Tag: Roposo

  • ಟಿಕ್‌ಟಾಕ್‌ ಬ್ಯಾನ್‌ – ರಾಕೆಟ್‌ ವೇಗದಲ್ಲಿ ರೊಪೊಸೊ ಬಳಕೆದಾರರ ಸಂಖ್ಯೆ ಏರಿಕೆ

    ಟಿಕ್‌ಟಾಕ್‌ ಬ್ಯಾನ್‌ – ರಾಕೆಟ್‌ ವೇಗದಲ್ಲಿ ರೊಪೊಸೊ ಬಳಕೆದಾರರ ಸಂಖ್ಯೆ ಏರಿಕೆ

    ನವದೆಹಲಿ: ಭಾರತ ಸರ್ಕಾರ ಟಿಕ್‌ ಟಾಕ್‌ ನಿಷೇಧ ಮಾಡಿದ ಬೆನ್ನಲ್ಲೇ ಸ್ವದೇಶಿ ರೊಪೊಸೊ ಅಪ್ಲಿಕೇಶನ್‌ ಬಳಕೆ ದಿಢೀರ್‌ ಭಾರೀ ಹೆಚ್ಚಳ ಕಂಡಿದೆ.

    ಟಿಕ್‌ಟಾಕ್‌ಗೆ ಪ್ರತಿಸ್ಪರ್ಧಿಯಾಗಿದ್ದ ರೊಪೊಸೊವನ್ನು ಜನ ಬಳಕೆ ಮಾಡುತ್ತಿದ್ದರು ಅಷ್ಟು ಜನಪ್ರಿಯವಾಗಿರಲಿಲ್ಲ. ಆದರೆ ಯಾವಾಗ ಭಾರತ ಸರ್ಕಾರ ಟಿಕ್‌ಟಾಕ್‌ ಜೊತೆ 59 ಅಪ್ಲಿಕೇಶನ್‌ಗಳನ್ನು ನಿಷೇಧಿಸಿತೋ ಆ ಬಳಿಕ ರೊಪೊಸೊ ಬಳಕೆದಾರ ಸಂಖ್ಯೆ ದಿಢೀರ್‌ ವೃದ್ಧಿಸಿದೆ.

    ರಿಯಲ್‌ ಟೈಂ ಅವಧಿಯಲ್ಲಿ ಒಂದು ಗಂಟೆಯಲ್ಲಿ 5 ಲಕ್ಷ ಬಳಕೆದಾರರು ಈಗ ರೊಪೊಸೊವನ್ನು ಬಳಕೆ ಮಾಡುತ್ತಿದ್ದು, ಇದು ಇಲ್ಲಿಯವರೆಗಿನ ಅತಿ ಹೆಚ್ಚು ಎಂದು ಕಂಪನಿ ತಿಳಿಸಿದೆ. ಈ ತಿಂಗಳ ಅಂತ್ಯಕ್ಕೆ 10 ಲಕ್ಷಕ್ಕೆ ಇದು ಏರಿಕೆಯಾಗುವ ನಿರೀಕ್ಷೆಯಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ರೊಪೊಸೊ ಸಂಸ್ಥಾಪಕ ನವೀನ್‌ ತಿವಾರಿ, ಭಾರತೀಯ ಸ್ಟಾರ್ಟಪ್‌ ಕಂಪನಿಗಳು ಈಗ ರಾಕೆಟ್‌ ವೇಗದಲ್ಲಿ ಗ್ರಾಹಕರನ್ನು ಸೆಳೆಯುತ್ತಿವೆ. ಈ ಎಲ್ಲ ಬೆಳವಣಿಗೆ ಗಮನಿಸಿದರೆ ಮುಂದಿನ ದಿನಗಳಲ್ಲಿ ಅಮೆರಿಕ, ಚೀನಾ, ರಷ್ಯಾದ ಬಳಿಕ ಭಾರತ ಟೆಕ್ನಾಲಜಿ ಹಬ್‌ ರಾಷ್ಟ್ರಗಳ ಪೈಕಿ ನಾಲ್ಕನೇಯ ಸ್ಥಾನಕ್ಕೆ ಏರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ ರೊಪೊಸೊ ಅಪ್ಲಿಕೇಶನ್‌ 20 ಎಂಬಿ ಗಾತ್ರವನ್ನು ಹೊಂದಿದ್ದು, 50 ಲಕ್ಷಕ್ಕೂ ಅಧಿಕ ಮಂದಿ ಡೌನ್‌ಲೋಡ್‌ ಮಾಡಿದ್ದಾರೆ. ಬಳಕೆದಾರರು 4.2 ಸ್ಟಾರ್‌ ನೀಡಿದ್ದಾರೆ.

    ಗಲ್ವಾನ್‌ ಘರ್ಷಣೆಯ ಬಳಿಕ ನಿಷೇಧಗೊಂಡಿರುವ 59 ಚೀನಾ ಅಪ್ಲಿಕೇಶನ್‌ಗಳಿಗೆ ಸರ್ಕಾರ 79 ಪ್ರಶ್ನೆಗಳನ್ನು ಕೇಳಿ ಉತ್ತರ ನೀಡುವಂತೆ ಸೂಚಿಸಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ 79 ಪ್ರಶ್ನೆಗಳನ್ನು ಸಿದ್ಧಪಡಿಸಿ ಜುಲೈ 22ರ ಒಳಗಡೆ ಉತ್ತರಿಸುವಂತೆ ನೋಟಿಸ್‌ ನೀಡಿದೆ. ಒಂದು ವೇಳೆ ಮೂರು ವಾರದ ಒಳಗಡೆ ಉತ್ತರಿಸದಿದ್ದರೆ ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

    ಕಂಪನಿಯ ಮೂಲ ಯಾವುದು? ಪೇರೆಂಟ್‌ ಕಂಪನಿಯ ರಚನೆ ಹೇಗೆ? ಕಂಪನಿಗೆ ಹಣ ಹೂಡಿದವರು ಯಾರು? ದತ್ತಾಂಶ ನಿರ್ವಹಣೆ, ಸರ್ವರ್‌ಗಳ ಬಗ್ಗೆ ಸರ್ಕಾರ ಪ್ರಶ್ನೆ ಕೇಳಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 69ರ ಸಾರ್ವಭೌಮ ರಾಷ್ಟ್ರಕ್ಕೆ ಇರುವ ಅಧಿಕಾರಗಳ ಅಡಿ ಕೇಂದ್ರ ಸರ್ಕಾರ ಚೀನಿ ಕಂಪನಿಗಳಿಗೆ ನೋಟಿಸ್‌ ನೀಡಿದೆ. ಈ ಕಂಪನಿಗಳು ನೀಡಿದ ಉತ್ತರಗಳನ್ನು ವಿಶೇಷ ಸಮಿತಿ ಪರಿಶೀಲಿಸಲಿದೆ.

    ಕಂಪನಿಗಳು ನೀಡಿದ ಉತ್ತರಗಳು ಸಮರ್ಪಕವಾಗಿದ್ದಲ್ಲಿ ನಿಷೇಧಗೊಂಡ ಅಪ್ಲಿಕೇಶನ್‌ಗಳು ಮತ್ತೆ ಆಪ್‌ ಸ್ಟೋರ್‌ಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.