Tag: Rules

  • ಬೆಳಗ್ಗೆ 10 ಗಂಟೆ ಬಳಿಕ ಯಾವುದೇ ಅಂಗಡಿ ಓಪನ್ ಇರಲ್ಲ, ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ: ಕಮಲ್ ಪಂಥ್

    ಬೆಳಗ್ಗೆ 10 ಗಂಟೆ ಬಳಿಕ ಯಾವುದೇ ಅಂಗಡಿ ಓಪನ್ ಇರಲ್ಲ, ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ: ಕಮಲ್ ಪಂಥ್

    – ಅನಗತ್ಯವಾಗಿ ಓಡಾಡಿದರೆ ವಾಹನ ಸೀಜ್, ದೇವಸ್ಥಾನಗಳೂ ತೆರೆದಿರಲ್ಲ
    – ಮದುವೆಗೆ ಬಿಬಿಎಂಪಿಯಿಂದ ಅನುಮತಿ ಪಡೆಯುವುದು ಕಡ್ಡಾಯ, 50ಕ್ಕೂ ಹೆಚ್ಚು ಜನ ಸೇರಂಗಿಲ್ಲ

    ಬೆಂಗಳೂರು: ಬೆಳಗ್ಗೆ 10 ಗಂಟೆ ಬಳಿಕ ಯಾವುದೇ ಅಂಗಡಿ ತೆರೆದಿರುವುದಿಲ್ಲ, ಕರ್ಫ್ಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಆದೇಶ ಹೊರಡಿಸಿರುವ ಪ್ರಕಾರ ಇಂದು ರಾತ್ರಿ 9 ಗಂಟೆಯಿಂದ ಹೊಸ ಗೈಡ್‍ಲೈನ್ಸ್ ಜಾರಿಯಾಗಲಿದೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇದೆ. ಮತ್ತೆ ರಾತ್ರಿ 9 ಗಂಟೆಯಿಂದ ಬೆಳಗ್ಗೆ ಆರು ಗಂಟೆವರೆಗೂ ನೈಟ್ ಕರ್ಫ್ಯೂ ಜಾರಿ ಇರುತ್ತೆ. ಬೆಳಗ್ಗೆ 10 ಗಂಟೆ ಬಳಿಕ ಯಾವುದೇ ಅಂಗಡಿಗಳು ತೆರೆದಿರುವುದಿಲ್ಲ. ಹೋಮ್ ಡೆಲಿವರಿ, ಇ ಕಾಮರ್ಸ್ ಗೆ ಅವಕಾಶ ಇದೆ. ಬಾರ್, ಪಬ್ ಗಳಲ್ಲಿ ಪಾರ್ಸಲ್ ಗೆ ಅವಕಾಶ ಇದೆ. ಬೆಳಗ್ಗೆ ಹತ್ತು ಗಂಟೆ ಬಳಿಕ ಯಾವುದೇ ಅಂಗಡಿ ಓಪನ್ ಇರಲ್ಲ ಎಂದರು.

    ದೇವಸ್ಥಾನ ಸಹ ಓಪನ್ ಇರಲ್ಲ, ಪ್ರಯಾಣಿಕರು ಟ್ರಾವೆಲ್ ಟಿಕೆಟ್ ತೋರಿಸಬೇಕು. ಹೊರ ರಾಜ್ಯಗಳಿಗೆ ಹೋಗಲು ಅವಕಾಶ ಇದೆ. ಅನುಮತಿ ಇರುವ ಕಂಪನಿ ಉದ್ಯೋಗಿಗಳು ಐಡಿ ಕಾರ್ಡ್ ತೋರಿಸುವುದು ಕಡ್ಡಾಯವಾಗಿದೆ. ಅವಕಾಶ ದುರುಪಯೋಗ ಮಾಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು. ಮದುವೆಗೆ ಐವತ್ತು ಮಂದಿಗೆ ಮಾತ್ರ ಅವಕಾಶವಿದೆ. ಏರ್‍ಪೋರ್ಟ್ ಗೆ ಹೋಗುವರಿಗೆ ಅವಕಾಶವಿದೆ. ನೈಟ್ ಪಾಳಿಯ ಐಟಿ ಉದ್ಯೋಗಿಗಳು ಐಡಿ ಕಾರ್ಡ್ ಇರಬೇಕು. ಮೇ 12ರ ವೆರೆಗೆ ಕೋವಿಡ್ ರೂಲ್ಸ್ ಫಾಲೋ ಮಾಡಬೇಕು ಎಂದು ತಿಳಿಸಿದರು.

