ಹಾಸನ: ಪ್ರೌಢಶಾಲಾ ಶಿಕ್ಷಕರಿಗೆ ಪರೀಕ್ಷೆ ನಡೆಸಲು ಮುಂದಾಗಿದ್ದ ರೋಹಿಣಿ ಸಿಂಧೂರಿಗೆ ತೀವ್ರ ಹಿನ್ನಡೆಯಾಗಿದೆ. ಜುಲೈ 28ಕ್ಕೆ ಪ್ರೌಢಶಾಲಾ ಶಿಕ್ಷಕರಿಗೆ ಪರೀಕ್ಷೆ ನಡೆಸಲು ಹಾಸನ ಜಿಲ್ಲಾದಿಕಾರಿ ಸಿಂಧೂರಿ ತೀರ್ಮಾನಿಸಿದ್ದರು.
ಆದ್ರೆ ಡಿಸಿ ನಿರ್ಧಾರಕ್ಕೆ ಈಗ ಸರ್ಕಾರದಿಂದ ಬ್ರೇಕ್ ಬಿದ್ದಿದೆ. ಪರೀಕ್ಷೆ ನಡೆಸದಂತೆ ನಿರ್ದೇಶನ ನೀಡೋದಾಗಿ ಶಿಕ್ಷಣ ಸಚಿವರು ಸದನಕ್ಕೆ ಲಿಖಿತ ಉತ್ತರ ನೀಡಿದ್ದಾರೆ. ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮಗೊಳಿಸಲು ಡಿಸಿ ಸಿಂಧೂರಿ ಶಿಕ್ಷಕರಿಗ ಪರೀಕ್ಷೆ ನಿಗದಿಗೊಳಿಸಿದ್ದರು.
ಬದಲಾದ ಪಠ್ಯ ಕ್ರಮಕ್ಕೆ ಶಿಕ್ಷಕರು ಹೊಂದಿಕೊಂಡಿರುವ ಬಗ್ಗೆ ಪರಿಶೀಲಿಸಲು ರೋಹಿಣಿ ಸಿಂಧೂರಿ ಈ ಪರೀಕ್ಷೆ ನಡೆಸಲು ಮುಂದಾಗಿದ್ದರು. ಆದರೆ ಈಗ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯ ಶಿಕ್ಷಕರಿಗೆ ನಿಗದಿಯಾಗಿದ್ದ ಪರೀಕ್ಷೆ ರದ್ದಾಗಿದೆ. ವಿಧಾನ ಪರಿಷತ್ ನಲ್ಲಿ ಈ ಬಗ್ಗೆ ಶಿಕ್ಷಣ ಸಚಿವ ಎನ್.ಮಹೇಶ್ ಲಿಖಿತ ಉತ್ತರ ನೀಡಿದ್ದು, ತರಬೇತಿ ಮೂಲಕವೇ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಪರೀಕ್ಷೆಯ ಅವಶ್ಯಕತೆ ಇಲ್ಲವೆಂದು ತಿಳಿಸಿದ್ದಾರೆ.
ಪರೀಕ್ಷೆ ನಡೆಸದಂತೆ ನಿರ್ದೇಶನ ನೀಡಿರುವುದಕ್ಕೆ ಪರಿಷತ್ ಸದಸ್ಯ ಮರಿತಿಬ್ಬೆಗೌಡರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಈ ವೇಳೆ ಉದ್ದೇಶಿತ ಪರೀಕ್ಷೆಯಿಂದ ಶಿಕ್ಷಕರ ಬೋಧನಾ ಆಸಕ್ತಿ ಕಡಿಮೆಯಾಗಲಿದ್ದು, ಶಿಕ್ಷಕರು ಆತಂಕ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆಂದು ಸದಸ್ಯ ಮರಿತಿಬ್ಬೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರೀಯ ಆಡಳಿತ ನ್ಯಾಯಮಂಡಳಿ(ಸಿಎಟಿ) ಏ.17ರಂದು ನೀಡಿದ್ದ ಆದೇಶ ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಸೋಮವಾರ ನ್ಯಾ.ಎಚ್.ಜಿ.ರಮೇಶ್ ಹಾಗೂ ನ್ಯಾ.ಪಿ.ಎಂ.ನವಾಜ್ ನೇತೃತ್ವದ ವಿಭಾಗೀಯಪೀಠದಲ್ಲಿ ನಡೆಯಿತು. ವಿಚಾರಣೆ ವೇಳೆ ಹಾಸನ ಡಿಸಿಯಾಗಿ ಮುಂದುವರಿಸಲು ಸರ್ಕಾರದ ಪರ ಎಎಜಿ ಪೊನ್ನಣ್ಣ ಒಲವು ವ್ಯಕ್ತಪಡಿಸಿದರು.
