Tag: RTO Office

  • ಬೈಕ್ ಟ್ಯಾಕ್ಸಿಗೆ ಬ್ರೇಕ್ – ಒಂದೇ ದಿನದಲ್ಲಿ 103 ವಾಹನಗಳು ಸೀಜ್

    ಬೈಕ್ ಟ್ಯಾಕ್ಸಿಗೆ ಬ್ರೇಕ್ – ಒಂದೇ ದಿನದಲ್ಲಿ 103 ವಾಹನಗಳು ಸೀಜ್

    ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ಸ್ಥಗಿತಗೊಂಡ ಬೆನ್ನಲ್ಲೇ ಆರ್‌ಟಿಓ (RTO) ಅಧಿಕಾರಿಗಳು ಕಾರ್ಯಚರಣೆ ನಡೆಸಿದ್ದು, ಸೋಮವಾರ ಒಂದೇ ದಿನದಲ್ಲಿ 103 ಬೈಕ್‌ಗಳನ್ನು ಸೀಜ್ ಮಾಡಿದೆ.

    ಹೌದು, ಹೈಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಜೂ.16ರಿಂದ ಅನಧಿಕೃತ ಬೈಕ್ ಟ್ಯಾಕ್ಸಿಗಳು ಸ್ಥಗಿತಗೊಂಡಿವೆ. ಆದೇಶದ ಬೆನ್ನಲ್ಲೇ ಆರ್‌ಟಿಓ ಅಧಿಕಾರಿಗಳು ಅನಧಿಕೃತ ಬೈಕ್ ಟ್ಯಾಕ್ಸಿ ಸೀಜ್ ಮಾಡಲು ಮುಂದಾಗಿದ್ದು, ಸೋಮವಾರ ಒಂದೇ ದಿನದಲ್ಲಿ 103 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. 11 ಆರ್‌ಟಿಓ ವ್ಯಾಪ್ತಿಯಲ್ಲಿ ಚಲಾಯಿಸುತ್ತಿದ್ದ ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಲಾಗಿದೆ. ಇಂದು ಸಹ ಹಲವು ತಂಡಗಳನ್ನ ರಚಿಸಿ ಆರ್‌ಟಿಒ ಕಾರ್ಯಚರಣೆಗಿಳಿದಿದೆ.ಇದನ್ನೂ ಓದಿ: ಹೊಸ ಐಟಿ ನೀತಿ ಮಾರ್ಗದರ್ಶನಕ್ಕಾಗಿ ಸರ್ಕಾರದಿಂದ ಎಐ ಕೌಶಲ್ಯ ಕುರಿತು ಅಧ್ಯಯನ: ಪ್ರಿಯಾಂಕ್ ಖರ್ಗೆ

    ಕಚೇರಿ                   ಬೈಕ್ ಟ್ಯಾಕ್ಸಿಗಳ ಸಂಖ್ಯೆ
    1.ಆರ್‌ಟಿಓ ಸೆಂಟ್ರಲ್ –         8
    2.ಆರ್‌ಟಿಓ ವೆಸ್ಟ್ –            16
    3.ಆರ್‌ಟಿಓ ಈಸ್ಟ್ –            12
    4.ಆರ್‌ಟಿಓ ನಾರ್ತ್ –         10
    5.ಆರ್‌ಟಿಓ ಸೌತ್ –           10
    6.ಜ್ಞಾನಭಾರತಿ –               5
    7.ದೇವನಹಳ್ಳಿ –                5
    8.ಯಲಹಂಕ. –                4
    9.ಲೆಕ್ಟ್ರಾನಿಕ್ ಸಿಟಿ –          15
    10.ಕೆ.ಆರ್.ಪುರಂ –          13
    11.ಚಂದಾಪುರ –               5

