Tag: Rs. 10

  • ಹೊಸ 10 ರೂ. ನೋಟಿನ ಚಿತ್ರ ರಿಲೀಸ್- ಇಲ್ಲಿದೆ ಅದರ ವೈಶಿಷ್ಟ್ಯತೆಗಳು

    ಹೊಸ 10 ರೂ. ನೋಟಿನ ಚಿತ್ರ ರಿಲೀಸ್- ಇಲ್ಲಿದೆ ಅದರ ವೈಶಿಷ್ಟ್ಯತೆಗಳು

    ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‍ಬಿಐ) ಶೀಘ್ರದಲ್ಲೇ ಹೊಸ ವಿನ್ಯಾಸದ 10 ರೂ. ನೊಟುಗಳನ್ನ ಬಿಡುಗಡೆಗೊಳಿಸಿದೆ. ಸದ್ಯ ಹೊಸ ನೋಟುಗಳ ಚಿತ್ರವನ್ನ ಆರ್‍ಬಿಐ ಬಿಡುಗಡೆ ಮಾಡಿದೆ.

    ಹೊಸ 10 ರೂ. ನೋಟಿನಲ್ಲಿ ಕೊನಾರ್ಕ್ ಸೂರ್ಯ ದೇವಾಲಯ(ಸನ್ ಟೆಂಪಲ್) ನ ಚಿತ್ರವಿದೆ. ಮಹಾತ್ಮಾ ಗಾಂಧಿ ಹೊಸ ಸರಣಿಯ ಈ ನೋಟುಗಳಲ್ಲಿ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಇದೆ.

    ನೋಟಿನ ಬಣ್ಣ ಕಂದು(ಚಾಕ್ಲೆಟ್ ಬ್ರೌನ್) ಆಗಿದ್ದು, ಇತರೆ ಡಿಸೈನ್‍ಗಳಿವೆ. ನೋಟಿನ ಮುಂಭಾಗದ ಮಧ್ಯಭಾಗದಲ್ಲಿ ಮಹಾತ್ಮಾ ಗಾಂಧೀಜಿ ಚಿತ್ರವಿದೆ. ಸಣ್ಣ ಅಕ್ಷರದಲ್ಲಿ ಆರ್‍ಬಿಐ, ಭಾರತ್, ಇಂಡಿಯಾ ಹಾಗೂ 10ರ ಮುದ್ರಣವಿದೆ. ಮಹಾತ್ಮಾ ಗಾಂಧೀಜಿ ಚಿತ್ರದ ಬಲಭಾಗಕ್ಕೆ ಆರ್‍ಬಿಐ ಗವರ್ನರ್ ಸಹಿ, ಆರ್‍ಬಿಐ ಲಾಂಛನ ಹಾಗೂ ಅಶೋಕ ಸ್ತಂಭದ ಲಾಂಛನವಿದೆ. ಮಹಾತ್ಮಾ ಗಾಂಧಿ ಚಿತ್ರ ಹಾಗೂ 10 ರೂ. ವಾಟರ್‍ಮಾರ್ಕ್ ಇದೆ. ಮೇಲಿನ ಎಡಭಾಗ ಹಾಗೂ ಕೆಳಗಿನ ಬಲಭಾಗದಲ್ಲಿ ಸಣ್ಣ ಗ್ರಾತದಿಂದ ದೊಡ್ಡದ್ದಕ್ಕೆ ಸಾಗುವ ನಂಬರ್ ಪ್ಯಾನೆಲ್ ಇದೆ.

    ನೋಟಿನ ಹಿಂಭಾಗದಲ್ಲಿ ನೋಟು ಮುದ್ರಣದ ವರ್ಷ, ಸ್ವಚ್ಛ ಭಾರತ್ ಲಾಂಛನ ಹಾಗೂ ಘೋಷವಾಕ್ಯ ಮತ್ತು ಭಾಷೆಗಳ ಪ್ಯಾನೆಲ್ ಇದೆ. ಸೂರ್ಯ ದೇವಾಲಯ ಚಿತ್ರ ಹಾಗೂ ದೇವನಾಗರಿಯಲ್ಲಿ ಸಂಖ್ಯೆ 10 ಮುದ್ರಿಸಲಾಗಿದೆ. ನೋಟಿನ ಅಳತೆ 63ಮಿಮಿ * 123ಮಿಮಿ ಇರಲಿದೆ.

    ಈ ಹಿಂದಿನ ಸರಣಿಯಲ್ಲಿ ಬಿಡುಗಡೆಗೊಂಡಿರೋ ಹಳೇ 10 ರೂ. ನೋಟುಗಳು ಕೂಡ ಚಲಾವಣೆಯಲ್ಲಿ ಇರಲಿವೆ ಎಂದು ಆರ್‍ಬಿಐ ತಿಳಿಸಿದೆ.

    2016ರ ನವೆಂಬರ್ 8 ರಂದು 1 ಸಾವಿರ ರೂ. ಹಾಗೂ 500 ರೂ. ನೋಟು ನಿಷೇಧದ ಬಳಿಕ ಆರ್ ಬಿಐ ಹೊಸ 500 ರೂ. 2 ಸಾವಿರ ಮುಖ ಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತ್ತು. ನೋಟ್ ಬ್ಯಾನ್ ಬಳಿಕ ಸೃಷ್ಟಿಯಾಗಿದ್ದ ಚಿಲ್ಲರೆ ಸಮಸ್ಯೆಯನ್ನು ಬಗೆ ಹರಿಸಲು ಆಗಸ್ಟ್ ತಿಂಗಳಿನಲ್ಲಿ ಆರ್ ಬಿಐ ಹೊಸ 200 ರೂ. ಹಾಗೂ 50 ರೂ. ಮುಖ ಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತ್ತು. 200 ರೂ. ಮುಖ ಬೆಲೆ ನೋಟಿನಲ್ಲಿ ಭಾರತದ ಸಂಸ್ಕೃತಿ ಪರಂಪರೆ ತಿಳಿಸುವ ಸಲುವಾಗಿ ಸಾಂಚಿ ಸೂಪ್ತವನ್ನು ಮುದ್ರಿಸಿದ್ದರೆ, 50 ರೂ. ನೋಟಿನಲ್ಲಿ ಹಂಪಿಯ ಕಲ್ಲಿನ ರಥದ ಚಿತ್ರವನ್ನು ಮುದ್ರಿಸಲಾಗಿತ್ತು.

    ಈ ಹಿಂದೆ 2005ರಲ್ಲಿ 10 ರೂ. ಮುಖ ಬೆಲೆಯ ಹೊಸ ನೋಟುಗಳನ್ನು ಆರ್‍ ಬಿಐ ಬಿಡುಗಡೆ ಮಾಡಿತ್ತು.

  • ಶೀಘ್ರದಲ್ಲೇ ಹೊಸ ರೂಪದಲ್ಲಿ 10 ರೂ. ನೋಟ್- ಹೊಸ ನೋಟಿನ ವಿಶೇಷತೆ ಏನು?

    ಶೀಘ್ರದಲ್ಲೇ ಹೊಸ ರೂಪದಲ್ಲಿ 10 ರೂ. ನೋಟ್- ಹೊಸ ನೋಟಿನ ವಿಶೇಷತೆ ಏನು?

    ನವದೆಹಲಿ: ಹೆಚ್ಚಿನ ಭದ್ರತಾ ಗುಣವಿಶೇಷಗಳೊಂದಿಗೆ 10 ರೂಪಾಯಿ ನೋಟನ್ನ ಶೀಘ್ರದಲ್ಲೇ ಹೊಸ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಗುರುವಾರದಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

    2005ರ ಮಹಾತ್ಮಾ ಗಾಂಧಿ ಸೀರೀಸ್‍ನಲ್ಲಿ ಬರಲಿರುವ ನೋಟುಗಳಲ್ಲಿ ಎರಡೂ ನಂಬರ್ ಪ್ಯಾನೆಲ್‍ನಲ್ಲಿ ಎಲ್ ಅಕ್ಷರ ಹಾಗೂ ಊರ್ಜಿತ್ ಪಟೇಲ್ ಅವರ ಹಸ್ತಾಕ್ಷರವಿರಲಿದೆ.

    ಮುದ್ರಣ ವರ್ಷ 2017 ನೋಟಿನ ಹಿಂಭಾಗದಲ್ಲಿ ಇರಲಿದೆ. ಅಲ್ಲದೆ ಎರಡೂ ಪ್ಯಾನೆಲ್‍ನ ಸಂಖ್ಯೆಗಳು ಎಡದಿಂದ ಬಲಕ್ಕೆ ಸಣ್ಣದರಿಂದ ದೊಡ್ಡ ಗಾತ್ರಕ್ಕೆ ಸಾಗುವಂತೆ ಇರಲಿವೆ. ಮೊದಲ ಮೂರು ಅಕ್ಷರ ಮತ್ತು ಸಂಖ್ಯೆಗಳ ಗಾತ್ರ ಹಿಂದೆ ಇದ್ದಂತೆಯೇ ಮುಂದುವರೆಯಲಿದೆ.

    ಈ ಹಿಂದೆ ವಿತರಿಸಲಾಗಿರುವ ಎಲ್ಲಾ 10 ರೂ. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿರಲಿವೆ ಎಂದು ಆರ್‍ಬಿಐನ ಅಧಿಸೂಚನೆಯಲ್ಲಿ ಹೇಳಲಾಗಿದೆ.