Tag: rs 200

  • 200 ರೂ. ನೀಡದ್ದಕ್ಕೆ ಗುಂಡಿಕ್ಕಿ ಸ್ನೇಹಿತನ ಕೊಂದ ಪಾಪಿ

    200 ರೂ. ನೀಡದ್ದಕ್ಕೆ ಗುಂಡಿಕ್ಕಿ ಸ್ನೇಹಿತನ ಕೊಂದ ಪಾಪಿ

    – ಹಣಕ್ಕಾಗಿ ಹಲವು ಬಾರಿ ಪೀಡಿಸಿದ್ದ ಆರೋಪಿ

    ಲಕ್ನೋ: ಸಣ್ಣ ಸಣ್ಣ ವಿಚಾರಕ್ಕೂ ಕೊಲೆ ಆಗುವುದನ್ನು ನೋಡಿರುತ್ತೇವೆ. ಆದೇ ರೀತಿ ಇಲ್ಲೊಂದು ಪ್ರಕರಣ ನಡೆದಿದ್ದು, 200 ರೂ. ನೀಡಲು ವ್ಯಕ್ತಿ ನಿರಾಕರಿಸಿದ್ದಕ್ಕೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.

    ಉತ್ತರ ಪ್ರದೇಶದ ಅಲೀಘರ್ ನಲ್ಲಿ ಘಟನೆ ನಡೆದಿದ್ದು, ಜನಸಂದಣಿಯಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆಯಲ್ಲಿ 30 ವರ್ಷದ ಅನ್ಸಾರ್ ಅಹ್ಮದ್ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಅನ್ಸಾರ್ ಅಹ್ಮದ್ ಮೂರು ಮಕ್ಕಳ ತಂದೆಯಾಗಿದ್ದು, ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಶಂಶಾದ್ ಮಾರ್ಕೆಟ್‍ನಲ್ಲಿ ಪಂಚರ್ ಅಂಗಡಿ ಇಟ್ಟುಕೊಂಡಿದ್ದ. ಶನಿವಾರ ಆರೋಪಿ ಆಸಿಫ್ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಆರೋಪಿ ಡ್ರಗ್ಸ್ ವ್ಯಸನಿಯಾಗಿದ್ದು, ಗುಂಡು ಹಾರಿಸಿ ಕೊಲೆ ಮಾಡುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಎಸ್‍ಪಿ ಅಭಿಶೇಕ್ ಕುಮಾರ್ ತಿಳಿಸಿದ್ದಾರೆ. ಆರೋಪಿ ಆಸಿಫ್ ತನ್ನ ಮೋಟಾರ್ ಸೈಕಲ್ ಇಟ್ಟುಕೊಂಡು ಸಾಲ ನೀಡುವಂತೆ ಅಹ್ಮದ್ ಬಳಿ ಕೇಳಿದ್ದಾನೆ. ಆದರೆ ಇದನ್ನು ಅಹ್ಮದ್ ತಿರಸ್ಕರಿಸಿದ್ದಾನೆ.

    ಬಳಿಕ ಆರೋಪಿ ಮತ್ತೆ ಅಹ್ಮದ್ ಅಂಗಡಿ ಬಳಿ ಆಗಮಿಸಿ 200 ರೂ. ನೀಡುವಂತೆ ಬೇಡಿಕೊಂಡಿದ್ದಾನೆ. ಆದರೆ ಅಹ್ಮದ್ ಇದಕ್ಕೆ ನಿರಾಕರಿಸಿದ್ದು, ತಕ್ಷಣ ಆಸಿಫ್ ತನ್ನ ಜೇಬಿನಲ್ಲಿದ್ದ ದೇಶಿ ಬಂದೂಕು ತೆಗೆದು ಜನರು ಯಾರಾದರೂ ನೋಡುತ್ತಿದ್ದಾರಾ ಎಂಬುದನ್ನು ಗಮನಿಸಿ ಅಹ್ಮದ್ ತಲೆಯ ಭಾಗಕ್ಕೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಬಳಿಕ ಹತ್ತಿರದಲ್ಲೇ ನಿಲ್ಲಿಸಿದ್ದ ದ್ವಿಚಕ್ರ ವಾಹನ ಏರಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಶೀಘ್ರವೇ ಬರಲಿದೆ 200, 500 ಮುಖಬೆಲೆಯ ಹೊಸ ನೋಟುಗಳು

