Tag: Road Works

  • ಮೋದಿ ಮೈಸೂರಿಗೆ ಬಂದಾಗಲೂ 40 ಪರ್ಸೆಂಟ್ ಕಮಿಷನ್ ಬಗ್ಗೆ ಮಾತಾಡಿಲ್ಲ: ಡಿ.ಕೆ.ಸುರೇಶ್

    ಮೋದಿ ಮೈಸೂರಿಗೆ ಬಂದಾಗಲೂ 40 ಪರ್ಸೆಂಟ್ ಕಮಿಷನ್ ಬಗ್ಗೆ ಮಾತಾಡಿಲ್ಲ: ಡಿ.ಕೆ.ಸುರೇಶ್

    ಬೆಂಗಳೂರು: ಬಿಜೆಪಿ ರಾಜ್ಯ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ವ್ಯಾಪಕವಾಗಿ ಬೆಳೆಯುತ್ತಿದೆ. ಮೋದಿ ರಾಜ್ಯಕ್ಕೆ ಬಂದಾಗಲೂ 40 ಪರ್ಸೆಂಟ್ ಕಮಿಷನ್ ಬಗ್ಗೆ ಮಾತನಾಡಿಲ್ಲ. ಅದನ್ನು ಬಿಟ್ಟು ಸರ್ಕಾರಕ್ಕೆ ಸರ್ಟಿಫಿಕೇಟ್ ಕೊಡುವ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.

    ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ 40 ಪರ್ಸೆಂಟ್ ಕಮಿಷನ್ ಸರ್ಕಾರಕ್ಕೆ ರಸ್ತೆ ಕಳಪೆ ಕಾಮಗಾರಿಯೇ ತಾಜಾ ಉದಾಹರಣೆಯಾಗಿದೆ. ಆದರೂ ಮೋದಿ ಅವರು ಮೈಸೂರಿಗೆ ಬಂದಾಗ ಇದರ ಬಗ್ಗೆ ಮಾತನಾಡಿಲ್ಲ. ಸರ್ಕಾರಕ್ಕೆ ಸರ್ಟಿಫಿಕೇಟ್ ಕೊಡುವ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತು ಆಕ್ಸಿಜನ್ ಜನರೇಟರ್ಸ್ ಸ್ಥಾಪನೆ

    ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಕೆಂಪಣ್ಣ ಅವರ ಬಳಿ ದಾಖಲೆ ಕೇಳಲು ಗೃಹ ಇಲಾಖೆ ಬಿಟ್ಟಿದ್ದಾರೆ. ಗೃಹ ಇಲಾಖೆ ಪ್ರವೇಶ ಮಾಡಿದೆ ಅಂದ್ರೆ ಇದು ಬೆದರಿಕೆಯ ತಂತ್ರವೇ ಆಗಿದೆ. ಬಿಜೆಪಿ ಶಾಸಕರೇ ಪರ್ಸೆಂಟೇಜ್ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಸಚಿವರ ಮೇಲೂ ಆರೋಪ ಇದೆ. ಪೊಲೀಸ್, ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಒಳ ಹೊಕ್ಕಿ ನೋಡಿದ್ರೆ ಗೊತ್ತಾಗುತ್ತೆ. ಕೇಂದ್ರ ಸರ್ಕಾರ ಗೃಹ ಇಲಾಖೆ ಬದಲು ಇಡಿ, ಸಿಬಿಐ ಮೂಲಕ ತನಿಖೆ ಮಾಡಿಸಿದ್ದರೆ ಯಾರ್ಯಾರ ಬಣ್ಣ ಹೇಗೆ? ಅನ್ನೋದು ಬಯಲಾಗುತ್ತಿತ್ತು ಎಂದು ಕುಟುಕಿದ್ದಾರೆ.

    40% ಕಮಿಷನ್ ಆರೋಪದ ಬಗ್ಗೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಅಥವಾ ಹಾಲಿ ನ್ಯಾಯಧೀಶರ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಯುವತಿ ಸ್ನೇಹಿತೆಯಾದ ಮಾತ್ರಕ್ಕೆ ಲೈಂಗಿಕ ಸಂಬಂಧಕ್ಕೆ ಒಪ್ಪಿಗೆಯಿದೆ ಎಂದರ್ಥವಲ್ಲ – ಹೈಕೋರ್ಟ್

    ಇದೇ ವೇಳೆ ಬಿಬಿಎಂಪಿ ವಾರ್ಡ್ ವಿಂಗಡಣೆ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಅಮಿಬಾ ಮಾದರಿಯಲ್ಲಿ ಬಿಬಿಎಂಪಿ ವಾರ್ಡ್ ವಿಂಗಡಣೆ ಮಾಡಿದೆ. ತನಗೆ ಬೇಕಾದಂತೆ ವಾರ್ಡ್ ರಚನೆ ಮಾಡಿದೆ. ವಾರ್ಡ್ಗೆ ಚಾಣಕ್ಯ, ವೀರ ಮದಕರಿನಾಯಕರ ಹೆಸರಿಡುವ ಮೂಲಕ ಸ್ಥಳೀಯರ ಭಾವನೆ ಕೆರಳಿಸಿದ್ದಾರೆ. ಬಿಬಿಎಂಪಿ ಚುನಾವಣೆ ಮಾಡೋದಕ್ಕೂ ಸರ್ಕಾರಕ್ಕೆ ಆಸಕ್ತಿಯಿಲ್ಲ. ಆದ್ರೆ ನಮ್ಮ ಒತ್ತಾಯ ಚುನಾವಣೆ ಮಾಡಬೇಕು, ಸ್ಥಳೀಯ ನಾಯಕತ್ವ ಬೆಳೆಸಬೇಕು ಎಂದು ಆಗ್ರಹಿಸಿದ್ದಾರೆ.

    Live Tv

  • ಕಾಮಗಾರಿಗಳ ಗುಣಮಟ್ಟ ಕಾಪಾಡುವುದು ಗುತ್ತಿಗೆದಾರರ ಆದ್ಯ ಕರ್ತವ್ಯ: ಕೆ.ಗೋಪಾಲಯ್ಯ

    ಕಾಮಗಾರಿಗಳ ಗುಣಮಟ್ಟ ಕಾಪಾಡುವುದು ಗುತ್ತಿಗೆದಾರರ ಆದ್ಯ ಕರ್ತವ್ಯ: ಕೆ.ಗೋಪಾಲಯ್ಯ

    ಬೆಂಗಳೂರು: ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ 67 ರ ನಾಗಪುರದ ಸ್ವಾತಿ ಹೋಟೆಲ್ ಬಳಿ ಕೈ ಗೊಂಡಿರುವ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಸ್ಥಳೀಯ ಶಾಸಕರಾದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಇಂದು ವೀಕ್ಷಿಸಿದರು.

    ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಸರ್ಕಾರದ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಗುತ್ತಿಗೆದಾರರು, ಇಂಜಿನಿಯರ್ ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕೆಂದು ಸೂಚಿಸಿದರು. ಇದನ್ನೂ ಓದಿ: ಮಹಿಳೆಗೆ ಗುಂಡಿಕ್ಕಿ ಕೊಲೆ ಮಾಡಿದ್ದ ಬಿಜೆಪಿ ಪುರಸಭೆ ಸದಸ್ಯ ಅರೆಸ್ಟ್

    ಸ್ಥಳೀಯರು ಕೂಡ ತಮ್ಮ ಬಡಾವಣೆಗಳಲ್ಲಿ ನಡೆಯುತ್ತಿರುವ ಸಾರ್ವಜನಿಕ ಕಾಮಗಾರಿಗಳು ಎಷ್ಟರ ಮಟ್ಟಿಗೆ ಗುಣಮಟ್ಟದಿಂದ ಕೂಡಿರುತ್ತವೆ ಎನ್ನುವುದರ ಮೇಲೆ ನಿಗಾ ಇರಿಸಬೇಕು. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಗುತ್ತಿಗೆದಾರರು, ಇಂಜಿನಿಯರ್‌ಗಳು ಕಾಮಗಾರಿ ಮಾಡಿಕೊಂಡು ಹೋಗುತ್ತಾರೆ ಎಂದು ಕೈ ಕಟ್ಟಿಕೊಂಡು ನೋಡುತ್ತಾ ನಿಂತುಕೊಳ್ಳದೇ, ತಮ್ಮ ಬಡಾವಣೆಯ ಅಭಿವೃದ್ಧಿ ಕಾಮಗಾರಿ ತನ್ನ ಮನೆಯದ್ದೆ ಎಂಬ ಭಾವನೆ ಎಲ್ಲರಿಗೂ ಬಂದರೆ ಕಾಮಗಾರಿಗಳು ದೀರ್ಘ ಬಾಳಿಕೆ ಬರಲು ಸಾಧ್ಯವಾಗುತ್ತದೆ ಎಂದರು.

    ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್, ವೆಂಕಟೇಶ್ ಮೂರ್ತಿ ಮತ್ತು ಸ್ಥಳೀಯ ಮುಖಂಡರು, ಬಿಬಿಎಂಪಿ ಇಂಜಿನಿಯರ್‌ಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಜನರಿಗೆ ತೊಂದ್ರೆ ಕೊಡೋದ್ರಿಂದ ಸರ್ಕಾರಕ್ಕೆ ಲಾಭವೂ, ಇಲ್ಲ ನಷ್ಟವೂ ಇಲ್ಲ: ಸುಧಾಕರ್

  • ಯಶವಂತಪುರ RTO ಕಾಂಪ್ಲೆಕ್ಸ್ ಬಳಿ ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲಿಸಿದ ಸಚಿವ ಮುನಿರತ್ನ

    ಯಶವಂತಪುರ RTO ಕಾಂಪ್ಲೆಕ್ಸ್ ಬಳಿ ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲಿಸಿದ ಸಚಿವ ಮುನಿರತ್ನ

    ಬೆಂಗಳೂರು: ಯಶವಂತಪುರ ಆರ್ ಟಿಒ ಕಾಂಪ್ಲೆಕ್ಸ್ ಬಳಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ಇಂದು ಜಂಟಿ ತಪಾಸನೆ ನಡೆಸಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ರಸ್ತೆ ಅಗಲೀಕರಣ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಮುನಿರತ್ನ ತಿಳಿಸಿದರು.

    ನಗರದ ಯಶವಂತಪುರ ಆರ್ ಟಿಒ ಕಾಂಪ್ಲೆಕ್ಸ್ ಬಳಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ಇಂದು ನಡೆಸಿದ ಜಂಟಿ ತಪಾಸಣೆಯ ಬಳಿಕ ಮಾತನಾಡಿದ ಅವರು, ಈ ಭಾಗದಲ್ಲಿ ರಸ್ತೆ ಅಗಲೀಕರಣ ಮಾಡುವುದರಿಂದ ನಾಗರೀಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಇಲ್ಲಿ ರೈಲ್ವೆ ನಿಲ್ದಾಣ, ಮಾರುಕಟ್ಟೆ ಬರುವ ನಾಗರೀಕರಿಗೆ ಯಾವುದೇ ಸಮಸ್ಯೆ ಆಗದಂತೆ ಸುಗಮ ವಾಹನ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಜೊತೆಗೆ ನೂತನವಾಗಿ 400 ಹಾಸಿಗೆ ಸಾಮರ್ಥ್ಯದ ಕೋವಿಡ್ ಆಸ್ಪತ್ರೆಯನ್ನು ತೆರೆಯಲಾಗುತ್ತಿದ್ದು, ಶೀಘ್ರ ಆಸ್ಪತ್ರೆಯನ್ನು ಉದ್ಘಾಟಿಸಲಾಗುಗುವುದು ಎಂದು ತಿಳಿಸಿದರು.