    ರೈತರಿಗೆ ಯಾವುದೇ ಸಮಸ್ಯೆ ಇಲ್ಲ, ಗೂಡ್ಸ್ ವಾಹನಗಳಿಗೆ ಅವಕಾಶ ಇದೆ. ಹೂ ಹಣ್ಣು, ತರಕಾರಿ ಮಾರುಕಟ್ಟೆಗೆ ತರಲು ಸಮಸ್ಯೆ ಇಲ್ಲ. ಮದುವೆಗೆ ಬಿಬಿಎಂಪಿಯಿಂದ ಅನುಮತಿ ಪಡೆಯಬೇಕು. ನಾವು ಕ್ಲಿಯರೆನ್ಸ್ ಕೊಡುತ್ತೇವೆ. ಅಗತ್ಯ ವಸ್ತುಗಳ ಖರೀದಿ ವೇಳೆ ಸಾಮಾಜಿಕ ಅಂತರ ಕಾಪಾಡುವುದು ಆ ಅಂಗಡಿ ಮಾಲೀಕರದ್ದೇ ಜವಾಬ್ದಾರಿಯಾಗಿದೆ. ಕೆ.ಆರ್.ಮಾರ್ಕೆಟ್‍ನಲ್ಲಿ ನಿಯಮ ಪಾಲನೆ ಆಗುತ್ತಿಲ್ಲ. ಈ ಬಗ್ಗೆ ಬಿಬಿಎಂಪಿ ಆಯುಕ್ತರ ಜೊತೆ ಮಾತನಾಡುತ್ತೇವೆ. ವೀಕೆಂಡ್ ಕರ್ಫ್ಯೂ ಯಾವ ರೀತಿ ಸಿದ್ಧತೆ ಇತ್ತೋ ಅದೇ ರೀತಿ ಹದಿನೈದು ದಿನ ಇರುತ್ತೆ. ಅನಗತ್ಯವಾಗಿ ಓಡಾಡಿದರೆ ಗಾಡಿ ಸೀಜ್ ಮಾಡಲಾಗುತ್ತದೆ. ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

  • ಕೋವಿಡ್ ಸೋಂಕಿತರ ನರಳಾಟ ಸುಳ್ಳು, ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ- ಪ್ರಭು ಚೌವ್ಹಾಣ್

    ಕೋವಿಡ್ ಸೋಂಕಿತರ ನರಳಾಟ ಸುಳ್ಳು, ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ- ಪ್ರಭು ಚೌವ್ಹಾಣ್

    ಯಾದಗಿರಿ: ಕೋವಿಡ್ ಸೋಂಕಿತರ ನರಳಾಟ ಸುಳ್ಳು. ರಾಜ್ಯದಲ್ಲಿ ಆಕ್ಸಿಜನ್ ಮತ್ತು ಇಂಜೆಕ್ಷನ್ ಸಮಸ್ಯೆ ಇಲ್ಲ, ಬೀದರ್ ಪ್ರಕರಣಗಳು ಸಹ ಸುಳ್ಳು. ಮನೆಯಲ್ಲಿ ಕುಳಿತು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಪಶು ಸಂಗೋಪನಾ ಸಚಿವರಾದ ಪ್ರಭು ಚೌವ್ಹಾಣ್ ಹೇಳಿಕೆ ನೀಡಿದ್ದಾರೆ.

    ಯಾದಗಿರಿಯ ಜಿ.ಪಂ ಸಭಾಂಗಣದಲ್ಲಿ ಮಾತನಾಡಿದ ಪ್ರಭು ಚೌವ್ಹಾಣ್ ಅವರು, ರಾಜ್ಯ ಸರ್ಕಾರದ ವಿಫಲತೆ ಸುದ್ದಿಗಳು ಸುಳ್ಳು. ಕಾಂಗ್ರೆಸ್ ಪಕ್ಷ ಏನು ಅಂತ ರಾಜ್ಯದ ಜನರಿಗೆ ಗೊತ್ತಿದೆ, ಅವರು ಮನೆಯಲ್ಲಿ ಖಾಲಿ ಕುಳಿತು ಏನು ಬೇಕಾದರೂ ಮಾತನಾಡುತ್ತಾರೆ. ಅವರದ್ದು ಮಾತನಾಡುವ ಕೆಲಸ ಅವರು ಮಾತನಾಡುತ್ತೀರಲಿ ನಾವು ನಮ್ಮ ಕೆಲಸ ಮಾಡುತ್ತೇವೆ. ನಮ್ಮ ಸರ್ಕಾರ ಸಮರ್ಥವಾಗಿ ಕೆಲಸ ಮಾಡುತ್ತಿದೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡರು.

    ನಿಯಮ ಉಲ್ಲಂಘನೆ
    ಜಿಲ್ಲೆಯಲ್ಲಿ ಸಭೆ ನಡೆಸಿದ ಪ್ರಭು ಚೌವ್ಹಾಣ್, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಘಟನೆ ಸಹ ನಡೆಯಿತು. ಸಭೆ ಬಳಿಕ ಜಿಲ್ಲಾಡಳಿತ ಭವನದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ಜಿ.ಪಂ ಸಭಾಂಗಣದಲ್ಲಿ ಕೋವಿಡ್ ಸಭೆ ಮುಕ್ತಾಯವಾದ ಬಳಿಕ ಸಚಿವ ಪ್ರಭು ಚೌವ್ಹಾಣ್‍ರೊಂದಿಗೆ ಹಲವು ಜನ ಗುಂಪು ಸೇರಿದ್ದರು. ಜನರ ಗುಂಪಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆಗೆ ಸಚಿವರು ಸಂವಹನ ನಡೆಸಿದರು. ಸಚಿವರ ಜೊತೆಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ, ಸಂಸದ ಅಮರೇಶ್ವರ ನಾಯಕ ಸಹ ನಿಯಮ ಉಲ್ಲಂಘನೆ ಮಾಡಿದರು.

