Tag: Rohini Sindhuri

  • ಮೈಸೂರು ಡಿಸಿ ರೋಹಿಣಿ ಸಿಂಧೂರಿ ಕೊರೊನಾ ಟಫ್ ರೂಲ್ಸ್ ಜಾರಿಗೆ ಕೊಕ್ಕೆ ಹಾಕಿದ ಸರ್ಕಾರ

    ಮೈಸೂರು ಡಿಸಿ ರೋಹಿಣಿ ಸಿಂಧೂರಿ ಕೊರೊನಾ ಟಫ್ ರೂಲ್ಸ್ ಜಾರಿಗೆ ಕೊಕ್ಕೆ ಹಾಕಿದ ಸರ್ಕಾರ

    ಬೆಂಗಳೂರು/ ಮೈಸೂರು: ಕೊರೋನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರ ಪ್ರತಿಷ್ಠೆಗೇನಾದ್ರೂ ಬಿದ್ದಿದ್ಯಾ? ಇಂದು ನಡೆದ ಬೆಳವಣಿಗೆಯಿಂದ ಈ ಅನುಮಾನದ ಪ್ರಶ್ನೆ ಎದ್ದಿದೆ.

    ಇತ್ತೀಚಿಗೆ ಕೇಂದ್ರ ಸರ್ಕಾರ ಪ್ರಕಟಿಸಿದ್ದ ಮಾರ್ಗಸೂಚಿಯಲ್ಲಿ ಅಗತ್ಯಬಿದ್ರೆ ಜಿಲ್ಲಾಡಳಿತಗಳು ಟಫ್ ರೂಲ್ಸ್ ಜಾರಿ ಮಾಡಬಹುದು ಎಂದಿತ್ತು. ಅದ್ರಂತೆ ಮೈಸೂರು ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ಇಂದು ಮಧ್ಯಾಹ್ನ 10 ದಿನಗಳ ಮಟ್ಟಿಗೆ ಟಫ್ ರೂಲ್ಸ್ ಪ್ರಕಟಿಸಿದ್ರು. ಆದರೆ ಈ ಕಠಿಣ ನಿಯಮಕ್ಕೆ ಸರ್ಕಾರ ಕೊಕ್ಕೆ ಹಾಕಿದೆ.

    ಜಿಲ್ಲೆಗಳು ಪ್ರತ್ಯೇಕವಾಗಿ ಮಾರ್ಗಸೂಚಿ ಹೊರಡಿಸುವಂತಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ಸೂಚನೆಯನ್ನು ಮಾತ್ರ ಕಟ್ಟುನಿಟ್ಟಾಗಿ ಪಾಲಿಸಬೇಕು. ಕೂಡಲೇ ಆದೇಶ ಹಿಂಪಡೆಯಬೇಕು ಎಂದು ವಿಪತ್ತು ನಿರ್ವಹಣಾ ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ.

    ಮೈಸೂರು ನಗರಿಯಲ್ಲಿ ದಿನೇ ದಿನೇ ಹೊಸ ಕೇಸ್‍ಗಳು ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ಡಿಸಿ ಸಿಂಧೂರಿ ಹಲವು ಬಿಗಿ ಕ್ರಮ ಕೈಗೊಂಡಿದ್ದರು. ಮೈಸೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಕೊರೋನಾ ನೆಗೆಟೀವ್ ರಿಪೋರ್ಟನ್ನು ಕಡ್ಡಾಯವಾಗಿ ತರಬೇಕು ಎಂದು ಆದೇಶಿಸಿದ್ರು.

    ಬೆಂಗಳೂರಿಂದ ಬರುವವರು ನೆಗೆಟೀವ್ ರಿಪೋರ್ಟ್ ತನ್ನಿ ಎಂದಿದ್ದ ಜಿಲ್ಲಾಧಿಕಾರಿ ಇದು ಮನವಿ ಅಷ್ಟೇ. ಕಡ್ಡಾಯವಲ್ಲ ಅಂತಾ ಸ್ಪಷ್ಟಪಡಿಸಿದ್ರು. ಸಭೆ ಸಮಾರಂಭ, ಮದುವೆಗಳಿಗೆ ಕಡ್ಡಾಯ ಅನುಮತಿ ಪಡೆಯಬೇಕು. ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವವರು ಕಡ್ಡಾಯವಾಗಿ ನೆಗೆಟೀವ್ ರಿಪೋರ್ಟ್ ಹಾಜರುಪಡಿಸಬೇಕು ಎಂದು ಸೂಚಿಸಿದ್ರು.

    ಥಿಯೇಟರ್ ವಿಚಾರದಲ್ಲಿ ಡಿಸಿ ತೆಗೆದುಕೊಂಡ ತೆಗೆದುಕೊಂಡ ಕಠಿಣ ನಿಲುವನ್ನು ಮಾಲೀಕರು ಆಕ್ಷೇಪಿಸಿದ್ರು. ಇದೊಂಥರಾ ಲಾಕ್‍ಡೌನ್ ರೀತಿಯಲ್ಲೇ ಆದೇಶವಿದೆ. ಹೀಗಾದ್ರೆ ಥಿಯೇಟರ್ ಕಡೆ ಯಾರು ಬರ್ತಾರೆ? ದಯವಿಟ್ಟು ಈ ಆದೇಶ ವಾಪಸ್ ಪಡೀಬೇಕು ಎಂದು ಡಿಸಿಯಲ್ಲಿ ಮನವಿ ಮಾಡ್ಕೊಂಡಿದ್ದರು. ಈ ಬೆನ್ನಲ್ಲೇ ಸರ್ಕಾರ, ಡಿಸಿ ಆದೇಶಕ್ಕೆ ತಡೆ ನೀಡಿದೆ.

    ಯುಗಾದಿ ಹಬ್ಬದ ಕಾರಣ ಮೂರು ದಿನಗಳ ಮಟ್ಟಿಗೆ ದೇವರಾಜ ಮಾರುಕಟ್ಟೆಯನ್ನು ರೈಲ್ವೇ ನಿಲ್ದಾಣದ ಬಳಿಯ ಜೆಕೆ ಗ್ರೌಂಡ್‍ಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ಏಪ್ರಿಲ್ 11ರಿಂದ ಮೂರು ದಿನಗಳ ಕಾಲ ಜೆಕೆ ಗ್ರೌಂಡ್‍ನಲ್ಲಿ ಹಬ್ಬದ ವಹಿವಾಟು ನಡೆಯಲಿದೆ.