    ಉನ್ನತ ಶಿಕ್ಷಣ ಸಚಿವರು ಡಾ. ಸಿ.ಎನ್.ಅಶ್ವತ್ಥನಾರಾಯಣ್ ಮಾತನಾಡಿ, ನಗರದಲ್ಲಿ ಯಶವಂತಪುರ ಪ್ರಸಿದ್ಧವಾದ ಸ್ಥಳವಾಗಿದ್ದು, ಈ ಭಾಗದ ನಾಗರೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಿಂದ ವಾಹನಗಳ ಚಾಲನೆಗೆ, ರೈಲ್ವೆ ನಿಲ್ದಾಣಕ್ಕೆ ತೆರವಳುವವರಿಗೆ ಯಾವುದೇ ಸಮಸ್ಯೆ ಆಗದಂತೆ ರಸ್ತೆ ಉತ್ತಮವಾಗಿರಲು ಕ್ರಮವಹಿಸಲಾಗುತ್ತಿದ್ದು, ಅದಕ್ಕೆ ನೀಲನಕ್ಷೆಯನ್ನು ಸಿದ್ದಪಡಿಸಿ ಅದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.

    ಮುಖ್ಯ ಆಯುಕ್ತ ಗೌರವ್ ಗುಪ್ತ ರವರು ಮಾತನಾಡಿ, ಯಶವಂತಪುರ ಆರ್ ಟಿಒ ಕಾಂಪ್ಲೆಕ್ಸ್ ಬಳಿ ಎಲ್ಲರಿಗೂ ಅನುಕೂಲ ಮಾಡಿಕೊಡಲು ಕೆಲವು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಯೋಜನೆ ಅನುಷ್ಟಾನಗೊಳಿಸುವ ಸಂಬಂಧ ಅಧಿಕಾರಿಗಳಿಗೆ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿ ಅಂದಾಜು ವೆಚ್ಚದ ಪಟ್ಟಿಯನ್ನು ಸಿದ್ದಪಡಿಸಲು ತಿಳಿಸಲಾಗಿದ್ದು, ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಕ್ಷಿಪ್ರಗತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು. ಇದನ್ನೂ ಓದಿ: ಉಡುಪಿಯ ವಾರಾಂತ್ಯ ಕರ್ಫ್ಯೂ ಬಗ್ಗೆ ಸಿಎಂ ಪುನರ್ ಪರಿಶೀಲಿಸಲಿ- ಸಚಿವ ಕೋಟ

    ತಪಾಸಣೆಯ ವೇಳೆ ವಿಶೇಷ ಆಯುಕ್ತರುಗಳಾದ ಬಸವರಾಜು, ರೆಡ್ಡಿ ಶಂಕರ ಬಾಬು, ಮನೋಜ್ ಜೈನ್, ವಲಯ ಜಂಟಿ ಆಯುಕ್ತರುಗಳಾದ ನಾಗರಾಜ್, ಶಿವಸ್ವಾಮಿ, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಪ್ರಭಾಕರ್, ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ವಿದ್ಯಾರ್ಥಿಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ

  • ಯಾದಗಿರಿ ಮೆಡಿಕಲ್ ಕಾಲೇಜು ರಸ್ತೆ ನಿರ್ಮಾಣದಲ್ಲಿ ಪ್ರಭಾವಿಗಳ ಹಿಂಬದಿಯಾಟ – ಭೂಮಿ ಕೊಟ್ಟವರ ಕಣ್ಣೀರು

    ಯಾದಗಿರಿ ಮೆಡಿಕಲ್ ಕಾಲೇಜು ರಸ್ತೆ ನಿರ್ಮಾಣದಲ್ಲಿ ಪ್ರಭಾವಿಗಳ ಹಿಂಬದಿಯಾಟ – ಭೂಮಿ ಕೊಟ್ಟವರ ಕಣ್ಣೀರು

    ಯಾದಗಿರಿ: 2018ರಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವ ದೃಷ್ಟಿಕೋನ ಇಟ್ಟುಕೊಂಡು ನಗರದ ಹೊರವಲಯದ ಮುದ್ನಾಳ್ ತಾಂಡಾದ ಬಳಿ 300 ಹಾಸಿಗೆಯ ಸಾಮರ್ಥ್ಯದ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ನಿರೀಕ್ಷೆಯಂತೆ ಕಳೆದ ವರ್ಷ ಕೇಂದ್ರ ಸರ್ಕಾರ ಮೆಡಿಕಲ್ ಕಾಲೇಜು ಸಹ ಮಂಜೂರು ಮಾಡಿದೆ. ವಿಪರ್ಯಾಸ ಎಂದರೆ ಕಟ್ಟಡ ಕಾಮಗಾರಿ ಪೂರ್ಣವಾಗಿದ್ದರೂ ರಸ್ತೆಗೆ ಜಾಗ ಕೊಟ್ಟವರಿಗೆ ಸಂಕಷ್ಟ ಮಾತ್ರ ತಪ್ಪಿಲ್ಲ.

    ಆಸ್ಪತ್ರೆಗೆ 2017ರಲ್ಲಿ ನಿಗದಿಯಾಗಿದ್ದ ಜಾಗ ಬಿಟ್ಟು, ಈಗ ಬೆರೆಡೆ ಮಾರ್ಗ ಬದಲಿಸಿದ ಜಿಲ್ಲಾಡಳಿತ ಜಮೀನು ಮಾಲೀಕರ ಅನುಮತಿ ಇಲ್ಲದೆ, ರಸ್ತೆ ನಿರ್ಮಾಣ ಮಾಡುತ್ತಿದೆ. ಚಿತ್ತಾಪುರ ಮುಖ್ಯ ರಸ್ತೆಯಿಂದ ಸುಮಾರು 7 ಎಕ್ರೆ ಉದ್ದ ಮತ್ತು 100 ಅಡಿ ಅಗಲವಾದ ರಸ್ತೆ ನಿರ್ಮಿಸಲು 2017ರಲ್ಲಿ ಆಸ್ಪತ್ರೆ ಬ್ಲೂ ಪ್ರಿಂಟ್ ತಯಾರಿಸಲಾಗಿತ್ತು. ಅದರಂತೆ ಸುಮಾರು 21 ರೈತರ ಜಮೀನಲ್ಲಿ ಈ ರಸ್ತೆ ಹಾದು ಹೋಗುತ್ತದೆ. ಇದಕ್ಕೆ ಈಗಾಗಲೇ ರೈತರು ಸಹ ಸಮ್ಮತಿ ನೀಡಿ ಕೆಲವೊಬ್ಬರು ಪರಿಹಾರ ಸಹ ಪಡೆದಿದ್ದರು. ಇನ್ನೂ ಕೆಲವರು ಭೂಮಿ ಕೊಡುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂತಹ ಹೊತ್ತಿನಲ್ಲಿ ಜಿಲ್ಲಾಡಳಿತ ತನ್ನ ವರಸೆ ಬದಲಾಯಿಸಿದ್ದು, ಮೊದಲು ನಿಗದಿ ಮಾಡಿದ ಸ್ಥಳವನ್ನು ಬಿಟ್ಟು ಬೆರೆ ಕಡೆ ರಸ್ತೆ ನಿರ್ಮಾಣ ಮಾಡುತ್ತಿದೆ.