  • ಬಳ್ಳಾರಿಯಲ್ಲಿ ಶ್ರೀರಾಮುಲು, ಚಾಮರಾಜನಗರದಲ್ಲಿ ಸುರೇಶ್ ಕುಮಾರ್ – ಸಚಿವರಿಂದಲೇ ಕೊರೊನಾ ರೂಲ್ಸ್ ಬ್ರೇಕ್

    ಬಳ್ಳಾರಿಯಲ್ಲಿ ಶ್ರೀರಾಮುಲು, ಚಾಮರಾಜನಗರದಲ್ಲಿ ಸುರೇಶ್ ಕುಮಾರ್ – ಸಚಿವರಿಂದಲೇ ಕೊರೊನಾ ರೂಲ್ಸ್ ಬ್ರೇಕ್

    ಚಾಮರಾಜನಗರ: ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಸರ್ಕಾರ 144 ಸೆಕ್ಷನ್ ಜಾರಿಮಾಡಿ ನಿಷೇಧಾಜ್ಞೆ ಹೊರಡಿಸಿದೆ. ಆದರೆ ಇದು ಜನಸಾಮಾನ್ಯರಿಗೆ ಮಾತ್ರನಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ರಾಜ್ಯದ ಹಲವು ಮಂತ್ರಿಗಳು ಕೊರೊನಾ ರೂಲ್ಸ್ ಬ್ರೇಕ್ ಮಾಡಿ ತಮಗೆ ಬೇಕಾದಾಗೆ ಕಾರ್ಯಕ್ರಮ, ಚುನಾವಣೆ ಪ್ರಚಾರದಲ್ಲಿ ನೂರಾರು ಜನರನ್ನು ಸೇರಿಸಿಕೊಂಡು ಓಡಾಡುತ್ತಿದ್ದಾರೆ.

    ಚಾಮರಾಜನಗರ ಜಿಲ್ಲೆ ಹನೂರು ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಾಗಿ ಇಂದು ರಾಜ್ಯದ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಮತ್ತು ಹನೂರು ಶಾಸಕ ಆರ್ ನರೇಂದ್ರ ಅವರು ಆಗಮಿಸಿದ್ದರು. ಈ ವೇಳೆ ಸಚಿವರು ಯಾವುದೇ ಅಂತರ ಕಾಪಾಡದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೊರೊನಾ ನಿಯಮವನ್ನು ಗಾಳಿಗೆ ತೋರಿದ್ದಾರೆ.

    ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಮರೆತ ಜನಪ್ರತಿನಿಧಿಗಳನ್ನು ಕಂಡ ಸಾರ್ವಜನಿಕರು, ಮದುವೆಗೆ 50 ಜನರ ಮಿತಿ ಆದರೆ ಇವರ ಕಾರ್ಯಕ್ರಮದಲ್ಲಿ ಯಾವುದೇ ಮಿತಿಯಿಲ್ಲವೇ? ಸರ್ಕಾರದ ಮಾರ್ಗಸೂಚಿ ಅನ್ವಯ ಈಗ ಎಲ್ಲಾ ಕಡೆ ನಿಷೇಧಾಜ್ಞೆ ಜಾರಿಯಲ್ಲಿದೆ. 144 ನೇ ಸೆಕ್ಷನ್ ಅನ್ವಯ ಜನರು ಗುಂಪುಗೂಡುವಂತಿಲ್ಲ. ಆದರೆ ಇಲ್ಲಿ ಗುಂಪು ಗುಂಪಾಗಿ ಸೇರಿ ಕಾರ್ಯಕ್ರಮ ಮಾಡಿದ್ದಾರೆ. ಹಾಗಾದರೆ ರಾಜ್ಯದಲ್ಲಿ ಜನಸಾಮಾನ್ಯರಿಗೆ ಒಂದು ರೂಲ್ಸ್. ಸಚಿವ, ಶಾಸಕರಿಗೆ ಮತ್ತೊಂದು ರೂಲ್ಸ್ ಇದೆಯಾ ಎಂದು ಪ್ರಶ್ನೆ ಎತ್ತಿದ್ದಾರೆ.

