Tag: rowdy gang

  • ರೌಡಿಸಂನಲ್ಲಿ ಹೆಸರು ಮಾಡಲು ಯುವಕನನ್ನು ಬರ್ಬರವಾಗಿ ಕೊಲೆಗೈದ್ರು!

    ರೌಡಿಸಂನಲ್ಲಿ ಹೆಸರು ಮಾಡಲು ಯುವಕನನ್ನು ಬರ್ಬರವಾಗಿ ಕೊಲೆಗೈದ್ರು!

    ಅನೇಕಲ್: ರೌಡಿಸಂ ಹೆಸರು ಮಾಡಲು ಮುಂದಾಗಿದ್ದ ಆರೋಪಿಗಳು ಯುವನೊಬ್ಬನನ್ನು ಬರ್ಬರವಾಗಿ ಕೊಲೆಮಾಡಿ ಈಗ ಪೊಲೀಸರ ಅತಿಥಿಗಳಾಗಿರುವ ಘಟನೆ ಅನೇಕಲ್ ತಾಲೂಕಿನಲ್ಲಿ ನಡೆದಿದೆ.

    ಬಂಧಿತರನ್ನು ವಿನಿತ್(21) ಮುನೇಂದ್ರ(20) ವಜ್ರಮುನಿ (25) ಮನು (21) ಹಾಗೂ ಕಾರ್ತಿಕ್ (21) ಎಂದು ಗುರುತಿಸಲಾಗಿದೆ. ಆರೋಪಿಗಳು ಇದೇ ತಿಂಗಳ 14 ರಂದು ಎಂ ಮೇಡಹಳ್ಳಿ ಬಡಾವಣೆಯೊಂದರ ಬಳಿ ಯವಕ ದೇವರಾಜ್ (23) ಬರ್ಬರವಾಗಿ ಕೊಲೆ ಮಾಡಿದ್ದರು.

    ಪ್ರಕರಣವನ್ನು ಬೆನ್ನತ್ತಿದ್ದ ಅತ್ತಿಬೆಲೆ ಪೊಲೀಸ್ ಸಿಬ್ಬಂದಿ 6 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರೆಲ್ಲರೂ ಕೂಡ ಅನೇಕಲ್ ತಾಲೂಕಿನ ಬೆಸ್ತಮಾನಹಳ್ಳಿಯ ನಿವಾಸಿಗಳಾಗಿದ್ದಾರೆ. ಈ ಪ್ರಕರಣದ ಮತ್ತೊರ್ವ ಆರೋಪಿ ಹೊಸೂರಿನ ಪ್ರವೀಣ್ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

    ಈ ಕೊಲೆಯ ಸೂತ್ರಧಾರಿಗಳು ಸುನಿಲ್ ಹಾಗೂ ನವೀನ್ ಎನ್ನಲಾಗಿದ್ದು, ಇಬ್ಬರು ಈ ಹಿಂದೆ ಜಯಂತ್ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಉಳಿದಂತೆ ಆನೇಕಲ್ ಮನು ಹಾಗೂ ಸುನಿಲ್ ಗ್ಯಾಂಗ್ ರೌಡಿಸಂನಲ್ಲಿ ಹೆಸರುಗಳಿಸಲು ಯತ್ನಿಸುತ್ತಿದ್ದು, ಜೈಲಿನಲ್ಲಿದ್ದುಕೊಂಡೆ ಸುನಿಲ್ ಹಾಗೂ ಮನುವಿನ ಸ್ನೇಹಿತ ದೇವರಾಜ ನನ್ನು ಬಳಿಸಿಕೊಂಡು ಕೊಲೆ ಮಾಡಿಸಿದ್ದಾನೆ ಎನ್ನಲಾಗುತ್ತಿದೆ.

    ಕೊಲೆಯಾದ ಯುವಕನ ದೇವರಾಜು ಕೂಡ ಕೆಲ ದಿನಗಳ ಹಿಂದೆ ಗಲಾಟೆಯೊಂದರಲ್ಲಿ ಜೈಲು ಸೇರಿದ್ದ. ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ಆತ ಕೂಡ ಫೀಲ್ಡ್‍ನಲ್ಲಿ ಹೆಸರು ಮಾಡಲು ಮುಂದಾಗಿದ್ದ. ಈ ಹಂತದಲ್ಲಿ ಸುನಿಲ್ ನೊಂದಿಗೆ ಕಿರಿಕ್ ಮಾಡಿಕೊಂಡಿದ್ದ, ಇದರಿಂದ ರೊಚ್ಚಿಗೆದ್ದ ಸುನಿಲ್ ಜೈಲಿನಿಂದಲೇ ತನ್ನ ಹುಡುಗರಿಗೆ ಪ್ಲಾನ್ ತಿಳಿಸಿ ಕೊಲೆ ಮಾಡಿಸಿದ್ದಾನೆ. ಕೊಲೆಯಾದ ದಿನ ದೇವರಾಜು ಮೊಬೈಲ್ ಬಂದಿದ್ದ ಕರೆ ಆಧರಿಸಿ ಆರೋಪಗಳನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.

  • ಬೆಂಗ್ಳೂರಲ್ಲಿ ರಾತ್ರಿ 2 ರೌಡಿಗ್ಯಾಂಗ್‍ಗಳ ಅಟ್ಟಹಾಸ- 20ಕ್ಕೂ ಹೆಚ್ಚು ಕಾರ್, ಆಟೋಗಳ ಗ್ಲಾಸ್ ಪುಡಿ ಪುಡಿ

    ಬೆಂಗ್ಳೂರಲ್ಲಿ ರಾತ್ರಿ 2 ರೌಡಿಗ್ಯಾಂಗ್‍ಗಳ ಅಟ್ಟಹಾಸ- 20ಕ್ಕೂ ಹೆಚ್ಚು ಕಾರ್, ಆಟೋಗಳ ಗ್ಲಾಸ್ ಪುಡಿ ಪುಡಿ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ರಾತ್ರೋ ರಾತ್ರಿ ಮಚ್ಚು ಲಾಂಗುಗಳು ಅಟ್ಟಹಾಸ ಮೆರೆದಿವೆ. ಎರಡು ರೌಡಿ ಗ್ಯಾಂಗ್ ಗಳ ಅಟ್ಟಹಾಸಕ್ಕೆ ಜನ ಭಯಭೀತರಾಗಿದ್ದಾರೆ. ಏಕಾಏಕಿ ರೌಡಿಗಳ ದಾಳಿಯಿಂದ ಅನೇಕ ಜನ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ. ಮಚ್ಚು ಲಾಂಗಿನೇಟಿಗೆ ಅಂಗಡಿ, ಕಾರ್, ಆಟೋಗಳ ಗ್ಲಾಸ್ ಗಳು ಪುಡಿಪುಡಿಯಾಗಿವೆ.

    ಶನಿವಾರ ರಾತ್ರಿ 10 ಗಂಟೆಗೆ 4 ಬೈಕ್ ಗಳಲ್ಲಿ ಬಂದ 10 ಜನ ದುಷ್ಕರ್ಮಿಗಳು ಮಚ್ಚುಲಾಂಗುಗಳಿಂದ ಕಾವಲ್ ಭೈರಸಂದ್ರದ ಮೋದಿ ಗಾರ್ಡನ್ ಬಳಿ ಅಂಗಡಿಗಳು ಸೇರಿ ರಸ್ತೆ ಬದಿ ಪಾರ್ಕ್ ಮಾಡಿದ್ದ 20ಕ್ಕೂ ಹೆಚ್ಚು ಕಾರ್, ಆಟೋಗಳ ಗ್ಲಾಸ್ ಗಳನ್ನು ಪುಡಿ ಪುಡಿ ಮಾಡಿದ್ದಾರೆ. ಇದು ಸ್ಥಳೀಯರ ಮನೆ ಮುಂದೆ ಇರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮೋದಿಗಾರ್ಡನ್ ನ ನಿವಾಸಿಗಳಾದ ಜೊಳ್ಳ್ ಇಮ್ರಾನ್ ಮತ್ತು ಅನೀಜ್ ಗ್ಯಾಂಗ್ ನ ದಾಳಿಯಿಂದ ಐದಾರು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುಡಿ ರೌಡಿಗಳ ದಾಳಿಯಿಂದ ಸ್ಥಳೀಯ ಜನ ಭಯಭೀತರಾಗಿದ್ದಾರೆ.

    ಮೋದಿಗಾರ್ಡನ್ ನಿವಾಸಿಗಳಾದ ಜೊಳ್ಳ್ ಇಮ್ರಾನ್ ಮತ್ತು ಅನೀಜ್ ಡಿ.ಜೆ.ಹಳ್ಳಿ ಮತ್ತು ಕೆ.ಜೆ.ಹಳ್ಳಿಯ ರೌಡಿಶೀಟರ್ ಗಳು. ಈಗಾಗಲೇ ಅನೇಕ ಪ್ರಕರಣಗಳಲ್ಲಿ ಜೈಲಿಗೂ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದಾರೆ. ಸ್ಥಳೀಯವಾಗಿ ಸುಬಾನ್ ಗ್ಯಾಂಗ್ ಜೊತೆ ವೈಷಮ್ಯ ಬೆಳೆಸಿಕೊಂಡಿದ್ದ ಅನೀಜ್ ಗ್ಯಾಂಗ್ ಏರಿಯಾದಲ್ಲಿ ಹವಾ ಮುಂದುವರೆಸಲು ಈ ರೀತಿಯ ದುಷ್ಕೃತ್ಯಗಳಿಗೆ ಮುಂದಾಗಿದ್ದಾರೆ. ಡಿ.ಜೆ.ಹಳ್ಳಿ ಠಾಣೆಯಲ್ಲಿ ಇವರ ವಿರುದ್ಧ ಅನೇಕ ದೂರುಗಳಿದ್ದರೂ ಪೊಲೀಸರು ಏನೂ ಕ್ರಮಕೈಗೊಳ್ಳುತ್ತಿಲ್ಲ ಅಂತ ಸ್ಥಳೀಯರು ಹೇಳುತ್ತಿದ್ದಾರೆ.

    ಮೇಯರ್ ಸಂಪತ್ ರಾಜ್ ಪ್ರತಿನಿಧಿಸೋ ಡಿ.ಜೆ.ಹಳ್ಳಿ ವಾರ್ಡ್ 47 ರ ಮೋದಿ ಗಾರ್ಡನ್ ನಲ್ಲಿನ ಈ ಕೃತ್ಯ ಸಾರ್ವಜನಿಕರಲ್ಲಿ ತೀವ್ರ ಭಯವನ್ನುಂಟುಮಾಡಿದೆ. ಒಟ್ಟಿನಲ್ಲಿ ಎರಡು ರೌಡಿ ಗ್ಯಾಂಗುಗಳ ಕೋಲ್ಡ್ ವಾರ್ ಜನ ಸಾಮಾನ್ಯರಲ್ಲಿ ಆತಂಕ ಸೃಷ್ಟಿಸಿದೆ. ಈಗಾಗಲೇ ಅನುಮಾನದ ಹಿನ್ನೆಲೆಯಲ್ಲಿ ಡಿ.ಜೆ.ಹಳ್ಳಿ ಪೊಲೀಸರು ನಾಲ್ಕು ಜನ ದುಷ್ಕರ್ಮಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.