Tag: Rohini Sindhuri

  • ರೇವಣ್ಣಗೆ ಖಡಕ್ ಟಾಂಗ್ ಕೊಟ್ಟ ರೋಹಿಣಿ ಸಿಂಧೂರಿ

    ರೇವಣ್ಣಗೆ ಖಡಕ್ ಟಾಂಗ್ ಕೊಟ್ಟ ರೋಹಿಣಿ ಸಿಂಧೂರಿ

    ಬೆಂಗಳೂರು: ಹಾಸನದ ಹಾಲಿ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ರೋಹಿಣಿ ಮನೆಗೆ ಹೋಗಿ ಮಾಹಿತಿ ಕಲೆ ಹಾಕುತ್ತಾರೆ ಎಂಬ ರೇವಣ್ಣ ಅವರ ಆರೋಪಕ್ಕೆ ರೋಹಿಣಿ ಸಿಂಧೂರಿ ಖಡಕ್ ಆಗಿಯೇ ಉತ್ತರಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೋಹಿಣಿ ಸಿಂಧೂರಿ, ನಾನು ಹಾಸನ ಬಿಟ್ಟೆ ಎರಡು ತಿಂಗಳು ಆಗಿದೆ. ರೇವಣ್ಣ ಆರೋಪ ಸತ್ಯಕ್ಕೆ ದೂರವಾಗಿದೆ. ಇದು ರಾಜಕೀಯ ನಾಯಕರು ಚುನಾವಣೆ ಸಮಯದಲ್ಲಿ ಆರೋಪ ಪ್ರತ್ಯಾರೋಪ ಮಾಡುವುದು ಸಾಮಾನ್ಯವಾಗಿದೆ. ಆರೋಪಕ್ಕೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಚಿವ ರೇವಣ್ಣ ಅವರ ಆರೋಪಕ್ಕೆ ಖಡಕ್ ಆಗಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: SSLCಯಲ್ಲಿ ಹಾಸನ ಜಿಲ್ಲೆ ಫಸ್ಟ್ ಬಂದ ಕಥೆ ಬಿಚ್ಚಿಟ್ಟ ರೋಹಿಣಿ ಸಿಂಧೂರಿ!

    ಪ್ರಿಯಾಂಕ ಅವರು ನನ್ನ ಬ್ಯಾಚ್ ಮೇಟ್. ಅವರು ಬ್ಯಾಚ್ ಮೇಟ್ ಆದಾಕ್ಷಣ ನಾನೇನು ಹೇಳಿ ಕೊಡಬೇಕಾಗಿಲ್ಲ. ನಾನು ಬೆಂಗಳೂರಲ್ಲಿ ಇದ್ದೇನೆ. ಎರಡು ತಿಂಗಳಿಂದ ಹಾಸನಕ್ಕೆ ಹೋಗಿಲ್ಲ. ಅಂದ ಮೇಲೆ ನಾನು ಯಾಕೆ ಏನಾದರೂ ಹೇಳಿಕೊಡಲಿ? ಆಕೆಯನ್ನು ನಾನು ಭೇಟಿ ಮಾಡಿಲ್ಲ, ಪ್ರಿಯಾಂಕ ಅವರು ನನ್ನ ಮನೆಗೆ ಬಂದಿಲ್ಲ. ನಾನು ಬೆಂಗಳೂರು, ಆಕೆ ಹಾಸನ, ಹಾಗಿದ್ದಾಗ ಆಕೆಯ ಭೇಟಿ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ರೇವಣ್ಣ ಆರೋಪಕ್ಕೆ ತಿರುಗೇಟು ಕೊಟ್ಟ ಹಾಸನ ಡಿಸಿ

    ಹಾಸನ ಎರಡು ವರ್ಷದ ಹಿಂದೆ 31 ನೇ ಸ್ಥಾನ ಹೊಂದಿತ್ತು. ನಾನು ಶಿಕ್ಷಣ ವಿಭಾಗದ ಜೊತೆ ಸಾಕಷ್ಟು ಚರ್ಚೆ ಮಾಡಿದ್ದೆ. ನಂತರ ನಾವು ಒಂದು ಕಾರ್ಯಕ್ರಮ ಮಾಡಿಕೊಂಡಿದ್ದೆವು. ಇದರಿಂದ 2017-18ರಲ್ಲಿ 7ನೇ ಸ್ಥಾನಕ್ಕೆ ಬಂದಿತ್ತು. ಕಳೆದ ವರ್ಷ ನಾವು ಶಿಕ್ಷಕರಿಗೆ ಪರೀಕ್ಷೆ ಮಾಡಬೇಕು ಎಂದು ತೀರ್ಮಾನ ಮಾಡಿ ಎರಡು ತಿಂಗಳು ಸಮಯ ಕೊಟ್ಟಿದ್ದೆವು. ಅದು ಸಾಧ್ಯವಾಗಲಿಲ್ಲ, ಆದರೆ ಶಿಕ್ಷಕರು ಪರೀಕ್ಷೆಗೆ ರೆಡಿಯಾಗಿದ್ದರು ಎಂದು ಹೇಳಿದ್ದಾರೆ.

    ಪ್ರತಿಯೊಂದು ಪರೀಕ್ಷೆ ಆದ ಮೇಲೆ ತಾಯಿ ಸಭೆ ಎಂದು ಮಾಡುತ್ತಿದ್ದೆವು. ಯಾಕೆಂದರೆ ಮಕ್ಕಳ ಶಿಕ್ಷಣದಲ್ಲಿ ತಾಯಂದಿರ ಪಾತ್ರವೂ ಮುಖ್ಯವಾಗಿದೆ. ಒಂದು ವರ್ಷದಲ್ಲಿ ಹಾಸನವನ್ನು 3ನೇ ಸ್ಥಾನ ಅಥವಾ ಸೆಕೆಂಡ್‍ಗೆ ತರಲೇಬೇಕು. ಇದು ನಿಮಗೆ ಸವಾಲು ಎಂದು ನಾನು ಎಲ್ಲ ಪ್ರಾಂಶುಪಾಲರಿಗೂ ಪತ್ರ ಬರೆದಿದ್ದೆ. ಈಗ ಅವರ ಕಠಿಣ ಪರಿಶ್ರಮದಿಂದ ಇದೆಲ್ಲ ಸಾಧ್ಯವಾಗಿದೆ ಎಂದು ಖುಷಿ ಪಟ್ಟರು.

    ಎಲ್ಲ ಮಕ್ಕಳನ್ನು ನಿಮ್ಮ ಮಕ್ಕಳು ಎಂದು ಅಂದುಕೊಂಡು ಪಾಠ ಮಾಡಿ. ಮಕ್ಕಳಲ್ಲಿ ಗುಡ್ ಬ್ಯಾಡ್ ಎಂದು ಇರಲ್ಲ. ಒಂದಿಷ್ಟು ವೈಯಕ್ತಿಕವಾಗಿ ಗಮನ ಕೊಡಿ ಸಾಕು. ಎಲ್ಲ ಮಕ್ಕಳಿಗೆ ಪಾಠ ಮಾಡಿದಾಗ ಈ ರೀತಿ ಫಲಿತಾಂಶ ಬರುತ್ತೆ ಎಂದು ನಾನು ಎಲ್ಲ ಶಿಕ್ಷಕರಿಗೆ ಮನವಿ ಮಾಡಿಕೊಂಡಿದ್ದೆ ಎಂದು ತಿಳಿಸಿದರು.

