Tag: Rudra Garuda Purana

  • ರುದ್ರ ಗರುಡ ಪುರಾಣ: ಶಿವರಾಜ್ ಕೆ.ಆರ್ ಪೇಟೆಗೆ ಸಿಕ್ಕಿದ್ದು ಬೇರೆಯದ್ದೇ ಪಾತ್ರ!

    ರುದ್ರ ಗರುಡ ಪುರಾಣ: ಶಿವರಾಜ್ ಕೆ.ಆರ್ ಪೇಟೆಗೆ ಸಿಕ್ಕಿದ್ದು ಬೇರೆಯದ್ದೇ ಪಾತ್ರ!

    ರ್ವ ನಟ ಒಂದು ಬಗೆಯಲ್ಲಿ ಸದ್ದು ಮಾಡಿದರೆ, ಆತನಿಗಾಗಿ ಅಂಥಾದ್ದೇ ಪಾತ್ರ ಸೃಷ್ಟಿಸಿ ಸೀಮಿತ ಚೌಕಟ್ಟಿನಲ್ಲಿ ಕಟ್ಟಿ ಹಾಕುವ ಪ್ರಯತ್ನ ನಡೆಯೋದೇ ಹೆಚ್ಚು. ಕನ್ನಡದಲ್ಲಿಯೂ ಕೂಡಾ ಅಂಥಾ ಒಂದಷ್ಟು ಉದಾಹರಣೆಗಳಿದ್ದಾವೆ. ಇದೆಲ್ಲದರಾಚೆಗೆ ಪ್ರತೀ ಕಲಾವಿದರೊಳಗೂ ಸಿನಿಮಾದಿಂದ ಸಿನಿಮಾಕ್ಕೆ ಚಹರೆ ಬದಲಿಸುವ, ಬೇರೆ ಬೇರೆ ಪಾತ್ರಗಳಿಗೆ ಒಡ್ಡಿಕೊಳ್ಳುವ ತುಡಿತವಿರುತ್ತದೆ. ಅದನ್ನು ನಿರ್ದೇಶಕರಾದವರು ಅರ್ಥ ಮಾಡಿಕೊಂಡುಬಿಟ್ಟರೆ ಪ್ರೇಕ್ಷಕರ ಪಾಲಿಗೆ ಅಚ್ಚರಿ ನಿಕ್ಕಿ. ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ ರುದ್ರ ಗರುಡ ಪುರಾಣ ಚಿತ್ರದ ನಿರ್ದೇಶಕ ನಂದೀಶ್ ಅಂಥಾದ್ದೊಂದು ಸೂಕ್ಷ್ಮ ನಡೆ ಅನುಸರಿಸಿದ್ದಾರೆ. ಅದರ ಫಲವಾಗಿಯೇ ಹಾಸ್ಯ ಪಾತ್ರಗಳಿಗೆ ಬ್ರ್ಯಾಂಡ್ ಆಗಿರುವ ಶಿವರಾಜ್ ಕೆ.ಆರ್ ಪೇಟೆ ಹೊಸ ಬಗೆಯ ಪಾತ್ರವೊಂದರಲ್ಲಿ ಪ್ರೇಕ್ಷಕರನ್ನು ಬೆರಗಾಗಿಸಲಿದ್ದಾರೆ!

    ಶಿವರಾಜ್ ಕೆ.ಆರ್. ಪೇಟೆ (Shivaraj K R Pete) ಬಹುಮುಖ ಪ್ರತಿಭೆ. ಆದರೆ, ಅವರೊಳಗಿನ ನಟ ಹೊರಜಗತ್ತನ್ನು ಆವರಿಸಿಕೊಂಡಿದ್ದದ್ದು ಕಾಮಿಡಿ ಕಿಲಾಡಿಗಳು ಶೋ ಮೂಲಕ. ಆ ನಂತರದಲ್ಲಿ ತಮ್ಮಿಚ್ಚೆಯಂತೆಯೇ ಚಿತ್ರರಂಗಕ್ಕೆ ಆಗಮಿಸಿದ್ದ ಅವರಿಗೆ ಸಾಲು ಸಾಲು ಅವಕಾಶಗಳು ಸಿಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಅವರು ಹಾಸ್ಯದಾಚೆಯ ಪಾತ್ರಗಳ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ರುದ್ರ ಗರುಡ ಪುರಾಣದಲ್ಲಿಯೂ (Rudra Garuda Purana) ಅಂಥಾದ್ದೇ ಒಂದು ಮಹತ್ವದ ಪಾತ್ರ ಸಿಕ್ಕ ಖುಷಿ ಶಿವರಾಜ್ ಅವರಲ್ಲಿದೆ. ಈ ಪಾತ್ರದ ಗುಣ ಲಕ್ಷಣಗಳನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಆದರೆ, ಶಿವರಾಜ್ ಇಲ್ಲಿ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದಾರೆಂಬ ಸಣ್ಣ ಸುಳಿವನ್ನಷ್ಟೇ ಜಾಹೀರು ಮಾಡಲಾಗಿದೆ. ಇದನ್ನೂ ಓದಿ: ನಿರ್ಮಾಪಕರ ಕಣ್ಣಲ್ಲಿ ಮಿನುಗಿದ ರುದ್ರ ಗರುಡ ಪುರಾಣ!

    ಶಿವರಾಜ್ ಕೆ.ಆರ್ ಪೇಟೆ ಬಣ್ಣದ ಲೋಕದತ್ತ ಬೆರಗಿಟ್ಟುಕೊಂಡು ಬೆಂಗಳೂರು ತಲುಪಿದ ಆರಂಭದಲ್ಲಿ ಜೊತೆಯಾಗಿದ್ದವರು ನಂದೀಶ್. ಅಂದಿನಿಂದ ಇಂದಿನವರೆಗೂ ಜೊತೆಯಾಗಿರೋ ನಂದೀಶ್ ಅವರಿಗೆ ತನ್ನ ಗೆಳೆಯನ ನಟನೆಯ ತಾಕತ್ತಿನ ಸ್ಪಷ್ಟ ಪರಿಚಯವಿತ್ತು. ಈ ಕಾರಣದಿಂದಲೇ ಅವರನ್ನು ಗಂಭೀರವಾದ, ಅತ್ಯಂತ ಮಹತ್ವದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ತರಲು ಪ್ರಯತ್ನಿಸಿದ್ದಾರೆ. ಬಹುಶಃ ರುದ್ರ ಗರುಡ ಪುರಾಣದಲ್ಲಿನ ಶಿವರಾಜ್ ಕೆ.ಆರ್ ಪೇಟೆ ಗೆಟಪ್ಪು ಕಂಡು ಎಲ್ಲರೂ ಅಚ್ಚರಿಗೀಡಾಗೋದು ಖಾತರಿ. ಇದು ತನ್ನ ಇಷ್ಟೂ ವರ್ಷಗಳ ವೃತ್ತಿ ಬದುಕಿನಲ್ಲಿ ಬೇರೆಯದ್ದೇ ಖದರ್ ಹೊಂದಿರೋ ಪಾತ್ರವೆಂಬ ಖುಷಿಯೂ ಅವರಲ್ಲಿದೆ.

    ಸದಾ ಭಿನ್ನ ದಿಕ್ಕಿನಲ್ಲಿ ಆಲೋಚಿಸುತ್ತಾ, ಹೊಸಾ ಬಗೆಯ ಕಥೆ ಮುಟ್ಟುವ ಗುಣದವರು ನಂದೀಶ್. ಓರ್ವ ಜೊತೆಗಾರನಾಗಿ ನಂದೀಶ್ ಅವರ ಪ್ರತಿಭೆಯ ಅರಿವಿರುವ ಶಿವರಾಜ್ ಕೆ.ಆರ್ ಪೇಟೆ ಅವರಿಗೆ ಗೆಳೆಯನ ಚಿತ್ರದಲ್ಲಿ ಭಿನ್ನ ಪಾತ್ರವಾದ ಖುಷಿಯಿದೆ. ಈ ಹಿಂದೆ ದರ್ಶನ್ ನಟಿಸಿದ್ದ ರಾಬರ್ಟ್ ಚಿತ್ರದಲ್ಲಿಯೂ ಬೇರೆ ತೆರನಾದ ಪಾತ್ರ ಶಿವರಾಜ್ ಅವರಿಗೆ ಸಿಕ್ಕಿತ್ತು. ನಾನು ಮತ್ತು ಗುಂಡ ಚಿತ್ರದಲ್ಲಿಯೂ ಹಾಸ್ಯದ ಪರಿಧಿಯಾಚೆಗಿನ ಭಾವನಾತ್ಮಕ ಪಾತ್ರವಾಗಿ ಅವರು ಕಾಣಿಸಿಕೊಂಡಿದ್ದರು. ರುದ್ರ ಗರುಡ ಪುರಾಣದಲ್ಲಿಯಂತೂ ಎಲ್ಲರಿಗೂ ಆಶ್ಚರ್ಯವಾಗಬಲ್ಲ ಪಾತ್ರದಲ್ಲಿ, ಗೆಟಪ್ಪಿನಲ್ಲಿ ಶಿವರಾಜ್ ಕೆ.ಆರ್ ಪೇಟೆ ದರ್ಶನವಾಗಲಿರೋದು ಪಕ್ಕಾ! ಇದನ್ನೂ ಓದಿ: ರುದ್ರ ಗರುಡ ಪುರಾಣ; ಭಿನ್ನ ಕಥೆಯ ಚುಂಗು ಹಿಡಿದು ಬಂದ್ರು ನಂದೀಶ್!

    ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ವಿಜಯ್ ಲೋಹಿತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ರುದ್ರ ಗರುಡ ಪುರಾಣ ಎಲ್ಲ ವರ್ಗಗಳ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಹಾರರ್ ಸಿನಿಮಾಗಳಿಗಾಗಿ ಹಾತೊರೆಯುವ ದೊಡ್ಡ ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಹಾಗಿರುವಾಗ ಹೊಸತನದೊಂದಿಗೆ ರೂಪುಗೊಂಡಿರುವ, ಹಲವು ವಿಶೇಷತೆಗಳನ್ನು ಒಳಗೊಂಡಿರುವ ಈ ಚಿತ್ರದ ಬಗ್ಗೆ ಕುತೂಹಲ ಸಹಜವಾಗಿಯೇ ಮೂಡಿಕೊಳ್ಳುತ್ತೆ. ವಿನೋದ್ ಆಳ್ವಾ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರೀಶ್ ಶಿವಣ್ಣ ಮುಂತಾದವರು ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂದೀಪ್ ಕುಮಾರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ಕೃಷ್ಣ ಪ್ರಸಾದ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ರುದ್ರ ಗರುಡ ಪುರಾಣ ಜನವರಿ 24 ರಂದು ಬಿಡುಗಡೆಗೊಳ್ಳಲಿದೆ. ಇದನ್ನೂ ಓದಿ: ಬಿಡುಗಡೆಯಾಯ್ತು `ರುದ್ರ ಗರುಡ ಪುರಾಣ’ದ ನಶೆಯೇರಿಸೋ ಸಾಂಗು!

  • ನಿರ್ಮಾಪಕರ ಕಣ್ಣಲ್ಲಿ ಮಿನುಗಿದ ರುದ್ರ ಗರುಡ ಪುರಾಣ!

    ನಿರ್ಮಾಪಕರ ಕಣ್ಣಲ್ಲಿ ಮಿನುಗಿದ ರುದ್ರ ಗರುಡ ಪುರಾಣ!

    ವ್ಯವಹಾರದಾಚೆ ಸಿನಿಮಾ ಪ್ರೇಮ ಹೊಂದಿರುವ, ಕಥೆಯೊಂದನ್ನು ಆ ಕ್ಷಣದಲ್ಲಿಯೇ ಅಳೆದೂ ತೂಗಿ ನಿರ್ಧರಿಸುವ ಛಾತಿ ಹೊಂದಿರುವ ನಿರ್ಮಾಪಕರ ಆಗಮನವಾಗೋದು ಚಿತ್ರರಂಗದ ಪಾಲಿಗೆ ಸಕಾರಾತ್ಮಕ ವಿದ್ಯಮಾನ. ಇಂಥವರ ಬೆಂಬಲದಿಂದಷ್ಟೇ ಒಳ್ಳೆ ಕಥೆಗಳು, ಪ್ರತಿಭಾನ್ವಿತರ ಕನಸುಗಳು ಕಾರ್ಯ ರೂಪಕ್ಕೆ ಬರಲು ಸಾಧ್ಯ. ಇದೇ ಜ.24 ರಂದು ಬಿಡುಗಡೆಗೆ ತಯಾರಾಗಿರುವ `ರುದ್ರ ಗರುಡ ಪುರಾಣ’ (Rudra Garuda Purana) ಚಿತ್ರದ ಮೂಲಕ ಅಂಥಾದ್ದೇ ಅಭಿರುಚಿ ಹೊಂದಿರುವ ಲೋಹಿತ್ ನಿರ್ಮಾಣ ಕ್ಷೇತ್ರಕ್ಕಿಳಿದಿದ್ದಾರೆ. ಈ ಸಿನಿಮಾ ನಿರ್ಮಾಣ ಮಾಡಿರೋದು ಅವರ ಮಡದಿ ಅಶ್ವಿನಿ ವಿಜಯ್ ಲೋಹಿತ್. ಈ ಮೂಲಕ ಆರಂಭದಿಂದಲೂ ಸಿನಿಮಾ ಗುಂಗು ಹತ್ತಿಸಿಕೊಂಡಿದ್ದ ಲೋಹಿತ್ ಅವರ ಕನಸು ನನಸಾದಂತಾಗಿದೆ.

    ಲೋಹಿತ್ ಕ್ಲಾಸ್ 1 ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಆಗಿ ವೃತ್ತಿ ನಡೆಸುತ್ತಿರುವವರು. ಈ ಕೆಲಸದ ಒತ್ತಡದ ನಡುವೆಯೂ ಸಿನಿಮಾ ಜಗತ್ತಿನ ಸಾಂಗತ್ಯವಿಟ್ಟುಕೊಂಡಿದ್ದರು. ಸಿನಿಮಾ ಕ್ಷೇತ್ರದ ಬಗ್ಗೆ ನಾನಾ ದಿಕ್ಕಿನ ಕನಸಿಟ್ಟುಕೊಂಡಿದ್ದ ಲೋಹಿತ್ ಪಾಲಿಗೆ ಆ ಜಗತ್ತಿನ ಭಾಗವಾಗಿ ಕಾರ್ಯನಿರ್ವಹಸಬೇಕೆಂಬ ಉತ್ಕಟ ಆಕಾಂಕ್ಷೆಯೂ ಇತ್ತು. ಕಡೆಗೂ ಅದಕ್ಕೆ ಮುಹೂರ್ತ ಕೂಡಿ ಬಂದಿದ್ದು ವರ್ಷದ ಹಿಂದೆ. ಅದಾಗಲೇ ಒಂದೊಳ್ಳೆ ಕಥೆ ರೆಡಿ ಮಾಡಿಕೊಂಡು, ಸಿನಿಮಾಕ್ಕೆ ಬೇಕಾದ ಸರ್ವ ಸಿದ್ಧತೆಯೊಂದಿಗೆ ನಿರ್ಮಾಪಕರಿಗಾಗಿ ಹುಡುಕಾಟದಲ್ಲಿದ್ದವರು ನಿರ್ದೇಶಕ ನಂದೀಶ್. ಇದನ್ನೂ ಓದಿ: ರುದ್ರ ಗರುಡ ಪುರಾಣ; ಭಿನ್ನ ಕಥೆಯ ಚುಂಗು ಹಿಡಿದು ಬಂದ್ರು ನಂದೀಶ್!

    ನಂದೀಶ್ ಲೋಹಿತ್ ಅವರಿಗೆ ಹಲವಾರು ವರ್ಷಗಳಿಂದಲೂ ಪರಿಚಿತರು. ಈ ಚಿತ್ರಕ್ಕೆ ರಿಷಿ ಅವರೇ ನಾಯಕನಾಗಬೇಕೆಂಬ ನಿರ್ಧಾರಕ್ಕೆ ಬಂದಿದ್ದ ನಂದೀಶ್ ಅದಾಗಲೇ ರಿಷಿಗೆ ಕಥೆ ಹೇಳಿಯಾಗಿತ್ತು. ಈ ಕಥೆಯನ್ನು ಕೇಳಿ ಥ್ರಿಲ್ ಆಗಿದ್ದ ಲೋಹಿತ್ ಕೂಡಾ ಈ ಸಿನಿಮಾ ನಿರ್ಮಾಣ ಮಾಡಬೇಕೆಂಬ ನಿರ್ಧಾರಕ್ಕೆ ಬಂದಿದ್ದರು. ಅವರ ಪಾಲಿಗೆ ಮತ್ತೊಂದು ಖುಷಿಯ ಸಂಗತಿ ನಂದೀಶ್ ಕಡೆಯಿಂದ ಸಿಕ್ಕಿತ್ತು. ಅದು ಸದರಿ ಕಥೆಯನ್ನು ರಿಷಿ ಮೆಚ್ಚಿಕೊಂಡು ಒಪ್ಪಿಕೊಂಡಿದ್ದಾರೆಂಬ ವಿಚಾರ. ಇದನ್ನು ಕೇಳಿ ಲೋಹಿತ್ ಮತ್ತಷ್ಟು ಭರವಸೆ ತುಂಬಿಕೊಂಡಿದ್ದಕ್ಕೊಂದು ಕಾರಣವಿದೆ. ನಟ ರಿಷಿ ಕಥೆಗಳ ಆಯ್ಕೆ ವಿಚಾರದಲ್ಲಿ ತುಂಬಾನೇ ಚೂಸಿ. ಸಲೀಸಾಗಿ, ಯಾವುದೇ ಮುಲಾಜಿಗೆ ಬಿದ್ದು ಅವರು ಯಾವ ಸಿನಿಮಾಗಳನ್ನೂ ಒಪ್ಪಿಕೊಳ್ಳುವವರಲ್ಲ.

