Tag: Rome

  • 95 ವರ್ಷಗಳಿಂದ ಈ ದೇಶದಲ್ಲಿ ಒಂದೇ ಒಂದು ಮಗು ಜನಿಸಿಲ್ಲ – ಇದರ ಹಿಂದಿನ ನಿಗೂಢ ಕಾರಣವೇನು?

    95 ವರ್ಷಗಳಿಂದ ಈ ದೇಶದಲ್ಲಿ ಒಂದೇ ಒಂದು ಮಗು ಜನಿಸಿಲ್ಲ – ಇದರ ಹಿಂದಿನ ನಿಗೂಢ ಕಾರಣವೇನು?

    ಪ್ರಪಂಚದ ಅನೇಕ ದೇಶಗಳು ವಿವಿಧ ರೀತಿಯ ನಿಗೂಢ ವಿಷಯಗಳನ್ನು ಹೊಂದಿವೆ. ಅದರಲ್ಲಿ ಇಟಲಿಯ ರೋಮ್‌ನಲ್ಲಿರುವ ವ್ಯಾಟಿಕನ್ ಸಿಟಿಯೂ (Vatican City) ಒಂದು. ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಧರ್ಮದ ಎಲ್ಲಾ ಮಹಾನ್ ಧಾರ್ಮಿಕ ಮುಖಂಡರು ಇಲ್ಲಿ ವಾಸಿಸುತ್ತಿದ್ದಾರೆ. ಪೋಪ್ ಇಲ್ಲಿ ಆಳ್ವಿಕೆ ನಡೆಸುತ್ತಾರೆ. ವಿವಿಧ ದೇಶಗಳಿಗೆ ಹೋಲಿಸಿದಾಗ ಈ ದೇಶವು ಒಂದು ವಿಭಿನ್ನತೆಯನ್ನು ಹೊಂದಿದೆ.

    ಕಳೆದ 95 ವರ್ಷಗಳಿಂದ ಒಂದೇ ಒಂದು ಮಗುವೂ ಇಲ್ಲಿ ಜನಿಸಿಲ್ಲ. ಹೌದು. ಫೆಬ್ರವರಿ 11, 1929 ರಂದು ದೇಶವನ್ನು ರಚಿಸಲಾಯಿತು. 95 ವರ್ಷಗಳು ಕಳೆದರೂ ಇಲ್ಲಿ ಒಂದೇ ಒಂದು ಮಗು ಜನಿಸದಿರುವುದು ಆಶ್ಚರ್ಯಕರವಾಗಿದೆ. ಇದು ವಿಶ್ವದ ಅತ್ಯಂತ ಚಿಕ್ಕ ದೇಶವೂ ಆಗಿದೆ. ಈ ಚಿಕ್ಕ ರಾಷ್ಟ್ರದಲ್ಲಿ, ಸುಮಾರು 800 ಜನರು ವಾಸಿಸುತ್ತಿದ್ದು, ಅದರಲ್ಲಿ ಕೇವಲ 30 ಮಹಿಳೆಯರು ಇದ್ದಾರೆ ಎನ್ನಲಾಗುತ್ತಿದೆ.

    ಈ ದೇಶ ರಚನೆಯಾದ ನಂತರ ಇಲ್ಲಿ ಯಾವುದೇ ಆಸ್ಪತ್ರೆಗಳನ್ನು ಸ್ಥಾಪನೆ ಮಾಡಿಲ್ಲ. ಆಸ್ಪತ್ರೆಗೆ ನಿರ್ಮಿಸುವಂತೆ ಹಲವಾರು ಬಾರಿ ವಿನಂತಿಸಲಾಯಿತು ಆದರೂ ಕೂಡ ಪ್ರತಿ ಬಾರಿ ಈ ಮನವಿಯನ್ನು ತಿರಸ್ಕರಿಸಲಾಗಿದೆ. ಇಲ್ಲಿ ಯಾರಾದರೂ ತೀವ್ರವಾಗಿ ಅಸ್ವಸ್ಥರಾದರೆ ಅಥವಾ ಮಹಿಳೆ ಗರ್ಭಿಣಿಯಾದರೆ, ಆಕೆಯನ್ನು ರೋಮ್‌ನಲ್ಲಿರುವ ಆಸ್ಪತ್ರೆಗೆ ಕಳುಹಿಸಲಾಗುತ್ತದೆ.

    ವ್ಯಾಟಿಕನ್ ಸಿಟಿಯಲ್ಲಿ ಆಸ್ಪತ್ರೆಯನ್ನು ತೆರೆಯದಿರಲು ನಿರ್ಧರಿಸಲು ಅದರ ಸಣ್ಣ ಗಾತ್ರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳು ಕಾರಣ ಎಂದು ಹೇಳಲಾಗುತ್ತದೆ. ವ್ಯಾಟಿಕನ್ ಸಿಟಿಯ ವಿಸ್ತೀರ್ಣ ಕೇವಲ 118 ಎಕರೆ. ಎಲ್ಲಾ ರೋಗಿಗಳು ಚಿಕಿತ್ಸೆಗಾಗಿ ರೋಮ್‌ನಲ್ಲಿರುವ ಕ್ಲಿನಿಕ್‌ಗಳು ಮತ್ತು ಆಸ್ಪತ್ರೆಗಳಿಗೆ ಹೋಗಬೇಕು.

    ಇಲ್ಲಿ ಹೆರಿಗೆ ಆಸ್ಪತ್ರೆ ಇಲ್ಲದ ಕಾರಣ ಯಾರೂ ಹೆರಿಗೆ ಮಾಡುವಂತಿಲ್ಲ. ಹಾಗಾಗಿ ವೈದ್ಯಕೀಯ ಸೌಲಭ್ಯಗಳು ಬೇಕಿದ್ದರೆ ಹೊರಗೆ ಹೋಗಬೇಕಾಗುತ್ತದೆ. ಸಹಜ ಹೆರಿಗೆಯನ್ನು ಮಾಡುವುದಾಗಲಿ ಅಥವಾ ಅದಕ್ಕೆ ಅನುಮತಿಸುವ ಅವಕಾಶ ಇಲ್ಲ. ಇಲ್ಲಿರುವ ಮಹಿಳೆ ಗರ್ಭ ಧರಿಸಿ ಹೆರಿಗೆಯ ಸಮಯ ಸಮೀಪಿಸುತ್ತಿದ್ದಂತೆ.. ಇಲ್ಲಿನ ನಿಯಮಗಳ ಪ್ರಕಾರ ಆಕೆ ಮಗುವಿಗೆ ಜನ್ಮ ನೀಡುವವರೆಗೂ ಇಲ್ಲಿಂದ ಹೊರಡಬೇಕು.

    ಇನ್ನೂ ವ್ಯಾಟಿಕನ್ ನಗರದಲ್ಲಿ ಪಿತೃತ್ವವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿಯಮವು ಪಾದ್ರಿಗಳ ಧಾರ್ಮಿಕ ನಂಬಿಕೆಗಳಲ್ಲಿ ಆಳವಾಗಿ ಬೇರೂರಿದೆ. ಅಲ್ಲಿನ ನಿವಾಸಿಗಳು ಪ್ರಧಾನವಾಗಿ ಪಾದ್ರಿಗಳನ್ನು ಮದುವೆಯಾಗುವುದನ್ನು ಅಥವಾ ಅವರೊಂದಿಗೆ ಮಕ್ಕಳು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಬ್ರಹ್ಮಚರ್ಯದ ಪ್ರತಿಜ್ಞೆಯನ್ನು ಸಾಮಾನ್ಯವಾಗಿ ಎತ್ತಿಹಿಡಿಯಲಾಗಿದ್ದರೂ, ಪಾದ್ರಿಗಳು ಈ ಪ್ರತಿಜ್ಞೆಯನ್ನು ಮುರಿದರೆ, ಮಕ್ಕಳ ಜನನಕ್ಕೆ ಅಪವಾದಗಳಿವೆ ಎಂದು ನಂಬಲಾಗಿದೆ.