    ಟ್ರಾಫಿಕ್ ಕಡಿಮೆ, ಟ್ರಾವೆಲ್ ದರವೂ ಕಡಿಮೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಕ್ವಿಕ್ ಡ್ರಾಪ್ ಪಾಯಿಂಟ್. ಶರವೇಗದಲ್ಲಿ ಜನರಿಗೆ ಬೇಕಾದ ಜಾಗ ತಲುಪಿಸುವ ಕೆಲಸ ಮಾಡುತ್ತಿದ್ದದ್ದು ಬೈಕ್ ಟ್ಯಾಕ್ಸಿ. ವೈಟ್ ಬೋರ್ಡ್ನಲ್ಲಿ ಬೈಕ್ ಟ್ಯಾಕ್ಸಿ ಓಡಿಸೋದು ಸೇರಿ ಸುರಕ್ಷತೆ ವಿಚಾರದಲ್ಲಿ ಬೈಕ್ ಟ್ಯಾಕ್ಸಿ ಒಂದು ಹೆಜ್ಜೆ ಹಿಂದೆಯೇ ಉಳಿದುಕೊಂಡಿದೆ. ಇದೇ ಕಾರಣದಿಂದಾಗಿ ಬೈಕ್ ಟ್ಯಾಕ್ಸಿ ರಸ್ತೆಗೆ ಇಳಿಯುವ ಹಾಗಿಲ್ಲ ಎಂದು ಕೋರ್ಟ್ ಆದೇಶ ಹೊರಡಿಸಿದೆ. ಜೊತೆಗೆ ಆರ್‌ಟಿಓ ಕೂಡ ಅನಧಿಕೃತ ಬೈಕ್ ಟ್ಯಾಕ್ಸಿ ರಸ್ತೆಗಿಳಿಸಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಸೂಚಿಸಿತ್ತು.ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ – ನಿಷೇಧಿತ ವಸ್ತುಗಳು ಪತ್ತೆ

  • ಚಿಕ್ಕಬಳ್ಳಾಪುರ RTO ಕಚೇರಿಯಲ್ಲಿ ಕಂಪ್ಯೂಟರ್ ಕದ್ದೊಯ್ದ ಮುಸುಕುಧಾರಿ ಕಳ್ಳರು

    ಚಿಕ್ಕಬಳ್ಳಾಪುರ RTO ಕಚೇರಿಯಲ್ಲಿ ಕಂಪ್ಯೂಟರ್ ಕದ್ದೊಯ್ದ ಮುಸುಕುಧಾರಿ ಕಳ್ಳರು

    ಚಿಕ್ಕಬಳ್ಳಾಪುರ: ನಗರದ ಚಿತ್ರಾವತಿ ಬಳಿಯ ಆರ್‌ಟಿಒ ಕಚೇರಿಯ (Chikkaballapur RTO office) ಬೀಗ ಮುರಿದು ಒಳನುಗ್ಗಿರುವ ಕಳ್ಳರು ಕಚೇರಿಯಲ್ಲಿರೋ ಮೂರು ಕಂಪ್ಯೂಟರ್ (Computer) ಸಿಪಿಐ ಹಾಗೂ ಮಾನಿಟರ್‌ಗಳನ್ನ ಕದ್ದೊಯ್ದಿದ್ದಾರೆ.

    ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಚೇರಿ ಹಿಂಬಾಗಿಲಿನಿಂದ ಎಂಟ್ರಿ ಕೊಟ್ಟಿರೋ ಇಬ್ಬರು ಕಳ್ಳರು, ಕಚೇರಿಯ ಬೀಗ ಕಟ್ ಮುರಿದು, ಕಂಪ್ಯೂಟರ್ ಗಳನ್ನ ಕಳವು ಮಾಡಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಮೃತ ಸಚಿನ್‌ ವಿರುದ್ಧವೇ ಲಕ್ಷಾಂತರ ರೂಪಾಯಿ ವಂಚನೆ ಆರೋಪ

    ಇನ್ನೂ ಕಚೇರಿಯಲ್ಲಿ ಇಬ್ಬರು ಹೊಂ ಗಾರ್ಡ್‍ಗಳನ್ನ ಭದ್ರತೆಗೆ ನಿಯೋಜನೆ ಮಾಡಿದ್ರೂ ಹೋಂ ಗಾರ್ಡ್‍ಗಳು ನಿದ್ದೆಗೆ ಜಾರಿದ್ದಾರೆ. ಇದರಿಂದ ಕಳ್ಳರಿಗೆ ಹಾದಿ ಸುಗಮ ಮಾಡಿಕೊಟ್ಟಂತಾಗಿದೆ. ಬೆಳಗ್ಗೆ ಕಚೇರಿ ತೆರೆಯಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರ್‌ಟಿಓ ವಿವೇಕಾನಂದ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ.

    ಸಿಸಿಟಿವಿ ಪರಿಶೀಲನೆ ಮಾಡಲಾಗಿದ್ದು ಇಬ್ಬರು ಮುಸುಕುಧಾರಿಗಳು ಈ ಕೃತ್ಯ ನಡೆಸಿರೋದು ಗೊತ್ತಾಗಿದೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಕಲಬುರಗಿಯ ನಿಜಾಮ ಅಲ್ಲ, ಅನುಯಾಯಿಗಳು ರಜಾಕರಲ್ಲ, ರಾಜೀನಾಮೆ ಕೊಡಲಿ: ಅಶೋಕ್‌ 

  • ತವರು ಕ್ಷೇತ್ರಕ್ಕೆ ಭರ್ಜರಿ ಕೊಡುಗೆ ನೀಡಿದ ಡಿಸಿಎಂ ಸವದಿ

    ತವರು ಕ್ಷೇತ್ರಕ್ಕೆ ಭರ್ಜರಿ ಕೊಡುಗೆ ನೀಡಿದ ಡಿಸಿಎಂ ಸವದಿ

    ಚಿಕ್ಕೋಡಿ: ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಮ್ಮ ತವರು ಕ್ಷೇತ್ರ ಅಥಣಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ.