    ಅಂಥಾ ರಿಷಿ ಒಪ್ಪಿಕೊಂಡಿದ್ದಾರೆಂದ ಮೇಲೆ ನಂದೀಶ್ ಸಿದ್ಧಪಡಿಸಿದ್ದ ಕಥೆಗೆ ಬೇರ್‍ಯಾವ ವಿಮರ್ಶೆಗಳೂ ಬೇಕಿಲ್ಲ ಎಂಬಂಥಾ ನಂಬಿಕೆ ಲೋಹಿತ್ ಅವರಲ್ಲಿತ್ತು. ಹಾಗೆ ಒಪ್ಪಿಕೊಂಡು ನಿರ್ಮಾಣಕ್ಕಿಳಿದ ಲೋಹಿತ್ ಅವರ ಪಾಲಿಗೀಗ ಚೆಂದದ ಚಿತ್ರವೊಂದನ್ನು ರೂಪಿಸಿದ ಖುಷಿ ಇದೆ. ಆರಂಭದಿಂದ ಇಲ್ಲಿಯವರೆಗೂ ಈ ಪ್ರಕ್ರಿಯೆ ಅವರಿಗೆ ಒಂದಷ್ಟು ಒಳ್ಳೆ ಅನುಭವಗಳನ್ನು ಕಟ್ಟಿಕೊಟ್ಟಿದೆ. ಯಾವುದಕ್ಕೂ ಕಡಿಮೆ ಮಾಡದಂತೆ ರುದ್ರ ಗರುಡ ಪುರಾಣವನ್ನು ನಿರ್ಮಾಣ ಮಾಡಿರುವ ಅವರ ಪಾಲಿಗೆ ಈ ಸಿನಿಮಾ ಪ್ರೇಕ್ಷಕರಿಗೆಲ್ಲ ಖಂಡಿತವಾಗಿಯೂ ಇಷ್ಟವಾಗುತ್ತದೆಂಬ ಗಾಢ ನಂಬಿಕೆಯಿದೆ. ಇದನ್ನೂ ಓದಿ: ಬಿಡುಗಡೆಯಾಯ್ತು `ರುದ್ರ ಗರುಡ ಪುರಾಣ’ದ ನಶೆಯೇರಿಸೋ ಸಾಂಗು!

    ಇದೊಂದು ಮಿಸ್ಟ್ರಿ ಥ್ರಿಲ್ಲರ್ ಬಗೆಯ ಸಿನಿಮಾ. ಒಂದು ಘಟನೆಯ ಬಗ್ಗೆ ತನಿಖೆಗಿಳಿಯುತ್ತಾ, ಪ್ರೇಕ್ಷಕರೆದುರು ಹೊಸ ಜಗತ್ತೊಂದು ತೆರೆದುಕೊಂಡು ಹೋಗುವಂತೆ ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ಈಗಿರುವ ಕ್ರೇಜ್ ಅನ್ನು ಆಧರಿಸಿ ಹೇಳೋದಾದರೆ, ರುದ್ರ ಗರುಡ ಪುರಾಣ ಈ ವರ್ಷದ ಆರಂಭವನ್ನು ಗೆಲುವಿನ ಮೂಲಕ ಕಳೆಗಟ್ಟಿಸುವ ಲಕ್ಷಣಗಳು ಕಾಣಿಸಲಾರಂಭಿಸಿವೆ. ವಿನೋದ್ ಆಳ್ವಾ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರೀಶ್ ಶಿವಣ್ಣ ಮುಂತಾದವರು ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂದೀಪ್ ಕುಮಾರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ಕೃಷ್ಣ ಪ್ರಸಾದ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

  • ರುದ್ರ ಗರುಡ ಪುರಾಣ; ಭಿನ್ನ ಕಥೆಯ ಚುಂಗು ಹಿಡಿದು ಬಂದ್ರು ನಂದೀಶ್!

    ರುದ್ರ ಗರುಡ ಪುರಾಣ; ಭಿನ್ನ ಕಥೆಯ ಚುಂಗು ಹಿಡಿದು ಬಂದ್ರು ನಂದೀಶ್!

    ವರ್ಷದ ಆರಂಭದಲ್ಲಿಯೇ ಕನ್ನಡ ಚಿತ್ರರಂಗದ ದಿಕ್ಕಿಂದ ಹೊಸತನದ ಗಾಳಿ ಬಲವಾಗಿ ಬೀಸಲಾರಂಭಿಸಿದೆ. ಮಾಮೂಲು ಹಾದಿಯಾಚೆ ಹೆಜ್ಜೆಯಿಡುವ ಛಾತಿ ಹೊಂದಿರುವ ಒಂದಷ್ಟು ಯುವ ಪ್ರತಿಭಾನ್ವಿತರು ಅಚ್ಚರಿ ಮೂಡಿಸಲು ಸಜ್ಜುಗೊಂಡಿದ್ದಾರೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು `ರುದ್ರ ಗರುಡ ಪುರಾಣ’ (Rudra Garuda Purana) ಚಿತ್ರದ ನಿರ್ದೇಶಕ ನಂದೀಶ್. ರಿಷಿ ನಾಯಕನಾಗಿ ನಟಿಸಿರುವ ರುದ್ರ ಗರುಡ ಪುರಾಣ ಇದೇ ಜ.24 ರಂದು ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ. ಈ ಮೂಲಕ ಜೇಕಬ್ ವರ್ಗಿಸ್ ಗರಡಿಯಲ್ಲಿ ಪಳಗಿಕೊಂಡಿರುವ ನಂದೀಶ್ ಭಿನ್ನ ಕಥಾನಕದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ.

    ಪೃಥ್ವಿ ಸೇರಿದಂತೆ ಒಂದಷ್ಟು ಚೆಂದದ ಚಿತ್ರಗಳನ್ನು ಕನ್ನಡಕ್ಕೆ ಕೊಡಮಾಡಿರುವವರು ಜೇಕಬ್ ವರ್ಗೀಸ್. ಅವರ ನಿರ್ದೇಶನದ ಶೈಲಿಯಿಂದ ಪ್ರೇರಣೆಗೊಂಡು, ಹೊಸ ಬಗೆಯ ಕಲಿಕೆಯ ಉದ್ದೇಶದಿಂದಲೇ ದಶಕದ ಹಿಂದೆ ಜೇಕಬ್ ಅವರೊಂದಿಗೆ ಸೇರಿಕೊಂಡಿದ್ದವರು ನಂದೀಶ್. ಹಾಸನ ಮೂಲದ ನಂದೀಶ್ ಹೀಗೊಂದು ಹದಿನೇಳು ವರ್ಷದಿಂದೀಚೆಗೆ ಚಿತ್ರರಂಗದ ಭಾಗವಾಗಿದ್ದಾರೆ. ಒಂದು ಸಿನಿಮಾವನ್ನು ಯಶಸ್ವಿಯಾಗಿಸಲು ಬೇಕಾಗಿರುವ ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಮನದಟ್ಟು ಮಾಡಿಕೊಂಡಿದ್ದಾರೆ. ಎಲ್ಲ ಭ್ರಮೆಗಳನ್ನು ಕಳಚಿಟ್ಟು ಇಷ್ಟೂ ವರ್ಷಗಳ ಕಾಲ ನಿಖರವಾದ ಅನುಭವವನ್ನು ದಕ್ಕಿಸಿಕೊಂಡಿದ್ದಾರೆ. ನಿರ್ದೇಶನ ಎಂದರೆ ಕಥೆಯೊಂದಕ್ಕೆ ದೃಶ್ಯರೂಪ ನೀಡುವ ಕುಸುರಿ ಕಲೆ ಅನ್ನೋದು ನಿಜ. ಆದರೆ, ನಿಜವಾದ ನಿರ್ದೇಶನವೆಂಬುದು ಬರೀ ಅಷ್ಟಕ್ಕೆ ಮಾತ್ರವೇ ಸೀಮಿತವಾದುದಲ್ಲ. ಶೇಖಡಾ ತೊಂಬತೈದು ಪರ್ಸೆಂಟಿನಷ್ಟು ಎಲ್ಲವನ್ನೂ ಸಂಭಾಳಿಸೋ ಕಲೆ ಸಿದ್ಧಿಸಿರಬೇಕಾಗುತ್ತೆ. ಅದು ಸಾಧ್ಯವಾದರೆ ನಿರ್ದೇಶನ ಎನ್ನುವುದು ಬರಿ ಐದು ಪರ್ಸೆಂಟ್ ಕೆಲಸವಷ್ಟೇ ಎಂಬ ಪ್ರಸಿದ್ಧ ಹಾಲಿವುಡ್ ನಿರ್ದೇಶಕರೊಬ್ಬರ ಮಾತಿನಿಂದ ಪ್ರಭಾವಿತರಾದವರು ನಂದೀಶ್. ಇದನ್ನೂ ಓದಿ: ಬಿಡುಗಡೆಯಾಯ್ತು `ರುದ್ರ ಗರುಡ ಪುರಾಣ’ದ ನಶೆಯೇರಿಸೋ ಸಾಂಗು!

