬಂಧ
* ದರ್ಗಾದಲ್ಲಿನ ಸಮಾಧಿಗಳೆದುರು ಕೂತು ಪ್ರಾರ್ಥನೆ ಮಾಡಬಾರದು
* ಆಲಿಂಗನ, ಹಸ್ತಲಾಘವಕ್ಕೆ ನಿರ್ಬಂಧ
ಚರ್ಚ್ ತೆರೆಯಲು ಷರತ್ತು ಏನಿರಬಹುದು?
* ಚರ್ಚ್‍ನಲ್ಲಿ ಭಕ್ತರ ಸಂಖ್ಯೆಗೆ ಮಿತಿ ಹೇರಿಕೆ ಸಾಧ್ಯತೆ
* ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ
* ಇನ್ನೂ ದಿನದ ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ಚರ್ಚ್ ತೆರೆಯಲು ಅವಕಾಶ ಸಾಧ್ಯತೆ
* ಪ್ರಾರ್ಥನೆ ಬಳಿಕ ಚರ್ಚ್ ಒಳಗೆ ಸ್ವಚ್ಛಗೊಳಿಸೋದು ಕಡ್ಡಾಯ
* ಯಾವುದೇ ಕಾರಣಕ್ಕೂ ಜನಜಾತ್ರೆ ಆಗದಂತೆ ಕಟ್ಟುನಿಟ್ಟಿನ ಕ್ರಮ
ನವದೆಹಲಿ: ಕೊರೊನಾ 4ನೇ ಹಂತದ ಲಾಕ್‍ಡೌನ್ ಭಾನುವಾರ ಮುಕ್ತಾಯವಾಗಲಿದ್ದು, ಜೂನ್ 1ರಿಂದ 5ನೇ ಹಂತದ ಲಾಕ್‍ಡೌನ್ ಜಾರಿಗೆ ಬರಲಿದೆ. ಜೂನ್ 15ರವರೆಗೂ 5ನೇ ಹಂತದ ಲಾಕ್‍ಡೌನ್ ವಿಸ್ತರಣೆಯಾಗಬಹುದು. ಆದರೆ ಇದು ಕೇವಲ 13 ಮಹಾ ನಗರಗಳಿಗಳಿಗೆ ಮಾತ್ರ ಸೀಮಿತವಾಗುವ ಸಾಧ್ಯತೆ ಇದೆ. ಉಳಿದೆಡೆ ಮತ್ತಷ್ಟು ವಿನಾಯಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್, ಥಾಣೆ, ಪುಣೆ, ಹೈದರಾಬಾದ್, ಕೋಲ್ಕತಾ/ಹೌರಾ, ಇಂಧೂರ್, ಜೈಪುರ, ಜೋಧ್ಪುರ್, ಚೆಂಗಾಲಪಟ್ಟು ಮತ್ತು ತಿರುವಳ್ಳೂರುನಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಈ ನಗರಗಳಲ್ಲಿ ಮಾತ್ರ ಲಾಕ್‍ಡೌನ್ ಜಾರಿಯಾಗಬಹುದು ಎಂದು ಹೇಳಲಾಗುತ್ತಿದೆ.
ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಹೋಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗಿನ ದೂರವಾಣಿ ಮಾತುಕತೆ ವೇಳೆ ಒತ್ತಡ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ಹೋಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ಕೊಡುವ ಸಾಧ್ಯತೆಗಳಿವೆ ಎಂದು ಕೇಂದ್ರ ಸರ್ಕಾರದ ಮೂಲಗಳಿಂದ ಮಾಹಿತಿ ಲಭಿಸಿದೆ.
ಇದರ ಜೊತೆಗೆ ಕಫ್ರ್ಯೂ ಸಮಯ ಕೂಡ ವಿಸ್ತರಣೆಯಾಗುವ ಸಾಧ್ಯತೆ ಇದೆ. ರಾತ್ರಿ 7 ಗಂಟೆಯಿಂದ ಶುರುವಾಗಲಿರುವ ಕಫ್ರ್ಯೂವನ್ನು ಎರಡು ಗಂಟೆಗಳ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೂ ಕಫ್ರ್ಯೂ ವಿಧಿಸುವ ಚಿಂತನೆ ನಡೆದಿದೆ. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗಲಿದೆ.
ರಾಜ್ಯ ಸರ್ಕಾರಗಳಿಗೆ ಕೇಂದ್ರದ ಎಚ್ಚರಿಕೆ:
ದೇಶದ 145 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಈ ಜಿಲ್ಲೆಗಳ ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಎಚ್ಚರಿಕೆ ವಹಿಸದಿದ್ದರೇ ಅಪಾಯ ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಕಳೆದು ಮೂರು ವಾರಗಳಿಂದ 145 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗಿದೆ. ವಲಸೆ ಕಾರ್ಮಿಕರ ಸಂಚಾರದಿಂದ ಸೋಂಕು ಗ್ರಾಮೀಣ ಪ್ರದೇಶಗಳಿಗೂ ಹರಡಬಹುದು. ಹೀಗಾಗಿ ಸೂಕ್ತ ತಪಾಸಣೆ ಕ್ವಾರಂಟೈನ್ ಮಾಡುವಂತೆ ಸೂಚನೆ ನೀಡಲಾಗಿದೆ.
ಬಿಹಾರ್, ಉತ್ತರ ಪ್ರದೇಶದ, ಜಾರ್ಖಂಡ್, ಗುಜರಾತ್, ಮಹಾರಾಷ್ಟ್ರದಲ್ಲಿ ಕಳೆದ ಮೂರು ವಾರದಿಂದ ಸೋಂಕು ಹೆಚ್ಚಾಗಿದೆ. ಕರ್ನಾಟಕದ ಯಾದಗಿರಿ, ಮಂಡ್ಯ, ಕಲಬುರಗಿ ಕೇಂದ್ರದ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎನ್ನಲಾಗಿದ್ದು ಜಿಲ್ಲೆಗಳ ಪಟ್ಟಿ ಅಧಿಕೃತವಾಗಿ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಬೇಕಿದೆ.