Tag: Rohini Sindhuri

  • ವರ್ಗಾವಣೆ ಮಾಡಿಸೋದು ಅತ್ಯಂತ ಸಣ್ಣ ಕೆಲಸ, ನನಗೆ ಆ ತಾಕತ್ ಬೇಡ: ಜಿಟಿಡಿಗೆ ಪ್ರತಾಪ್ ಸಿಂಹ ತಿರುಗೇಟು

    ವರ್ಗಾವಣೆ ಮಾಡಿಸೋದು ಅತ್ಯಂತ ಸಣ್ಣ ಕೆಲಸ, ನನಗೆ ಆ ತಾಕತ್ ಬೇಡ: ಜಿಟಿಡಿಗೆ ಪ್ರತಾಪ್ ಸಿಂಹ ತಿರುಗೇಟು

    ಮೈಸೂರು: ಅಧಿಕಾರಿಗಳನ್ನು ವರ್ಗಾವಣೆ ಮಾಡಿಸೋದು ತಾಕತ್ ಅನ್ನೋದಾದದ್ರೆ ನನಗೆ ಆ ತಾಕತ್ ಬೇಡ. ಒಬ್ಬ ಸಂಸದನಾಗಿ ಕೆಲಸದಲ್ಲಿ ನನ್ನ ತಾಕತ್ತು ತೋರಿಸಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಜಿಲ್ಲಾಧಿಕಾರಿ ಅಥವಾ ಇನ್ನಾವುದೋ ಅಧಿಕಾರಿಯನ್ನ ವರ್ಗಾವಣೆ ಮಾಡಿಸೋದು ರಾಜಕಾರಣಿಗಳಿಗೆ ಕಾಮನ್. ನನ್ನ ದೃಷ್ಟಿಯಲ್ಲಿ ಅದು ಅತ್ಯಂತ ಸಣ್ಣ ಕೆಲಸ. ಅಂತಹ ಸಣ್ಣ ಕೆಲಸವನ್ನ ನಾನು ಮಾಡೋದಿಲ್ಲ. ಸರ್ಕಾರ ಕೊಟ್ಟ ಅಧಿಕಾರಿಗಳ ಜೊತೆಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಚಾಮರಾಜನಗರ ಘಟನೆಯಿಂದ ಮೈಸೂರು ಡಿಸಿಯನ್ನ ಕಟಕಟೆಗೆ ನಿಲ್ಲಿಸಿದ್ರು. ಆವಾಗೆಲ್ಲಾ ಇವರು ಎಲ್ಲಿ ಹೋಗಿದ್ರೂ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ಆಗ ಮೈಸೂರು ಡಿಸಿ ಪರವಾಗಿ ಧ್ವನಿ ಎತ್ತಿದ್ದು ನಾನೇ. ನಾನು ಈಗ ಹೇಳಿರೋದು, ಗ್ರಾಮೀಣಾ ಭಾಗದಲ್ಲಿ ಕೊರೊನಾ ಹೆಚ್ಚಾಗಿದೆ. ಜನ ಕಷ್ಟದಲ್ಲಿದ್ದಾರೆ, ಹಳ್ಳಿಗಳಿಗೆ ಹೋಗಿ ಅಂದೆ. ಹಳ್ಳಿಗಳಿಗೆ ಹೋಗಿ ಅಂತಾ ಡಿಸಿಗೆ ಹೇಳಿದ್ದೇ ತಪ್ಪಾ ಎಂದು ಪ್ರಶ್ನೆ ಮಾಡಿದರು.

    ನನ್ನನ್ನು ಬೈಯುವ ಹಕ್ಕು ಅವರಿಗಿದೆ: ಮಾಜಿ ಸಚಿವರ ಸಾ.ರಾ.ಮಹೇಶ್ ಅವರನ್ನ ಹೊಗಳಿದ್ದು ಜಿ.ಟಿ.ದೇವೇಗೌಡರಿಗೆ ಇಷ್ಟವಾಗಿಲ್ಲ ಅನ್ನಿಸುತ್ತೆ. ಹೀಗಾಗಿ ನನ್ನ ವಿರುದ್ಧ ಮಾತನಾಡಿದ್ದಾರೆ. ಜಿಟಿ ದೇವೇಗೌಡರು ನನಗೆ ತಂದೆ ಇದ್ದಂತೆ. ರಾಜಕೀಯದಲ್ಲಿ ನನ್ನನ್ನು ಬೈಯುವ ಹಕ್ಕು ಜಿ.ಟಿ ದೇವೇಗೌಡರಿಗಿದೆ. ಅವರು ಬೈಯುವುದನ್ನ ನಾನು ಪ್ರೀತಿಯಿಂದಲೇ ಸ್ವೀಕರಿಸುತ್ತೇನೆ ಎಂದರು.

    ಕೆ.ಆರ್ ನಗರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸಾರಾ ಮಹೇಶ್ ಜಿಲ್ಲೆಗೆ ಮೇಲ್ಪಂಕ್ತಿಯಾಗುವಂತೆ ಕೆಲಸ ಮಾಡಿದ್ದಾರೆ ಅಂತ ಹೇಳಿದ್ದು ನಿಜ. ಇದರಲ್ಲಿ ಯಾರನ್ನು ಹೊಗಳುವ, ತೆಗಳುವು ಉದ್ದೇಶವಿಲ್ಲ. ಇದನ್ನ ಅಪಾರ್ಥ ಮಾಡಿಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

    ಜಿಟಿಡಿ ಹೇಳಿದ್ದೇನು?: ನೀವು ಪವರ್ ಫುಲ್ ಸಂಸದ. ಪಿಎಂ, ಸಿಎಂ ನೀವು ಹೇಳಿದಂತೆ ಕೇಳುತ್ತಾರೆ. ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿ ತೋರಿಸಿ. ಇದನ್ನು ಬಿಟ್ಟು ಪೇಪರ್ ಸ್ಟೇಟ್‍ಮೆಂಟ್ ಕೊಟ್ಟು ಯಾಕೆ ಗೊಂದಲ ಮೂಡಿಸುತ್ತೀರಿ. ಜನರು ಮೈಸೂರಿನ ಬಗ್ಗೆ ಆಡಿಕೊಂಡು ನಗುತ್ತಿದ್ದಾರೆ. ನಿಮ್ಮ ಹೇಳಿಕೆ, ಆರೋಪಗಳ ಹಿಂದೆ ವೈಯುಕ್ತಿಕ ಸಮಸ್ಯೆ ಇದೆ. ನಿಮ್ಮ ಹೇಳಿಕೆಗಳು ಜನರಲ್ಲಿ ಅನುಮಾನ ಸೃಷ್ಟಿಸಿವೆ ಎಂದು ಜಿ.ಟಿ.ದೇವೇಗೌಡರು ಹೇಳಿದ್ದರು. ಇದನ್ನೂ ಓದಿ: ತಾಕತ್ ಇದ್ದರೆ ಮೈಸೂರು ಡಿಸಿಯನ್ನು ವರ್ಗಾವಣೆ ಮಾಡಿಸಲಿ- ಪ್ರತಾಪ್ ಸಿಂಹಗೆ ಜಿಟಿಡಿ ಸವಾಲು

    ಅಧಿಕಾರಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡಬೇಡಿ. ಜಿಲ್ಲೆಯ ಶಾಸಕರು ನಿಮಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಸ್ವಂತ ಹಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಸಂಸದರಾಗಿ ನೀವೆಷ್ಟು ಸ್ವಂತ ಹಣ ಖರ್ಚು ಮಾಡಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು. ವ್ಯವಸ್ಥೆಯ ವೈಫಲ್ಯತೆ ಬಗ್ಗೆ ವಿರೋಧ ಪಕ್ಷದವರು ಮಾತನಾಡಬೇಕು, ಆಡಳಿತ ಪಕ್ಷದವರಲ್ಲ ಎಂದರು.

  • ಮೇ 29ರಿಂದ ಜೂ.7ರವರೆಗೆ ಮೈಸೂರಲ್ಲಿ ಸಂಪೂರ್ಣ ಲಾಕ್‍ಡೌನ್

    ಮೇ 29ರಿಂದ ಜೂ.7ರವರೆಗೆ ಮೈಸೂರಲ್ಲಿ ಸಂಪೂರ್ಣ ಲಾಕ್‍ಡೌನ್

    – ಸೋಮವಾರ, ಗುರುವಾರ ಮಾತ್ರ ಅಗತ್ಯ ವಸ್ತುಗಳ ಖರೀದಿ

    ಮೈಸೂರು: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮೇ 29ರಿಂದ ಜೂನ್ 7ರ ವರೆಗೆ ಸಂಪೂರ್ಣ ಲಾಕ್‍ಡೌನ್ ಜಾರಿಯಾಗಲಿದೆ. ಎರಡು ದಿನ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ.

    ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈ ಬಗ್ಗೆ ಆದೇಶ ಮಾಡಿದ್ದಾರೆ. ಸೋಮವಾರ ಮತ್ತು ಗುರುವಾರ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ. ಉಳಿದ ದಿನಗಳಲ್ಲಿ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರುತ್ತದೆ. ಮೇ 29ರಿಂದ ಜೂನ್ 7ರ ಬೆಳಗ್ಗೆ 6 ಗಂಟೆಯವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಸೋಮವಾರ ಮತ್ತು ಗುರುವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ತರಕಾರಿ, ದಿನಸಿ ಖರೀದಿಗೆ ಅವಕಾಶವಿದೆ.

    ಬ್ಯಾಂಕ್ ಹಾಗೂ ಭಾರತೀಯ ವಿಮಾ ಯೋಜನೆಯ ವ್ಯವಹಾರಗಳಿಗೂ ಸಮಯ ನಿಗದಿಯಾಗಿದ್ದು, ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ತೆರೆದಿರುತ್ತವೆ. ಹಾಲಿನ ಬೂತ್, ವೈದ್ಯಕೀಯ ಸೇವೆ, ಹಾಪ್ ಕಾಮ್ಸ್ ಅಡಿಯಲ್ಲಿ ಬರುವ ತರಕಾರಿ ಮತ್ತು ಹಣ್ಣಿನ ಅಂಗಡಿಗಳು, ನ್ಯಾಯ ಬೆಲೆ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ಚಟುವಟಿಕೆಗಳಿಗೆ ಸಂಪೂರ್ಣವಾಗಿ ನಿರ್ಬಂಧವಿದೆ.

    ನಿಷೇಧಾಜ್ಞೆ ಅವಧಿಯಲ್ಲಿ ಸರಕು ಸಾಗಣೆ ವಾಹನಗಳಿಗೆ ಮಾತ್ರ ಅವಕಾಶವಿದ್ದು, ಬೇರೆ ಎಲ್ಲಾ ವಾಹನ ಸಂಚಾರ, ಜನರ ಓಡಾಟಕ್ಕೆ ನಿರ್ಬಂಧವಿದೆ. ನಿಯಮ ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆ-2005ರ ಉಪಬಂಧಗಳು, ಭಾರತೀಯ ದಂಡ ಸಂಹಿತೆಯ ಅನುಚ್ಛೇದ 188ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶದಲ್ಲಿ ತಿಳಿಸಿದ್ದಾರೆ.

  • ಪಿಪಿಇ ಕಿಟ್ ಧರಿಸಿಕೊಂಡ ಬ್ಲಾಕ್ ಫಂಗಸ್ ರೋಗಿಗಳ ಆರೋಗ್ಯ ವಿಚಾರಿಸಿದ ಡಿಸಿ ರೋಹಿಣಿ ಸಿಂಧೂರಿ

    ಪಿಪಿಇ ಕಿಟ್ ಧರಿಸಿಕೊಂಡ ಬ್ಲಾಕ್ ಫಂಗಸ್ ರೋಗಿಗಳ ಆರೋಗ್ಯ ವಿಚಾರಿಸಿದ ಡಿಸಿ ರೋಹಿಣಿ ಸಿಂಧೂರಿ

    – ಜಿಲ್ಲಾಧಿಕಾರಿಗಳ ಎದುರು ಕಣ್ಣೀರಿಟ್ಟ ಕೊರೊನಾ ರೋಗಿಯ ಸಂಬಂಧಿ
    – ಮೈಸೂರಿನಲ್ಲಿ 21 ಬ್ಲಾಕ್ ಫಂಗಸ್ ಪ್ರಕರಣ

    ಮೈಸೂರು : ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿನ ಬ್ಲಾಕ್ ಫಂಗಸ್ ರೋಗಿಗಳ ಚಿಕಿತ್ಸೆಯ ವಾರ್ಡ್ ಗೆ ಇಂದು ಡಿಸಿ ರೋಹಿಣಿ ಸಿಂಧೂರಿ ಪಿಪಿಇ ಕಿಟ್ ಹಾಕಿಕೊಂಡು ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.

    ನಂತರ ಮಾತನಾಡಿದ ಅವರು ಮೈಸೂರಿನಲ್ಲಿ 21 ಬ್ಲಾಕ್ ಫಂಗಸ್ ಪ್ರಕರಣ ಇದೆ. ಕೆ.ಆರ್.ಆಸ್ಪತ್ರೆಯಲ್ಲಿ 17, ಜೆಎಸ್‍ಎಸ್ ಆಸ್ಪತ್ರೆಯಲ್ಲಿ 3, ಅಪೋಲೋದಲ್ಲಿ 1 ಪ್ರಕರಣ ಇದ್ದು ಬ್ಲಾಕ್ ಫಂಗಸ್‍ನಿಂದ ಒಬ್ಬರು ಇದುವರೆಗೆ ಮೃತಪಟ್ಟಿದ್ದಾರೆ. ಈಗಾಗಲೇ ಬ್ಲಾಕ್ ಫಂಗಸ್ ಇದ್ದವರಿಗೆ ಚಿಕಿತ್ಸೆ ಕೊಡುತ್ತಿದ್ದೇವೆ. ಆದರೆ ರೋಗದ ಲಕ್ಷಣ ಇದ್ದವರು ಆದಷ್ಟು ಬೇಗನೆ ಆಸ್ಪತ್ರೆಗೆ ಬರುತ್ತಿಲ್ಲ.ಒಂದೇ ಕಡೆ ಮೂಗು ಸೋರುವಿಕೆ, ತಲೆ ವಿಪರೀತ ನೋವು. ಇದೆಲ್ಲವು ಬ್ಲಾಕ್ ಫಂಗಸ್ ಲಕ್ಷಣಗಳು ಆಗಿದೆ ಎಂದು ವಿವರಿಸಿದ ಅವರು, ಈಗ ಕೆ.ಆರ್ ಆಸ್ಪತ್ರೆಯಲ್ಲಿರುವ ಎಲ್ಲಾ ರೋಗಿಗಳು ಕ್ಷೇಮವಾಗಿದ್ದಾರೆ.

    ರೋಗಿಗಳು ಸಂಪೂರ್ಣ ಗುಣಮುಖವಾಗಲು ಬರೋಬ್ಬರಿ ಮೂರು ವಾರವೇ ಬೇಕು. ಧ್ಯಾನ ಹಾಗೂ ಸರ್ಜರಿಯೇ ಇದಕ್ಕೆ ಮದ್ದು. ಮೊದಲ ಹಂತದಲ್ಲಿದ್ದರೆ ಅದನ್ನ ಔಷಧೀಯಲ್ಲೇ ಗುಣಪಡಿಸಬಹುದು. ಆದರೆ ನಂತರ ಬಂದರೆ ಸರ್ಜರಿ ಅನಿವಾರ್ಯವಾಗಿದೆ. ಆದಷ್ಟು ಜನರು ಈ ಬಗ್ಗೆ ನಿಗಾ ವಹಿಸಿ ಎಂದು ಡಿಸಿ ರೋಹಿಣಿ ಸಿಂಧೂರಿ ಹೇಳಿದರು.

    ಪ್ರತಿ ದಿನ ಆಂಟಿಜನ್ ಟೆಸ್ಟ್: ನಮ್ಮ ಮನೆಯಲ್ಲಿ ನಾಲ್ವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಮೂವರು ಮನೆಯಲ್ಲಿ, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಆರೋಗ್ಯ ಸುಧಾರಣೆ ಕಂಡಿದೆ. ನಾನು ಕೋವಿಡ್ ಚೆಕ್ ಮಾಡಿಸಿದಾಗ ನೆಗೆಟಿವ್ ಬಂದಿದೆ. ನಾನು ನಿತ್ಯವೂ ಕೂಡ ಕೊರೊನಾ ತಪಾಸಣೆ ಮಾಡಿಸುತ್ತೇನೆ. ಆಂಟಿಜನ್ ಟೆಸ್ಟ್ ಮಾಡಿಸಿದ ಬಳಿಕವೇ ನಾನು ಸಹ ಕೆಲಸಕ್ಕೆ ಬರೋದು. ನಮ್ಮಿಂದಲೂ ಯಾರಿಗೂ ಸಮಸ್ಯೆ ಆಗಬಾರದು. ಹಾಗಾಗಿ ದಿನದ ತಪಾಸಣೆಯಲ್ಲಿ ನೆಗೆಟಿವ್ ಇದ್ದರೆ ಮಾತ್ರ ಕರ್ತವ್ಯಕ್ಕೆ ಬರುತ್ತೇನೆ ಎಂದು ಡಿಸಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದರು.