    ಶೀಘ್ರವೇ ಬರಲಿದೆ 200, 500 ಮುಖಬೆಲೆಯ ಹೊಸ ನೋಟುಗಳು

    ನವದೆಹಲಿ: ಶೀಘ್ರವೇ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ 200 ಮತ್ತು 500 ಮುಖಬೆಲೆಯ ನೋಟುಗಳನ್ನು ಪರಿಚಯಿಸಲಿದೆ.

    ಮಹಾತ್ಮ ಗಾಂಧೀಜಿ ಭಾವಚಿತ್ರದ ಜೊತೆಗೆ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಸಹಿ ಈ ನೋಟ್ ನಲ್ಲಿ ಇರಲಿದೆ. ಶಕ್ತಿಕಾಂತ್ ದಾಸ್ ಅವರ ಸಹಿ, ಸೀರಿಸ್ ಹೊರತುಪಡಿಸಿ ಸದ್ಯ ಚಾಲ್ತಿಯಲ್ಲಿರುವ ನೋಟ್ ಗಳಿಗೂ ಹೊಸ ನೋಟ್‍ಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಆರ್ ಬಿಐ ತಿಳಿಸಿದೆ.

    ಹೊಸ ನೋಟುಗಳು ಬಿಡುಗಡೆಯಾದ ಬಳಿಕವೂ ಹಳೆಯ ನೋಟುಗಳು ಚಾಲ್ತಿಯಲ್ಲಿರಲಿವೆ. ಆದರೆ ಆರ್ ಬಿಐ ಈ ಹೊಸ ನೋಟುಗಳನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎನ್ನುವ ವಿಚಾರವನ್ನು ಪ್ರಕಟಿಸಿಲ್ಲ.

  • ಎಟಿಎಂಗಳಲ್ಲಿ 200 ರೂ. ನೋಟ್‍ಗಳು ಸಿಗಲು ಇನ್ನೂ 3 ತಿಂಗಳಾಗ್ಬಹುದು

    ಎಟಿಎಂಗಳಲ್ಲಿ 200 ರೂ. ನೋಟ್‍ಗಳು ಸಿಗಲು ಇನ್ನೂ 3 ತಿಂಗಳಾಗ್ಬಹುದು

    ನವದೆಹಲಿ: ಆರ್‍ಬಿಐ 200 ರೂ. ನೋಟುಗಳನ್ನ ಈಗಾಗಲೇ ಬಿಡುಗಡೆ ಮಾಡಿದೆ. ಆದ್ರೆ ಈ ನೋಟುಗಳು ಎಟಿಎಂಗಳಲ್ಲಿ ಸಿಗಬೇಕಾದ್ರೆ ಇನ್ನೂ 3 ತಿಂಗಳು ಬೇಕು. ಯಾಕಂದ್ರೆ ಹೊಸ ನೋಟುಗಳನ್ನ ವಿತರಿಸಲು ಎಟಿಎಂಗಳ ಮರುಜೋಡಣೆ ಆಗಬೇಕು.

    ಹೊಸ 200 ರೂ. ನೋಟುಗಳ ಪೂರೈಕೆ ಇನ್ನೂ ಸಿಗದಿದ್ದರೂ ಕೆಲವು ಬ್ಯಾಂಕ್‍ಗಳು ಈಗಾಗಲೇ ಯಂತ್ರಗಳ ಮರುಜೋಡಣೆಗೆ ಹೊಸ ನೋಟುಗಳನ್ನ ಪರೀಕ್ಷಿಸಲು ಎಟಿಎಂ ಕಂಪೆನಿಗಳಿಗೆ ಕೇಳಿವೆ. ಕಳೆದ ವರ್ಷವಷ್ಟೇ ನೋಟ್‍ಬ್ಯಾನ್ ಆದಾಗ ಎಟಿಎಂ ಯಂತ್ರಗಳ ಮರುಜೋಡಣೆ ಮಾಡಲಾಗಿತ್ತು.

    ಹೊಸ 200 ರೂ. ನೋಟುಗಳು ಅಗತ್ಯ ಪ್ರಮಾಣದಲ್ಲಿ ಸಿಗುವಂತೆ ಪೂರೈಕೆಯನ್ನ ಹೆಚ್ಚಿಸಲಾಗುತ್ತದೆ ಎಂದು ಆರ್‍ಬಿಐ ಹೇಳಿಕೆ ನೀಡಿದೆ. ಆದ್ರೆ ಎಟಿಎಂ ಯಂತ್ರಗಳ ಮರುಜೋಡಣೆಗೆ ಆರ್‍ಬಿಐನಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಎಟಿಎಂ ಉತ್ಪಾದಕ ಕಂಪೆನಿಗಳು ಹೇಳಿವೆ. ಆದ್ರೆ 200 ರೂ. ನೋಟುಗಳ ಗಾತ್ರ ಭಿನ್ನವಾಗಿರುವುದರಿಂದ ಅವನ್ನ ಪರೀಕ್ಷಿಸಲು ಅನೌಪಚಾರಿಕವಾಗಿ ಕೆಲವು ಬ್ಯಾಂಕ್‍ಗಳು ಕೇಳಿವೆ ಎಂದು ಎಟಿಎಂ ಉತ್ಪಾದಕ ಕಂಪೆನಿಗಳು ಹೇಳಿವೆ. ಭಾರತದಾದ್ಯಂತ ಎಲ್ಲಾ 2.25 ಲಕ್ಷ ಎಟಿಎಂಗಳನ್ನೂ ಕೂಡ ಮರುಜೋಡಣೆ ಮಾಡಲಾಗುತ್ತದಾ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

    ಈ ಬಗ್ಗೆ ಹೇಳಿಕೆ ನೀಡಿರೋ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಲಿಮಿಟೆಡ್‍ನ ಅಧ್ಯಕ್ಷರಾದ ರವಿ ಬಿ ಗೋಯಲ್, ಆರ್‍ಬಿಐನಿಂದ ಸೂಚನೆ ಬಂದ ಕೂಡಲೇ ನಾವು ಎಟಿಎಂಗಳ ಮರುಜೋಡಣೆ ಶುರುಮಾಡುತ್ತೇವೆ. ಈಗಿರುವ ನೋಟುಗಳಿಗಿಂತ ಹೊಸ ನೋಟಿನ ಗಾತ್ರ ಭಿನ್ನವಾಗಿದೆ. ಹೀಗಾಗಿ ಹೊಸ ನೋಟನ್ನು ಸ್ವೀಕರಿಸಿದ ನಂತರ ಅದರ ಅಳತೆಯನ್ನು ನೋಡಿ ಎಟಿಎಂ ಕ್ಯಾಸೆಟ್‍ಗಳನ್ನ ಮರುವಿನ್ಯಾಸ ಮಾಡಬೇಕು. ನಂತರ ಕ್ಯಾಸೆಟ್‍ಗಳು ಸಂಪೂರ್ಣ ಸಾಮಥ್ರ್ಯದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಪ್ರಮಾಣದಲ್ಲಿ ನೋಟಿನ ಪೂರೈಕೆ ಇದೆಯಾ ಎಂದು ನೋಡಬೇಕು ಎಂದು ಅವರು ಹೇಳಿದ್ದಾರೆ.

    ಎಟಿಎಂಗಳ ಮರುಜೋಡಣೆಯ ಸಂಪೂರ್ಣ ಪ್ರಕ್ರಿಯೆ 90 ದಿನಗಳಲ್ಲಿ ಮುಗಿಯುತ್ತದೆ. ಇದರಿಂದ ದಿನನಿತ್ಯದ ಎಟಿಎಂ ಕಾರ್ಯನಿರ್ವಹಣೆಗೆ ದೊಡ್ಡ ಮಟ್ಟದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಮರುಜೋಡಣೆಯ ವೇಳೆ ಎಟಿಎಂಗಳು ಸಂಪೂರ್ಣವಾಗಿ ಕಾರ್ಯಗತವಾಗಿದ್ದು, 100, 500 ಹಾಗೂ 2 ಸಾವಿರ ರೂ. ನೋಟುಗಳನ್ನ ಪೂರೈಕೆ ಮಾಡುತ್ತವೆ ಎಂದು ಅವರು ಹೇಳಿದ್ದಾರೆ.

    ಎಟಿಎಂ ಮರುಜೋಡಣೆ ಹೇಗೆ ಆಗುತ್ತದೆ?: ಸಾಮಾನ್ಯವಾಗಿ ಎಟಿಎಂಗಳಲ್ಲಿ 4 ಕ್ಯಾಸೆಟ್‍ಗಳಿರುತ್ತವೆ. ಇವುಗಳಲ್ಲಿ ಮೂರನ್ನು 100 ರೂ., 500 ರೂ., ಹಾಗೂ 2 ಸಾವಿರ ರೂ., ನೋಟುಗಳಿಗಾಗಿ ಬಳಸಲು ಮುಂದುವರೆಸಬಹುದು. ನಾಲ್ಕನೇ ಕ್ಯಾಸೆಟನ್ನು ಹೊಸ 200 ರೂ. ನೋಟಿಗಾಗಿ ಬಳಸಬಹುದು. ಸರಾಸರಿಯಲ್ಲಿ ಒಂದು ಕ್ಯಾಸೆಟ್ 2 ಸಾವಿರದಿಂದ 2500 ನೋಟುಗಳನ್ನ ಹಿಡಿದುಕೊಳ್ಳಬಹುದಾಗಿವೆ. ಆದರೂ ಬಹುತೇಕ ಎಟಿಎಂಗಳಲ್ಲಿ ಎರಡು ಅಥವಾ ಮೂರು ಕ್ಯಾಸೆಟ್‍ಗಳು ಮಾತ್ರ ಇರುತ್ತವೆ.

    ಬ್ಯಾಂಕುಗಳ ಆದ್ಯತೆಗೆ ಅನುಗುಣವಾಗಿ ಎಟಿಎಂಗಳಲ್ಲಿನ ಸ್ಲಾಟ್‍ಗಳನ್ನು ಮರುವಿನ್ಯಾಸಗೊಳಿಸಬಹುದು. ಎಟಿಎಂ ಯಂತ್ರವಿರುವ ಪ್ರದೇಶದಲ್ಲಿನ ಗ್ರಾಹಕರಿಗೆ ಅನುಗುಣವಾಗಿ ಹಾಗೂ ಆ ಯಂತ್ರದಲ್ಲಿ ನಡೆಯುವ ವಹಿವಾಟಿನ ಸಂಖ್ಯೆಗೆ ಅನುಗುಣವಾಗಿ ಯಾವ ಮುಖಬೆಲೆಯ ನೋಟಿಗೆ ಎಟಿಎಂ ಮರುವಿನ್ಯಾಸ ಮಾಡಬೇಕು ಎಂಬುದನ್ನ ಬ್ಯಾಂಕ್‍ಗಳು ನಿರ್ಧರಿಸಬೇಕು.