    ಅಲ್ಲದೇ ಇದಕ್ಕೆ ರೈತರಿಂದ ಯಾವುದೇ ಅನುಮತಿ ಕೂಡ ಜಿಲ್ಲಾಡಳಿತ ಪಡೆದಿಲ್ಲ. ಹೀಗಾಗಿ ಕೆಲ ರೈತರ ಅರ್ಧ ಜಮೀನು ಈ ರಸ್ತೆಯ ಪಾಲಾಗುತ್ತಿದೆ. ಇದು ಭೂಮಿ ಮಾಲೀಕರ ನೋವಿಗೆ ಕಾರಣವಾಗಿದೆ. ರುಕ್ಮಿಣಿ ಬಾಯಿ ಮತ್ತು ತಾರಾಬಾಯಿ ಚವ್ಹಾಣ ಅವರಿಗೆ ಸೇರಿದ ಜಾಗ ಸರ್ವೆ ನಂಬರ್ 2/2ರಲ್ಲಿ ಈ ಹಿಂದೆ ಗುರುತಿಸಿದ್ದಕ್ಕಿಂತ ಹೆಚ್ಚಿಗೆ ಜಾಗವನ್ನು ರಸ್ತೆ ಕಾಮಗಾರಿಗೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇದರ ಪರಿಣಾಮ ಈ ಮಹಿಳೆಯರ ಬಳಿ ಇರುವ ಹೊಲದಲ್ಲಿ ಶೇ. 95ರಷ್ಟು ಜಾಗ ರಸ್ತೆಗೆ ಹೋಗುತ್ತದೆ. ಇದರಿಂದ ಈ ಕುಟುಂಬಕ್ಕೆ ತಾವು ಬೀದಿಗೆ ಬೀಳುವ ಆತಂಕ ಎದುರಾಗಿದೆ.

    2017ರಲ್ಲಿ ಸಿದ್ಧವಾಗಿದ್ದ ರಸ್ತೆ ಕಾಮಾಗರಿ ನಕ್ಷೆಯಲ್ಲಿ ಸರ್ವೆ ನಂಬರ್ 2/2ರ 2 ಗುಂಟೆ ಜಾಗವನ್ನ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೆ ಪರಿಷ್ಕೃತ ರಸ್ತೆ ನಕ್ಷೆಯಲ್ಲಿ 14 ಗುಂಟೆ ಜಾಗವನ್ನ ಸ್ವಾಧೀನ ಪಡಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಹೆಚ್ಚುವರಿ ಜಾಗ ಪಡೆದುಕೊಳ್ತಿರುವ ಬಗ್ಗೆ ಮಾಲೀಕರಿಗೆ ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡಿಲ್ಲ. ಇತ್ತ ಕಂದಾಯ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ಸರ್ವೆ ಮಾಡಿ, ಯಾವುದೇ ಮುನ್ಸೂಚನೆ ನೀಡದೆ ಜಾಗದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ.

    ಇದರ ಹಿಂದೆ ಕೆಲ ಕಾಣದ ಕೈಗಳಿದ್ದು, ಪ್ರಭಾವಿಯೊಬ್ಬರ ಜಮೀನು ಉಳಿಸಲು ಕೆಲ ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ಆಸ್ಪತ್ರೆ ಮತ್ತು ಕಾಲೇಜು ನಿರ್ಮಾಣವಾಗುತ್ತಿರುವ ಹಿನ್ನೆಲೆ ಈ ಭೂಮಿಗೆ ಈಗ ಬಂಗಾರದ ಬೆಲೆ ಬಂದಿದ್ದು, ಇದರ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾದ ಕೈವಾಡಯಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

  • ತುಮಕೂರು ರಿಂಗ್ ರೋಡ್ ನಿರ್ಮಾಣಕ್ಕೆ ಪರಮೇಶ್ವರ್ ಒಡೆತನದ ಕಾಲೇಜು ಅಡ್ಡಿ

    ತುಮಕೂರು ರಿಂಗ್ ರೋಡ್ ನಿರ್ಮಾಣಕ್ಕೆ ಪರಮೇಶ್ವರ್ ಒಡೆತನದ ಕಾಲೇಜು ಅಡ್ಡಿ

    – ಸಿದ್ದಾರ್ಥ ತಾಂತ್ರಿಕ ಕಾಲೇಜು ಜಾಗ ಬಿಡದಿದ್ದಕ್ಕೆ ಕಾಮಗಾರಿ ವಿಳಂಬ
    – 8 ತಿಂಗಳಿಂದ ನೆನೆಗುದಿಗೆ ಬಿದ್ದ ರಸ್ತೆ ಕಾಮಗಾರಿ

    ತುಮಕೂರು: ನಗರದ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಒಡೆತನದ ಸಿದ್ದಾರ್ಥ ತಾಂತ್ರಿಕ ಕಾಲೇಜು ಅಡ್ಡಿಯಾಗಿದೆ.