    ಸವದಿ ಅವರ ಸ್ವ ಕ್ಷೇತ್ರ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿಗೆ ಸಹಾಯಕ ಪ್ರಾದೇಶಿಕ ಆಯುಕ್ತರ ಕಚೇರಿ (ಆರ್.ಟಿ.ಒ) ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಅಥಣಿ ಹಾಗೂ ನೆರೆಯ ರಾಯಭಾಗಗಳು ಅಥಣಿ ಪ್ರಾದೇಶಿಕ ಕಚೇರಿ ವ್ಯಾಪ್ತಿಗೆ ಬರಲಿವೆ. ಕಚೇರಿ ತಕ್ಷಣ ಆರಂಭವಾಗುವ ನಿಟ್ಟಿನಲ್ಲಿ ಬಾಡಿಗೆಗೆ ಕಟ್ಟಡ ಪಡೆದುಕೊಳ್ಳಬೇಕು. ಕಚೇರಿಗೆ ಅಗತ್ಯ ಇರುವ ಹುದ್ದೆಗಳನ್ನು ಇಲಾಖೆಯ ವ್ಯಾಪ್ತಿಯಲ್ಲಿ ಗುರುತಿಸಿ ಸ್ಥಳಾಂತರಿಸಿಕೊಳ್ಳತಕ್ಕದು ಎಂದು ಸರ್ಕಾರದ ಅದೇಶದಲ್ಲಿ ತಿಳಿಸಲಾಗಿದೆ.

    ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ಕೃಷಿ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅಥಣಿ ಕೇಂದ್ರ ಸ್ಥಳವಾಗಿರುವುದರಿಂದ ವಾಹನ ಸಂಚಾರ, ಸಾಗಾಟಗಳ ವಹಿವಾಟುಗಳು ಅಧಿಕವಾಗಿರುತ್ತವೆ. ಈ ಪ್ರದೇಶದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಕಚೇರಿ ಆರಂಭಿಸಲಾಗುತ್ತಿದೆ ಎಂದು ಸಾರಿಗೆ ಇಲಾಖೆಯ ಪ್ರಕಟಣೆ ತಿಳಿಸಿದೆ.

  • ಯಾದಗಿರಿ, ಕೊಪ್ಪಳದ ಆರ್‌ಟಿಒ ಕಚೇರಿ ಮೇಲೆ ಎಸಿಬಿ ದಾಳಿ

    ಯಾದಗಿರಿ, ಕೊಪ್ಪಳದ ಆರ್‌ಟಿಒ ಕಚೇರಿ ಮೇಲೆ ಎಸಿಬಿ ದಾಳಿ

    ಯಾದಗಿರಿ/ಕೊಪ್ಪಳ: ಸಾರ್ವಜನಿಕರ ದೂರಿನ ಮೇರೆಗೆ ಯಾದಗಿರಿ ಹಾಗೂ ಕೊಪ್ಪಳದ ಆರ್‌ಟಿಒ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

    ಯಾದಗಿರಿಯಲ್ಲಿ ಎಸಿಬಿ ಡಿಎಸ್‍ಪಿ ಸಂತೋಷ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ವಾಹನ ನೋಂದಣಿ ಮತ್ತು ಪರವಾನಗಿ ನೀಡಲು ಕೆಲ ಅಧಿಕಾರಿಗಳು ಮಧ್ಯವರ್ತಿಗಳ ಮೂಲಕ ಜನರಿಗೆ ಲಂಚದ ಬೇಡಿಕೆ ಇಡುತ್ತಿದ್ದರು. ಅಲ್ಲದೆ. ಆರ್‌ಟಿಒ ಕಚೇರಿ ಮುಂಭಾಗದ ಝರಾಕ್ಸ್ ಅಂಗಡಿಯಲ್ಲಿ ಕಾನೂನು ಬಾಹಿರವಾಗಿ ಸರ್ಕಾರದ ಮುದ್ರೆಗಳನ್ನು ಮತ್ತು ವಾಹನ ಚಲಾವಣೆಗೆ ಬೇಕಾದ ಮುಖ್ಯ ದಾಖಲೆಗಳನ್ನು ಸೃಷ್ಟಿ ಮಾಡಲಾಗುತ್ತಿತ್ತು ಎಂಬ ಆರೋಪಿದ ಮೇಲೆ ದಾಳಿ ನಡೆಸಲಾಗಿದೆ.