    ಈ ನಿಯಮದಿಂದಾಗಿಯೇ ವ್ಯಾಟಿಕನ್ ಸಿಟಿಯಲ್ಲಿ 95 ವರ್ಷಗಳಿಂದ ಒಂದೇ ಒಂದು ಮಗು ಜನಿಸಿಲ್ಲ. ವ್ಯಾಟಿಕನ್ ನಗರದಲ್ಲಿ ಯಾರೂ ಶಾಶ್ವತ ಪೌರತ್ವವನ್ನು ಪಡೆಯುವುದಿಲ್ಲ, ಎಲ್ಲಾ ನಿವಾಸಿಗಳು ತಮ್ಮ ಅಧಿಕಾರಾವಧಿಯ ಅವಧಿಯವರೆಗೆ ಮಾತ್ರ ಇಲ್ಲಿಯೇ ಇರುತ್ತಾರೆ, ಅಲ್ಲಿಯವರೆಗೆ ಅವರಿಗೆ ತಾತ್ಕಾಲಿಕ ಪೌರತ್ವವನ್ನು ನೀಡಲಾಗುತ್ತದೆ.

  • ರೋಮ್‌ನಲ್ಲಿ ರೊಮ್ಯಾನ್ಸ್ ಮಾಡಿದ ‌’ಕಬ್ಜ’ ಬ್ಯೂಟಿಗೆ ನೆಟ್ಟಿಗರಿಂದ ಕ್ಲಾಸ್

    ರೋಮ್‌ನಲ್ಲಿ ರೊಮ್ಯಾನ್ಸ್ ಮಾಡಿದ ‌’ಕಬ್ಜ’ ಬ್ಯೂಟಿಗೆ ನೆಟ್ಟಿಗರಿಂದ ಕ್ಲಾಸ್

    ಚಂದನವನದ ಕಬ್ಜ ಸುಂದರಿ ಶ್ರೀಯಾ ಶರಣ್ (Shriya Saran) ಇದೀಗ ರೋಮ್‌ಗೆ ಹಾರಿದ್ದಾರೆ. ಪತಿ ಜೊತೆ ರೋಮ್ ಬೀದಿಗಳಲ್ಲಿ ರೊಮ್ಯಾನ್ಸ್ ಮಾಡ್ತಿದ್ದಾರೆ. ನಟಿಯ ಲಿಪ್‌ಲಾಕ್, ರೊಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ರೂಪಾ ಅಯ್ಯರ್ (Roopa Iyer) ನಿರ್ದೇಶನದ ಚಂದ್ರ (Chandra) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟ ಸುಂದರಿ ಶ್ರೀಯಾ ಅವರು ಬಹುಭಾಷಾ ನಟಿಯಾಗಿ ಸದ್ದು ಮಾಡ್ತಿದ್ದಾರೆ. ಇತ್ತೀಚಿನ ಆರ್‌ಆರ್‌ಆರ್, ಪೊನ್ನಿಯನ್ ಸೆಲ್ವನ್, ಕಬ್ಜ (Kabzaa) ಸಿನಿಮಾದ ಸಕ್ಸಸ್‌ನಿಂದ ನಟಿಯ ಕೆರಿಯರ್‌ಗೆ ಬಿಗ್ ಬ್ರೇಕ್ ಸಿಕ್ಕಿದೆ.‌ ಇದನ್ನೂ ಓದಿ:ನಂದಿನಿ ಜಾಹೀರಾತಿಗೆ ಯಾವುದೇ ಸಂಭಾವನೆ ಪಡೆಯಲ್ಲ: ನಟ ಶಿವರಾಜ್ ಕುಮಾರ್

    ಬಹುಭಾಷೆಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದ ಶ್ರೀಯಾ ಅವರು ಡಿಮ್ಯಾಂಡ್ ಇರುವಾಗಲೇ ೨೦೧೮ರಲ್ಲಿ ರಷ್ಯಾದ ಗೆಳೆಯ ಆಂಡ್ರೆ ಅವರನ್ನು ವಿವಾಹವಾದರು. ಇದೀಗ ರಾಧೆ ಎಂಬ ಮುದ್ದಾದ ಮಗಳಿದ್ದಾಳೆ. ಮಗಳ ಪಾಲನೆ ಜೊತೆಗೆ ಸಿನಿಮಾ ರಂಗದಲ್ಲೂ ಆಕ್ಟೀವ್ ಆಗಿದ್ದಾರೆ.

    ಇದೀಗ ಶ್ರೀಯಾ ದಂಪತಿ ರೋಮ್‌ನಲ್ಲಿ ಬೀಡು ಬಿಟ್ಟಿದ್ದಾರೆ. ರೋಮ್‌ನ (Rome) ಬೀದಿಯಲ್ಲಿ ಲಿಪ್ ಲಾಕ್ ಮಾಡಿರುವ ಫೋಟೋವನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ಮೆಚ್ಚುಗೆ ಸೂಚಿಸಿದ್ರೆ, ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಾ? ಸಾರ್ವಜನಿಕ ಜಾಗದಲ್ಲಿ ಹೇಗಿರಬೇಕು ಎಂದು ತಿಳಿದಿಲ್ವಾ ಎಂದು ನೆಟ್ಟಿಗರು ಶ್ರೀಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಟ್ನಲ್ಲಿ ನಟಿಯ ರೊಮ್ಯಾಂಟಿಕ್ ಭಾವಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಶ್ರೀಯಾ ಶರಣ್ ಅವರು ಕಬ್ಜ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪ್ಪಿಗೆ (Upendra) ನಾಯಕಿಯಾಗಿ ಗಮನ ಸೆಳೆದಿದ್ದರು. ಈ ಸಿನಿಮಾದ ಪಾರ್ಟ್ 2 ಜೊತೆ ಮತ್ತೆ ಹಲವು ಪರಭಾಷಾ ಸಿನಿಮಾಗಳಲ್ಲಿ ನಟಿ ಬ್ಯುಸಿಯಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೋಮನ್ ಕಾಲದ ಫಾಸ್ಟ್ ಫುಡ್ ಸ್ಟಾಲ್ ಪತ್ತೆ

    ರೋಮನ್ ಕಾಲದ ಫಾಸ್ಟ್ ಫುಡ್ ಸ್ಟಾಲ್ ಪತ್ತೆ

    ರೋಮ್: ಜ್ವಾಲಾಮುಖಿ ಬೂದಿಯಲ್ಲಿ ಹೂತುಹೋಗಿದ್ದ 2000 ವರ್ಷಗಳ ಹಳೆಯ ರೋಮನ್ ಕಾಲದ ಪುರಾತನ ಫಾಸ್ಟ್ ಫುಡ್ ಸ್ಟಾಲ್ ರೀತಿಯ ಅಂಗಡಿಯೊಂದು ಇಟಲಿಯ ಪಾಂಪೆ ನಗರದಲ್ಲಿ ಪತ್ತೆಯಾಗಿದೆ.

    ಈ ಪುರಾತನ ಕಾಲದ ಫಾಸ್ಟ್ ಫುಡ್ ಸ್ಟಾಲ್ ಸಂಶೋಧಕರಲ್ಲಿ ಬೆರಗು ಮೂಡಿಸಿದೆ. ರೋಮನ್ ಕಾಲದ ಆಹಾರ ಪದ್ಧತಿ ಹೇಗಿತ್ತು ಎನ್ನುವುದರ ಸುಳಿವು ಸಿಕ್ಕಂತಾಗಿದೆ.

    ವಿವಿಧ ರೀತಿಯ ಪೇಂಟಿಂಗ್ಸ್ ನಿಂದ ಅಲಂಕಾರ ಮಾಡಿದ ಬಾರ್ ಕೌಂಟರ್ ಇದ್ದಾಗಿದ್ದು, ಈವರೆಗೆ ಜ್ವಾಲಾಮುಖಿ ಬೂದಿಯಿಂದ ಮುಚ್ಚಿಹೋಗಿತ್ತು. ಕಳೆದ ವರ್ಷ ಪುರಾತತ್ವಶಾಸ್ತ್ರಜ್ಞರು ಅನ್ವೇಷಣೆ ಮಾಡಿದ್ದಾರೆ. ಈ ಜಾಗದ ಸಂಪೂರ್ಣವಾದ ಮಾಹಿತಿಯನ್ನು ಕಲೆ ಹಾಕಿದ್ದಾರೆ.

    ಕ್ರಿಸ್ತಶಕ 79ರಲ್ಲಿ ಮೌಂಟ್ ವೆಸುವಿಯಸ್ ಸ್ಫೋಟಿಸಿದ ಜ್ವಾಲಾಮುಖಿಯಿಂದ ಪಾಂಪೆ ನಗದ ಕುದಿಯುವ ಲಾವಾದಲ್ಲಿ ಹೂತುಹೋಗಿತ್ತು. ಈ ವೇಳೆ 2,000 ದಿಂದ 15,000 ಮಂದಿ ಸಾವನ್ನಪ್ಪಿದ್ದರು ಎಂದು ಇತಿಹಾಸ ಹೇಳುತ್ತಿದೆ. ಈಗ ಪತ್ತೆಯಾಗಿರುವ ರೊಮನ್ ಕಾಲದ ಫುಡ್ ಸ್ಟಾಲ್ ಥರ್ಮೋಪೋಲಿಯಂ ಎಂದು ಕರೆಯಲಾಗಿದೆ. ಸಿಲ್ವರ್ ವೆಡ್ಡಿಂಗ್ ಸ್ಟ್ರೀಟ್ ಮತ್ತು ಆ್ಯಲಿ ಆಫ್ ಬಾಲ್ಕನೀಸ್ ಎಂಬ ಪ್ರದೇಶದಲ್ಲಿ ಈ ಸ್ಟಾಲ್ ಪತ್ತೆ ಹಚ್ಚಲಾಗಿದೆ.

    ಸ್ಥಳದಲ್ಲಿ ಬಾತುಕೋಳಿ ಮೂಳೆಯ ಚೂರು, ಮಣ್ಣಿನ ಮಡಿಕೆ, ಹಂದಿ, ಮೇಕೆ ಹಾಗೂ ಮೀನಿನ ಅವಶೇಷಗಳು ಪತ್ತೆಯಾಗಿವೆ. ವೈನ್‍ನ ರುಚಿ ಮಾರ್ಪಡಿಸಲು ಬಳಸುವ ಕೆಲವು ವಸ್ತಗಳು ಪತ್ತೆಯಾಗಿವೆ. ಅಂಗಡಿಯ ಗೋಡೆಗಳ ಮೇಲೆ ಕೋಳಿ ಹಾಗೂ ಬಾತುಕೋಳಿ ಚಿತ್ರವನ್ನು ಕಾಣಬಹುದಾಗಿದೆ. ಈ ಎಲ್ಲಾ ಚಿತ್ರಣವನ್ನು ಗಮನಿಸಿದ ನಂತರ ಇಲ್ಲಿ ಒಂದು ಹೋಟೆಲ್ ಇದ್ದಿರಬಹುದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

    ಬಹುಶಃ ಜ್ವಾಲಾಮುಖಿ ಸ್ಫೋಟದ ಹಿನ್ನಲೆ ಅಂಗಡಿ ಮುಚ್ಚಿ ಹೋಗಿರಬಹುದು. ಈ ಥರ್ಮೀಪೋಲಿಯಂ ಜನರ ಜೀವನ ಹೇಗಿತ್ತು ಎಂಬುದು ತಿಳಿಯಬಹುದಾಗಿದೆ. ಅಂಗಡಿ ಮಾತ್ರವಲ್ಲದೇ ವ್ಯಕ್ತಿ ಅಸ್ತಪಂಜರವು ದೊರಕಿದೆ. ಸುಮಾರು 50 ವರ್ಷದ ವ್ಯಕ್ತಿ ಎಂದು ಅಂದಾಜಿಸಲಾಗಿದೆ. ರೋಮನ್ ಸಾಮ್ರಾಜ್ಯ ಅತೀ ಶ್ರೀಮಂತ ನಗರದಲ್ಲಿ ಒಂದಾಗಿದ್ದ ಪಾಂಪೆ ಸುಮಾರು 110 ಎಕರೆಯಷ್ಟು ವಿಸ್ತೀರ್ಣವಿದೆ. ಜ್ವಾಲಾಮುಖಿ ಬೂದಿಯಡಿ ಹಲವು ಕಟ್ಟಡಗಳು ಅನೇಕ ವಸ್ತುಗಳು ಹಾಗೂ ಮೃತದೇಹಗಳು ಇಲ್ಲಿ ಹುದುಗಿಹೋಗಿದೆ ಎಂದು ಎಂದು ಆರ್ಕಿಯಾಲಾಜಿಕಲ್ ಪಾಕ್ ಆಫ್ ಪಾಂಪೆಯ ನಿರ್ದೇಶಕ ಮಸ್ಸೀಮೋ ಒಸ್ಸಾನಾ ಹೇಳಿದ್ದಾರೆ.

  • ಕೊರೊನಾದಿಂದ ಮದ್ವೆ ನಿಂತಿದ್ದಕ್ಕೆ ವಧುಗಳ ಪ್ರತಿಭಟನೆ

    ಕೊರೊನಾದಿಂದ ಮದ್ವೆ ನಿಂತಿದ್ದಕ್ಕೆ ವಧುಗಳ ಪ್ರತಿಭಟನೆ

    -ವಿಡಿಯೋ, ಫೋಟೋ ವೈರಲ್

    ರೋಮ್: ಕೊರೊನಾ ಮಹಾಮಾರಿ ತಮ್ಮ ಮದುವೆ ಮುಂದೂಡಿದಕ್ಕೆ ವಧುಗಳು ಪ್ರತಿಭಟನೆ ನಡೆಸಿರುವ ಘಟನೆ ಇಟಲಿಯ ರೋಮ್ ಸಿಟಿಯಲ್ಲಿ ನಡೆದಿದೆ. ಸದ್ಯ ಪ್ರತಿಭಟನೆಯ ಫೋಟೋ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಟ್ರೆವಿ ಫೌಂಟೇನ್ ಬಳಿ ವಧುವಿನಂತೆ ಸಿಂಗಾರಗೊಂಡ ಬಂದ ಯುವತಿಯರು ಕೊರೊನಾ ವಿರುದ್ಧ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಕೊರೊನಾ ತಡೆಗಾಗಿ ಸರ್ಕಾರ ವಿಧಿಸಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ನಮ್ಮ ಮದುವೆ ದಿನಾಂಕ ಮುಂದೂಡಲಾಗಿದೆ ಎಂದು ಪ್ರತಿಭಟನಾನಿತರ ವಧುಗಳು ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನೆ ಮಾತನಾಡಿದ ಓರ್ವ ಯುವತಿ, ಈ ವರ್ಷ ನನ್ನ ಮದುವೆ ಫಿಕ್ಸ್ ಆಗಿತ್ತು. ಆದ್ರೆ ಕೊರೊನಾದಿಂದಾಗಿ ಮದುವೆ ದಿನಾಂಕ ಮುಂದಿನ ವರ್ಷ ಮುಂದೂಡಲಾಗಿದೆ. ಜೀವನದ ಸಮುಧರ ಕ್ಷಣಗಳು ಮುಂದೆ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  • ಕೊರೊನಾ ಸೋಂಕು ಹರಡಿಸಿದಳೆಂದು ಪ್ರೇಯಸಿ ವೈದ್ಯೆಯನ್ನೇ ಕೊಂದ

    ಕೊರೊನಾ ಸೋಂಕು ಹರಡಿಸಿದಳೆಂದು ಪ್ರೇಯಸಿ ವೈದ್ಯೆಯನ್ನೇ ಕೊಂದ

    – ಕೈ ಕಟ್ ಮಾಡ್ಕೊಂಡು ಪೊಲೀಸರಿಗೆ ಫೋನ್
    – ಇಬ್ಬರ ರಿಪೋರ್ಟ್ ನಲ್ಲಿ ಕೊರೊನಾ ನೆಗೆಟಿವ್

    ರೋಮ್: ಕೊರೊನಾ ವೈರಸ್ ಜಗತ್ತಿನಾದ್ಯಂತ ಎಲ್ಲರನ್ನೂ ಭಯಭೀತರನ್ನಾಗಿ ಮಾಡುತ್ತಿದೆ. ಇದೀಗ ಅದೇ ಭಯದಲ್ಲಿ ಕೊರೊನಾ ವೈರಸ್ ಸೋಂಕನ್ನು ತನಗೆ ಹರಡಿದ್ದಾಳೆ ಎಂದು ನರ್ಸ್ ಒಬ್ಬ ತನ್ನ ವೈದ್ಯೆ ಗೆಳತಿಯನ್ನು ಕೊಲೆ ಮಾಡಿರುವ ಘಟನೆ ಇಟಲಿಯಲ್ಲಿ ನಡೆದಿದೆ.

    ವಿದ್ಯಾರ್ಥಿ ಲೊರೆನಾ ಕ್ವಾರಂಟಾ (27) ಕೊಲೆಯಾದ ವೈದ್ಯೆ. ಈಕೆಯ ಪ್ರಿಯಕರ ಆಂಟೋನಿಯೊ ಡಿ ಪೇಸ್ ಕೊಲೆ ಮಾಡಿದ್ದಾನೆ.