  • ಮೈಸೂರಿನ ಪ್ರವಾಸಿ ಸ್ಥಳಗಳಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ- ರೋಹಿಣಿ ಸಿಂಧೂರಿ

    ಮೈಸೂರಿನ ಪ್ರವಾಸಿ ಸ್ಥಳಗಳಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ- ರೋಹಿಣಿ ಸಿಂಧೂರಿ

    ಮೈಸೂರು: ಜಿಲ್ಲೆಯಲ್ಲಿ ಕೆಲದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಏಪ್ರಿಲ್ 10 ರಿಂದ ಕೆಲವು ಟಫ್ ರೂಲ್ಸ್ ಗಳನ್ನು ಹಾಕಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮುಂದಾಗಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿಣಿ ಸಿಂಧೂರಿ, ಈಗಾಗಲೇ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದ್ದು, ಏಪ್ರಿಲ್ 10 ರಿಂದ ಏಪ್ರಿಲ್ 20 ರವರೆಗೆ ಹಲವು ರಜೆಗಳು ಇರುವುದರಿಂದಾಗಿ ಮೈಸೂರಿಗೆ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಈ ವೇಳೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಹಾಗಾಗಿ ಮೈಸೂರಲ್ಲಿ ಕೆಲವು ಟಫ್ ರೂಲ್ಸ್ ಗಳನ್ನು ಜಾರಿಗೆ ತರಲು ಮುಂದಾಗಿದ್ದೇವೆ ಎಂದರು.

    ಜಿಲ್ಲೆಯಲ್ಲಿ ಕೊರೊನಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಡಳಿತ ಕೆಲವು ಕ್ರಮಕ್ಕೆ ಮುಂದಾಗಿದ್ದು, ಈ ಪ್ರಕಾರ ಏಪ್ರಿಲ್ 10 ರಿಂದ ಏಪ್ರಿಲ್ 20ರ ವರೆಗೆ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಹೋಗಲು, ಚಿತ್ರಮಂದಿರಗಳಿಗೆ ತೆರಳಲು ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

    ನಾವು ಮೈಸೂರಿನಲ್ಲಿರುವ ಯಾವುದೇ ಪ್ರವಾಸಿತಾಣಗಳನ್ನು ಮುಚ್ಚುತಿಲ್ಲ ಬದಲಾಗಿ ಕೆಲವು ನಿಯಮಗಳನ್ನು ಜಾರಿಗೆ ತಂದಿದ್ದೇವೆ. ರಜೆಯ ಇರುವುದರಿಂದಾಗಿ ಪ್ರವಾಸಿಗರು ಬರುವ ನಿರೀಕ್ಷೆ ಇದ್ದು ಈ ಸಂದರ್ಭ ಜನ ಸಂದಣಿ ಜಾಸ್ತಿ ಇರುವ ಪ್ರದೇಶಗಳಲ್ಲಿ ನಿಗಾ ವಹಿಸಲಾಗುವುದು, ಈ ಎಲ್ಲಾ ಕಾರ್ಯಗಳಿಗಾಗಿ ಈಗಾಗಲೇ ಜಿಲ್ಲೆಯಲ್ಲಿ 300 ಹೋಂ ಗಾರ್ಡ್‍ಗಳನ್ನು ನೇಮಕ ಮಾಡಿದ್ದೇವೆ. ಮೈಸೂರಿಗೆ ಪ್ರವಾಸಕ್ಕೆ ಬರುವವರು ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ತರಬೇಕೆಂದು ಪ್ರವಾಸಿಗರಿಗೆ ಮನವಿ ಮಾಡಿಕೊಂಡರು.

    ಅದೇ ರೀತಿ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಸಭೆ ಸಮಾರಂಭಗಳಿಗೆ ಪೊಲೀಸ್ ಇಲಾಖೆಯಿಂದ ಒಪ್ಪಿಗೆ ಪಡೆದುಕೊಂಡು ಸಮಾರಂಭಗಳನ್ನು ನಡೆಸಬೇಕೆಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಂಡರು.

  • ಕಾರಿಗೆ ಪಂಕ್ಚರ್ ಹಾಕಿದ ಡಿಸಿ ರೋಹಿಣಿ ಸಿಂಧೂರಿ

    ಕಾರಿಗೆ ಪಂಕ್ಚರ್ ಹಾಕಿದ ಡಿಸಿ ರೋಹಿಣಿ ಸಿಂಧೂರಿ

    ಮೈಸೂರು: ಜಿಲ್ಲೆಯ ಡಿಸಿ ರೋಹಿಣಿ ಸಿಂಧೂರಿ ಅವರು ಕಾರ್‍ಗೆ ಪಂಚರ್ ಹಾಕುತ್ತಿರುವ ವೀಡಿಯೋ ಸಖತ್ ವೈರಲ್ ಆಗಿದೆ.

    ಕುಟುಂಬದ ಜೊತೆ ರೋಹಿಣಿ ಸಿಂಧೂರಿ ಅವರು ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಕಾರಿನ ಟೈರ್ ಪಂಕ್ಚರ್ ಆಗಿದೆ. ಆಗ ಸ್ವತಃ ರೋಹಿಣಿಯವರೆ ಕಾರಿನ ಪಂಚರ್ ಕಟ್ಟುತ್ತಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೈರಲ್ ವೀಡಿಯೋದಲ್ಲಿ ಏನಿದೆ?
    ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರಿನ ಟೈರ್ ಕಳಚುವ ವೇಳೆ ಸಾರ್ವಜನಿಕರು ಈ ವೀಡಿಯೋ ಮಾಡಿದ್ದಾರೆ. ತಾವು ರೋಹಿಣಿ ಸಿಂಧೂರಿ ಅಲ್ಲವಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಡಿಸಿ ರೋಹಿಣಿ ಸಿಂಧೂರಿ ಅವರು ನಕ್ಕು ಸುಮ್ಮನಾಗಿ ಮತ್ತೆ ತಮ್ಮ ಕೆಲಸವನ್ನು ತಾವು ಮಾಡತೊಡಗಿದ್ದಾರೆ.