    ಹೊಸ ಮುಖಬೆಲೆಗಾಗಿ ಒಂದು ಎಟಿಎಂ ಮರುಜೋಡಣೆ ಮಾಡಲು 30 ರಿಂದ 45 ನಿಮಿಷ ಬೇಕಾಗುತ್ತದೆ. ಓರ್ವ ಎಂಜಿನಿಯರ್ ಪ್ರತಿ ಎಟಿಎಂಗೆ ಭೇಟಿ ನೀಡಿ ಅಗತ್ಯ ಮುಖಬೆಲೆಯ ನೋಟು ವಿತರಣೆಯಾಗುವದಂತೆ ಮರುವಿನ್ಯಾಸ ಮಾಡಬೇಕಾಗುತ್ತದೆ.

    ಪ್ರಸ್ತುತ 200 ರೂ. ನೋಟುಗಳು ಆಯ್ದ ಆರ್‍ಬಿಐ ಕಚೇರಿ ಹಾಗೂ ಕೆಲವು ಬ್ಯಾಂಕ್‍ಗಳಲ್ಲಿ ಮಾತ್ರ ಲಭ್ಯವಿದೆ.

  • ಹೊಸ 200 ರೂ. ನೋಟು ಇಂದಿನಿಂದ ಪೂರೈಕೆ

    ಹೊಸ 200 ರೂ. ನೋಟು ಇಂದಿನಿಂದ ಪೂರೈಕೆ

     

    ನವದೆಹಲಿ: ಸಾಕಷ್ಟು ದಿನಗಳಿಂದ 200 ರೂಪಾಯಿ ನೋಟು ಸುದ್ದಿಯಲ್ಲಿತ್ತು. ಗಣೇಶ ಹಬ್ಬದ ದಿನವಾದ ಇಂದು 200 ರುಪಾಯಿ ಮುಖಬೆಲೆಯ ಹೊಸ ನೋಟುಗಳು ಬ್ಯಾಂಕ್‍ಗಳಿಗೆ ಪೂರೈಕೆ ಆಗಲಿದೆ.
    ಆರಂಭದಲ್ಲಿ ಆಯ್ದ ಆರ್‍ಬಿಐ ಕಚೇರಿ ಹಾಗೂ ಕೆಲವು ಬ್ಯಾಂಕ್‍ಗಳಲ್ಲಿ ಮಾತ್ರ ಹೊಸ 200 ರೂ. ನೋಟು ವಿತರಣೆಯಾಗಲಿದೆ.

    ಇಂದಿನಿಂದ 3 ದಿನ ಸರ್ಕಾರಿ ರಜೆ ಇದ್ದು, ಸೋಮವಾರದಿಂದ ಹೊಸ ನೋಟು ಸಿಗಲಿದೆ. ಇದ್ರಿಂದ ಚಿಲ್ಲರೆ ಸಮಸ್ಯೆ ಬಗೆಹರಿಯಲಿದೆ ಅಂತ ಆರ್‍ಬಿಐ ಹೇಳಿದೆ.

    200ರ ನೋಟು ಕಡು ಹಳದಿ ಬಣ್ಣದಲ್ಲಿದೆ. ನೋಟಿನ ಹಿಂಭಾಗದಲ್ಲಿ ಸಾಂಚಿ ಸ್ತೂಪದ ಚಿತ್ರವಿದೆ. ದೇವನಾಗರಿಯಲ್ಲಿ 200 ರೂ. ನ ಮುದ್ರಣ, ಮಧ್ಯಭಾಗದಲ್ಲಿ ಮಹಾತ್ಮಾ ಗಾಂಧೀಜಿಯ ಚಿತ್ರವಿದೆ. ಮೈಕ್ರೋ ಲಿಪಿಯಲ್ಲಿ ಆರ್‍ಬಿಐ, ಭಾರತ್, ಇಂಡಿಯಾ ಹಾಗೂ 200 ಮುದ್ರಣವಿದೆ. ಬಣ್ಣ ಬದಲಾಗುವಂತಹ ಸೆಕ್ಯೂರಿಟಿ ಥ್ರೆಡ್ ಇದ್ದು ಅದರ ಮೇಲೆ ಭಾರತ್ ಹಾಗೂ ಆರ್‍ಬಿಐ ಮುದ್ರಣವಿದೆ. ನೋಟನ್ನ ಸ್ವಲ್ಪ ತಿರುಗಿಸಿ ನೋಡಿದ್ರೆ ಈ ಥ್ರೆಡ್‍ನ ಬಣ್ಣ ಹಸಿರಿನಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ.