    ಏನಿದು ಪ್ರಕರಣ?
    ಮೃತ ಲೊರೆನಾ ಸಿಸಿಲಿಯ ಮೆಸ್ಸಿನಾದಲ್ಲಿರುವ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಳು. ಆರೋಪಿ ಡಿ ಪೇಸ್ ಕೂಡ ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಜಗತ್ತಿನಾದ್ಯಂತ ಕೊರೊನಾ ವ್ಯಾಪಿಸಿರುವುದರಿಂದ ವೈದ್ಯೆ ಲೊರೆನಾ ಕೊರೊನಾ ರೊಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದಳು.

    ಇತ್ತೀಚೆಗೆ ಆರೋಪಿ ಡಿ ಪೇಸ್ ಅನಾರೋಗ್ಯದಿಂದ ಬಳಲುತ್ತಿದ್ದನು. ಆಗ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದೆ. ಇದರಿಂದ ಗಾಬರಿಯಾದ ಆರೋಪಿ ತನ್ನ ಗೆಳತಿ ತನಗೆ ಕೊರೊನಾ ಸೋಂಕು ಹರಡಿಸಿದ್ದಾಳೆ ಎಂದುಕೊಂಡಿದ್ದಾನೆ. ಇದರಿಂದ ಕೋಪಗೊಂಡ ಆರೋಪಿ ಲೊರೆನಾ ನಿದ್ರೆ ಮಾಡುತ್ತಿದ್ದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ತಾನೂ ಕೂಡ ಚಾಕುವಿನಿಂದ ಕೈ ಕಟ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಆರೋಪಿ ಪೊಲೀಸರಿಗೆ ಫೋನ್ ಮಾಡಿ ತಾನು ಪ್ರಿಯತಮೆಯನ್ನು ಕೊಲೆ ಮಾಡಿದ್ದೇನೆ ಎಂದು ತಿಳಿಸಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಹೋದ ಪೊಲೀಸರು ಡಿ ಪೇಸ್ ಕೈಯನ್ನು ಕಟ್ ಮಾಡಿಕೊಂಡಿದ್ದನ್ನು ನೋಡಿದ್ದಾರೆ. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಲೊರೆನಾಳ ಸಹೋದ್ಯೋಗಿಗಳು ಆರೋಪಿಗೆ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ. ಆದರೆ ಲೊರೆನಾ ಅಷ್ಟರಲ್ಲೇ ಮೃತಪಟ್ಟಿದ್ದಳು.

    ಇತ್ತ ಪೊಲೀಸರು ಡಿ ಪೇಸ್‍ನ್ನು ವಿಚಾರಣೆ ಮಾಡಿದ್ದಾರೆ. ಆಗ ಆತ ಲೊರೆನಾ ನನಗೆ ಕೊರೊನಾ ವೈರಸ್ ಸೋಂಕು ಹರಡಿಸಿದ್ದಳು. ಅದಕ್ಕೆ ಕೊಲೆ ಮಾಡಿದೆ ಎಂದು ಹೇಳಿದ್ದಾನೆ. ಆತನ ಹೇಳಿಕೆಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಇಬ್ಬರಿಗೂ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಆದರೆ ವರದಿಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ.

    ಇತ್ತೀಚೆಗೆ ಕೊರೊನಾದ ಬಗ್ಗೆ ಲೊರೆನಾ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡಿದ್ದಳು. “ನಿಮ್ಮ, ನಿಮ್ಮ ಕುಟುಂಬಗಳ ಬಗ್ಗೆ ಮತ್ತು ದೇಶದ ಬಗ್ಗೆ ನೀವು ಗೌರವವನ್ನು ತೋರಿಸಬೇಕು. ನಿಮಗಾಗಿ ಪ್ರತಿದಿನ ತನ್ನ ಜೀವವನ್ನು ಪಣಕ್ಕಿಟ್ಟು ಹೋರಾಟ ಮಾಡುವವರ ಬಗ್ಗೆ ಯೋಚಿಸಬೇಕು. ಹೀಗಾಗಿ ನೀವು ಮನೆಯಲ್ಲಿಯೇ ಇರಬೇಕು. ಹೊರಗಡೆ ಬರಬೇಡಿ ಎಂದು ಬರೆದುಕೊಂಡಿದ್ದಳು.

    ಮೃತ ಲೊರೆನಾ ಸಿಸಿಲಿಯ ಫವಾರಾ ಮೂಲದವಳಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಮೆಸ್ಸಿನಾದಲ್ಲಿ ಒಟ್ಟಿಗೆ ವಾಸವಾಗಿದ್ದರು. ಲೊರೆನಾ ಅವರಿಗೆ ವೈದ್ಯಕೀಯ ಪದವಿಯನ್ನು ಮರಣೋತ್ತರವಾಗಿ ಗೌರವಯುತವಾಗಿ ನೀಡಲಾಗುವುದು ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ತಿಳಿಸಿದ್ದಾರೆ.

  • ನಮ್ಮ ಇಂಡಿಯಾ ಇನ್ನೊಂದು ಇಟಲಿಯಾಗೋದು ಬೇಡ – ಇಟಲಿಯಿಂದ ಕನ್ನಡತಿ ಮನವಿ

    ನಮ್ಮ ಇಂಡಿಯಾ ಇನ್ನೊಂದು ಇಟಲಿಯಾಗೋದು ಬೇಡ – ಇಟಲಿಯಿಂದ ಕನ್ನಡತಿ ಮನವಿ

    – ನಮ್ಮಿಂದ ನಮ್ಮ ದೇಶದ ಜನರಿಗೆ ಎಫೆಕ್ಟ್ ಆಗೋದು ಬೇಡ
    – ನಾನು ಭಾರತಕ್ಕೆ ಬರಲ್ಲ, ಬಂದ್ರೆ ಸೋಂಕು ಆಗಬಹುದು

    ರೋಮ್: ಲಾಕ್‍ಡೌನ್ ಪಾಲನೆ ಮಾಡಿ, ಇಲ್ಲದಿದ್ದರೆ ಅನಾಹುತ ಆಗಬಹುದು. ಇಟಲಿಯಲ್ಲೂ ಕೊರೊನಾ ಸೋಂಕು ಪತ್ತೆ ಆದ ಕೂಡಲೇ ಲಾಕ್‍ಡೌನ್ ಹೇರಿದರು. ಆದರೂ ಲಾಕ್‍ಡೌನ್ ಮೀರಿ ಜನ ಊರೆಲ್ಲ ಸುತ್ತಾಡಿದರು. ಈಗ ಲಾಕ್‍ಡೌನ್ ಮೀರಿದ್ದಕ್ಕೆ ಇಟಲಿಯಲ್ಲಿ ಸಾವು ಹೆಚ್ಚಾಯಿತು ಎಂದು ಇಟಲಿಯಿಂದ ಕನ್ನಡತಿ ಭಾರತೀಯರಿಗೆ ಸಂದೇಶ ರವಾನಿಸಿದ್ದಾರೆ.

    ಮೈಸೂರು ಮೂಲದ ಅನುಶ್ರೀ ಇಟಲಿಯಲ್ಲಿ ನೆಲೆಸಿದ್ದು, ಅಲ್ಲಿಂದಲೇ ವಿಡಿಯೋ ಮಾಡಿ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ಈಗ ಇಟಲಿಯಿಂದ ಮಾತನಾಡುತ್ತಿದ್ದೇನೆ. ಕೊರೊನಾ ವೈರಸ್ ಜಗತ್ತಿನಾದ್ಯಂತ ವ್ಯಾಪಿಸಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಸಾವಿರಾರು ಜನರು ಜೀವ ಕಳೆದುಕೊಂಡಿದ್ದಾರೆ. ಇನ್ನೂ ಸಾವಿರಾರು ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅದರಲ್ಲಿ ಇಟಲಿ ಕೂಡ ಟಾಪ್ ಲಿಸ್ಟಲಿದೆ. ಇಟಲಿಯಲ್ಲೂ 6 ಸಾವಿರಕ್ಕೂ ಅಧಿಕ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

    ಮೊದಲಿಗೆ ಇಟಲಿಯ ಮಿಲನ್‍ನಲ್ಲಿ ಕೊರೊನಾ ವೈರಸ್ ಕಂಡು ಬಂದಿತ್ತು. ಕೊರೊನಾ ವೈರಸ್ ಪತ್ತೆಯಾದ ಒಂದೇ ವಾರಕ್ಕೆ ಇಟಲಿ ಸರ್ಕಾರ ಲಾಕ್‍ಡೌನ್ ಮಾಡಿತ್ತು. ಆದರೆ ಜನರು ಸರ್ಕಾರ ಮಾಡಿದ ನಿಯಮವನ್ನು ಪಾಲಿಸದೇ ಮನೆಯಿಂದ ಹೊರಗಡೆ ಓಡಾಡಲು ಶುರು ಮಾಡಿದರು. ಬೇರೆ ಬೇರೆ ಊರಿಗಳಿಗೆ ಓಡಾಡಲು ಶುರು ಮಾಡಿದರು. ಇದರಿಂದ ಇಡೀ ಇಟಲಿ ದೇಶಾದ್ಯಂತ ವೈರಸ್ ವ್ಯಾಪಿಸಿದ್ದು, ಈಗ ಇಟಲಿ ಸಂಪೂರ್ಣ ಲಾಕ್‍ಡೌನ್ ಆಗಿದೆ.

