Tag: Road Safety world Series 2021

  • ರಸ್ತೆ ಸುರಕ್ಷೆ ಕ್ರಿಕೆಟ್ ಸರಣಿಗೆ ಸಜ್ಜಾದ ಲೆಜೆಂಡ್ ಕ್ರಿಕೆಟರ್ಸ್

    ರಸ್ತೆ ಸುರಕ್ಷೆ ಕ್ರಿಕೆಟ್ ಸರಣಿಗೆ ಸಜ್ಜಾದ ಲೆಜೆಂಡ್ ಕ್ರಿಕೆಟರ್ಸ್

    ಭೋಪಾಲ್: ರಸ್ತೆ ಸುರಕ್ಷೆಗಾಗಿ ನಡೆಯುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಕ್ರಿಕೆಟ್ ಸರಣಿಗಾಗಿ ಇದೀಗ ವಿಶ್ವದ ಲೆಜೆಂಡ್ ಕ್ರಿಕೆಟರ್ಸ್ ಸಜ್ಜಾಗುತ್ತಿದ್ದಾರೆ.

    ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದ ಘಟಾನುಘಟಿ ಕ್ರಿಕೆಟ್ ತಂಡಗಳಲ್ಲಿ ದಶಕಗಳ ಕಾಲ ಆಡಿ ನಿವೃತ್ತಿ ಹೊಂದಿರುವ ಮಾಜಿ ಆಟಗಾರರು ಮತ್ತೊಮ್ಮೆ ಇದೀಗ ಬ್ಯಾಟ್, ಬಾಲ್ ಹಿಡಿದು ತಮ್ಮ ತಮ್ಮ ದೇಶದ ಪರವಾಗಿ ಕ್ರಿಕೆಟ್ ಆಡಲು ಅಂಗಳಕ್ಕೆ ಇಳಿಯುತ್ತಿದ್ದಾರೆ.

    ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 ಪಂದ್ಯವು ವಿಶ್ವಾದ್ಯಂತ ರಸ್ತೆಗಳಲ್ಲಿ ಸಂಚರಿಸುವ ಜನರಿಗೆ ಸಂಚಾರದ ಕುರಿತು ಜಾಗರೂಕತೆ ಮತ್ತು ಅವರು ರಸ್ತೆಗಳಲ್ಲಿ ನಡೆಸುವ ವರ್ತನೆಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ವಿಶ್ವದ ಎಲ್ಲಾ ಕ್ರಿಕೆಟಿಗರು ಸೇರಿ ಆಡುವ ಮೂಲಕ ಜನರಿಗೆ ಸುರಕ್ಷತೆಯ ಪಾಠ ಮಾಡಲು ಹೊರಡುತ್ತಿದ್ದಾರೆ.

    ಕಳೆದ ವರ್ಷ ಈ ಸರಣಿಯಲ್ಲಿ ಭಾಗವಹಿಸಲು ಹಲವು ದೇಶದ ಲೆಜೆಂಡ್ ಕ್ರಿಕೆಟರ್ಸ್ ಸಿದ್ಧವಾಗಿದ್ದರು. ಆದರೆ ಕೊರೊನಾದಿಂದಾಗಿ ಸರಣಿ ನಡೆಯಲಿಲ್ಲ. ಇದೀಗ 2021ರ ಮಾರ್ಚ್ 5 ರಿಂದ ಮಾರ್ಚ್ 21ರವರೆಗೆ ಭಾರತದ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂ ರಾಯ್‍ಪುರ್ ನಲ್ಲಿ ನಡೆಯಲಿದೆ.

    ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ಹಲವು ವರ್ಷಗಳಿಂದ ಕ್ರಿಕೆಟ್ ನಿಂದ ದೂರ ಉಳಿದಿರುವ ಹಿರಿಯ ಆಟಗಾರರು ಮತ್ತೆ ಪ್ಯಾಡ್ ಕಟ್ಟಿ ಬ್ಯಾಟ್ ಬೀಸಲು ಮುಂದಾದರೆ, ವೇಗಿಗಳು ತಮ್ಮ ಉರಿ ಚೆಂಡಿನ ದಾಳಿಗೆ ಸಿದ್ಧವಾಗುತ್ತಿದ್ದಾರೆ.

    ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 ಪಂದ್ಯದಲ್ಲಿ ಭಾರತ ಲೆಜೆಂಡ್ಸ್, ದಕ್ಷಿಣ ಆಫ್ರಿಕಾ ಲೆಜೆಂಡ್ಸ್, ಇಂಗ್ಲೆಂಡ್ ಲೆಜೆಂಡ್ಸ್, ಬಾಂಗ್ಲಾದೇಶ ಲೆಂಜೆಡ್ಸ್, ಶ್ರೀಲಂಕಾ ಲೆಜೆಂಡ್ಸ್, ಮತ್ತು ವೆಸ್ಟ್ ಇಂಡೀಸ್ ಲೆಜೆಂಡ್ಸ್ ಸೇರಿ ಒಟ್ಟು 6 ತಂಡಗಳು ಭಾಗವಹಿಸಲಿದೆ.

    ನಿವೃತ್ತಿ ಹೊಂದಿರುವ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಾಂಟಿ ರೋಡ್ಸ್, ಕೆವಿನ್ ಪೀಟರ್ಸನ್, ಜೋನಾಥನ್ ಟ್ರಾಟ್, ಬ್ರಿಯಾನ್ ಲಾರಾ, ಸನತ್ ಜಯಸೂರ್ಯ, ತಿಲಕರತ್ನೆ ದಿಲ್ಶನ್ ಸೇರಿದಂತೆ ಖ್ಯಾತ ನಾಮ ಆಟಗಾರರು ಮತ್ತೆ ಕ್ರಿಕೆಟ್ ಅಂಕಣದಲ್ಲಿ ಎದುರು ಬದುರಾಗಲಿದ್ದಾರೆ.

    ಈ ಮೂಲಕ ನಿವೃತ್ತಿಯಾದ ಬಳಿಕ ತಮ್ಮ ನೆಚ್ಚಿನ ಆಟಗಾರನ ಆಟವನ್ನು ಮಿಸ್ ಮಾಡಿಕೊಂಡಿರುವ ಅಭಿಮಾನಿಗಳಿಗೆ ಮತ್ತೆ ರಂಜಿಸಲು ಈ ಹಿರಿಯ ಆಟಗಾರರು ತಯಾರಾಗಿದ್ದಾರೆ.