    ಬಳ್ಳಾರಿಯಲ್ಲಿ ಇಂದು ಸಚಿವ ಶ್ರೀರಾಮುಲು ಅವರು ಪಾಲಿಕೆ ಚುನಾವಣೆ ಹಿನ್ನೆಲೆ ವಿವಿಧ ವಾರ್ಡ್‍ಗಳಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಈ ಸಂದರ್ಭ ಪ್ರಚಾರದಲ್ಲಿ ನೂರಾರು ಜನರನ್ನು ಸೇರಿಸಿಕೊಂಡು ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ. ಹಾಗೆ ನಿನ್ನೆ ರಾಮನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಡಿಸಿಎಂ ಅಶ್ವಥ್ ನಾರಾಯಣ್ ಅವರು ಕೂಡ ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಅವರಿಗೆ ಜನರ ಆರೋಗ್ಯಕ್ಕಿಂತ, ಶಂಕುಸ್ಥಾಪನೆ, ಉದ್ಘಾಟನೆ, ಚುನಾವಣಾ ಪ್ರಚಾರಗಳೇ ಹೆಚ್ಚಾಯ್ತಾ ಎಂದು ಪ್ರಶ್ನಿಸುತ್ತಿದ್ದಾರೆ.

  • ಕೋವಿಡ್ ನಿಯಮ ಉಲ್ಲಂಘನೆ- 14 ವಾಹನಗಳ ವಿರುದ್ಧ ಕೇಸ್, 4 ವಾಹನಗಳು ವಶಕ್ಕೆ

    ಕೋವಿಡ್ ನಿಯಮ ಉಲ್ಲಂಘನೆ- 14 ವಾಹನಗಳ ವಿರುದ್ಧ ಕೇಸ್, 4 ವಾಹನಗಳು ವಶಕ್ಕೆ

    ಹುಬ್ಬಳ್ಳಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾಡಳಿತ ಶ್ರಮಪಡುತ್ತಿದೆ. ಇಂದು ಧಾರವಾಡ (ಪೂರ್ವ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಸಮರ ಸಾರಿದ್ದಾರೆ.

    ಸರ್ಕಾರದ ಕೋವಿಡ್-19ರ ಮಾರ್ಗಸೂಚಿ ಅನ್ವಯ ಬಸ್, ಮೋಟಾರು ಕ್ಯಾಬ್, ಟೆಂಪೋ ಟ್ರಾವೆಲರ್ ವಾಹನಗಳಿಗೆ ಅನುಮತಿ ನೀಡಿರುವ ಆಸನಕ್ಕಿಂತ ಹೆಚ್ವಿನ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ವಾಹನಗಳಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ವಾಹನಗಳು ಶೇ.50ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದುಕೊಂಡು ಹೋಗಬೇಕಿದ್ದು, ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಶೇ.50ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಕಾರ್ಯಾಚರಣೆಯಲ್ಲಿ ಕೆಎಸ್‍ಆರ್‍ಟಿಸಿಯ 2, ಬೇಂದ್ರೆ ನಗರ ಸಾರಿಗೆಯ 3, ಬಿಆರ್‍ಟಿಎಸ್ ಕಂಪನಿಯ 2, ಪಿಎಸ್‍ಎ 1 ಬಸ್ ಹಾಗೂ 3 ಮೋಟಾರು ಕ್ಯಾಬ್‍ಗಳು ಹಾಗೂ 3 ಮ್ಯಾಕ್ಸಿಕ್ಯಾಬ್ ಸೇರಿ ಒಟ್ಟು 14 ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಒಂದು ಬೇಂದ್ರೆ ನಗರ ಸಾರಿಗೆಯ ಬಸ್ ಹಾಗೂ 3 ಮ್ಯಾಕ್ಸಿಕ್ಯಾಬ್ ಸೇರಿದಂತೆ ಒಟ್ಟು 4 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

  • ಕೊರೊನಾ ರೂಲ್ಸ್ ಗಾಳಿಗೆ ತೂರಿ ಪಬ್‍ಗಳಲ್ಲಿ ನಂಗಾನಾಚ್

    ಕೊರೊನಾ ರೂಲ್ಸ್ ಗಾಳಿಗೆ ತೂರಿ ಪಬ್‍ಗಳಲ್ಲಿ ನಂಗಾನಾಚ್

    ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಮಿಂಚಿನ ವೇಗದಲ್ಲಿ ಕೊರೊನಾ ಹರಡುತ್ತಿದ್ದು, ನಿತ್ಯ 10 ಸಾವಿರಕ್ಕೂ ಅಧಿಕ ಪ್ರಕರಣಗಳು ನಗರದಲ್ಲಿ ವರದಿಯಾಗುತ್ತಿವೆ. ಸರ್ಕಾರ ಸಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಪಬ್, ಬಾರ್‍ಗಳಲ್ಲಿ ಇದ್ಯಾವುದೂ ಪಾಲನೆಯಾಗುತ್ತಿಲ್ಲ. ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ನಂಗಾನಾಚ್ ಮಾಡಲಾಗುತ್ತಿದೆ.