  • ಶಿಷ್ಟಾಚಾರ ಪಾಲಿಸದ ಅಧಿಕಾರಿಗಳ ವಿರುದ್ಧ ಸ್ಪೀಕರ್‌ಗೆ ದೂರು ನೀಡುತ್ತೇನೆ : ಸಾರಾ ಮಹೇಶ್

    ಶಿಷ್ಟಾಚಾರ ಪಾಲಿಸದ ಅಧಿಕಾರಿಗಳ ವಿರುದ್ಧ ಸ್ಪೀಕರ್‌ಗೆ ದೂರು ನೀಡುತ್ತೇನೆ : ಸಾರಾ ಮಹೇಶ್

    ಮೈಸೂರು: ಯಾವುದೇ ಸಮಿತಿ ಸಭೆಗಳಲ್ಲಿ ಶಿಷ್ಟಾಚಾರ ಪಾಲಿಸದ ಕೆಲವು ಅಧಿಕಾರಿಗಳ ವರ್ತನೆ ಕುರಿತಂತೆ ಸ್ಪೀಕರ್‌ಗೆ ದೂರು ನೀಡುತ್ತೇನೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಹೇಳಿದ್ದಾರೆ.

    ನಿನ್ನೆ ಮೈಸೂರಿನಲ್ಲಿ ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದ ಮೈಸೂರು ಡಿಸಿ ರೋಹಿಣಿ ಸಿಂಧೂರಿ ನಡೆ ವಿಚಾರವಾಗಿ ಇಂದು ಚಾಮರಾಜನಗರದಲ್ಲಿ ಮಾತನಾಡಿದ ಅವರು, ವಿಧಾನಮಂಡಲ ಸಭೆಯ ಮುಂದಿಡಲಾದ ಸಮಿತಿ ಸಂವಿಧಾನ ಬದ್ಧವಾಗಿ ರಚನೆಯಾಗಿದೆ. ಸಮಿತಿ ಸಭೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅದರದ್ದೇ ಆದ ಶಿಷ್ಟಾಚಾರ ಇರುತ್ತದೆ. ಹಾಗಾಗಿ ಶಿಷ್ಟಾಚಾರ ಪಾಲನೆ ಬಗ್ಗೆ ಕೆಲವು ಅಧಿಕಾರಿಗಳ ವರ್ತನೆ ಕುರಿತಂತೆ ಸ್ಪೀಕರ್ ಹಾಗೂ ಮುಖ್ಯಕಾರ್ಯದರ್ಶಿಗಳ ಜೊತೆ ಚರ್ಚೆ ನಡೆಸುತ್ತೇವೆ. ಯಾವುದೇ ಸಮಿತಿ ಸಭೆ ಬಂದಾಗ ಡಿಸಿ ಮತ್ತು ಎಸ್ಪಿ ಅವರು ಬರಬೇಕು. ಅವರ ಅವಶ್ಯಕತೆ ಇದ್ದರೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಹೇಳುತ್ತೇವೆ. ಆದರೆ ನಿನ್ನೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವಶ್ಯಕತೆ ಇರಲಿಲ್ಲ. ಹಾಗಾಗಿ ಅವರನ್ನು ಬೇಡ ಎಂದು ಕಳುಹಿಸಿದ್ದೇವೆ ಎಂದು ಹೇಳಿದರು.

    ಮೈಸೂರು ಜಿಲ್ಲಾ ಪಂಚಾಯತ್ ಯಲ್ಲಿ ವಿಧಾನಮಂಡಲ ಕಾಗದ ಪತ್ರಗಳ ಸಮಿತಿ ಸಭೆಯಲ್ಲಿ ಮೊದಲ ಬಾರಿಗೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾರಾ ಮಹೇಶ್ ಮುಖಾಮುಖಿಯಾಗಿದ್ದರು. ಸಭೆಯಲ್ಲಿ ಮಾಸ್ಕ್ ಹಾಕಿಕೊಂಡು ಮಾತು ಆರಂಭಿಸಿದ ಡಿಸಿ ರೋಹಿಣಿ ಸಿಂದೂರಿಯವರಿಗೆ ನಿಮ್ಮ ಮಾತು ಕೇಳುತ್ತಿಲ್ಲ. ಮಾಸ್ಕ್ ತೆಗೆದು ಮಾತನಾಡಿ ಎಂದು ಸಾರಾ ಮಹೇಶ್ ಹೇಳಿದರು. ನಾನು ಮಾಸ್ಕ್ ತೆಗೆಯವುದಿಲ್ಲ. ಮಾಸ್ಕ್ ತೆಗೆದು ಮಾತನಾಡಬಾರದು ಅದಕ್ಕಾಗಿ ಮಾಸ್ಕ್ ತೆಗೆಯುವುದಿಲ್ಲ ಎಂದು ಸಾರಾ ಮಹೇಶ್‍ಗೆ ಉತ್ತರ ನೀಡುವುದರ ಮೂಲಕ ಬಹಿರಂಗವಾಗಿ ಇಬ್ಬರು ಮುಸುಕಿನ ಗುದ್ದಾಟ ನಡೆಸಿದರು.

    ಈ ಸಭೆಯಲ್ಲಿ ನನಗೆ ಸಂಬಂಧಿಸಿದ ವಿಷಯಗಳ ಚರ್ಚೆ ಇಲ್ಲ, ಹಾಗಾಗಿ ನೀವು ಸಮ್ಮತಿಸಿದರೆ ನಾನು ಸಭೆಯಿಂದ ಹೋಗುತ್ತೇನೆ ಎಂದ ಸಿಂಧೂರಿ ತಿಳಿಸಿದರು. ಅದಕ್ಕೆ ನಿಮ್ಮನ್ನು ನಾವು ಸಭೆಗೆ ಕರೆದಿರಲಿಲ್ಲ. ಆದರೂ ತಾವು ಸಭೆಗೆ ಬಂದಿದ್ದಿರಿ. ಜಿಲ್ಲೆಯ ಯಾವುದೇ ಸಭೆಯ ಮಾಹಿತಿ ಕೊಡುವುದು ಕರ್ತವ್ಯ. ಅದಕ್ಕೆ ಮಾಹಿತಿ ಕೊಟ್ಟಿದ್ದೇವೆ ಅಷ್ಟೇ. ಆದರೂ ಪರವಾಗಿಲ್ಲ. ಸಮಯ ಇದ್ದರೆ ಇರಿ, ಬೇರೆ ಕೆಲಸ ಇದ್ದರೆ ಹೋಗಿ ಎಂದು ನೇರವಾಗಿ ಸಾರಾ ಮಹೇಶ್ ಉತ್ತರಿಸಿದ್ದರು.