    ಅಲ್ಲದೆ ಈ ಬಗ್ಗೆ ಸಾರ್ವಜನಿಕರು ಎಸಿಬಿ ಅಧಿಕಾರಿಗಳಿಗೆ ಹಲವು ಬಾರಿ ದೂರು ಸಲ್ಲಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಇಂದು ಬೆಳಗ್ಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆಯಲ್ಲಿರುವ ಆರ್‌ಟಿಒ ಕಚೇರಿಯಲ್ಲಿ ಎಲ್ಲ ವಿಭಾಗದ ಅಧಿಕಾರಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಝರಾಕ್ಸ್ ಶಾಪ್ ಗಳಲ್ಲಿದ್ದ ಕೆಲವು ಪ್ರಮುಖ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದು, ತೀವ್ರ ಶೋಧ ನಡೆಸಿದ್ದಾರೆ.

    ಕೊಪ್ಪಳದಲ್ಲೂ ದಾಳಿ
    ಭ್ರಷ್ಟಾಚಾರ ಹಾಗೂ ಏಜೆಂಟರ ಹಾವಳಿ ಆರೋಪದ ಹಿನ್ನಲೆಯಲ್ಲಿ ಕೊಪ್ಪಳದ ಆರ್‌ಟಿಒ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೊಪ್ಪಳ ನಗರದ ಹೊರವಲಯದಲ್ಲಿರುವ ಆರ್‌ಟಿಒ ಕಚೇರಿ ಮೇಲೆ ಎಸಿಬಿ ಡಿವೈಎಸ್ಪಿಗಳಾದ ಆರ್.ಎಸ್.ಉಜ್ಜಿನಕೊಪ್ಪ, ಚಂದ್ರಕಾಂತ್ ಪೂಜಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಎಸಿಬಿ ಏಜೆಂಟರನ್ನು ಹಾಗೂ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಆರ್‌ಟಿಒ ಕಚೇರಿಯಲ್ಲಿನ ನೌಕರರು ಹಾಗೂ ಏಜೆಂಟರು ಸಾರ್ವಜನಿಕರಿಂದ ಅಧಿಕ ಹಣ ವಸೂಲಿ ಮಾಡುತ್ತಿರುವ ಕುರಿತು ಎಸಿಬಿ ಅಧಿಕಾರಿಗಳಿಗೆ ದೂರು ಬಂದಿದ್ದವು. ದೂರಿನ ಹಿನ್ನಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹಲವಾರು ಏಜೆಂಟರು ಹಾಗೂ ನೌಕರರಿಂದ ಅಪಾರ ಪ್ರಮಾಣದ ನಗದು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

  • ಆರ್‌ಟಿಓ ಕಛೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ

    ಆರ್‌ಟಿಓ ಕಛೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ

    ಕೊಪ್ಪಳ: ಭ್ರಷ್ಟಾಚಾರ ಹಾಗೂ ಏಜೆಂಟರ ಹಾವಳಿ ಆರೋಪದ ಹಿನ್ನಲೆಯಲ್ಲಿ ಕೊಪ್ಪಳದ ಆರ್‌ಟಿಓ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಕೊಪ್ಪಳ ನಗರದ ಹೊರವಲಯದಲ್ಲಿರುವ ಆರ್‌ಟಿಓ ಕಚೇರಿ ಮೇಲೆ ಎಸಿಬಿ ಡಿವೈಎಸ್‍ಪಿ ಆರ್.ಎಸ್ ಉಜ್ಜಿನಕೊಪ್ಪ, ಚಂದ್ರಕಾಂತ್ ಪೂಜಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಎಸಿಬಿ ಅಧಿಕಾರಿಗಳು ಏಜೆಂಟರನ್ನು ಹಾಗೂ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಆರ್‌ಟಿಓ ಕಚೇರಿಯಲ್ಲಿನ ನೌಕರರು ಹಾಗೂ ಏಜೆಂಟರು ಸಾರ್ವಜನಿಕರಿಂದ ಅಧಿಕ ಹಣ ವಸೂಲಿ ಮಾಡುತ್ತಿರುವ ಕುರಿತು ಎಸಿಬಿ ಅಧಿಕಾರಿಗಳಿಗೆ ದೂರುಗಳು ಬಂದಿದ್ದವು. ಈ ದೂರಿನ ಹಿನ್ನಲೆಯಲ್ಲಿ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಧಿಕಾರಿಗಳು ಹಲವಾರು ಏಜೆಂಟರು ಹಾಗೂ ನೌಕರರಿಂದ ಅಪಾರ ಪ್ರಮಾಣದ ನಗದು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