    ಕ್ಯಾತಸಂದ್ರದಿಂದ ಗುಬ್ಬಿ ಗೇಟ್‍ವರೆಗ ಚತುಷ್ಪಥ ರಿಂಗರೋಡ್ ನಿರ್ಮಾಣವಾಗುತ್ತಿದೆ. ಈಗಾಗಲೇ ರಸ್ತೆ ಕಾಮಗಾರಿ ಶೇಕಡ 70ರಷ್ಟು ಪೂರ್ಣಗೊಂಡಿದೆ. ಕಳೆದ 8 ತಿಂಗಳಿಂದ ಇನ್ನುಳಿದ ಶೇಕಡ 30ರಷ್ಟು ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಕಾಮಗಾರಿ ವಿಳಂಬವಾಗೋದಕ್ಕೆ ಪ್ರಮುಖ ಕಾರಣ ಸಿದ್ದಾರ್ಥ ತಾಂತ್ರಿಕ ಕಾಲೇಜು ಎನ್ನಲಾಗಿದೆ. ರಸ್ತೆ ಅಗಲೀಕರಣಕ್ಕೆ ಈ ಕಾಲೇಜಿನ ಸುಮಾರು 30 ಮೀಟರ್ ಜಾಗ ಬಿಟ್ಟುಕೊಡಬೇಕು. ಆದರೆ ಕಾಲೇಜು ಆಡಳಿತ ಮಂಡಳಿ ಇಲ್ಲಿತನಕ ಜಾಗ ಬಿಟ್ಟುಕೊಟ್ಟಿಲ್ಲ. ಆದ್ದರಿಂದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ.

    ಮರಳೂರಿನಲ್ಲಿರುವ ಸಿದಾರ್ಥ ಕಾಲೇಜಿನ ಹಿಂಭಾಗದ 30 ಮೀಟರ್ ಜಾಗ ರಸ್ತೆ ಕಾಮಗಾರಿಗೆ ಬಿಟ್ಟುಕೊಡಬೇಕು. ಕಾಲೇಜು ಸುತ್ತ ಬೃಹತ್ ಕಾಂಪೌಂಡ್ ಇದ್ದು ಇದನ್ನು ತೆರವುಗೊಳಿಸಿ ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕಿತ್ತು. ಜಾಗ ಬಿಟ್ಟುಕೊಡುವಂತೆ ಹಲವಾರು ಬಾರಿ ಕಾಲೇಜು ಆಡಳಿತ ಮಂಡಳಿಗೆ ನೋಟಿಸ್ ಕೂಡ ನೀಡಲಾಗಿದೆ. ಆದರೆ ಆಡಳಿತ ಮಂಡಳಿ ಮಾತ್ರ ಜಾಗ ಬಿಟ್ಟುಕೊಡುವ ಒಲವು ತೋರಿಲ್ಲ. ಆದ್ದರಿಂದ ಕಾಮಗಾರಿ ವಿಳಂಬವಾಗಿದೆ.

    ಈ ನಡುವೆ ಪಾಲಿಕೆ ಆಯುಕ್ತ ಭೂಬಾಲನ್ ಅವರು ಸ್ವತಃ ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿ ವಸ್ತುಸ್ಥಿತಿ ವಿವರಿಸಿದ್ದಾರೆ. ಜಾಗ ಬಿಟ್ಟುಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪರಮೇಶ್ವರ್ ಕೂಡ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೂ ಇಲ್ಲಿತನ ತೆರವು ಕಾರ್ಯ ನಡೆದಿಲ್ಲ.

    2019 ಡಿಸೆಂಬರ್ ನಲ್ಲಿ ರಿಂಗ್ ರೋಡ್ ಕಾಮಗಾರಿ ಪೂರ್ಣವಾಗಬೇಕಿತ್ತು. ಸಿದ್ದಾರ್ಥ ಮೆಡಿಕಲ್ ಕಾಲೇಜು, ಶೆಟ್ಟಿಹಳ್ಳಿ ಬಳಿಯ ಕೆಲ ತೊಂದರೆಯಿಂದ ಹೊರವರ್ತುಲ ರಸ್ತೆ ಕಾಮಗಾರಿ ವಿಳಂಬವಾಗಿದೆ. ಪರಿಣಾಮ ಸಾರ್ವಜನಿಕರು ಧೂಳು, ಅಪಘಾತದಿಂದ ಕಿರಿಕಿರಿ ಅಭವಿಸುತಿದ್ದಾರೆ. ಬಡ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಆತುರ ತೋರುವ ಅಧಿಕಾರಿಗಳು ಪ್ರಭಾವಿಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

  • ರಸ್ತೆ ಕಾಮಗಾರಿ ಹಣ ನುಂಗಲು ಗ್ರಾಮವನ್ನೇ ಸೃಷ್ಟಿಸಿದ ಅಧಿಕಾರಿಗಳು

    ರಸ್ತೆ ಕಾಮಗಾರಿ ಹಣ ನುಂಗಲು ಗ್ರಾಮವನ್ನೇ ಸೃಷ್ಟಿಸಿದ ಅಧಿಕಾರಿಗಳು

    ರಾಯಚೂರು: ರಸ್ತೆಗಳೇ ಇಲ್ಲದ ಗ್ರಾಮಗಳನ್ನ ನೀವು ನೋಡಿರಬಹುದು. ಆದರೆ ಗ್ರಾಮವೇ ಇಲ್ಲದ ಜಾಗಕ್ಕೆ ರಸ್ತೆ ನಿರ್ಮಿಸಿರುವುದನ್ನ ನೋಡಿರಲಿಕ್ಕಿಲ್ಲ. ಆದರೆ ರಾಯಚೂರಿನಲ್ಲಿ ಅಧಿಕಾರಿಗಳು ಇಂತಹ ಎಡವಟ್ಟು ಕೆಲಸವನ್ನ ಮಾಡಿದ್ದಾರೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ರಸ್ತೆ ಕಾಮಗಾರಿ ಮಾಡಿ ಕೋಟ್ಯಂತರ ರೂಪಾಯಿ ಸರ್ಕಾರಿ ಅನುದಾನವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ.

