Tag: Rohini Sindhuri

  • ದಸರಾ ಯಶಸ್ಸಿಗೆ ಹೊತ್ತಿದ್ದ ಹರಕೆ ತೀರಿಸಿದ ರೋಹಿಣಿ ಸಿಂಧೂರಿ

    ದಸರಾ ಯಶಸ್ಸಿಗೆ ಹೊತ್ತಿದ್ದ ಹರಕೆ ತೀರಿಸಿದ ರೋಹಿಣಿ ಸಿಂಧೂರಿ

    ಮೈಸೂರು: ನಾಡಹಬ್ಬ ದಸರಾ ಯಶಸ್ವಿಯಾಗಲು ಹೊತ್ತಿದ್ದ ಹರಕೆಯನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತೀರಿಸಿದ್ದಾರೆ.

    ತಂದೆ, ತಾಯಿ, ಪತಿ ಹಾಗೂ ಮಗುವಿನೊಂದಿಗೆ ಚಾಮುಂಡಿಯ ಪಲ್ಲಕ್ಕಿ ರಥ ಎಳೆಯುವ ಮೂಲಕ ರೋಹಿಣಿ ಸಿಂಧೂರಿ ತಾನು ಹೊತ್ತಿದ್ದ ಹರಕೆಯನ್ನು ಒಪ್ಪಿಸಿದ್ದಾರೆ. ರೋಹಿಣಿ ಸಿಂಧೂರಿ ಅವರು ದಸರಾ ಹೊತ್ತಿನಲ್ಲೇ ಮೈಸೂರಿಗೆ ಡಿಸಿಯಾಗಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ದಸರಾ ಸುಸೂತ್ರವಾಗಿ ನಡೆಯುವಂತೆ ಹರಕೆ ಹೊತ್ತಿದ್ದರು.

    ನವರಾತ್ರಿಯ 9 ನೇ ದಿನ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ್ದಾರೆ. ನಿನ್ನೆ ಜಂಬೂಸವಾರಿ ಮೆರವಣಿಗೆ ಮುಗಿಯುತ್ತಿದ್ದಂತೆ ರೋಹಿಣಿ ಕುಟುಂಬ ಸಂಜೆ ಬೆಟ್ಟಕ್ಕೆ ತೆರಳಿ ರಥ ಎಳೆದಿದೆ.

    ಮೈಸೂರು ದಸರಾದ ಪ್ರಮುಖ ಆಕರ್ಷಣೆ ಅಂದ್ರೆ ಜಂಬೂ ಸವಾರಿ. ದೇಶ ಮಾತ್ರವಲ್ಲ, ವಿದೇಶಗಳಲ್ಲೂ ಕಣ್ಮನ ಸೆಳೆಯುತ್ತಿದ್ದ ಜಂಬೂ ಸವಾರಿ ಇದೇ ಮೊದಲ ಬಾರಿಗೆ ಇಷ್ಟೊಂದು ಸರಳವಾಗಿ ನಡೆದಿದೆ. ಕೊರೊನಾದಿಂದಾಗಿ ಈ ಬಾರಿ ಜಂಬೂ ಸವಾರಿ ಈ ಬಾರಿ ಕೇವಲ 500 ಮೀಟರ್‍ಗೆ ಸೀಮಿತವಾಗಿತ್ತು. ಜಂಬೂಸವಾರಿ ಕಾರ್ಯಕ್ರಮ ಆರಂಭವಾಗೋದೇ ನಾಡದೊರೆ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ. ಕುಂಭಲಗ್ನದಲ್ಲಿ ಸಿಎಂ ಯಡಿಯೂರಪ್ಪ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ನಂದಿಧ್ವಜಕ್ಕೆ ಪೂಜೆ ನೆರವೇರಿಸಿದ್ರು. ಸಿಎಂ ಯಡಿಯೂರಪ್ಪ ಜೊತೆ ಎಸ್‍ಟಿ ಸೋಮಶೇಖರ್, ಸಿಟಿ ರವಿ, ಪ್ರತಾಪ್ ಸಿಂಹ ಭಾಗಿಯಾಗಿದ್ರು.

    ಕೊರೊನಾದಿಂದ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಕೇವಲ 23 ನಿಮಿಷದಲ್ಲಿ ಮುಕ್ತಾಯಗೊಂಡಿತು. ಕೊರೊನಾ ಇದ್ದಿದ್ದರಿಂದ ಸರ್ಕಾರದ ಆದೇಶದನ್ವಯ ಕೇವಲ 500 ಮೀಟರ್ ಮಾತ್ರ ಜಂಬೂಸವಾರಿ ಸಾಗಿತು. ನಾಡದೇವಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಇದೇ ಮೊದಲ ಬಾರಿಗೆ ಹೊತ್ತ ಅಭಿಮನ್ಯು, ಐದೂವರೆ ಕಿ.ಮೀ. ದೂರದ ಬನ್ನಿಮಟ್ಟಪದ ಬದಲಿಗೆ ಅರಮನೆ ಆವರಣದಲ್ಲಿ 500 ಮೀಟರ್ ಮಾತ್ರ ಹೆಜ್ಜೆ ಹಾಕಿದ್ದಾನೆ.

  • ಅ.17 ರಿಂದ 14 ದಿನ ಮೈಸೂರಿನ ಪ್ರವಾಸಿ ತಾಣಗಳು ಬಂದ್

    ಅ.17 ರಿಂದ 14 ದಿನ ಮೈಸೂರಿನ ಪ್ರವಾಸಿ ತಾಣಗಳು ಬಂದ್

    – ಪ್ರವಾಸಿಗರಿಗೆ ನಿಷೇಧ ಹೇರಿದ ಜಿಲ್ಲಾಡಳಿತ
    – ಇಂದು ಮಧ್ಯರಾತ್ರಿಯಿಂದಲೇ ಚಾಮುಂಡಿ ಬೆಟ್ಟಕ್ಕೆ ನಿಷೇಧ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2020 ಹಿನ್ನೆಲೆಯಲ್ಲಿ ಬಿಗಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು, ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳ ಭೇಟಿಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

    ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಮೈಸೂರು ಅರಮನೆ, ಮೃಗಾಲಯಕ್ಕೆ 15 ದಿನಗಳ ಕಾಲ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಅಕ್ಟೋಬರ್ 17ರಿಂದ ನವೆಂಬರ್ 1ರವರೆಗೆ ಸಂಪೂರ್ಣ ನಿಷೇಧ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಇಂದು ಮಧ್ಯರಾತ್ರಿಯಿಂದಲೇ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

    ನಂಜನಗೂಡು ದೇವಾಲಯಕ್ಕೂ ಪ್ರವೇಶ ನಿಷೇಧ ಮಾಡಿದ್ದು, ಅಕ್ಟೋಬರ್ 17ರಿಂದ ನವೆಂಬರ್ 1ರವರೆಗೆ ಪ್ರವಾಸಿಗರು ಹೋಗುವಂತಿಲ್ಲ. ಮೈಸೂರಿನ ಜೊತೆಗೆ ಮಂಡ್ಯ ಪ್ರವಾಸಿ ತಾಣಗಳನ್ನು ಮುಚ್ಚಲಾಗುವುದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. ಈ ಬಾರಿ ಸರಳ, ಸಾಂಪ್ರದಾಯಿಕ ಹಾಗೂ ವರ್ಚುವಲ್ ದಸರಾ ಮಾಡೋಣ ಎಂದು ಫೇಸ್‍ಬುಕ್ ಲೈವ್‍ನಲ್ಲಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಮೈಸೂರು ಜಿಲ್ಲೆ ಕೊರೊನಾ ಸೋಂಕಿನಲ್ಲಿ ರಾಜ್ಯದಲ್ಲೆ ಎರಡನೇ ಸ್ಥಾನದಲ್ಲಿದೆ. ಕೊರೊನಾ ಸಾವಿನ ಪ್ರಮಾಣ ಮೈಸೂರು ಜಿಲ್ಲೆಯಲ್ಲಿ ರಾಜ್ಯದ ಶೇಖಡ 10% ರಷ್ಟಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಈ ಕ್ರಮಗಳು ಅನಿವಾರ್ಯವಾಗಿವೆ. ಸಾರ್ವಜನಿಕರು ತಮ್ಮ ಮನೆಯಲ್ಲೆ ಇದ್ದು ಈ ಬಾರಿ ದಸರಾ ಆಚರಿಸಲು ಸಹಕಾರ ನೀಡಬೇಕೆಂದು ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ.

  • ಮೈಸೂರು ದಸರಾ ಆಚರಣೆ- ಅಧಿಕಾರಿಗಳ ಜೊತೆ ಸಿಎಂ ಸಭೆ

    ಮೈಸೂರು ದಸರಾ ಆಚರಣೆ- ಅಧಿಕಾರಿಗಳ ಜೊತೆ ಸಿಎಂ ಸಭೆ

    ಬೆಂಗಳೂರು: ಕೋವಿಡ್-19 ಸಂದರ್ಭದಲ್ಲಿ ಮೈಸೂರು ದಸರಾ ಆಚರಣೆ ಮತ್ತು ಮುಂಜಾಗ್ರತ ಕ್ರಮರಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳ ಜೊತೆ ಮುಂಜಾಗ್ರತ ಕ್ರಮಗಳ ಬಗ್ಗೆ ಚರ್ಚಿಸಿದರು.

    ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ: ಕೆ.ಸುಧಾಕರ್, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಆರೋಗ್ಯ ಇಲಾಖೆ ಆಯುಕ್ತ ಜಾವೇದ್ ಅಖ್ತರ್, ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ. ಕೆ.ಅನಿಲ್ ಕುಮಾರ್ ಉಪಸ್ಥಿತರಿದ್ದರು.