  • SSLCಯಲ್ಲಿ ಹಾಸನಕ್ಕೆ ಉತ್ತಮ ಫಲಿತಾಂಶ ಬರಲು ಪತ್ನಿ ಭವಾನಿ ಕಾರಣ- ರೇವಣ್ಣ

    SSLCಯಲ್ಲಿ ಹಾಸನಕ್ಕೆ ಉತ್ತಮ ಫಲಿತಾಂಶ ಬರಲು ಪತ್ನಿ ಭವಾನಿ ಕಾರಣ- ರೇವಣ್ಣ

    – ಹಿಂದಿನ ಡಿಸಿ ಏನ್ ಕಡಿದು ದಬಾಕಿರೋದು?
    – ಎರಡು ತಿಂಗಳಿಗೊಮ್ಮೆ ಸಭೆ ನಡೆಸಿದ್ದರಿಂದ ಫಲಿತಾಂಶ

    ಹಾಸನ: ಈ ಬಾರಿಯ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದು, ರಿಸಲ್ಟ್ ನಲ್ಲಿ ಉತ್ತಮ ಅಂಕಗಳು ಬರುವಲ್ಲಿ ನನ್ನ ಪತ್ನಿ ಭವಾನಿ ಪ್ರಯತ್ನ ಕೂಡ ಸಫಲವಾಗಿದೆ ಎಂದು ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಎಸ್‍ಎಸ್ ಎಲ್‍ಸಿ ಫಲಿತಾಂಶದಲ್ಲಿ ಉತ್ತಮ ಸ್ಥಿತಿಗೆ ಸರ್ಕಾರದ ನೀತಿಗಳು ಕಾರಣವಾಗಿದೆ. ಹಾಗೆಯೇ ನನ್ನ ಪತ್ನಿ ಜಿಲ್ಲಾ ಪಂಚಾಯಿತಿ ಶಿಕ್ಷಣಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಪ್ರಯತ್ನ ಕೂಡ ಸಫಲವಾಗಿದೆ. ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಆಯಾ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ಪ್ರಯತ್ನ ಕೂಡ ಇದೆ. ನೂರು ಫಲಿತಾಂಶ ಬಂದ ಎಲ್ಲಾ ಶಾಲೆಗಳ ಶಿಕ್ಷಕರಿಗೆ ಸನ್ಮಾನ ಮಾಡುತ್ತೇವೆ. ಈ ಫಲಿತಾಂಶದ ಹಿನ್ನೆಲೆಯಲ್ಲಿ ಶಾಲೆಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಶಿಕ್ಷಣ ಇಲಾಖೆ ಕಾರ್ಯದರ್ಶಿ ವಿಜಯ ಭಾಸ್ಕರ್ ಪ್ರಯತ್ನ ಕೈಗೂಡಿದೆ. ಅವರ ಕಾರ್ಯಸೂಚಿ ಪ್ರಯತ್ನ ಸಫಲವಾಗಿದೆ ಎಂದು ಅವರು ಹೇಳಿದರು.

    ಜಿಲ್ಲೆಯ ಉತ್ತಮ ಫಲಿತಾಂಶದಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಪ್ರಯತ್ನ ಉತ್ತಮವಾಗಿದೆ. ಹಾಸನ ಜಿಲ್ಲೆ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ನಂ.1 ಸ್ಥಾನ ಬಂದಿದೆ. ಇದಕ್ಕೆ ಮೊದಲು ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ:  SSLCಯಲ್ಲಿ ಹಾಸನ ಜಿಲ್ಲೆ ಫಸ್ಟ್ ಬಂದ ಕಥೆ ಬಿಚ್ಚಿಟ್ಟ ರೋಹಿಣಿ ಸಿಂಧೂರಿ!

    ಪ್ರತಿ ಹಂತದಲ್ಲೂ ಸಭೆ ನಡೆಸಿ 2006ರಿಂದ ಕುಮಾರಸ್ವಾಮಿ ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡಿದೆ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಅವರು ಎರಡು ತಿಂಗಳಿಗೊಮ್ಮೆ ಸಭೆ ನಡೆಸುತ್ತಿದ್ದರು. ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿ ಎಂದು ಬಿಇಓಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಕ್ಕೆ ಕುಮಾರಸ್ವಾಮಿ 1,600 ಕೋಟಿ ಅನುದಾನ ನೀಡಿದ್ದರು ಅಂದರು.

    ಜಿಲ್ಲೆಯ ಎಲ್ಲಾ ಮುಖ್ಯೋಪಾಧ್ಯಾಯರು, ಶಿಕ್ಷಕರಿಗೆ ಗೌರವ ಸಲ್ಲಿಸುತ್ತೇನೆ. 140 ಪ್ರೌಢಶಾಲೆಗಳಲ್ಲಿ 86 ಶಾಲೆಗಳಲ್ಲಿ ಶೇ.100 ಫಲಿತಾಂಶ ಬಂದಿದೆ. ಇದಕ್ಕೆ ಕಾರಣರಾದ ಶಾಲೆಯ ಶಿಕ್ಷಕರು, ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಶೇ.100 ಫಲಿತಾಂಶ ಬಂದಿರುವ ಶಾಲೆಗಳ ಶಿಕ್ಷಕರಿಗೆ ಸನ್ಮಾನ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

    ರೋಹಿಣಿ ಸಿಂಧೂರಿಗೆ ಟಾಂಗ್:
    ಹಿಂದಿನ ಡಿಸಿ ಏನು ಕಡಿದು ದಬಾಕಿರೋದು. ಶಿಕ್ಷಕರಿಗೆ ಪರೀಕ್ಷೆ ಮಾಡಲು ಹೋಗಿ ಅವರೇ ಉಗಿದು ಕಳುಹಿಸಿದ್ದರು. ಅವರು ಏನೂ ಮಾಡಿಲ್ಲ. ಶಿಕ್ಷಕರಿಗೆ ಪರಿಕ್ಷೆ ಮಾಡಲು ಹೋಗಿ ಅಸೆಂಬ್ಲಿಯಲ್ಲಿ ಚರ್ಚೆಯಾಗಿದೆ. ಅವರು ಶಿಕ್ಷಕರ ಪರೀಕ್ಷೆ ಮಾಡದೇ ಈಗ ಉತ್ತಮ ಫಲಿತಾಂಶ ಬಂದಿದೆಯಲ್ಲ. ಅವರು ಜಿಲ್ಲೆಗೆ ಬಂದಿದ್ದಾರೋ ಇಲ್ಲವಾ ಎಂದು ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಸರ್ಕಾರದ ಯೋಜನೆಗಳಿಂದ ಕಾಲೇಜುಗಳಿಲ್ಲದ ಕಡೆ ಕಾಲೇಜು ಉದ್ಘಾಟಿಸಲಾಗಿದೆ ಅಂದರು.

    ನನ್ನ ಪತ್ನಿ ಪ್ರಯತ್ನ ಸಫಲವಾಗಿದೆ. ಆದ್ರೆ ನಾನು ಇದನ್ನು ಹೇಳಿಕೊಳ್ಳಲು ಹೋಗಿದ್ದೇನಾ ಎಂದು ಪ್ರಶ್ನಿಸುವ ಮೂಲಕ ರೋಹಿಣಿ ಸಿಂಧೂರಿಗೆ ಟಾಂಗ್ ಕೊಟ್ಟ ಅವರು, ಜಿಲ್ಲೆಯಲ್ಲಿ ಉತ್ತಮ ಶಿಕ್ಷಣಕ್ಕೆ ಮಾಜಿ ಸಚಿವ ಬಸವರಾಜ್ ಹೊರಟ್ಟಿ, ನಮ್ಮ ಕುಮಾರಣ್ಣ, ಸರ್ಕಾರದ ಕಾರ್ಯದರ್ಶಿ ವಿಜಯ್ ಭಾಸ್ಕರ್ ರವರ ಕೊಡುಗೆ ಬಹಳಷ್ಟಿದೆ ಎಂದು ಹೇಳಿದರು. ಇದನ್ನೂ ಓದಿ: SSLC ಫಲಿತಾಂಶದಲ್ಲಿ ಹಾಸನ ಫಸ್ಟ್ – ಎಲ್ಲ ರೇವಣ್ಣ ನಿಂಬೆಹಣ್ಣು ಪ್ರಭಾವ ಎಂದು ಟ್ರೋಲ್

  • ರೇವಣ್ಣ ಆರೋಪಕ್ಕೆ ತಿರುಗೇಟು ಕೊಟ್ಟ ಹಾಸನ ಡಿಸಿ

    ರೇವಣ್ಣ ಆರೋಪಕ್ಕೆ ತಿರುಗೇಟು ಕೊಟ್ಟ ಹಾಸನ ಡಿಸಿ

    ಹಾಸನ: ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಸಲಹೆ ಪಡೆದು ಕೆಲಸ ಮಾಡುತ್ತಿದ್ದಾರೆಂಬ ಆರೋಪಕ್ಕೆ ಪ್ರಸ್ತುತ ಹಾಸನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದೇನೆ. ಯಾರಿಂದಲೂ ಸಲಹೆ ಪಡೆಯುವ ಅವಶ್ಯಕತೆ ನನಗಿಲ್ಲ ಎಂದು ಪ್ರಿಯಾಂಕ ಅವರು ಹೇಳುವ ಮೂಲಕ ಸಚಿವ ರೇವಣ್ಣರ ಆರೋಪವನ್ನು ತಳ್ಳಿ ಹಾಕಿದ್ದಾರೆ.