    ಇದು ಮೊದಲಲ್ಲ, ಮೂರನೇ ಬಾರಿ: ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿನ ಕೋವಿಡ್ ಪಾಸಿಟಿವ್ ರೋಗಿಗಳ ಆರೋಗ್ಯವನ್ನು ವಿಚಾರಿಸಲು ಹಿಂದೆ ಎರಡು ಬಾರಿ ಪಿಪಿಇ ಕಿಟ್ ಹಾಕಿಕೊಂಡು ವಾರ್ಡ್ ಗೆ ಹೋಗಿದ್ದೇನೆ. ಇಂದು ಮೂರನೇ ಭೇಟಿ. ಮಾಧ್ಯಮದವರಿಗೆ ಹಿಂದೆ ಮಾಹಿತಿ ನೀಡಿರಲಿಲ್ಲ. ಇವತ್ತು ಬ್ಲ್ಯಾಕ್ ಫಂಗಸ್ ಬಗ್ಗೆ ಜನರಿಗೆ ಅಗತ್ಯ ಮಾಹಿತಿ ನೀಡುವ ಸಲುವಾಗಿ ಮಾಧ್ಯಮದವರನ್ನು ಕರೆಸಬೇಕಾಯಿತು ಎಂದು ಸ್ಪಷ್ಟಪಡಿಸಿದರು.

    ಸರ್ಕಾರದಿಂದ ಮಾರ್ಗಸೂಚಿ ಬಂದಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ಕೊಟ್ಟು ಮಾಹಿತಿ ಜೊತೆಗೆ ಸಭೆ ಮಾಡಬೇಕೆಂದು. ಹಾಗಾಗಿ ಕೆ.ಆರ್.ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೇನೆ. ಇದು ಮೊದಲ ಭೇಟಿಯಲ್ಲ, ಈಗಾಗಲೇ ಎರಡು ಬಾರಿ ಬಂದಿದ್ದೇನೆ. ಸದ್ಯ ಬ್ಲಾಕ್ ಫಂಗಸ್ ಹೆಚ್ಚಾಗಿರುವ ಕಾರಣ ಇಲ್ಲಿ ಹೆಚ್ಚಿನ ಗಮನ ಹರಿಸಿದ್ದೇವೆ. ಬ್ಲಾಕ್ ಫಂಗಸ್‍ನ ಸಮಸ್ಯೆ ಹೆಚ್ಚಾಗಿರುವ ಕಾರಣ. ನಾನು ಕೆ.ಆರ್ ಆಸ್ಪತ್ರೆ ಭೇಟಿ ಕೊಟ್ಟು ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಇದಕ್ಕೆ ಬೇಕಾದ ಸೂಕ್ತ ಔಷಧಿ ಬಗ್ಗೆ ಸರ್ಕಾರಕ್ಕೆ ತಿಳಿಸುತ್ತೇನೆ. ಜೆಎಸ್‍ಎಸ್ ಆಸ್ಪತ್ರೆಯಿಂದಲು ಔಷಧಿಯ ಬೇಡಿಕೆ ಬಂದಿದೆ. ಹಾಗಾಗಿ ಸರ್ಕಾರಕ್ಕೆ ಪತ್ರ ಬರೆದು ಔಷಧಿಗಾಗಿ ಮನವಿ ಮಾಡುತ್ತೇವೆ. ಸದ್ಯ ಇರುವುದರಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದೇವೆ. ಅವರಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಿದ್ದೇವೆ ಎಂದರು.

    ಜಿಲ್ಲಾಧಿಕಾರಿಗಳ ಎದುರು ಕಣ್ಣೀರಿಟ್ಟ ಕೊರೊನಾ ರೋಗಿಯ ಸಂಬಂಧಿ: ಆಸ್ಪತ್ರೆಗೆ ಡಿಸಿ ರೋಹಿಣಿ ಸಿಂಧೂರಿ ಭೇಟಿ ನೀಡಿದ್ದ ವೇಳೆ ರೋಗಿಗಳ ಸಂಬಂಧಿಗಳು ಕೊರೊನಾ ವಾರ್ಡ್ ಗಳಲ್ಲಿನ ಅವ್ಯವಸ್ಥೆ ಬಗ್ಗರ ಗಮನಕ್ಕೆ ತಂದರು. ಮೆಡಿಸಿನ್ ಇಲ್ಲ, ವಾರ್ಡ್ ಗಳಲ್ಲಿ ಸ್ವಚ್ಚತೆ ಇಲ್ಲ. ಸೆಕ್ಯೂರಿಟಿಗಳು ಸೌಜನ್ಯವಾಗಿ ವರ್ತಿಸಲ್ಲ ಎಂದು ದೂರಿದರು. ಎಲ್ಲರ ದೂರು ಆಲಿಸಿದ ಡಿಸಿ ರೋಹಿಣಿ ಸಿಂಧೂರಿ, ತಕ್ಷಣವೇ ಕಂಪ್ಲೇಂಟ್ ಬಾಕ್ಸ್ ಆರಂಭಿಸಿ. ಪ್ರತಿ ರೋಗಿ ಸಂಬಂಧಿಯ ದೂರು ಅಲ್ಲಿ ದಾಖಲಾಗಲಿ. ಎಲ್ಲ ದೂರನ್ನು ನಾನೇ ಪ್ರತಿ ದಿನ ಸಂಜೆ ಪರಿಶೀಲಿಸುತ್ತೇನೆ ಎಂದರು.

    ನೀವೂ ಒಂದು ಹೆಣ್ಣಾಗಿ ಇಷ್ಟೊಂದು ಸೇವೆ ಮಾಡ್ತಿದ್ದೀರಾ. ನಿಮಗೆ ನಮ್ಮ ಧನ್ಯವಾದಗಳು, ಆದರೆ ಈ ಸಮಸ್ಯೆ ಬಗೆಹರಿಸಿ. ನಮಗೆ ನರ್ಸ್ ಕರೆ ಮಾಡಿ ಕೆಟ್ಟದಾಗಿ ಬೈತಾರೆ ಎಂದು ಮಹಿಳೆಯೊಬ್ಬರು ಡಿಸಿ ಬಳಿ ಕಣ್ಣೀರಿಟಟು ಬೇಸರ ಹೊರಹಾಕಿದರು. ಈ ವೇಳೆ ಮಹಿಳೆಗೆ ಸಾಂತ್ವನ ಹೇಳಿ ಅಧಿಕಾರಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

  • ಕೋವಿಡ್ ಮುಕ್ತ ವಾರ್ಡ್‍ಗೆ ವಿಶೇಷ ಪ್ಯಾಕೇಜ್-ರೋಹಿಣಿ ಸಿಂಧೂರಿ ಘೋಷಣೆ

    ಕೋವಿಡ್ ಮುಕ್ತ ವಾರ್ಡ್‍ಗೆ ವಿಶೇಷ ಪ್ಯಾಕೇಜ್-ರೋಹಿಣಿ ಸಿಂಧೂರಿ ಘೋಷಣೆ

    ಮೈಸೂರು : ಜಿಲ್ಲೆಯನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಸಂಕಲ್ಪ ಮಾಡಿರುವ ಮೈಸೂರು ಜಿಲ್ಲಾಡಳಿತ ವಿನೂತನ ಟಾಸ್ಕ್‌ಗಳನ್ನು ಶುರು ಮಾಡಿದೆ. ಕೊರೊನಾ ಮುಕ್ತ ವಾರ್ಡ್‍ಗಳಿಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

    ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ್‍ಗಳಲ್ಲಿ ಸಂಪೂರ್ಣ ಕೊರೊನಾ ಮುಕ್ತವಾಗುವ 3 ವಾರ್ಡ್‍ಗಳಿಗೆ ತಲಾ ರೂ. 1,00,000ಗಳ ಪ್ರೋತ್ಸಾಹಧನ ನೀಡುತ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಘೋಷಿಸಿದ್ದಾರೆ.

