Tag: Rob

  • ವ್ಯಕ್ತಿಯ ಮೇಲೆ ದಾಳಿ – 1.4 ಲಕ್ಷ ರೂ. ದೋಚಿತು ವಾನರಪಡೆ!

    ವ್ಯಕ್ತಿಯ ಮೇಲೆ ದಾಳಿ – 1.4 ಲಕ್ಷ ರೂ. ದೋಚಿತು ವಾನರಪಡೆ!

    ಆಗ್ರಾ: ಬ್ಯಾಂಕಿಗೆ ಹಣ ಜಮಾ ಮಾಡಲು ಹೋದ ವ್ಯಕ್ತಿಯ ಮೇಲೆ ಕೋತಿಗಳು ದಾಳಿ ಮಾಡಿ ಹಣದ ಬ್ಯಾಗ್ ಅನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಉತ್ತರಪ್ರದೇಶದ ನೈಕಿ ಮಂಡಿ ಪ್ರದೇಶದಲ್ಲಿ ನಡೆದಿದೆ.

    ಸೋಮವಾರ ಬೆಳಿಗ್ಗೆ ಬನ್ಸಾಲಿ ಎಂಬುವರು ತಮ್ಮ ಪುತ್ರಿಯೊಡನೆ ನೈಕಿ ಮಂಡಿ ಪ್ರದೇಶದ ಇಂಡಿಯನ್ ಬ್ಯಾಂಕ್‍ಗೆ 2 ಲಕ್ಷ ರೂಪಾಯಿಯನ್ನು ಜಮಾ ಮಾಡಲು ಬಂದಿದ್ದಾರೆ. ಇವರು ಬ್ಯಾಂಕ್ ಹತ್ತಿರ ಬರುತ್ತಿದ್ದಂತೆ ಅಲ್ಲಿದ್ದ ಕೋತಿಗಳು ಇವರ ಮೇಲೆ ದಾಳಿ ಮಾಡಿ ಹಣದ ಬ್ಯಾಗ್ ಅನ್ನು ಕಿತ್ತುಕೊಂಡು ಅದರಲ್ಲಿದ್ದ ಸುಮಾರು 60 ಸಾವಿರ ಹಣವನ್ನು ಎಸೆದು ಉಳಿದ ಹಣದ ಸಮೇತ ಬ್ಯಾಗ್ ಅನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿವೆ.

    ಹಣ ಕಳೆದುಕೊಂಡ ಬನ್ಸಾಲಿಯವರು ಕೂಡಲೇ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸುಳಿವು ಸಿಕ್ಕಿಲ್ಲ ಹಾಗೂ ಯಾವ ಪ್ರಕರಣ ಅಡಿಯಲ್ಲಿ ದೂರು ದಾಖಲು ಮಾಡಬೇಕೆಂದು ತಿಳಿಯದೆ ಅವರನ್ನು ಕಳುಹಿಸಿದ್ದಾರೆ.

    ಬನ್ಸಾಲಿಯವರು ಉನ್ನತ ಪೊಲೀಸ್ ಅಧಿಕಾರಿಗಳ ಬಳಿ ಹೋಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡು, ಸ್ಥಳೀಯ ಪೊಲೀಸರು ಯಾವ ರೀತಿ ಪ್ರಕರಣ ದಾಖಲು ಮಾಡಿಕೊಳ್ಳಬೇಕೆಂದು ತಿಳಿಯದೆ ಗೊಂದಲಕ್ಕೆ ಬಿದ್ದಿದ್ದಾರೆ. ತಾವುಗಳು ಭಾರತೀಯ ದಂಡ ಸಂಹಿತೆಯ ಪ್ರಕಾರ ಸರಿಯಾದ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

    ಆಗ್ರಾ ನಗರ, ತಾಜ್‍ಮಹಲ್ ಸುತ್ತಮುತ್ತ ಮಂಗಗಳ ಹಾವಳಿ ದಿನೇದಿನೇ ಹೆಚ್ಚಾಗುತ್ತಿದ್ದು, ಪ್ರವಾಸಿಗರ ಮೇಲೆ ದಾಳಿ ಮಾಡಿ ಅವರ ಬಳಿ ಇರುವ ವಸ್ತುಗಳನ್ನು ಕಿತ್ತುಕೊಂಡು ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಈ ಕುರಿತಂತೆ ಪುರಾತತ್ವ ಇಲಾಖೆಯ ಭುವನ್ ವಿಕ್ರಮ್‍ರವರು ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಹೇಳಿದ್ದಾರೆ.

    ಈ ಕುರಿತಂತೆ ಆಗ್ರಾ ಮಹಾನಗರ ಪಾಲಿಕೆಯು ಈ ಬಗ್ಗೆ ಕ್ರಮ ಕೈಗೊಂಡು ಶೀಘ್ರವೇ ಮಂಗಗಳನ್ನು ಸ್ಥಳಾಂತರಿಸುವುದಾಗಿ ಹೇಳಿಕೆ ನೀಡಿದೆ.