    ರೋಹಿಣಿಯವರು ನನ್ನ ಬ್ಯಾಚ್ ಮೇಟ್, ಹೀಗಾಗಿ ಅವರನ್ನು ಭೇಟಿ ಮಾಡುತ್ತೇನೆ. ಅದರಲ್ಲಿ ವಿಶೇಷ ಏನಿದೆ? ನಾನು ರೋಹಿಣಿ ಸಿಂಧೂರಿ ಅವರನ್ನು ಎರಡು ದಿನ ಜೊತೆಯಲ್ಲಿ ಇಟ್ಟುಕೊಂಡಿರಲಿಲ್ಲ. ಸಚಿವರ ಆರೋಪದ ಬಗ್ಗೆ ತಮಗೆ ಗೊತ್ತಿಲ್ಲ ಎನ್ನುತ್ತಲೇ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪರೋಕ್ಷ ತಿರುಗೇಟು ನೀಡಿದರು.

    ಆರೋಪವೇನು?
    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸಚಿವ ರೇವಣ್ಣ ಅವರು, ಚುನಾವಣೆ ಮುಕ್ತವಾಗಿ ನಡೆದಿದೆ ಎಂದು ಹೇಳಿರುವ ಜಿಲ್ಲಾಧಿಕಾರಿಗಳೇ, 10 ದಿನಗಳ ಬಳಿಕ ಚುನಾವಣಾ ಅಕ್ರಮ ನಡೆದಿದೆ ಎನ್ನುವುದರ ಬಗ್ಗೆ ಏಕೆ ದೂರು ಪಡೆದುಕೊಂಡರು. ಈ ಬಗ್ಗೆ ತನಿಖೆ ಆಗಬೇಕು, ಅಲ್ಲದೇ ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು. ಅವರು ವರ್ಗಾವಣೆ ಆಗಿ ಬಂದ ಬಳಿಕ ನಡೆದ ಎಲ್ಲಾ ಬೆಳವಣಿಗೆಗಳ ಬಗ್ಗೆ ಮುಕ್ತ ತನಿಖೆ ನಡೆಸಬೇಕಿದೆ. ಜಿಲ್ಲಾಧಿಕಾರಿಗಳು ಬಿಜೆಪಿ ಪಕ್ಷದ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ. ಈ ಕುರಿತು ಶೀಘ್ರವಾಗಿ ಆಯೋಗಕ್ಕೆ ಲಿಖಿತ ಮನವಿ ನೀಡಲಾಗುವುದು ಎಂದಿದ್ದರು.

    ಇದೇ ವೇಳೆ ಹಾಸನಕ್ಕೆ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಡಿಸಿ ಅವರು ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಭೇಟಿ ಮಾಡಿದ್ದರು. ಅವರಿಂದ ನಿರ್ದೇಶನ ಪಡೆದು ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

  • SSLCಯಲ್ಲಿ ಹಾಸನ ಜಿಲ್ಲೆ ಫಸ್ಟ್ ಬಂದ ಕಥೆ ಬಿಚ್ಚಿಟ್ಟ ರೋಹಿಣಿ ಸಿಂಧೂರಿ!

    SSLCಯಲ್ಲಿ ಹಾಸನ ಜಿಲ್ಲೆ ಫಸ್ಟ್ ಬಂದ ಕಥೆ ಬಿಚ್ಚಿಟ್ಟ ರೋಹಿಣಿ ಸಿಂಧೂರಿ!

    – 31ನೇ ಸ್ಥಾನದಿಂದ 1ನೇ ಸ್ಥಾನಕ್ಕೆ ಏರಿಕೆ
    – ರೇಡಿಯೋ ಮೂಲಕ ಮಕ್ಕಳಿಗೆ ಮಾಹಿತಿ
    – ಆರಂಭದಲ್ಲೇ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ
    – ಖಾಸಗಿ ಶಾಲೆಗಳು, ಅಧಿಕಾರಿಗಳು, ಶಿಕ್ಷಕರ ಸಹಕಾರ

    ವಿಶೇಷ ವರದಿ
    ಬೆಂಗಳೂರು: ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶದಲ್ಲಿ ಹಾಸನ ರಾಜ್ಯದಲ್ಲೇ ಪ್ರಥಮ ಫಲಿತಾಂಶ ಪಡೆದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದ್ದು ಜಿಲ್ಲಾಡಳಿತ ನಡೆಸಿದ ಸತತ ಪ್ರಯತ್ನ. ಈ ಸತತ ಪ್ರಯತ್ನದಿಂದ ಇದೇ ಮೊದಲ ಬಾರಿಗೆ ಹಾಸನ 10ನೇ ತರಗತಿ ಪರೀಕ್ಷೆಯಲ್ಲಿ ಶೇ.89.33 ಫಲಿತಾಂಶದೊಂದಿಗೆ ದಾಖಲೆ ಬರೆದಿದೆ.

    ಹೌದು, ಇದಕ್ಕೆಲ್ಲಾ ಕಾರಣ ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಫಲಿತಾಂಶ ಮೇಲಕ್ಕೆ ಎತ್ತಲು ಮಾಡಿದ ಪ್ಲ್ಯಾನ್. ಈ ಪ್ಲ್ಯಾನ್ ಯಶಸ್ವಿಯಾಗಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ವಹಿಸಿದ ಕೆಲಸ ಮತ್ತು ಜಿಲ್ಲೆಯ ಶಿಕ್ಷಕರ ಕಠಿಣ ಪರಿಶ್ರಮದಿಂದ ಹಾಸನ ಜಿಲ್ಲೆ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಈ ಬಾರಿ ಹೊಸ ಇತಿಹಾಸ ಸೃಷ್ಟಿಸಿದೆ.