    ವಾರ್ಡ್‍ನಲ್ಲಿನ ಅಭಿವೃದ್ಧಿ ಕಾರ್ಯಕ್ಕೆ ಈ ಹಣ ಬಳಸಬಹುದು. ಅಲ್ಲದೆ ವಾರ್ಡ್‍ಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದ ವಾರ್ಡ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಎಲ್ಲಾ ಸದಸ್ಯರಿಗೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಅದೇ ರೀತಿ ಸಂಪೂರ್ಣ ಕೊರೊನಾ ಮುಕ್ತವಾಗುವ ಗ್ರಾಮಾಂತರ ಭಾಗದ ನಗರ ಸಭೆ, ಪುರಸಭೆ , ಪಟ್ಟಣ ಪಂಚಾಯಿತಿಯ ವಾರ್ಡ್‍ಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ ರೂ.25,000ಗಳ ಪ್ರೋತ್ಸಾಹಧನ ಘೋಷಣೆ ಮಾಡಿದ್ದಾರೆ.

    ಸಮುದಾಯದ ಸಹಭಾಗಿತ್ವದಲ್ಲಿ ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ, ನಗರ, ಪಟ್ಟಣಗಳ ಸ್ಥಳೀಯ ಪ್ರಾಧಿಕಾರಗಳ ವಾರ್ಡ್ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳನ್ನು ಮೈಸೂರು ಜಿಲ್ಲಾಡಳಿತ ರಚಿಸಿದ್ದು, ಈ ಟಾಸ್ಕ್ ಫೋರ್ಸ್ ಸಮಿತಿಗಳ ಕಾರ್ಯ ಕ್ಷಮತೆ ಹೆಚ್ಚಿಸಲು ಈ ಪ್ರೋತ್ಸಾಹ ಧನ ಘೋಷಿಸಿದೆ. ಕಂಪನಿಗಳ ಸಿಎಸ್‍ಆರ್ ಹಣದಲ್ಲಿ ಕೋವಿಡ್ ಮುಕ್ತ ಗ್ರಾಮ ಪಂಚಾಯಿತಿ ಪುರಸ್ಕಾರ, ಕೋವಿಡ್ ಮುಕ್ತ ವಾರ್ಡ್ ಪುರಸ್ಕಾರ ಹಾಗೂ ಉತ್ತಮ ಕೋವಿಡ್ ಮಿತ್ರ ಕಾಯಕ ಪುರಸ್ಕಾರ ನೀಡುತ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

  • ಡಿಸಿ ರೋಹಿಣಿ ಸಿಂಧೂರಿ ಬಿಟ್ಟು ಕುಟುಂಬದ ಎಲ್ಲ ಸದಸ್ಯರಿಗೆ ಕೊರೊನಾ

    ಡಿಸಿ ರೋಹಿಣಿ ಸಿಂಧೂರಿ ಬಿಟ್ಟು ಕುಟುಂಬದ ಎಲ್ಲ ಸದಸ್ಯರಿಗೆ ಕೊರೊನಾ

    ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಿಟ್ಟು ಅವರ ಕುಟುಂಬದ ಎಲ್ಲ ಸದಸ್ಯರೆಲ್ಲರಿಗೂ ಕೊರೊನಾ ಪಾಸಿಟಿವ್ ಆಗಿದ್ದು, ರೋಹಿಣಿ ಸಿಂಧೂರಿ ಅವರಿಗೆ ಮಾತ್ರ ನೆಗೆಟಿವ್ ರಿಪೋರ್ಟ್ ಬಂದಿದೆ.

    ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ತಂದೆ-ತಾಯಿ, ಅತ್ತೆ-ಮಾಮ ಹಾಗೂ ಪತಿ ಎಲ್ಲರಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಎಲ್ಲರೂ ಹೋಂ ಐಸೋಲೇಷನ್‍ನಲ್ಲಿದ್ದಾರೆ. ಕುಟುಂಬಸ್ಥರಿಗೆಲ್ಲ ಪಾಸಿಟಿವ್ ಆಗಿದ್ದರಿಂದ ಡಿಸಿ ರೋಹಿಣಿ ಸಹ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು, ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಎಲ್ಲರಿಗೂ ಪಾಸಿಟಿವ್ ಆದರೂ ಇವರಿಗೆ ಮಾತ್ರ ಕೊರೊನಾ ನೆಗೆಟಿವ್ ಆಗಿದೆ.

    ಮುಂಜಾಗ್ರತೆ ವಹಿಸಿದ ಕಾರಣ ಕುಟುಂಬಸ್ಥರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಎಲ್ಲರೂ ಹೋಮ್ ಐಸೋಲೇಶನ್‍ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಹಿಣಿ ಸಿಂಧೂರಿ ಅವರು ಜಿಲ್ಲೆಯಲ್ಲೊ ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದು, ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕುಟುಂಬಸ್ಥರಿಗೆ ಪಾಸಿಟಿವ್ ಆಗಿದೆ.

  • ಸುಖಾಸುಮ್ಮನೆ ಆರೋಪ, ಜಿಲ್ಲೆಗೆ ಕಳಂಕ ತಂದಿದ್ದಕ್ಕೆ ಮೈಸೂರು ಜನತೆ ಬಳಿ ಕ್ಷಮೆ ಕೇಳಲಿ- ರೋಹಿಣಿ ಸಿಂಧೂರಿ ಕಿಡಿ

    ಸುಖಾಸುಮ್ಮನೆ ಆರೋಪ, ಜಿಲ್ಲೆಗೆ ಕಳಂಕ ತಂದಿದ್ದಕ್ಕೆ ಮೈಸೂರು ಜನತೆ ಬಳಿ ಕ್ಷಮೆ ಕೇಳಲಿ- ರೋಹಿಣಿ ಸಿಂಧೂರಿ ಕಿಡಿ

    – 7 ತಿಂಗಳಿಂದ ನನ್ನ ಮೇಲೆ ವೈಯಕ್ತಿಕವಾಗಿ ಆರೋಪ ಮಾಡ್ತಿದ್ದಾರೆ

    ಮೈಸೂರು: ನಮ್ಮ ಮೇಲೆ ಆರೋಪ ಮಾಡಲು ಹೋಗಿ ಮೈಸೂರಿಗೆ ಕಳಂಕ ತರಲು ಯತ್ನಿಸಿದರು. ಆದರೆ ನಾವು ಅದರಿಂದ ಮುಕ್ತರಾಗಿದ್ದೇವೆ. ಕಳಂಕ ತರಲು ಯತ್ನಿಸಿದವರು ಮೈಸೂರು ಜನತೆಯ ಕ್ಷಮೆ ಕೇಳಬೇಕು ಎಂದು ರೋಹಿಣಿ ಸಿಂಧೂರಿ ಜೆಡಿಎಸ್ ನಾಯಕರ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪೋರ್ಟ್ ನೋಡಿದ್ದೀರಾ? ನಾವು ಬಂದ ದಿನದಿಂದ ಕೆಲವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಿಲ್ಲ, ಅದು ನನ್ನ ಕೆಲಸವೂ ಅಲ್ಲ. ನಮ್ಮ ಮೇಲೆ ಆರೋಪ ಮಾಡಲು ಹೋಗಿ ಮೈಸೂರಿಗೆ ಕಳಂಕ ತರಲು ಪ್ರಯತ್ನಿಸಿದ್ದರು. ಅದರಿಂದ ನಾವು ಮುಕ್ತರಾಗಿದ್ದೇವೆ. ಆದರೆ ಕಳಂಕ ತರಲು ಪ್ರಯತ್ನಿಸಿದವರು ಮೈಸೂರು ಜನರ ಕ್ಷಮೆ ಕೇಳಬೇಕು. ನಮ್ಮ ಮೇಲೆ ಮಾಡಿದ ಆರೋಪ ಸುಳ್ಳು ಮತ್ತು ಆಧಾರ ರಹಿತ. ಸರ್ಕಾರ ಕೇಳಿದ ಎಲ್ಲ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ – ರೋಹಿಣಿ ಸಿಂಧೂರಿಗೆ ಕ್ಲೀನ್‍ಚಿಟ್

    ಕಳೆದ 7 ತಿಂಗಳಿಂದ ನನ್ನ ಮೇಲೆ ವೈಯಕ್ತಿಕವಾಗಿಯೂ ಆರೋಪ ಮಾಡುತ್ತಿದ್ದಾರೆ. ಚಾಮರಾಜನಗರ ಘಟನೆಯಲ್ಲು ಅದನ್ನೇ ಮಾಡಿದ್ದಾರೆ. ನಾವು ಸರ್ವಿಸ್ ಗೆ ಸೇರಿದ್ದೇ ದೇಶ ಸೇವೆ ಮಾಡಲು. ಈ ಸಣ್ಣ ಪುಟ್ಟ ಆರೋಪಗಳಿಗೆ ಉತ್ತರ ನೀಡುವುದಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಟ್ಟಿದ್ದೆ. ಈ ವಿಚಾರದಲ್ಲಿ ನನ್ನ ಮೇಲೆ ಆರೋಪ ಮಾಡಲು ಹೋಗಿ ಮೈಸೂರಿಗೆ ಕಳಂಕ ತಂದಿದ್ದಾರೆ. ಅವರೇಲ್ಲರೂ ಮೈಸೂರಿನ ಜನರ ಕ್ಷಮೆ ಕೇಳಲಿ ಎಂದು ಹೇಳಿದರು.

