Tag: Road button

  • ರಸ್ತೆ ಗುಂಡಿ ಮುಚ್ಚಲು ಜೆಟ್ ಪ್ಯಾಚ್ ಯಂತ್ರ ಬಳಕೆ

    ರಸ್ತೆ ಗುಂಡಿ ಮುಚ್ಚಲು ಜೆಟ್ ಪ್ಯಾಚ್ ಯಂತ್ರ ಬಳಕೆ

    ಬೆಂಗಳೂರು: ಸಿಲಿಕಾನ್ ಸಿಟಿ ರಸ್ತೆಗಳ ಗುಂಡಿ ಮುಚ್ಚುವ ವಿಚಾರಕ್ಕೆ ಹೈಕೋರ್ಟ್ ಬಿಬಿಎಂಪಿಗೆ ಸದಾ ಛಾಟಿ ಬೀಸುತ್ತಿದೆ. ಹೀಗಾಗಿ ಗುಂಡಿ ಮುಚ್ಚಲು ಬಿಬಿಎಂಪಿ ವಿವಿಧ ಉಪಾಯಗಳನ್ನು ಮಾಡುತ್ತಿದೆ.

    ರಸ್ತೆ ಗುಂಡಿ ಮುಚ್ಚಲು ಟಾರ್ಗೆಟ್ ಕೊಟ್ಟರು ಸಹ ಸಾಧ್ಯವಾಗುತ್ತಿಲ್ಲ. ಸಿಬ್ಬಂದಿ ಕೊರತೆ, ಕಾರ್ಮಿಕರ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ನಗರದಲ್ಲಿ ಇನ್ನೂ ಸಾವಿರಾರು ರಸ್ತೆಗಳು ಗುಂಡಿಗಳು ಬಾಯಿ ತೆರೆದು ನಿಂತಿವೆ. ಹೇಗಾದರೂ ಮಾಡಿ ಈ ಸಮಸ್ಯೆ ಪರಿಹರಿಸಬೇಕೆಂದು ಬಿಬಿಎಂಪಿ ವಿವಿಧ ಉಪಾಯಗಳ ಮೊರೆ ಹೋಗುತ್ತಿದೆ. ಇದರ ಭಾಗವಾಗಿ ಈ ಹಿಂದೆ ಫೈಥಾನ್ ಯಂತ್ರ ಬಳಸಿ ಗುಂಡಿ ಮುಚ್ಚಲು ಯತ್ನಿಸಲಾಗಿತ್ತು. ಆದರೆ ಮಳೆಗಾಲದಲ್ಲಿ ಮುಚ್ಚುವುದಕ್ಕೆ ಸಾಧ್ಯವಾಗಲಿಲ್ಲ.

    ಆದರೆ ಮಳೆಗಾಲದಲ್ಲೇ ರಸ್ತೆಗುಂಡಿಗಳ ಸಮಸ್ಯೆ ಹೆಚ್ಚು ಕಾಡುವುದರಿಂದ ಅನುಕೂಲವಾಗುವ ಯಂತ್ರ ಬಳಕೆಗೆ ಬಿಬಿಎಂಪಿ ಚಿಂತನೆ ನಡೆಸಿದೆ. ಹೀಗಾಗಿ ಜೆಟ್ ಪ್ಯಾಚರ್ ಯಂತ್ರದ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಲು ಸಿದ್ಧತೆ ನಡೆಸಿದೆ.

    ಪ್ರಾಯೋಗಿಕವಾಗಿ ಬುಧವಾರ ದೊಮ್ಮಲೂರು ವಾರ್ಡ್ ವ್ಯಾಪ್ತಿಯ ಇಸ್ರೋ ಕ್ವಾಟ್ರಸ್ ರಸ್ತೆಯಲ್ಲಿ ಜೆಟ್ ಪ್ಯಾಚರ್ ಯಂತ್ರದ ಮೂಲಕ ಕೋಲ್ಡ್ ಮಿಕ್ಸ್ ಡಾಂಬರ್ ಬಳಸಿ ಗುಂಡಿಗಳನ್ನು ಮುಚ್ಚಲಾಯಿತು. ಪೈಥಾನ್ ಯಂತ್ರದಲ್ಲಿ ಹಾಟ್ ಮಿಕ್ಸ್ ಡಾಂಬರಿನಿಂದ ಮಾತ್ರ ರಸ್ತೆ ಗುಂಡಿ ಮುಚ್ಚಬಹುದು. ಅಲ್ಲದೆ ಮಳೆಗಾಲದಲ್ಲಿ ಸಾಧ್ಯವಾಗುವುದಿಲ್ಲ. ಆದರೆ ಜೆಟ್ ಪ್ಯಾಚರ್ ಯಂತ್ರದಿಂದ ಕೋಲ್ಡ್ ಮಿಕ್ಸ್ ಡಾಂಬರು ಬಳಸಿ ವರ್ಷವಿಡೀ ಗುಂಡಿಗಳನ್ನು ಮುಚ್ಚಬಹುದಾಗಿದೆ.