    ತಾಲೂಕಿನ ಪೂರತಿಪ್ಲಿ ಗ್ರಾಮದಿಂದ 2.3 ಕಿಲೋ ಮೀಟರ್‍ವರೆಗೆ ರಸ್ತೆ ಕಾಮಗಾರಿಯನ್ನೇನೋ ಮಾಡಲಾಗಿದೆ. ಆದರೆ ಅಲ್ಲಿ ಯಾವ ಕ್ಯಾಂಪ್ ಕೂಡ ಇಲ್ಲ. ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆಗಳು ವಿಶೇಷ ಅಭಿವೃದ್ಧಿ ಯೋಜನೆಯಡಿ 1 ಕೋಟಿ 61 ಲಕ್ಷ ಅನುದಾನದಲ್ಲಿ ಪೂರತಿಪ್ಲಿಯಿಂದ ಪೂರತಿಪ್ಲಿ ಕ್ಯಾಂಪ್‍ವರೆಗೆ 2.3 ಕೀ.ಮೀ ರಸ್ತೆ ನಿರ್ಮಿಸಿರುವುದಾಗಿ ಹೇಳಿಕೊಂಡಿವೆ. ಆದರೆ ರಾಯಚೂರು ತಹಶೀಲ್ದಾರ್ ಕಂದಾಯ ಇಲಾಖೆ ದಾಖಲೆಗಳಲ್ಲಿ ಪೂರತಿಪ್ಲಿ ಕ್ಯಾಂಪ್ ಹೆಸರಿನ ಗ್ರಾಮವೇಯಿಲ್ಲ ಅಂತ ವರದಿ ನೀಡಿದ್ದಾರೆ.

    ಹಾಗಾದರೆ ರಸ್ತೆ ನಿರ್ಮಾಣದ ಹಿಂದಿನ ಉದ್ದೇಶವೇನು ಅನ್ನೊದು ಗ್ರಾಮಸ್ಥರ ಪ್ರಶ್ನೆಯಾಗಿದೆ. ರಸ್ತೆಯೂ ಕಳಪೆಯಾಗಿರುವುದರಿಂದ ಗುತ್ತೆದಾರನ ಜೊತೆ ಅಧಿಕಾರಿಗಳು ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಇದರಲ್ಲಿ ಶಾಮೀಲಾಗಿದ್ದಾರೆ ಅಂತ ಗ್ರಾಮಸ್ಥರು ಹಾಗೂ ಹೋರಾಟಗಾರರು ಆರೋಪಿಸಿದ್ದಾರೆ.

    ಪೂರತಿಪ್ಲಿ ಕ್ಯಾಂಪ್ 2.8 ಕಿ.ಮೀ ಅನ್ನೊ ಮೈಲುಗಲ್ಲು, ಪೂರತಿಪ್ಲಿ ರಾಯಚೂರು ಪೂರತಿಪ್ಲಿ ಕ್ಯಾಂಪ್ ಅಂತ ಬರೆದಿರುವ ಮಾರ್ಗಸೂಚಿ ಫಲಕ, ರಸ್ತೆ ಕಾಮಗಾರಿಯ ಬೋರ್ಡ್ ಗಳು ಅಲ್ಲಲ್ಲಿ ಹಾಕಲಾಗಿದೆ. ಇವುಗಳನ್ನ ನೋಡಿದರೆ ಯಾರಿಗಾದರೂ ಇಲ್ಲೆಲ್ಲೋ ಪೂರತಿಪ್ಲಿ ಕ್ಯಾಂಪ್ ಹೆಸರಿನ ಗ್ರಾಮವಿದೆ ಎಂದು ಅನಿಸುತ್ತೆ. ಆದರೆ ಜಮೀನುಗಳಿಗೆ ಹೋಗಲು ಇದ್ದ ಪುಟ್ಟ ರಸ್ತೆಯನ್ನೇ ನಿವೇಶನಗಳು ಇಲ್ಲದ, ಜನವಸತಿಯಿಲ್ಲದ, ದಾಖಲೆಯಲ್ಲೂ ಇಲ್ಲದ ಪೂರತಿಪ್ಲಿ ಕ್ಯಾಂಪ್‍ವರೆಗೆ ರಸ್ತೆ ನಿರ್ಮಿಸಲಾಗಿದೆ. ದಾರಿಯಲ್ಲಿನ ಬಸವಣ್ಣನ ದೇವಾಲಯದವರೆಗೆ ರಸ್ತೆಯನ್ನ ಮಾಡಲಾಗಿದೆ. ಕೇವಲ ಮೂರು ತಿಂಗಳು ಅವಧಿಯಲ್ಲಿ ಸಂಪೂರ್ಣ ಕಾಮಗಾರಿ ಮುಗಿಸಿ ಗುತ್ತಿಗೆದಾರ ಸೈಯದ್ ಅಕ್ಬರ್ ಪಾಷಾ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದಾರೆ.

    ಕಾಮಗಾರಿ ಬಗ್ಗೆ ನೀಡಿದ ದೂರನ್ನ ಪರಿಶೀಲಿಸಿ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ರಸ್ತೆಯಿಂದ ಜಮೀನಿಗೆ ಹೋಗುವ ರೈತರಿಗೆ ಅನುಕೂಲವಾಗಿದೆ ಅಂತ ವರದಿ ನೀಡಿ ಅಕ್ರಮವನ್ನ ಮುಚ್ಚಿಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಬಸನಗೌಡ ದದ್ದಲ ಅನುದಾನ ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದಲೇ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಈ ಕಾಮಗಾರಿ ಮಾಡಿಸಿದ್ದಾರೆ ಎಂದು ರೈತ ಕೂಲಿ ಸಂಗ್ರಾಮ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ್ ಗಾರಲದಿನ್ನಿ ಆರೋಪಿಸಿದ್ದಾರೆ.

    ಜಿಲ್ಲೆಯಲ್ಲಿ ರಸ್ತೆಗಳೇ ಇಲ್ಲದ ಗ್ರಾಮಗಳು ಸಾಕಷ್ಟಿದ್ದರೂ ಗ್ರಾಮವೇ ಇಲ್ಲದ ಪ್ರದೇಶಕ್ಕೆ ರಸ್ತೆ ನಿರ್ಮಿಸಿರುವುದು ವಿಚಿತ್ರವಾಗಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ತನಿಖೆ ನಡೆಸಿ ಕ್ರಮಕ್ಕೆ ಮುಂದಾಗಬೇಕಿದೆ.