    ಈ ಸಾಧನೆಯ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೋಹಿಣಿ ಸಿಂಧೂರಿ ಅವರು, ನಾನು ಹಾಸನ ಜಿಲ್ಲಾಧಿಕಾರಿಯಾಗಿ ಬಂದಾಗ ಎಸ್‍ಎಸ್‍ಎಲ್‍ಸಿ ಫಲಿತಾಂಶ ನೋಡಿ ಬಹಳ ಬೇಸರವಾಯಿತು. ಉತ್ತರ ಕರ್ನಾಟಕ ಭಾಗದಲ್ಲಿ ಮೂಲಭೂತ ಸೌಕರ್ಯ ಇತ್ಯಾದಿ ಕಾರಣಗಳಿಂದ ಫಲಿತಾಂಶ ಕಡಿಮೆ ಬಂದಿದ್ದಕ್ಕೆ ಕಾರಣ ನೀಡುತ್ತಾರೆ. ಆದರೆ ದಕ್ಷಿಣ ಕರ್ನಾಟಕದ ಭಾಗವಾಗಿರುವ ಹಾಸನದಲ್ಲಿ ಯಾವುದೇ ಸಮಸ್ಯೆ ಇಲ್ಲ. ದಕ್ಷಿಣ ಕರ್ನಾಟಕದ ಜಿಲ್ಲೆಗಳು ಉತ್ತಮ ಫಲಿತಾಂಶ ದಾಖಲಿಸಿಕೊಂಡೇ ಬರುತ್ತಿದೆ. ಹೀಗಾಗಿ ಫಲಿತಾಂಶ ಮೇಲಕ್ಕೆ ಎತ್ತಲು ನಾವು ಪ್ಲಾನ್ ಮಾಡಿದ್ವಿ. ಈ ನಿಟ್ಟಿನಲ್ಲಿ ಶಿಕ್ಷಕರು, ಅಧಿಕಾರಿಗಳು ಸಹಕರಿಸಿದ್ದರಿಂದ ಈ ಫಲಿತಾಂಶ ಬಂದಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

    ಹಾಸನದಲ್ಲಿ ಆಗಿದ್ದು ಏನು?
    ರೋಹಿಣಿ ಸಿಂಧೂರಿ ಅವರು ಹಾಸನದಲ್ಲಿ ಅಧಿಕಾರ ಸ್ವೀಕರಿಸಿದ್ದ ಸಮಯದಲ್ಲಿ ಹಾಸನಕ್ಕೆ ಎಸ್‍ಎಸ್‍ಎಲ್‍ಸಿಯಲ್ಲಿ 31ನೇ ಸ್ಥಾನ ಸಿಕ್ಕಿತ್ತು. ಫಲಿತಾಂಶವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕಳೆದ 2 ವರ್ಷಗಳಿಂದ ರೇಡಿಯೋ ಮೂಲಕ ಮಕ್ಕಳಿಗೆ ಪಾಠ, ಹೇಗೆ ಪರೀಕ್ಷೆಗೆ ಓದಬೇಕು, ಯಾವ ರೀತಿ ಬರೆಯಬೇಕು ಇತ್ಯಾದಿ ವಿಚಾರಗಳನ್ನು ಪ್ರಸಾರ ಮಾಡಲಾಯಿತು.

    ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬುದ್ಧಿವಂತರಾಗಿದ್ದರೂ ಅವರಿಗೆ ನುರಿತ ಶಿಕ್ಷಕರಿಂದ ತರಬೇತಿ ಸಿಗದ ಕಾರಣ ಫೇಲ್ ಆಗುತ್ತಿದ್ದಾರೆ ಎನ್ನುವ ವಿಚಾರ ಜಿಲ್ಲಾಡಳಿತಕ್ಕೆ ಗೊತ್ತಾಯಿತು. ಇದಕ್ಕಾಗಿ ರೋಹಿಣಿ ಸಿಂಧೂರಿ ಅವರು ಖಾಸಗಿ ಶಾಲೆಯ ಜೊತೆ ಮಾತನಾಡಿ ಅಲ್ಲಿರುವ ನುರಿತ ಶಿಕ್ಷಕರಿಂದ ಮಕ್ಕಳಿಗೆ ಪಾಠ ಮಾಡಿಸಿಕೊಡುವಂತೆ ಮನವಿ ಮಾಡಿದರು. ಈ ಸಂಬಂಧ ಜಿಲ್ಲಾಡಳಿತ ಮೂರು ಮೂರು ಬಾರಿ ಖಾಸಗಿ ಶಾಲೆಯ ಪ್ರಿನ್ಸಿಪಾಲ್ ಜೊತೆ ಸಭೆ ನಡೆಸಿ ನಡೆಸಿ ಸಹಕಾರ ಕೋರಿದ್ದರು. ಅಷ್ಟೇ ಅಲ್ಲದೇ ವೈಯಕ್ತಿಕವಾಗಿ ಪ್ರಾಂಶುಪಾಲರಿಗೆ ಪತ್ರ ಬರೆದು ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ದಾಖಲಾಗಲು ನಿಮ್ಮ ಸಹಕಾರ ಬೇಕು ಎಂದು ರೋಹಿಣಿ ಸಿಂಧೂರಿ ಅವರು ಮನವಿ ಮಾಡಿದ್ದರು. ಈ ಮನವಿಗೆ ಖಾಸಗಿ ಶಾಲೆಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಶಾಲೆಯ ಶಿಕ್ಷಕರು ಗ್ರಾಮೀಣ ಭಾಗದ ಮಕ್ಕಳಿಗೂ ಶಿಕ್ಷಣ ನೀಡಿದರು.

    ಪರೀಕ್ಷೆ ಹತ್ತಿರ ಬಂದಾಗ ಸ್ಪೆಷಲ್ ಕ್ಲಾಸ್ ಮಾಡಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ ಎನ್ನುವುದು ಜಿಲ್ಲಾಡಳಿತಕ್ಕೆ ಗೊತ್ತಾಯಿತು. ಪರೀಕ್ಷೆ ಹತ್ತಿರ ಬಂದಾಗ ಫಲಿತಾಂಶ ಉತ್ತಮ ಬರುತ್ತದೆ ಎಂದಾದರೆ ಯಾಕೆ ಶಾಲೆಗಳು ಆರಂಭಗೊಳ್ಳುವಾಗಲೇ ವಿಶೇಷ ಕೋಚಿಂಗ್ ನೀಡಬಾರದು ಎಂದು ತೀರ್ಮಾನಿಸಲಾಯಿತು. ಆರಂಭದಲ್ಲೇ ತರಬೇತಿ ನೀಡಿದರೆ ಉತ್ತಮ ಫಲಿತಾಂಶ ಬರಬಹುದು ಎನ್ನುವ ಲೆಕ್ಕಾಚಾರ ಹಾಕಿ ಕಳೆದ ವರ್ಷ ನಾವು ಆರಂಭದಲ್ಲೇ ಕೋಚಿಂಗ್ ಕ್ಲಾಸ್ ನೀಡಿ ಮಕ್ಕಳನ್ನು ಶಿಕ್ಷಣದಲ್ಲಿ ಮೇಲುಗೈ ಸಾಧಿಸುವಂತೆ ಮಾಡಿ ಎಂದು ಸಲಹೆ ನೀಡಿದ್ದೆವು. ಈ ಸಲಹೆ ಯಶಸ್ವಿಯಾಗಿದ್ದು ಕಳೆದ ವರ್ಷ ಜಿಲ್ಲೆಗೆ 7ನೇ ಸ್ಥಾನ ಸಿಕ್ಕಿತು. ಈಗ ಇದು ಮತ್ತಷ್ಟು ಯಶಸ್ವಿಯಾಗಿದ್ದು ಮೊದಲ ಸ್ಥಾನ ಸಿಕ್ಕಿದೆ ಎಂದು ರೋಹಿಣಿ ಸಿಂಧೂರಿ ಅವರು ಹೇಳಿದರು.

    ಈ ಬಾರಿಯ ಫಲಿತಾಂಶಲ್ಲಿ ಟಾಪ್ 3 ಒಳಗಡೆ ಬರಬಹುದು ಎಂದು ನಿರೀಕ್ಷೆ ಮಾಡಿದ್ದೆವು. ಅದರಲ್ಲೂ ಉಡುಪಿಯನ್ನು ನಾವು ಹಿಂದೆ ಹಾಕುತ್ತೇವೆ ಎನ್ನುವ ನಿರೀಕ್ಷೆ ಮಾಡಿರಲಿಲ್ಲ. ಆದರೆ ಈ ಬಾರಿ ಮೊದಲ ಸ್ಥಾನ ಹಾಸನಕ್ಕೆ ಬಂದಿದ್ದು ಸಂತೋಷ ನೀಡಿದೆ. ಜಿಲ್ಲಾಡಳಿತದ ಪ್ರಯತ್ನಕ್ಕೆ ಎಲ್ಲ ಅಧಿಕಾರಿಗಳು, ಶಿಕ್ಷಕರು ಸ್ಪಂದಿಸಿದ ಪರಿಣಾಮ ಈ ಸಾಧನೆ ನಿರ್ಮಾಣವಾಗಿದೆ. ಚೀಟಿಂಗ್ ನಡೆಸಿ ಈ ಫಲಿತಾಂಶ ಬಂದಿದೆ ಎಂದು ಕೆಲವರು ಹೇಳಬಹುದು. ಆದರೆ ನಮ್ಮ ಅಧಿಕಾರಿಗಳು ಮತ್ತು ಶಿಕ್ಷಕರು ಉತ್ತಮವಾಗಿ ಕೆಲಸ ಮಾಡಿದ ಪರಿಣಾಮದಿಂದಲೇ ಈ ಫಲಿತಾಂಶ ಬಂದಿದೆ. ಹೀಗಾಗಿ ಈ ಸಾಧನೆಗೆ ನಿರ್ಮಾಣಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಹೇಳಿದರು.