    ಮಾಜಿ ಕಾರ್ಪೋರೇಟರ್, ಶಾಸಕರ ಟೀಕೆಗಳಿಗೆ ಪ್ರತಿಕ್ರಿಯೆ ಕೇಳಬೇಡಿ, ಪ್ರತಿಯೊಂದಕ್ಕೂ ಉತ್ತರ ಕೊಡುತ್ತಾ ಕೂರುವ ಸಮಯವಲ್ಲ ಎಂದು ಜೆಡಿಎಸ್ ನಾಯಕರಿಗೆ ರೋಹಿಣಿ ಸಿಂಧೂರಿ ತಿರುಗೇಟು ನೀಡಿದರು. ನಾನು ಮೈಸೂರಿಗೆ ಬಂದ ಏಳು ತಿಂಗಳಿಂದಲೂ ವೈಯಕ್ತಿಕ ಆರೋಪ ಮಾಡುತ್ತಿದ್ದಾರೆ. ದೇಶ ಸೇವೆಗಾಗಿ ನಾವು ಕೆಲಸಕ್ಕೆ ಸೇರಿದ್ದೇವೆ. ಇಂತಹ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಎಲ್ಲರೂ ಕೈಜೋಡಿಸಿದಾಗ ಮಾತ್ರ ಜೀವ ರಕ್ಷಣೆ ಸಾಧ್ಯ. ಕಲಬೇಡ, ಕೊಲಬೇಡ ಎಂಬ ಬಸವಣ್ಣನ ವಚನವನ್ನು ಎಲ್ಲರೂ ಮಾರ್ಗಸೂಚಿಯಾಗಿ ಸ್ವೀಕರಿಸಬೇಕು. ನಾಡದೇವತೆ ಚಾಮುಂಡೇಶ್ವರಿ ಸ್ವಲ್ಪ ಕಷ್ಟ ಸಾಧ್ಯವಾದರೂ ಸದ್ಬುದ್ಧಿ ಕೊಡಲಿ ಎಂದು ಟಾಂಗ್ ನೀಡಿದ್ದಾರೆ.

  • ಚಾಮರಾಜನಗರ ಆಕ್ಸಿಜನ್ ದುರಂತ – ರೋಹಿಣಿ ಸಿಂಧೂರಿಗೆ ಕ್ಲೀನ್‍ಚಿಟ್

    ಚಾಮರಾಜನಗರ ಆಕ್ಸಿಜನ್ ದುರಂತ – ರೋಹಿಣಿ ಸಿಂಧೂರಿಗೆ ಕ್ಲೀನ್‍ಚಿಟ್

    – ಸಮಿತಿ ಹೈಕೋರ್ಟಿಗೆ ಸಲ್ಲಿಸಿರುವ ವರದಿಯಲ್ಲೇನಿದೆ..?

    ಚಾಮರಾಜನಗರ: ಜಿಲ್ಲೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್ ಸಿಕ್ಕಿದೆ.

    ಹೌದು. ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎ.ಎನ್ ವೇಣುಗೋಪಾಲ ಸಮಿತಿಯು ಹೈಕೋರ್ಟ್‍ಗೆ ವರಿ ನೀಡಿದೆ. ವರದಿಯಲ್ಲಿ ಮೈಸೂರು ಜಿಲ್ಲಾಧಿಕಾರಿಯವರದ್ದು ಈ ಪ್ರಕರಣದಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿದೆ.

    ವರದಿಯಲ್ಲಿ ಏನಿದೆ..?
    ದುರಂತದಲ್ಲಿ ಮೈಸೂರು ಜಿಲ್ಲಾಧಿಕಾರಿ ತಪ್ಪಿಲ್ಲ. ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲ. ಆಕ್ಸಿಜನ್ ಪೂರೈಕೆಗೆ ತಡೆ ಒಡ್ಡಿದ್ದಾರೆ ಎಂಬ ಬಗ್ಗೆ ಸಾಕ್ಷ್ಯಗಳು ಇಲ್ಲ. ಪ್ರಕರಣಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಹೊಣೆಯಾಗಿದ್ದು, ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳುವಲ್ಲಿ ಜಿಲ್ಲಾಡಳಿತ, ಜಿಲ್ಲಾಸ್ಪತ್ರೆ ವಿಫಲವಾಗಿದೆ. ಜಿಲ್ಲಾಡಳಿತ, ಜಿಲ್ಲಾಸ್ಪತ್ರೆ ಎಚ್ಚರವಾಗಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ. ಆಕ್ಸಿಜನ್ ಪ್ಲ್ಯಾಂಟ್ ಚಾಮರಾಜನಗರದಿಂದ 70 ಕಿಲೋ ಮೀಟರ್ ದೂರದಲ್ಲಿದೆ. ಮೈಸೂರಿನಿಂದ ಆಕ್ಸಿಜನ್ ತುಂಬಿಸಿಕೊಂಡು ಜಿಲ್ಲಾಸ್ಪತ್ರೆಗೆ ಸಾಗಾಟ ಮಾಡಬೇಕಿತ್ತು. ಜಿಲ್ಲಾಸ್ಪತ್ರೆ, ಜಿಲ್ಲಾಡಳಿತ ಮೊದಲೇ ಎಚ್ಚೆತ್ತುಕೊಂಡಿದ್ದರೆ ಈ ದುರಂತ ಆಗ್ತಿರಲಿಲ್ಲ ಎಮದು ತಿಳಿಸಿದೆ.

    ಅಲ್ಲದೆ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಕ್ಕಿರಲಿಲ್ಲ. ಹೀಗಾಗಿ ಸೋಂಕಿತರ ಮೆದುಳು, ದೇಹದ ಇತರೆ ಭಾಗಗಳಿಗೆ ಹಾನಿಯಾಗಿದೆ. ಆಕ್ಸಿಜನ್ ಕೊರತೆಯಿಂದ ಮೆದುಳು, ದೇಹದ ಇತರೆ ಭಾಗಗಳಿಗೆ ಹಾನಿಯಾಗಿ ಸಾವನ್ನಪ್ಪಿದ್ದಾರೆ ಎಂದು ಹೈಕೊರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿಗೆ ಕ್ಲೀನ್‍ಚಿಟ್ ದೊರೆತಿದೆ.

    ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ದುರಂತಕ್ಕೆ ಆಕ್ಸಿಜನ್ ಕೊರತೆ ಕಾರಣವಾಗಿದೆ. ಮೇ 2ರ ರಾತ್ರಿ 11ರಿಂದ ಮೇ 3ರ ಬೆಳಗ್ಗಿನ ಜಾವದವರೆಗೆ ಆಕ್ಸಿಜನ್ ಇರಲಿಲ್ಲ. ಜಿಲ್ಲಾಸ್ಪತ್ರೆಯ ದಾಖಲೆಯ ಪ್ರಕಾರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಇರಲಿಲ್ಲ. ಇತ್ತ ಮೂವರರಷ್ಟೇ ಆಕ್ಸಿಜನ್ ಇಲ್ಲದೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದರು. ಆದರೆ 36 ಮಂದಿ ಸಾವಿಗೂ ಆಕ್ಸಿಜನ್ ಕೊರತೆ ಕಾರಣ ಎನ್ನಲಾಗಿದೆ.

