Tag: RTPS

  • ಆರ್ ಟಿಪಿಎಸ್‍ನ 8ರಲ್ಲಿ 6 ವಿದ್ಯುತ್ ಘಟಕಗಳ ಕಾರ್ಯ ಸ್ಥಗಿತ!

    ಆರ್ ಟಿಪಿಎಸ್‍ನ 8ರಲ್ಲಿ 6 ವಿದ್ಯುತ್ ಘಟಕಗಳ ಕಾರ್ಯ ಸ್ಥಗಿತ!

    ರಾಯಚೂರು: ರಾಜ್ಯದೆಲ್ಲೆಡೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಯಚೂರಿನಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಘಟಕಗಳು ಕಾರ್ಯಸ್ಥಗಿತಗೊಂಡಿವೆ.

    ಇಲ್ಲಿನ ಶಕ್ತಿನಗರದಲ್ಲಿರುವ ಆರ್ ಟಿಪಿಎಸ್‍ನ ಒಟ್ಟು ಎಂಟು ಘಟಕಗಳಲ್ಲಿ 6 ವಿದ್ಯುತ್ ಘಟಕಗಳು ಕಾರ್ಯಸ್ಥಗಿತಗೊಂಡಿವೆ. 1 ಮತ್ತು 5 ನೇ ಘಟಕದಲ್ಲಿ ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದೆ.

    1,720 ಮೆಗಾ ವ್ಯಾಟ್ ಸಾಮರ್ಥ್ಯದ ಕೇಂದ್ರದಲ್ಲಿ ಕೇವಲ 303 ಮೆಗಾ ವ್ಯಾಟ್ ಉತ್ಪಾದನೆಯಾಗುತ್ತಿದೆ. ಇನ್ನು ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ನ 800 ಮೆಗಾವ್ಯಾಟ್‍ನ 2 ವಿದ್ಯುತ್ ಕೇಂದ್ರಗಳು ಸಹ ಕಾರ್ಯಸ್ಥಗಿತಗೊಂಡಿವೆ. ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಕುಸಿತವಾಗಿದ್ದು ಘಟಕಗಳು ಕಾರ್ಯಸ್ಥಗಿತಗೊಂಡಿವೆ ಎಂದು ಹೇಳಲಾಗುತ್ತಿದೆ.

  • ಆರ್ ಟಿಪಿಎಸ್ ನಲ್ಲಿ ವ್ಯಾಗನರ್ ಗಳಿಗೆ ಬೂದಿ ತುಂಬುವ ಪೈಪ್ ಗಳಲ್ಲಿ ಸೋರಿಕೆ

    ಆರ್ ಟಿಪಿಎಸ್ ನಲ್ಲಿ ವ್ಯಾಗನರ್ ಗಳಿಗೆ ಬೂದಿ ತುಂಬುವ ಪೈಪ್ ಗಳಲ್ಲಿ ಸೋರಿಕೆ

    ರಾಯಚೂರು: ಶಕ್ತಿ ನಗರದಲ್ಲಿರುವ ಆರ್ ಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಹಾರುವ ಬೂದಿ ಪೈಪ್ ಸೋರಿಕೆಯಾಗಿ ಕೆಲ ಕಾಲ ಆತಂಕ ಸೃಷ್ಟಿಸಿದೆ.

    ನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಲೋಕಾ ಶೆಡ್ ಬಳಿ ವ್ಯಾಗನಾರ್ ಗಳಿಗೆ ತುಂಬುವ ಬೂದಿ ಪೈಪ್ ಗಳು ಸೋರಿಕೆಯಾಗಿದ್ದರಿಂದ ಈ ಅವಘಡ ಸಂಭವಿಸಿದೆ. ಬೂದಿ ಸೋರಿಕೆಯಾದ ಪರಿಣಾಮ ಸಂಪೂರ್ಣ ಆರ್ ಟಿಪಿಎಸ್ ಘಟಕ ಬೂದಿಯಿಂದ ಆವೃತಗೊಂಡಿದೆ. ಇದರಿಂದಾಗಿ ಘಟಕದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಕಂಗಲಾಗಿದ್ದು, ಹಾರೋ ಬೂದಿಯಿಂದಾಗಿ ಸಿಬ್ಬಂದಿಗಳಿಗೆ ಉಸಿರಾಟಕ್ಕೂ ತೊಂದರೆಯಾಗಿದೆ ಎಂದು ತಿಳಿದು ಬಂದಿದೆ.