  • ರಾಯಚೂರು ಆರ್.ಟಿ.ಓ ಕಚೇರಿ ಮೇಲೆ ಎಸಿಬಿ ದಾಳಿ

    ರಾಯಚೂರು ಆರ್.ಟಿ.ಓ ಕಚೇರಿ ಮೇಲೆ ಎಸಿಬಿ ದಾಳಿ

    ರಾಯಚೂರು: ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಸಾರಿಗೆ ಪ್ರಾಧಿಕಾರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಚೇರಿಯಲ್ಲಿ ಮಿತಿ ಮೀರಿದ ಲಂಚ ಹಾಗೂ ಬ್ರೋಕರ್ ಗಳ ಹಾವಳಿ ಕುರಿತ ದೂರು ಹಿನ್ನೆಲೆ ದಾಳಿ ನಡೆಸಲಾಗಿದೆ. ಎಸಿಬಿ ಡಿಎಸ್‍ಪಿ ಸಂತೋಷ್ ಬನ್ನಟ್ಟಿ ನೇತೃತ್ವದಲ್ಲಿ ದಾಳಿ ನಡೆದಿದೆ.

    ಬಳ್ಳಾರಿ, ಬೀದರ್, ಕೊಪ್ಪಳ, ಯಾದಗಿರಿ ಹಾಗೂ ರಾಯಚೂರು ಸೇರಿದಂತೆ 5 ಜಿಲ್ಲೆಗಳ ಒಟ್ಟು 30 ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ಮಧ್ಯಾಹ್ನ ಒಂದು ಗಂಟೆಯಿಂದ ದಾಖಲೆಗಳ ಪರಿಶೀಲನೆ ಹಾಗೂ ವಿಚಾರಣೆ ಆರಂಭವಾಗಿದೆ. ದಾಳಿ ಸಮಯದಲ್ಲಿ ಕಚೇರಿ ಒಳಗಿದ್ದ ಬ್ರೋಕರ್‍ ಗಳು ಹಾಗೂ ಸಾರ್ವಜನಿಕರನ್ನ ಎಸಿಬಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

    ಆರ್.ಟಿ.ಓ ಕಚೇರಿಯಲ್ಲಿ ಪ್ರತಿಯೊಂದಕ್ಕೂ ಲಂಚ ಕೊಡಬೇಕು ಹಾಗೂ ಬ್ರೋಕರ್ ಗಳು ಇಲ್ಲದಿದ್ದರೆ ಯಾವುದೇ ಕೆಲಸಗಳು ಆಗುವುದಿಲ್ಲ ಅನ್ನೋ ಮಟ್ಟಿಗೆ ಪರಸ್ಥಿತಿಯಿದೆ ಎಂದು ಬಂದಿದ್ದ ದೂರುಗಳ ಹಿನ್ನೆಲೆ ಅಧಿಕಾರಿಗಳು ಇಂದು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.

  • ಸರ್ಕಾರಿ ಕಚೇರಿಗೆ ಬೇಕಾಗಿದ್ದು 47 ಸಿಬ್ಬಂದಿ, ಆದ್ರೆ ಇರೋದು ಮಾತ್ರ 6 ಮಂದಿ

    ಸರ್ಕಾರಿ ಕಚೇರಿಗೆ ಬೇಕಾಗಿದ್ದು 47 ಸಿಬ್ಬಂದಿ, ಆದ್ರೆ ಇರೋದು ಮಾತ್ರ 6 ಮಂದಿ

    – ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ
    – ಸಿಎಂ ತವರು ಜಿಲ್ಲೆಯಲ್ಲೇ ಅವ್ಯವಸ್ಥೆ

    ಶಿವಮೊಗ್ಗ: ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಸರ್ಕಾರಿ ಇಲಾಖೆಗಳ ಅವ್ಯವಸ್ಥೆ ಹೇಳತೀರದಾಗಿದೆ. ಅದರಲ್ಲೂ ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ(ಆರ್‌ಟಿಒ) ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕರು ವಾರಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಕಚೇರಿಗೆ ಒಟ್ಟು 47 ಮಂದಿ ಸಿಬ್ಬಂದಿ ಬೇಕು ಆದರೆ ಇಲ್ಲಿರೋದು ಮಾತ್ರ ಕೇವಲ 6 ಮಂದಿ.