    ಮೈಸೂರು ಡಿಸಿ ವಿರುದ್ಧ ಚಾಮರಾಜನಗರ ಡಿಸಿ ರವಿ ಆರೋಪ ಮಾಡಿದ್ದರು. ಆದರೆ ತನಿಖೆ ವೇಳೆ ಮೈಸೂರು ಡಿಸಿ ವಿರುದ್ಧದ ಆರೋಪಕ್ಕೆ ಸಾಕ್ಷ್ಯಗಳೇ ಇಲ್ಲ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಡಿಸಿ ರವಿ ವಿರುದ್ಧ ಏನ್ ಕ್ರಮಕೈಗೊಳ್ಳುತ್ತೆ ಸರ್ಕಾರ..?, ಚಾಮರಾಜನಗರ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಏನ್ ಉತ್ತರ ಕೊಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

  • ಚಾಮರಾಜನಗರ ಆಕ್ಸಿಜನ್ ದುರಂತ – ಡಿಸಿ ರೋಹಿಣಿ ಸಿಂಧೂರಿ ಮೊದಲ ಪ್ರತಿಕ್ರಿಯೆ

    ಚಾಮರಾಜನಗರ ಆಕ್ಸಿಜನ್ ದುರಂತ – ಡಿಸಿ ರೋಹಿಣಿ ಸಿಂಧೂರಿ ಮೊದಲ ಪ್ರತಿಕ್ರಿಯೆ

    – 10 ವರ್ಷದ ಸೇವೆಯಲ್ಲಿ ಎಂದೂ ಈ ರೀತಿ ಕೆಲಸ ಮಾಡಿಲ್ಲ
    – ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ರೋಹಿಣಿ ಸಿಂಧೂರಿ ಪ್ರಶ್ನೆ
    – ಕೆಲಸ ಮಾಡದೇ ನಮ್ಮ ಮೇಲೆ ಆರೋಪ ಮಾಡಿದ್ರೆ ನೋವಾಗುತ್ತೆ

    ಮೈಸೂರು: ಚಾಮರಾಜನಗರ ಆಕ್ಸಿಜನ್ ದುರಂತದ ಬಳಿಕ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ 10 ವರ್ಷದ ಸೇವೆಯಲ್ಲಿ ನಾನು ಎಂದು ಈ ರೀತಿ ಕೆಲಸ ಮಾಡಿಲ್ಲ ಎಂದು ತಮ್ಮ ವಿರುದ್ಧ ಕೇಳಿ ಬಂದ ಎಲ್ಲ ಆರೋಪಗಳನ್ನ ತಳ್ಳಿ ಹಾಕಿದ್ದಾರೆ.

    ಇಂದು ಮಾಧ್ಯಮಗಳ ಜೊತೆ ಮಾತನಾಡಿದ ರೋಹಿಣಿ ಸಿಂಧೂರಿ, ಚಾಮರಾಜನಗರದಲ್ಲಿ ಆಗಿರುವ ಸಾವುಗಳಿಗೆ ನೋವಾಗಿವೆ. ಇದರ ಬೆನ್ನಲ್ಲೇ ಸಾಕಷ್ಟು ಊಹಾಪೋಹಗಳು ನಡೆಯುತ್ತಿದ್ದರಿಂದ ವೈಯಕ್ತಿಕವಾಗಿ ತುಂಬಾ ನೋವಾಗಿದೆ. ನನ್ನ 10 ವರ್ಷದ ಸೇವೆಯಲ್ಲಿ ಎಂದೂ ಈ ರೀತಿ ಕೆಲಸ ಮಾಡಿಲ್ಲ. ಸರ್ಕಾರ ತನಿಖೆ ಆದೇಶ ಮಾಡಿದ್ದರಿಂದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿಲ್ಲ. ಚಾಮರಾಜನಗರ ಜಿಲ್ಲಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದ್ದರಿಂದ ಕೆಲ ವಿಷಯಗಳಿಗೆ ಸ್ಪಷ್ಟನೆ ನೀಡಬೇಕಿದೆ ಎಂದರು.

    ರೋಹಿಣಿ ಸಿಂಧೂರಿ ಪ್ರಶ್ನೆ: ಚಾಮರಾಜನಗರಕ್ಕೆ ಸ್ಪಂದಿಸಿಲ್ಲ ಅನ್ನೋದು ಸತ್ಯಕ್ಕೆ ದೂರವಾದದ್ದು. ನಾವು ರಿಸ್ಕ್ ತೆಗೆದುಕೊಂಡು 40 ಸಿಲಿಂಡರ್ ಗಳನ್ನು ಚಾಮರಾಜನಗರಕ್ಕೆ ಕಳುಹಿಸಲಾಗಿದೆ. ದಾಖಲಾತಿಗಳ ಪ್ರಕಾರ ರಾತ್ರಿ 11 ಗಂಟೆಗೆ ಕೇಳಿದ್ದಾರೆ. ಅದಕ್ಕೂ ಮುಂಚಿತವಾಗಿ ಕೇಳಿದ್ರೆ ಸಿಲಿಂಡರ್ ಕಳುಹಿಸಲಾಗುತ್ತಿತ್ತು. ಆಸ್ಪತ್ರೆ ಮತ್ತು ಆಕ್ಸಿಜನ್ ರಿಫಿಲ್ಲಿಂಗ್ ಕಂಪನಿಗಳ ನಡುವೆ ಒಪ್ಪಂದ ಆಗಿರುತ್ತದೆ. ಎಲ್ಲ ಆಕ್ಸಿಜನ್ ಕೊರತೆಯಾದ್ರೂ ರಿಫಿಲ್ಲಿಂಗ್ ಘಟಕದಿಂದಲೇ ಪೂರೈಕೆ ಮಾಡಲಾಗುತ್ತದೆ. ಮಾನವೀಯತೆ ದೃಷ್ಟಿಯಿಂದ ಜಿಲ್ಲಾಸ್ಪತ್ರೆಯಲ್ಲಿದ್ದ 40 ಆಕ್ಸಿಜನ್ ಸಿಲಿಂಡರ್ ಗಳನ್ನ ನೀಡಿದ್ದೇವೆ. ಇದೆಲ್ಲ ಆಸ್ಪತ್ರೆಗಳ ದಾಖಲಾತಿಯಲ್ಲಿ ದಾಖಲಾಗಿದೆ. ಹಾಗಾದ್ರೆ ಇದು ಮಾನವೀಯತೆ ಅಲ್ವಾ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ರವಿ ಅವರನ್ನ ರೋಹಿಣಿ ಸಿಂಧೂರಿ ಪ್ರಶ್ನಿಸಿದರು. ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ – ತಾಳಿ ಉಳಿಸಿಕೊಡಿ ಅಂತ ಅಂಗಲಾಚಿದ ನವ ವಧು

    ಭಾವುಕರಾದ ರೋಹಿಣಿ ಸಿಂಧೂರಿ: ನಮಗೂ ಲಿಕ್ವಿಡ್ ಆಕ್ಸಿಜನ್ ಬಳ್ಳಾರಿಯಿಂದ ಬರುತ್ತೆ. ಝೀರೋ ಟ್ರಾಫಿಕ್ ಮಾಡಿಸಿ ಬಳ್ಳಾರಿಯಿಂದ ಇಲ್ಲಿಗೆ ಆಕ್ಸಿಜನ್ ತೆಗೆದುಕೊಂಡು ಬರುತ್ತಿದ್ದೇವೆ. ಇಲ್ಲಿ ಏನಾದ್ರೂ ಆದ್ರೆ ಬಳ್ಳಾರಿಯವರ ಮೇಲೆ ಆರೋಪ ಮಾಡೋಕೆ ಆಗುತ್ತಾ? ನಾವು ಜನರ ಪ್ರಾಣ ಉಳಿಸಲು 24/7 ಕೆಲಸ ಮಾಡುತ್ತಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಈ ರೀತಿ ಆಗಿದ್ದರೆ ಯಾರನ್ನಾದರೂ ಹೇಗಾದರೂ ಸಂಪರ್ಕಿಸಿ ಆಕ್ಸಿಜನ್ ಪಡೆಯುತ್ತಿದ್ದೇವು. ಅವರು ಆ ಕೆಲಸ ಮಾಡದೇ ನಮ್ಮ ಮೇಲೆ ಆರೋಪ ಮಾಡಿದ್ರೆ ನೋವಾಗುತ್ತೆ ಎಂದು ರೋಹಿಣಿ ಸಿಂಧೂರಿ ಭಾವುಕರಾದ್ರು.