    ಪ್ರಾಯೋಗಿಕವಾಗಿ ಜೆಟ್ ಪ್ಯಾಚರ್ ಯಂತ್ರದ ಮೂಲಕ ಗುಂಡಿಗಳನ್ನು ಮುಚ್ಚಲಾಗುತ್ತಿದ್ದು, ಯಶಸ್ವಿಯಾದರೆ ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಲು ಚಿಂತಿಸಲಾಗಿದೆ. ಈ ಪ್ರಾಯೋಗಿಕ ಯಂತ್ರ ಬಳಕೆಯ ಕಾಮಗಾರಿಯನ್ನು ಮೇಯರ್ ಗೌತಮ್ ಕುಮಾರ್ ತಪಾಸಣೆ ನಡೆಸಿದರು. ಈ ವೇಳೆ ಉಪಮೇಯರ್ ರಾಮ್ ಮೋಹನ್ ರಾಜು ಹಾಗೂ ಇತರರು ಇದ್ದರು.

  • ಬೈಕ್ ಏರಿದ ಬೆಂಗ್ಳೂರು ಮೇಯರ್​ಗೆ ಗುಂಡಿಗಳ ದರ್ಶನ

    ಬೈಕ್ ಏರಿದ ಬೆಂಗ್ಳೂರು ಮೇಯರ್​ಗೆ ಗುಂಡಿಗಳ ದರ್ಶನ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸುತ್ತಲು ಇಂದು ಮೇಯರ್ ಗೌತಮ್ ಕುಮಾರ್ ಬೈಕ್ ನಲ್ಲಿ ಹೊರಟ್ಟಿದ್ದರು. ಬೈಕ್ ನಲ್ಲಿ ರೌಂಡ್ಸ್ ಹೊರಟ ಮೇಯರ್ ಅವರಿಗೆ ಸಾಲು ಸಾಲು ಗುಂಡಿಗಳ ದರ್ಶನವಾಗಿದೆ.

    ಅಧಿಕಾರಿಗಳ ಜೊತೆ ಜನರ ಸಮಸ್ಯೆ ಆಲಿಸಲು ಮೇಯರ್ ಮಲ್ಲೇಶ್ವರಂ ಮುಖ್ಯರಸ್ತೆಗಳಲ್ಲಿ ಇಂದು ಬೈಕ್ ರೈಡ್ ಹೊರಟಿದ್ದರು. ಮೇಯರ್ ಹೊರಟ 100 ಮೀ. ಅಂತರದಲ್ಲಿ ರಸ್ತೆಯೇ ಗುಂಡಿಯಾಗಿರೊ ಸತ್ಯ ಬಯಲಾಯಿತು. ಗುಂಡಿ ಕಂಡು ಮೇಯರ್ ಒಂದು ಕ್ಷಣ ಶಾಕ್ ಆದರು. ಕೂಡಲೇ ತಮ್ಮ ಜೊತೆಯಲ್ಲಿದ್ದ ಜಂಟಿ ಆಯುಕ್ತ ಚಿದಾನಂದ್ ಅವರಿಗೆ ಅಕ್ಟೋಬರ್ 13ರೊಳಗೆ ಗುಂಡಿಗಳನ್ನು ಮುಚ್ಚುವಂತೆ ಖಡಕ್ ಆದೇಶ ನೀಡಿದರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮೇಯರ್, ರಸ್ತೆ ಗುಂಡಿಗಳ ಬಗ್ಗೆ ಹಲವು ದೂರುಗಳ ಬಂದಿವೆ. ಅಧಿಕಾರಿಗಳು ಈ ಬಗ್ಗೆ ಸಮರ್ಪಕ ಮಾಹಿತಿ ನೀಡುವಂತೆ ತಿಳಿಸಿದ್ದೇನೆ. ದೂರುಗಳನ್ನಾಧರಿಸಿ ಇಂದು ರಸ್ತೆ ಗುಂಡಿ ಪರಿಶೀಲನೆಗೆ ಮುಂದಾದೆ. ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳು ಕಾರಿನಲ್ಲಿ ಸಂಚರಿಸುವದರಿಂದ ರಸ್ತೆಗುಂಡಿಗಳ ಬಗ್ಗೆ ಗೊತ್ತಾಗಲ್ಲ. ದ್ವಿಚಕ್ರ ವಾಹನ ಸವಾರರು ರಸ್ತೆಗುಂಡಿಗಳಿಂದ ತೊಂದರೆ ಅನುಭವಿಸುತ್ತಾರೆ. ಹಾಗಾಗಿ ಜನರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ಬೈಕ್ ರೌಂಡ್ಸ್ ಗೆ ಬರಲಾಗಿತ್ತು. ಇಂದು ಜನರ ನೋವು ಏನು ಎಂಬುವುದು ಅರ್ಥವಾಗಿದೆ. ಆದಷ್ಟು ಬೇಗ ರಸ್ತೆ ಗುಂಡಿಗಳನ್ನು ಮುಚ್ಚುತ್ತೇವೆ ಎಂದು ಭರವಸೆ ನೀಡಿದರು.

    ಆದಷ್ಟು ಬೇಗ ಇಲ್ಲಿಯ ರಸ್ತೆ ರಿಪೇರಿ, ಟ್ರಾಫಿಕ್ ನಿಯಂತ್ರಿಸಿ ಎಂದು ಸಾರ್ವಜನಿರಕು ಮೇಯರ್ ಬಳಿ ಮನವಿ ಮಾಡಿಕೊಂಡರು. ಇನ್ನುಂದೆ ವಲಯವಾರು ಗುಂಡಿ ಚೆಕ್ ಮಾಡುತ್ತೇನೆ ಎಂದು ಮೇಯರ್ ಹೇಳಿದ್ದಾರೆ.