  • ಮುಸುಕಿನ ಗುದ್ದಾಟ ಬಹಿರಂಗ – ಸಾರಾ ಹೇಳುತ್ತಿದ್ದಂತೆ ಸಭೆಯಿಂದ ತೆರಳಿದ ರೋಹಿಣಿ ಸಿಂಧೂರಿ

    ಮುಸುಕಿನ ಗುದ್ದಾಟ ಬಹಿರಂಗ – ಸಾರಾ ಹೇಳುತ್ತಿದ್ದಂತೆ ಸಭೆಯಿಂದ ತೆರಳಿದ ರೋಹಿಣಿ ಸಿಂಧೂರಿ

    ಮೈಸೂರು: ಮೊದಲ ಬಾರಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾರಾ ಮಹೇಶ್ ಮುಖಾಮುಖಿಯಾಗಿದ್ದಾರೆ. ಆದರೆ ಮುಖಾಮುಖಿಯಾದ ಮೊದಲ ಸಭೆಯಲ್ಲೇ ಇಬ್ಬರ ಮುಸುಕಿನ ಗುದ್ದಾಟ ಬಹಿರಂಗವಾಗಿದೆ.

    ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ವಿಧಾನಮಂಡಲ ಕಾಗದ ಪತ್ರಗಳ ಸಮಿತಿ ಸಭೆ ನಡೆಸಲಾಗಿತ್ತು. ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷ ಸಾರಾ ಮಹೇಶ್ ಹಾಜರಿದ್ದರು. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿಗೆ ಆಸನದ ವ್ಯವಸ್ಥೆ ಇರಲಿಲ್ಲ. ಆಸನದ ವ್ಯವಸ್ಥೆ ಇರದ ಕಾರಣ ಜಿಲ್ಲಾಧಿಕಾರಿ ವೇದಿಕೆ ಮುಂಭಾಗದ ಕುರ್ಚಿಯಲ್ಲಿ ಕುಳಿತರು.

    ಸಭೆಯಲ್ಲಿ ಡಿಸಿ ಮಾಸ್ಕ್ ಹಾಕಿಕೊಂಡು ಮಾತು ಆರಂಭಿಸಿದರು. ಆಗ ಸಾರಾ ಮಹೇಶ್ ಅವರು, ನಿಮ್ಮ ಮಾತು ಕೇಳುತ್ತಿಲ್ಲ. ಮಾಸ್ಕ್ ತೆಗೆದು ಮಾತನಾಡಿ ಎಂದರು. ನಾನು ಮಾಸ್ಕ್ ತೆಗೆಯವುದಿಲ್ಲ, ಮಾಸ್ಕ್ ತೆಗೆದು ಮಾತನಾಡಬಾರದು. ಅದಕ್ಕಾಗಿ ಮಾಸ್ಕ್ ತೆಗೆಯುವುದಿಲ್ಲ ಎಂದು ಡಿಸಿ, ಸಾರಾ ಮಹೇಶ್ ಗೆ ಉತ್ತರ ಕೊಟ್ಟರು. ಈ ಸಭೆಯಲ್ಲಿ ನನಗೆ ಸಂಬಂಧಿಸಿದ ವಿಷಯಗಳ ಚರ್ಚೆ ಇಲ್ಲ. ಹಾಗಾಗಿ ನೀವು ಸಮ್ಮತಿಸಿದರೆ ನಾನು ಸಭೆಯಿಂದ ಹೋಗುತ್ತೇನೆ ಎಂದು ಡಿಸಿ ಹೇಳಿದರು.

    ಈ ವೇಳೆ ಡಿಸಿ ಮಾತಿಗೆ ಉತ್ತರಿಸಿದ ಸಾರಾ ನಿಮ್ಮನ್ನು ನಾವು ಸಭೆಗೆ ಕರೆದಿರಲಿಲ್ಲ. ಆದರೂ ತಾವು ಸಭೆಗೆ ಬಂದಿದ್ದಿರಿ ಸಂತೋಷ. ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಯಾವುದೇ ಸಭೆಯ ಮಾಹಿತಿ ಕೊಡುವುದು ಕರ್ತವ್ಯ. ಅದಕ್ಕೆ ಮಾಹಿತಿ ಕೊಟ್ಟಿದ್ದೇವೆ ಅಷ್ಟೇ. ಮೈಸೂರಿಗೆ ಬಂದ ಕಾಗದ ಪತ್ರಗಳ ಸಮಿತಿಯನ್ನು ನೀವು ಸ್ವಾಗತಿಸಿಲ್ಲ. ಆದರೂ ಪರವಾಗಿಲ್ಲ. ಸಮಯ ಇದ್ರೆ ಇರಿ, ಬೇರೆ ಕೆಲಸ ಇದ್ರೆ ಹೋಗಿ ಎಂದು ಸಾರಾ ಮಹೇಶ್ ಹೇಳಿದರು. ಸಾರಾ ಈ ರೀತಿ ಹೇಳುತ್ತಿದ್ದಂತೆಯೇ ಸಭೆಯಿಂದ ತಕ್ಷಣವೇ ಡಿಸಿ ಕಾರು ಹತ್ತಿ ಬೇಸರದಿಂದ ತೆರಳಿದರು.