    ಕಳೆದ 10 ದಿನಗಳಿಂದ ನಮ್ಮಲ್ಲಿ ಆಕ್ಸಿಜನ್ ಕೊರತೆ ಇದೆ ಅಂತ ಹೇಳಿದ್ದೇವೆ. ರೆಮ್‍ಡೆಸಿವರ್ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರೋದು ಪತ್ತೆ ಹಚ್ಚಲಾಗಿದೆ. ಕೇವಲ ವೈದ್ಯಕೀಯ ಬಳಕೆಗಾಗಿ ಆಕ್ಸಿಜನ್ ನೀಡಬೇಕೆಂದು ಸರ್ಕಾರ ಸುತ್ತೋಲೆ ಸಹ ಹೊರಡಿಸಿದೆ. ಆದ್ರೆ ರೀಫಿಲ್ಲಿಂಗ್ ಘಟಕಗಳು ಕೈಗಾರಿಕೆಗಳಿಗೂ ನೀಡುತ್ತಿದ್ದಾರೆ. ಕೆಲ ಆಸ್ಪತ್ರೆಗಳು ಹೆಚ್ಚು ಹೆಚ್ಚು ಆಕ್ಸಿಜನ್ ಸಿಲಿಂಡರ್ ಗಳನ್ನ ಸ್ಟಾಕ್ ಮಾಡಿಕೊಳ್ಳುತ್ತಿರುವ ಆರೋಪಗಳು ಕೇಳಿ ಬಂದಿದೆ. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

    ಆಕ್ಸಿಜನ್ ಯಾರಿಗೆ ಕೊಡಬೇಕು? ಯಾರಿಗೆ ಕೊಡಬಾರದು ಅಂತ ಹೇಳೋದು ನಮ್ಮ ಪರಿಧಿಯಲ್ಲಿರಲ್ಲ. ಅದು ಆಸ್ಪತ್ರೆ ಮತ್ತು ಘಟಕಗಳ ನಡುವಿನ ಒಪ್ಪಂದ ಇರುತ್ತೆ. ಆದ್ರೂ ಘಟಕಗಳಿಗೆ ವೈದ್ಯಕೀಯ ಬಳಕೆಗೆ ಮಾತ್ರ ಆಕ್ಸಿಜನ್ ನೀಡುವಂತೆ ಹೇಳಿದ್ದೇವೆ ಎಂದರು. ಇದನ್ನೂ ಓದಿ: ಸತ್ತಿರೋದು 24 ಅಲ್ಲ, 34 ರಿಂದ 35 – ಸುಳ್ಳು ಹೇಳ್ತಿದೆಯಾ ಸರ್ಕಾರ? – ಕಾಂಗ್ರೆಸ್ ಶಾಸಕರ ಸುದ್ದಿಗೋಷ್ಠಿ ತಡೆದ ಅಧಿಕಾರಿಗಳು

    ಆಸ್ಪತ್ರೆಗಳು ಮುಂಚಿತವಾಗಿಯೇ ತಮಗೆ ಎಷ್ಟು ಆಕ್ಸಿಜನ್ ಬೇಕು ಅನ್ನೋದು ತಿಳಿದುಕೊಂಡು ಪೂರೈಕೆ ಮಾಡುವಂತೆ ಹೇಳೋದು ಅವರ ಜವಾಬ್ದಾರಿ. ಇಂತಹ ಸಂದರ್ಭದಲ್ಲಿ ಆರೋಪ ಮಾಡೋದು, ಪ್ರೆಸ್ ಮೀಟ್ ಮಾಡೋದರಿಂದ ಜನಕ್ಕೆ ತಪ್ಪು ಅಭಿಪ್ರಾಯ ಹೋಗುತ್ತದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿಗಳ ವಿರುದ್ಧ ಬೇಸರ ಹೊರ ಹಾಕಿದರು. ಇದನ್ನೂ ಓದಿ: ದುರಂತದ ನಡುವೆ ವಿಚಿತ್ರ ಘಟನೆ – ಬದುಕಿದ್ರೂ ಸತ್ತಿದ್ದಾರೆ ಅಂತ ಸುಳ್ಳು ಮಾಹಿತಿ-ವೆಂಟಿಲೇಟರ್‌ನಲ್ಲಿದ್ದ ಅಮ್ಮನ ಕಂಡು ನಿಟ್ಟುಸಿರು ಬಿಟ್ಟ ಪುತ್ರ

  • ಜಿಲ್ಲಾಡಳಿತದ ಒತ್ತಡದಿಂದ 24 ಜನ ಮೃತಪಟ್ಟಿದ್ದಾರೆ- ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ಗಂಭೀರ ಆರೋಪ

    ಜಿಲ್ಲಾಡಳಿತದ ಒತ್ತಡದಿಂದ 24 ಜನ ಮೃತಪಟ್ಟಿದ್ದಾರೆ- ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ಗಂಭೀರ ಆರೋಪ

    ಮೈಸೂರು: ಚಾಮರಾಜನಗರ ಆಮ್ಲಜನಕ ದುರಂತದಿಂದ 24 ಜನ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾರಾ ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಒತ್ತಡಕ್ಕೆ ಈ ಜಿಲ್ಲಾಧಿಕಾರಿಯನ್ನು ಇಟ್ಟುಕೊಂಡಿದ್ದೀರೋ ಗೊತ್ತಿಲ್ಲ. ಚಾಮರಾಜನಗರ- ಮೈಸೂರು ಜಿಲ್ಲಾಡಳಿತಗಳ ವ್ಯತ್ಯಾಸದಿಂದ ಈ ದುರ್ಘಟನೆ ನಡೆದಿದೆ. ಮೈಸೂರಿನಿಂದ ಸಕಾಲಕ್ಕೆ ಸಿಲಿಂಡರ್ ಪೂರೈಕೆ ಆಗಿಲ್ಲ. ಸದರನ್ ಗ್ಯಾಸ್‍ನಿಂದ 2.30ಕ್ಕೆ 90 ಸಿಲಿಂಡರ್ ಹೋಗಿದೆ. ಆದರೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿರುವಂತೆ 220 ಆಮ್ಲಜನಕ ಸಿಲಿಂಡರ್ ಪೂರೈಕೆ ಆಗಿಲ್ಲ ಎಂದಿದ್ದಾರೆ. ಕಾಂಟ್ರ್ಯಾಕ್ಟ್ ಇರುವುದು ಚಾಮರಾಜನಗರ ಜಿಲ್ಲಾಸ್ಪತ್ರೆ, ಸದರನ್ ಮತ್ತು ಪದಕಿ ಗ್ಯಾಸ್ ಏಜೆನ್ಸಿಗಳ ನಡುವೆ. ಕಳುಹಿಸಿಕೊಡಲು ನೀವು ಯಾರು? 220 ಕಳುಹಿಸಿದ್ದೇವೆ ಅಂದರೆ ನಿಮ್ಮ ಕಂಟ್ರೋಲ್ ಇರುವುದನ್ನು ಒಪ್ಪಿಕೊಂಡಂತಾಯಿತು ಎಂದು ಆರೋಪಿಸಿದರು.

    ಪ್ರತಿ ದಿನ 300-350 ಸಿಲಿಂಡರ್ ನೀಡುವಂತೆ ಆಕ್ಸಿಜನ್ ಸಿಲಿಂಡರ್ ಕಂಪನಿಗಳ ಜೊತೆ ಕಾಂಟ್ರ್ಯಾಕ್ಟ್ ಮಾಡಿಕೊಂಡಿರುತ್ತದೆ. ಆದರೆ ಈಗ ಒಂದು ವಾರದ ಹಿಂದೆ ಮೈಸೂರು ಜಿಲ್ಲಾಡಳಿತದಿಂದ ಸಭೆ ಮಾಡಿ, ಅಲ್ಲಿನ ಡ್ರಗ್ ಕಂಟ್ರೋಲರ್‍ಗೆ ಸೂಚಿಸಿ, ಚಾಮರಾಜನಗರಕ್ಕೆ 150, ಮಂಡ್ಯ 100 ಸಿಲಿಂಡರ್ ನೀಡುವಂತೆ ತಿಳಿಸುತ್ತಾರೆ. ಅಲ್ಲದೆ ಆಕ್ಸಿಜನ್‍ಗಾಗಿ ಚಾಮರಾಜನಗರದ ವಾಹನ ಬಂದು ನಿಂತರೂ ದಿನಕ್ಕೆ 20, 30, 40 ಹೀಗೆ ಮೂರ್ನಾಲ್ಕು ಬಾರಿ ಅವರು ಬರಬೇಕಿದೆ.