    ಈ ಕಾರಣದಿಂದಲೇ ಬಂಡವಾಳ ಹಾಕಿದ ನಿರ್ಮಾಪಕರಿಗೂ ಮೋಸವಾಗದಂತೆ, ಸಿನಿಮಾ ಕೂಡಾ ಒಳ್ಳೇ ರೀತಿಯಲ್ಲಿ ಬ್ಯುಸಿನೆಸ್ ಮಾಡುವಂತೆ ಮಾಡಬಲ್ಲ ಫಾರ್ಮುಲಾಗಳನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ. ಸಿನಿಮಾ ಪ್ರೊಡಕ್ಷನ್, ಡಿಸ್ಟ್ರಿಬ್ಯೂಷನ್ ಸೇರಿದಂತೆ ಅನೇಕ ವಲಯಗಳಲ್ಲಿ ಕಾರ್ಯ ನಿರ್ವಹಿಸಿರುವ ನಂದೀಶ್, ಥಿಯೇಟರ್ ಗುತ್ತಿಗೆ ಪಡೆದು ನಡೆಸುವ ಮೂಲಕವೂ ಸಿನಿಮಾ ವ್ಯವಹಾರವನ್ನು ಪ್ರಾಕ್ಟಿಕಲ್ ಆಗಿಯೇ ಮನನ ಮಾಡಿಕೊಂಡಿದ್ದಾರೆ. ಹಾಸನದ ಹಳ್ಳಿಯೊಂದರಿಂದ ಬಂದಿರುವ ನಂದೀಶ್, ಜೇಕಬ್ ವರ್ಗೀಸ್ ಅವರೊಂದಿಗೆ ಸೇರಿ ನಾನಾ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಬಂದಿದ್ದರು. ಹಲವಾರು ಸಿನಿಮಾ, ಡಾಕ್ಯುಮೆಂಟರಿಗಳ ಮೂಲಕ ತಮ್ಮ ಪ್ರತಿಭೆಯನ್ನು ಸಾಣೆ ಹಿಡಿದು ಹೊಳಪುಗಟ್ಟಿಸಿಕೊಂಡಿದ್ದರು.

    ಈ ಹಿಂದೆ ಡಿಯರ್ ವಿಕ್ರಮ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದ ನಂದೀಶ್, ಈ ಬಾರಿ ಹಾರರ್ ಧಾಟಿಯ ಮಿಸ್ಟ್ರಿ ಥ್ರಿಲ್ಲರ್ ಕಥನದ ಮೂಲಕ ರುದ್ರ ಗರುಡ ಪುರಾಣ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ. ಇಪ್ಪತೈದು ವರ್ಷದ ಹಿಂದೆ ಬಸ್ ಅಪಘಾತದಲ್ಲಿ ಅಸುನೀಗಿದ್ದವರೆಲ್ಲ, ಅಷ್ಟು ವರ್ಷಗಳ ನಂತರ ವಾಸ್ತವಿಕವಾಗಿ ಕಾಣಿಸಿಕೊಳ್ಳುವ ರಣರೋಚಕ ಕಥನ ಈ ಸಿನಿಮಾದಲ್ಲಡಗಿದೆಯಂತೆ. ಹಾಗಂತ ಇದು ಮಾಮೂಲು ಶೈಲಿಯ ಹಾರರ್ ಸಿನಿಮಾವಲ್ಲ. ಆ ವಿಚಾರ ಈಗಾಗಲೇ ಬಿಡುಗಡೆಗೊಂಡಿರುವ ಟೀಸರ್ ಮೂಲಕ ಋಜುವಾತಾಗಿದೆ. ಕ್ಷಣ ಕ್ಷಣವೂ ಥ್ರಿಲ್ ಆಗುವಂತೆ, ಮನೋರಂಜನೆ ಸೇರಿದಂತೆ ಯಾವುದಕ್ಕೂ ಕೊರತೆ ಇಲ್ಲದಂತೆ ಈ ಚಿತ್ರವನ್ನು ರೂಪಿಸಿರುವ ತುಂಬು ಖುಷಿ ನಂದೀಶ್ ಅವರಲ್ಲಿದೆ. ಈ ಮೂಲಕ ನಿರ್ದೇಶಕನಾಗಿ ತಮ್ಮ ವೃತ್ತಿ ಬದುಕು ಮತ್ತಷ್ಟು ಮಿರುಗಲಿದೆ ಎಂಬ ಗಾಢ ನಂಬಿಕೆಯೂ ಅವರಲ್ಲಿದೆ. ಇದನ್ನೂ ಓದಿ: ‘ರುದ್ರ ಗರುಡ ಪುರಾಣ’ದಲ್ಲಿ ಮಿಸ್ ಆದ ವಿಮಾನದ ಕಥೆ ಹೇಳಲಿದ್ದಾರೆ ರಿಷಿ

    ಈ ಹಿಂದೆ ತೆಲುಗಿನಲ್ಲಿ 9 ಅವರ್ಸ್ ಎಂಬ ವೆಬ್ ಸೀರೀಸ್ ನಿರ್ದೇಶನ ಮಾಡುವ ಮೂಲಕ ನಂದೀಶ್ ಗಮನ ಸೆಳೆದಿದ್ದರು. ಈ ಸಮಾಜದಲ್ಲಿ ಬದಲಾವಣೆ ತರುವಂಥಾ ಕಥನಗಳಿಗೆ ದೃಶ್ಯರೂಪ ಕೊಡಬೇಕೆಂಬ ತುಡಿತ ಹೊಂದಿರುವವರು ನಂದೀಶ್. ಜೇಕಬ್ ವರ್ಗೀಸ್ ನಿರ್ದೇಶನದ ಪೃಥ್ವಿ ಚಿತ್ರ ಭ್ರಷಾಚಾರದ ವಿರುದ್ಧ ಈ ಸಮಾಜವನ್ನು ಸೆಟೆದು ನಿಲ್ಲುವಂತೆ ಮಾಡಿತ್ತು. ಅದರ ಭಾಗವಾಗಿ ಅನುಭವ ಹೊಂದಿರುವ ನಂದೀಶ್ ಆ ಬಗೆಯ ಚಿತ್ರಗಳತ್ತ ವಿಶೇಷ ಒಲವು ಹೊಂದಿದ್ದಾರೆ. ರುದ್ರ ಗರುಡ ಪುರಾಣದ ಮೂಲಕ ಮತ್ತೊಂದು ದಿಕ್ಕಿನ ಕಥೆ ಹೇಳಿದ್ದಾರೆ.

    ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ವಿಜಯ್ ಲೋಹಿತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೊಂದು ಮಿಸ್ಟ್ರಿ ಥ್ರಿಲ್ಲರ್ ಬಗೆಯ ಸಿನಿಮಾ. ಒಂದು ಘಟನೆಯ ಬಗ್ಗೆ ತನಿಖೆಗಿಳಿಯುತ್ತಾ, ಪ್ರೇಕ್ಷಕರೆದುರು ಹೊಸ ಜಗತ್ತೊಂದು ತೆರೆದುಕೊಂಡು ಹೋಗುವಂತೆ ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ಈಗಿರುವ ಕ್ರೇಜ್ ಅನ್ನು ಆಧರಿಸಿ ಹೇಳೋದಾದರೆ, ರುದ್ರ ಗರುಡ ಪುರಾಣ ಈ ವರ್ಷದ ಆರಂಭವನ್ನು ಗೆಲುವಿನ ಮೂಲಕ ಕಳೆಗಟ್ಟಿಸುವ ಲಕ್ಷಣಗಳು ಕಾಣಿಸಲಾರಂಭಿಸಿವೆ. ವಿನೋದ್ ಆಳ್ವಾ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರೀಶ್ ಶಿವಣ್ಣ ಮುಂತಾದವರು ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂದೀಪ್ ಕುಮಾರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ಕೃಷ್ಣ ಪ್ರಸಾದ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

  • ಬಿಡುಗಡೆಯಾಯ್ತು `ರುದ್ರ ಗರುಡ ಪುರಾಣ’ದ ನಶೆಯೇರಿಸೋ ಸಾಂಗು!

    ಬಿಡುಗಡೆಯಾಯ್ತು `ರುದ್ರ ಗರುಡ ಪುರಾಣ’ದ ನಶೆಯೇರಿಸೋ ಸಾಂಗು!

    ರಿಷಿ ನಾಯಕನಾಗಿ ನಟಿಸಿರುವ `ರುದ್ರ ಗರುಡ ಪುರಾಣ’ ಚಿತ್ರ ಜನವರಿ 24ರಂದು ತೆರೆಕಾಣಲಿದೆ. ಈಗಾಗಲೇ ಟೀಸರ್, ಹಾಡುಗಳ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಈ ಸಿನಿಮಾದ ಮತ್ತೊಂದು ಹಾಡು ಇದೀಗ ಬಿಡುಗಡೆಗೊಂಡಿದೆ.