    ಯಾವ ವರ್ಷ ಎಷ್ಟನೇ ಸ್ಥಾನ?
    2014-15 ರಲ್ಲಿ 9ನೇ ಸ್ಥಾನ ಸಿಕ್ಕಿದರೆ, 2015-16 ರಲ್ಲಿ 18ನೇ ಸ್ಥಾನಕ್ಕೆ ಕುಸಿದಿತ್ತು, 2016-17ರ ಅವಧಿಯಲ್ಲಿ ಮತ್ತಷ್ಟು ಕುಸಿದು 31ನೇ ಸ್ಥಾನ ಸಿಕ್ಕಿತ್ತು. 2017-18 ರಲ್ಲಿ 7ನೇ ಸ್ಥಾನಕ್ಕೆ ಏರಿದರೆ ಈ ವರ್ಷ ಪ್ರಥಮ ಸ್ಥಾನ ಪಡೆದಿದೆ.

    ಡಿಸಿ ಪ್ರಯತ್ನಕ್ಕೆ ಹಿನ್ನಡೆಯಾಗಿತ್ತು!
    ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮಗೊಳಿಸಲು ರೋಹಿಣಿ ಸಿಂಧೂರಿ ಅವರು ಕಳೆದ ವರ್ಷದ ಜುಲೈನಲ್ಲಿ ಶಿಕ್ಷಕರಿಗೆ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದರು. ಬದಲಾದ ಪಠ್ಯ ಕ್ರಮಕ್ಕೆ ಶಿಕ್ಷಕರು ಹೊಂದಿಕೊಂಡಿರುವ ಬಗ್ಗೆ ಪರಿಶೀಲಿಸಲು ಈ ಪರೀಕ್ಷೆ ನಡೆಸಲು ಮುಂದಾಗಿದ್ದರು. ಆದರೆ ಡಿಸಿ ನಿರ್ಧಾರಕ್ಕೆ ಸರ್ಕಾರದಿಂದಲೇ ಬ್ರೇಕ್ ಬಿದ್ದಿತ್ತು.

    ವಿಧಾನ ಪರಿಷತ್‍ನಲ್ಲಿ ಈ ಬಗ್ಗೆ ಶಿಕ್ಷಣ ಸಚಿವರಾಗಿದ್ದ ಎನ್.ಮಹೇಶ್ ಲಿಖಿತ ಉತ್ತರ ನೀಡಿ, ತರಬೇತಿ ಮೂಲಕವೇ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಪರೀಕ್ಷೆಯ ಅವಶ್ಯಕತೆ ಇಲ್ಲ. ಪರೀಕ್ಷೆ ನಡೆಸದಂತೆ ನಿರ್ದೇಶನ ನೀಡುತ್ತೇನೆ ಎಂದು ಹೇಳಿದ್ದರು. ಈ ವೇಳೆ ಉದ್ದೇಶಿತ ಪರೀಕ್ಷೆಯಿಂದ ಶಿಕ್ಷಕರ ಬೋಧನಾ ಆಸಕ್ತಿ ಕಡಿಮೆಯಾಗಲಿದ್ದು, ಶಿಕ್ಷಕರು ಆತಂಕ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆಂದು ಸದಸ್ಯ ಮರಿತಿಬ್ಬೇಗೌಡ ಕಳವಳ ವ್ಯಕ್ತಪಡಿಸಿದ್ದರು.

    ಯಾರು ರೋಹಿಣಿ ಸಿಂಧೂರಿ?
    ಈ ಹಿಂದೆ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರು. ರಾಜ್ಯದಲ್ಲಿ ಮೊದಲ ಬಾರಿಗೆ ಭೂ ದಾಖಲೆಗಳ ಕುರಿತಂತೆ ವಿನ್ಯಾಸಗೊಂಡಿರುವ ಎಂ-ಆಸ್ತಿ ಅಪ್ಲಿಕೇಷನ್ ತಂದಿದ್ದರು. ಬಯಲು ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಪಣ ತೊಟ್ಟಿದ್ದ ರೋಹಿಣಿ ಸಿಂಧೂರಿ ಅವರು ಹಳ್ಳಿ ಹಳ್ಳಿಗೆ ಹೋಗಿ, ಬಯಲು ಶೌಚಕ್ಕೆ ಹೋಗುವವರಿಗೆ ಶೌಚಾಲಯ ಬಳಸುವಂತೆ ತಿಳುವಳಿಕೆ ಹೇಳುವ ಮೂಲಕ ವಿಶೇಷ ಅಭಿಯಾನ ಮಾಡುತ್ತಿದ್ದರು.

    ನಿರ್ಮಲ್ ಭಾರತ್ ಯೋಜನೆಯಡಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಶೌಚಾಲಯ ನಿರ್ಮಾಣ ಗುರಿ ಸಾಧಿಸಿದ್ದ ಇವರ ಅಧಿಕಾರ ಅವಧಿಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಮಂಡ್ಯ ಜಿಲ್ಲೆ ಭಾರತದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಸಿಇಓ ಅವರ ಕಾರ್ಯವೈಖರಿಯನ್ನು ನೋಡಿ ಮಂಡ್ಯದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದರು.

    2015ರ ಸೆಪ್ಟೆಂಬರ್‍ನಲ್ಲಿ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರ ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಿಸಿ ವರ್ಗಮಾಡಿತ್ತು. ಈಗ ಅಲ್ಲಿಂದ ಮೊದಲ ಬಾರಿಗೆ ಜಿಲ್ಲಾಧಿಕಾರಿಯಾಗಿ ಹಾಸನಕ್ಕೆ ಬಂದಿದ್ದರು. ಕಳೆದ 2017ರ ಜುಲೈ 14ರಿಂದ ಹಾಸನದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ಅಲ್ಪಾವಧಿಯಲ್ಲಿ ದಕ್ಷ ಆಡಳಿತಾಧಿಕಾರಿ ಎಂದು ಹೆಸರು ಪಡೆದುಕೊಂಡಿದ್ದರು. ತಮ್ಮ ಕೆಲಸದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಪ್ರಶಸ್ತಿಯನ್ನು ಪಡೆದಿದ್ದರು. ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಸೇರಿದಂತೆ ಹಾಸನದ ಹಲವು ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಕ್ರಿಯಾಶೀಲರಾಗಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಚುನಾವಣಾ ಮಾರ್ಗಸೂಚಿ ಪಾಲಿಸುವ ಉದ್ದೇಶದಿಂದ ಸರ್ಕಾರ ರೋಹಿಣಿ ಸಿಂಧೂರಿ ಅವರನ್ನು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿತ್ತು.

    https://www.youtube.com/watch?v=RIlr3y8t7ow

    https://www.youtube.com/watch?v=c6PoH0rh1XE

    https://www.youtube.com/watch?v=I0pUTEiRfSo

     

  • ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬೆಂಗಳೂರಿಗೆ ವರ್ಗ

    ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬೆಂಗಳೂರಿಗೆ ವರ್ಗ

    ಹಾಸನ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಚುನಾವಣಾ ಮಾರ್ಗಸೂಚಿ ಪಾಲಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಿದೆ. ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮೂಲಕ ನಿಷ್ಠಾವಂತ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ರೋಹಿಣಿ ಸಿಂಧೂರಿ ಅವರ ವರ್ಗಾವಣೆಯಿಂದ ತೆರವಾಗಿರುವ ಜಿಲ್ಲಾಧಿಕಾರಿ ಸ್ಥಾನಕ್ಕೆ ಅಕ್ರಂ ಪಾಷಾ ಅವರನ್ನು ನೇಮಿಸಲಾಗಿದೆ.