    ದಿನಕ್ಕೊಂದು ಕಾರ್ಯಕ್ರಮ: ಅಕ್ಟೋಬರ್ 17ರಂದು ಬೆಳಗ್ಗೆ 7:45 ರಿಂದ 8:15 ರೊಳಗೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನೆರವೇರಲಿದೆ. ಕೊರೊನಾ ವಾರಿಯರ್ಸ್ ಗಳ ಆಯ್ಕೆಯನ್ನು ಆಯಾ ಇಲಾಖೆಯ ಮುಖ್ಯಸ್ಥರಿಗೆ ವಹಿಸಲಾಗಿದೆ. ಅರಮನೆಯಂಗಳದಲ್ಲಿ 9 ದಿನಗಳ ಕಾರ್ಯಕ್ರಮ ಇರಲಿದೆ. 9 ದಿನಗಳ ಕಾಲ ರಾಷ್ಟ್ರೀಯ, ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಕಾರ್ಯಕ್ರಮ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ. ಆದರೆ ಈ ಬಾರಿ ಒಂದು ದಿನಕ್ಕೆ ಒಂದೇ ಕಾರ್ಯಕ್ರಮ ಇರಲಿದೆ.

    https://twitter.com/CMofKarnataka/status/1315176548912132097

    ಈ ಬಾರಿಯ ದಸರಾದಲ್ಲಿ ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸಲಾಗುತ್ತಿದ್ದು, ಈ ಹಿನ್ನೆಲೆ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಅವರನ್ನು ಉದ್ಘಾಟಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಡಾ.ಮಂಜುನಾಥ್ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಸೋಮಶೇಖರ್ ತಿಳಿಸಿದ್ದಾರೆ.

  • ನಂಜುಂಡನ ಮುಂದೆ ಅರ್ಧ ಗಂಟೆಗೂ ಹೆಚ್ಚು ಕಾಲ ಡಿಸಿ ರೋಹಿಣಿ ಧ್ಯಾನ

    ನಂಜುಂಡನ ಮುಂದೆ ಅರ್ಧ ಗಂಟೆಗೂ ಹೆಚ್ಚು ಕಾಲ ಡಿಸಿ ರೋಹಿಣಿ ಧ್ಯಾನ

    ಮೈಸೂರು: ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೀಗ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಹೋಗಿದ್ದಾರೆ.

    ಮೈಸೂರಿನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡುವ ಮೊದಲು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದರು. ನಂತರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಇದೀಗ ರೋಹಿಣಿ ಸಿಂಧೂರಿಯವರು ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಹೋಗಿದ್ದಾರೆ.

    ರೋಹಿಣಿ ಸಿಂಧೂರಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ದೇವಾಲಯದಲ್ಲಿ ಧ್ಯಾನ ಪ್ರಾರ್ಥನೆಯಲ್ಲಿ ಮುಳುಗಿದ್ದರು. ನಂತರ ನಂಜುಂಡನಿಗೆ ಹಾಲು, ಎಳನೀರು ಅಭಿಷೇಕ ಮಾಡಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಪೂಜೆ ಬಳಿಕ ಕಪಿಲಾ ನದಿಯ ಸ್ನಾನಘಟಕ್ಕೆ ತೆರಳಿ ಅಲ್ಲಿನ ಸ್ಥಿತಿಗತಿಯನ್ನು ವೀಕ್ಷಿಸಿದರು.

    ಇದೇ ವೇಳೆ ದೇವಾಲಯದಲ್ಲಿ ಆಗಬೇಕಾಗಿರುವ ವಿವಿದ ಅಭಿವೃದ್ದಿ ಕಾರ್ಯಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

  • ಆಂಧ್ರದ ಹೆಣ್ಣುಮಗಳಿಗಾಗಿ ಕನ್ನಡದ ಜಿಲ್ಲಾಧಿಕಾರಿ ವರ್ಗಾವಣೆ: ಸಾರಾ ಮಹೇಶ್ ಕಿಡಿ

    ಆಂಧ್ರದ ಹೆಣ್ಣುಮಗಳಿಗಾಗಿ ಕನ್ನಡದ ಜಿಲ್ಲಾಧಿಕಾರಿ ವರ್ಗಾವಣೆ: ಸಾರಾ ಮಹೇಶ್ ಕಿಡಿ

    ಮೈಸೂರು: ಆಂಧ್ರದ ಹೆಣ್ಣು ಮಗಳಿಗಾಗಿ ಕನ್ನಡದ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿರುವುದಕ್ಕೆ ಮಾಜಿ ಸಚಿವ ಸಾ.ರಾ ಮಹೇಶ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

    ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ವಿಶೇಷಾಧಿಕಾರಿ, ನೇಮಕಾಧಿಕಾರಿ ನೇಮಕವಾದ ನಂತರ ಜಿಲ್ಲಾಧಿಕಾರಿಯನ್ನ ಬದಲಾವಣೆ ಮಾಡಿರೋದು ಸರಿಯಲ್ಲ. ಅದು ಸ್ಥಳ ತೋರಿಸದೆ ದಲಿತ ಡಿಸಿಯನ್ನ ವರ್ಗಾವಣೆ ಮಾಡಿದ್ದಾರೆ. ಒಬ್ಬ ಆಂಧ್ರದ ಹೆಣ್ಣು ಮಗಳಿಗಾಗಿ ಕನ್ನಡದ ಮಗನನ್ನ ವರ್ಗಾವಣೆ ಮಾಡಿದ್ದೀರಾ. ಇದು ನಿಮ್ಮ ಸರ್ಕಾರದ ಸಾಧನೆಯಾ ಎಂದು ಪ್ರಶ್ನಿಸಿದ್ದಾರೆ.

    ಹಾಸನದಲ್ಲಿ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದಾಗ ವರ್ಗಾವಣೆಯನ್ನ ಪ್ರಶ್ನಿಸಿದ್ದರು. ಇದೀಗ 29 ದಿನದಲ್ಲಿಯೇ ಮೈಸೂರು ಡಿಸಿ ವರ್ಗಾವಣೆಯಾಗಿದೆ ಇದು ಸರಿಯೇ?, ಇಲ್ಲಿನ ಜಿಲ್ಲಾಧಿಕಾರಿಗೆ ಅನ್ಯಾಯವಾಗಿದೆ ಅನ್ನೋ ಮನಃಸಾಕ್ಷಿ ಇಲ್ವಾ?. ಅಧಿಕಾರದ ಆಸೆ ಇರುವ ಇಂತಹ ಜಿಲ್ಲಾಧಿಕಾರಿಯಿಂದ ಏನನ್ನು ನಿರೀಕ್ಷೆ ಮಾಡೋದು ಎಂದು ಹೇಳುವ ಮೂಲಕ ಮೈಸೂರಿಗೆ ರೋಹಿಣಿ ಸಿಂಧೂರಿ ವರ್ಗಾವಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

    ರೋಹಿಣಿ ಸಿಂಧೂರಿ ಅವರು ಹಠಕ್ಕೆ ಬಿದ್ದಿದ್ದಾರೆ. ನಾನು ಡಿಸಿ ಆಗಿಯೇ ಇರಬೇಕು ಎಂದಿಕೊಂಡಿದ್ದಾರೆ. ಅದಕ್ಕೆ ಹಾಸನದಲ್ಲಿ ಮೂರು ಬಾರಿ ಕೇಸ್ ಹಾಕಿ, ಇದೀಗ ಮೈಸೂರಿಗೆ ಬಂದಿದ್ದಾರೆ. ಜಿಲ್ಲಾ ಮಂತ್ರಿಗಳಿಗೆ ಮಾಹಿತಿ ಇಲ್ಲದೇ ವರ್ಗಾವಣೆ ಆಗಿದೆಯಾ?. ಹಾಗಿದ್ರೆ ನೀವೂ ಹೆಲ್ಪ್ ಲೆಸ್ಸಾ ಸಚಿವರೇ.?, ಇದಕ್ಕೆ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ಅವರೇ ಉತ್ತರ ಕೊಡಬೇಕು ಎಂದರು. ಇದನ್ನೂ ಓದಿ: ಮೈಸೂರು ನನಗೆ ಹೊಸದಲ್ಲ, ಇಲ್ಲೇ ಆಡಳಿತ ತರಬೇತಿ ಪಡೆದಿದ್ದೇನೆ: ರೋಹಿಣಿ

    ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಆಡಳಿತ ನಡಸುತ್ತಿದ್ದಾರಾ? ಅಥವಾ ಆಂಧ್ರದ ಸಿಎಂ ಆಡಳಿತ ನಡೆಸುತ್ತಿದ್ದರಾ? ಈ ವರ್ಗಾವಣೆಯನ್ನ ಆಂಧ್ರದ ಸಿಎಂ ಮಾಡಿಸಿದ್ದಾರೆಯೋ ಅನ್ನೋ ಬಗ್ಗೆ ಅನುಮಾನ ಇದೆ. ಸರ್ಕಾರ ವರ್ಗಾವಣೆ ದಂಧೆ ನಡೆಸುತ್ತಿದೆ. ಅದರ ಭಾಗವಾಗಿ ರೋಹಿಣಿ ಸಿಂಧೂರಿ ವರ್ಗಾವಣೆ ಆಗಿದೆ ಎಂದು ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

  • ಮೈಸೂರು ನನಗೆ ಹೊಸದಲ್ಲ, ಇಲ್ಲೇ ಆಡಳಿತ ತರಬೇತಿ ಪಡೆದಿದ್ದೇನೆ: ರೋಹಿಣಿ

    ಮೈಸೂರು ನನಗೆ ಹೊಸದಲ್ಲ, ಇಲ್ಲೇ ಆಡಳಿತ ತರಬೇತಿ ಪಡೆದಿದ್ದೇನೆ: ರೋಹಿಣಿ

    ಮೈಸೂರು: ನೂತನ ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

    ರೋಹಿಣಿ ಸಿಂಧೂರಿ ಅಧಿಕಾರ ಸ್ವೀಕಾರಕ್ಕೂ ಮುನ್ನ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರು ಅಧಿಕಾರ ಸ್ವೀಕಾರ ಮಾಡಿದರು.