    ಈಗಾಗಲೇ ಟೀಸರ್ ಮತ್ತು ಒಂದಷ್ಟು ಹಾಡುಗಳೊಂದಿಗೆ ಸದರಿ ಸಿನಿಮಾ ಪ್ರೇಕ್ಷಕರನ್ನು ಸೆಳೆದಿತ್ತು. ಯಾವುದೇ ಪ್ರಚಾರದ ಭರಾಟೆಗಳಿಲ್ಲದೆ ಗಟ್ಟಿ ಕಂಟೆಂಟಿನ ಮುನ್ಸೂಚನೆಯೊಂದಿಗೆ ಕುತೂಹಲ ಮೂಡಿಸಿರೋ `ರುದ್ರ ಗರುಡ ಪುರಾಣ’ದಲ್ಲೊಂದು ಪ್ರೇಮ ಕಥನವೂ ಮಿಳಿತಗೊಂಡಿದೆ. ಅದರ ಖುಷಿಯ ಭಾವದ ತೀವ್ರತೆಯನ್ನು ಸಮರ್ಥವಾಗಿ ಹಿಡಿದಿಟ್ಟುಕೊಂಡಂತಿರೋ ಈ ಹಾಡಿಗೀಗ ಕೇಳುಗರ ಕಡೆಯಿಂದ ವ್ಯಾಪಕ ಮೆಚ್ಚುಗೆ, ಹೆಚ್ಚೆಚ್ಚು ವೀಕ್ಷಣೆಗಳು ಸಿಗಲಾರಂಭಿಸಿವೆ.

    ಅದೇನೇನೋ ಖುಷಿ ತಂದೆ, ಅದೇನೇನೋ ನಶೇ ತಂದೆ ಅಂತ ಶುರುವಾಗೋ ಈ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ. ಇತ್ತೀಚೆಗೆ ಮತ್ತೆ ಮತ್ತೆ ಗುನುಗಿಸಿಕೊಳ್ಳೋ ಹಾಡುಗಳ ಮೂಲಕ ಹೆಸರಾಗಿರುವವರು ಸಂಜಿತ್. ಅವರ ಹಿಟ್ ಲಿಸ್ಟಿಗೆ ಈ ಹಾಡೂ ಕೂಡಾ ಸೇರಿಕೊಳ್ಳೋ ಲಕ್ಷಣಗಳಿದ್ದಾವೆ. ದೀಪಿಕಾ ವರದರಾಜನ್ ಈ ಹಾಡಿಗೆ ಧ್ವನಿಗೂಡಿಸಿದ್ದಾರೆ. ಕೃಷ್ಣಪ್ರಸಾದ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ಸದರಿ ಗೀತೆಗೆ ಕಾಂತಾರಾ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.

    ಮಿಸ್ಟ್ರಿ ಥ್ರಿಲ್ಲರ್ ಜಾನರಿನ ರುದ್ರ ಗರುಡ ಪುರಾಣದಲ್ಲೊಂದು ಪ್ರೇಮ ಕಥನವೂ ಇದೆ. ಪ್ರೀತಿ ಅಂದ್ರೆ ನಾನಾ ಪದರಗಳಿರುವ ಮಾಯೆ. ಅದರಲ್ಲಿ ಕಿಬ್ಬೊಟ್ಟೆಯಲ್ಲಿ ಚಿಟ್ಟೆ ಹಾರಾಡಿದಂಥಾ ಅನೂಹ್ಯ ಖುಷಿಯೂ ಸೇರಿಕೊಂಡಿದೆ. ಅಂಥಾದ್ದೊಂದು ಆಹ್ಲಾದ ತುಂಬಿಕೊಂಡಂತಿರೋ ಈ ಹಾಡು ವೇಗವಾಗಿ ಕೇಳುಗರನ್ನು ಆವರಿಸಿಕೊಳ್ಳುತ್ತಿದೆ.

    ಕನ್ನಡಕ್ಕೆ ಒಂದಷ್ಟು ವಿಭಿನ್ನ ಸಿನಿಮಾಗಳನ್ನು ಕೊಟ್ಟಿರುವವರು ನಿರ್ದೇಶಕ ಜೇಕಬ್ ವರ್ಗೀಸ್. ದಶಕಗಳ ಕಾಲ ಅವರ ಗರಡಿಯಲ್ಲಿ ಪಳಗಿಕೊಂಡಿರುವ ನಂದೀಶ್ `ರುದ್ರ ಗರುಡ ಪುರಾಣ’ವನ್ನು ನಿರ್ದೇಶನ ಮಾಡಿದ್ದಾರೆ. ಜೇಕಬ್ ಅವರಿಂದ ಪ್ರಭಾವಿತರಾಗಿ, ವಿಶಿಷ್ಟ ಕಥಾ ವಸ್ತುವನ್ನು ಮುಟ್ಟುವ ಗುಣ ಹೊಂದಿರುವ ನಂದೀಶ್, ಈ ಮೂಲಕ ಹೊಸಾ ಆವೇಗದ ಕಥೆಯೊಂದಕ್ಕೆ ದೃಷ್ಯ ರೂಪ ನೀಡಿದ್ದಾರೆ. ಅದರ ಒಟ್ಟಾರೆ ಕಸುವು ಈಗಾಗಲೇ ಬಿಡುಗಡೆಗೊಂಡಿರುವ ಟೀಸರ್ ನಲ್ಲಿ ಪ್ರತಿಫಲಿಸಿದೆ. ವಿಶೇಷವೆಂದರೆ, ಆಪರೇಷನ್ ಅಲಮೇಲಮ್ಮ, ಕವಲು ದಾರಿಯಂಥಾ ಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ರಿಷಿ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಮೈಸೂರು ಹುಡುಗಿ ಪ್ರಿಯಾಂಕಾ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.

    ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ವಿಜಯ್ ಲೋಹಿತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೊಂದು ಮಿಸ್ಟ್ರಿ ಥ್ರಿಲ್ಲರ್ ಬಗೆಯ ಸಿನಿಮಾ. ಒಂದು ಘಟನೆಯ ಬಗ್ಗೆ ತನಿಖೆಗಿಳಿಯುತ್ತಾ, ಪ್ರೇಕ್ಷಕರೆದುರು ಹೊಸಾ ಜಗತ್ತೊಂದು ತೆರೆದುಕೊಂಡು ಹೋಗುವಂತೆ ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ಈಗಿರುವ ಕ್ರೇಜ್ ಅನ್ನು ಆಧರಿಸಿ ಹೇಳೋದಾದರೆ, ರುದ್ರ ಗರುಡ ಪುರಾಣ ಈ ವರ್ಷದ ಆರಂಭವನ್ನು ಗೆಲುವಿನ ಮೂಲಕ ಕಳೆಗಟ್ಟಿಸುವ ಲಕ್ಷಣಗಳು ಕಾಣಿಸಲಾರಂಭಿಸಿವೆ. ವಿನೋದ್ ಆಳ್ವಾ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರೀಶ್ ಶಿವಣ್ಣ ಮುಂತಾದವರು ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂದೀಪ್ ಕುಮಾರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ಕೃಷ್ಣ ಪ್ರಸಾದ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

     

  • ‘ರುದ್ರ ಗರುಡ ಪುರಾಣ’ದಲ್ಲಿ ಮಿಸ್ ಆದ ವಿಮಾನದ ಕಥೆ ಹೇಳಲಿದ್ದಾರೆ ರಿಷಿ

    ‘ರುದ್ರ ಗರುಡ ಪುರಾಣ’ದಲ್ಲಿ ಮಿಸ್ ಆದ ವಿಮಾನದ ಕಥೆ ಹೇಳಲಿದ್ದಾರೆ ರಿಷಿ

    ಮ್ಮ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿರುವ ಹಾಗೂ ಪ್ರಸ್ತುತ ತೆಲುಗು ಚಿತ್ರರಂಗದಲ್ಲೂ ಮನೆಮಾತಾಗಿರುವ ನಟ ರಿಷಿ (Rishi) ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ “ರುದ್ರ ಗರುಡ ಪುರಾಣ” (Rudra Garuda Purana) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ನಿರ್ದೇಶಕ ಜೇಕಬ್ ವರ್ಗೀಸ್ ಮುಂತಾದವರು ಟೀಸರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