    ನಿಮ್ಮ ಭೂ ವ್ಯವಹಾರಗಳಿದ್ದರೆ ಮಾಡಿಸಿಕೊಳ್ಳಿ. ಆದರೆ ಮೈಸೂರಿನಂತಹ ಪ್ರಮುಖ ಜಿಲ್ಲೆಗೆ ಪ್ರಾಮಾಣಿಕ, ಹಿರಿಯ ಅಧಿಕಾರಿಯನ್ನು ನೇಮಿಸಿ. ನಿನ್ನೆ ಚಾಮರಾಜನಗರದಲ್ಲಿ ದುರಂತ ಉಂಟಾಗಿದೆ. ಮೈಸೂರಿನಲ್ಲೂ ಅದ್ವಾನಗಳು ಶುರು ಆಗಿವೆ. ದಯವಿಟ್ಟು ಕೋವಿಡ್ ನಿರ್ವಹಣೆವಾಗಿ ಬೇರೊಬ್ಬ ಅಧಿಕಾರಿಯನ್ನು ನೇಮಿಸಿ ಎಂದು ಮನವಿ ಮಾಡಿದ್ದಾರೆ.

  • ಚಾಮರಾಜನಗರದಲ್ಲಿ ಆಗಿರುವಂತಹ ಘಟನೆ ಮೈಸೂರಿನಲ್ಲೂ ಸಂಭವಿಸುತ್ತಿತ್ತು: ಪ್ರತಾಪ್ ಸಿಂಹ

    ಚಾಮರಾಜನಗರದಲ್ಲಿ ಆಗಿರುವಂತಹ ಘಟನೆ ಮೈಸೂರಿನಲ್ಲೂ ಸಂಭವಿಸುತ್ತಿತ್ತು: ಪ್ರತಾಪ್ ಸಿಂಹ

    ಬೆಂಗಳೂರು: ನಾವು ಮೈಸೂರಿನ ಜನರ ಜೊತೆಗೆ ಮಂಡ್ಯ, ಚಾಮರಾಜನಗರದ ಜನರನ್ನು ಸಹ ರಕ್ಷಣೆ ಮಾಡಬೇಕು. ಎಲ್ಲಾ ಕಡೆ ಆಕ್ಸಿಜನ್ ಕೊರತೆ ಇದೆ. ಚಾಮರಾಜನಗರದ ಘಟನೆಯನ್ನು ನೋಡಿ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

    ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದಲ್ಲಿ 24 ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಚಾಮರಾಜದಲ್ಲಿ ಆಗಿರುವಂತಹ ಘಟನೆಯೆ ಮೈಸೂರಿನಲ್ಲಿಯೂ 2 ದಿನಹಿಂದೆ ಸಂಭವಿಸುತ್ತಿತ್ತು. ಆಗ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಸ್ ಟಿ ಸೋಮಶೇಖರ್ ಹಾಗೂ ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ ಅವರು ಒಂದು ತಿರ್ಮಾನವನ್ನು ಮಾಡಿದ್ದೆವು. ಖಾಸಗಿ ಆಸ್ಪತ್ರೆಯವರಿಗೆ 2 ದಿನಕ್ಕೆ ಆಗುವಷ್ಟು ಶನಿವಾರ ಮತ್ತು ಭಾನುವಾರಕ್ಕೆ ಆಗುವಷ್ಟು ಆಕ್ಸಿಜನ್ ಕೊಟ್ಟು ಪರಿಸ್ಥಿತಿಯನ್ನು ನಾವು ಹತೋಟಿಗೆ ತಂದಿದ್ದೆವು. ಆದರೆ ಇವತ್ತು ಮತ್ತೆ ನಮಗೆ ಒತ್ತಡದ ಪರಿಸ್ಥಿತಿ ಇದೆ ಎಂದರು.

    ನನಗೆ ಚಾಮರಾಜನಗರದ ಡಿಸಿ ಕರೆ ಮಾಡಿರಲಿಲ್ಲ. ನಾನೇ ಚಾಮರಾಜನಗರ ಡಿಸಿಗೆ ಕರೆಮಾಡಿದ್ದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆ ಇದೆ ಎಂದು ಗೊತ್ತಾಯಿತು. ಇಲ್ಲಿ ತುಂಬಾ ಸಮಸ್ಯೆ ಎದುರಾಗಿದೆ ಎಂದು ಸಹ ಹೇಳಿದ್ದರು. ಆಗ ನಾನು ಚಾಮರಾಜನಗರ ಡಿಸಿಗೆ ಸಂಪರ್ಕಿಸಲು ಪ್ರಯತ್ನ ಪಟ್ಟೆ. ಆದರೆ ಅವರಿಗೆ ಕರೆ ಹೋಗಲಿಲ್ಲ, ಕಂಟ್ರೋಲ್ ರೂಂಗೆ ಹೋಯಿತು. ಆಗ ಅವರಿಗೆ ಡಿಸಿ ಅವರು ಬೇಗ ನನ್ನನ್ನು ಸಂಪರ್ಕ ಮಾಡಲಿ ಎಂದು ಹೇಳಿದ್ದೇನು.

    ಚಾಮರಾಜನಗರ ಡಿಸಿ ಕರೆ ಮಾಡಿದ್ರು. ಈ ವೇಳೆ ಮೈಸೂರು ಎಡಿಸಿ ಅವರಿಗೆ ಕಾನ್ಫರೆನ್ಸ್ ಕಾಲ್ ಹಾಕಿದ್ದೆ. ಈ ವೇಳೆ ತಕ್ಷಣವಾಗಿ 50 ಸಿಲಿಂಡರ್ ಕಳಿಸಿಕೊಟ್ಟೆವು. ಬೆಳಗ್ಗಿನ ಜಾವ 3 ಗಂಟೆಗೆ ಮತ್ತು 7 ಗಂಟೆ ಸಹ ಕಳಿಸಿಕೊಟ್ಟಿದ್ದೇವೆ. ಇಷ್ಟಾದರೂ 24 ಜನ ಸಾವನ್ನಪ್ಪಿರುವುದು ನಮಗೆ ನೋವು ತಂದಿದೆ. ನಾವು ಮೈಸೂರಿನ ಜನರ ಜೊತೆಗೆ ಮಂಡ್ಯ, ಚಾಮರಾಜನಗರದ ಜನರನ್ನು ಸಹ ರಕ್ಷಣೆ ಮಾಡಬೇಕು. ಎಲ್ಲಾ ಕಡೆ ಆಕ್ಸಿಜನ್ ಕೊರತೆ ಇದೆ. ಮೈಸೂರಿಗೆ 73 ಕೆಎಲ್ ಆಕ್ಸಿಜನ್ ಬೇಕಾಗಿದೆ. ನಾನು ಯಾರ ಮೇಲಿಯೂ ಆರೋಪ ಮಾಡಲ್ಲ ಎಂದಿದ್ದಾರೆ.

    ಸದ್ಯ ಎಲ್ಲಾ ಕಡೆ ಸವಾಲಿನ ಪರಿಸ್ಥಿತಿ ಇದೆ. ಈಗ ಅವರಿವರನ್ನು ದೂಶಿಸುವುದು ಸರಿಯಲ್ಲ. ಚಾಮರಾಜನಗರದ ಘಟನೆಯನ್ನು ನೋಡಿ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಚಾಮರಾಜನಗರ ಡಿಸಿ ಮೈಸೂರಿನ ಜಿಲ್ಲಾಡಳಿತಕ್ಕೆ ಮೊದಲು ಕೇಳಿದ್ದಾರೆ. ಮೈಸೂರಿನಲ್ಲಿ ಕೆಆರ್ ಆಸ್ಪತ್ರೆಯಲ್ಲಿ 300 ಬೆಡ್‍ಗಳು ಇವೆ. ಇಲ್ಲೂ ಸ್ವಲ್ಪ ಸಮಸ್ಯೆ ಇದ್ದರಿಂದ ಅದು ಆಗಿಲ್ಲ. ನಾನು ಕರೆ ಮಾಡಿದ್ದಾಗ ಅವರು 50 ಸಿಲಿಂಡರ್ ಬೇಕು ಎಂದು ಕೇಳಿಕೊಂಡಿದ್ದರು ನಾನು ಕಳಿಸಿಕೊಟ್ಟಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಬಗ್ಗೆ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ನಮಗೆ ಟ್ರಾನ್ಸ್‍ಪೋರ್ಟ್ ಸಮಸ್ಯೆ ಎದುರಾಗುತ್ತಿದೆ. ಜನರು ಸಹ ಜಾಗೃತರಾಗಬೇಕು ಎಂದು ತಿಳಿಸಿದ್ದಾರೆ.