    ನಾನು ಫೆ.23ರಂದು ಕೊನೆಯ ಬಾರಿಗೆ ಆಫಿಸ್‍ಗೆ ಹೋಗಿದ್ದೆ. ಸುಮಾರು ಒಂದು ತಿಂಗಳಾಯಿತು. ನಾನು ಮನೆಯಲ್ಲಿಯೇ ಇದ್ದೇನೆ, ಹೊರಗಡೆ ಹೋಗಿಲ್ಲ. ಆದರೆ ನಮ್ಮ ಜೀವನ ಕಷ್ಟವಾಗಿಲ್ಲ. ಎರಡು ವಾರಕ್ಕೊಮ್ಮೆ ಮನೆಯಿಂದ ಒಬ್ಬರು ಮಾತ್ರ ಹೊರಗೆ ಹೋಗಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ನಮಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂದರು.

    ಇಟಲಿಯಲ್ಲಿ ಎರಡನೇ ವಾರ ಕೊರೊನಾ ವೈರಸ್ ಇದ್ದಾಗ 245 ಪ್ರಕರಣ ಇತ್ತು. ಈಗ ಇದೇ ಪರಿಸ್ಥಿತಿಯಲ್ಲಿ ನಮ್ಮ ಭಾರತ ಕೂಡ ಇದೆ. ಭಾರತಕ್ಕೆ ಕೊರೊನಾ ವೈರಸ್ ಬಂದು 2 ವಾರ ಆಗಿದೆ. ಇಲ್ಲಿಯವರೆಗೂ 511 ಪಾಸಿಟಿವ್ ಪ್ರಕರಣ ಆಗಿದೆ. ಹೀಗಾಗಿ ದಯವಿಟ್ಟು ಎಲ್ಲರೂ ಮನೆಯಲ್ಲಿರಿ. ಹೊರಗೆ ಬರಬೇಡಿ, ಎಲ್ಲೂ ಹೋಗಬೇಡಿ. ನಮ್ಮ ಭಾರತ ಇನ್ನೊಂದು ಇಟಲಿ ಆಗುವುದು ಬೇಡ. ಇಟಲಿ ಸಣ್ಣ ದೇಶ ಸುಮಾರು 6.5 ಕೋಟಿ ಜನಸಂಖ್ಯೆ ಇದೆ. ನಮ್ಮ ಕರ್ನಾಟಕದಷ್ಟೂ ಇಲ್ಲ. ನಮ್ಮ ಇಂಡಿಯಾದಲ್ಲಿ 1.3 ಬಿಲಿಯನ್ ಜನಸಂಖ್ಯೆ ಇದೆ. ದಯವಿಟ್ಟು ಯೋಚನೆ ಮಾಡಿ ನಮ್ಮಿಂದ ನಮ್ಮ ದೇಶದ ಜನರಿಗೆ ಎಫೆಕ್ಟ್ ಆಗುವುದು ಬೇಡ. ಸುಮ್ಮನೆ ಬೇರೆ ಕಡೆಗೆ ಪ್ರಯಾಣ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.

    ನಾನು ಭಾರತಕ್ಕೆ ಬರಬಹುದು. ಯಾರೂ ಕೂಡ ಬರಬೇಡ ಎಂದು ಹೇಳಿಲ್ಲ. ನಾನು ಒಂದು ತಿಂಗಳಿಂದ ಮನೆಯಲ್ಲಿದ್ದೀನಿ. ಯಾವುದೇ ಕೊರೊನಾ ಲಕ್ಷಣ ನನಗಿಲ್ಲ. ನಾನು ಆರಾಮಾಗಿ ಪ್ರಯಾಣ ಮಾಡಬಹುದು. ಆದರೆ ಪ್ರಯಾಣ ಮಾಡುವಾಗ ಕೊರೊನಾ ವೈರಸ್ ಸೋಂಕು ಆಗಬಹುದು. ನಾನು ಬಂದು 14 ದಿನ ಕ್ವಾರಂಟೈನ್‌ನಲ್ಲಿ ಇರುವಾಗ ಇನ್ನೂ ನಾಲ್ವರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಆದ್ದರಿಂದ ನಾನು ಭಾರತಕ್ಕೆ ಬರುತ್ತಿಲ್ಲ. ಭಾರತದಲ್ಲಿ ಇನ್ನೂ ಹೆಚ್ಚಾಗಿ ಕೊರೊನಾ ವೈರಸ್ ಆಗುವುದು ಬೇಡ. ಯಾರೂ ಪ್ರಯಾಣ ಮಾಡಬೇಡಿ. ಮನೆಯಲ್ಲಿರಿ ಎಂದು ಅನುಶ್ರೀ ಮನವಿ ಮಾಡಿಕೊಂಡಿದ್ದಾರೆ.

  • ಇಟಲಿಯಲ್ಲಿ ಕೊರೊನಾ ಅಟ್ಟಹಾಸ – ಒಂದೇ ದಿನ 651 ಸಾವು

    ಇಟಲಿಯಲ್ಲಿ ಕೊರೊನಾ ಅಟ್ಟಹಾಸ – ಒಂದೇ ದಿನ 651 ಸಾವು

    – ಒಂದೇ ದಿನದಲ್ಲಿ 5,560 ಹೊಸ ಪ್ರಕರಣ ಪತ್ತೆ

    ರೋಮ್: ಜಗತ್ತಿನಲ್ಲಿ ಮಹಾಮಾರಿ ಕೊರೊನಾ ತನ್ನ ಪಟ್ಟನ್ನು ಬಿಗಿಗೊಳಿಸುತ್ತಿದೆ. ಒಟ್ಟು 188 ದೇಶಗಳಿಗೆ ವಿಸ್ತರಿಸಿರುವ ಕೊರೊನಾ, 13 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. 3 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ವ್ಯಾಪಿಸಿದೆ. ಇದೀಗ ಇಟಲಿಯಲ್ಲಿ ಒಂದೇ ದಿನ 651 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

    ಇಟಲಿಯೊಂದರಲ್ಲೇ ನಿನ್ನೆ ಒಂದೇ ದಿನ 800ಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿ ಆಗಿದ್ದರು. ಇಂದು 651 ಮಂದಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾರೆ. ಅಲ್ಲದೇ ಇಂದು 5560 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ.

    ಇದೀಗ ಇಟಲಿಯೊಂದರಲ್ಲೇ ಮೃತರ ಸಂಖ್ಯೆ 5,500ಕ್ಕೆ ಏರಿಕೆ ಆಗಿದೆ. ಸೋಂಕಿಗೆ ಈವರೆಗೆ ಇಟಲಿಯಲ್ಲಿ ಸುಮಾರು 59,138 ಮಂದಿ ತುತ್ತಾಗಿದ್ದು, ಅವರಲ್ಲಿ 6,072 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 42,681 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ.

    ಇರಾನ್‍ನಲ್ಲಿ 1556, ಸ್ಪೇನ್‍ನಲ್ಲಿ 1381, ಫ್ರಾನ್ಸ್‌ನಲ್ಲಿ 562, ಬ್ರಿಟನ್‍ನಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅನೇಕ ದೇಶಗಳನ್ನು ನಿರ್ಬಂಧದಲ್ಲಿ ಇಟ್ಟಿದೆ. ಜನರನ್ನು ಮನೆಗೆ ಸೀಮಿತ ಮಾಡಿದೆ. ಆಫ್ರಿಕಾ ಖಂಡಕ್ಕೂ ಕೊರೊನಾ ವಿಸ್ತರಿಸುತ್ತಿದೆ. ಆಫ್ರಿಕಾದ 41 ದೇಶಗಳಲ್ಲಿ ಕೊರೊನಾ ಸೋಂಕು ಕಂಡುಬಂದಿದೆ.

    ಚೀನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ, ಸ್ಪೇನ್, ಫ್ರಾನ್ಸ್, ಜರ್ಮನಿ, ಅಮೆರಿಕದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಮರಣ ಮೃದಂಗ ಭಾರಿಸುತ್ತಿತ್ತು. ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಯ ಸತತ ಪರಿಶ್ರಮ, ಸರ್ಕಾರದ ಕ್ರಮಗಳಿಂದ ಚೀನಾದಲ್ಲಿ ಸದ್ಯ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೆ ಇಟಲಿಯಲ್ಲಿ ವ್ಯಾಪಕವಾಗಿ ಕೊರೊನಾ ಹರಡುತ್ತಿದ್ದು, ಶನಿವಾರ ಒಂದೇ ದಿನಕ್ಕೆ 793 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

  • ಕಫ, ಕೆಮ್ಮು ಆಯ್ತು ಈಗ ಕೊರೊನಾ ಸೋಂಕಿತರಿಗೆ ವಾಸನೆ, ರುಚಿ ಗ್ರಹಿಸುವ ಶಕ್ತಿ ಇರಲ್ಲ

    ಕಫ, ಕೆಮ್ಮು ಆಯ್ತು ಈಗ ಕೊರೊನಾ ಸೋಂಕಿತರಿಗೆ ವಾಸನೆ, ರುಚಿ ಗ್ರಹಿಸುವ ಶಕ್ತಿ ಇರಲ್ಲ

    ರೋಮ್: ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕು ತಗುಲಿದ ಕೆಲವರಿಗೆ ವಾಸನೆ ಗ್ರಹಿಸುವ ಹಾಗೂ ರುಚಿ ತಿಳಿಯುವ ಶಕ್ತಿ ಇರುವುದಿಲ್ಲ ಎನ್ನುವ ವಿಚಾರ ಸಂಶೋಧನೆಯಿಂದ ತಿಳಿದು ಬಂದಿದೆ.

    ಇಟಲಿಯಲ್ಲಿ ಸೋಂಕಿಗೆ ತುತ್ತಾದ ರೋಗಿಯೊಬ್ಬರು ಈ ಬಗ್ಗೆ ತಿಳಿಸಿದ್ದಾರೆ. ನಾನು 2-3 ವಾರದ ಹಿಂದೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದೆ. ಆದರೆ ಈಗ ನಾನು ಸಂಪೂರ್ಣ ಗುಣವಾಗಿದ್ದೇನೆ. ನನಗೆ ಸೋಂಕು ತಗುಲಿದ್ದಾಗ ಯಾವುದೇ ವಾಸನೆ ಹಾಗೂ ರುಚಿಯನ್ನು ಗ್ರಹಿಸುವ ಶಕ್ತಿ ನನಗಿರಲಿಲ್ಲ. ನಗರದಲ್ಲಿ ಕೊರೊನಾ ವೈರಸ್ ಹರಡುತ್ತಿದೆ ಎಂದು ತಿಳಿದಾಗ ನಾನು ಮನೆಯನ್ನು ಫಿನಾಯಿಲ್ ಹಾಕಿ ಸ್ವಚ್ಛಗೊಳಿಸಿದ್ದೆ. ಆಗ ನನಗೆ ಫಿನಾಯಿಲ್ ವಾಸನೆ ಗ್ರಹಿಸುವ ಸಾಧ್ಯವಾಗಿರಲಿಲ್ಲ. ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಬಳಸುವಾಗಲೂ ಅದರ ವಾಸನೆ ನನಗೆ ಬರುತ್ತಿರಲಿಲ್ಲ. ಯಾವುದೇ ಅಡುಗೆಯ ರುಚಿ ಕೂಡ ತಿಳಿಯುತ್ತಿರಲಿಲ್ಲ. ಬಳಿಕ ನಾನು ಪರೀಕ್ಷೆ ಮಾಡಿಸಿದಾಗ ಕೊರೊನಾ ತಗುಲಿರುವುದು ದೃಢಪಟ್ಟಿತ್ತು ಎಂದು ಸೋಂಕಿನಿಂದ ಗುಣಪಟ್ಟ ಮಹಿಳೆ ತಿಳಿಸಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.

    ಇಟಲಿಯಲ್ಲಿ ಕೊರೊನಾ ಸೋಂಕು ಮೊದಲು ಕಾಣಿಸಿಕೊಂಡಾಗ ನಿರ್ಲಕ್ಷಿಸಲಾಯ್ತು. ಈ ಸೋಂಕಿನ ಲಕ್ಷಣಗಳೇನು? ರೋಗಿಗಳಿಗೆ ಸೋಂಕು ತಗುಲಿದಾಗ ಅವರ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು ಎಂದು ವೈಜ್ಞಾನಿಕವಾಗಿ ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ತೋರಲಿಲ್ಲ. ಹೀಗಾಗಿ ಇಟಲಿಯಲ್ಲಿ ಕೊರೊನಾ ವ್ಯಾಪಾಕವಾಗಿ ಹರಡುತ್ತಿದೆ.

    ಇತ್ತ ಜರ್ಮನಿ ಮೂಲದ ವೈರಾಲಸ್ಟಿಲ್ ಹೆಂಡ್ರಿಕ್ ಸ್ಟ್ರೀಕ್ ಕೊರೊನಾ ಬಗ್ಗೆ ಸಂಶೋಧನೆ ಮಾಡುತ್ತಿದ್ದು, ಕೊರೊನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ರೋಗ ಲಕ್ಷಣಗಳ ಬಗ್ಗೆ ಅಧ್ಯಯನ ಮಾಡಲು ಆರಂಭಿಸಿದರು. ಜರ್ಮನಿಯಲ್ಲಿ ಸೋಂಕು ಹರಡಿದಾಗ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದ್ದ ಸೋಂಕಿತ ರೋಗಿಗಳು ರಕ್ತದ ಸ್ಯಾಂಪಲ್‍ಗಳನ್ನು ಪ್ರತಿ ದಿನ ಸಂಗ್ರಹಿಸಿ, ಸಂಶೋಧನಗೆ ಬಳಸಿಕೊಳ್ಳುವ ಅವಕಾಶ ಸ್ಟ್ರೀಕ್ ತಂಡಕ್ಕೆ ಸಿಕ್ಕಿತು.

    ಈ ಬಗ್ಗೆ ಸ್ಟ್ರೀಕ್ ಸಂದರ್ಶನವೊಂದರಲ್ಲಿ ತಿಳಿಸಿದ್ದು, ಹಾನ್ಸ್‌ಬರ್ಗ್ ನಲ್ಲಿ ಸೋಂಕು ತಗುಲಿದ್ದ ಪ್ರತಿಯೊಬ್ಬ ರೋಗಿಯ ಮನೆಗೆ ನಮ್ಮ ತಂಡವರು ಭೇಟಿ ಕೊಟ್ಟು ಮಾಹಿತಿ ಕಲೆಹಾಕಿದರು. ಸೋಂಕನಿಂದ ಬಳಲಿ ಗುಣಮುಖರಾದವರ ಬಳಿ ಕೂಡ ಸೋಂಕಿನ ರೋಗ ಲಕ್ಷಣಗಳೇನು? ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡೆವು. ನಾವು ಮಾಹಿತಿ ಕಲೆಹಾಕಿದ ಶೇ. 75ರಷ್ಟು ಪ್ರಕರಣಗಳಲ್ಲಿ ರೋಗಿಗಳು ವಾಸನೆ ಗ್ರಹಿಸುವ ಹಾಗೂ ರುಚಿ ಗುರುತಿಸುವ ಶಕ್ತಿಯನ್ನು ಕಳೆದುಕೊಂಡಿದ್ದರು ಎಂಬುದು ತಿಳಿದು ಬಂದಿದೆ. ಆದರೆ ಈ ರೋಗ ಲಕ್ಷಣ ಯಾವಾಗ ಕಾಣಿಸಿಕೊಳ್ಳುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಸೋಂಕು ತಗುಲಿದ ಕೆಲ ಸಮಯದ ಬಳಿಕ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