  • ಮೈಸೂರು, ಕೊಡಗಿನಲ್ಲಿ ಹಕ್ಕಿ ಜ್ವರ ಭೀತಿ : ಕರ್ನಾಟಕ-ಕೇರಳ ಗಡಿಯಲ್ಲಿ ಹೈ ಅಲರ್ಟ್

    ಮೈಸೂರು, ಕೊಡಗಿನಲ್ಲಿ ಹಕ್ಕಿ ಜ್ವರ ಭೀತಿ : ಕರ್ನಾಟಕ-ಕೇರಳ ಗಡಿಯಲ್ಲಿ ಹೈ ಅಲರ್ಟ್

    ಮೈಸೂರು: ಮೈಸೂರಿನಲ್ಲಿ ಹಕ್ಕಿ ಜ್ವರ ಭೀತಿ ಹಿನ್ನೆಲೆ ಕರ್ನಾಟಕ- ಕೇರಳ ಗಡಿಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಈವರೆಗೆ ಹಕ್ಕಿಜ್ವರ ಕಂಡುಬಂದಿಲ್ಲ. ಹಕ್ಕಿಜ್ವರದ ಪತ್ತೆಗಾಗಿ ಜಿಲ್ಲಾಡಳಿತ ನಿರಂತರ ಕಾರ್ಯಚರಣೆ ನಡೆಸುತ್ತಿದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

    ಕಳೆದ ವರ್ಷ ಮೈಸೂರಿನಲ್ಲಿ ಹಕ್ಕಿಜ್ವರದ ಹಿನ್ನೆಲೆಯಲ್ಲಿ ‘ಕಲ್ಲಿಂಗ್ ಆಪರೇಷನ್’ ನಡೆದಿತ್ತು. ಅದಕ್ಕಾಗಿ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. ಹಕ್ಕಿಜ್ವರ ಅಕ್ಕಪಕ್ಕದ ರಾಜ್ಯದಲ್ಲಿ ಕಂಡುಬಂದಿದೆ. ಹಾಗಾಗಿ ಅಲ್ಲಿ ಇದೀಗ ಕಲ್ಲಿಂಗ್ ಆಪರೇಷನ್ ನಡೆಯುತ್ತಿದೆ. ಕೇರಳ ಹಾಗೂ ತಮಿಳುನಾಡು ಗಡಿಯಲ್ಲಿ ಪಕ್ಷಿ ಹಾಗೂ ಕೋಳಿ ಸಾಗಾಟ ನಿಷೇಧ ಮಾಡಲಾಗಿದೆ ಹಾಗೂ ಆ ರಾಜ್ಯಗಳಿಂದ ಬರುವ ವಾಹನಗಳನ್ನ ಸ್ಯಾನಿಟೈಜೆಷನ್ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ವಲಸೆ ಹಕ್ಕಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದ್ದು, ಎಲ್ಲೆಲ್ಲಿ ವಲಸೆ ಹಕ್ಕಿಗಳು ಬರುತ್ತವೆ ಅಲ್ಲೆಲ್ಲ ಹಿಕ್ಕೆಗಳ ಸಂಗ್ರಹ ಮಾಡಿ ಲ್ಯಾಬ್‍ಗೆ ಕಳುಹಿಸಲಾಗಿದೆ. ಈವರೆಗೆ ಬಂದಿರುವ ಲ್ಯಾಬ್ ವರದಿಯಲ್ಲಿ ಹಕ್ಕಿಜ್ವರ ಪತ್ತೆಯಾಗಿಲ್ಲ. ಮೃಗಾಲಯಕ್ಕೆ ತಾತ್ಕಾಲಿಕ ಪ್ರವೇಶ ನಿರ್ಬಂಧ ಅಥವಾ ಇತರೆ ನಿರ್ಧಾರಗಳ ಬಗ್ಗೆ ತೀರ್ಮಾನಿಸಿಲ್ಲ. ಹಕ್ಕಿಜ್ವರ ಪತ್ತೆಯಾದರೆ ಮುಂದಿನ ಹಂತದ ನಿರ್ಧಾರ ಮಾಡುತ್ತೇವೆ ಎಂದು ವಿವರಿಸಿದರು.

    ಕೇರಳದಿಂದ ಬರುವ ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು, ಬಾವಲಿ ಚೆಕ್ ಪೋಸ್ಟ್‍ನಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆಯನ್ವಯ ಪೊಲೀಸರು ಕೋಳಿ, ಕೋಳಿ ಮಾಂಸ ಸಾಗಣೆ ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ. ಪೊಲೀಸರೊಂದಿಗೆ ಪಶು ಸಂಗೋಪನೆ ಇಲಾಖೆ ಸಿಬ್ಬಂದಿಗಳು ಈ ಕುರಿತಂತೆ ನಿಗಾ ವಹಿಸುತ್ತಿದ್ದಾರೆ.

    ಕೊಡಗಿನಲ್ಲಿ ಹೈ ಅಲರ್ಟ್: ಪಕ್ಕದ ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಕನ್ಫರ್ಮ್ ಆಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಣಣಿ ಜಾಯ್ ಹೇಳಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯ 3 ಅಂತರರಾಜ್ಯ ಚೆಕ್‍ಪೋಸ್ಟ್ ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕೇರಳದಿಂದ ಕೊಡಗಿಗೆ ಕುಕ್ಕುಟೋದ್ಯಮದ ಯಾವುದೇ ಉತ್ಪನ್ನ ಬರುವುದಿಲ್ಲ. ಆದ್ರೆ ಕೊಡಗಿನಿಂದ ಕೇರಳಕ್ಕೆ ಕೋಳಿ ಉತ್ಪನ್ನ ಹೋಗುತ್ತದೆ. ಕೋಳಿ ಸಾಗಿಸಿ ವಾಪಸ್ ಆಗುವ ಖಾಲಿ ವಾಹನಗಳಿಗೆ ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಜೊತೆಗೆ ಒಂದು ಪರ್ಸೆಂಟ್ ಹೈಪೋಕ್ಲೋರೈಡ್ ಸಿಂಪಡಣೆ ಮಾಡಲಾಗುತ್ತಿದೆ. ಕೊಡಗಿನಲ್ಲಿ ಇದುವರೆಗೆ ಹಕ್ಕಿಜ್ವರದ ಲಕ್ಷಣ ಕಂಡುಬಂದಿಲ್ಲ. ಆದರೂ ಹೈಅಲರ್ಟ್ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ವರ್ಗಾವಣೆ ಆದೇಶಕ್ಕೆ ತಡೆ

    ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ವರ್ಗಾವಣೆ ಆದೇಶಕ್ಕೆ ತಡೆ

    ಮೈಸೂರು: ಜಿಲ್ಲಾಧಿಕಾರಿ ಬಿ.ಶರತ್ ವರ್ಗಾವಣೆಯ ಆದೇಶಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ತಡೆ ನೀಡಿದ್ದು, ರಾಜ್ಯ ಸರ್ಕಾರದ ಆದೇಶಕ್ಕೆ ಹಿನ್ನಡೆ ಆಗಿದೆ. ಬಿ.ಶರತ್ ಅವರ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನ ಮೈಸೂರು ಜಿಲ್ಲಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿತ್ತು.