    ಸರ್ಕಾರದ ನಿಯಮಗಳಿಗೆ ನಗರದ ಪಬ್, ಬಾರ್ ಗಳಲ್ಲಿ ಕಿಮ್ಮತ್ತು ಇಲ್ಲದಂತಾಗಿದ್ದು, ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಶೇ.50ರಷ್ಟು ಜನರ ಪ್ರವೇಶಕ್ಕೆ ಮಾತ್ರ ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ನಿಯಮಗಳನ್ನು ಗಾಳಿಗೆ ತೂರಿ ಪಬ್, ಬಾರ್ ಗಳಲ್ಲಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಪಬ್ ಗಳಲ್ಲಿ ಡ್ಯಾನ್ಸ್ ಗರ್ಲ್ಸ್ ಮುಖದಲ್ಲಿ ಮಾಸ್ಕ್ ಮಾಯವಾಗಿದ್ದು, ಸಾಮಾಜಿಕ ಅಂತರವಂತೂ ಮರೀಚಿಕೆಯಾಗಿದೆ.

    ಪಬ್ ಗಳಲ್ಲಿ ಕೊರೊನಾ ರೂಲ್ಸ್ ಬ್ರೇಕ್ ಮಾಡಿ ನಡೆಯುತ್ತಿರುವ ಘಟನೆಗಳ ಬಗ್ಗೆ ರೋಲ್ಯಾನ್ಸ್ ಸೊನ್ಸ್ ಅವರಿಂದ ಪಿಂಗಾರ ರೆಸ್ಟೊರೆಂಟ್ ಆ್ಯಂಡ್ ಬಾರ್ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಿಂಗಾರ ರೆಸ್ಟೋರೆಂಟ್ ಆ್ಯಂಡ್ ಬಾರ್ ವಿರುದ್ಧ ದೂರು ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

  • ಕೋವಿಡ್ ನಿಯಮ ಉಲ್ಲಂಘಿಸಿ ಬಸವೇಶ್ವರ ಜಾತ್ರೆ- ಕೂಬಿಹಾಳದ 18 ಮಂದಿ ವಿರುದ್ಧ ಪ್ರಕರಣ ದಾಖಲು

    ಕೋವಿಡ್ ನಿಯಮ ಉಲ್ಲಂಘಿಸಿ ಬಸವೇಶ್ವರ ಜಾತ್ರೆ- ಕೂಬಿಹಾಳದ 18 ಮಂದಿ ವಿರುದ್ಧ ಪ್ರಕರಣ ದಾಖಲು

    ಹುಬ್ಬಳ್ಳಿ: ಕೊರೊನಾ ನಿಯಮ ಉಲ್ಲಂಘಿಸಿ ಕುಂದಗೋಳ ತಾಲೂಕಿನ ಕೂಬಿಹಾಳ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಆಚರಿಸಿದ ಆರೋಪದ ಮೇರೆಗೆ 18 ಮಂದಿ ಮೇಲೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಇಂದು ಪ್ರಕರಣ ದಾಖಲಾಗಿದೆ.

    ರಾಮಪ್ಪ ಸಂಶಿ, ಸಿದ್ದಪ್ಪ ರಡ್ಡೇರ, ಹನಮಂತಪ್ಪ ವಡಕಣ್ಣವರ, ಮಂಜುನಾಥ ಪೂಜಾರ, ಯಲ್ಲಪ್ಪ ಹೆಬಸೂರ, ಚಂದ್ರಶೇಖರ ಪಾಲಕರ್, ಬಸಪ್ಪ ಹೊರಗಿನಮನಿ, ಬಸವರಾಜ ದೇಶಪಾಂಡೆ, ಯಲ್ಲಪ್ಪ ಬಿಳೆಬಲ್, ನಿಂಗಪ್ಪ ಬಾಚಣಕಿ, ಬಾಬುಖಾನ್ ನೂರಾಲಿಖಾನವರ, ಚೆನ್ನಬಸಪ್ಪ ರಡ್ಡೇರ, ಸುರೇಶ್ ಗೌಡ ಪಾಟೀಲ್, ವೀರಪಾಕ್ಷಯ್ಯ ಕುಮಾರಗೊಪ್ಪ, ಬಸನಗೌಡ ಶಿರಕೋಳ, ಶಿವಪ್ಪ ತಳವಾರ, ಜಗದೀಶ್ ಬಾಗಲ, ಬಸಪ್ಪ ಕುಂಬಾರ ಮೇಲೆ ಪ್ರಕರಣ ದಾಖಲಿಸಲಾಗಿದೆ.

    ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 3 ರಿಂದ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಚರಿಸಬಾರದು ಎಂದು ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದರು.