    914 ವಿಮಾನ 1955 ರಲ್ಲಿ ನ್ಯೂಯಾರ್ಕ್ ನಿಂದ ಮಿಯಾನ್ ಸಿಟಿಗೆ ಹೊರಟಿದ್ದ ವಿಮಾನ ಮಿಸ್ ಆಗುತ್ತದೆ. ವಿಮಾನದ ಸುಳಿವು ಸಿಕ್ಕಿರುವುದಿಲ್ಲ. ಇದಾದ ಮೂವತ್ತು ವರ್ಷಗಳ(1985 ರಲ್ಲಿ)ನಂತರ ಮತ್ತೆ ಆ ವಿಮಾನ ವಾಪಸ್ ಬರುತ್ತದೆ ಅದು ಹೇಗೆ…? ಹಾಗೂ ಒಬ್ಬ ರಾಜ ಇಡೀ ಭೂಮಂಡಲನೇ ಗೆಲ್ಲಬೇಕು ಅಂತ ಆಸೆಯಿಂದ ತನ್ನ‌ ಪಕ್ಕದ ದೇಶದ ಮೇಲೆ ಯುದ್ದಕ್ಕೆ ಹೋಗಿ‌  ಲಕ್ಷಾಂತರ ಜನರನ್ನು ಕೊಂದು ಜಯ‌ ಸಾಧಿಸಿರುತ್ತಾನೆ.‌ ಯುದ್ದ ಮುಗಿದ ಮೇಲೆ‌ ರಣರಂಗಕ್ಕೆ‌ ಹೋಗುತ್ತಾನೆ. ಅಲ್ಲಿ ಸಾಲುಸಾಲು ಹೆಣದ ರಾಶಿಗಳಿರುತ್ತಿದೆ.‌ ಸತ್ತಿದ್ದ ಸೈನಿಕನೊಬ್ಬನ ಮಾಂಸವನ್ನು ಮನುಷ್ಯನೊಬ್ಬ ತಿನ್ನುತ್ತಿರುತ್ತಾನೆ.‌ ಆ ಸಮಯಕ್ಕೆ‌ ರಾಜ ಅಲ್ಲಿಗೆ ಬರುತ್ತಾನೆ‌. ಆ‌ ಮನುಷ್ಯ ರಾಜನನ್ನು ಕುರಿತು, ಕ್ಷಮಿಸು ರಾಜ ನಾನು ನಿನ್ನ ಆಹಾರವನ್ನು ‌ತಿನ್ನುತ್ತಿದ್ದೇನೆ ಎನ್ನುತ್ತಾನೆ. ಆಗ ರಾಜ ನಾನು ನಿನ್ನ ಹಾಗೆ ನರಭಕ್ಷಕ ಅಲ್ಲ‌ ಏನುತ್ತಾನೆ.‌ ಆಗ ಆ ಮನುಷ್ಯ ಹಾಗಾದರೆ ಇಷ್ಟು ಜನರನ್ನು ಏಕೆ‌ ಸಾಯಿಸಿದಿಯಾ ಎಂದು ರಾಜನನ್ನು ಕೇಳುತ್ತಾನೆ?‌.‌ ಈ ಎರಡು ಉಪಕಥೆಗಳೇ ನಮ್ಮ‌ ಚಿತ್ರದ ಕಥೆಗೆ ಸ್ಪೂರ್ತಿ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ನಂದೀಶ್.

    ನಮ್ಮ‌ ಸುತ್ತಮುತ್ತ ನಡೆಯುವ ಅನೇಕ ಸಮಸ್ಯೆಗಳನ್ನಿಟ್ಟುಕೊಂಡು ನಂದೀಶ್ ಈ ಚಿತ್ರದ ಕಥೆ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರ ನಿರ್ಮಾಣದ “ಕವಲುದಾರಿ” ಚಿತ್ರದ ನಂತರ ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ರುದ್ರ ನನ್ನ ಪಾತ್ರದ ಹೆಸರು ಎಂದರು ನಟ ರಿಷಿ. ಇದು ನನ್ನ ಅಭಿನಯದ ಎರಡನೇ ಚಿತ್ರ.‌ ನನ್ನ‌ ಪಾತ್ರ ಕೂಡ ಚೆನ್ನಾಗಿದೆ‌ ಎಂದು ನಾಯಕಿ ಪ್ರಿಯಾಂಕ ಕುಮಾರ್‌ ತಿಳಿಸಿದರು. ‌

    ಜೇಕಬ್ ವರ್ಗೀಸ್‌ ಹಾಗೂ ನಾನು ಸ್ನೇಹಿತರು. ಜೇಕಬ್ ಅವರ ಜೊತೆಗೆ ಕೆಲಸ ಮಾಡುತ್ತಿದಾಗಿನಿಂದಲೂ ನನಗೆ ನಂದೀಶ್ ಪರಿಚಯ.‌‌ ನಂದೀಶ್ ಈ ಚಿತ್ರದ ಕಥೆ ಹೇಳಿದಾಗ ಇಷ್ಟವಾಯಿತು. ಅಭಿನಯಿಸಿದ್ದೇನೆ ಎಂದರು ನಟ ವಿನೋದ್ ಆಳ್ವಾ. ಚಿತ್ರದಲ್ಲಿ ನಟಿಸಿರುವ ಕೆ.ಎಸ್ ಶ್ರೀಧರ್, ಗಿರೀಶ್ ಶಿವಣ್ಣ, ಶಿವರಾಜ ಕೆ.ಆರ್ ಪೇಟೆ, ಸಂಗೀತ ನಿರ್ದೇಶಕ ಕೆಪಿ, ಛಾಯಾಗ್ರಾಹಕ ಸಂದೀಪ್ ಕುಮಾರ್ ಹಾಗೂ ಸಂಭಾಷಣೆ ಬರೆದಿರುವ ರಘು ನಿಡವಳ್ಳಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

     ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.  ಅಶ್ವಿನಿ ಅವರ ಪತಿ ಲೋಹಿತ್ ಅವರು ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.

  • ‘ರುದ್ರ ಗರುಡ ಪುರಾಣ’ ಪೋಸ್ಟರ್ ರಿಲೀಸ್ : ರಿಷಿಗೆ ಬರ್ತ್ ಡೇ ಗಿಫ್ಟ್

    ‘ರುದ್ರ ಗರುಡ ಪುರಾಣ’ ಪೋಸ್ಟರ್ ರಿಲೀಸ್ : ರಿಷಿಗೆ ಬರ್ತ್ ಡೇ ಗಿಫ್ಟ್

    ಪುನೀತ್ ರಾಜಕುಮಾರ್‌ ನಿರ್ಮಾಣದ “ಕವಲುದಾರಿ” ಸೇರಿದಂತೆ ಅನೇಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ಕನ್ನಡಿಗರ ಮನ ಗೆದ್ದಿರುವ ಹಾಗೂ “ಶೈತಾನ್” ವೆಬ್ ಸಿರೀಸ್ ಮೂಲಕ ತೆಲುಗಿನಲ್ಲೂ ಮನೆಮಾತಾಗಿರುವ ನಟ ರಿಷಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ.  ಈ ಸಂದರ್ಭದಲ್ಲಿ ರಿಷಿ ನಾಯಕರಾಗಿ ನಟಿಸಿರುವ “ರುದ್ರ ಗರುಡ ಪುರಾಣ” ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ರಿಷಿ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದೆ‌.

    ಈಗಾಗಲೇ ಚಿತ್ರೀಕರಣ ಪೂರೈಸಿರುವ ಈ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ.  ರಿಷಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ(ತನಿಖಾಧಿಕಾರಿ)  ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಫಸ್ಟ್ ಲುಕ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು. ಚಿತ್ರದ ಫಸ್ಟ್ ಲುಕ್ ಗೆ ರಿಷಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.  “ಡಿಯರ್ ವಿಕ್ರಮ್” ಚಿತ್ರ ನಿರ್ದೇಶಿಸಿರುವ ಕೆ.ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಥೆ ಹಾಗೂ ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಸಂಭಾಷಣೆ ರಘು ನಿಡುವಳ್ಳಿ ಅವರದು. ಕೆಪಿ ಸಂಗೀತ ನಿರ್ದೇಶನ, ಸಂದೀಪ್ ಕುಮಾರ್ ಛಾಯಾಗ್ರಹಣ ಹಾಗೂ ಮನು ಶೇಡ್ಗಾರ್ ಸಂಕಲನ ಈ ಚಿತ್ರಕ್ಕಿದೆ.

    ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕ ಕುಮಾರ್ ನಟಿಸಿದ್ದಾರೆ. ವಿನೋದ್ ಆಳ್ವ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರಿ, ಕೆ.ಎಸ್ ಶ್ರೀಧರ್, ಅಶ್ವಿನಿ ಗೌಡ,  ರಾಮ್ ಪವನ್, ವಂಶಿ, ಆಕರ್ಷ್, ಜೋಸೆಫ್, ಪ್ರಭಾಕರ್, ಗೌತಮ್ ಮೈಸೂರು, ಸ್ನೇಕ್ ಶ್ಯಾಮ್, ರಂಗನಾಥ್ ಭಾರದ್ವಾಜ್, ಕಾಮಿಡಿ ಕಿಲಾಡಿಗಳು ಜಗಪ್ಪ, ಪ್ರಸನ್ನ ಹಂಡ್ರಂಗಿ, ರಿದ್ವಿ ತಾರಾಬಳಗದಲ್ಲಿದ್ದಾರೆ. ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ‌ಮಾಡುವ ಮೂಲಕ ಪ್ರಚಾರ ಕಾರ್ಯ ಪ್ರಾರಂಭಿಸುವುದಾಗಿ ತಿಳಿಸಿರುವ ನಿರ್ದೇಶಕರು ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ ಎನ್ನುತ್ತಾರೆ.