    ಅಧಿಕಾರ ಸ್ವೀಕಾರದ ನಂತರ ಮಾತನಾಡಿದ ಅವರು, ಮೊದಲಿಗೆ ತಾಯಿ ಚಾಮುಂಡಿಯ ಆಶೀರ್ವಾದ ಪಡೆದು ಅಧಿಕಾರ ಸ್ವೀಕಾರ ಮಾಡಿದ್ದೇನೆ. ಸದ್ಯಕ್ಕೆ ಯಾವುದೇ ಅಧಿಕಾರಿಯ ಜೊತೆ ಚರ್ಚೆ ಮಾಡಿಲ್ಲ. ಆದರೆ ನಮ್ಮ ಮುಂದೆ ಎರಡು ವಿಚಾರ ಗಂಭೀರವಾಗಿದೆ. ಮೊದಲಿಗೆ ಬೆಂಗಳೂರು ನಂತರ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೈಸೂರಲ್ಲಿ ಕೊರೊನಾ ಟೆಸ್ಟಿಂಗ್ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಇದು ಬಗ್ಗೆ ಗೊತ್ತಿದೆ. ಹೀಗಾಗಿ ಟೆಸ್ಟಿಂಗ್ ಹೆಚ್ಚಿಸುವ ಅಗತ್ಯವಿದೆ. ಇದಕ್ಕೆ ಜನರ ಸಹಕಾರ ಬೇಕು. ಕೊರೊನಾ ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಟೆಸ್ಟಿಂಗ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡರು.

    ದಸರಾಗೆ ಸಿದ್ಧತೆ ಈಗಾಗಲೇ ಆರಂಭವಾಗಿದೆ. ನಾನು ಇದೇ ಮೊದಲ ಬಾರಿಗೆ ದಸರಾ ಮಾಡುತ್ತಿದ್ದೇನೆ. ಈ ಹಿಂದೆ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆದಾಗ ನಾನು ಹಾಸನ ಜಿಲ್ಲಾಧಿಕಾರಿಯಾಗಿದ್ದೆ. ಅಲ್ಲಿ ಸುಮಾರು 20-25 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು. ಆದರೆ ಇದು ನಾಡಹಬ್ಬ, ಅದರಲ್ಲೂ ಕೋವಿಡ್ ಸಮಯದಲ್ಲಿ ತುಂಬಾ ಸೂಕ್ಷ್ಮವಾಗಿ ಕೆಲಸ ಮಾಡಬೇಕು. ಈ ಎರಡು ವಿಚಾರದ ಬಗ್ಗೆ ಹೆಚ್ಚು ಗಮನಹರಿಸುತ್ತೇನೆ. ತುರ್ತಾಗಿ ಅಧಿಕಾರಿಗಳ ಸಭೆ ನಡೆಸುತ್ತೇನೆ. ಮೈಸೂರು ನನಗೆ ಹೊಸದಲ್ಲ. ಮೈಸೂರಿನಲ್ಲೇ ಆಡಳಿತ ತರಬೇತಿ ಪಡೆದಿದ್ದೇನೆ. ಇದಕ್ಕೆ ಜನರ ಸಹಕಾರ ತುಂಬಾ ಅಗತ್ಯವಾಗಿದೆ ಎಂದು ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

    ಮೈಸೂರು ಜಿಲ್ಲಾಧಿಕಾರಿ ಬಿ.ಶರತ್ ಅವರನ್ನ ಒಂದೇ ತಿಂಗಳಲ್ಲಿ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶಿಸಿದೆ. ಶರತ್ ಜಾಗಕ್ಕೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

    ವರ್ಗಾವಣೆ ಯಾಕೆ?:
    ಒಂದು ತಿಂಗಳ ಹಿಂದೆ ಶರತ್ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದ್ರೆ ಕಳೆದ ಒಂದು ತಿಂಗಳಿನಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿನ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಯಾವುದೇ ಪ್ಲಾನ್ ಮಾಡಿಕೊಂಡಿರಲಿಲ್ಲ. ಸಾವಿನ ಸಂಖ್ಯೆ, ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದರೂ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಲು ಜಿಲ್ಲಾಧಿಕಾರಿ ಶರತ್ ಮುಂದಾಗಿರಲಿಲ್ಲ. ಕೊರೊನಾ ಏರಿಕೆ ನಡುವೆ ಅತಿ ಸರಳ ದಸರಾ ಆಚರಣೆ ಸರ್ಕಾರಕ್ಕೆ ದೊಡ್ಡ ಸವಾಲು ಆಗಿದೆ. ಆದ್ರೆ ಇದುವರೆಗೂ ಜಿಲ್ಲಾಧಿಕಾರಿ ದಸರಾ ಆಚರಣೆ ಯೋಜನೆಯನ್ನ ಸರ್ಕಾರಕ್ಕೆ ಸಲ್ಲಿಸದ ಹಿನ್ನೆಲೆ ಶರತ್ ಅವರ ವರ್ಗಾವಣೆ ಆಗಿದೆ ಎಂದು ತಿಳಿದು ಬಂದಿದೆ.

  • ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ

    ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ

    -ಒಂದೇ ತಿಂಗಳಲ್ಲಿ ಡಿಸಿ ಶರತ್ ವರ್ಗಾವಣೆ

    ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಬಿ.ಶರತ್ ಅವರನ್ನ ಒಂದೇ ತಿಂಗಳಲ್ಲಿ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶಿಸಿದೆ. ಶರತ್ ಜಾಗಕ್ಕೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ವರ್ಗಾವಣೆ ಯಾಕೆ?: ಒಂದು ತಿಂಗಳ ಹಿಂದೆ ಶರತ್ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದ್ರೆ ಕಳೆದ ಒಂದು ತಿಂಗಳಿನಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿನ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಯಾವುದೇ ಪ್ಲಾನ್ ಮಾಡಿಕೊಂಡಿರಲಿಲ್ಲ. ಸಾವಿನ ಸಂಖ್ಯೆ, ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದರೂ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಲು ಜಿಲ್ಲಾಧಿಕಾರಿ ಶರತ್ ಮುಂದಾಗಿರಲಿಲ್ಲ. ಕೊರೊನಾ ಏರಿಕೆ ನಡುವೆ ಅತಿ ಸರಳ ದಸರಾ ಆಚರಣೆ ಸರ್ಕಾರಕ್ಕೆ ದೊಡ್ಡ ಸವಾಲು ಆಗಿದೆ. ಆದ್ರೆ ಇದುವರೆಗೂ ಜಿಲ್ಲಾಧಿಕಾರಿ ದಸರಾ ಆಚರಣೆ ಯೋಜನೆಯನ್ನ ಸರ್ಕಾರಕ್ಕೆ ಸಲ್ಲಿಸದ ಹಿನ್ನೆಲೆ ಶರತ್ ಅವರ ವರ್ಗಾವಣೆ ಆಗಿದೆ ಎಂದು ತಿಳಿದು ಬಂದಿದೆ.

    ಇತ್ತ ಶರತ್ ಅವರಿಗೆ ಕರೆ ಮಾಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಬೇರೆ ಸೂಕ್ತ ಸ್ಥಳ ನೀಡುತ್ತೇವೆ. ಕಾನೂನು ತೊಡಕು ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಶರತ್ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನೇ ನೇಮಿಸಬೇಕೆಂದು ಸಿಎಂ ಮೇಲೆ ಒತ್ತಡ ಹಾಕಲಾಗಿತ್ತು ಎಂದು ತಿಳಿದು ಬಂದಿದೆ.

  • ಗ್ರಹಣ ಸಮಯದಲ್ಲಿ ಸ್ಕೂಬಾ ಡೈವ್ ಮಾಡಿದ ರೋಹಿಣಿ ಸಿಂಧೂರಿ

    ಗ್ರಹಣ ಸಮಯದಲ್ಲಿ ಸ್ಕೂಬಾ ಡೈವ್ ಮಾಡಿದ ರೋಹಿಣಿ ಸಿಂಧೂರಿ

    ಕಾರವಾರ: ಹಿರಿಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಗ್ರಹಣ ಸಮಯದಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ರೋಹಿಣಿ ಸಿಂಧೂರಿ ಅವರು ತಮ್ಮ ಕುಟುಂಬ ಸಮೇತ ಆಗಮಿಸಿ ಮುರಡೇಶ್ವರದ ನೇತ್ರಾಣಿ ನಡುಗಟ್ಟೆಯಲ್ಲಿ ಗ್ರಹಣ ಸಮಯದಲ್ಲಿ ಸ್ಕೂಬಾ ಡೈವಿಂಗ್ ಮಾಡಿದರು.

    ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯ ತರಬೇತಿದಾರ ಗಣೇಶ್ ಹರಿಕಂತ್ರ ರೋಹಿಣಿ ಸಿಂಧೂರಿ ಹಾಗೂ ಅವರ ಕುಟುಂಬ ಸದಸ್ಯರಿಗೆ ತರಬೇತಿಯನ್ನು ನೀಡಿದರು. ಬಳಿಕ ಗಣೇಶ್ ಹರಿಕಂತ್ರ ಅವರು ರೋಹಿಣಿ ಹಾಗೂ ಅವರ ಕುಟುಂಬಸ್ಥರನ್ನು ನೇತ್ರಾಣಿ ನಡುಗಡ್ಡೆಗೆ ಕರೆದುಕೊಂಡು ಹೋಗಿ ಸ್ಕೂಬಾ ಡೈವಿಂಗ್ ಮಾಡಿಸಿದರು.

    ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಅಪರೂಪದ ಮತ್ಸ್ಯಗಳನ್ನು ಹಾಗೂ ಹವಳದ ದಂಡೆಗಳನ್ನು ನೋಡಿ ರೋಹಿಣಿ ಸಿಂಧೂರಿ ಸ್ಕೂಬಾ ಡೈವಿಂಗ್ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

  • ರೋಹಿಣಿ ಸಿಂಧೂರಿ ಹೆಸ್ರಲ್ಲಿ ಹಾಸನದ ದೇವಾಲಯದಲ್ಲಿ ಪ್ರತಿ ಸೋಮವಾರ ಪೂಜೆ

    ರೋಹಿಣಿ ಸಿಂಧೂರಿ ಹೆಸ್ರಲ್ಲಿ ಹಾಸನದ ದೇವಾಲಯದಲ್ಲಿ ಪ್ರತಿ ಸೋಮವಾರ ಪೂಜೆ

    ಹಾಸನ: ಪುರಾತನ ಮತ್ತು ಮುಜರಾಯಿ ಇಲಾಖೆಗೆ ಸೇರಿದ ಹಾಸನದ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪ್ರತಿ ಸೋಮವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಅರ್ಚನೆ ಮಾಡಲಾಗುತ್ತದೆ.

    ಇದರ ಜೊತೆಗೆ ಅಧಿಕಾರಿಯ ಹೆಸರಿನಲ್ಲಿ ಮರ ಬೆಳೆಸಲಾಗುತ್ತಿದ್ದು ಪ್ರತಿದಿನ ಜಲಾಭಿಷೇಕ ಕೂಡ ನಡೆಯುತ್ತದೆ. ಈ ಪುರಾತನ ದೇವಾಲಯ ಶಿಥಿಲಾವಸ್ಥೆಗೆ ತೆರಳಿದ್ದರೂ ಯಾವ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನಹರಿಸಲಿಲ್ಲ. ಆದರೆ ರೋಹಿಣಿ ಸಿಂಧೂರಿಯವರು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಣ ಬಿಡುಗಡೆ ಮಾಡಿದ್ದರು.

    2017ರಲ್ಲಿ ಹಾಸನ ಜಿಲ್ಲಾಧಿಕಾರಿಯಾಗಿ ಬಂದ ರೋಹಿಣಿ ಸಿಂಧೂರಿ ದೇವಾಲಯದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ತಕ್ಷಣ 30 ಲಕ್ಷ ಹಣ ಬಿಡುಗಡೆ ಮಾಡಿಸಿದ್ದರು. ಪರಿಣಾಮ ದೇವಾಲಯಕ್ಕೆ ವಿಶೇಷವಾದ ಮೇಲ್ಛಾವಣಿ, ನೆಲಹಾಸು ಮತ್ತು ವಿದ್ಯುತ್ ಸೌಕರ್ಯ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಯಿತು. ಅಂದಿನಿಂದ ಇಲ್ಲಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಇಲ್ಲಿ ಪ್ರತಿ ಸೋಮವಾರ ಅರ್ಚನೆ ಮಾಡಲಾಗುತ್ತದೆ.

    ಗಿಡಗಂಟೆಗಳು ಬೆಳೆದು ಕಾಡಿನಂತಿದ್ದ ದೇವಾಲಯದ ಆವರಣದಲ್ಲಿ ವಿಶೇಷವಾದ ಮರಗಳಿದ್ದು ಅವುಗಳೊಂದಿಗೆ ರೋಹಿಣಿ ಸಿಂಧೂರಿ ಹೆಸರಿನಲ್ಲಿಯೂ ಸಹ ಒಂದು ಗಿಡವನ್ನು ನೆಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಿಂದಲೇ ಈ ಗಿಡವನ್ನು ತಂದು ದೇವಾಲಯದ ಆವರಣದಲ್ಲಿ ನೆಟ್ಟು ಪೋಷಣೆ ಮಾಡಲಾಗುತ್ತಿದೆ. ಗಿಡಕ್ಕೆ ಪ್ರತಿದಿನ ದೇವಾಲಯದ ಪೂಜೆಯ ಅಭಿಷೇಕದ ನೀರನ್ನು ಹಾಕುತ್ತಾರೆ. ಪ್ರತಿ ಸೋಮವಾರ ಗಿಡಕ್ಕು ಸಹ ಅಭಿಷೇಕ ಮಾಡಲಾಗುತ್ತದೆ. ದೇವಾಲಯಕ್ಕೆ ತಮ್ಮ ತಾಯಿಯೊಂದಿಗೆ ಭೇಟಿ ನೀಡಿದ ಸಿಂಧೂರಿ ಅಂದು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಮಾಡಿದ ಒಂದು ಕೆಲಸ ಅವರನ್ನು ನೆನಪಿಸಿಕೊಳ್ಳುವಂತೆ ಮಾಡಿದೆ.

  • ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮವಾಗಲಿ ಎಂದು ನಾನೇ ಹಲವು ಕಾರ್ಯಕ್ರಮ ಹಾಕಿಕೊಂಡಿದ್ದೆ – ಭವಾನಿ ರೇವಣ್ಣ

    ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮವಾಗಲಿ ಎಂದು ನಾನೇ ಹಲವು ಕಾರ್ಯಕ್ರಮ ಹಾಕಿಕೊಂಡಿದ್ದೆ – ಭವಾನಿ ರೇವಣ್ಣ

    ಹಾಸನ: ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಮಕ್ಕಳ ಫಲಿತಾಂಶ ಉತ್ತಮವಾಗಲಿ ಎಂದು ನಾನೇ ಹಲವು ಕಾರ್ಯಕ್ರಮ ಹಾಕಿಕೊಂಡಿದ್ದೆ. ಅದಕ್ಕೆ ತಕ್ಕ ಫಲಿತಾಂಶವನ್ನು ಭಗವಂತ ನೀಡಿದ್ದಾನೆ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಅವರ ಪತ್ನಿ ಮತ್ತು ಜಿಲ್ಲೆಯ ಜಿ.ಪಂ. ಶಿಕ್ಷಣ ಮತ್ತು ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಅವರು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತರಲು ಯಾರು ಎಷ್ಟು ಸಭೆ ಮಾಡಿದ್ದಾರೆ ಎನ್ನುವುದು ನಮ್ಮ ಜಿಲ್ಲೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಗೊತ್ತು. ಎಸ್‍ಎಸ್‍ಎಲ್‍ಸಿ ಫಲಿತಾಂಶ ದಲ್ಲಿ ಹಾಸನ ನಂಬರ್ ಒನ್ ಬಂದಿರೋದು ನನಗೆ ಖುಷಿಯಾಗಿದೆ. ಕಳೆದ ವರ್ಷದ ಫಲಿತಾಂಶದಲ್ಲಿ 31ನೇ ಸ್ಥಾನದಲ್ಲಿದ್ದ ನಾವು 7 ಸ್ಥಾನಕ್ಕೆ ಬಂದಿದ್ದೇವು. ಈ ವರ್ಷ ಮೊದಲ ಸ್ಥಾನ ಬಂದಿದ್ದೇವೆ ಇದಕ್ಕೆ ಕೇವಲ ನಮ್ಮ ಕುಟುಂಬ ವರ್ಗ ಮಾತ್ರ ಕಾರಣವಲ್ಲ. ಈ ಫಲಿತಾಂಶ ಬರಲು ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಪ್ರಯತ್ನ ಬಹಳ ದೊಡ್ಡದು ಎಂದು ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಪ್ರಯತ್ನವನ್ನು ಪರೋಕ್ಷವಾಗಿ ಅಲ್ಲಗೆಳೆದರು.

    ಫಲಿತಾಂಶ ಏರಿಕೆಯಲ್ಲಿ ಪತ್ನಿ ಕೊಡುಗೆ ಕೊಂಡಾಡಿದ್ದ ಸಚಿವ ರೇವಣ್ಣ ಅವರನ್ನು ಸಮರ್ಥಿಸಿಕೊಂಡ ಭವಾನಿ ಅವರು, ಇಡೀ ರಾಜ್ಯದಲ್ಲಿ ಪೋಷಕರ ಸಭೆ ಮಾಡಿದ್ದು ನಮ್ಮ ಜಿಲ್ಲೆಯಲ್ಲೇ ಮೊದಲು. ಮಕ್ಕಳ ಫಲಿತಾಂಶ ಉತ್ತಮವಾಗಿ ಬರಲಿ ಎಂದು ನಾನು ಸ್ವತಃ ಹಲವು ಸ್ವಯಂಪ್ರೇರಿತ ಕ್ರಮಗಳನ್ನು ಕೈಗೊಂಡಿದ್ದರಿಂದ ರೇವಣ್ಣನವರು ಹಾಗೆ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.

    ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರವಾಗಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ನಮ್ಮ ಪುತ್ರ ಪ್ರಜ್ವಲ್ ಕನಿಷ್ಟ ಮೂರು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾನೆ. ನಮಗೆ ಗೆಲುವಿನ ಬಗ್ಗೆ ಕುತೂಹಲ ಇಲ್ಲಾ ಲೀಡ್ ಬಗ್ಗೆ ಕುತೂಹಲ ಇದೆ. ಹಾಸನ, ಮಂಡ್ಯ, ತುಮಕೂರು ಮೂರು ಕಡೆ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.