    ಆದರೆ ಏಪ್ರಿಲ್ 13 ರಂದು ಈ ನಿಯಮ ಉಲ್ಲಂಘಿಸಿ, ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಕುಬಿಹಾಳ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಆಚರಿಸಲಾಗಿದೆ ಎಂದು ಕೂಬಿಹಾಳ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ್ ಬಾಗಲ ಪ್ರಕರಣ ಕುರಿತು ದೂರು ದಾಖಲಿಸಿದ್ದಾರೆ. ಕುಂದಗೋಳ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

  • ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ವಿವಿಯ ಮೊದಲ ಘಟಿಕೋತ್ಸವ- ಕೊರೊನಾ ನಿಯಮ ಮಾಯ

    ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ವಿವಿಯ ಮೊದಲ ಘಟಿಕೋತ್ಸವ- ಕೊರೊನಾ ನಿಯಮ ಮಾಯ

    ಗದಗ: ಕೊರೊನಾ ವೈರಸ್, ನೈಟ್ ಕರ್ಫ್ಯೂ, ಟಫ್ ರೂಲ್ಸ್ ಮಧ್ಯೆಯೂ ಮುದ್ರಣ ಕಾಶಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ನಡೆಯಿತು.

    ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸಹ ಕುಲಾಧಿಪತಿಗಳಾಗಿ ಕಾರ್ಯಕ್ರಮ ಉದ್ಘಾಟಿಸಿರು. ಈ ಘಟಿಕೋತ್ಸವದಲ್ಲಿ ಕೊರೊನಾ ನಿಯಮಗಳು ಸಂಪೂರ್ಣವಾಗಿ ಮಾಯವಾಗಿದ್ದವು. ಪ್ರಜ್ಞಾವಂತರೇ ಮೈಮರೆತು ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ  ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದರು.

    ಗೌರವ ಡಾಕ್ಟರೇಟ್ ಪದವಿ ಪಡೆದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್, ವಿ.ವಿ ಕುಲಸಚಿವ ಬಸವರಾಜ್ ಲಕ್ಕನ್ನವರ್ ಸೇರಿದಂತೆ ಅನೇಕ ಅಧಿಕಾರಿಗಳು ಜನಪ್ರತಿನಿಧಿಗಳು, ವಿ.ವಿ ಸಿಬ್ಬಂದಿ, ವಿದ್ಯಾರ್ಥಿಗಳು ಸಹ ಮಾಸ್ಕ್ ಹಾಕಿಕೊಳ್ಳದೇ ಬೆಜವಾಬ್ದಾರಿತನದಿಂದ ವರ್ತಿಸಿರುವುದು ಕಂಡು ಬಂತು. ಕೊರೊನಾ ನಿಯಮ ಪಾಲಿಸಿ ಎಂದು ಜಾಗೃತಿ ಮೂಡಿಸುವವರೇ ಈ ರೀತಿ ನಿಯಮಗಳನ್ನು ಗಾಳಿಗೆ ತೂರುವುದು ಎಷ್ಟರಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

  • ರಾಜಕಾರಣಿಗಳಿಗೆ, ಸಾರ್ವಜನಿಕರಿಗೆ ಒಂದೇ ರೂಲ್ಸ್ ಮಾಡಿ: ಪುಟ್ಟರಾಜು

    ರಾಜಕಾರಣಿಗಳಿಗೆ, ಸಾರ್ವಜನಿಕರಿಗೆ ಒಂದೇ ರೂಲ್ಸ್ ಮಾಡಿ: ಪುಟ್ಟರಾಜು

    ಮಂಡ್ಯ: ಕೊರೊನಾ ವಿಚಾರದಲ್ಲಿ ಸಾರ್ವಜನಿಕರಿಗೊಂದು, ರಾಜಕಾರಣಿಗಳಿಗೊಂದು ರೂಲ್ಸ್ ನ್ನು ಸರ್ಕಾರ ಮಾಡಬಾರದು. ಎಲ್ಲರಿಗೂ ಒಂದೇ ನಿಯಮ ರೂಪಿಸಿ ಅವುಗಳನ್ನು ಸರಿಯಾಗಿ ಜಾರಿಗೆ ಬರುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಮಾಜಿ ಸಚಿವ ಪುಟ್ಟರಾಜು ಆಗ್ರಹಿಸಿದ್ದಾರೆ.

    ಜಿಲ್ಲೆಯ ಪಾಂಡವಪುರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೋವಿಡ್ ನಿಯಮಗಳ ವಿಚಾರದಲ್ಲಿ ಜನರಿಗೊಂದು, ರಾಜಕಾರಣಿಗೊಂದು ರೂಲ್ಸ್ ಎಂಬಂತೆ ನಡೆದುಕೊಳ್ಳುತ್ತಿದೆ. ಈ ಧೋರಣೆಯನ್ನು ತೊರೆದು ಎಲ್ಲರಿಗೂ ಒಂದೇ ನಿಯಮ ಜಾರಿಗೆ ತರಬೇಕು. ಮದುವೆ ಸೇರಿದಂತೆ ರಾಜಕೀಯ ಸಮಾವೇಶ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರು ಸೇರುತ್ತಿದ್ದಾರೆ. ಕೇವಲ ಬಾಯಲ್ಲಿ ಮಾತ್ರ ಜನ ಸೇರಬಾರದು ಎಂದು ಹೇಳಿದರೆ ಆಗಲ್ಲ. ಕೊರೊನಾ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