    ಮಿಲನ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ಪ್ರಾಧ್ಯಪಕ ಮಿಸ್ಸಿಮೊ ಗಲ್ಲಿ ಅವರು ಕೂಡ ಕೊರೊನಾ ರೋಗ ಲಕ್ಷಣಗಳ ಬಗ್ಗೆ ತಿಳಿಸಿದ್ದಾರೆ. ಕೊರೊನಾ ಸೋಂಕಿತ ಬಹುತೇಕ ರೋಗಿಗಳಲ್ಲಿ ವಾಸನೆಯನ್ನು ಹಾಗೂ ರುಚಿಯನ್ನು ಗುರುತಿಸುವ ಶಕ್ತಿ ಇರುವುದಿಲ್ಲ. ಸೋಂಕು ತಗುಲಿದ ಆರಂಭಿಕ ಹಂತದಲ್ಲಿ ಈ ಲಕ್ಷಣದ ಬಗ್ಗೆ ನಿಖರವಾಗಿ ತಿಳಿಯುವುದಿಲ್ಲ. ಇದೊಂದು ಕೊರೊನಾ ಸೊಂಕಿನ ಅಸಾಮಾನ್ಯ ಲಕ್ಷಣ ಎಂದು ತಿಳಿಸಿದ್ದಾರೆ.

    ಸದ್ಯ ಈ ಲಕ್ಷಣಗಳು ಕೊರೊನಾ ಸೋಂಕಿನ ಲಕ್ಷಣವೇ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಕೆಲ ವೈರಸ್‍ಗಳು ದೇಹಕ್ಕೆ ಸೇರಿದರೆ ಸೋಂಕಿತ ವ್ಯಕ್ತಿಯ ಮೂಗಿನಲ್ಲಿರುವ ಕೋಶಗಳು ಹಾಗೂ ಕೋಶ ಗ್ರಾಹಕಗಳನ್ನು ನಾಶಮಾಡುತ್ತದೆ. ಕೆಲ ವೈರಸ್‍ಗಳು ಸಂವೇದನಾ ನರಗಳ ಮೂಲಕ ಮೆದುಳನ್ನು ಪ್ರವೇಶಿಸಿ ಹಾನಿ ಮಾಡುತ್ತದೆ. ಇನ್ನೂ ಕೆಲ ವೈರಸ್‍ಗಳು ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಇರಾನ್‍ನಲ್ಲಿ ವರದಿಯಾದ ಒಂದು ಕೊರೊನಾ ಸೋಂಕಿತ ಪ್ರಕರಣದಲ್ಲಿ ರೋಗಿ ವಾಸನೆ ಗೃಹಿಸುವ ಶಕ್ತಿ ಜೊತೆಗೆ ದೃಷ್ಟಿ ಕಳೆದುಕೊಂಡಿದ್ದಾರೆ ಎಂಬುದು ವರದಿಯಾಗಿದೆ.

  • ಲಾಕ್‍ಡೌನ್ ಆಗಿದ್ರು ನಿಯಮ ಉಲ್ಲಂಘಿಸಿ ಕಾರಿನಲ್ಲೇ ಜೋಡಿಯಿಂದ ಸೆಕ್ಸ್

    ಲಾಕ್‍ಡೌನ್ ಆಗಿದ್ರು ನಿಯಮ ಉಲ್ಲಂಘಿಸಿ ಕಾರಿನಲ್ಲೇ ಜೋಡಿಯಿಂದ ಸೆಕ್ಸ್

    – ಕೊರೊನಾ ನಿಯಮ ಉಲ್ಲಂಘಿಸಿದ್ದಕ್ಕೆ ಜೋಡಿ ಅರೆಸ್ಟ್
    – 40ರ ಮಹಿಳೆ ಜೊತೆ 23ರ ಯುವಕ ದೈಹಿಕ ಸಂಪರ್ಕ

    ರೋಮ್: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಟಲಿಯನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ. ಹೀಗಿರುವಾಗ ಜೋಡಿ ನಿಯಮ ಉಲ್ಲಂಘಿಸಿ ಕಾರಿನಲ್ಲಿಯೇ ಸೆಕ್ಸ್ ಮಾಡಿ ಅರೆಸ್ಟ್ ಆಗಿದ್ದಾರೆ.

    ಸೋಮವಾರ ಇಟಲಿಯ ಮಿಲನ್‍ನ ಹೊರವಲಯದಲ್ಲಿರುವ ಮೆಕೆನೇಟ್‍ನಲ್ಲಿ 23 ವರ್ಷದ ಯುವಕ 40 ವರ್ಷದ ಮಹಿಳೆ ಜೊತೆ ಕಾರಿನಲ್ಲಿಯೇ ದೈಹಿಕ ಸಂಬಂಧ ಬೆಳೆಸುತ್ತಿದ್ದನು. ಇದನ್ನು ನೋಡಿದ ಪೊಲೀಸರು ಯುವಕ ಹಾಗೂ ಮಹಿಳೆಯನ್ನು ಬಂಧಿಸಿದ್ದಾರೆ.

    ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದಕ್ಕೆ ಇಟಲಿಯಲ್ಲಿ ಒಂದೇ ಕಾರಿನಲ್ಲಿ ಅದು ಪಕ್ಕಪಕ್ಕ ಸೀಟಿನಲ್ಲಿ ಕುಳಿತು ಪ್ರಯಾಣಿಸಬಾರದು ಎಂದು ನಿಯಮ ಜಾರಿ ಮಾಡಿದೆ. ವರದಿಯ ಪ್ರಕಾರ, ಜೋಡಿ ಈ ನಿಯಮವನ್ನು ಉಲ್ಲಂಘಿಸಿ ದೈಹಿಕ ಸಂಪರ್ಕ ಬೆಳೆಸಿದೆ ಎಂದು ಹೇಳಲಾಗಿದೆ.

    ಇಟಲಿ ಸರ್ಕಾರ ಜನರಿಗೆ ಕೇವಲ ಊಟ ಹಾಗೂ ಔಷಧಿಗಳನ್ನು ಖರೀದಿಸಲು ಹಾಗೂ ಅದನ್ನು ಕೊಡಲು ಮಾತ್ರ ಮನೆಯಿಂದ ಹೊರ ಬರಲು ಅನುಮತಿ ನೀಡಿದೆ. ಅಲ್ಲದೆ ತುಂಬಾ ಅವಶ್ಯಕತೆ ಇದ್ದರೆ ಮಾತ್ರ ಕೆಲಸಕ್ಕೆ ಪ್ರಯಾಣ ಬೆಳೆಸಬೇಕು ಎಂದು ಆದೇಶ ನೀಡಲಾಗಿದೆ.

    ಸೋಂಕಿಗೆ ಈವರೆಗೆ ಇಟಲಿಯಲ್ಲಿ ಸುಮಾರು 35,713 ಮಂದಿ ತುತ್ತಾಗಿದ್ದು, ಅವರಲ್ಲಿ 4,025 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 28,710 ಮಂದಿ ಕೊರೊನಾದಿಂದ ಬಳಲುತ್ತಿದ್ದು, 2,978 ಮಂದಿ ಮೃತಪಟ್ಟಿದ್ದಾರೆ.

  • ‘ಪ್ಲೀಸ್ ನಮ್ಮನ್ನು ರಕ್ಷಿಸಿ’ – ಇಟಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ 50ಕ್ಕೂ ಹೆಚ್ಚು ಕನ್ನಡಿಗರು

    ‘ಪ್ಲೀಸ್ ನಮ್ಮನ್ನು ರಕ್ಷಿಸಿ’ – ಇಟಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ 50ಕ್ಕೂ ಹೆಚ್ಚು ಕನ್ನಡಿಗರು

    – ಪಬ್ಲಿಕ್ ಟಿವಿ ಜೊತೆ ನೋವು ತೋಡಿಕೊಂಡ ಪ್ರಯಾಣಿಕರು
    – ಕೊರೊನಾಗೆ ಇಟಲಿ ಬಂದ್
    – ಪ್ರತಿ ದಿನ ನಿಯಮ ಬದಲಾಗುತ್ತಿದೆ

    ರೋಮ್: ಕೊರೊನಾ ದಾಳಿಗೆ ಇಟಲಿ ಸಂಪೂರ್ಣ ಬಂದ್ ಆಗಿದ್ದು, ರೋಮ್ ಏರ್‌ಪೋರ್ಟ್‌ನಲ್ಲಿ 50ಕ್ಕೂ ಹೆಚ್ಚು ಕನ್ನಡಿಗರು ಸಿಲುಕಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು ಪಬ್ಲಿಕ್ ಟಿವಿ ಜೊತೆ ಮಾತನಾಡುವ ಮೂಲಕ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.