    ಹಾವೇರಿ ಜಿಲ್ಲಾಧಿಕಾರಿ ಎಂವಿ ವೆಂಕಟೇಶ್ ಅವರನ್ನು ತೋಟಗಾರಿಕೆ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಹಾವೇರಿ ನೂತನ ಜಿಲ್ಲಾಧಿಕಾರಿಯಾಗಿ ಕೃಷ್ಣ ಬಜ್ಪೆ ಅವರು ನೇಮಕವಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಹೈಕೋರ್ಟ್‌ನಿಂದ ನೋಟಿಸ್

    ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಹೈಕೋರ್ಟ್‌ನಿಂದ ನೋಟಿಸ್

    ಹಾಸನ: ಬಿಎಂ ರಸ್ತೆ ಅಗಲೀಕರಣ ವಿಚಾರವಾಗಿ ಕಾನೂನು ಉಲ್ಲಂಘನೆ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿಗೆ ಹೈಕೋರ್ಟ್‌ನಿಂದ ನೋಟಿಸ್ ಜಾರಿಯಾಗಿದೆ.

    ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಹೈಕೋರ್ಟ್ ನ್ಯಾಯಾಂಗ ನಿಂದನೆ ಅರ್ಜಿ ಸಂಬಂಧ ನೋಟಿಸ್ ಜಾರಿ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಿದೆ. ಬಿಎಂ ರಸ್ತೆಯಲ್ಲಿ ಕೆಲವು ಕಟ್ಟಡಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಜಿಲ್ಲಾಡಳಿತ ಕಟ್ಟಡಗಳನ್ನು ತೆರವುಗೊಳಿಸಿತ್ತು. ಈ ಕುರಿತು ಸುಧಾ ಮತ್ತು ಶಶಿಕಾಂತ್ ಎಂಬವರು ಹೈಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ರವಿಮಳಿಮಠ್ ಮತ್ತು ಬಿ.ಎಂ. ಶ್ಯಾಮ್ ಪ್ರಸಾದ್‍ರ ವಿಭಾಗೀಯ ಪೀಠದಿಂದ ನೋಟಿಸ್ ಜಾರಿ ಮಾಡಿದೆ.

    ಕಳೆದ ತಿಂಗಳು ಬೆಂಗಳೂರು ಮತ್ತು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿಎಂ ರಸ್ತೆಯಲ್ಲಿನ ಕಟ್ಟಡಗಳನ್ನು ಜಿಲ್ಲಾಡಳಿತ ತೆರವುಗೊಳಿಸಿತ್ತು. ಜಿಲ್ಲಾಡಳಿತ ಸುಧಾ ಮತ್ತು ಶಶಿಕಾಂತ್ ಎಂಬವರಿಗೆ ಸೇರಿದ್ದ ಕಟ್ಟಡವನ್ನು 7.2 ಮೀಟರ್ ವರೆಗೆ ತೆರವುಗೊಳಿಸಿತ್ತು. ಕಾನೂನು ನಿಯಮಗಳನ್ನು ಪಾಲಿಸದೇ ಕಟ್ಟಡ ತೆರವುಗೊಳಿಸಲಾಗಿದೆ ಎಂದು ಕಟ್ಟಡ ಮಾಲೀಕರು ಕೇಸ್ ದಾಖಲಿಸಿದ್ದರು. ಹೀಗಾಗಿ ಹಾಸನ ಜಿಲ್ಲಾಧಿಕಾರಿ ಮತ್ತು ನಗರಸಭೆ ಆಯುಕ್ತರಿಗೆ ನಿಖರ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೃತದೇಹ ಪತ್ತೆಗಾಗಿ  ಮನವಿ – ಭಾವುಕರಾದ ರೋಹಿಣಿ ಸಿಂಧೂರಿ

    ಮೃತದೇಹ ಪತ್ತೆಗಾಗಿ ಮನವಿ – ಭಾವುಕರಾದ ರೋಹಿಣಿ ಸಿಂಧೂರಿ

    ಹಾಸನ: ಭಾರೀ ಮಳೆಯಿಂದ ಟ್ಯಾಂಕರ್ ಉರುಳಿ ಬಿದ್ದ ಪರಿಣಾಮ ಮೂರುದಿನಗಳಾದರೂ ಚಾಲಕನ ಮೃತದೇಹ ಪತ್ತೆಯಾಗಿಲ್ಲ. ಆದ್ದರಿಂದ ಮೃತದೇಹ ಪತ್ತೆಯಾಗಿ ಕುಟುಂಬಸ್ಥರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಮೂರು ದಿನಗಳ ಹಿಂದೆ ಶಿರಾಡಿಘಾಟ್‍ನಲ್ಲಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿತ್ತು. ಆದರೆ ಇಷ್ಟು ದಿನಗಳಾದರು ಮೃತಪಟ್ಟ ಚಾಲಕ ಸಂತೋಷ್ ಮೃತದೇಹ ಪತ್ತೆಯಾಗಿಲ್ಲ. ಆದ್ದರಿಂದ ಮೃತದೇಹ ಪತ್ತೆ ಮಾಡವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಅಂತ ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕುಟುಂಬಸ್ಥರು ಧರಣಿ ನಡೆಸಿದ್ದು, ಕೂಡಲೇ ಮೃತದೇಹ ಪತ್ತೆಮಾಡಿ ಎಂದು ಒತ್ತಾಯಿಸಿದ್ದರು. ಬಳಿಕ ಸ್ಥಳಕ್ಕೆ ಭೇಟಿ ನೀಡಿ ರೋಹಿಣಿ ಅವರು ಕುಟುಂಬಸ್ಥರಿಗೆ ಸಮಾಧಾನ ಮಾಡಿ ಭರವಸೆ ನೀಡಿದ್ದಾರೆ.

    ಟ್ಯಾಂಕರ್ ಇಂಜಿನ್ ಜೊತೆಗೆ ನೀರಿನಲ್ಲಿ ಮುಳುಗಿದ್ದು, ಅದರಲ್ಲಿ ಚಾಲಕನ ಮೃತದೇಹ 10 ಅಡಿಯ ಕೆಸರಿನಲ್ಲಿ ಸಿಲುಕಿದೆ. ಆದ್ದರಿಂದ ಪತ್ತೆ ಮಾಡುವ ಕಾರ್ಯ ವಿಳಂಬವಾಗುತ್ತಿದ್ದು, ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಶೀಘ್ರವೇ ಮೃತದೇಹ ಪತ್ತೆ ಮಾಡುವುದಾಗಿ ಹಾಸನ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

    ಕೊಡಗು ಭಾಗದಲ್ಲಿ ಸುರಿದ ವ್ಯಾಪಕ ಮಳೆಯಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಅರಕಲಗೂಡು ತಾಲೂಕಿನ ರಾಮನಾಥಪುರ ಅಕ್ಷರಶಃ ಮುಳುಗಿಹೋಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನೂರಾರು ಮನೆಗಳು ಜಲಾವೃತವಾಗಿ ಸಾವಿರಾರು ಜನರು ಸಂತ್ರಸ್ಥರಾಗಿದ್ದಾರೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಬೆಳೆ ನೀರಿನಲ್ಲಿ ಕೊಚ್ಚಿಹೋಗಿದೆ. ಸಾವಿರಾರು ಜನರಿಗೆ ಗಂಜಿ ಕೇಂದ್ರ ತೆರೆದು ರಕ್ಷಣೆ ನೀಡಲಾಗಿದ್ದು ಭಾರೀ ಮಳೆಯಿಂದ ಶಿರಾಡಿಘಾಟ್-ಮಾಣಿ-ಮೈಸೂರು ಹೆದ್ದಾರಿ ಬಂದ್ ಹಿನ್ನೆಲೆಯಲ್ಲಿ ಮಂಗಳೂರಿನಿಂದ ವಿಮಾನಯಾನ ಮತ್ತಷ್ಟು ದುಬಾರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಯಮ ಮೀರಿ ಕೆಲಸಮಾಡುವ ಅಧಿಕಾರಿಗೆ ಬಿಸಿ ಮುಟ್ಟಿಸಿದ ರೋಹಿಣಿ ಸಿಂಧೂರಿ