    ಈಗಾಗಲೇ ಎರಡನೇ ಅಲೆ ನಾವು ಊಹಿಸಲು ಸಾಧ್ಯವಾಗದ ಮಟ್ಟಿಗೆ ಹರಡುತ್ತಿದೆ. ಮಹಾರಾಷ್ಟ್ರ ನೋಡಿದರೆ ಮೈ ಜುಮ್ ಎನ್ನುತ್ತಿದೆ, ಇದೀಗ ಕರ್ನಾಟಕವು ಅದೇ ಸಾಲಿನಲ್ಲಿ ಹೋಗುತ್ತಿದೆ. ಮುಂದೆ ಏನು ಕೇಡು ಕಾದಿದೆಯೋ ಎನ್ನುವುದು ಗೋತ್ತಾಗುತ್ತಿಲ್ಲ. ಇಷ್ಟಾದರೂ ಜನರಲ್ಲಿ ಭಯ ಮೂಡುತ್ತಿಲ್ಲ. ಸರ್ಕಾರ ಕೊರೊನಾ ನಿಯಮಗಳನ್ನು ಸರಿಯಾಗಿ ಜಾರಿಗೆ ತರುವಲ್ಲಿ ಎಡವಿದರೆ. ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಸರಿಯಾಗಿ ಅನುಸರಿಸುವಲ್ಲೇ ಬೇಜವಾಬ್ದಾರಿ ತೋರುತ್ತಿದ್ದಾರೆ. ಸರ್ಕಾರ ತನ್ನ ಕೆಲಸವನ್ನು ಸರಿಯಾಗಿ ಮಾಡಬೇಕು. ಅದೇ ರೀತಿ ಸಾರ್ವಜನಿಕರೂ ಸರ್ಕಾರದ ಜೊತೆ ಕೈ ಜೋಡಿಸಿ ಕೊರೊನಾ ವಿರುದ್ಧ ಹೋರಾಡಿ, ಕೊರೊನಾ ಮುಕ್ತರಾಗಬೇಕು ಎಂದರು.

  • ಸರ್ಕಾರದಿಂದ ಟಫ್ ರೂಲ್ಸ್ – ವಿವಾಹ, ಹುಟ್ಟುಹಬ್ಬಕ್ಕೆ ಎಷ್ಟು ಜನ ಸೇರಬೇಕು ಇಲ್ಲಿದೆ ಮಾಹಿತಿ

    ಸರ್ಕಾರದಿಂದ ಟಫ್ ರೂಲ್ಸ್ – ವಿವಾಹ, ಹುಟ್ಟುಹಬ್ಬಕ್ಕೆ ಎಷ್ಟು ಜನ ಸೇರಬೇಕು ಇಲ್ಲಿದೆ ಮಾಹಿತಿ

    ಬೆಂಗಳೂರು: ಕೊರೊನಾ 2ನೇ ಅಲೆಯ ಆತಂಕ ಎದುರಾಗಿದ್ದು, ರಾಜ್ಯ ಸರ್ಕಾರದಿಂದ ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ಸಭೆ, ಸಮಾರಂಭಗಳಿಗೆ ಕಠಿಣ ನಿಯಮ ಜಾರಿ ಮಾಡಲಾಗಿದ್ದು, ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಲಾಗಿದೆ.

    ಈ ಬಗ್ಗೆ ಸರ್ಕಾರದ ಮಟ್ಟದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಸಭೆ, ಸಮಾರಂಭಗಳಿಗೆ ಜನ ಸೇರಲು ಷರತ್ತು ವಿಧಿಸಲಾಗಿದೆ. ಹಾಲ್‍ನಲ್ಲಿ ಮದುವೆ ಸಮಾರಂಭಗಳಿಗೆ 200 ಜನ ಮಾತ್ರ ಸೇರಬೇಕು. ತೆರೆದ ಜಾಗದಲ್ಲಿ ಮದುವೆ ಸಮಾರಂಭ ನಡೆದರೆ 500 ಜನರು ಮಾತ್ರ ಸೇರಬೇಕು ಎಂಬ ನಿರ್ಬಂಧವನ್ನು ವಿಧಿಸಲಾಗಿದೆ.

    ಜನ್ಮದಿನ ಸೇರಿದಂತೆ ಇತರೆ ಆಚರಣೆಗಳಿಗೆ ನಿಯಮ ರೂಪಿಸಲಾಗಿದ್ದು, ತೆರೆದ ಪ್ರದೇಶದಲ್ಲಿ ಜನ್ಮ ದಿನಾಚರಣೆ ಆಚರಿಸುವುದಾದರೆ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಲ್ ಅಥವಾ ಒಳಗಡೆ ಆಚರಿಸುವುದಾದರೆ ಕೇವಲ 50 ಜನರು ಭಾಗವಹಿಸಬಹುದಾಗಿದೆ.