  • ರಸ್ತೆ ಮಧ್ಯೆ ಲೈಟ್ ಕಂಬ – ಕಾಮಗಾರಿ ಕೈಬಿಟ್ಟ ಗುತ್ತಿಗೆದಾರ

    ರಸ್ತೆ ಮಧ್ಯೆ ಲೈಟ್ ಕಂಬ – ಕಾಮಗಾರಿ ಕೈಬಿಟ್ಟ ಗುತ್ತಿಗೆದಾರ

    ಮಡಿಕೇರಿ: ಗ್ರಾಮ ಪಂಚಾಯತಿ ರಸ್ತೆ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ರಸ್ತೆ ಕಾಮಗಾರಿ ನಡೆಸುವ ಸಂದರ್ಭ ಗ್ರಾಮದಲ್ಲಿ ವಿದ್ಯುತ್ ಕಂಬವೊಂದು ರಸ್ತೆ ಮಧ್ಯ ಇರುವುದರಿಂದ ಗುತ್ತಿಗೆದಾರ ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದ ಘಟನೆ ಕೊಡಗಿನಲ್ಲಿ ನಡೆದಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೊಂದಿಬಸವನ ಹಳ್ಳಿಯಲ್ಲಿ ರಸ್ತೆ ಕಾಮಗಾರಿ ಮಾಡುವ ಸಂದರ್ಭ ಗ್ರಾಮಸ್ಥರು ವಿದ್ಯುತ್ ಕಂಬ ತೆಗೆದು ಕೆಲಸ ಮಾಡುವಂತೆ ಗುತ್ತಿಗೆದಾರಿಗೆ ತಿಳಿಸಿದ್ದಾರೆ. ಅದರೆ ವಿದ್ಯುತ್ ಇಲಾಖೆಗೆ ಸರಿಯಾದ ಮಾಹಿತಿ ನೀಡದೇ ಕಾಮಗಾರಿ ಮಾಡಿಕೊಂಡು ರಸ್ತೆಗೆ ಅಡ್ಡಲಾದ ಕರೆಂಟ್ ಕಂಬದ ವರೆಗೆ ಕೆಲಸ ಮಾಡಿ ಅರ್ಧಕ್ಕೆ ಕೈ ಬಿಟ್ಟಿದ್ದಾರೆ.

    ಇದರಿಂದ ಅಕ್ರೋಶಗೊಂಡ ಗ್ರಾಮಸ್ಥರು ವಿದ್ಯುತ್ ಕಂಬ ತೆರವು ಮಾಡಿ ರಸ್ತೆ ಕಾಮಗಾರಿಗೆ ಅನುವು ಮಾಡಿಕೊಂಡುವಂತೆ ವಿದ್ಯುತ್ ಇಲಾಖೆಗೆ ಮಾನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ವಿದ್ಯುತ್ ಇಲಾಖೆಯ ಅಧಿಕಾರಿಗಳು ವಿದ್ಯುತ್ ಕಂಬವನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿದ್ದು ರಸ್ತೆ ಕಾಮಗಾರಿ ಕೆಲಸ ಅರಂಭವಾಗಿದೆ.

  • ಪ್ರತಿಭಟನೆಗೆ ಬಂದವರೇ ರಸ್ತೆ ಸರಿಮಾಡಿದ್ರು

    ಪ್ರತಿಭಟನೆಗೆ ಬಂದವರೇ ರಸ್ತೆ ಸರಿಮಾಡಿದ್ರು

    ಕಾರವಾರ: ಮಳೆಯಿಂದ ಹೊಂಡ, ಗುಂಡಿಗಳಾದ ರಸ್ತೆ ಸರಿಪಡಿಸಿ ಎಂದು ಪ್ರತಿಭಟನೆಗೆ ಬಂದ ಗ್ರಾಮಸ್ಥರೇ ತಮ್ಮೂರಿನ ರಸ್ತೆ ಸರಿಪಡಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಉದ್ಯಮ ನಗರದಲ್ಲಿ ನಡೆದಿದೆ.

    ಅಧಿಕ ಮಳೆಯಿಂದ ಉದ್ಯಮ ನಗರದ ಯಲ್ಲಾಪುರ ತಟಗಾರ ರಸ್ತೆ ಗುಂಡಿಗಳು ಬಿದ್ದು ಸಂಪೂರ್ಣ ಹಾನಿಯಾಗಿತ್ತು. ಆದ್ದರಿಂದ ಇದರ ದುರಸ್ತಿಗೆ ಲೋಕೋಪಯೋಗಿ ಇಲಾಖೆಯಿಂದ ಹಣ ಕೂಡ ಮಂಜೂರಾಗಿತ್ತು. ಆದರೇ ಮಳೆ ನೆಪ ಹೇಳಿ ಅಧಿಕಾರಿಗಳು ರಸ್ತೆ ಸರಿಪಡಿಸಿರಲಿಲ್ಲ. ಹೀಗಾಗಿ ಈ ಊರಿನ ಜನ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಹ ನೀಡಿದ್ದರು. ಗ್ರಾಮಸ್ಥರ ಮನವಿಗೆ ಅಧಿಕಾರಿಗಳು ಮಾತ್ರ ಸ್ಪಂದಿಸಿರಲಿಲ್ಲ. ಇದನ್ನೂ ಓದಿ:ರಿಪೇರಿ ಮಾಡಿಸದ ರಸ್ತೆಯಲ್ಲಿ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ

    ಈ ಹಿನ್ನೆಲೆಯಲ್ಲಿ ಕೋಪಗೊಂಡ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಆದರೂ ಕೂಡ ಗ್ರಾಮಸ್ಥರಿಗೆ ಅಧಿಕಾರಿಗಳು ಸ್ಪಂದಿಸಲೇ ಇಲ್ಲ. ಅಧಿಕಾರಿಗಳು ಇಂದು ರಸ್ತೆ ರಿಪೇರಿ ಮಾಡಿಸುತ್ತಾರೆ. ನಾಳೆ ರಿಪೇರಿ ಮಾಡಿಸುತ್ತಾರೆ ಎಂದು ಕಾಯುತ್ತಿದ್ದ ಜನರು ಬೇಸತ್ತು, ಕೊನೆಗೆ ತಾವೇ ರಸ್ತೆ ಸರಿಪಡಿಸಿದ್ದಾರೆ.

    ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ಇದ್ದು ಪ್ರಯೋಜನವಿಲ್ಲ ಎಂದು ಅರಿತು ಜನರೇ ತಮ್ಮೂರಿನ ರಸ್ತೆಗಳನ್ನು ಸರಿಪಡಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ರಸ್ತೆ ದುರಸ್ಥಿ ಕಾರ್ಯಕ್ಕೆ ಸರ್ಕಾರ ಹಣ ನೀಡಿದ್ದರೂ ಅಧಿಕಾರಿಗಳು ಮಾತ್ರ ಕಾಮಗಾರಿ ಮಾಡಿಲ್ಲ. ಜನರ ಸಮಸ್ಯೆಗೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ತಮಿಳುನಾಡು ಕರ್ನಾಟಕ ಜಲವಿವಾದ ತಡೆಗೆ ನಿತಿನ್ ಗಡ್ಕರಿ ಪ್ಲಾನ್

    ತಮಿಳುನಾಡು ಕರ್ನಾಟಕ ಜಲವಿವಾದ ತಡೆಗೆ ನಿತಿನ್ ಗಡ್ಕರಿ ಪ್ಲಾನ್

    ಹಾಸನ: ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಜಲವಿವಾದ ಮುಗಿಸೋಕೆ ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ. ಇದರ ಮುನ್ಸೂಚನೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ್ದಾರೆ.

    ನಗರದ ಎಸ್‍ಆರ್ ಟಿಸಿ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಸಚಿವರು, ಗೋದಾವರಿಯ 11,000 ಟಿಎಂಸಿ ನೀರು ಸಮುದ್ರ ಸೇರುತ್ತಿದೆ. ಆದರೆ ದುರದೃಷ್ಟದ ಸಂಗತಿ ಎಂದರೆ ಕರ್ನಾಟಕ ಹಾಗೂ ತಮಿಳುನಾಡು ಕೇವಲ 60 ರಿಂದ 70 ಟಿಎಂಸಿ ನೀರಿಗಾಗಿ ಪ್ರತಿ ವರ್ಷವೂ ಹೋರಾಟ ಮಾಡುತ್ತಿವೆ. ಪೋಲಾವರಂ ಬಳಿ ಡ್ಯಾಂ ಕಟ್ಟಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ. ಈ ಬಗ್ಗೆ ಡಿಪಿಆರ್ ತಯಾರಿಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದರು.

    ಸಚಿವರ ಪ್ಲಾನ್ ಏನು?:
    ಗೋದಾವರಿ 11,000 ಟಿಎಂಸಿ ನೀರು ಸಮುದ್ರ ಸೇರುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಆಂಧ್ರ ಪ್ರದೇಶದ ಪೋಲಾವರಂನಲ್ಲಿ ಡ್ಯಾಂ ನಿರ್ಮಾಣ ಮಾಡಿ, ಹಿನ್ನೀರನ್ನು ಕೃಷ್ಣಾಗೆ ಹರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಡ್ಯಾಂ ನಿರ್ಮಾಣಕ್ಕೆ 60 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಕೇಂದ್ರ ಸರ್ಕಾರವು ಹಣ ನೀಡಲು ಒಪ್ಪಿಗೆ ಸೂಚಿಸಿದೆ ಎಂದರು.

    ಕೃಷ್ಣಾಗೆ ಹರಿಬಿಟ್ಟ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೆನ್ನಾ ನದಿಗೆ ಸೇರಿಸಲಾಗುತ್ತದೆ. ಪೆನ್ನಾ ನದಿಯಿಂದ ಕಾವೇರಿಗೆ ನೀರನ್ನು ಹರಿಬಿಡಲಾಗುತ್ತದೆ. ಮಹತ್ವದ ಯೋಜನೆಯಿಂದಾಗಿ ಕರ್ನಾಟಕ ಹಾಗೂ ತಮಿಳುನಾಡಿಗೆ 450 ಟಿಎಂಸಿ ನೀರು ಸಿಗಲಿದ್ದು, ಜಲ ವಿವಾದಕ್ಕೆ ತೆರೆ ಬೀಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವರು, ಈ ಯೋಜನೆ ಜಾರಿ ತಮಗೂ ಕೂಡ ಖುಷಿಯ ವಿಚಾರವಾಗಿದೆ. ನಾನು ರೈತರ ಪರವಾಗಿ ಕೆಲಸ ಮಾಡುತ್ತಿರುವೆ ಎಂದರು.

    ಯಾವ ರಸ್ತೆಗಳಿಗೆ ಶಂಕು ಸ್ಥಾಪನೆ?:
    ಬಾಣಾವರ-ಹುಳಿಯಾರ್ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 234ರ ದ್ವಿಪಥ ಮತ್ತು ಪೇವ್ಡ್ ಶೋಲ್ಡರ್ ಅಗಲೀಕರಣ ಕಾಮಗಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ನೆರವೇರಿಸಿದರು. ಈ ರಸ್ತೆಯು 48.2 ಕಿ.ಮೀ. ಉದ್ದವಿದ್ದು ಕಾಮಗಾರಿಗೆ 191.6 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದೇ ವೇಳೆ ಬೇಲೂರು-ಬಿಳಿಕೆರೆ ರಾಷ್ಟ್ರೀಯ ಹೆದ್ದಾರಿ 373ರ ದ್ವಿಪಥ ಮತ್ತು ಪೇವ್ಡ್ ಶೋಲ್ಡರ್ ಅಗಲೀಕರಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು. ಈ ರಸ್ತೆಯು ಒಟ್ಟು 128.35 ಕಿ.ಮೀ. ಉದ್ದವಿದ್ದು, ಕಾಮಗಾರಿಗೆ 849.39 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

    ಚನ್ನರಾಯಪಟ್ಟಣ ಹಾಗೂ ಹಾಸನ ಬೈಪಾಸ್‍ಗಳಲ್ಲಿ ದ್ವಿಪಥದಿಂದ ಚತುಷ್ಪಥಕ್ಕೆ ಉನ್ನತೀಕರಣ ಯೋಜನೆಗೆ ಶಂಕು ಸ್ಥಾಪನೆ ನೆರವೇರಿತು. ಈ ರಸ್ತೆಯು 20.71 ಕಿ.ಮೀ. ಉದ್ದವಿದ್ದು, ಕಾಮಗಾರಿಗೆ 823.4 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv