Tag: RTPS

  • ರಾಜ್ಯದ ಶಾಖೋತ್ಪನ್ನ ಕೇಂದ್ರಗಳಲ್ಲಿ ಕಲ್ಲಿದ್ದಲು ಕೊರತೆ – ವಿದ್ಯುತ್ ಅಭಾವದ ಆತಂಕ

    ರಾಜ್ಯದ ಶಾಖೋತ್ಪನ್ನ ಕೇಂದ್ರಗಳಲ್ಲಿ ಕಲ್ಲಿದ್ದಲು ಕೊರತೆ – ವಿದ್ಯುತ್ ಅಭಾವದ ಆತಂಕ

    ರಾಯಚೂರು: ರಾಜ್ಯಕ್ಕೆ ವಿದ್ಯುತ್ ಕ್ಷಾಮ ಎದುರಾಗುವ ಸಾಧ್ಯತೆಗಳು ದಟ್ಟವಾಗಿವೆ. ರಾಜ್ಯದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಕಲ್ಲಿದ್ದಲಿನ ಕೊರತೆ ಉಂಟಾಗಿದ್ದು, ರಾಜ್ಯದಲ್ಲಿ ವಿದ್ಯುತ್ ಅಭಾವ ಉಂಟಾಗುವ ಸಾಧ್ಯತೆಗಳಿವೆ.

    ರಾಜ್ಯಕ್ಕೆ ಶೇ.45 ರಷ್ಟು ವಿದ್ಯುತ್ ನೀಡುವ ರಾಯಚೂರಿನ ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್.ಟಿ.ಪಿ.ಎಸ್ ನ ಎಂಟು ಘಟಕಗಳಲ್ಲಿ ನಾಲ್ಕು ಘಟಕಗಳು ಕಲ್ಲಿದ್ದಲು ಕೊರತೆಯಿಂದ ಈಗಾಗಲೇ ವಿದ್ಯುತ್ ಉತ್ಪಾದನೆ ನಿಲ್ಲಿಸಿವೆ. 1720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮಥ್ರ್ಯ ಆರ್.ಟಿ.ಪಿ.ಎಸ್ ಈಗ ಕೇವಲ ಸುಮಾರು 500 ಮೆಗಾವ್ಯಾಟ್ ನಷ್ಟು ವಿದ್ಯುತ್ ಉತ್ಪಾದಿಸುತ್ತಿದೆ. ಇದನ್ನೂ ಓದಿ: ಕೊರೊನಾ ನಡುವೆ ಸಾವಿರಾರು ಬೆಂಬಲಿಗರೊಂದಿಗೆ ಎಂಎಲ್‍ಸಿ ಅದ್ದೂರಿ ಹುಟ್ಟುಹಬ್ಬ

    ಆರ್.ಟಿ.ಪಿ.ಎಸ್ ನಲ್ಲಿ ಸದ್ಯ 12,010 ಮೆಟ್ರಿಕ್ ಟನ್ ಕಲ್ಲಿದ್ದಲು ಮಾತ್ರ ಸಂಗ್ರಹವಿದೆ. ನಾಲ್ಕು ಘಟಕಗಳಿಗೆ ಒಂದು ದಿನಕ್ಕೆ ಮಾತ್ರ ಇಷ್ಟು ಕಲ್ಲಿದ್ದಲು ಸಾಕಾಗುತ್ತದೆ. ಎಂಟು ಘಟಕಗಳಿಗೆ ಒಂದು ದಿನಕ್ಕೆ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕು. ಸಿಂಗರೇಣಿ, ಮಹಾನದಿ ಮತ್ತು ವೆಸ್ಟರ್ನ್ ಕೋಲ್ ಗಣಿಯಿಂದ ದಿನಕ್ಕೆ 8 ರಿಂದ 9 ರೇಕು ಕಲ್ಲಿದ್ದಲು ಬರುತ್ತಿತ್ತು. ಈಗ ಕೇವಲ 3 ರಿಂದ 4 ರೇಕು ಕಲ್ಲಿದ್ದಲು ಬರುತ್ತಿದೆ. ರಾಷ್ಟ್ರಮಟ್ಟದಲ್ಲಿ ಕಲ್ಲಿದ್ದಲು ಹಂಚಿಕೆ, ಮಳೆಯ ಪರಿಣಾಮ ಸೇರಿದಂತೆ ನಾನಾ ತಾಂತ್ರಿಕ ಕಾರಣದಿಂದಾಗಿ ಕಲ್ಲಿದ್ದಲು ಕೊರತೆ ಎದುರಾಗಿದೆ.

    ಕಲ್ಲಿದ್ದಲು ಕೊರತೆಯಿಂದಾಗಿ ಆರ್.ಟಿ.ಪಿ.ಎಸ್ ನ ಉಳಿದ 4 ಘಟಕಗಳು ಸಹ ಬಂದ್ ಆಗುವ ಆತಂಕ ಎದುರಾಗಿದೆ. ಇನ್ನೂ ಜಿಲ್ಲೆಯ ಯರಮರಸ್ ನಲ್ಲಿರುವ ಒಟ್ಟು 1,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮಥ್ರ್ಯದ ವೈಟಿಪಿಎಸ್ ನ ಎರಡು ಘಟಕಗಳಲ್ಲಿ ಒಂದು ಘಟಕ ಮಾತ್ರ 648 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ವೈಟಿಪಿಎಸ್ ನಲ್ಲಿ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹವಿದ್ದು, ಎರಡುದಿನಕ್ಕೆ ಮಾತ್ರ ಸಾಕಾಗಲಿದೆ. ಇದನ್ನೂ ಓದಿ: ನವರಾತ್ರಿಯ ಮೊದಲದಿನ ಶೈಲಪುತ್ರಿಯ ಆರಾಧನೆ

    ಇನ್ನೂ ರಾಜ್ಯದ ಎಲ್ಲ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಪರಸ್ಥಿತಿಯೂ ಹೀಗೆ ಇದೆ. ಸದ್ಯ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲ ವಿದ್ಯುತ್ ಸ್ಥಾವರಗಳ ಮೇಲೆ ಅವಲಂಬನೆ ಹೆಚ್ಚಾಗಿದೆ.

