Tag: RTO

  • ಇನ್ನು ಮುಂದೆ ಡಿಎಲ್, ಆರ್ ಸಿ ಕೇಳಿದ್ರೆ ಮೊಬೈಲ್‍ನಲ್ಲೇ ತೋರಿಸಿ

    ಇನ್ನು ಮುಂದೆ ಡಿಎಲ್, ಆರ್ ಸಿ ಕೇಳಿದ್ರೆ ಮೊಬೈಲ್‍ನಲ್ಲೇ ತೋರಿಸಿ

    ಬೆಂಗಳೂರು: ಟ್ರಾಫಿಕ್ ಪೊಲೀಸ್ ಅಥವಾ ಆರ್‍ಟಿಓ ಅಧಿಕಾರಿಗಳು ನಿಮ್ಮ ಗಾಡಿ ಹಿಡಿದರೆ ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿಯೇ ದಾಖಲಾತಿಗಳನ್ನು ತೋರಿಸಬಹುದು.

    ಹೌದು, ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ, ವಿತರಿಸುವ ಮತ್ತು ದೃಢೀಕರಿಸುವ ದೇಶದ ಮೊದಲ ಸುರಕ್ಷಿತ `ಡಿಜಿ ಲಾಕರ್’ ವ್ಯವಸ್ಥೆಯನ್ನು ಅಳವಡಿಸಲು ಸಾರಿಗೆ ಇಲಾಖೆ ಈ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ.

    ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣಪತ್ರ (ಆರ್‍ಸಿ), ವಿಮೆ ಇತರ ಎಲ್ಲಾ ದಾಖಲಾತಿಗಳನ್ನು, ಡಿಜಿ ಲಾಕರ್‍ನಲ್ಲಿ ಸ್ಕ್ಯಾನ್ ಮೂಲಕ ಸೇವ್ ಮಾಡಿಕೊಳ್ಳಬೇಕು. ಬಳಿಕ ದಾಖಲಾತಿಗಳನ್ನು ತೋರಿಸಿದರೆ ಸಾಕು ನಿಮ್ಮ ಗಾಡಿಗಳ ದಾಖಲಾತಿಗಳು ಪರಿಶೀಲನೆ ಆದಂತೆಯೇ ಲೆಕ್ಕ. ಈಗಾಗಲೇ ಇದರ ಬಗ್ಗೆ ಸಾಧ್ಯಸಾಧ್ಯತೆಗಳ ಪರೀಶೀಲನೆ ಕೆಲಸ ಮುಗಿಸಿರುವ ಆರ್‍ಟಿಓ ಇನ್ನು ಕೆಲವೇ ದಿನಗಳಲ್ಲಿ ಹೊಸ ವಿಧಾನವನ್ನು ಜಾರಿ ಮಾಡಲಿದೆ.

    ರಾಜ್ಯದಲ್ಲಿ ಮೊದಲ ಪ್ರಯೋಗ:
    ಕರ್ನಾಟಕದಲ್ಲಿ ಇದು ಯಶಸ್ವಿಯಾದರೆ ದೇಶದೆಲ್ಲೆಡೆ ಜಾರಿಗೆ ತರಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಅಷ್ಟೇ ಅಲ್ಲದೆ ಡಿಜಿ ಲಾಕರ್‍ನಲ್ಲಿ ಎಲ್ಲಾ ರೀತಿಯ ದಾಖಲಾತಿಗಳನ್ನು ಸೇವ್ ಮಾಡಬಹುದಾಗಿದ್ದು, ಮುಂದೊಂದು ದಿನ ಎಲ್ಲಾ ಸೇವೆಗಳಿಗೆ ಡಿಜಿ ಲಾಕರ್ ಮೂಲಕವೇ ದಾಖಲಾತಿಗಳ ಪರಿಶೀಲನೆ ನಡೆಯಲಿದೆ ಎಂದು ಸಾರಿಗೆ ಆಯುಕ್ತ ದಯಾನಂದ್ ತಿಳಿಸಿದ್ದಾರೆ.

    2016ರ ಸೆಪ್ಟೆಂಬರ್ ನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಕಾಗದರಹಿತ ಆಡಳಿತ ಪರಿಕಲ್ಪನೆಯ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಡಿಜಿ ಲಾಕರ್ ಅನ್ನು ಜಂಟಿಯಾಗಿ ಉದ್ಘಾಟಿಸಿದ್ದರು. ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರದಿಂದ ಜನರು ತಪ್ಪಿಸಿಕೊಳ್ಳಲು ನೆರವಾಗಲು ಕೇಂದ್ರ ಸರ್ಕಾರ ಈ ಸೇವೆಯನ್ನು ಆರಂಭಿಸಿದೆ.

  • ಕಾರಿನಲ್ಲಿ ಕ್ರಾಶ್ ಗಾರ್ಡ್ ಬ್ಯಾನ್: ಅಳವಡಿಸಿದ್ರೆ ಬೀಳುತ್ತೆ ಭಾರೀ ದಂಡ!

    ಕಾರಿನಲ್ಲಿ ಕ್ರಾಶ್ ಗಾರ್ಡ್ ಬ್ಯಾನ್: ಅಳವಡಿಸಿದ್ರೆ ಬೀಳುತ್ತೆ ಭಾರೀ ದಂಡ!

    ನವದೆಹಲಿ: ಕಾರ್ ಹಾಗೂ ಇತರೇ ವಾಹನಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಬುಲ್ ಬಾರ್ ಅಥವಾ ಕ್ರಾಶ್ ಗಾರ್ಡ್ ಗಳನ್ನು ತೆಗೆಯಲು ತಕ್ಷಣವೇ ಕ್ರಮಕೈಗೊಳ್ಳಬೇಕೆಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದೆ.

    ರಸ್ತೆ ಅಪಘಾತದ ಹೆಚ್ಚಿನ ಸಮಯದಲ್ಲಿ ವಾಹನಗಳಿಗೆ ಅಳವಡಿಸಿರುವ ಬುಲ್ ಬಾರ್‍ ಗಳಿಂದ ಪಾದಚಾರಿಗಳಿಗೆ ಹೆಚ್ಚು ಅಪಾಯವಾಗುತ್ತಿದೆ ಎಂದು ತಿಳಿಸಿರುವ ಸಚಿವಾಲಯ ತಕ್ಷಣವೇ ವಾಹನಗಳಲ್ಲಿ ಅಳವಡಿಸಿರುವ ಕ್ರಾಶ್ ಗಾರ್ಡ್ ಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಅಲ್ಲದೇ ಬುಲ್ ಬಾರ್ ಅಳವಡಿಸಿರುವ ವಾಹನಗಳಿಗೆ ಭಾರೀ ದಂಡವನ್ನು ವಿಧಿಸಲು ಅವಕಾಶವನ್ನು ನೀಡಿದೆ.

     

    ಏನಿದು ಕ್ರಾಶ್ ಗಾರ್ಡ್?
    ವಾಹನಗಳಿಗೆ ಸಣ್ಣ ಅಪಘಾತದ ಸಮಯದಲ್ಲಿ ಹೆಚ್ಚಿನ ಹಾನಿಯಾಗದಿರಲಿ ಎಂಬ ಕಾರಣಕ್ಕೆ ಹಾಗೂ ವಾಹನಗಳ ಅಂದವನ್ನು ಹೆಚ್ಚಿಸಲು ಬುಲ್ ಬಾರ್ ಅಥವಾ ಕ್ರಾಶ್ ಗಾರ್ಡ್ ಗಳನ್ನು ಅಳವಡಿಸಲಾಗುತ್ತದೆ. ಕಾರು, ಎಸ್‍ಯುವಿ, ಪಿಕಪ್, ಬಸ್, ಟ್ರಕ್ ಗಳಲ್ಲಿ ಕ್ರಾಶ್ ಗಾರ್ಡ್ ಗಳನ್ನು ಅಳವಡಿಸಲಾಗುತ್ತದೆ. ಇವುಗಳನ್ನು ಕಬ್ಬಿಣ ಮತು ಫೈಬರ್ ನಿಂದ ತಯಾರಿಸಲಾಗುತ್ತದೆ. ಕೆಲವರು ಹೆಚ್ಚಿನ ಸಂಖ್ಯೆಯ ಲೈಟ್ ಗಳನ್ನು ಹಾಕಿ ವಾಹನದ ಅಂದವನ್ನು ಹೆಚ್ಚಿಸಲು ಈ ಕ್ರಾಶ್ ಗಾರ್ಡ್ ಅಳವಡಿಸುತ್ತಾರೆ.

    ಕಾನೂನು ಏನು ಹೇಳುತ್ತೆ?
    1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 52 ರ ಪ್ರಕಾರ ಯಾವುದೇ ರೀತಿಯ ವಾಹನಗಳಿಗೆ ಬುಲ್ ಬಾರ್ ಮತ್ತು ಕ್ರಾಶ್ ಗಾರ್ಡ್ ಅಳವಡಿಸುವುದನ್ನು ನಿಷೇಧಿಸಲಾಗಿದೆ. ಈ ಕಾರಣದಿಂದ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಈ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೆ ಮಾಡಲು ರಾಜ್ಯ ಸರ್ಕಾರಿಗಳಿಗೆ ಪತ್ರ ಬರೆದಿದೆ.

    ಕೇಂದ್ರದ ಅದೇಶದ ಅನ್ವಯ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು, ಆಯಾ ರಾಜ್ಯಗಳ ಸಾರಿಗೆ ಇಲಾಖೆ ಕಾರ್ಯದರ್ಶಿಗಳು ಮತ್ತು ಆಯುಕ್ತರು ಈ ಕುರಿತು ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೇ 1998 ರ ಕಾಯ್ದೆಯ 190, 191 ಸೆಕ್ಷನ್ ಗಳ ಅನ್ವಯ ಬುಲ್ ಬಾರ್ ಅಳವಡಸಿರುವ ವಾಹನ ಚಾಲಕ ಅಥವಾ ಮಾಲೀಕರಿಗೆ ದಂಡ ವಿಧಿಸುವ ಅವಕಾಶವನ್ನು ನೀಡಲಾಗಿದೆ.

    ನಿಷೇಧ ಯಾಕೆ?
    ಅಪಘಾತದ ಸಂದರ್ಭದಲ್ಲಿ ವಾಹನವನ್ನು ರಕ್ಷಿಸಲು ಮತ್ತು ಪಾದಾಚಾರಿಗಳು ವಾಹನ ಸವಾರರಿಗೆ ಗಂಭೀರವಾಗಿ ಏಟು ಬೀಳದೇ ಇರಲಿ ಎನ್ನುವ ಕಾರಣಕ್ಕೆ ಮುಂದುಗಡೆ ಫೈಬರ್ ಬಂಪರ್ ಅಳವಡಿಸಲಾಗುತ್ತದೆ. ಒಂದು ವೇಳೆ ವಾಹನ ಡಿಕ್ಕಿಯಾದಾಗ ಪಾದಾಚಾರಿಗಳು, ಸವಾರರು ಮೇಲಕ್ಕೆ ಚಿಮ್ಮಿ ಬಾನೆಟ್ ಮೇಲೆ ಬೀಳುವಂತೆ ಈ ಕ್ರಾಶ್ ಗಾರ್ಡ್ ವಿನ್ಯಾಸ ಮಾಡಲಾಗುತ್ತದೆ. ಆದರೆ ಅಪಘಾತದ ವೇಳೆ ವಾಹನಕ್ಕೆ ಡಿಕ್ಕಿ ಹೊಡೆಯುವ ಬೈಕ್ ಸವಾರರಿಗೆ, ಪಾದಚಾರಿಗಳಿಗೆ, ಪ್ರಾಣಿಗಳಿಗೆ ಹೆಚ್ಚಿನ ಪೆಟ್ಟು ಬೀಳುತ್ತದೆ. ಈ ಬಂಪರ್ ಬಿದ್ದ ನಂತರ ಪಾದಾಚಾರಿಗಳು ಮೇಲಕ್ಕೆ ಹಾರುವ ಬದಲು ಕೆಳಕ್ಕೆ ಬಿದ್ದು ಮೃತಪಡುವ ಸಾಧ್ಯತೆ ಹೆಚ್ಚಿರುತ್ತದೆ.