    ಈ ಬೂದಿ ರಾಯಚೂರು-ಹೈದರಾಬಾದ್ ಮುಖ್ಯ ರಸ್ತೆವರೆಗೂ ಹಬ್ಬಿದ್ದರಿಂದ ಪ್ರಯಾಣಿಕರು ಸಹ ಗಾಬರಿಗೊಂಡಿದ್ದು, ಸದ್ಯ ಈಗ ವಾತಾವರಣ ಸಹಜ ಸ್ಥಿತಿಗೆ ಮರಳುತ್ತಿದೆ. ಆರ್ ಟಿಪಿಎಸ್ ಘಟಕದಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ ಸಿಬ್ಬಂದಿಗಳು ಆತಂಕ ಹೆಚ್ಚಾಗಿದೆ.

  • ವಿದ್ಯುತ್ ಕ್ಷಾಮದಲ್ಲಿ ಕರುನಾಡು- ಆರ್‍ಟಿಪಿಎಸ್, ವೈಟಿಪಿಎಸ್‍ನಲ್ಲಿ ಇಲ್ಲ ಕಲ್ಲಿದ್ದಲು

    ವಿದ್ಯುತ್ ಕ್ಷಾಮದಲ್ಲಿ ಕರುನಾಡು- ಆರ್‍ಟಿಪಿಎಸ್, ವೈಟಿಪಿಎಸ್‍ನಲ್ಲಿ ಇಲ್ಲ ಕಲ್ಲಿದ್ದಲು

    – ಚಳಿಗಾಲದಲ್ಲೇ ಪವರ್ ಕಟ್

    ರಾಯಚೂರು: ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಎದುರಾಗಿದ್ದು, ಬೆಂಗಳೂರಿನಲ್ಲೇ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಹಳ್ಳಿಗಳ ಪಾಡಂತು ಕೇಳುವಂತಿಲ್ಲ. ಇದಕ್ಕೆಲ್ಲಾ ಕಾರಣ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ.

    ರಾಯಚೂರು ಶಕ್ತಿನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಾದ ಆರ್‍ಟಿಪಿಎಸ್ ಹಾಗೂ ವೈಟಿಪಿಎಸ್‍ ನಲ್ಲಿ ವಿದ್ಯುತ್ ಉತ್ಪಾದನೆ ಕುಸಿತವಾಗಿದೆ. ಉಳಿದ ವಿದ್ಯುತ್ ಸ್ಥಾವರಗಳಲ್ಲೂ ಉತ್ಪಾದನೆ ಇಳಿಮುಖವಾಗಿದ್ದು, 7,758 ಮೆಗಾ ವ್ಯಾಟ್ ವಿದ್ಯುತ್ ಗೆ ಬೇಡಿಕೆ ಇದೆ. ಆದರೆ ಉತ್ಪಾದನೆಯಾಗುತ್ತಿರೋದು ಮಾತ್ರ 4,408 ಮೆಗಾ ವ್ಯಾಟ್ ವಿದ್ಯುತ್ ಮಾತ್ರ. 1,720 ಮೆಗಾ ವ್ಯಾಟ್ ಉತ್ಪಾದನಾ ಸಾಮಥ್ರ್ಯದ ಆರ್‍ಟಿಪಿಎಸ್ ನಲ್ಲಿ ಕೇವಲ 1,307 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

    ರಾಯಚೂರು ನಗರಕ್ಕೆ 120 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆಯಿದ್ದು, ಕೇವಲ 60 ಮೆಗಾ ವ್ಯಾಟ್ ವಿದ್ಯುತ್ ಪೂರೈಕೆಯಾಗುತ್ತಿದೆ. ಹೀಗಾಗಿ ಸಣ್ಣ ಕೈಗಾರಿಕೆಗಳು, ಕಚೇರಿಗಳು ಹಾಗೂ ಸಾರ್ವಜನಿಕರು ಲೋಡ್ ಶೆಡ್ಡಿಂಗ್ ನಿಂದ ಬೇಸತ್ತು ಹೋಗಿದ್ದಾರೆ. ಮಿಲ್ ಗಳಿಗೆ ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡಿರುವ ರೈತರು ಮಿಲ್ ಗಳು ಬಂದಾಗಿರುವುದರಿಂದ ಹಣ ಸಿಗದೇ ಪರದಾಡುತ್ತಿದ್ದಾರೆ. ಆದರೆ ಜೆಸ್ಕಾಂ ಅಧಿಕಾರಿಗಳು ಮಾತ್ರ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಹೇಳುತ್ತಿದ್ದಾರೆ.

    ಕಲ್ಲಿದ್ದಲು ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಎದುರಾಗಿದೆ. ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡುವುದರಿಂದ ಕೇಂದ್ರ ಸರ್ಕಾರದ ಸಚಿವರ ಜೊತೆ ಸಮನ್ವಯತೆ ಸಾಧಿಸಿ ಕಲ್ಲಿದ್ದಲು ಸರಬರಾಜಿಗೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದರೆ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕವೇ ಕತ್ತಲ ಭಾಗ್ಯಕ್ಕೆ ಒಳಗಾಗೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

  • ರಾಜ್ಯದಲ್ಲಿ ಶುರುವಾಯ್ತು ಲೋಡ್ ಶೆಡ್ಡಿಂಗ್-ಬೇಸಿಗೆ ಆರಂಭಕ್ಕೂ ಮುನ್ನವೇ ಕತ್ತಲೆ ಭಾಗ್ಯ

    ರಾಜ್ಯದಲ್ಲಿ ಶುರುವಾಯ್ತು ಲೋಡ್ ಶೆಡ್ಡಿಂಗ್-ಬೇಸಿಗೆ ಆರಂಭಕ್ಕೂ ಮುನ್ನವೇ ಕತ್ತಲೆ ಭಾಗ್ಯ

    ಬೆಂಗಳೂರು: ರಾಜ್ಯದ ಪವರ್ ಮಿನಿಸ್ಟರ್‍ಗೆ ಐಟಿ ಶಾಕ್ ಕೊಟ್ರೆ, ಪವರ್ ಮಿನಿಸ್ಟರ್ ರಾಜ್ಯಕ್ಕೆ ಕರೆಂಟ್ ಶಾಕ್ ನೀಡಿದ್ದಾರೆ.

    ಕರುನಾಡಿನ ಜನರಿಗೆ ಕತ್ತಲೆ ಭಾಗ್ಯ ಸಿಕ್ಕಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಶುರುವಾಗುವ ಲೋಡ್ ಶೆಡ್ಡಿಂಗ್ ಈಗಲೇ ಶುರುವಾಗಿದೆ. ಯುಪಿಎಸ್‍ಎಲ್, ಆರ್‍ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಘಟಕದ ಯೂನಿಟ್ ಮಂಗಳವಾರದಿಂದ ಸ್ಥಗಿತಗೊಂಡಿದೆ.

    ವಿದ್ಯುತ್ ಉತ್ಪಾದನೆಯಲ್ಲಿ ಕೊರತೆಯಾದ ಹಿನ್ನೆಲೆಯಲ್ಲಿ ಬೆಸ್ಕಾಂ ಐಇಎಕ್ಸ್‍ನಿಂದ ವಿದ್ಯುತ್ ಖರೀದಿಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಈಗಾಗಲೇ ಶುರುವಾಗಿದ್ದು ದಿನಕ್ಕೆ ಹತ್ತು ಗಂಟೆ ವಿದ್ಯುತ್ ಸಿಕ್ಕರೆ ಹೆಚ್ಚು ಅನ್ನುವಂತಾಗಿದೆ. ಈ ವಿದ್ಯುತ್ ಸಮಸ್ಯೆ ಯಾವತ್ತೂ ಬಗೆಹರಿಯಲಿದೆ ಅನ್ನೋ ಬಗ್ಗೆ ಬೆಸ್ಕಾಂ ಇನ್ನೂ ಮಾಹಿತಿ ನೀಡಿಲ್ಲ.

  • ಕೃಷ್ಣೆಯ ಒಡಲು ಸೇರಿದ ವಿಷ ತೈಲ – ಜೀವಜಲವೇ ಆಗ್ತಿದೆ ಜನ ಸಾಮಾನ್ಯರಿಗೆ ಕಂಟಕ

    ಕೃಷ್ಣೆಯ ಒಡಲು ಸೇರಿದ ವಿಷ ತೈಲ – ಜೀವಜಲವೇ ಆಗ್ತಿದೆ ಜನ ಸಾಮಾನ್ಯರಿಗೆ ಕಂಟಕ

    -ಜಲಚರ, ಜನ, ಜಾನುವಾರುಗಳ ಪ್ರಾಣಕ್ಕೆ ಕುತ್ತು

    ರಾಯಚೂರು: ಜಿಲ್ಲೆಯ ಶಕ್ತಿನಗರದ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಒಂದಿಲ್ಲೊಂದು ಅವಘಡಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ಬಾರಿ ವಿಷಯುಕ್ತ ರಾಸಾಯನಿಕವನ್ನು ನೇರವಾಗಿ ನದಿಗೆ ಬಿಡುವ ಮೂಲಕ ಆರ್‍ಟಿಪಿಎಸ್ ಘೋರ ದುರಂತಕ್ಕೆ ಕಾರಣವಾಗಲು ಹೊರಟಿದೆ. ಬ್ಯಾರೆಲ್ ಗಟ್ಟಲೇ ಸೋರಿಕೆಯಾದ ರಾಸಾಯನಿಕ ಆಯಿಲನ್ನು ನದಿಗೆ ಬಿಟ್ಟಿದ್ದರಿಂದ ನದಿ ಪಾತ್ರದ ಹಳ್ಳಿ ಜನರಲ್ಲಿ ಭಯ ಹುಟ್ಟಿಸಿದೆ.

    ಆರ್‍ಟಿಪಿಎಸ್ ಕೃಷ್ಣಾನದಿಗೆ ನೇರವಾಗಿ ರಾಸಾಯನಿಕ ವಸ್ತುಗಳನ್ನ ಬಿಡುವುದರಿಂದ ಸುತ್ತಮುತ್ತಲ ಹಳ್ಳಿ ಜನರಲ್ಲಿ ಚರ್ಮವ್ಯಾಧಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ಈ ಹಿಂದೆ ವರದಿ ಪ್ರಸಾರ ಮಾಡಿತ್ತು. ವರದಿಗೆ ಸಾಕ್ಷಿ ಎಂಬಂತೆ ಪುನಃ ಆರ್‍ಟಿಪಿಎಸ್ ವಿಷಯುಕ್ತ ಆಯಿಲನ್ನು ನೇರವಾಗಿ ನದಿಗೆ ಬಿಟ್ಟಿದೆ. ವಿಷಯುಕ್ತ ಪದಾರ್ಥಗಳು ನದಿಗೆ ಸೇರುವುದರಿಂದ ಕುಡಿಯುವ ನೀರಿಗಾಗಿ ಕೃಷ್ಣೆಯನ್ನೇ ಅವಲಂಬಿಸಿರುವ ರಾಯಚೂರು ನಗರ ಸೇರಿ 32 ಗ್ರಾಮಗಳ ಜನ ಆತಂಕಕ್ಕೊಳಗಾಗಿದ್ದಾರೆ. ವಿದ್ಯುತ್ ಕೇಂದ್ರದ ಐದನೇ ಘಟಕದಲ್ಲಿ ಬಾಯ್ಲರ್ ಸ್ಟಾರ್ಟ್ ಅಪ್‍ಗೆ ಬಳಸುವ ಫರನೇಸ್ ಆಯಿಲ್ ಸೋರಿಕೆಯಾಗಿದ್ದು, ಕೂಡಲೇ ಇದನ್ನ ತಡೆಯದಿದ್ದರೆ ಜಲಚರ, ಜನ, ಜಾನುವಾರಗಳ ಮೇಲೆ ಕೆಟ್ಟಪರಿಣಾಮ ಬೀರಲಿದೆ.

    ಕಲ್ಲಿದ್ದಲು ಕೊರತೆಯಿದ್ದಾಗ ಬಳಸುವ ಲೋ ಡೆನ್ಸಿಟಿ ಆಯಿಲ್ ಹಾಗೂ ಫರನೇಸ್ ಆಯಿಲ್ ಸಾಗಣೆಯಲ್ಲಿ ತಾಂತ್ರಿಕ ತೊಂದರೆಯಾಗಿ ಸಾಗಾಣಾ ಪೈಪ್ ಸಿಡಿದಿದೆ. ಇದರಿಂದ ಸೋರಿಕೆಯಾದ ಆಯಿಲ್ ಕಳೆದ ನಾಲ್ಕೈದು ದಿನಗಳಿಂದ ಆರ್‍ಟಿಪಿಎಸ್ ಸಿಬ್ಬಂದಿ ನೇರವಾಗಿ ನದಿಗೆ ಬಿಡುತ್ತಿದ್ದಾರೆ. ಈ ವಿಷಯ ತಿಳಿದು ಅಕ್ಕಪಕ್ಕದ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಇದರಿಂದ ಅಧಿಕಾರಿಗಳು ಕಾಲುವೆ ಮುಖಾಂತರ ಹೋಗುತ್ತಿರುವ ಆಯಿಲನ್ನು ಪುನಃ ಬ್ಯಾರೆಲ್‍ಗೆ ತುಂಬಿಸಲು ಮುಂದಾಗಿದ್ದಾರೆ.

    ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ಸಾಕಷ್ಟು ಬಾರಿ ಈ ಬಗ್ಗೆ ಎಚ್ಚರಿಕೆ ನೋಟೀಸ್ ನೀಡಿದ್ದರೂ ಆರ್‍ಟಿಪಿಎಸ್ ಪದೇ ಪದೇ ಬೇಜವಾಬ್ದಾರಿತನ ಮೆರೆಯುತ್ತಿದೆ. ಒಟ್ಟಿನಲ್ಲಿ ತಪ್ಪಿತಸ್ಥ ಆರ್‍ಟಿಪಿಎಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ವಿಷ ಪದಾರ್ಥ ನದಿಗೆ ಸೇರದಂತೆ ಕೂಡಲೇ ಸೂಕ್ತ ಕ್ರಮಗಳನ್ನ ಸಂಬಂಧಪಟ್ಟವರು ತೆಗೆದುಕೊಳ್ಳಬೇಕಿದೆ.

  • ರಾಜ್ಯಕ್ಕೆ ಇಂದಿನಿಂದ ಹೊಸಬೆಳಕು: ರಾಯಚೂರಿನ ವೈಟಿಪಿಎಸ್ ಕಾರ್ಯಾರಂಭ

    ರಾಜ್ಯಕ್ಕೆ ಇಂದಿನಿಂದ ಹೊಸಬೆಳಕು: ರಾಯಚೂರಿನ ವೈಟಿಪಿಎಸ್ ಕಾರ್ಯಾರಂಭ

    – 800 ಮೆಗಾ ವ್ಯಾಟ್ ಸಾರ್ಮಥ್ಯದ ವಿದ್ಯುತ್ ಘಟಕ ಆರಂಭ
    – ಆಧುನಿಕ ತಂತ್ರಜ್ಞಾನದ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಸ್ಟೇಷನ್

    ರಾಯಚೂರು: ರಾಜ್ಯದ ಬೇಸಿಗೆ ವಿದ್ಯುತ್ ಸಮಸ್ಯೆ ನೀಗಿಸಲು ಹೊಸದೊಂದು ಬೆಳಕು ಇಂದಿನಿಂದ ರಾಜ್ಯ ವಿದ್ಯುತ್ ಜಾಲಕ್ಕೆ ಸೇರಿಕೊಳ್ಳಲಿದೆ. ರಾಯಚೂರಿನ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಅಧಿಕೃತವಾಗಿ ಇಂದಿನಿಂದ ಕಾರ್ಯಾರಂಭಿಸಿದೆ.

    ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ್ ನಾಯಕ್ ವಾಣಿಜ್ಯಿಕ ವಿದ್ಯುತ್ ಉತ್ಪಾದನೆ ಆರಂಭವನ್ನ ಇಂದು ಘೋಷಿಸಿದರು. 800 ಮೆಗಾ ವ್ಯಾಟ್ ಸಾರ್ಮಥ್ಯದ ಮೊದಲ ಘಟಕ ಕಾರ್ಯಾರಂಭ ಆರಂಭಿಸಿದ್ದು, ರಾಜ್ಯದ ವಿದ್ಯುತ್ ಜಾಲಕ್ಕೆ ಹೊಸ ಬೆಳಕು ಸೆರ್ಪಡೆಯಾಗಿದೆ. ಎರಡು ಘಟಕಗಳಿಂದ 1600 ಮೆಗಾ ವ್ಯಾಟ್ ಸಾರ್ಮಥ್ಯದ ವೈಟಿಪಿಎಸ್ ನಿಂದ ಒಂದುವರೆ ವರ್ಷಕಾಲ ತಡವಾಗಿ ಮೊದಲ ಘಟಕ ಆರಂಭಗೊಂಡಿದೆ. ಆಧುನಿಕ ತಂತ್ರಜ್ಞಾನದಲ್ಲಿ ರೂಪುಗೊಂಡ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಸ್ಟೇಷನ್ ಕಡಿಮೆ ಕಲ್ಲಿದ್ದಲು ಹಾಗೂ ನೀರನ್ನ ಬಳಸಿಕೊಂಡು ವಿದ್ಯುತ್ ಉತ್ಪಾದಿಸಲಿದೆ.

    9 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿದ್ಯುತ್ ಕೇಂದ್ರಕ್ಕೆ ಕಲ್ಲಿದ್ದಲು ಸಂಗ್ರಹಣಾ ಸ್ಥಳದ ಅಭಾವ, ರೈಲು ಮಾರ್ಗದ ತೊಂದರೆ, ಬಾಯ್ಲರ್ ಟ್ಯೂಬ್ ಸೋರಿಕೆಯಂತ ತಾಂತ್ರಿಕ ಸಮಸ್ಯೆಗಳು ಘಟಕದ ಆರಂಭಕ್ಕೆ ಹಿನ್ನೆಡೆಯುಂಟು ಮಾಡಿದ್ದವು. ಕೆಪಿಸಿಎಲ್‍ನ ಕಲ್ಲಿದ್ದಲು ಬಾಕಿ 1500 ಕೋಟಿ ಪಾವತಿಯಾಗಿರುವುದರಿಂದ ಯಾವುದೇ ತೊಂದರೆಗಳಿಲ್ಲದೆ ಘಟಕ ನಡೆಯಲಿದ್ದು, ಕೃಷ್ಣ ನದಿಯಿಂದ ನೀರಿನ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ತಜ್ಞರ ತಂಡ ಪ್ರಾಯೋಗಿಕ ಪರೀಕ್ಷೆಗಳನ್ನ ಮುಗಿಸಿದ್ದು, ಪ್ರಯೋಗಾರ್ಥ ವಿದ್ಯುತ್ ಉತ್ಪಾದನೆ ಯಶಸ್ವಿಯಾಗಿದೆ.

    ವೈಟಿಪಿಎಸ್ ವಿದ್ಯುತ್ ಕೇಂದ್ರದ ಕಾಮಗಾರಿಯನ್ನ ಬಿಎಚ್‍ಇಎಲ್ ಕಂಪನಿ ನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಎರಡನೇ ಘಟಕದ ಕಾಮಗಾರಿಯೂ ಚುರುಕುಗೊಳ್ಳಲಿದೆ. ಈ ಮೂಲಕ ರಾಯಚೂರು ಜಿಲ್ಲೆ ಇಡೀ ರಾಜ್ಯಕ್ಕೆ ಆರ್‍ಟಿಪಿಎಸ್ ನಿಂದ 1720 ಮೆಗಾ ವ್ಯಾಟ್ ಹಾಗೂ ವೈಟಿಪಿಎಸ್ ನಿಂದ 800 ಮೆಗಾ ವ್ಯಾಟ್ ಸೇರಿ ಒಟ್ಟು 2520 ಮೆಗಾ ವ್ಯಾಟ್ ವಿದ್ಯುತ್‍ನ್ನ ಉತ್ಪಾದಿಸಿ ಬೆಳಕು ನೀಡುತ್ತಿದೆ.