    ನಿಯಮ ಮೀರಿ ಕೆಲಸಮಾಡುವ ಅಧಿಕಾರಿಗೆ ಬಿಸಿ ಮುಟ್ಟಿಸಿದ ರೋಹಿಣಿ ಸಿಂಧೂರಿ

    ಹಾಸನ: ಭ್ರಷ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಬಿಗಿ ಕ್ರಮ ಮುಂದುವರಿದಿದ್ದು, ಅಕ್ರಮ ಸಾಗುವಳಿ ಚೀಟಿ ಮಂಜೂರಾತಿಗೆ ಸಹಕರಿಸಿದ ಆರೋಪ ಹೊತ್ತಿರುವ ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಪತ್ರ ಬರೆದಿದ್ದಾರೆ.

    ಅರಕಲಗೂಡು ತಹಶೀಲ್ದಾರ್ ಪ್ರಸನ್ನಮೂರ್ತಿ ವಿರುದ್ಧ ರಾಜ್ಯ ಮುಖ್ಯಕಾರ್ಯದರ್ಶಿಗೆ ರೋಹಿಣಿ ಸಿಂಧೂರಿ ಪತ್ರ ಬರೆದಿದ್ದಾರೆ. ಪ್ರಸನ್ನಮೂರ್ತಿ ಹಾಲಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದರು. ಜುಲೈ 4 ರಂದೇ ಪ್ರಸನ್ನಮೂರ್ತಿ ವಿರುದ್ಧ ಕ್ರಮಕ್ಕೆ ಪತ್ರ ಬರೆದಿದ್ದರು.

    ಮಾಜಿ ಸಚಿವ ಬಗರ್ ಹುಕುಂ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವಾಗ, ಸಾಗುವಳಿ ಚೀಟಿ ಫಲಾನುಭವಿಗಳ ಆಯ್ಕೆ ವಿಚಾರವಾಗಿ ಸಭೆ ನಡೆಸದೇ ಸಾವಿರಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರ ನೀಡುವ ಕಡತಕ್ಕೆ ಸಹಿ ಮಾಡಿದ್ದರು. ಈ ವೇಳೆ ಪ್ರಸನ್ನಮೂರ್ತಿ ಕೂಡ ಸಹಾಯ ಮಾಡಿದ್ದರು. ಸಚಿವರಿಗೆ ತಹಶೀಲ್ದಾರ್ ಪ್ರಸನ್ನಮೂರ್ತಿ ಸಹಕರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಸಿಂಧೂರಿ ಅವರು ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

    ಮಾಜಿ ಉಸ್ತುವಾರಿ ಸಚಿವ ಎ.ಮಂಜುರಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿ ಬಂದಿತ್ತು. ಅಧಿಕಾರಿ ವಿರುದ್ಧ ಆರೋಪ ಸಾಬೀತಾಗಿರೋದು ಇದೀಗ ಮಾಜಿ ಸಚಿವರಿಗೂ ಸಂಕಷ್ಟ ತಂದೊಡ್ಡುವ ಆತಂಕ ಶುರುವಾಗಿ. ಸಚಿವ ಎ. ಮಂಜು ಮೇಲೂ ಕಾನೂನು ಕ್ರಮ ಸಾಧ್ಯತೆ ಇದೆ.

    ವಾರದ ಹಿಂದೆಯಷ್ಟೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೌಕರನನ್ನ ಅಮಾನತು ಮಾಡಿ ಓರ್ವ ಅಧಿಕಾರಿ ವಿರುದ್ಧ ಕ್ರಮಕ್ಕೆ ಪತ್ರ ಬರೆದಿದ್ದರು. ಇದೀಗ ನಿಯಮ ಮೀರಿ ಕೆಲಸಮಾಡುವ ಅಧಿಕಾರಿಗೆ ರೋಹಿಣಿ ಬಿಸಿ ಮುಟ್ಟಿಸಿದ್ದಾರೆ.

  • ನವಿಲು ಕುಕ್ಕಿ ಗಾಯಗೊಳಿಸಿದ್ದ ಅನಾಥ ಮಗುವಿಗೆ ಬರ್ತ್ ಡೇ ಸಂಭ್ರಮ- ಡಿಸಿ ರೋಹಿಣಿ ಸಿಂಧೂರಿ ಸಾಕ್ಷಿ

    ನವಿಲು ಕುಕ್ಕಿ ಗಾಯಗೊಳಿಸಿದ್ದ ಅನಾಥ ಮಗುವಿಗೆ ಬರ್ತ್ ಡೇ ಸಂಭ್ರಮ- ಡಿಸಿ ರೋಹಿಣಿ ಸಿಂಧೂರಿ ಸಾಕ್ಷಿ

    – ಅಮೆರಿಕಾ ವಾಸಿಯಾಗಲಿದ್ದಾಳೆ ಅನ್ವಿತಾ

    ಹಾಸನ: ಹೆತ್ತವರಿಂದ ದೂರವಾಗಿದ್ದ ಮಕ್ಕಳ ಹುಟ್ಟುಹಬ್ಬವನ್ನು ತವರು ಚಾರಿಟಿ ಸಂಸ್ಥೆಯೂ ವಿಜೃಂಭಣೆಯಿಂದ ಆಚರಣೆ ಮಾಡಿದ್ದು, ಇದಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಸಾಕ್ಷಿಯಾಗಿದ್ದರು.

    2017 ಜುಲೈ 13ರಂದು ಜಿಟಿಜಿಟಿ ಮಳೆಯಲ್ಲಿ ಮುಳ್ಳಿನ ಪೊದೆಯಲ್ಲಿ ನವಜಾತ ಶಿಶುವೊಂದು ಅಳುವ ಶಬ್ದ ಕೇಳಿಸಿತ್ತು. ಬಳಿಕ ಮಹಿಳೆ ಅಲ್ಲಿ ಹೋಗಿ ನೋಡಿದಾಗ ಹೆತ್ತವರಿಂದ ಬೇಡವಾದ ಮಗುವಿನ ಪತೆಯಾಗಿತ್ತು. ಆ ಅನಾಥ ನವಜಾತ ಶಿಶುವನ್ನು ನವಿಲುಗಳು ಕುಕ್ಕಿ ಗಾಯಗೊಳಿಸಿ ಸಾವು ಬದುಕಿನ ನಡುವೆ ಹೋರಾಡುವ ಪರಿಸ್ಥಿತಿ ಇತ್ತು. ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದರು. ಈಗ ಆ ಮಗುವಿನ ಹೆಸರು “ಅನ್ವಿತಾ”. ಈ ಜುಲೈ 13ಕ್ಕೆ ಒಂದು ವರ್ಷದ ಹುಟ್ಟಿದ ದಿನವಾಗಿದ್ದು, ಮುದ್ದು ಕಂದಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾಳೆ.