     

    ನೋಟಿನ ಬಲಭಾಗದಲ್ಲಿ ಅಶೋಕ ಸ್ತಂಭ, 200 ರ ವಾಟರ್‍ಮಾರ್ಕ್ ಇದೆ. ನೋಟಿನ ಮೇಲ್ಭಾಗದ ಎಡಗಡೆ ಹಾಗೂ ಕೆಳಭಾಗದ ಬಲಗಡೆಯಲ್ಲಿ ನಂಬರ್ ಪ್ಯಾನಲ್ ಇದ್ದು, ನಂಬರ್‍ಗಳು ಸಣ್ಣದರಿಂದ ದೊಡ್ಡ ಗಾತ್ರಕ್ಕೆ ಮುದ್ರಣವಾಗಿರಲಿದೆ. ಅಂಧರಿಗೆ ಅನುಕೂಲವಾಗುವಂತೆ ಮಹಾತ್ಮಾ ಗಾಂಧಿ ಹಾಗೂ ಅಶೋಕ ಸ್ತಂಭದ ಉಬ್ಬಿದ ಮುದ್ರಣವಿದೆ. ‘ಹೆಚ್’ ಅಕ್ಷರದ ಉಬ್ಬಿದ ಗುರುತು ಇದೆ. ಎಡ ಹಾಗೂ ಬಲ ಭಾಗದಲ್ಲಿ ಆಂಗುಲರ್ ಬ್ಲೀಡ್ ಲೈನ್‍ಗಳಿದ್ದು, ಲೈನ್‍ಗಳ ಮಧ್ಯೆ ಎರಡು ವೃತ್ತಗಳಿವೆ. ನೋಟಿನ ಹಿಂಭಾಗದಲ್ಲಿ ಮುದ್ರಣದ ವರ್ಷ ಹಾಗೂ ಸ್ವಚ್ಛ ಭಾರತ ಲಾಂಛನವಿದೆ. ಅಲ್ಲದೆ ನೋಟಿನ ಬಣ್ಣಕ್ಕೆ ಹೊಂದಿಕೊಳ್ಳುವಂತೆ ಜಾಮಿಟ್ರಿಕ್ ಪ್ಯಾಟ್ರನ್ ಹಾಗೂ ಇತರೆ ಡಿಸೈನ್‍ಗಳಿವೆ. ನೋಟಿನ ಮೇಲೆ ಆರ್‍ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಇದೆ.

     

    ಶೀಘ್ರದಲ್ಲೇ ಹೊಸ ವಿನ್ಯಾಸದ 50 ರೂ. ನೋಟು ಕೂಡ ಬಿಡುಗಡೆಯಾಗಲಿದೆ. ಹೊಸ 50 ರೂ. ನೋಟಿನಲ್ಲಿ ವಿಶ್ವವಿಖ್ಯಾತ ಹಂಪಿಯ ಚಿತ್ರವಿರಲಿದೆ.

