Tag: Road Safety

  • ರಾಜ್ಯದಲ್ಲಿ ಅಪಘಾತಕ್ಕೆ ಒಂದೇ ದಿನ 51 ಬಲಿ- ಸಂಚಾರಿ ನಿಯಮ ಪಾಲನೆಗೆ ಅಲೋಕ್ ಕುಮಾರ್ ಮನವಿ

    ರಾಜ್ಯದಲ್ಲಿ ಅಪಘಾತಕ್ಕೆ ಒಂದೇ ದಿನ 51 ಬಲಿ- ಸಂಚಾರಿ ನಿಯಮ ಪಾಲನೆಗೆ ಅಲೋಕ್ ಕುಮಾರ್ ಮನವಿ

    ಬೆಂಗಳೂರು: ರಾಜ್ಯದಲ್ಲಿ ಭಾನುವಾರ (ಮೇ 26) ಒಂದೇ ದಿನ 51 ಜನ ಅಪಘಾತಕ್ಕೆ (Road Accident) ಬಲಿಯಾಗಿದ್ದು, ಈ ಬಗ್ಗೆ ಸಂಚಾರ ಹಾಗೂ ರಸ್ತೆ ಸುರಕ್ಷತೆ (Road safety) ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

    ಅಪಘಾತದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕಳೆದ 24 ಗಂಟೆಯಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ 51 ಜನ ಸಾವಿಗೀಡಾಗಿದ್ದಾರೆ. ಸಂಚಾರಿ ನಿಯಮಗಳ ಉಲ್ಲಂಘನೆಯೇ ಅಪಘಾತಕ್ಕೆ ಕಾರಣವಾಗಿದ್ದು, ದಯವಿಟ್ಟು ಸಂಚಾರಿ ನಿಯಮ ಪಾಲಿಸಿ ಎಂದು ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಆಟವಾಡುತ್ತಾ ಸಂಪ್‍ಗೆ ಬಿದ್ದು 2 ವರ್ಷದ ಮಗು ದುರ್ಮರಣ

    ಇತ್ತೀಚಿನ ದಿನಗಳಲ್ಲಿ ನಡೆದ ಅಪಘಾತಗಳಲ್ಲಿ ಭಾನುವಾರ ಅತಿ ಹೆಚ್ಚು ಜನರ ಸಾವಾಗಿದೆ. ಅತಿವೇಗ ಹಾಗೂ ಅಜಾಗರೂಕತೆ ಚಾಲನೆಯಿಂದ ಅಪಘಾತಗಳು ಹೆಚ್ಚಾಗಿವೆ ಎಂದು ಅವರು ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಚಿಕ್ಕೋಡಿ, ಹಾಸನ, ಕಾರವಾರ, ರಾಮನಗರ ಸೇರಿ ರಾಜ್ಯದ ಹಲವೆಡೆ ಭಾನುವಾರ ಭಿಕರ ಅಪಘಾತಗಳು ನಡೆದಿದ್ದವು. ಬಹುತೇಕ ಅಪಘಾತಗಳಿಗೆ ಸಂಚಾರಿ ನಿಯಮಗಳ ಉಲ್ಲಂಘನೆಯೇ ಪ್ರಮುಖ ಕಾರಣ ಎನ್ನಲಾಗಿತ್ತು. ಇದನ್ನೂ ಓದಿ: ಕರಾವಳಿಯಲ್ಲಿ ಮಳೆ ಸಂಭವ- ಬೆಂಗಳೂರಿನಲ್ಲಿ ಮುಂದಿನ 3 ದಿನ ಮಳೆಗೆ ಬ್ರೇಕ್

  • ಅಪಘಾತಗಳನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯ – ಮಾರುತಿ ಸಾಂಬ್ರಾಣಿ

    ಅಪಘಾತಗಳನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯ – ಮಾರುತಿ ಸಾಂಬ್ರಾಣಿ

    ಹುಬ್ಬಳ್ಳಿ: ರಸ್ತೆ ಅಪಘಾತಗಳನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಾರತದಲ್ಲಿ ಪ್ರತಿ ವರ್ಷ 1.5 ಲಕ್ಷ ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ. 5 ಲಕ್ಷದಷ್ಟು ಜನರು ಅಂಗಾಗಗಳನ್ನು ಕಳೆದುಕೊಂಡು ಊನರಾಗುತ್ತಿದ್ದಾರೆ ಎಂದು ಧಾರವಾಡ ಸಾರಿಗೆ ಉಪ ಆಯುಕ್ತ ಮಾರುತಿ ಸಂಬ್ರಾಣಿ ಕಳವಳ ವ್ಯಕ್ತಪಡಿಸಿದರು.

    ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಆಯೋಜಿಸಲಾದ ಬೀದಿ ನಾಟಕಕ್ಕೆ ಡೋಲಕ್ಕ ಭಾರಿಸುವುದರ ಮೂಲಕ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾರುತಿ ಸಾಂಬ್ರಾಣಿ, ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ರಸ್ತೆ ಅಪಘಾತಗಳಲ್ಲಿ ಮೊದಲ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ರಸ್ತೆ ಸುರಕ್ಷತೆ ಮಾಸಾಚರಣೆಯನ್ನು ಆಚರಿಸಲಾಗುತ್ತಿದೆ. ಚಾಲಕರು ಸಾವಧಾನವಾಗಿ ವಾಹನ ಚಲಾಯಿಸಬೇಕು. ಸಾರಿಗೆ ನಿಯಮಗಳನ್ನು ಪಾಲಿಸಬೇಕು ಎಂದರು.

    ಹರ್ಲಾಪುರದ ಚಂದ್ರಶೇಖರ ಕಾಳೆ ನೇತೃತ್ವದ ಸಿ.ವಾಯ್.ಸಿ.ಡಿ ಕಲಾತಂಡ ರಸ್ತೆ ಸುರಕ್ಷತೆ ಕುರಿತು ಬೀದಿ ನಾಟಕ ಹಾಗೂ ಜಾಗೃತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು. ವಾಹನ ಚಾಲಕರು ಹಾಗೂ ಸಾರ್ವಜನಿಕರಿಗೆ “ರಸ್ತೆ ಸುರಕ್ಷೆ-ಜೀವದ ರಕ್ಷೆ” ಧ್ಯೇಯವಾಕ್ಯದ ಕರಪತ್ರಗಳನ್ನು ಹಂಚಲಾಯಿತು.

    ನಂತರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಜಿಲ್ಲಾಡಾಳಿತ, ಸಾರಿಗೆ, ಪೊಲೀಸ್ ಇಲಾಖೆ ಹಾಗೂ ವಿವಿಧ ಮೋಟಾರು ಡ್ರೈವಿಂಗ್ ಸ್ಕೂಲ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಮೋಟಾರು ಕಾರ್ ರ‍್ಯಾಲಿಗೆ ಹಸಿರು ನಿಶಾನೆ ತೋರಿಸಿವುದರ ಮೂಲಕ ಚಾಲನೆ ನೀಡಲಾಯಿತು. ಕಾರ್ ರ‍್ಯಾಲಿ ಈದ್ಗಾ ಮೈದಾನ, ಚೆನ್ನಮ್ಮಾ ವೃತ್ತ, ನ್ಯೂ ಇಂಗ್ಲೀಷ್ ಸ್ಕೂಲ್, ಬಂಕಾಪುರ ಚೌಕ್, ಬಿಡ್ನಾಳ ಕ್ರಾಸ್ ಮೂಲಕ ಗಬ್ಬೂರ ಬೈಪಾಸ್ ಪ್ರಾದೇಶಿಕ ಸಾರಿಗೆ ಕಚೇರಿ ತಲುಪಿತು.

    ಈ ಸಂದರ್ಭದಲ್ಲಿ ಧಾರವಾಡ ಪೂರ್ವ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತ್ವಾಡಮಠ, ವಾ.ಕ.ರ.ಸಾ.ಸಂ. ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ್, ಡಿಟಿಓ ಡಿ.ಶಂಕ್ರಪ್ಪ, ಸಂಚಾರಿ ಎ.ಸಿ.ಪಿ ಎ.ಎಸ್.ಹೊಸಮನಿ, ಸಾರಿಗೆ ಅಧೀಕ್ಷಕ ದೀನಮಣಿ, ಮೋಟಾರು ಡ್ರೈವಿಂಗ್ ಸ್ಕೂಲ್ ಗಳ ಪ್ರತಿನಿಧಿ ಪುಷ್ಪಾಂಜಲಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

  • ‘ರಸ್ತೆ ಸುರಕ್ಷತಾ ನಿಯಮದ ಅರಿವಿಲ್ಲದಿರುವುದು ಒಂದು ಸಾಂಕ್ರಾಮಿಕ ರೋಗ’

    ‘ರಸ್ತೆ ಸುರಕ್ಷತಾ ನಿಯಮದ ಅರಿವಿಲ್ಲದಿರುವುದು ಒಂದು ಸಾಂಕ್ರಾಮಿಕ ರೋಗ’

    ಮಂಡ್ಯ: ಈ ಹಿಂದೆ ಸಾಂಕ್ರಾಮಿಕ ರೋಗಗಳಾದ ಕಾಲರಾ ಮತ್ತು ಪ್ಲೇಗ್‍ಗಳು ಬಂದಾಗ ಸಾವಿರಾರು ಗ್ರಾಮೀಣ ಜನರು ಸೂಕ್ತ ಚಿಕಿತ್ಸೆಯಿಲ್ಲದೇ ಅಕಾಲಿಕವಾದ ಮೃತ್ಯುವಿಗೆ ಶರಣಾಗುತ್ತಿದ್ದರು. ಆದರೆ ಈಗ ಜಾಗತಿಕ ಜಗತ್ತಿನ ಸ್ಪರ್ಧಾ ಪ್ರಪಂಚದಲ್ಲಿ ರಸ್ತೆ ಅಪಘಾತಗಳಲ್ಲಿ ಬೇಜವಾಬ್ದಾರಿತನದಿಂದ ಅಕಾಲಿಕವಾಗಿ ಸಾಯುವ ಜನರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಕೆ.ಆರ್.ಪೇಟೆ ಪಟ್ಟಣ್ಣ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಅಭಿಪ್ರಾಯ ಪಟ್ಟಿದ್ದಾರೆ.

    ಕೆ.ಆರ್.ಪೇಟೆ ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋದಲ್ಲಿ ನಾಗಮಂಗಲದ ಪ್ರಾದೇಶಿಕ ಸಾರಿಗೆ ಇಲಾಖೆಯ ವತಿಯಿಂದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಂಚಾರಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ರಸ್ತೆ ಸುರಕ್ಷತಾ ನಿಯಮದ ಬಗ್ಗೆ ಅರಿವು ಮೂಡಿಸುವ ಪೋಸ್ಟರ್ ಮತ್ತು ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

    ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸದೇ ಅಪಘಾತವು ಸಂಭವಿಸಿ ನಮ್ಮ ಅಮೂಲ್ಯವಾದ ಪ್ರಾಣವು ಹೋಗುತ್ತದೆ. ನಾವುಗಳು ಶಾಶ್ವತವಾಗಿ ಅಂಗವಿಕಲರಾಗುತ್ತೇವೆ ಎಂದು ತಿಳಿದಿದ್ದರೂ ಅಡ್ಡಾದಿಡ್ಡಿಯಾಗಿ ಬೇಕಾಬಿಟ್ಟಿ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಬಲಿಯಾಗಿ ನಮ್ಮನ್ನು ನಂಬಿರುವ ಕುಟುಂಬದ ಸದಸ್ಯರು, ತಂದೆ-ತಾಯಿ, ಹೆಂಡತಿ-ಮಕ್ಕಳನ್ನು ಅನಾಥರನ್ನಾಗಿ ಮಾಡುತ್ತಿದ್ದೇವೆ ಎಂದರು.

    ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳದೇ ಮೊಬೈಲ್ ಫೋನಿನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ ಮಾಡಿದರೆ ಅಪಘಾತ ನಡೆಯುತ್ತದೆ. ಕುಡಿದು ವಾಹನ ಚಾಲನೆ ಮಾಡುವುದು, ಓವರ್ ಲೋಡ್ ಮಾಡಿಕೊಂಡು ವಾಹನವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳದೇ ವಾಹನವನ್ನು ಚಾಲನೆ ಮಾಡುವುದರಿಂದಲೂ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿ ವಾಹನ ಚಲಾಯಿಸಬೇಕು ಎಂದು ಹೇಳಿದರು.