    ಬಿ ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ಮರು ನೇಮಕ ಮಾಡಬೇಕು. ಡಿಸೆಂಬರ್ 22ರೊಳಗೆ ಈ ಸಂಬಂಧ ಆದೇಶ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ತಿಳಿಸಲು ಅಡ್ವೊಕೇಟ್ ಜನರಲ್ ಗೆ ಸಿಎಟಿ ನಿರ್ದೇಶನ ನೀಡಿದೆ. ಒಂದು ವೇಳೆ ತಪ್ಪಿದ್ದಲ್ಲಿ ಸಿಎಟಿ ಈ ಬಗ್ಗೆ ಆದೇಶ ಹೊರಡಿಸಲಿದೆ ಎಂದು ಸೂಚಿಸಿದೆ. ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ತಿಂಗಳಲ್ಲಾದ ಬಿ.ಶರತ್ ತಮ್ಮ ವರ್ಗಾವಣೆಯನ್ನ ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದರು.

    ಕೆಲ ದಿನಗಳಿಂದ ಮೈಸೂರಿನ ಜನಪ್ರತಿನಿಧಿಗಳು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಜನಪರ ಕಾರ್ಯಕ್ರಮಗಳನ್ನ ಆಯೋಜಿಸುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದರು. ಇನ್ನು ಸಚಿವ ಆರ್.ಅಶೋಕ್ ಸಹ ಬಹಿರಂಗವಾಗಿ ರೋಹಿಣಿ ಸಿಂಧೂರಿ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.

    ವರ್ಗಾವಣೆ ಆಗಿದ್ದೇಕೆ?: ಶರತ್ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಒಂದು ತಿಂಗಳಿನಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಸೋಂಕಿನ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಯಾವುದೇ ಪ್ಲಾನ್ ಮಾಡಿಕೊಂಡಿರಲಿಲ್ಲ. ಸಾವಿನ ಸಂಖ್ಯೆ, ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದರೂ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಲು ಜಿಲ್ಲಾಧಿಕಾರಿ ಶರತ್ ಮುಂದಾಗಿರಲಿಲ್ಲ ಅನ್ನೋ ಆರೋಪಗಳು ಬಿ.ಶರತ್ ಅವರ ವಿರುದ್ಧ ಕೇಳಿ ಬಂದಿದ್ದವು. ಕೊರೊನಾ ಏರಿಕೆ ನಡುವೆ ಅತಿ ಸರಳ ದಸರಾ ಆಚರಣೆ ಸರ್ಕಾರಕ್ಕೆ ದೊಡ್ಡ ಸವಾಲು ಆಗಿತ್ತು. ದಸರಾ ಸಮೀಪಿಸಿದ್ದರೂ ಆಚರಣೆ ಯೋಜನೆಯನ್ನ ಸರ್ಕಾರಕ್ಕೆ ಸಲ್ಲಿಸದ ಹಿನ್ನೆಲೆ ಶರತ್ ಅವರ ವರ್ಗಾವಣೆ ಆಗಿದೆ ಎನ್ನಲಾಗಿತ್ತು.

    ವರ್ಗಾವಣೆ ಬಳಿಕ ಶರತ್ ಅವರಿಗೆ ಕರೆ ಮಾಡಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ, ಬೇರೆ ಸೂಕ್ತ ಸ್ಥಳ ನೀಡುತ್ತೇವೆ. ಕಾನೂನು ತೊಡಕು ಮಾಡಿಕೊಳ್ಳಬೇಡಿ ಎಂದು ಹೇಳಿದ್ದರು ಎನ್ನಲಾಗಿದೆ. ಶರತ್ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನೇ ನೇಮಿಸಬೇಕೆಂದು ಸಿಎಂ ಮೇಲೆ ಒತ್ತಡ ಹಾಕಲಾಗಿತ್ತು ಎಂದು ತಿಳಿದು ಬಂದಿದೆ.

  • ಜನರ ಸಮಸ್ಯೆ ಕೇಳಲು ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ- ಡಿಸಿ ಪರ ಪ್ರತಾಪ್ ಸಿಂಹ ಬ್ಯಾಟಿಂಗ್

    ಜನರ ಸಮಸ್ಯೆ ಕೇಳಲು ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ- ಡಿಸಿ ಪರ ಪ್ರತಾಪ್ ಸಿಂಹ ಬ್ಯಾಟಿಂಗ್

    – ಜಿಲ್ಲಾಧಿಕಾರಿಗಳ ಕ್ರಮವನ್ನು ಬೆಂಬಲಿಸಬೇಕು

    ಮೈಸೂರು: ಜನರ ಸಮಸ್ಯೆಗಳನ್ನು ಕೇಳಲು ಯಾವ ದೊಣ್ಣೆ ನಾಯಕನ ಅಪ್ಪನೆಯೂ ಬೇಕಿಲ್ಲ ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

    ಜಿಲ್ಲಾಧಿಕಾರಿ ಹಾಗೂ ಶಾಸಕರ ನಡುವಿನ ಜಟಾಪಟಿ ಕುರಿತು ಮಾತನಾಡಿದ ಅವರು, ಕ್ಷೇತ್ರದ ಜನರ ಸಮಸ್ಯೆ ಕೇಳಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಯಾವ ಕ್ಷೇತ್ರವನ್ನೂ ಜನರು ಶಾಸಕ ಹಾಗೂ ಎಂಪಿಗೆ ಬರೆದುಕೊಟ್ಟಿರುವುದಿಲ್ಲ. ಶಾಸಕರು, ಸಂಸದರು ಎಂಬುದು ಜನರ ಕೆಲಸ ಮಾಡಲು ಇರುವ ಹುದ್ದೆ ಅಷ್ಟೇ. ಜಿಲ್ಲಾಧಿಕಾರಿ ಜನರ ಬಳಿಗೆ ಹೋಗಿ ಅವರ ಸಮಸ್ಯೆ ಕೇಳುತ್ತಿದ್ದಾರೆ. ಇದನ್ನು ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿದ್ದಾರೆ.