  • ಈಗ ಅಧಿಕೃತ- ಶೀಘ್ರದಲ್ಲೇ ನಿಮ್ಮ ಕೈಸೇರಲಿವೆ 200 ರೂ. ನೋಟು

    ಈಗ ಅಧಿಕೃತ- ಶೀಘ್ರದಲ್ಲೇ ನಿಮ್ಮ ಕೈಸೇರಲಿವೆ 200 ರೂ. ನೋಟು

    ನವದೆಹಲಿ: 200 ರೂ. ಮುಖಬೆಲೆಯ ನೋಟುಗಳು ಚಲಾವಣೆಗೆ ಬರಲಿವೆ ಎಂಬ ಬಗ್ಗೆ ಹಿಂದೆಯೇ ಸುದ್ದಿಯಾಗಿತ್ತು. ಇದೀಗ ಈ ಸುದ್ದಿ ಅಧಿಕೃತವಾಗಿದೆ. ಸ್ವತಃ ಹಣಕಾಸು ಸಚಿವಾಲಯವೇ 200 ರೂ. ನೋಟುಗಳನ್ನ ಬಿಡುಗಡೆ ಮಾಡಲಿರುವ ಬಗ್ಗೆ ಬುಧವಾರದಂದು ಘೋಷಣೆ ಮಾಡಿದೆ.

    ಆರ್‍ಬಿಐನ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟರ್ಸ್‍ನ ಶಿಫಾರಸ್ಸಿನ ಮೇಲೆ ಹಾಗೂ 1934ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ 24ರ ಅಡಿ ಈ ನೋಟಿಫಿಕೇಷನ್ ವಿತರಿಸಲಾಗಿದೆ.

    200 ರೂ. ಮುಖಬೆಲೆಯ ಹೊಸ ನೋಟುಗಳ ಜೊತೆಗೆ ಹೊಸ 50 ರೂ. ನೋಟುಗಳ ಬಗ್ಗೆಯೂ ಸರ್ಕಾರ ಖಚಿತಪಡಿಸಿದೆ. ಈಗಾಗಲೇ ಇರುವ 50 ರೂ. ನೋಟುಗಳು ಕೂಡ ಚಲಾವಣೆಯಲ್ಲಿರಲಿವೆ. ಹೊಸ 200 ರೂ. ನೋಟುಗಳನ್ನ ಮೈಸೂರಿನ ಸರ್ಕಾರಿ ಮುದ್ರಣಾಲಯದಲ್ಲಿ ಮುದ್ರಿಸಲಾಗುತ್ತಿದೆ.

    200 ರೂ. ನೋಟುಗಳ ಮುದ್ರಣ ಆರಂಭವಾಗಿದ್ದು, ಶೀಘ್ರದಲ್ಲೇ ಚಲಾವಣೆಗೆ ಬರಲಿವೆ ಎಂದು ಈ ಹಿಂದೆ ಹಣಕಾಸು ರಾಜ್ಯ ಸಚಿವ ಸಂತೋಷ್ ಕುಮಾರ್ ಹೇಳಿದ್ದರು.

    ಕಡಿಮೆ ಮುಖಬೆಲೆಯ ನೋಟುಗಳ ಚಲಾವಣೆ ಹೆಚ್ಚಿಸಲು ಈ ಹೊಸ ನೋಟುಗಳನ್ನ ಪರಿಚಯಿಸಲಾಗುತ್ತಿದೆ. ನೋಟ್‍ಬ್ಯಾನ್ ನಂತರ ಎರಡು ಸಾವಿರ ರೂ. ನೋಟು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಹಾಗೂ 100 ಹಾಗೂ 500 ರೂ. ನೋಟುಗಳ ಪ್ರಮಾಣ ಕಡಿಮೆ ಇದ್ದಿದ್ದರಿಂದ ಜನರು ಚಿಲ್ಲರೆಗಾಗಿ ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದ್ದರು.

    ಇದನ್ನೂ ಓದಿ: ಶೀಘ್ರವೇ ಬಿಡುಗಡೆಯಾಗಲಿದೆ ಹಂಪಿಯ ರಥದ ಚಿತ್ರ ಇರೋ 50 ರೂ. ನೋಟುಗಳು!