  • ‘ರುದ್ರ ಗರುಡ ಪುರಾಣ’ ಫಸ್ಟ್ ಲುಕ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

    ‘ರುದ್ರ ಗರುಡ ಪುರಾಣ’ ಫಸ್ಟ್ ಲುಕ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

    ಡಿಯರ್ ವಿಕ್ರಂ ಖ್ಯಾತಿಯ ನಂದೀಶ್ (Nandish) ಮತ್ತು ರಿಷಿ ಕಾಂಬಿನೇಷನ್ ನ ‘ರುದ್ರ ಗರುಡ ಪುರಾಣ’ (Rudra Garuda Purana) ಸಿನಿಮಾದ ಫಸ್ಟ್ ಲುಕ್ (First Look) ರಿಲೀಸ್ ಆಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಫಸ್ಟ್ ಲುಕ್ ವಿಡಿಯೋ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರದ ಫಸ್ಟ್ ಲುಕ್ ಅನ್ನೂ ಅವರು ಮೆಚ್ಚಿಕೊಂಡಿದ್ದಾರೆ.

    ರಿಷಿ (Rishi) ನಾಯಕರಾಗಿ  ಅಭಿನಯಿಸಿರುವ, ಅಶ್ವಿನಿ ಆರ್ಟ್ಸ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಿದು. ಮೊನ್ನೆಯಷ್ಟೇ ಕ್ಲೈಮ್ಯಾಕ್ಸ್ ಫೈಟ್ ಅನ್ನು ಹೆಚ್. ಎಂ. ಟಿ ಫ್ಯಾಕ್ಟರಿಯಲ್ಲಿ ಆರು ದಿನಗಳ ಕಾಲ ಚಿತ್ರಿಸಿಕೊಳ್ಳುವುದರೊಂದಿಗೆ ಈ ಚಿತ್ರದ ಚಿತ್ರೀಕರಣವನ್ನು ಮುಕ್ಯಾತವಾಗಿತ್ತು. ಚಿತ್ರಕ್ಕೆ ಒಟ್ಟು 70 ದಿನಗಳ ಚಿತ್ರೀಕರಣ ನಡೆದಿದೆ.

    ಕವಲು ದಾರಿ ಚಿತ್ರದಲ್ಲಿ ಟ್ರಾಫಿಕ್ ಪೊಲೀಸ್ ಕೆಲಸದಿಂದ ಕ್ರೈಂ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಲು ಆಸೆ ಪಡುವ ಪಾತ್ರದಲ್ಲಿ ನಟಿಸಿದ್ದ ರಿಷಿ, ರುದ್ರ ಗರುಡ ಪುರಾಣ ಚಿತ್ರದಲ್ಲಿ ಕ್ರೈಂ ಇನ್ಸ್ ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ರುದ್ರ ಗರುಡ ಪುರಾಣ ಆಕ್ಷನ್ ಡ್ರಾಮಾ ಜಾನರ್ ನ  ಚಿತ್ರವಾಗಿರುತ್ತದೆ. ಟೆಕ್ನಿಕಲ್ ವಿಚಾರದಲ್ಲಿ ಹಲವಾರು ಹೊಸತನಗಳನ್ನು ಅಳವಡಿಸಿಕೊಂಡು ಫೈಟ್ ಮತ್ತು ಸಾಂಗ್ ಗಳನ್ನು ಚಿತ್ರೀಕರಣ ಮಾಡಿರುವುದು ಈ ಚಿತ್ರದ ವಿಶೇಷ.

    ರಿಷಿ ಅವರಿಗೆ  ನಾಯಕಿಯಾಗಿ ಪ್ರಿಯಾಂಕ ಕುಮಾರ್ ನಟಿಸಿದ್ದಾರೆ. “ಕಾಟೇರ” ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸಿ ಖ್ಯಾತರಾದ ವಿನೋದ್ ಆಳ್ವ. ಅವಿನಾಶ್. ಕೆ ಎಸ್ ಶ್ರೀಧರ್. ಗಿರಿ. ಕೆ ಆರ್ ಪೇಟೆ ಶಿವು. ಮಜಾ ಭಾರತ ಜಗಪ್ಪ . ಅಶ್ವಿನಿ ಗೌಡ. ಗೌತಮ್ ಮೈಸೂರ್ ಮುಂತಾದವರು ಈ ಚಿತ್ರದ  ತಾರಾಬಳಗದಲ್ಲಿದ್ದಾರೆ. ಹಾಟ್ ಸ್ಟಾರ್ ನಲ್ಲಿ ಬಿಡುಗಡೆಗೊಂಡು  ಯಶಸ್ವಿಗೊಂಡ ತೆಲುಗಿನ “ಸೈತಾನ್” ವೆಬ್ ಸೀರೀಸ್ ರಿಷಿ ಅವರು ನಟಿಸಿದ್ದರು. ಅದಕ್ಕೆ ಅವರಿಗೆ ಅತ್ಯುತ್ತಮ ಖಳನಟ ಪ್ರಶಸ್ತಿ ದೊರಕಿತ್ತು.  ತೆಲುಗಿನ ಬಾಲಯ್ಯ ಅವರ ಚಿತ್ರದಲ್ಲಿ ನಟಿಸುವುದರೊಂದಿಗೆ ಹಲವಾರು ತೆಲುಗು ಚಿತ್ರಗಳಲ್ಲಿ ರಿಷಿ ಬಿಜಿಯಾಗಿದ್ದಾರೆ.

     

    ರುದ್ರ ಗರುಡ ಪುರಾಣ ಚಿತ್ರವನ್ನು ಮೊದಲಿಗೆ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ ಮಾಡಿ ನಂತರ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ರೂಪಿಸಿಕೊಳ್ಳಲಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.

  • ರಿಷಿ ನಟನೆಯ ‘ರುದ್ರ ಗರುಡ ಪುರಾಣ’ ಚಿತ್ರದ ಶೂಟಿಂಗ್ ಕಂಪ್ಲೀಟ್

    ರಿಷಿ ನಟನೆಯ ‘ರುದ್ರ ಗರುಡ ಪುರಾಣ’ ಚಿತ್ರದ ಶೂಟಿಂಗ್ ಕಂಪ್ಲೀಟ್

    ನ್ನಡದ ನ್ಯಾಚುರಲ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ರಿಷಿ (Rishi) ನಾಯಕರಾಗಿ  ಅಭಿನಯಿಸಿರುವ, ಅಶ್ವಿನಿ ಆರ್ಟ್ಸ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ,   ‘ರುದ್ರ ಗರುಡ ಪುರಾಣ’ (Rudra Garuda Purana) ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.  ಕ್ಲೈಮ್ಯಾಕ್ಸ್ ಫೈಟ್ ಅನ್ನು ಹೆಚ್. ಎಂ. ಟಿ ಫ್ಯಾಕ್ಟರಿಯಲ್ಲಿ ಆರು ದಿನಗಳ ಕಾಲ ಚಿತ್ರಿಸಿಕೊಳ್ಳುವುದರೊಂದಿಗೆ ಈ ಚಿತ್ರದ ಚಿತ್ರೀಕರಣವನ್ನು ಇತ್ತೀಚಿಗೆ ಪೂರ್ಣಗೊಳಿಸಿ ಕುಂಬಳಕಾಯಿ ಒಡೆಯಲಾಯಿತು. ಚಿತ್ರಕ್ಕೆ ಒಟ್ಟು 70 ದಿನಗಳ ಚಿತ್ರೀಕರಣ ನಡೆದಿದೆ.

    ಕವಲು ದಾರಿ ಚಿತ್ರದಲ್ಲಿ ಟ್ರಾಫಿಕ್ ಪೊಲೀಸ್ ಕೆಲಸದಿಂದ ಕ್ರೈಂ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಲು ಆಸೆ ಪಡುವ ಪಾತ್ರದಲ್ಲಿ ನಟಿಸಿದ್ದ ರಿಷಿ, ರುದ್ರ ಗರುಡ ಪುರಾಣ ಚಿತ್ರದಲ್ಲಿ ಕ್ರೈಂ ಇನ್ಸ್ ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ರುದ್ರ ಗರುಡ ಪುರಾಣ ಆಕ್ಷನ್ ಡ್ರಾಮಾ ಜಾನರ್ ನ  ಚಿತ್ರವಾಗಿರುತ್ತದೆ. ಟೆಕ್ನಿಕಲ್ ವಿಚಾರದಲ್ಲಿ ಹಲವಾರು ಹೊಸತನಗಳನ್ನು ಅಳವಡಿಸಿಕೊಂಡು ಫೈಟ್ ಮತ್ತು ಸಾಂಗ್ ಗಳನ್ನು ಚಿತ್ರೀಕರಣ ಮಾಡಿರುವುದು ಈ ಚಿತ್ರದ ವಿಶೇಷ. ಡಿಯರ್ ವಿಕ್ರಂ ಚಿತ್ರದ ನಿರ್ದೇಶಕ ಕೆ. ಎಸ್. ನಂದೀಶ್  (Nandish) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