  • ಆರ್‌ಟಿಪಿಎಸ್‌ನಲ್ಲಿ ಅಗ್ನಿ ಅವಘಡ- 60 ಲಕ್ಷ ರೂ.ಮೌಲ್ಯದ ವಸ್ತುಗಳು ಭಸ್ಮ

    ಆರ್‌ಟಿಪಿಎಸ್‌ನಲ್ಲಿ ಅಗ್ನಿ ಅವಘಡ- 60 ಲಕ್ಷ ರೂ.ಮೌಲ್ಯದ ವಸ್ತುಗಳು ಭಸ್ಮ

    ರಾಯಚೂರು: ಜಿಲ್ಲೆಯ ಶಕ್ತಿನಗರದಲ್ಲಿರುವ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್‌ಟಿಪಿಎಸ್ ನ 4ನೇ ಘಟಕದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದೆ.

    ಮಂಗಳವಾರ ರಾತ್ರಿ ವೇಳೆ ಆರ್‌ಟಿಪಿಎಸ್ ನಲ್ಲಿ ವಿದ್ಯುತ್ ಘಟಕ ಆರಂಭಿಸುವ ವೇಳೆ ಬೆಂಕಿ ಕಾಣಿಸಿಕೊಂಡಿದೆ. ನಾಲ್ಕು ತಿಂಗಳಿಂದ ವಿದ್ಯುತ್ ಕೇಂದ್ರ ಕಾರ್ಯಸ್ಥಗಿತಗೊಂಡಿದ್ದರಿಂದ ಘಟಕ ಆರಂಭಿಸುವ ವೇಳೆ ತಾಂತ್ರಿಕ ಸಮಸ್ಯೆಯಿಂದ ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕೆನ್ನಾಲಿಗೆ ವಿದ್ಯುತ್ ಪರಿವರ್ತಕ ಸೇರಿದಂತೆ ಸುಮಾರು 60 ಲಕ್ಷ ರೂ.ಮೌಲ್ಯದ ವಸ್ತುಗಳು ಸುಟ್ಟು ಹಾಳಾಗಿವೆ.

    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೊರೊನಾ ಲಾಕ್‍ಡೌನ್ ಸಮಯದಲ್ಲಿ ವಿದ್ಯುತ್ ಬೇಡಿಕೆ ಕುಸಿತದಿಂದ ವಿದ್ಯುತ್ ಕೇಂದ್ರದ ಎಲ್ಲಾ 8 ಘಟಕಗಳನ್ನ ಸ್ಥಗಿತಗೊಳಿಸಲಾಗಿತ್ತು. ಮೊದಲ ಬಾರಿಗೆ ಸುಮಾರು ನಾಲ್ಕು ತಿಂಗಳ ಕಾಲ ಯಾವುದೇ ಘಟಕವನ್ನು ಆರಂಭಿಸದೆ ಆರ್‌ಟಿಪಿಎಸ್ ಸಂಪೂರ್ಣ ಸ್ಥಬ್ದವಾಗಿತ್ತು.

    ಇತ್ತೀಚೆಗೆ ಒಂದನೇ ಘಟಕ ಆರಂಭಿಸಿ ವಿದ್ಯುತ್ ಉತ್ಪಾದನೆ ಆರಂಭವಾಗಿತ್ತು. ಈಗ ನಾಲ್ಕನೇ ಘಟಕದಲ್ಲಿ ವಿದ್ಯುತ್ ಆರಂಭಿಸಲು ಮುಂದಾದಾಗ ಬೆಂಕಿ ಅವಘಡ ಸಂಭವಿಸಿದೆ.

  • ಎರಡು ತಿಂಗಳಿಂದ RTPS ಬಂದ್ – ಸಂಪೂರ್ಣ ಮುಚ್ಚುವ ಭೀತಿಯಲ್ಲಿ ಕಾರ್ಮಿಕರು

    ಎರಡು ತಿಂಗಳಿಂದ RTPS ಬಂದ್ – ಸಂಪೂರ್ಣ ಮುಚ್ಚುವ ಭೀತಿಯಲ್ಲಿ ಕಾರ್ಮಿಕರು

    ರಾಯಚೂರು: ಇಡೀ ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ನೀಡುತ್ತಿದ್ದ ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ ಟಿಪಿಎಸ್ ಕಳೆದ ಎರಡು ತಿಂಗಳಿಂದ ಸಂಪೂರ್ಣ ಬಂದ್ ಆಗಿದೆ. ಇದರಿಂದ ನೂರಾರು ಜನ ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಅಲ್ಲದೆ ವಿದ್ಯುತ್ ಕೇಂದ್ರವನ್ನ ಸಂಪೂರ್ಣ ಮುಚ್ಚುವ ಯೋಚನೆ ಸರ್ಕಾರದ ಮಾಡಿದೆಯಾ ಅನ್ನೋ ಅನುಮಾನ ಕಾರ್ಮಿಕರನ್ನ ಕಾಡುತ್ತಿದೆ.