  • 200 ರೂ. ನೋಟು ಬಿಡುಗಡೆಗೆ ಆರ್‍ಬಿಐ ಪ್ಲಾನ್

    200 ರೂ. ನೋಟು ಬಿಡುಗಡೆಗೆ ಆರ್‍ಬಿಐ ಪ್ಲಾನ್

    ನವದೆಹಲಿ: ಆರ್‍ಬಿಐ ಶೀಘ್ರದಲ್ಲೇ 200 ರೂ. ಮುಖಬೆಲೆಯ ನೋಟುಗಳನ್ನ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ.

    ಇದನ್ನೂ ಓದಿ: ಎಸ್‍ಬಿಐ ಖಾತೆದಾರರಿಗೆ ಶಾಕ್- ಎಟಿಎಂಗಳಲ್ಲಿ ತಿಂಗಳಿಗೆ 5ಕ್ಕಿಂತ ಹೆಚ್ಚು ಬಾರಿ ವಿತ್‍ಡ್ರಾ ಮಾಡಿದ್ರೆ ಶುಲ್ಕ

    ಕಳೆದ ತಿಂಗಳು ನಡೆದ ಸಭೆಯಲ್ಲಿ ಆರ್‍ಬಿಐ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಆದರೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ ನಂತರವಷ್ಟೆ 200 ರೂ. ನೋಟುಗಳ ಮುದ್ರಣ ಆರಂಭವಾಗಲಿದೆ. ಒಂದು ವೇಳೆ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದ್ರೆ ಜೂನ್ ಬಳಿಕ ಮುದ್ರಣ ಕಾರ್ಯ ಆರಂಭವಾಗಲಿದೆ ಎಂದು ವರದಿಯಾಗಿದೆ. ಅದ್ರೆ ಈ ಬಗ್ಗೆ ಆರ್‍ಬಿಐ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಮತ್ತೆ 2,000 ನೋಟು ನಿಷೇಧವಾಗುತ್ತಾ: ಜನ್ರಲ್ಲಿ ಮೂಡಿದ್ದ ಪ್ರಶ್ನೆಗೆ ಜೇಟ್ಲಿ ಉತ್ತರಿಸಿದ್ರು

    2016ರ ನವೆಂಬರ್ 8ರಂದು ಹಳೇ 500 ಹಾಗೂ 1000 ರೂ. ನೋಟ್‍ಗಳನ್ನು ನಿಷೇಧಿಸಿದ್ದ ಮೋದಿ ಸರ್ಕಾರ ಹೊಸ ವಿನ್ಯಾಸದ 500 ರೂ. ಹಾಗೂ ಗುಲಾಬಿ ಬಣ್ಣದ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನ ಬಿಡುಗಡೆ ಮಾಡಿತ್ತು.

    ಇನ್ನು 1 ಸಾವಿರ ರೂ. ನೋಟು ಕೂಡ ಹೊಸ ವಿನ್ಯಾಸದೊಂದಿಗೆ ಮತ್ತೆ ಬಿಡುಗಡೆಯಾಗಲಿದೆ ಎಂಬ ವದಂತಿಯೂ ಇತ್ತು. ಆದರೆ 1000 ರೂ. ನೋಟನ್ನು ಮತ್ತೆ ಚಲಾವಣೆಗೆ ತರುವ ಬಗ್ಗೆ ಸರ್ಕಾರ ಚಿಂತಿಸಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಸ್ಪಷ್ಟಪಡಿಸಿದ್ದರು.

    ಇದನ್ನೂ ಓದಿ: ಹೊಸ ನೋಟುಗಳ ನಕಲು ತಡೆಗೆ ಸರ್ಕಾರ ಮಾಡಿರೋ ಪ್ಲಾನ್ ಏನು ಗೊತ್ತಾ?