    ಹೌದು. ಶಿವಮೊಗ್ಗದ ಆರ್‌ಟಿಒ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಮಿತಿಮೀರಿದೆ. 45 ಮಂದಿ ಕರ್ತವ್ಯ ಸಲ್ಲಿಸಬೇಕಾದ ಜಾಗದಲ್ಲಿ ಕೇವಲ 6 ಮಂದಿ ಮಾತ್ರ ಇದ್ದಾರೆ. ಇದರಿಂದ ಸಾರ್ವಜನಿಕರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ನೂತನ ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘಿಸಿದರೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತಿದೆ. ಹೀಗಾಗಿ ವಾಹನಗಳ ದಾಖಲೆಗಳನ್ನು ಸರಿ ಮಾಡಿಸಿಕೊಳ್ಳಲು ಹಾಗೂ ಡಿಎಲ್ ಮಾಡಿಸಿಕೊಳ್ಳಲು ಆರ್‌ಟಿಒ ಕಚೇರಿಗೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸಾರ್ವಜನಿಕರ ಕೆಲಸ ವಿಳಂಬವಾಗುತ್ತಿದೆ. ಸಿಎಂ ಯಡಿಯೂರಪ್ಪ ಅವರ ತವರಿನಲ್ಲೇ ಜನರ ಗೋಳನ್ನು ಕೇಳುವವರು ಯಾರೂ ಇಲ್ಲದಂತಾಗಿದ್ದು, ಇಲ್ಲಿನ ಅಧಿಕಾರಿಗಳು ಕೂಡ ತಮ್ಮ ಅಸಹಾಯಕ ಪರಿಸ್ಥಿತಿ ತೋರ್ಪಡಿಸುತ್ತಿದ್ದಾರೆ.

    ಕೇವಲ ಆರ್‌ಟಿಒ ಕಚೇರಿ ಮಾತ್ರವಲ್ಲ ದೂರದ ಮಲವಗೊಪ್ಪ ಬಡಾವಣೆಯಲ್ಲಿರುವ ಡಿಎಲ್ ಟೆಸ್ಟ್ ಕಚೇರಿ ಮತ್ತು ಟ್ರ್ಯಾಕ್‍ನಲ್ಲಿಯೂ ಇದೇ ಸಮಸ್ಯೆಯಿಂದ ಜನರು ಹೈರಾಣಾಗಿ ಹೋಗಿದ್ದಾರೆ. ವಾಹನ ನೋಂದಣಿ, ಡಿಎಲ್‍ಗಾಗಿ ದಿನವಿಡಿ ಕಾದು ಕಾದು ಜನ ಬೇಸತ್ತು ಹೋಗಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಪ್ರತಿದಿನ ಜಟಾಪಟಿ ನಡೆಯುತ್ತಲೇ ಇದೆ.

    5 ಬ್ರೇಕ್ ಇನ್ಸ್‌ಪೆಕ್ಟರ್ ಹುದ್ದೆಗಳಲ್ಲಿ 4 ಹುದ್ದೆಗಳು ಖಾಲಿ ಇವೆ. ಇರುವ ಒಬ್ಬರು ಕಳೆದ ಒಂದು ವಾರದಿಂದ ಜ್ವರ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಯಂ ಆರ್‌ಟಿಒ ಅಧಿಕಾರಿ ಇಲ್ಲದೇ ಇರುವ ಒಬ್ಬರೇ ಅಧಿಕಾರಿ ಮಂಗಳೂರು ಮತ್ತು ಶಿವಮೊಗ್ಗ ಕಚೇರಿ ನೋಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಮಂಗಳೂರಿನ ಆರ್‌ಟಿಒ ಅಧಿಕಾರಿ ವಾರದಲ್ಲಿ ಎರಡು ದಿನ ಇಲ್ಲಿಗೆ ಬಂದು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಚೇರಿ ಒಂದರಲ್ಲೇ ಬ್ರೇಕ್ ಇನ್ಸ್‌ಪೆಕ್ಟರ್ ಗಳನ್ನು ಹೊರತುಪಡಿಸಿದರೆ ಸುಮಾರು 35ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಸಾರ್ವಜನಿಕರು ಒಂದು ಚಲನ್ ಪಡೆಯಲು ದಿನವಿಡೀ ಸರದಿ ಸಾಲಿನಲ್ಲಿ ನಿಲ್ಲಬೇಕಾದ ದುಸ್ಥಿತಿ ಬಂದಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪೊಲೀಸ್ ಇಲಾಖೆ ಸಂಚಾರ ನಿಯಮ ಉಲ್ಲಂಘನೆಯಡಿ, ಭಾರೀ ದಂಡ ವಿಧಿಸುತ್ತಿರುವುದರಿಂದ ಬಚಾವಾಗಲು ಜನ ತಮ್ಮ ವಾಹನಗಳ ದಾಖಲೆಗಳನ್ನು ಸರಿಮಾಡಿಸಿಕೊಳ್ಳಲು ಆರ್‌ಟಿಒ ಕಚೇರಿಗೆ ಬರುತ್ತಿದ್ದಾರೆ. ಆದರೆ ಕಚೇರಿಯಲ್ಲಿಯೇ ಸಾಕಷ್ಟು ಸಮಸ್ಯೆಗಳು ಇವೆ. ಹೀಗಾಗಿ ಸಿಎಂ ಅವರು ಈ ಬಗ್ಗೆ ಗಮನ ಹರಿಸಿ ಈ ಕೂಡಲೇ ಸಿಬ್ಬಂದಿ ಕೊರತೆ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳಬೇಕಿದೆ.

  • ಆರ್‌ಟಿಓ ಕಚೇರಿ ಮೇಲೆ ಎಸಿಬಿ ದಾಳಿ – ಮಧ್ಯವರ್ತಿಗಳಿಂದ 1.76 ಲಕ್ಷ ವಶ

    ಆರ್‌ಟಿಓ ಕಚೇರಿ ಮೇಲೆ ಎಸಿಬಿ ದಾಳಿ – ಮಧ್ಯವರ್ತಿಗಳಿಂದ 1.76 ಲಕ್ಷ ವಶ

    ದಾವಣಗೆರೆ: ಇಂದು ನಗರದ ಆರ್‌ಟಿಓ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ನಡೆದಿದ್ದು, 15ಕ್ಕೂ ಹೆಚ್ಚು ಮಧ್ಯವರ್ತಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಸಾರ್ವಜನಿಕರಿಂದ ಡಿಎಲ್, ಎಲ್‍ಎಲ್‍ಆರ್ ಮಾಡಿಸಲು ದುಪ್ಪಟ್ಟು ದರ ಹಾಗೂ ಮತ್ತಿತರ ಕೆಲಸ ಮಾಡಿಸಲು ಸಾವಿರಾರು ರೂಪಾಯಿ ವಸೂಲು ಮಾಡುತ್ತಿದ್ದ ಮಧ್ಯವರ್ತಿಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮಧ್ಯವರ್ತಿಗಳ ಬಳಿ ಇದ್ದ ಅಪಾರ ಪ್ರಮಾಣದ ದಾಖಲೆಗಳನ್ನು ಮತ್ತು ಹಣವನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮೂಲಕ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ಏಜೆಂಟ್‍ಗಳ ಹಾವಳಿಗೆ ಎಸಿಬಿ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.

    ವಶಕ್ಕೆ ಪಡೆದುಕೊಂಡ ಮಧ್ಯವರ್ತಿಗಳ ಮೇಲೆ ಪ್ರಕರಣ ದಾಖಲು ಮಾಡಿದ್ದು, 15 ಜನ ಮಧ್ಯವರ್ತಿಗಳಿಂದ 1,76,855 ರೂಪಾಯಿ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಆರ್‌ಟಿಓ ಅಧಿಕಾರಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಎಸಿಬಿ ಡಿವೈಎಸ್‍ಪಿ ಪರಮೇಶ್ವರಪ್ಪ ನೇತೃತ್ವದ ತಂಡ ಈ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

  • ಮಂಡ್ಯ ಅಂಬುಲೆನ್ಸ್ ಗಳು ರಸ್ತೆಯಲ್ಲಿ ಸಂಚರಿಸಲು ಯೋಗ್ಯತೆ ಇಲ್ಲ: ಪರಿಶೀಲನೆ ವೇಳೆ ಹೊರಬಂತು ಶಾಕಿಂಗ್ ಸತ್ಯ

    ಮಂಡ್ಯ ಅಂಬುಲೆನ್ಸ್ ಗಳು ರಸ್ತೆಯಲ್ಲಿ ಸಂಚರಿಸಲು ಯೋಗ್ಯತೆ ಇಲ್ಲ: ಪರಿಶೀಲನೆ ವೇಳೆ ಹೊರಬಂತು ಶಾಕಿಂಗ್ ಸತ್ಯ