    ಶಕ್ತಿ ನಗರದ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ ಟಿಪಿಎಸ್ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಕಾಲ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ. ಕಳೆದ ಎರಡು ತಿಂಗಳಿಂದ ವಿದ್ಯುತ್ ಕೇಂದ್ರದ ಎಲ್ಲಾ ಎಂಟು ಘಟಕಗಳು ಸಂಪೂರ್ಣ ಬಂದ್ ಆಗಿವೆ. 1,720 ಮೆಗಾ ವ್ಯಾಟ್ ಸಾಮರ್ಥ್ಯ ವಿದ್ಯುತ್ ಕೇಂದ್ರ ಈಗ ಒಂದೇ ಒಂದು ಯೂನಿಟ್ ವಿದ್ಯುತ್ ಉತ್ಪಾದಿಸುತ್ತಿಲ್ಲ. ಇದರಿಂದಾಗಿ ಆರ್ ಟಿಪಿಎಸ್ ನ ಸುಮಾರು 500 ಜನ ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಕೇಂದ್ರದ ಹಿರಿಯ ನೌಕರರು, ಬಹಳಷ್ಟು ಇಂಜಿನಿಯರ್ ಗಳನ್ನ ವೈಟಿಪಿಎಸ್ ಹಾಗೂ ರಾಜ್ಯದ ವಿವಿಧ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ನಿಯೋಜಿಸಲಾಗಿದೆ.

    ಹಿಂದೆಂದೂ ಕೇಂದ್ರ ಎಲ್ಲಾ ಘಟಕಗಳನ್ನು ಬಂದ್ ಮಾಡಿರಲಿಲ್ಲ. ತೀವ್ರತರದ ಕಲ್ಲಿದ್ದಲು ಅಥವಾ ನೀರಿನ ಸಮಸ್ಯೆಯಾದಾಗ ಮಾತ್ರ ಹೆಚ್ಚು ಘಟಕಗಳನ್ನ ಸ್ಥಗಿತಗೊಳಿಸಲಾಗುತ್ತಿತ್ತು. ಆದ್ರೆ ಈಗ ಕೊರೋನಾ ಲಾಕ್‍ಡೌನ್ ಹಿನ್ನೆಲೆ ವಿದ್ಯುತ್ ಬಳಕೆ ಪ್ರಮಾಣ ಇಳಿಕೆ ಹಾಗೂ ರಾಜ್ಯದಲ್ಲಿ ಸುರಿದ ಉತ್ತಮ ಮಳೆಯಿಂದ ವಿದ್ಯುತ್ ಬೇಡಿಕೆ ಕುಸಿದಿದೆ ಎನ್ನಲಾಗಿದೆ. ಆದ್ರೆ ಕಾರ್ಮಿಕ ಹೋರಾಟಗಾರರು ಮಾತ್ರ ಸರ್ಕಾರ ಜಿಲ್ಲೆಗೆ ಹಾಗೂ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಅಂತ ಆರೋಪಿಸಿದ್ದಾರೆ.

    ಜಲ ವಿದ್ಯುತ್ ಸ್ಥಾವರ ಹಾಗೂ ಸೋಲಾರ್ ವಿದ್ಯುತ್ ಸ್ಥಾವರಗಳಲ್ಲಿ ಒಂದು ಯೂನಿಟ್ ವಿದ್ಯುತ್ ಉತ್ಪಾದನೆಗೆ 1 ರೂಪಾಯಿ 60 ಪೈಸೆ ಖರ್ಚು ಬಂದ್ರೆ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ 5 ರೂಪಾಯಿ 30 ಪೈಸೆ ಖರ್ಚು ಬರುತ್ತೆ ಅನ್ನೋದು ಅಧಿಕಾರಿಗಳ ಸಮಜಾಯಿಸಿ. ಹೀಗಾಗಿ ಆರ್ ಟಿ ಪಿಎಸ್ ಹಾಗೂ ಬಳ್ಳಾರಿಯ ಬಿಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಉತ್ಪಾದನೆ ಸ್ಥಗಿತಗೊಳಿಸಿವೆ. ಇನ್ನೂ ಯರಮರಸ್‍ನ ವೈಟಿಪಿಎಸ್‍ನ ಒಂದು ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಉತ್ಪಾದನಾ ವೆಚ್ಚದ ಕಾರಣಕ್ಕೆ ಕಾರ್ಮಿಕರಿಗೆ ಅನ್ಯಾಯವಾಗಬಾರದು ಅನ್ನೋ ಕೂಗು ಹೆಚ್ಚಾಗಿದೆ.

    ರಾಜ್ಯದಲ್ಲಿ ಸದ್ಯ ಒಟ್ಟು 6,354 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿದ್ದು ಜಲ, ಪವನ, ಸೋಲಾರ್ ಹಾಗೂ ಇನ್ನಿತರ ಮೂಲಗಳಿಂದ ಸರಿದೂಗಿಸಲಾಗುತ್ತಿದೆ. ಆದ್ರೆ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳನ್ನ ಮಾತ್ರ ಬಂದ್ ಮಾಡುವ ಮೂಲಕ ಕಾರ್ಮಿಕರನ್ನ ಬೀದಿಗೆ ತಳ್ಳಲಾಗಿದೆ.

  • ವಿದ್ಯುತ್ ಬೇಡಿಕೆ ಇಳಿಮುಖ- RTPS ನ ಎಂಟೂ ಘಟಕಗಳ ಕಾರ್ಯ ಸ್ಥಗಿತ

    ವಿದ್ಯುತ್ ಬೇಡಿಕೆ ಇಳಿಮುಖ- RTPS ನ ಎಂಟೂ ಘಟಕಗಳ ಕಾರ್ಯ ಸ್ಥಗಿತ

    ರಾಯಚೂರು: ವಿದ್ಯುತ್ ಬೇಡಿಕೆ ಕಡಿಮೆಯಾದ ಹಿನ್ನೆಲೆ ನಗರದ ಶಕ್ತಿನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್‍ ಟಿಪಿಎಸ್‍ನ ಎಲ್ಲ ಎಂಟು ವಿದ್ಯುತ್ ಘಟಕಗಳು ಕಾರ್ಯವನ್ನು ಸ್ಥಗಿತಗೊಳಿಸಿವೆ.

    ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಇಳಿಮುಖವಾದ ಹಿನ್ನೆಲೆ ಸ್ಥಗಿತ ಕ್ರಮ ಕೈಗೊಳ್ಳಲಾಗಿದೆ. ಎಂಟು ವಿದ್ಯುತ್ ಕೇಂದ್ರಗಳಲ್ಲಿ ಉತ್ಪಾದನೆ ನಿಲ್ಲಿಸಿ ಸಂಪೂರ್ಣ ವಿಶ್ರಾಂತಿ ನೀಡಲಾಗಿದೆ. ಕೊರೊನಾ ಹಿನ್ನೆಲೆ ಕೈಗಾರಿಕೆಗಳು ಬಂದ್ ಆಗಿರುವ ಹಿನ್ನೆಲೆ ಕಳೆದ ಮೂರು ತಿಂಗಳಿಂದ ವಿದ್ಯುತ್ ಬೇಡಿಕೆಯಲ್ಲಿ ಕುಸಿತವಾಗಿದೆ. ಈ ಬಾರಿ ಬೇಸಿಗೆಯಲ್ಲೂ ವಿದ್ಯುತ್ ಬೇಡಿಕೆ ಹೆಚ್ಚಾಗದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ತಿಂಗಳು ಎರಡು ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಇದೀಗ ಈ ಎರಡು ಘಟಕಗಳನ್ನು ಸಹ ಬಂದ್ ಮಾಡಲಾಗಿದೆ.

    ಪವನ, ಜಲ ವಿದ್ಯುತ್ ಸ್ಥಾವರಗಳಿಂದ ರಾಜ್ಯದ ವಿದ್ಯುತ್ ಬೇಡಿಕೆ ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 9009 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಪ್ರಸ್ತುತ ರಾಜ್ಯದ ಬೇಡಿಕೆ 8992 ಮೆಗಾವ್ಯಾಟ್ ಇದೆ. ವೈಟಿಪಿಎಸ್‍ನ ಎರಡು ಘಟಕಗಳಲ್ಲಿ ಎರಡನೇ ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಬಳ್ಳಾರಿಯ ಬಿಟಿಪಿಎಸ್‍ನ ಮೂರು ಘಟಕಗಳ ಕಾರ್ಯವನ್ನು ಸಹ ಸ್ಥಗಿತಗೊಳಿಸಲಾಗಿದೆ.

  • ರಾಜ್ಯದಲ್ಲಿ ಕುಸಿದ ವಿದ್ಯುತ್ ಬೇಡಿಕೆ: ಲಾಕ್‍ಡೌನ್ ನಡುವೆ ಆರ್‍ಟಿಪಿಎಸ್‍ನ 68 ಕಾರ್ಮಿಕರ ವಜಾ

    ರಾಜ್ಯದಲ್ಲಿ ಕುಸಿದ ವಿದ್ಯುತ್ ಬೇಡಿಕೆ: ಲಾಕ್‍ಡೌನ್ ನಡುವೆ ಆರ್‍ಟಿಪಿಎಸ್‍ನ 68 ಕಾರ್ಮಿಕರ ವಜಾ

    – ಕೆಲಸದಿಂದ ತಗೆಯದಂತೆ ಕಾರ್ಮಿಕರಿಂದ ಹೋರಾಟ

    ರಾಯಚೂರು: ಅಂಫಾನ್ ಚಂಡಮಾರುತ ಹಿನ್ನೆಲೆ ವಿದ್ಯುತ್ ಬೇಡಿಕೆ ತಗ್ಗಿದ್ದು, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 8 ಘಟಕಗಳಲ್ಲಿ ಕೇವಲ ಎರಡು ಘಟಕಗಳಿಂದ ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದೆ.

    ವಿದ್ಯುತ್ ಬೇಡಿಕೆ ಕುಸಿತವಾಗಿರುವುದು ಕಾರ್ಮಿಕರ ಕೆಲಸವನ್ನೂ ಕಸಿದುಕೊಂಡಿದೆ. ಇಲ್ಲಿನ ಶಕ್ತಿನಗರದಲ್ಲಿರುವ ಆರ್‍ಟಿಪಿಎಸ್ ವಿದ್ಯುತ್ ಕೇಂದ್ರಕ್ಕೆ ಒಟ್ಟು 8 ಘಟಕಗಳಿಂದ 1,720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮಥ್ರ್ಯವಿದ್ದು, ಈಗ ಎರಡು ಘಟಕಗಳಿಂದ ಕೇವಲ 282 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿ ಸದ್ಯ 9,270 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, ಜಲ ಹಾಗೂ ಪವನ ಶಕ್ತಿಯಿಂದ ಉತ್ಪಾದನೆ ಹೆಚ್ಚಳವಾಗಿದೆ. ಹೀಗಾಗಿ ಶಾಖೋತ್ಪನ್ನ ಸ್ಥಾವರದಿಂದ ವಿದ್ಯುತ್ ಉತ್ಪಾದನೆ ಕಡಿತಗೊಂಡಿದೆ.

    ವಿದ್ಯುತ್ ಬೇಡಿಕೆ ಕುಸಿತದಿಂದಾಗಿ ಆರ್‍ಟಿಪಿಎಸ್ 8ನೇ ಘಟಕದಲ್ಲಿ ಕೆಲಸಮಾಡುತ್ತಿದ್ದ 68 ಜನ ಕೆಲಸ ಕಳೆದುಕೊಂಡಿದ್ದಾರೆ. ಗುತ್ತಿಗೆಯ ಅವಧಿ ಮುಗಿದಿದ್ದು, ಇದೇ ವೇಳೆ ವಿದ್ಯುತ್ ಬೇಡಿಕೆ ಕುಸಿದಿದ್ದರಿಂದ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ಕೈಬಿಡಲಾಗಿದೆ. ಇದರಿಂದ ಕಾರ್ಮಿಕರು ಹೋರಾಟ ನಡೆಸಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಕೆಲಸದಿಂದ ವಜಾ ಮಾಡಿರುವುದಕ್ಕೆ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಕೆಲಸದಿಂದ ತೆಗೆಯಬಾರದು, ವೇತನ ಕಡಿಮೆ ಮಾಡಬಾರದು ಎಂಬ ನಿಯಮವಿದ್ದರೂ ಆರ್‍ಟಿಪಿಎಸ್ ಕಾರ್ಮಿಕರನ್ನು ಕೆಸಲದಿಂದ ತೆಗೆದಿದೆ.

  • ಹೋಂ ಕ್ವಾರಂಟೈನ್ ಉಲ್ಲಂಘನೆ – ಆರ್‌ಟಿಪಿಎಸ್, ವೈಟಿಪಿಎಸ್ ಅಧಿಕಾರಿ ದಂಪತಿ ಮೇಲೆ ಕೇಸ್

    ಹೋಂ ಕ್ವಾರಂಟೈನ್ ಉಲ್ಲಂಘನೆ – ಆರ್‌ಟಿಪಿಎಸ್, ವೈಟಿಪಿಎಸ್ ಅಧಿಕಾರಿ ದಂಪತಿ ಮೇಲೆ ಕೇಸ್

    ರಾಯಚೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನ ತಡೆಯಲು ವಿದೇಶದಿಂದ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಹೋಂ ಕ್ವಾರಂಟೈನ್ ಇಲ್ಲವೆ ಆಸ್ಪತ್ರೆ ಐಸೋಲೇಷನ್ ವಾರ್ಡ್ ಗೆ ದಾಖಲಿಸಲಾಗುತ್ತಿದೆ. ಆದರೆ ಜಿಲ್ಲೆಯ ಶಕ್ತಿನಗರದ ಆರ್‌ಟಿಪಿಎಸ್ ಕಾಲೋನಿಯಲ್ಲಿ ಹೊಂ ಕ್ವಾರಂಟೈನ್‍ನಲ್ಲಿದ್ದ ಆರ್‌ಟಿಪಿಎಸ್, ವೈಟಿಪಿಎಸ್ ಅಧಿಕಾರಿ ದಂಪತಿ ಹಾಗೂ ಅವರ ಮಗ ಮತ್ತು ಮಗನ ಸ್ನೇಹಿತೆ ಸ್ವತಃ ವೈದ್ಯೆಯಾಗಿದ್ದರೂ ಹೋಂ ಕ್ವಾರಂಟೈನ್ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

    ಯರಮರಸ್‍ನ ವೈಟಿಪಿಎಸ್ ಸೂಪರಿಡೆಂಟ್ ಇಂಜನೀಯರ್ ಎಸ್.ಆರ್ ಕಬಾಡೆ ಹಾಗೂ ಅವರ ಪತ್ನಿ ಅನುಪಮ ಆರ್‌ಟಿಪಿಎಸ್ ನಲ್ಲಿ ಅಕೌಂಟ್ ಆಫೀಸರ್ ಆಗಿದ್ದು, ಹೋಂ ಕ್ವಾರಂಟೈನ್ ಅವಧಿಯಲ್ಲಿ ಕಚೇರಿಗೆ ತೆರಳಿ ಕೆಲಸ ಮಾಡಿದ್ದಾರೆ. ಮಾರ್ಕೆಟ್ ಸೇರಿ ಜನಸಂದಣಿ ಸ್ಥಳಗಳಲ್ಲಿ ಓಡಾಡಿದ್ದಾರೆ. ಈ ದಂಪತಿ ಮಗನ ಸ್ನೇಹಿತೆ ಜರ್ಮನಿಯಿಂದ ಶಕ್ತಿನಗರಕ್ಕೆ ಬಂದಿದ್ದಳು. ಈ ವಿಚಾರವನ್ನ ಕುಟುಂಬಸ್ಥರು ಜಿಲ್ಲಾಡಳಿತಕ್ಕೆ ತಿಳಿಸಿರಲಿಲ್ಲ. ಬಳಿಕ ನಾಲ್ವರನ್ನು ಮಾರ್ಚ 14ರಿಂದ ಮಾರ್ಚ 29ರವರೆಗೆ ಹೋಂ ಕ್ವಾರೆಂಟೈನ್ ಮಾಡಲಾಗಿತ್ತು. ಈ ವೇಳೆ ಇವರು ಮನೆಯಲ್ಲಿರದೆ ಹೊರಗಡೆ ಓಡಾಡಿದ್ದಾರೆ.