    ಜಿಲ್ಲೆಯ ಹೊಳೇನರಸೀಪುರದ ಶ್ರೀರಾಮದೇವರ ಅಣೆಕಟ್ಟೆ ಬಳಿ ಅನಾಥವಾಗಿ ಬಿದ್ದಿದ್ದ ಶಿಶುವನ್ನು ಮೊದಲು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಸಾರ್ವಜನಿಕರು ಮಾನವೀಯತೆ ಮೆರೆದಿದ್ದರು. ನಂತರ ಪಬ್ಲಿಕ್ ಟಿವಿಯಲ್ಲಿಯೂ ಮಗುವಿನ ಕುರಿತು ಸುದ್ದಿ ಪ್ರಸಾರವಾಗಿತ್ತು. ತಕ್ಷಣ ಜಾಗೃತರಾಗಿದ್ದ ಶಿಶು ಕಲ್ಯಾಣ ಸಮಿತಿಯವರು ಮಗುವನ್ನು ಹಾಸನದ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದರು.

    ಜಿಲ್ಲಾಸ್ಪತ್ರೆಯ ವೈದ್ಯರ ವಿಶೇಷ ಆರೈಕೆಯಲ್ಲಿ ಐಸಿಯುನಲ್ಲಿದ್ದ ಅನ್ವಿತಾ ಸಾವನ್ನು ಗೆದ್ದ ಬಂದಳು. ನಂತರ ನಗರದ ತವರು ಚಾರಿಟಿಯಲ್ಲಿ ಬೆಳೆದ ಮಗುವಿಗೆ ಇದೀಗ ಒಂದು ವರ್ಷವಾಗಿದೆ. ತವರು ಚಾರಿಟಿ ಮತ್ತು ಜಿಲ್ಲಾಡಳಿತದ ವತಿಯಿಂದ ಅನ್ವಿತಾಳ ಒಂದು ವರ್ಷದ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.

    ಹಾಸನದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ವತಃ ತಮ್ಮ ಮಕ್ಕಳೊಂದಿಗೆ ಅನ್ವಿತಾಳ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು. ಇಷ್ಟೆ ಅಲ್ಲದೇ ಹೆತ್ತವರಿಗೆ ಬೇಡವಾದ ಅನ್ವಿತಾ ಈಗ ಪ್ರಪಂಚ ದೊಡ್ಡಣ್ಣ ಅಮೆರಿಕಾ ವಾಸಿಯಾಗಲಿದ್ದಾಳೆ. ಹೌದು ಅಮೆರಿಕಾ ಮೂಲ ದಂಪತಿ ದತ್ತು ಪಡೆದು ವಿಸಾಗಾಗಿ ಕಾಯುತ್ತಿದ್ದು, ಅದು ಕೈಗೆ ಸಿಕ್ಕಿದ ಕೂಡಲೇ ಅನ್ವಿತಾ ಅಮೆರಿಕಾ ವಾಸಿಯಾಗಲಿದ್ದಾಳೆ.

  • ಮತ್ತೆ ಕರ್ತವ್ಯಕ್ಕೆ ಹಾಜರ್ – ತಮ್ಮ ಜಯದ ಬಗ್ಗೆ ರೋಹಿಣಿ ಸಿಂಧೂರಿ ಮಾತು

    ಮತ್ತೆ ಕರ್ತವ್ಯಕ್ಕೆ ಹಾಜರ್ – ತಮ್ಮ ಜಯದ ಬಗ್ಗೆ ರೋಹಿಣಿ ಸಿಂಧೂರಿ ಮಾತು

    ಹಾಸನ: ಯಾವುದೇ ಸರ್ಕಾರಗಳಿಗೆ 5 ವರ್ಷ ಕಾಲಾವಕಾಶ ಇರುವಂತೆ ಐಎಎಸ್ ಅಧಿಕಾರಿಗಳಿಗೂ ಕನಿಷ್ಟ ಅವಧಿವರೆಗೆ ಒಂದು ಕಡೆ ಕೆಲಸ ಮಾಡಲು ಬಿಡಬೇಕು ಎಂಬ ಸುಪ್ರೀಂಕೋರ್ಟ್ ನಿಯಮಾವಳಿ ಇದೆ. ಆ ಹಿನ್ನೆಲೆಯಲ್ಲಿ ನಾನೂ ಕಾನೂನು ಹೋರಾಟ ಮಾಡಿದೆ. ಇದರಲ್ಲಿ ಜಯ ಸಿಕ್ಕಿರುವುದು ಖುಷಿಯ ವಿಷಯ ಎಂದು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

    ಮೂರೂವರೆ ತಿಂಗಳ ಬಳಿಕ ಮತ್ತೆ ಹಾಸನ ಡಿಸಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, ಹೈಕೋರ್ಟ್ ತೀರ್ಪು ಒಳ್ಳೆಯ ಬೆಳವಣಿಗೆ. ಜಿಲ್ಲಾಮಟ್ಟದ ಅಧಿಕಾರಿಗಳನ್ನು ಪದೇ ಪದೇ ವರ್ಗ ಮಾಡುವುದರಿಂದ ಒಳ್ಳೆ ಕೆಲಸ ಮಾಡಲು ಕಷ್ಟವಾಗಲಿದೆ. ನಾನು ಹಾಸನ ಜಿಲ್ಲೆಗೆ ಬಂದಾಗ ಏನೂ ಗೊತ್ತಿರಲಿಲ್ಲ. ಕಳೆದ 6 ತಿಂಗಳಲ್ಲಿ ಜಿಲ್ಲೆಯ ಆಗುಹೋಗು ತಿಳಿದುಕೊಂಡಿದ್ದೇನೆ. ಏನೇನು ಕಾರ್ಯಕ್ರಮ ಮಾಡಬಹುದು ಎಂಬ ದೊಡ್ಡ ಪಟ್ಟಿಯೇ ಇದೆ. ಹೀಗಿದ್ದಾಗ ವರ್ಗ ಮಾಡಿದ್ರೆ ಸರಿಕಾಣದು ಎಂದರು. ಇದನ್ನೂ ಓದಿ: ರೋಹಿಣಿ ಸಿಂಧೂರಿ ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ವರ್ಗ

    ನಾನು ಮಂಡ್ಯದಲ್ಲಿ ಸಿಇಓ ಆಗಿದ್ದಾಗ ಕೇವಲ ಮೂರು ತಿಂಗಳು ಆ ಹುದ್ದೆಯಲ್ಲೇ ಉಳಿಸಿದ್ದರೆ ಬಯಲು ಮುಕ್ತ ಶೌಚಾಲಯ ಯೋಜನೆ ಮುಗಿಸುತ್ತಿದ್ದೆನು. ಅಂದು ವರ್ಗ ಮಾಡಿದಾಗ ಬೇಸರವಾಗಿತ್ತು. ಸುಪ್ರೀಂ ನಿಯಮಾವಳಿ ಇದ್ದರೂ, ಏಕೆ ಪಾಲನೆಮಾಡುತ್ತಿಲ್ಲ ಎಂದು ಈಗ ಕಾನೂನು ಹೋರಾಟ ಮಾಡಬೇಕಾಯಿತು ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು. ತಮ್ಮನ್ನು ಮತ್ತೆ ಡಿಸಿಯಾಗಿ ಮುಂದುವರಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರಬಹುದು. ಅದು ರಾಜಕೀಯ. ನಾನು ಹಾಸನ ಡಿಸಿಯಷ್ಟೆ. ನನ್ನ ಅಧಿಕಾರ ಮಿತಿಯಲ್ಲಿ ಏನೆಲ್ಲಾ ಮಾಡಬಹುದೋ ಅದನ್ನು ಉತ್ತಮವಾಗಿ ಮಾಡಲು ಪ್ರಯತ್ನಿಸುತ್ತೇನೆ. ನನ್ನ ಕಾರ್ಯಶೈಲಿ ಹಿಂದಿನಂತೆ ಇರಲಿದೆ. ಏಕಾಏಕಿ ಬದಲಾವಣೆ ಮಾಡಿಕೊಳ್ಳಲು ಆಗುವುದಿಲ್ಲ. ಯೋಜಿತ ಕೆಲಸ ಕಾರ್ಯಗಳನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಲು ಯತ್ನಿಸುವೆ ಎಂದರು.