    ರಿಷಿ ಅವರಿಗೆ  ನಾಯಕಿಯಾಗಿ ಪ್ರಿಯಾಂಕ ಕುಮಾರ್ ನಟಿಸಿದ್ದಾರೆ. “ಕಾಟೇರ” ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸಿ ಖ್ಯಾತರಾದ ವಿನೋದ್ ಆಳ್ವ. ಅವಿನಾಶ್. ಕೆ ಎಸ್ ಶ್ರೀಧರ್. ಗಿರಿ. ಕೆ ಆರ್ ಪೇಟೆ ಶಿವು. ಮಜಾ ಭಾರತ ಜಗಪ್ಪ . ಅಶ್ವಿನಿ ಗೌಡ. ಗೌತಮ್ ಮೈಸೂರ್ ಮುಂತಾದವರು ಈ ಚಿತ್ರದ  ತಾರಾಬಳಗದಲ್ಲಿದ್ದಾರೆ. ಹಾಟ್ ಸ್ಟಾರ್ ನಲ್ಲಿ ಬಿಡುಗಡೆಗೊಂಡು  ಯಶಸ್ವಿಗೊಂಡ ತೆಲುಗಿನ “ಸೈತಾನ್” ವೆಬ್ ಸೀರೀಸ್ ರಿಷಿ ಅವರು ನಟಿಸಿದ್ದರು. ಅದಕ್ಕೆ ಅವರಿಗೆ ಅತ್ಯುತ್ತಮ ಖಳನಟ ಪ್ರಶಸ್ತಿ ದೊರಕಿತ್ತು.  ತೆಲುಗಿನ ಬಾಲಯ್ಯ ಅವರ ಚಿತ್ರದಲ್ಲಿ ನಟಿಸುವುದರೊಂದಿಗೆ ಹಲವಾರು ತೆಲುಗು ಚಿತ್ರಗಳಲ್ಲಿ ರಿಷಿ ಬಿಜಿಯಾಗಿದ್ದಾರೆ.

    ರುದ್ರ ಗರುಡ ಪುರಾಣ ಚಿತ್ರವನ್ನು ಮೊದಲಿಗೆ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ ಮಾಡಿ ನಂತರ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ರೂಪಿಸಿಕೊಳ್ಳಲಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. ಇದೇ ತಿಂಗಳಲ್ಲಿ ರುದ್ರ ಗರುಡ ಪುರಾಣ ಚಿತ್ರದ ಫಸ್ಟ್ ಲುಕ್  ಬಿಡುಗಡೆಯಾಗಲಿದೆ.

  • ಪೊಲೀಸ್ ಅಧಿಕಾರಿಯಾದ ನಟ ರಿಷಿ: ಅಭಿನಂದಿಸಿದ ನೀನಾಸಂ ಸತೀಶ್

    ಪೊಲೀಸ್ ಅಧಿಕಾರಿಯಾದ ನಟ ರಿಷಿ: ಅಭಿನಂದಿಸಿದ ನೀನಾಸಂ ಸತೀಶ್

    ಪರೇಶನ್ ಅಲಮೇಲಮ್ಮ, ಕವಲುದಾರಿ ಮುಂತಾದ ಚಿತ್ರಗಳ ಮೂಲಕ ಮನೆಮಾತಾಗಿರುವ ನಟ ರಿಷಿ (Rishi) ನಾಯಕರಾಗಿ ನಟಿಸುತ್ತಿರುವ,  ಕೆ.ಎಸ್ ನಂದೀಶ್ (Nandish) ನಿರ್ದೇಶನದ ನೂತನ ಚಿತ್ರದ ಮುಹೂರ್ತ ಸಮಾರಂಭ ಹಾಗೂ ಶೀರ್ಷಿಕೆ ಅನಾವರಣ ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ನಟ ನೀನಾಸಂ ಸತೀಶ್ (Ninasam Satish)ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು ಹಾಗೂ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ರುದ್ರ ಗರುಡ ಪುರಾಣ (Rudra Garuda Purana) ಎಂದು ಚಿತ್ರಕ್ಕೆ ಹೆಸರಿಡಲಾಗಿದೆ.

    ಚಂಬಲ್, ಡಿಯರ್ ವಿಕ್ರಮ್ ಚಿತ್ರಗಳು ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿರುವ ಕೆ.ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಹಾಗೂ ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಸಂಭಾಷಣೆ ರಘು ನಿಡುವಳ್ಳಿ ಅವರದು. ಉದ್ಯಮಿ ಲೋಹಿತ್ ನಿರ್ಮಾಣ ಮಾಡುತ್ತಿದ್ದಾರೆ. ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕಾ ಕುಮಾರ್ ಅಭಿನಯಿಸುತ್ತಿದ್ದಾರೆ.

    ರುದ್ರ ಗರುಡ ಪುರಾಣ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇಂದಿನಿಂದ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾ ಜನರ ಮೇಲೆ ಉತ್ತಮ ಪ್ರಭಾವ ಬೀರಬೇಕು. ಅಂತಹ ಸಿನಿಮಾವನ್ನು ಜನರಿಗೆ ಕೊಡುವ ಆಸೆ ನನಗೆ.  2022 UPSC ಪರೀಕ್ಷೆಯಲ್ಲಿ 265ನೇ ರ‍್ಯಾಂಕ್‌ ಪಡೆದಿರುವ ಮೈಸೂರು ಮೂಲದ ಕೆ‌.ಸೌರಭ್  ಅವರು ಸಂದರ್ಶನವೊಂದರಲ್ಲಿ ನನಗೆ ಪುನೀತ್ ರಾಜಕುಮಾರ್ ಅಭಿನಯದ ಪೃಥ್ವಿ ಚಿತ್ರ ಪ್ರೇರಣೆ ಎಂದಿದ್ದಾರೆ. ಪೃಥ್ವಿ ಚಿತ್ರ ಸೌರಭ್ ಅವರಿಗಷ್ಟೆ ಅಲ್ಲ. ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿದೆ.  ನಾನು ಆ ಚಿತ್ರದ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೆ.‌ ನಾವು ಮಾಡುವ ಚಿತ್ರ, ಈ ರೀತಿ ಜನರಿಗೆ ತಲುಪಿದಾಗ ಮುಂದೆ ಇಂತಹ ಹೆಚ್ಚುಹೆಚ್ಚು ಚಿತ್ರಗಳನ್ನು ಮಾಡುವ ಹುಮ್ಮಸ್ಸು ನಿರ್ದೇಶಕನಿಗೆ ಹೆಚ್ಚಾಗುತ್ತದೆ ಎಂದು ನಿರ್ದೇಶಕ ಕೆ.ಎಸ್ ನಂದೀಶ್ ತಿಳಿಸಿದರು.

    ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದೆ ಕವಲುದಾರಿ ಚಿತ್ರದಲ್ಲೂ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದೆ. ಹಾಗಾಗಿ, ಅದೇ ಜಾನರ್ ನ ಇನ್ನೊಂದು ಚಿತ್ರ ಮಾಡುವುದಕ್ಕೆ ಇಷ್ಟವಿರಲಿಲ್ಲ. ಆದರೆ ನಂದೀಶ್ ಅವರು ಈ ಚಿತ್ರದ ಕಥೆ ಕೇಳಿದಾಗ ಬಹಳ ಇಷ್ಟವಾಯಿತು. ಎರಡೂ ಚಿತ್ರಗಳ ಮಧ್ಯೆ ಯಾವುದೇ ಹೋಲಿಕೆ ಇಲ್ಲ.  ಇದರಲ್ಲಿ ನಾನು ಪೊಲೀಸ್ ಅಧಿಕಾರಿಯಾದರೂ ಬಹಳ ವಿಭಿನ್ನವಾಗಿದೆ.  ಜೊತೆಗೆ ಕರ್ಮ, ಪಾಪ, ಪುಣ್ಯಕ್ಕೆ ಸಂಬಂಧಿಸಿದ ಗರುಡ ಪುರಾಣದ ಸಾಕಷ್ಟು ಅಂಶಗಳು ಈ ಚಿತ್ರದಲ್ಲಿದೆ.  ಈ ಚಿತ್ರಕ್ಕೆ ಗರುಡ ಪುರಾಣ ಎಂದು ಹೆಸರಿಡಲು ನಿರ್ಧರಿಸಿದ್ದೆವು. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ರುದ್ರ. ಹಾಗಾಗಿ ರುದ್ರ ಗರುಡ ಪುರಾಣ ಅಂತ ಶೀರ್ಷಿಕೆ ಇಡಲಾಗಿದೆ. ಚಿತ್ರಕ್ಕೆ ಚಾಲನೆ ನೀಡಿದ ನೀನಾಸಂ ಸತೀಶ್ ಅವರಿಗೆ ಧನ್ಯವಾದ ಎಂದರು ನಾಯಕ ರಿಷಿ.  ನಾಯಕಿ ಪ್ರಿಯಾಂಕ ಕುಮಾರ್, ನಟರಾದ ಶಿವರಾಜ್ ಕೆ ಆರ್ ಪೇಟೆ, ಪವನ್  ಮುಂತಾದವರು ಚಿತ್ರದ ಕುರಿತು ಮಾತನಾಡಿದರು.