    ನಿಧನ, ಶವಸಂಸ್ಕಾರಕ್ಕೆ ತೆರೆದ ಪ್ರದೇಶದಲ್ಲಿ 100 ಜನ ಮೀರದಂತೆ, ಸಭಾಂಗಣದಲ್ಲಾದರೆ 50 ಜನರ ಮೀರದಂತೆ ಕಾರ್ಯ ನಡೆಸಬೇಕು. ಅಂತ್ಯಕ್ರಿಯಯಲ್ಲಿ 50 ಜನ ಮೀರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಇತರೆ ಸಮಾರಂಭಗಳಲ್ಲಿ ಸಹ 100 ಜನ ಮೀರಬಾರದು, ಧಾರ್ಮಿಕ ಆಚರಣೆಗಳಲ್ಲಿ 500, ರಾಜಕೀಯ ಕಾರ್ಯಕ್ರಮಗಳಲ್ಲಿ 500 ಜನ ಮೀರಬಾರದೆಂದು ತಿಳಿಸಲಾಗಿದೆ. ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಸೋಂಕಿತರ ಪತ್ತೆಹಚ್ಚುವ ಕಾರ್ಯವನ್ನು ಸಹ ಚುರುಕುಗೊಳಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ಟೆಸ್ಟಿಂಗ್ ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.

  • ಲಾರಿಯಲ್ಲಿ ಸಾಗಿಸುತ್ತಿದ್ದ 6.675 ಟನ್ ಜಿಲೆಟಿನ್ ಕಡ್ಡಿ ಪೊಲೀಸ್ ವಶ

    ಲಾರಿಯಲ್ಲಿ ಸಾಗಿಸುತ್ತಿದ್ದ 6.675 ಟನ್ ಜಿಲೆಟಿನ್ ಕಡ್ಡಿ ಪೊಲೀಸ್ ವಶ

    ಬೆಳಗಾವಿ: ನಿಯಮ ಉಲ್ಲಂಘಣೆ ಮಾಡಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 6.675 ಟನ್ ಜಿಲೆಟಿನ್ ಕಡ್ಡಿ ಮತ್ತು ಡಿಟೋನೇಟರ್ ಗಳನ್ನು ಪೊಲೀಸರು ಪತ್ತೆ ಹಚ್ಚಿ ನಾಲ್ವರನ್ನು ವಶಕ್ಕೆ ಪಡೆದುಕೊಂಡ ಘಟನೆ ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದಲ್ಲಿ ವರದಿಯಾಗಿದೆ.

    ಲಾರಿ ಮತ್ತು ಬೊಲೆರೊ ಪಿಕ್‍ಅಪ್ ವಾಹನದಲ್ಲಿ ನಿಯಮ ಉಲ್ಲಂಘಿಸಿ, ನಿರ್ಲಕ್ಷ್ಯತನದಿಂದ ಜಿಲೆಟಿನ್ ಕಡ್ಡಿ ಮತ್ತು ಡಿಟೋನೇಟರ್ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕಾಕತಿ ಠಾಣೆ ಪೊಲೀಸರು ದಾಳಿ ಮಾಡಿದ್ದರು. ಲಾರಿಯಲ್ಲಿ ತುಂಬಿದ್ದ ಅಂದಾಜು ನಾಲ್ಕು ಲಕ್ಷ ಮೌಲ್ಯದ ಸ್ಫೋಟಕ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

    ತಾಲೂಕಿನ ಹೊನಗಾ ಗ್ರಾಮದ ದಾಬಾ ಬಳಿ ಲಾರಿ ಮತ್ತು ಬೊಲೆರೊ ಪಿಕ್‍ಅಪ್ ಬರುತ್ತಿದ್ದಂತೆ ತಪಾಸಣೆಗಿಳಿದ ಪೊಲೀಸರು ಜಿಲೆಟಿನ್ ಕಡ್ಡಿ ಮತ್ತು ಡಿಟೋನೇಟರ್ ಗಳ ಬಾಕ್ಸ್ ಗಳನ್ನು ನೋಡಿ ದಂಗಾಗಿದ್ದಾರೆ. ಈ ಎಲ್ಲಾ ಸ್ಫೋಟಕಗಳು ಕರೋಶಿ ಗ್ರಾಮದಿಂದ ಧಾರವಾಡ, ಗದಗ ಜಿಲ್ಲೆಗಳಿಗೆ ಸಾಗಿಸಲಾಗುತ್ತಿತ್ತು. ದಾಳಿ ವೇಳೆ ವಾಹನದಲ್ಲಿದ್ದ ಚಿಕ್ಕೋಡಿ ತಾಲೂಕಿನ ಬೊಬಲವಾಡ ಗ್ರಾಮದ ರಮೇಶ್ ಲಕ್ಕೊಟಿ, ರಾಜು ಶಿರಗಾವಿ, ಮುಗಳಿ ಗ್ರಾಮದ ಅರುಣ ಮಠದ, ವಿನಯ್ ಕಿನ್ನವರ್ ಅವರನ್ನು ಬಂಧಿಸಿ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.