    ನಿರುಪಮಾ ಗೌಡ ಎಂಬವರು ಮಾತನಾಡಿ, “ನಾವೆಲ್ಲಾ ಇಲ್ಲಿ ಸಿಲುಚಿನಿ ಏರ್‌ಪೋರ್ಟ್‌ನಲ್ಲಿ ಸಿಲುಕಿ ಹಾಕಿಕೊಂಡಿದ್ದೇವೆ. ಭಾರತದಿಂದ ಫ್ಲೈಟ್ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದೇವೆ. ಯಾವಾಗ ಬರುತ್ತೆ ಎನ್ನುವ ಮಾಹಿತಿಯೇ ಇನ್ನು ಸಿಕ್ಕಿಲ್ಲ. ಬುಧವಾರ ಸಂಜೆಯಿಂದ ನಾವು ಕಾಯುತ್ತಿದ್ದೇವೆ. ನಾವು ಏರ್‍ ಇಂಡಿಯಾ ಫ್ಲೈಟ್ ಬುಕ್ ಮಾಡಿದ್ದೇವೆ. ಆದರೆ ಇದುವರೆಗೆ ಯಾವುದೇ ಅಪ್ಡೇಟ್ ಬಂದಿಲ್ಲ. ಚಿಕ್ಕಪುಟ್ಟ ದೇಶವಾದ ಶ್ರೀಲಂಕಾದವರನ್ನು ಹಾಗೂ ಬೇರೆ ದೇಶದವರನ್ನು ಕರೆಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ದೇಶದಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ. ನಾವು ಈವರೆಗೆ ಆರೋಗ್ಯವಾಗಿದ್ದೇವೆ. ಇನ್ನು 2 ದಿನ ಇಲ್ಲೇ ಇದ್ದರೆ ಆರೋಗ್ಯ ಸಮಸ್ಯೆ ಎದುರಾಗುತ್ತೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಮದನ್ ಗೌಡ ಎಂಬವರು,”ನಾನು ಸೋಮವಾರ ಫ್ಲೈಟ್ ಬುಕ್ ಮಾಡಿದ್ದೆ. ಏರ್ ಇಂಡಿಯಾ ವೆಬ್‍ಸೈಟ್‍ನಲ್ಲಿ ಯಾವುದೇ ದಾಖಲೆ ಕಡ್ಡಾಯ, ನೀವು ಕೊಡಲೇಬೇಕು ಎಂದು ಕೊಟ್ಟಿರಲಿಲ್ಲ. ನಾವು ರಾಯಭಾರ ಜೊತೆ ಮಾತನಾಡಿದ್ದೇವೆ. ಇಟಲಿಯಲ್ಲಿ ಹೊರಗಡೆ ಬರುವುದಕ್ಕೆ ಜನರು ಹೆದರುತ್ತಿದ್ದಾರೆ. ಇಟಲಿ ಸರ್ಕಾರ ತುಂಬಾ ಕಠಿಣವಾದ ರೂಲ್ಸ್ ತರುತ್ತಿದೆ. ಪ್ರತಿದಿನ ರೂಲ್ಸ್ ಚೇಂಜ್ ಆಗುತ್ತಿದೆ. ವಿಮಾನ ನಿಲ್ದಾಣದಲ್ಲಿ ತುಂಬಾ ರಿಸ್ಕ್ ಇದೆ. ಇಲ್ಲಿ ಫ್ಲೈಟ್ ಟೈಮ್ಮಿಂಗ್ ಚೇಂಜ್ ಮಾಡುತ್ತಿದ್ದಾರೆ. ಏರ್‌ಪೋರ್ಟ್‌ನಲ್ಲಿ ಸೋಂಕು ಹರಡುವ ಸಾಧ್ಯತೆ ಜಾಸ್ತಿ ಇದೆ. ಹೊರಗಡನೇ ಹೋಗಬಾರದು ಎನ್ನುವ ಈ ಟೈಮಲ್ಲಿ ಏನೂ ಮಾಹಿತಿ ಕೊಡದೇ ಏರ್‌ಪೋರ್ಟ್‌ನಲ್ಲಿ ಕೂಡಿ ಹಾಕಿದ್ರೆ ಎಷ್ಟು ಜನರಿಗೆ ಸೋಂಕು ಹರಡಬಹುದು. ನೀವೇ ನಿಮ್ಮ ಪ್ರಜೆಗಳನ್ನು ರಿಸ್ಕ್ ಗೆ ಸಿಲುಕಿಸುತ್ತಿದ್ದೀರ. ಯಾರಿಗಾದರೂ ಸೋಂಕು ತಗುಲಿದರೆ ಇದಕ್ಕೆಲ್ಲಾ ನೇರ ಕಾರಣ ಭಾರತ ಸರ್ಕಾರ ಹಾಗೂ ಏರ್ ಇಂಡಿಯಾನೇ ಎಂದು ಆಕ್ರೋಶ ಹೊರಹಾಕಿದರು.

    ಇದೇ ವೇಳೆ ಮತ್ತೊಬ್ಬ ವ್ಯಕ್ತಿ,”ಏರ್ ಇಂಡಿಯಾ ವಿಮಾನದಲ್ಲಿ ನಮ್ಮನ್ನು ಕರೆದೊಯ್ದಿಲ್ಲ. ನಾವು ವಾರದ ಮುಂಚೆಯೇ ಟಿಕೆಟ್ ಬುಕ್ ಮಾಡಿದ್ದೀವಿ. ಆದರೆ ಇಲ್ಲಿ ಈಗ ಮೆಡಿಕಲ್ ಸರ್ಟಿಫಿಕೇಟ್ ನೀಡಬೇಕೆಂದು ಹೇಳುತ್ತಿದ್ದಾರೆ. ಸರ್ಟಿಫಿಕೇಟ್ ನೀಡಿದ ಮೇಲೆ ಪರಿಶೀಲಿಸಿ ನಿಮ್ಮ ಪ್ರಯಾಣವನ್ನು ರೀಶೆಡ್ಯೂಲ್ ಮಾಡುತ್ತೇವೆ ಎನ್ನುತ್ತಿದ್ದಾರೆ. ನಮಗೆ ಮಾಹಿತಿ ನೀಡಲೂ ಸಹ ಇಲ್ಲಿ ಯಾರೂ ಇಲ್ಲ. ನಾವು ಇಲ್ಲಿ ಸಿಲುಕಿಕೊಂಡಿದ್ದೇವೆ. ದಯವಿಟ್ಟು ನಮ್ಮನ್ನು ಇಲ್ಲಿಂದ ರಕ್ಷಿಸಬೇಕೆಂದು ಮನವಿ ಮಾಡುತ್ತೇನೆ” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

     

     

     

     

     

     

     

     

    ಡಿಸಿಎಂ ಅಶ್ವಥ್ ನಾರಾಯಣ ತನ್ನ ಟ್ವಿಟ್ಟರಿನಲ್ಲಿ, ಇಟಲಿ ಸೇರಿದಂತೆ ಕೊರೊನಾ ಪೀಡಿತ ಹೊರದೇಶಗಳಲ್ಲಿರುವ ಕನ್ನಡಿಗರನ್ನು ಕರೆತರಲು ನಮ್ಮ ಸರ್ಕಾರ ಕೇಂದ್ರದ ಪ್ರಧಾನಿ ಮೋದಿ ಸರ್ಕಾರದ ಜೊತೆಗೆ ಸಹಕರಿಸಿ ಕಾರ್ಯೋನ್ಮುಖವಾಗಿದೆ. ತಜ್ಞ ವೈದ್ಯರನ್ನು ಕರೆದುಕೊಂಡು ಹೋಗಿ ಅಲ್ಲಿಯೇ ತೀವ್ರ ತಪಾಸಣೆಗೆ ಒಳಪಡಿಸಿ ಸುರಕ್ಷತೆಯಿಂದ ಅವರನ್ನು ಇಲ್ಲಿಗೆ ವಾಪಸ್ ಕರೆತರಲಾಗುವುದು ಎಂದು ಟ್ವೀಟ್ ಮಾಡಿ ಭರವಸೆ ನೀಡಿದ್ದಾರೆ.