    ಮಂಡ್ಯ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 108 ಅಂಬುಲೆನ್ಸ್ ಗಳು ರಸ್ತೆಯಲ್ಲಿ ಸಂಚರಿಸಲು ಯೋಗ್ಯತೆ ಇಲ್ಲ ಎನ್ನುವ ಸತ್ಯ ಹೊರಬಿದ್ದಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

    ಯಾವುದೇ ವಾಹನವಾಗಲಿ ಪ್ರತಿ ವರ್ಷ ಆರ್ ಟಿಓ ಅಧಿಕಾರಿಗಳಿಂದ ತಪಾಸಣೆ ನಡೆಸಿ `ಯೋಗ್ಯತಾ ಪ್ರಮಾಣ ಪತ್ರ’ ತೆಗೆದುಕೊಳ್ಳಬೇಕಿರುವುದು ಕಡ್ಡಾಯ. ಅದರಲ್ಲಿಯೂ ಅಂಬುಲೆನ್ಸ್ ಗಳು ತಪ್ಪದೆ ತಪಾಸಣೆ ನಡೆಸಿ ಪ್ರಮಾಣ ಪತ್ರ ಪಡೆಯಲೇಬೇಕು.

    ಗುರುವಾರ ನಾಲ್ಕು ಅಂಬುಲೆನ್ಸ್ ಗಳನ್ನು ತಪಾಸಣೆಗೆಂದು ಮಂಡ್ಯ ಆರ್ ಟಿಓ ಕಚೇರಿ ಆವರಣಕ್ಕೆ ತರಲಾಗಿತ್ತು. ಈ ವೇಳೆ ಮೋಟಾರು ವಾಹನ ನಿರೀಕ್ಷಕ ಸದ್ರುಲ್ಲಾ ಷರೀಪ್ ಅವರು ತಾವೇ ಸ್ವತಃ ವಾಹನ ಚಲಾಯಿಸಿ ನೋಡಿದಾಗ ವಾಹನ ಹಾಳಾಗಿರುವುದು ಗೊತ್ತಾಗಿದೆ.

    ಬ್ರೇಕ್, ಚಕ್ರ, ವಾಹನದ ಹೊರಭಾಗ ಸೇರಿದಂತೆ ವಾಹನದ ಹಲವು ಬಿಡಿಭಾಗಗಳು ಹಾಳಾಗಿದೆ. ಇಂತಹ ಅಂಬುಲೆನ್ಸ್ ನಿಂದ ರೋಗಿಗಳಿಗೆ ಅನುಕೂಲಕ್ಕಿಂತ ಅಪಾಯವೇ ಹೆಚ್ಚು ಎಂಬ ಹಿನ್ನೆಲೆಯಲ್ಲಿ ಯೋಗ್ಯತಾ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ ಎಂದು ತಿರಸ್ಕೃತಗೊಳಿಸಲಾಗಿದೆ. ಅಲ್ಲದೆ ಈ ಸಂಬಂಧ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿಗೆ ಪತ್ರ ಬರೆಯಲಾಗಿದ್ದು, ಈ ನಾಲ್ಕು ವಾಹನ ಸ್ಥಿತಿ ಸರಿಯಿಲ್ಲ. ಕೂಡಲೇ ವಾಹನದಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ನಂತರ ಬಂದು ತಪಾಸಣೆ ನಡೆಸಬೇಕೆಂದು ಸೂಚಿಸಲಾಗಿದೆ.

    ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿರುವ ಎಲ್ಲ ಅಂಬುಲೆನ್ಸ್ ಗಳನ್ನು ಆರ್ ಟಿಓ ಕಚೇರಿ ಆವರಣಕ್ಕೆ ತಂದು ಪರಿಶೀಲಿಸಲು ಸೂಚಿಸಲಾಗಿದೆ. ಜನರ ಜೀವ ರಕ್ಷಕವಾಗಬೇಕಿದ್ದ ಅಂಬುಲೆನ್ಸ್ ಗಳ ದುಸ್ಥಿತಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ಎದುರಾಗಿದೆ.

    ರಾಜ್ಯ ಸರ್ಕಾರ ಕೂಡಲೇ ರಾಜ್ಯದಲ್ಲಿರುವ ಎಲ್ಲ 108 ಅಂಬುಲೆನ್ಸ್ ಗಳ ಪರಿಶೀಲನೆಗೆ ಗಮನಹರಿಸಬೇಕು. ಅಂಬುಲೆನ್ಸ್ ಗಳ ಗುಣಮಟ್ಟ ಕಾಯ್ದುಕೊಳ್ಳದೆ ಜನರ ಪ್ರಾಣದ ಜೊತೆ ಚೆಲ್ಲಾಟವಾಡುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv