Tag: Rosie

  • ‘ರೋಜಿ’ ಸಿನಿಮಾದಲ್ಲಿ ‘ಲಿಯೊ’ ಖ್ಯಾತಿಯ ನಟನ ಎಂಟ್ರಿ

    ‘ರೋಜಿ’ ಸಿನಿಮಾದಲ್ಲಿ ‘ಲಿಯೊ’ ಖ್ಯಾತಿಯ ನಟನ ಎಂಟ್ರಿ

    ಲೂಸ್ ಮಾದ ಯೋಗಿ (Loose Mada Yogi)  ಅಭಿನಯದ 50ನೇ ಚಿತ್ರ ರೋಜಿ (Rosie). ಈ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗ ‘ರೋಜಿ’ ಚಿತ್ರದ ಪ್ರಮುಖ ಪಾತ್ರದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಹಾಗೂ ಇಳಯದಳಪತಿ  ವಿಜಯ್ ಅಭಿನಯದ ‘ಲಿಯೊ’ ಚಿತ್ರದಲ್ಲಿ ಚಾಕೊಲೇಟ್ ಕಾಫಿ ಎಂಬ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಸ್ಯಾಂಡಿ ಮಾಸ್ಟರ್ ನಟಿಸುತ್ತಿದ್ದಾರೆ. ಈ ವಿಷಯ ತಿಳಿಸಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸ್ಯಾಂಡಿ ಮಾಸ್ಟರ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.  ಸ್ಯಾಂಡಿ ಮಾಸ್ಟರ್ ಅವರ ಪಾತ್ರ ಪರಿಚಯಿಸುವ ಪೋಸ್ಟರ್ ಸಹ ಬಿಡುಗಡೆ ಮಾಡಲಾಯಿತು.

    ನಾನು ನೃತ್ಯ ನಿರ್ದೇಶಕನಾಗಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ‘ಲಿಯೊ’ ಚಿತ್ರದ ನನ್ನ ಪಾತ್ರಕ್ಕೆ ಈಗ ಎಲ್ಲ ಕಡೆ  ಮೆಚ್ಚುಗೆ ವ್ಯಕ್ತವಾಗಿದೆ. ನಿರ್ದೇಶಕ ಶೂನ್ಯ ಅವರು ಈ ಚಿತ್ರದ ಕಥೆ ಹಾಗೂ ನನ್ನ ಪಾತ್ರದ ಬಗ್ಗೆ ಹೇಳಿದರು. ಇಷ್ಟವಾಯಿತು. ಆಂಡಾಳ್ ಎಂಬುದು ನನ್ನ ಪಾತ್ರದ ಹೆಸರು ಎಂದು ಸ್ಯಾಂಡಿ ಮಾಸ್ಟರ್ (Sandy Master) ತಿಳಿಸಿದರು.

    ನನ್ನ ಪಾತ್ರದ ಹೆಸರು ರೋಜಿ. ನಮ್ಮ ಚಿತ್ರಕ್ಕೆ ಈಗಾಗಲೇ ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆದಿದೆ ಎಂದು ಮಾತನಾಡಿದ ನಾಯಕ ಲೂಸ್ ಮಾದ ಯೋಗಿ, ಸದ್ಯದಲ್ಲೇ ವಿಭಿನ್ನವಾದ ಟೀಸರ್ ಸಹ ಬರಲಿದೆ. ಇದು ಮೂರು ನಿಮಿಷಗಳ ಅವಧಿಯಿದ್ದು ಟೀಸರ್ ಎನ್ನಬೇಕೊ ಅಥವಾ  ಟ್ರೇಲರ್ ಎನ್ನಬೇಕೊ ಗೊತ್ತಾಗುತ್ತಿಲ್ಲ ಎಂದರು.

     ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಮೊದಲ ಹಂತದ ಚಿತ್ರೀಕರಣದ ಕೆಲವು ಭಾಗಗಳನ್ನು ಆಯ್ಕೆ ಮಾಡಿ ಟೀಸರ್ ಸಹ ಸಿದ್ದವಾಗುತ್ತಿದೆ. ಸದ್ಯದಲ್ಲೇ ಟೀಸರ್ ಬಿಡುಗಡೆಯಾಗಲಿದೆ. ಈಗ ಸ್ಯಾಂಡಿ ಮಾಸ್ಟರ್ ಚಿತ್ರತಂಡ ಸೇರ್ಪಡೆಯಾಗಿದ್ದಾರೆ. ವಿಭಿನ್ನಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಹೆಸರಾಂತ ನಟರಿಬ್ಬರು ಹಾಗೂ ತೆಲುಗಿನ ಖ್ಯಾತ ನಟರೊಬ್ಬರು ನಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಆ ಕುರಿತು ಮಾಹಿತಿ ನೀಡುವುದಾಗಿ ಹೆಡ್ ಬುಷ್ ಚಿತ್ರದ ಖ್ಯಾತಿಯ ನಿರ್ದೇಶಕ ಶೂನ್ಯ.

    ಟೀಸರ್ ಗೆ ಹಿನ್ನೆಲೆ ಸಂಗೀತ ನೀಡಲು ಶೂನ್ಯ ನನ್ನ ಸಂಪರ್ಕಿಸಿದರು. ಟೀಸರ್ ಚೆನ್ನಾಗಿ ಬಂದಿದೆ‌. ನಾಲ್ಕು ಹಾಡುಗಳು ಚಿತ್ರದಲ್ಲಿದೆ. ಯೋಗಿ ಅವರ ಜೊತೆ ಇದು ನನ್ನ ಮೊದಲ ಚಿತ್ರ ಎಂದರು ಸಂಗೀತ ನಿರ್ದೇಶಕ ಗುರುಕಿರಣ್.  ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡುತ್ತಿರುವ ಚಿತ್ರತಂಡಕ್ಕೆ ನಿರ್ಮಾಪಕ ಡಿ.ವೈ.ರಾಜೇಶ್ ಧನ್ಯವಾದ ತಿಳಿಸಿದರು. ಸಹ ನಿರ್ಮಾಪಕ ಡಿ.ವೈ ವಿನೋದ್ ಹಾಗೂ ಸಂಕಲನಕಾರ ಹರೀಶ್ ಕೊಮ್ಮೆ ಪತ್ರಿಕಾಗೋಷ್ಠಿಯಲ್ಲಿದ್ದರು.

  • ಐವತ್ತು ಸಿನಿಮಾ ಪೂರೈಸಿದ ಲೂಸ್ ಮಾದ ಯೋಗಿ

    ಐವತ್ತು ಸಿನಿಮಾ ಪೂರೈಸಿದ ಲೂಸ್ ಮಾದ ಯೋಗಿ

    ದುನಿಯಾ (Duniya) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ಯೋಗಿ ಅಲಿಯಾಸ್ ಲೂಸ್ ಮಾದ ಯೋಗಿ (Loose Mada Yogi) ಈವರೆಗೂ ಬರೋಬ್ಬರಿ ಐವತ್ತು ಸಿನಿಮಾ ಪೂರೈಸಿದ್ದಾರೆ. ಅವರ ಐವತ್ತನೇ ಚಿತ್ರಕ್ಕೆ ‘ರೋಜಿ’ (Rosie) ಎಂದು ಹೆಸರಿಡಲಾಗಿದೆ. ಈ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮುಹೂರ್ತ ಸಮಾರಂಭ ಇತ್ತೀಚೆಗೆ ನವರಂಗ್ ಚಿತ್ರಮಂದಿರದಲ್ಲಿ ನಡೆಯಿತು. ಡಾಲಿ ಧನಂಜಯ (Dolly Dhananjay) ಚಿತ್ರದ ಶೀರ್ಷಿಕೆ ಅನಾವರಣ ಮಾಡಿ, ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

    ಹೆಡ್ ಬುಷ್ ಚಿತ್ರದ ನಂತರ ಶೂನ್ಯ (Shoonya ) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಡಿ.ವೈ.ರಾಜೇಶ್ ಹಾಗೂ ಡಿ.ವೈ.ವಿನೋದ್ ನಿರ್ಮಾಣ ಮಾಡುತ್ತಿದ್ದಾರೆ. ಯೋಗಿ ನನ್ನ ಆತ್ಮೀಯ ಗೆಳೆಯ. ‘ರೋಜಿ’  ಯೋಗಿ ಅಭಿನಯದ 50ನೇ ಸಿನಿಮಾ ಎಂದು ತಿಳಿದು ಸಂತೋಷವಾಯಿತು. ಶೂನ್ಯ ಕೂಡ ನಮ್ಮ ಸಂಸ್ಥೆಯ ನಿರ್ಮಾಣದ ಹೆಡ್ ಬುಷ್ ಚಿತ್ರ ನಿರ್ದೇಶನ ಮಾಡಿದ್ದರು. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಡಾಲಿ ಹಾರೈಸಿದರು.

    ಇದು ನನ್ನ ಐವತ್ತನೇ ಚಿತ್ರ. ನಾನು ಈ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನ ಪಾತ್ರ ಎನ್ನಬಹುದು. ಶೂನ್ಯ ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ. ಶೀರ್ಷಿಕೆ ಬಿಡುಗಡೆ ಮಾಡಿ, ಶುಭ ಹಾರೈಸಿದ ಸ್ನೇಹಿತ ಡಾಲಿ ಧನಂಜಯ ಅವರಿಗೆ ಧನ್ಯವಾದ ಎಂದರು ನಾಯಕ ಯೋಗಿ.

    ನನ್ನ ಮೊದಲ ನಿರ್ದೇಶನದ ಚಿತ್ರಕ್ಕೆ ಎಲ್ಲರೂ ನೀಡಿದ್ದ ಪ್ರೋತ್ಸಾಹಕ್ಕೆ ಚಿರ ಋಣಿ. ಈಗ ನನ್ನ ನಿರ್ದೇಶನದ ಎರಡನೇ ಚಿತ್ರ ರೋಜಿಗೆ ಚಾಲನೆ ಸಿಕ್ಕಿದೆ. ಚಿತ್ರದಲ್ಲಿ ಯೋಗಿ ಅವರ ಹೆಸರೆ ರೋಜಿ.  ಚಿತ್ರರಂಗದವರಿಗೆ ಚಿತ್ರಮಂದಿರ ದೇವಸ್ಥಾನವಿದಂತೆ. ಹಾಗಾಗಿ ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲಿ ಆರಂಭಿಸಿದ್ದೇವೆ.  ಮೇ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕ ಶೂನ್ಯ ತಿಳಿಸಿದರು.