    ಜರ್ಮನಿಯಿಂದ ಬಂದಿದ್ದ ದಂಪತಿಯ ಮಗನ ಸ್ನೇಹಿತೆಯ ರಕ್ತ ಹಾಗೂ ಗಂಟಲು ಮಾದರಿಯನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ನೆಗೆಟಿವ್ ಬಂದಿದೆ, ಯಾರಲ್ಲೂ ರೋಗ ಲಕ್ಷಣಗಳಿಲ್ಲ. ಆದರೆ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿದ್ದರಿಂದ ದೇವಸುಗೂರು ಉಪತಹಶೀಲ್ದಾರ್ ಶಕ್ತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ವೈಟಿಪಿಎಸ್ ಹಿರಿಯ ಅಧಿಕಾರಿ, ಪತ್ನಿ, ಮಗ ಹಾಗೂ ಮಗನ ಸ್ನೇಹಿತೆಯ ವಿರುದ್ಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಳಿಗಾಲದಲ್ಲೂ ಹೆಚ್ಚಾಯ್ತು ಬೇಡಿಕೆ – ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಮೇಲೆ ಒತ್ತಡ

    ಚಳಿಗಾಲದಲ್ಲೂ ಹೆಚ್ಚಾಯ್ತು ಬೇಡಿಕೆ – ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಮೇಲೆ ಒತ್ತಡ

    ರಾಯಚೂರು: ಸಾಮಾನ್ಯವಾಗಿ ಚಳಿಗಾಲದಲ್ಲಿ ವಿದ್ಯುತ್ ಬೇಡಿಕೆ ಕಮ್ಮಿ ಇರುತ್ತದೆ. ಆದರೆ ಈ ವರ್ಷ ಬೇಡಿಕೆ ಅಧಿಕವಾಗಿದೆ. ಹೀಗಾಗಿ ರಾಜ್ಯದ ಶಾಖೊತ್ಪನ್ನ ವಿದ್ಯುತ್ ಕೇಂದ್ರಗಳ ಮೇಲೆ ಹೆಚ್ಚು ವಿದ್ಯುತ್ ಉತ್ಪಾದನೆಯ ಒತ್ತಡ ಬಿದ್ದಿದೆ.

    ರಾಜ್ಯಕ್ಕೆ ಶೇಕಡಾ 40 ರಷ್ಟು ವಿದ್ಯುತ್ ನೀಡುವ ಪ್ರಮುಖ ಶಾಖೋತ್ಪನ್ನ ವಿದ್ಯುತ್ ಕೇಂದ್ರ ರಾಯಚೂರಿನ ಆರ್.ಟಿ.ಪಿ.ಎಸ್ (ರಾಯಚೂರು ಥರ್ಮಲ್ ಪವರ್ ಸ್ಟೇಷನ್) ಮೇಲೆ ಹೆಚ್ಚಿನ ಒತ್ತಡವಿದೆ. ಹೀಗಾಗಿ ಆರ್.ಟಿ.ಪಿ.ಎಸ್ ನ 8 ಘಟಕಗಳಲ್ಲಿ 7 ಘಟಕಗಳು ನಿರಂತರವಾಗಿ ದಾಖಲೆ ಪ್ರಮಾಣದ ವಿದ್ಯುತ್ ಉತ್ಪಾದನೆಗೆ ಮುಂದಾಗಿವೆ. ಕೃಷಿ, ನೀರಾವರಿ ಪಂಪ್ ಸೆಟ್ ಸೇರಿದಂತೆ ಇನ್ನಿತರ ಕಾರಣಗಳಿಗೆ ಹೆಚ್ಚು ವಿದ್ಯುತ್ ಬಳಕೆಯಿರುವುದರಿಂದ ಬೇಡಿಕೆಯೂ ಹೆಚ್ಚಾಗಿದೆ. ಹೀಗಾಗಿ ಮಳೆಗಾಲ, ಚಳಿಗಾಲದಲ್ಲಿ ವಾರ್ಷಿಕ ನಿರ್ವಹಣೆಗೆ ಒಳಪಡಬೇಕಾದ ಘಟಕಗಳು ನಿರಂತರವಾಗಿ ವಿದ್ಯುತ್ ಉತ್ಪಾದಿಸುತ್ತಿವೆ.

    ಆರ್.ಟಿ.ಪಿ.ಎಸ್ ನ 8 ಘಟಕಗಳಿಗೆ ಒಟ್ಟು 1,ಸ720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮಥ್ರ್ಯವಿದ್ದು, ಈಗ 7 ಘಟಕಗಳಿಂದ 1,083 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. 1,700 ಮೆಗಾ ವ್ಯಾಟ್ ಸಾಮಥ್ರ್ಯದ ಬಳ್ಳಾರಿ ಬಿಟಿಪಿಎಸ್ ನಲ್ಲಿ 453 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

    ರಾಜ್ಯದಲ್ಲಿ ಒಟ್ಟು 8,323 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಕಳೆದ ಎರಡು ದಿನಗಳ ಹಿಂದೆ 10,121 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಈ ಚಳಿಗಾಲದಲ್ಲಿ ಬೇಡಿಕೆ ಕಡಿಮೆ ಇರುತ್ತದೆ ಎನ್ನಲಾಗಿತ್ತು. ಆದರೆ ಚಳಿಗಾಲದಲ್ಲಿಯೇ ಅಧಿಕ ಬೇಡಿಕೆ ಇದೆ. ರಾಜ್ಯದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಗೆ ಸದ್ಯ ಕಲ್ಲಿದ್ದಲು ಕೊರತೆಯಿಲ್ಲದ ಕಾರಣ ನಿರಂತರ ವಿದ್ಯುತ್ ಉತ್ಪಾದನೆ ಯಾವ ತೊಡಕಿಲ್ಲದೆ ನಡೆದಿದೆ.