ಸರ್ಕಾರ ತನ್ನ ಅಭಿಪ್ರಾಯ ತಿಳಿಸಿದ ಕೂಡಲೇ ಹೈಕೋರ್ಟ್ ಹಾಲಿ ಜಿಲ್ಲಾಧಿಕಾರಿಯಾಗಿರುವ ರಣದೀಪ್ ಅವರನ್ನು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಲು ಆದೇಶ ನೀಡಿತು. ಈ ಆದೇಶವನ್ನು ಪ್ರಕಟಿಸುವ ಮೂಲಕ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯನ್ನು ಪೀಠ ಇತ್ಯರ್ಥ ಪಡಿಸಿತು. ಹೈಕೋರ್ಟ್‍ನಿಂದ ಆದೇಶ ಪ್ರಕಟವಾದ ಕೂಡಲೇ ಸರ್ಕಾರ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರ ಹಾಸನಕ್ಕೆ ಅಧಿಕೃತವಾಗಿ ವರ್ಗಾವಣೆಗೊಳಿಸಿತು.
ಏನಿದು ಪ್ರಕರಣ?
ನಿಯಮಗಳ ವಿರುದ್ಧವಾಗಿ ಅವಧಿಗೂ ಮುನ್ನ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಅವರು ಸಿಎಟಿ ಮೊರೆ ಹೋಗಿದ್ದರು. ರೋಹಿಣಿ ಸಿಂಧೂರಿ ವರ್ಗಾವಣೆ ಆದೇಶವನ್ನು ಮಾ.6 ರಂದು ಹಿಂದಕ್ಕೆ ಪಡೆದಿದ್ದ ರಾಜ್ಯ ಸರ್ಕಾರ ಮಾ.7 ರಂದು ವರ್ಗಾವಣೆ ಮಾಡಿತ್ತು. ಒಟ್ಟು 12 ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು ರೋಹಿಣಿ ಅವರನ್ನು ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರನ್ನಾಗಿ ನೇಮಿಸಿ ವರ್ಗಾವಣೆ ಆದೇಶ ಹೊರಡಿಸಿತ್ತು. ಈ ಆದೇಶವನ್ನು ರೋಹಿಣಿ ಸಿಂಧೂರಿ ಕೇಂದ್ರೀಯ ಆಡಳಿತ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿದ್ದರು. ಸಿಎಟಿ ಸರ್ಕಾರದ ಪರ ಆದೇಶ ನೀಡಿದ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಯಾರು ರೋಹಿಣಿ ಸಿಂಧೂರಿ?:
ಈ ಹಿಂದೆ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರು. ರಾಜ್ಯದಲ್ಲಿ ಮೊದಲ ಬಾರಿಗೆ ಭೂ ದಾಖಲೆಗಳ ಕುರಿತಂತೆ ವಿನ್ಯಾಸಗೊಂಡಿರುವ ಎಂ-ಆಸ್ತಿ ಅಪ್ಲಿಕೇಷನ್ ತಂದಿದ್ದರು. ಬಯಲು ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಪಣ ತೊಟ್ಟಿದ್ದ ರೋಹಿಣಿ ಸಿಂಧೂರಿ ಅವರು ಹಳ್ಳಿ ಹಳ್ಳಿಗೆ ಹೋಗಿ, ಬಯಲು ಶೌಚಕ್ಕೆ ಹೋಗುವವರಿಗೆ ಶೌಚಾಲಯ ಬಳಸುವಂತೆ ತಿಳುವಳಿಕೆ ಹೇಳುವ ಮೂಲಕ ವಿಶೇಷ ಅಭಿಯಾನ ಮಾಡುತ್ತಿದ್ದರು.
ನಿರ್ಮಲ್ ಭಾರತ್ ಯೋಜನೆಯಡಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಶೌಚಾಲಯ ನಿರ್ಮಾಣ ಗುರಿ ಸಾಧಿಸಿದ್ದ ಇವರ ಅಧಿಕಾರ ಅವಧಿಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಮಂಡ್ಯ ಜಿಲ್ಲೆ ಭಾರತದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಸಿಇಓ ಅವರ ಕಾರ್ಯ ವೈಖರಿಯನ್ನು ನೋಡಿ ಮಂಡ್ಯದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದರು.
2015ರ ಸೆಪ್ಟೆಂಬರ್ ನಲ್ಲಿ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರ ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಿಸಿ ವರ್ಗಮಾಡಿತ್ತು. ಈಗ ಅಲ್ಲಿಂದ ಮೊದಲ ಬಾರಿಗೆ ಜಿಲ್ಲಾಧಿಕಾರಿಯಾಗಿ ಹಾಸನಕ್ಕೆ ಬಂದಿದ್ದರು. ಕಳೆದ 2017ರ ಜುಲೈ 14ರಿಂದ ಹಾಸನದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ಅಲ್ಪಾವಧಿಯಲ್ಲಿ ದಕ್ಷ ಆಡಳಿತಾಧಿಕಾರಿ ಎಂದು ಹೆಸರು ಪಡೆದುಕೊಂಡಿದ್ದರು. ತಮ್ಮ ಕೆಲಸದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಪ್ರಶಸ್ತಿಯನ್ನು ಪಡೆದಿದ್ದರು. ಶ್ರವಣಬೆಳಗೋಳ ಮಹಾಮಸ್ತಕಾಭಿಷೇಕ ಸೇರಿದಂತೆ ಹಾಸನದ ಹಲವು ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಕ್ರಿಯಾಶೀಲರಾಗಿದ್ದರು.