    ಎರಡನೇಯದಾಗಿ ಕಾರಿನಲ್ಲಿ ಡ್ರೈವರ್ ಮತ್ತು ಪ್ರಯಾಣಿಕರ ರಕ್ಷಣೆಗೆ ಏರ್ ಬ್ಯಾಗ್ ಇರುತ್ತದೆ. ಈ ಏರ್ ಬ್ಯಾಗ್  ಸೆನ್ಸರ್ ಗಳನ್ನು ಹೆಡ್ ಲ್ಯಾಂಪ್ ಹಿಂಬಂದಿಯಲ್ಲಿ ಅಳವಡಿಸಲಾಗುತ್ತದೆ. ಆದರೆ ಗಂಭೀರ ಅಪಘಾತವಾದಾಗ ಬುಲ್ ಬಾರ್ ನಿಂದಾಗಿ ಅಪಘಾತದ ತೀವ್ರತೆ ಈ ಸೆನ್ಸರ್ ಗೆ ತಟ್ಟುವುದಿಲ್ಲ. ಗಂಭೀರ ಅಪಘಾತ ಸಂಭವಿಸಿದರೂ ಈ ಏರ್ ಬ್ಯಾಗ್ ತೆರೆಯದೇ ಇದ್ದರೆ ಕಾರಿನ ಒಳಗಡೆ ಇರುವ ವ್ಯಕ್ತಿಗಳು ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.

    ಈ ಕ್ರಾಶ್ ಗಾರ್ಡ್ ಗಳನ್ನು ವಾಹನಗಳ ಚಾಸಿಗಳಿಗೆ ಅಳವಡಿಸಲಾಗುತ್ತದೆ. ಯಾವುದೇ ಅಪಘಾತವಾದರೂ ಚಾಸಿಗೆ ಭಾರೀ ಪೆಟ್ಟು ಬೀಳುತ್ತಿರುತ್ತದೆ. ರಕ್ಷಣೆಗಿಂತಲೂ ಅಪಾಯವೇ ಹೆಚ್ಚಾಗುತ್ತಿರುವ ಕಾರಣ ಈಗ ಸರ್ಕಾರ ಈ ಕ್ರಾಶ್ ಗಾರ್ಡ್ ಗಳನ್ನು ತೆಗೆಯುವಂತೆ ಸೂಚಿಸಿದೆ.

    ದಂಡ ಎಷ್ಟು?
    ಬುಲ್ ಬಾರ್ ತೆರವಿಗೆ ರಾಜ್ಯ ಸರ್ಕಾರದ ಅಧಿಕಾರಿಗಳು ನಿಗಧಿತ ಅವಧಿಯನ್ನು ಕಲ್ಪಿಸಿಕೊಡುತ್ತಾರೆ. ನಂತರದಲ್ಲಿಯೂ ವಾಹನಗಳಿಂದ ಬುಲ್ ಬಾರ್ ಗಳನ್ನು ತೆರವುಗೊಳಿಸದೇ ಇದ್ದರೆ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿ 1 ಸಾವಿರ ರೂ. ದಂಡ ವಿಧಿಸಬಹುದಾಗಿದ್ದು, ಎರಡನೇ ಬಾರಿ ಈ ಮೊತ್ತವನ್ನು 2 ಸಾವಿರಕ್ಕೆ ಹೆಚ್ಚಿಸಲಾಗುತ್ತದೆ. ಒಂದು ವೇಳೆ ವಾಹನದ ತಯಾರಕರು ಬುಲ್ ಬಾರ್ ಅಳವಡಿಸಿದ್ದರೆ ಹಾಗೂ ಬುಲ್ ಬಾರ್ ಗಳನ್ನು ಮಾರಾಟ ಮಾಡುವವರಿಗೆ 5 ಸಾವಿರ ರೂ ದಂಡ ವಿಧಿಸಬಹುದಾಗಿದೆ.

  • ಆರ್ ಟಿಒ ನಿಯಮ ಉಲ್ಲಂಘಿಸಿದ ಸಚಿವ ತನ್ವೀರ್ ಸೇಠ್!

    ಆರ್ ಟಿಒ ನಿಯಮ ಉಲ್ಲಂಘಿಸಿದ ಸಚಿವ ತನ್ವೀರ್ ಸೇಠ್!

    ರಾಯಚೂರು: ಸರ್ಕಾರಿ ನಿಯಮಗಳನ್ನ ಜಾರಿಯಲ್ಲಿಡಬೇಕಾದ ಸರ್ಕಾರಿ ಅಧಿಕಾರಿಗಳು, ಮಂತ್ರಿಗಳೇ ನಿಯಮಗಳನ್ನ ಉಲ್ಲಂಘನೆ ಮಾಡಿದ್ರೆ ಸಾರ್ವಜನಿಕರು ಹೇಗೆ ತಾನೆ ಪಾಲನೆ ಮಾಡುತ್ತಾರೆ? ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಆರ್ ಟಿ ಒ ನಿಯಮಗಳನ್ನ ಉಲ್ಲಂಘಿಸಿದ್ದಾರೆ.

    ಸಚಿವ ತನ್ವೀರ್ ಸೇಠ್ ತಮ್ಮ ಕಾರಿನ ನಂಬರ್ ಪ್ಲೇಟ್ ಮೇಲೆ ಫ್ಯಾನ್ಸಿ ಸಂಖ್ಯೆಯನ್ನು ಬರೆಸಿದ್ದಾರೆ. ಅವರ ಸರ್ಕಾರಿ ಕಾರಿನ ಸಂಖ್ಯೆ ಕೆ.ಎ52 ಜಿಎ0009 ಇದ್ದು, ಸೊನ್ನೆಗಳನ್ನ ಚಿಕ್ಕದಾಗಿ ಬರೆದು 9 ಸಂಖ್ಯೆಯನ್ನ ದೊಡ್ಡದಾಗಿ ಬರೆಸಿದ್ದಾರೆ.

    ಆರ್ ಟಿ ಒ ನಿಯಮದ ಪ್ರಕಾರ ಎಲ್ಲಾ ಅಂಕಿಗಳು ಸಮಾನ ಗಾತ್ರದಲ್ಲಿ ಒಂದೇ ಆಕಾರದಲ್ಲಿ ಇರಬೇಕು. ಕನ್ನಡದಲ್ಲಿ ಬರೆದ ಸಂಖ್ಯೆಗಳು ಸರಿಯಾಗಿದ್ದು, ಇಂಗ್ಲೀಷ್ ನಲ್ಲಿ ಬರೆದ ಸಂಖ್ಯೆಗಳಲ್ಲಿ ವ್ಯತ್ಯಾಸ ಮಾಡಿದ್ದಾರೆ. ಸಾರ್ವಜನಿಕರು ಈ ರೀತಿ ನಂಬರ್ ಪ್ಲೇಟ್ ಬರೆಸಿದರೆ ಆರ್ ಟಿ ಒ ಹಾಗೂ ಸಂಚಾರಿ ಪೊಲೀಸರು ಡಿಫೆಕ್ಟೀವ್ ನೇಮ್ ಪ್ಲೇಟ್ ಅಂತ 100 ರೂಪಾಯಿ ದಂಡ ಹಾಕ್ತಾರೆ. ಆದ್ರೆ ಇದೀಗ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಏನ್ ಮಾಡ್ತಾರೋ ನೋಡಬೇಕಿದೆ.