  • ಆರ್‌ಟಿಪಿಎಸ್‌ನಲ್ಲಿ ಕಲ್ಲಿದ್ದಲು ಶಾಖಕ್ಕೆ ಸುಟ್ಟು ಕರಕಲಾದ ಕಾರ್ಮಿಕ

    ಆರ್‌ಟಿಪಿಎಸ್‌ನಲ್ಲಿ ಕಲ್ಲಿದ್ದಲು ಶಾಖಕ್ಕೆ ಸುಟ್ಟು ಕರಕಲಾದ ಕಾರ್ಮಿಕ

    ರಾಯಚೂರು: ಜಿಲ್ಲೆಯ ಶಕ್ತಿನಗರದಲ್ಲಿರುವ ಆರ್‌ಟಿಪಿಎಸ್‌ನಲ್ಲಿ ಅವಘಡ ಸಂಭವಿಸಿದ್ದು, ಗುತ್ತಿಗೆ ಕಾರ್ಮಿಕನೋರ್ವ ಕಲ್ಲಿದ್ದಲು ಶಾಖಕ್ಕೆ ಸುಟ್ಟು ಕರಕಲಾದ ದುರಂತ ನಡೆದಿದೆ.

    ಓರಿಸ್ಸಾ ಮೂಲದ ದೀಪಕ್ ನಾಯಕ್(27) ಮೃತ ಕಾರ್ಮಿಕ. ಗುತ್ತಿಗೆ ಆಧಾರದ ಮೇಲೆ ದೀಪಕ್ ಆರ್‌ಟಿಪಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದನು. ಕಲ್ಲಿದ್ದಲು ಬಂಕರ್‌ನಲ್ಲಿ ದೀಪಕ್ ಕೆಲಸ ಮಾಡುವಾಗ ಈ ಘಟನೆ ನಡೆದಿದೆ. ರಾತ್ರಿ ಸುಮಾರು 11:30ರ ವೇಳೆಗೆ ಈ ದುರಂತ ನಡೆದಿದೆ ಎನ್ನಲಾಗಿದೆ. ರಾತ್ರಿ ತನ್ನ ಪಾಳಿ ಸಮಯ ಮುಗಿದ ಮೇಲೂ ಕಾರ್ಮಿಕ ಹೆಚ್ಚುವರಿ ಕೆಲಸ ಮಾಡುತ್ತಿದ್ದ ವೇಳೆ ಕಲ್ಲಿದ್ದಲು ಶಾಖಕ್ಕೆ ಸಾವನ್ನಪ್ಪಿದ್ದಾನೆ.

    ಅಧಿಕಾರಿಗಳ ನಿರ್ಲಕ್ಷ್ಯವೇ ಕಾರ್ಮಿಕನ ಸಾವಿಗೆ ಕಾರಣ. ಅಧಿಕಾರಿಗಳು ಯಾವುದೇ ಸುರಕ್ಷತಾ ಕ್ರಮಗಳನ್ನು ಕಾರ್ಮಿಕರಿಗೆ ಒದಗಿಸಿದೆ ನಿರ್ಲಕ್ಷ್ಯ ತೋರಿದ್ದಾರೆ. ಆದ್ದರಿಂದಲೇ ಕಾರ್ಮಿಕ ಸಾವನ್ನಪ್ಪಿದ್ದಾನೆ ಎಂದು ಇತರೆ ಕಾರ್ಮಿಕರು ಆರೋಪಿಸಿದ್ದಾರೆ. ಸದ್ಯ ಈ ಸಂಬಂಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆರ್‌ಟಿಪಿಎಸ್‌ನಲ್ಲಿ ಹಳಿ ತಪ್ಪಿದ ರೈಲು

    ಆರ್‌ಟಿಪಿಎಸ್‌ನಲ್ಲಿ ಹಳಿ ತಪ್ಪಿದ ರೈಲು

    ರಾಯಚೂರು: ಜಿಲ್ಲೆಯ ಶಕ್ತಿನಗರದಲ್ಲಿರುವ ಆರ್‌ಟಿಪಿಎಸ್‌ ವಿದ್ಯುತ್ ಕೇಂದ್ರದಲ್ಲಿ ರೈಲು ಹಳಿ ತಪ್ಪಿ ವ್ಯಾಗನ್‌  ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

    ವಿದ್ಯುತ್ ಉತ್ಪಾದನಾ ಕೇಂದ್ರದ ಕ್ರಾಸಿಂಗ್ ಪಾಂಯಿಟ್ ಬಳಿ ಘಟನೆ ನಡೆದಿದ್ದು, ಹಳಿಯಿಂದ 50 ಮೀಟರ್ ದೂರಕ್ಕೆ ವ್ಯಾಗನ್‌ ಗಳು ಬಿದ್ದಿವೆ. ಕಲ್ಲಿದ್ದಲು ಖಾಲಿ ಮಾಡಿಕೊಂಡು ಮರಳಿ ಹೋಗುತ್ತಿದ್ದ ವೇಳೆ ಘಟನೆಯಾಗಿದ್ದು, ಚಾಲಕ ಹಾಗೂ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯವೇ ರೈಲು ಹಳಿ ತಪ್ಪಲು ಕಾರಣ ಎನ್ನಲಾಗಿದೆ.

    ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗುಂತಕಲ್ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಆಗಾಗ ಈ ರೀತಿ ಘಟನೆಗಳು ಆರ್‌ಟಿಪಿಎಸ್‌ನಲ್ಲಿ ಮರುಕಳಿಸುತ್ತಲೇ ಇವೆ.

    ಇಲ್ಲಿನ ಕೆಲ ಸಿಬ್ಬಂದಿ ಮದ್ಯಪಾನದ ಮತ್ತಿನಲ್ಲಿ ಕೆಲಸ ಮಾಡುತ್ತಿರುವ ಆರೋಪಗಳು ಕೂಡ ಕೇಳಿ ಬಂದಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೀಪಾವಳಿ ಹಬ್ಬದ ವೇಳೆ ಕತ್ತಲಲ್ಲಿ ಮುಳುಗಲಿದೆ ಕರ್ನಾಟಕ!