    ಗ್ರಾಮ ಪಂಚಾಯತಿ ಚುನಾವಣೆ ಮುಗಿದ ಮೇಲೆ ನಾನೂ ಜನರ ಬಳಿ ಹೋಗುತ್ತೇನೆ. ಯಾರು ತಡೆಯುತ್ತಾರೆ ನೋಡೋಣ. ನಾಲ್ಕು ಜನ ಶಾಸಕರು ಒಟ್ಟಾಗಿ ಜಿಲ್ಲಾಧಿಕಾರಿ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಹೆದರಿಸುತ್ತಿದ್ದೀರಾ? ನೀವೂ ಹೆದರಿಸಿದರೆ ನಾವು ಹೆದರಬೇಕಾ? ನೀವೇ ಜನರ ಸಮಸ್ಯೆ ಬಗೆಹರಿಸಿದ್ದರೆ ಜನರು ಜಿಲ್ಲಾಧಿಕಾರಿ ಬಳಿ ಯಾಕೆ ಕಷ್ಟ ಹೇಳಿಕೊಳ್ಳುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

    ನೀವು ಮಾಡಲು ಆಗದ ಕೆಲಸವನ್ನು ಜಿಲ್ಲಾಧಿಕಾರಿ ಮಾಡುತ್ತಿದ್ದಾರೆ, ಮಾಡಲು ಬಿಡಿ. ಮೊದಲು ಶಾಸಕರ ಹಕ್ಕು ಚ್ಯುತಿ ಕುರಿತು ಪುಸ್ತಕ ಓದಿಕೊಳ್ಳಿ. ಮೂರ್ನಾಲ್ಕು ಬಾರಿ ಶಾಸಕರು ಆದವರು ನೀವು. ಯಾವುದು ಹಕ್ಕು ಚ್ಯುತಿ ಎಂಬುದು ನಿಮಗೆ ಗೊತ್ತಿಲ್ಲವೇ ಎಂದು ಖಾರವಾಗಿ ಶಾಸಕರನ್ನು ಪ್ರಶ್ನಿಸಿದ್ದಾರೆ.

    ಜನರ ಸಮಸ್ಯೆ ಕೇಳುವ ಸಭೆಯಲ್ಲಿ ನಿಮ್ಮನ್ನು ಗದ್ದುಗೆ ಮೇಲೆ ಕೂರಿಸದಿದ್ದರೆ ಅದು ಹಕ್ಕು ಚ್ಯುತಿಯಾ? ಡಿಸಿಗಳು ಜನರ ಬಳಿ ಹೋಗಿ ಕೆಲಸ ಮಾಡಬೇಕು. ಆ ಕೆಲಸವನ್ನು ಅವರು ಮಾಡುತ್ತಿದ್ದಾರೆ’ ಅವರಿಗೆ ಜನರ ಕೆಲಸ ಮಾಡಲು ಬಿಡಿ ಎಂದು ಹೇಳಿದ್ದಾರೆ.

  • ಮೈಸೂರಿನಲ್ಲಿ ಮತ್ತೆ ಕೊರೊನಾ ಪಾಸಿಟಿವ್ ರೇಟ್ ಹೆಚ್ಚಾಗುವ ಸಾಧ್ಯತೆ: ರೋಹಿಣಿ ಸಿಂಧೂರಿ

    ಮೈಸೂರಿನಲ್ಲಿ ಮತ್ತೆ ಕೊರೊನಾ ಪಾಸಿಟಿವ್ ರೇಟ್ ಹೆಚ್ಚಾಗುವ ಸಾಧ್ಯತೆ: ರೋಹಿಣಿ ಸಿಂಧೂರಿ

    ಮೈಸೂರು: ದಸರಾ ಸರಳ ಆಚರಣೆಯ ನಡುವೆಯೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ದಸರಾಗೆ ಪ್ರವಾಸಿತಾಣಗಳನ್ನು ಓಪನ್ ಮಾಡಿರುವ ಪರಿಣಾವನ್ನು ನಾವು ಎದುರಿಸಲೇಬೇಕು. ಆದ್ದರಿಂದ ಇದಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿದೆ. ಆದರೆ ಇನ್ನು 15 ದಿನದ ನಂತರ ನಾವು ಮತ್ತಷ್ಟು ಹೆಚ್ಚಿನ ಪ್ರಕರಣಗಳು ನಿರೀಕ್ಷಿಸಿದ್ದೇವೆ. ಆದ್ದರಿಂದ ಜನರು ಮಾಸ್ಕ್ ಹಾಗೂ ಸಾಮಾಜಿಕ ಅಂತರದ ನಿಯಮಗಳನ್ನು ಪಾಲನೆ ಮಾಡಬೇಕಿದೆ ಎಂದು ಮನವಿ ಮಾಡಿದರು.

    ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯೊಂದಿಗೆ ಜಿಲ್ಲಾಡಳಿತ ವ್ಯವಸ್ಥಿತವಾಗಿ ಸಿದ್ಧತೆ ನಡೆಸಲಾಗಿತ್ತು. ಈಗ ಯಾವುದೇ ಬೆಡ್ ಸಮಸ್ಯೆ ಇಲ್ಲ. ಆಕ್ಸಿಜನ್ ಹಾಗೂ ಟೆಸ್ಟಿಂಗ್ ನಲ್ಲೂ ಯಾವುದೇ ಕೊರತೆ ಇಲ್ಲ. ಎಲ್ಲಾ ತಾಲೂಕಿನ ಆಸ್ಪತ್ರೆಗಳಲ್ಲಿ 50 ಬೆಡ್, ಆಕ್ಸಿಜನ್ ಬೆಡ್, ಐಸಿಯುಗಳು ಲಭ್ಯವಿದೆ ಎಂದು ಹೇಳಿದರು. ಮೊದಲು ಕೊರೊನಾವನ್ನು ಜಿಲ್ಲೆಯಲ್ಲಿ ಉತ್ತಮವಾಗಿ ನಿರ್ವಹಣೆ ಮಾಡಿದ್ದರು. ಆದರೆ ಆ ಬಳಿಕ ಕೆಲ ಕಾರಣಗಳಿಂದ ಸೋಂಕು ಹೆಚ್ಚಾಗಿತ್ತು. ಈಗ ನಾವು ಮತ್ತೆ ಎಲ್ಲವನ್ನು ಹಿಡಿತಕ್ಕೆ ತಂದಿದ್ದೇವೆ. ಈಗ ದಸರಾ ಹಾಗೂ ದೀಪಾವಳಿ ಹಿನ್ನೆಲೆಯಲ್ಲಿ ಮುಂದಿನ 10 ಮತ್ತು 20 ದಿನಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.

    ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಜನರಿಗೆ ಬರಬೇಡಿ ಎಂದು ಹೇಳಲು ಆಗುವುದಿಲ್ಲ. ಈಗ ಮೈಸೂರಿನ ಎಲ್ಲಾ ಹೋಟೆಲ್, ರೆಸಾರ್ಟ್ ಗಳು ತುಂಬಿದೆ. ಮೈಸೂರಿಗೆ ಬರುವ ಪ್ರವಾಸಿಗರಿಗೆ ಎಲ್ಲೋ ಒಂದು ಸ್ಥಳದಲ್ಲಿ ಕೊರೊನಾ ಟೆಸ್ಟ್ ನಡೆಯಬೇಕು ಎಂಬುವುದು ನಮ್ಮ ಉದ್ದೇಶ. ಆದ್ದರಿಂದ ಮೃಗಾಲಯ ಮತ್ತು ಬೆಟ್ಟದ ಮೇಲೆ ಕೊರೊನಾ ಟೆಸ್ಟ್ ನಡೆಸುವಷ್ಟು ಸ್ಥಳಾವಕಾಶ ಲಭ್ಯವಾಗದ ಕಾರಣ ಅರಮನೆ ಆವರಣದಲ್ಲಿ ಸ್ಕ್ರೀನಿಂಗ್ ಮಾಡುತ್ತಿದ್ದೇವೆ ಎಂದು ತಿಳಿಸಿದರು.

  • ನಾಳೆ ಮಧ್ಯಾಹ್ನದವರೆಗೆ ಚಾಮುಂಡಿ ಬೆಟ್ಟ ಪ್ರವೇಶ ನಿಷೇಧ – ರೋಹಿಣಿ ಸಿಂಧೂರಿ ಆದೇಶ

    ನಾಳೆ ಮಧ್ಯಾಹ್ನದವರೆಗೆ ಚಾಮುಂಡಿ ಬೆಟ್ಟ ಪ್ರವೇಶ ನಿಷೇಧ – ರೋಹಿಣಿ ಸಿಂಧೂರಿ ಆದೇಶ

    ಮೈಸೂರು: ಚಾಮುಂಡಿಬೆಟ್ಟದಲ್ಲಿ ರಥೋತ್ಸವ ಹಿನ್ನೆಲೆಯಲ್ಲಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧವನ್ನು ಹೇರಲಾಗಿದೆ.

    ಇಂದು ಸಂಜೆ 6 ಗಂಟೆಯಿಂದ ನಾಳೆ ಮಧ್ಯಾಹ್ನ 12 ಗಂಟೆವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸುವಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.

    ಅಕ್ಟೋಬರ್ 29ರಂದು ನಡೆಯಲಿರುವ ಚಾಮುಂಡಿ ರಥೋತ್ಸವಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ದಸರಾ ಉತ್ಸವಕ್ಕೆ ಗ್ರಾಮಸ್ಥರು ಮತ್ತು ಅಧಿಕಾರಿಗಳಿಗೆ ಮಾತ್ರ ಪ್ರವೇಶ ವಿನಾಯಿತಿ ಇರುತ್ತದೆ. ಜನಸಮೂಹವನ್ನು ಒಳಗೊಂಡಂತೆ ನಡೆಯುತ್ತಿದ್ದ ದಸರಾ ರಥೋತ್ಸವ ಈ ಬಾರಿ ಭಕ್ತರಿಗೆ ಹೆಚ್ಚಿನ ಪ್ರಮಾಣದಲ್ಲಿ ಅವಕಾಶವಿಲ್ಲ. ಸಾಂಪ್ರದಾಯಿಕವಾಗಿ ಸರಳವಾಗಿ ಉತ್ಸವ ನಡೆಯಲಿದೆ.

    ಮೈಸೂರು ದಸರಾ ಪ್ರಮುಖ ಆಕರ್ಷಣೆ ಎಂದರೆ ಜಂಬೂ ಸವಾರಿ. ದೇಶ ಮಾತ್ರವಲ್ಲ, ವಿದೇಶಗಳಲ್ಲೂ ಕಣ್ಮನ ಸೆಳೆಯುತ್ತದೆ. ಜಂಬೂ ಸವಾರಿ ಇದೇ ಮೊದಲ ಬಾರಿಗೆ ಇಷ್ಟೊಂದು ಸರಳವಾಗಿ ನಡೆದಿದೆ. ಕೊರೊನಾದಿಂದ ಈ ಬಾರಿ ಮೈಸೂರು ದಸರಾ ಉತ್ಸವ ಸರಳವಾಗಿ ನಡೆದಿದೆ. ದಸರಾ ಹಬ್ಬ ಯಶಸ್ವಿಯಾಗಿ ನಡೆಯಲೆಂದು ರೋಹಿಣಿ ಸಿಂಧೂರಿ ಹರಕೆ ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ನವರಾತ್ರಿ ಒಂಬತ್ತನೇ ದಿನ ತಾವೇ ಸ್ವತಃ ರಥ ಎಳೆಯುವ ಮೂಲಕ ಹರಕೆ ತೀರಿಸಿದ್ದರು.