    ದೀಪಾವಳಿ ಹಬ್ಬದ ವೇಳೆ ಕತ್ತಲಲ್ಲಿ ಮುಳುಗಲಿದೆ ಕರ್ನಾಟಕ!

    ರಾಯಚೂರು: ಈ ಬಾರಿ ಬೆಳಕಿನ ಹಬ್ಬ ದೀಪಾವಳಿಗೆ ರಾಜ್ಯದ ಜನತೆಗೆ ಕತ್ತಲು ಆವರಿಸುವ ಸಾಧ್ಯತೆ ದಟ್ಟವಾಗಿದೆ. ಕಲ್ಲಿದ್ದಲಿನ ಕೊರತೆಯಿಂದ ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ವಿದ್ಯುತ್ ಉತ್ಪಾದನೆಯನ್ನೇ ನಿಲ್ಲಿಸುತ್ತಿವೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ(ಆರ್‌ಟಿಪಿಎಸ್), ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ(ವೈಟಿಪಿಎಸ್) ಸೇರಿದಂತೆ ಎಲ್ಲಾ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಈಗಾಗಲೇ ಹಂತ ಹಂತವಾಗಿ ಉತ್ಪಾದನೆ ಕಡಿಮೆ ಮಾಡುತ್ತಿದೆ.

    ರಾಜ್ಯಕ್ಕೆ ಶೇ.40ರಷ್ಟು ವಿದ್ಯುತ್ ನೀಡುವ ಆರ್‌ಟಿಪಿಎಸ್ ಎಂಟು ಘಟಕಗಳಲ್ಲಿ ಆರು ಘಟಕಗಳು ಈಗಾಗಲೇ ಬಂದ್ ಆಗಿವೆ. ಸದ್ಯ 1 ಮತ್ತು 5ನೇ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿದೆ. 1720 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಕೇಂದ್ರ ಕೇವಲ 305 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಇನ್ನು 800 ಮೆಗಾವ್ಯಾಟ್ ಸಾಮರ್ಥ್ಯದ ವೈಟಿಪಿಎಸ್ ಕೇವಲ 303 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. 1700 ಮೆಗಾ ವ್ಯಾಟ್ ಸಾಮರ್ಥ್ಯದ  ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಬಿಟಿಪಿಎಸ್) ಸಂಪೂರ್ಣ ಸ್ಥಗಿತವಾಗಿದೆ.

    ಕೊರತೆಯಾಗಿದ್ದು ಯಾಕೆ?
    ತಿತ್ಲಿ ಚಂಡಮಾರುತದಿಂದಾಗಿ ಮಹಾರಾಷ್ಟ್ರದ ವೆಸ್ಟರ್ನ್ ಕೋಲ್ಡ್ ಫೀಲ್ಡ್ ಹಾಗೂ ಒಡಿಶಾದ ಮಹಾನದಿ ಕೋಲ್ ಫೀಲ್ಡ್ಸ್ ಗಣಿ ಕಂಪನಿಗಳಿಂದ ಕಲ್ಲಿದ್ದಲು ಸರಬರಾಜು ಸಂಪೂರ್ಣ ನಿಂತಿದೆ. ಸದ್ಯ ತೆಲಂಗಾಣದ ಸಿಂಗರೇಣಿ ಗಣಿ ಕಂಪನಿ ಮಾತ್ರ ಕಲ್ಲಿದ್ದಲು ಸರಬರಾಜು ಮಾಡುತ್ತಿದೆ. ಆದರೆ ಆರ್‍ಟಿಪಿಎಸ್‍ಗೆ ನಿತ್ಯ 25 ಸಾವಿರ ಮೆಟ್ರಿಕ್ ಟನ್‍ನಷ್ಟು ಕಲ್ಲಿದ್ದಲು ಬೇಕಿದ್ದು, ಅಗತ್ಯ ಪ್ರಮಾಣದ ಕಲ್ಲಿದ್ದಲು ಸರಬರಾಜು ಆಗುತ್ತಿಲ್ಲ.

    ರಾಜ್ಯದ ಎಲ್ಲಾ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲೂ ಕಲ್ಲಿದ್ದಲು ದಾಸ್ತಾನು ಖಾಲಿಯಾಗಿದೆ. ಕಲ್ಲಿದ್ದಲು ಕೊರತೆಯಿಂದಾಗಿ ಜಲ, ಪವನ ವಿದ್ಯುತ್ ಸ್ಥಾವರಗಳ ಮೇಲೆ ಹೆಚ್ಚು ಒತ್ತಡ ಬಿದ್ದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ಭೀಕರ ವಿದ್ಯುತ್ ಸಮಸ್ಯೆ ಎದುರಾಗುವುದು ನಿಶ್ಚಿತ. ಕೇಂದ್ರ ಸರ್ಕಾರ ಕಲ್ಲಿದ್ದಲು ಪೂರೈಕೆ ಮಾಡಬೇಕಿದೆ. ಆದ್ರೆ ಈ ವಿಚಾರದಲ್ಲಿ ಕೇಂದ್ರ ರಾಜಕೀಯ ಮಾಡ್ತಿದೆ ಅನ್ನೋದು ಸಿಎಂ ಆರೋಪ. ಒಟ್ಟಿನಲ್ಲಿ ರಾಜಕೀಯ ದ್ವೇಷ ಮರೆತು ಕೇಂದ್ರ ಕಲ್ಲಿದ್ದಲು ಪೂರೈಕೆ ಮಾಡಬೇಕಿದೆ.